Daily Archives: September 20, 2012

ಪ್ರಜಾ ಸಮರ-2 (ನಕ್ಸಲ್ ಕಥನ)


– ಡಾ.ಎನ್.ಜಗದೀಶ್ ಕೊಪ್ಪ


ಕಳೆದ ಜೂನ್ 29 ರಂದು ನಕ್ಸಲ್ ಪೀಡಿತ ರಾಜ್ಯವಾದ ಛತ್ತೀಸ್‌ಘಡದಲ್ಲಿ ನಡೆದ ಘಟನೆ ಇದು. ಅಂದು ರಾತ್ರಿ ಸೂಕ್ಮ ಮತ್ತು ಬಿಜಾಪುರ್ ಜಿಲ್ಲೆಯ ಅರಣ್ಯ ಪ್ರದೇಶಗಳಲ್ಲಿ ಕೇಂದ್ರ ಸಶಸ್ತ್ರ ಮೀಸಲು ಪಡೆ ಮತ್ತು ಛತ್ತೀಸ್‌ಘಡದ ನಕ್ಸಲ್ ನಿಗ್ರಹ ಪಡೆ ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯ ಎರಡು ಪ್ರತ್ಯೇಕ ಘಟನೆಗಳಲ್ಲಿ 21 ಮಂದಿ ಮಾವೋವಾದಿ ನಕ್ಸಲರು ಮೃತಪಟ್ಟರೆಂಬ ಸುದ್ಧಿ ದೃಶ್ಯ ಮಾಧ್ಯಮಗಳಲ್ಲಿ ಬ್ರೇಕಿಂಗ್ ನ್ಯೂಸ್ ಆಗಿ, ಪತ್ರಿಕೆಗಳಲ್ಲಿ ತಲೆ ಬರಹದ ವರದಿಯಾಗಿ ಪ್ರಕಟವಾಯಿತು. ಆದರೆ, ಛತ್ತೀಸ್‌ಘಡ ಸರ್ಕಾರ ಮಾರನೇ ದಿನ ತನ್ನ ವರಸೆ ಬದಲಿಸಿ ಘಟನೆಯಲ್ಲಿ ಮೃತಪಟ್ಟವರು ಶಂಕಿತ ಮಾವೋವಾದಿಗಳು (ನಕ್ಸಲರು) ಎಂದು ಹೇಳಿತು.

ಇದೇ ವರದಿಯನ್ನು ಕೇಂದ್ರ ಸರ್ಕಾರಕ್ಕೂ ರವಾನಿಸಿತು. ಸ್ಥಳಕ್ಕೆ ಭೇಟಿ ನೀಡಿದ ಪತ್ರಕರ್ತರ ತಂಡಕ್ಕೆ ಮೃತ ಪಟ್ಟ ವ್ಯಕ್ತಿಗಳ ಶವಗಳನ್ನು ಗಮನಿಸಿದಾಗ ಅವರು ಶಂಕಿತ ನಕ್ಸಲರಲ್ಲ ಎಂಬ ಸಂಶಯ ಮೇಲು ನೋಟಕ್ಕೆ ಗೋಚರಿಸುತ್ತಿತ್ತು. ಶವಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಮೃತಪಟ್ಟವರು ಸ್ಥಳೀಯ ಕೋಟಗುಡ ಮತ್ತು ಸರ್ಕೆಗುಡ ಎಂಬ ಹಳ್ಳಿಯ ಆದಿವಾಸಿಗಳಾಗಿದ್ದರು.  ಕೊನೆಗೆ ಸಂಶಯದ ಜಾಡು ಹಿಡಿದು ಹೊರಟ ಪತ್ರಕರ್ತರಿಗೆ ಇದು ನಕ್ಸಲ್ ನಿಗ್ರಹ ಪಡೆ ಮತ್ತು ಕೇಂದ್ರ ಪಡೆ ಜಂಟಿಯಾಗಿ ನಡೆಸಿದ ಮುಗ್ದ ಆದಿವಾಸಿಗಳ ಮಾರಣ ಹೋಮದ ಕೃತ್ಯ ಎಂಬುದು ಮನದಟ್ಟಾಯಿತು.

ಘಟನೆಯಲ್ಲಿ ಗಾಯಗೊಂಡು ಬದುಕುಳಿದ ಮೂವರು ಆದಿವಾಸಿಗಳ ಪೈಕಿ ತೀವ್ರವಾಗಿ ಗಾಯಗೊಂಡಿದ್ದ ಓರ್ವ ಬಾಲಕನನ್ನು ಜಗದಾಲ್‌ಪುರದ ಮಹಾರಾಣಿ ಆಸ್ಪತ್ರೆಗೆ ಸಾಗಿಸಿ ಗುಪ್ತವಾಗಿ ಚಿಕಿತ್ಸೆ ಕೊಡಿಸುತ್ತಿರುವುದನ್ನು ಹಿಂದೂ ಇಂಗ್ಲಿಷ್ ದಿನಪತ್ರಿಕೆಯ ವರದಿಗಾರ ಪತ್ತೆ ಹಚ್ಚಿದರೆ, ಛತ್ತೀಸ್‌ಘಡದ ರಾಜಧಾನಿ ರಾಯ್‌ಪುರದ ಅಂಬೇಡ್ಕರ್ ಆಸ್ಪತ್ರೆಯಲ್ಲಿ ಕಾಲಿಗೆ ಗಾಯಗೊಂಡಿದ್ದ ಇಬ್ಬರು ಆದಿವಾಸಿಗಳನ್ನು (ಕಕಸೆಂಟಿ ಮತ್ತು ಮರ್ಕಮ್ ಸೋಮ) ಟೈಮ್ಸ್ ಆಫ್ ಇಂಡಿಯಾ ವರದಿಗಾರ ಪೊಲೀಸರ ಕಣ್ಣು ತಪ್ಪಿಸಿ ವಾರ್ಡ್‌ಬಾಯ್ ವೇಷದಲ್ಲಿ ಆಸ್ಪತ್ರೆಯ ಒಳಹೊಕ್ಕು ಪತ್ತೆ ಹಚ್ಚಿದ್ದ, ಅಲ್ಲದೆ ಅವರನ್ನು ಮಾತನಾಡಿಸಿ ಆ ರಾತ್ರಿ ನಡೆದ ಘಟನೆಯನ್ನು ದಾಖಲು ಮಾಡಿಕೊಂಡಿದ್ದ. ಅತ್ತ ನವದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಪಿ.ಚಿದಂಬರಂ ಯುದ್ಧ ಗೆದ್ದ ಉತ್ಸಾಹದಲ್ಲಿ 21 ಮಂದಿ ನಕ್ಸಲಿಯರನ್ನು ಸದೆ ಬಡಿದ ಕಥೆಯನ್ನು ಮಾಧ್ಯಮದ ಮುಂದೆ ಹೆಮ್ಮೆಯಿಂದ ಹೇಳುಕೊಳ್ಳುತ್ತಿದ್ದರೆ, ಇತ್ತ ಮಧ್ಯ ಭಾರತದ ಬಹುತೇಕ ರಾಜ್ಯಗಳಲ್ಲಿ ಸತ್ತವರು ಅಮಾಯಕ ಆದಿವಾಸಿಗಳು ಎಂಬ ವರದಿ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು.

ಜುಲೈ 3ರಂದು ಪೂನಾದಿಂದ ಹೊರಡುವ ಅಜಾದ್ ಎಕ್ಸ್‌ಪ್ರಸ್ ರೈಲಿನಲ್ಲಿ ಹೊರಟು 4ರಂದು ಮಧ್ಯಾಹ್ನ ಬಿಲಾಸ್‌ಪುರ್ ತಲುಪಿ, ಸಂಜೆ ವೇಳೆಗೆ ರಾಯ್‌ಪುರ್ ತಲುಪಿದ ನನಗೆ ಅಲ್ಲಿ ಸಿಕ್ಕ ಮಾಹಿತಿ ಬೇರೆಯದೇ ಆಗಿತ್ತು. ವಾಸ್ತವವಾಗಿ ಅಲ್ಲಿ ನಡೆದ ಘಟನೆ ಇದು. ಈ ಬಾರಿಯ ಮುಂಗಾರು ಮಳೆ ಆರಂಭವಾಗುವ ಮುನ್ನ ಆದಿವಾಸಿಗಳಿಗೆ ಬೇಸಾಯಕ್ಕೆ ಅರಣ್ಯ ಭೂಮಿಯನ್ನು ಹಂಚುವುದಕ್ಕಾಗಿ ಇಬ್ಬರು ಸ್ಥಳೀಯ ನಕ್ಸಲ್ ನಾಯಕರು ಸಭೆ ಕರೆದಿದ್ದರು. ನಕ್ಸಲ್ ನಾಯಕರಿಗೆ ಬೆಂಗಾವಲಾಗಿ ಮತ್ತಿಬ್ಬರು ನಕ್ಸಲರು ಬಂದೂಕ ಹಿಡಿದು ಸಭೆಗೆ ಬಂದಿದ್ದರು. 150ಕ್ಕೂ ಹೆಚ್ಚು ಮಂದಿ ಸೇರಿದ್ದ ಈ ಗ್ರಾಮ ಸಭೆಯಲ್ಲಿ ನಾಲ್ವರು ನಕ್ಸಲರು ಹೊರತು ಪಡಿಸಿದರೆ, ಉಳಿದವರೆಲ್ಲಾ ಸ್ಥಳೀಯ ಹಳ್ಳಿಗಳ ಆದಿವಾಸಿಗಳಾಗಿದ್ದರು. ಈ ಕುರಿತಂತೆ ಜುಲೈ ಮೊದಲ ವಾರ ಹಿಂದೂ ದಿನಪತ್ರಿಕೆ ಮತ್ತು ಟೈಮ್ಸ್ ಆಫ್ ಇಂಡಿಯ ಪತ್ರಿಕೆಗಳು ಸಮಗ್ರ ತನಿಖಾ ವರದಿಯನ್ನು ಪ್ರಕಟಿಸಿದ ಮೇಲೆ ರಾಜಧಾನಿ ದೆಹಲಿಯಲ್ಲಿ ತೀವ್ರ ಮುಜುಗರಕ್ಕೆ ಒಳಗಾದ ಗೃಹ ಸಚಿವ ಪಿ.ಚಿದಂಬರಂ, ಛತ್ತೀಸ್‌ಘಡ ಸರ್ಕಾರದ ತಪ್ಪು ಮಾಹಿತಿಯಿಂದ ಆ ರೀತಿ ಹೇಳಿಕೆ ನೀಡಬೇಕಾಯಿತೆಂದು ದೇಶದ ಮುಂದೆ ವಿಷಾದ ವ್ಯಕ್ತಪಡಿಸಿದರು. ನಕ್ಸಲರ ಹೋರಾಟವನ್ನು ಕೊನೆಗಾಣಿಸಬೇಕೆಂಬ ಹೊಣೆ ಹೊತ್ತಿರುವ ಕೇಂದ್ರ ಸರ್ಕಾರ ಈ ವಿಷಯದಲ್ಲಿ ಎಷ್ಟೊಂದು ಬೇಜವಾಬ್ದಾರಿಯಿಂದ ವರ್ತಿಸುತ್ತಿದೆ ಎಂಬುದಕ್ಕೆ ಸರ್ಕಾರದ ಈ ಕೆಳಗಿನ ಹೇಳಿಕೆ ಮತ್ತು ಅಂಕಿ ಅಂಶಗಳೇ ಸಾಕ್ಷಿಯಾಗಿವೆ.

ಇದೇ ಸೆಪ್ಟಂಬರ್ 9 ರ ಶನಿವಾರ ಪ್ರಧಾನಿ ಡಾ.ಮನಮೋಹನ್ ಸಿಂಗ್ ದೆಹಲಿಯಲ್ಲಿ ಕರೆದಿದ್ದ ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಸಭೆಯಲ್ಲಿ ದೇಶದ ಬುದ್ಧಿಜೀವಿಗಳು ನಕ್ಸಲ್ ಹೋರಾಟಕ್ಕೆ ಬೆಂಬಲ ಸೂಚಿಸುತ್ತಿರುವುದಕ್ಕೆ ಆತಂಕ ವ್ಯಕ್ತ ಪಡಿಸಿ, ಏಳು ರಾಜ್ಯಗಳಲ್ಲಿ ಕಾಣಿಸಿಕೊಂಡಿರುವ ನಕ್ಸಲ್ ಚಟುವಟಿಕೆ ರಾಷ್ಟ್ರದ ಅಭಿವೃದ್ಧಿಗೆ ಮಾರಕವಾಗಿದೆ ಎಂದಿದ್ದರು. ಆದರೆ, ಕೇಂದ್ರ ಗೃಹ ಸಚಿವಾಲಯ ತನ್ನ 2011-12ರ ವಾರ್ಷಿಕ ವರದಿಯಲ್ಲಿ ದೇಶದ ಒಂಬತ್ತು ರಾಜ್ಯಗಳ 106 ಜಿಲ್ಲೆಗಳು ನಕ್ಸಲ್ ಪೀಡಿತ ಜಿಲ್ಲೆಗಳು ಎಂದು ಪ್ರಕಟಿಸಿದೆ. ಇದೇ ಆಗಸ್ಟ್ 29ರಂದು ರಾಜ್ಯ ಸಭೆಯಲ್ಲಿ ಹೇಳಿಕೆ ನೀಡಿರುವ ಗೃಹ ಇಲಾಖೆಯ ರಾಜ್ಯ ಸಚಿವ ಜಿತೇಂದ್ರ ಸಿಂಗ್, 12 ರಾಜ್ಯಗಳ 84 ಜಿಲ್ಲೆಗಳು ನಕ್ಸಲ್ ಪೀಡಿತ ಜಿಲ್ಲೆಗಳು ಎಂದು ಹೇಳಿದ್ದಾರೆ. ಪ್ರಧಾನಿಯಿಂದ ಹಿಡಿದು ಗೃಹ ಸಚಿವ ಹಾಗೂ ಅವರ ಸಹಾಯಕ ಸಚಿವ ಮತ್ತು ಗೃಹ ಇಲಾಖೆಯವರೆಗೂ ನಕ್ಸಲ್ ಚಟುವಟಿಕೆ ಕುರಿತ ಮಾಹಿತಿಯಲ್ಲಿ ಸಾಮ್ಯತೆ ಇಲ್ಲವೆಂದ ಮೇಲೆ ಇವರ ಹೇಳಿಕೆಗಳಿಗೆ ಯಾವ ಮಹತ್ವವಿದೆ ಯೋಚಿಸಿ?

ನಕಲಿ ಎನ್‌ಕೌಂಟರ್‌‌ನಲ್ಲಿ ಸತ್ತ ಅಮಾಯಕ ಆದಿವಾಸಿಗಳ ಕುಟುಂಬಳಿಗೆ ಈವರೆಗೆ ಕೇಂದ್ರ ಸರ್ಕಾರದಿಂದಾಗಲಿ, ಛತ್ತೀಸ್‌ಘಡ ಸರ್ಕಾರದಿಂದಾಗಲಿ ಯಾವುದೇ ಪರಿಹಾರ ದೊರಕಿಲ್ಲ. ಅರಣ್ಯ ರೋಧನ ಎಂಬ ಮಾತಿಗೆ ಅಥವಾ ಶಬ್ಧಕ್ಕೆ ನಾವು ಶಬ್ಧಕೋಶ ನೋಡಿ ಅರ್ಥ ತಿಳಿಯಬೇಕಾಗಿಲ್ಲ. ಮಧ್ಯ ಮತ್ತು ಪೂರ್ವ ಭಾರತದ ಅರಣ್ಯದ ಒಳ ಹೊಕ್ಕು ಅಲ್ಲಿನ ನಿವಾಸಿಗಳ ನೋವು ಮತ್ತು ಆಕ್ರಂಧನ ಇವುಗಳಿಗೆ ಕಣ್ಣು ಮತ್ತು ಕಿವಿಯಾದರೆ ಸಾಕು ಅದರ ನಿಜವಾದ ಅರ್ಥ ನಮಗೆ ಮನದಟ್ಟಾಗಬಲ್ಲದು.

ಇದು ಕಳೆದ ವರ್ಷ 2011 ರ ಪೆಬ್ರವರಿಯಲ್ಲಿ ನಡೆದ ಘಟನೆ. (ಈ ಅಮಾನವೀಯ ವರದಿ ಹಿಂದೂ ಪತ್ರಿಕೆಯಲ್ಲಿ ಕೂಡ ವರದಿಯಾಗಿತ್ತು.) ಕಳೆದ ವರ್ಷ ನಡೆದ ಐ.ಪಿ.ಎಲ್. ಕ್ರಿಕೆಟ್ ಟೂರ್ನಿಗೆ ಹಿಂದಿ ಸಿನಿಮಾ ನಟ ಶಾರುಖ್‌ಖಾನ್ ಮಾಲಿಕತ್ವದ ಕೊಲ್ಕತ್ತ ನೈಟ್ ರೈಡರ್ಸ್ ತಂಡ ದೆಹಲಿಯ ಗೌತಮ್ ಗಂಭೀರ್ ಎಂಬ ಆಟಗಾರರನ್ನು 13 ಕೋಟಿ ರೂಪಾಯಿಯ ದಾಖಲೆ ಹರಾಜಿನಲ್ಲಿ ಖರೀದಿಸಿತ್ತು. ಮುಂಬೈನ ಪಂಚತಾರಾ ಹೋಟೆಲ್‌‍ನಲ್ಲಿ ಈ ಹರಾಜು ಪ್ರಕ್ರಿಯೆ ನಡೆಯುತ್ತಿದ್ದ ವೇಳೆ ದೂರದ ಛತ್ತೀಸ್‌ಘಡದ ದಂಡಕಾರಣ್ಯದ ನಡುವೆ ಇದ್ದ ಕುಗ್ರಾಮದ ಹಳ್ಳಿಯೊಂದರ ಆದಿವಾಸಿಯೊಬ್ಬನ  ಒಂಬತ್ತು ವರ್ಷದ ಮಗಳೊಬ್ಬಳು ಅಸಹಜ ಸಾವನ್ನಪ್ಪಿದ್ದಳು. ಆದಿನ ಸಾಯಂಕಾಲ ಆದಿವಾಸಿ ದಂಪತಿಗಳು ಮಗಳ ಅಂತ್ಯ ಕ್ರಿಯೆ ನೆರವೇರಿಸಲು ಸಿದ್ಧತೆ ನಡೆಸಿರುವಾಗಲೇ ಅಡ್ಡಿ ಮಾಡಿದ ಪೊಲೀಸರು ಮರಣೋತ್ತರ ಶವ ಪರೀಕ್ಷೆ ಮಾಡಿಸಿ, ನಂತರ ಅಂತ್ಯಕ್ರಿಯೆ ನೆರವೇರಿಸಬೇಕೆಂದು ಆದೇಶವಿತ್ತರು. ಪೊಲೀಸರಿಗೆ ಲಂಚ ಕೊಡಲು ಅಸಮರ್ಥನಾದ ಆ ಮಗ್ಧ ಆದಿವಾಸಿ ಇಡೀ ರಾತ್ರಿ ಶವವನ್ನು ತನ್ನ ಮನೆಯ ವರಾಂಡದಲ್ಲಿ ಇಟ್ಟುಕೊಂಡು, ಬೆಳಗಿನ ಜಾವ ಐದು ಗಂಟೆಗೆ ಎದ್ದು 40 ಕಿಲೋಮೀಟರ್ ದೂರದ ಜಗದಾಲ್‌ಪುರ್ ಆಸ್ಪತ್ರೆಗೆ ತನ್ನ ಸೈಕಲ್‌ನ ಹಿಂಭಾಗಕ್ಕೆ ಕಟ್ಟಿಗೆ ಹೊರೆ ಕಟ್ಟಿದಂತೆ ಕಟ್ಟಿಕೊಂಡು ಸೈಕಲ್ ತುಳಿದ.

ಬೆಳಿಗ್ಗೆ ಹನ್ನೊಂದು ಗಂಟೆಗೆ ಮರೋಣತ್ತರ ಪರೀಕ್ಷೆಗೆ ಶವ ತೆಗೆದುಕೊಂಡ ಆಸ್ಪತ್ರೆ ಸಿಬ್ಬಂದಿ ಸಂಜೆ ಸಂಜೆ ಆರು ಗಂಟೆಗೆ ಆತನಿಗೆ ಶವ ಒಪ್ಪಿಸಿದರು. ಶವ ಪರೀಕ್ಷೆಗಾಗಿ ಕುತ್ತಿಗೆಯಿಂದ ಕಿಬ್ಬೊಟ್ಟೆಯವರೆಗೆ ಆ ಹೆಣ್ಣು ಮಗಳ ಶವವನ್ನು ಸೀಳಿ, ಪರೀಕ್ಷೆ ನಡೆಸಲಾಗಿತ್ತು. ಇದಕ್ಕಾಗಿ ಆ ಬಡ ಆದಿವಾಸಿ ರೈತನ ಬಳಿ ಇದ್ದ ನಲವತ್ತು ರೂಪಾಯಿಯನ್ನು ಆಸ್ಪತ್ರೆ ಸಿಬ್ಬಂದಿ ಕಸಿದುಕೊಂಡಿದ್ದರು. ಆನಂತರ ಸರಿಯಾಗಿ ಹೊಲಿಗೆ ಹಾಕದೆ, ಈಚಲ ಛಾಪೆಯಲ್ಲಿ ಸುತ್ತಿದ ಮಗಳ ಶವವನ್ನು ಅವನಿಗೆ ನೀಡಲಾಯಿತು. ರಕ್ತ ಸೋರುತ್ತಿದ್ದ ತನ್ನ ಕರುಳ ಕುಡಿಯ ಶವವನ್ನು ಮತ್ತೇ ಸೈಕಲ್ಲಿಗೆ ಕಟ್ಟಿಕೊಂಡು ಕತ್ತಲ ರಾತ್ರಿಯಲ್ಲಿ ಜಿಲ್ಲಾ ಕೇಂದ್ರದಿಂದ ತನ್ನ ಹಳ್ಳಿಗೆ ಆ ಮುಗ್ಧ ಅಮಾಯಕ ಸೈಕಲ್ ತುಳಿಯತೊಡಗಿದ. ಮಗಳ ಸಾವಿನ ನೋವಿನಿಂದ ಹೊರಬರಲಾರದ ಸ್ಥಿತಿಯಲ್ಲಿ ಆತ ಇಪ್ಪತ್ತು ನಾಲ್ಕು ಗಂಟೆಗಳ ಕಾಲ ಏನನ್ನೂ ತಿನ್ನದೆ, 80 ಕಿಲೋಮೀಟರ್ ದೂರ ಸೈಕಲ್ ತುಳಿದು ರಾತ್ರಿ ತನ್ನ ಹಳ್ಳಿಗೆ ಬಂದು ಶವದ ಅಂತ್ಯ ಕ್ರಿಯೆ ಮುಗಿಸಿದಾಗ ನಡುರಾತ್ರಿ ಮೀರಿತ್ತು. ಮತ್ತೇ ಮಾರನೇ ದಿನ ಬೆಳಿಗ್ಗೆ ಆತ ಹತ್ತಿರದ ಪೊಲೀಸ್ ಠಾಣೆಗೆ ಹೋಗಿ ಮರಣೋತ್ತರ ಪರೀಕ್ಷೆಯ ವರದಿ ತಲುಪಿಸಬೇಕಾಗಿತ್ತು.

ಪ್ರಿಯ ಓದುಗರೆ, ಒಂದು ಕ್ಷಣ ನಿಮ್ಮ ಅಸ್ತಿತ್ವವನ್ನು ಮರೆತು ಆ ಬಡ ಹೆಣ್ಣು ಮಗಳ ತಂದೆಯಾಗಿ ನಿಮ್ಮನ್ನು ಊಹಿಸಿಕೊಂಡು ಚಿಂತಿಸಿ? ಅನಕ್ಷರಸ್ಥ ಮುಗ್ಧ ಆದಿವಾಸಿಯೊಬ್ಬ ಅನುಭವಿಸಿದ ನೋವಿಗೆ ಶಬ್ಧಗಳಾಗಲಿ, ಅಕ್ಷರವಾಗಲಿ, ಭಾವನೆಗಳಾಗಲಿ ಮೂಡಿ ಬರಲು ಸಾಧ್ಯವೆ? ಇದು ವ್ಯವಸ್ಥೆಯ ಕ್ರೌರ್ಯ ಎಂದು ಅನಿಸುವುದಿಲ್ಲವೆ? ನಮಗೆ ಗೋಚರಿಸದ, ಸಮಾಜದ ಮುಖ್ಯವಾಹಿನಿಯ ಗಮನಕ್ಕೆ ಬಾರದ ಇಂತಹ ಸಾವಿರಾರು ನೋವಿನ ಕಥೆಗಳು ಅರಣ್ಯದಲ್ಲಿ ನೊಂದವರ ನಡುವೆ ಪ್ರತಿಧ್ವನಿಸುತ್ತಿವೆ. ಅಕ್ಷರ ಲೋಕದಿಂದ ವಂಚಿತರಾದವರ ನೋವು ಒಂದು ಬಗೆಯಾದರೆ, ಅಕ್ಷರ ಕಲಿತು ತಮ್ಮ ಹಕ್ಕುಗಳಿಗೆ ಪ್ರತಿಪಾದಿಸಿ ಕತ್ತಲ ಲೋಕದಲ್ಲಿ ಕೊಳೆಯುತ್ತಿರುವ ಆದಿವಾಸಿ ಜನಗಳ ನೋವು ಇನ್ನೊಂದು ಬಗೆಯದು.

2011 ರ ಆಗಸ್ಟ್ ತಿಂಗಳಿನಲ್ಲಿ ಛತ್ತೀಸ್‌ಘಡದ ರಾಯ್‌ಪುರನಲ್ಲಿ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಆದಿವಾಸಿಗಳ ಪರವಾಗಿ ಕಪ್ಪು ಬಾವುಟ ಪ್ರದರ್ಶಿಸಲು ನಿರಾಕರಿಸಿದ ಸೋನಿ ಸೂರಿ ಎಂಬ 35 ವರ್ಷದ ಆದಿವಾಸಿ ಜನಾಂಗದ ಶಿಕ್ಷಕಿ ಹಾಗೂ ಅವಳ ಚಿಕ್ಕಪ್ಪನ ಮಗ ಲಿಂಗರಾಮ್ ಬಸ್ತರ್ ವಲಯದಲ್ಲಿ ನಕ್ಸಲರ ವಿರೋಧವನ್ನು ಕಟ್ಟಿಕೊಳ್ಳಬೇಕಾಯಿತು. ಆದರೂ ಚತ್ತೀಸ್‌ಘಡ ಪೊಲೀಸರಿಗೆ ಇವರ ಮೇಲೆ ನಕ್ಸಲಿಯರ ಬೆಂಬಲಿಗರೆಂಬ ಗುಮಾನಿ. ಈ ಕಾರಣಕ್ಕಾಗಿ ಈ ಇಬ್ಬರೂ ಬಸ್ತರ್ ವಲಯದ ಜಿಲ್ಲಾಧಿಕಾರಿ ಶ್ರೀನಿವಾಸಲು ಎಂಬ ಆಂಧ್ರ ಮೂಲದ ಐ.ಎ.ಎಸ್. ಅಧಿಕಾರಿಯನ್ನು ಭೇಟಿಯಾಗಿ ತಮಗೆ ಮತ್ತು ತಮ್ಮ ಜನಾಂಗಕ್ಕೆ ನಕ್ಸಲ್ ಮಾವೋವಾದಿಗಳು ಮತ್ತು ಪೊಲೀಸರಿಂದ ರಕ್ಷಣೆ ನೀಡಬೇಕೆಂದು ಕೇಳಿಕೊಳ್ಳುತ್ತಾರೆ. ಇದನ್ನು ಸ್ವತಃ ಜಿಲ್ಲಾಧಿಕಾರಿ ಧೃಡಪಡಿಸಿದ್ದಾನೆ. ಮೆಟ್ರಿಕ್‌ವರೆಗೆ ಓದಿ, ವಾಹನ ಚಾಲಕನ ಪರವಾನಿಗೆ ಪಡೆದಿದ್ದ ಲಿಂಗರಾಮ್‌ಗೆ ಪೊಲೀಸರು ತಮ್ಮ ಇಲಾಖೆಯ ಜೀಪ್ ಚಾಲಕನಾಗಿ, ನಕ್ಸಲಿಯರ ಅಡಗುತಾಣಗಳನ್ನು ತೋರಿಸಬೇಕೆಂದು ಒತ್ತಾಯಿಸಿದಾಗ ಆತ ನಕ್ಸಲರ ಭಯದಿಂದ ಕೆಲಸ ನಿರಾಕರಿಸುವುದರ ಜೊತೆಗೆ ದೆಹಲಿಗೆ ಹೋಗಿ ಮಾನವ ಹಕ್ಕುಗಳ ಸ್ವಯಂ ಸೇವಾ ಸಂಘಟನೆಯಲ್ಲಿ ಚಾಲಕನಾಗಿ ಕೆಲಸಕ್ಕೆ ಸೇರಿಕೊಳ್ಳತ್ತಾನೆ. ಇವುಗಳ ನಡುವೆ ಛತ್ತೀಸ್‌ಘಡ ಸೇರಿದಂತೆ ದಂಡಕಾರಣ್ಯದ ಅರಣ್ಯ ಪ್ರದೇಶದಲ್ಲಿ ನಕ್ಸಲ್ ನಿಗ್ರಹ ಪಡೆ ಆದಿವಾಸಿ ಜನಾಂಗದ ಮೇಲೆ ನಡೆಸಿದ ಅತಿಕ್ರಮಣ, ಅತ್ಯಾಚಾರ, ಶೋಷಣೆ ಇವೆಲ್ಲವೂ ಮಾನವ ಹಕ್ಕುಗಳ ಸಂಘಟನೆ ಮೂಲಕ ಹೊರ ಜಗತ್ತಿಗೆ ಬಹಿರಂಗವಾಗುತ್ತಿರುವುದು ನುಂಗಲಾರದ ತುತ್ತಾಗಿತ್ತು. ಇದಕ್ಕೆ ಶಿಕ್ಷಕಿ ಮತ್ತು ಅವಳ ಸಹೋದರರು ಕಾರಣ ಎಂಬ ಗುಮಾನಿ ಛತ್ತೀಸ್‌ಘಡ ಪೊಲೀಸರಿಗೆ ಇತ್ತು. ಇದರಿಂದಾಗಿ ಅಲ್ಲಿನ ಪೊಲೀಸರಿಗೆ ಶಿಕ್ಷಕಿ ಸೋನಿ ಸೂರಿ ಕುಟುಂಬದ ಬಗ್ಗೆ ದ್ವೇಷ ಬೆಳೆಯಲು ಕಾರಣವಾಯಿತು. ಇದೇ ವೇಳೆ ಲಂಡನ್‌ ನಗರದಲ್ಲಿ ವಿಕಿಲಿಕ್ಸ್ ಅಂತರ್ಜಾಲ ಪತ್ರಿಕೆ ಬಿಡುಗಡೆ ಮಾಡಿದ್ದ ಭಾರತದ ಅಮೇರಿಕಾ ರಾಯಭಾರಿ ಕಚೇರಿಯ ಸಂದೇಶಗಳ ಪೈಕಿ, ಎಸ್ಸಾರ್ ಸ್ಟೀಲ್ ಕಂಪನಿ ಅಪಾರ ಪ್ರಮಾಣದಲ್ಲಿ ಮಾವೋವಾದಿ ನಕ್ಸಲರಿಗೆ ಹಣವನ್ನು ನೀಡಿ ಛತ್ತೀಸ್‌ಘಡದಲ್ಲಿ ಗಣಿಕಾರಿಕೆ ನಡೆಸುತ್ತಿದೆ ಎಂಬುದನ್ನು ಬಹಿರಂಗಗೊಳಿಸಿತ್ತು. ಇದನ್ನು ಆಧಾರವಾಗಿಕೊಂಡು ದಂತೆವಾಡದ ಪೊಲೀಸ್ ವರಿಷ್ಠಾಧಿಕಾರಿ ಅಂಕಿತ್‌ಗತ  ಎಂಬಾತ ಪಲ್‌ನಾರ್ ಎಂಬ ಹಳ್ಳಿಯ ಬಳಿ ನಡೆಯುತ್ತಿದ್ದ ವಾರದ ಸಂತೆಯಲ್ಲಿ ಸೋನಿ ಸೂರಿಯನ್ನು ಬಂಧಿಸಿದ.

ಇದಕ್ಕೂ ಎರಡು ತಿಂಗಳ ಮುನ್ನ ಆಕೆಯ ಪತಿಯನ್ನು ನಕ್ಸಲ್ ಬೆಂಬಲಿಗ ಎಂಬ ಆರೋಪದ ಮೇಲೆ ಬಂಧಿಸಲಾಗಿತ್ತು. ಎಸ್ಸಾರ್ ಕಂಪನಿಯಿಂದ ಹಣವನ್ನು ಪಡೆದು ನಕ್ಸಲಿಯರಿಗೆ ಕೊಂಡೊಯ್ಯುತ್ತಿದ್ದಳು ಎಂಬ ಆರೋಪದಡಿ ಈಕೆಯನ್ನು 40 ದಿನಗಳ ಕಾಲ ಅಕ್ರಮ ಬಂಧನದಲ್ಲಿಟ್ಟು ಚಿತ್ರ ಹಿಂಸೆ ನೀಡಲಾಯಿತು. ಇಡೀ ಭಾರತದ ನಾಗರೀಕ ಸಮಾಜ ತಲೆತಗ್ಗಿಸುವಂತಹ ಘಟನೆ ಈಕೆಯ ಬಂಧನದ ಅವಧಿಯಲ್ಲಿ ಜರುಗಿ ಹೋಯಿತು. ನ್ಯಾಯಾಲಯದ ಮುಂದೆ ಹಾಜರು ಪಡಿಸದೆ, ಅಕ್ರಮವಾಗಿ ಬಂಧನದಲ್ಲಿಟ್ಟಿದ್ದ ವೇಳೆ ಈಕೆಯ ಗುಪ್ತಾಂಗಕ್ಕೆ ಕಲ್ಲು ಇಟ್ಟಿಗೆ ಚೂರುಗಳನ್ನು ತುರುಕಿ ಚಿತ್ರ ಹಿಂಸೆ ನೀಡಲಾಯಿತು. ಇದು ಹೊರಜಗತ್ತಿಗೆ ಬಹಿರಂಗವಾಗುವ ವೇಳೆಗೆ ಸೋನು ಸೂರಿಯನ್ನು ಗುಪ್ತವಾಗಿ ಕೊಲ್ಕತ್ತ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತಿತ್ತು. ಈ ವಿಷಯ ಬಹಿರಂಗವಾಗುತ್ತಿದ್ದಂತೆ ಜಗತ್ತಿನ ಶ್ರೇಷ್ಠ ಚಿಂತಕರಲ್ಲಿ ಒಬ್ಬರಾಗಿರುವ ಅಮೇರಿಕಾದ ನೋಮ್ ಚಾಮ್‌ಸ್ಕಿ ಸೇರಿದಂತೆ ಭಾರತದ ಅರುಣಾ ರಾಯ್ ಮತ್ತು ಅರುಂಧತಿ ರಾಯ್, ಸಿನಿಮಾ ನಿರ್ದೇಶಕ ಆನಂದ್‌ ಪಟುವರ್ಧನ್ ಹಾಗೂ ಅಶೋಕ್ ಮೆಂಡರ್ ಮುಂತಾದವರು ಅಂತರಾಷ್ಟ್ರೀಯ ಮಟ್ಟದಲ್ಲಿ ಧ್ವನಿ ಎತ್ತಿದ ಪರಿಣಾಮ ಸುಪ್ರೀಂ ಕೋರ್ಟ್ ಈಕೆಯ ಬಂಧನದ ವಿಷಯವನ್ನು ವಿಚಾರಣೆಗೆ ಎತ್ತಿಕೊಂಡಿತು. ಈ ಸಂದರ್ಭದಲ್ಲಿ ನ್ಯಾಯಾಲಯದ ಮುಂದೆ ಪೊಲೀಸರು ನೀಡಿದ ಹೇಳಿಕೆ ಕೂಡ ಬದಲಾಗಿತ್ತು. ಎಸ್ಸಾರ್ ಕಂಪನಿಯ ದಲ್ಲಾಳಿಯೊಬ್ಬ ನಕ್ಸಲಿಯರಿಗೆ 15 ಲಕ್ಷ ಹಣ ಸಂದಾಯ ಮಾಡುತ್ತಿದ್ದಾಗ ಜೊತೆಯಲ್ಲಿ ಸೋನು ಸೂರಿ ಇದ್ದಳು ಎಂಬುದು ಪೊಲೀಸರ ಹೇಳಿಕೆ. ಇವರ ಹೇಳಿಕೆ ನಿಜವೇ ಆಗಿದ್ದರೆ, ಆ ದಿನ ಸಂತೆಯಲ್ಲಿದ್ದ ಸಾವಿರಾರು ಮಂದಿ ಕೂಡ ಪೊಲೀಸರ ದೃಷ್ಟಿಯಲ್ಲಿ ಅಪರಾಧಿಗಳಾಗಬೇಕು. ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆಸ್ಪತ್ರೆಯಲ್ಲಿ ಸೋನು ಸೂರಿಯ ವೈದ್ಯಕೀಯ ತಪಾಸಣೆ ನಡೆಸಬೇಕೆಂದು ಸರ್ವೋಚ್ಚ ನ್ಯಾಯಾಲಯ ಆದೇಶ ನೀಡಿತು. ದೆಹಲಿಯ ವೈದ್ಯರ ವರದಿ ಕೂಡ ಈಕೆಯ ಗುಪ್ತಾಂಗ ಮತ್ತು ಗರ್ಭಕೋಶದ ಬಳಿ ಕಲ್ಲು ಮತ್ತು ಇಟ್ಟಿಗೆ ಚೂರುಗಳು ಇದ್ದುದನ್ನು ಧೃಡಪಡಿಸಿದೆ. ಈಗ ಸೋನು ಸೂರಿ ಕೊಲ್ಕತ್ತ ಆಸ್ಪತ್ರೆಯಲ್ಲಿ ನ್ಯಾಯಾಂಗ ಬಂಧನದಲ್ಲಿದ್ದುಕೊಂಡು ಚೇತರಿಸಿಕೊಳ್ಳುತ್ತಿದ್ದಾಳೆ. ಈಕೆಯ ಪತಿ ಜೈಲಿನಲ್ಲಿದ್ದಾನೆ. ಈಕೆಯ ತಂದೆಯನ್ನು ಕಳೆದ ವರ್ಷ ಜೂನ್ ತಿಂಗಳಿನಲ್ಲಿ ತಮಗೆ ಬೆಂಬಲಿಸಲಿಲ್ಲ ಎಂಬ ಏಕೈಕ ಕಾರಣಕ್ಕೆ ನಕ್ಸಲಿಯರು ಗುಂಡಿಟ್ಟು ಕೊಂದಿದ್ದರು. ಇವಳ ಐದು ವರ್ಷದ ಮಗು ದಂತೆವಾಡದ ಅರಣ್ಯ ಪ್ರದೇಶದಲ್ಲಿನ ಹಳ್ಳಿಯೊಂದರಲ್ಲಿ ವೃದ್ಧ ಅಜ್ಜಿಯ ಹಾರೈಕೆಯಲ್ಲಿದೆ. ಶಿಕ್ಷಕಿ ಸೋನು ಸೂರಿಗೆ ಅಮಾನುಷ ಚಿತ್ರ ಹಿಂಸೆ ನೀಡಿದ ದಂತೆವಾಡದ ಪೊಲೀಸ್ ಅಧಿಕಾರಿಗೆ ಈ ವರ್ಷ ಕೇಂದ್ರ ಸರ್ಕಾರ ಜನವರಿ 26ರ ಗಣರಾಜ್ಯೋತ್ಸವದ ಸಂದರ್ಭದಲ್ಲಿ ರಾಷ್ಟ್ರಪತಿ ಪದಕವನ್ನು ನೀಡಿದೆ.

ಅಮಾಯಕರ ವಿರುದ್ಧ ವ್ಯವಸ್ಥೆಯ ಕ್ರೌರ್ಯಕ್ಕೆ ಕೊನೆಯೇ ಇಲ್ಲದಂತಹ ಸ್ಥಿತಿಯಲ್ಲಿ ಮಧ್ಯ ಭಾರತದ ಅರಣ್ಯವಾಸಿಗಳು ಬದುಕುತ್ತಿದ್ದಾರೆ. ಇದರ ವಿರುದ್ಧ  ಧ್ವನಿ ಎತ್ತಿದ ವಿದ್ಯಾವಂತರು ನಕ್ಸಲಿಯರ ಬೆಂಬಲಿಗರು ಎಂಬ ಆರೋಪದಡಿ ಜೈಲಿಗೆ ನೂಕಲ್ಪಟ್ಟು ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾರೆ.

ಇಲ್ಲಿನ ದಂಪತಿಗಳ ಚಿತ್ರ ಗಮನಿಸಿ, ಇವರು ಉತ್ತರ ಪ್ರದೇಶದ ಅಲಹಾಬಾದಿನ ವಿದ್ಯಾವಂತ ದಂಪತಿಗಳು. ಸೀಮಾ ಅಜಾದ್ ಹೆಸರಿನ ಈಕೆ ಮನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರೆ, ಅಲಹಾಬಾದ್ ನಗರದಲ್ಲಿ ತನ್ನ ಪತಿ ವಿಶ್ವವಿಜಯ್ ಜೊತೆಯಲ್ಲಿ ಮಾನವ ಹಕ್ಕುಗಳ ಪರವಾಗಿ ಹೋರಾಟ ಮಾಡುತ್ತಿರುವ ಕಾರ್ಯಕರ್ತೆ, ಅಲ್ಲದೆ ದಸ್ತಕ್ ಎಂಬ ಪತ್ರಿಕೆಯ ಸಂಪಾದಕಿ. 2010 ರಲ್ಲಿ ಈಕೆಯ ಮನೆಯಲ್ಲಿ ನಿಷೇಧಿತ ನಕ್ಸಲ್ ಸಾಹಿತ್ಯ ಮತ್ತು ನಲವತ್ತು ಸಾವಿರ ರೂಪಾಯಿಗಳನ್ನು ವಶಪಡಿಸಿಕೊಂಡ ಉತ್ತರ ಪ್ರದೇಶದ ಪೊಲೀಸರು ಈ ದಂಪತಿಗಳನ್ನು ಮಾವೋವಾದಿ ನಕ್ಸಲ್ ಸಂಘಟನೆಯ ಬೆಂಬಲಿಗರು ಎಂಬ ಆರೋಪದಡಿ ಬಂಧಿಸಿದ್ದಾರೆ. ಈ ವರ್ಷ ಏಪ್ರಿಲ್ ತಿಂಗಳಿನಲ್ಲಿ ಅಲಹಾಬಾದ್ ಸ್ಥಳೀಯ ನ್ಯಾಯಾಲಯ ಇವರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಇದೀಗ ಅಲಹಾಬಾದ್ ಹೈಕೋರ್ಟ್‌ನಲ್ಲಿ ಈ ದಂಪತಿಗಳು ಮೇಲ್ಮನವಿ ಸಲ್ಲಿಸಿದ್ದು ವಿಚಾರಣೆ ಮುಂದುವರೆದಿದೆ. ಈಕೆಯ ಮನೆಯಲ್ಲಿ ನಿಷೇಧಿತ ನಕ್ಸಲ್ ಸಾಹಿತ್ಯ ಇತ್ತು ಎನ್ನುವುದಾದರೆ, ಅದು ಪೊಲೀಸರ ದೃಷ್ಟಿಯಲ್ಲಿ ಅಪರಾಧ ಎನ್ನುವುದಾದರೆ, ಸಾವಿರಾರು ಪುಟಗಳಷ್ಟು ಮಾಹಿತಿ ಇಟ್ಟುಕೊಂಡು ಬರೆಯುತ್ತಿರುವ ನಾನು ಮತ್ತು ಈ ಕ್ಷಣದಲ್ಲಿ ಇದನ್ನು ಓದುತ್ತಿರುವ ನೀವೂ ಕೂಡ ಅಪರಾಧಿಗಳು. ಹಿಂಸೆಯನ್ನು ಹತ್ತಿಕ್ಕಲು ಹಿಂಸೆಯ ಹಾದಿ ಪರ್ಯಾಯವಲ್ಲ. ಆದರೆ, ಪೊಲೀಸರು ಈ ಹಾದಿಯನ್ನೇ ಆಯ್ಕೆ ಮಾಡಿಕೊಂಡಿರುವುದು ವರ್ತಮಾನದ ದುರಂತ. ನಮ್ಮ ದಕ್ಷಿಣ ಕನ್ನಡ ಜಿಲ್ಲೆಯ ಪತ್ರಿಕೋಧ್ಯಮದ ವಿದ್ಯಾರ್ಥಿ ವಿಠಲ ಮಲೆಕುಡಿಯನ ಮನೆಯಲ್ಲಿ ಸಿಕ್ಕ ನಕ್ಸಲ್ ಸಾಹಿತ್ಯವೆಂದರೆ, ಭಗತ್ ಸಿಂಗನ ಆತ್ಮಚರಿತ್ರೆ, ಮತ್ತು 200 ಗ್ರಾಂ ಚಹಾಪುಡಿ ಮಾತ್ರ. ಆದರೂ ಆತ ಸೆರೆಮನೆಗೆ ದೂಡಲ್ಪಟ್ಟ.

ಈಗಲೂ ನಕ್ಸಲರು ಹಿಂಸೆಯನ್ನು ಮುಂದುವರೆಸುತ್ತಿರುವುದಕ್ಕೆ (ವಿಶೇಷವಾಗಿ ಗಿರಿಜನರಿರುವ ಪ್ರದೇಶಗಳಲ್ಲಿ) ಮತ್ತು ಅದಕ್ಕೆ ಈ ವ್ಯವಸ್ಥೆ ಮತ್ತು ಪೋಲಿಸರ ಅಮಾನುಷ ದೌರ್ಜನ್ಯವೂ ಒಂದು ಪ್ರಮುಖ ಕಾರಣವಾಗಿ ಹೇಗೆ ಪೂರಕವಾಗಿದೆ ಎಂಬ ಪ್ರಶ್ನೆಗಳಿಗೆ ಈ ಮೇಲಿನ ಘಟನೆಗಳು ನಮಗೆ ಕೆಲವೊಂದು ಉತ್ತರಗಳನ್ನು ಕೊಡಬಲ್ಲವು. ಹಾಗೇಯೇ, ಈ ಸಮಸ್ಯೆಗೆ ಒಂದಷ್ಟು ಪರಿಹಾರದ ದಾರಿಗಳನ್ನೂ.

(ಮುಂದುವರೆಯುವುದು)