ಪ್ರಜಾ ಸಮರ-1 (ನಕ್ಸಲ್ ಕಥನ)


– ಡಾ.ಎನ್.ಜಗದೀಶ್ ಕೊಪ್ಪ


[ಪ್ರಿಯ ಓದುಗರೇ, ಪೀಪಲ್ಸ್ ವಾರ್ ಗ್ರೂಪ್ ಹೆಸರಿನಲ್ಲಿ 80ರ ದಶಕದಲ್ಲಿ ಆಂಧ್ರದಲ್ಲಿ ಆರಂಭವಾದ ನಕ್ಸಲ್ ಹೋರಾಟಕ್ಕೆ ಹಲವಾರು ಆಯಾಮಗಳಿವೆ. ಈ ಹೋರಾಟಕ್ಕೆ ಪ್ರೇರಣೆಯಾದ ಸಂಗತಿಗಳು ಮತ್ತು ನೆರೆಯ ರಾಜ್ಯಕ್ಕೆ ವಿಸ್ತರಿಸಲು ಕಾರಣವಾದ ಮೂರು ಘಟನೆಗಳನ್ನು ಪ್ರಜಾಸಮರದ ಇತಿಹಾಸಕ್ಕೆ ಮೊದಲು ಮೂರು ಅಧ್ಯಾಯಗಳಲ್ಲಿ ನಿಮ್ಮ ಮುಂದೆ ಇಡುತ್ತಿದ್ದೇನೆ.]

ಅದು 2009 ರ ಸೆಪ್ಟಂಬರ್ ಇಪ್ಪತ್ತರ ದಿನಾಂಕ. ಹೈದರಾಬಾದ್ ನಗರದಿಂದ ಬಂದಿದ್ದ ಆಂಧ್ರ ಪೋಲಿಸರು ಹಾಗೂ ದೆಹಲಿಯ ಗುಪ್ತಚರ ಇಲಾಖೆಯ ಪೋಲಿಸರು ನಡು ಮಧ್ಯಾಹ್ನ ದೆಹಲಿಯ ರಾಯಭಾರಿ ಕಚೇರಿಗಳ ಹತ್ತಿರವಿರುವ ಪ್ರತಿಷ್ಠಿತ ಬಿಕಾಜಿಕಾಮ ಎಂಬ ವಾಣಿಜ್ಯ ಕಟ್ಟಡದ ಮುಂಭಾಗ ಅಂಬಾಸೆಡರ್ ಕಾರಿನಲ್ಲಿ ಕಾದು ಕುಳಿತಿದ್ದರು. ಎರಡು ದಶಕಗಳ ಕಾಲ ನಕ್ಸಲ್ ಚಳವಳಿ, ವಿಶೇಷವಾಗಿ 1980ರ ದಶಕದಲ್ಲಿ ಆಂಧ್ರದಲ್ಲಿ ಆರಂಭವಾದ ಕೊಂಡಪಲ್ಲಿ ಸೀತಾರಾಮಯ್ಯ ನೇತೃತ್ವದಲ್ಲಿ ಪ್ರಜಾಸಮರಂ ಎಂಬ ನಕ್ಸಲ್ ಚಳವಳಿಗೆ ರೂಪು ರೇಷೆಯ ಜೊತೆಗೆ ವಿಚಾರಧಾರೆಗಳನ್ನು ರೂಪಿಸಿ, ಅದನ್ನು ಸಿದ್ಧಾಂತಗಳ ಆಧಾರದ ಮೇಲೆ ಮುನ್ನಡೆಸಿ, ಮಹಾರಾಷ್ಟ್ರ, ಮಧ್ಯಪ್ರದೇಶ, ಒರಿಸ್ಸಾ, ಬಿಹಾರ ರಾಜ್ಯಗಳಲ್ಲಿ ನಕ್ಸಲ್ ಹೋರಾಟದ ಬೀಜ ಬಿತ್ತಿ, ನಂತರ ಬಳಲಿ ಸೋತು ಸುಣ್ಣವಾಗಿದ್ದ ಹಿರಿಯ ಜೀವವೊಂದನ್ನು ಬೇಟೆಯಾಡುವುದು ಅವರ ಗುರಿಯಾಗಿತ್ತು. ಆದರೆ, ಆ ವ್ಯಕ್ತಿಯ ಮುಖ ಪರಿಚಯವಿಲ್ಲದ ಪೊಲೀಸರು 20 ವರ್ಷದ ಹಿಂದೆ ಅರಣ್ಯದಲ್ಲಿ ಈ ನಾಯಕನಿಗೆ ಸಹಾಯಕನಾಗಿ ದುಡಿದು ಬಂಧನದಲ್ಲಿದ್ದ ವ್ಯಕ್ತಿಯೊರ್ವನನ್ನು ಇದಕ್ಕಾಗಿ ವಿಶಾಖಪಟ್ಟಣದಿಂದ ಕರೆತಂದಿದ್ದರು.

ಗಂಟೆಗಳ ಕಾಲ ಕಾದ ಪೋಲಿಸರ ನಿರೀಕ್ಷೆ ಹುಸಿಯಾಗಲಿಲ್ಲ. ವಾಣಿಜ್ಯ ಕಟ್ಟಡದ ಯಾವುದೋ ಒಂದು ಕಛೇರಿಯಿಂದ ಹೊರ ಬಂದ ತೆಳ್ಳನೆಯ ಆದರೆ ಆರು ಅಡಿ ಎತ್ತರವಿದ್ದ, ಖಾದಿ ಜುಬ್ಬ ಮತ್ತು ಪೈಜಾಮ ಧರಿಸಿದ್ದ ಆ ಹಿರಿಯ ಜೀವ ನಿಧಾನವಾಗಿ ಹೆಗಲಿನಲ್ಲಿ ಇದ್ದ ಕೈಚೀಲವನ್ನು ಸರಿ ಪಡಿಸಿಕೊಳ್ಳುತ್ತಾ, ಕಚೇರಿಯ ಸಮೀಪವಿದ್ದ ಹ್ಯಾಬಿಟೇಟ್ ಸೆಂಟರ್ ಬಸ್ ನಿಲ್ದಾಣದ ಬಳಿ ಬಂದು ನಿಂತುಕೊಂಡಿತು. ತಡಮಾಡದೆ ಕಾರಿನಲ್ಲಿದ್ದ ಪೊಲೀಸರು ಕೆಳಗಿಳಿದು ಬಂದು ವ್ಯಕ್ತಿಯನ್ನು ಎತ್ತಿ ಹಾಕಿಕೊಂಡು ಕ್ಷಣಾರ್ಧದಲ್ಲಿ ಮರೆಯಾದರು. ಮಾರನೇ ದಿನ ಹಿರಿಯ ಜೀವವನ್ನು ನ್ಯಾಯಧೀಶರ ಗುಟ್ಟಾಗಿ ಹಾಜರುಪಡಿಸಿ ನಂತರ ತಮ್ಮ ವಶಕ್ಕೆ ತೆಗೆದುಕೊಂಡ ದೆಹಲಿಯ ಪೊಲೀಸರು ಸುದ್ಧಿಗೋಷ್ಠಿಯಲ್ಲಿ ವಿಷಯ ಪ್ರಕಟಿಸಿದರು. ಭಾರತದ ಅತ್ಯಂತ ಪ್ರಮುಖ ನಕ್ಸಲ್ ನಾಯಕ ಹಾಗೂ ಹತ್ತಕ್ಕೂ ಹೆಚ್ಚು ರಾಜ್ಯಗಳ ನಕ್ಸಲಿಯರ ಆರಾಧ್ಯ ದೈವ ಮತ್ತು ಭಾರತದ ಅಖಂಡತೆಗೆ ಮತ್ತು ಸಾರ್ವಭೌಮತ್ವಕ್ಕೆ ಕಂಟಕವಾಗಿದ್ದ ಕೊಬದ್ ಗಾಂಡಿ ಎಂಬ 76 ವರ್ಷದ ನಾಯಕನನ್ನು ಬಂಧಿಸಿರುವುದಾಗಿ  ಬಹಿರಂಗಪಡಿಸಿದರು. ಪೂರ್ವ ಮತ್ತು ಮಧ್ಯ ಭಾರತದ ಆದಿವಾಸಿಗಳ ಬಾಯಲ್ಲಿ ಗಾಂಧಿ ಎಂತಲೂ ನಕ್ಸಲಿಯರ ಬಾಯಲ್ಲಿ ಕೆ.ಜಿ. ಸರ್ ಎಂತಲೂ ಪರಿಚಿತವಾಗಿದ್ದ ಕೋಬದ್ ಗಾಂಡಿಯ ಹೋರಾಟದ ಬದುಕು ಹೀಗೆ ಬಂಧನದೊಂದಿಗೆ ಅಂತ್ಯಗೊಂಡಿತು.

ಈ ಬಂಧನ ಬಿ.ಬಿ.ಸಿ. ಚಾನಲ್ ಸೇರಿದಂತೆ ಅಂತರ್ರಾಷ್ಟ್ರೀಯ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಯಿತು. ಏಕೆಂದರೆ, ಬಂಧನಕ್ಕೆ ಎರಡು ವರ್ಷದ ಮುಂಚೆ ಈ ವ್ಯಕ್ತಿಯನ್ನು ಲಂಡನ್‌ನಿನ ಬಿ.ಬಿ.ಸಿ. ಚಾನಲ್ ತಂಡ ಪೊಲೀಸರ ಕಣ್ಣು ತಪ್ಪಿಸಿ ದಂಡಕಾರಣ್ಯದಲ್ಲಿ ಸಂದರ್ಶನ ಮಾಡಿ ಪ್ರಸಾರ ಮಾಡಿತ್ತು. ಏಕೆಂದರೆ, ಕೊಬಡ್ ಗಾಂಡಿ ಒಬ್ಬ ಸಾಮಾನ್ಯ ವ್ಯಕ್ತಿಯಾಗಿರಲಿಲ್ಲ. ನಕ್ಸಲ್ ಚಳವಳಿಗೆ ಧುಮುಕದಿದ್ದರೆ, ಅಂತರ್ರಾಷ್ಟ್ರೀಯ ಮಟ್ಟದ ದೊಡ್ಡ ಆರ್ಥಿಕ ತಜ್ಞನಾಗುವ ಎಲ್ಲಾ ಅವಕಾಶಗಳು ಇದ್ದವು. 1970 ದಶಕದಲ್ಲಿ ಲಂಡನ್ ನಗರದಲ್ಲಿ  ಚಾರ್ಟಡ್ ಅಕೌಟೆಂಟ್ ಪದವಿಗೆ ಓದುತಿದ್ದಾಗಲೇ, ಬ್ರಿಟಿಷರು ಭಾರತೀಯ ವಿದ್ಯಾರ್ಥಿಗಳ ವಿರುದ್ಧ ತೋರುತ್ತಿದ್ದ ವರ್ಣ ನೀತಿಯನ್ನು ಪ್ರತಿಭಟಿಸಿ, ಒಂದು ತಿಂಗಳ ಕಾಲ ಜೈಲುವಾಸ ಅನುಭವಿಸಿ, ಅಲ್ಲಿನ ಮಾಧ್ಯಗಳಲ್ಲಿ ಸುದ್ಧಿಯಾಗಿ ನಂತರ ಭಾರತಕ್ಕೆ ಮರಳಿದ್ದರು.

ಮುಂಬೈ ನಗರದ ಶ್ರೀಮಂತ ಪಾರ್ಸಿ ಕುಟುಂಬದಲ್ಲಿ ಜನಿಸಿದ್ದ ಕೊಬದ್ ಗಾಂಡಿಗೆ ದುಡಿಯುವ ಅವಶ್ಯಕತೆ ಇರಲಿಲ್ಲ. ಅವರ ತಂದೆ ಆದಿ ಗಾಂಡಿ ಪ್ರಸಿದ್ಧ ಬಹುರಾಷ್ಟೀಯ ಕಂಪನಿಯಾದ ಗ್ಲಾಸ್ಕೊ ಕಂಪನಿಯಲ್ಲಿ ಮುಖ್ಯ ವ್ಯವಸ್ಥಾಪಕರಾಗಿದ್ದವರು. ಮುಂಬೈ ನಗರದ ಪ್ರತಿಷ್ಠಿತ ಹಾಗೂ ಕಡಲಿಗೆ ಮುಖ ಮಾಡಿರುವ ವರ್ಲಿಯ ಪ್ರದೇಶದಲ್ಲಿ ನಾಲ್ಕು ಸಾವಿರ ಚದುರ ಅಡಿ ವಿಸ್ತಾರವಾದ ಜಾಗದಲ್ಲಿ ಬಂಗಲೆಯನ್ನು ನಿರ್ಮಿಸಿದ್ದರು. ಸಿರಿವಂತ ಕುಟುಂಬದಲ್ಲಿ ಜನಿಸಿದ್ದರೂ ಬಾಲ್ಯದಿಂದಲೂ ಕೊಬದ್ ಗಾಂಡಿಗೆ ಬಡವರೆಂದರೆ ಅಪಾರ ಪ್ರೀತಿ ಮತ್ತು ಕಾಳಜಿ. ಒಮ್ಮೆ ತನ್ನ ತಂದೆಯ ಚಿನ್ನದ ಚೈನ್ ಹೊಂದಿದ್ದ ಕೈಗಡಿಯಾರವನ್ನು ಹೇಳದೆ ಕೇಳದೆ ಮನೆಯ ಸೇವಕನಿಗೆ ಧಾನ ಮಾಡಿದ ವ್ಯಕ್ತಿತ್ವ ಇವರದು. ಇಂತಹ ವ್ಯಕ್ತಿತ್ವವೇ ಅಂತಿಮವಾಗಿ ಕೊಬದ್ ಗಾಂಡಿಯನ್ನು ಅರಣ್ಯದ ಅಂಚಿಗೆ ತಂದು ನಿಲ್ಲಿಸಿತು. ಐಷಾರಾಮಿ ಬದುಕು, ಊಟ ತಿಂಡಿ ತೊರೆದು ದಂಡಕಾರಣ್ಯದ ದಟ್ಟ ಕಾನನದ ನಡುವೆ ಪ್ಲಾಸ್ಟಿಕ್ ಗುಡಾರದ ಕೆಳಗೆ ಅದೇ ಪ್ಲಾಸ್ಟಿಕ್ ಹಾಳೆಯನ್ನು ಹಾಸಿ ಮಲಗುವಂತೆ ಮಾಡಿತು.

ಸತತ ಮೂವತ್ತು ವರ್ಷಗಳ ಕೊಬಡ್ ಗಾಂಡಿಯ ಹೋರಾಟದ ಬದುಕಿಗೆ ಬಾಳ ಸಂಗಾತಿಯಾಗಿ ಹೆಗಲುಕೊಟ್ಟು ಶ್ರಮಿಸಿದ ಜೀವವೇ, ಅನುರಾಧ ಶ್ಯಾನ್‌ಬಾಗ್ ಎಂಬ ಕನ್ನಡದ ಹೆಣ್ಣು ಮಗಳು. 1980ರ ದಶಕದಿಂದ ಆರಂಭವಾದ ಪ್ರಜಾಸಮರಂ ಎಂಬ ನಕ್ಸಲ್ ಚಳವಳಿಯಲ್ಲಿ ಕೊಂಡಪಲ್ಲಿ ಸೀತಾರಾಮಯ್ಯನಷ್ಟೇ ಗೌರವವನ್ನು ಹೊಂದಿದ ಅಪೂರ್ವ ಜೋಡಿ ಇವರದು. ಇವರ ಕಥನ ಸಮಾಜದ ಮುಖ್ಯವಾಹಿನಿಗೆ ಬಾರದೇ ಕೇವಲ ಅರಣ್ಯದ ನಡುವೆ ನಕ್ಸಲಿಯರ ಬಾಯಲ್ಲಿ ನಕ್ಸಲಿಯರ ಗಾಂಧಿ ದಂಪತಿಗಳು ಎಂಬ ದಂತಕಥೆಯಾಗಿ ಇಂದಿಗೂ ಅನುರಣನಗೊಳ್ಳುತ್ತಿದೆ.

ದೆಹಲಿಯಲ್ಲಿ ಬಂಧನವಾಗಿ ವಿಚಾರಣೆಯ ನಂತರ ಮತ್ತೆ ನ್ಯಾಯಾಲಯಕ್ಕೆ ಕೊಬಡ್ ಗಾಂಡಿಯನ್ನು ಹಾಜರು ಪಡಿಸಿದಾಗ, ಕಿಕ್ಕಿರಿದು ತುಂಬಿದ್ದ ಮಾಧ್ಯಮ ಮಂದಿಯ ನಡುವೆ ನ್ಯಾಯಾಲಯದಲ್ಲಿ ಈ ವೃದ್ಧ ಜೀವ ಯಾವುದೇ ಅಳುಕಿಲ್ಲದೆ, ಭಗತ್‌ಸಿಂಗ್ ಜಿಂದಾಬಾದ್’, ಅನುರಾಧ ಗಾಂಡಿ ಅಮರ್ ಹೈ ಎಂಬ ಘೋಷಣೆ ಕೂಗಿತು.

ಕೇವಲ ಆರು ತಿಂಗಳ ಹಿಂದೆ ವೃದ್ಧಾಪ್ಯದ ಕಾರಣ ಹಲವು ಕಾಯಿಲೆಯಿಂದ ಬಳಲುತ್ತಿದ್ದ ಕೊಬದ್ ಗಾಂಡಿ ನಕ್ಸಲಿಯರ ಸಹಾಯದಿಂದ ದೆಹಲಿಗೆ ಬಂದು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದಕ್ಕಾಗಿ ಇವರದೇ ಭಾವಚಿತ್ರವುಳ್ಳ ದಿಲಿಪ್ ಪಟೇಲ್ ಎಂಬ ಹೆಸರಿನಲ್ಲಿ ನಕಲಿ ಮತದಾರರ ಚೀಟಿಯನ್ನು ಸಿದ್ಧಪಡಿಸಲಾಗಿತ್ತು. ಕೂಲಿಕಾರ್ಮಿಕರು ಮತ್ತು ಬಿಕ್ಷುಕರು, ಹಾಗೂ ಸೈಕಲ್ ರಿಕ್ಷಾವಾಲಾಗಳು ವಾಸಿಸುತ್ತಿದ್ದ ಮೊಲರ್‌ಬಂದ್ ಎಂಬ ಕಾಲೋನಿಯ ತಗಡಿನ ಶೀಟಿನ ಮನೆಯೊಂದರಲ್ಲಿ ವಾಸಿಸುತ್ತಾ ಬದುಕು ದೂಡುತ್ತಿದ್ದ ಈ ನಾಯಕನಿಗೆ ನಕ್ಸಲಿಯರೇ ಒಬ್ಬ ನಿಷ್ಠಾವಂತ ಸೇವಕನನ್ನು ನೇಮಕ ಮಾಡಿದ್ದರು. ಗೌಪ್ಯತೆಯ ದೃಷ್ಟಿಯಿಂದ ಮೊಬೈಲ್ ಬಳಸುತ್ತಿರಲಿಲ್ಲ. ಎಲ್ಲಾ ಸಂದೇಶಗಳು ಮಾರು ವೇಷದ ನಕ್ಸಲಿಯರ ಮೂಲಕ ಅವರಿಗೆ ರವಾನೆಯಾಗುತಿದ್ದವು. ಅದೇ ರೀತಿ ಹಣಕಾಸು ಸಹಾಯದ ಜೊತೆಗೆ ಚಟುವಟಿಕೆಯ ವಿಷಯಗಳು ಇವರಿಗೆ ತಲುಪುತಿದ್ದವು. (ಇವತ್ತಿಗೂ ದಂಡಕಾರಣ್ಯದ ಮಧ್ಯೆ ಸುರಕ್ಷಿತ ಪ್ರದೇಶದಲ್ಲಿ 70 ವರ್ಷದ ದಾಟಿದ, 17 ಕ್ಕೂ ಹೆಚ್ಚು ಮಂದಿ ಇರುವ ಹಿರಿಯ ನಕ್ಸಲ್ ಹೋರಾಟಗಾರರನ್ನು ಅತ್ಯಂತ ಜತನದಿಂದ ಕಾಪಾಡಿಕೊಂಡು ಬರಲಾಗಿದೆ. ಅವರ ಸಲಹೆ ಸಹಕಾರವನ್ನು ಪಡೆದುಕೊಳ್ಳಲಾಗುತ್ತಿದೆ.)

ಬಾಲ್ಯದಲ್ಲಿ ಡೆಹರಾಡೂನ್‌ನ ಕಾನ್ವೆಂಟ್ ವಸತಿಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮತ್ತು ಅಂದಿನ ಬಾಂಬೆಯ ಪ್ರತಿಷ್ಠಿತ ಕ್ಸೇವಿಯರ್ ಕಾಲೇಜಿನಲ್ಲಿ ಪದವಿ ಶಿಕ್ಷಣ ಮುಗಿಸಿ, ಇಂಗ್ಲೆಂಡ್‌ನಲ್ಲಿ ಚಾರ್ಟಡ್ ಅಕೌಟೆಂಟ್ ಪದವಿಯ ಪಡೆದು ಮರಳಿ ಭಾರತಕ್ಕೆ ಬಂದ ಕೊಬದ್ ಗಾಂಡಿಯನ್ನು ವೃತ್ತಿಯ ಸೆಳೆತಕ್ಕೆ ಬದಲಾಗಿ ಎಡಪಂಥೀಯ ಚಿಂತನೆಗಳು ಆಕರ್ಷಿಸಿದವು. ಹೀಗೆ ಕೊಬದ್ ಶ್ರಮಿಕರ ಬಗ್ಗೆ ಬಡವರ ಬಗ್ಗೆ ಕಾಳಜಿ ತೋರುತ್ತಾ ನಕ್ಸಲ್ ಚಳವಳಿಯತ್ತ ಒಲವು ಬೆಳೆಸಿಕೊಂಡರು. ಇದಕ್ಕೆ ಅಂದು ಬಾಂಬೆಯಲ್ಲಿ ಅಸ್ತಿತ್ವದಲ್ಲಿದ್ದ ಪ್ರಗತಿಪರ ವಿದ್ಯಾರ್ಥಿ ಸಂಘಟನೆ ಕೂಡ ಪರೋಕ್ಷವಾಗಿ ಕಾರಣವಾಯ್ತು. ಅವರ ಅಂದಿನ ಹೋರಾಟಗಳ ದಿನಗಳಲ್ಲಿ ಪ್ರಗತಿಪರ ಮುಸ್ಲಿಂ ಚಿಂತಕ ಅಸ್ಗರ್ ಆಲಿ ಇಂಜಿನಿಯರ್ ಇವರ ಒಡನಾಡಿಯಾಗಿದ್ದರು. ಇಂತಹ ಕ್ರಾಂತಿಯ ದಿನಗಳಲ್ಲಿ ಕೊಬದ್ ಒಂದು ದಿನ ಅನುರಾಧ ಶಾನ್‌ಬಾಗ್‌ರನ್ನು ಭೇಟಿಯಾದರು.   ಅನುರಾಧರವರ ತಂದೆ ಗಣೇಶ್ ಶಾನ್‌ಬಾಗ್ ಮೂಲತಃ ಕರ್ನಾಟಕದವರು. ವಕೀಲರಾಗಿದ್ದ ಇವರು ತಮ್ಮ ಯೌವನದಲ್ಲಿ ಸುಭಾಷ್‌ಚಂದ್ರ ಭೋಸರರಿಂದ ಪ್ರಭಾವಿತರಾಗಿ ಮನೆ ಬಿಟ್ಟು ಕೊಲ್ಕತ್ತ ನಗರಕ್ಕೆ ತೆರಳಿದವರು, ಅಲ್ಲಿದ್ದ ದಿನಗಳಲ್ಲಿ ನಕ್ಸಲ್ ಪ್ರಭಾವಕ್ಕೆ ಒಳಗಾಗಿ, ನಂತರ ಮುಂಬೈ ನಗರಕ್ಕೆ ಬಂದು ನೆಲೆ ನಿಂತರೂ ಕೂಡ ತಮ್ಮ ವಕೀಲ ವೃತ್ತಿಯಲ್ಲಿ ಸರ್ಕಾರದಿಂದ ಬಂಧಿತರಾಗುತ್ತಿದ್ದ ನಕ್ಸಲಿಯರ ಬಿಡುಗಡೆಗಾಗಿ ತಮ್ಮ ಬಹುಭಾಗದ ಸಮಯವನ್ನು ವ್ಯಯಮಾಡುತ್ತಿದ್ದರು. ಇವರ ಪತ್ನಿ ಕುಮುದಾ ಸಹ ಪ್ರಗತಿಪರ ಮನೋಭಾವವುಳ್ಳ ಗೃಹಿಣಿಯಾಗಿದ್ದರು. ಇಂತಹ ದಂಪತಿಗಳ ಪುತ್ರಿಯಾಗಿ ಜನಸಿದ್ದ ಅನೂರಾಧ ಬಾಲ್ಯದಿಂದ ತಂದೆಯ ಕ್ರಾಂತಿಕಾರಿಕ ಗುಣಗಳನ್ನು ಮೈಗೂಡಿಸಿಕೊಂಡಿದ್ದರು. ತಮ್ಮ ಶಾಲಾ ದಿನಗಳಲ್ಲಿ ಸುಂದರ ಕೈಬರವಣಿಗೆ ಇದ್ದ ಅನುರಾಧ ಶ್ರಮಿಕರ ಪರವಾಗಿ ಭಿತ್ತಿ ಪತ್ರಗಳನ್ನು ಬರೆದು ರಸ್ತೆಯ ವಿದ್ಯುತ್ ಕಂಬಗಳಿಗೆ ಅಂಟಿಸುತ್ತಿದ್ದರು. ಪ್ರತಿಷ್ಠಿತ ಎಲ್ಪಿಸ್ಟೋನ್ ಕಾಲೇಜಿನಲ್ಲಿ ಪದವಿ, ಹಾಗೂ ಮುಂಬೈ ವಿ.ವಿ.ಯಲ್ಲಿ ಸಮಾಜಶಾಸ್ತ್ರದಲ್ಲಿ ಎಂ.ಎ. ಪದವಿ ಹಾಗೂ ಎಂ.ಫಿಲ್ ಪಧವೀಧರೆಯಾದ ಅನುರಾಧ, ಶಿಕ್ಷಣದ ನಂತರ ಮುಂಬೈನ ಕೊಳಗೇರಿಗಳಲ್ಲಿ ಸಮಾಜ ಸೇವೆಯಲ್ಲಿ ತೊಡಗಿಕೊಂಡು. 70ರ ದಶಕದಲ್ಲಿ ಮಹಾರಾಷ್ಟ್ರದಲ್ಲಿ ಅಸ್ತಿತ್ವಕ್ಕೆ ಬಂದಿದ್ದ ದಲಿತ ಪ್ಯಾಂಥರ್ ಚಳವಳಿಯಲ್ಲಿ ಮುಂಚೂಣಿಯಲ್ಲಿದ್ದರು. ಅಂದಿನ ದಿನಗಳಲ್ಲಿ ಮಹಾರಾಷ್ಟ್ರದ ದಲಿತರ ದೌರ್ಜನ್ಯ ಕುರಿತು ಈಕೆ ಬರೆದ ನೂರಾರು ಲೇಖನಗಳು ಅನೇಕ ಯುವ ದಲಿತ ಲೇಖಕ, ಲೇಖಕಿಯರ ಹುಟ್ಟಿಗೆ ಕಾರಣವಾದವು.

ಕೊಬದ್ ಮತ್ತು ಅನೂರಾಧ ಒಂದೇ ಬಗೆಯ ನಿಲುವುಗಳನ್ನು ಹೊಂದಿ ಮುಂಬೈ ಕೊಳಚೇಗೇರಿಗಳಲ್ಲಿ ಹರಿಜನರ ಬಸ್ತಿಗಳಲ್ಲಿ (ಕೇರಿ) ಒಟ್ಟಿಗೆ ದುಡಿಯುತ್ತಿದ್ದ ಸಂದರ್ಭದಲ್ಲಿ ಪರಸ್ಪರ ಆಕರ್ಷಿತರಾಗಿ, ತಮ್ಮ ಪೋಷಕರ ಒಪ್ಪಿಗೆ ಪಡೆದು 1977ರ ನವಂಬರ್ 5 ರಂದು ವಿವಾಹವಾದರು. ಆ ವೇಳೆಗೆ ಕೊಬದ್ ಗಾಂಡಿಯವರ ತಂದೆ ಗ್ಲಾಸ್ಕೊ ಕಂಪನಿಯ ಸೇವೆಯಿಂದ ನಿವೃತ್ತರಾಗಿ ಪೂನಾ ಸಮೀಪದ ಮಹಾಬಲೇಶ್ವರ್ ಎಂಬ ಗಿರಿಧಾಮದಲ್ಲಿ ಎಸ್ಟೇಟ್ ಖರೀದಿಸಿ ವಾಸವಾಗಿದ್ದರು.  ಒಂದು ವಾರ ಮಹಾಬಲೇಶ್ವರದ ತಂದೆಯ ಎಸ್ಟೇಟ್‌ನಲ್ಲಿ ಕಾಲ ಕಳೆದ ನವ ದಂಪತಿಗಳು ಮುಂಬೈನಗರಕ್ಕೆ ವಾಪಸ್ ಬಂದು ಸುಮಾರು ನಾಲ್ಕು ವರ್ಷಗಳ ಕಾಲ ಕಾರ್ಮಿಕ ಸಂಘಟನೆಯ ಪರವಾಗಿ ಮತ್ತು ದಲಿತರ ಪರವಾಗಿ ಹೋರಾಟದಲ್ಲಿ ಪಾಲ್ಗೊಂಡರು. ತಮ್ಮ ಭವಿಷ್ಯದ ಬದುಕಿನ ಬಗ್ಗೆ ಸುಧೀರ್ಘವಾಗಿ ಚರ್ಚಿಸಿ ಒಂದು ಅಂತಿಮ ನಿರ್ಧಾರಕ್ಕೆ ಬಂದರು. ಅದನ್ನು ತಮ್ಮ ಬಂಧು ಮಿತ್ರರ ಎದುರು ತಮ್ಮ ಭವಿಷ್ಯದ ಕಾರ್ಯ ಕ್ಷೇತ್ರದ ವಿವರವನ್ನು ಬಹಿರಂಗ ಪಡಿಸಿದರು. 1956ರ ರಲ್ಲಿ ಡಾ. ಅಂಬೇಡ್ಕರ್ ತಾವು ನಿಧನರಾಗುವ ಕೆಲವು ದಿನಗಳ ಮುನ್ನ ಬೌದ್ಧ ಧರ್ಮ ಸ್ವೀಕರಿಸಿದ್ದ ನಾಗಪುರವನ್ನು ತಮ್ಮ ಕರ್ಮ ಭೂಮಿಯನ್ನಾಗಿ ಆರಿಸಿಕೊಂಡಿದ್ದರು. ದಲಿತರು ಮತ್ತು ಕೂಲಿ ಕಾರ್ಮಿಕರ ಪರ ದುಡಿಯಲು ಕೊಬದ್ ಮತ್ತು ಅನುರಾಧ ನಿರ್ದರಿಸಿದರು. ಅದರಂತೆ ಇಬ್ಬರೂ ನಾಗಪುರಕ್ಕೆ ಬಂದು ಹರಿಜನ ಕೇರಿಯಲ್ಲಿ ಒಂದು ಹೆಂಚಿನ ಮನೆ ಪಡೆದು ವಾಸ ಮಾಡತೊಡಗಿದರು.

ನಾಗಪುರದ ವಿ.ವಿಯಲ್ಲಿ ಅನುರಾಧಗೆ ಉಪನ್ಯಾಸಕಿಯಾಗಿ ಕೆಲಸ ಸಿಕ್ಕಿದ್ದರಿಂದ ತನ್ನ ವೃತ್ತಿಯ ನಡುವೆ ನಾಗಪುರ ನಗರದಿಂದ 20 ಕಿಲೋಮೀಟರ್ ದೂರವಿರುವ ಕಾಂಪ್ಟಿ ಎಂಬ ಕಾಲೋನಿಯಲ್ಲಿ ನೇಕಾರಿಕೆಯಲ್ಲಿ ತೊಡಗಿದ್ದ ಬಡ ಮುಸ್ಲಿಂ ಕುಟುಂಬಗಳ ಕ್ಷೇಮಾಭಿವೃದ್ಧಿಗೆ ಶ್ರಮಿಸುತ್ತಾ, ರಾತ್ರಿ ವೇಳೆಯಲ್ಲಿ ಮಧ್ಯರಾತ್ರಿ 12 ರವರೆಗೆ ತಾವು ವಾಸವಾಗಿದ್ದ ಹರಿಜನ ಕೇರಿಯ ಜನರ ಸಂಕಷ್ಟಗಳಿಗೆ ಕಣ್ಣು ಮತ್ತು ಕಿವಿಯಾಗುತ್ತಿದ್ದರು.

ಕೊಬದ್ ಗಾಂಡಿ ಆ ವೇಳೆಗಾಗಲೇ ಮಹರಾಷ್ಟ್ರದ ಗಡಿಜಿಲ್ಲೆಗಳಾದ ಗೊಂಡಿಯ, ಬಂಡಾರ ಚಂದ್ರಾಪುರ್ ಮತ್ತು ಗಡ್ ಚಿರೋಲಿ ಜಿಲ್ಲೆಯ ಪ್ರದೇಶಗಳಿಗೆ ನೆರೆಯ ಆಂಧ್ರದ ಪ್ರಜಾ ಸಮರಂ ತಂಡದ ನಕ್ಸಲರು ಪ್ರವೇಶ ಪಡೆದಿದ್ದರಿಂದ ಸ್ಥಳಿಯ ಗೊಂಡಾ ಆದಿವಾಸಿಗಳು ಮತ್ತು ನಕ್ಸಲರ ನಡುವೆ ಸಂವಹನ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದ್ದರು.

ಮುಂಬೈ ನಗರದಲ್ಲಿ ಪ್ರಗತಿಪರ ವಿದ್ಯಾರ್ಥಿ ಸಂಘಟನೆಯಲ್ಲಿ ಇದ್ದಾಗಲೇ 1981ರಲ್ಲಿ ಆಂಧ್ರದ ವಿಜಯವಾಡ ಸಮೀಪದ ಗುಂಟೂರಿನಲ್ಲಿ ನಡೆದ ವಿದ್ಯಾರ್ಥಿ ಸಮ್ಮೇಳನದಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಕೊಂಡಪಲ್ಲಿ ಸೀತಾರಾಮಯ್ಯನವರ ಸಂಪರ್ಕ ಬಂದ ಕೊಬದ್ ಗಾಂಡಿ ಮುಂದಿನ ದಿನಗಳಲ್ಲಿ ಪ್ರಜಾ ಸಮರಂ (ಪೀಪಲ್ಸ್ ವಾರ್ ಗ್ರೂಪ್) ನಕ್ಸಲ್ ಸಂಘಟನೆಗೆ ಒಂದು ಸಂವಿಧಾನ ರಚನೆ ಮಾಡಿದರು. (ಇದನ್ನು ಮುಂದಿನ ಅಧ್ಯಾಯಗಳಲ್ಲಿ ವಿವರಿಸಲಾಗಿದೆ.) ವ್ಯಯಕ್ತಿಕ ನೆಲೆಯಲ್ಲಿ ಹಿಂಸೆಯನ್ನು ವಿರೋಧಿಸುತ್ತಿದ್ದ ಕೊಬದ್ ಗಾಂಡಿ ತಮ್ಮ ಎರಡು ದಶಕಗಳ ನಕ್ಸಲಿಯರ ಒಡನಾಟದಲ್ಲಿ ಎಂದೂ ಬಂದೂಕನ್ನು ಕೈಗೆತ್ತಿಕೊಳ್ಳಲಿಲ್ಲ. ಆದರೆ, ಅರಣ್ಯದ ನಡುವೆ ಮೂಕ ಪ್ರಾಣಿಗಳಂತೆ ಬದುಕಿ ವ್ಯವಸ್ಥೆಯಿಂದ ಶೋಷಣೆಗೆ ಒಳಗಾಗುತ್ತಿದ್ದ ಅರಣ್ಯವಾಸಿ ಆದಿವಾಸಿಗಳಿಗೆ ನಕ್ಸಲ್ ಹೋರಾಟದಿಂದ ಮಾತ್ರ ಮುಕ್ತಿ ಎಂದು ಅವರು ನಂಬಿದ್ದರು. ಕೋಬದ್‌ಗೆ ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ಮತ್ತು ಗಾಂಧೀಜಿಯ ಗ್ರಾಮ ಸ್ವರಾಜ್ಯದ ಬಗ್ಗೆ ಅಪಾರ ನಂಬಿಕೆಯಿದ್ದರೂ ಕೂಡ, ಭಾರತಕ್ಕೆ ಅಂಟಿಕೊಂಡಿದ್ದ ಪ್ಯೂಡಲ್ ವ್ಯವಸ್ಥೆ ಮತ್ತು ತಲೆ ಎತ್ತುತ್ತಿದ್ದ ಬಂಡವಾಳ ವ್ಯವಸ್ಥೆಯ ಕುರಿತು ಆಕ್ರೋಶವಿತ್ತು. ಅಮಾಯಕರ ಮುಕ್ತಿಗೆ ನಕ್ಸಲ್ ಹೋರಾಟ ಹಿಂಸೆಯ ಹಾದಿ ತುಳಿದರೂ ನಾನು ಅದನ್ನು ಬೆಂಬಲಿಸ ಬೇಕಾದ್ದು ನನಗೆ ಅನಿವಾರ್ಯ ಎಂದು ಬಿ.ಬಿ.ಸಿ. ಚಾನಲ್‌ಗೆ 2008 ರ ಸೆಪ್ಟಂಬರ್ ತಿಂಗಳಿನಲ್ಲಿ ನೀಡಿದ್ದ ಸಂದರ್ಶನದಲ್ಲಿ ಹೇಳಿಕೊಡಿದ್ದರು. ನಕ್ಸಲ್ ಚಳವಳಿಯನ್ನು ನಿಗ್ರಹಿಸಲು ಎನ್‌ಕೌಂಟರ್ ಒಂದೇ ಗುರಿ ಎಂದು ಸರ್ಕಾರ ನಂಬಿಕೊಂಡಿರುವಾಗ, ಈ ನೆಲದ ದಲಿತರು, ಆದಿವಾಸಿಗಳ ರಕ್ಷಣೆಗೆ ಹಿಂಸೆಯೊಂದೇ ಹಾದಿ ಎಂದು ನಕ್ಸಲರು ನಂಬಿಕೊಂಡಿದ್ದಾರೆ. ಎರಡೂ ತಪ್ಪು ಹಾದಿಗಳು ನಿಜ, ಆದರೆ, ತಪ್ಪು ಸರಿಪಡಿಸುವ ನೈತಿಕ ಜವಬ್ದಾರಿ ಸರ್ಕಾರದ ಮೇಲಿದೆ ಎಂದು ನಕ್ಸಲ್ ಹೋರಾಟ ಕುರಿತ ತಮ್ಮ ಅನಿಸಿಕೆಯನ್ನು ಹೊರ ಜಗತ್ತಿನ ಜೊತೆ ಹಂಚಿಕೊಂಡಿದ್ದರು.

1990 ರಿಂದ ಈ ದಂಪತಿಗಳ ಮೇಲೆ ನಿರಂತರವಾಗಿ ಕಣ್ಣಿಟ್ಟಿದ್ದ ಮಹಾರಾಷ್ಟ್ರದ ಪೊಲೀಸರು ಇವರನ್ನು ಹಲವಾರು ಪ್ರಕರಣಗಳಲ್ಲಿ ಆರೋಪಿಗಳಾನ್ನಾಗಿಸಲು ಪ್ರಯತ್ನಿಸಿದ್ದರು. 92ರಲ್ಲಿ ನಾಗಪುರ ನಗರದಲ್ಲಿ ಸರ್ಕಾರದ ನಿಷೇಧಾಜ್ಞೆ ನಡುವೆ ಇವರು ಏರ್ಪಡಿಸಿದ್ದ ತೆಲುಗಿನ ಕ್ರಾಂತಿಕಾರಿ ಕವಿ ಗದ್ದಾರ್‌ನ ಹಾಡು ಮತ್ತು ನೃತ್ಯದ ಕಾರ್ಯಕ್ರಮಕ್ಕೆ ಐವತ್ತು ಸಾವಿರಕ್ಕೂ ಹೆಚ್ಚು ದಲಿತ ಮತ್ತು ಆದಿವಾಸಿಗಳು ಸೇರಿದ್ದರು. ಪೊಲೀಸರ ಪ್ರತಿಭಟನೆ ನಡುವೆ ವೇದಿಕೆ ಏರಿದ ಗಾಯಕ ಗದ್ದಾರ್ ಹಾಡಲು ಶುರು ಮಾಡುತ್ತಿದ್ದಂತೆ ಪೊಲೀಸರು ಅವರನ್ನು ಬಂಧಿಸಿದರು. ಪ್ರತಿಭಟಿಸಿದ ಜನರಿಗೆ ಲಾಠಿ ಏಟಿನ ರುಚಿ ತೋರಿಸಿದರು. ಇದೊಂದು ಕಾರ್ಯಕ್ರಮವನ್ನು ನೆಪವಾಗಿರಿಸಿಕೊಂಡು ಮಹರಾಷ್ಟ್ರ ಸರ್ಕಾರ ಕೊಬದ್ ಮತ್ತು ಅನುರಾಧ ಮೇಲೆ ಸಮಾಜದ ಶಾಂತಿಗೆ ಅಡ್ಡಿ ಉಂಟುಮಾಡುತ್ತಿದ್ದಾರೆ ಎಂಬ ಮೊಕದ್ದೊಮ್ಮೆಯೊಂದನ್ನು ದಾಖಲಿಸಿದರು. ನಿರಂತರ ಪೊಲೀಸರ ಕಿರುಕುಳದಿಂದ ಬೇಸತ್ತು ಹೋಗಿದ್ದ ಈ ದಂಪತಿಗಳು ಅಂತಿಮವಾಗಿ ನಾಡನ್ನು ತೊರೆದು ಬಸ್ತಾರ್ ವಲಯದ ಕಾಡನ್ನು ಸೇರಿಕೊಂಡರು.

ನಕ್ಸಲರ ಸಹಾಯ ಮತ್ತು ಬೆಂಬಲದಿಂದ ಅಂದಿನ ಅವಿಭಜಿತ ಮಧ್ಯಪ್ರದೇಶದ (ಛತ್ತೀಸ್ ಗಡ ಸೇರಿದಂತೆ) ಅರಣ್ಯವಾಸಿ ಮಕ್ಕಳ ಶಿಕ್ಷಣ ಮತ್ತು ಆರೋಗ್ಯಕ್ಕೆ ಕೊಬಡ್ ಗಾಂಡಿ ಮತ್ತು ಅನುರಾಧ ತಮ್ಮನ್ನು ಸಮರ್ಪಿಸಿಕೊಂಡರು. ಲಿಪಿಯಿಲ್ಲದ ಗೊಂಡಿ ಭಾಷೆಯಲ್ಲಿ ಮಕ್ಕಳಿಗೆ ಪಾಠ ಹೇಳುವುದು ನಿಜಕ್ಕೂ ಸವಾಲಿನ ಕೆಲಸವಾಗಿತ್ತು. ಈ ಕಾರಣಕ್ಕಾಗಿ ಇಬ್ಬರೂ ಅರಣ್ಯದ ನಡುವೆ ನಕ್ಸಲರ ಗುಡಾರದಲ್ಲಿ ವಾಸವಾಗಿದ್ದುಕೊಂಡು ಚಿತ್ರಗಳ ಮೂಲಕ ಶಿಕ್ಷಣ ನೀಡಬಹುದಾದ ಪಠ್ಯ ಮತ್ತು ಚಿತ್ರಗಳನ್ನು ತಯಾರಿಸಿದರು. ಬಸ್ತರ್ ಅರಣ್ಯ ಪ್ರದೇಶದಲ್ಲಿ ನೂರಾರು ಟೆಂಟ್ ಶಾಲೆಗಳನ್ನು ಆರಂಭಿಸಿ, ಮಕ್ಕಳಿಗೆ ಅಕ್ಷರ ಕಲಿಸಿಕೊಡುವುದರ ಜೊತೆಗೆ ಗೊಂಡ ಮತ್ತು ಮುರಿಯ ಜನಾಂಗದ ಹೆಣ್ಣು ಮಕ್ಕಳಿಗೆ ಆರೋಗ್ಯ ಮತ್ತು ಶುಚಿತ್ವದ ಪಾಠ ಹೇಳಿಕೊಟ್ಟರು. ಪ್ರಾಥಮಿಕ ಆರೋಗ್ಯ ಚಿಕಿತ್ಸೆಯ ಬಗ್ಗೆ ವಿವರ ನೀಡಿ ಔಷಧಗಳನ್ನು ಉಚಿತವಾಗಿ ಹಂಚಿದರು. ಇವತ್ತಿಗೂ ಮಧ್ಯಭಾರತದ ಅರಣ್ಯ ವಾಸಿಗಳ ಸರಾಸರಿ ವಯಸ್ಸು ಕೇವಲ 55 ವರ್ಷ ಮಾತ್ರ. ತಾವು ಯಾವ ಕಾಯಿಲೆಗೆ ಬಲಿಯಾಗಿದ್ದೇವೆ ಎಂದು ತಿಳಿಯಲಾರದೇ ಸಾವನ್ನಪ್ಪುತ್ತಿದ್ದಾರೆ. ಕೊಬಡ್ ಗಾಂಡಿ ಶಿಕ್ಷಣಕ್ಕೆ ಒತ್ತು ಕೊಟ್ಟು ದುಡಿಯುತ್ತಿದ್ದ ಸಂದರ್ಭದಲ್ಲಿ ಅನುರಾಧ ಮಹಿಳೆಯರ ಅರೋಗ್ಯ ಕುರಿತಂತೆ ಹೆಚ್ಚಿನ ಕಾಳಜಿ ವಹಿಸಿದರು. ಇವರ ಎಲ್ಲಾ ಚಟುವಟಿಕೆಗಳಿಗೆ ನಕ್ಸಲರು ಆರ್ಥಿಕ ನೆರವನ್ನು ಒದಗಿಸುತ್ತಿದ್ದರು.

1998ರಲ್ಲಿ ನಕ್ಸಲರ ನೆರವಿನಿಂದ ಆದಿವಾಸಿ ಕುಟುಂಬಗಳು ವಾಸಿಸುತ್ತಿದ್ದ ಹಾಡಿಯ ಬಳಿ ಕೆರೆಗಳನ್ನು ನಿರ್ಮಿಸಲು ನಿರ್ಧರಿಸಿದ ಅನುರಾಧ ಶ್ರಮಧಾನದ ಮೂಲಕ 158 ಕೆರೆಗಳನ್ನು ನಿರ್ಮಿಸಿದರು. ಪ್ರತಿ ದಿನದ ಕೂಲಿಯಾಗಿ ಒಬ್ಬೊಬ್ಬರಿಗೆ ಒಂದು ಕೆ.ಜಿ. ಅಕ್ಕಿಯನ್ನು ವಿತರಿಸಲಾಗುತ್ತಿತ್ತು. ಇದರಿಂದ ಮುಜುಗರಕ್ಕೆ ಒಳಗಾದ ಮಧ್ಯಪ್ರದೇಶ ಸರ್ಕಾರ ಕೆರೆಗಳ ನಿರ್ಮಾಣ ಮತ್ತು ಅಭಿವೃದ್ಧಿಗೆ 20 ಲಕ್ಷ ರೂಪಾಯಿ ನೀಡಲು ಮುಂದೆ ಬಂದಾಗ ನಿರ್ದಾಕ್ಷಿಣ್ಯವಾಗಿ ಅದನ್ನು ತಿರಸ್ಕರಿಸಿದರು.

ನಗರದ ವಾತಾವರಣದಲ್ಲಿ ಬೆಳೆದಿದ್ದ ಈ ಎರಡು ಜೀವಗಳು ತಾವು ನಂಬಿದ್ದ ಸಿದ್ಧಾಂತಗಳಿಗೆ ಬದ್ಧರಾಗಿ ಬದುಕಲು ಅರಣ್ಯ ಜೀವನವನ್ನು ಆರಿಸಿಕೊಂಡ ಫಲವಾಗಿ 15 ವರ್ಷಗಳ ಆರಣ್ಯದ ಬದುಕಿನಲ್ಲಿ ಗುರುತು ಸಿಗಲಾರದಷ್ಟು ಬದಲಾಗಿ ಹೋಗಿದ್ದರು. ಅಕಾಲ ವೃದ್ಧಾಪ್ಯ ಅವರನ್ನು ಆವರಿಸಿಕೊಂಡಿತ್ತು. ಊಟ ನಿದ್ರೆ, ಆರೋಗ್ಯದ ಬಗೆಗಿನ ಕಾಳಜಿ ಎಲ್ಲವೂ ಏರು ಪೇರಾಗಿತ್ತು. ಸದಾ ಪೊಲೀಸರ ಗುಂಡಿನ ದಾಳಿಯ ತೂಗುಕತ್ತಿಯ ಕೆಳೆಗೆ ಬದುಕು ದೂಡಬೇಕಾಗಿ ಬಂದ ಕಾರಣ ಕೆಲವು ಸಂದರ್ಭದಲ್ಲಿ ಅರಣ್ಯದಲ್ಲಿ ದಿನವೊಂದಕ್ಕೆ 20 ಕಿಲೋಮೀಟರ್ ನಡೆಯಬೇಕಾದ್ದು ಅನಿವಾರ್ಯವಾಯಿತು. 2007ರ ವೇಳೆಗೆ ಮಲೇರಿಯಾ ಕಾಯಿಲೆಗೆ ತುತ್ತಾದ ಅನುರಾಧ ನಂತರದ ದಿನಗಳಲ್ಲಿ ಅಂಗಾಂಗ ವೈಫಲ್ಯದ ಕಾಯಿಲೆ ಬಲಿಯಾಗ ಬೇಕಾಯಿತು. ಎರಡು ಬಾರಿ ಗುಪ್ತವಾಗಿ ಮುಂಬೈ ನಗರಕ್ಕೆ ಬಂದು ತನ್ನ ಅಣ್ಣ ಪ್ರಸಿದ್ಧ ರಂಗಕರ್ಮಿ ಸುನಿಲ್ ಶಾನ್‌ಬೋಗ್ ನೆರವಿನಿಂದ ಚಿಕಿತ್ಸೆ ಪಡೆದರು ಕೂಡ ಆ ವೇಳೆಗಾಗಲೇ ಕಾಲ ಮೀರಿ ಹೋಗಿತ್ತು. 2008 ಏಪ್ರಿಲ್ 8 ರಂದು ಬಸ್ತಾರ್  ಅರಣ್ಯ ನಿವಾಸಿಗಳ ಎದುರಲ್ಲಿ ಕೊನೆಯವರೆಗೂ ಅವರ ಸೇವೆ ಮಾಡಿದ ಸಂತೃಪ್ತಿಯಲ್ಲಿ ಅನುರಾಧ ಪ್ರಾಣಬಿಟ್ಟರು. ತನ್ನ ಬಾಳಸಂಗಾತಿಯ ಸಾವು ಕೊಬದ್ ಗಾಂಡಿಯ ಬದುಕಿನಲ್ಲಿ ದುಖಃಕ್ಕಿಂತ ಇನ್ನಷ್ಟು ಬದ್ಧತೆಯನ್ನು ಹೆಚ್ಚಿಸಿತು. ಆಕೆಯ ಛಲ, ಬಾಯಿಲ್ಲದವರ ಪರವಾಗಿ ಅನುರಾಧ ಎತ್ತಿದ ಪ್ರತಿಭಟನೆಯ ಧ್ವನಿ ಇವೆಲ್ಲವೂ ಕೊಬದ್ ಗಾಂಡಿಯ ಮನಸ್ಸನ್ನು ಇನ್ನಷ್ಟು ಗಟ್ಟಿಗೊಳಿಸಿದ್ದವು. ಆದರೆ, ಆ ವೇಳೇಗಾಗಲೇ ಅವರ ಮನಸ್ಸು ದೇಹ ಎರಡೂ ದಣಿದಿದ್ದವು. ಮರು ವರ್ಷ ಅಂದರೆ, 2009ರಲ್ಲಿ ಅವರ ಅನಾರೋಗ್ಯವೂ ಹದಗೆಟ್ಟಿತು. ಚಿಕಿತ್ಸೆಗಾಗಿ ದೆಹಲಿಗೆ ಬಂದು ಪೊಲೀಸರ ಬಂಧಿಯಾಗಿ ತಿಹಾರ್ ಸೆರೆಮನೆಯಲ್ಲಿ ಅತ್ಯಂತ ಸುರಕ್ಷಿವಾದ ಜಾಗದಲ್ಲಿ ವಿಚಾರಣಾ ಕೈದಿಯಾಗಿ ಈಗ ದಿನ ನೂಕುತ್ತಿದ್ದಾರೆ. ಅವರ ಚಿಂತನೆಯಾಗಲಿ, ಪ್ರಖರ ವೈಚಾರಿಕತೆಯಾಗಲಿ, ಭವಿಷ್ಯ ಭಾರತದ ಬಗೆಗಿನ ಕನಸಾಗಲಿ, ಇವುಗಳು ಸೆರೆಮನೆಯ ವಾಸದಿಂದ ಒಂದಿಷ್ಟು ಮುಕ್ಕಾಗಿಲ್ಲ. ಮತ್ತಷ್ಟು ಬಲಿಷ್ಟವಾಗಿವೆ. ಕಳೆದ ವರ್ಷ ಏಪ್ರಿಲ್ ತಿಂಗಳಿನಲ್ಲಿ ದೆಹಲಿ ಮೂಲದ ಪತ್ರಕರ್ತ ರಾಹುಲ್ ಪಂಡಿತ್ ಎಂಬುವರ ಕೃತಿಗೆ ಇವರು ಬರೆದಿರುವ ಒಂದು ಪತ್ರ ಅಭಿವೃದ್ಧಿಯ ಅಂಧಯುಗದಲ್ಲಿ ಹಾದಿ ತಪ್ಪಿರುವ ಭಾರತಕ್ಕೆ ಬೆಳಕಾಗಬಲ್ಲದು.

ಇತ್ತ ನಾಗಪುರ ನಗರದಲ್ಲಿ ಇವರ ವಾಸವಾಗಿದ್ದ ಅಂಚೆ ಕಚೇರಿಯ ದಲಿತ ನೌಕರನೊಬ್ಬನ ಬಾಡಿಗೆ ಮನೆ ಈಗಲೂ ಖಾಲಿ ಉಳಿದಿದೆ. ದೀದಿ (ಅನುರಾಧ) ಸಾವಿನ ಸುದ್ಧಿ ತಿಳಿದ ಮನೆಯ ಮಾಲಿಕ ಗಾಂಧಿ ಸಾಹೇಬ್ ಬಂದರೆ (ಕೊಬದ್ ಗಾಂಡಿ), ಅವರಿಗಾಗಿ ಮನೆ ಇರಲಿ ಎಂದು ಕಾಯ್ದಿರಿಸಿದ್ದಾನೆ. ಆ ಮನೆಯ ಬಾಗಿಲಿಗೆ ಅಂಟಿಸಿದ್ದ ಭಗತ್ ಸಿಂಗ್ ಚಿತ್ರ ಕೂಡ ಹಾಗೇ ಉಳಿದಿದೆ. ಇವತ್ತು ಬಂಡಾರ, ಗಡ್ ಚಿರೋಲಿ, ಚಂದ್ರಾಪುರ್ ಗೊಂಡಿಯಾ, ಬಾಳ್ಘಾಟ್ ಬಸ್ತಾರ್ ಜಿಲ್ಲೆಗಳ ಅರಣ್ಯ ಪ್ರದೇಶದಲ್ಲಿ ಅಲ್ಲಿನ ಬುಡಕಟ್ಟು ಜನಾಂಗ ಅನುರಾಧ ದೀದಿಯ ನೆನಪಲ್ಲಿ ಕಾಂತಿಕಾರಿ ಹಾಡೊಂದನ್ನು ಕಟ್ಟಿ ಗೊಂಡಿ ಭಾಷೆಯಲ್ಲಿ ಹಾಡುತ್ತಾರೆ. ಆ ಹಾಡಿನ ಅರ್ಥ ಹೀಗಿದೆ:

ನಾನು ಹಾಡುವ ಹಾಡಿಗೆ ಸಾವಿರ ವರ್ಷಗಳ ಇತಿಹಾಸವಿದೆ.
ದುಃಖ ದುಮ್ಮಾನದ ನಡುವೆ ಅದಕೆ ಅಷ್ಟೇ ಸಿಟ್ಟಿದೆ.
ನಾನು ಹಾಡುವ ಕಹಿ ರುಚಿಯ ಹಾಡಿನ ಅರ್ಥ ಹಳೆಯದು,
ಆದರೆ ಹಾಡುವ ರಾಗ ಮಾತ್ರ ಹೊಸದು. ಅದು ನನ್ನದು.
ಇದರಿಂದ ನಿಮಗೆ ಭಯವಾದರೆ ಕಾರಣ ನಾನಲ್ಲ,
ಈ ಕ್ರೂರ ವ್ಯವಸ್ಥೆಯದು, ಅದರ ಭಾಗವಾದ ನಿಮ್ಮದು.

ನಕ್ಸಲ್ ಹೋರಾಟದ ಕಥನದಲ್ಲಿ ಇಂತಹ ನೂರಾರು ಮನಕರಗುವ ಘಟನೆಗಳಿವೆ. ನಮ್ಮ ಕನ್ನಡಿಗ ಸಾಕೇತ್‌ ರಾಜನ್ ಮತ್ತು ಅವರ ಪತ್ನಿ ರಾಜೇಶ್ವರಿ ಎಂಬ ಹೆಣ್ಣು ಮಗಳ ಹೋರಾಟದ ಬದುಕು ಕೂಡ ಕೊಬದ್ ಗಾಂಡಿ ದಂಪತಿಗಳ ಬದುಕಿಗಿಂತ ಭಿನ್ನವಾಗಿಲ್ಲ. ಆದರೆ ಪ್ರಶ್ನೆಯಿರುವುದೇ ಇಲ್ಲಿ. ಯಾಕೆ ವಿದ್ಯಾವಂತರು, ಬುದ್ಧಿಜೀವಿಗಳು ನಕ್ಸಲರ ಹೋರಾಟಕ್ಕೆ ಕೈ ಜೋಡಿಸುತ್ತಿದ್ದಾರೆ ಎಂಬ ಪ್ರಶ್ನೆಯಿಟ್ಟುಕೊಂಟು ಭಾರತದ ಆದಿವಾಸಿಗಳ ನೋವಿನ ಹಾಗೂ ಧಾರುಣವಾದ ಬದುಕನ್ನು ಗಮನಿಸಿದರೆ, ಯಾರಿಗೂ ಇವರ ನೋವಿನ ಕಥೆ ಬರೆಯಲು ಲೇಖನಿ ಕೈಗೆತ್ತಿಕೊಳ್ಳಬೇಕು ಎನಿಸುವುದಿಲ್ಲ. ಮುಂದಿನ ಅಧ್ಯಾಯದಲ್ಲಿ ತೆರೆದಿಡುವ ಆದಿವಾಸಿಗಳ ನೋವಿನ ಕಥನ ಅವರು ಅಂತಹ ಕೆಟ್ಟ ವ್ಯವಸ್ಥೆಯ ವಿರುದ್ಧ ಬಂದೂಕು ಕೈಗೆತ್ತಿಕೊಳ್ಳಲು ಇದ್ದಿರಬಹುದಾದ ಕಾರಣಗಳನ್ನು ಬಿಚ್ಚಿಡುತ್ತದೆ.

(ಮುಂದುವರಿಯುವುದು)

5 thoughts on “ಪ್ರಜಾ ಸಮರ-1 (ನಕ್ಸಲ್ ಕಥನ)

  1. Anonymous

    ಒಳ್ಳೆಯ ಲೇಖನ…….

    ಆನಂದ ಪಿ. ಬೈದನಮನೆ, ಪತ್ರಕರ್ತ.

    Reply

Leave a Reply to vasanth Cancel reply

Your email address will not be published. Required fields are marked *