ಪೊಲೀಸ್ ವ್ಯವಸ್ಥೆ ಸಂಪೂರ್ಣ ಸ್ವಾಯತ್ತ ಘಟಕ ಆಗಬೇಕು

– ಆನಂದ ಪ್ರಸಾದ್

ಪೊಲೀಸರು ಸ್ವತಂತ್ರವಾಗಿ ಆಡಳಿತ ಪಕ್ಷದ ರಾಜಕಾರಣಿಗಳ ಒತ್ತಡಗಳಿಲ್ಲದೆ ಕೆಲಸ ನಿರ್ವಹಿಸುವ ವಾತಾವರಣ ಇದ್ದಿದ್ದರೆ ಗುಜರಾತಿನ ಗೋಧ್ರೋತ್ತರ ಹಿಂಸಾಚಾರ ಅಥವಾ 1984ರ ದೆಹಲಿಯ ಸಿಖ್ಖರ ಹತ್ಯಾಕಾಂಡವನ್ನು ಹೆಚ್ಚು ಹಾನಿಯಾಗದಂತೆ ಮತ್ತು ಹಬ್ಬದಂತೆ ತಡೆಯಲು ಸಾಧ್ಯವಿತ್ತು. ಅದೇ ರೀತಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಭವಿಸುವ ಮೂಲಭೂತವಾದಿ ಸಂಘಟನೆಗಳ ಕಾನೂನು ಕೈಗೆತ್ತಿಕೊಳ್ಳುವ ಘಟನೆಗಳನ್ನೂ ಪೊಲೀಸರು ಸ್ವತಂತ್ರವಾಗಿ ಕಾರ್ಯ ನಿರ್ವಹಿಸುವ ವಾತಾವರಣ ಇದ್ದರೆ ತಡೆಯಬಹುದು. ಹಲವು ಅಪರಾಧ ಪ್ರಕರಣಗಳಲ್ಲೂ ಪೊಲೀಸರು ಆಡಳಿತ ಪಕ್ಷದ ಪ್ರಭಾವಿ ರಾಜಕಾರಣಿಗಳ ಒತ್ತಡಕ್ಕೆ ಮಣಿದು ಅಪರಾಧಿಗಳ ರಕ್ಷಣೆ ಮಾಡುವ ಪರಿಸ್ಥಿತಿಯನ್ನೂ ಪೊಲೀಸರು ಸ್ವತಂತ್ರವಾಗಿ ಅಳುವ ಪಕ್ಷದ ರಾಜಕಾರಣಿಗಳ ಒತ್ತಡವಿಲ್ಲದೆ ಕೆಲಸ ಮಾಡುವಂತಾದರೆ ತಡೆಯಲು ಸಾಧ್ಯ. ಕಾನೂನು, ಸುವ್ಯವಸ್ಥೆ ಕಾಪಾಡಲು ಪೊಲೀಸರು ಸಂವಿಧಾನಬದ್ಧವಾಗಿ ಕೆಲಸ ನಿರ್ವಹಿಸಬೇಕಾಗಿರುವುದು ಅತೀ ಅಗತ್ಯ. ಇದಕ್ಕಾಗಿ ಪೋಲೀಸ್ ವ್ಯವಸ್ಥೆಯನ್ನು ಸಂಪೂರ್ಣ ಸ್ವಾಯತ್ತ ಘಟಕವಾಗಿ ರೂಪಿಸಬೇಕಾದ ಅಗತ್ಯ ಇದೆ.

ಪೋಲೀಸರ ಕಾರ್ಯನಿರ್ವಹಣೆಯಲ್ಲಿ ಯಾವುದೇ ಪಕ್ಷದ ಪುಢಾರಿ ಅಥವಾ ಮಂತ್ರಿ ಹಸ್ತಕ್ಷೇಪ ಮಾಡಲು ಅವಕಾಶ ಇರಬಾರದು. ನಮ್ಮ ಇಂದಿನ ಪೊಲೀಸ್ ವ್ಯವಸ್ಥೆಯಲ್ಲಿ ಅಂಥ ವಾತಾವರಣ ಇಲ್ಲ. ಪೊಲೀಸರು ಸಂವಿಧಾನಕ್ಕೆ ಅನುಸಾರವಾಗಿ ಹಾಗೂ ಪೊಲೀಸ್ ಕಾನೂನುಗಳ ಅನುಸಾರವಾಗಿ ಪ್ರತಿಯೊಂದು ಪ್ರಕರಣದಲ್ಲೂ ಕ್ರಮ ಕೈಗೊಳ್ಳುವ ಸ್ವಾತಂತ್ರ್ಯ ಇಲ್ಲದೆ ಹೋದರೆ ಉತ್ತಮ ನಾಗರಿಕ ವ್ಯವಸ್ಥೆಯನ್ನು ಕಟ್ಟುವುದು ಅಸಾಧ್ಯ. ಹೀಗಾಗಿ ಇಡೀ ಪೊಲೀಸ್ ವ್ಯವಸ್ಥೆಯನ್ನು ಸ್ವಾಯತ್ತ ಸಂಸ್ಥೆಯನ್ನಾಗಿ ಪರಿವರ್ತಿಸಬೇಕು. ಪೋಲೀಸರ ವರ್ಗಾವಣೆ, ಭಡ್ತಿ ಇತ್ಯಾದಿಗಳು ಸಂಪೂರ್ಣವಾಗಿ ನಿಯಮಗಳ ಅನುಸಾರ ನಡೆಯುವಂತೆ ನೋಡಿಕೊಳ್ಳಬೇಕು. ಇದನ್ನು ನೋಡಿಕೊಳ್ಳಲು ಪೊಲೀಸ್ ನಿಯಂತ್ರಣ ಆಯೋಗವೊಂದನ್ನು ರಚಿಸಿ ಅದರ ಅಧ್ಯಕ್ಷರನ್ನು ಆಡಳಿತ ಪಕ್ಷ, ಪ್ರಮುಖ ವಿರೋಧ ಪಕ್ಷಗಳ ನಾಯಕರು, ರಾಜ್ಯ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳು ಹೀಗೆ ಎಲ್ಲರಿಗೂ ಒಪ್ಪಿಗೆಯಾಗುವ ನಿಷ್ಪಕ್ಷಪಾತ, ಪ್ರಾಮಾಣಿಕ ಚರಿತ್ರೆ ಹೊಂದಿರುವ ಪೊಲೀಸ್ ವ್ಯವಸ್ಥೆಯೊಳಗೆ ಕಾರ್ಯನಿರ್ವಹಿಸಿದ ವ್ಯಕ್ತಿಯನ್ನು ನೇಮಿಸುವಂತೆ ಆಗಬೇಕು. ಪೋಲೀಸರ ಅತಿರೇಕ ಹಾಗೂ ದೌರ್ಜನ್ಯ ಇತ್ಯಾದಿ ವಿಷಯಗಳ ಬಗ್ಗೆ ನಾಗರಿಕರ ದೂರುಗಳನ್ನು ವಿಚಾರಿಸಿ ಸೂಕ್ತ ಕ್ರಮ ಕೈಗೊಳ್ಳುವ ಅಧಿಕಾರವೂ ಪೊಲೀಸ್ ನಿಯಂತ್ರಣ ಆಯೋಗಕ್ಕೆ ಇರಬೇಕು. ಯಾವುದೇ ಸಂದರ್ಭದಲ್ಲೂ ಆಡಳಿತ ಪಕ್ಷದ ರಾಜಕಾರಣಿಗಳು ಪೋಲೀಸರ ಕಾರ್ಯನಿರ್ವಹಣೆಯಲ್ಲಿ ಮೂಗು ತೂರಿಸಲು ಅವಕಾಶ ನೀಡಬಾರದು. ಯಾವುದೇ ಪೊಲೀಸ್ ಅಧಿಕಾರಿಯನ್ನು ಅವಧಿಪೂರ್ವವಾಗಿ ವರ್ಗಾವಣೆ ಮಾಡುವ ಅವಕಾಶ ಇರಬಾರದು. ಪ್ರಾಮಾಣಿಕ ಹಾಗೂ ದಕ್ಷ ಅಧಿಕಾರಿಗಳಿಗೆ ಯಾವುದೇ ಕಿರುಕುಳ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ಪೊಲೀಸ್ ನಿಯಂತ್ರಣ ಆಯೋಗಕ್ಕೆ ಇರಬೇಕು. ಅದೇ ರೀತಿ ಯಾವುದೇ ಸಂದರ್ಭದಲ್ಲೂ ಧಾರ್ಮಿಕ ಮೂಲಭೂತವಾದಿಗಳು ಪೋಲೀಸರ ಕಾರ್ಯನಿರ್ವಹಣೆಯಲ್ಲಿ ಪ್ರಭಾವ ಬೀರದಂತೆ ಪೊಲೀಸ್ ನಿಯಂತ್ರಣ ಆಯೋಗ ತಡೆಯುವ ಅಧಿಕಾರ ಇರಬೇಕು. ಪೊಲೀಸ್ ವ್ಯವಸ್ಥೆಯಲ್ಲಿ ಮೂಲಭೂತವಾದಿಗಳು ನುಸುಳದಂತೆ ಸೂಕ್ತ ಪ್ರತಿಬಂಧಕ ಕ್ರಮಗಳನ್ನು ಕೂಡ ಕೈಗೊಳ್ಳಬೇಕಾದ ಅಗತ್ಯ ಇದೆ. ದೇಶದ ಜಾತ್ಯತೀತ ಸ್ವರೂಪವನ್ನು ಕಾಯ್ದುಕೊಂಡು ಹೋಗಲು ಇದು ಅಗತ್ಯ. ಜಾತ್ಯತೀತ ಮನೋಭಾವವನ್ನು ಬೆಳೆಸುವ ತರಬೇತಿಯನ್ನು ಪೋಲೀಸರ ನೇಮಕಾತಿಯ ವೇಳೆಯೇ ನೀಡಬೇಕು.

ದಲಿತರು, ಹಿಂದುಳಿದವರ ಮೇಲೆ ನಡೆಯುವ ದೌರ್ಜನ್ಯಗಳಲ್ಲಿ ದೌರ್ಜನ್ಯ ನಡೆಸಿದವರ ಮೇಲೆ ಕಠಿಣ ಕ್ರಮ ಕೈಗೊಳ್ಳುವ ಸ್ವಾತಂತ್ರ್ಯ ಪೊಲೀಸರಿಗೆ ಇರಬೇಕು. ಇಂಥ ಸ್ವಾತಂತ್ರ್ಯ ಇರಬೇಕಾದರೆ ಅದು ಪ್ರಬಲ ಮೇಲ್ವರ್ಗದ ಜಾತಿಗಳ ರಾಜಕಾರಣಿಗಳ ಹಿಡಿತಕ್ಕೆ ಸಿಗದಂತೆ ರೂಪಿಸಲ್ಪಟ್ಟಿರಬೇಕು. ದಲಿತರ ಮೇಲಿನ ಹೆಚ್ಚಿನ ಪ್ರಕರಣಗಳಲ್ಲಿ ಪೊಲೀಸರು ರಾಜಕೀಯ ಒತ್ತಡಗಳಿಗೆ ಒಳಗಾಗಿ ಕೇಸು ದಾಖಲಿಸಿಕೊಳ್ಳುವುದಿಲ್ಲ. ರಾಜಕಾರಣಿಗಳ ಹಿಡಿತದಿಂದ ಪೋಲೀಸ್ ವ್ಯವಸ್ಥೆಯನ್ನು ಮುಕ್ತಗೊಳಿಸಿದರೆ ಪೊಲೀಸರು ದಿಟ್ಟತನದಿಂದ ಕ್ರಮ ಕೈಗೊಳ್ಳಲು ಸಾಧ್ಯ. ಸ್ವಾತಂತ್ರ್ಯ ದೊರಕಿದಾಗಲೇ ಪೋಲೀಸ್ ವ್ಯವಸ್ಥೆಯನ್ನು ಸ್ವಾಯತ್ತ ಸಂಸ್ಥೆಯನ್ನಾಗಿ ರೂಪಿಸಿದ್ದರೆ ಮತ್ತು ಸಂವಿಧಾನದಲ್ಲೇ ಈ ಕುರಿತು ದಾಖಲಿಸಿದ್ದರೆ ಆಗ ಇದಕ್ಕೆ ಒಪ್ಪಿಗೆ ಸಿಗುತ್ತಿತ್ತು. ಅಂದು ಸಂವಿಧಾನ ನಿರ್ಮಾತೃಗಳಿಗೆ ಪೋಲೀಸ್ ವ್ಯವಸ್ಥೆ ಸ್ವತಂತ್ರವಾಗಿ ಕಾರ್ಯನಿರ್ವಹಿಸಬೇಕಾದ ಅಗತ್ಯ ಗೋಚರಿಸಿರಲಿಲ್ಲವೆನಿಸುತ್ತದೆ. ಸ್ವತಂತ್ರ ಭಾರತದ ಆರು ದಶಕಗಳ ಪೋಲೀಸ್ ಕಾರ್ಯ ವೈಖರಿಯನ್ನು ನೋಡಿದಾಗ ಇಂದು ಇದರ ಅವಶ್ಯಕತೆ ಎದ್ದು ಕಾಣುತ್ತದೆ. ದುರದೃಷ್ಟವಶಾತ್ ಸಮಾಜದಲ್ಲಿ ಈ ಬಗ್ಗೆ ಸಮರ್ಪಕ ಜಾಗೃತಿ ಕೂಡ ಕಂಡುಬರುತ್ತಿಲ್ಲ. ಪೊಲೀಸ್ ವ್ಯವಸ್ಥೆಯನ್ನು ಸಂಪೂರ್ಣ ಸ್ವಾಯತ್ತ ಘಟಕವಾಗಿ ಮಾಡುವ ಬಗ್ಗೆ ಸಮಾಜದ ಗಣ್ಯರು, ಹೋರಾಟಗಾರರು, ವಿವಿಧ ಸಂಘಟನೆಗಳು ಧ್ವನಿ ಎತ್ತಬೇಕಾಗಿದೆ. ಈ ಬಗ್ಗೆ ಪ್ರಮುಖ ಮಾಧ್ಯಮಗಳೂ ಧ್ವನಿ ಎತ್ತಬೇಕಾಗಿದೆ.

Leave a Reply

Your email address will not be published. Required fields are marked *