Daily Archives: September 19, 2012

ಶುಭಾಶಯ ಕೋರುತ್ತಾ ಉದಯಿಸುತ್ತಿದ್ದಾರೆ ಜನಸೇವಕರು, ಆಶೀರ್ವದಿಸಿ…

– ರವಿ ಕೃಷ್ಣಾರೆಡ್ಡಿ

“ಸಮಸ್ತ ನಾಗರೀಕರಿಗೆ ಗೌರಿ-ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು”

ಹೀಗೆಂದು ಬೆಂಗಳೂರು ಮತ್ತು ಸುತ್ತಮುತ್ತಲ ಊರುಗಳ ಹಾದಿಬೀದಿಗಳಲ್ಲೆಲ್ಲಾ ಬಂಟಿಂಗ್ಸ್, ಫ್ಲೆಕ್ಸ್, ಬ್ಯಾನರ್‌ಗಳು ತಲೆಯೆತ್ತಿ ರಾರಾಜಿಸುತ್ತಿವೆ. ಶುಭಾಶಯಗಳನ್ನು ಕೋರುತ್ತಿರುವವರ ಸುಂದರ ಮುಖಾರವಿಂದಗಳು ಎಲ್ಲಾ ತರಹದ ನಮೂನೆಯಲ್ಲಿವೆ. ಬಹುಶಃ ಕರ್ನಾಟಕದ ಇತಿಹಾಸದಲ್ಲಿ ಇಲ್ಲಿಯವರೆಗೆ ಇಷ್ಟೊಂದು ಮಂದಿ ನಾಡಿನ ಜನತೆಗೆ ಈ ಹಬ್ಬಗಳಿಗೆ ಶುಭಾಶಯಗಳನ್ನು ಕೋರಿರಲಿಲ್ಲವೇನೊ! ಇದು ಇಷ್ಟಕ್ಕೇ ನಿಲ್ಲುವುದಿಲ್ಲ. ಇನ್ನು ಪ್ರತಿ ತಿಂಗಳೂ ಒಂದು ಹಬ್ಬ ಇದೆ. ಮುಂದಿನ ತಿಂಗಳಿನಲ್ಲಿ ದಸರಾ, ಬಕ್ರೀದ್, ಅದಾದ ನಂತರ ದೀಪಾವಳಿ, ನಂತರ ಕ್ರಿಸ್‌ಮಸ್, ನಂತರ ಹೊಸವರ್ಷ, ನಂತರ ಸಂಕ್ರಾಂತಿ, ಶಿವರಾತ್ರಿ, ಯುಗಾದಿ… ಜನರಿಗೆ ಶುಭಾಶಯಗಳೋ ಶುಭಾಶಯಗಳು. ಧನ್ಯರೀ ಪ್ರಜೆಗಳು.

ಇಷ್ಟಕ್ಕೂ ಯಾರಿವರು, ಈ ಶುಭ ಹಾರೈಸುತ್ತಿರುವವರು? ಯಾಕೆ ಹೀಗೆ ಸಾಂಕ್ರಾಮಿಕ ರೋಗದಂತೆ ಶುಭಾಶಯ ಕೋರುತ್ತಿದ್ದಾರೆ? ಯಾಕೆ ಇದ್ದಕ್ಕಿದ್ದಂತೆ ಕಟೌಟ್‌ಗಳು, ಬ್ಯಾನರ್‌ಗಳು, ಸಮಾಜಸೇವಾ ಕಾರ್ಯಕ್ರಮಗಳು, ಹೆಚ್ಚಾಗುತ್ತಿವೆ?

ಚುನಾವಣೆ ಹತ್ತಿರ ಬರುತ್ತಿದೆ.

ಇವತ್ತು ರಾಜಕೀಯ ನಾಯಕರಾಗುವುದು ಯಾವ ರೀತಿಯಿಂದಲೂ ಕಷ್ಟವಲ್ಲ–ನಿಮ್ಮಲ್ಲಿ ಬೇಕಾಬಿಟ್ಟಿಯಾಗಿ ಚೆಲ್ಲಬಹುದಾದ ದುಡ್ಡಿದ್ದರೆ. ರಾತ್ರೋರಾತ್ರಿ ಯಾರು ಬೇಕಾದರೂ ನಾಯಕನಾಗಿಬಿಡಬಹುದು. ವಿದ್ಯೆ, ವಯಸ್ಸು, ಅನುಭವ, ಕಾಳಜಿ, ಪ್ರಾಮಾಣಿಕತೆ, ಸಿದ್ಧಾಂತ, ತ್ಯಾಗ, ನಿಷ್ಠೆ, ಬದ್ಧತೆ, ಇವು ಯಾವುವೂ ರಾಜಕಾರಣಿಯಾಗಲು ಮತ್ತು ರಾಜಕೀಯ ನಾಯಕನಾಗಲು ಇರಲೇಬೇಕಾದ ಅರ್ಹತೆಗಳಲ್ಲ. ಇವತ್ತು ಬೇಕಾದ ಅರ್ಹತೆಗಳು: ದುಡ್ಡು, ದುಡ್ಡು, ದುಡ್ಡು.

ನಾನು ವಾಸಿಸುವ ಬೆಂಗಳೂರು ದಕ್ಷಿಣದ ಸುತ್ತಮುತ್ತ ಹೆಚ್ಚಿಗೆ ಶುಭಾಶಯ ಕೋರುತ್ತಿರುವವರು ರಿಯಲ್ ಎಸ್ಟೇಟ್‌ನಲ್ಲಿ ದುಡ್ಡು ಮಾಡಿರುವವರು ಎಂದು ಹೇಳಬಹುದಾದ ಜನ. ಅವರ ಜಾತಿನಾಮ, ವೇಷಭೂಷಣ, ಎಲ್ಲಾ ಬೆರಳುಗಳಲ್ಲಿಯ ಉಂಗುರಗಳು,  ಕುತ್ತಿಗೆಯಲ್ಲಿ ನೇತಾಡುವ ನಾಯಿಗಳ ಕೊರಳಪಟ್ಟಿಯಷ್ಟು ದಪ್ಪಗಾತ್ರದ ಚೈನ್, ಮೇಲಿನ ಗುಂಡಿ ಬಿಚ್ಚಿದ ಅಂಗಿ, ಕೈಯಲ್ಲಿ ಮೊಬೈಲ್ ಹಿಡಿದು ಧೀರನಡಿಗೆಯಲ್ಲಿರುವಾಗ ತೆಗೆಸಿದ ಚಿತ್ರ,  ಇತ್ಯಾದಿಗಳನ್ನು ಗಮನಿಸಿದರೆ ಇದು ಗೊತ್ತಾಗುತ್ತದೆ. ಅದರ ಜೊತೆಗೆ ಎಂತೆಂತಹುದೊ ವ್ಯವಹಾರಗಳಲ್ಲಿ ದುಡ್ಡು ಮಾಡಿ ಅಧಿಕಾರದ ಹಪಹಪಿಗೆ ಬಿದ್ದವರು ಮತ್ತು ಸ್ಥಳೀಯ ಶಾಸಕ, ಕಾರ್ಪೊರೇಟರ್‌ನ ಚೇಲಾ ಆಗಿದ್ದುಕೊಂಡು ಮುಂದಿನ ಚುನಾವಣೆಗಳಲ್ಲಿ ಮುಂಚೂಣಿಗೆ ಬರಬೇಕು ಎಂದುಕೊಂಡಿರುವ ಮಹಾನುಭಾವರು. ಜೊತೆಗೆ ಹಾಲಿ ಶಾಸಕರ ಬೆಂಬಲಿಗರಲ್ಲಿ ತಮ್ಮ ಶಾಸಕನಿಗೆ ನಿಷ್ಠೆ ತೋರಿಸಿಕೊಳ್ಳುವ ಹಂಬಲದಲ್ಲಿರುವವರು. ಮತ್ತು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ಸ್ಕೆಚ್ ಹಾಕುತ್ತಿರುವವರು. ಇವರಲ್ಲಿ ಒಂದಷ್ಟು ಜನ ಈಗಾಗಲೇ ತಮಗೆ ಟಿಕೆಟ್ ಕೊಡಿಸಬಲ್ಲ ನಾಯಕರನ್ನು ಅವರಿಗೆ ಸಲ್ಲಿಸಬೇಕಾದಷ್ಟು ಕಪ್ಪ ಸಲ್ಲಿಸಿ ಆ ನಾಯಕರ ಫೊಟೋಗಳೊಂದಿಗೆ ತಮ್ಮದನ್ನೂ ಹಾಕಿಸಿಕೊಂಡು ಎಲ್ಲೆಲ್ಲಿಯೂ ಜನರಿಗೆ ಶುಭಾಶಯ ಕೋರುತ್ತಿದ್ದಾರೆ. ಒಂದೇ ಪಕ್ಷದ ಹಲವಾರು ಜನ ಒಂದೇ ಪಟ್ಟಣದಲ್ಲಿ ಬೇರೆಬೇರೆಯಾಗಿಯೇ ಶುಭಾಶಯ ಕೋರುತ್ತಿದ್ದಾರೆ. ಸ್ವೀಕರಿಸಿಕೊಳ್ಳಿ.

ನೆನ್ನೆಯ ಪತ್ರಿಕೆಗಳಲ್ಲಿ “’ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಬಂಟಿಂಗ್ಸ್, ಫ್ಲೆಕ್ಸ್, ಬ್ಯಾನರ್‌ಗಳನ್ನು ಹಾಕುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು` ಎಂದು ಬಿಬಿಎಂಪಿ ಆಯುಕ್ತ ರಜನೀಶ್ ಗೋಯಲ್ ಎಚ್ಚರಿಕೆ ನೀಡಿದರು.” ಎಂದು ವರದಿಯಾಗಿದೆ. ಆದರೆ, ಇದು ಎಂತಹ ಘನಗಂಭೀರ ಎಚ್ಚರಿಕೆ ಎಂದೂ, ಇದಕ್ಕೆ ನಮ್ಮ ಸ್ಥಾಪಿತ ಮತ್ತು ಉದಯೋನ್ಮುಖ ನಾಯಕರು ಹೇಗೆ ಪ್ರತಿಕ್ರಿಯಿಸುತ್ತಾರೆ ಎನ್ನುವುದು ಬೆಂಗಳೂರಿನ ಬೀದಿಗಳಲ್ಲಿಯೇ ಕಾಣಿಸುತ್ತದೆ. ಕಳೆದ ಎರಡು ದಿನಗಳಿಂದ ನಗರದ ಹಲವೆಡೆ ಈ ಬ್ಯಾನರ್‌ಗಳನ್ನು ತೆಗೆದಿರುವುದು ಎದ್ದು ಕಾಣುತ್ತದೆ, ನಿಜ. ಆದರೆ ಇದು ಎಷ್ಟು ದಿನ? ವಿಧಾನಸೌಧದ ಸುತ್ತ, ಪ್ರಮುಖವಾಗಿ ಶಾಸಕರ ಭವನದ ಮುಂದೆ ಇರುವ ಬ್ಯಾನರ್–ಬಂಟಿಂಗ್ಸ್ ಕಿತ್ತು ಹಾಕಿಸಿದರೆ ಹಾಗೂ ಅಲ್ಲಿ ಮತ್ತೆ ಹಾಕದಿರುವ ಹಾಗೆ ನೋಡಿಕೊಂಡರೆ ಸಾಕು, ಅಷ್ಟು ಮಾತ್ರದ ನಗೆಪಾಟಲು ಮತ್ತು ಕಾನೂನು ಉಲ್ಲಂಘನೆ ತಪ್ಪುತ್ತದೆ.

ಸುಮಾರು ಒಂದೆರಡು ತಿಂಗಳಿನ ಹಿಂದೆ ಪ್ರಜಾವಾಣಿಯಲ್ಲಿ ವಿಶೇಷ ವರದಿಯೊಂದು ಪ್ರಕಟವಾಗಿತ್ತು. ಬೆಂಗಳೂರು ಸುತ್ತಮುತ್ತಲಿನ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಲ್ಲಿ ಇತ್ತೀಚೆಗೆ ಸಮಾಜ ಸೇವಾ ಕಾರ್ಯಗಳು ಹೆಚ್ಚಾಗಿವೆ ಎಂದು. ಮಾಡುತ್ತಿರುವವರು ಯಾರು? ಬೆಂಗಳೂರಿನಲ್ಲಿ ನೆಲೆಸಿರುವ ಆ ಭಾಗದ ಹಣವಂತರು ಕೆಲವರು, ಮತ್ತು ಸ್ಥಳೀಯವಾಗಿಯೇ ವಾಸಿಸುತ್ತಿರುವ ಮತ್ತೊಂದಷ್ಟು ಶ್ರೀಮಂತರು. ಯಾವುದ್ಯಾವುದೊ ಕಾರ್ಯಕ್ರಮಗಳನ್ನು ಆಯೋಜಿಸಿ ಅಲ್ಲಿ ದಾನಧರ್ಮಗಳನ್ನು ಮಾಡಿಯಾದ ಮೇಲೆ “ಮುಂದಿನ ಚುನಾವಣೆಯಲ್ಲಿ ನಮ್ಮನ್ನು/ಇವರನ್ನು ಮರೆಯಬೇಡಿ” ಎಂದು ಕಡ್ಡಾಯವಾಗಿ ಫಲಾನುಭವಿಗಳನ್ನು ಕೋರುತ್ತಾರಂತೆ, ಆಣೆ ಹಾಕಿಸಿಕೊಳ್ಳುತ್ತಾರಂತೆ. ಸದ್ಯ, ಛಾಪಾ ಕಾಗದದ ಮೇಲೆ ಸಹಿ ಮಾಡಿಸಿಕೊಂಡಂತೆ ಕಾಣಿಸುತ್ತಿಲ್ಲ.

ಆದರೆ ಇದು ಬೆಂಗಳೂರಿನ ಸುತ್ತಮುತ್ತಲು ಮಾತ್ರ ಎನ್ನಲಾಗದೇನೊ. ರಾಜ್ಯದ ಯಾವ ಮೂಲೆಗೆ ಹೋದರೂ ಈ ಬ್ಯಾನರ್‌ಗಳು ಕಾಣಿಸುತ್ತವೆ. ಕೆಲವು ಕಡೆ, ಅಲ್ಲಿಯ ಸ್ಥಳೀಯ ಆರ್ಥಿಕ ಸ್ಥಿತಿ ಮತ್ತು ರಾಜಕೀಯ ಪೈಪೋಟಿಯ ಆಧಾರಗಳ ಮೇಲೆ ಒಂದಷ್ಟು ಏರುಪೇರು ಇರಬಹುದು. ಆದರೆ, ಯಾರಿಗಾದರೂ ಈಗ ನಾಯಕನಾಗಿ ಪ್ರತಿಷ್ಠಾಪಿತನಾಗಬೇಕಾದರೆ ಮೊದಲು ಮಾಡಬೇಕಾದ ಸುಲಭ ಕೆಲಸ ಬ್ಯಾನರ್ ಹಾಕಿಸುವುದು, ಕಟೌಟ್ ನಿಲ್ಲಿಸುವುದು.

ರಾಜ್ಯದಲ್ಲಿ ಪ್ರಜಾಪ್ರಭುತ್ವದ ಹಬ್ಬ ನಡೆಯುತ್ತಿದೆ. ಜನನಾಯಕರು ಉದಯಿಸುತ್ತಿದ್ದಾರೆ. ಪ್ರತಿ ಹಬ್ಬದ ಸಮಯದಲ್ಲೂ.