Daily Archives: September 11, 2012

ಮನಮೋಹನ್ ಸಿಂಗ್ ಕೆಳಗಿಳಿಯಲು ಇದು ಸಕಾಲ…

– ರವಿ ಕೃಷ್ಣಾರೆಡ್ಡಿ

ಸೋನಿಯಾ ಗಾಂಧಿ ತಾವು ಪ್ರಧಾನಿಯಾಗದೆ ಮನಮೋಹನ್ ಸಿಂಗರನ್ನು ಪ್ರಧಾನಿ ಮಾಡಿ ಒಂದೇ ಏಟಿಗೆ ಹಲವಾರು ಹಕ್ಕಿಗಳನ್ನು ಹೊಡೆದಿದ್ದರು. ವಿದೇಶದಲ್ಲಿ ಹುಟ್ಟಿದ ಮಹಿಳೆ ಈ ನೆಲದ ಪ್ರಧಾನಿಯಾಗುವುದೇ ಎಂದು ಕೇಳುತ್ತಿದ್ದವರ ಪ್ರಶ್ನೆಗೆ ಉತ್ತರಿಸುವುದರಿಂದ ಹಿಡಿದು, ಮಧ್ಯಮವರ್ಗದ ಪ್ರೀತಿಗೆ ಪಾತ್ರರಾಗಿದ್ದ ಮನಮೋಹನ ಸಿಂಗರ ಮೂಲಕ ಆ ವರ್ಗದ ಬೆಂಬಲ ಬಿಜೆಪಿಯಿಂದ ಕಾಂಗ್ರೆಸ್‌ಗೆ ತಿರುಗುವಂತೆಯೂ ನೋಡಿಕೊಂಡರು. ಸರ್ಕಾರದ ಏನೇ ತಪ್ಪುಗಳಾದರೂ ಆ ಎಲ್ಲಾ ತಪ್ಪುಗಳು ಸರ್ಕಾರದ ಮುಖಂಡರಾಗಿದ್ದ ಪ್ರಧಾನಿ ಮತ್ತವರ ಮಂತ್ರಿಮಂಡಲಕ್ಕೆ ಮಾತ್ರ ಬರುವಂತೆಯೂ, ಸೋನಿಯಾ ಗಾಂಧಿ ಮೇಲೆ ಆ ಹೊಣೆಗಾರಿಕೆ  ಅಥವ ಆರೋಪ ಬೀಳದಂತೆಯೂ ಆಯಿತು. ಜೊತೆಗೆ ಅಧಿಕೃತ ಅಧಿಕಾರ ಇಲ್ಲದೆಯೂ ಬೇಕಾದುದನ್ನು ಮಾಡಿಸಿಕೊಳ್ಳುವ ಅಧಿಕಾರವೂ ಇತ್ತು. ಜನಬೆಂಬಲ (mass support) ಇಲ್ಲದ ಪ್ರಧಾನಿಯಿಂದಾಗಿ ತಮಗೆ ಪಕ್ಷದಲ್ಲಿ ಪರ್ಯಾಯ ನಾಯಕತ್ವ ತಲೆಯೆತ್ತದೆ, ಪಕ್ಷದ ಮೇಲಿನ ಹಿಡಿತ ಅಬಾಧಿತವಾಗಿರುವಂತೆಯೂ ಆಯಿತು. ಇನ್ನು ಕಣ್ನಿಗೆ ಕಾಣದ್ದು ಇನ್ನೆಷ್ಟೊ.

ಮೊದಲನೆಯ ಅವಧಿಗೆ ಮನಮೋಹನರ ಅಧಿಕಾರ ಉತ್ತಮವಾಗಿತ್ತು. ಹಗರಣಗಳಿರಲಿಲ್ಲ. ಕೋಮುಗಲಭೆಗಳೂ ಮಿತಿಯಲ್ಲಿದ್ದವು. ಅನೇಕ ಜನಪರ, ಆಗಲೇಬೇಕಿದ್ದ–ಮಾಹಿತಿ ಹಕ್ಕುತರಹದ ಕಾನೂನುಗಳು-ಜಾರಿಯಾದವು. ಬಡವರಿಗೂ ಹಕ್ಕುಗಳನ್ನು ಮತ್ತು ಆರ್ಥಿಕ ಸಮಾನತೆಯನ್ನು ಹರಡುವ ದಿಕ್ಕಿನಲ್ಲಿ ನರೇಗಾ ಯೋಜನೆಗಳು ಜಾರಿಯಾದವು. ಅದೇ ಸಮಯದಲ್ಲಿ ವಿಶ್ವದ ಆರ್ಥಿಕ ಮುನ್ನಡೆಯೂ ಕಾರಣವಾಗಿ ದೇಶದಲ್ಲಿ ಸಂಪತ್ತೂ ವೃದ್ಧಿಯಾಗುತ್ತಿತ್ತು. ಮಧ್ಯಮವರ್ಗ ಖುಷಿಯಾಗಿತ್ತು. ಚುನಾವಣೆಗಳನ್ನು ಗೆಲ್ಲಲು ಕಾಂಗೆಸ್ ಮತ್ತದರ ಮಿತ್ರಪಕ್ಷಗಳಿಗೆ ಆರ್ಥಿಕ ಸಂಪನ್ಮೂಲಗಳಿಗೂ ಕೊರತೆಯಾಗಲಿಲ್ಲ. (ಈ ಆರ್ಥಿಕ ಸಂಪನ್ಮೂಲಗಳು ಅನೇಕ ಭ್ರಷ್ಟ ಮೂಲಗಳಿಂದ, ಉದಾಹರಣೆಗೆ ಆಂಧ್ರದ ವೈಎಸ್‍ಆರ್ ‌ರಂತಹವರ ಸಂಗ್ರಹಬಲದಿಂದ, ಗಣಿ-ತರಂಗಾಂತರ-ಕಾರ್ಪೊರೇಟ್ ಫಲಾನುಭವಿಗಳಿಂದ ಸಾಧ್ಯವಾಗಿತ್ತು ಎಂದು ನಂತರ ಗೊತ್ತಾಯಿತು.) ಮತ್ತು ಪ್ರಾದೇಶಿಕ ಯುಪಿಎ ನಾಯಕರು ಸ್ಥಳೀಯವಾಗಿ ಜಾತಿ, ಕೋಮುಗಳನ್ನು ಒಡೆದು ಮತಗಳಾಗಿ ಬಳಸಿಕೊಂಡರು. ಒಟ್ಟಿನಲ್ಲಿ ಯುಪಿಎ ಎರಡನೇ ಬಾರಿಗೂ ಅಧಿಕಾರ ಬಂತು. ಅದಕ್ಕೆ ಕೇವಲ ಮನಮೋಹನ ಸಿಂಗರ ಆಡಳಿತ ವೈಖರಿಯೇ ಕಾರಣವಾಗಿರಲಿಲ್ಲ, ಮತ್ತು 2009 ರ ಚುನಾವಣೆ ಆ ಗುಂಪಿಗೆ ಜನತೆ ಕೊಟ್ಟ ತೀರ್ಪೂ ಆಗಿರಲಿಲ್ಲ. ಇದನ್ನು ನೀವು ಲೋಕಸಭಾ ಕ್ಷೇತ್ರಗಳನ್ನು ರಾಜ್ಯಾವಾರು ವಿಂಗಡಿಸಿ ಅಲ್ಲಿಯ ಪಕ್ಷಾವಾರು ಪ್ರಾತಿನಿಧ್ಯ ಗಮನಿಸಿದರೆ ಗೊತ್ತಾಗುತ್ತದೆ. ಅದು, ದೇಶದಾದ್ಯಂತ ಒಂದು ಅಲೆಯ ಮೇಲೆ, ಬಹಸಂಖ್ಯಾತರ ಜನರ ಮನಸ್ಥಿತಿಯನ್ನೇನೂ ಬಿಂಬಿಸುತ್ತಿರಲಿಲ್ಲ.  (ಆ ಚುನಾವಣೆಯ ಬಗ್ಗೆ ನನ್ನ ಆಭಿಪ್ರಾಯವನ್ನು ಆಗ ಬರೆದಿದ್ದ “ಇದು ಕೇಂದ್ರಕ್ಕೆ ಕೊಟ್ಟ Mandate ಅಲ್ಲ… ಕ್ಷಮಿಸಿ…” ಲೇಖನದಲ್ಲಿ ವ್ಯಕ್ತಪಡಿಸಿದ್ದೇನೆ.)

ಈಗ, ಇಷ್ಟೆಲ್ಲ ಹಗರಣಗಳು- 2G, ಕಾಮನ್‍ವೆಲ್ತ್ ಗೇಮ್ಸ್, ಕಲ್ಲಿದ್ದಲು ಗಣಿ ಲೈಸನ್ಸ್, ಇನ್ನೂ ಅನೇಕ ಭ್ರಷ್ಟಾಚಾರ ಪ್ರಕರಣಗಳು-ಅದೂ ಅವರದೇ ಸಂಪುಟದ ಅನೇಕ ಸಚಿವರು ಪಾಲ್ಗೊಂಡಿರುವ ಹಗರಣಗಳು ದಿನನಿತ್ಯ ಬಹಿರಂಗಗೊಂಡು ಜನಸಾಮಾನ್ಯರಿಗೆ ಪ್ರಜಾಪ್ರಭುತ್ವ ಮತ್ತು ತಮ್ಮ ಪ್ರತಿನಿಧಿಗಳ ಹೊಣೆಗಾರಿಕೆಯ ಮೇಲೆ ನಂಬಿಕೆಯೇ ಹೋಗುತ್ತಿರುವಾಗ, ಇವನ್ನು ತಡೆಯುವಲ್ಲಿ ವಿಫಲರಾದ ಮನಮೋಹನ ಸಿಂಗರು ಪ್ರಧಾನಿಯಾಗಿ ಮುಂದುವರೆಯುವುದು ದೇಶಕ್ಕೆ ಒಳ್ಳೆಯದಲ್ಲ.

ಇಲ್ಲಿ ಪ್ರಧಾನಿ ವೈಯಕ್ತಿಕವಾಗಿ ಶುದ್ದಹಸ್ತರು ಎನ್ನುವುದಷ್ಟೇ ಸಾಕಾಗುವುದಿಲ್ಲ. ಅವರಷ್ಟೇ ಶುದ್ದಹಸ್ತರು ಮತ್ತು ಅವರಿಗಿಂತ ಹೆಚ್ಚಿನ ದಿನ ರಾಜಕೀಯ ಅಧಿಕಾರ ಅನುಭವಿಸಿಯೂ ಶುದ್ದಹಸ್ತರಾಗಿ ಉಳಿದಿರುವ ಆಂಟೊನಿಯಂತಹವರೂ ಇದ್ದಾರೆ. ದೇಶದ ಪ್ರಧಾನಿಯಾಗಿ ಉಳಿಯಲು ಶುದ್ದಹಸ್ತವೊಂದೇ ಸಾಲದು. ಈ ದೇಶದ ಅಂತಃಸತ್ವವನ್ನು ಉದ್ದೀಪಿಸುವ ಮತ್ತು ಸಾರ್ವಕಾಲಿಕ ಮೌಲ್ಯಗಳನ್ನು ಎತ್ತಿಹಿಡಿಯುವ ಧೀಮಂತಿಕೆಯೂ ಬೇಕಾಗುತ್ತದೆ, ಸತ್ಯನಿಷ್ಟುರತೆಯೂ ಬೇಕಾಗುತ್ತದೆ. ಅಕ್ರಮ ಕಂಡಾಗ ಸಾತ್ವಿಕ ರೋಷ ತೋರಿಸಬೇಕಾಗುತ್ತದೆ. ಅದು ಮನಮೋಹನರಲ್ಲಿಲ್ಲ. ತಮಗಿರುವ “ಪರಿಮಿತ” ಅಧಿಕಾರದಲ್ಲಿಯೇ, ಸಾಂವಿಧಾನಿಕ ಪಟ್ಟವಾದ ಪ್ರಧಾನಿ ಮತ್ತು ಪ್ರಧಾನಿ ಕಾರ್ಯಾಲಯವನ್ನು ಬಳಸಿಕೊಂಡು ಮನಮೋಹನ ಸಿಂಗರು ಮಾಡಲೇಬೇಕಿದ್ದ ಅನೇಕ ಕಾರ್ಯಗಳಿದ್ದವು. ಇತ್ತೀಚಿನ ಹಗರಣಗಳು ಆಗದೇ ಇರುವಂತೆ, ಭ್ರಷ್ಟಾಚಾರ ತಮ್ಮ ಸಂಪುಟದಲ್ಲಿ ನುಸುಳದಂತೆ ನೋಡಿಕೊಳ್ಳುವ ಎಲ್ಲಾ ಪರಿಕರ ಮತ್ತು ವ್ಯವಸ್ಥೆಗಳು ಅವರ ಕಾರ್ಯಾಲಯದ ವ್ಯಾಪ್ತಿಯಲ್ಲಿದ್ದವು. ಆದರೆ ತಾವು ಶುದ್ದಹಸ್ತರಾಗಿ ಮತ್ತು ಪ್ರಧಾನಿಯಾಗಿ ಉಳಿಯುವ ಹಂಬಲದಲ್ಲಿ ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ, ಅದೂ ಕಳೆದ ಎರಡು-ಮೂರು ವರ್ಷಗಳ ಅವಧಿಯಲ್ಲಿ ಮನಮೋಹನ ಸಿಂಗರು ಹೀನಾಯವಾಗಿ ವಿಫಲರಾಗಿದ್ದಾರೆ. ತಮ್ಮ ಸುತ್ತಮುತ್ತ ನಡೆಯುತ್ತಿರುವ ಅಕ್ರಮ ಕೃತ್ಯಗಳಿಗೆ ಕುರುಡಾಗಿದ್ದಾರೆ.

ಮನಮೋಹನ ಸಿಂಗರಿಗೆ ತಮ್ಮ ಪಕ್ಷ ಮತ್ತು ಒಕ್ಕೂಟದ ಇತರೆ ಪಕ್ಷಗಳ ಮಂತ್ರಿಗಳ ಮೇಲೆ ಯಾವುದೇ ಹಿಡಿತ ಇಲ್ಲದಿದ್ದರೂ, ತಮ್ಮ ಸಂಪುಟದ ಮಂತ್ರಿಗಳ ಕಾನೂನುಬಾಹಿರ ಕೃತ್ಯಗಳನ್ನು ತಮ್ಮ ನಾಯಕಿ ಸೋನಿಯಾ ಗಾಂಧಿಯವರ ಗಮನಕ್ಕಾದರೂ ಅಧಿಕೃತವಾಗಿ ತರಬಹುದಿತ್ತು. ಇವೆಲ್ಲ ಸೋನಿಯಾ ಗಾಂಧಿಯವರಿಗೆ ಗೊತ್ತಿಲ್ಲ ಎಂದು ಹೇಳಲಾಗದು. ಆದರೆ ಸರ್ಕಾರದ ಮುಖ್ಯಸ್ಥನಾಗಿ ಮನಮೋಹನ ಸಿಂಗರು ಏನು ಮಾಡಿದರು ಎನ್ನುವುದು ಇಲ್ಲಿಯ ಪ್ರಶ್ನೆ. ಭ್ರಷ್ಟಾಚಾರವನ್ನು ನಿಯಂತ್ರಿಸದೆ, ತಮ್ಮ ಸಹೋದ್ಯೋಗಿಗಳು ಮತ್ತು ಈ ದೇಶದ ಜನ ಹೆಚ್ಚುಹೆಚ್ಚು ಪ್ರಾಮಾಣಿಕರಾಗಲು ದೇಶದ ಮುಂದಾಳಾಗಿ ಏನು ಮಾಡಬೇಕಿತ್ತೊ ಅದನ್ನವರು ಮಾಡಿಲ್ಲ.

ಇಲ್ಲಿ ಮನಮೋಹನ ಸಿಂಗರಷ್ಟೇ ಅಲ್ಲ, ಯುಪಿಎ ಸರ್ಕಾರದ ಹಗರಣಗಳ ಹೊಣೆಯನ್ನು ಸೋನಿಯಾ ಗಾಂಧಿಯವರೂ ಹೊರಬೇಕು. ದೇಶದ ಎರಡೂ ಪ್ರಮುಖ ಪಕ್ಷಗಳು ಭ್ರಷ್ಟಾಚಾರದಲ್ಲಿ ಒಂದನ್ನೊಂದು ಮೀರಿಸುತ್ತಿವೆ. ಕಾಂಗ್ರೆಸ್‌ನ ಭ್ರಷ್ಟಾಚಾರವನ್ನು ಬಿಜೆಪಿಯವರು ಪ್ರಸ್ತಾಪಿಸಿದರೆ ಕರ್ನಾಟಕವನ್ನು ತೋರಿಸಲಾಗುತ್ತದೆ. ಬಿಜೆಪಿಯ ಭ್ರಷ್ಟಾಚಾರವನ್ನು ಕಾಂಗ್ರೆಸ್ ಪ್ರಸ್ತಾಪಿಸಿದರೆ ಕೇಂದ್ರದ ಹಗರಣಗಳನ್ನು ಉದಾಹರಿಸಲಾಗುತ್ತದೆ. ಹಾಗಾಗಿ, ತಮ್ಮ ಪಕ್ಷದ ನಾಯಕರ ಭ್ರಷ್ಟಾಚಾರವನ್ನು ನಿಯಂತ್ರಿಸುವ ಮತ್ತು ಮಾದರಿಯಾಗುವ ಅವಕಾಶ ಅವರ ಪಕ್ಷದ “ಅವಿರೋಧ, ಪ್ರಶ್ನಾತೀತ ನಾಯಕಿ” ಸೋನಿಯಾ ಗಾಂಧಿಯವರಿಗೆ ಇದೆ. ಹಾಗಾಗಿ ಅವರ ಪ್ರಾಮಾಣಿಕತೆ ಮತ್ತು ಹೊಣೆಗಾರಿಕೆ ಹಿಂದೆಂದಿಗಿಂತ ಪ್ರಶ್ನಾರ್ಹವಾಗುತ್ತಿದೆ.

ಈಗಿನ ಈ ಸ್ಥಿತಿ ಬದಲಾಗದಿದ್ದರೆ, ನಮ್ಮ ಜಾತ್ಯತೀತ ಮತ್ತು ಪ್ರಜಾಸತ್ತಾತ್ಮಕ ವ್ಯವಸ್ಥೆ ಗಂಡಾಂತರಕ್ಕೆ ಸಿಲುಕಲಿದೆ. ಯುಪಿಎ ಒಕ್ಕೂಟಕ್ಕೆ ತನ್ನ ನಾಯಕತ್ವವನ್ನು ಪುರರಾನ್ವೇಶಿಸುವ ಸಮಯ ಇದು. ಹಾಗೆಯೇ, ದೇಶದ ಜಾತ್ಯತೀತ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳಲ್ಲಿ ನಂಬಿಕೆ ಇಟ್ಟಿರುವ ಯುಪಿಎ-ಯೇತರ ನಾಯಕರು ಯುಪಿಎ ನಾಯಕತ್ವಕ್ಕೆ ಪರ್ಯಾಯವಾಗಿ ಮೌಲ್ಯಾಧಾರಿತ ರಾಜಕಾರಣ ಮತ್ತು ನಾಯಕತ್ವ ನೀಡಲು ಸಮಯ ಬಂದಿದೆ.