ರಾಜಕೀಯ ಅಸಹ್ಯವೇ? ಅದೊಂದು ಅನೈತಿಕ ನಿಲುವು…


– ರವಿ ಕೃಷ್ಣಾರೆಡ್ಡಿ


 
ಇತ್ತೀಚೆಗೆ ಫೇಸ್‌ಬುಕ್‌ನಲ್ಲಿ ಒಂದು ಚರ್ಚೆ ಗಮನಿಸಿದೆ. ಗಾರಾ ಶ್ರೀನಿವಾಸ್ ಎನ್ನುವವರು ಶಿವಮೊಗ್ಗದಲ್ಲಿ “ಸೂರ್ಯಗಗನ” ಎನ್ನುವ ಪತ್ರಿಕೆ ನಡೆಸುತ್ತಿದ್ದಾರೆಂದು ಕಾಣಿಸುತ್ತದೆ. ಅವರು ಇತ್ತೀಚೆಗೆ ತಮ್ಮ ಫೇಸ್‌ಬುಕ್‌ನಲ್ಲಿ, “ಕಳೆದ ಹತ್ತು ವರ್ಷಗಳಿಂದ Journalist ಸೇವೆ ಸಲ್ಲಿಸುತ್ತಿರುವ ನಾನು ಈ ಬಾರಿ ಅಸೆಂಬ್ಲಿ ಚುನಾವಣೆಯಲ್ಲಿ ಶಿವಮೊಗ್ಗ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ… …ಸಂದೇಶವನ್ನೀಡುವ ಉದ್ದೇಶದಿಂದ ಚುನಾವಣಾ ಕಣಕ್ಕಿಳಿಯುತ್ತಿದ್ದೇನೆ.” ಎಂದು ಘೋಷಿಸಿಕೊಂಡಿದ್ದಾರೆ. ಅದಕ್ಕೆ ಇಂತಹ ವಿಚಾರಗಳಿಗೆ ಬರುವಂತೆ ಹಲವಾರು ಪರ-ವಿರುದ್ಧ ಕಾಮೆಂಟ್‌ಗಳು ಅಲ್ಲಿ ಬಂದಿವೆ. ಆದರೆ ಅಲ್ಲಿಯ ಮೊದಲ ಕಾಮೆಂಟೇ ತೀಕ್ಷ್ಣವಾಗಿದೆ. ಅದನ್ನು ಬರೆದಿರುವ ಹೆಣ್ಣುಮಗಳು ಒಬ್ಬ ಉದಯೋನ್ಮುಖ ಕವಿ ಎಂದೂ ಕಾಣಿಸುತ್ತದೆ. (ಅಂದ ಹಾಗೆ ಈ ಇಬ್ಬರೂ ನನಗೆ ಅಪರಿಚಿತರು.) ಬಹುಶಃ ಮಧ್ಯವಯಸ್ಕರಾಗಿರುವ ಈ ಮಹಿಳೆ ನೇರವಾಗಿ ಹೇಳಿರುವುದು: “ನೀವು ನಮ್ಮಿಂದ ದೂರ ಇದ್ದುಬಿಡಿ ಸರ್… ನಮಗೆ ಈ ರಾಜಕೀಯ ಬೇಡ.”

ಬಹುಶಃ ಇದಕ್ಕಿಂತ ಬೇಜವಾಬ್ದಾರಿಯುತ, ನಿಷ್ಠುರ, ಶಾಕಿಂಗ್ ಹೇಳಿಕೆ ಇತ್ತೀಚಿನ ದಿನಗಳಲ್ಲಿ ನಾನು ನೋಡಿರಲಿಲ್ಲ. ಬಹುಶಃ ಇವರಂತಹ ಅನೇಕ ಮಹಿಳೆಯರು ಮತ್ತು ಮಹನೀಯರು ನಮ್ಮ ನಡುವೆ ಇದ್ದಾರೆ, ಮತ್ತು ಅವರಿಗೆಲ್ಲ ಈಗ ನಾವು ನೋಡುತ್ತಿರುವ ರಾಜಕೀಯೇತರ ವ್ಯವಸ್ಥೆ ಬಹಳ ಸುಂದರವಾಗಿ ಕಾಣಿಸುತ್ತಿದೆ. ಅವರಿಗೆ ಈಗಿರುವ ಹಾಲಿ ವ್ಯವಸ್ಥೆಯಿಂದ ಯಾವುದೇ ರೀತಿಯ ತೊಂದರೆಗಳಾಗಿಲ್ಲ. ರಾಜಕೀಯ ಬಿಟ್ಟರೆ ಬೇರೊಂದು ಕೆಟ್ಟ ವಿದ್ಯಮಾನ ಅವರ ಗಮನಕ್ಕೆ ಬಂದಿಲ್ಲ. ಅವರು ವೈಯಕ್ತಿಕವಾಗಿ ಈ ವ್ಯವಸ್ಥೆಯಲ್ಲಿ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಮೇಲೇರುತ್ತಲೇ ಹೋಗುತ್ತಿದ್ದಾರೆ. ಮಿಕ್ಕವರ ಪಾಡು ಅವರಿಗೆ ಬೇಕಿಲ್ಲ. ಅವರಿಗೆ ಅಸಹ್ಯವಾಗಿ ಕಾಣುವ ಒಂದೇ ಒಂದು ಕೆಟ್ಟದ್ದು ಎಂದರೆ ಅದು ರಾಜಕಾರಣ ಮಾತ್ರ. ಮತ್ತು ಅದರಲ್ಲಿ ಅವರ ಪಾಲು ಏನೇನೂ ಇಲ್ಲ. ತಮ್ಮ ಪಾಡಿಗೆ ಅವರು ಕೆಲಸ ಮಾಡಿಕೊಂಡು ಹೋಗಲು, ಕತೆ-ಕವನ ಬರೆದುಕೊಳ್ಳಲು, ಶಾಪಿಂಗ್-ಪಾರ್ಟಿ ಮಾಡಿಕೊಳ್ಳಲು ಅವರನ್ನು ಬಿಟ್ಟರೆ ಸಾಕಾಗಿದೆ. ರಾಜಕಾರಣಿಗಳ ಹತ್ತಿರ ಕೂಡ ಇವರು ಸುಳಿಯುವುದಿಲ್ಲ. ಬಹುಶಃ ಅದಕ್ಕಾಗಿಯೇ ಓಟೂ ಹಾಕುವುದಿಲ್ಲ. ಜಾತಿ ಮತ್ತು ಹಣ ಮುಂದಿಟ್ಟುಕೊಂಡು ಮನೆಯ ಮುಂದೆ ಬರುವ “ಗಣ್ಯ” ರಾಜಕಾರಣಿಗಳ ಜೊತೆ ಮಾತ್ರ ನಗುನಗುತ್ತಲೇ ಮಾತನಾಡುತ್ತಾರೆ.

ಏನಾಗಿದೆ ಈ ಅಕ್ಷರ ಕಲಿತವರಿಗೆ? ಪತ್ರಿಕೆ ಓದುತ್ತಾರೆ. ಮೇಲಿನ ಮಹಿಳೆಯಂತಹವರಿಗೆ ತಾವು ಬರಹಗಾರ್ತಿ ಎನ್ನುವ ಕೋಡೂ ಬೇಕಾಗಿರುವುದರಿಂದ ಅಷ್ಟೊ ಇಷ್ಟೊ ಪುಸ್ತಕಗಳನ್ನೂ ಓದಬಹುದು. ಆದರೂ ಇವರಿಗೆ ಪ್ರಜಾಪ್ರಭುತ್ವ ಎನ್ನುವುದಾಗಲಿ, ಅದು ಹೇಗೆ ವ್ಯವಹರಿಸುತ್ತದೆ ಎಂದಾಗಲಿ, ಅದರ ಒಳಿತು-ಕೆಡುಕಿನಲ್ಲಿ ತಮ್ಮ ಪಾತ್ರ ಇದೆ ಎಂಬ ಸಾಮಾನ್ಯ ಜ್ಞಾನವಾಗಲಿ ಯಾಕಿಲ್ಲ? ಇಷ್ಟೆಲ್ಲಾ ಅಜ್ಞಾನಿಗಳೂ, ಅಹಂಕಾರಿಗಳು ಹೇಗಾದರು ಇವರು? ನಮ್ಮ ಶಿಕ್ಷಣ ವ್ಯವಸ್ಥೆ ಇಷ್ಟೊಂದು ದೋಷಪೂರಿತವಾಗಿದೆಯೆ? ಸಮುದಾಯದ ಹಿತದಲ್ಲಿ ತನ್ನ ಹಿತವೂ ಇದೆ ಎಂಬ ಸಾಮುದಾಯಿಕವಾಗಿ ಬದುಕುವ ಪ್ರಾಣಿಗಳ ಡಿಎನ್‍ಎ‌ಗಳಲ್ಲಿರುವ ತಂತು ಇವರಲ್ಲಿ ಮಿಸ್ ಆಗಿದ್ದಾದರೂ ಹೇಗೆ? ’ರಾಜಕೀಯ ಅಸಹ್ಯ, ನಾವು ಅದರಿಂದ ದೂರ ಇರುತ್ತೇವೆ” ಎನ್ನುವುದು ಇಂದಿನ ಸಂದರ್ಭದಲ್ಲಿ ತೀರಾ ಅನೈತಿಕ ನಿಲುವು ಮತ್ತು ಈ ವ್ಯವಸ್ಥೆಯನ್ನು ಸುಧಾರಿಸಬೇಕೆಂದು ನಾನಾ ರೀತಿಯಲ್ಲಿ, ಬೇರೆಬೇರೆ ಆಯಾಮಗಳಲ್ಲಿ, ವಿವಿಧ ಕ್ಷೇತ್ರಗಳಲ್ಲಿ (ಸಾಮಾಜಿಕ-ಸಾಂಸ್ಕೃತಿಕ-ಆರ್ಥಿಕ-ರಾಜಕೀಯ) ರಾಜಕಾರಣ ಮಾಡುತ್ತಿರುವವರಿಗೆ ಮಾಡುವ ಅವಮಾನವೂ ಹೌದು. ಪ್ರಜ್ಞಾಹೀನ ನಡವಳಿಕೆ.

ಆರೇಳು ತಿಂಗಳಿನಲ್ಲಿ ಚುನಾವಣೆ ಬರುತ್ತದೆ. ಸುದ್ದಿಪತ್ರಿಕೆಗಳಿಗೆ ಮತ್ತು ಸುದ್ದಿಚಾನಲ್‌ಗಳಿಗೆ ಇನ್ನು ಮುಂದಕ್ಕೆ ಸುದ್ಧಿಗಳಿಗೆ ಕೊರತೆ ಇಲ್ಲ. ಯಾವುದನ್ನು ಬಿಡುವುದು ಎನ್ನುವುದೇ ಸಮಸ್ಯೆ ಆಗಬಹುದು. ಪಕ್ಷ ತೊರೆದು ಇನ್ನೊಂದು ಪಕ್ಷ ಕಟ್ಟುವವರು, ಆ ಪಕ್ಷದಿಂದ ಈ ಪಕ್ಷಕ್ಕೆ ಹಾರುವವರು, ಈ ಪಕ್ಷದಿಂದ ಮಗದೊಂದು ಪಕ್ಷಕ್ಕೆ ಸೇರುವವರು, ಇದ್ದ ಪಕ್ಷದಲ್ಲಿಯೇ ಬಂಡಾಯವೆದ್ದವರು ಸುದ್ಧಿಯ ಅತಿವೃಷ್ಟಿ ಸುರಿಸುತ್ತಾರೆ. ಇಷ್ಟು ದಿನ ವಾಚಾಮಗೋಚರವಾಗಿ ಬೈದಾಡಿಕೊಂಡವರೇ ನಾಳೆ ಅಕ್ಕಪಕ್ಕದಲ್ಲಿ ಪ್ರಾಣಸ್ನೇಹಿತರಂತೆ ಪತ್ರಿಕಾಗೋಷ್ಠಿ ನಡೆಸುತ್ತಾರೆ. ಬಹಿರಂಗ ಸಭೆಗಳಲ್ಲಿ ಒಬ್ಬರನ್ನೊಬ್ಬರು ಓತಪ್ರೋತವಾಗಿ ಹೊಗಳಿಕೊಳ್ಳುತ್ತಾರೆ. ತಮ್ಮ ಜೊತೆಗೆ ನಿಂತ ಹೊಸ ಮಿತ್ರ ಇವರುಗಳಿಗೆ ಹಕ್ಕ, ಬುಕ್ಕ, ಸಂಗೊಳ್ಳಿ ರಾಯಣ್ಣ, ಟಿಪ್ಪು, ಕೃಷ್ಣದೇವರಾಯ, ಬಸವಣ್ಣ, ಗಾಂಧಿ, ಅಂಬೇಡ್ಕರ್, ಎಂದೆಲ್ಲಾ ಕಾಣಿಸುತ್ತಾರೆ. ಜೊತೆ ಬಿಟ್ಟು ಹೋದವರು ಮೀರ್ ಸಾದಿಕ್, ಮಲ್ಲಪ್ಪ ಶೆಟ್ಟಿಗಳಾಗುತ್ತಾರೆ.

ಇದೇ ಸಮಯದಲ್ಲಿ ಯಾವ ಕಾರಣಕ್ಕಾಗಿ ರಾಜಕೀಯ ಮಾಡಬೇಕು ಎನ್ನುವ ಸ್ಪಷ್ಟ ಅರಿವಿಲ್ಲದ ಒಳ್ಳೆಯ ಜನರೂ ರಾಜಕೀಯ ಸೇರುತ್ತಾರೆ. ಎಂದಿನಂತೆ ಶ್ರೀಮಂತರು ಎಲ್ಲಾ ಪಾರ್ಟಿಗಳಲ್ಲಿ ಅವರ ಜೇಬಿನ ತೂಕದ ಆಧಾರದ ಮೇಲೆ ಹಂಚಿ ಹೋಗುತ್ತಾರೆ. ಜೊತೆಗೆ ಒಂದಷ್ಟು ಜೋಕರ್‌ಗಳೂ ಉದಯಿಸುತ್ತಾರೆ. ಎಲ್ಲಾ ಸೇರಿ ಯಾವುದಾದರೂ ಪಕ್ಷವೋ ಅಥವ ಪಕ್ಷೇತರವೋ, ಚುನಾವಣೆಗೆ ನಿಲ್ಲುತ್ತಾರೆ.

ಪಾಪ ನಮ್ಮ ಜನರು ತಾನೆ ಏನು ಮಾಡಲಾಗುತ್ತದೆ? ಅಭ್ಯರ್ಥಿಗಳ ಅಂತಿಮ ಪಟ್ಟಿ ಹೊರಬಿದ್ದ ಮೇಲೆ ಇರುವ ಕೇವಲ ಹತ್ತು-ಹದಿನೈದು ದಿನಗಳು ಅವರಿಗೆ ತಮ್ಮ ಅಭ್ಯರ್ಥಿಗಳ ಬಗ್ಗೆ ತಿಳಿದುಕೊಳ್ಳಲು ಏನೇನೂ ಸಾಲದು. ಏನೆಂದು ತಿಳಿದುಕೊಳ್ಳುವುದು? ಎಷ್ಟು ಅಭ್ಯರ್ಥಿಗಳು, ಅವರ ಹಿನ್ನೆಲೆ ಏನು, ಯಾರು ಒಳ್ಳೆಯವರು, ಯಾರು ಯೋಗ್ಯರು? ಅಬ್ಬಬ್ಬಾ ಎಷ್ಟೊಂದು ದೊಡ್ದಪಟ್ಟಿ. ತಮಗೆ ಸಿಗುವ ಅಷ್ಟಿಷ್ಟು ಬಿಡುವಿನ ಸಮಯದಲ್ಲಿ ಆರಾಮ ಮಾಡಿಕೊಳ್ಳುವುದೇ ತ್ರಾಸ ಆಗಿರುವಾಗ ಈ ತಲೆನೋವು ಬೇರೆ? ಈ ರಾಜಕೀಯ ಬೇರೆ ಅತಿ ಅಸಹ್ಯ. ಓಟು ಹಾಕುವುದೇ ಬೇಡ. ಹಾಕಲೇಬೇಕಾಗಿ ಬಂದರೆ, ನಮ್ಮ ಜಾತಿಯವರು ಯಾರು, ಪರಿಚಿತರು ಯಾರು, ನಾವು ಬೆಂಬಲಿಸಿಕೊಂಡು ಬಂದ ಪಕ್ಷ ಯಾವುದು? ಅಷ್ಟೂ ಆಗದಿದ್ದರೆ ಬೂತ್‌ನಲ್ಲಿ ಯಾವುದಕ್ಕೋ ಒತ್ತಿದರಾಯಿತು.

ಮುಂದಿನ ಚುನಾವಣೆಯಲ್ಲಿ ಗೆದ್ದು ಶಾಸಕರಾಗಲಿರುವವರೂ ಈಗಿರುವವರಿಗಿಂತ ಉತ್ತಮವಾಗಿರುವ ಸಾಧ್ಯತೆಗಳು ಇಲ್ಲ. ಅದಕ್ಕೆ ಚುನಾವಣೆಗೆ ನಿಲ್ಲುವವರಷ್ಟೇ ಕಾರಣರಲ್ಲ.

ಈಗ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವ ಘೋಷಣೆ ಮಾಡಿರುವ ಗಾರಾ ಶ್ರೀನಿವಾಸರ ವಿಚಾರಕ್ಕೆ ಬರೋಣ. ಅರ್ಹ ಜನ ಚುನಾವಣೆಗೆ ನಿಲ್ಲಬೇಕು. ಫಲಿತಾಂಶವನ್ನು ಅನೇಕ ಅಂಶಗಳು ನಿರ್ಧರಿಸುತ್ತವೆ. ಆದರೆ, ಜನಕ್ಕೆ ಪರ್ಯಾಯ ಆಯ್ಕೆಗಳಂತೂ ಇರಬೇಕು. ಆ ನಿಟ್ಟಿನಲ್ಲಿ ಹೊಸದಾಗಿ ನಿಲ್ಲುವವರು ಗಂಭೀರವಾಗಿ ಯೋಚಿಸಬೇಕು. ತಾನು ಯಾಕಾಗಿ ನಿಲ್ಲುತ್ತಿದ್ದೇನೆ ಮತ್ತು ಯಾವ ತ್ಯಾಗಕ್ಕೆ ಸಿದ್ಧ ಎನ್ನುವುದನ್ನು ಸ್ಪಷ್ಪಪಡಿಸಿಕೊಳ್ಳಬೇಕು. ವೈಯಕ್ತಿಕ ಕಾರಣಗಳಿಗಿಂತ ಸಮುದಾಯದ ಹಿತ ಮುಖ್ಯವಾಗಬೇಕು. ಗಾರಾ ಶ್ರೀನಿವಾಸ್ ಹೇಳುತ್ತಾರೆ: “…ಮತದಾರರಿಗೆ ಜಾಗೃತಿ ಮೂಡಿಸುವ ಇರಾದೆಯಲ್ಲಿ, ಪ್ರತಿಸ್ಪರ್ಧಿಗಳ ಜನ್ಮಜಾತಕ ಬಯಲು ಮಾಡುವ ನಿಟ್ಟಿನಲ್ಲಿ ಕಾರ್ಯೋನ್ಮುಖನಾಗಿ ಸಾಮಾನ್ಯ ಯುವ ಜನಾಂಗಕ್ಕೆ ಸಂದೇಶವನ್ನೀಡುವ…” ಈ ಉದ್ದೇಶ ಮತ್ತು ಹೇಳಿಕೆಗಳು ಅವರು ಯಾವ ಕಾರಣಕ್ಕೆ ಹಾಲಿ ಶಾಸಕನಿಗೆ ಪರ್ಯಾಯ ಎಂದು ಹೇಳುವುದಿಲ್ಲ. ಅವರ ಈ ಮಾತುಗಳು ಅಪ್ರಬುದ್ದವಾದದ್ದು. ವೈಯಕ್ತಿಕವಾಗಿ ಅವರು ಈಗಿರುವ ಶಾಸಕನಿಗಿಂತ ಉತ್ತಮ ವ್ಯಕ್ತಿಯೇ ಆಗಿರಬಹುದು. ಆದರೆ ಅದು ಅಲ್ಲಿ ಚುನಾವಣೆಗೆ ನಿಲ್ಲುವ ಪ್ರತಿಯೊಬ್ಬನ ವಿಚಾರಕ್ಕೂ ನಿಜ ಇರಬಹುದು. ಹಾಗಾಗಿ ಯಾಕೆ ನೀವು (ಗಾರಾ ಶ್ರೀನಿವಾಸ್) ಗಂಭೀರ ಅಭ್ಯರ್ಥಿ, ಯಾವಯಾವ ವಿಚಾರಗಳಲ್ಲಿ ನೀವು ಪರ್ಯಾಯವಾಗಿ ನಿಲ್ಲುತ್ತೀರ, ಮತ್ತು “ಪ್ರತಿಸ್ಪರ್ಧಿಗಳ ಜನ್ಮಜಾತಕ”ಕ್ಕೆ ಬದಲಾಗಿ ಅವರಿಗಿಂತ ನೀವು ಹೇಗೆ ಶಾಸಕ ಸ್ಥಾನಕ್ಕೆ ಉತ್ತಮರು ಎನ್ನುವುದನ್ನು ನಿರೂಪಿಸಬೇಕು. ಇನ್ನೊಬ್ಬರ ಜನ್ಮ ಜಾಲಾಡುವುದಕ್ಕೆ ಚುನಾವಣೆಗೇ ನಿಲ್ಲಬೇಕಿಲ್ಲ. ಅದೇ ನಿಮ್ಮ ಉದ್ದೇಶವಾಗಿದ್ದಾರೆ ಮೇಲೆ ನಿಮಗೆ ಪ್ರತಿಕ್ರಿಯಿಸಿರುವ ಮಹಿಳೆ (ಒಂದು ಅಂಶ) ಸರಿಯಾಗಿಯೇ ಹೇಳಿದ್ದಾರೆ.

ಅಂದ ಹಾಗೆ, ಚುನಾವಣೆಗೆ ಸಜ್ಜಾಗುತ್ತಿರುವ ಪ್ರತಿಯೊಬ್ಬ ಅರ್ಹ ಅಭ್ಯರ್ಥಿಗೂ ನನ್ನ ಶುಭಾಶಯಗಳು. ಚುನಾವಣಾ ಆಯೋಗದ ವೆಚ್ಚದ ಮಿತಿಯಲ್ಲಿಯೇ ಚುನಾವಣೆ ನಡೆಸಿ. ಅಕ್ರಮಗಳನ್ನು ನಿಮ್ಮ ಕೈಲಾದ ರೀತಿಯಲ್ಲಿ ಪ್ರತಿರೋಧಿಸಿ. ಸಾಧ್ಯವಾದಷ್ಟೂ ಗಂಭೀರವಾಗಿ ತೊಡಗಿಕೊಳ್ಳಿ.  ನಮ್ಮ ಈಗಿನ ಸಮಾಜದಲ್ಲಿ ಆದರ್ಶಗಳು ನಗೆಪಾಟಲಿಗೂ, ಭ್ರಷ್ಟರು ಹೀರೋಗಳಾಗಿಯೂ ಮಿಂಚುತ್ತಿರುವಾಗ ನಿಮ್ಮ ನಡೆ ಆದರ್ಶವಾದದ್ದು. ಅನೈತಿಕ ನಿಲುವುಗಳುಳ್ಳವರು ಮತ್ತು ಸಮಾಜದ ಒಂದು ವರ್ಗದ ಸಂಕುಚಿತ ಮನಸ್ಥಿತಿಯ ಜನ ಹಾಗೆ ಭಾವಿಸದಿದ್ದರೂ.

8 thoughts on “ರಾಜಕೀಯ ಅಸಹ್ಯವೇ? ಅದೊಂದು ಅನೈತಿಕ ನಿಲುವು…

  1. Avinash Kannammanavar

    ಸರ ಈಗಿನ ನಮ್ಮ ಯುವ ಪೀಳಿಗೆ ಎಲ್ಲಾ ಸಿನಿಕ ರಾಗಿದ್ದಾರೆ, ರಾಜಕೀಯದ ಬಗ್ಗೆ, ರಾಜಕಾರಣದ ಬಗ್ಗೆ ತಾಸು ಗಂಟಲೆ ಮಾತಾಡೋರು, ನಮ್ಮ ಮೊದಿಜೀ ಹಂಗೆ-ಹಿಂಗೆ ಅಂತ ಮಾತಾಡೋರು ಯಾರನ್ನಾದರು ನಿಲ್ಲಿಸಿ ಕೇಳಿ. ಎಷ್ಟೋ ಸಾರಿ ಅವರು ಯಾರು ವೋಟು ಮಾಡಿರುವುದಿಲ್ಲ. ಬೆಂಗಳೂರಿಗೆ ಬಂದು 3 ವರ್ಷದ ಮೇಲಾದರೂ ಇನ್ನು ಇಲ್ಲಿಯ ಮತದಾರರಾಗಿ ಬದಲಾಗಲ್ಲ, ಊರಲ್ಲಿ ನಡೆಯುವ ಮತದಾನಕ್ಕೆ ಹೋಗೋದು ಇಲ್ಲಾ, ಕೇಳಿದರೆ “ಅಯ್ಯೋ ಬಿಡಯ್ಯ ನಾನೊಬ್ಬನೇ ಮತ ಹಾಕದಿದ್ದರೆ ಜಗತ್ತೆನು ಮುಳುಗಿ ಹೋಗಲ್ಲ ಅನ್ನೋದು, ಅಥವಾ ನಾವೇನು ಮತ ಹಾಕಿದ್ರೆನು ಆರಿಸಿ ಬರೋರೆಲ್ಲ ಕಳ್ಳ ನನ್ನ ಮಕ್ಕಳೇ ಅನ್ನೋದು. ಏನು ಮಾಡ್ಬೇಕು ಸರ್?

    Reply
  2. ಮಹದೇವ ಹಡಪದ

    ಹೌದು ಸರ್… ಇಂದಿನ ದಿನದಲ್ಲಿ ಅಕ್ಷರವಂತರಿಗೆ ಈ ಥರದ ಅಸಡ್ಡೆ ಇದ್ದರೆ, ಹಳ್ಳಿಗರಿಗೆ ಜನಪ್ರತಿನಿಧಿ ಆಯ್ಕೆ ಒಂದು ಮೋಜಾಗಿರುವುದು ನಮ್ಮ ದುರಂತ. ಯಾರು ಗೆಲ್ಲುತ್ತಾರೋ ಯಾರು ಸೋಲುತ್ತಾರೋ ಅನ್ನುವುದಕ್ಕಿಂತ ಯಾರಿಗೆ ಓಟು ಮಾಡಿದರೆ ನಮಗೇನು ಬಂತು ಅನ್ನುವ ನಿರ್ಲಕ್ಷ್ಯವೂ, ಆಸೆಗಣ್ಣಿನ ಕಾಂಚಾಣ ಬುದ್ದಿಯೂ ಇಂದು ವ್ಯಾಪಕವಾಗಿದೆ.

    Reply
  3. anand prasad

    ಅರವಿಂದ್ ಕೇಜರಿವಾಲ್ ರಾಜಕೀಯಕ್ಕೆ ಇಳಿಯುವ ನಿರ್ಧಾರ ಮಾಡಿದ ಕೂಡಲೇ ಎಲ್ಲಾ ಕೆಟ್ಟು ಹೋಯಿತು ಎಂಬ ಅಭಿಪ್ರಾಯ ಕೆಲವು ವಲಯಗಳಿಂದ ಕೇಳಿಬಂತು. ಜನ ಈ ರೀತಿ ಸಿನಿಕರಾದರೆ ದೇಶದ ರಾಜಕೀಯ ಶುದ್ಧ ಆಗುವುದಾದರೂ ಹೇಗೆ, ಅದನ್ನು ಮಾಡುವುದಾದರೂ ಯಾರು? ಯಾರಾದರೂ ವ್ಯವಸ್ಥೆಯಲ್ಲಿ ಬದಲಾವಣೆ ತರುವ ಉದ್ಧೇಶದಿಂದ ರಾಜಕೀಯಕ್ಕೆ ಇಳಿಯದೆ ಹೋದರೆ ವ್ಯವಸ್ಥೆ ಇನ್ನಷ್ಟು ಕೆಟ್ಟು ಹೋಗಲಿದೆ. ಒಳ್ಳೆಯ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಂತೆ ದೇಶಾದ್ಯಂತ ಸಂಚರಿಸಿ ಜಾಗೃತಿ ಮಾಡುವುದಾಗಿ ಅಣ್ಣಾ ಹಜಾರೆ ಹೇಳುತ್ತಿದ್ದಾರೆ. ಈಗಿರುವ ರಾಜಕೀಯ ಪಕ್ಷಗಳಲ್ಲಿ ಒಳ್ಳೆಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ನಿಲ್ಲಿಸುವ ಸಂಭವನೀಯತೆ ತೀರಾ ಕಡಿಮೆ ಇರುವಾಗ ಪರ್ಯಾಯ ಆಯ್ಕೆಯ ಅಭ್ಯರ್ಥಿಗಳನ್ನು ನಿಲ್ಲಿಸದೆ ಅಂಥ ಜಾಗೃತಿ ಮೂಡಿಸಿದರೂ ಏನೂ ಪ್ರಯೋಜನ ಇಲ್ಲ. ಅಣ್ಣಾ ಹಜಾರೆ ಹಾಗೂ ಕಿರಣ್ ಬೇಡಿ, ಸಂತೋಷ್ ಹೆಗ್ಡೆಯವರು ಬಾಬಾ ರಾಮ್ದೇವ್ ಜೊತೆ ಹೋಗಿ ಸೇರುವುದರಿಂದ ಆ ಆಂದೋಲನ ಮತ್ತಷ್ಟು ದುರ್ಬಲವಾಗಬಹುದು. ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಈಗ ಇರುವ ರಾಜಕೀಯ ಪಕ್ಷಗಳ ಜೊತೆ ಗುರುತಿಸಿಕೊಳ್ಳುವುದರಿಂದ ವ್ಯವಸ್ಥೆಯಲ್ಲಿ ಬದಲಾವಣೆ ತರುವ ಸಾಧ್ಯತೆ ಕಂಡುಬರುವುದಿಲ್ಲ. ಇದಕ್ಕೆ ಸಂಪೂರ್ಣ ಭಿನ್ನವಾದ ರಾಜಕೀಯ ಪಕ್ಷ ಹಾಗೂ ಸಂಘಟನೆ ಬೇಕೇ ಬೇಕು. ರಾಜಕೀಯ ಕ್ಷೇತ್ರವನ್ನೇ ಅಸ್ಪ್ರಶ್ಯ ಎಂಬ ರೀತಿ ಪರಿಗಣಿಸುತ್ತ ಹೋದರೆ ದೇಶವು ನಾಯಿ ನರಿಗಳ ಪಾಲಾಗುವ ಸಂಭವ ಇದೆ.

    Reply
  4. prasad raxidi

    ಈ ಮನೋಭಾವಕ್ಕೆ ತುತ್ತಾಗಿರುವವರು ಬರೀ ಸುಖಿ ಮಧ್ಯಮವರ್ಗ ಮಾತ್ರವಲ್ಲ, 80 ದಶಕದಲ್ಳೇ ನಮ್ಮ ಅನೇಕ ರೈತ (ಸಂಘದ)ನಾಯಕರು, ಭಾಷಣಗಳಲ್ಲಿ “ರಾಜಕೀಯ ಎಂದರೇ.. ರಾಷ್ಟ್ರದ ಜನರನ್ನು……ಕೀಳುಮಟ್ಟಕ್ಕೆ……ಯಳೆಯುವುದೂ…. ಹಾಗಾಗಿ ನಮಗೇ ರಾಜಕೀಯ ಬೇಡ” ಎಂದು ದೊಡ್ಡ ಗಂಟಲಿನಲ್ಲಿ ಕಿರುಚುತ್ತಿದ್ದರು. ಮುಂದೆ ಅವರೇ ಚುನಾವಣೆಗೆ ನಿಂತಾಗ ಇದು ಅವರಿಗೇ ತಿರುಗುಬಾಣವಾಯಿತು….!

    Reply
  5. shylesh

    vastu sthitiyannu kararuvakkagi suksamavagi gamanisiddira adare yenu maduvudu heli hucchu munde maduveyalli undavane jana ynnuva sththi namma rajakaranigaladdu

    Reply
  6. Pingback: ಶಿವಮೊಗ್ಗದ ಮಿತ್ರರಿಗೊಂದು ವಿವರಣೆ… « ವರ್ತಮಾನ – Vartamaana

  7. Dr.kiran.m gajanur

    ಗೆಳೆಯ ರವಿ ಇಂದು ಜಾತಿ ಮತ್ತು ರಾಜಕಾರಣದ ಸಂಬಂಧವನ್ನು ವಿವರಿಸುತ್ತಿರುವ ಬಹಳಷ್ಟು ಚಿಂತಕರು ಪ್ರಸ್ತುತ ಇಂದಿನ ಬಹುಜನಪ್ರೀಯವಾದಶಕ್ತಿರಾಜಕಾರಣವನ್ನು ಸಮಸ್ಯೆಯಾಗಿ ಭಾವಿಸುತ್ತಾರೆ. ಆದರೆ ನಿಜವಾದ ಅರ್ಥದಲ್ಲಿ ರಾಜಕಾರಣ ಎಂದರೇನು? ಎಂಬುದಕ್ಕೆಹಲವಾರು ವ್ಯಾಖ್ಯಾನಗಳಿವೆ. ಸರಳವಾಗಿ ಹೇಳುವುದಾದರೆ ಪ್ರಭುತ್ವದ ಹಾಗೂ ಅದಕ್ಕೆ ಸಂಬಂಧಿಸಿದ ಚಟುವಟಿಕೆಗಳು ಎಂದುವಿವರಿಸಿಕೊಳ್ಳಬಹುದು. ಪ್ರಖ್ಯಾತ ರಾಜಕೀಯಶಾಸ್ತ್ರಜ್ಞ ಡೇವಿಡ್ ಈಸ್ಟನ್ ರಾಜಕೀಯವನ್ನು ಮೌಲ್ಯಗಳ ಅಧಿಕಾರಯುತ ವಿತರಣೆಎಂದು ವಿಶ್ಲೇಷಿಸಿದ್ದಾನೆ. ಅಂದರೆ ರಾಜಕಾರಣ ಎಂಬುದು ಪ್ರಭುತ್ವದ ಕಾರ್ಯಚಟುವಟಿಕೆ ಅದರಲ್ಲಿ ಪ್ರಜೆಗಳ ಪಾಲ್ಗೊಳ್ಳುವಿಕೆಮುಂತಾದವುಗಳ ಕುರಿತಂತೆ ತಿಳಿಸುವುದಾಗಿದೆ. ಆದರೆ ಜನಸಾಮನ್ಯರ ಸಾಮಾನ್ಯ ತಿಳುವಳಿಕೆಯಲ್ಲಿ ರಾಜಕೀಯ ಎಂದರೆ ಯಾವ ಮಾರ್ಗವನ್ನಾದರೂ ಹಿಡಿದು ಸಾರ್ವಜನಿಕ ಅಧಿಕಾರವನ್ನು ಪಡೆಯುವ ತಂತ್ರಗಾರಿಕೆ ಎನ್ನುವ ನೆಗೆಟಿವ್ ಆದಂತಹ ಭಾವನೆಪ್ರಬಲವಾಗಿದೆ. ಪ್ರಸ್ತುತ ಬಹುಪಾಲು ಚಿಂತರಕರು ಮತ್ತು ಮಾಧ್ಯಮಗಳು ಸಾಮಾನ್ಯ ಜನರ ಅರ್ಥದಲ್ಲಿನ ನೆಗೆಟಿವ್ ಮಾದರಿಯ ರಾಜಕಾರಣವನ್ನೇಸಮಸ್ಯೆಯನ್ನಾಗಿ ಗ್ರಹಿಸುತ್ತಾರೆ. ಇದರಿಂದಲೇ ಇಂದು ಸಮಾಜದ ಬಹು ದೊಡ್ಡ ಕಲಿತ ವರ್ಗ ರಾಜಕೀಯದ ಕುರಿತು ಋಣಾತ್ಮಕ ಭಾವನೆ ತೆಳೆದಿದೆ ಮತ್ತು ಇ ವಿದ್ಯಮಾನ ಜಗತ್ತಿನ ಬಹುದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತಕ್ಕೆ ನಿಜಕ್ಕೂ ಅಪಾಯಕಾರಿ. ಸಾಮಾನ್ಯ ಅದರಲ್ಲಿಯೂ ಕಲಿತ ಜನರ ಇ ಮನೋಭಾವನೆಯೇ ಇಂದು ಪೊಳ್ಳು ಸಾಮಾಜಿಕ ಚಳುವಳಿಯ ಗುಂಪುಗಳ ರಾಜಕಾರಣಕ್ಕೆ ಅಡಿಪಾಯವಾಗುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಲ್ಲಿ ಒಬ್ಬ ಪ್ರಜೆ ನಿರ್ವಹಿಸಬೇಕಾದ ಕೆಲಸವನ್ನು ಇಂದು ಸಾಮಾಜಿಕ ಗುಂಪುಗಳ ಹೆಸರಿನಲ್ಲಿ ಕೆಲವು ಸಂಘಟನೆಗಳು ನಿರ್ವಹಿಸಲು ಹೊರಟಿವೆ ಅಲ್ಲದೆ ಇನ್ನೊಂದು ಅರ್ಥದಲ್ಲಿ ಅ ಗುಂಪುಗಳು ಸಹ ನೆಗೆಟಿವ್ ಅರ್ಥದ ರಾಜಕಾರಣವನ್ನೇ ಮಾಡುತ್ತಿವೆ ಇದಕ್ಕೆ ಅಣ್ಣ ಚಳುವಳಿ ಒಂದು ಒಳ್ಳೆಯ ಉದಾಹರಣೆ ಇದು ನಿಜವಾದ ಅಪಾಯ ದೆಹ್ಸದ ಯುವಜನತೆ ಕಲಿತ ವರ್ಗ ಇ ವಿದ್ಯಮಾನದ ವಿರುದ್ದ ತಮ್ಮ ನೈಜ ರಾಜಕೀಯ ಹಕ್ಕೊತ್ತಾಯ ಮಾಡುವ ಸಮಯ ಇದಾಗಿದೆ ಆದರೆ ನಮ್ಮ ಸುತ್ತಲಿನ ಕಲಿತ ವರ್ಗ ಬೇರೇನೋ ಕೆಲಸಗಳಲ್ಲಿ ಬಿಜಿಯಗಿದೆ

    Reply

Leave a Reply

Your email address will not be published. Required fields are marked *