ಅಸ್ಸಾಂ ಸಂಘರ್ಷ, ವದಂತಿ: ಕನ್ನಡ ಮೀಡಿಯಾ ನೋಡಿದ್ದು ಹೇಗೆ?

ದಿನೇಶ್ ಕುಮಾರ್ ಎಸ್.ಸಿ.

ಮೀಡಿಯಾ ಅನ್ನುವುದು ತೀವ್ರಗತಿಯಲ್ಲಿ ಬದಲಾಗುತ್ತಿರುವ, ನಮ್ಮ ಬದುಕನ್ನು ನಿಯಂತ್ರಿಸುವಷ್ಟು ಪ್ರಭಾವಶಾಲಿಯಾಗಿ ಬೆಳೆದಿರುವ ಕಾಲಘಟ್ಟದಲ್ಲಿ ನಾವಿದ್ದೇವೆ. ಮೀಡಿಯಾ ಸಶಕ್ತವಾಗಿ ಬೆಳೆಯುತ್ತಿರುವ ಹೊತ್ತಿನಲ್ಲೇ ಅದು ತನ್ನ ಮೇಲೆ ತಾನು ಇನ್ನಷ್ಟು ಜವಾಬ್ದಾರಿಗಳನ್ನು ಹೊತ್ತುಕೊಳ್ಳಬೇಕಾದ ಅಗತ್ಯವಿತ್ತು. ಆದರೆ ಅದಕ್ಕೆ ವಿರುದ್ಧವಾಗಿ ಸಾಮಾಜಿಕ ಪ್ರಜ್ಞೆಯನ್ನು ಅದು ಕಳೆದುಕೊಳ್ಳುತ್ತಲೇ ಸಾಗಿದೆ. ಇತ್ತೀಚಿನ ವಿದ್ಯಮಾನಗಳಲ್ಲಿ ಅದು ಕಾಲಕಾಲಕ್ಕೆ ಸಾಬೀತಾಗುತ್ತಲೇ ಇದೆ. ಮೀಡಿಯಾ ಭ್ರಷ್ಟಾಚಾರದ ವಿರುದ್ಧ ಇದೆ ಎಂಬ ಹಾಗೆ ಕಾಣಿಸುತ್ತಿರುತ್ತದೆ, ಆದರೆ ಸ್ವತಃ ತಾನೇ ಭ್ರಷ್ಟಗೊಂಡು ಹೋಗಿದೆ. ಭಯೋತ್ಪಾದನೆಯ ವಿರುದ್ಧ ಸಮರ ಸಾರಿರುವಂತೆ ಬರಿಗಣ್ಣಿಗೆ ಕಾಣಿಸುತ್ತಿರುತ್ತದೆ, ಆದರೆ ತಾನೇ ಜನರನ್ನು ಭೀತಗೊಳಿಸುವ ಕೆಲಸ ಮಾಡುತ್ತಿರುತ್ತದೆ. ಜಾತಿವಾದದ ವಿರುದ್ಧ ಗುಟುರು ಹಾಕಿದಂತೆ ಕಾಣುತ್ತಿರುತ್ತದೆ, ಆದರೆ ತೀರಾ ಅಸಹ್ಯವಾದ ಜಾತೀಯತೆಯನ್ನು ಮೀಡಿಯಾ ಇವತ್ತು ಮೈತುಂಬ ತುಂಬಿಕೊಂಡಿದೆ. ಮೀಡಿಯಾ ಇವತ್ತು ತೀವ್ರಗೊಳ್ಳುತ್ತಿರುವ ಕೋಮುವಾದದ ವಿರುದ್ಧ ಇರಬೇಕಿತ್ತು, ಆದರೆ ಕೋಮುವಾದಿ ನಿಲುವುಗಳಿಗೆ ಅಂಟಿಕೊಂಡು, ರಾಜಾರೋಷವಾಗಿ ಕೋಮುವಿಷವನ್ನು ಹರಡುವ ಕೆಲಸ ಮಾಡುತ್ತಿದೆ.

ಅಸ್ಸಾಂ ನಾಗರಿಕರು ಬೆಂಗಳೂರು ತೊರೆದು ಮತ್ತೆ ತಮ್ಮ ಊರುಗಳಿಗೆ ಹಿಂದಿರುಗಿದ ವಿದ್ಯಮಾನದ ಕುರಿತು ಚರ್ಚಿಸುವ ಮುನ್ನ, ಇತ್ತೀಚಿಗೆ ನಡೆದ ಇನ್ನೊಂದು ವಿದ್ಯಮಾನದ ಕುರಿತು ಪ್ರತಿಕ್ರಿಯೆ ನೀಡಿ ಮುಂದುವರೆಯುತ್ತೇನೆ. ಇತ್ತೀಚಿಗೆ ಬೆಂಗಳೂರಿನ ಸಿಸಿಬಿ ಪೊಲೀಸರು ಒಂದಷ್ಟು ಶಂಕಿತ ಆರೋಪಿಗಳನ್ನು ಬಂಧಿಸಿದರು. ಈ ಆರೋಪಿಗಳು ಕೆಲ ಗಣ್ಯ ವ್ಯಕ್ತಿಗಳನ್ನು ಕೊಲ್ಲುವ ಉದ್ದೇಶ ಹೊಂದಿದ್ದರು ಎಂಬ ಕಾರಣಕ್ಕೆ ಬಂಧಿಸಲಾಗಿದೆ ಎಂಬುದು ಪೊಲೀಸರ ಹೇಳಿಕೆಯಾಗಿತ್ತು. ಇದಾದ ತರುವಾಯ ನಮ್ಮ ಪತ್ರಿಕೆಗಳಲ್ಲಿ ಬಂದ ವರದಿಗಳನ್ನು ಗಮನಿಸಿ. ಪೊಲೀಸರು ಪತ್ರಕರ್ತರಿಗೆ ಬಿಡುಗಡೆ ಮಾಡುವ ಹೇಳಿಕೆಗಳು ಸರ್ಕಾರಿ ಗುಮಾಸ್ತರು ಬರೆಯುವ ಟಿಪ್ಪಣಿ ಹಾಗಿರುತ್ತದೆ. ಅಲ್ಲಿ ಊಹಾಪೋಹಗಳಿಗೆ ಅವಕಾಶ ಇರುವುದಿಲ್ಲ. ಪ್ರತಿಯೊಂದು ಪದಕ್ಕೂ ಅವರು ಜವಾಬ್ದಾರರಾಗಿರುವುದರಿಂದ ಈ ಹೇಳಿಕೆಗಳಲ್ಲಿ ಉತ್ಪ್ರೇಕ್ಷೆ ಇರುವ ಸಾಧ್ಯತೆ ಕಡಿಮೆ. ಕಾಗೆ ಗೂಬೆ ಕಥೆಗಳನ್ನು ಹೆಣೆದಿದ್ದರೂ ಪೊಲೀಸರು ಒಂದು ಹಂತದವರೆಗೆ ತೀರಾ ಅತಿರಂಜಿತವಾದ ಹೇಳಿಕೆ ನೀಡುವುದಿಲ್ಲ. ಇಂಥ ಪೊಲೀಸು ಹೇಳಿಕೆಗಳು ಪತ್ರಿಕೆಗಳಿಗೆ, ಚಾನಲ್‌ಗಳಿಗೆ ಸೇಲ್ ಆಗುವ ವಸ್ತುಗಳಲ್ಲ. ಅವರಿಗೆ ಬೇರೆಯದೇ ಸ್ವರೂಪದ ಸುದ್ದಿ ಬೇಕು. ಆ ಸುದ್ದಿಯಲ್ಲಿ ರೋಚಕತೆ ಇರಬೇಕು, ಪ್ರಚೋದಿಸುವ ಗುಣವಿರಬೇಕು. ಹಾಗಾಗಿ ಸುದ್ದಿಗಳನ್ನು ಬೇಯಿಸಿ ತಯಾರಿಸುವ ಕೆಲಸ ಶುರುವಾಗುತ್ತದೆ.

ಭಯೋತ್ಪಾದನೆಗೆ ಸಂಬಂಧಿಸಿದಂತೆ ಸುದ್ದಿ ಹೊಸೆಯುವುದು ಈಗೀಗ ತುಂಬಾ ಸುಲಭ. ಒಂದು ಉದಾಹರಣೆ ಹೇಳುತ್ತೇನೆ. ಒಬ್ಬ ಶಂಕಿತ ಭಯೋತ್ಪಾದಕನನ್ನು ಬಂಧಿಸಲಾಗಿದೆ ಎಂದು ಭಾವಿಸಿಕೊಳ್ಳಿ. ನಾನು ಓರ್ವ ಪತ್ರಕರ್ತನಾಗಿ ನನ್ನ ಕಚೇರಿಯಲ್ಲೇ ಅದಕ್ಕೆ ಸಂಬಂಧಿಸಿದಂತೆ ನೂರು ಕಥೆ ಹೆಣೆಯಬಲ್ಲೆ. ಬಂಧಿತನಿಗೆ ಐಎಸ್ಐ ಸಂಪರ್ಕವಿದೆ. ಅವನು ಹುಜಿ, ಲಷ್ಕರ್ ಇ ತೊಯ್ಬಾ ಸಂಘಟನೆಗೆ ಸೇರಿದವನು. ಅಲ್ ಖೈದಾ ಸೇರಲು ಹವಣಿಸುತ್ತಿದ್ದ. ಅವನಿಗೆ ಮುಸ್ಲಿಂ ರಾಷ್ಟ್ರಗಳಿಂದ ಹಣ ಬರುತ್ತಿತ್ತು. ಅವನ ಮನೆಯಲ್ಲಿ ಜೆಹಾದಿಗೆ ಸಂಬಂಧಿಸಿದ ಪುಸ್ತಕಗಳಿದ್ದವು. ಈ ಒಂದೊಂದಕ್ಕೂ ಒಂದಷ್ಟು ರೆಕ್ಕೆ ಪುಕ್ಕ ಜೋಡಿಸಿದರೆ ಒಂದೊಂದು ಸ್ಟೋರಿಯಾಗಿ ಬಿಡುತ್ತದೆ. ಬಂಧನಕ್ಕೆ ಒಳಗಾದವರಲ್ಲಿ ಏನೂ ತಪ್ಪು ಮಾಡದ, ಭಯೋತ್ಪಾದನೆ ಎಂದರೆ ಏನೇನೂ ಗೊತ್ತಿಲ್ಲದ ಅಮಾಯಕರೂ ಇದ್ದಿರಬಹುದು ಎಂಬುದು ಪತ್ರಕರ್ತನಿಗೆ ಮುಖ್ಯವಾಗುವುದೇ ಇಲ್ಲ. ತಾನು ಬರೆಯುವ ಸುದ್ದಿ ಸೇಲ್ ಆಗಬೇಕು ಎನ್ನುವುದಷ್ಟೇ ಮುಖ್ಯ. ಆತ ಕೆಲಸ ಮಾಡುವ ಪತ್ರಿಕೆಯ ನೇತೃತ್ವ ವಹಿಸಿಕೊಂಡವನು ಸೇರಿದಂತೆ ಮಾಲೀಕನವರೆಗೆ ಎಲ್ಲರಿಗೂ ಇದಷ್ಟೇ ಮುಖ್ಯ. ಅದರಲ್ಲೂ ಮುಸ್ಲಿಂ ಸಮುದಾಯದ ವಿರುದ್ಧ ದ್ವೇಷ ಇಟ್ಟುಕೊಂಡವನೇ ಪತ್ರಕರ್ತನಾಗಿದ್ದರೆ ಮುಗಿದೇಹೋಯಿತು. ಬಂಧಿತರನ್ನು ವಿಚಾರಣೆಯೂ ಇಲ್ಲದೆ ನೇಣಿಗೆ ಹಾಕಬೇಕು ಎಂದು ಸೂಚಿಸುವಂತಿರುತ್ತವೆ ಅವರ ವರದಿಗಳು.

ಬೆಂಗಳೂರು-ಹುಬ್ಬಳ್ಳಿಯಲ್ಲಿ ಬಂಧಿತರಾದವರ ಕುರಿತು ಕನ್ನಡ ಪತ್ರಿಕೆಗಳಲ್ಲಿ ಊಹಾಪೋಹದ ವರದಿಗಳೇ  ಪುಟಗಟ್ಟಲೆ ತುಂಬಿಕೊಂಡವು. ಕಡೆಗೆ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಸುಳ್ಳು ಸುಳ್ಳೇ ಸುದ್ದಿ ಬರೆಯಬೇಡಿ ಎಂದು ಪತ್ರಿಕೆಗಳಿಗೆ ಎಚ್ಚರಿಕೆ ನೀಡಬೇಕಾಯಿತು. ಇಂಥ ಎಚ್ಚರಿಕೆಗಳಿಗೆ, ಸೂಚನೆಗಳಿಗೆ, ಸಲಹೆಗಳಿಗೆ, ಟೀಕೆಗಳಿಗೆ ನಮ್ಮ ಪತ್ರಿಕೆಗಳು ಎಂದೂ ತಲೆಕೆಡಿಸಿಕೊಂಡಿದ್ದಿಲ್ಲ. ಅವುಗಳಿಗೆ ಬಿಸಿಬಿಸಿಯಾದ ಸುದ್ದಿ ಬೇಕು, ಅವು ಸೇಲ್ ಆಗಬೇಕು. ಪೈಪೋಟಿಯಲ್ಲಿರುವ ಪತ್ರಿಕೆಗಳಿಗಿಂತ ಭಿನ್ನವಾದ ಸುದ್ದಿಯನ್ನು ನೀಡಬೇಕು. ಅದಕ್ಕಾಗಿ ಸುಳ್ಳಾದರೂ ಬರೆದು ದಕ್ಕಿಸಿಕೊಳ್ಳುತ್ತೇವೆ ಎಂಬ ಉಡಾಫೆಯ, ಬೇಜವಾಬ್ದಾರಿತನದ, ಸಮಾಜದ್ರೋಹದ ನಿಲುವಿಗೆ ಅಂಟಿಕೊಂಡಿರುತ್ತವೆ.

ಅಸ್ಸಾಂನಲ್ಲಿ ಬೋಡೋಗಳು ಮತ್ತು ಮುಸ್ಲಿಮರ ನಡುವೆ ನಡೆದ ಸಂಘರ್ಷ ಮತ್ತು ಅದರ ಪರಿಣಾಮವಾಗಿ ಈಶಾನ್ಯ ರಾಜ್ಯಗಳ ಸಾವಿರಾರು ನಾಗರಿಕರು ಕರ್ನಾಟಕ ತೊರೆದು ತಮ್ಮ ಮಾತೃಭೂಮಿಗೆ ವಾಪಾಸಾದ ಘಟನೆಗಳಲ್ಲೂ ನಮ್ಮ ಮೀಡಿಯಾ ದೃಷ್ಟಿಕೋನವನ್ನು ಹಲವು ಬಗೆಗಳಲ್ಲಿ ಪ್ರಶ್ನಿಸಬೇಕಾಗುತ್ತದೆ.

ಮೊದಲನೆಯದಾಗಿ ಈಶಾನ್ಯ ರಾಜ್ಯದ ನಾಗರಿಕರು ತಮ್ಮ ರಾಜ್ಯಗಳಿಗೆ ವಾಪಾಸಾಗಿದ್ದನ್ನು ವಲಸೆ ಎಂದು ಬಿಂಬಿಸಿದ್ದನ್ನೇ ನಾನು ಪ್ರಶ್ನಿಸಲು ಬಯಸುತ್ತೇನೆ. ಆ ನಾಗರಿಕರು ವಿದ್ಯಾಭ್ಯಾಸದ ಕಾರಣಕ್ಕೋ, ಉದ್ಯೋಗದ ಕಾರಣಕ್ಕೋ ಕರ್ನಾಟಕಕ್ಕೆ ವಲಸೆ ಬಂದವರು. ಅವರು ವಾಪಾಸು ತಮ್ಮ ಊರಿಗೆ ಹೋಗುತ್ತಿದ್ದರೆ, ಅದು ಯಾವುದೇ ಕಾರಣಕ್ಕೆ ಆಗಿದ್ದರೂ ಅದು ವಲಸೆ ಅಲ್ಲ, ತಮ್ಮ ಊರಿಗೆ ಮರಳುವ ಪ್ರಕ್ರಿಯೆ ಅಷ್ಟೆ. ಗುಳೆ, ವಲಸೆ ಎಂಬ ಶಬ್ದಗಳನ್ನು ಬಳಸುವ ಮೂಲಕ ಕನ್ನಡ ಪತ್ರಿಕೆಗಳು ತಾಂತ್ರಿಕ ದೋಷವನ್ನು ಮಾಡಿದವು. ತನ್ಮೂಲಕ ಬಹಳ ಸುಲಭವಾಗಿ ಬಗೆಹರಿಯಬಹುದಾಗಿದ್ದ ಸಮಸ್ಯೆಗೆ ದೊಡ್ಡ ಸ್ವರೂಪವನ್ನು ತಂದುಕೊಟ್ಟವು. ಭಾರತದ ಸಂವಿಧಾನ ದೇಶದ ಯಾವುದೇ ನಾಗರಿಕ ಯಾವುದೇ ಭಾಗದಲ್ಲಿ ಹೋಗಿ ವಾಸಿಸಿದರೂ ಅದು ವಲಸೆಯಾಗುವುದಿಲ್ಲ ಎಂದು ಕೆಲವರು ಸಮರ್ಥಿಸಬಹುದು. ಆದರೆ ಅದು ಕಾಯ್ದೆಯ ಮಾತು. ಭಾರತದ ಪ್ರಾದೇಶಿಕ ವೈವಿಧ್ಯತೆ, ಒಕ್ಕೂಟದ ವ್ಯವಸ್ಥೆ ಸೂಕ್ಷ್ಮಹೆಣಿಗೆಯಲ್ಲಿ ಜೋಡಿಸಲ್ಪಟ್ಟಿರುವುದರಿಂದ ಹೀಗೆ ಸರಳೀಕರಿಸಿ ನೋಡಲಾಗುವುದಿಲ್ಲ. ವಿಷಯ ಇಷ್ಟು ಸರಳವಾಗಿದ್ದರೆ, ಈಶಾನ್ಯ ರಾಜ್ಯಗಳು, ಬಿಹಾರ, ಒರಿಸ್ಸಾ, ಮಹಾರಾಷ್ಟ್ರ ಹಾಗು ದೇಶದ ಹಲವು ಭಾಗಗಳಲ್ಲಿ ಈಗ ನಡೆಯುತ್ತಿರುವ ಸಂಘರ್ಷಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಮಾತನ್ನು ಹೇಳಬೇಕಾಗುತ್ತದೆ. ಇದು ವಲಸೆಗೆ ಸಂಬಂಧಿಸಿದ ವಿಚಾರಸಂರ್ಕಿಣವಲ್ಲವಾದ್ದರಿಂದ ಈ ವಿಷಯವನ್ನು ನಾನು ಹೆಚ್ಚು ಬೆಳೆಸಲು ಬಯಸುವುದಿಲ್ಲ. ಆ ವಿಷಯದಲ್ಲಿ ನನಗೆ ನನ್ನದೇ ಆದ ನಿಲುವುಗಳಿವೆ, ಅದನ್ನು ಬೇರೆ ಸಂದರ್ಭಗಳಲ್ಲಿ ಹೇಳುತ್ತೇನೆ.

ಮತ್ತೆ ಈಶಾನ್ಯ ನಾಗರಿಕರು ತಮ್ಮ ರಾಜ್ಯಗಳಿಗೆ ವಾಪಾಸು ಹೋದ ವಿಷಯಕ್ಕೆ ಬರುವುದಾದರೆ, ಯಾವುದೇ ನಾಗರಿಕರು ತಾವು ಇರುವ ಜಾಗದಿಂದ ಭಯಭೀತರಾಗಿ, ಪ್ರಾಣರಕ್ಷಣೆಗಾಗಿ ಮತ್ತೊಂದು ಜಾಗಕ್ಕೆ ಹೋಗುವ ಪರಿಸ್ಥಿತಿ ಎಲ್ಲೂ ಉದ್ಭವವಾಗಬಾರದು. ಮಾನವೀಯತೆಯಲ್ಲಿ ವಿಶ್ವಾಸವಿಟ್ಟವರು ಯಾರೂ ಇದನ್ನು ಒಪ್ಪುವುದಿಲ್ಲ. ಇದನ್ನು ಸಂಭ್ರಮಿಸುವ ಮನಸ್ಥಿತಿಯವರೂ ನಾಗರಿಕ ಸಮಾಜದಲ್ಲಿ ಇರಬಾರದು. ಇಂಥ ಪರಿಸ್ಥಿತಿ ಎದುರಾದರೆ ಅದನ್ನು ಮನುಷ್ಯತ್ವದ ಹಿನ್ನೆಲೆಯಲ್ಲೇ ಮೊದಲು ನೋಡಬೇಕಾಗುತ್ತದೆ.

ಇದು ಮಾಹಿತಿ ತಂತ್ರಜ್ಞಾನದ ಯುಗ. ಎಸ್ಎಂಎಸ್‌ಗಳು, ಸೋಷಿಯಲ್ ನೆಟ್‌ವರ್ಕ್‌ಗಳ ಕಾಲ. ಸೋಷಿಯಲ್ ನೆಟ್‌ವರ್ಕ್‌ಗಳು ಮುಖ್ಯವಾಹಿನಿಯ ಮೀಡಿಯಾ ಹೇಳದ ಸತ್ಯಗಳನ್ನು ಬಿಚ್ಚಿಡುತ್ತ ಹೋಗುತ್ತಿರುವುದು ಒಂದು ಸಕಾರಾತ್ಮಕ ಬೆಳವಣಿಗೆ. ಆದರೆ ಅದೇ ಸಂದರ್ಭದಲ್ಲಿ ಸಾಮಾಜಿಕ ತಾಣಗಳು ಯಾವ, ಯಾರ ಅಂಕೆಯೂ ಇಲ್ಲದಂತೆ ಬೆಳೆಯುತ್ತಿರುವುದು, ಸಾಮಾಜಿಕ ಜವಾಬ್ದಾರಿಗಳು ಇಲ್ಲದ ವ್ಯಕ್ತಿ, ಗುಂಪುಗಳು ಅಶಾಂತಿಯನ್ನು ಹರಡಲು, ಜನರನ್ನು ಪ್ರಚೋದಿಸಲು ಪ್ರಯತ್ನಿಸುತ್ತಿರುವುದು ದೊಡ್ಡ ಸಮಸ್ಯೆಗೆ ಕಾರಣವಾಗಿದೆ. ಸಾಮಾಜಿಕ ತಾಣಗಳು ಅಭಿವ್ಯಕ್ತಿ ಸ್ವಾತಂತ್ರ್ಯದ ದುರ್ಬಳಕೆಯಿಂದಾಗಿ ಅನೇಕ ರೀತಿಯ ಅಪಾಯಗಳನ್ನು ನಮ್ಮ ಮುಂದೆ ತಂದೊಡ್ಡುತ್ತಿವೆ.

ಅಸ್ಸಾಂ ಸಂಘರ್ಷದ ವಿಷಯದಲ್ಲಿ ಹಬ್ಬಿದ ವದಂತಿಗಳಲ್ಲಿ ಸೋಷಿಯಲ್ ಮೀಡಿಯಾದ ಪಾತ್ರವೇ ಹೆಚ್ಚಿನದು. ನಾನು ಗಮನಿಸಿದಂತೆ ಅಸ್ಸಾಂ ಸಂಘರ್ಷ ಶುರುವಾದ ಸಂದರ್ಭದಲ್ಲಿ ಚಿತ್ರ ವಿಚಿತ್ರ ಫೊಟೋಗಳು ಫೇಸ್‌ಬುಕ್‌ನಲ್ಲಿ ಕಾಣಿಸಿಕೊಂಡವು. ಇಂಥ ಫೊಟೋಗಳನ್ನು ಶೇರ್ ಮಾಡಿದವರು ಒಂದೋ ಹಿಂದೂ ಮೂಲಭೂತವಾದಿಗಳಾಗಿದ್ದರು ಅಥವಾ ಮುಸ್ಲಿಂ ಮೂಲಭೂತವಾದಿಗಳಾಗಿದ್ದರು. ಹಿಂದೂ ಮೂಲಭೂತವಾದಿಗಳು ಶೇರ್ ಮಾಡಿದ ಫೊಟೋಗಳಿಗೆ ಕೊಟ್ಟ ವಿವರಣೆ ಪ್ರಕಾರ ಮುಸ್ಲಿಮರು ಹಿಂದೂಗಳನ್ನು ಸಾಮೂಹಿಕ ಕಗ್ಗೊಲೆ ಮಾಡುತ್ತಿದ್ದರು, ಮುಸ್ಲಿಂ ಮೂಲಭೂತವಾದಿಗಳು ಅಂಟಿಸಿದ ಫೊಟೋಗಳ ಪ್ರಕಾರ ಹಿಂದೂಗಳು ಮುಸ್ಲಿಮರನ್ನು ಸಾಮೂಹಿಕ ಕಗ್ಗೊಲೆ ಮಾಡಿದ್ದರು. ಈ ಫೊಟೋಗಳ ನಿಜಾಯಿತಿಯನ್ನು ಪ್ರಶ್ನಿಸುವವರು ಯಾರು? ಈ ಫೊಟೋಗಳು ಅಸ್ಸಾಂ ಸಂಘರ್ಷಕ್ಕೆ ಸಂಬಂಧಿಸಿದ್ದೇ ಅಲ್ಲವೇ ಎಂಬುದನ್ನು ವಿವೇಚನೆಯಿಂದ ಗಮನಿಸುವ ಜವಾಬ್ದಾರಿಯೂ ಇಲ್ಲದಂತೆ ಒಬ್ಬರಿಂದ ಒಬ್ಬರಿಗೆ ಶೇರ್ ಆಗತೊಡಗಿದ್ದವು.

ಇದಾದ ನಂತರ ಭಗತ್ ಸಿಂಗ್ ಕ್ರಾಂತಿ ಸೇನೆ ಎಂಬ ಸಂಘಟನೆಯೊಂದು ಪ್ರಕಟಣೆ ನೀಡಿ, ಕರ್ನಾಟಕದಲ್ಲಿರುವ ಈಶಾನ್ಯ ರಾಜ್ಯಗಳ ನಾಗರಿಕರನ್ನು ರಂಜಾನ್ ಮುಗಿಯುವ ಸಂದರ್ಭದಲ್ಲಿ ಕೊಂದು ಹಾಕಲು ಮುಸ್ಲಿಂ ಸಂಘಟನೆಗಳು ಫತ್ವಾ ಹೊರಡಿಸಿವೆ, ಈಶಾನ್ಯ ರಾಜ್ಯದ ನಾಗರಿಕರು ಸಹಾಯಕ್ಕಾಗಿ ತಮ್ಮ ದೂರವಾಣಿ ಸಂಖ್ಯೆಯನ್ನು (ಹೆಲ್ಪ್ ಲೈನ್) ಸಂಪರ್ಕಿಸಿ, ಎಂದು ಹೇಳಿತ್ತು. ಈ ಥರದ ವದಂತಿಗಳು ಒಂದಕ್ಕೊಂದು ಬೆಳೆದು ಈಶಾನ್ಯ ರಾಜ್ಯದ ನಾಗರಿಕರಿಗೆ ಸಾಮೂಹಿಕ ಎಸ್ಎಂಎಸ್‌ಗಳ ರೂಪದಲ್ಲಿ ಭೀತಿ ಹುಟ್ಟಿಸಲಾರಂಭಿಸಿದವು. ಆಗ ಶುರುವಾಗಿದ್ದೇ ವಾಪಾಸು ತವರಿಗೆ ಹೋಗುವ ತವಕ.

ಈಶಾನ್ಯ ರಾಜ್ಯಗಳ ನಿವಾಸಿಗಳು ವಾಪಾಸು ಹೋಗಲು ಆರಂಭಿಸಿದ ಮೊದಲನೇ ದಿನ ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ದೊಡ್ಡ ಪ್ರಹಸನವೇ ನಡೆದುಹೋಯಿತು. ಈ ನಾಗರಿಕರು ರೈಲ್ವೆ ನಿಲ್ದಾಣ ತಲುಪುತ್ತಿದ್ದಂತೆ ತಮ್ಮ ಸಮವಸ್ತ್ರ ಸಮೇತ ಆರ್‌ಎಸ್‌ಎಸ್ ಕಾರ್ಯಕರ್ತರು ಹಾಜರಾದರು. ಪೊಲೀಸರು ತಂಡೋಪತಂಡವಾಗಿ ಬಂದು ನಿಂತರು. ಅದಾದ ಮೇಲೆ ಮಂತ್ರಿ ಮಹೋದಯರು ಒಬ್ಬರಾದ ಮೇಲೊಬ್ಬರಂತೆ ಬಂದುನಿಂತರು. ಆರ್‌ಎಸ್‌ಎಸ್ ಕಾರ್ಯಕರ್ತರು ಹೇಳಿಕೊಂಡ ಪ್ರಕಾರ ಅವರು ಅಸ್ಸಾಂ ನಾಗರಿಕರಿಗೆ ರಕ್ಷಣೆ ನೀಡಲು ಬಂದಿದ್ದರು! ರಕ್ಷಣೆ ಕೊಡಲು ಪೊಲೀಸರು ಇರುವಾಗ ಲಾಠಿ ಹಿಡಿದ ಆರ್‌ಎಸ್‌ಎಸ್  ಕಾರ್ಯಕರ್ತರಿಗೇನು ಕೆಲಸ? ಈ ಪ್ರಶ್ನೆ ಪೊಲೀಸ್ ಅಧಿಕಾರಿಗಳಿಗೆ ಹೊಳೆಯಲೇ ಇಲ್ಲವೆನ್ನಿಸುತ್ತದೆ. ಮಂತ್ರಿ ಮಹೋದಯರು ವಾಪಾಸು ಹೋಗಬೇಡಿ ಎಂದು ಕಾಡಿ ಬೇಡಿ ಟಿಕೆಟ್ ಬುಕ್ ಮಾಡಿದ್ದ ಜನರನ್ನು ವಾಪಾಸು ಹೋಗಲು ಪುಸಲಾಯಿಸುತ್ತಿದ್ದರು. ಪೊಲೀಸರಿಗೆ ಮಾಮೂಲಿನಂತೆ ಎಲ್ಲರನ್ನೂ ಕಾಯುವ ಕೆಲಸ.

ಕನ್ನಡ ಮೀಡಿಯಾ ಇದೆಲ್ಲವನ್ನೂ ಅತಿರಂಜಿತವಾಗಿ ಚಿತ್ರಿಸಿತು. ನಿಜಕ್ಕೂ ಈಶಾನ್ಯ ರಾಜ್ಯದ ಜನರ ಸಾಮೂಹಿಕ ನರಮೇಧ ನಡೆದೇಹೋಗುವುದೇನೋ ಎಂಬಂತೆ ಬಣ್ಣಬಣ್ಣದ ಸುದ್ದಿಗಳು ಪ್ರಕಟಗೊಂಡವು. ಸಾಮಾನ್ಯ ಜನರಿಗೆ ಅರ್ಥವೇ ಆಗದ ಕೆಲವು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಗೋಜಿಗೇ ಪತ್ರಿಕೆಗಳು ಹೋಗಲಿಲ್ಲ.

’ವಿಜಯ ಕರ್ನಾಟಕ’  ಮುಖಪುಟದಲ್ಲೇ ಒಂದು ವರದಿ ಪ್ರಕಟಿಸಿತು. ವದಂತಿ ಮೂಲ ಹುಟ್ಟಿದ್ದು ಎಲ್ಲಿಂದ ಎಂಬುದನ್ನು ವಿವರಿಸುವ ವರದಿ ಅದು. ಬಹುಶಃ ಅದನ್ನು ಹೊರತುಪಡಿಸಿದರೆ ಇಷ್ಟು ರಂಪಕ್ಕೆ ಕಾರಣವಾದ ಹಿನ್ನೆಲೆ ಏನು ಎಂಬುದನ್ನು ವಿವರಿಸುವ ಗೋಜಿಗೆ ನಮ್ಮ ಪತ್ರಿಕೆಗಳು ಹೋಗಲಿಲ್ಲ. ಭಗತ್ ಸಿಂಗ್ ಕ್ರಾಂತಿ ಸೇನೆಯು ನೀಡಿದ ಹೆಲ್ಪ್ ಲೈನ್ ನಂಬರಿಗೆ ಕರೆ ಮಾಡಿ ಮಾತನಾಡಿದ್ದ ವಿಜಯ ಕರ್ನಾಟಕ ವರದಿಗಾರ, ಯಾವ ಮುಸ್ಲಿಂ ಸಂಘಟನೆ ಫತ್ವಾ ನೀಡಿದೆ? ನಿಮ್ಮ ಬಳಿ ಮಾಹಿತಿ ಇದ್ದರೆ ನೀಡಿ ಎಂದು ಪ್ರಶ್ನೆ ಮಾಡಿದ್ದರು. ಆದರೆ ಅವರಿಂದ ಯಾವ ಉತ್ತರವೂ ಬಂದಿರಲಿಲ್ಲ. ಇದೆಲ್ಲವೂ ಆ ಮುಖಪುಟದ ವರದಿಯಲ್ಲಿ ಪ್ರಕಟಗೊಂಡಿತ್ತು. ಈ ಕ್ಷಣದವರೆಗೆ ಈ ವದಂತಿಗಳನ್ನು ಯಾಕಾಗಿ ಹಬ್ಬಿಸಲಾಯಿತು? ಹಬ್ಬಿಸಿದವರು ಯಾರು? ಇದರ ಪ್ರಯೋಜನ ಯಾರಿಗಾಯಿತು? ಈ ಪ್ರಶ್ನೆಗಳನ್ನು ಇಟ್ಟುಕೊಂಡು ವರದಿ ಮಾಡುವ ಕೆಲಸವನ್ನು ನಮ್ಮ ಮೀಡಿಯಾ ಮಾಡಲೇ ಇಲ್ಲ.

ಇದನ್ನು ನಾನು ಹೇಳುವ ಹೊತ್ತಿನಲ್ಲಿ ಪತ್ರಿಕೆಗಳು ಏನನ್ನು ವರದಿ ಮಾಡಬೇಕಿತ್ತು? ಈಶಾನ್ಯ ಜನರು ವಾಪಾಸು ಹೋಗಿದ್ದನ್ನು ಬರೆದಿದ್ದೇ ತಪ್ಪಾ ಎಂದು ನೀವು ಪ್ರಶ್ನಿಸಬಹುದು. ನಿಜ, ಈಶಾನ್ಯ ರಾಜ್ಯದ ಜನರು ಅಸಹಜವಾಗಿ ಬೆಂಗಳೂರು ಬಿಟ್ಟು ಹೊರಟಿದ್ದನ್ನು ವರದಿ ಮಾಡುವುದು ಸರಿ. ಆದರೆ ಇಡೀ ವರ್ತಮಾನದ ಹಿಂದಿನ ಹುನ್ನಾರಗಳನ್ನು ಬಿಡಿಸಿಡುವ ಯತ್ನವನ್ನು ಯಾವ ಪತ್ರಿಕೆಯೂ ಮಾಡಲಿಲ್ಲ.

ನಾನು ಒಂದು ಮಾತನ್ನು ಹೇಳುತ್ತೇನೆ, ಇಲ್ಲಿರುವ ಈಶಾನ್ಯ ರಾಜ್ಯದ ನಾಗರಿಕರು ತಪ್ಪು ತಿಳಿಯಬಾರದು. ನಿಮ್ಮ ಬಗೆ ಹೃದಯಪೂರ್ವಕವಾದ ಕಾಳಜಿ ಇಟ್ಟುಕೊಂಡೇ ಈ ಮಾತುಗಳನ್ನು ಹೇಳುತ್ತಿದ್ದೇನೆ. ಕರ್ನಾಟಕದಲ್ಲಿ ಈ ಬಿಜೆಪಿ ಸರ್ಕಾರ ಬಂದ ನಂತರ ಭೀಕರ ಸ್ವರೂಪದ ನೆರೆ ಪ್ರವಾಹ ಉತ್ತರ ಕರ್ನಾಟಕದ ಲಕ್ಷಾಂತರ ಜನರ ಬದುಕನ್ನೇ ಛಿದ್ರಗೊಳಿಸಿತು. ನೂರಾರು ಜನರು ಸತ್ತರು. ಸಾವಿರಾರು ಮಂದಿ ಮನೆಮಠ ಕಳೆದುಕೊಂಡರು. ಊರೂರೇ ನಾಶವಾಯಿತು. ಹೀಗೆ ಪ್ರಕೃತಿ ವಿಕೋಪದಿಂದ ನೊಂದು ಬೆಂದವರ ರಕ್ಷಣೆಗೆ ಈ ಸರ್ಕಾರ ಸರಿಯಾಗಿ ಕಾರ್ಯ ನಿರ್ವಹಿಸಲೇ ಇಲ್ಲ. ತನ್ನ ಉತ್ತರದಾಯಿತ್ವವನ್ನು ನಿಭಾಯಿಸಲೇ ಇಲ್ಲ. ಸಂತ್ರಸ್ಥರಿಗೆ ಮೂರು ವರ್ಷ ಕಳೆದರೂ ಮನೆಗಳನ್ನು ಕಟ್ಟಿಕೊಡುವ ಕೆಲಸ ಈ ಸರ್ಕಾರದಿಂದ ಆಗಿಲ್ಲ. ಈ ವರ್ಷ ಕಳೆದ ಒಂದು ದಶಕದಲ್ಲಿ ಕಾಣದಂತ ಭೀಕರ ಬರ ಅದೇ ಉತ್ತರ ಕರ್ನಾಟಕವನ್ನು ಬಾಧಿಸುತ್ತಿದೆ. ಜನ ತಂಡೋಪತಂಡವಾಗಿ ಮಹಾನಗರ, ನಗರಗಳಿಗೆ ಗುಳೆ ಹೋಗುತ್ತಿದ್ದಾರೆ. ಇದೇ ಸರ್ಕಾರದ ಮಂತ್ರಿಯೊಬ್ಬರು ಹೇಳಿದ ಮಾತನ್ನು ಇಲ್ಲಿ ನೆನಪಿಸಿಕೊಳ್ಳಬಯಸುತ್ತೇನೆ. “ಉತ್ತರ ಕರ್ನಾಟಕದ ಜನರಿಗೆ ಗುಳೆ ಹೋಗುವುದೊಂದು ಚಟ, ಅದಕ್ಕಾಗಿ ಗುಳೆ ಹೋಗುತ್ತಾರೆ,” ಎಂದರು ಒಬ್ಬ ಘನತೆವತ್ತ ಮಂತ್ರಿ.

ಇಂಥ ಸರ್ಕಾರ ಈಶಾನ್ಯ ರಾಜ್ಯದ ನಾಗರಿಕರು ತಾತ್ಕಾಲಿಕವಾಗಿ ತಮ್ಮ ರಾಜ್ಯಗಳಿಗೆ ಹೊರಟು ನಿಂತಾಗ ತೋರಿದ ಕಾಳಜಿ ಎಷ್ಟು ಪ್ರಮಾಣದಲ್ಲಿ ಪ್ರಾಮಾಣಿಕವಾಗಿತ್ತು ಎಂಬ ಪ್ರಶ್ನೆ ಎಂಥ ದಡ್ಡರನ್ನಾದರೂ ಕಾಡುತ್ತದೆ. ಸಚಿವರೊಬ್ಬರು ತಮ್ಮ ಫೇಸ್‌ಬುಕ್‌ನಲ್ಲಿ ಬರೆದುಕೊಂಡ ಪ್ರಕಾರ ಸುಮಾರು ಆರುಗಂಟೆ ಅವರು ರೈಲ್ವೆ ನಿಲ್ದಾಣದಲ್ಲೇ ಇದ್ದು ಈಶಾನ್ಯ ರಾಜ್ಯದ ನಾಗರಿಕರ ಮನವೊಲಿಸುವ ಕಾರ್ಯದಲ್ಲಿ ನಿರತರಾಗಿದ್ದರು. ಜತೆಯಲ್ಲಿ ಪೊಲೀಸರು ಮತ್ತು ಆರ್‌ಎಸ್‌ಎಸ್ ಕಾರ್ಯಕರ್ತರು. ಈ ಮಂತ್ರಿ ಎಂದೂ ಬರ ಬಂದು ಬವಣೆ ಅನುಭವಿಸುತ್ತಿರುವ ಜನರಿರುವ ಒಂದೇ ಒಂದು ಹಳ್ಳಿಯಲ್ಲಿ ಒಂದೇ ಒಂದು ಗಂಟೆ ಇದ್ದುಬಂದವರಲ್ಲ. ಯಾಕೆ ಈ ಆಷಾಢಭೂತಿತನ?

ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆಯನ್ನು ಹಿಂದಕ್ಕೆ ಪಡೆಯುವಂತೆ ಮಣಿಪುರದ ಉಕ್ಕಿನ ಮಹಿಳೆ ಐರೋನ್ ಶರ್ಮಿಳಾ ದೇವಿ ಕಳೆ 12 ವರ್ಷಗಳಿಂದ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾಳೆ. ಒಂದೆಡೆ ಬಂಡುಕೋರರಿಂದ ಮತ್ತೊಂದೆಡೆ ನಮ್ಮದೇ ಸೈನ್ಯದಿಂದ ಮಣಿಪುರಿಗಳು ದೌರ್ಜನ್ಯ, ಕೊಲೆ, ಅತ್ಯಾಚಾರಕ್ಕೆ ಒಳಗಾಗುತ್ತಿದ್ದಾರೆ. ಆರ್‌ಎಸ್‌ಎಸ್ ಸಂಘಟನೆ ಎಂದಾದರೂ ಶರ್ಮಿಳಾಗೆ ಬೆಂಬಲ ಸೂಚಿಸಿದೆಯಾ? ಮಣಿಪುರಿ ಜನರ ನೋವಿಗೆ, ಸಂಕಟಕ್ಕೆ ಸ್ಪಂದಿಸಿದೆಯಾ? ಇಲ್ಲದಿದ್ದಲ್ಲಿ ಇದ್ದಕ್ಕಿದ್ದಂತೆ ಈಶಾನ್ಯ ರಾಜ್ಯದ ಜನರ ಬಗ್ಗೆ ಈ ಕಾಳಜಿ ಹುಟ್ಟಿಕೊಂಡಿದ್ದಾದರೂ ಹೇಗೆ?

ಇದೆಲ್ಲವೂ ಆಳುವ ಬಿಜೆಪಿ ಸರ್ಕಾರದ ಒಂದು ರಾಜಕೀಯ ಅಜೆಂಡಾದ ಭಾಗ, ಆರ್‌ಎಸ್‌ಎಸ್  ಪ್ರತಿಪಾದಿಸುತ್ತ ಬಂದಿರುವ ಹಿಂದೂರಾಷ್ಟ್ರ ನಿರ್ಮಾಣದ ಷಡ್ಯಂತ್ರದ ಒಂದು ಗಂಭೀರ ಹೆಜ್ಜೆ  ಎಂದು ನಮ್ಮ ಪತ್ರಿಕೆಗಳಿಗೆ ಯಾಕೆ ಹೊಳೆಯಲಿಲ್ಲ? ಈಶಾನ್ಯ ರಾಜ್ಯದ ನಾಗರಿಕರಿಗೆ ಸಹಾನುಭೂತಿ ತೋರಿದ್ದು ತಪ್ಪು ಎಂದು ನಾನು ಹೇಳುತ್ತಿಲ್ಲ. ಆದರೆ ಲಾಠಿ ಹಿಡಿದ ಆರ್‌ಎಸ್‌ಎಸ್  ಕಾರ್ಯಕರ್ತರ ಜತೆ ನಿಂತು ಈ ಸಚಿವರುಗಳು ಮಾಡಿದ ನಾಟಕಗಳನ್ನು ಬಯಲುಗೊಳಿಸುವ ಕೆಲಸವನ್ನು ನಮ್ಮ ಮೀಡಿಯಾ ಮಾಡಲೇ ಇಲ್ಲ.

ಇದೇ ಸಂದರ್ಭದಲ್ಲಿ ವರ್ತಮಾನ.ಕಾಮ್ ಎಂಬ ವೆಬ್‌ಸೈಟ್ ಒಂದರಲ್ಲಿ ಒಂದು ಬರೆಹವನ್ನು ಗಮನಿಸಿದೆ. ಅಸ್ಸಾಂ ನಲ್ಲಿ ನಡೆದ ಸಂಘರ್ಷದ ತಲಸ್ಪರ್ಶಿ ಚಿತ್ರಣ ಅದರಲ್ಲಿತ್ತು. ಅಷ್ಟಕ್ಕೂ ಅಸ್ಸಾಂನಲ್ಲಿ ನಡೆದದ್ದು ಹಿಂದೂ-ಮುಸ್ಲಿಂ ಮತೀಯ ಸಂಘರ್ಷ ಅಲ್ಲವೇ ಅಲ್ಲ. ಅದು ಜನಾಂಗೀಯ ದ್ವೇಷಕ್ಕೆ ಹುಟ್ಟಿಕೊಂಡ ಗಲಭೆ. ಭೂಮಿಯ ಮಾಲಿಕತ್ವಕ್ಕಾಗಿ ಬೋಡೋಗಳು ಮತ್ತು ಮುಸ್ಲಿಮರ ನಡುವೆ ಉಂಟಾದ ಸಂಘರ್ಷವದು. ಇಂಥ ಸ್ಪಷ್ಟ ಮಾಹಿತಿಯನ್ನು ಕೊಡುವ ಕೆಲಸವನ್ನು ಮುಖ್ಯವಾಹಿನಿಯ ಪತ್ರಿಕೆಗಳು ನೀಡಬೇಕೆಂದು ನಾಗರಿಕ ಸಮಾಜದ ಸ್ವಾಸ್ಥವನ್ನು ಉಳಿಸಬಯಸುವ ಎಲ್ಲ ಮನಸುಗಳು ಬಯಸುವುದು ಸಹಜ. ಅಸ್ಸಾಂನ ಬೋಡೋಗಳು ತಮ್ಮನ್ನು ಹಿಂದೂ ಎಂದು ಕರೆದುಕೊಳ್ಳುತ್ತಾರೋ ಇಲ್ಲವೋ ಎಂಬುದನ್ನು ಅಲ್ಲಿರುವ ಜನರೇ ಹೇಳಬೇಕು. ಹೀಗಿರುವಾಗ ಹಿಂದೂ-ಮುಸ್ಲಿಂ ಸಂಘರ್ಷದ ರೂಪ ಪಡೆದುಕೊಂಡಿದ್ದಾದರೂ ಹೇಗೆ? ಇದನ್ನು ಪ್ರಶ್ನಿಸಬೇಕಾದವರು ಯಾರು? ಕನ್ನಡ ಮೀಡಿಯಾಗಳೇಕೆ ಆಳಕ್ಕೆ ಇಳಿದು ವರದಿ ಮಾಡಲಿಲ್ಲ?

ಈಶಾನ್ಯ ರಾಜ್ಯದ ಜನರು ಭೀತರಾಗಿ ತಮ್ಮ ರಾಜ್ಯಗಳಿಗೆ ಹೊರಟಿದ್ದಂತೂ ನಿಜ. ಆದರೆ ಅವರಲ್ಲಿದ್ದ ಇದ್ದ ಭೀತಿಯನ್ನು ಹೆಚ್ಚಿಸುವ ಕೆಲಸವನ್ನು ನಮ್ಮ ರಾಜಕಾರಣಿಗಳು, ಧರ್ಮ ರಕ್ಷಕ ಸಂಘಟನೆಗಳು, ಮೀಡಿಯಾ ಮತ್ತು ಸೋಷಿಯಲ್ ಮೀಡಿಯಾ ಮಾಡಿದವು. ಯಾರಿಗೂ ಸತ್ಯ ಹುಡುಕಿಕೊಳ್ಳುವ ಅಗತ್ಯವೂ ಕಾಣಲಿಲ್ಲ. ಬೆಂಗಳೂರಿನ ಪ್ರಮುಖ ಮುಸ್ಲಿಂ ಸಂಘಟನೆಗಳ ಮುಖಂಡರನ್ನು ಮಾತನಾಡಿಸಿ, ಅವರಿಂದ ಹೇಳಿಕೆ ಪಡೆಯುವ ಪ್ರಯತ್ನಗಳೂ ನಮ್ಮ ಪತ್ರಿಕೆಗಳಿಂದ ಸರಿಯಾದ ಪ್ರಮಾಣದಲ್ಲಿ ನಡೆಯಲಿಲ್ಲ. ಕೆಲವು ಮುಸ್ಲಿಂ ಸಂಘಟನೆಗಳ ಮುಖಂಡರು ರೈಲ್ವೆ ನಿಲ್ದಾಣಕ್ಕೆ ತೆರಳಿ ಇಲ್ಲಿ ಭೀತಿಗೊಳ್ಳುವಂಥದ್ದು ಏನೂ ಇಲ್ಲ, ನಾವೆಲ್ಲರೂ ಅನ್ಯೋನ್ಯವಾಗಿರೋಣ ಎಂದು ಹೇಳಿದ್ದೂ ಸಹ ಸರಿಯಾದ ರೀತಿಯಲ್ಲಿ ವರದಿಯಾಗಲಿಲ್ಲ.

ವದಂತಿಕೋರರು, ಹಿಂಸಾವಿನೋದಿಗಳು, ಸರ್ಕಾರ, ಧರ್ಮರಕ್ಷಕ ಸಂಘಟನೆಗಳು ಮತ್ತು ಮೀಡಿಯಾ ಒಟ್ಟಾಗಿ ಸೇರಿ ಮಾಡಿದ್ದೇನೆಂದರೆ ಹುಸಿಶತ್ರುಗಳನ್ನು ಕಲ್ಪಿಸಿಕೊಂಡು ಗಾಳಿಯಲ್ಲಿ ಗುದ್ದಾಡಿದ್ದು. ಇಡೀ ಪ್ರಹಸನದಲ್ಲಿ ಖಳನಾಯಕನ ಸ್ಥಾನಕ್ಕೆ ಬಲವಂತವಾಗಿ ಕೂರಿಸಲಾಗಿದ್ದು ಮುಸ್ಲಿಂ ಸಮುದಾಯವನ್ನು. ಇಡೀ ಬೆಂಗಳೂರಿನಲ್ಲಿ ಯಾವ ರೀತಿಯ ಗಲಭೆ ನಡೆಯದಿದ್ದರೂ, ಹಿಂಸಾಚಾರ ಸಂಭವಿಸದಿದ್ದರೂ ಅದರ ಹೊಣೆಯನ್ನು ಮುಸ್ಲಿಂ ಸಮುದಾಯದ ಮೇಲೆ ಹೊರಿಸಲಾಯಿತು. ಇದಲ್ಲದೆ ಕರ್ನಾಟಕದ ಮಾನವನ್ನು ವಿನಾಕಾರಣ ಹರಾಜು ಹಾಕಲಾಯಿತು. ಬಿಜೆಪಿ ಸರ್ಕಾರಕ್ಕೆ ಮತ್ತು ಅದರ ಮಾತೃಸಂಸ್ಥೆ ಆರ್‌ಎಸ್‌ಎಸ್‌ಗೆ ತನ್ನ ಹಿಂದುತ್ವದ ಕಾರ್ಯಸೂಚಿಯನ್ನು ವ್ಯವಸ್ಥಿತವಾಗಿ ಚಲಾವಣೆಗೆ ತಂದ ಸಂತೋಷ. ಮಂತ್ರಿಗಳಿಗೆ ನ್ಯಾಷನಲ್ ಟೆಲಿವಿಷನ್ ಚಾನಲ್ ಗಳಲ್ಲಿ ಮಿರಮಿರನೆ ಮಿಂಚಿದ ಖುಷಿ. ಇಲ್ಲಿ ಪ್ರದರ್ಶನದ ವಸ್ತುಗಳಾಗಿದ್ದು ಬಡಪಾಯಿ ಈಶಾನ್ಯ ರಾಜ್ಯದ ಜನತೆ.

ಮೀಡಿಯಾ ಸಮಾಜಮುಖಿಯಾಗಿ ಕೆಲಸ ಮಾಡಬೇಕು ಎಂಬುದು ಪ್ರಜ್ಞಾವಂತರ ಅಪೇಕ್ಷೆ. ಆದರೆ ಕನ್ನಡ ಮೀಡಿಯಾ ಸೇರಿದಂತೆ ಮೀಡಿಯಾ ಸಂಪೂರ್ಣವಾಗಿ ಅಪ್ಪಟ ವ್ಯಾಪಾರಿಗಳ ಕೈಗೆ, ರಾಜಕಾರಣಿಗಳ ಕೈಗೆ ಸಿಕ್ಕಿದೆ. ಹೀಗಾಗಿ ಜನರನ್ನು ಭೀತಿಯಿಂದ ಕಾಪಾಡಬೇಕಾದ ಮಾಧ್ಯಮವೇ ಇಂದು ಭಯೋತ್ಪಾದನೆಯ ಕೆಲಸದಲ್ಲಿ ತೊಡಗಿದೆ. ಈಶಾನ್ಯ ರಾಜ್ಯಗಳ ಜನರಲ್ಲಿ ಹಬ್ಬಿದ ಊಹಾಪೋಹದ ವಿಷಯದಲ್ಲಾಗಲೀ, ನಂದಿನಿ ಹಾಲಿನಲ್ಲಿ ವಿಷ ಬೆರೆಸಲಾಗಿದೆ ಎಂಬ ವಿಷಯದಲ್ಲಾಗಲೀ, ಮೆಹಂದಿ ಹಚ್ಚಿಕೊಂಡ ಕೈಗಳಿಗೆ ಅಪಾಯವಾಗಲಿದೆ ಎಂದು ಹಬ್ಬಿದ ಊಹಾಪೋಹದ ವಿಷಯದಲ್ಲಾಗಲೀ ಅಥವಾ ಬೆಂಗಳೂರು-ಹುಬ್ಬಳ್ಳಿಗಳಲ್ಲಿ ಬಂಧಿತ ಶಂಕಿತ ಆರೋಪಿಗಳ ವಿಷಯದಲ್ಲಾಗಲೀ, ನಮ್ಮ ಮೀಡಿಯಾ ಮಾಡಿದ್ದು ಭೀತಿ ಹಬ್ಬಿಸುವ ಭಯೋತ್ಪಾದನೆಯ ಕೆಲಸವನ್ನೇ.

ಕಡೆಯದಾಗಿ ಇಲ್ಲಿರುವ ಈಶಾನ್ಯ ರಾಜ್ಯಗಳ ಜನರು ಮತ್ತು ದೇಶದ ಇತರ ಯಾವುದೇ ಭಾಗದಿಂದ ಬಂದಿರಬಹುದಾದ ಜನರಿಗೆ ನನ್ನ ಮನವಿಯೊಂದಿದೆ. ಇದು ನಾನು ನನ್ನ ಭಾಷಾ ದುರಹಂಕಾರದಿಂದ ಹೇಳುತ್ತಿರುವ ಮಾತಲ್ಲ. ನಾನು ಆಂಧ್ರಪ್ರದೇಶದಲ್ಲಿ ಮೂರು ತಿಂಗಳಿದ್ದೆ. ತೆಲುಗು ಭಾಷೆ ಅರ್ಧದಷ್ಟು ಕಲಿತುಬಿಟ್ಟೆ. ನೀವು ಐದು ಹತ್ತು ವರ್ಷಗಳಿಂದ ಇಲ್ಲಿದ್ದೀರಿ. ಕನ್ನಡ ಭಾಷೆ ಕಲಿತಿಲ್ಲ, ಕಲಿಯುವ ಪ್ರಯತ್ನವನ್ನೂ ಮಾಡಿಲ್ಲ. ಕೆಲವು ಬಡಾವಣೆಗಳಲ್ಲಿ ನಿಮ್ಮದೇ ತಂಡಗಳಲ್ಲಿ ಬದುಕುತ್ತಿದ್ದೀರಿ. ಇಲ್ಲಿನ ಜನ, ಸಂಸ್ಕೃತಿ, ಭಾಷೆ, ಸಮಾಜ ಯಾವುದನ್ನೂ ನೀವು ಪರಿಚಯ ಮಾಡಿಕೊಳ್ಳುವ ಪ್ರಯತ್ನವನ್ನೇ ಮಾಡಿಲ್ಲ. ಹೀಗಾಗಿ ಇಲ್ಲಿನ ಜನರೊಂದಿಗೆ ಒಂದು ಆರೋಗ್ಯಕರ ಸಂವಹನವೂ ನಿಮಗೆ ಸಾಧ್ಯವಾಗಿಲ್ಲ. ಇಂಥ ವದಂತಿಗಳು ಹಬ್ಬಿದ ಸಂದರ್ಭದಲ್ಲಿ ನಿಮಗೆ ಇಲ್ಲಿನ ಸ್ಥಳೀಯತೆ, ಸ್ಥಳೀಯ ಜನರ ಒಡನಾಟ, ಭಾಷೆ-ಸಂಸ್ಕೃತಿ ಅರ್ಥವಾಗಿದ್ದರೆ ಹೆದರಿ ಓಡಿಹೋಗುವ ಪ್ರಶ್ನೆಯೇ ಉದ್ಭವಿಸುತ್ತಿರಲಿಲ್ಲ. ಇನ್ನಾದರೂ ನೀವು ಇರುವ ಊರು, ರಾಜ್ಯದ ಭಾಷೆಯನ್ನು ಕಲಿತು, ಅಲ್ಲಿನ ಜನರೊಂದಿಗೆ ಒಡನಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ ಎಂದು ನಾನು ವಿನಂತಿಸುತ್ತೇನೆ.

(ಮೀಡಿಯಾ ವಾಚ್, ಬೆಂಗಳೂರು ಸಂಸ್ಥೆ ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜು ಸಭಾಂಗಣದಲ್ಲಿ ಏರ್ಪಡಿಸಿದ್ದ “ಎಕ್ಸೋಡಸ್ ಫ್ರಂ ಬೆಂಗಳೂರು, ವಾಟ್ ರೋಲ್ ಕ್ಯಾನ್ ಮೀಡಿಯಾ ಪ್ಲೇ ಇನ್ ಎ ಟೈಮ್ ಆಫ್ ಎಸ್ಎಂಎಸ್ ಅಂಡ್ ಫೇಸ್‌ಬುಕ್” ಎಂಬ ವಿಷಯದ ಕುರಿತಾದ ವಿಚಾರ ಸಂಕಿರಣದಲ್ಲಿ ಮಂಡಿಸಿದ ಭಾಷಣ.)

2 thoughts on “ಅಸ್ಸಾಂ ಸಂಘರ್ಷ, ವದಂತಿ: ಕನ್ನಡ ಮೀಡಿಯಾ ನೋಡಿದ್ದು ಹೇಗೆ?

 1. mankavi

  ಈ ಮೇಲಿನ ಎಲ್ಲಾ ಮಾತುಗಳು ಸತ್ಯ ಸರ್ ಅದ್ಭುತವಾದ ವಿಷಯವೆ ತಿಳಿಸಿದ್ದೀರಿ

  ನಿನ್ನೆ ನಾನು ವಿಜಯವಾಣಿಯಲ್ಲಿ ಒಂದು ಮಾತು ಓದಿದೆ ಅದು ಸುಮಾರು ದಿನಗಳ ಹಿಂದೆ ವಿವಾದಕ್ಕೆ ಒಳಗಾಗಿತ್ತು ಅಂತಾ ತಿಳಿತು ಅದೆ ಕೆ.ಎಸ್.ಸುದರ್ಶನರವರ ಮಾತು ” ಸಂವಿಧಾನವನ್ನು ಬಿಸಾಡಿ” ಇಂತಹ ಮಾತುಗಳನ್ನು ಇಂದಿನ ಮಿಡಿಯಾಗಳು ಬಿತ್ತರಿಸುವದು ಎಷ್ಟು ಸಮಂಜಸ ಇವು ಮತ್ತೆ ಕೋಮುಗಲಬೆಗೆ ಎಡೆಮಾಡಿಕೊಡುವದಿಲ್ಲವೆ?

  Reply
 2. vasanth

  Well said. BJP as you said clearly took the advantage of the situation. ABVP people at 9 PM in Mysore on that day were staging protest and appealing to the people of NE state to stay in Bangalore. The rhetoric was completely to shows Muslims were the main culprits for the happenings.

  The last pragraph of your article was so opt. Recently I had gone to Tibet Colony in Periyapatna to ask to send one of the Tibetan to our college for talking on “Tibetan Culture”. They made me run from piller to post. They told nobody was there to speak about Tibetan Culture in Kannada. They are staying in Baylekuppe for almost 50 years still they are not well versed with local culture.

  Reply

Leave a Reply

Your email address will not be published.