Daily Archives: September 25, 2012

ಪ್ರತಿಪಕ್ಷದಿಂದ ಅಧಿಕಾರದೆಡೆಗೆ ಬಿಜೆಪಿ ನಡೆ


-ಚಿದಂಬರ ಬೈಕಂಪಾಡಿ


ಕರ್ನಾಟಕದ ಬಿಜೆಪಿ ಸರ್ಕಾರ ನಿಜಕ್ಕೂ ರಾಜಕೀಯ ಇತಿಹಾಸದಲ್ಲಿ ಹೊಸ ಪರಂಪರೆಯನ್ನೇ ಹುಟ್ಟುಹಾಕಿದೆ ಎನ್ನಬಹುದು. ಯಾವುದೇ ಪಕ್ಷಕ್ಕೂ ಜನ ಪೂರ್ಣ ಬಹುಮತ ಕೊಡದಿದ್ದಾಗ ಸಂಖ್ಯಾಬಲ ಒಟ್ಟುಗೂಡಿಸಿಕೊಂಡು ಅಧಿಕಾರದ ಚುಕ್ಕಾಣಿ ಹಿಡಿದು ಅದು ಸಾಗಿ ಬಂದ ಹಾದಿಯನ್ನು ಅವಲೋಕಿಸಿದರೆ ಯಾರೇ ಆದರೂ ಕನಿಕರ ಪಡಬೇಕು. ಹಾಗೆಂದು ಕರ್ನಾಟಕದಲ್ಲಿ ಬಿಜೆಪಿ ಅಧಿಕಾರದ ಗದ್ದುಗೆಯನ್ನು ಇಷ್ಟೊಂದು ಸುಲಭವಾಗಿ ದಕ್ಕಿಸಿಕೊಳ್ಳುತ್ತೇನೆಂದು ಭಾವಿಸಲು ಕಾರಣಗಳೇ ಇರಲಿಲ್ಲ. 1980ರ ದಶಕದಲ್ಲಿ ಶಾಸನ ಸಭೆ ಪ್ರವೇಶ ಮಾಡಲು ಆರಂಭಿಸಿ ಕೇಂದ್ರದಲ್ಲಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದಲ್ಲಿ ಮಿತ್ರಪಕ್ಷಗಳ ಸಹಕಾರದಲ್ಲಿ ಸಮರ್ಥವಾಗಿ ಅಧಿಕಾರ ನಡೆಸಿದ್ದೇ ಕರ್ನಾಟಕದಲ್ಲೂ ಜನ ಬಿಜೆಪಿ ಪರ ಒಂದು ರೀತಿಯ ಅನುಕಂಪದ ಮೂಲಕವೇ ಅಧಿಕಾರ ಕೊಟ್ಟು ನೋಡಬಹುದೇನೋ ಎನ್ನುವ ಭಾವನೆ ಮೂಡಲು ಕಾರಣ.

ಕರ್ನಾಟಕವನ್ನು ಕಾಂಗ್ರೆಸ್ ಪಕ್ಷ ಆಳ್ವಿಕೆ ಮಾಡುತ್ತಲೇ ರಾಮಕೃಷ್ಣ ಹೆಗಡೆ, ಎಸ್.ಆರ್.ಬೊಮ್ಮಾಯಿ ಮತ್ತು ಎಚ್.ಡಿ.ದೇವೇಗೌಡರ ಸಮಾಗಮನದ ಮೂಲಕ ತನ್ನ ಹಿಡಿತ ಕಳೆದುಕೊಂಡು ಮೂಲೆಗುಂಪಾಯಿತು.ಒಂದು ದಶಕ ಕಾಲ ಜನತಾಪರಿವಾರ ಕರ್ನಾಟಕವನ್ನು ಆಳಿ ಪಂಚಾಯತ್‌ರಾಜ್ ವ್ಯವಸ್ಥೆಯನ್ನು ಜಾರಿಗೆ ತಂದು ತನ್ನೊಳಗಿನ ಕಲಹದಿಂದ ಅಧಿಕಾರ ಕಳೆದುಕೊಂಡಿತು. ಮತ್ತೆ ಕಾಂಗ್ರೆಸ್ ವೀರೇಂದ್ರ ಪಾಟೀಲ್, ಎಸ್.ಎಂ.ಕೃಷ್ಣ ಅವರ ಸಾರಥ್ಯದಲ್ಲಿ ಅಧಿಕಾರಕ್ಕೇರಿತು. ರಾಜೀವ್ ಗಾಂಧಿ ಅವರು ವೀರೇಂದ್ರ ಪಾಟೀಲ್ ಅವರನ್ನು ಅಧಿಕಾರದಿಂದ ಇಳಿಸಿದ ಕ್ಷಣದಿಂದಲೇ ಕಾಂಗ್ರೆಸ್ ಪಕ್ಷ ಈ ನಾಡಿನ ಅತ್ಯಂತ ಬಲಿಷ್ಠ ಸಮುದಾಯಗಳಲ್ಲಿ ಒಂದಾದ ವೀರಶೈವರ ಅವಕೃಪೆಗೆ ಗುರಿಯಾಯಿತು.

ವೀರೇಂದ್ರ ಪಾಟೀಲ್ ಅನಾರೋಗ್ಯಕ್ಕೆ ತುತ್ತಾದರು ಎನ್ನುವುದನ್ನು ಬಿಟ್ಟರೆ ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಅನಿವಾರ್ಯತೆಯೂ ಇರಲಿಲ್ಲ ಮತ್ತು ಪಾಟೀಲ್‌ರನ್ನು  ರಾಜೀವ್ ಗಾಂಧಿ ಅಧಿಕಾರದಿಂದ ಇಳಿಸಿದ ಕ್ರಮವೂ ಸರಿಯಾಗಿರಲಿಲ್ಲ. ಎಸ್.ಬಂಗಾರಪ್ಪ, ಎಂ.ವೀರಪ್ಪ ಮೊಯ್ಲಿ ಅವರಿಂದಲೂ ಕಾಂಗ್ರೆಸ್ ಪಕ್ಷವನ್ನು ಶಾಶ್ವತವಾಗಿ  ಅಧಿಕಾರದಲ್ಲಿ ಉಳಿಸಿಕೊಳ್ಳುವುದು ಸಾಧ್ಯವಾಗಲಿಲ್ಲ. ಮತ್ತೆ ದೇವೇಗೌಡರು ಕರ್ನಾಟಕದಲ್ಲಿ ಜನತೆಯ ವಿಶ್ವಾಸಗಳಿಸಿ ಮುಖ್ಯಮಂತ್ರಿಯಾಗುವ ಕನಸು ಸಾಕಾರಗೊಳಿಸಿಕೊಂಡರು, ಅದೇ ಹೊತ್ತಿಗೆ ಪ್ರಧಾನಿ ಹುದ್ದೆಗೂ ಏರಿದರು. ಈ ಕಾಲಕ್ಕೂ ಬಿಜೆಪಿ ಅಧಿಕಾರ ಸೂತ್ರ ಹಿಡಿಯುವ ಲಕ್ಷಣಗಳು ಗೋಚರಿಸಿರಲಿಲ್ಲ. ಎಸ್.ಎಂ.ಕೃಷ್ಣ `ಪಾಂಚಜನ್ಯ’ ಮೊಳಗಿಸಿ ಕಾಂಗ್ರೆಸ್ ಪಕ್ಷವನ್ನು ಮತ್ತೊಮ್ಮೆ ಕರ್ನಾಟಕದಲ್ಲಿ ಅಧಿಕಾರಕ್ಕೆ ತಂದರು. ಆನಂತರ ಧರಂ ಸಿಂಗ್ ಅಧಿಕಾರದೊಂದಿಗೆ ಕಾಂಗ್ರೆಸ್ ಯುಗ ಮುಗಿಯಿತು.

ಎಚ್.ಡಿ.ಕುಮಾರಸ್ವಾಮಿ ರಾಜ್ಯರಾಜಕಾರಣದಲ್ಲಿ ಇದ್ದಕ್ಕಿದ್ದಂತೆಯೇ ಪ್ರಭಾವಿಯಾಗಿ ಬೆಳೆದು ಬೆರಗು ಮೂಡಿಸಿದರು. ಮೂರು ದಶಕಗಳ ಕಾಲ ವಿಧಾನಸಭೆಯ ಒಳಗೆ ಮತ್ತು ಹೊರಗೆ ಬಿಜೆಪಿಯ ಸಾರಥಿಯಾಗಿ ಬಿ.ಎಸ್.ಯಡಿಯೂರಪ್ಪ ಮಾಡಿದ ಹೋರಾಟಗಳು, ಜನಪರವಾದ ಅವರ ನಿಲುವುಗಳು ಅಧಿಕಾರದ ಸನಿಹಕ್ಕೆ ಬಂದು ನಿಲ್ಲುವಂತೆ ಮಾಡಿತು. ರಾಜಕೀಯದ ಇತಿಹಾಸವನ್ನು ಮತ್ತೊಮ್ಮೆ ಅವಲೋಕಿಸಿದರೆ ಬಿಜೆಪಿ ಕರ್ನಾಟಕದಲ್ಲಿ ಭದ್ರ ನೆಲೆಯೂರಲು ಮೂರು ಮಂದಿ ಗೋಚರಿಸುತ್ತಾರೆ.

ಎಚ್.ಡಿ.ಕುಮಾರಸ್ವಾಮಿ, ಬಿ.ಎಸ್.ಯಡಿಯೂರಪ್ಪ ಮತ್ತು ಡಿ.ವಿ.ಸದಾನಂದ ಗೌಡ. ಜೆಡಿಎಸ್ ಮುನ್ನಡೆಸುತ್ತಿದ್ದವರು ಎಚ್.ಡಿ.ದೇವೇಗೌಡರೇ ಆಗಿದ್ದರೂ ನಾಡಿನ ಜನ ಕುಮಾರಸ್ವಾಮಿಯವರನ್ನು ಅತಿಯಾಗಿ ನೆಚ್ಚಿಕೊಂಡಿದ್ದರು. ಬಿಜೆಪಿಯನ್ನು ತಾತ್ವಿಕವಾಗಿ ಒಪ್ಪದಿದ್ದರೂ ಬಿ.ಎಸ್.ಯಡಿಯೂರಪ್ಪ ಅವರ ಕಾಳಜಿಯನ್ನು ಸಂಶಯದಿಂದ ನೋಡಲು ಕಾರಣಗಳೇ ಇರಲಿಲ್ಲ. ವಯಸ್ಸಿನಲ್ಲಿ ಕಿರಿಯರಾಗಿದ್ದರೂ ಡಿ.ವಿ.ಸದಾನಂದ ಗೌಡರು ಸಂಸತ್ ಸದಸ್ಯರಾಗಿ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ನಡೆದುಕೊಳ್ಳುತ್ತಿದ್ದ ರೀತಿ ಭರವಸೆ ಮೂಡಿಸಿದ್ದು ಸುಳ್ಳಲ್ಲ. ಇಂಥ ಕಾಲಘಟ್ಟದಲ್ಲೇ 20-20 ಕರ್ನಾಟಕದಲ್ಲಿ ಪ್ರಚಲಿತಕ್ಕೆ ಬರಲು ಕಾರಣವಾಯಿತು.

ಕುಮಾರಸ್ವಾಮಿಯವರ ಯುವಮನಸ್ಸಿಗೆ ಜನ ಮನಸೋತಿದ್ದರು. ಯಡಿಯೂರಪ್ಪ ಅವರ ಹೋರಾಟದ ಕೆಚ್ಚನ್ನು ಜನ ಮೆಚ್ಚಿದ್ದರು. ಸದಾನಂದ ಗೌಡರ ಪಾದರಸದಂಥ ನಡವಳಿಕೆಯನ್ನು ಪಕ್ಷಾತೀತವಾಗಿ ಹೊಗಳುತ್ತಿದ್ದರು. ನಿಚ್ಚಳ ಬಹುಮತವಿಲ್ಲದಿದ್ದಾಗ ಕುಮಾರಸ್ವಾಮಿ ಮತ್ತು ಯಡಿಯೂರಪ್ಪ ಅವರು ಮಾಡಿಕೊಂಡ 20 ತಿಂಗಳ ಅಧಿಕಾರ ಸೂತ್ರವನ್ನು ಜೆಡಿಎಸ್ ನಾಯಕರಾಗಿ ದೇವೇಗೌಡರು ವಿರೋಧಿಸಿದ್ದರು, ಆದರೆ ಬಿಜೆಪಿ ರಾಜ್ಯ ಅಧ್ಯಕ್ಷರಾಗಿ ಸದಾನಂದ ಗೌಡರು ದೆಹಲಿ ಹೈಕಮಾಂಡ್‌ನ್ನು ಮನವೊಲಿಸಿದ್ದರು. ಈ ತ್ರಿಮೂರ್ತಿಗಳ ಸಮತೋಲನದ ನಡಿಗೆಯೇ ಜೆಡಿಎಸ್ ಮತ್ತು ಬಿಜೆಪಿ ಸರ್ಕಾರದ ಅಸ್ತಿತ್ವಕ್ಕೆ ಕಾರಣವಾಗಿತ್ತು.

ಜನರು ನಿರೀಕ್ಷೆ ಮಾಡದಿದ್ದ ಸ್ವರೂಪದಲ್ಲಿ ಮೊದಲ ವರ್ಷ ಈ ಜುಗಲ್ ಬಂಧಿ ಸರ್ಕಾರ ಕರ್ನಾಟಕವನ್ನು ಹೊಸ ದಿಕ್ಕಿನತ್ತ ಕೊಂಡೊಯ್ದಿತ್ತು. ಯಡಿಯೂರಪ್ಪ ಅಕ್ಷರಷ: ಅಧಿಕಾರಕ್ಕೆ ಒಗ್ಗಿಕೊಳ್ಳಲು ಆ ಸಂದರ್ಭದಲ್ಲಿ ಹೆಣಗಿದ್ದರು ಅಂದರೂ ತಪ್ಪಾಗಲಾರದು. ಯಾಕೆಂದರೆ ಯಡಿಯೂರಪ್ಪ ಟ್ರೆಜರಿ ಬೆಂಚಲ್ಲಿ ಹಿಂದೆಂದೂ ಕುಳಿತವರೇ ಅಲ್ಲದ ಕಾರಣ ಅದೆಷ್ಟೋ ಸಲ ಅವರು ವಿಧಾನ ಸಭೆಯಲ್ಲಿ ಪ್ರತಿಪಕ್ಷದವರಂತೆ ನಡೆದುಕೊಳ್ಳುತ್ತಿದ್ದರು, ತಮ್ಮವರ ವಿರುದ್ಧವೇ ತಿರುಗಿಬೀಳುತ್ತಿದ್ದರು. ಇಂಥ ಸಂದರ್ಭದಲ್ಲಿ ಡಿ.ವಿ.ಸದಾನಂದ ಗೌಡರು ಸರ್ಕಾರದ ಮೈತ್ರಿಗೆ ಭಂಗ ಬರದ ರೀತಿಯಲ್ಲಿ ಪಕ್ಷ ಮುನ್ನಡೆಸಿದ್ದರು ಎನ್ನುವುದನ್ನು ಮರೆಯುವಂತಿಲ್ಲ.

ಮೊದಲ 20 ತಿಂಗಳ ಅಧಿಕಾರ ನಿರ್ವಹಣೆ ನಂತರ ಬಿಜೆಪಿಗೆ ಅಧಿಕಾರ ಹಸ್ತಾಂತರಿಸುವ ಮೂರು ತಿಂಗಳ ಅವಧಿ ಜೆಡಿಎಸ್ ಮತ್ತು ಬಿಜೆಪಿಯ ವೈಮನಸ್ಸಿಗೆ ಸಿಲುಕಿ ತತ್ತರಿಸಿತು. ಯಡಿಯೂರಪ್ಪ ಅವರ ಹಠ, ಕುಮಾರಸ್ವಾಮಿಯವರ ಜಿದ್ದಿನ ಕಾರಣದಿಂದಾಗಿ ಸರ್ಕಾರ ಪತನವಾಯಿತು, ಮೈತ್ರಿ ಮುರಿದು ಬಿತ್ತು. ಕುಮಾರಸ್ವಾಮಿಯವರು ನುಡಿದಂತೆ ನಡೆದುಕೊಂಡು ಬಿಜೆಪಿಗೆ ಅಧಿಕಾರ ಹಸ್ತಾಂತರಿಸಿದ್ದರೆ ಬಹುಷ: ರಾಜಕೀಯದ ಚಿತ್ರಣವೇ ಬದಲಾಗುತ್ತಿತ್ತೇನೋ? ಯಡಿಯೂರಪ್ಪ ಅವರಿಗೆ ಜೆಡಿಎಸ್ ವಿರುದ್ಧ ಕಹಳೆ ಮೊಳಗಿಸಿ ಜನರ ಅನುಕಂಪ ಗಿಟ್ಟಿಸಿಕೊಳ್ಳಲು ಸುಲಭವಾಗುತ್ತಿರಲಿಲ್ಲವೇನೋ?   ಆದರೆ ಈ ಹೊತ್ತಿಗೆ ಕರ್ನಾಟಕದ ಜನರ ಮನಸ್ಸಿನಲ್ಲೂ ಬಿಜೆಪಿಯನ್ನು ಅಧಿಕಾರಕ್ಕೆ ತಂದು ನಿಲ್ಲಿಸುವ ನಿರ್ಧಾರ ನೆಲೆಯೂರಿತ್ತು. ಇದರ ಪರಿಣಾಮವೇ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳನ್ನು ಬದಿಗೆ ಸರಿಸಿ ಬಿಜೆಪಿ ಅಧಿಕಾರ ಸೂತ್ರಹಿಡಿಯಿತು. ಇದರಲ್ಲಿ ಬಳ್ಳಾರಿ ಗಣಿಧಣಿಗಳ ಪಾತ್ರವನ್ನು ಬಿಜೆಪಿ ಮರೆಯುವಂತಿಲ್ಲ. ಒಂದರ್ಥದಲ್ಲಿ ಬಿಜೆಪಿಗೆ ಕರ್ನಾಟಕದಲ್ಲಿ ಯಡಿಯೂರಪ್ಪ ಅವರನ್ನು ಬಿಟ್ಟರೆ ಜನಾಕರ್ಷಣೆ ಮಾಡುವಂತ ನಾಯಕರು ಮತ್ತೊಬ್ಬರಿರಲಿಲ್ಲ, ಈಗಲೂ ಈ ಕೊರತೆ ಬಿಜೆಪಿಯನ್ನು ಕಾಡುತ್ತಿದೆ. ಬಿಜೆಪಿ ಹೈಕಮಾಂಡ್ ಕೂಡಾ ಕರ್ನಾಟಕದಲ್ಲಿ ಯಡಿಯೂರಪ್ಪ ಅವರ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡುತ್ತಿರಲಿಲ್ಲ. ಇದಕ್ಕಿದ್ದ ಬಲವಾದ ಕಾರಣ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಯಡಿಯೂರಪ್ಪ ಅವರು ಪಟ್ಟಿದ್ದ ಶ್ರಮ. ಆದರೆ ಹೈಕಮಾಂಡ್ ಇಟ್ಟ ವಿಶ್ವಾಸವನ್ನು ಬಹುಕಾಲ ಯಡಿಯೂರಪ್ಪ ಉಳಿಸಿಕೊಳ್ಳಲಿಲ್ಲ ಎನ್ನುವುದು ದುರಂತ.

ಈಗ ಬಿಜೆಪಿ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ ಮೇಲೆ ಜನರಿಗಿದ್ದ ನಂಬಿಕೆ, ವಿಶ್ವಾಸಗಳು ಮಂಜಿನಂತೆ ಕರಗಿಹೋಗಿವೆ. ಐದು ವರ್ಷಕ್ಕೆ ಮೂರು ಮಂದಿ ಮುಖ್ಯಮಂತ್ರಿಗಳು. ಅಗಣಿತವಾದ ಹಗರಣಗಳು, ಜೈಲುಪಾಲಾದವರು, ಲೋಕಾಯುಕ್ತ, ಸಿಬಿಐ, ಕ್ರಿಮಿನಲ್ ಕೇಸುಗಳಿರುವುದು ಬಿಜೆಪಿಯವರ ಮೇಲೆಯೇ ಅತೀ ಹೆಚ್ಚು. ಅಧಿಕಾರ ಅಲ್ಪ ಅವಧಿಯಲ್ಲೇ ಇಷ್ಟೊಂದು ಪ್ರಮಾಣದ ಪ್ರಮಾದಗಳು ನಡೆದುಹೋಗಿವೆ ಎನ್ನುವುದನ್ನು ಜನ ಜೀರ್ಣಿಸಿಕೊಳ್ಳುವುದಾದರೂ ಹೇಗೆ?