Daily Archives: September 8, 2012

ಪುಸ್ತಕ ಪರಿಚಯ : ಹೊಳೆ ಬದಿಯ ಬೆಳಗು


-ಬಿ. ಶ್ರೀಪಾದ್ ಭಟ್


‘ನೋಡು ಜೇನುಕಲ್ಲುಗುಡ್ಡದ ತುದಿ ಚೆನ್ನಾಗಿ ಕಾಣ್ತಿದೆ. ಕೆಸರೂರಿನ ಜನ ಈಗಲೂ ಎಲ್ಲಾ ಅಲ್ಲಿಗೆ ಓಡಿದರೆ ಬೆಂಕಿಯಿಂದ ತಪ್ಪಿಸಿಕೋಬಹುದು’ ಎಂದಳು ಜಯಂತಿ.
‘ನಮಗೆ ಕಾಣ್ತಿದೆ! ಅವರಿಗೆ ಕಾಣ್ತದ? ಈ ಹೊಗೇಲಿ!’ ಎಂದ ರಫಿ

ಪೂರ್ಣಚಂದ್ರ ತೇಜಸ್ವಿಯವರ ‘ಚಿದಂಬರ ರಹಸ್ಯ’ ಕಾದಂಬರಿಯ ಕ್ಲೈಮಾಕ್ಸ್‌ನಲ್ಲಿ ರಫಿ ಮತ್ತು ಜಯಂತಿ ಇಬ್ಬರೂ ಲಂಟಾನ ಕಾಡಿಗೆ ಹತ್ತಿಕೊಂಡ ಬೆಂಕಿಯಿಂದ ತಪ್ಪಿಸಿಕೊಂಡು ಪರ್ವತಾಗ್ರದ ಬಂಡೆಯ ನೆತ್ತಿಯನ್ನು ತಲುಪಿ ಮೇಲಿನ ಮಾತುಗಳನ್ನು ಉದ್ಗರಿಸುತ್ತಾರೆ. ಇಲ್ಲಿ ಪ್ರಾಮಾಣಿಕರಾದ, ಯಾವುದೇ ಜಾತೀಯತೆಯ, ಕೋಮುವಾದದ ಸೋಂಕಿಲ್ಲದ ಜಯಂತಿ ಮತ್ತು ರಫಿ ಇಬ್ಬರಿಗೂ ಅಂತಹ ಕಾಳ್ಗಿಚ್ಚಿನಲ್ಲೂ ಜೇನುಕಲ್ಲುಗುಡ್ಡದ ತುದಿ ಕಾಣಿಸುತ್ತದೆ. ಈ ಜೇನುಕಲ್ಲು ಗುಡ್ಡದ ತುದಿ ಜ್ಞಾನೋದಯದ ತುದಿಯಾಗಿ ಆ ಕ್ಷಣಕ್ಕೆ ಮಾತ್ರ ರೂಪಕವಾಗಿ ಮೂಡಿಕೊಳ್ಳುತ್ತದೆ. ಇದು ಪ್ರಾಮಾಣಿಕರಿಗೆ, ಸತ್ಯವಂತರಿಗೆ ಮಾತ್ರ ಅದು ಕಾಣುತ್ತದೆ. ಆದರೆ ಮೌಢ್ಯತೆಯಿಂದ, ಅಜ್ಞಾನದಿಂದ ಕುಗ್ಗಿ ಹೋಗಿರುವ ಕೆಸರೂರಿನ ಜನಕ್ಕೆ ಅದು ಕಾಣಿಸದು. ಅದಕ್ಕೇ ರಫಿ ಉದ್ಗರಿಸುತ್ತಾನೆ ‘ನಮಗೆ ಕಾಣ್ತಿದೆ! ಅವರಿಗೆ ಕಾಣ್ತದ?’

ಲೇಖಕ ‘ಕೇಶವ ಮಳಗಿ’ ಅವರ ಹೊಸ ಕಥಾಸಂಕಲನ ‘ಹೊಳೆ ಬದಿಯ ಬೆಳಗು’ವಿನಲ್ಲಿ ಅನೇಕರಿಗೆ ಈ ಜೇನು ಕಲ್ಲುಗುಡ್ಡದ ತುದಿ ಆ ಹೊಗೆಯಲ್ಲೂ ಕಾಣ್ತದೆ. ಇದು ಲೇಖಕ ಮಳಗಿಯವರ ಬಂದೇ ಬರುತಾವ ಕಾಲ ಎನ್ನುವ ಆಶಾವಾದದ ಪ್ರತೀಕವಾಗಿ ಮೂಡಿಬರುತ್ತದೆ.

80ರ ದಶಕದಲ್ಲಿ ಬರೆಯಲಾರಂಬಿಸಿದ ಕೇಶವ ಮಳಗಿಯವರು ಇಲ್ಲಿಯವರೆಗೂ ಎರಡು ಕಾದಂಬರಿಗಳು ನಾಲ್ಕು ಕಥಾ ಸಂಕಲನಗಳು ಮತ್ತು ಕೆಲವು ಅನುವಾದಿತ ಕೃತಿಗಳನ್ನು ಬರೆದಿದ್ದಾರೆ. ಇತ್ತೀಚೆಗೆ ಕಡಲಾಚೆಯ ಚೆಲುವೆ ಹಾಗೂ ಸಂಕಥನಗಳೆಂಬ ಫ್ರೆಂಚ್ ಸಾಹಿತ್ಯ ಮತು ಸಂಸ್ಕೃತಿ ಕುರಿತಾದ ಎರಡು ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಇವೆರಡರ ಬೆನ್ನಲ್ಲೇ ಕೆಲವು ತಿಂಗಳುಗಳ ಹಿಂದೆ ‘ಹೊಳೆಯ ಬದಿಯ ಬೆಡಗು’ ಕಥಾ ಸಂಕಲನ ಪ್ರಕಟಿತವಾಗಿದೆ. ಎಂಟು ವರ್ಷಗಳ ಹಿಂದೆ ಪ್ರಕಟಗೊಂಡ ‘ವೆನ್ನೆಲ್ಲ ದೊರೆಸಾನಿ’ ಕಥಾ ಸಂಕಲದ ನಂತರ ಈ ‘ಹೊಳೆಯ ಬದಿಯ ಬೆಡಗು’ ಪುಸ್ತಕ ಬಿಡುಗಡೆಗೊಂಡಿದೆ. ಈ ಸಂಕಲನವು 7 ಕಥೆಗಳು ಮತ್ತು ಅಂಗದ ಧರೆ ಎನ್ನುವ ನೀಳ್ಗತೆ ಅಥವಾ ಕಿರುಕಾದಂಬರಿಯನ್ನು ಒಳಗೊಂಡಿದೆ. ಈ ಸಂಕಲನದ ಕಥೆಗಳಲ್ಲಿ ಬರುವ ಚೊಂಚ ರುಕ್ಕವ್ವ, ಚಂದ್ರವ್ವ, ನೀಲಾಂಜನ ಛಟರ್ಜಿ, ಹೂವಿ, ಶೇಖರ ಮಾಸ್ತರು ಪಾತ್ರಗಳು ಬಾಳ ಬೆಂಕಿಯಲ್ಲಿ ಬೆಂದವರು ಆದರೆ ಎಂದೂ ಬಸವಳಿಯವದವರು. ಅವರ ದಿಟ್ಟತೆ ಮತ್ತು ಬದುಕಿನ ಬಗೆಗಿನ ಖಚಿತತೆ, ನೆಲಕ್ಕೆ ಬಿದ್ದಷ್ಟೂ ಮತ್ತೆ ಕೈಯೂರಿ ಮೇಲೇಳುವ ಅವರ ಛಲಗಾರಿಕೆ ನಮ್ಮಲ್ಲಿ ಬೆರಗನ್ನೂ, ಧನ್ಯತಾ ಭಾವವನ್ನು ಮೂಡಿಸುತ್ತದೆ. ಮೇಲಿನ ಪಾತ್ರಗಳು ಕಥೆಗಳಲ್ಲಿ ಜೀವಂತಿಕೆಯಾಗಿ ಮೂಡಿ ಬಂದು ಅನೇಕ ಕಡೆ ಕಥೆಯನ್ನೇ ಮೀರಿ ಬೆಳೆಯುತ್ತವೆ. ‘ಹೊಳೆ ಬದಿಯ ಬೆಳಗು, ನೀಲಿ ಆಕಾಶದ ಹಣ್ಣು, ಬಾರೋ ಗೀಜಗ ದಂತಹ ಕಥೆಗಳಲ್ಲಿ ಇಲ್ಲಿ ಯಾವುದೂ ಶಾಶ್ವತವಲ್ಲವೆನ್ನುವುದನ್ನು ಒಪ್ಪಿಕೊಳ್ಳುತ್ತಲೇ ಆದರೆ ಬಾಳಿಗೆ ಒಂದು ಬೆಳಕು ಬೇಕೇ ಬೇಕು ಹಾಗೂ ಆ ಜೀವ ಬೆಳಕು ಮುಗ್ಧರಿಗೆ, ತಮ್ಮ ಒಳಗಣ್ಣನ್ನು ತೆರೆದುಕೊಂಡವರಿಗೆ, ನೆಲದ ಮಕ್ಕಳಿಗೆ ಮಾತ್ರ ಕಾಣಿಸುತ್ತದೆ ಎನ್ನುವ ಪ್ರವಾದಿ ತತ್ವವನ್ನು ಲೇಖಕರು ಯಶಸ್ವಿಯಾಗಿ ಕಾಣಿಸಿಕೊಡುತ್ತಾರೆ. ಗುಡ್ಡದೂರಿನ ಇರುಳು ಕಥೆಯಲ್ಲಿನ ಕ್ರೌರ್ಯ ಕರುಳು ಕಿವುಚತ್ತದೆ. ಈ ಕಥೆಗಳು ಈ ಸಂಕಲನದ ಮನಸೆಳೆಯುವ, ಹೃದಯಂಗಮ ಕಥಾನಕಗಳು. ಈ ಕಥಾಸಂಕಲನದ ಮತ್ತೊಂದು ಕಥೆಯಾದ ಆಹಾ! ಮಾಯೆಯಂತಹ ಕತೆಗೆ ಈ ಮಾತುಗಳು ಅನ್ವಯಿಸುವುದಿಲ್ಲ. ಈ ಕಥೆಯಲ್ಲಿ ಲೇಖಕರು ಪ್ರಯೋಗಾತ್ಮಕವಾಗಿ ಭಿನ್ನವಾಗಿ ಬರೆಯಲು ಹೋಗಿ ಕಡೆಗೆ ಚಲನಚಿತ್ರದ ಮಾದರಿಯಲಿ ಚಕಚಕನೆ ಈ ಕಥೆಯನ್ನು ಹೇಗಾದರೂ ಮಾಡಿ ಮುಗಿಸಲೇ ಬೇಕು ಎಂಬಂತೆ ಧಾವಂತದಿಂದ ಓಡಿರುವುದು ನಿರಾಶೆಗೊಳಿಸುತ್ತದೆ. ಕಡೆಗೆ ಉಳಿದಿದ್ದೇನು ಎಂಬ ಪ್ರಶ್ನೆಗೆ ಯಾವುದೇ ಉತ್ತರವಿಲ್ಲ. ಇದೇ ಮಾತು ಇಲ್ಲಿನ ಬೆಟ್ಟದ ಮೇಲಿನ ಬೆಳದಿಂಗಳು ಎನ್ನುವ ಕಥೆಗೂ ಅನ್ವಯಿಸುತ್ತದೆ. ಈ ಕಥೆಯಲ್ಲಿ ಮಾನವೀಯ ಗುಣಗಳನ್ನು, ಅದರ ಅಮೂರ್ತತೆಯನ್ನು ತೀವ್ರವಾದ ಭಾವುಕತೆಯನ್ನು ಬಳಸಿಕೊಂಡು ಹೇಳಲು ಮುಂದಾದ ಲೇಖಕ ಕಡೆಗೆ ಅದೇ ಭಾವುಕತೆಯೊಳಗೆ ಬಂಧಿಯಾಗಿ ಕಡೆಗೆ ಅದನ್ನೇ ನೆಚ್ಚಿ ಅತ್ಯಂತ ಸಿನೀಮಿಯ ಮಾದರಿಯಲ್ಲಿ ನಾಯಕನ ಬಾಯಿಂದ ‘ಆ ಬಂಡೆ ಹತ್ತಿರ ಅಪ್ಪನ ರಾಗ ಅದ,ಅಪ್ಪನ ಬೆಳದಿಂಗಳದ’ ಎಂದು ಉದ್ಗರಿಸುತ್ತಾರೆ. ಆದರೆ ಈ ಉದ್ಗಾರ ಉದ್ದೇಶಪೂರ್ವಕವಾಗಿ ತುರುಕಿರುವುದು ಗೊತ್ತಾಗುತ್ತದೆ. ಇದು ಇಡೀ ಕಥೆಗೆ ಸೀಮಿತತೆಯನ್ನು ತಂದುಕೊಡುತ್ತದೆ. ಈ ಕತೆ ತನ್ನ ಭಾವುಕತೆಯ ದೋಷದಿಂದಾಗಿ ನಾಯಕನ ತಾಯಿಯ ಪಾತ್ರವನ್ನು ಶಕ್ತಿಶಾಲಿಯಾಗಿ ಕಟ್ಟಿಕೊಡುವ ಅವಕಾಶವನ್ನು ಸಹ ಕಳೆದುಕೊಳ್ಳುತ್ತದೆ.

ಇನ್ನು ಲೇಖಕರ ಮಹಾತ್ವಾಕಾಂಕ್ಷೆ ಕಥಾನಕವಾದ ನೀಳ್ಗತೆ ಅಥವಾ ಕಿರುಕಾದಂಬರಿ ‘ಅಂಗದ ಧರೆ’ಯು ಬಲು ದೊಡ್ಡ ನಿರೀಕ್ಷೆಗಳನ್ನು ತನ್ನೊಡಲೊಳಗೆ ಇಟ್ಟುಕೊಂಡಿರುವ ಕಥೆ. ಇಲ್ಲಿನ ಕೇಂದ್ರ ಸ್ಥಾನದಲ್ಲಿರುವ ಗವಿಮಠದ ಶರಣರಾದ ಆಪನವರು ಸ್ಥಾವರ ಮತ್ತು ಜಂಗಮದ ನಡುವಿನ ಹೊಯ್ದಾಟಗಳಲ್ಲಿ ನಲುಗುವ ಕಥಾನಕವಾಗಿ ಬೆಳೆಯುವ ಈ ನೀಳ್ಗತೆ ಮತ್ತೆರಡು ಪ್ರಮುಖ ಪಾತ್ರಗಳಾದ ರೇವತಿಯಕ್ಕ ಮತ್ತು ಮಹಾದೇವಿಯಕ್ಕನವರ ಜೀವನ ವೃತ್ತಾಂತವಾಗಿಯೂ ಬೆಳೆಯುತ್ತದೆ. ಅಂದರೆ ಇಲ್ಲಿ ರೇವತಿಯಕ್ಕ ಲೌಕಿಕದ ಪ್ರತಿನಿಧಿಯಾಗಿಯೂ ಮಹಾದೇವಿಯಕ್ಕ ಅಲೌಕಿಕತೆಯ ಪ್ರತಿನಿಧಿಯಾಗಿಯೂ ಹಂತಹಂತವಾಗಿ ಇಡೀ ಕಥೆಯನ್ನು ಆವರಿಸಿಕೊಳ್ಳುತ್ತಾರೆ. ಸಹಜವಾಗಿಯೇ ಮಹಾನ್ ಲೌಕಿಕವಾದಿಯಾದ ರೇವತಿಯಕ್ಕಳ ಪಾತ್ರವು ಅದ್ಭುತವಾಗಿ ರೂಪಿತಗೊಂಡಿದ್ದರೆ ಅಲೌಕಿಕತೆಯನ್ನು ಹೊದ್ದಂತ ಮಹಾದೇವಿಕ್ಕಳ ವ್ಯಕ್ತಿತ್ವ ತೀವ್ರವಾಗಿ ಸೋಲುತ್ತದೆ. ಅಷ್ಟೇಕೆ ಜಂಗಮದ ಬದುಕಿನ ತಲಾಶೆಯಲ್ಲಿರುವ ಶರಣ ಅಪನವರ ಗವಿಮಠದ ಬದುಕಿಗಿಂತಲೂ ಅವರ ಪೂರ್ವಶ್ರಮದ ಸಿದ್ದರಾಮನ ಜೀವನ ವೃತ್ತಾಂತವು ಹೆಚ್ಚು ಲವಲವಿಕೆಯಿಂದ, ಆತ್ಮವಿಶ್ವಾಸದಿಂದ ನಿರೂಪಿತಗೊಂಡಿದೆ. ಅದರೆ ಪೂರ್ವಶ್ರಮದ ಸಿದ್ದರಾಮ ಮತ್ತು ಗವಿಮಠದ ಶರಣ ಅಪನವರ ನಡುವಿನ ವ್ಯಕ್ತಿತ್ವದ ಭಿನ್ನತೆಗಳು, ದ್ವಂದಗಳು ಎಲ್ಲಿಯೂ ನಿಖರವಾಗಿ ಪ್ರಕಟಗೊಳ್ಳುವುದಿಲ್ಲ. ಇವೆರಡೂ ಒಂದಕ್ಕೊಂದು ಬೆಸದೆಕೊಂಡಿದ್ದರೆ ಇಡೀ ಕಥಾನಕದ ಹಂದರವೇ ಮತ್ತೊಂದು ದಿಕ್ಕಿಗೆ ಹೊರಳಿಕೊಳ್ಳುತ್ತಿತ್ತೇನೋ! ಆದರೂ ಅಂಗದ ಧರೆ ನೀಳ್ಗತೆಯು ಓದುಗನಲ್ಲಿ ಅನೇಕ ತಳಮಳಗಳನ್ನು, ಪ್ರಶ್ನೆಗಳನ್ನು ಹುಟ್ಟಿಹಾಕುತ್ತದೆ. ಈ ಪ್ರಶ್ನೆಗಳು ಮೇಲ್ನೋಟಕ್ಕೆ ಸರಳವಾಗಿರುವಂತೆ ಕಂಡರೂ ಆಳದಲ್ಲಿ ತನ್ನೊಡಲಲ್ಲಿ ಅನೇಕ ಸಂಕೀರ್ಣತೆಯ ಬೆರಗನ್ನು ಹೊತ್ತುಕೊಂಡೇ ಸಾಗುತ್ತದೆ. ಜೀವನದ ಜಂಜಡದಲ್ಲಿ ಸಹಜವಾಗಿ, ಪ್ರಾಮಾಣಿಕವಾಗಿ, ಆತ್ಮಸಾಕ್ಷಿಗೆ ಹತ್ತಿರದಲ್ಲಿ ಬದುಕಿದರೆ ವ್ಯವಸ್ಥೆಯ ಯಾವುದೇ ಬಗೆಯ ತಲ್ಲಣಗಳನ್ನು ಕಿಂಚಿತ್ತೂ ದ್ವಂದಗಳಿಲ್ಲದೆಯೇ ಎದುರಿಸಬಹುದೆಂದು ಒಟ್ಟು ಕಥೆಯ ಆಶಯ.ಈ ಆಶಯವು ಕೀರ್ತಿ ಶನಿ ತೊಲಗಾಚೆ ಎನ್ನುವ ಆದರ್ಶವನ್ನು ಪದೇ ಪದೇ ಓದುಗನಿಗೆ ಮನವರಿಕೆ ಮಾಡಿಕೊಡುತ್ತಿರುತ್ತದೆ. ಆದರೆ ಲೇಖಕರ ಅತ್ಯಂತ ಮಹಾತ್ವಾಕಾಂಕ್ಷೆ ಕಿರುಕಾದಂಬರಿಯಾದ “ಅಂಗದ ಧರೆ” ಆ ಮಹಾತ್ವಾಕಾಂಕ್ಷೆಗೆ ಎಷ್ಟರ ಮಟ್ಟಿಗೆ ಹತ್ತಿರದಲ್ಲಿದೆ ಎಂದು ಹೇಳಲು ಓದುಗನೇ ಅಂಪೈರ್.

ಅಮರೇಶ ನುಗುಡೋಣಿ, ಕುಂವೀ, ರಾಜಶೇಖರ ನೀರಮಾನ್ವಿ, ಶಾಂತರಸ, ಕೇಶವ ಮಳಗಿಯವರಂತಹ ಪ್ರಮುಖ ಲೇಖಕರು ಹೈದರಾಬಾದ್ ಕರ್ನಾಟಕದ ಜೀವನದ ದರ್ಶನವನ್ನು, ಆ ಭಾಗದ ಜನರ ಬದುಕು ತನ್ನೊಳಗೆ ಸದಾ ಕಾಲ ಕ್ರೌರ್ಯವನ್ನು, ಹಸಿವನ್ನು ಮತ್ತು  ಬಡತನವನ್ನು ಹೊತ್ತುಕೊಂಡೇ ತಿರುಗುತ್ತದೆ ಎಂಬಂತಹ ಕಾಣ್ಕೆಯನ್ನು ತಮ್ಮ ಕಥಾ ಸಂಕಲನಗಳಲ್ಲಿ ಹೆಚ್ಚು ಧ್ವನಿಪೂರ್ಣವಾಗಿ ಬಿಚ್ಚಿಟ್ಟಿದ್ದಾರೆ. ಆ ಭಾಗದ ಹಿಂದುಳಿದ, ದಲಿತ ವರ್ಗದ ಜನರ ಅಮಾನವೀಯ ಬದಕು, ಅವಮಾನ ಮತ್ತು ಅಸಹಾಯಕ ಬದುಕನ್ನು ಮೇಲಿನ ಲೇಖಕರು ಆ ತಲ್ಲಣಗಳ ಹತ್ತಿರದಲ್ಲೇ ನಿಂತು, ಅದರೊಳಗೆ ಮಿಂದು ಬರೆಯುವುದರಿಂದ ಅವರ ಕಥೆಗಳಿಗೆ ಬಲು ದೊಡ್ಡ ಅಥೆಂಟಿಸಿಟಿಯನ್ನು ಕೊಡುತ್ತದೆ. ಇವರೆಂದೂ ಹಸಿವನ್ನು, ಬಡತನವನ್ನು, ದಿಗ್ಭ್ರಮೆಯನ್ನು ಸೌಂದರ್ಯೀಕರಿಸಿಲ್ಲ. ಕನ್ನಡದ ಅನೇಕ ಪ್ರಖ್ಯಾತ ಲೇಖಕರ ಅತಿ ಬೌದ್ಧಿಕತೆಯ ಶಿಷ್ಟ ಪ್ರಕಾರಕ್ಕೆ, ಯುರೋಪಿಯನ್ ಮಾದರಿಯ ಸಿದ್ಧಾಂತಗಳ ಜಡತ್ವಕ್ಕೆ, ವೈಯುಕ್ತಿಕವಾಗಿ ಬಯಸುವ ಆದರೆ ಬಹಿರಂಗವಾಗಿ ಪಶ್ಚಿಮ ನಾಗರೀಕತೆಯನ್ನು ತೋರಿಕೆಗಾಗಿ ಟೀಕಿಸುವ ಇವರ ಉದ್ದಾಮ ಸಾಹಿತ್ಯಕ್ಕೆ ಮೇಲಿನ ಹೈದರಾಬಾದ್ ಕರ್ನಾಟಕದ ಲೇಖಕರು ತಮ್ಮ ಮಾನವೀಯ ಮನಸ್ಸಿನಿಂದ, ಜೀವಂತ ವೈಚಾರಿಕೆಯಿಂದ, ಸಂಕೋಚದಿಂದ, ಪ್ರಾಮಾಣಿಕ ಕಳಕಳಿಯಿಂದ, ಸೃಜನಶೀಲ ತಲ್ಲಣಗಳಿಂದ ಕೊಡುವ ಪ್ರತ್ಯುತ್ತರಗಳು ಕನ್ನಡ ಸಾಹಿತ್ಯದ ಬಲು ಮುಖ್ಯ ಮೈಲಿಗಲ್ಲುಗಳು. ಅದೇ ರೀತಿ ಮುಕ್ತಾಯಕ್ಕ, ಗೀತಾ ನಾಗಭೂಷಣ, ಅರೀಫ್ ರಾಜ, ಪೀರ್ ಬಾಷ, ಸತ್ಯಾನಂದ ಪಾತ್ರೋಟರವರು ಸಹ ಆ ಹೈದರಾಬಾದ್ ಕರ್ನಾಟಕದ ಜೀವಂತ ಘರಾಣಕ್ಕೆ ಸೇರುತ್ತಾರೆ. ಇದನ್ನು ಬರೆಯುತ್ತಿರುವ ವೇಳೆಯಲ್ಲೇ ತನ್ನ ಹರೆಯದ ವಯಸ್ಸಿನಲ್ಲಿ ತೀರಿಕೊಂಡ ಹಿರಿಯ ಗೆಳೆಯ ಕವಿ ಬಿ.ಎಸ್.ಸ್ವಾಮಿ ನೆನಪಾಗುತ್ತಿದ್ದಾರೆ.

ಹೊಳೆ ಬದಿಯ ಬೆಳಗು ( ಕಥಾ ಸಂಕಲನ )
ಲೇಖಕರು : ಕೇಶವ ಮಳಗಿ
ಪ್ರಕಾಶಕರು : ಪ್ರೆಸ್ ಕ್ಲಬ್ ಪ್ರಕಾಶನ, ಕಬ್ಬನ್ ಉದ್ಯಾನ, ಬೆಂಗಳೂರು
ಪುಟಗಳು : 177
ಬೆಲೆ : 120