ಖಡ್ಗವಾಗದ ಕಥೆಗಳು, ಜನರ ನೋವಿಗೆ ಮಿಡಿಯುವ ಪ್ರಾಣಮಿತ್ರರು


-ಬಿ. ಶ್ರೀಪಾದ್ ಭಟ್


2005 ರಲ್ಲಿ ಪ್ರಕಟವಾದ ಲೇಖಕಿ ಸುಮಂಗಲಾರವರ ‘ಜುಮುರು ಮಳೆ’, 2008 ರಲ್ಲಿ ಪ್ರಕಟವಾದ ಡಾ.ವಿನಯಾರವರ ‘ಊರ ಒಳಗಣ ಬಯಲು’ ಮತ್ತು ಎಲ್.ಸಿ. ಸುಮಿತ್ರಾರವರ ‘ಗುಬ್ಬಿ ಹಳ್ಳದ ಸಾಕ್ಷಿಯಲ್ಲಿ’ ,  2009 ರಲ್ಲಿ ಪ್ರಕಟವಾದ ಸುಮಂಗಲಾರವರ ‘ಕಾಲಿಟ್ಟಲ್ಲಿ ಕಾಲುದಾರಿ’, ಮತ್ತು 2011 ರಲ್ಲಿ ಪ್ರಕಟವಾದ ಗೀತಾ ವಸಂತರವರ ‘ಚೌಕಟ್ಟಿನಾಚೆಯವರು’ ಕಥಾ ಸಂಕಲನಗಳನ್ನು ಮತ್ತೊಮ್ಮೆ ಅಂದರೆ 2012 ರಲ್ಲಿ ಮರು ಓದಿದಾಗ ಮೊದಲ ಓದಿನಲ್ಲಿ ದಕ್ಕಿದ ಪ್ರಾಮಾಣಿಕ ಸಂವೇದನೆಗಳು, ಅಂತಕರಣವನ್ನು ತಟ್ಟುವ ಆಪ್ತ ಶೈಲಿ, ಕಥೆಗಳನ್ನು ಯಶಸ್ವಿಯಾಗಿ ಕಟ್ಟುವ ಕಲೆಗಾರಿಕೆ ಮತ್ತು ಬಲು ಮುಖ್ಯವಾಗಿ ಸ್ತ್ರೀ ಸಂವೇದನೆಯ ಸೂಕ್ಷ್ಮತೆಗಳನ್ನು ಅಬ್ಬರದ ಭಾಷೆಯನ್ನು ಬಳಸದೆ ತಣ್ಣಗಿನ ಪಿಸುಮಾತಿನಲ್ಲಿ ಮನಸ್ಸಿಗೆ ನಾಟುವಂತೆ ಬರೆದದ್ದು ಇಂದಿಗೂ ದಟ್ಟವಾಗಿ ನಮ್ಮನ್ನು ತಟ್ಟುತ್ತವೆ.

ಇದು ಈ ಲೇಖಕಿಯರ ಯಶಸ್ಸು. ನಮ್ಮ ಆಧುನಿಕ ಕನ್ನಡ ಸಾಹಿತ್ಯದಲ್ಲಿ ಮೇಲಿನ ಲೇಖಕಿಯರು ಸಮಕಾಲೀನ ಕಥೆಗಾರ್ತಿಯರಾಗಿ ಬಹಳ ಮುಖ್ಯವಾಗುತ್ತಾರೆ. ಈ ಕಥೆಗಳ ಪ್ರಖರತೆ ಅದರ ಮಾನವೀಯ ಗುಣಗಳಲ್ಲಿದೆ. ಸಮಾಜದ ಎಲ್ಲಾ ಬಗೆಯ ಸಂಕೋಲೆಗಳನ್ನು ಕಡಿದು ಹಾಕುವ ಪ್ರತಿರೋಧದ ಶಕ್ತಿಯನ್ನು ತನ್ನ ಒಡಲೊಳಗಿಂದಲೇ ಪಡೆದುಕೊಳ್ಳುವುದು ಇಲ್ಲಿನ ಕಥೆಗಳ ಅನನ್ಯತೆ. ಯಾವುದೇ ರೀತಿಯ ಶಾಸ್ತ್ರೀಯ ಬದ್ಧವಾದ ಸಿದ್ಧಾಂತವಾದಿಗಳಲ್ಲದ ಈ ಲೇಖಕಿಯರು ಕನ್ನಡ ಕಥಾ ಸಾಹಿತ್ಯಕ್ಕೆ ತಂದುಕೊಟ್ಟ ಮಾನವೀಯ ಸಂಬಂಧಗಳ ಅನುಭವ ನಮ್ಮನ್ನು ಬಿಟ್ಟೂ ಬಿಡದೆ ಕಾಡುತ್ತವೆ. ವಿನಯಾರವರ ‘ಒಂದು ಖಾಸಗೀ ಪತ್ರದ’ ಕಥೆಯಲ್ಲಿ ನಾಯಕಿ ಹೇಳುವ ‘ಕೇಳು ಮಾರಾಯ ಹೆಣ್ಮಕ್ಕಳಿಗೆ ಬೇರೇನೆ ಲೋಕ ಕಾಣ್ತದೆ’ ಎಂಬ ಮಾತು ಮೇಲಿನ ಎಲ್ಲಾ ಲೇಖಕಿಯರ ಕಥೆಗಳ ವೈಚಾರಿಕ ಪರಿಭಾಷೆ ಮತ್ತು ಸಮಾಜದ ಎಲ್ಲಾ ಬಗೆಯ ಸನಾತನವಾದವನ್ನು, ಮೌಢ್ಯವನ್ನು, ಶೋಷಣೆಯನ್ನು ಧಿಕ್ಕರಿಸುವ ತಣ್ಣನೆಯ ಖಾಸಗೀ ಶೈಲಿ. ಇದು ವ್ಯವಸ್ಥೆಯೊಂದಿಗೆ ಮುಖಾಮುಖಿಯಾಗುವ ಸೃಜಶೀಲ ನಡೆ.

ಇಲ್ಲಿ ವಿನಯಾರವರ “ಊರ ಒಳಗಣ ಬಯಲು” ಕಥೆಯಲ್ಲಿ ಒಂದು ಅಂತರ್ಜಾತೀಯ ವಿವಾಹದ ಸಣ್ಣ ಎಳೆಯನ್ನು ಬಳಸಿಕೊಂಡು ಕೋಮು ಗಲಭೆಯ ಕರಾಳತೆಯನ್ನು ತೋರಿಸುತ್ತಾರೆ. ಬದುಕಿನ ಪ್ರೀತಿಯ ಅವಶ್ಯಕತೆಯನ್ನು ದಟ್ಟವಾಗಿ ಕಟ್ಟುತ್ತಾರೆ. ಮಾನವೀಯ ಸಂಬಂಧಗಳ ದಟ್ಟತೆಯನ್ನು ಇವರ ಮತ್ತೊಂದು ಕಥೆ ‘ಕಡಿ ತನಕಾ ಕಾಯೋ ಅಭಿಮಾನ’ ಕಥೆಯಲ್ಲಿ ಅನುಭವಕ್ಕೆ ಬರುತ್ತದೆ. ಮುನ್ನುಡಿಯಲ್ಲಿ ಲೇಖಕಿ ನೇಮಿಚಂದ್ರ ಹೇಳುವಂತೆ ವಿನಯಾ ಒಂದು ಬಗೆಯ ನಿರುದ್ವೇಗದ ಮತ್ತು ನಿರಾಯಾಸದ ಶೈಲಿಯಲ್ಲಿ ಕತೆಯನ್ನು ಹೆಣೆಯುತ್ತಾರೆ, ನುರಿತ ಬೆರಳುಗಳಲ್ಲಿ ಕಸೂತಿ ಹಾಕಿದಂತೆ.

ಲೇಖಕಿ ಸುಮಂಗಲಾರವರ “ಜುಮುರು ಮಳೆ” ಕಥಾಸಂಕಲನಕ್ಕೆ ಲೇಖಕ ಜಿ.ಎಸ್.ಸದಾಶಿವ ಅವರು ಮುನ್ನುಡಿಯಲ್ಲಿ, ’ವಿಷಾದ ಇಲ್ಲಿನ ಕಥೆಗಳ ಸ್ಥಾಯೀ ಭಾವ. ಈ ಕಥಾ ಸಂಕಲನದ ಕಥೆಗಳೆಲ್ಲವೂ ಪ್ರಬುದ್ಧ ಕತೆಗಾರ್ತಿಯೊಬ್ಬಳು ರೂಪುಗೊಳ್ಳುತ್ತಿದ್ದಾಳೆ ಎಂಬುದನ್ನು ಹೇಳುತ್ತವೆ. ತನಗೆ ದಕ್ಕುವ ಅನುಭವ ದ್ರವ್ಯವನ್ನು ಕಥೆಯಾಗಿಸುವ ಕಲೆಯನ್ನು ಸುಮಂಗಲ ಸಾಧಿಸಿಕೊಂಡಿದ್ದಾರೆಂಬುದು ಸಾಮಾನ್ಯ ಸಂಗತಿಯೇನೂ ಅಲ್ಲ,’ ಎಂದು ಬರೆಯುತ್ತಾರೆ. ಈ ಕಥಾ ಸಂಕಲನದ ‘ಚೌಕಟ್ಟಿನಿಂದ ಹೊರಬಂದ ಚಿತ್ರ’ , ‘ಆಲಿಕಲ್ಲು’ (ಇದು ನನ್ನ ಫೇವರಿಟ್), ‘ಎದೆಯೊಲೊಂದು ಬಳೇ ಚೂರು’, ‘ಫಾತೀಮಾಳಿಗೆ ಮಳೆಯೆಮದರೆ ಇಷ್ಟ’ ತರಹದ ಕಥೆಗಳು ಮೇಲಿನ ಮಾತುಗಳಿಗೆ ಸ್ಪಷ್ಟ ಉದಾಹರಣೆಗಳು. ಹಾಗೆಯೇ ಇವರ ಮತ್ತೊಂದು ಕಥಾ ಸಂಕಲನ ‘ಕಾಳಿಟ್ಟಲ್ಲಿ ಕಾಲುದಾರಿ’ಯ ಮುತ್ತಿನ ಬುಗುಡಿ, ನಮಸ್ತೇ ಭಾರತ್ ಗ್ಯಾಸ್ ಕಥೆಗಳು ಕೂಡ ನಾವೇ ಬರೆದ ಕತೆಗಳೇನೋ ಎನ್ನುವಷ್ಟರ ಮಟ್ಟಿಗೆ ನಮಗೆ ಆಪ್ತವಾಗಿಬಿಡುವ ಕತೆಗಳು.

ಲೇಖಕಿ ಎಲ್.ಸಿ. ಸುಮಿತ್ರಾರವರ ಕಥಾಸಂಕಲನ ಗುಬ್ಬಿ ಹಳ್ಳದ ಸಾಕ್ಷಿಯಲಿಗೆ ಮುನ್ನುಡಿ ಬರೆದಿರುವ ವಿಮರ್ಶಕ ಟಿ.ಪಿ.ಅಶೋಕ, ’ಮಲೆನಾಡಿನ ಪರಿಸರದಲ್ಲಿ ಆಳವಾಗಿ ಬೇರುಬಿಟ್ಟ ಲೇಖಕಿ ಸುಮಿತ್ರಾ. ಮಲೆನಾಡು ಸುಮಿತ್ರಾ ಅವರಿಗೆ ಜನ್ಮಭೂಮಿ ಮತ್ತು ಕರ್ಮಭೂಮಿ ಎರಡೂ ಹೌದು. ತಾವು ಹುಟ್ಟಿ ಬೆಳೆದ, ಸದ್ಯ ನೆಲೆಸಿರುವ ಮಲೆನಾಡು ಹೇಗೆ ಬದಲಾಗುತ್ತಿದೆ ಎಂಬ ಎಚ್ಚರಿಕೆಯೂ ಇದೆ. ತನ್ನ ಪರಂಪರೆಯೊಂದಿಗೂ, ಈಗಿನ ಪರಿಸರದೊಂದಿಗೂ ಏಕಕಾಲಕ್ಕೆ ಸಂಭಾಷಿಸುವ ಗುಣ ಇಲ್ಲಿನ ಬರಹಗಳಿಗೆ ಸಹಜವಾಗಿ ಪ್ರಾಪ್ತವಾಗಿದೆ,’ ಎಂದು ಬರೆಯುತ್ತಾರೆ.  ಈ ಮಾತುಗಳಿಗೆ ಇಲ್ಲಿನ ಶೀರ್ಷಿಕೆ ಕಥೆಯಾದ ‘ಗುಬ್ಬಿ ಹಳ್ಳದ ಸಾಕ್ಷಿಯಲ್ಲಿ’ ಅತ್ಯುತ್ತಮ ಉದಾಹರಣೆ.

ಇಲ್ಲಿ ನಗರದಲ್ಲಿ ಉನ್ನತ ವಿದ್ಯಾಭ್ಯಾಸ ಮಾಡಿ ಮರಳಿ ತನ್ನ ಹಳ್ಳಿಗೆ ಬಂದು ವ್ಯವಸಾಯದಲ್ಲಿ ನಿರತನಾಗುವ ನಿಸರ್ಗ ಪಟೇಲ್‌ನ ಪ್ರಜ್ಞೆ ಮತ್ತು ಪರಿಸರ ಒಂದು ರೀತಿಯಲ್ಲಿ ಪರಸ್ಪರ ತಳುಕು ಹಾಕಿಕೊಂಡಿರುವಂತಹವು. ಇದರ ವಿವರಣೆಗೆ ಹೋಗುವುದಾದರೆ ನಿಮ್ಮೊಡನಿದ್ದೂ ನಿಮ್ಮಂಗಿಲ್ಲ ಎನ್ನುವ ಸ್ಥಿತಿ ಈ ನಿಸರ್ಗ ಪಟೇಲನದು. ಅಂದರೆ ಅವನ ಆಧುನಿಕ ಪ್ರಜ್ಞೆ ಅವನ ಕಾಡಿನ ಪರಿಸರದೊಂದಿಗೆ ಒಳಗೊಳ್ಳುವುದು ಪರಕೀಯ ನೆಲೆಯಲ್ಲಿ. ಇವನೆಂದೂ ತನ್ನ ಊರ ಉಸಾಬರಿಗೆ ಹೋಗನು. ಆದರೆ ಮಲೆನಾಡಿನ ಇಂದಿನ ಪಲ್ಲಟಗಳು ಇವನ ತಲ್ಲಣಗಳು. ಆದರೆ ಇದನ್ನು ಅವನ್ನು ವ್ಯಕ್ತ ಪಡಿಸುವುದು ನಿನ್ನೆ ಮೊನ್ನೆ ಬಂದ ನಕ್ಸಲ್ ನಾಯಕರು ತೋಟದ ಕೆಲಸಗಾರರಿಗೆ ಅಪ್ತವಾದಷ್ಟು ನಾವು ಆಗಲಾರೆವು ಎಂದು ಉದ್ಗರಿಸುವುದರ ಮೂಲಕ. ಇಡೀ ಕಥೆ ನಕ್ಸಲೈಟರ ಚಟುವಟಿಕೆಗಳನ್ನು ಅತ್ಯಂತ ಸೂಕ್ಷ್ಮವಾಗಿ ದಾಖಲಿಸಿರುವ ರೀತಿ ಅದ್ಭುತವಾದದ್ದು. ಇಲ್ಲಿ ಟಿ.ಪಿ.ಅಶೋಕ ಹೇಳುವಂತೆ ‘ನಕ್ಸಲೈಟರ ಪ್ರವೇಶವು ಸದ್ಯದ ಮಲೆನಾಡಿನ ಬಡವರ ಬವಣೆ, ಅವರ ಅತೃಪ್ತಿ, ಸಿಡಿದು ಸ್ಪೋಟಗೊಳ್ಳುವ ಕಾಲ ಸಮೀಪಿಸುತ್ತಿರುವುದರ ಕುರುಹಾಗಿದೆ,’ ಎಂದಷ್ಟೇ ಹೇಳುತ್ತದೆ. ‘ಗುಬ್ಬೀ ಹಳ್ಳದ ಸಾಕ್ಷಿ” ಕನ್ನಡದ ಅತ್ಯುತ್ತಮ ಕಥೆಗಳಲ್ಲೊಂದು.

ಹಾಗೆಯೇ ‘ಕಲ್ಲಿನ ಕೋಳಿ’ ಕಥೆಯೂ ಸಹ ಒಂದು ಕುಟುಂಬವನ್ನು ಬಳಸಿಕೊಂಡು ಇಡೀ ಮಲೆನಾಡಿನ ದೈನಂದಿನ ಜೀವನವನ್ನು, ಅಲ್ಲಿನ ಬುದುಕಿನ ಏರುಪೇರನ್ನು, ಈ ಏರುಪೇರುಗಳು ಅವರು ನಡೆಸುವ ವ್ಯವಸಾಯದ ಬೆಳೆಗಳೊಂದಿಗೆ ತಳುಕು ಹಾಕಿಕೊಂಡಿರುವುದನ್ನು ಅದ್ಭುತವಾಗಿ ಪ್ರತಿಮಾತ್ಮಕವಾಗಿ ಕಟ್ಟುತ್ತಾರೆ.

ಲೇಖಕಿ ಗೀತಾ ವಸಂತ ಅವರ ಕಥಾ ಸಂಕಲನ ಚೌಕಟ್ಟಿನಾಚೆಯವರು ಒಂಬತ್ತು ಕಥೆಗಳನ್ನು ಒಳಗೊಂಡಿದೆ. ಇಲ್ಲಿನ ಶೀರ್ಷಿಕೆ ಕತೆಯಾದ ‘ಚೌಕಟ್ಟಿನಾಚೆಯವರು’ ಕತೆಯಲ್ಲಿ ಲೇಖಕಿ ಕೇಳುವ ‘ಪ್ರೀತಿಯೆಂದರೇನು ಹಾಗಾದರೆ? ಮಾಲ್ತಕ್ಕ ಪಾಪಣ್ಣಿಗೆ ಮೊಲೆ ಕೊಟ್ಟಿದ್ದೇ? ದೊಡ್ಡಮ್ಮ ದೊಡ್ಡಪ್ಪನಿಗೆ ಗಟ್ಟಿಸಾರು ಬಡಿಸಿದ್ದೇ? ಶ್ರೀಧರ ಭಾವ ಪಾಪಣ್ಣಿಗೆ ಎರಡೆಳೆ ಚಿನ್ನದಸರ ತಂದು ಹಾಕಿ ಫೋಟೋ ತೆಗೆದಿದ್ದೆ ? ದುರ್ಗಿ ಪಾಪಣ್ಣಿಯ ಕೈ ಒತ್ತಿಕೊಂಡು ಕಣ್ಮುಚ್ಚಿಕೊಂಡಿದ್ದೇ?’ ಮುಂತಾಗಿ ಕೇಳುವ ಪ್ರಶ್ನೆಗಳೇ ಇಡೀ ಕತೆಯು ಓದುಗನಲ್ಲಿ ಉಂಟು ಮಾಡುವ ತಳಮಳಗಳಿಗೆ ಸಾಕ್ಷಿಯಾಗಿ ಮೂಡಿ ಬರುತ್ತವೆ. ಇಲ್ಲಿ ಒಂಥರಾ ವಿಚಿತ್ರ ಹೆಂಗಸಾದ ದುರ್ಗಿಯು ಕತೆಯಲ್ಲಿ ಹೇಳುವಂತೆ ಹತ್ತಿರವಿರುವಾಗ ತುಂಬಾ ನಿಚ್ಚಳವಾಗಿ ಕಾಣುವ ಆಕೆ ಗುಂಪಿನಲ್ಲಿರುವಾಗ ಮುಸುಕು ಮುಸುಕಾಗಿ ಬೇರೆಯವಳೇ ಆಗಿ ಕಾಣುತ್ತಾಳೆ. ಇಡೀ ಕಥೆ ಈ ಧೀಮಂತ ಹೆಣ್ಣು ದುರ್ಗಿಯ ಆಶಯವನ್ನು ಸಶಕ್ತವಾಗಿ ಮಂಡಿಸುತ್ತದೆ. ಹಾಗೆಯೇ ಮತ್ತೊಂದು ಕತೆಯಾದ ’ಹಸಿರು ರೇಷ್ಮೆ ಸೀರ” ಇಲ್ಲಿನ ಅತ್ಯಂತ ಯಶಸ್ವೀ ಕತೆ. ಇಲ್ಲಿನ ತುಂಗ್ ಚಿಕ್ಕೀ ಕನ್ನಡದ ಕಥಾಲೋಕದ ಅದ್ಭುತ ಪಾತ್ರಗಳಲ್ಲೊಂದು.

ಒಟ್ಟಾರೆ ಮೇಲಿನ ಲೇಖಕಿಯರ ಬಂಡಾಯ ನಿಜದ ಅಕ್ಕನ ಬಂಡಾಯ. ಕೆಳಗೆ ಬಿದ್ದಷ್ಟೂ ನೆಲಕ್ಕೆ ಕೈಯೂರಿ ಮೇಲೇಳುವ ಬಂಡಾಯ. ಇಲ್ಲಿನ ಕತೆಗಳು ಖಡ್ಗವಾಗಲೊಲ್ಲದ ಆದರೆ ಜನರ ನೋವಿಗೆ ಮಾತ್ರ ಮಿಡಿಯುವ ಪ್ರಾಣಮಿತ್ರರು. ಈ ಲೇಖಕಿಯರು ಜನಸಾಮಾನ್ಯರಲ್ಲಿ ಕಂಡುಕೊಳ್ಳುವ ವಿಶಿಷ್ಟ ಗುಣಗಳು ಇವರ ಆಳವಾದ ಒಳನೋಟಗಳಿಗೆ ಸಾಕ್ಷಿ. ಜೀವನವನ್ನು ಪ್ರಬುದ್ಧತೆಯಿಂದ ಅರಿತುಕೊಂಡ ಈ ಲೇಖಕಿಯರು ಅದರ ಕರಾಳತೆಯನ್ನು, ವೈವಿಧ್ಯತೆಯನ್ನು, ನಿಗೂಢತೆಯನ್ನು, ಜೀವಂತಿಕೆಯನ್ನು ಕತೆಗಳಾಗಿ ಸೃಷ್ಟಿಸಿದ ರೀತಿ ಮಾತ್ರ ಬೆರಗುಗೊಳಿಸುವಂತದ್ದು. ಹೃದಯಂಗಮವಾದದ್ದು.

ಪಿ.ಲಂಕೇಶ್‌ರವರು ಹಿಂದೊಮ್ಮೆ ಲೇಖಕಿ ವೈದೇಹಿಯವರ ಕುರಿತಾಗಿ ಬರೆದಂತೆ ವಿನಯಾ, ಸುಮಂಗಲಾ, ಎಲ್.ಸಿ.ಸುಮಿತ್ರ, ಗೀತಾ ವಸಂತ, ನೇಮಿಚಂದ್ರರಂತಹ ಲೇಖಕಿಯವರ ಸಾಹಿತ್ಯವೂ ಸಹ ‘ಈಕೆಯ ಕ್ರಿಯಾಶೀಲ ಲೇಖನಿ’.

ನಮ್ಮ ಪ್ರತಿಭಾವಂತ ವಿಮರ್ಶಕರು ಆಧುನಿಕ ಕನ್ನಡ ಸಾಹಿತ್ಯದ ಪ್ರಮುಖ ಲೇಖಕಿಯರನ್ನು ಚರ್ಚಿಸುವ ಸಂದರ್ಭದಲ್ಲಿ ಕೊಡಗಿನ ಗೌರಮ್ಮರವರಿಂದ ಶುರು ಮಾಡಿ ತ್ರಿವೇಣಿ, ಅನುಪಮಾ ನಿರಂಜನ, ವೀಣಾ ಶಾಂತೇಶ್ವರವರ ಮೂಲಕ ಪ್ರತಿಭಾ ನಂದಕುಮಾರ, ವೈದೇಹಿಯವರವರೆಗೆ ಬಂದು ನಿಶ್ಚಲರಾಗಿ ನಿಂತು ಬಿಡುವ ಪರಿ ನಿಜಕ್ಕೂ ತಮಾಷೆಯಾಗಿದೆ. ಇವರಿಗೆ ಮೇಲಿನ ಲೇಖಕಿಯರ ಕ್ರಿಯಾಶೀಲ ಲೇಖನಿ ಕಣ್ಣಿಗೆ ಕಾಣದಂತಾಗಿದ್ದಕ್ಕೆ ಅವರ ಅಪ್ರಾಮಾಣಿಕತೆಯೇ ಕಾರಣವಷ್ಟೆ. ಅದರ ಹೊರತಾಗಿ ಬೇರೇನಿದೆ?

Leave a Reply

Your email address will not be published. Required fields are marked *