ಹಕ್ಕುಚ್ಯುತಿ, ವಸ್ತುನಿಷ್ಠ ಪತ್ರಿಕೋದ್ಯಮ, ಮಾಧ್ಯಮ ಕಾರ್ಯವೈಖರಿ…

– ಜಿ. ಮಹಂತೇಶ್

ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳ ಕಾರ್ಯವೈಖರಿ ಬಗ್ಗೆ ಸಾಕಷ್ಟು ಚರ್ಚೆಗಳಾಗುತ್ತಿವೆ. ಕೆಲ ಮಾಧ್ಯಮಗಳು ನಿಷ್ಪಕ್ಷಪಾತವಾಗಿ ವರದಿ ಪ್ರಕಟಿಸುತ್ತಿರುವುದರಿಂದ ಜನಪ್ರತಿನಿಧಿಗಳು, ಅದರಲ್ಲೂ ಚುನಾಯಿತ ಜನಪ್ರತಿನಿಧಿಗಳ ವಲಯದಲ್ಲಿ ಕೆಲ ಮಾಧ್ಯಮಗಳ ನಿಷ್ಪಕ್ಷಪಾತ ಮತ್ತು ವಸ್ತುನಿಷ್ಠ ವರದಿ ಕಂಡು ಕಂಗಾಲಾಗುತ್ತಿದ್ದಾರೆ.

ಹಾಗೇ ನೋಡಿದರೆ, ಮಾಧ್ಯಮಗಳು ಮತ್ತು ಮಾಧ್ಯಮ ಪ್ರತಿನಿಧಿಗಳು (ವರದಿಗಾರರು, ಸಂಪಾದಕರು ಸೇರಿ) ಶಾಸಕ, ಮಂತ್ರಿಮಹೋದಯರ ಪರವಾಗಿಯೋ ಇಲ್ಲವೇ ಸ್ಟೆನೋಗ್ರಾಫರ್‌ಗಳ ರೀತಿಯೋ ಕಾರ್ಯನಿರ್ವಹಿಸಿದ್ದೇ ಹೆಚ್ಚು. ಕೆಲ ಮಾಧ್ಯಮ ಪ್ರತಿನಿಧಿಗಳಂತೂ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿ, ಉಪ್ಪಿಟ್ಟು-ಕೇಸರಿಬಾತ್ ಸವಿದಿದ್ದೇ ಹೆಚ್ಚು. ಇದಕ್ಕೆ ಜೊತೆಯಾಗಿ ಒಂದಷ್ಟು ಕವರ್‌ಗಳನ್ನು ಪ್ರತಿಫಲವಾಗಿ ಸ್ವೀಕರಿಸಿರುವ ಉದಾಹರಣೆಗಳು ಸಾಕಷ್ಟಿವೆ. ಅದಕ್ಕೆ ಪ್ರತಿಯಾಗಿ, ಮಂತ್ರಿ, ಶಾಸಕರಿಗೆ ಒಂದಷ್ಟು ಸಲಹೆ ನೀಡಿ ಕೃತಾರ್ಥರಾಗಿರುವವರಿಗೇನೂ ಕೊರತೆ ಇಲ್ಲ. ಇದು, ಎಲ್ಲ ಮಾಧ್ಯಮ ಪ್ರತಿನಿಧಿಗಳಿಗೂ ಅನ್ವಯಿಸುವುದಿಲ್ಲ ಎಂಬುದನ್ನೂ ಇಲ್ಲಿ ಗಮನಿಸತಕ್ಕದ್ದು.

ಬಹುತೇಕ ಮಾಧ್ಯಮ ಪ್ರತಿನಿಧಿಗಳು, ತಮ್ಮ ತಮ್ಮ ಕುಲಬಾಂಧವ ರಾಜಕಾರಣಿಗಳ ಪರವಾಗಿ ವರದಿ ಮಾಡುತ್ತಿದ್ದಾರೆ. ವಿಧಾನಸೌಧದ ಕಾರಿಡಾರ್ನಲ್ಲಿ ಇದರ ಸಾಕ್ಷಾತ್ ದರ್ಶನ ಮಾಡಿಕೊಳ್ಳಬಹುದು. ಜಾತಿಗಳ ವರ್ಗೀಕರಣದಂತೆಯೇ ಮಾಧ್ಯಮ ಪ್ರತಿನಿಧಿಗಳೂ ವರ್ಗೀಕರಣ ಆಗಿರುವುದೂ ಸುಳ್ಳಲ್ಲ. ಒಕ್ಕಲಿಗ ಪತ್ರಕರ್ತರು, ಲಿಂಗಾಯತ ಪತ್ರಕರ್ತರು, ಕುರುಬ ಪತ್ರಕರ್ತರು, ಬ್ರಾಹ್ಮಣ ಪತ್ರಕರ್ತರು (ಇವರು ಬಹಿರಂಗವಾಗಿ ಹೀಗೆಂದು ಗುರುತಿಸಿಕೊಳ್ಳುವುದಿಲ್ಲ), ಪರಿಶಿಷ್ಟ ಜಾತಿ, ಪ.ಪಂಗಡ ಪತ್ರಕರ್ತರು, ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿರೋ ಪತ್ರಕರ್ತರು,.. ಹೀಗೆ ವಿವಿಧ ರೀತಿಯಲ್ಲಿ ವರ್ಗೀಕರಣ ಮಾಡಿಕೊಂಡಿರುವುದೇನೋ ಗುಟ್ಟಾಗಿ ಉಳಿದಿಲ್ಲ. ಇದರ ಮಧ್ಯೆಯೇ ಜಾತಿ, ಮತಗಳ ಚೌಕಟ್ಟಿನಾಚೆ ಸಿದ್ಧಾಂತಗಳ ಆಧರಿಸಿ ಒಂದಷ್ಟು ಪತ್ರಕರ್ತರ ಗುಂಪುಗಳಿರುವುದೂ ನಿಜ (ಎಡಪಂಥೀಯ, ಬಲಪಂಥೀಯ, ಇತರೆ).

ಇಂತಹ ಹೊತ್ತಿನಲ್ಲೇ ಮಾಧ್ಯಮಗಳು ಯಾರ ಕಾಳಜಿ ವಹಿಸಬೇಕು, ಯಾರ ಪರ ನಿಲ್ಲಬೇಕು, ಹೇಗೆ ಕಾರ್ಯ ನಿರ್ವಹಿಸಬೇಕು ಎಂಬ ಬಗ್ಗೆ ಚರ್ಚೆ ನಡೆಸುವುದು ಸೂಕ್ತ ಆಗಬಹುದೇನೋ. ಮಾಧ್ಯಮಗಳು ನಿಷ್ಪಕ್ಷಪಾತವಾಗಿರಬೇಕು ಎಂಬ ಅಭಿಪ್ರಾಯದ ಬಗ್ಗೆಯೇ ಸಾಕಷ್ಟು ಆಕ್ಷೇಪಗಳಿವೆ. ಇಂದಿಗೂ ವಸ್ತುನಿಷ್ಠರಾಗಿಯೇ ಉಳಿದುಕೊಂಡಿರುವ ಹಿರಿಯ ಪತ್ರಕರ್ತ ಟಿ.ಕೆ. ತ್ಯಾಗರಾಜ್ ಅವರು ಹೇಳಿದ್ದ ಮಾತೊಂದು ಇಲ್ಲಿ ಹೇಳಬೇಕಿನಿಸಿದೆ: ‘ಮಾಧ್ಯಮಗಳು ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸಬಾರದು, ಬದಲಿಗೆ ಪಕ್ಷಪಾತಿಯಾಗಿರಬೇಕು. ಇಲ್ಲಿ ಪಕ್ಷಪಾತಿ ಎಂದರೆ, ಯಾವುದೇ ನಿರ್ದಿಷ್ಟ ಜಾತಿ, ಕೋಮು ನೆಲೆಗಟ್ಟಿನಲ್ಲಿ ಅಲ್ಲ. ಬದಲಿಗೆ, ದುರ್ಬಲರು, ಅಸಹಾಯಕರು, ದನಿ ಕಳೆದುಕೊಂಡವರ ಪರವಾಗಿ ಮಾಧ್ಯಮಗಳು ಕಾರ್ಯ ನಿರ್ವಹಿಸಬೇಕು.’

ಹಾಗೆಯೇ, ಶೋಷಿತ ಸಮುದಾಯದಿಂದ ಮೇಲೆದ್ದು ಬಂದ ರಾಜಕಾರಣಿಗಳು, ನಂತರದ ದಿನಗಳಲ್ಲಿ ಭ್ರಷ್ಟಾಚಾರ ಕಳಂಕ ಹೊತ್ತುಕೊಂಡ ಸಂದರ್ಭದಲ್ಲಿಯೂ ಆತನನ್ನು ತುಳಿತಕ್ಕೆ ಒಳಗಾದ ಸಮುದಾಯದವ ಎಂದು ಕನಿಕರ ತೋರಿ, ಅವನನ್ನ ರಕ್ಷಣೆ ಮಾಡುವುದು ಸರಿಯಲ್ಲ. ಭ್ರಷ್ಟಾಚಾರ ಯಾರು ಮಾಡಿದರೇನು, ಯಾವ ಸಮುದಾಯದವನಾದರೇನು, ಅವರನ್ನೆಲ್ಲ ಭ್ರಷ್ಟಾಚಾರಿ ಎಂದೇ ಪರಿಗಣಿಸಬೇಕು. ಅಂಥವರ ವಿರುದ್ಧ ಯಾವ ಮುಲಾಜೂ ಇಲ್ಲದೇ ವರದಿ ಪ್ರಕಟಿಸಬೇಕು ಎಂದು ಟಿ.ಕೆ. ತ್ಯಾಗರಾಜ್ ಹೇಳುತ್ತಾರೆ.

ಆದರೆ, ಇವತ್ತು ಆಗುತ್ತಿರುವುದೇನು? ಕೆಲ ಮಾಧ್ಯಮ ಸಂಸ್ಥೆಗಳಲ್ಲಿ ಸಂಪಾದಕರ ಕುರ್ಚಿಯಲ್ಲಿ ಕುಳಿತಿರುವವರಲ್ಲಿ ಜಾತಿ, ಕೋಮು ನೆಲೆಗಟ್ಟಿನಲ್ಲಿ ಯೋಚಿಸುವ ಸಂಪಾದಕರು ದಲಿತ ರಾಜಕಾರಣಿಗಳ ಭ್ರಷ್ಟಾಚಾರವನ್ನು ಮಾತ್ರ ಬಯಲು ಮಾಡುತ್ತ ಮುಂದುವರೆದ ಜಾತಿಗಳ ರಾಜಕಾರಣಿಗಳ ಭ್ರಷ್ಟಾಚಾರವನ್ನು ಉಪೇಕ್ಷಿಸುತ್ತಿರುವುದನ್ನೂ ಕಾಣಬಹುದಾಗಿದೆ. ಕನ್ನಡ ಮಾಧ್ಯಮ ವಲಯದಲ್ಲಿ ಇಂಥ ಸಂಪಾದಕರು ಈಗಲೂ ನಮ್ಮ ಕಣ್ಮುಂದೆ ಇದ್ದಾರೆ. ಇದು ಕೂಡ ಪಕ್ಷಪಾತವೇ. ಸ್ವಜನಪಕ್ಷಪಾತ.

ಉದಾಹರಣೆಗೆ, ಬಿಜೆಪಿ ರಾಷ್ಟ್ರೀಯ ಘಟಕದಲ್ಲಿ ಇವತ್ತಿಗೂ ತಮ್ಮ ಪ್ರಭಾವ, ವರ್ಚಸ್ಸು ಉಳಿಸಿಕೊಂಡಿರುವ ಅನಂತ್ ಕುಮಾರ್ ಅವರ ಬಗ್ಗೆ ಕೆಲ ಮಾಧ್ಯಮಗಳು ಚಕಾರ ಎತ್ತುವುದಿಲ್ಲ. ಹುಡ್ಕೋ ಹಗರಣ, ಅದಮ್ಯ ಚೇತನ ಟ್ರಸ್ಟ್. ಒಂದು ಕಾಲದಲ್ಲಿ ಟಿಪಿಕಲ್ ಮಧ್ಯಮವರ್ಗದ ಜೀವನ ನಡೆಸುತ್ತಿದ್ದ ಅನಂತಕುಮಾರ್ ಅವರ ಇತ್ತೀಚಿನ ಗಳಿಕೆ ಬಗ್ಗೆ ಮಾಧ್ಯಮಗಳು ಕನಿಷ್ಠ ಮಟ್ಟದಲ್ಲೂ ಪ್ರಶ್ನಿಸುವುದಿಲ್ಲ.

ಇದರರ್ಥ: ಅನಂತ್ ಕುಮಾರ್‌ರಂತಹ ರಾಜಕಾರಣಿಗಳಿಗೆ ಮಾಧ್ಯಮವನ್ನು ತುಂಬಾ ಚೆನ್ನಾಗಿ ಮ್ಯಾನೇಜ್ ಮಾಡುವುದು ಗೊತ್ತಿದೆ ಎಂದು. ಹೀಗಾಗಿಯೇ ಮಾಧ್ಯಮಗಳನ್ನು ಯಾರು, ಹೇಗೆ ಬೇಕಾದರೂ ಮ್ಯಾನೇಜ್ ಮಾಡಬಹುದು ಎನ್ನುವಂತಾಗಿದೆ. ಮೀಡಿಯಾ ಮ್ಯಾನೇಜ್ ಮಾಡಲಿಕ್ಕಾಗಿಯೇ ರಾಜಕಾರಣಿಗಳಿಗೆ ಒಂದು ಕೋರ್ಸ್ ಮಾಡಬಹುದೇನೋ?

ಇದೆಲ್ಲದರ ಮಧ್ಯೆಯೇ ಮಾಧ್ಯಮ ವಲಯದಲ್ಲಿ ಇನ್ನೂ ಒಂದಷ್ಟು ಭರವಸೆಗಳು ಉಳಿದುಕೊಂಡಿವೆ. ಆದರೆ ಇಂಥ ಭರವಸೆಗಳು ಬಹು ಕಾಲ ಉಳಿಯವುದಿಲ್ಲ ಎಂದೆನಿಸುತ್ತದೆ. ಯಾಕೆಂದರೇ, ವಸ್ತುನಿಷ್ಠ ವರದಿ ಮಾಡಲು ತೆರಳುವ ಮಾಧ್ಯಮ ಪ್ರತಿನಿಧಿಗಳಿಗೆ, ಭ್ರಷ್ಟ ಚುನಾಯಿತ ಪ್ರತಿನಿಧಿಗಳು ಅಡೆ ತಡೆ ಒಡ್ಡುತ್ತಿದ್ದಾರೆ.

ಇದಕ್ಕೊಂದು ಉದಾಹರಣೆ ಇಲ್ಲಿದೆ. ಚಿಕ್ಕಮಗಳೂರಿನ ಶಾಸಕ ಸಿ.ಟಿ.ರವಿ (ಬಿ.ಜೆ.ಪಿ.) ಅವರು ನಗರಾಭಿವೃದ್ಧಿ ಪ್ರಾಧಿಕಾರದ ಮೇಲೆ ಪ್ರಭಾವ ಬೀರಿ ಅಧಿಕಾರ ದುರುಪಯೋಗ ಮಾಡಿಕೊಂಡಿರುವುದನ್ನು ವರದಿ ಮಾಡಿದ್ದ ಮಾಧ್ಯಮಗಳ ವಿರುದ್ಧ ಕಿಡಿ ಕಾರಿರುವುದು. ಇವರ ಕಿಡಿಗೆ ಮುಖ್ಯ ಕಾರಣ ಎಂದರೇ, ಕೆರೆ ಅಚ್ಚುಕಟ್ಟು ಪ್ರದೇಶ ಸುತ್ತಮುತ್ತ ಇದ್ದ 8 ಎಕರೆಯನ್ನು ತಮ್ಮ ಹಿಂಬಾಲಕರ ಮೂಲಕ ನೋಂದಣಿ ಮಾಡಿಸಿಕೊಂಡಿದ್ದನ್ನು, ಮತ್ತು ತಮ್ಮ ಪತ್ನಿ ಒಡೆತನದಲ್ಲಿರುವ ಜಮೀನಿನಲ್ಲೇ (3 ಎಕರೆ 8 ಗುಂಟೆ) ರೆಸಾರ್ಟ್ ನಿರ್ಮಾಣಕ್ಕೆ ಗುರುತು ಮಾಡಿಕೊಂಡಿದ್ದನ್ನು ಬಯಲಿಗೆಳೆದಿದ್ದಕ್ಕೆ.

ಇಂತಹ ವರದಿ ಸುದ್ದಿ ವಾಹಿನಿಯಲ್ಲಿ  ಬಿತ್ತರವಾಗಿದ್ದೇ ತಡ, “ಸುದ್ದಿ ವಾಹಿನಿ ತಮ್ಮನ್ನ ತೇಜೋವಧೆ ಮಾಡುತ್ತಿದೆ, ಕ್ಷೇತ್ರದಲ್ಲಿ ತಲೆ ಎತ್ತಿಕೊಂಡು ಕೆಲಸ ಮಾಡಲಿಕ್ಕೆ ಆಗುತ್ತಿಲ್ಲ. ತಮ್ಮ ಹಕ್ಕುಗಳಿಗೆ ಚ್ಯುತಿ ಬಂದಿದೆ,” ಎಂದು ತುಂಬಿದ ಸದನದಲ್ಲೇ ಅಲವತ್ತುಕೊಂಡು, ಆ ಸುದ್ದಿವಾಹಿನಿ ವಿರುದ್ಧ ಹಕ್ಕುಚ್ಯುತಿ ಮಂಡಿಸಿದರು.

ಅಸಲಿಗೆ, ಈ ಸುದ್ದಿಯನ್ನು ಬಿತ್ತರಿಸಿದ ಸುದ್ದಿ ವಾಹಿನಿಗೆ ಯಾರೊಬ್ಬರ ತೇಜೋವಧೆಗಿಂತ ಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಹೇಗೆ ಕಾರ್ಯ ನಿರ್ವಹಿಸುತ್ತಿದೆ, ಸ್ಥಳೀಯ ಶಾಸಕ ಹಾಗೂ ಪ್ರಾಧಿಕಾರದ ಸದಸ್ಯ ಸಿ.ಟಿ.ರವಿ ಅವರು ಹೇಗೆ ಪ್ರಭಾವ ಬೀರಿದ್ದಾರೆ ಎಂಬಷ್ಟೇ ವಿಷಯದ ಬಗ್ಗೆ ದಾಖಲೆಗಳ ಸಮೇತ ಜನರ ಮುಂದೆ ಇಟ್ಟಿತ್ತು. ಇದು ಹೇಗೆ ಹಕ್ಕುಚ್ಯುತಿ ಆಗುತ್ತದೆ?

ಹಾಗೆ ನೋಡಿದರೆ, ಇತ್ತೀಚಿನ ವರ್ಷಗಳಲ್ಲಿ ಸುದ್ದಿವಾಹಿನಿ ವಿರುದ್ಧ ಹಕ್ಕುಚ್ಯುತಿ ಮಂಡನೆಯಾಗಿದ್ದು ಇದೇ ಪ್ರಥಮ ಬಾರಿ. ಹಿಂದೆ ಲಂಕೇಶ್ ಪತ್ರಿಕೆ ವಿರುದ್ಧವೂ ಒಮ್ಮೆ ಹಕ್ಕುಚ್ಯುತಿ ಮಂಡನೆಯಾಗಿತ್ತು. ಲಂಕೇಶ್ ಮತ್ತು ವರದಿಗಾರ ಟಿ.ಕೆ.ತ್ಯಾಗರಾಜ್ ಅವರನ್ನು ಸದನಕ್ಕೆ ಕರೆಸಿ ಛೀಮಾರಿ ಹಾಕಬೇಕು ಎಂದು ವಿಧಾನಸಭೆ ಸದಸ್ಯರು ಪಟ್ಟು ಹಿಡಿದಿದ್ದರು. ಇದಕ್ಕೆ ಕಾರಣವಾಗಿದ್ದು ಲಂಕೇಶ್ ಪತ್ರಿಕೆಯಲ್ಲಿ “ಶಾಸಕಿಯರ ಕಾಲ ಹರಣ” ಶೀರ್ಷಿಕೆಯಲ್ಲಿ ಪ್ರಕಟವಾಗಿದ್ದ ವರದಿ.

ಶಾಸಕಿಯರು ಸದನದಲ್ಲಿ ಹೇಗೆ ಕಾರ್ಯ ನಿರ್ವಹಿಸಬೇಕಿತ್ತು, ಹೇಗೆ ಕಾರ್ಯ ನಿರ್ವಹಿಸಿದ್ದಾರೆ ಎಂಬ ಬಗ್ಗೆ ಪ್ರಕಟವಾಗಿದ್ದ ಆ ವರದಿಯನ್ನು ವಿವಿಧ ಪಕ್ಷಗಳನ್ನು ಪ್ರತಿನಿಧಿಸಿದ್ದ ಶಾಸಕಿಯರು ಅರಗಿಸಿಕೊಳ್ಳಲಿಲ್ಲ. ಈ ವರದಿಯಿಂದ ತಮ್ಮ ಹಕ್ಕುಗಳಿಗೆ ಚ್ಯುತಿ ಬಂದಿದೆ ಎಂದು ಬೊಬ್ಬೆ ಹಾಕಿದ್ದರು. ಶಾಸಕಿಯರ ಕಾಲ ಹರಣ ಶೀರ್ಷಿಕೆಯ ವರದಿ ಏಕಮುಖವಾಗಿರಲಿಲ್ಲ. ಬಹುಮುಖಿಯಾಗಿದ್ದ ಈ ವರದಿಯನ್ನ ಶಾಸಕಿಯರು ಓದಿ, ಆತ್ಮ ವಿಮರ್ಶೆ ಮಾಡಿಕೊಳ್ಳಬೇಕಿತ್ತು. ಆದರೆ ಅಂಥ ಕೆಲಸ ಕಡೆಗೂ ಆಗಲೇ ಇಲ್ಲ.

ಲಂಕೇಶ್ ಪತ್ರಿಕೆ ವಿರುದ್ಧ ಹಕ್ಕುಚ್ಯುತಿ ಮಂಡನೆಯಾದಾಗ ಅದನ್ನು ಬಲವಾಗಿ ವಿರೋಧಿಸಿದವರು ಶಾಸಕರಾಗಿದ್ದ ವಾಟಾಳ್ ನಾಗರಾಜ್. ಹಾಗೆ ನೋಡಿದರೆ, ವಾಟಾಳ್ ನಾಗರಾಜರ ಕಾರ್ಯ ವೈಖರಿ ಬಗ್ಗೆಯೂ ಲಂಕೇಶ್ ಪತ್ರಿಕೆ ಕುಟುಕಿತ್ತು (ವಟಗುಟ್ಟುವ ವಾಟಾಳ್, ಕನ್ನಡ ಓರಾಟಗಾರ ವಾಟಾಳ್, ಇತ್ಯಾದಿ ವರದಿಗಳು). ಇಷ್ಟೆಲ್ಲಾ ಆದರೂ ವಾಟಾಳ್ ನಾಗರಾಜರು ’ಲಂಕೇಶ್ ಪತ್ರಿಕೆ’ ಪರವಾಗಿ ಮಾತನಾಡಿ, ವಸ್ತುನಿಷ್ಠ ಪತ್ರಿಕೋದ್ಯಮಕ್ಕೆ ಬೆಂಬಲವಾಗಿ ನಿಂತುಕೊಂಡರು. ಆಗಲೇ ಅನ್ನಿಸುವುದು ಸದನದಲ್ಲಿ ವಾಟಾಳ್ ನಾಗರಾಜ್ ಥರದವರು ಇರಬೇಕು ಎಂದು. ಹೀಗೆಂದ ಮಾತ್ರಕ್ಕೆ ಅದು ವಾಟಾಳ್ ನಾಗರಾಜರ ಓಲೈಕೆಯಲ್ಲ. ಅವರನ್ನು ಪ್ರಶ್ನಿಸುವುದು ಬೇಡ, ಕನ್ನಡ ಚಳವಳಿಯಿಂದ ಸ್ವಂತ ಕಲ್ಯಾಣ ಮಾಡಿಕೊಂಡಿರುವುದನ್ನೂ ಪ್ರಶ್ನಿಸುವುದು ಬೇಡ ಎಂದಲ್ಲ.

ಈಗ ಗೌರಿ ಲಂಕೇಶ್ ಪತ್ರಿಕೆ ವಿರುದ್ಧವೂ ಖುದ್ದು ಸಭಾಪತಿ ಬೋಪಯ್ಯ ಅವರೇ ಹಕ್ಕುಚ್ಯುತಿ ಮಂಡಿಸಿದ್ದಾರೆ. (ವಿಧಾನಸೌಧ, ವಿಧಾನಸಭೆಯಲ್ಲಿ ಕೆಲ ವಿಭಾಗಗಳಿಗೆ ನಡೆದಿರುವ ನೇಮಕಾತಿಗೆ ಸಂಬಂಧಿಸಿದಂತೆ.)

ಆದರೆ, ಸಿ.ಟಿ.ರವಿ ಅವರು ಸುದ್ದಿವಾಹಿನಿ ವಿರುದ್ಧ ಹಕ್ಕು ಚ್ಯುತಿ ಮಂಡಿಸಿದ ಸಂದರ್ಭದಲ್ಲಿ ಎಚ್.ಡಿ.ರೇವಣ್ಣ ಅವರೊಬ್ಬರನ್ನು ಹೊರತುಪಡಿಸಿ ಉಳಿದ ಶಾಸಕರು, ಇದಕ್ಕೂ ತಮಗೂ ಸಂಬಂಧ ಇಲ್ಲವೇ ಇಲ್ಲ ಎಂಬಂತೆ ಕುಳಿತಿದ್ದರು. ಕನಿಷ್ಠ ಶಾಸಕರ ಹಕ್ಕುಗಳೇನು? ಬಾಧ್ಯತೆಗಳೇನು? ಎಂಬ ಬಗ್ಗೆ ಸದನದಲ್ಲಿ ಕನಿಷ್ಠ ಚರ್ಚೆ ಆಗಬೇಕಿತ್ತು. ಅಂಥ ಚರ್ಚೆ ಆಗಲೇ ಇಲ್ಲ.

ಜುಲೈ 1ರಂದು ಆಚರಿಸುವ ಪತ್ರಿಕಾ ದಿನಾಚರಣೆಗಳಲ್ಲಂತೂ ಮುಖ್ಯಮಂತ್ರಿಯಾದಿಯಾಗಿ ಮಂತ್ರಿ ಮಹೋದಯರು, ಶಾಸಕರು, ’ಮಾಧ್ಯಮಗಳು ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸಬೇಕು, ವಸ್ತುನಿಷ್ಠ ವರದಿಗಳನ್ನ ಪ್ರಕಟಿಸಬೇಕು, ಮಾಧ್ಯಮಗಳು ಸ್ವತಂತ್ರವಾಗಿ ಕಾರ್ಯನಿರ್ವಹಿಸುವುದಿಕ್ಕೆ ಪೂರಕವಾದ ವಾತಾವರಣ ಇರಬೇಕು…’ ಹೀಗೆ ಬಣ್ಣ ಬಣ್ಣದ ಮಾತುಗಳನ್ನಾಡುತ್ತಲೇ ಇದ್ದಾರೆ. ಇದು ವಿಪರ್ಯಾಸವಲ್ಲದೆ ಮತ್ತೇನು? ವಸ್ತುನಿಷ್ಠತೆಯ ಬಗ್ಗೆ ಯಾರು ಮಾತನಾಡಿದ್ದಾರೋ ಅವರ ಬಗ್ಗೆಯೇ ವಸ್ತುನಿಷ್ಠ ವರದಿ ಪ್ರಕಟವಾದಾಗ ಅದನ್ನ ಅರಗಿಸಿಕೊಳ್ಳುವುದಿಲ್ಲ.

ಈಗ ನೀವೇ ಹೇಳಿ: ಮಾಧ್ಯಮಗಳು ಹೇಗೆ ಕಾರ್ಯ ನಿರ್ವಹಿಸಬೇಕು? ಯಾರ ಪರವಾಗಿರಬೇಕು? ಶಾಸಕರ ಹಕ್ಕು ಬಾಧ್ಯತೆಗಳೇನು? ನಿಜಕ್ಕೂ ಹಕ್ಕುಚ್ಯುತಿ ಆಗುವುದು ಯಾರಿಗೆ? ಯಾವ ಸಂದರ್ಭದಲ್ಲಿ? ಭ್ರಷ್ಟಾಚಾರ, ಅಧಿಕಾರ ದುರುಪಯೋಗ, ಪ್ರಭಾವ ಬೀರುವುದು, ಇಂಥವುಗಳ ಬಗ್ಗೆ ವರದಿ ಬಿತ್ತರಿಸಿದರೇ ಹಕ್ಕು ಚ್ಯುತಿ ಹೇಗಾಗುತ್ತದೆ? ಇಷ್ಟೆಲ್ಲಾ ಅಡೆ ತಡೆಗಳ ಮಧ್ಯೆ ಮಾಧ್ಯಮಗಳು ಹೇಗೆ ಕಾರ್ಯ ನಿರ್ವಹಿಸಬೇಕು?

Leave a Reply

Your email address will not be published. Required fields are marked *