Daily Archives: September 7, 2012

Art of Living : ಭೂಗಳ್ಳತನವೂ ಒಂದು ಕಲೆ!?

 – ಶಿವ ಶಂಕರ್

ಆರ್ಟ್ ಆಫ್ ಲಿವಿಂಗ್ ಸಂಸ್ಥೆ ಪ್ರಾರಂಭವಾಗಿದ್ದು 1981ರಲ್ಲಿ. ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ಉದಯಪಾಳ್ಯ ಎಂಬ ಹಳ್ಳಿಯಲ್ಲಿ. ಅದಕ್ಕೆ ಉತ್ತಮ urban/elite ಅಪೀಲ್  ಇರುವುದಿಲ್ಲ ಎನ್ನುವ ಕಾರಣಕ್ಕಾಗಿಯೇ ಏನೊ ಅದು AOL ನವರಿಂದ ಉದಯಗಿರಿ ಆಗಿದೆ. ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ರವಿಶಂಕರ್ ನೊಬೆಲ್ ಪ್ರಶಸ್ತಿ ಸಿಗುತ್ತದೆ ಎನ್ನುವ ಕಲ್ಪನೆಯಲ್ಲಿದ್ದಾರೆ. ಆದರೆ ಅವರ ಮತ್ತು ಅವರ ಸಂಸ್ಥೆಗಳ ವಿರುದ್ಧ ಭೂಗಳ್ಳತನ/ಭೂಒತ್ತುವರಿ ಹಾಗೂ ವಂಚನೆಯ ಆರೋಪಗಳು ಕೇಳಿಬರುತ್ತಲೇ ಇವೆ.

ರವಿಶಂಕರ್  ಸಾರಥ್ಯದಲ್ಲಿ ಇರುವ ಆರ್ಟ್ ಆಫ್ ಲಿವಿಂಗ್ ಸೆಂಟರ್ ಕೇವಲ ದಲಿತರು, ಹಿಂದುಳಿದ ವರ್ಗದವರು, ಸಣ್ಣ ಸಣ್ಣ ರೈತರ ಭೂಮಿಯನ್ನಷ್ಟೇ ಕಬಳಿಸಿಲ್ಲ; ಸರ್ಕಾರಿ ಭೂಮಿ ಮತ್ತು ಅರಣ್ಯ ಭೂಮಿಯನ್ನೂ ಒತ್ತುವರಿ ಮಾಡಿಕೊಂಡಿದೆ ಎನ್ನುವುದು ಆರೋಪ. ಆರ್ಟ್ ಆಫ್ ಲಿವಿಂಗ್ ಯುನೆಸ್ಕೋ ಮಟ್ಟದಲ್ಲಿ ಸ್ಥಾನಮಾನ ಇರುವ ಸರ್ಕಾರೇತರ ಸಂಸ್ಥೆ. ಮತ್ತು ಸರ್ಕಾರವನ್ನೇ ಬಗ್ಗಿಸಿ ತನ್ನ ಕೆಲಸ ಮಾಡಿಕೊಳ್ಳುವಷ್ಟು ಪ್ರಭಾವ ಇರುವ ಸಂಸ್ಥೆ ಎನ್ನುವುದು ಎಲ್ಲರಿಗೂ ತಿಳಿದಿರುವುದೆ.

ಆರ್ಟ್ ಆಫ್ ಲಿವಿಂಗ್‌ನ ಭೂ-ಸಾಮ್ರಾಜ್ಯ ವಿಸ್ತರಣೆ ಹಾವಳಿಗೆ ತತ್ತರಿಸಿರುವವರು ಊದಿಪಾಳ್ಯ, ವಡೇರಹಳ್ಳಿ, ಓ.ಬಿ.ಚೂಡಹಳ್ಳಿ, ಸಾಲುಹುಣಸೆ, ಬಸಪ್ಪನ ಪಾಳ್ಯ, ಬೈರಸಂದ್ರ, ಬಂಜಾರಪಾಳ್ಯ, ದಿನ್ನೇಪಾಳ್ಯ, ಆಗರ, ಮತ್ತು ಸುತ್ತಮುತ್ತ ಇರುವ ಸಣ್ಣ ಪುಟ್ಟ ಹಿಡುವಳಿದಾರರು. ಅತಿ ಹೆಚ್ಚಿನ ಪ್ರಮಾಣದಲ್ಲಿ ಭೂ ಕಬಳಿಕೆಯನ್ನು ಮಾಡಿರುವುದು ವೇದ ವಿಜ್ಞಾನ ಮಹಾ ವಿದ್ಯಾಪೀಠ. ಈ ವಿದ್ಯಾಪೀಠವೇ ಆರ್ಟ್ ಆಫ್ ಲಿವಿಂಗ್‍ನ ಮಾತೃ ಸಂಸ್ಥೆ.

ಈ ಸಂಸ್ಥೆಗೆ ಫೆಬ್ರುವರಿ 3, 1985 ರಲ್ಲಿ ಸರ್ಕಾರದಿಂದಲೇ ಒಟ್ಟು 60 ಎಕರೆ ಮಂಜೂರಾಗಿದೆ. ಅದು ಕಗ್ಗಲೀಪುರದಲ್ಲಿರುವ ಸರ್ವೆ ನಂಬರ್ 46. ಈ ಸರ್ವೆ ನಂಬರ್‌ನಲ್ಲಿ ಇದ್ದಿದ್ದು ಒಟ್ಟು 557 ಎಕರೆ. ಇದರಲ್ಲಿ 60 ಎಕರೆಯನ್ನು 30 ವರ್ಷಗಳ ಲೀಸ್ ಅವಧಿಗೆ ಮಂಜೂರು ಮಾಡಲಾಗಿತ್ತು. ಆದರೆ ವೇದ ವಿಜ್ಞಾನ ಮಹಾ ವಿದ್ಯಾಪೀಠದವರು, ’ನೀವು ಮಂಜೂರು ಮಾಡಿದ್ದು 60 ಎಕರೆ. ಆದರೆ ನಮಗೆ ಸಿಕ್ಕಿದ್ದು ಕೇವಲ 24 ಎಕರೆಯಷ್ಟೇ,’ ಅಂತ ಸರ್ಕಾರಕ್ಕೆ ಸುಳ್ಳು ಮಾಹಿತಿ ಕೊಟ್ಟರು. ನಂತರ ಇದ್ದಕ್ಕಿದ್ದಂತೆ ಮಾಹಿತಿ ಬದಲಾಯಿಸಿ, ’24 ಎಕರೆ ಅಲ್ಲ. 60 ಎಕರೆಯಲ್ಲಿ 36 ಎಕರೆ ನಮಗೆ ಸಿಕ್ಕಿದೆ. ಬಾಕಿ ಉಳಿದ ಭೂಮಿಯನ್ನು ನಮಗೆ ಮಂಜೂರು ಮಾಡಿಕೊಡಿ,’ ಎಂದು ಸರ್ಕಾರಕ್ಕೆ ಮನವಿ ಮಾಡಿಕೊಂಡರು.

ಎ.ಟಿ.ರಾಮಸ್ವಾಮಿ ನೇತೃತ್ವದ ಜಂಟಿ ಸದನ ಸಮಿತಿಯ ಸೂಚನೆ ಪ್ರಕಾರ ತಹಶೀಲ್ದಾರ್ ಮತ್ತು ಉಪ ವಿಭಾಗಾಧಿಕಾರಿಗಳು ತನಿಖೆ ಮಾಡಿದಾಗ ಬೆಳಕಿಗೆ ಬಂದ ವಿಷಯವೇನೆಂದರೆ ವೇದ ವಿಜ್ಞಾನ ಮಹಾ ವಿದ್ಯಾಪೀಠದ ಕೈಗೆ ಸಿಕ್ಕಿದ್ದಿದ್ದು 36 ಎಕರೆಯಲ್ಲ. ಬದಲಿಗೆ 54 ಎಕರೆ 30 ಗುಂಟೆ. ಬಾಕಿ 5 ಎಕರೆ 10 ಗುಂಟೆ ಭೂಮಿ ಸರ್ವೆ ನಂಬರ್ 46ರಲ್ಲಿ ಇಲ್ಲದೇ ಇರುವ ಕಾರಣ, 54 ಎಕರೆ 30 ಗುಂಟೆಗೇ ದುಡ್ಡು ಕಟ್ಟಿಸಿಕೊಳ್ಳಿ ಅಂತ ತಹಶೀಲ್ದಾರ್ ಆದೇಶ ಮಾಡಿದ್ದರು. ಈ ಭಾಗದ ಕಂದಾಯ ಅಧಿಕಾರಿಗಳು ಅದನ್ನು ಪಾಲಿಸದೆ ಆದೇಶವನ್ನು ಕಸದ ಬುಟ್ಟಿಗೆ ಹಾಕಿದರು. ಮತ್ತು ರೆವಿನ್ಯೂ ಅಧಿಕಾರಿಗಳ ಔದಾರ್ಯದಿಂದಾಗಿ ವೇದ ವಿಜ್ಞಾನ ಮಹಾ ವಿದ್ಯಾಪೀಠಕ್ಕೆ ಕೆಂಗೇರಿ ಹೋಬಳಿಯ ಬಿ.ಎಂ.ಕಾವಲ್‌ನಲ್ಲಿ 30 ವರ್ಷಗಳ ಲೀಸ್ ಮೇಲೆ ಮತ್ತಷ್ಟು ಭೂಮಿ ಮಂಜೂರಾಯಿತು.

ಬಿ.ಎಂ.ಕಾವಲ್‌ನ ಸರ್ವೆ ನಂಬರ್ 135 ರಲ್ಲಿ ಒಟ್ಟು  213 ಎಕರೆ ಸರ್ಕಾರಿ ಗೋಮಾಳ ಅಂತಿದ್ದರೂ, ಅದರ ಸ್ವಾಧೀನ ಇದ್ದಿದ್ದು  ಓ.ಬಿ.ಚೂಡಹಳ್ಳಿ ಮತ್ತು ವಡೇರಹಳ್ಳಿ ಗ್ರಾಮಸ್ಥರ ಕೈಯಲ್ಲಿ. 30-50 ವರ್ಷಗಳಿಂದ ಇದೇ ಭೂಮಿಯಲ್ಲಿ ಸಾಗುವಳಿ ಮಾಡಿಕೊಂಡು ಬಂದಿದ್ದ ರೈತರು ಅವರು. 1991 ರಲ್ಲಿ ಫಾರಂ ನಂ 53 ಪ್ರಕಾರ ಅರ್ಜಿ ಹಾಕಿ, ತಮಗೆ ಮಂಜೂರು ಮಾಡಿಕೊಡಿ ಎಂದು ಸರ್ಕಾರವನ್ನು ಕೇಳಿಕೊಂಡಿದ್ದರು. ಹೀಗಾಗಿ ಭೂ ಮಂಜೂರಾತಿ ಸಮಿತಿಯಲ್ಲಿ ಸಾಗುವಳಿದಾರರಿಗೆ ಮಂಜೂರು ಮಾಡಿಕೊಡುವುದಕ್ಕೆ ತೀರ್ಮಾನ ಸಹಾ ಆಗಿತ್ತು. ಇಷ್ಟೆಲ್ಲಾ ತೀರ್ಮಾನ ಆದಮೇಲೆ ಒಂದಷ್ಟು ಮಂದಿಗೆ ಸಾಗುವಳಿ ಚೀಟಿಯೂ ಸಿಕ್ಕಿತ್ತು. ಬಾಕಿ ಉಳಿದ ಸಾಗುವಳಿದಾರರಿಗೆ ಸಾಗುವಳಿ ಚೀಟಿ ಕೊಡುವುದಕ್ಕೆ 2004 ರಲ್ಲೇ ಅಂದಿನ ಭೂ ಮಂಜೂರಾತಿ ಸಮಿತಿ ಅಧ್ಯಕ್ಷ ಹಾಗೂ ಎಮ್.ಎಲ್.ಎ ಆಗಿದ್ದ ಆರ್. ಅಶೋಕ್ ಅನುಮೋದನೆಯನ್ನೂ ಕೊಟ್ಟಿದ್ದರು. ಇದಕ್ಕೆ ಸಂಬಂಧಿಸಿದಂತೆ ಒಂದು ಠರಾವು ಕೂಡ ಆಗಿತ್ತು.

ಬಿ.ಎಂ.ಕಾವಲ್‌ನ ಸರ್ವೆ ನಂಬರ್ 135 ರಲ್ಲಿರುವ ಭೂಮಿಯಲ್ಲಿ ಆಶ್ರಯ ಯೋಜನೆಯಡಿ ನಿವೇಶನ ಮಂಜೂರು ಮಾಡಿಕೊಡಿ ಎಂದು 2006 ರಲ್ಲೇ ಅಂದಿನ ಮುಖ್ಯಮಂತ್ರಿಗಳಾಗಿದ್ದ ಧರ್ಮಸಿಂಗ್‌ರಿಗೆ ಮತ್ತು ಕುಮಾರಸ್ವಾಮಿಯವರಿಗೆ ಓ.ಬಿ.ಚೂಡನಹಳ್ಳಿ ಗ್ರಾಮಸ್ಥರು ಪತ್ರ ಬರೆದಿದ್ದರು. ಆದರೆ ಸರ್ಕಾರ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ. ಆದರೂ, ಅದೇ ಭೂಮಿಯಲ್ಲಿ 19 ಎಕರೆ 20 ಗುಂಟೆ ಜಮೀನು ಆರ್ಟ್ ಆಫ್ ಲಿವಿಂಗ್ ಆಶ್ರಮಕ್ಕೆ ಲೀಸ್ ಮೇಲೆ ಸಿಕ್ಕಿ ಬಿಟ್ಟಿತ್ತು. ಸರ್ಕಾರ ಯಾವ ಆಧಾರದ ಮೇಲೆ ಆಶ್ರಮಕ್ಕೆ ಭೂಮಿಯನ್ನು ಲೀಸ್ ಮೇಲೆ ಕೊಟ್ಟಿತ್ತು? ಕಂದಾಯ ಅಧಿಕಾರಿಗಳು ಕೊಟ್ಟಿದ್ದ ಸುಳ್ಳು ಮಾಹಿತಿಯಿಂದ.

ಈ 19 ಎಕರೆ 20 ಗುಂಟೆ ಆರ್ಟ್ ಆಫ್ ಲಿವಿಂಗ್ ಆಶ್ರಮಕ್ಕೆ ಲೀಸ್ ಮೇಲೆ ಸಿಕ್ಕಿದ್ದು ಕೇವಲ ಶೈಕ್ಷಣಿಕ ಉದ್ದೇಶಗಳಿಗೆ ಅಂತ. ಆದರೆ ಅಲ್ಲಿ ಈಗ ನಡಿಯುತ್ತಾ ಇರುವುದೇ ಬೇರೆ. ಲೀಸ್ ಮೇಲೆ ಸಿಕ್ಕಿದ್ದ 19 ಎಕರೆ 20 ಗುಂಟೆ ನೊಂದಾವಣೆ ಆಗಿದ್ದು ರಘು ಅವಧಾನಿ ಹೆಸರಿಗೆ. ಈ ರಘು ಅವಧಾನಿ ವೇದ ವಿಜ್ಞಾನ ಮಹಾ ವಿದ್ಯಾಪೀಠದ ಟ್ರಸ್ಟೀ. ಆದರೆ ಅವರು ಟ್ರಸ್ಟೀ ಆಗುವುದಕ್ಕೂ ಮೊದಲು ಆರ್ಟ್ ಆಫ್ ಲಿವಿಂಗ್‌ನಲ್ಲಿ ಸೇರಿಕೊಂಡಿದ್ದು ಒಬ್ಬ ಅಡಿಗೆ ಭಟ್ಟನಾಗಿ. ಒಬ್ಬ ಅಡಿಗೆ ಭಟ್ಟನಾಗಿ ಸೇರಿಕೊಂಡಿದ್ದ ರಘು ಅವಧಾನಿಯವರೇ ರಘು ಬಿನ್ ರಾಜಣ್ಣ. ಇವರ ಹೆಸರಿಗೆ ಬೇರೆ ಬೇರೆ ಸರ್ವೆ ನಂಬರ್‌ನಲ್ಲಿ ನೋಂದಾವಣೆ ಆಗಿರುವುದು ಒಟ್ಟು 35 ಎಕರೆ 20 ಗುಂಟೆಗೂ ಹೆಚ್ಚು ಎಂಬ ಮಾಹಿತಿ ಇದೆ.

ರಘು ಅವಧಾನಿ ಹೆಸರಲ್ಲಿ ಭೂಮಿ ವಿವರ ಸರ್ವೆ ನಂಬರ್ 67ರಲ್ಲಿ 15 ಎಕರೆ 8 ಗುಂಟೆ, ಸರ್ವೆ ನಂಬರ್ 403ರಲ್ಲಿ 1 ಎಕರೆ 20 ಗುಂಟೆ, ಸರ್ವೆ ನಂಬರ್ 46/ಪಿ 167ರಲ್ಲಿ 2 ಎಕರೆ, ಸರ್ವೆ ನಂಬರ್ 46/ಪಿ78ರಲ್ಲಿ 2 ಎಕರೆ, ಸರ್ವೆ ನಂಬರ್ 46/ಪಿ121ರಲ್ಲಿ 30 ಗುಂಟೆ, ಸರ್ವೆ ನಂಬರ್ 46/ಪಿ143ರಲ್ಲಿ 1 ಎಕರೆ 20 ಗುಂಟೆ, ಸರ್ವೆ ನಂಬರ್ 46/ಪಿ102ರಲ್ಲಿ 2 ಎಕರೆ, ಸರ್ವೆ ನಂಬರ್ 46/ಪಿ5ರಲ್ಲಿ 1 ಎಕರೆ, ಸರ್ವೆ ನಂಬರ್ 46/ಪಿ160ರಲ್ಲಿ 1 ಎಕರೆ, ಸರ್ವೆ ನಂಬರ್ 297ರಲ್ಲಿ 1 ಎಕರೆ, ಸರ್ವೆ ನಂಬರ್ 296ರಲ್ಲಿ 10 ಎಕರೆ 25 ಗುಂಟೆ ಈ ಪೈಕಿ, ಸರ್ವೆ ನಂಬರ್ 296, 297, 298 ಮತ್ತು 299ರಲ್ಲಿರೋ ಜಮೀನುಗಳ ಬಗ್ಗೆ ಸಾಕಷ್ಟುಷ್ಟು ತಕರಾರುಗಳಿವೆ.

ಅದೇ ರೀತಿಯಲ್ಲಿ ರವಿಶಂಕರ್‌ರ ತಂಗಿ ಭಾನುಮತಿ ನರಸಿಂಹನ್ ಹೆಸರಲ್ಲೂ ಬೇರೆ ಬೇರೆ ಸರ್ವೆ ನಂಬರ್‌ಗಳಲ್ಲಿ ಬೇಕಾದಷ್ಟು ಜಮೀನು ನೊಂದಾವಣೆ ಆಗಿದೆ. ರಿಜಿಸ್ಟರ್ ಆಗಿರುವುದು ಒಟ್ಟು 13 ಎಕರೆ 14 ಗುಂಟೆ. ಭಾನುಮತಿ ನರಸಿಂಹನ್ ಹೆಸರಲ್ಲಿರುವ ಭೂಮಿ ವಿವರ ಸರ್ವೆ ನಂಬರ್ 402ರಲ್ಲಿ 2 ಎಕರೆ, ಸರ್ವೆ ನಂಬರ್ 135/ಪಿ14ರಲ್ಲಿ 2 ಎಕರೆ, ಸರ್ವೆ ನಂಬರ್ 135/ಪಿ15ರಲ್ಲಿ 2 ಎಕರೆ, ಸರ್ವೆ ನಂಬರ್ 135/ಪಿ19ರಲ್ಲಿ 2 ಎಕರೆ, ಸರ್ವೆ ನಂಬರ್ 189ರಲ್ಲಿ 1 ಎಕರೆ 22 ಗುಂಟೆ, ಸರ್ವೆ ನಂಬರ್ 188/1ರಲ್ಲಿ 3 ಎಕರೆ 32 ಗುಂಟೆ.

ಬಿ.ಎಂ.ಕಾವಲ್‌ನ ಸರ್ವೆ ನಂಬರ್ 135/ಪಿ 14ರಲ್ಲಿ ಇರುವ 2 ಎಕರೆಯನ್ನು ಖರೀದಿ ಮಾಡುವುದಕ್ಕೆ ಬರುವುದಿಲ್ಲ. ಈ ಸರ್ವೆ ನಂಬರ್‌ನಲ್ಲಿರುವ ಭೂಮಿ ದುರಸ್ತಿ ಆಗಿಲ್ಲದೆ ಇರುವ ಭೂಮಿ. ಅಷ್ಟೇ ಅಲ್ಲ…ಸರ್ವೆ ನಂಬರ್ 46 ಪಿ/120ಯಲ್ಲಿರೋ 1 ಎಕರೆ 10 ಗುಂಟೆ ಸರ್ಕಾರಿ ಭೂಮಿ. ಸರ್ವೆ ನಂಬರ್ 67ರಲ್ಲಿರುವ ಒಟ್ಟು 32 ಎಕರೆ ಇರುವುದು ಅರಣ್ಯ ಇಲಾಖೆ ಸುಪರ್ದಿಯಲ್ಲಿ. ಇದರಲ್ಲಿ  21 ಎಕರೆ 24 ಗುಂಟೆ ಆರ್ಟ್ ಆಫ್ ಲಿವಿಂಗ್‌ನ ಸ್ವಾಧೀನದಲ್ಲಿದೆ ಎಂಬ ಮಾಹಿತಿ ಇದೆ. ಹಾಗೇಯೇ, ಸರ್ವೆ ನಂಬರ್ 188/1ರಲ್ಲಿರೋ 3 ಎಕರೆ 32 ಗುಂಟೆ ಭೂಮಿಗೆ ಯಾರಿಗೂ ಸಾಗುವಳಿ ಚೀಟಿ ಕೂಡ ಸಿಕ್ಕಿಲ್ಲ. ಆದರೂ ಈ 3 ಎಕರೆ 32 ಗುಂಟೆ ಸ್ವಾಧೀನದಲ್ಲಿರುವುದು ರವಿಶಂಕರ್‌ರ ತಂಗಿ ಭಾನುಮತಿ ನರಸಿಂಹನ್ ಹೆಸರಲ್ಲಿ.

ಊದಿಪಾಳ್ಯದಿಂದ ಬಸಪ್ಪನಪಾಳ್ಯ ಮಾರ್ಗದಲ್ಲಿರುವ ಎಲ್ಲಾ ಭೂಮಿಯನ್ನು–ಕೆರೆ ಅಂಗಳವನ್ನೂ ಕೂಡ ಬಿಡದೇ–ಒತ್ತುವರಿ ಮಾಡಿಕೊಂಡಿರುವ ಆರೋಪ ಸಹ ಆರ್ಟ್ ಆಫ್ ಲಿವಿಂಗ್ ಆಶ್ರಮದ ಮೇಲಿದೆ. ಊದಿಪಾಳ್ಯದಿಂದ ಬಸಪ್ಪನಪಾಳ್ಯಕ್ಕೆ ಹೋಗುವುದಕ್ಕೆ ನಕಾಶೆ ಮೂಲಕ ಬೇಕಾಗಿರುವುದು 1 ಕಿಲೋ ಮೀಟರ್. ಆದರೆ ಆರ್ಟ್ ಆಫ್ ಲಿವಿಂಗ್‌ನವರು ಒಂದು ತಡೆಗೋಡೆ ಕಟ್ಟಿರುವುದರಿಂದ ಸುತ್ತಲಿನ ಜನ ಪಡಿಪಾಟಲು ಪಡುತ್ತಿದ್ದಾರೆ. ಇದೇ ಊದಿಪಾಳ್ಯ ಗ್ರಾಮದಿಂದ ದೇವಸ್ಥಾನ ಮತ್ತು ಸ್ಮಶಾನಕ್ಕೆ ಹೋಗುವುದಕ್ಕೆ ಇದ್ದ ಬಂಡಿದಾರಿಯಲ್ಲಿ 15 ಅಡಿ ಜಾಗ ಇತ್ತು. ಆದರೆ, ಆರ್ಟ್ ಆಫ್ ಲಿವಿಂಗ್‌ನವರು ಕಟ್ಟುತ್ತಿರುವ ಖಾಸಗಿ ಅಪಾರ್ಟ್‌ಮೆಂಟ್‌ಗೆ ಹೋಗುವುದಕ್ಕೆ ಇದೇ 15 ಅಡಿ ಜಾಗದಲ್ಲಿ ರಿಂಗ್ ರೋಡ್ ಮಾಡಿರುವುದರಿಂದ ಅಲ್ಲಿಯೂ ಜನರಿಗೆ ಓಡಾಡುವುದಕ್ಕೆ ಆಗುತ್ತಿಲ್ಲ.

ಬಿ.ಎಂ.ಕಾವಲ್‌ನ ಸರ್ವೆ ನಂಬರ್ 133ರಲ್ಲಿ  ಅಂದಾಜು 60 ಎಕರೆ ಜಮೀನಿನಲ್ಲಿರುವ ಶಾಲಾ ಕಾಲೇಜು ಕಟ್ಟಡಗಳೂ ಅನಧಿಕೃತ. ಕಂದಾಯ ಇಲಾಖೆಯಿಂದ ಆರ್ಟ್ ಆಫ್ ಲಿವಿಂಗ್‌ನವರಿಗೆ ಈ ಜಮೀನನ್ನು ಗುತ್ತಿಗೆ ಕೊಟ್ಟಿರುವುದರ ಬಗ್ಗೆ ಎಲ್ಲಿಯೂ ಯಾವುದೇ ಮಾಹಿತಿ ಇಲ್ಲ. ತಾವು ಶಾಲೆ ಕಟ್ಟಿರುವುದು ಸರ್ವೆ ನಂಬರ್ 135ರಲ್ಲಿ ಎಂದು ಆರ್ಟ್ ಆಫ್ ಲಿವಿಂಗ್‌ನವರು ಸುಳ್ಳು ಮಾಹಿತಿಯನ್ನು ಸರ್ಕಾರಕ್ಕೆ ಕೊಟ್ಟಿರಬಹುದಾದ ಸಂಶಯ ಇದೆ.

ಇಂತಹ ಆರೋಪಗಳು ಬರೀ ಬೆಂಗಳೂರಿಗಷ್ಟೇ ಸೀಮಿತವಾಗಿಲ್ಲ. ಆರ್ಟ್ ಆಫ್ ಲಿವಿಂಗ್ ಮೇಲೆ ಮೈಸೂರಿನಲ್ಲೂ ಒತ್ತುವರಿ ಆರೋಪಗಳಿವೆ. ಅಲ್ಲಿ ಅರ್ಟ್ ಆಫ್ ಲಿವಿಂಗ್ 5 ಎಕರೆ ಒತ್ತುವರಿ ಮಾಡಿಕೊಂಡಿದೆ ಎಂಬ ಆರೋಪ ಬಹಳ ದಿನಗಳಿಂದ ಕೇಳಿಬರುತ್ತಿದೆ. ಈ ಜಾಗ ಚಾಮುಂಡಿ ಬೆಟ್ಟದ ತಪ್ಪಲಲ್ಲಿ ಇದೆ. ಇದರ ಸರ್ವೆ ನಂಬರ್ 41. ಒಟ್ಟು ಇದ್ದಿದ್ದು ಸುಮಾರು 78 ಎಕರೆ. ಮೈಸೂರಿನ ಆಲನಹಳ್ಳಿಯಲ್ಲಿರುವ ಈ ಭೂಮಿಯನ್ನು ಮೊದಲು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ 2007ರಲ್ಲಿ ವಶ ಪಡಿಸಿಕೊಂಡಿತ್ತು. ಈ 78 ಎಕರೆ ಮೂಡಾ ವಶದಲ್ಲಿ ಇರುವಾಗಲೇ  ಭಾರತ ಮತ್ತು ಫ್ರೆಂಚ್ ಸರ್ಕಾರದ ಸಹಭಾಗಿತ್ವದಲ್ಲಿ ಬಂದಿದ್ದು ನೆಹರೂ ಲೋಕ ಎನ್ನುವ ಯೋಜನೆ. ಈ ಯೋಜನೆಗೆ ಸರ್ವೆ ನಂಬರ್ 41ರಲ್ಲಿದ್ದ ಜಾಗವನ್ನು ಸರ್ಕಾರ ಡಿ-ನೋಟಿಫೈ ಮಾಡಿತು. ಇದರಲ್ಲೇ ಗಂಗೂ ಬೆಳ್ಳಿಯಪ್ಪನವರ ಹೆಸರಿನಲ್ಲಿ 5 ಎಕರೆ ಇತ್ತು. ಅವರಿಂದ AOL ಆ ಜಮೀನನ್ನು ಖರೀದಿ ಮಾಡಿತು. ಈ 5 ಎಕರೆಗೆ ಇನ್ನೊಂದು 5 ಎಕರೆಯ ಒತ್ತುವರಿ  ಸೇರಿ ಒಟ್ಟು 10 ಎಕರೆಯಲ್ಲಿ ಎದ್ದು ನಿಂತಿದ್ದು ಸತ್ಸಂಗ ಕಟ್ಟಡ. ಆಸಲಿಗೆ ಈ ಕಟ್ಟಡ ಎದ್ದು ನಿಂತಿದ್ದನ್ನು ಪತ್ತೆ ಹಚ್ಚಿದ್ದು ಕೂಡ ಮೈಸೂರಿನಲ್ಲಿ ಈ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಹರ್ಷಗುಪ್ತ ಅವರು. ಭೂ ಒತ್ತುವರಿಗೆ ಸಂಬಂಧಿಸಿದಂತೆ ದಾಖಲೆಗಳನ್ನು ಪರಿಶೀಲನೆ ಮಾಡುವಾಗ ಆರ್ಟ್ ಆಫ್ ಲಿವಿಂಗ್ ಒತ್ತುವರಿ ಮಾಡಿಕೊಂಡಿರುವುದು ಬಯಲಾಗಿತ್ತು. ಯಾವಾಗ ಆರ್ಟ್ ಆಫ್ ಲಿವಿಂಗ್‌ನಿಂದ 5 ಎಕರೆ ಒತ್ತುವರಿ ಮಾಡಿಕೊಂಡಿರುವುದು ಬಯಲಾಯಿತೊ ಆಗ ತಕ್ಷಣ ಹರ್ಷಗುಪ್ತ ಅವರು ಅತಿಕ್ರಮಣ ತೆರವುಗೊಳಿಸಿ ಅಂತ ನಗರಾಡಳಿತಕ್ಕೆ ಆದೇಶ ಮಾಡಿದರು.

ಮೈಸೂರು ತಾಲೂಕು ತಹಸೀಲ್ದಾರರು ತಕ್ಷಣ ಆ ಸಂಬಂಧ ಒಂದು ನೊಟೀಸನ್ನೂ ಆರ್ಟ್ ಆಫ್ ಲಿವಿಂಗ್‌ ಸಂಸ್ಥೆಗೆ ಜಾರಿ ಮಾಡಿದರೂ. ಆದರೆ, ನೋಟೀಸ್ ಹೋಗಿದ್ದು ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪರ ಛೇಂಬರಿಗೆ. ಯಡಿಯೂರಪ್ಪನವರು ಯಾವುದೇ ಹಿಂಜರಿಕೆ ಇಲ್ಲದೇ, ತಕ್ಷಣ ಜಮೀನು ತೆರವು ಕಾರ್ಯಾಚರಣೆ ನಿಲ್ಲಿಸಬೇಕು ಎಂದು ತಾಕೀತು ಮಾಡಿದರು. ಮತ್ತು, ಆರ್ಟ್ ಆಫ್ ಲಿವಿಂಗ್ ಭೂಮಿ ಅತಿಕ್ರಮಣಕ್ಕೆ ಸಂಬಂಧಿಸಿದಂತೆ ಯಾವುದೆ ಕ್ರಮ ತೆಗೆದುಕೊಳ್ಳಬಾರದು ಎಂದು ಯಡಿಯೂರಪ್ಪನವರ ಪ್ರಧಾನ ಕಾರ್ಯದರ್ಶಿಗಳಾಗಿದ್ದ ಪ್ರಸಾದ್ ಜಿಲ್ಲಾಧಿಕಾರಿಗೆ ಸೂಚನೆ ಕೊಟ್ಟರು.

ಆರ್ಟ್ ಆಫ್ ಲಿವಿಂಗ್‌ನ ಭೂಮಿ ಒತ್ತುವರಿ ಪ್ರಕರಣವನ್ನು ಹೊರಗೆ ಹಾಕಿದ್ದ ಜಿಲ್ಲಾಧಿಕಾರಿ ಹರ್ಷಗುಪ್ತ ಅವರಿಗೆ ಯಡಿಯೂರಪ್ಪರವರ ಸರ್ಕಾರ  24 ಗಂಟೆಯಲ್ಲಿ ಇದೇ ಕಾರಣಕ್ಕಾಗಿ ಎತ್ತಂಗಡಿ ಮಾಡಿತು ಎನ್ನಲಾಗಿದೆ. ಮೈಸೂರಿನಲ್ಲಿ ಹತ್ತಾರು ವರ್ಷಗಳಿಂದ ನಿವೇಶನಕ್ಕಾಗಿ ಕಾಯುತ್ತಾ ಇರುವವರ ಸಂಖ್ಯೆ ಒಂದೂವರೆ ಲಕ್ಷ ದಾಟಿದೆ. ಪರಿಸ್ಥಿತಿ ಹೀಗಿರುವಾಗ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು ಮೂಡಾಕ್ಕೆ ಸೇರಿರುವ 5 ಎಕರೆ ಜಾಗವನ್ನು ಅತಿಕ್ರಮಣ ಮಾಡಿಕೊಂಡು ಕಟ್ಟಡ ನಿರ್ಮಿಸಿ, ಮಾನವ ಹಕ್ಕುಗಳ ಉಲ್ಲಂಘನೆ ಮಾಡಿ ಕ್ರಿಮಿನಲ್ ಅಪರಾಧಗಳನ್ನು ಮಾಡಿದೆ ಅನ್ನುವ ಆರೋಪವೂ ಇದೆ. ಇದಕ್ಕೆ ಸಂಬಂಧಿಸಿದಂತೆ ಮಾನವ ಹಕ್ಕುಗಳ ಆಯೋಗದಲ್ಲಿ ಒಂದು ದೂರು ಸಹ ಇದೆ . ಮೈಸೂರಿನಲ್ಲಿ ಆಗಿರುವ ಈ 5 ಎಕರೆ ಒತ್ತುವರಿ ಪ್ರಕರಣ ಇವತ್ತು ಮುಚ್ಚಿ ಹೋಗಿರುವುದರ ಹಿಂದೆ ಆಡಳಿತಾರೂಢ ಬಿಜೆಪಿ ಮತ್ತು ಯಡಿಯೂರಪ್ಪರವರ ಒತ್ತಡ ಮತ್ತು ಕೈ ಇದೆ ಎನ್ನುವ ಸಂಶಯ ಇದೆ.