ಪ್ರಜಾ ಸಮರ – 3 (ನಕ್ಸಲ್ ಕಥನ)


– ಡಾ.ಎನ್.ಜಗದೀಶ್ ಕೊಪ್ಪ


ನಕ್ಸಲರ ಹೋರಾಟದ ಕಥನವೆಂದರೆ, ಒಂದರ್ಥದಲ್ಲಿ ಇದು ಪರೋಕ್ಷವಾಗಿ, ಬಾಯಿಲ್ಲದವರಂತೆ ಅರಣ್ಯ ಮತ್ತು ಅದರ ಅಂಚಿನಲ್ಲಿ ಬದುಕುತ್ತಿರುವ ಬಡಕಟ್ಟು ಜನಾಂಗ ಮತ್ತು ಗಿರಿಜನರ ನೋವಿನ ಕಥನವೇ ಆಗಿದೆ. ಈವರೆಗೆ ಸಮಾಜದ ಮುಖ್ಯವಾಹಿನಿಯ ಗಮನಕ್ಕೆ ಬಾರದಂತೆ ಮುಚ್ಚಿ ಹೋಗಿರುವ ಇವರ ಇತಿಹಾಸದ ಪುಟಗಳನ್ನು ತೆರೆದು ನೋಡಿದರೆ, ಗಿರಿಜನರನ್ನು ನಿರಂತರ ಶೋಷಿಸುವ ವ್ಯವಸ್ಥೆಯ ಕ್ರೌರ್ಯಕ್ಕೆ ಮತ್ತು ವಂಚನೆಗೆ ಇಷ್ಟೊಂದು ಕರಾಳ ಮುಖಗಳು ಹಾಗೂ ಕೈಗಳು ಇದ್ದವೆ? ಎಂದು ಆಶ್ಚರ್ಯವಾಗುತ್ತದೆ.

ಅರಣ್ಯಾಧಿಕಾರಿಗಳು, ಕಂದಾಯ ಇಲಾಖೆಯ ಅಧಿಕಾರಿಗಳು, ಪೊಲೀಸರು, ಜಮೀನ್ದಾರರು. ಹಣ ಲೇವಿದಾರರು, ಮರದ ವ್ಯಾಪಾರಿಗಳು, ಇವೆಲ್ಲಕ್ಕಿಂತ ಹೆಚ್ಚಾಗಿ ಬುಡಕಟ್ಟು ಜನಾಂಗ ಮತ್ತು ಅವರ ಸಂಸ್ಕೃತಿಯ ಬಗ್ಗೆ ಅಧ್ಯಯನ ಮಾಡಲು ತೆರಳಿ, ತಣ್ಣಗೆ ಹೊರಜಗತ್ತಿಗೆ ತಿಳಿಯದ ಹಾಗೆ ಇಲ್ಲಿನ ಹೆಣ್ಣು ಮಕ್ಕಳನ್ನು ಲೈಂಗಿಕವಾಗಿ ಶೋಷಿಸಿದ ವಿದ್ವಾಂಸರು, ಎಲ್ಲರೂ ಇದರಲ್ಲಿ ಪಾಲುದಾರರಾಗಿದ್ದಾರೆ. ಇವರಲ್ಲಿ ಹೊರ ಜಗತ್ತಿಗೆ ಭಾರತದ ಬುಡಕಟ್ಟು ಜನಾಂಗದ ಸಂಸ್ಕೃತಿಯನ್ನು ಪರಿಚಯಿಸಿ, ಭಾರತದ ಗಿರಿಜನ ಪ್ರಪಂಚದ ಪಿತಾಮಹ ಎಂದು ಕರೆಸಿಕೊಳ್ಳುತ್ತಿರುವ ವೇರಿಯರ್ ಎಲ್ವನ್ ಎಂಬ ಜಗತ್ ಪ್ರಸಿದ್ಧ ಸಮಾಜ ಶಾಸ್ತ್ರಜ್ಞ ಮುಂಚೂಣಿಯಲ್ಲಿದ್ದಾನೆ ಎಂದರೆ, ನಿಮಗೆ ಆಶ್ಚರ್ಯವಾಗಬಹುದು. ಆದರೆ ಇದು ಕಟು ವಾಸ್ತವದ ಸಂಗತಿ. ಗಿರಿಜನರ ಪ್ರಪಂಚವನ್ನು ಜಗತ್ತಿಗೆ ಪರಿಚಯಿಸಿದ ವೇರಿಯರ್ ಎಲ್ವಿನ್ ಎಂಬ ವಿದ್ವಾಂಸನ ವಂಚನೆಯ ಪ್ರಪಂಚವನ್ನು ಇಲ್ಲಿ ನಿಮ್ಮೆದುರು ದಾಖಲೆ ಸಹಿತ ಅನಾವರಣಗೊಳಿಸುತ್ತಿದ್ದೇನೆ.

1902 ರಲ್ಲಿ ಇಂಗ್ಲೆಂಡ್‌ನಲ್ಲಿ ಜನಸಿದ ವೇರಿಯರ್ ಎಲ್ವಿನ್ ಆಕ್ಸ್‌ಫರ್ಡ್ ವಿ.ವಿ.ಯಲ್ಲಿ ಇಂಗ್ಲೀಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿ, ಅಲ್ಲಿಯೇ ಕೆಲ ಕಾಲ ಇಂಗ್ಲೀಷ್ ಉಪನ್ಯಾಸಕನಾಗಿದ್ದ. 1927ರಲ್ಲಿ ಪೂನಾ ಮೂಲದ ಮಿಷನರಿ ಸಂಸ್ಥೆಗೆ ಕ್ರೈಸ್ತ ಮಿಷನರಿಯಾಗಿ (ಪಾದ್ರಿ) ಬಂದ ಇವನಿಗೆ ಧರ್ಮ ಪ್ರಚಾರದ ಜೊತೆಗೆ ಮತಾಂತರ ಮಾಡುವ ಜವಾಬ್ದಾರಿಯನ್ನು ವಹಿಸಲಾಯಿತು. 1930-40 ರ ದಶಕದಲ್ಲಿ ಈಶಾನ್ಯ ಭಾರತ ಮತ್ತು ಮಧ್ಯ ಭಾರತದ ಅರಣ್ಯದ ನಡುವೆ ಇದ್ದ ಆದಿವಾಸಿಗಳಿಗೆ ಶಿಕ್ಷಣ ಮತ್ತು ಆರೋಗ್ಯದ ಸೇವೆ ನೀಡುವುದರ ಮೂಲಕ ಅವರ ಮನ ಪರಿವರ್ತಿಸಿ, ಕ್ರೈಸ್ತ ಸಮುದಾಯಕ್ಕೆ ಪರಿವರ್ತಿಸುವುದು ಅಂದಿನ ಮಿಷನರಿಗಳ ಗುಪ್ತ ಅಜೆಂಡವಾಗಿತ್ತು. ಈಶಾನ್ಯ ಭಾರತದ ಅಸ್ಸಾಂ, ನಾಗಾಲ್ಯಾಂಡ್. ಮಿಜೋರಾಂ, ತ್ರಿಪುರ ಮುಂತಾದ ರಾಜ್ಯಗಳಲ್ಲಿ ಮಿಷನರಿಗಳು ಈ ಪ್ರಯತ್ನದಲ್ಲಿ ಯಶಸ್ವಿಯಾದರು. ಆದರೆ, ಮಧ್ಯ ಹಾಗೂ ಪೂರ್ವ ಭಾರತದ, ಅಂದಿನ ಮಧ್ಯಪ್ರದೇಶ, ಒರಿಸ್ಸಾ, ಪಶ್ಚಿಮ ಬಂಗಾಳ, ಆಂಧ್ರ ರಾಜ್ಯಗಳಲ್ಲಿ ಬುಡಕಟ್ಟು ಜನಾಂಗವನ್ನು ಪರಿವರ್ತಿಸುವಲ್ಲಿ ಮಿಷನರಿಗಳು ಕಿಂಚಿತ್ತೂ ಯಶಸ್ವಿಯಾಗಲಿಲ್ಲ. ಏಕೆಂದರೆ, ಈ ಪ್ರದೇಶದಲ್ಲಿ ಬದುಕಿದ್ದ ಐನೂರಕ್ಕೂ ಹೆಚ್ಚು ಬುಡಕಟ್ಟು ಜನಾಂಗಗಳು ತಮ್ಮದೇ ಆದ ನೆಲಮೂಲ ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ಆಚರಿಸಿಕೊಂಡು ಬಂದಿದ್ದವು. ಈ ಜನಾಂಗಳಲ್ಲಿ ಗೊಡ, ಕೋಯಾ, ಚೆಂಚೂ, ಕೊಂಡರೆಡ್ಡಿ, ಮರಿಯ, ಜನಾಂಗಗಳು ಪ್ರಮುಖವಾದವು.

1930 ರ ಸಮಯದಲ್ಲಿ ಮಧ್ಯಪ್ರದೇಶದ ಜಬಲ್ಪುರಕ್ಕೆ ಬಂದ ವೇರಿಯರ್ ಎಲ್ವಿನ್ ಮಿಷನರಿಯ ಪಾದ್ರಿ ವೃತ್ತಿಯನ್ನು ತೊರೆದು, ಭಾರತದ ಬುಡಕಟ್ಟು ಜನಾಂಗಗಳ ಬದುಕು, ಅವರ ನಂಬಿಕೆ, ಆಚಾರ, ವಿಚಾರಗಳ ಬಗ್ಗೆ ಆಸಕ್ತಿ ಬೆಳಸಿಕೊಂಡ. ಜೊತೆಗೆ ಗಾಂಧೀಜಿ ಮತ್ತು ಅವರ ಚಿಂತನೆಗಳಿಂದ ಕೂಡ ಪ್ರಭಾವಿತನಾಗಿದ್ದ. ಈ ಕಾರಣಕ್ಕಾಗಿ ಜಬಲ್‌ಪುರದ ಒಬ್ಬ ಆದಿವಾಸಿಯನ್ನು ಭಾಷಾಂತರಕ್ಕಾಗಿ ಸಹಾಯಕನನ್ನಾಗಿ ಮಾಡಿಕೊಂಡು, ಕ್ಯಾಮರಾ ಮತ್ತು ಟೈಪ್‌ರೈಟರ್ ಜೊತೆ ಆರಣ್ಯಕ್ಕೆ ಬಂದು ಬುಡಕಟ್ಟು ಜನಾಂಗದ ಜೊತೆ ವಾಸಿಸತೊಡಗಿದ. ಒಂದು ದಶಕದ ಕಾಲ ಆದಿವಾಸಿಗಳ ಜೊತೆ ವಾಸಿಸಿ, ಅವರ ಬದುಕನ್ನು ಅಧ್ಯಯನ ಮಾಡತೊಡಗಿದ. ಈ ಕುರಿತಂತೆ ಜಗತ್ತಿನ ಅನೇಕ ಪತ್ರಿಕೆಗಳಿಗೆ ಲೇಖನ ಬರೆಯತೊಡಗಿದ.

ಇದೇ ವೇಳೆ ಬ್ರಹ್ಮಚಾರಿಯಾಗಿದ್ದ ಎಲ್ವಿನ್, ಬುಡಕಟ್ಟು ಜನಾಂಗದ ವಿಶ್ವಾಸಗಳಿಸುವ ನಿಟ್ಟಿನಲ್ಲಿ 1940 ರ ಏಪ್ರಿಲ್ 4 ರಂದು ತನ್ನ 38 ನೇ ವಯಸ್ಸಿನಲ್ಲಿ ತನಗಿಂತ 25 ವರ್ಷ ಚಿಕ್ಕವಳಾದ 13 ವರ್ಷದ ರಾಜಗೊಂಡ ಎಂಬ ಬುಡಕಟ್ಟು ಜನಾಂಗದ ನಾಯಕನೊಬ್ಬನ ಮಗಳಾದ ಕೋಶಿ ಎಂಬಾಕೆಯನ್ನು ಮದುವೆಯಾದ. ಮೊದಲು ಈ ಪ್ರಸ್ತಾಪಕ್ಕೆ ಆಕೆಯ ತಂದೆ ಪ್ರತಿರೋಧ ವ್ಯಕ್ತಪಡಿಸಿದರೂ ನಂತರ ಬಿಳಿಸಾಹೇಬನ ಜೊತೆ ಮಗಳು ಸುಖವಾಗಿರಲಿ ಎಂಬ ಆಸೆಯಿಂದ ಒಪ್ಪಿಗೆ ಸೂಚಿಸಿದ್ದ. ವಿವಾಹದ ನಂತರ ಬಸ್ತರ್ ಅರಣ್ಯ ಪ್ರದೇಶಕ್ಕೆ ಬಂದು ನೆಲೆಸಿದ ಎಲ್ವಿನ್ ಆಕೆಯ ಜೊತೆ ವಾಸಿಸುತ್ತಾ, ಭಾರತದ ಬುಡಕಟ್ಟು ಜನಾಂಗಗಳು ಮತ್ತು ಅವರ ಸಂಸ್ಕೃತಿಯ ಬಗ್ಗೆ 1940 ರಿಂದ 1947ರ ನಡುವಿನ ಅವಧಿಯಲ್ಲಿ ಇಪ್ಪತ್ತಕ್ಕೂ ಹೆಚ್ಚಿನ ಕೃತಿರಚಿಸಿ ಪ್ರಸಿದ್ಧನಾದ.  ಅಲ್ಲಿಯವರೆಗೂ ಹೊರಜಗತ್ತಿಗೆ ಗೊತ್ತಿರದ ಅನೇಕ ಬುಡಟ್ಟು ಜನಾಂಗಗಳ ಸಂಸ್ಕೃತಿಯನ್ನು, ಅವರ ಆಹಾರ, ಉಡುಪು, ವಿಚಾರ, ನಂಬಿಕೆ, ಆಚರಣೆ ಇವುಗಳನ್ನು ವಿವರವಾಗಿ ಶಿಸ್ತು ಬದ್ಧ ಅಧ್ಯಯನದ ಮೂಲಕ ಪರಿಚಯಿಸಿದ. ಇವನ ಆಸಕ್ತಿ ಅಂದಿನ ನಾಯಕರಾದ ನೆಹರೂರವರ ಗೆಳೆತನವನ್ನು ಸಂಪಾದಿಸಿಕೊಟ್ಟಿತು. ಜೊತೆಗೆ ಮಹಾತ್ಮ ಗಾಂಧಿಯ ಅನುಯಾಯಿಯಾಗಿದ್ದ ಕಾರಣ ಭಾರತದ ಬಹುತೇಕ ನಾಯಕರ ನೇರ ಪರಿಚಯ ಅವನಿಗಿತ್ತು.

1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ಸಂದರ್ಭದಲ್ಲಿ ವೇರಿಯರ್ ಎಲ್ವಿನ್ ಭಾರತೀಯ ಪೌರತ್ವ ಸ್ವೀಕರಿಸಿದ. ಈತನ ಭಾರತದ ಪ್ರೀತಿಯನ್ನು ಗಮನಿಸಿದ ಪ್ರಧಾನಿಯಾದ ನೆಹರೂರವರು ವೇರಿಯರ್ ಎಲ್ವಿನ್‌ನನ್ನು ಈಶಾನ್ಯ ಮತ್ತು ಮಧ್ಯ ಹಾಗೂ ಪೂರ್ವ ಭಾರತದ ರಾಜ್ಯಗಳ ಬುಡಕಟ್ಟು ಜನಾಂಗಗಳ ಅಭಿವೃದ್ಧಿ ಕುರಿತಂತೆ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಲು ಮಾರ್ಗದರ್ಶಿಯನ್ನಾಗಿ ನೇಮಕ ಮಾಡಿದರು.

ಹತ್ತು ವರ್ಷಗಳ ಕಾಲ ’ಗೊಂಡ’ ಜನಾಂಗದ ಹೆಣ್ಣು ಮಗಳು ಕೋಶಿಯ ಜೊತೆ ದಾಂಪತ್ಯ ಜೀವನ ನಡೆಸಿದ ವೇರಿಯರ್ ಎಲ್ವಿನ್, ಅವಳಿಂದ ಇಬ್ಬರು ಗಂಡು ಮಕ್ಕಳನ್ನು ಪಡೆದ. 1951ರಲ್ಲಿ ಪ್ರಧಾನಿ ನೆಹರೂರವರು ಈತನನ್ನು ಆಂಥ್ರಪಾಲಜಿಕಲ್ ಸರ್ವೆ ಆಫ್ ಇಂಡಿಯಾದ ಡೆಪ್ಯೂಟಿ ಡೈರಕ್ಟರ್ ಹುದ್ದೆಗೆ ನೇಮಕ ಮಾಡಿದಾಗ, ವೇರಿಯರ್ ಎಲ್ವಿನ್‌ನ ವಾಸ್ತವ್ಯ ಬಸ್ತರ್ ಅರಣ್ಯ ಪ್ರದೇಶದಿಂದ ಈಶಾನ್ಯ ಭಾಗದ ನಾಗಾಲ್ಯಾಂಡ್‌ಗೆ ಬದಲಾಯಿತು. ಈ ಸಂದರ್ಭದಲ್ಲಿ ಕೋಶಿಯನ್ನು ತೊರೆದು ತನ್ನ ಹಿರಿಯ ಮಗು ಜವಹರ್ ಸಿಂಗ್‌ನನ್ನು ಎತ್ತಿಕೊಂಡು ನಾಗಲ್ಯಾಂಡ್‌ನತ್ತ ಪಯಣ ಬೆಳಸಿದ. ನಂತರದ ದಿನಗಳಲ್ಲಿ ಎಲ್ವಿನ್ ಕೋಶಿಯತ್ತ ಮತ್ತೆ ತಿರುಗಿ ನೋಡಲಿಲ್ಲ. ಆಕೆ ಅವನ ಪಾಲಿಗೆ ಬಳಸಿ ಬಿಸಾಡಿದ ಬಟ್ಟೆಯಾಗಿದ್ದಳು. ಎಲ್ವಿನ್ ಆಕೆಯನ್ನು ತ್ಯೆಜಿಸಿದಾಗ ತುಂಬು ಗರ್ಭಿಣಿಯಾಗಿದ್ದ ಈ ಬುಡಕಟ್ಟು ಹೆಣ್ಣುಮಗಳು, ಅವನ ನಿರ್ಗಮನದ ನಂತರದ ಕೆಲವೇ ದಿನಗಳಲ್ಲಿ ಮತ್ತೊಂದು ಗಂಡುಮಗುವಿಗೆ ಜನ್ಮವಿತ್ತಳು.

ಕೋಶಿಯ ಜೊತೆ ದಾಂಪತ್ಯ ಜೀವನ ನಡೆಸಿ, ದೇಶದ ಪ್ರಮುಖ ನಗರಗಳಲ್ಲಿ ಸುತ್ತಾಡಿ, ನೆಹರೂ ಮುಂತಾದವರಿಗೆ ಆಕೆಯನ್ನು ಪತ್ನಿಯೆಂದು ಪರಿಚಯಿಸಿ, ಅವರ ಜೊತೆ ಔತಣಕೂಟದಲ್ಲಿ ಪಾಲ್ಗೊಂಡು. ನಂತರ ಏಕಾಏಕಿ ಅವಳನ್ನು ಬಿಟ್ಟು ಅನಾಥೆಯನ್ನಾಗಿ ಮಾಡಿ ಹೋದ ವೇರಿಯರ್ ಎಲ್ವಿನ್ ವಿರುದ್ಧ ಆತನಿಗೆ ಬಸ್ತರ್ ಅರಣ್ಯದಲ್ಲಿ ಸಹಾಯಕನಾಗಿ ದುಡಿದಿದ್ದ ಶ್ಯಾಮರಾವ್ ಹಿವಾಳೆ ಎಂಬಾತ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದ. ಇದರ ಪರಿಣಾಮ ಪ್ರತಿ ತಿಂಗಳು ಕೋಶಿಗೆ 25 ರೂಪಾಯಿ ಮಾಸಿಕ ಜೀವನಾಂಶ ದೊರೆಯುವಂತಾಯಿತು. ಆ ವೇಳೆಗಾಗಲೆ ನಾಗಾಲ್ಯಾಂಡ್‌ನಲ್ಲಿ ನಾಗಾ ಜನಾಂಗದ ಲೀಲಾ ಎಂಬಾಕೆಯನ್ನು ಎಲ್ವನ್ ಎರಡನೇ ವಿವಾಹವಾಗಿದ್ದ.

ಇತ್ತ ಮಧ್ಯಪ್ರದೇಶದ ಜಬಲ್‌ಪುರ್ ಪಟ್ಟಣದಲ್ಲಿ ತನ್ನ ಮಾಜಿ ಪತಿ ಎಲ್ವಿನ್ ನೀಡುತ್ತಿದ್ದ 25 ರೂಪಾಯಿ ಮಾಸಾಶನದಲ್ಲಿ ಬಾಡಿಗೆ ಕೊಂಠಡಿಯಲ್ಲಿ ಕಿರಿಯ ಮಗನ (ವಿಜಯ) ಜೀವನ ದೂಡುತ್ತಿದ್ದ ಕೋಶಿಗೆ 1964ರಲ್ಲಿ ವೇರಿಯರ್ ಎಲ್ವಿನ್ ನಿಧನಾನಂತರ ಮಾಸಾಶನ ನಿಂತು ಹೋಯಿತು. ಇದರಿಂದಾಗಿ ದಿಕ್ಕು ತೋಚದ ಕೋಶಿ ತನ್ನ ಮಗನ ಜೊತೆತನ್ನ ಊರಾದ ಅದೇ ಮಧ್ಯಪ್ರದೇಶದ ದಿಂಡೊರ ಜಿಲ್ಲೆಯ ರೈತ್ವಾರ್ ಎಂಬ ಹಳ್ಳಿಗೆ ಬಂದು ವಾಸಿಸತೊಡಗಿದಳು.

1964ರ ಪೆಬ್ರವರಿ ತಿಂಗಳಿನಲ್ಲಿ ಕಾರ್ಯನಿಮಿತ್ತ ದೆಹಲಿಗೆ ಬಂದಿದ್ದ ವೇರಿಯರ್‌ ಎಲ್ವಿನ್ ತನ್ನ 62ನೇ ವಯಸ್ಸಿನಲ್ಲಿ ಹೃದಯಾಘತದಿಂದ ತೀರಿಕೊಂಡ. ಆವೇಳೆಗೆ ಅವನು ಸಂಪಾದಿಸಿದ್ದ, ಕೊಟ್ಯಾಂತರ ರೂಪಾಯಿ ಬೆಲೆ ಬಾಳುವ ಕೊಲ್ಕತ್ತ ನಗರದ ಮನೆ ಮತ್ತು ನಾಗಾಲ್ಯಾಂಡ್‌ನಲ್ಲಿ ಇದ್ದ 60 ಎಕರೆ ಎಸ್ಟೇಟ್ ಎಲ್ಲವೂ ಎರಡನೇ ಪತ್ನಿ ಲೀಲಾಳ ಪಾಲಾದವು. ಎಲ್ವಿನ್ ಸಾಕಿ ಬೆಳಸಿದ್ದ ಹಿರಿಯ ಮಗ ಜವಹರ್ ಸಿಂಗ್ ಭಾರತೀಯ ಸೇನಾ ವಿಭಾಗದ ಅಸ್ಸಾಂ ರೈಫಲ್‌ನಲ್ಲಿ ಸೇವೆಯಲ್ಲಿದ್ದ, ಆದರೆ, ಮಿತಿ ಮೀರಿದ ಮಧ್ಯಪಾನದಿಂದ ಅತಿ ಚಿಕ್ಕ ವಯಸ್ಸಿಗೆ ಸಾವನ್ನಪ್ಪಿದ. 1964ರಲ್ಲಿ ವೇರಿಯರ್ ಎಲ್ವಿನ್ ಮರಣಾನಂತರ ಅವನ ಮಹತ್ತರ ಕೃತಿ “The tribal world of Verier Elwin” ಪ್ರಕಟವಾಯಿತು. (ಇದನ್ನು ನಮ್ಮ ಕನ್ನಡದ ಜಾನಪದ ತಜ್ಞ ಡಾ.ಹೆಚ್. ಎಲ್.ನಾಗೇಗೌಡ “ವೇರಿಯರ್ ಎಲ್ವಿನ್‌ನ ಗಿರಿಜನ ಪ್ರಪಂಚ” ಎಂಬ ಹೆಸರಿನಲ್ಲಿ ಅನುವಾದಿಸಿದ್ದಾರೆ.)

ಜಬಲ್‌ಪುರದಿಂದ 375 ಕಿಲೋಮೀಟರ್ ದೂರದ ದಿಂಡೋರ ಜಿಲ್ಲೆಯ ಅರಣ್ಯದ ನಡುವೆ ಇರುವ ರೈತ್ವಾರ್ ಎಂಬ ಹಳ್ಳಿಯಲ್ಲಿ ಮಗನ ಜೊತೆ ಇದ್ದ ಬುಡಕಟ್ಟು ಜನಾಂಗದ ಹೆಣ್ಣುಮಗಳು ಕೋಶಿ ಈಗ ಅಕ್ಷರಶಃ ಏಕಾಂಗಿ. ಚಿತ್ರಗಳಿಗೆ ಚೌಕಟ್ಟು (ಪೊಟೋ ಪ್ರೇಮ್) ಹಾಕುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದ ಎರಡನೇ ಮಗ ವಿಜಯ್ ಕೂಡ ತನ್ನ ಪತ್ನಿ ಮತ್ತು ಮೂರು ಮಕ್ಕಳನ್ನು ಬಿಟ್ಟು ಇತ್ತೀಚೆಗೆ ಅನಾರೋಗ್ಯದಿಂದ ತೀರಿಕೊಂಡಿದ್ದಾನೆ. ಸೊಸೆ ಮತ್ತು ಮೂವರು ಮೊಮಕ್ಕಳೊಂದಿಗೆ ಬದುಕುತ್ತಿರುವ ವೃದ್ಧೆ ಕೋಶಿಗೆ ಮಧ್ಯ ಪ್ರದೇಶ ಸರ್ಕಾರ ವಿಶೇಷವಾಗಿ ನೀಡುತ್ತಿರುವ 600 ರೊಪಾಯಿ ಮಾಸಾಶನವೇ ಜೀವನಕ್ಕೆ ಆಧಾರವಾಗಿದೆ. ಸೊಸೆ ಕೃಷಿ ಕೂಲಿ ಕಾರ್ಮಿಕಳಾಗಿ ದುಡಿಯುತ್ತಿದ್ದಾಳೆ.

ವೇರಿಯರ್ ಎಲ್ವಿನ್ ಇಂದು ಜಗತ್ ಪ್ರಸಿದ್ಧ ಲೇಖಕನಾಗಿ, ಸಮಾಜ ಶಾಸ್ತ್ರಜ್ಞನಾಗಿ ಜಗತ್ತಿಗೆ ಪರಿಚಿತನಾಗಿದ್ದಾನೆ. ಅವನ ಎಪ್ಪತ್ತಕ್ಕೂ ಹೆಚ್ಚಿನ ಕೃತಿಗಳು ಈಗಲೂ ಪ್ರತಿಷ್ಟಿತ ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್ ಸೇರಿದಂತೆ ಅನೇಕ ಪ್ರಕಾಶನ ಸಂಸ್ಥೆಗಳಿಂದ ಮರು ಮುದ್ರಣಗೊಳ್ಳುತ್ತಿವೆ. ಭಾರತವೂ ಸೇರಿದಂತೆ ಜಗತ್ತಿನ ನೂರಾರು ವಿ.ವಿ.ಗಳಲ್ಲಿ ಅವನ ಕೃತಿಗಳು ಸಮಾಜ ಶಾಸ್ತ್ರದ ಪಠ್ಯಗಳಾಗಿವೆ. ಇದರಿಂದ ಬರುವ ಗೌರವ ಧನ ಎರಡನೇ ಪತ್ನಿ ಲೀಲಾ ಕುಟುಂಬದ ಪಾಲಾಗುತ್ತಿದೆ.ಆದರೆ, ಹತ್ತು ವರ್ಷಗಳ ಕಾಲ ಅವನೊಂದಿಗೆ ಮೈ ಮತ್ತು ಮನಸ್ಸು ಹಂಚಿಕೊಂಡ ಆದಿವಾಸಿ ಹೆಣ್ಣುಮಗಳು, ಕೋಶಿ ಇಂದು ವೃದ್ಧೆಯಾಗಿ ಒಂದು ಹಿಡಿ ಅನ್ನಕ್ಕಾಗಿ ಸರ್ಕಾರ ನೀಡುವ ಹಣಕ್ಕಾಗಿ ಕಾಯುತ್ತಾ ಕೂತ್ತಿದ್ದಾಳೆ. ಅವಳ ಬಳಿ ಇರುವ ಆಸ್ತಿಯೆಂದರೆ, ವೇರಿಯರ್ ಎಲ್ವಿನ್ ನ ಒಂದು ಕಪ್ಪು ಬಿಳುಪಿನ ಭಾವಚಿತ್ರ ಮತ್ತು ಅವನ ಜೊತೆ ಸುತ್ತಾಡಿದ ನೆನಪುಗಳು ಮಾತ್ರ.

ವೇರಿಯರ್ ಎಲ್ವಿನ್ ತನ್ನ ಆತ್ಮ ಕಥನದಲ್ಲಿ ಕೇವಲ ಎರಡು ಸಾಲಿನಲ್ಲಿ, “ನಾನು ಹತ್ತು ವರ್ಷಗಳ ಕಾಲ ಬುಡಕಟ್ಟು ಜನಾಂಗದ ಒಬ್ಬ ಹೆಣ್ಣು ಮಗಳ ಜೊತೆ ಜೀವನ ನಡೆಸಿದ್ದೆ, ಅದು ವಿವರವಾಗಿ ಹೇಳಲಾಗದ ಅವ್ಯಕ್ತ ನೋವಿನ ಕಥೆ,” ಎಂದಷ್ಟೇ ದಾಖಲಿಸಿದ್ದಾನೆ. ಇತಿಹಾಸದ ಕಾಲಗರ್ಭದಲ್ಲಿ ಹೂತುಹೋಗುತ್ತಿದ್ದ ವೇರಿಯರ್ ಎಲ್ವಿನ್‌ನ ಈ ವಂಚನೆಯ ಪ್ರಪಂಚವನ್ನು ಜಗತ್ತಿಗೆ ಮೊದಲ ಬಾರಿಗೆ ತೆರೆದಿಟ್ಟವನು ರಮಣ್ ಕೃಪಾಳ್ ಎಂಬ ಜಬಲ್‌ಪುರ್ ಮೂಲದ ಪತ್ರಕರ್ತ. ಆನಂತರ 2008ರಲ್ಲಿ ಈ ಪತ್ರಕರ್ತನ ಲೇಖನವನ್ನು ಆಧರಿಸಿ, ಕೋಶಿಯನ್ನು ಸಂದರ್ಶನ ಮಾಡಿದ ಲಂಡನ್‌ನಿನ ಬಿ.ಬಿ.ಸಿ. ಚಾನಲ್ “British scholar’s Indian widow in penury” (ಬ್ರಿಟಿಷ್ ವಿದ್ವಾಂಸ ಮತ್ತು ಭಾರತದ ವಿಧವೆಯೊಬ್ಬಳ ಬಡತನ) ಎಂಬ ಹೆಸರಿನಲ್ಲಿ 30 ನಿಮಿಷದ ಸಾಕ್ಷ್ಯ ಚಿತ್ರ ನಿರ್ಮಿಸಿ ಪ್ರಸಾರ ಮಾಡಿತು.

ದುರಂತ ಮತ್ತು ನೋವಿನ ಸಂಗತಿಯೆಂದರೆ, ಅಕ್ಷರ ಸಂಸ್ಕೃತಿಯಿಂದ ವಂಚಿತವಾಗಿದ್ದ ಬುಡಕಟ್ಟು ಜನಾಂಗದಿಂದ ಬಂದಿದ್ದ ಕೋಶಿ ಎಂಬ ಆ ಹೆಣ್ಣುಮಗಳಿಗೆ ಇದ್ದ ಬದ್ಧತೆ ವಿದ್ವಾಂಸ ಮತ್ತು ಜಗತ್ ಪ್ರಸಿದ್ಧ ಸಮಾಜ ಶಾಸ್ತ್ರಜ್ಞ ಎನಿಸಿಕೊಂಡ ವೇರಿಯರ್ ಎಲ್ವಿನ್‌ಗೆ ಇರಲಿಲ್ಲ.

ತನ್ನ ಮೊದಲ ಮಗುವಿನ ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ ಎಲ್ವಿನ್ ಕೋಶಿಯನ್ನು ಮುಂಬೈ ನಗರಕ್ಕೆ ಕರೆದೊಯ್ದಿದ್ದ. ಅಂದು ರಾತ್ರಿ ಆಕೆ ನೆಹರೂ ಜೊತೆ ಔತಣ ಕೂಟದಲ್ಲಿ ಪಾಲ್ಗೊಂಡಿದ್ದಳು. ಗರ್ಭಿಣಿಯಾಗಿದ್ದ ಕೋಶಿಯನ್ನು ನೋಡಿ ಮಾತನಾಡಿಸಿದ ನೆಹರೂರವರು, ‘ಗಂಡು ಮಗುವಾದರೇ, ಏನು ಹೆಸರು ಇಡುತ್ತಿಯಾ?’ ಎಂದು ಕೇಳಿದ್ದರು, ಅದಕ್ಕೆ ಕೋಶಿ, ಗಂಡು ಮಗುವಾದರೆ ನಿಮ್ಮ ಹೆಸರು ಇಡುತ್ತೀನಿ ಎಂದು ಮುಗ್ಧವಾಗಿ ನಕ್ಕು ಹೇಳಿದ್ದಳು. ಅವಳ ಮಾತಿನಿಂದ ಖುಷಿಯಾದ ನೆಹರೂ ಆಕೆಗೆ ಸಾವಿರ ರೂಪಾಯಿಯ ಕೊಡುಗೆ ನೀಡಿದ್ದರು. ಆನಂತರ ಗಂಡು ಮಗುವಾದಾಗ ಕೋಶಿ ನೆಹರೂಗೆ ಕೊಟ್ಟ ಮಾತಿನಂತೆ ತನ್ನ ಮಗುವಿಗೆ ಜವಹರ ಸಿಂಗ್ ಎಂದು ನಾಮಕರಣ ಮಾಡಿದಳು. ಇಂತಹ ಬದ್ಧತೆ ಎಲ್ವಿನ್‌ಗೆ ಇದ್ದಿದ್ದರೆ, ಇಂದು ಕೋಶಿಯ ಬದುಕು ಈ ರೀತಿ ಬೀದಿಗೆ ಬೀಳುತ್ತಿರಲಿಲ್ಲ.

(ಮುಂದುವರಿಯುವುದು)

Leave a Reply

Your email address will not be published. Required fields are marked *