ಅಧಿಕಾರಶಾಹಿ ಮನಸ್ಸು ಮತ್ತು ಸೋನಿಯಾ ಗಾಂಧಿ


-ಚಿದಂಬರ ಬೈಕಂಪಾಡಿ


 

ಕೇಂದ್ರದಲ್ಲಿ ಯುಪಿಎ ಸರ್ಕಾರದ ಅವನತಿಗೆ ಕ್ಷಣಗಣನೆ ಆರಂಭವಾದಂತಿದೆ. ಎಲ್ಲಾ ರಾಜಕೀಯ ಪಕ್ಷಗಳೂ ಮಧ್ಯಂತರ ಚುನಾವಣೆಗ ಹಪಹಪಿಸುತ್ತಿವೆ. ಅವುಗಳ ದಾಹ ನೀಗಿಸಲು ಕಾಂಗ್ರೆಸ್ ಪಕ್ಷ ಮುಂದಾಗಿದೆಯೇನೋ ಎನ್ನುವ ರೀತಿಯಲ್ಲಿ ಘಟನಾವಳಿಗಳು ಘಟಿಸುತ್ತಿವೆ. ಇಲ್ಲಿ ಅತ್ಯಂತ ಮುಖ್ಯವಾಗಿ ಗಮನಿಸಬೇಕಾಗಿರುವುದು ಯುಪಿಎ ಸರ್ಕಾರದ ಸಂಕಷ್ಟಕ್ಕೆ ಯಾರು ಹೊಣೆ ಎನ್ನುವ ಕುರಿತು. ಯುಪಿಎ ಘಟಕ ಪಕ್ಷಗಳು ಖಂಡಿತಕ್ಕೂ ಕಾರಣವಲ್ಲ, ಹಾಗಾದರೆ ಇದರ ಹೊಣೆಯನ್ನು ಕಾಂಗ್ರೆಸ್ ಪಕ್ಷದ ಹೆಗಲಿಗೆ ಹೊರಿಸಬೇಕಾಗುತ್ತದೆ ಮತ್ತು ಅದು ಸಹಜವೂ ಹೌದು.

2ಜಿ ಹಗರಣ, ಕಲ್ಲಿದ್ದಲು ನಿಕ್ಷೇಪ ಹಂಚಿಕೆಯಿಂದ ಹಿಡಿದು ಡೀಸೆಲ್ ದರ ಏರಿಕೆ, ಚಿಲ್ಲರೆಯಲ್ಲೂ ನೇರಬಂಡವಾಳ ಹೂಡಿಕೆ ತನಕ ಯುಪಿಎ ಸರ್ಕಾರದ ಹೆಜ್ಜೆಗಳನ್ನು ಅವಲೋಕಿಸಿದರೆ ಇವೆಲ್ಲವೂ ಕಾಂಗ್ರೆಸ್ ಪಕ್ಷ ತಾನಾಗಿಯೇ ಮೈಮೇಲೆ ಎಳೆದುಕೊಂಡವು ಎನ್ನಿಸುತ್ತದೆ. ಇತ್ತೀಚಿನ ದಿನಗಳಲ್ಲಂತೂ ಯುಪಿಎ ಸರ್ಕಾರದಲ್ಲಿ ಕಾಂಗ್ರೆಸ್ ಪಕ್ಷದ ಸರ್ವಾಧಿಕಾರಿ ಮನೋಭಾವ ಹೆಚ್ಚಿದಂತೆ ಭಾಸವಾಗುತ್ತಿದೆ. ಆದರೆ ಬಹುಮುಖ್ಯವಾಗಿ ಇಬ್ಬರನ್ನು ಈ ಸಂದರ್ಭದಲ್ಲಿ ಚರ್ಚಿಸಬೇಕಾಗುತ್ತದೆ.

ಕಾಂಗ್ರೆಸ್ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ಮತ್ತು ಪ್ರಧಾನಿ ಡಾ.ಮನಮೋಹನ್ ಸಿಂಗ್ ಇಬ್ಬರೂ ಯುಪಿಎ ಸರ್ಕಾರವನ್ನು ಮುನ್ನಡೆಸುತ್ತಿರುವವರು. ಪ್ರಧಾನಿಯಾಗಿ ಡಾ.ಮನಮೋಹನ್ ಸಿಂಗ್ ಅಧಿಕಾರ ನಿರ್ವಹಿಸುತ್ತಿದ್ದರೆ ಅವರನ್ನು ನಿಯಂತ್ರಿಸುತ್ತಿರುವವರು ಸೋನಿಯಾ ಗಾಂಧಿ. ಸೋನಿಯಾ ಗಾಂಧಿ ಅವರಿಗೆ ರಾಜಕೀಯ ಮುತ್ಸದ್ದಿತನದ ಕೊರತೆಯಿದೆ ಎನ್ನುವುದನ್ನು ಹೇಳಲು ಯಾವ ಪಂಡಿತರೂ ಬೇಕಾಗಿಲ್ಲ. ಅವರು ಬೆಳೆದಿರುವ ಹಿನ್ನೆಲೆಯಲ್ಲಿ ಅವರನ್ನು ಮುತ್ಸದ್ಧಿಯನ್ನಾಗಿಸುವ ಯಾವ ಕುರುಹುಗಳೂ ಇಲ್ಲ. ಅನಿವಾರ್ಯವಾಗಿ ರಾಜಕೀಯಕ್ಕೆ ಧುಮುಕಿ ಅಧಿಕಾರ ಅನುಭವಿಸುತ್ತಿದ್ದಾರೆ. ಇನ್ನು ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು ರಾಜಕಾರಣಿಯಂತೂ ಅಲ್ಲವೇ ಅಲ್ಲ. ಓರ್ವ ಸರ್ಕಾರಿ ಅಧಿಕಾರಿಯಾಗಿ ಡಾ.ಸಿಂಗ್ ಅವರು ಮಹತ್ವದ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಇವರ ರಾಜಕೀಯ ಪ್ರವೇಶ ಕೂಡಾ ಆಕಸ್ಮಿಕ. ಆದ್ದರಿಂದಲೇ ಡಾ.ಸಿಂಗ್ ಅವರಿಗೆ ಜನರ ನಾಡಿಮಿಡಿತದ ನೇರ ಅನುಭವವಿಲ್ಲ.

ಒಂದು ರಾಜಕೀಯ ಪಕ್ಷವಾಗಿ ಕಾಂಗ್ರೆಸ್ ಈಗ ತನ್ನ ಹೊಣೆಗಾರಿಕೆ ನಿಭಾಸುತ್ತಿದೆ ಅನ್ನಿಸದಿರುವುದಕ್ಕೆ ಅದು ಯುಪಿಎ ಸರ್ಕಾರದ ಸಾರಥ್ಯವಹಿಸಿ ನಡೆದುಕೊಂಡ ರೀತಿಯೇ ಸಾಕ್ಷಿ. ರಾಜಕೀಯ ಪಕ್ಷ ಯಾವೊತ್ತೂ ಜನರ ಜೊತೆ ಹೆಜ್ಜೆ ಹಾಕಲು ಬಯಸುತ್ತದೆ. ಅದು ಅಧಿಕಾರದಲ್ಲಿ ಉಳಿಯಲು ಅನಿವಾರ್ಯ ಕೂಡಾ. ಆದರೆ ರಾಜಕೀಯ ಪಕ್ಷದ ನಡೆಗಳಿಗೆ ಅಧಿಕಾರಶಾಹಿ ವಿರುದ್ಧವಾಗಿ ಹೆಜ್ಜೆ ಹಾಕುತ್ತದೆ. ಇಲ್ಲೂ ಹೀಗೆ ಆಗುತ್ತಿದೆ. ಕಾಂಗ್ರೆಸ್ ಪಕ್ಷ ಜನರ ನಾಡಿಮಿಡಿತಕ್ಕೆ ಸ್ಪಂದಿಸಿ ನಡೆಗಳನ್ನು ಇಡಬೇಕಾಗಿತ್ತು. ಅಂತೆಯೇ ಪ್ರಧಾನಿಯೂ ಕೂಡಾ. ಆದರೆ ಸೋನಿಯಾ ಗಾಂಧಿ ಮತ್ತು ಡಾ.ಮನಮೋಹನ್ ಸಿಂಗ್ ಜನರಿಂದ ವಿಮುಖರಾಗುತ್ತಿದ್ದಾರೆ ಅನ್ನಿಸತೊಡಗಿದೆ.

ಸೋನಿಯಾ ಗಾಂಧಿ ಅವರ ಇಂಥ ನಡೆಗಳಿಗೆ ಮತ್ತೆ ಕಾರಣ ಹುಡುಕಿದರೆ ಅವರಿಗೆ ಸಿಗುತ್ತಿರುವ ಸಲಹೆಗಳು ಸರಿಯಾಗಿಲ್ಲ ಎನ್ನುವುದು ಅರಿವಿಗೆ ಬರುತ್ತವೆ. ಅವರಿಗೆ ಸಿಗುವ ಸಲಹೆಗಳನ್ನು ವಿಮರ್ಶೆಗೆ ಒಳಪಡಿಸುವ ಜಾಣ್ಮೆಯ ಕೊರತೆ ಎದ್ದುಕಾಣುತ್ತದೆ. ಕಲ್ಲಿದ್ದಲು ನಿಕ್ಷೇಪ ಹಂಚಿಕೆಯಲ್ಲಿ ಅವರ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ಅವರ ಯಡವಟ್ಟೇ ಹಗರಣಗಳಿಗೆ ಕಾರಣ ಎನ್ನುವುದಂತೂ ಸ್ವತ: ಸೋನಿಯಾ ಅವರು ಹೇಗೆ ತಾನೇ ಜೀರ್ಣಿಸಿಕೊಳ್ಳಲು ಸಾಧ್ಯ? ವಾಸ್ತವವಾಗಿ ಸೋನಿಯಾ ಅವರು ಜನರ ನಾಡಿಮಿಡಿತಕ್ಕೆ ಪೂರಕವಾಗಿ ಹೆಜ್ಜೆ ಹಾಕುತ್ತಿದ್ದರೆ ಇಂಥ ಬಿಕ್ಕಟ್ಟು ಬರಲು ಸಾಧ್ಯವಿರಲಿಲ್ಲ. ಬದಲಾಗಿ ಅವರು ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ನಡೆಗಳನ್ನು ಗೌರವಪೂರ್ವಕವಾಗಿ ಮಾನ್ಯಮಾಡುವ ಮೂಲಕ ಹಿನ್ನಡೆ ಕಾಣುವಂತಾಯಿತು.

ಡಾ.ಮನಮೋಹನ್ ಸಿಂಗ್ ಅವರು ಈ ದೇಶಕಂಡ ಉತ್ತಮ ಅರ್ಥಶಾಸ್ತ್ರಪಂಡಿತ ಥಿಯರಿಟಿಕಲ್ ಆಗಿ. ಆದರೆ ರಾಜಕೀಯ ಪಕ್ಷಕ್ಕೆ ಥಿಯರಿಗಿಂತಲೂ ಪ್ರಾಕ್ಟಿಕಲ್ ಮುಖ್ಯವಾಗುತ್ತದೆ. ಇದನ್ನು ದಿವಂಗತ ಪ್ರಧಾನಿ ಇಂದಿರಾ ಗಾಂಧಿ ಅವರು ಸಮರ್ಥವಾಗಿ ಗುರುತಿಸಿದ್ದರು ಮತ್ತು ಅನುಷ್ಠಾನಕ್ಕೆ ತರುವ ಎದೆಗಾರಿಕೆ ತೋರಿಸಿದರು. ಅಂಥ ಎದೆಗಾರಿಕೆಯನ್ನು ರಾಜೀವ್ ಗಾಂಧಿ ಮತ್ತು ಪಿ.ವಿ.ನರಸಿಂಹರಾವ್ ಮುಂದುವರಿಸಿದರು. ನಂತರ ಬಂದ ಡಾ.ಮನಮೋಹನ್ ಸಿಂಗ್ ಥಿಯರಿಗೆ ಮಾತ್ರ ಅಂಟಿಕೊಂಡರೇ ಹೊರತು ಪ್ರಾಕ್ಟಿಕಲ್ ಆಗಿ ಯೋಚಿಸಲಿಲ್ಲ, ಹಾಗೆ ಯೋಚಿಸುವುದು ಅವರ ಜಾಯಮಾನವೂ ಅಲ್ಲ.

ಡಾ.ಮನಮೋಹನ್ ಸಿಂಗ್ ಅವರ ಸುದೀರ್ಘ ನಡೆಗಳನ್ನು ಹತ್ತಿರದಿಂದ ಗಮನಿಸಿದರೆ ಅವರು ಓರ್ವ ಬ್ಯೂರೋಕ್ರೆಟ್ ಹೊರತು ಅವರಲ್ಲಿ ರಾಜಕಾರಣಿಯ ಮನಸ್ಸನ್ನು ಗುರುತಿಸುವುದು ಸಾಧ್ಯವಿಲ್ಲ. ಲಲಿತ್ ನಾರಾಯಣ್ ಮಿಶ್ರ ಅವರ ಮೂಲಕ ಡಾ.ಸಿಂಗ್ 70ರ ದಶಕದಲ್ಲಿ ವಿದೇಶಾಂಗ ವ್ಯವಹಾರ ವಿಭಾಗದ ಸಲಹೆಗಾರರಾಗಿ ಅಖಾಡಕ್ಕಿಳಿದರು. 1982ರಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಮುಖ್ಯಸ್ಥರಾದರು. ಈ ಹುದ್ದೆ ದೇಶದ ಆರ್ಥಿಕ ವ್ಯವಸ್ಥೆಯನ್ನು ನಿಭಾಯಿಸುವ ಗುರುತರವಾದ ಹುದ್ದೆ. ಆ ಕಾಲಕ್ಕೆ ಇಂದಿರಾಗಾಂಧಿ ಅವರು ಪ್ರಧಾನಿಯಾಗಿ ಅನೇಕ ಸುಧಾರನೆಗಳನ್ನು ಜಾರಿಗೆ ತರುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದರು. ಬ್ಯಾಂಕ್‌ಗಳನ್ನು ರಾಷ್ಟ್ರೀಕರಣ ಮಾಡುವ ಮೂಲಕ ರಾಜಕೀಯ ಶಕ್ತಿಗೆ ದುರ್ಬಲವರ್ಗದವರ ಬೆಂಬಲ ಪಡೆಯುವುದು ಅವರ ಉದ್ದೇಶವಾಗಿತ್ತು. ಆ ಕಾಲದಲ್ಲೇ ಬಿ.ಜನಾರ್ಧನ ಪೂಜಾರಿ ಅವರನ್ನು ಇಂದಿರಾ ಗಾಂಧಿ ಅವರು ಹಣಕಾಸು ಖಾತೆ ಸಹಾಯಕ ಸಚಿವರನ್ನಾಗಿ ಮಾಡಿದ್ದರು. ತೀರಾ ಹಿಂದುಳಿದ ವರ್ಗದಿಂದ ಬಂದಿದ್ದ ಜನಾರ್ಧನ ಪೂಜಾರಿಯವರು ಬ್ಯಾಂಕ್‌ಗಳ ಮೂಲಕ ಸಾಲಮೇಳ ಜಾರಿಗೆ ತಂದು ಹೊಸ ಕ್ರಾಂತಿಯುಂಟುಮಾಡಿದರು. ಈ ಸಂದರ್ಭದಲ್ಲಿ ಡಾ.ಮನಮೋಹನ್ ಸಿಂಗ್ ಅರ್ಥವ್ಯವಸ್ಥೆಯನ್ನು ಓರ್ವ ಅಧಿಕಾರಿಯಾಗಿ ನಿಭಾಯಿಸುತ್ತಾ ಸಾಲಮೇಳವನ್ನು ಬೆಂಬಲಿಸಿರಲಿಲ್ಲ. ಆದರೆ ಪೂಜಾರಿ ಅವರ ಈ ವಿನೂತನ ಹೆಜ್ಜೆ ಇಂದಿರಾ ಅವರಿಗೆ ಪ್ರಿಯವಾಗಿತ್ತು. ಬ್ಯಾಂಕ್‌ಗಳಿಂದ ಸಣ್ಣಮಟ್ಟದ ಸಾಲ ವಿತರಣೆ ದೇಶವ್ಯಾಪಿ ಚಳುವಳಿಯ ರೂಪದಲ್ಲಿ ಬೆಳೆಯಿತು. ಇದನ್ನು ಡಾ.ಸಿಂಗ್ ಮುಗುಮ್ಮಾಗಿ ನೋಡಿದರು. ರಾಜೀವ್ ಗಾಂಧಿ ಅವರು ಸಾಲಮೇಳ ಬೆಂಬಲಿಸಿದರು, ನಂತರ ಪಿ.ವಿ.ನರಸಿಂಹ ರಾವ್ ಅವರೂ ಜನರನ್ನು ತನ್ನ ತೆಕ್ಕೆಗೆ ಸೆಳೆಯಲು ಸಾಲಮೇಳ ಅಸ್ತ್ರವೆಂದೇ ಬೆಂಬಲಿಸಿದ್ದರು. ಸುಮಾರು ಐದು ವರ್ಷಗಳ ಕಾಲ ಜನಾರ್ಧನ ಪೂಜಾರಿ ಅವರು ಅಕ್ಷರಷ: ಈ ದೇಶದ ಬ್ಯಾಂಕ್‌ಗಳು ಬಡವರತ್ತ ಮುಖಮಾಡುವಂತೆ ಮಾಡಿದರು. ಆದರೆ ಅವುಗಳಿಂದ ಆದ ಆರ್ಥಿಕ ಬದಲಾವಣೆಗಳನ್ನು ಗುರುತಿಸುವುದು ಬೇರೆಯೇ ಮಾತು. ಪೂಜಾರಿ ಅವರನ್ನು ಬ್ಯೂರೋಕ್ರೆಟ್ ವ್ಯವಸ್ಥೆ ಆ ಸ್ಥಾನದಿಂದ ಕದಲಿಸುವಲ್ಲಿ ಸಫಲವಾಯಿತು. ಮತ್ತೆ ಇಂದಿನತನಕ ಸಾಲಮೇಳಗಳನ್ನು ಮಾಡಿಲ್ಲ. ಕಾಂಗ್ರೆಸ್ ಪಕ್ಷ ಈ ಸಾಲಮೇಲಗಳ ಮೂಲಕ ಚೈತನ್ಯ ಪಡೆದುಕೊಂಡಿದ್ದಂತೂ ನಿಜ.

ಅಂದರೆ ಜನಪರವಾದ ಕಾಳಜಿ ಮತ್ತು ಒಂದು ರಾಜಕೀಯ ಪಕ್ಷದ ನಾಯಕನಿಗೆ ಇರಬೇಕಾದ ಮುಂದಾಲೋಚನೆ ಆಗಲೂ ಡಾ.ಮನಮೋಹನ್ ಸಿಂಗ್ ಅವರಿಗೆ ಇರಲಿಲ್ಲ ಎನ್ನುವುದಕ್ಕೆ ಈ ಮಾತುಗಳು ಪುಷ್ಠಿ ನೀಡುತ್ತವೆ. ಇಂಥ ಹಿನ್ನೆಲೆಯಿರುವ ಸಾರಥಿಯಿಂದ ಸಾಮಾನ್ಯ ಜನರು ಡೀಸೆಲ್ ಬೆಲೆ ಹೆಚ್ಚಿಸಬೇಡಿ ಎನ್ನುವುದು ಕೇಳಿಸುವುದು ಹೇಗೆ? ಅಡುಗೆ ಅನಿಲ ಸಿಲಿಂಡರ್‌ಗಳು ವರ್ಷಕ್ಕೆ ಆರು ಮಾತ್ರ ಎನ್ನುವ ಮಿತಿ ಸರಿಯಲ್ಲ ಎನ್ನುವುದು ಅರ್ಥವಾಗುವುದಾದರೂ ಹೇಗೆ? ವಿದೇಶಿ ಬಂಡವಾಳ ಹೂಡಿಕೆಗೆ ಬಾಗಿಲು ತೆರೆಯಬೇಡಿ ಎನ್ನುವುದು ಅರ್ಥವಾಗುವುದಾರೂ ಹೇಗೆ?

ಆದ್ದರಿಂದ ಪ್ರಸ್ತುತ ರಾಜಕೀಯ ಸನ್ನಿವೇಶದಲ್ಲಿ ಕಾಂಗ್ರೆಸ್ ಪಕ್ಷ ಮುತ್ಸದ್ದಿತನದ ಕೊರತೆಯಿಂದಾಗಿ ತನ್ನ ಭವಿಷ್ಯವನ್ನು ಮಸುಕಾಗಿಸಿಕೊಳ್ಳುತ್ತಿದೆ. ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು ಕಳೆದುಕೊಳ್ಳುವುದೇನೂ ಇಲ್ಲ, ಅವರಿಗೆ ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಬೆಳೆಸುವ ಜರೂರತ್ತೂ ಇಲ್ಲ ಎನ್ನುವುದನ್ನು ಕಾಂಗ್ರೆಸ್ ಅಧಿನಾಯಕಿ ಅರ್ಥ ಮಾಡಿಕೊಂಡಿದ್ದರೆ ಅನಾಹುತ ತಪ್ಪಿಸಬಹುದಾಗಿತ್ತು. ಹಾಗೆ ನೋಡಿದರೆ ಬಿಜೆಪಿಗೆ ಬ್ಯೂರೋಕ್ರೆಟ್ ಮನಸ್ಸಿರಬೇಕಿತ್ತು, ಅದು ಬದಲಾವಣೆ ಮಾಡಿಕೊಂಡಿದೆ. ಮಮತಾ ಬ್ಯಾನರ್ಜಿ, ಮುಲಾಯಂ, ಶರದ್ ಯಾದವ್, ಕರುಣಾನಿಧಿ, ಲಾಲೂಪ್ರಸಾದ್ ಯಾದವ್, ದೇವೇಗೌಡ ಸಹಿತ ಈ ದೇಶದ ಎಡಪಕ್ಷಗಳು ಒಗ್ಗಟ್ಟಾಗುತ್ತಿರುವುದು ಕಾಂಗ್ರೆಸ್ ಪಕ್ಷಕ್ಕೆ ಯಾವ ಸಂದೇಶ ರವಾನಿಸುತ್ತಿದೆ? ಆದ್ದರಿಂದ ಈ ದೇಶದ ರಾಜಕೀಯ ಶಕ್ತಿಯನ್ನು ಕಾಂಗ್ರೆಸ್ ನಿರಾಯಾಸವಾಗಿ ಕಳೆದುಕೊಳ್ಳಲು ಯಾರು ಹೊಣೆ?

Leave a Reply

Your email address will not be published. Required fields are marked *