ಸಿರಿಗೆರೆ ಮಠ : ಕಣ್ಣೀರ ಸಾಗರದೊಳಗೆ ಕಂಡ ಒಂದಷ್ಟು ‘ಭಿನ್ನ’ಕಲ್ಲುಗಳು

– ಜಿ.ಮಹಂತೇಶ್

ಸೆಪ್ಟೆಂಬರ್ 24, 2012. ಈ ದಿನ, ಕರ್ನಾಟಕದ “ಧಾರ್ಮಿಕ” ಲೋಕದಲ್ಲಿ ನಿಜಕ್ಕೂ ಅಚ್ಚಳಿಯದೆ ಉಳಿಯುವ ದಿನ. ‘ಸಿರಿಗೆರೆ’ಯಲ್ಲಿ ನಿರ್ಮಾಣವಾಗಿರುವ ಧಾರ್ಮಿಕ ಸಾಮ್ರಾಜ್ಯದಲ್ಲಿ (ಬೇಕಾದರೇ ಸಾಧು ಲಿಂಗಾಯತ ಸಾಮ್ರಾಜ್ಯ ಎಂದು ಓದಿಕೊಳ್ಳಬಹುದು) ಅನಭಿಷಿಕ್ತ ದೊರೆ ತರಹ ವಿಜೃಂಭಿಸುತ್ತಿರುವ ಸಾಧು ಸದ್ಧರ್ಮ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗಳು ಇದ್ದಕ್ಕಿದ್ದಂತೆ ಪೀಠದಿಂದ ಕೆಳಗಿಳಿಯಲು ಕೈಗೊಂಡ ನಿರ್ಧಾರವನ್ನು ತುಂಬಿದ ಸಭೆಯಲ್ಲಿ ಹೇಳುತ್ತಿದ್ದಂತೆ ಸಿರಿಗೆರೆ ಭಕ್ತ ಸಾಗರ, ಕಣ್ಣೀರಿನಲ್ಲಿ ಕೈ ತೊಳೆದು ಬಿಟ್ಟಿತು. ಭಕ್ತ ಸಾಗರಕ್ಕೆ ಹರಿದು ಬಂದ ಕಣ್ಣೀರಿನ ನದಿಗೆ ಡಾ.ಯಡ್ಡಿಯೂರಪ್ಪನವರ ಕಣ್ಣಾಲಿಗಳಿಂದಲೂ ಕಣ್ಣೀರು ಹರಿದಿದ್ದು ಇಲ್ಲಿ ವಿಶೇಷ.

ಸಿರಿಗೆರೆಯ ಡಾ.ಶಿವಮೂರ್ತಿ ಶಿವಾಚಾರ್ಯ ಶ್ರೀಗಳು, ರವಿಶಂಕರ್ ಗುರೂಜಿ ಅವರ ರೀತಿ ಅಂತಾರಾಷ್ಟ್ರೀಯ ಮನ್ನಣೆ ಪಡೆದ ಸ್ವಾಮೀಜಿ. ವಿದೇಶಗಳಲ್ಲೂ ಸಿರಿಗೆರೆ ಮಠಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳಿದ್ದಾರೆ. ಧಾರ್ಮಿಕ ಮತ್ತು ಶೈಕ್ಷಣಿಕ ವಲಯದಲ್ಲಿ ಸಾಕಷ್ಟು ಹೆಸರು ಮಾಡಿರುವ ಡಾ.ಶಿವಮೂರ್ತಿ ಶಿವಾಚಾರ್ಯ ಶ್ರೀಗಳು, ಇತರೆ ಕೋಮಿನ ಸ್ವಾಮೀಜಿಗಳಿಗಿಂತ ತುಂಬಾ ಭಿನ್ನ.

ಶಿವಮೂರ್ತಿ ಶಿವಾಚಾರ್ಯ ಶ್ರೀಗಳಿಗೆ ಧಾರ್ಮಿಕ ಕ್ಷೇತ್ರದಲ್ಲಿ ಇದ್ದ ಆಸಕ್ತಿಗಿಂತ, ಹೆಚ್ಚು ಆಸಕ್ತಿ ಇದ್ದಿದ್ದು ರಾಜಕೀಯದಲ್ಲೇ. ಅವರ ಕಾರ್ಯ ವೈಖರಿಯನ್ನ ನೋಡಿದರೆ ಇದು ಅರ್ಥ ಆಗಬಹುದೇನೋ. ಚಿತ್ರದುರ್ಗ, ದಾವಣಗೆರೆ, ಹಾವೇರಿ, ರಾಣೆಬೆನ್ನೂರು ಸೇರಿ ರಾಜ್ಯದ ವಿವಿಧೆಡೆ ನೆಲೆಗೊಂಡಿರುವ ಸಾಧು ಲಿಂಗಾಯತ ಕೋಮಿಗೆ ಸೇರಿರುವ ರಾಜಕಾರಣಿಗಳು, ಶ್ರೀಗಳು ಹಾಕುವ ಗೆರೆಯನ್ನ ದಾಟಲು ಹಿಂದೇಟು ಹಾಕುತ್ತಾರೆ.

ಕಾಂಗ್ರೆಸ್, ಬಿಜೆಪಿ ಪಕ್ಷದೊಂದಿಗೆ ಗುರುತಿಸಿಕೊಂಡಿರುವ ಸಾಧು ಲಿಂಗಾಯತ ಕೋಮಿಗೆ ಸೇರಿರುವ ರಾಜಕಾರಣಿಗಳ ಪಾಲಿಗೆ ಸಿರಿಗೆರೆ ಮಠ ಎಂಬುದು ಒಂದು ರೀತಿಯ ಹೈಕಮಾಂಡ್ ಇದ್ದ ಹಾಗೆ. ಅಂದ ಹಾಗೇ, ಇದೇನು ಗುಟ್ಟಿನ ವಿಚಾರವೂ ಅಲ್ಲ. ಪ್ರಮುಖ ರಾಜಕೀಯ ಪಕ್ಷಗಳ ಟಿಕೆಟ್ ಸಿಗಬೇಕೆಂದರೇ ಸಿರಿಗೆರೆಯ ಶಿವಮೂರ್ತಿ ಶಿವಾಚಾರ್ಯ ಶ್ರೀಗಳ ಕೃಪೆ ಇರಲೇಬೇಕು.

ಸಾಧು ಲಿಂಗಾಯತ ಕೋಮಿಗೆ ಸೇರಿರುವ ಚುನಾಯಿತ ಪ್ರತಿನಿಧಿಗಳಿಗೆ ಸೂಕ್ತ ಸ್ಥಾನಮಾನ ಮತ್ತು ರಾಜಕೀಯದಲ್ಲಿ ಪ್ರಾತಿನಿಧ್ಯ ಕೊಡಬೇಕು ಎಂದು ಕಣ್ಣಲ್ಲೇ ಇಶಾರೆ ತೋರುವಷ್ಟರ ಮಟ್ಟಿಗೆ ಪ್ರಭಾವ, ವರ್ಚಸ್ಸನ್ನು ಇವತ್ತಿಗೂ ಉಳಿಸಿಕೊಂಡಿರುವುದು ಇವರ ವಿಶೇಷ.

ಒಮ್ಮೆ ಹೀಗಾಯಿತು, ಬಹುಶಃ ತರಳಬಾಳು ಹುಣ್ಣಿಮೆ ಮಹೋತ್ಸವ ಇರಬೇಕು ಎಂದೆನಿಸುತ್ತದೆ. ವೇದಿಕೆ ಮೇಲೆ ಯಡಿಯೂರಪ್ಪ ಆಸೀನರಾಗಿದ್ದರು.( ಅಂದು ಅವರು ಮುಖ್ಯಮಂತ್ರಿ) ಅದೇ ಸಾಲಿನಲ್ಲಿ ‘ಘನತೆ’ವೆತ್ತ ರೇಣುಕಾಚಾರ್ಯರೂ ಇದ್ದರು. ತಮ್ಮನ್ನ ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎಂದು ಪದೇ ಪದೇ ಬೆಂಬಲಿಗರ ಮೂಲಕ ಒತ್ತಡ ತರುವ ಮೂಲಕ ಖುದ್ದು ಯಡಿಯೂರಪ್ಪನವರನ್ನೇ ಮುಜುಗರಕ್ಕೆ ಸಿಲುಕಿಸಿದ್ದರು.ಸಿ.ಎಂ. ಕುರ್ಚಿಯಲ್ಲೇ ಶಾಶ್ವತವಾಗಿ ಕೂರಬೇಕು ಎಂದು ಸ್ವಯಂ ನಿರ್ಧಾರ ಮಾಡಿಕೊಂಡಿದ್ದ ಯಡಿಯೂರಪ್ಪನವರಿಗೆಆಗುತ್ತಿದ್ದ ಭಿನ್ನಮತದ ಮುಜುಗರ ತಪ್ಪಿಸಬೇಕು ಎಂದು ಸಿರಿಗೆರೆ ಶ್ರೀಗಳಿಗೆ ಅನಿಸಿತೋ ಏನೋ… ಸಾವಿರಾರು ಭಕ್ತರು ನೆರೆದಿದ್ದ ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲೇ ರೇಣುಕಾಚಾರ್ಯರಿಗೆ ತೋರು ಬೆರಳಿನ ಮೂಲಕ ಗದರಿಸಿ, ಸುಮ್ಮನಾಗಿಸಿದ್ದರು. ಅಷ್ಟೇ ಅಲ್ಲ, ಮರು ಮಾತಾಡಡೆ ಯಡಿಯೂರಪ್ಪನವರ ವಿರುದ್ಧ ದನಿ ಎತ್ತದೇ ಸಹಕರಿಸಿಕೊಂಡು ಹೋಗಬೇಕು ಎಂದು ಹೇಳಿದ್ದರೆನ್ನಲಾದ ಮಾತುಗಳು ಸೂಚನೆ ತರಹ ಕೇಳಿಸಿದ್ದು ಮಾತ್ರ ಸುಳ್ಳಲ್ಲ. ಆ ಸೂಚನೆ ಜೊತೆಗೆ ಮತ್ತಿನ್ನೇನು ಸೂಚನೆಗಳು ಬಂದವೋ, ರೇಣುಕಾಚಾರ್ಯ ಮಠಾಧೀಶರ ಪಕ್ಕದಲ್ಲಿದ್ದ ಯಡಿಯೂರಪ್ಪನವರ ಕಾಲಿಗೂ ನಮಸ್ಕರಿಸಿದ್ದರು. ಶ್ರೀಗಳ ಈ ವರ್ತನೆ ಏನನ್ನ ತೋರಿಸುತ್ತದೆ ಅಂದರೇ, ಆಡಳಿತರೂಢ ಸರ್ಕಾರದ ಮೇಲೆ ಅವರಿಗಿರುವ ಪ್ರಭಾವ, ಪರೋಕ್ಷ ಹಿಡಿತ.

ಇನ್ನೂ ಒಂದು ನಿದರ್ಶನ ಇದೆ. ಕೃಷಿ, ತೋಟಗಾರಿಕೆ, ಸಕ್ಕರೆ ಖಾತೆ ಹೊಂದಿದ್ದ ಎಸ್.ಎ.ರವೀಂದ್ರನಾಥ್ (ಇವರ ಮೇಲೆ ಕಟು ಜಾತಿವಾದಿ ಎನ್ನುವ ಆರೋಪವೂ ಇದೆ) ಅವರು ಇಲಾಖೆಯಲ್ಲಿ ಹೇಳಿಕೊಳ್ಳುವಷ್ಟರ ಮಟ್ಟಿಗೇನೂ ಕೆಲಸ ಮಾಡದಿದ್ದರೂ ಅವರನ್ನೇ ಸಂಪುಟದಲ್ಲಿ ಇವತ್ತಿಗೂ ಮುಂದುವರಿದಿದ್ದರೇ ಅದರ ಹಿಂದೆ ಇರುವುದು ಸಿರಿಗೆರೆ ಡಾ.ಶಿವಮೂರ್ತಿ ಶಿವಾಚಾರ್ಯ ಶ್ರೀಗಳ ಅಭಯ ಹಸ್ತವೇ ಕಾರಣ. ಈ ನಗ್ನ ಸತ್ಯ ಇಡೀ ದಾವಣಗೆರೆ ಜಿಲ್ಲೆಗೇ ಗೊತ್ತಿದೆ.

ಸಿರಿಗೆರೆ ಮಠದ ನಿಷ್ಠಾವಂತ ಭಕ್ತರಾಗಿರುವ ಎಸ್.ಎ. ರವೀಂದ್ರನಾಥ್ರ ಬಗ್ಗೆ ಯಡಿಯೂರಪ್ಪನವರು ಎಲ್ಲಿಯೂ ತುಟಿ ಬಿಚ್ಚಿಲ್ಲ. ಭಿನ್ನಮತ ಸ್ಫೋಟಗೊಂಡ ಸಂದರ್ಭದಲ್ಲಿ ಯಡಿಯೂರಪ್ಪನವರ ಪರ ರವೀಂದ್ರನಾಥರು ನಿಲ್ಲದೇ ಯಡಿಯೂರಪ್ಪನವರ ವಿರೋಧಿ ಗುಂಪಿನೊಂದಿಗೆ ಕಾಣಿಸಿಕೊಂಡಿದ್ದರೂ ಸಿರಿಗೆರೆ ಶ್ರೀಗಳ ಕೋಪಕ್ಕೆ ಗುರಿಯಾಗಬಾರದೆಂದು ಅವರ ಕುರ್ಚಿ ಅಲುಗಾಡಿಸಲಿಲ್ಲ ಎನ್ನುವುದು ಇಲ್ಲಿ ವಿಶೇಷ.

ಇನ್ನು, ಸಿರಿಗೆರೆ ಶ್ರೀಗಳ ಹಿಡಿತ ಕೇವಲ ಯಡಿಯೂರಪ್ಪನವರ ಮೇಲಷ್ಟೇ ಅಲ್ಲ. ಈ ಹಿಂದೆ ಎಸ್.ಎಂ.ಕೃಷ್ಣ ಅವರ ನೇತೃತ್ವದಲ್ಲಿದ್ದ ಕಾಂಗ್ರೆಸ್ ಸರ್ಕಾರದ ಮೇಲೂ ಇತ್ತು. ಆ ಸಂದರ್ಭದಲ್ಲಿ ಪ್ರದರ್ಶನವಾಗಿದ್ದು ಸಿರಿಗೆರೆ ಶ್ರೀಗಳ ದಾರ್ಷ್ಟ್ಯ. ಸರ್ಕಾರದಿಂದ ಅನುದಾನ ತೆಗೆದುಕೊಳ್ಳುತ್ತಿದ್ದ ಎಲ್ಲಾ ಶಾಲೆಗಳು, ಸರ್ಕಾರಕ್ಕೆ ಲೆಕ್ಕ ಕೊಡಬೇಕು ಎಂದು ಅಂದಿನ ಶಿಕ್ಷಣ ಸಚಿವ ಎಚ್.ವಿಶ್ವನಾಥ್ ಅವರು ಹೇಳುವ ಮೂಲಕ ಮಠಗಳ ವಲಯದಲ್ಲಿ ಭಾರೀ ಬಿರುಗಾಳಿಯನ್ನೇ ಎಬ್ಬಿಸಿದ್ದರು. ಇದು, ಸಿರಿಗೆರೆ ಮಠ ಸೇರಿದಂತೆ ಎಲ್ಲಾ ಮಠ ಮಾನ್ಯಗಳ ಅಡಿಯಲ್ಲಿರುವ ಅನುದಾನಿತ ಶಿಕ್ಷಣ ಸಂಸ್ಥೆಗಳಿಗೆ ಅನ್ವಯವಾಗಿತ್ತು.

ಎಚ್.ವಿಶ್ವನಾಥ್ ಅವರು ಆಡಿದ್ದ ಈ ಮಾತಿನ ಹಿಂದಿನ ಅರ್ಥವನ್ನ ಸಿರಿಗೆರೆ ಶ್ರೀಗಳು ಸರಿಯಾಗಿ ಗ್ರಹಿಸಲಿಲ್ಲ ಎಂದೆನಿಸುತ್ತದೆ. ಮಠದ ಲೆಕ್ಕ ಕೇಳುವಷ್ಟು ದಾರ್ಷ್ಟ್ಯ ಕಾಂಗ್ರೆಸ್ ಸರ್ಕಾರಕ್ಕಿದೆ ಎಂದು ಭಾವಿಸಿಯೇ ಕೆಂಡಾಮಂಡಲವಾಗಿಬಿಟ್ಟರು. ಆಗ, ಎಸ್.ಎಂ.ಕೃಷ್ಣ ಅವರು ಶಿಕ್ಷಣ ಖಾತೆಯಿಂದಲೇ ವಿಶ್ವನಾಥ್‌ಗೆ ಕೊಕ್ ಕೊಟ್ಟು ಸಹಕಾರ ಖಾತೆ ಕೊಟ್ಟಿದ್ದನ್ನ ಬಹುಶಃ ಯಾರೂ ಮರೆತಿರಲಾರರು. ಇದೆಲ್ಲ ಏನನ್ನು ತೋರಿಸುತ್ತದೆಂದರೆ, ಮಠಗಳನ್ನು ಯಾವ ಪ್ರಭುತ್ವವೂ ಪ್ರಶ್ನಿಸಬಾರದು ಎಂದು. ಜತೆಗೇ, ವಿಶ್ವನಾಥ್ ಅವರು ಹಿಂದುಳಿದ ಕೋಮಿಗೆ ಸೇರಿದವರು ಎನ್ನುವ ಕಾರಣಕ್ಕೂ ಇರಬೇಕೇನೋ….?

ಯಾಕೆಂದರೆ, ಯಡಿಯೂರಪ್ಪನವರು ಬ್ರಹ್ಮಾಂಡ ಭ್ರಷ್ಟಾಚಾರ ಆರೋಪಗಳ ಮಸಿ ಮೆತ್ತಿಕೊಂಡಿದ್ದರೂ ಎಂದಿಗೂ ಆ ಬಗ್ಗೆ ಸಿಟ್ಟಿನಿಂದ ಮಾತನಾಡಿದ್ದಾಗಲಿ, ಕೆಂಡಾಮಂಡಲವಾಗಿದ್ದಾಗಲಿ ಇಲ್ಲಿಯವರೆಗೂ ಕಾಣಿಸಿಲ್ಲ.  ಇದೇ ಸಂದರ್ಭದಲ್ಲಿ ಇನ್ನೂ ಒಂದು ಮಾತಿದೆ.ಇದರಲ್ಲಿ ಎಷ್ಟು ಸತ್ಯ, ಎಷ್ಟು ಸುಳ್ಳು ಇದೆ ಎಂಬುದು ಗೊತ್ತಿಲ್ಲ. ಆದರೆ ಈ ಮಾತು ದಾವಣಗೆರೆ ಜಿಲ್ಲೆಯಲ್ಲಿ ಇವತ್ತಿಗೂ ಜನಜನಿತ. ಅದೇನೆಂದರೆ, ಯಡಿಯೂರಪ್ಪನವರು ಗಳಿಸಿರುವ ಅಪಾರ ಪ್ರಮಾಣದ ದುಡ್ಡನ್ನ ಸಿರಿಗೆರೆ ಮಠದಲ್ಲಿ ಇಟ್ಟಿದ್ದಾರಂತೆ ಎಂದು ಜನ ಮಾತನಾಡಿಕೊಳ್ಳುತ್ತಾರೆ. ದೇವೇಗೌಡರು ಹೇಗೆ ಆದಿಚುಂಚನಗಿರಿ ಮಠದಲ್ಲಿ ದುಡ್ಡು ಇಟ್ಟಿದ್ದರು ಎಂಬ ಮಾತು ಕೇಳಿ ಬರುತ್ತಿತ್ತೋ ಅದೇ ರೀತಿ, ಯಡಿಯೂರಪ್ಪನವರು ಮತ್ತು ಸಿರಿಗೆರೆ ಮಠದ ಸಂದರ್ಭದಲ್ಲೂ ಕೇಳಿ ಬಂದಿದೆ. ಮೊದಲೇ ಹೇಳಿದಂತೆ ಇದು ಸತ್ಯವೊ ಸುಳ್ಳೊ ಗೊತ್ತಿಲ್ಲ. ಜನರಾಡಿಕೊಳ್ಳುವ ಮಾತು.

ಹಾಗೇಯೇ, ದಾವಣಗೆರೆ ಮಟ್ಟಿಗೆ ಒಂದು ರೀತಿಯ ಚೈನಾ ಗೋಡೆ ಥರ ಇರುವ ಡಾ.ಶಾಮನೂರು ಶಿವಶಂಕರಪ್ಪನವರ ಮೇಲೂ ಸಿರಿಗೆರೆ ಶ್ರೀಗಳಿಗೆ ಎಲ್ಲಿಲ್ಲದ ಪ್ರೀತಿ. ದಾವಣಗೆರೆ ಜಿಲ್ಲೆಯಲ್ಲಿ ಒಂದೇ ಒಂದು ಸಾರ್ವಜನಿಕ ಉದ್ಯಮ ನೆಲೆ ನಿಲ್ಲಲು ಅವಕಾಶ ಕೊಡದೇ, ಶಿವಶಂಕರಪ್ಪನವರು ಬಾಪೂಜಿ ಶಿಕ್ಷಣ ಸಂಸ್ಥೆ ಎಂಬ ಬಹುದೊಡ್ಡ ಆಲದ ಮರವನ್ನ ಎದ್ದು ನಿಲ್ಲಿಸಿದ್ದಾರೆಂದರೇ ಅದರ ಹಿಂದೆ ಸಿರಿಗೆರೆ ಶ್ರೀಗಳ ದೊಡ್ಡ ಮಟ್ಟದ ಆಶೀರ್ವಾದ ಇಲ್ಲ ಎಂದು ಹೇಳಲಾಗದು. ಹೀಗೆ ಪ್ರಭಾವಿ, ಹಣಕಾಸಿನ ಸಾಮರ್ಥ್ಯ ಹೊಂದಿರುವ ರಾಜಕಾರಣಿಗಳನ್ನ ಪೋಷಣೆ ಮಾಡುತ್ತಿದ್ದಾರೆ ಎಂದರೆ ಅದು ಅತಿಶಯೋಕ್ತಿ ಆಗಲಾರದು.

ಇಡೀ ನಾಡಿಗೆ ಗೊತ್ತಿದೆ, ಜಾತಿ ಪದ್ಧತಿ ವಿರುದ್ಧ ಪ್ರಬಲವಾಗಿ ಸಿಡಿದೆದ್ದವನು ಬಸವಣ್ಣ ಎಂದು. ಆದರೆ, ಬಸವಣ್ಣನ ವಚನಗಳ ಕಟ್ಟು ಕಟ್ಟುಗಳನ್ನೇ ಹೊಂದಿರುವ ಸಿರಿಗೆರೆ ಮಠ, ಜಾತಿ ಪದ್ಧತಿ ವಿರುದ್ಧ ಪರಿಣಾಮಕಾರಿಯಾಗಿ ಪ್ರತಿಭಟಿಸಲಿಲ್ಲ. ಬದಲಿಗೆ ಸ್ವಜಾತಿ, ಅಂದರೆ ಸಾಧು ಲಿಂಗಾಯತ ಪ್ರಜ್ಞೆಯನ್ನ ಸದ್ದಿಲ್ಲದೇ ಜಾಗೃತಗೊಳಿಸುತ್ತ ಹೋದದ್ದು. ಇದನ್ನು ಕಣ್ಣಾರೆ ಕಾಣಬೇಕೇಂದರೆ ಮತ್ತೆ ನೀವು ದಾವಣಗೆರೆಗೆ ಹೋಗಬೇಕು. ಸಾಧು ಲಿಂಗಾಯತ ಕೋಮಿಗೆ ಸೇರಿರುವ ಪ್ರತಿಯೊಬ್ಬರ ಮನೆ, ಬಹುತೇಕ ವಾಣಿಜ್ಯ ಮಳಿಗೆ ಹಾಗೂ ವಾಹನಗಳ ಮೇಲೆ ಕಂಗೊಳಿಸುವುದು ‘ಶಿವ’ ಎನ್ನುವ ದೊಡ್ಡ ಅಕ್ಷರಗಳು. ಇಲ್ಲಿ ಶಿವ ಎಂದರೇ ಯಾರು ಎಂದು ಮತ್ತೆ ಬಿಡಿಸಿ ಹೇಳಬೇಕಾದ ಅಗತ್ಯ ಇಲ್ಲ ಎಂದೆನಿಸುತ್ತದೆ.

ಯಾವಾಗ ‘ಶಿವ’ ಎನ್ನುವ ಅಕ್ಷರಗಳು ಕಂಗೊಳಿಸಿದವೋ ಆಗ ಅದಕ್ಕೆದುರಾಗಿ ಒಂದು ರೀತಿಯಲ್ಲಿ ಸೆಡ್ಡು ಹೊಡೆದಿದ್ದು ‘ಕನಕ’ ಎನ್ನುವ (ಕನಕದಾಸ) ಅಕ್ಷರಗಳು. ಸಮಾಜದಲ್ಲಿ ಜಾತಿ ಪ್ರಜ್ಞೆಯನ್ನ ಹೋಗಲಾಡಿಸಬೇಕಿದ್ದ ಮಠಗಳೇ ಜಾತಿ ಪ್ರಜ್ಞೆಯನ್ನ ಜಾಗೃತಗೊಳಿಸಿದ್ದು ನಿಜಕ್ಕೂ ದುರಂತ ಅಲ್ಲದೇ ಮತ್ತೇನು? ಅಣ್ಣ ಬಸವಣ್ಣನವರ ಆಶಯಗಳಿಗೆ ಪೂರಕವಾಗಿ ಮಠ ನಡೆದಿದ್ದೇ ಆಗಿದ್ದಿದ್ದರೇ ನಿಜಕ್ಕೂ ಇವತ್ತು ಕ್ರಾಂತಿ ಆಗುತ್ತಿತ್ತೇನೋ? ಆದರೆ…

ಸಾಧು ಲಿಂಗಾಯತ ಕೋಮಿನ ಜಾತಿ ಪ್ರಜ್ಞೆ ಹೇಗೆ ಗಟ್ಟಿಯಾಗಿತ್ತು ಎಂದರೆ, ಪ್ರವರ್ಗ 2ಎ ಮೀಸಲಾತಿ ಸೌಲಭ್ಯವನ್ನ ಸಾಧು ಲಿಂಗಾಯತ ಕೋಮಿಗೆ ಕೊಡಬೇಕು ಎಂಬ ಬೇಡಿಕೆ ಮಂಡಿಸುವಷ್ಟರ ಮಟ್ಟಿಗೆ. ಈ ಬೇಡಿಕೆ ವಿರುದ್ಧ ಪ್ರವರ್ಗ 2ಎ ಯಲ್ಲಿ ಸಿಂಹಪಾಲು ಪಡೆಯುತ್ತಿರುವ ಕುರುಬ ಸಮುದಾಯ ಪ್ರತಿಭಟಿಸಿತು. ಈ ಪ್ರತಿಭಟನೆ ಎಂಬುದು ಎರಡು ಸಮುದಾಯಗಳ ಮಧ್ಯೆ ಜಾತಿ ವೈಷಮ್ಯದ ಬೆಂಕಿ ಕುಲುಮೆಗೆ ಮತ್ತಷ್ಟು ತುಪ್ಪ ಸುರಿದಿತ್ತು. ಈ ಬಗ್ಗೆ ಎಲ್ಲಿಯೂ ಸರ್ಕಾರ ಅಧಿಕೃತವಾಗಿ ಘೋಷಿಸದಿದ್ದರೂ ಸ್ಥಳೀಯ ಚುನಾವಣೆ ಸಂದರ್ಭದಲ್ಲಿ ಸಾಧು ಲಿಂಗಾಯತ ಕೋಮಿಗೆ ಸೇರಿರುವ ಕೆಲವರಿಗೆ ಪ್ರ ವರ್ಗ 2 ಎ ಪ್ರಮಾಣ ಪತ್ರವನ್ನ ಸ್ಥಳೀಯ ತಹಶೀಲ್ದಾರ್ ನೀಡಿ ಮತ್ತಷ್ಟು ವಿವಾದ ಸೃಷ್ಟಿಸಿದ್ದರು. ಇದೆಲ್ಲದರ ಹಿಂದೆ ಅಗೋಚರವಾಗಿ ಕೆಲಸ ಮಾಡಿದ್ದು ಸಿರಿಗೆರೆ ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಶ್ರೀಗಳೇ.

ಇದೆಲ್ಲದರ ಜೊತೆಗೆ ಇನ್ನೊಂದು ಸಿರಿಗೆರೆಯ “ಜನತಾ ನ್ಯಾಯಾಲಯ”. ಪ್ರಜಾಪ್ರಭುತ್ವದಲ್ಲಿ ಪರ್ಯಾಯ ನ್ಯಾಯಾಲಯಗಳಿಗೆ, ಖಾಜಿ ಪಂಚಾಯಿತಿಗಳಿಗೆ, ಸ್ವಘೋಷಿತ (self-appointed) ನ್ಯಾಯಾಧೀಶರಿಗೆ ಸ್ಥಳವಿರಬಾರದು.  ಆದರೆ, ಸಿರಿಗೆರೆಯ ಮಠಾದೀಶರು ತಮ್ಮ ಕೋರ್ಟ್‌ಗೆ ಬರುವ ವ್ಯಾಜ್ಯಗಳನ್ನು ವಿಚಾರಣೆ ಮಾಡಿ “ನ್ಯಾಯತೀರ್ಮಾನ”ವನ್ನೂ ಕೊಡುತ್ತಾರೆ. ಪ್ರಜಾಪ್ರಭುತ್ವವನ್ನು ಮತ್ತು ಸಂವಿಧಾನವನ್ನು ಧಿಕ್ಕರಿಸುವ ಪಕ್ಕಾ ಫ್ಯೂಡಲ್ ವ್ಯವಸ್ಥೆ.

ಸಿರಿಗೆರೆ ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಶ್ರೀಗಳು ನಿವೃತ್ತಿ ನಿರ್ಧಾರ ಪ್ರಕಟಿಸಿದ ಸಂದರ್ಭದಲ್ಲಿ ಇವೆಲ್ಲ ನೆನಪಾಯಿತು. ಬಸವಣ್ಣನ ಆಶಯಗಳ ಬೆಳಕಿನಲ್ಲಿ ಸಿರಿಗೆರೆ ಮಠವನ್ನು ಮತ್ತು ಅದರ ಮುಖ್ಯಸ್ಥರನ್ನು ನೋಡಲು ಬಯಸಿದ್ದೇ ಈ ಲೇಖನಕ್ಕೆ ಕಾರಣ.

10 thoughts on “ಸಿರಿಗೆರೆ ಮಠ : ಕಣ್ಣೀರ ಸಾಗರದೊಳಗೆ ಕಂಡ ಒಂದಷ್ಟು ‘ಭಿನ್ನ’ಕಲ್ಲುಗಳು

 1. anand prasad

  ಇದೇ ಸ್ವಾಮೀಜಿಗಳು ಪತ್ರಿಕೆಯೊಂದರ ಅಂಕಣದಲ್ಲಿ ಬರೆಯುವಾಗ “ನಾವು” ಎಂದು ತನಗೆ ತಾನೇ ಬಹುವಚನವನ್ನು ಆರೋಪಿಸಿಕೊಂಡು ಬರೆಯುವುದು ಅತ್ಯಂತ ಅಸಹ್ಯಕರವಾಗಿ ಹಾಗೂ ಹಾಸ್ಯಾಸ್ಪದವಾಗಿ ಕಂಡುಬರುತ್ತದೆ. ಇದು ಅಹಂಕಾರದ ಪರಮಾವಧಿ. ಇಂಥ ಅಹಂಕಾರದಿಂದ ಬಿಡಿಸಿಕೊಳ್ಳಲಾಗದವರು ಧರ್ಮಗುರುಗಳೆಂದು ಕರೆಸಿಕೊಳ್ಳಲು ಎಷ್ಟರ ಮಟ್ಟಿಗೆ ಯೋಗ್ಯರು ಎಂದು ಜನ ಯೋಚಿಸಬೇಕಾಗಿದೆ.

  Reply
 2. Naveen

  This is one of the article written with full of pre conceived mind. The writer wants to tell that by declaring retirement Shree is not doing any great thing. And none of the allegations that writer is leveling against shree are serious.

  If the politicians respect and fear about Shree its not because of any other “power” its because of the faith people kept in him. And why people keep faith in any one person? Because they believe that person has the eligibility, knowledge and sincerity and one can trust him.

  Whatever the allegations writer has leveling are actually not too bad if you consider the allegations other swamijis facing.

  Vartamana has become such a blog for opposing everything on this world.
  Days are not far where people start reading this blog for “funny” reason that in “what way” vartamaana has opposing to particular topic!

  Reply
 3. Sushrutha

  Swamy Anand Prasad avare, Swamiji yavarannu Ahankaari antha kareyuva nimma ahankaara modalu ilisikolli. Ishtakkoo avara ivara kurithu kenda, Huluku kaariye bareyuva nimma manasu oduga raada namage thiliyade? Swaamiji parampare ge anuguna vaagi “Naavu” andare nimage enu sankata? Neevu Swaamiji Naavu antha baredaddannu Naanu antha bekaadaroo ekavachana dalli odalu swathanthraru. Swaamiji yavarannu baayige banda haage heluva neevu samaaja kke huluku lekhana bittu berenu kottiddeeri antha heluvanthavaraagi

  Reply
  1. anand prasad

   ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಬ್ಬ ವ್ಯಕ್ತಿ ತನ್ನನ್ನು ಲೇಖನದಲ್ಲಿ ಪ್ರತಿನಿಧಿಸಿ ಬರೆಯುವಾಗ ಬಹುವಚನ ಬಳಸುವುದು ಅನಗತ್ಯ ಹಾಗೂ ಅಹಂಕಾರವೆಂದು ಕಂಡುಬರುತ್ತದೆ. ಸ್ವಾಮೀಜಿಯ ಮೇಲಿನ ಭಕ್ತಿಗೆ ಭಕ್ತರು ಹಾಗೆ ಕರೆದರೆ ಅದೇನೂ ಅಸಮಂಜಸವಾಗಿ ಕಾಣುವುದಿಲ್ಲ. ಆದರೆ ಸ್ವಾಮೀಜಿಯೇ ತನ್ನನ್ನು ತಾನೇ ಬಹುವಚನದಲ್ಲಿ ಕರೆದುಕೊಳ್ಳುವುದು ಅವರಲ್ಲಿ ಇನ್ನೂ ಅಹಂಕಾರ ಉಳಿದುಕೊಂಡಿದೆ ಎಂಬುದನ್ನು ಸೂಚಿಸುತ್ತದೆ. ಬಸವಣ್ಣನಂಥ ಸುಧಾರಕರು ಎಂದೂ ಈ ರೀತಿ ತನ್ನನ್ನು ತಾನೇ ಬಹುವಚನದಲ್ಲಿ ಕರೆದುಕೊಂಡಿರುವುದು ಕಂಡುಬರುವುದಿಲ್ಲ. ನಾವು ಈಗ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದ್ದೇವೆಯೇ ಹೊರತು ಊಳಿಗಮಾನ್ಯ ವ್ಯವಸ್ಥೆಯಲ್ಲಿ ಅಲ್ಲ. ಜನ ಊಳಿಗಮಾನ್ಯ ಮನೋಸ್ಥಿತಿಯಿಂದ ಹೊರಬರದೆ ಇರುವ ಕಾರಣವೇ ಇಂದು ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಸ್ವಾಮೀಜಿಗಳ ಕಾಲ ಕೆಳಗೆ ನರಳುತ್ತ ಬಿದ್ದಿದೆ. ಇದರಿಂದ ಹೊರಬರದೆ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಅರೋಗ್ಯ ಸುಧಾರಿಸುವ ಸಾಧ್ಯತೆ ಇಲ್ಲ.

   Reply
   1. shreepadu

    ವ್ಯವಸ್ಥೆ ಯಾವಾಗಲೂ ಯಾರದ್ದಾದರೂ ಕಾಲ ಕೆಳಗೆ ಬಿದ್ದೆ ಇರುತ್ತದೆ ಪ್ರಸಾದ್. ಮೂರುವರೆ ಕೋಟಿ ಜನರನ್ನ ಕೊಂದ ಮಾವೋ ಕೆಳಗೂ ಬಿದ್ದಿತ್ತು , ೧ ಕೋಟಿ ಜನರನ್ನ ಕೊಂದ ಲೆನಿನ್ ಕೆಳಗೂ ಬಿದ್ದಿತ್ತು. ಅಣ್ಣ ಹಜಾರೆಯ ಅಂದೋಲನವನ್ನ ದಿಕ್ಕಿಲ್ಲದಂತೆ ಕಾಣೆ ಮಾಡಿದ ಕೇಂದ್ರಸರ್ಕಾರದ ಅಡಿಗಡೆಗೂ ಮಲಗಿದೆ. ನಮ್ಮ ದೃಷ್ಟಿಗೆ ಅನುಗುಣವಾಗಿ ನಮಗೆ ಕಾಣುತ್ತದೆ.

    ಪ್ರಜಾಪ್ರಭುತ್ವದ ಅಡಿಗಡೆಗೆ , ನಮ್ಮನ್ನ ನಾವು ಹೇಗೆ ಭೋದಿಸಿಕೊಳ್ಳಬೇಕು ಎಂಬ ಹೊಸ ಏಕವ್ಯಕ್ತಿ ಚಿಂತನೆಯನ್ನ ಹುಟ್ಟುಹಾಕಬೇಡಿ. ಪ್ರಜಾಪ್ರಭುತ್ವದ ಹೆಸರಿನಲ್ಲಿ ಒಂದು ,ಅಥವಾ ಒಬ್ಬರ ಆಲೋಚನೆಯನ್ನ ಎಲ್ಲರಮೇಲೆ ಹೇರುವುದು ಸಾಹಿತ್ಯಿಕ ಪುರೋಹಿತಶಾಹಿತನ. ಅದು ನಿಜವಾದ ಅಸಹ್ಯ. ಅಷ್ಟಕ್ಕೂ ಪ್ರಜಾಪ್ರಭುತ್ವದಲ್ಲಿ ಯಾರು ಹೇಗೆ ಕರೆದುಕೊಳ್ಳಬೇಕು , ಹೇಗೆ ಬರೆಯಬೇಕು ಅಂತ ನಿರ್ಧರಿಸಲು ನಿಮಗಾಗಲಿ , ನನಗಾಗಲಿ ಅಧಿಕಾರ ಇಲ್ಲ. ಅದು ಪ್ರಜಾಪ್ರಭುತ್ವದ ಆಶಯವೂ ಅಲ್ಲ.

    “ನಾವು” ಸಮಷ್ಟಿಪ್ರಜ್ಞೆಯ ಸಂಕೇತ. ಒಂದಿಡೀ ಸಮುದಾಯವನ್ನ , ಒಂದಿಡೀ ಪೀಠದ ಪರಂಪರೆಯನ್ನ ಪ್ರತಿನಿಧಿಸುತ್ತದೆ.”ನಾನು”, “ನನ್ನದು” ಸ್ವಾರ್ಥದ ಮತ್ತು ಅಹಂಕಾರದ ಸಂಕೇತವಾಗಿ ಕಾಣಿಸುತ್ತದೆ.ನನಗಂತೂ.
    ದಯವಿಟ್ಟು ಯಾರು ಯಾವ ಪದಬಳಕೆ ಮಾಡಬೇಕು ಎಂದು ಆರ್ಡರ್ ಮಾಡುವ ಅಹಮಿಕೆ ಬಿಡಿ. ದುರಂತವೆಂದರೆ ಸಾಹಿತಿಗಳ ಹೊಸ ಚಟವಾಗಿದೆ ಅದು.

    Reply
    1. anand prasad

     ನಾವು ಜಾಗೃತರಾಗಿ ಸ್ವತಂತ್ರವಾಗಿ ಚಿಂತಿಸಲು ಕಲಿತರೆ ವ್ಯವಸ್ಥೆಯನ್ನು ನಮ್ಮ ಒಳಿತಿಗೆ ಬೇಕಾದಂತೆ ರೂಪಿಸಬಹುದು. ಇದಕ್ಕೆ ವಿಶ್ವದಲ್ಲಿ ಇದುವರೆಗೆ ರೂಪಿಸಿದ ವ್ಯವಸ್ಥೆಗಳಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯೇ ಉತ್ತಮವಾದುದು. ಪ್ರಜಾಪ್ರಭುತ್ವ ವ್ಯವಸ್ಥೆ ಎಂದರೆ ಏಕವ್ಯಕ್ತಿಯ ವ್ಯವಸ್ಥೆ ಆಗಲು ಸಾಧ್ಯವಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆ ಎಂದರೆ ಅದು ಸಮಷ್ಟಿ ಎಲ್ಲರನ್ನೂ ಒಳಗೊಂಡ ವ್ಯವಸ್ಥೆ. ಮಠಗಳ ವ್ಯವಸ್ಥೆಯಲ್ಲಿ ಎಲ್ಲರನ್ನೂ ಒಳಗೊಳ್ಳುವ ಕ್ರಮ ಇಲ್ಲ. ಸ್ವಾಮೀಜಿಯ ಆಯ್ಕೆ ಪ್ರಜಾಸತ್ತಾತ್ಮಕವಾಗಿ ನಡೆಯುವುದಿಲ್ಲ. ನಾವು ಊಳಿಗಮಾನ್ಯ ಮನೋಸ್ಥಿತಿಯಿಂದ ಹೊರಬರದ ಹೊರತು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸರಿಯಾಗಿ ರೂಪಿಸಿಕೊಳ್ಳಲು ಸಾಧ್ಯವಿಲ್ಲ. ನಾವು ಗುಲಾಮಿ ಮನೋಭಾವ ಹೊಂದಿರುವವರೆಗೆ ನಾವು ಊಳಿಗಮಾನ್ಯ ವ್ಯವಸ್ಥೆಯ ಕಾಲ ಕೆಳಗೆ ಬಿದ್ದಿರುತ್ತೇವೆ. ಅಲ್ಲಿಂದ ಬಿಡುಗಡೆ ಹೊಂದುವುದು ಅಥವಾ ಅಂಥ ಗುಲಾಮೀತನವೇ ಶ್ರೇಷ್ಠ ಎಂದು ಅಲ್ಲೇ ಬಿದ್ದಿರುವುದು ಅವರವರಿಗೆ ಬಿಟ್ಟ ವಿಷಯ. ಮಾವೋ, ಸ್ಟಾಲಿನ್, ಲೆನಿನ್ ಕೆಳಗೆ ವ್ಯವಸ್ಥೆ ಬಿದ್ದಿರಬಹುದು. ಅಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇರಲಿಲ್ಲ.

     Reply
 4. vasanth

  People are term his decision a pathbreaking one. This man have no right to stay even a mintute for what he has done to protect the mighty people of his caste. Shame on this swamiji.
  Very good article

  Reply

Leave a Reply

Your email address will not be published.