Daily Archives: September 24, 2012

ಹಕ್ಕುಚ್ಯುತಿ, ವಸ್ತುನಿಷ್ಠ ಪತ್ರಿಕೋದ್ಯಮ, ಮಾಧ್ಯಮ ಕಾರ್ಯವೈಖರಿ…

– ಜಿ. ಮಹಂತೇಶ್

ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳ ಕಾರ್ಯವೈಖರಿ ಬಗ್ಗೆ ಸಾಕಷ್ಟು ಚರ್ಚೆಗಳಾಗುತ್ತಿವೆ. ಕೆಲ ಮಾಧ್ಯಮಗಳು ನಿಷ್ಪಕ್ಷಪಾತವಾಗಿ ವರದಿ ಪ್ರಕಟಿಸುತ್ತಿರುವುದರಿಂದ ಜನಪ್ರತಿನಿಧಿಗಳು, ಅದರಲ್ಲೂ ಚುನಾಯಿತ ಜನಪ್ರತಿನಿಧಿಗಳ ವಲಯದಲ್ಲಿ ಕೆಲ ಮಾಧ್ಯಮಗಳ ನಿಷ್ಪಕ್ಷಪಾತ ಮತ್ತು ವಸ್ತುನಿಷ್ಠ ವರದಿ ಕಂಡು ಕಂಗಾಲಾಗುತ್ತಿದ್ದಾರೆ.

ಹಾಗೇ ನೋಡಿದರೆ, ಮಾಧ್ಯಮಗಳು ಮತ್ತು ಮಾಧ್ಯಮ ಪ್ರತಿನಿಧಿಗಳು (ವರದಿಗಾರರು, ಸಂಪಾದಕರು ಸೇರಿ) ಶಾಸಕ, ಮಂತ್ರಿಮಹೋದಯರ ಪರವಾಗಿಯೋ ಇಲ್ಲವೇ ಸ್ಟೆನೋಗ್ರಾಫರ್‌ಗಳ ರೀತಿಯೋ ಕಾರ್ಯನಿರ್ವಹಿಸಿದ್ದೇ ಹೆಚ್ಚು. ಕೆಲ ಮಾಧ್ಯಮ ಪ್ರತಿನಿಧಿಗಳಂತೂ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿ, ಉಪ್ಪಿಟ್ಟು-ಕೇಸರಿಬಾತ್ ಸವಿದಿದ್ದೇ ಹೆಚ್ಚು. ಇದಕ್ಕೆ ಜೊತೆಯಾಗಿ ಒಂದಷ್ಟು ಕವರ್‌ಗಳನ್ನು ಪ್ರತಿಫಲವಾಗಿ ಸ್ವೀಕರಿಸಿರುವ ಉದಾಹರಣೆಗಳು ಸಾಕಷ್ಟಿವೆ. ಅದಕ್ಕೆ ಪ್ರತಿಯಾಗಿ, ಮಂತ್ರಿ, ಶಾಸಕರಿಗೆ ಒಂದಷ್ಟು ಸಲಹೆ ನೀಡಿ ಕೃತಾರ್ಥರಾಗಿರುವವರಿಗೇನೂ ಕೊರತೆ ಇಲ್ಲ. ಇದು, ಎಲ್ಲ ಮಾಧ್ಯಮ ಪ್ರತಿನಿಧಿಗಳಿಗೂ ಅನ್ವಯಿಸುವುದಿಲ್ಲ ಎಂಬುದನ್ನೂ ಇಲ್ಲಿ ಗಮನಿಸತಕ್ಕದ್ದು.

ಬಹುತೇಕ ಮಾಧ್ಯಮ ಪ್ರತಿನಿಧಿಗಳು, ತಮ್ಮ ತಮ್ಮ ಕುಲಬಾಂಧವ ರಾಜಕಾರಣಿಗಳ ಪರವಾಗಿ ವರದಿ ಮಾಡುತ್ತಿದ್ದಾರೆ. ವಿಧಾನಸೌಧದ ಕಾರಿಡಾರ್ನಲ್ಲಿ ಇದರ ಸಾಕ್ಷಾತ್ ದರ್ಶನ ಮಾಡಿಕೊಳ್ಳಬಹುದು. ಜಾತಿಗಳ ವರ್ಗೀಕರಣದಂತೆಯೇ ಮಾಧ್ಯಮ ಪ್ರತಿನಿಧಿಗಳೂ ವರ್ಗೀಕರಣ ಆಗಿರುವುದೂ ಸುಳ್ಳಲ್ಲ. ಒಕ್ಕಲಿಗ ಪತ್ರಕರ್ತರು, ಲಿಂಗಾಯತ ಪತ್ರಕರ್ತರು, ಕುರುಬ ಪತ್ರಕರ್ತರು, ಬ್ರಾಹ್ಮಣ ಪತ್ರಕರ್ತರು (ಇವರು ಬಹಿರಂಗವಾಗಿ ಹೀಗೆಂದು ಗುರುತಿಸಿಕೊಳ್ಳುವುದಿಲ್ಲ), ಪರಿಶಿಷ್ಟ ಜಾತಿ, ಪ.ಪಂಗಡ ಪತ್ರಕರ್ತರು, ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿರೋ ಪತ್ರಕರ್ತರು,.. ಹೀಗೆ ವಿವಿಧ ರೀತಿಯಲ್ಲಿ ವರ್ಗೀಕರಣ ಮಾಡಿಕೊಂಡಿರುವುದೇನೋ ಗುಟ್ಟಾಗಿ ಉಳಿದಿಲ್ಲ. ಇದರ ಮಧ್ಯೆಯೇ ಜಾತಿ, ಮತಗಳ ಚೌಕಟ್ಟಿನಾಚೆ ಸಿದ್ಧಾಂತಗಳ ಆಧರಿಸಿ ಒಂದಷ್ಟು ಪತ್ರಕರ್ತರ ಗುಂಪುಗಳಿರುವುದೂ ನಿಜ (ಎಡಪಂಥೀಯ, ಬಲಪಂಥೀಯ, ಇತರೆ).

ಇಂತಹ ಹೊತ್ತಿನಲ್ಲೇ ಮಾಧ್ಯಮಗಳು ಯಾರ ಕಾಳಜಿ ವಹಿಸಬೇಕು, ಯಾರ ಪರ ನಿಲ್ಲಬೇಕು, ಹೇಗೆ ಕಾರ್ಯ ನಿರ್ವಹಿಸಬೇಕು ಎಂಬ ಬಗ್ಗೆ ಚರ್ಚೆ ನಡೆಸುವುದು ಸೂಕ್ತ ಆಗಬಹುದೇನೋ. ಮಾಧ್ಯಮಗಳು ನಿಷ್ಪಕ್ಷಪಾತವಾಗಿರಬೇಕು ಎಂಬ ಅಭಿಪ್ರಾಯದ ಬಗ್ಗೆಯೇ ಸಾಕಷ್ಟು ಆಕ್ಷೇಪಗಳಿವೆ. ಇಂದಿಗೂ ವಸ್ತುನಿಷ್ಠರಾಗಿಯೇ ಉಳಿದುಕೊಂಡಿರುವ ಹಿರಿಯ ಪತ್ರಕರ್ತ ಟಿ.ಕೆ. ತ್ಯಾಗರಾಜ್ ಅವರು ಹೇಳಿದ್ದ ಮಾತೊಂದು ಇಲ್ಲಿ ಹೇಳಬೇಕಿನಿಸಿದೆ: ‘ಮಾಧ್ಯಮಗಳು ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸಬಾರದು, ಬದಲಿಗೆ ಪಕ್ಷಪಾತಿಯಾಗಿರಬೇಕು. ಇಲ್ಲಿ ಪಕ್ಷಪಾತಿ ಎಂದರೆ, ಯಾವುದೇ ನಿರ್ದಿಷ್ಟ ಜಾತಿ, ಕೋಮು ನೆಲೆಗಟ್ಟಿನಲ್ಲಿ ಅಲ್ಲ. ಬದಲಿಗೆ, ದುರ್ಬಲರು, ಅಸಹಾಯಕರು, ದನಿ ಕಳೆದುಕೊಂಡವರ ಪರವಾಗಿ ಮಾಧ್ಯಮಗಳು ಕಾರ್ಯ ನಿರ್ವಹಿಸಬೇಕು.’

ಹಾಗೆಯೇ, ಶೋಷಿತ ಸಮುದಾಯದಿಂದ ಮೇಲೆದ್ದು ಬಂದ ರಾಜಕಾರಣಿಗಳು, ನಂತರದ ದಿನಗಳಲ್ಲಿ ಭ್ರಷ್ಟಾಚಾರ ಕಳಂಕ ಹೊತ್ತುಕೊಂಡ ಸಂದರ್ಭದಲ್ಲಿಯೂ ಆತನನ್ನು ತುಳಿತಕ್ಕೆ ಒಳಗಾದ ಸಮುದಾಯದವ ಎಂದು ಕನಿಕರ ತೋರಿ, ಅವನನ್ನ ರಕ್ಷಣೆ ಮಾಡುವುದು ಸರಿಯಲ್ಲ. ಭ್ರಷ್ಟಾಚಾರ ಯಾರು ಮಾಡಿದರೇನು, ಯಾವ ಸಮುದಾಯದವನಾದರೇನು, ಅವರನ್ನೆಲ್ಲ ಭ್ರಷ್ಟಾಚಾರಿ ಎಂದೇ ಪರಿಗಣಿಸಬೇಕು. ಅಂಥವರ ವಿರುದ್ಧ ಯಾವ ಮುಲಾಜೂ ಇಲ್ಲದೇ ವರದಿ ಪ್ರಕಟಿಸಬೇಕು ಎಂದು ಟಿ.ಕೆ. ತ್ಯಾಗರಾಜ್ ಹೇಳುತ್ತಾರೆ.

ಆದರೆ, ಇವತ್ತು ಆಗುತ್ತಿರುವುದೇನು? ಕೆಲ ಮಾಧ್ಯಮ ಸಂಸ್ಥೆಗಳಲ್ಲಿ ಸಂಪಾದಕರ ಕುರ್ಚಿಯಲ್ಲಿ ಕುಳಿತಿರುವವರಲ್ಲಿ ಜಾತಿ, ಕೋಮು ನೆಲೆಗಟ್ಟಿನಲ್ಲಿ ಯೋಚಿಸುವ ಸಂಪಾದಕರು ದಲಿತ ರಾಜಕಾರಣಿಗಳ ಭ್ರಷ್ಟಾಚಾರವನ್ನು ಮಾತ್ರ ಬಯಲು ಮಾಡುತ್ತ ಮುಂದುವರೆದ ಜಾತಿಗಳ ರಾಜಕಾರಣಿಗಳ ಭ್ರಷ್ಟಾಚಾರವನ್ನು ಉಪೇಕ್ಷಿಸುತ್ತಿರುವುದನ್ನೂ ಕಾಣಬಹುದಾಗಿದೆ. ಕನ್ನಡ ಮಾಧ್ಯಮ ವಲಯದಲ್ಲಿ ಇಂಥ ಸಂಪಾದಕರು ಈಗಲೂ ನಮ್ಮ ಕಣ್ಮುಂದೆ ಇದ್ದಾರೆ. ಇದು ಕೂಡ ಪಕ್ಷಪಾತವೇ. ಸ್ವಜನಪಕ್ಷಪಾತ.

ಉದಾಹರಣೆಗೆ, ಬಿಜೆಪಿ ರಾಷ್ಟ್ರೀಯ ಘಟಕದಲ್ಲಿ ಇವತ್ತಿಗೂ ತಮ್ಮ ಪ್ರಭಾವ, ವರ್ಚಸ್ಸು ಉಳಿಸಿಕೊಂಡಿರುವ ಅನಂತ್ ಕುಮಾರ್ ಅವರ ಬಗ್ಗೆ ಕೆಲ ಮಾಧ್ಯಮಗಳು ಚಕಾರ ಎತ್ತುವುದಿಲ್ಲ. ಹುಡ್ಕೋ ಹಗರಣ, ಅದಮ್ಯ ಚೇತನ ಟ್ರಸ್ಟ್. ಒಂದು ಕಾಲದಲ್ಲಿ ಟಿಪಿಕಲ್ ಮಧ್ಯಮವರ್ಗದ ಜೀವನ ನಡೆಸುತ್ತಿದ್ದ ಅನಂತಕುಮಾರ್ ಅವರ ಇತ್ತೀಚಿನ ಗಳಿಕೆ ಬಗ್ಗೆ ಮಾಧ್ಯಮಗಳು ಕನಿಷ್ಠ ಮಟ್ಟದಲ್ಲೂ ಪ್ರಶ್ನಿಸುವುದಿಲ್ಲ.

ಇದರರ್ಥ: ಅನಂತ್ ಕುಮಾರ್‌ರಂತಹ ರಾಜಕಾರಣಿಗಳಿಗೆ ಮಾಧ್ಯಮವನ್ನು ತುಂಬಾ ಚೆನ್ನಾಗಿ ಮ್ಯಾನೇಜ್ ಮಾಡುವುದು ಗೊತ್ತಿದೆ ಎಂದು. ಹೀಗಾಗಿಯೇ ಮಾಧ್ಯಮಗಳನ್ನು ಯಾರು, ಹೇಗೆ ಬೇಕಾದರೂ ಮ್ಯಾನೇಜ್ ಮಾಡಬಹುದು ಎನ್ನುವಂತಾಗಿದೆ. ಮೀಡಿಯಾ ಮ್ಯಾನೇಜ್ ಮಾಡಲಿಕ್ಕಾಗಿಯೇ ರಾಜಕಾರಣಿಗಳಿಗೆ ಒಂದು ಕೋರ್ಸ್ ಮಾಡಬಹುದೇನೋ?

ಇದೆಲ್ಲದರ ಮಧ್ಯೆಯೇ ಮಾಧ್ಯಮ ವಲಯದಲ್ಲಿ ಇನ್ನೂ ಒಂದಷ್ಟು ಭರವಸೆಗಳು ಉಳಿದುಕೊಂಡಿವೆ. ಆದರೆ ಇಂಥ ಭರವಸೆಗಳು ಬಹು ಕಾಲ ಉಳಿಯವುದಿಲ್ಲ ಎಂದೆನಿಸುತ್ತದೆ. ಯಾಕೆಂದರೇ, ವಸ್ತುನಿಷ್ಠ ವರದಿ ಮಾಡಲು ತೆರಳುವ ಮಾಧ್ಯಮ ಪ್ರತಿನಿಧಿಗಳಿಗೆ, ಭ್ರಷ್ಟ ಚುನಾಯಿತ ಪ್ರತಿನಿಧಿಗಳು ಅಡೆ ತಡೆ ಒಡ್ಡುತ್ತಿದ್ದಾರೆ.

ಇದಕ್ಕೊಂದು ಉದಾಹರಣೆ ಇಲ್ಲಿದೆ. ಚಿಕ್ಕಮಗಳೂರಿನ ಶಾಸಕ ಸಿ.ಟಿ.ರವಿ (ಬಿ.ಜೆ.ಪಿ.) ಅವರು ನಗರಾಭಿವೃದ್ಧಿ ಪ್ರಾಧಿಕಾರದ ಮೇಲೆ ಪ್ರಭಾವ ಬೀರಿ ಅಧಿಕಾರ ದುರುಪಯೋಗ ಮಾಡಿಕೊಂಡಿರುವುದನ್ನು ವರದಿ ಮಾಡಿದ್ದ ಮಾಧ್ಯಮಗಳ ವಿರುದ್ಧ ಕಿಡಿ ಕಾರಿರುವುದು. ಇವರ ಕಿಡಿಗೆ ಮುಖ್ಯ ಕಾರಣ ಎಂದರೇ, ಕೆರೆ ಅಚ್ಚುಕಟ್ಟು ಪ್ರದೇಶ ಸುತ್ತಮುತ್ತ ಇದ್ದ 8 ಎಕರೆಯನ್ನು ತಮ್ಮ ಹಿಂಬಾಲಕರ ಮೂಲಕ ನೋಂದಣಿ ಮಾಡಿಸಿಕೊಂಡಿದ್ದನ್ನು, ಮತ್ತು ತಮ್ಮ ಪತ್ನಿ ಒಡೆತನದಲ್ಲಿರುವ ಜಮೀನಿನಲ್ಲೇ (3 ಎಕರೆ 8 ಗುಂಟೆ) ರೆಸಾರ್ಟ್ ನಿರ್ಮಾಣಕ್ಕೆ ಗುರುತು ಮಾಡಿಕೊಂಡಿದ್ದನ್ನು ಬಯಲಿಗೆಳೆದಿದ್ದಕ್ಕೆ.

ಇಂತಹ ವರದಿ ಸುದ್ದಿ ವಾಹಿನಿಯಲ್ಲಿ  ಬಿತ್ತರವಾಗಿದ್ದೇ ತಡ, “ಸುದ್ದಿ ವಾಹಿನಿ ತಮ್ಮನ್ನ ತೇಜೋವಧೆ ಮಾಡುತ್ತಿದೆ, ಕ್ಷೇತ್ರದಲ್ಲಿ ತಲೆ ಎತ್ತಿಕೊಂಡು ಕೆಲಸ ಮಾಡಲಿಕ್ಕೆ ಆಗುತ್ತಿಲ್ಲ. ತಮ್ಮ ಹಕ್ಕುಗಳಿಗೆ ಚ್ಯುತಿ ಬಂದಿದೆ,” ಎಂದು ತುಂಬಿದ ಸದನದಲ್ಲೇ ಅಲವತ್ತುಕೊಂಡು, ಆ ಸುದ್ದಿವಾಹಿನಿ ವಿರುದ್ಧ ಹಕ್ಕುಚ್ಯುತಿ ಮಂಡಿಸಿದರು.

ಅಸಲಿಗೆ, ಈ ಸುದ್ದಿಯನ್ನು ಬಿತ್ತರಿಸಿದ ಸುದ್ದಿ ವಾಹಿನಿಗೆ ಯಾರೊಬ್ಬರ ತೇಜೋವಧೆಗಿಂತ ಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಹೇಗೆ ಕಾರ್ಯ ನಿರ್ವಹಿಸುತ್ತಿದೆ, ಸ್ಥಳೀಯ ಶಾಸಕ ಹಾಗೂ ಪ್ರಾಧಿಕಾರದ ಸದಸ್ಯ ಸಿ.ಟಿ.ರವಿ ಅವರು ಹೇಗೆ ಪ್ರಭಾವ ಬೀರಿದ್ದಾರೆ ಎಂಬಷ್ಟೇ ವಿಷಯದ ಬಗ್ಗೆ ದಾಖಲೆಗಳ ಸಮೇತ ಜನರ ಮುಂದೆ ಇಟ್ಟಿತ್ತು. ಇದು ಹೇಗೆ ಹಕ್ಕುಚ್ಯುತಿ ಆಗುತ್ತದೆ?

ಹಾಗೆ ನೋಡಿದರೆ, ಇತ್ತೀಚಿನ ವರ್ಷಗಳಲ್ಲಿ ಸುದ್ದಿವಾಹಿನಿ ವಿರುದ್ಧ ಹಕ್ಕುಚ್ಯುತಿ ಮಂಡನೆಯಾಗಿದ್ದು ಇದೇ ಪ್ರಥಮ ಬಾರಿ. ಹಿಂದೆ ಲಂಕೇಶ್ ಪತ್ರಿಕೆ ವಿರುದ್ಧವೂ ಒಮ್ಮೆ ಹಕ್ಕುಚ್ಯುತಿ ಮಂಡನೆಯಾಗಿತ್ತು. ಲಂಕೇಶ್ ಮತ್ತು ವರದಿಗಾರ ಟಿ.ಕೆ.ತ್ಯಾಗರಾಜ್ ಅವರನ್ನು ಸದನಕ್ಕೆ ಕರೆಸಿ ಛೀಮಾರಿ ಹಾಕಬೇಕು ಎಂದು ವಿಧಾನಸಭೆ ಸದಸ್ಯರು ಪಟ್ಟು ಹಿಡಿದಿದ್ದರು. ಇದಕ್ಕೆ ಕಾರಣವಾಗಿದ್ದು ಲಂಕೇಶ್ ಪತ್ರಿಕೆಯಲ್ಲಿ “ಶಾಸಕಿಯರ ಕಾಲ ಹರಣ” ಶೀರ್ಷಿಕೆಯಲ್ಲಿ ಪ್ರಕಟವಾಗಿದ್ದ ವರದಿ.

ಶಾಸಕಿಯರು ಸದನದಲ್ಲಿ ಹೇಗೆ ಕಾರ್ಯ ನಿರ್ವಹಿಸಬೇಕಿತ್ತು, ಹೇಗೆ ಕಾರ್ಯ ನಿರ್ವಹಿಸಿದ್ದಾರೆ ಎಂಬ ಬಗ್ಗೆ ಪ್ರಕಟವಾಗಿದ್ದ ಆ ವರದಿಯನ್ನು ವಿವಿಧ ಪಕ್ಷಗಳನ್ನು ಪ್ರತಿನಿಧಿಸಿದ್ದ ಶಾಸಕಿಯರು ಅರಗಿಸಿಕೊಳ್ಳಲಿಲ್ಲ. ಈ ವರದಿಯಿಂದ ತಮ್ಮ ಹಕ್ಕುಗಳಿಗೆ ಚ್ಯುತಿ ಬಂದಿದೆ ಎಂದು ಬೊಬ್ಬೆ ಹಾಕಿದ್ದರು. ಶಾಸಕಿಯರ ಕಾಲ ಹರಣ ಶೀರ್ಷಿಕೆಯ ವರದಿ ಏಕಮುಖವಾಗಿರಲಿಲ್ಲ. ಬಹುಮುಖಿಯಾಗಿದ್ದ ಈ ವರದಿಯನ್ನ ಶಾಸಕಿಯರು ಓದಿ, ಆತ್ಮ ವಿಮರ್ಶೆ ಮಾಡಿಕೊಳ್ಳಬೇಕಿತ್ತು. ಆದರೆ ಅಂಥ ಕೆಲಸ ಕಡೆಗೂ ಆಗಲೇ ಇಲ್ಲ.

ಲಂಕೇಶ್ ಪತ್ರಿಕೆ ವಿರುದ್ಧ ಹಕ್ಕುಚ್ಯುತಿ ಮಂಡನೆಯಾದಾಗ ಅದನ್ನು ಬಲವಾಗಿ ವಿರೋಧಿಸಿದವರು ಶಾಸಕರಾಗಿದ್ದ ವಾಟಾಳ್ ನಾಗರಾಜ್. ಹಾಗೆ ನೋಡಿದರೆ, ವಾಟಾಳ್ ನಾಗರಾಜರ ಕಾರ್ಯ ವೈಖರಿ ಬಗ್ಗೆಯೂ ಲಂಕೇಶ್ ಪತ್ರಿಕೆ ಕುಟುಕಿತ್ತು (ವಟಗುಟ್ಟುವ ವಾಟಾಳ್, ಕನ್ನಡ ಓರಾಟಗಾರ ವಾಟಾಳ್, ಇತ್ಯಾದಿ ವರದಿಗಳು). ಇಷ್ಟೆಲ್ಲಾ ಆದರೂ ವಾಟಾಳ್ ನಾಗರಾಜರು ’ಲಂಕೇಶ್ ಪತ್ರಿಕೆ’ ಪರವಾಗಿ ಮಾತನಾಡಿ, ವಸ್ತುನಿಷ್ಠ ಪತ್ರಿಕೋದ್ಯಮಕ್ಕೆ ಬೆಂಬಲವಾಗಿ ನಿಂತುಕೊಂಡರು. ಆಗಲೇ ಅನ್ನಿಸುವುದು ಸದನದಲ್ಲಿ ವಾಟಾಳ್ ನಾಗರಾಜ್ ಥರದವರು ಇರಬೇಕು ಎಂದು. ಹೀಗೆಂದ ಮಾತ್ರಕ್ಕೆ ಅದು ವಾಟಾಳ್ ನಾಗರಾಜರ ಓಲೈಕೆಯಲ್ಲ. ಅವರನ್ನು ಪ್ರಶ್ನಿಸುವುದು ಬೇಡ, ಕನ್ನಡ ಚಳವಳಿಯಿಂದ ಸ್ವಂತ ಕಲ್ಯಾಣ ಮಾಡಿಕೊಂಡಿರುವುದನ್ನೂ ಪ್ರಶ್ನಿಸುವುದು ಬೇಡ ಎಂದಲ್ಲ.

ಈಗ ಗೌರಿ ಲಂಕೇಶ್ ಪತ್ರಿಕೆ ವಿರುದ್ಧವೂ ಖುದ್ದು ಸಭಾಪತಿ ಬೋಪಯ್ಯ ಅವರೇ ಹಕ್ಕುಚ್ಯುತಿ ಮಂಡಿಸಿದ್ದಾರೆ. (ವಿಧಾನಸೌಧ, ವಿಧಾನಸಭೆಯಲ್ಲಿ ಕೆಲ ವಿಭಾಗಗಳಿಗೆ ನಡೆದಿರುವ ನೇಮಕಾತಿಗೆ ಸಂಬಂಧಿಸಿದಂತೆ.)

ಆದರೆ, ಸಿ.ಟಿ.ರವಿ ಅವರು ಸುದ್ದಿವಾಹಿನಿ ವಿರುದ್ಧ ಹಕ್ಕು ಚ್ಯುತಿ ಮಂಡಿಸಿದ ಸಂದರ್ಭದಲ್ಲಿ ಎಚ್.ಡಿ.ರೇವಣ್ಣ ಅವರೊಬ್ಬರನ್ನು ಹೊರತುಪಡಿಸಿ ಉಳಿದ ಶಾಸಕರು, ಇದಕ್ಕೂ ತಮಗೂ ಸಂಬಂಧ ಇಲ್ಲವೇ ಇಲ್ಲ ಎಂಬಂತೆ ಕುಳಿತಿದ್ದರು. ಕನಿಷ್ಠ ಶಾಸಕರ ಹಕ್ಕುಗಳೇನು? ಬಾಧ್ಯತೆಗಳೇನು? ಎಂಬ ಬಗ್ಗೆ ಸದನದಲ್ಲಿ ಕನಿಷ್ಠ ಚರ್ಚೆ ಆಗಬೇಕಿತ್ತು. ಅಂಥ ಚರ್ಚೆ ಆಗಲೇ ಇಲ್ಲ.

ಜುಲೈ 1ರಂದು ಆಚರಿಸುವ ಪತ್ರಿಕಾ ದಿನಾಚರಣೆಗಳಲ್ಲಂತೂ ಮುಖ್ಯಮಂತ್ರಿಯಾದಿಯಾಗಿ ಮಂತ್ರಿ ಮಹೋದಯರು, ಶಾಸಕರು, ’ಮಾಧ್ಯಮಗಳು ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸಬೇಕು, ವಸ್ತುನಿಷ್ಠ ವರದಿಗಳನ್ನ ಪ್ರಕಟಿಸಬೇಕು, ಮಾಧ್ಯಮಗಳು ಸ್ವತಂತ್ರವಾಗಿ ಕಾರ್ಯನಿರ್ವಹಿಸುವುದಿಕ್ಕೆ ಪೂರಕವಾದ ವಾತಾವರಣ ಇರಬೇಕು…’ ಹೀಗೆ ಬಣ್ಣ ಬಣ್ಣದ ಮಾತುಗಳನ್ನಾಡುತ್ತಲೇ ಇದ್ದಾರೆ. ಇದು ವಿಪರ್ಯಾಸವಲ್ಲದೆ ಮತ್ತೇನು? ವಸ್ತುನಿಷ್ಠತೆಯ ಬಗ್ಗೆ ಯಾರು ಮಾತನಾಡಿದ್ದಾರೋ ಅವರ ಬಗ್ಗೆಯೇ ವಸ್ತುನಿಷ್ಠ ವರದಿ ಪ್ರಕಟವಾದಾಗ ಅದನ್ನ ಅರಗಿಸಿಕೊಳ್ಳುವುದಿಲ್ಲ.

ಈಗ ನೀವೇ ಹೇಳಿ: ಮಾಧ್ಯಮಗಳು ಹೇಗೆ ಕಾರ್ಯ ನಿರ್ವಹಿಸಬೇಕು? ಯಾರ ಪರವಾಗಿರಬೇಕು? ಶಾಸಕರ ಹಕ್ಕು ಬಾಧ್ಯತೆಗಳೇನು? ನಿಜಕ್ಕೂ ಹಕ್ಕುಚ್ಯುತಿ ಆಗುವುದು ಯಾರಿಗೆ? ಯಾವ ಸಂದರ್ಭದಲ್ಲಿ? ಭ್ರಷ್ಟಾಚಾರ, ಅಧಿಕಾರ ದುರುಪಯೋಗ, ಪ್ರಭಾವ ಬೀರುವುದು, ಇಂಥವುಗಳ ಬಗ್ಗೆ ವರದಿ ಬಿತ್ತರಿಸಿದರೇ ಹಕ್ಕು ಚ್ಯುತಿ ಹೇಗಾಗುತ್ತದೆ? ಇಷ್ಟೆಲ್ಲಾ ಅಡೆ ತಡೆಗಳ ಮಧ್ಯೆ ಮಾಧ್ಯಮಗಳು ಹೇಗೆ ಕಾರ್ಯ ನಿರ್ವಹಿಸಬೇಕು?

ರಾಜಕೀಯ ಅಸಹ್ಯವೇ? ಅದೊಂದು ಅನೈತಿಕ ನಿಲುವು…


– ರವಿ ಕೃಷ್ಣಾರೆಡ್ಡಿ


 
ಇತ್ತೀಚೆಗೆ ಫೇಸ್‌ಬುಕ್‌ನಲ್ಲಿ ಒಂದು ಚರ್ಚೆ ಗಮನಿಸಿದೆ. ಗಾರಾ ಶ್ರೀನಿವಾಸ್ ಎನ್ನುವವರು ಶಿವಮೊಗ್ಗದಲ್ಲಿ “ಸೂರ್ಯಗಗನ” ಎನ್ನುವ ಪತ್ರಿಕೆ ನಡೆಸುತ್ತಿದ್ದಾರೆಂದು ಕಾಣಿಸುತ್ತದೆ. ಅವರು ಇತ್ತೀಚೆಗೆ ತಮ್ಮ ಫೇಸ್‌ಬುಕ್‌ನಲ್ಲಿ, “ಕಳೆದ ಹತ್ತು ವರ್ಷಗಳಿಂದ Journalist ಸೇವೆ ಸಲ್ಲಿಸುತ್ತಿರುವ ನಾನು ಈ ಬಾರಿ ಅಸೆಂಬ್ಲಿ ಚುನಾವಣೆಯಲ್ಲಿ ಶಿವಮೊಗ್ಗ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ… …ಸಂದೇಶವನ್ನೀಡುವ ಉದ್ದೇಶದಿಂದ ಚುನಾವಣಾ ಕಣಕ್ಕಿಳಿಯುತ್ತಿದ್ದೇನೆ.” ಎಂದು ಘೋಷಿಸಿಕೊಂಡಿದ್ದಾರೆ. ಅದಕ್ಕೆ ಇಂತಹ ವಿಚಾರಗಳಿಗೆ ಬರುವಂತೆ ಹಲವಾರು ಪರ-ವಿರುದ್ಧ ಕಾಮೆಂಟ್‌ಗಳು ಅಲ್ಲಿ ಬಂದಿವೆ. ಆದರೆ ಅಲ್ಲಿಯ ಮೊದಲ ಕಾಮೆಂಟೇ ತೀಕ್ಷ್ಣವಾಗಿದೆ. ಅದನ್ನು ಬರೆದಿರುವ ಹೆಣ್ಣುಮಗಳು ಒಬ್ಬ ಉದಯೋನ್ಮುಖ ಕವಿ ಎಂದೂ ಕಾಣಿಸುತ್ತದೆ. (ಅಂದ ಹಾಗೆ ಈ ಇಬ್ಬರೂ ನನಗೆ ಅಪರಿಚಿತರು.) ಬಹುಶಃ ಮಧ್ಯವಯಸ್ಕರಾಗಿರುವ ಈ ಮಹಿಳೆ ನೇರವಾಗಿ ಹೇಳಿರುವುದು: “ನೀವು ನಮ್ಮಿಂದ ದೂರ ಇದ್ದುಬಿಡಿ ಸರ್… ನಮಗೆ ಈ ರಾಜಕೀಯ ಬೇಡ.”

ಬಹುಶಃ ಇದಕ್ಕಿಂತ ಬೇಜವಾಬ್ದಾರಿಯುತ, ನಿಷ್ಠುರ, ಶಾಕಿಂಗ್ ಹೇಳಿಕೆ ಇತ್ತೀಚಿನ ದಿನಗಳಲ್ಲಿ ನಾನು ನೋಡಿರಲಿಲ್ಲ. ಬಹುಶಃ ಇವರಂತಹ ಅನೇಕ ಮಹಿಳೆಯರು ಮತ್ತು ಮಹನೀಯರು ನಮ್ಮ ನಡುವೆ ಇದ್ದಾರೆ, ಮತ್ತು ಅವರಿಗೆಲ್ಲ ಈಗ ನಾವು ನೋಡುತ್ತಿರುವ ರಾಜಕೀಯೇತರ ವ್ಯವಸ್ಥೆ ಬಹಳ ಸುಂದರವಾಗಿ ಕಾಣಿಸುತ್ತಿದೆ. ಅವರಿಗೆ ಈಗಿರುವ ಹಾಲಿ ವ್ಯವಸ್ಥೆಯಿಂದ ಯಾವುದೇ ರೀತಿಯ ತೊಂದರೆಗಳಾಗಿಲ್ಲ. ರಾಜಕೀಯ ಬಿಟ್ಟರೆ ಬೇರೊಂದು ಕೆಟ್ಟ ವಿದ್ಯಮಾನ ಅವರ ಗಮನಕ್ಕೆ ಬಂದಿಲ್ಲ. ಅವರು ವೈಯಕ್ತಿಕವಾಗಿ ಈ ವ್ಯವಸ್ಥೆಯಲ್ಲಿ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಮೇಲೇರುತ್ತಲೇ ಹೋಗುತ್ತಿದ್ದಾರೆ. ಮಿಕ್ಕವರ ಪಾಡು ಅವರಿಗೆ ಬೇಕಿಲ್ಲ. ಅವರಿಗೆ ಅಸಹ್ಯವಾಗಿ ಕಾಣುವ ಒಂದೇ ಒಂದು ಕೆಟ್ಟದ್ದು ಎಂದರೆ ಅದು ರಾಜಕಾರಣ ಮಾತ್ರ. ಮತ್ತು ಅದರಲ್ಲಿ ಅವರ ಪಾಲು ಏನೇನೂ ಇಲ್ಲ. ತಮ್ಮ ಪಾಡಿಗೆ ಅವರು ಕೆಲಸ ಮಾಡಿಕೊಂಡು ಹೋಗಲು, ಕತೆ-ಕವನ ಬರೆದುಕೊಳ್ಳಲು, ಶಾಪಿಂಗ್-ಪಾರ್ಟಿ ಮಾಡಿಕೊಳ್ಳಲು ಅವರನ್ನು ಬಿಟ್ಟರೆ ಸಾಕಾಗಿದೆ. ರಾಜಕಾರಣಿಗಳ ಹತ್ತಿರ ಕೂಡ ಇವರು ಸುಳಿಯುವುದಿಲ್ಲ. ಬಹುಶಃ ಅದಕ್ಕಾಗಿಯೇ ಓಟೂ ಹಾಕುವುದಿಲ್ಲ. ಜಾತಿ ಮತ್ತು ಹಣ ಮುಂದಿಟ್ಟುಕೊಂಡು ಮನೆಯ ಮುಂದೆ ಬರುವ “ಗಣ್ಯ” ರಾಜಕಾರಣಿಗಳ ಜೊತೆ ಮಾತ್ರ ನಗುನಗುತ್ತಲೇ ಮಾತನಾಡುತ್ತಾರೆ.

ಏನಾಗಿದೆ ಈ ಅಕ್ಷರ ಕಲಿತವರಿಗೆ? ಪತ್ರಿಕೆ ಓದುತ್ತಾರೆ. ಮೇಲಿನ ಮಹಿಳೆಯಂತಹವರಿಗೆ ತಾವು ಬರಹಗಾರ್ತಿ ಎನ್ನುವ ಕೋಡೂ ಬೇಕಾಗಿರುವುದರಿಂದ ಅಷ್ಟೊ ಇಷ್ಟೊ ಪುಸ್ತಕಗಳನ್ನೂ ಓದಬಹುದು. ಆದರೂ ಇವರಿಗೆ ಪ್ರಜಾಪ್ರಭುತ್ವ ಎನ್ನುವುದಾಗಲಿ, ಅದು ಹೇಗೆ ವ್ಯವಹರಿಸುತ್ತದೆ ಎಂದಾಗಲಿ, ಅದರ ಒಳಿತು-ಕೆಡುಕಿನಲ್ಲಿ ತಮ್ಮ ಪಾತ್ರ ಇದೆ ಎಂಬ ಸಾಮಾನ್ಯ ಜ್ಞಾನವಾಗಲಿ ಯಾಕಿಲ್ಲ? ಇಷ್ಟೆಲ್ಲಾ ಅಜ್ಞಾನಿಗಳೂ, ಅಹಂಕಾರಿಗಳು ಹೇಗಾದರು ಇವರು? ನಮ್ಮ ಶಿಕ್ಷಣ ವ್ಯವಸ್ಥೆ ಇಷ್ಟೊಂದು ದೋಷಪೂರಿತವಾಗಿದೆಯೆ? ಸಮುದಾಯದ ಹಿತದಲ್ಲಿ ತನ್ನ ಹಿತವೂ ಇದೆ ಎಂಬ ಸಾಮುದಾಯಿಕವಾಗಿ ಬದುಕುವ ಪ್ರಾಣಿಗಳ ಡಿಎನ್‍ಎ‌ಗಳಲ್ಲಿರುವ ತಂತು ಇವರಲ್ಲಿ ಮಿಸ್ ಆಗಿದ್ದಾದರೂ ಹೇಗೆ? ’ರಾಜಕೀಯ ಅಸಹ್ಯ, ನಾವು ಅದರಿಂದ ದೂರ ಇರುತ್ತೇವೆ” ಎನ್ನುವುದು ಇಂದಿನ ಸಂದರ್ಭದಲ್ಲಿ ತೀರಾ ಅನೈತಿಕ ನಿಲುವು ಮತ್ತು ಈ ವ್ಯವಸ್ಥೆಯನ್ನು ಸುಧಾರಿಸಬೇಕೆಂದು ನಾನಾ ರೀತಿಯಲ್ಲಿ, ಬೇರೆಬೇರೆ ಆಯಾಮಗಳಲ್ಲಿ, ವಿವಿಧ ಕ್ಷೇತ್ರಗಳಲ್ಲಿ (ಸಾಮಾಜಿಕ-ಸಾಂಸ್ಕೃತಿಕ-ಆರ್ಥಿಕ-ರಾಜಕೀಯ) ರಾಜಕಾರಣ ಮಾಡುತ್ತಿರುವವರಿಗೆ ಮಾಡುವ ಅವಮಾನವೂ ಹೌದು. ಪ್ರಜ್ಞಾಹೀನ ನಡವಳಿಕೆ.

ಆರೇಳು ತಿಂಗಳಿನಲ್ಲಿ ಚುನಾವಣೆ ಬರುತ್ತದೆ. ಸುದ್ದಿಪತ್ರಿಕೆಗಳಿಗೆ ಮತ್ತು ಸುದ್ದಿಚಾನಲ್‌ಗಳಿಗೆ ಇನ್ನು ಮುಂದಕ್ಕೆ ಸುದ್ಧಿಗಳಿಗೆ ಕೊರತೆ ಇಲ್ಲ. ಯಾವುದನ್ನು ಬಿಡುವುದು ಎನ್ನುವುದೇ ಸಮಸ್ಯೆ ಆಗಬಹುದು. ಪಕ್ಷ ತೊರೆದು ಇನ್ನೊಂದು ಪಕ್ಷ ಕಟ್ಟುವವರು, ಆ ಪಕ್ಷದಿಂದ ಈ ಪಕ್ಷಕ್ಕೆ ಹಾರುವವರು, ಈ ಪಕ್ಷದಿಂದ ಮಗದೊಂದು ಪಕ್ಷಕ್ಕೆ ಸೇರುವವರು, ಇದ್ದ ಪಕ್ಷದಲ್ಲಿಯೇ ಬಂಡಾಯವೆದ್ದವರು ಸುದ್ಧಿಯ ಅತಿವೃಷ್ಟಿ ಸುರಿಸುತ್ತಾರೆ. ಇಷ್ಟು ದಿನ ವಾಚಾಮಗೋಚರವಾಗಿ ಬೈದಾಡಿಕೊಂಡವರೇ ನಾಳೆ ಅಕ್ಕಪಕ್ಕದಲ್ಲಿ ಪ್ರಾಣಸ್ನೇಹಿತರಂತೆ ಪತ್ರಿಕಾಗೋಷ್ಠಿ ನಡೆಸುತ್ತಾರೆ. ಬಹಿರಂಗ ಸಭೆಗಳಲ್ಲಿ ಒಬ್ಬರನ್ನೊಬ್ಬರು ಓತಪ್ರೋತವಾಗಿ ಹೊಗಳಿಕೊಳ್ಳುತ್ತಾರೆ. ತಮ್ಮ ಜೊತೆಗೆ ನಿಂತ ಹೊಸ ಮಿತ್ರ ಇವರುಗಳಿಗೆ ಹಕ್ಕ, ಬುಕ್ಕ, ಸಂಗೊಳ್ಳಿ ರಾಯಣ್ಣ, ಟಿಪ್ಪು, ಕೃಷ್ಣದೇವರಾಯ, ಬಸವಣ್ಣ, ಗಾಂಧಿ, ಅಂಬೇಡ್ಕರ್, ಎಂದೆಲ್ಲಾ ಕಾಣಿಸುತ್ತಾರೆ. ಜೊತೆ ಬಿಟ್ಟು ಹೋದವರು ಮೀರ್ ಸಾದಿಕ್, ಮಲ್ಲಪ್ಪ ಶೆಟ್ಟಿಗಳಾಗುತ್ತಾರೆ.

ಇದೇ ಸಮಯದಲ್ಲಿ ಯಾವ ಕಾರಣಕ್ಕಾಗಿ ರಾಜಕೀಯ ಮಾಡಬೇಕು ಎನ್ನುವ ಸ್ಪಷ್ಟ ಅರಿವಿಲ್ಲದ ಒಳ್ಳೆಯ ಜನರೂ ರಾಜಕೀಯ ಸೇರುತ್ತಾರೆ. ಎಂದಿನಂತೆ ಶ್ರೀಮಂತರು ಎಲ್ಲಾ ಪಾರ್ಟಿಗಳಲ್ಲಿ ಅವರ ಜೇಬಿನ ತೂಕದ ಆಧಾರದ ಮೇಲೆ ಹಂಚಿ ಹೋಗುತ್ತಾರೆ. ಜೊತೆಗೆ ಒಂದಷ್ಟು ಜೋಕರ್‌ಗಳೂ ಉದಯಿಸುತ್ತಾರೆ. ಎಲ್ಲಾ ಸೇರಿ ಯಾವುದಾದರೂ ಪಕ್ಷವೋ ಅಥವ ಪಕ್ಷೇತರವೋ, ಚುನಾವಣೆಗೆ ನಿಲ್ಲುತ್ತಾರೆ.

ಪಾಪ ನಮ್ಮ ಜನರು ತಾನೆ ಏನು ಮಾಡಲಾಗುತ್ತದೆ? ಅಭ್ಯರ್ಥಿಗಳ ಅಂತಿಮ ಪಟ್ಟಿ ಹೊರಬಿದ್ದ ಮೇಲೆ ಇರುವ ಕೇವಲ ಹತ್ತು-ಹದಿನೈದು ದಿನಗಳು ಅವರಿಗೆ ತಮ್ಮ ಅಭ್ಯರ್ಥಿಗಳ ಬಗ್ಗೆ ತಿಳಿದುಕೊಳ್ಳಲು ಏನೇನೂ ಸಾಲದು. ಏನೆಂದು ತಿಳಿದುಕೊಳ್ಳುವುದು? ಎಷ್ಟು ಅಭ್ಯರ್ಥಿಗಳು, ಅವರ ಹಿನ್ನೆಲೆ ಏನು, ಯಾರು ಒಳ್ಳೆಯವರು, ಯಾರು ಯೋಗ್ಯರು? ಅಬ್ಬಬ್ಬಾ ಎಷ್ಟೊಂದು ದೊಡ್ದಪಟ್ಟಿ. ತಮಗೆ ಸಿಗುವ ಅಷ್ಟಿಷ್ಟು ಬಿಡುವಿನ ಸಮಯದಲ್ಲಿ ಆರಾಮ ಮಾಡಿಕೊಳ್ಳುವುದೇ ತ್ರಾಸ ಆಗಿರುವಾಗ ಈ ತಲೆನೋವು ಬೇರೆ? ಈ ರಾಜಕೀಯ ಬೇರೆ ಅತಿ ಅಸಹ್ಯ. ಓಟು ಹಾಕುವುದೇ ಬೇಡ. ಹಾಕಲೇಬೇಕಾಗಿ ಬಂದರೆ, ನಮ್ಮ ಜಾತಿಯವರು ಯಾರು, ಪರಿಚಿತರು ಯಾರು, ನಾವು ಬೆಂಬಲಿಸಿಕೊಂಡು ಬಂದ ಪಕ್ಷ ಯಾವುದು? ಅಷ್ಟೂ ಆಗದಿದ್ದರೆ ಬೂತ್‌ನಲ್ಲಿ ಯಾವುದಕ್ಕೋ ಒತ್ತಿದರಾಯಿತು.

ಮುಂದಿನ ಚುನಾವಣೆಯಲ್ಲಿ ಗೆದ್ದು ಶಾಸಕರಾಗಲಿರುವವರೂ ಈಗಿರುವವರಿಗಿಂತ ಉತ್ತಮವಾಗಿರುವ ಸಾಧ್ಯತೆಗಳು ಇಲ್ಲ. ಅದಕ್ಕೆ ಚುನಾವಣೆಗೆ ನಿಲ್ಲುವವರಷ್ಟೇ ಕಾರಣರಲ್ಲ.

ಈಗ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವ ಘೋಷಣೆ ಮಾಡಿರುವ ಗಾರಾ ಶ್ರೀನಿವಾಸರ ವಿಚಾರಕ್ಕೆ ಬರೋಣ. ಅರ್ಹ ಜನ ಚುನಾವಣೆಗೆ ನಿಲ್ಲಬೇಕು. ಫಲಿತಾಂಶವನ್ನು ಅನೇಕ ಅಂಶಗಳು ನಿರ್ಧರಿಸುತ್ತವೆ. ಆದರೆ, ಜನಕ್ಕೆ ಪರ್ಯಾಯ ಆಯ್ಕೆಗಳಂತೂ ಇರಬೇಕು. ಆ ನಿಟ್ಟಿನಲ್ಲಿ ಹೊಸದಾಗಿ ನಿಲ್ಲುವವರು ಗಂಭೀರವಾಗಿ ಯೋಚಿಸಬೇಕು. ತಾನು ಯಾಕಾಗಿ ನಿಲ್ಲುತ್ತಿದ್ದೇನೆ ಮತ್ತು ಯಾವ ತ್ಯಾಗಕ್ಕೆ ಸಿದ್ಧ ಎನ್ನುವುದನ್ನು ಸ್ಪಷ್ಪಪಡಿಸಿಕೊಳ್ಳಬೇಕು. ವೈಯಕ್ತಿಕ ಕಾರಣಗಳಿಗಿಂತ ಸಮುದಾಯದ ಹಿತ ಮುಖ್ಯವಾಗಬೇಕು. ಗಾರಾ ಶ್ರೀನಿವಾಸ್ ಹೇಳುತ್ತಾರೆ: “…ಮತದಾರರಿಗೆ ಜಾಗೃತಿ ಮೂಡಿಸುವ ಇರಾದೆಯಲ್ಲಿ, ಪ್ರತಿಸ್ಪರ್ಧಿಗಳ ಜನ್ಮಜಾತಕ ಬಯಲು ಮಾಡುವ ನಿಟ್ಟಿನಲ್ಲಿ ಕಾರ್ಯೋನ್ಮುಖನಾಗಿ ಸಾಮಾನ್ಯ ಯುವ ಜನಾಂಗಕ್ಕೆ ಸಂದೇಶವನ್ನೀಡುವ…” ಈ ಉದ್ದೇಶ ಮತ್ತು ಹೇಳಿಕೆಗಳು ಅವರು ಯಾವ ಕಾರಣಕ್ಕೆ ಹಾಲಿ ಶಾಸಕನಿಗೆ ಪರ್ಯಾಯ ಎಂದು ಹೇಳುವುದಿಲ್ಲ. ಅವರ ಈ ಮಾತುಗಳು ಅಪ್ರಬುದ್ದವಾದದ್ದು. ವೈಯಕ್ತಿಕವಾಗಿ ಅವರು ಈಗಿರುವ ಶಾಸಕನಿಗಿಂತ ಉತ್ತಮ ವ್ಯಕ್ತಿಯೇ ಆಗಿರಬಹುದು. ಆದರೆ ಅದು ಅಲ್ಲಿ ಚುನಾವಣೆಗೆ ನಿಲ್ಲುವ ಪ್ರತಿಯೊಬ್ಬನ ವಿಚಾರಕ್ಕೂ ನಿಜ ಇರಬಹುದು. ಹಾಗಾಗಿ ಯಾಕೆ ನೀವು (ಗಾರಾ ಶ್ರೀನಿವಾಸ್) ಗಂಭೀರ ಅಭ್ಯರ್ಥಿ, ಯಾವಯಾವ ವಿಚಾರಗಳಲ್ಲಿ ನೀವು ಪರ್ಯಾಯವಾಗಿ ನಿಲ್ಲುತ್ತೀರ, ಮತ್ತು “ಪ್ರತಿಸ್ಪರ್ಧಿಗಳ ಜನ್ಮಜಾತಕ”ಕ್ಕೆ ಬದಲಾಗಿ ಅವರಿಗಿಂತ ನೀವು ಹೇಗೆ ಶಾಸಕ ಸ್ಥಾನಕ್ಕೆ ಉತ್ತಮರು ಎನ್ನುವುದನ್ನು ನಿರೂಪಿಸಬೇಕು. ಇನ್ನೊಬ್ಬರ ಜನ್ಮ ಜಾಲಾಡುವುದಕ್ಕೆ ಚುನಾವಣೆಗೇ ನಿಲ್ಲಬೇಕಿಲ್ಲ. ಅದೇ ನಿಮ್ಮ ಉದ್ದೇಶವಾಗಿದ್ದಾರೆ ಮೇಲೆ ನಿಮಗೆ ಪ್ರತಿಕ್ರಿಯಿಸಿರುವ ಮಹಿಳೆ (ಒಂದು ಅಂಶ) ಸರಿಯಾಗಿಯೇ ಹೇಳಿದ್ದಾರೆ.

ಅಂದ ಹಾಗೆ, ಚುನಾವಣೆಗೆ ಸಜ್ಜಾಗುತ್ತಿರುವ ಪ್ರತಿಯೊಬ್ಬ ಅರ್ಹ ಅಭ್ಯರ್ಥಿಗೂ ನನ್ನ ಶುಭಾಶಯಗಳು. ಚುನಾವಣಾ ಆಯೋಗದ ವೆಚ್ಚದ ಮಿತಿಯಲ್ಲಿಯೇ ಚುನಾವಣೆ ನಡೆಸಿ. ಅಕ್ರಮಗಳನ್ನು ನಿಮ್ಮ ಕೈಲಾದ ರೀತಿಯಲ್ಲಿ ಪ್ರತಿರೋಧಿಸಿ. ಸಾಧ್ಯವಾದಷ್ಟೂ ಗಂಭೀರವಾಗಿ ತೊಡಗಿಕೊಳ್ಳಿ.  ನಮ್ಮ ಈಗಿನ ಸಮಾಜದಲ್ಲಿ ಆದರ್ಶಗಳು ನಗೆಪಾಟಲಿಗೂ, ಭ್ರಷ್ಟರು ಹೀರೋಗಳಾಗಿಯೂ ಮಿಂಚುತ್ತಿರುವಾಗ ನಿಮ್ಮ ನಡೆ ಆದರ್ಶವಾದದ್ದು. ಅನೈತಿಕ ನಿಲುವುಗಳುಳ್ಳವರು ಮತ್ತು ಸಮಾಜದ ಒಂದು ವರ್ಗದ ಸಂಕುಚಿತ ಮನಸ್ಥಿತಿಯ ಜನ ಹಾಗೆ ಭಾವಿಸದಿದ್ದರೂ.