ಬಯಲುಸೀಮೆಯ ಬರಡಲ್ಲಿ ಭಾಗೀರಥಿ…


– ರವಿ ಕೃಷ್ಣಾರೆಡ್ಡಿ


ಕಳೆದ ರಾತ್ರಿ ಬೆಂಗಳೂರಿನಲ್ಲಿ ಇದ್ದಕ್ಕಿದ್ದಂತೆ ಮಳೆಯಾಯಿತು. ಕಳೆದ ಕೆಲವು ದಿನಗಳಿಂದ ಇಲ್ಲಿ ಬಿಸಿಲ ಬೇಗೆ ಮತ್ತು ಸೆಕೆ ಬೇಸಿಗೆಯನ್ನು ಮೀರಿಸುತ್ತಿತ್ತು. ಇಂದು ಮತ್ತೆ ಧಗೆ.

ಎರಡು ದಿನಗಳ ಹಿಂದೆ ಊರಿಗೆ ಹೋಗಿದ್ದೆ. ತೋಟದಲ್ಲಿನ ತೆಂಗಿನ ಮರಗಳ ಕೆಳಗೆ ತಿಂಗಳ ಹಿಂದೆ ಹುಲುಸಾಗಿ ಬೆಳೆದಿದ್ದ ಹುಲ್ಲು ಬಾಡಿ ಒಣಗುತ್ತಿತ್ತು. ಕಳೆ ಗಿಡಗಳು ಸಾಯುತ್ತಿದ್ದವು. ಮನೆಯ ಮುಂದಿನ ಶ್ರೀಗಂಧದ ಮರದ ಎಲೆಗಳು ಸುಟ್ಟು ಕರಕಲಾಗುವ ಹಂತ ತಲುಪಿದ್ದವು. ಆ ಮರದ ಎಲೆಗಳನ್ನು ಅಷ್ಟು ದೈನೇಸಿ ಸ್ಥಿತಿಯಲ್ಲಿ ನೋಡಿದ ನೆನಪಿಲ್ಲ. ಇದು ಮಳೆಗಾಲ.

ವರ್ಷದ ಹಿಂದೆ ಸುಮಾರು ಇಪ್ಪತ್ತು ಹಣ್ಣಿನ ಗಿಡಗಳನ್ನು ನೆಟ್ಟಿದ್ದೆ. ಅದರಲ್ಲಿ ಈ ಬೇಸಿಗೆಯಲ್ಲಿ ಸರಿಯಾದ ನೀರಿನ ಆರೈಕೆ ಇಲ್ಲದೆ ಒಂದಷ್ಟು ಗಿಡಗಳು ಸತ್ತಿದ್ದವು. ಎರಡು ಆವೊಕಾಡೊ (ಬೆಣ್ಣೆ ಹಣ್ಣು) ಗಿಡಗಳು ಮತ್ತು ಎರಡು ಅಡಿಕೆ ಗಿಡಗಳಂತೂ ಮೊದಲೆ ಒಣಗಿ ಸತ್ತುಹೋಗಿದ್ದವು. ತಿಂಗಳ ಹಿಂದೆ ಬಿದ್ದಿದ್ದ ಚೂರುಪಾರು ಮಳೆಗೆ ಜೀವ ಉಳಿಸಿಕೊಂಡಿದ್ದ ಗಿಡಗಳಿಗೆ ಎರಡು ವಾರದ ಹಿಂದೆ ಪಾತಿ ಮಾಡಿದ್ದೆ. ಕೊಟ್ಟಿಗೆ ಗೊಬ್ಬರ ಇಲ್ಲದ ಕಾರಣ ಎರಡು ಕೆಜಿ ಯೂರಿಯಾ ತಂದಿದ್ದೆ. ನನ್ನಮ್ಮ ’ಅದನ್ನು ಎಲ್ಲಿಯಾದರೂ ಗಿಡಗಳಿಗೆ ಹಾಕಿಬಿಟ್ಟೀಯಾ, ನೀರು ಹಾಕದೆ ಇದ್ದರೆ ಎಲ್ಲಾ ಸುಟ್ಟು ಹೋಗುತ್ತವೆ’ ಎಂದು ಗದರಿದ್ದಳು. ಹೇಗೂ ಮಳೆ ಬರಲೇಬೇಕು, ಬಂದ ತಕ್ಷಣ ಹಾಕು ಎಂದು ಅವಳಿಗೆ ಹೇಳಿದ್ದೆ. ಈ ವರ್ಷವಾದರೂ ಆ ಹಣ್ಣಿನ ಗಿಡಗಳು ನೆಲದ ಆಳಕ್ಕೆ ಬೇರು ಬಿಟ್ಟುಕೊಂಡು ಬೆಳೆದರೆ ಮುಂದಕ್ಕೆ ಹೇಗೊ ಬದುಕಿಕೊಳ್ಳುತ್ತವೆ ಎನ್ನುವ ಆಶಾವಾದ ನನ್ನದು.

ಆದರೆ, ಈ ಮಳೆ? ಚಿಕ್ಕವರಿದ್ದಾಗ ಜುಲೈನಿಂದ ನವೆಂಬರ್ ತಿಂಗಳುಗಳ ಮಧ್ಯದಲ್ಲಿ ಕೆಸರನ್ನು ತುಳಿದೂ ತುಳಿದೂ ಕಾಲ್ಬೆರಳುಗಳ ಮಧ್ಯೆ ಬರುವ ಕೆಸರು ಗುಳ್ಳೆಗಳ ತುರಿತದ್ದೇ ಸಮಸ್ಯೆ. ಆಗಲೂ ಏಳೆಂಟು ವರ್ಷಗಳ ಅವಧಿಗೆ ಅತಿವೃಷ್ಟಿ-ಅನಾವೃಷ್ಟಿಯ ಚಕ್ರ ಇತ್ತು. ಆದರೆ, ಈ ಮಟ್ಟದಲ್ಲಿ ಮಳೆ ಕೈಕೊಟ್ಟಿದ್ದು ಮತ್ತು ಅದು ಜನರನ್ನು ತಟ್ಟುತ್ತಿರುವುದನ್ನು ನೋಡಿರಲಿಲ್ಲ. ನೆನ್ನೆ ತಾನೆ ಚಿಕ್ಕಮ್ಮಳೊಬ್ಬಳೊಂದಿಗೆ ಮಳೆಯ ಬಗ್ಗೆ ಮಾತನಾಡುತ್ತಿದ್ದಾಗ ಆಕೆ ಹೇಳಿದ ಮಾತು: “ಜನರದ್ದು ಬಿಡು, ದನಕರುಗಳ ಕತೆ ಹೇಳು.”

ಬಯಲುಸೀಮೆಯಲ್ಲಿ ದನಎಮ್ಮೆಆಡುಕುರಿಗಳನ್ನು ಸಾಕುತ್ತಿರುವವರ ಮಾನಸಿಕ ಸ್ಥಿತಿ ಈ ವರ್ಷ ಖಂಡಿತ ಕೆಟ್ಟಿದೆ. ಮನುಷ್ಯ ಹೇಗೋ ಕಾಡಿ-ಬೇಡಿ ಹೊಟ್ಟೆ ತುಂಬಿಸಿಕೊಳ್ಳುತ್ತಾನೆ. ಆದರೆ ಆ ಸಾಕುಪ್ರಾಣಿಗಳಿಗೆ? ಒಣಗಿದ ಹುಲ್ಲಿನ ದಾಸ್ತಾನು ಮುಗಿದಿದೆ. ಬಯಲೆಲ್ಲ ಮಣ್ಣಾಗಿದೆ. ಪ್ರಾಣಿಗಳನ್ನು ಸಾಕುತ್ತಿರುವ ಮನೆಯ ಜನ ತಮ್ಮ ದನಕರುಗಳಿಗೆ ಮೇವು ಒದಗಿಸಲಾಗದೆ ದುಗುಡ ಹೆಚ್ಚಿಸಿಕೊಳ್ಳುತ್ತಿದ್ದಾರೆ.

***

ಕಳೆದ ಎರಡು ವರ್ಷಗಳಿಂದ ರಾಜ್ಯದ ಬೇರೆಬೇರೆ ಕಡೆ ಪ್ರಯಾಣ ಮಾಡುತ್ತಿದ್ದಾಗ, ಅದರಲ್ಲೂ ರಾಜ್ಯದ ಬಯಲುಸೀಮೆಯ ಜಿಲ್ಲೆಗಳಲ್ಲಿ ನೀರಾವರಿ ಸಾಧ್ಯವಾಗಿಸಿಕೊಂಡ ಪ್ರಗತಿಪರ ರೈತರ ತೋಟಗಳನ್ನು ನೋಡುತ್ತಿದ್ದಾಗ, ನೀರೊಂದಿದ್ದರೆ ಈ ಜನ ಇಲ್ಲಿ ನಂದನವನ್ನೇ ಸೃಷ್ಟಿಸುತ್ತಾರೆ ಎನ್ನಿಸುತ್ತಿತ್ತು. ಬೆಂಗಳೂರಿನಿಂದ ಹಿಡಿದು ಬಿಜಾಪುರ-ಬೀದರ್‌ಗಳ ಬಯಲುಸೀಮೆಯ ನೆಲದಲ್ಲಿ ಅಷ್ಟಿಷ್ಟು ನೀರಿನ ಆರೈಕೆ ಇದ್ದರೆ ಸಾಕು, ಹಣ್ಣಿನ ಮತ್ತು ತರಕಾರಿ ಬೆಳೆಗಳಂತೂ ಹುಲುಸಾಗಿ ಬೆಳೆಯುತ್ತವೆ. ಅದ್ಭುತ ಇಳುವರಿ ಕೊಡುತ್ತವೆ. ಆದರೆ, ನೀರಾವರಿ ಇಲ್ಲದ ಕಡೆ ನೀರಿನದೇ ಸಮಸ್ಯೆ. ಇದ್ದ ಕಡೆ ಮತಿಯಿಲ್ಲದ ಕೃಷಿಪದ್ದತಿಗಳು.

ಕಳೆದ ವರ್ಷ ಇದೇ ಸಮಯದಲ್ಲಿ ಬಿಜಾಪುರದ ಬಳಿಯ ಸಂಗಾಪುರ ಎನ್ನುವ ಹಳ್ಳಿಯಲ್ಲಿದ್ದೆ. ಅದು ಅಲ್ಲಿಯ ಯಕ್ಕುಂಡಿ ಕೆರೆಗೆ ಹತ್ತಿರದಲ್ಲಿರುವ ಊರು. ಈ ಕೆರೆ ಕೃಷ್ಣಾ ನದಿಗೆ ಕಟ್ಟಲಾಗಿರುವ ಚಿಕ್ಕಪಡಸಲಗಿ ಬ್ಯಾರೇಜ್‌ಗೆ ಸುಮಾರು ಹದಿನೈದು ಕಿ.ಮೀ. ದೂರದಲ್ಲಿದೆ. ನನಗೆ ಗೊತ್ತಾದ ಮಾಹಿತಿ ಪ್ರಕಾರ ಅಲ್ಲಿಯ ಸ್ಥಳೀಯ ಶಾಸಕ ಎಂ.ಬಿ. ಪಾಟೀಲ್ ಮುತುವರ್ಜಿ ವಹಿಸಿ ಚಿಕ್ಕಪಡಸಲಗಿಯಿಂದ ಏತ ನೀರಾವರಿ ಮೂಲಕ ಯಕ್ಕುಂಡಿ ಕೆರೆಗೆ ನೀರು ಹರಿಸುವ ಯೋಜನೆಗೆ ಓಡಾಡಿದ್ದಾರೆ. ಕಾಲುವೆ, ಪಂಪ್‍ಸೆಟ್ ಕೆಲಸ, ಇತ್ಯಾದಿ ಎಲ್ಲವೂ ಮುಗಿದು ಸುಮಾರು ಒಂದು ವರ್ಷ ಆಗುತ್ತ ಬಂದಿದೆ. ಆದರೆ ಆ ಕೆರೆಗೆ ಇನ್ನೂ ನೀರು ಬಂದಿಲ್ಲ. ಅದರ ಮೇಲಿನ ಕೆರೆಗೆ ಬಂದಿದೆಯಂತೆ. ಒಂದು ಹತ್ತು-ಹದಿನೈದು ದಿನ ಸತತ ವಿದ್ಯುತ್ ಕೊಟ್ಟು ನೀರು ಹರಿಸಿದರೆ ಯಕ್ಕುಂಡಿ ಕೆರೆ ಕೃಷ್ಣಾ ನದಿಯ ನೀರು ಕುಡಿಯುತ್ತದೆ. ಆದರೆ, ಆ ಊರಿನ ನನ್ನ ಸ್ನೇಹಿತ ಹೇಳುವ ಪ್ರಕಾರ ಸಚಿವ ಮುರುಗೇಶ್ ನಿರಾಣಿ ಅದನ್ನು ಬೇಕಂತಲೇ ಆಗಗೊಡುತ್ತಿಲ್ಲ. ಕಾರಣ, ಈ ಯೋಜನೆಯ ಹೆಸರು ಶಾಸಕ ಎಂ.ಬಿ. ಪಾಟೀಲ್‌ಗೆ ಬರುತ್ತದೆ ಎಂದು.

ಇರಲಿ. ಇಂದಲ್ಲ ನಾಳೆ ಸಣ್ಣಮನಸ್ಸಿನ ದುಷ್ಟರೂ ಎಲ್ಲರಂತೆ ಮಣ್ಣಾಗುತ್ತಾರೆ, ಇಲ್ಲವೇ ಕಾಲ ಅದಕ್ಕೂ ಮೊದಲೆ ಕೆಲವರನ್ನು ಗುಡಿಸಿ ಬಿಸಾಕುತ್ತದೆ. ಯಕ್ಕುಂಡಿ ಕೆರೆ ಈ ವರ್ಷವಲ್ಲದಿದ್ದರೆ ಮುಂದಿನ ವರ್ಷವಾದರೂ ಕೃಷ್ಣೆಯ ನೀರು ಕಾಣುತ್ತದೆ.

ಇದೆಲ್ಲದರ ಜೊತೆಜೊತೆಗೆ ಚಿತ್ರದುರ್ಗ ಜಿಲ್ಲೆಗೆ ಭದ್ರಾ ನದಿಯ ನೀರು ತರಬೇಕೆಂದು ಹೋರಾಟ ನಡೆದಿದೆ. ಹೇಮಾವತಿಯ ನೀರು ಶಿರಾ ದಾಟಿ ಮಧುಗಿರಿ ಕಡೆಗೆ ಬಸಿಯುತ್ತಿದೆ. ಕೋಲಾರ ಜಿಲ್ಲೆಗೆ ನೇತ್ರಾವತಿ ನೀರು ತರಬೇಕೆಂದು ಜನಾಭಿಪ್ರಾಯ ರೂಪಿಸುವ ಕೆಲಸ ನಡೆದಿದೆ.

ಆದರೆ, ನನ್ನ ಪ್ರಶ್ನೆ ಇರುವುದು, ಅದಾದ ನಂತರ ಏನು? ಇಷ್ಟೆಲ್ಲ ಕಷ್ಟಪಟ್ಟು, ಜಲಾಶಯ ನಿರ್ಮಿಸಿ, ನೀರನ್ನು ನೂರಾರು ಅಡಿ ಮೇಲೆತ್ತಿ ಹೇಗೆಹೇಗೋ ಸಾಗಿಸಿ ಬಯಲುಸೀಮೆಗೆ ತರುವ ನೀರಿನ ಬಳಕೆ ಹೇಗೆ? ಇದು ಜಲಾಶಯ ಕಟ್ಟುವ ಕನ್‌ಸ್ಟ್ರಕ್ಷನ್ ಕಂಪನಿಗಳ ಸಮಸ್ಯೆ ಅಲ್ಲ. ನಾಡಿನ ಜನರದ್ದು. ಸಾಮಾಜಿಕ ಮತ್ತು ರಾಜಕೀಯ ಮುಖಂಡರದ್ದು. ಆದರೆ ಏನಾಗಿದೆ?

ನಮ್ಮ ರಾಜ್ಯದ ಬಯಲುಸೀಮೆಯಲ್ಲಂತೂ ಊರಿಗೊಂದು ಕೆರೆ ಇದೆ. ಲಕ್ಷಾಂತರ ಜನರನ್ನು ನಿರ್ವಸಿತರನ್ನಾಗಿಸಿ, ನಿಸರ್ಗದ ಮೇಲೆ ಒತ್ತಡ ತಿಂದು ನಿರ್ಮಿಸುವ, ಜಾಗತಿಕ ತಾಪಮಾನ ಹೆಚ್ಚಿಕೆಯಲ್ಲಿ ತಮ್ಮ ಪಾಲೂ ಇರುವ  ಬೃಹತ್ ಅಣೆಕಟ್ಟುಗಳ ನಿರ್ಮಾಣವಿಲ್ಲದೆ ಈ ರಾಜ್ಯಕ್ಕೆ ನೀರಾವರಿ ಸೌಲಭ್ಯ ಒದಗಿಸಲು ಸಾಧ್ಯವಿದೆ. ಬಹುಪಾಲು ಎಲ್ಲಾ ಕೆರೆಗಳು ಒಂದಕ್ಕೊಂದು ಸಂಪರ್ಕ ಹೊಂದಿವೆ. ಮೇಲಿನ ಕೆರೆಗೆ ನೀರು ಬರುವ ಹಾಗೆ ನೋಡಿಕೊಂಡರೆ ಸಾಕು. ಆ ಕೆರೆ ತುಂಬಿಸಿದಾಕ್ಷಣ ಕೆಳಗಿನ ಕೆರೆಗೆ ನೀರು ಹೋಗುವ ಎಲ್ಲಾ ವ್ಯವಸ್ಥೆಗಳೂ, ಕಾಲುವೆಗಳೂ, ಸಂಪರ್ಕ ಜಾಲಗಳೂ ಇವೆ. ಹೊಸದಾಗಿ ನೂರಾರು ಅಡಿ ಆಳದ ಕಾಲುವೆಗಳನ್ನು ನಿರ್ಮಿಸುವ ಅಗತ್ಯವಿಲ್ಲ.  ಮೇಲೆ ಪ್ರಸ್ತಾಪಿಸಿರುವ ಯಕ್ಕುಂಡಿ ಕೆರೆಗೆ ನೀರು ಹರಿಸುವ ಯೋಜನೆ ಒಂದು ಅದ್ಭುತವಾದ ಕಾರ್ಯರೂಪಕ್ಕೆ ಬಂದಿರುವ ಚಿಂತನೆ . ಆದರೆ, ನೀರಾವರಿ ಎಂದಾಕ್ಷಣ ನಮ್ಮಜನರಿಗೆ, ಬಿಲ್ಡರ್ಸ್‌ಗೆ, ರಾಜಕಾರಣಿಗಳಿಗೆ ನೆನಪಿಗೆ ಬರುವುದು ಬೃಹತ್ ಅಣೆಕಟ್ಟೆಗಳು ಮತ್ತು ಎಡದಂಡೆ ಮತ್ತು ಬಲದಂಡೆ ಕಾಲುವೆಗಳು ಮತ್ತು ಅವುಗಳ ಉಸ್ತುವಾರಿಯಲ್ಲಿ ಲಪಟಾಯಿಸುವ ಕೋಟ್ಯಾಂತರ ರೂಪಾಯಿಗಳು.

ಮತ್ತು, ನೀರಾವರಿ  ಎಂದಾಕ್ಷಣ ರೈತನಿಗೆ ಗೊತ್ತಿರುವುದು, ಕಬ್ಬು ಮತ್ತು ಬತ್ತ.

ನೂರಾರು ಕಿ.ಮೀ.ಗಳ ದೂರದಿಂದ ಬರುವ ನೀರನ್ನು ಹೇಗೆ ಬಳಸಿಕೊಳ್ಳಬೇಕು ಎನ್ನುವ ಜ್ಞಾನವನ್ನೇ ನಮ್ಮ ರೈತರಿಗೆ ನಮ್ಮ ಸರ್ಕಾರಗಳು ಕೊಡುವುದಿಲ್ಲ. ಅವನಿಗಿರುವ ಜ್ಞಾನ ಕೆಸರು ಗದ್ದೆ ಮಾಡಿ ಬತ್ತ ಬೆಳೆಯುವುದು, ಮತ್ತು ಕಬ್ಬು ಬೆಳೆದು ಸಕ್ಕರೆ ಕಾರ್ಖಾನೆಗಳಿಗೆ ಸಾಗಿಸುವುದು. ಪ್ರತಿ ಸಲವೂ ಅದೇ ಬೆಳೆ. ಸಾರ ಹಿಂಗಿಹೋದ ಭೂಮಿಗೆ ಅಪಾರ ಪ್ರಮಾಣದಲ್ಲಿ ಕೃತಕ ರಾಸಾಯನಿಕ ಗೊಬ್ಬರಗಳ ಸುರಿವು. ಒಟ್ಟಾರೆಯಾಗಿ ಇದು ಹೀಗೆ ಎಷ್ಟು ದಿನ ನಡೆಯುತ್ತದೆ, ಮತ್ತು ಅದರಿಂದ ಆಗುವ ಕೆಡಕುಗಳೇನು, ಇನ್ನೂ ಹೆಚ್ಚಿಗೆ ಒಳಿತು ಮಾಡಿಕೊಳ್ಳುವ ಮತ್ತು ನೈತಿಕವಾಗಿ ಬದುಕುವ ಮಾದರಿಯೇ ಇಲ್ಲವೇ, ಎಂಬಂತಹ ಪ್ರಶ್ನೆಗಳು ನಮ್ಮಲ್ಲಿ ಯಾರೂ ಎತ್ತುತ್ತಿಲ್ಲ.

ನಮ್ಮ ದೇಶದ ಸಾಮುದಾಯಿಕ ದೂರದೃಷ್ಟಿ (collective vision) ಯಾಕಿಷ್ಟು ದುರ್ಬಲವಾಗಿದೆ?

ನಮ್ಮ ಸಮಾಜದ ಚಿಂತನೆ, ವಿಶೇಷವಾಗಿ ನೀರಾವರಿ ವಿಷಯಕ್ಕೆ, ಆದಷ್ಟು ಬೇಗ ಬದಲಾಗಬೇಕಿದೆ. ಈಗಾಗಲೆ ಬೆಂಗಳೂರು ಜಿಲ್ಲೆಯ ಪೂರ್ವಭಾಗದಲ್ಲಿ ಮತ್ತು ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಬೋರ್‌ವೆಲ್‌ಗಳ ಆಳ ಸಾವಿರ ಅಡಿ ಮುಟ್ಟಿ ಅದನ್ನು ದಾಟುತ್ತಿದೆ. ಒಂದು ಬೋರ್‌ವೆಲ್ ಕೊರೆಸಿ ಅದಕ್ಕೆ ಪಂಪ್ ಮತ್ತು ಮೋಟಾರ್ ಅಳವಡಿಸಲು ಎರಡು-ಮೂರು ಲಕ್ಷಕ್ಕೂ ಮೀರಿ ಖರ್ಚಾಗುತ್ತಿದೆ. ಆರುನೂರು ಏಳುನೂರು ಅಡಿಗಳ ಆಳದಿಂದ ನೀರೆತ್ತಲು ಬಹಳ ವಿದ್ಯುತ್ ಖರ್ಚಾಗುತ್ತದೆ. ಈ ಇಡೀ ಪ್ರಕ್ರಿಯೆ ಜಾಗತಿಕ ತಾಪಮಾನದ ದೃಷ್ಟಿಯಿಂದ ವಿಷವರ್ತುಲವನು ಸೃಷ್ಟಿಸುತ್ತಿದೆ. ಇದು ಬದಲಾಗಬೇಕಾದರೆ ಬಯಲುಸೀಮೆಯಲ್ಲಿ ಬೋರ್‌ವೆಲ್ ನೀರಾವರಿ ಮಾಡುವ ರೈತರು ಹನಿನೀರಾವರಿ ವ್ಯವಸ್ಥೆ ಇಲ್ಲದ ಯಾವ ಕೃಷಿಯನ್ನೂ ಮಾಡಬಾರದು. ಹೆಚ್ಚೆಚ್ಚು ನೀರು ಬೇಡುವ ಬೆಳೆಗಳನ್ನು ಇಲ್ಲಿ ಬೆಳೆಸುವುದು ಅನೈತಿಕ ಎನ್ನಿಸುವ ಅರಿವು ಹುಟ್ಟಬೇಕು. ಬೆಂಗಳೂರಿನ ಸುತ್ತಮುತ್ತ ಈಗೀಗ ಹನಿನೀರಾವರಿ ಹೆಚ್ಚುತ್ತಿದೆ. ಆದರೆ ನನಗೆ ತಿಳಿದ ಪ್ರಕಾರ ಅದಕ್ಕೆ ಕೃಷಿ ಕಾರ್ಮಿಕರ ಸಮಸ್ಯೆ ಮತ್ತು ಕಮ್ಮಿಯಾಗುತ್ತಿರುವ ನೀರಿನ ಸಮಸ್ಯೆ ಕಾರಣವೇ ಹೊರತು ಅದು ಪ್ರಜ್ಞಾಪೂರ್ವಕವಾಗಿ ರೈತಸಮುದಾಯ ತೆಗೆದುಕೊಳ್ಳುತ್ತಿರುವ ತೀರ್ಮಾನವಲ್ಲ. ಆದರೆ ಈ ತಿಳುವಳಿಕೆಯನ್ನು ಕೊಡಬೇಕಾದವರು ಯಾರು? ಸರ್ಕಾರವಲ್ಲದೆ ಇನ್ಯಾರು? ಕೃಷಿ ಇಲಾಖೆಗಿಂತ ಪವಿತ್ರವಾದ ಇಲಾಖೆ ಈ ಸರ್ಕಾರಗಳಲ್ಲಿ ಇನ್ನೊಂದಿರಲು ಸಾಧ್ಯವೇ? ಆದರೆ ಎಂತಹವರು ನಮ್ಮ ದೇಶದ ಮತ್ತು ರಾಜ್ಯದ ಕೃಷಿ ಸಚಿವರು?

ಮತ್ತು, ಎಲ್ಲಾ ಕಡೆಯೂ ಮಾಡುವಂತೆ, ಬಿಜಾಪುರದ ಬಳಿಯ ಯಕ್ಕುಂಡಿ ಕೆರೆಗೆ ನೀರು ಬಂದ ತಕ್ಷಣ ಆ ಕೆರೆಗೇ ಮೋಟಾರ್ ಇಟ್ಟು ಅಥವ ಕೆಳಗಿನ ಜಮೀನುಗಳಲ್ಲಿ ಬೋರ್ ಕೊರೆಸಿ ಕಿ.ಮೀ.ಗಟ್ಟಲೆ ನೀರು ಪಂಪ್ ಮಾಡಿ ಅಲ್ಲಿಯ ರೈತರು ಕಬ್ಬು ಬೆಳೆಯಲಿದ್ದಾರೆ. ಸುತ್ತಮುತ್ತ ಕಬ್ಬಿನ ಫ್ಯಾಕ್ಟರಿಗಳೆ ತುಂಬಿಕೊಂಡಿವೆ. ನೀರು ಇದೆ ಅಂದರೆ ಕಬ್ಬು ಬೆಳೆ ಎನ್ನುವ no-brainer ಚಿಂತನೆಗೆ ರೈತ ಅಲ್ಲಿ ಒಗ್ಗಿಹೋಗಿದ್ದಾನೆ. ನನ್ನ ಸ್ನೇಹಿತನೂ ಎರಡು ಕಿ.ಮೀ. ದೂರದ ಕೆರೆಯಿಂದ ತನ್ನ ಜಮೀನಿಗೆ ನೀರು ಪಂಪ್ ಮಾಡುವ ಎಲ್ಲಾ ವ್ಯವಸ್ಥೆ ಮಾಡಿಕೊಂಡು ನೀರಿನ ಬರುವಿಗೆ ವರ್ಷದಿಂದ ಕಾಯುತ್ತಿದ್ದಾನೆ. ಹನಿ ನೀರಾವರಿಯಲ್ಲಿ ಹತ್ತು ಎಕರೆ ಜಮೀನನ್ನು ಸಾಕಬಹುದಾದಷ್ಟು ನೀರನ್ನು ಅರ್ಧ ಎಕರೆ ಕಬ್ಬಿಗೆ ಉಣಿಸಲು ಅವನಂತೆ ಅವನ ಸುತ್ತಮುತ್ತಲ ಹಳ್ಳಿಯ ಜನ ತುದಿಗಾಲಲ್ಲಿ ನಿಂತಿದ್ದಾರೆ.

ಆದರೆ, ಈ ಕೆರೆಯ ನೀರನ್ನು ಹನಿನೀರಾವರಿಗೆ ಮಾತ್ರ ಬಳಸಬೇಕು ಎಂದು ಕಟ್ಟುಪಾಡು ಮಾಡಿದರೆ ಹೇಗೆ? ಕೆರೆಯ ಅಂಗಳದಲ್ಲಿ ಒಂದೆರಡು ಎಕರೆಯಲ್ಲಿ ಸೋಲಾರ್ ಪ್ಯಾನೆಲ್‌ಗಳನ್ನು ಅಳವಡಿಸಿ, ಅಲ್ಲಿಯೇ ಉತ್ಪಾದಿಸಿದ ವಿದ್ಯುತ್‌ನಿಂದ ಮೋಟಾರ್‌ಗಳನ್ನು ಓಡಿಸಿ ಸುತ್ತಮುತ್ತಲ ಜಮೀನುಗಳ ಹನಿನೀರಾವರಿ ವ್ಯವಸ್ಥೆಗೆ ಅದನ್ನು ಲಿಂಕ್ ಮಾಡುವ ವ್ಯವಸ್ಥೆಯನ್ನು ಸರ್ಕಾರವೇ  ಮೊದಲು ಮಾಡಿದರೆ ಅದು ಉತ್ತಮವಲ್ಲವೇ? ರೈತರು ಪೋಲು ಮಾಡುವ ವಿದ್ಯುತ್ ಮತ್ತು ನೀರು ಎರಡೂ ಉಳಿಯುತ್ತವೆ ಮತ್ತು ಕೃಷಿಯಲ್ಲಿ ಪರ್ಯಾಯ ಚಿಂತನೆಗಳು ಮತ್ತು ಪ್ರಯೋಗಗಳು ಚಾಲ್ತಿಗೆ ಬರುತ್ತವೆ. ರೈತರು ವಿವಿಧ ಬೆಳೆಗಳನ್ನು ಬೆಳೆಯಲು ಯತ್ನಿಸುತ್ತಾರೆ. ಪೂರ್ವಿಕರು ನೂರಾರು ವರ್ಷಗಳ ಪ್ರಯೋಗದಿಂದ ಕಂಡುಕೊಂಡ ಮಿಶ್ರ ಬೆಳೆ ಪದ್ಧತಿಯನ್ನು ಮುಂದುವರೆಸುತ್ತಾರೆ. ನೆಲದ ಸತ್ವ ಉಳಿಯುತ್ತದೆ. ಸಾವಯವವಾಗಿ ಒಂದು ನಾಗರೀಕತೆ ಧನಾತ್ಮಕವಾಗಿ ರೂಪುಗೊಳ್ಳುತ್ತದೆ.

ಹೀಗೆಯೇ ಮಾಡಬೇಕಿಲ್ಲ. ಇದಕ್ಕಿಂತ ಉತ್ತಮವಾದ ಇನ್ನೊಂದು ಮಾರ್ಗವೂ ಇರಬಹುದು. ಇನ್ನೂ ಹಲವಾರೇ ಇರಬಹುದು. ಆದರೆ, ಇಂತಹ ಯೋಚನೆಗಳನ್ನು ಮಾಡದಿದ್ದರೆ ಹೇಗೆ? ಮಾಡಬೇಕಾದವರು ಸರಿಯಾದ ಜಾಗದಲ್ಲಿ ಇರಬೇಕು. ನಮ್ಮ ರಾಜಕಾರಣಿಗಳು ಇಂತಹುದನ್ನು ಚಿಂತಿಸಬೇಕು. ವಿಶ್ವವಿದ್ಯಾಲಯದ ಸಂಬಂದ್ಗಪಟ್ಟ ವಿಭಾಗಗಳ ಪ್ರಾಧ್ಯಾಪಕರುಗಳು  ಕ್ಷೇತ್ರ ಅಧ್ಯಯನ ಮಾಡಬೇಕು.  ಕೃಷಿ ವಿಜ್ಞಾನಿಗಳು ಪರ್ಯಾಯಗಳನ್ನೂ ಪರಿಹಾರಗಳನ್ನೂ ಪರಿಚಯಿಸಬೇಕು. ಸರ್ಕಾರದ ಕೃಷಿ ಇಲಾಖೆ ಅದನ್ನು ಗಂಭೀರವಾಗಿ ಪರಿಗಣಿಸಿ ಯೋಗ್ಯವಾದದ್ದನ್ನು ಜಾರಿಗೆ ತರಬೇಕು. ಆದರೆ… ನಮ್ಮ ಇಡೀ ವ್ಯವಸ್ಥೆ ಕೆಟ್ಟಿದೆ. ಒಂದು ಇಲಾಖೆ ಇನ್ನೊಂದರ ಜೊತೆ ಜ್ಞಾನವಿನಿಮಯದ, ಜೊತೆಗೂಡಿ ಕೆಲಸ ಮಾಡುವ ರೀತಿಯಲ್ಲಿ ಸಂಬಂಧ ಇಟ್ಟುಕೊಳ್ಳುವುದಿಲ್ಲ. ಯೋಗ್ಯರು ವಿಶ್ವವಿದ್ಯಾಲಯಗಳ ಕುಲಪತಿಗಳಾಗುತ್ತಿಲ್ಲ. ಆ ಹುದ್ದೆಗಳಂತೂ ಬಿಕರಿಗಿವೆ. ಕೃಷಿ ವಿಶ್ವವಿದ್ಯಾಲಯಗಳು ಏನು ಮಾಡುತ್ತವೆ ಎಂದು ರೈತರಿಗೂ ಗೊತ್ತಾಗುತ್ತಿಲ್ಲ. ನೀರಾವರಿ ಇಲಾಖೆ ಹಳೆ ಕಾಲದ ಡ್ಯಾಮು-ಕೆನಾಲ್ ಮನಸ್ಥಿತಿಯಲ್ಲಿಯೇ ಇದ್ದು ಅದಕ್ಕೆ ಮೀರಿದ ಪರ್ಯಾಯಗಳ ಬಗ್ಗೆ ಯೋಚಿಸುತ್ತಿಲ್ಲ. ಕೃಷಿ ಇಲಾಖೆ ಅತ್ಯಂತ ಜವಾಬ್ದಾರಿಯುತ ಖಾತೆ ಎಂದು ಯಾರಿಗೂ ಅನ್ನಿಸುತ್ತಿಲ್ಲ. ಅಲ್ಲೊಬ್ಬ ವಿಷನರಿ ತರಹದ ಯೋಗ್ಯ ಮನುಷ್ಯ ಇರಬೇಕು ಎಂದು ಯಾರಿಗೂ ಅನ್ನಿಸುವುದಿಲ್ಲ. ಎಲ್ಲಕ್ಕೂ ಮುಖ್ಯವಾಗಿ ಇಂತಹುದೊಂದು ಸ್ಥಿತಿಗೆ ಅನರ್ಹರನ್ನು ಅಯೋಗ್ಯರನ್ನು ಜನಪ್ರತಿನಿಧಿಗಳಾಗಿ ಆರಿಸಿರುವ ನಾವೇ ಕಾರಣ ಇರಬಹುದೆ ಎನ್ನುವ ಸಂಶಯವೂ ಜನರಿಗೆ ಬರುತ್ತಿಲ್ಲ. ನಾವು ಕಾಣುತ್ತಿರುವ ಯಾವುದೇ ಸಮಸ್ಯೆಗೆ ಅನ್ಯರೇ ಕಾರಣ, ನನ್ನಿಂದ ಯಾವ ತಪ್ಪೂ ಇಲ್ಲ ಎನ್ನುವ ಸ್ಥಿತಿಗೆ ಸಮಾಜ ಮುಟ್ಟಿದೆ. ಎಲ್ಲರೂ ಪ್ರವಾಹಕ್ಕೆ ಮುಳುಗುತ್ತಿರುವ ನಡುಗಡ್ಡೆಗಳಾಗಿದ್ದಾರೆ. ಆದರೆ ಅದು ಸಮಾಜದ ಒಟ್ಟು ಅರಿವಿಗೆ ಬರುತ್ತಿಲ್ಲ.

ಈ ಮಧ್ಯೆ, ಬಯಲುಸೀಮೆಯಲ್ಲಿ ದನಕರುಗಳು ಸಾಯುತ್ತಿವೆ. ತನ್ನನ್ನು ಸರಿಯಾಗಿ ಗೌರವಿಸದ ಹುಲುಮಾನವರ ಮೇಲೆ ಭಾಗೀರಥಿ ಈ ವರ್ಷ ಮುನಿದಿದ್ದಾಳೆ. ಮುಂದಿನ ವರ್ಷಕ್ಕೆ ರಾಗಿ-ಜೋಳ, ಬೇಳೆ-ಕಾಳು, ಅಡಿಗೆ ಎಣ್ಣೆಯ ಬೆಳೆ ಗಗನಕ್ಕೇರಲಿದೆ. ನೂರಾರು, ಸಾವಿರಾರು ಮೈಲುಗಳ ದೂರದಿಂದ ಬರುವ ಅಕ್ಕಿ ಮಾತ್ರ ಎಂದಿನಂತೆ ಯಥೇಚ್ಚವಾಗಿ–ಆದರೆ ಹೆಚ್ಚಿನ ಬೆಲೆಗೆ–ಸಿಗಲಿದೆ. ಬಾಟಲ್ ನೀರಿಗಿಂತ ಕಮ್ಮಿ ಬೆಲೆಯ ಹಾಲಿನ ಬೆಲೆಯೂ ಹೆಚ್ಚಲಿದೆ.  ಮುಂದಿನ ವರ್ಷ ಬಡವನ ಪಾಡು ಈ ವರ್ಷದ ದನಗಳ ಗೋಳಾಗಲಿದೆ. ಅಷ್ಟೊತ್ತಿಗೆ ರಾಜ್ಯದ ಜನತೆ ಈ ಎಲ್ಲಾ ವಿಷಯಗಳನ್ನು ಹೊರಗಿಟ್ಟು ಜಾತಿ-ಹಣದ ಆಧಾರದ ಮೇಲೆ ತಮ್ಮ ಪ್ರತಿನಿಧಿಗಳನ್ನು ಆರಿಸಿಕೊಂಡಿರುತ್ತಾರೆ ಮತ್ತು ಹೊಸ ಸರ್ಕಾರ ಬಂದಿರುತ್ತದೆ. ಹೊಸ ವೈದ್ಯ  ಹಳೆಯ ಚಿಕಿತ್ಸೆ ಮುಂದುವರೆಸುತ್ತಾನೆ.

ನಿಸರ್ಗ ಮುನಿಯುವವರೆಗೂ ಇದು ಮುಂದುವರೆಯುತ್ತದೆ. ಆದರೆ, ಸಮುದಾಯವಾಗಿ ನಾವು ಏನಾದೆವು?

2 thoughts on “ಬಯಲುಸೀಮೆಯ ಬರಡಲ್ಲಿ ಭಾಗೀರಥಿ…

  1. Naveen H

    ರವಿಕೃಷ್ಣ ರೆಡ್ಡಿಯವರ ಆಶಯ ಶ್ಲಾಘನೀಯ ಆದರೆ ಅದರ ಅನುಷ್ಟಾನ ತುಂಬಾ ಕಷ್ಟ ಹಾಗೂ ಅಪಾಯಕಾರಿ!
    ನೂರಾರು ಕಿಮೀ ದಿಂದ ಬರುವ ನೀರನ್ನು ಹೇಗೆ ಬಳಸಬೇಕೆಂದು ಸರ್ಕಾರವು ತಿಳಿಸುವದಿಲ್ಲವೋ ಹಾಗೆ ತಿಳಿದುಕೊಳ್ಳಬೇಕೆಂಬ ಕಾಳಜಿಯು ನಮ್ಮ ರೈತರಲ್ಲಿ ಇಲ್ಲ.
    ಎಲ್ಲವನ್ನೂ ಸರ್ಕಾರವೇ ಮಾಡಲು ಆಗುವದಿಲ್ಲ. ಎರಡು ಕೈ ತಟ್ಟಿದಾಗ ಮಾತ್ರ ಚಪ್ಪಾಳೆ ಶಬ್ದ ಆಗಲು ಸಾಧ್ಯ. ಒಂದು ಉದಾಹರಣೆಯನ್ನು ತೆಗೆದುಕೊಳ್ಳುವದಾದರೆ ಪ್ರತಿ ವರ್ಷ ಸರ್ಕಾರ ಉತ್ತರಕರ್ನಾಟಕದ ಆಲಮತ್ತಿ ಆನೇಕಟ್ಟಿನ ಭಾಗದ ರೈತರಿಗೆ ಪತ್ರಿಕೆಯ ಜಾಹೀರಾತುಗಳ ಮೂಲಕ ಒಂದು ಮನವಿಯನ್ನು ಮಾದುತ್ತದೆ.ಎನೆನ್ದರೆ ರೈತರು ಹೆಕ್ಚು ನೀರನ್ನು ಬೇಡುವ ಕಬ್ಬು, ಭತ್ತದ ಬದಲಾಗಿ ಕಡಿಮೆ ನೀರನ್ನು ಬೇಡುವ ಬೆಳೆಗಳನ್ನು ಬೆಳೆಯಬೇಕೆಂದು. ಆದರೆ ಅದಕ್ಕೆ ಯಾರು ಕಿವಿಗೊಡುತ್ತಾರೆ? ಹಾಗೆಂದು ಸರ್ಕಾರ ಭತ್ತ ಕಬ್ಬು ಬೆಳೆದವರನ್ನು ಶಿಕ್ಷಿಸಲು, ಅವರ ಬೆಳೆಯನ್ನ್ನುನಾಶಗೊಳಿಸಲು ಸಾಧ್ಯವೇ?
    ಒಂದು ವೇಳೆ ಹಾಗೆ ಮಾಡಿದ್ದೆ ಆದರೆ ಅದರ ಪರಿಣಾಮವೇನು? ಪ್ರತಿಪಕ್ಷಗಳು, ಉಟ್ಟು ಒರಾಟಗಾರರು ಸುಮ್ಮನೇ ಬಿಡುತ್ತಾರರೇ?
    ಸಾವಿರಾರು ಕೋಟಿ ಕೈ ಚೆಲ್ಲಿ ಕಟ್ಟಿದ ಆನೇಕಟ್ಟಿಗೆ ಬದಲಾಗಿ ಅತೀ ಸ್ವಲ್ಪ ಕಂದಾಯ ಕೊಡಿ ಅಂದಿದ್ದಕ್ಕೆ ನರಗುಂದ್ ಬಂಡಾಯ ವಾಗಿ ಗೋಲಿಬಾರ್ ಆಗಬೇಕಾಯ್ತು. ಅದರ ಪರಿಣಾಮವನ್ನು ಇಂದಿಗೂ ಕಾಂಗ್ರೆಸ್ ಅನುಭವಿಸುತ್ತಿದೆ. ನರಗುಂದ್ ಬಂಡಾಯಕ್ಕೆ ಇನ್ನೂ ಹಲವಾರು ಕಾರಣಗಳಿರಬಹುದು. ಆದರೆ ಪ್ರತಿಫಲವಿಲ್ಲದೇ ಬಿಟ್ಟಿಯಾಗಿ ನೀರು ಪಡೆಯುವಾದನ್ನಂತೂ ರೈತರೆ ಕಲಿತುಕೊಂಡರು. ರೈತರು ಎಷ್ಟು ಮುಗ್ದರೊ ಅಷ್ಟೇ “ಬುಧಿವಂತರು” ಕೂಡ. ಬೆಳೆಸಾಳ ಪಡೆದು ಮದುವೆ ಮಾಡುತ್ತಾರೆ. ನಂತರ ನಮ್ಮ ಘನ ಸರ್ಕಾರ ರೈತಾರ ಬೆಳೆ ಸಾಲ ಮನ್ನಾ ಮಾಡತ್ತೆ!! ಹೀಗಾಗಿ ಇದಕ್ಕೆ ಪರಿಹಾರವೇ ಇಲ್ಲವೇನೋ!!

    Reply
  2. Ramakrishna M

    ಬಹಳ ಒಳ್ಳೆಯ ಲೇಖನ.
    “ನಿಸರ್ಗ ಮುನಿಯುವವರೆಗೂ ಇದು ಮುಂದುವರೆಯುತ್ತದೆ. ಆದರೆ, ಸಮುದಾಯವಾಗಿ ನಾವು ಏನಾದೆವು? ” – ಈ ಪ್ರಶ್ನೆಗೆ ಉತ್ತರ ಯೋಚಿಸಿದರೆ ಬಹಳ ನಿರಾಶೆ ಮೂಡುತ್ತದೆ.

    -ರಾಮಕೃಷ್ಣ M.

    Reply

Leave a Reply

Your email address will not be published. Required fields are marked *