Daily Archives: September 28, 2012

ಸಿದ್ಧಾಂತ ಮತ್ತು ವ್ಯಕ್ತಿ ನಡುವೆ ಬಿಜೆಪಿ ತೊಳಲಾಟ


-ಚಿದಂಬರ ಬೈಕಂಪಾಡಿ


ಇದು ಎರಡು ಅತ್ಯಂತ ಮುಖ್ಯ ವಿಷಯಗಳ ನಡುವಿನ ಆಯ್ಕೆ, ಸಿದ್ಧಾಂತ ಮತ್ತು ವ್ಯಕ್ತಿ. ಸಿದ್ಧಾಂತ ಅನಿವಾರ್ಯವೋ, ವ್ಯಕ್ತಿ ಅನಿವಾರ್ಯವೋ? ಸಿದ್ಧಾಂತವನ್ನು ರೂಪಿಸುವವನು ವ್ಯಕ್ತಿ. ಸಿದ್ಧಾಂತವನ್ನು ಅನುಷ್ಠಾನ ಮಾಡುವವನು ವ್ಯಕ್ತಿ. ಇವೆರಡರಲ್ಲಿ ಯಾವುದು ಮುಖ್ಯ? ಎರಡೂ ಮುಖ್ಯ ಎನ್ನುವ ಉತ್ತರ ಸಹಜವಾದರೂ ಆಯ್ಕೆ ಮಾಡಬೇಕಾಗಿರುವುದು ಒಂದನ್ನು ಮಾತ್ರ.

ನಿಜಕ್ಕೂ ಇಂಥ ಸಂದರ್ಭದಲ್ಲಿ ಆಯ್ಕೆ ಅಷ್ಟು ಸುಲಭವಲ್ಲ, ಇದೇ ಸ್ಥಿತಿ ಈಗ ಬಿಜೆಪಿಗೆ. ಸೂರಜ್‌ಕುಂಡ್‌ನಲ್ಲಿ ನಡೆಯುತ್ತಿರುವ ಬಿಜೆಪಿ ಕಾರ್ಯಕಾರಿಣಿಯಲ್ಲಿ ಕೂಡಾ ಈ ವಿಚಾರ ಅತ್ಯಂತ ಗಹನವಾಗಿ ಚರ್ಚೆಯಾಗುವ ಸಾಧ್ಯತೆಗಳು ನಿಚ್ಚಳವಾಗಿವೆ. ರಾಷ್ಟ್ರಮಟ್ಟದಲ್ಲಿ ಮತ್ತು ರಾಜ್ಯಮಟ್ಟದಲ್ಲಿ ಕೂಡಾ ಬಿಜೆಪಿಯ ಪಾಲಿಗೆ ಸಿದ್ಧಾಂತ ಮತ್ತು ವ್ಯಕ್ತಿ ನಡುವೆ ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು ಎನ್ನುವುದು ಕಗ್ಗಂಟಾಗಿದೆ. ವಾಸ್ತವ ಸ್ಥಿತಿಯ ಹಿನ್ನೆಲೆಯಲ್ಲಿ ಬಿಜೆಪಿಯ ಇತಿಹಾಸವನ್ನು ಅವಲೋಕಿಸಿದರೆ ಇನ್ನೂ ಹೆಚ್ಚು ಸೂಕ್ಷ್ಮವಾದ ಸಂಗತಿಗಳು ಅನಾವರಣಗೊಳ್ಳುತ್ತವೆ.

ಸಂಘಪರಿವಾರ ಮತ್ತು ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳು, ಹೀಗೆಂದು ವ್ಯಾಖ್ಯಾನಿಸಲಾಗುತ್ತದೆ. ಇದು ಅರ್ಧ ಸತ್ಯ ಈಗ. ಬಿಜೆಪಿ ಅಸ್ತಿತ್ವಕ್ಕೆ ಬರುವ ಮೊದಲು ಜನಸಂಘವನ್ನು ನೆನಪಿಸಿಕೊಂಡರೆ ಅದು ನಿಜಕ್ಕೂ ಸಿದ್ಧಾಂತವನ್ನು ಮೈಗೂಡಿಸಿಕೊಂಡು ಯಾವ ಕಾಲಕ್ಕೂ ಪ್ರಸ್ತುತವಾಗುವ ತನ್ನದೇ ವ್ಯಾಪ್ತಿ ಮತ್ತು ಉದ್ದೇಶಗಳನ್ನು ಇಟ್ಟುಕೊಂಡು ಕಾರ್ಯಾಚರಿಸುತ್ತಿದ್ದ ಸಂಘಟನೆ. ಅದಕ್ಕೆ ರಾಜಕೀಯವಾದ ಮಹತ್ವಕಾಂಕ್ಷೆ ಅಂದು ಇರಲಿಲ್ಲ, ಬದಲಾಗಿ ಸಿದ್ಧಾಂತವನ್ನು ಪ್ರತಿಪಾದಿಸುವುದು ಮೂಲ ಆಶಯವಾಗಿತ್ತು. ಚುನಾವಣೆಗೆ ಸ್ಪರ್ಧಿಸುತ್ತಿದ್ದರೂ ಗೆಲುವನ್ನು ನಿರೀಕ್ಷೆ ಮಾಡುತ್ತಿರಲಿಲ್ಲ ಬದಲಾಗಿ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವುದೇ ಆದ್ಯತೆಯಾಗಿತ್ತು.

ಆದರೆ ರಾಜಕೀಯ ಆಶೋತ್ತರಗಳು ಬೆಳೆದಂತೆಲ್ಲಾ ಸಂಘಪರಿವಾರವೂ ತನ್ನ ಅಜೆಂಡಾವನ್ನು ಅನುಷ್ಠಾನಕ್ಕೆ ತರಲು ಮನಸ್ಸು ಮಾಡಿತು. ಸಿದ್ಧಾಂತವನ್ನು ಇಟ್ಟುಕೊಂಡೇ ರಾಜಕೀಯ ಶಕ್ತಿಯನ್ನು ಉದ್ಧೀಪನಗೊಳಿಸುವುದು ಅದರ ಆಶಯವಾಗಿ ಗೋಚರಿಸಿತು. ಇದಕ್ಕೆ ಕ್ರಿಯಾತ್ಮಕ ಮತ್ತು ಹೆಚ್ಚು ವ್ಯವಸ್ಥಿತವಾದ ಚೌಕಟ್ಟು ಹಾಕಿಕೊಳ್ಳಲು ಅದಕ್ಕೆ ಸಾಧ್ಯವಾಗಿರಲಿಲ್ಲ ದೇಶದಲ್ಲಿ ಇಂದಿರಾಗಾಂಧಿ ತುರ್ತು ಪರಿಸ್ಥಿತಿ ಜಾರಿಗೊಳಿಸುವ ತನಕ. ತನ್ನ ಸರ್ವಾಧಿಕಾರಕ್ಕೆ ಧಕ್ಕೆಯಾಗುತ್ತಿದೆ ಎನ್ನುವ ಆತಂಕ ಕಾಡಿದಾಗ ಇಂದಿರಾಗಾಂಧಿ ಮನಸ್ಸಿನಲ್ಲಿ ಮೂಡಿದ ತುರ್ತು ಪರಿಸ್ಥಿತಿ ಘೋಷಣೆ ಸಂಘಪರಿವಾರ ಬಯಸುತ್ತಿದ್ದ ಮತ್ತು ರಾಜಕೀಯ ಶಕ್ತಿಯಾಗಿ ಬೆಳೆಯಲು ಬೇಕಾದ ತನ್ನದೇ ಆದ ಚೌಕಟ್ಟು ಹಾಕಿಕೊಳ್ಳಲು ನೆರವಾಯಿತು ಎನ್ನುವುದನ್ನು ಮರೆಯಬಾರದು. ಸಂಘಪರಿವಾರದ ಟಿಸಿಲಾಗಿ ಬಿಜೆಪಿ ಚಿಗುರಲು ಈ ದೇಶದಲ್ಲಿ ಜನರು ಕಾರಣರು ಎನ್ನುವುದು ವಾಸ್ತವ ಸತ್ಯವಾದರೂ ಇಂದಿರಾಗಾಂಧಿ ತುರ್ತು ಪರಿಸ್ಥಿತಿಯನ್ನು ಘೋಷಣೆ ಮಾಡಿದ್ದೇ ಇದು ನೀರು, ಗೊಬ್ಬರ ದೊರಕಿ ಪೊಗದಸ್ತಾಗಿ ಬೆಳೆಯಲು ಕಾರಣ ಎಂದರೆ ಅತಿಶಯೋಕ್ತಿಯಲ್ಲ. ಈ ಕಾರಣಕ್ಕಾಗಿ ಬಿಜೆಪಿ ತನ್ನ ಹುಟ್ಟುಹಬ್ಬದಂದು ಇಂದಿರಾ ಅವರ ಸ್ಮರಣೆಯನ್ನು ಮಾಡಿದರೆ ತಪ್ಪಿಲ್ಲ.

ಬಿಜೆಪಿಯ ಸಿದ್ಧಾಂತ ಸಂಘಪರಿವಾರದ ಸಿದ್ಧಾಂತದ ಪಡಿಯಚ್ಚಲ್ಲ ಅಥವಾ ಹೌದು ಎನ್ನುವುದು ಚರ್ಚೆಯ ಮತ್ತೊಂದು ಮುಖ. ಆದರೆ ಸಂಘಪರಿವಾರದ ಸಿದ್ಧಾಂತದ ತಳಹದಿಯಮೇಲೆಯೇ ಬಿಜೆಪಿ ಬೆಳೆದಿದೆ ಎನ್ನುವುದನ್ನು ಯಾರೂ ನಿರಾಕರಿಸುವಂತಿಲ್ಲ. ಸಂಘಪರಿವಾರಕ್ಕೆ ತನ್ನ ಸಿದ್ಧಾಂತವನ್ನು ಗಟ್ಟಿಗೊಳಿಸುತ್ತಾ ರಾಜಕೀಯ ಶಕ್ತಿಯಾಗಿ ಬೆಳೆಯಬೇಕೆನ್ನುವುದು ಆಶಯ. ಆದರೆ ಬಿಜೆಪಿ ಸಂಘಪರಿವಾರದ ಆಶಯವನ್ನು ಪೂರ್ಣವಾಗಿ ಅನುಷ್ಠಾನಗೊಳಿಸಲಾಗದೆ, ರಾಜಕೀಯ ಶಕ್ತಿಯಾಗಿ ಬೆಳೆಯಲು ತನ್ನದೇ ಆದ ಅಜೆಂಡಾವನ್ನು ಅನುಷ್ಠಾನಕ್ಕೆ ತರಲಾಗದೆ ತೊಳಲಾಡಿರುವುದು ಕೂಡಾ ಇತಿಹಾಸದ ಒಂದು ಭಾಗ.

ರಾಮಜನ್ಮಭೂಮಿ ವಿವಾದ ಅಥವಾ ಶ್ರೀರಾಮ ಮಂದಿರ ನಿರ್ಮಾಣ ಬಿಜೆಪಿಯ ಮೊದಲ ಆದ್ಯತೆ ಎಂದು ಒಪ್ಪಿಕೊಳ್ಳಲಾಗದು. ಒಂದು ವೇಳೆ ಇದೇ ಆಗಿದ್ದರೆ ಕೇಂದ್ರದಲ್ಲಿ ಅಧಿಕಾರವಿದ್ದಾಗ ಸಂಘಪರಿವಾರದ ಆಶಯವನ್ನು ಒಪ್ಪಿಕೊಂಡು ಅದನ್ನು ಕಾರ್ಯಗತಮಾಡುವಂಥ ದಿಟ್ಟತನವನ್ನು ತೋರಿಸುತ್ತಿತ್ತು, ಅದು ಸರಿಯೇ?, ತಪ್ಪೇ? ಎನ್ನುವುದು ಚರ್ಚೆಯ ಮತ್ತೊಂದು ಮಗ್ಗುಲು, ಇಲ್ಲಿ ಅದನ್ನು ಚರ್ಚಿಸುವುದು ಉದ್ದೇಶವಲ್ಲ. ಬಿಜೆಪಿಗೆ ಆಗಲೂ ಸಂಘಪರಿವಾರದ ಪರಿಧಿಯಲ್ಲೇ ಸಾಗುತ್ತಾ ತನ್ನದೇ ಆದ ಕ್ಯಾನ್ವಾಸ್ ರೂಪಿಸಿಕೊಳ್ಳುವುದು ಮುಖ್ಯವಾಗಿತ್ತು. ಆದ್ದರಿಂದ ಯಾರೂ ಬಿಜೆಪಿ ಸಿದ್ಧಾಂತದಿಂದ ಅರ್ಥಾತ್ ಸಂಘಪರಿವಾರದ ಸಿದ್ಧಾಂತದಿಂದ ದೂರಾವಾಗಿದೆ ಎಂದು ಭಾವಿಸಬೇಕಾಗಿಲ್ಲ ಅಥವಾ ಅದನ್ನೇ ನೆಚ್ಚಿಕೊಂಡಿದೆ ಎಂದೂ ಭ್ರಮೆಗೊಳಗಾಗುವ ಅಗತ್ಯವಿಲ್ಲ. ಸಿದ್ಧಾಂತದೊಂದಿಗೆ ರಾಜಕೀಯ ಶಕ್ತಿಯಾಗಿ ಬೆಳೆಯುವ ಮಹತ್ವಾಕಾಂಕ್ಷೆ ಇದೆ.

ಬಿಜೆಪಿಯ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ, ನಿತಿನ್ ಗಡ್ಕರಿ, ಮುರಳಿಮನೋಹರ ಜೋಷಿ, ರಾಜನಾಥ್ ಸಿಂಘ್, ನರೇಂದ್ರಮೋದಿ, ಬಿ.ಎಸ್. ಯಡಿಯೂರಪ್ಪ ಅವರುಗಳೊಳಗೇ ಸಂಘಪರಿವಾರ ಮತ್ತು ಬಿಜೆಪಿ ಸಿದ್ಧಾಂತಗಳ ತಾಕಲಾಟವಿದೆ.

ಸಂಘಪರಿವಾರದ ಮನಸ್ಸುಗಳು ಅಡ್ವಾಣಿಯವರನ್ನು ಒಪ್ಪುವಂತೆ, ನರೇಂದ್ರ ಮೋದಿಯವರನ್ನು ಒಪ್ಪುವಂತೆ ನಿತಿನ್ ಗಡ್ಕರಿ ಅವರನ್ನು ಒಪ್ಪುವುದಿಲ್ಲ. ಹಾಗೆಯೇ ಬಿಜೆಪಿ ಮನಸ್ಸುಗಳು ಕೂಡಾ ಈ ನಾಯಕರುಗಳ ನಡುವೆ ವ್ಯತ್ಯಾಸಗಳನ್ನು ಗುರುತಿಸುತ್ತವೆ. ಅಟಲ್ ಬಿಹಾರಿ ವಾಜಪೇಯಿ ರಾಜಕೀಯ ಮುತ್ಸದ್ದಿಯಾದ ಕಾರಣ ಸಂಘಪರಿವಾರ ಮತ್ತು ಬಿಜೆಪಿಯ ನಡುವೆ ಸಮತೋಲನ ಕಾಪಾಡಿಕೊಂಡು ಯಶಸ್ವಿ ನಾಯಕರೆಂದು ಈಗಲೂ ಗೌರವಪಡೆಯುತ್ತಿದ್ದಾರೆ.

ಈ ಹಿನ್ನೆಲೆಯಲ್ಲೇ ಸಿದ್ಧಾಂತ ಮತ್ತು ವ್ಯಕ್ತಿ ಈ ಎರಡರ ನಡುವೆ ಆಯ್ಕೆ ಬಹುಕಷ್ಟ ಎನ್ನುವುದು. ನರೇಂದ್ರ ಮೋದಿಯವರ ಅಭಿವೃದ್ಧಿಯ ಹೆಜ್ಜೆಗಳನ್ನು ಗುಣಗಾನಮಾಡುವವರು ಅವರ ಸಿದ್ಧಾಂತವನ್ನು ಇಷ್ಟಪಡುವುದಿಲ್ಲ. ನಿತಿನ್ ಗಡ್ಕರಿಯನ್ನು ಸಂಘಪರಿವಾರ ಮೆಚ್ಚಿಕೊಂಡರೂ ಅದರ ಭಾಗವೇ ಆಗಿರುವ ಅಡ್ವಾಣಿಯವರು ಯಾಕೆ ಮೆಚ್ಚುತ್ತಿಲ್ಲ?, ಮೋದಿಯನ್ನು ಯಾಕೆ ಬೆಂಬಲಿಸುತ್ತಿಲ್ಲ?, ಇಲ್ಲೇ ತಾಕಲಾಟವಿರುವುದು.

ಸಂಘಪರಿವಾರದ ಮೂಲಕವೇ ಬೆಳೆದು ಬಂದಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಈಗಿನ ನಡೆಗಳಲ್ಲಿ ಯಾವ ಸಿದ್ಧಾಂತವನ್ನು ಗುರುತಿಸಲು ಸಾಧ್ಯ?. ಸಂಘಪರಿವಾರದ ಸಿದ್ಧಾಂತವನ್ನು ಮುಂದಿಟ್ಟುಕೊಂಡು ಅವರು ರಾಜಕೀಯ ಮಾಡುತ್ತಿದ್ದಾರೆಯೇ ಅಥವಾ ಬಿಜೆಪಿಯ ಸಿದ್ಧಾಂತವನ್ನು ಪ್ರತಿಪಾದಿಸುತ್ತಾ ಮುನ್ನಡೆಯುತ್ತಿದ್ದಾರೆಯೇ?

ಕರ್ನಾಟಕದಲ್ಲಿ ಅಧಿಕಾರ ಸೂತ್ರ ಹಿಡಿದಿರುವ ಬಿಜೆಪಿಯಲ್ಲಿ ಸಂಘಪರಿವಾರದ ಸಿದ್ಧಾಂತವನ್ನು ಕಾಣುತ್ತಿದ್ದೀರಾ?, ಅಥವಾ ರಾಜಕೀಯ ಪಕ್ಷವಾಗಿ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯಬೇಕೆಂಬ ಹಂಬಲವನ್ನು ಗುರುತಿಸುತ್ತಿದ್ದೀರಾ? ’ಬಿಜೆಪಿಗೆ ಬರುವವರು ಸಿದ್ಧಾಂತವನ್ನು ಜೀರ್ಣಿಸಿಕೊಳ್ಳಲು ಮೊದಲು ಕಲಿಯಿರಿ,’ ಹೀಗೆಂದು ಬಿಜೆಪಿ ಹಿರಿತಲೆಗಳೇ ರಾಮಕೃಷ್ಣ ಹೆಗಡೆ ಕಟ್ಟಾಶಿಷ್ಯ ಡಾ.ಜೀವರಾಜ್ ಆಳ್ವರನ್ನು ಕುರಿತು ಹೇಳಿದ್ದ ಹಳೆ ಮಾತು ಎನ್ನುವಂತಿಲ್ಲ. ಯಾಕೆಂದರೆ ಆಪರೇಷನ್ ಕಮಲದ ಮೂಲಕ ಬಂದವರಿಗೆ ಇತ್ತೀಚೆಗೆ ಬಿಜೆಪಿ ನಾಯಕರು ಹೇಳುತ್ತಿರುವ ನೀತಿ ಪಾಠ.

ಹಾಗಾದರೆ ಬಿಜೆಪಿಯಿಂದ ಹೊರಗೆ ಹೋಗುವವರು ತಮ್ಮ ಸಿದ್ಧಾಂತವನ್ನು ಬಿಟ್ಟುಹೋಗಲೇ ಬೇಕಲ್ಲವೇ? ಯಾಕೆಂದರೆ ಅವರು ನಂಬಿಕೊಂಡು ಬಂದ ಸಿದ್ಧಾಂತ ಅವರನ್ನು ಅಧಿಕಾರದಿಂದ ವಂಚಿಸಿದೆ ಎನ್ನುವ ಕಾರಣಕ್ಕಾಗಿಯಲ್ಲವೇ ಪಕ್ಷ ತೊರೆಯುತ್ತಿರುವುದು.

ಆದ್ದರಿಂದಲೇ ಕರ್ನಾಟಕದಲ್ಲಿ ಯಡಿಯೂರಪ್ಪ ಮತ್ತು ಬಿಜೆಪಿ ಸಿದ್ಧಾಂತ ಇವೆರಡರಲ್ಲಿ ಒಂದನ್ನು ಆಯ್ಕೆಮಾಡಿಕೊಳ್ಳುವುದು ಅದೆಷ್ಟು ಕಠಿಣವೆಂದು. ಬಿಜೆಪಿ ಹೈಕಮಾಂಡ್ ಇದೇ ಸಂಧಿಗ್ಧತೆಯಲ್ಲಿದೆ ಅನ್ನಿಸುತ್ತದೆ. ಇದನ್ನು ಯಡಿಯೂರಪ್ಪ ಅವರೂ ಚೆನ್ನಾಗಿ ಅರಿತುಕೊಂಡಿರುವುದರಿಂದಲೇ ಪಟ್ಟುಹಿಡಿದಿದ್ದಾರೆ. ಸಿದ್ಧಾಂತವನ್ನು ಪಾಲಿಸಲೇಬೇಕು, ಶಿಸ್ತನ್ನು ಬಿಡುವಂತಿಲ್ಲ ಎಂದಾರೆ ಯಡಿಯೂರಪ್ಪ ಅವರನ್ನು ಹೈಕಮಾಂಡ್ ಸಹಿಸುವಂತಿಲ್ಲ. ಸಿದ್ಧಾಂತಕ್ಕಿಂತಲೂ ವ್ಯಕ್ತಿ ಮತ್ತು ಅಧಿಕಾರ ಮುಖ್ಯ ಎನ್ನುವುದಾದರೆ ಯಡಿಯೂರಪ್ಪ ಅವರಿಗೆ ಹೈಕಮಾಂಡ್ ಮಣೆ ಹಾಕಲೇಬೇಕು. ಸಿದ್ಧಾಂಕ್ಕಿಂತ ತನಗೆ ಅಧಿಕಾರವೇ ಮುಖ್ಯ, ತಾನು ಆ ಪಕ್ಷಕ್ಕೆ ಅನಿವಾರ್ಯವೆಂದು ಯಡಿಯೂರಪ್ಪ ಭಾವಿಸಿದರೆ? ಈ ಹಿನ್ನೆಲೆಯಲ್ಲಿ ಸೂರಜ್‌ಕುಂಡ್ ಸಿದ್ಧಾಂತ ಮತ್ತು ವ್ಯಕ್ತಿ ಇವೆರಡರಲ್ಲಿ ಯಾವುದನ್ನು ಆಯ್ಕೆಮಾಡಿಕೊಳ್ಳಬಹುದು ಎನ್ನುವುದು ಈಗಿನ ಕುತೂಹಲ.

ಕೃತಕ ಸೆಕ್ಯುಲರ್‌ತನ ಮತ್ತು ಮಾನವೀಯ ಸಾಂಸ್ಕೃತಿಕ ಒಡಲಿನ ಕಣ್ಮರೆ


-ಬಿ. ಶ್ರೀಪಾದ್ ಭಟ್


“ಆತ್ಮವುಳ್ಳ ಆಡಳಿತ ಮಾತ್ರ ಅಲೆ-ಅಲೆಯಾಗಿ ಬರುತ್ತಿದ್ದ ಓಲಗದ ನೋವಿನ ಸದ್ದು ಕೇಳಬಹುದು. ಭ್ರಷ್ಟನಾದವನು ಆ ಸದ್ದನ್ನು ದೂರ ಇಡುತ್ತಾನೆ. ತನ್ನ ಕಿವಿಗಳನ್ನು ಮುಚ್ಚಿಕೊಂಡು ನೆಮ್ಮದಿಯಾಗಿರುತ್ತಾನೆ.” -ಪಿ.ಲಂಕೇಶ್ (ಟೀಕೆ ಟಿಪ್ಪಣಿ ಸಂಪುಟ 1)

ಅಪಾರ ಭರವಸೆಗಳೊಂದಿಗೆ ಎರಡನೇ ಅವಧಿಗೆ ಚುನಾಯಿತಗೊಂಡ ಯುಪಿಎ ಸರ್ಕಾರ ಇಂದು ತನ್ನ ಆತ್ಮಹತ್ಯಾತ್ಮಕ ಮತ್ತು ಬೌದ್ಧಿಕ ದಿವಾಳಿತನದ ಆಡಳಿತದಿಂದಾಗಿ ಇಂಡಿಯಾ ದೇಶವನ್ನು ಅತ್ಯಂತ ಕಡಿದಾದ ಕವಲು ದಾರಿಗೆ ತಂದು ನಿಲ್ಲಿಸಿದೆ. ಈ ಕಡಿದಾದ ಕವಲುದಾರಿಯಲ್ಲಿ ಯುಪಿಎ ನಾಯಕ ಮನಮೋಹನ್ ಸಿಂಗ್ ಮಾದರಿಯ ಆರ್ಥಿಕ ಪ್ರಗತಿ ಪ್ರಪಾತದೆಡೆಗೆ ಜಾರುತ್ತಿದೆ. ಕಳೆದ 20 ವರ್ಷಗಳಿಂದ ಈ ನವ ಕಲೋನಿಯಲ್ ವ್ಯವಸ್ಥೆಯ ಖಾಂಡವದಹನದಿಂದ ಹೆಚ್ಚೂ ಕಡಿಮೆ ಬಳಲಿ ಬೆಂದು ಹೋಗಿರುವ ಕೆಳವರ್ಗ ಮತ್ತು ಬಡಜನತೆಯ ಜೀವನ ಶೈಲಿ ಈಗ ಒಪ್ಪೊತ್ತಿನ ಊಟ ಹೋಗಲಿ ಘನತೆ ಮತ್ತು ವೈಯುಕ್ತಿಕ ಗೌರವಗಳೂ ಕೈಗೆಟುಕದಷ್ಟೂ ದುರಂತದಲ್ಲಿವೆ. ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಕೈಗೆ ಮುಂದಿನ ಎರಡು ವರ್ಷಗಳೂ ಸುರಕ್ಷಿತವೇ ಎಂಬಂತಹ ಅವಮಾನದ ಪ್ರಶ್ನೆಗಳು ಎದುರಾಗುತ್ತಿವೆ.

2009ರಲ್ಲಿ ‘ಸಿಂಗ್ ಈಸ್ ಕಿಂಗ್’ ಎಂದು ಅಭಿಮಾನದಿಂದ ಬೀಗಿದ ಜನತೆ ಮತ್ತು ಮಾಧ್ಯಮಗಳು ಇಂದು ಕೇವಲ ಮೂರು ವರ್ಷಗಳ ನಂತರ ಅನೇಕ ಅನುಭವೀ ಮಂತ್ರಿಗಳನ್ನು ಒಳಗೊಂಡ ಈ ಯುಪಿಎ ಸರ್ಕಾರ ಇಷ್ಟರ ಮಟ್ಟಿಗೆ ಅಭಧ್ರತೆಯಿಂದ, ಕೀಳರಿಮೆಯಿಂದ, ದಿಕ್ಕುತಪ್ಪಿದ ಮಕ್ಕಳಂತೆ ಆಡಳಿತ ನಡೆಸುತ್ತದೆಯೇ ಎಂದು ಬೆಚ್ಚಿಬೀಳುತ್ತಿವೆ. ಅಲ್ಲದೆ ಈ ಸರ್ಕಾರ ಅಪಾರ ಭ್ರಷ್ಟಚಾರಕ್ಕೆ ತುತ್ತಾಗುತ್ತಿರುವ ಅಪಾದನೆಗಳು ದಿನನಿತ್ಯದ ಉದಾಹರಣೆಗಳಾಗಿರುವುದು ಮತ್ತು  ಭ್ರಷ್ಟಾಚಾರದ ಅಪಾದನೆಗಳಿಗೆ  ಕೇಂದ್ರ ಮಂತ್ರಿಮಂಡಲ ತೋರುತ್ತಿರುವ ಅಪಾಯಕಾರಿ ನಿರ್ಲಕ್ಷಗಳು ಇವರನ್ನು ಅಧಿಕಾರದಿಂದ ಕಿತ್ತೊಗೆಯಲೇಬೇಕೆಂದು ವಿರೋಧ ಪಕ್ಷಗಳಿಗೆ ಮನದಟ್ಟಾಗುವುದಿರಲಿ ಜನಸಮುದಾಯಕ್ಕೇ ಈ ಭಾವನೆ ಮೊಳೆಯುತ್ತಿದೆ. ಆಡಳಿತ ನಿರ್ಧಾರಕ್ಕನುಗುಣವಾಗಿ ಈ ವಿದೇಶಿ ಬಂಡವಾಳ ಹೂಡಿಕೆಯ ಅನುಮೋದನೆ ಪ್ರಕಟಗೊಳ್ಳಬೇಕಾದಂತಹ ಸಂದರ್ಭದಲ್ಲಿ ಇಂದು ಯುಪಿಎ ಸರ್ಕಾರ ಪಲಾಯನವಾದಿಯಂತೆ ಇದನ್ನು ಗುರಾಣಿಯಾಗಿ ಬಳಸಿಕೊಳ್ಳುತ್ತಿರುವುದು ಸಮಕಾಲೀನ ರಾಜಕಾರಣದ ಒಂದು ದೊಡ್ಡ ಜೋಕ್! ಇದಕ್ಕಿಂತಲೂ ಮತ್ತೊಂದು ಮಹಾನ್ ಜೋಕ್ ಎಂದರೆ ಈ ವಿದೇಶಿ ಬಂಡವಾಳ ವಿರೋಧಿಸುವ ಭರದಲ್ಲಿ ಈ ಬಿಜೆಪಿ ಮತ್ತು ಕಮ್ಯುನಿಷ್ಟರು ಒಂದೇ ವೇದಿಕೆಯನ್ನು ಹಂಚಿಕೊಂಡು ನಕಲಿಶ್ಯಾಮರಂತೆ ಸೋತುಹೋದ ಕಳಾಹೀನ ನಾಯಕರಾಗಿ ಕಂಗೊಳಿಸುತ್ತಿದ್ದರು. ಇದಕ್ಕೆ ಸಮಜಾಯಿಷಿ ಬೇರೆ!

ಆದರೆ 2001ರಲ್ಲಿ ಬೆಜೆಪಿಯು ತನ್ನ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಮೊಟ್ಟ ಮೊದಲ ಬಾರಿಗೆ ಅನೇಕ ವಿರೋಧದ ನಡುವೆಯೂ ಜೀವ ವಿಮಾ ವಲಯದಲ್ಲಿ ವಿದೇಶಿ ಬಂಡವಾಳ ಹೂಡಿಕೆಯನ್ನು ಜಾರಿಗೊಳಿಸಿದರು! ಸರ್ಕಾರಿ ಉದ್ಯಮಗಳಲ್ಲಿ ವಿದೇಶಿ ಬಂಡವಾಳ ಹೂಡಿಕೆಗೆ ದಾರಿ ಮಾಡಿಕೊಡಲು ಅನೇಕ ಸರ್ಕಾರಿ ಉದ್ದಿಮೆಗಳಲ್ಲಿ ಬಂಡವಾಳ ಹಿಂತೆಗೆತವನ್ನು ಅರುಣ್ ಶೌರಿಯ ಮುಂದಾಳುತನದಲ್ಲಿ ಅತ್ಯಂತ ವೀರಾವೇಶದಿಂದ ಜಾರಿಗೊಳಿಸಿದ್ದು ಇದೇ ಬಿಜೆಪಿ ಸರ್ಕಾರ. ಇಂತಹ ನಯವಂಚಕರು ಬೇರೆಲ್ಲಾದರೂ ದೊರೆತಾರೆಯೇ? ಇದೇ ಬಿಜೆಪಿಯ ಅಭಿವೃದ್ಧಿಯ ಮುಖವಾಡವಾದ ಫ್ಯಾಸಿಸ್ಟ್ ಮುಖ್ಯಮಂತ್ರಿ ನರೇಂದ್ರ ಮೋದಿ ತನ್ನ ಸಾಮ್ರಾಜ್ಯ ಗುಜರಾತ್‌ನಲ್ಲಿ ಇದೇ ವಿದೇಶಿ ಬಂಡವಾಳ ಹೂಡಿಕೆಯ ಹರಿಕಾರನಾಗಿ ಜಗತ್ಪಸಿದ್ಧಿ ಗಳಿಸಿರುವುದು ಈ ಕಮ್ಯುನಿಷ್ಟರಿಗೆ ಮನದಟ್ಟಾಗದಷ್ಟು ಗತಿಗೆಟ್ಟರೆ?  ಮೋದಿಯು ತನ್ನ ವೈಬ್ರೆಂಟ್ ಗುಜರಾತ್‌ಗಾಗಿ ಈತ ಕೊಚ್ಚಿಕೊಳ್ಳತ್ತಿರುವುದು 2003ರಿಂದ 2011ರವರೆಗೆ ತಾನು 800 ಬಿಲಿಯನ್ ಡಾಲರ್‍ಸ್‌‌ನಷ್ಟು ಬಂಡವಾಳವನ್ನು (ಇದರಲ್ಲಿ ವಿದೇಶಿ ಹೂಡಿಕೆದಾರರು ಸೇರಿದ್ದಾರೆ) ಹೂಡಲು ಒಡಂಬಡಿಕೆಯಾಗಿದೆ ಎಂದು. ಆದರೆ ಆರ್‌ಬಿಐನ ಮಾಹಿತಿ ಪ್ರಕಾರ ಮೇಲಿನ ಅವಧಿಯಲ್ಲಿ ಕೇವಲ 5 ಬಿಲಿಯನ್ ಬಂಡವಾಳ ಹೂಡಿಕೆಯ ಒಡಂಬಡಿಕೆಯಾಗಿದೆ. ಆರ್ಥಿಕ ಪ್ರಗತಿಯ ಪರಿಶೀಲನೆಗಾಗಿ ರಚಿತಗೊಂಡ ರಾಷ್ಟ್ರೀಯ ಕೌನ್ಸಿಲ್‌ನ ಅಧ್ಯಯನದ ಪ್ರಕಾರ ಇದೇ ನರೇಂದ್ರ ಮೋದಿಯ ಗುಜರಾತಿನಲ್ಲಿ ಮಕ್ಕಳ ಅಪೌಷ್ಟಿಕತೆಯ ಶೇಕಡವಾರು ಪ್ರಮಾಣ ಶೇಕಡ 45 ರಷ್ಟಿದೆ. ಇದರಲ್ಲಿ ಶೇಕಡಾ 66 ರಷ್ಟು 5 ವರ್ಷದೊಳಗಿನ  ಬಹುಸಂಖ್ಯಾತ ಮಕ್ಕಳು ಹಸಿವಿನಿಂದ ನರಳುತ್ತಿದ್ದಾರೆ. ಇಂತಹ ದೋಷಪೂರಿತ, ರಾಜ್ಯದ ಅಧಿಪತಿಯಾದ ನರೇಂದ್ರ ಮೋದಿಯನ್ನು ಮತ್ತು ಬಿಜೆಪಿ ಪಕ್ಷದ ದೇಶಪ್ರೇಮ ಕುರಿತಾದ ಬದ್ಧತೆಯನ್ನು ಪ್ರಶ್ನಿಸಬೇಕಾಗಿದ್ದ ಈ ಕಮ್ಯುನಿಷ್ಟರು ನಾಚಿಕೆಯಿಲ್ಲದೆ ಈ ಬಿಜೆಪಿಯೊಂದಿಗೆ ವೇದಿಕೆ ಹಂಚಿಕೊಂಡಿರುವುದು ಮೂರನೇ ದರ್ಜೆಯ ರಾಜಕಾರಣವಲ್ಲದೆ ಮತ್ತಿನ್ನೇನು?

ಆದರೆ ಕಡೆಗೆ ಇದೆಲ್ಲದರ ಹೊರತಾಗಿಯೂ ಈ ದುರಂತಕ್ಕೆ ಮೂಲಭೂತ ಕಾರಣ ಈ ದೇಶದ ಈಗಿನ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ರಾಜಕಾರಣಿ ಅಗಿಲ್ಲದೇ ಇರುವುದು, ಇದರ ಪರಿಣಾಮವಾಗಿ ರಾಜಕೀಯ ಅಧಿಕಾರವಿಲ್ಲದ ಈ ಪ್ರಧಾನ ಮಂತ್ರಿಯ ಕೈಗೆ ಮಂತ್ರಿಮಂಡಲದ ಎಲ್ಲಾ ಮಂತ್ರಿಗಳೂ ಈ ಅಧಿನಾಯಕನ ಹಿಡಿತಕ್ಕೆ ಸಿಲುಕದೇ ಇರುವುದು, ಇದರ ಪರಿಣಾಮವಾಗಿ ಅನಿಶ್ಚತತೆಯೆಂಬುದು ದಿನಿತ್ಯದ ಗೋಳಾಗಿರುವುದು, ಇದರ ಪರಿಣಾಮವಾಗಿ ಕುಸಿದುಬಿದ್ದ ಆಡಳಿತ ಯಂತ್ರ ಇವೆಲ್ಲವೂ ಈ ಅರಾಜಕತೆಗೆ ಮೂಲಭೂತ ಕಾರಣವಾದರೆ ಎರಡನೇ ಮುಖ್ಯ ಕಾರಣ ರಾಜಕಾರಣಿಯಲ್ಲದ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ. ಸಾರ್ವಜನಿಕ ಜೀವನದಲ್ಲಿ, ಸಕ್ರಿಯ ರಾಜಕಾರಣದಲ್ಲಿ ಪ್ರಸ್ತುತವಾಗಿರುವುದೆಂದರೆ ನಿರಂತರ ಸಂವಾದದಲ್ಲಿ, ಚರ್ಚೆಗಳಲ್ಲಿ ತೊಡಗಿಕೊಳ್ಳುವುದೇ ಜೀವಂತ ರಾಜಕೀಯದ ಮೊದಲ ಕುರುಹು ಎನ್ನುವ ಮೂಲಭೂತ ಪಾಠವನ್ನು ಕಾಲಕಸದಂತೆ ಕಂಡ ಸೋನಿಯಾ ಗಾಂಧಿಯವರು ಕೇವಲ ತಮ್ಮ ವೈಯುಕ್ತಿಕ ವರ್ಚಸ್ಸು, ತಮ್ಮ ಜಾತ್ಯಾತೀತ ನಡುವಳಿಕೆ ಮತ್ತು ತಮ್ಮ ಸಹಜವಾದ ಪ್ರಶ್ನಾತೀತ ಸೆಕ್ಯುಲರ್ ವ್ಯಕ್ತಿತ್ವಗಳನ್ನು ನೆಚ್ಚಿ ರಾಜಕೀಯ ಮಾಡಲು ಹೊರಟು ಇನ್ನಿಲ್ಲದಂತೆ ಮುಗ್ಗರಿಸುತ್ತಿರುವುದು ಪ್ರಜ್ಞಾವಂತ ನಾಗರಿಕರಿಗೆ ದಿಗ್ಭ್ರಮೆ ಮೂಡಿಸುತ್ತಿದೆ. ಕಡೆಗೆ ಶವದ ಪೆಟ್ಟಿಗೆಗೆ ಮೊಳೆ ಹೊಡೆದಂತೆ 84ರ ಸಿಖ್ ಹತ್ಯಾಕಾಂಡದ ಆರೋಪಿ, ಅತ್ಯಂತ ದುಷ್ಟ ರಾಜಕಾರಣಿ ಜಗದೀಶ್ ಟೈಟ್ಲರ್‌ನನ್ನು ಒರಿಸ್ಸಾ ರಾಜ್ಯಕ್ಕೆ ಕಳುಹಿಸಿ ಅಲ್ಲಿನ ಮುಖ್ಯಮಂತ್ರಿಯ ವಿರುದ್ಧ ಪ್ರತಿಭಟಿಸಲು ನಾಯಕತ್ವ ನೀಡಿದ್ದು ಈ ಸೋನಿಯಾ ಗಾಂಧಿಯವರ ಅತ್ಯಂತ ಅಪಕ್ವ ರಾಜಕೀಯತನವನ್ನು ಬಯಲಿಗೆಳೆಯುತ್ತದೆ. ತನ್ನ ಬ್ರಹ್ಮಾಂಡ ಭ್ರಷ್ಟತೆಯಿಂದ, ದುರಾಡಳಿತದಿಂದ ಈ ಬಿಜೆಪಿ ಹೆಚ್ಚು ಕಡಿಮೆ ಸೋಲುವ 2013ರ ಕರ್ನಾಟಕ ರಾಜ್ಯದ ಚುನಾವಣೆಯಲ್ಲಿ ಸಿದ್ಧರಾಮಯ್ಯ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಜಂಟಿ ನಾಯಕತ್ವ ವಹಿಸಿಕೊಟ್ಟು ಈ ಚುನಾವಣೆಯನ್ನು ಇವರಿಬ್ಬರ ನಾಯಕತ್ವದಲ್ಲಿ ಗೆಲ್ಲಲೇಬೇಕೆಂದು ಇನ್ನುಳಿದ ಕಾಂಗ್ರೆಸ್ ನಾಯಕರಿಗೆ ಅಧಿಕಾರವಾಣಿಯಲ್ಲಿ ತಾಕೀತು ಮಾಡಲಾರದಷ್ಟು ದುರ್ಬಲ ನಾಯಕಿಯಾದರೇ ಈ ಸೋನಿಯಾ? ಒಂದು ವೇಳೆ ಕರ್ನಾಟಕದ ಚುನಾವಣೆಯನ್ನು ಸೋತರೆ ಕಾಂಗ್ರೆಸ್ ಪಕ್ಷದ ರಾಜಕೀಯ ಭವಿಷ್ಯ ಮುಂದಿನ ವರ್ಷಗಳಲ್ಲಿ ರಸಾತಳ ತಲುಪುವುದರಲ್ಲಿ ಸಂದೇಹವೇ ಇಲ್ಲ. ಏಕೆಂದರೆ ಕರ್ನಾಟಕದ ಕಾಂಗ್ರೆಸ್ ನಾಯಕರಿಗೆ ಯಾವುದೇ ಬಗೆಯ ನಿರ್ದಿಷ್ಟ ಕಾರ್ಯಸೂಚಿ ಹಾಗೂ ಬದ್ಧತೆಗಳಾಗಲಿ, ದಿನನಿತ್ಯ ಕನಿಷ್ಟ 10 ತಾಸುಗಳ ರಾಜಕೀಯ ಮಾಡುವ ಕಾರ್ಯಕ್ಷಮತೆಯಾಗಲೀ, ಪಾದರಸದ ಚುರುಕಾಗಲೀ ಸಂಪೂರ್ಣ ಬರಡಾಗಿರುವ ಹಿನ್ನೆಲೆಯಲ್ಲಿ ಇದರ ಸೋಲಿನ ಜವಬ್ದಾರಿಯನ್ನು ಅಧಿನಾಯಕಿ ಸೋನಿಯಾ ಗಾಂಧಿಯವರೇ ಹೊರಬೇಕಾಗುತ್ತದೆ.

ಆದರೆ 15 ವರ್ಷಗಳಿಂದ ಸಕ್ರಿಯ ರಾಜಕಾರಣದಲ್ಲಿರುವ ಈ ಜಾಣೆ ಹೆಣ್ಣುಮಗಳು ಸೋನಿಯಾ ಇಷ್ಟೊಂದು ಅಸಮರ್ಥರೇ ಎಂದು ಆಶ್ಚರ್ಯವಾಗುತ್ತದೆ. ಆದರೆ ಕಾಲವೇ ಬದಲಾದರೂ ಇಂದಿಗೂ ತನ್ನ ಸುತ್ತ ಓಬೀರಾಯನ ಕಾಲದ ಈ ಅಂಬಿಕಾ ಸೋನಿಗಳು, ಅಹ್ಮದ್ ಪಟೇಲ್‌ಗಳು, ಆಜಾದ್‌ಗಳು, ದಿಗ್ವಿಜಯಗಳು, ದ್ವಿವೇದಿಗಳಂತಹ ತಿರಸ್ಕೃತ ಪ್ರಳಯಾಂತಕಾರಿಗಳನ್ನು ನಂಬಿಕಸ್ಥ ಬಂಟರನ್ನಾಗಿ ನೇಮಿಸಿಕೊಂಡಿರುವುದನ್ನು ನೋಡುವಾಗ ಅಯ್ಯೋ ಜೀವವೇ ಎಂದು ಸೋನಿಯಾ ಬಗೆಗೆ ಮರುಗುವಂತಾಗುತ್ತದೆ!! ಏನೋ ಮಾಡಲು ಹೋಗಿ ಏನು ಮಾಡಿದೆ ನೀನು ಎನ್ನುವ ಸ್ಥಿತಿಗೆ ತಲುಪಿರುವ ಸೋನಿಯಾ ಗಾಂಧಿಯವರಿಗೆ ಈ ಕತ್ತಲ ದಾರಿಯಲ್ಲಿ ಮುಂದಿನ ಬೆಳಕಿನ ದಾರಿ ತೋರಿಸುವ ಕೈದೀಪಗಳಾವುವು? ಕಡೆಗೆ ಏನಾದರಾಗಲಿ ಈ ಫ್ಯಾಸಿಸ್ಟ್ ಬಿಜೆಪಿ ಮಾತ್ರ ಅಧಿಕಾರಕ್ಕೆ ಬರಬಾರದು ಎಂಬ ಏಕಮಂತ್ರದ ಚಿಂತನೆಯೊಂದಿಗೆ ಈ ಭ್ರಷ್ಟ ಯುಪಿಎ ಸರ್ಕಾರವನ್ನು ಅರೆಮನಸ್ಸಿನಿಂದ ಒಪ್ಪಿಕೊಳ್ಳಲು ಹೆಣಗುತ್ತಲಿದ್ದ ಪ್ರಜ್ಞಾವಂತ ಗುಂಪಿಗೆ ಮಾತ್ರ ಇಂದು ಬಲು ದೊಡ್ಡ ಅಗ್ನಿ ಪರೀಕ್ಷೆ ಎದುರಾಗಿದೆ.

ಒಂದಂತೂ ಖಚಿತವಾಗಿದೆ. 2019ರ ವರೆಗೆ ಅಂದರೆ ಮುಂದಿನ 7 ವರ್ಷಗಳವರೆಗೆ ಇಂಡಿಯಾದಲ್ಲಿ ರಾಜಕೀಯ ಭವಿಷ್ಯ ಹೆಚ್ಚೂ ಕಡಿಮೆ ನಿರ್ಧಾರವಾಗಿ ಹೋಗಿದೆ. ಯಾವುದೇ ಪ್ರಯತ್ನಗಳು ಇನ್ನು ಈ ದೇಶವು ಫ್ಯಾಸಿಸ್ಟರ ಕೈಗೆ ಜಾರುವುದನ್ನು ತಪ್ಪಿಸಲಾಗದು. ಆ ಫ್ಯಾಸಿಸ್ಟ್ ಶಕ್ತಿಗಳು ಬಿಜೆಪಿ ಇರಬಹುದು ಅಥವಾ ಮುಲಾಯಂ ನೇತೃತ್ವದ ತೃತೀಯ ರಂಗ ಇರಬಹುದು. ಇವೆರೆಡೂ ಒಂದೇ ನಾಣ್ಯದ ಎರಡು ಮುಖಗಳಷ್ಟೇ. ಹಿಂದಿನಿಂದಲೂ ಅವಕಾಶವಾದಿ, ಭ್ರಷ್ಟ ರಾಜಕಾರಣಿಯಾದ ಮುಲಾಯಂ ಸಿಂಗ್ ಯಾದವ್ ಭವಿಷ್ಯದ ಪ್ರಧಾನ ಮಂತ್ರಿಯ ಕನಸು ಕಾಣುತ್ತಿರುವುದು, ತನ್ನ ಈ ಕನಸಿನ ಸಾಕಾರಕ್ಕಾಗಿ ಮನೆಗೆ ಬೆಂಕಿ ಬಿದ್ದಾಗ ಬೀಡಿ ಹಚ್ಚಿಕೊಳ್ಳುವ ಅತ್ಯಂತ ಘಾತುಕತನದ ಕೃತ್ಯಕ್ಕೆ ಕೈ ಹಾಕಿರುವುದು ಈ ದೇಶಕ್ಕೆ ಮುಂದೆ ಕೇಡುಗಾಲ ಕಾದಿರುವುದಕ್ಕೆ ಸಾಕ್ಷಿ. ಇನ್ನು ಎಡಬಿಡಂಗಿತನದ ಕಮ್ಯುನಿಷ್ಟರ ರಾಜಕೀಯ ನಿಲುವುಗಳ ಕುರಿತಾಗಿ ಬರೆಯಲಿಕ್ಕೆ ನನ್ನಂತಹವರಿಗೆ ಶಕ್ತಿಯೂ ಇಲ್ಲ, ವ್ಯವಧಾನವೂ ಇಲ್ಲ. ಎಡಪಂಥೀಯ ರಾಜಕಾರಣದಲ್ಲಿ ಇಂಡಿಯಾದ ಕಮ್ಯುನಿಷ್ಟರು ಸೋತಷ್ಟು ದಯನೀಯವಾಗಿ ಕಮ್ಯುನಿಷ್ಟರು ಜಾಗತಿಕ ಮಟ್ಟದಲ್ಲಿ ಇನ್ನೆಲ್ಲಿಯೂ ಸೋತಿಲ್ಲ. ಇವರಿಗೆ ಸೈದ್ಧಾಂತಿಕ ಬದ್ಧತೆಗಳೊಂದಿಗೆ ರಾಜಕಾರಣವನ್ನು ಹೊಕ್ಕಳುಬಳ್ಳಿ ಸಂಬಂಧವನ್ನು ಸಾಧಿಸುವುದಕ್ಕೆ ಕಳೆದ 65 ವರ್ಷಗಳಿಂದಲೂ ಸಾಧ್ಯವಾಗಿಲ್ಲ. ಅದರ ಫಲವಾಗಿಯೇ ಇಂದು ಎಡಬಿಡಂಗಿಗಳಂತೆ ಮುಲಾಯಂನಂತಹ ಭ್ರಷ್ಟ ರಾಜಕಾರಣಿಯೊಂದಿಗೆ ಕೈಜೋಡಿಸುವ ಅಸಹಾಯಕ, ದಿಕ್ಕೆಟ್ಟ ಮಟ್ಟಕ್ಕೆ ಇಳಿದಿರುವುದು.

ಖ್ಯಾತ ಚಿಂತಕ ‘ಅರ್ವೆಲ್’ ಒಂದು ಕಡೆ ಮೂಲಭೂತವಾದಿಗಳು ಮತ್ತು ಕಮ್ಯುನಿಷ್ಟರು ತಮ್ಮ ಎದುರಾಳಿಗಳನ್ನು ಬುದ್ಧಿವಂತರು ಮತ್ತು ಪ್ರಾಮಾಣಿಕರೆಂದು ಎಂದಿಗೂ ಪರಿಗಣಿಸುವುದಿಲ್ಲ. ಬದಲಾಗಿ ತಮ್ಮ ರಾಜಕೀಯ ಅಖಾಡದಲ್ಲಿ ತಾವು ಸತ್ಯವನ್ನು ಅನಾವರಣಗೊಳಿಸಿದ್ದೇವೆ ಎಂದೇ ಬೀಗುತ್ತಾರೆ. ಈ ಎರಡೂ ವಿಭಿನ್ನ ಸಿದ್ಧಾಂತವಾದಿಗಳು ಬೌದ್ಧಿಕ ಸ್ವಾತಂತ್ರ್ಯವನ್ನು, ವ್ಯಕ್ತಿ ಸ್ವಾತಂತ್ರ್ಯವನ್ನು ಬೂರ್ಜ್ವ ವ್ಯಕ್ತಿತ್ವವಾದಿಗಳ ಹುನ್ನಾರವೆಂದೇ ಒಟ್ಟಾಗಿಯೇ ತಿರಸ್ಕರಿಸುತ್ತಾರೆ. ಇದಕ್ಕಾಗಿ ಅವರು ಬಳಸುವ ಪದಗಳು ಬೇರೆಯಷ್ಟೆ. ಸಂಪ್ರದಾಯನಿಷ್ಟ ಪಕ್ಷವು ಅಧಿಕಾರಕ್ಕೆ ಬಂತೆಂದರೆ ಅಲ್ಲಿ ಮುಕ್ತ ಬರವಣಿಗೆ ಸಂಪೂರ್ಣವಾಗಿ ನಿಂತು ಹೋಗುತ್ತದೆ. ಇಂತಹ ಸಂಪ್ರದಾಯನಿಷ್ಟ ಪಕ್ಷದ ಹಿಡಿತದಲ್ಲಿರುವ ಸಮಾಜವು ಸಹನಾಶೀಲವಾಗಿರುವುದಿಲ್ಲ ಮತ್ತು ಅಲ್ಲಿ ಬೌದ್ಧಿಕ ಖಚಿತತೆ ಇರುವುದಿಲ್ಲ. ಎಂದು ಮಾರ್ಮಿಕವಾಗಿ ಬರೆಯುತ್ತಾನೆ. ಇದು ಇಂದಿನ ಭಾರತಕ್ಕೆ ಸಂಪೂರ್ಣವಾಗಿ ಅನ್ವಯಿಸುತ್ತದೆ.

2014ರಲ್ಲಿ ಕೇಂದ್ರದಲ್ಲಿ ದಿಲ್ಲಿ ಮಾಯಾವಿಯ ಗದ್ದುಗೆ ಇನ್ನೇನು ತಮ್ಮ ಕೈಗೆಟುಕಿದಂತೆಯೇ ಎಂದು ಪುಳಕಿತಗೊಳ್ಳುತ್ತಿರುವ ಬಿಜೆಪಿ ಪಕ್ಷವು ಅಧಿಕಾರ ಕಬಳಿಸುವ ಆತುರದಲ್ಲಿದ್ದರೆ, ತಮ್ಮ 50 ವರ್ಷಗಳ ರಾಜಕಾರಣದಿಂದ ಯಾವುದೇ ಮಾನವೀಯತೆಯನ್ನ, ಸಾಮಾಜಿಕ ಬದ್ಧತೆಯನ್ನು, ಮುತ್ಸದ್ದಿತನವನ್ನ ಮೈಗೂಡಿಸಿಕೊಳ್ಳದ, 90ರ ದಶಕದಲ್ಲಿ ದೇಶದಲ್ಲಿ ಕೋಮುಗಲಭೆಗಳನ್ನು ಹುಟ್ಟುಹಾಕಲು ಪ್ರಮುಖ ಪಾತ್ರ ವಹಿಸಿದ ಕೋಮುವಾದಿ ರಾಜಕಾರಣಿ ಅಡ್ವಾನಿಯವರು ಪ್ರಧಾನಿಯಾಗುವ ಹಪಾಹಪಿತನದಲ್ಲಿದ್ದರೆ, ಸಾವಿರಾರು ಮುಸ್ಲಿಂರನ್ನು ಹತ್ಯೆಗೈದ ಆರೋಪ ಎದುರಿಸುತ್ತಿರುವ ಫ್ಯಾಸಿಸ್ಟ್ , ಮತೀಯವಾದಿ ಮುಖ್ಯಮಂತ್ರಿ ನರೇಂದ್ರ ಮೋದಿ ತಾನು ಮಾತ್ರ ಪ್ರಧಾನ ಮಂತ್ರಿ ಪದವಿಗೆ ಅರ್ಹನಾದವ ಎನ್ನುವ ಠೇಂಕಾರದಲ್ಲಿದ್ದಾರೆ. ಇವರಿಬ್ಬರ ನಡುವೆ ಆರಕ್ಕೇರದ ಮೂರಕ್ಕಿಳಿಯದ ಆದರೆ ಅಪಾಯಕಾರಿ ಪ್ರವೃತ್ತಿಯಲ್ಲಿ, ಮತೀಯವಾದದಲ್ಲಿ ಪಕ್ಕಾ ಆರ್‌ಎಸ್‌ಎಸ್ ಸಂಸ್ಕೃತಿಯನ್ನು ಮೈಗೂಡಿಸಿಕೊಂಡಿರುವ ಸುಷ್ಮಾ ಸ್ವರಾಜ್, ಅರುಣ್ ಜೇಟ್ಳಿ, ನಿತಿನ್ ಘಡ್ಕರಿ ತರಹದ ಅನನುಭವಿ, ಅತ್ಯಂತ ಸೀಮಿತ ಆಡಳಿತ ಜ್ಞಾನದ ಮಹತ್ವಾಕಾಂಕ್ಷಿ ರಾಜಕಾರಣಿಗಳಿದ್ದಾರೆ. ಇವರೆಲ್ಲರಿಗೆ ಒಂದು ಸಮಾನ ಎಳೆಯಾಗಿ ಇವರ ಹಿರಿಯಣ್ಣ ಮತೀಯವಾದಿ, ಫ್ಯಾಸಿಸ್ಟ್ ಗುಂಪು ಆರ್‌ಎಸ್‌ಎಸ್ ತನ್ನೆಲ್ಲ ಕೈಚಳಕಗಳನ್ನು,ಗುಪ್ತ ಕಾರ್ಯಸೂಚಿಗಳನ್ನು ಹೊತ್ತುಕೊಂಡು ತುದಿಗಾಲಲ್ಲಿ ನಿಂತಿದೆ.

ಮತ್ತೆ ಆ ಮಾನವ ಸಂಪನ್ಮೂಲ ಖಾತೆಯನ್ನು, ಮತ್ತೆ ಗೃಹ ಇಲಾಖೆಯನ್ನು, ಮತ್ತೆ ವಾರ್ತಾ ಮತ್ತು ಪ್ರಚಾರ ಖಾತೆಯನ್ನು, ಮತ್ತೆ ಸಂಸ್ಕೃತಿ ಇಲಾಖೆಯನ್ನು, ಮತ್ತೆ ವಿದೇಶಾಂಗ ವ್ಯವಹಾರಗಳ ಖಾತೆಯನ್ನು ಕಬ್ಜಾ ಮಾಡಿಕೊಳ್ಳಲು ಆರ್‌ಎಸ್‌ಎಸ್ ಪುಳಕದಿಂದ, ಆತಂಕದಿಂದ ಮೈಯೆಲ್ಲಾ ಕಣ್ಣಾಗಿ ಹೊಂಚು ಹಾಕುತ್ತಿದೆ. ಈಗ ಇಂದು 21ನೇ ಶತಮಾನದ ಎರಡನೇ ದಶಕದ ನವ ಕಲೋನಿಯಲ್‌ನ ಪ್ರಭಾವದಲ್ಲಿರುವ ಇಂಡಿಯಾ ದೇಶವು ತನ್ನ ವರ್ತಮಾನದ ಆಧುನಿಕತೆಯ ನಾಗಾಲೋಟದ ವರ್ಷಗಳಲ್ಲಿ ಬೀಗುತ್ತಿದ್ದರೆ, ಇಂದಿಗೂ ಹಾಗೆಯೇ ಸಾವಿರಾರು ವರ್ಷಗಳ ಹಿಂದಿನ ಕರ್ಮಠ ಸ್ಥಿತಿಯಲ್ಲೇ ಇರುವ ಈ ಫ್ಯಾಸಿಸ್ಟ್ ಆರ್‌ಎಸ್‌ಎಸ್ ತನ್ನ ಅಭಿಮಾನದ ಭಾರತವನ್ನು ಮರಳಿ ಸನಾತನವಾದಕ್ಕೆ, ಸಾವಿರಾರು ವರ್ಷಗಳ ಹಿಂದಿನ ಮೌಢ್ಯಗಳ ಯುಗಕ್ಕೆ ಮರಳಿ ಸ್ಥಾಪಿಸಲು ಇನ್ನೇನು ಕೈಗೆಟುಕಲಿರುವ ದಿಲ್ಲಿ ಗದ್ದುಗೆಗೆ ಅಪಾರವಾದ ಆಸೆಗಣ್ಣಿನಿಂದ ಕಾಯುತ್ತಿದೆ. ಕಳೆದ 80 ವರ್ಷಗಳಿಂದ ತಮ್ಮ  ಫ್ಯಾಸಿಸ್ಟ್ ಚಿಂತನೆಗಳನ್ನು ಕೊಂಚವೂ ಬದಲಾಯಿಸಿಕೊಳ್ಳದ ಈ ಸಂಘ ಪರಿವಾದವರು ಮತ್ತೆ ಕೋಮುವಾದವನ್ನು ನವೀಕರಿಸುತ್ತಿದ್ದಾರೆ. ಇಂದು ಕೋಮುವಾದ ಮತ್ತೆ ಕ್ರೋಢೀಕರಣಗೊಳ್ಳುತ್ತಿದೆ. ಅದು ಕರ್ನಾಟಕವನ್ನು ಲ್ಯಾಬರೋಟರಿಯನ್ನಾಗಿ ಮಾಡಿಕೊಳ್ಳುವುದರ ಮೂಲಕ, ಅಸ್ಸಾಂನಲ್ಲಿನ ಜನಾಂಗೀಯ ಘರ್ಷಣೆಗಳಿಗೆ ಕೋಮುವಾದದ ಹುಸಿ ಮುಖವಾಡವನ್ನು ತೊಡಿಸುವುದರ ಮೂಲಕ ಹಾಗೂ ಉತ್ತರ ಪ್ರದೇಶದಲ್ಲಿ ಕೋಮು ಗಲಭೆಗಳನ್ನು ನಿರಂತರವಾಗಿ ಹುಟ್ಟು ಹಾಕುವುದರ ಮೂಲಕ ಮತ್ತೆ ಇಡೀ ದೇಶವನ್ನು 90ರ ದಶಕದ ಕೋಮು ಗಲಭೆಗಳ ದುಸ್ಥಿಗೆ ಮರಳಿ ತಂದು ನೆಲೆಗೊಳಿಸಲು ಈ ಸಂಘ ಪರಿವಾರದವರು ಅತ್ಯುತ್ಸಕರಾಗಿದ್ದಾರೆ. ಏಕೆಂದರೆ “ಅಬ್ ದಿಲ್ಲಿ ದೂರ್ ನಹೀಂ ಹೈ”.

ಈ ಕೋಮುವಾದದ ಸಂಘಪರಿವಾರದ ಪುನರಾಗಮನಕ್ಕೆ ನೀರೆರೆದದ್ದು ಮುಸ್ಲಿಂ ಮೂಲಭೂತವಾದಿಗಳ ಶಿಲಾಯುಗದ ಧರ್ಮಾಂಧತೆ. ಹಿಂದುತ್ವದ ಹೆಸರಿನಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆಯುವ ದಬ್ಬಾಳಿಕೆಯ ವಿರುದ್ಧ ಅನಗತ್ಯ ಅಸಹನೆಯನ್ನು ವ್ಯಕ್ತಪಡಿಸುವುದರ ಮೂಲಕ ಕುಬ್ಜರಾಗುವುದನ್ನು ನಿರಾಕರಿಸಿ ಬದಲಾಗಿ ಅಪಾರ ಸಹನೆಯನ್ನು ಮೈಗೂಡಿಸಿಕೊಳ್ಳುವುದರ ಮೂಲಕ, ಒಳಗೊಳ್ಳುವ ಪ್ರಕ್ರಿಯೆಯ ಮೂಲಕ, ದಿಟ್ಟವಾದ ಆಧುನಿಕ ಪ್ರಜ್ಞೆಯನ್ನು ಹೊತ್ತುಕೊಳ್ಳುವ ಇಚ್ಛಾಶಕ್ತಿಯ ಮೂಲಕ ಎದುರಿಸುವ ಅವಕಾಶವನ್ನು ಕೈಚೆಲ್ಲಿದ ಈ ಮೂಲಭೂತವಾದಿಗಳು ಅಸಹಾಯಕ, ಮುಗ್ಧ ಮುಸ್ಲಿಂಮರು ಪುನ: Ghettoಗಳಿಗೆ ಮರಳುವಂತೆ ಮಾಡಿದ್ದು ಎಂದಿಗೂ ಕ್ಷಮಿಸಲು ಸಾಧ್ಯವೇ ಇಲ್ಲ. ಇಲ್ಲಿ ಅಸ್ಗರ್ ಅಲಿ ಇಂಜಿನಿಯರ್, ಬಂದೂಕವಾಲಾ, ಬಾನು ಮುಸ್ತಾಕ್, ಹಸಂನಯೀಂ ಸುರಕೋಡರಂತಹವರಂತಹ ಜಾತ್ಯಾತೀತ ಮಾನವತಾವಾದಿಗಳನ್ನು ಸಹ ನಿಸ್ಸಹಾಯಕರಾಗಿಸಿದ್ದಕ್ಕೆ ಈ ಮೂಲಭೂತವಾದಿಗಳು ಹೊಣೆ ಹೊರಬೇಕಾಗುತ್ತದೆ. ವೈವಿಧ್ಯತೆಯನ್ನು, ಸರ್ವಜನಾಂಗದ ಶಾಂತಿಯ ಹಿತವನ್ನು, ಸ್ತ್ರೀ ಸ್ವಾತಂತ್ರ್ಯವನ್ನು ತನ್ನೊಡಳೊಳಗೆ ಇಟ್ಟುಕೊಂಡ ಮಾನವೀಯ ಇಸ್ಲಾಂ ಧರ್ಮವನ್ನು ಬಹಿರಂಗವಾಗಿ ನಿರಂತರ ವಿವಾದಾತ್ಮಕ, ಗೊಂದಲದ ಗೂಡಾಗಿಸಿದ್ದು ಈ ಮೂಲಭೂತವಾದಿಗಳು. ಇವರಿಗೆ ಪೂರಕವಾಗಿಯೇ ಸಹಕರಿಸಿದ್ದು ನಮ್ಮಲ್ಲಿನ ಬಲಪಂಥೀಯ ಚಿಂತಕರು, ಸಾಹಿತಿಗಳು, ಪತ್ರಕರ್ತರು. ಈ ಹೊಣಗೇಡಿಗಳು ಎರಡೂ ಕಡೆಯ ಮತಾಂಧತೆಗೆ ನೀರೆರೆದು ಪೋಷಿಸುತ್ತಿರುವುದು ಇಂದಿಗೂ ನಮ್ಮ ಕಣ್ಣೆದುರಿಗೇ ಜರುಗುತ್ತಿದೆ.

ಮೇಲಿನವರೆಲ್ಲರಿಗಿಂತಲೂ ಹೆಚ್ಚಿನ ಹೊಣೆಗೇಡಿತನದ ಆರೋಪ ಈ ನಾಡಿನ ಪ್ರಜ್ಞಾವಂತರ, ಬುದ್ಧಿಜೀವಿಗಳ, ಎಡಪಂಥೀಯರ, ಕ್ಷಮೆಯಿಲ್ಲದ ನಿರ್ಲಕ್ಷ್ಯ ಧೋರಣೆ ಮತ್ತು ಸಾರ್ವಜನಿಕ ನಿಷ್ಕ್ರಿಯತೆಗೆ ಸಲ್ಲಬೇಕು. ಇವರು ಸಾರ್ವಜನಿಕವಾಗಿ ದಿಟ್ಟ ಹಾಗೂ ನೈಜ ನೆಲಸಂಸ್ಕೃತಿಯ ಸಾಂಸ್ಕೃತಿಕ ಲೋಕವನ್ನು ಕಟ್ಟಲು ವಿಫಲರಾಗಿದ್ದರಿಂದಲೇ ಈ ಸಂಘಪರಿವಾರಕ್ಕೆ ಸಾರ್ವಜನಿಕವಾಗಿ ಈ ಬಗೆಯ ಫ್ಯಾಸಿಸ್ಟ್ ಧೋರಣೆ ಮತ್ತು ಸನಾತನವಾದದ ಧಾರ್ಮಿಕತೆಯನ್ನು ನಿರ್ಲಜ್ಯವಾಗಿ ಬಳಸುವ ಸ್ವಾತಂತ್ರ್ಯ ಸಾಧ್ಯವಾದದ್ದು. ಇಂದು ಕಲ್ಲಡ್ಕ ಪ್ರಭಾಕರ ಭಟ್ಟ ಎನ್ನುವ ಆರ್‌ಎಸ್‌ಎಸ್ ಮುಖಂಡನನ್ನು ಪ್ರಗತಿಪರರು ಮತ್ತು ಪ್ರಜ್ಞಾವಂತರು ದಕ್ಷಿಣ ಕನ್ನಡದ ಬಾಳಾಠಾಕ್ರೆ, ಕರ್ನಾಟಕದ ಫ್ಯಾಸಿಸ್ಟ್ ಮುಖ ಎಂದು ಸಾಕ್ಷಿ ಸಮೇತ ತೀವ್ರವಾಗಿ ಟೀಕಿಸುತ್ತಿದ್ದರೆ ಹಿಂದೂ ಸಂಸ್ಕೃತಿಯ ರಕ್ಷಕನಾಗಿ ಈತನ ಜನಪ್ರಿಯತೆ ಮತ್ತು ಪ್ರಭಾವ ದಕ್ಷಿಣ ಕನ್ನಡವನ್ನು ದಾಟಿ ಬೆಂಗಳೂರಿಗೆ ದಾಪುಗಾಲು ಇಡುತ್ತಿದೆ. ಎಲ್ಲಿದೆ ನಮ್ಮ ಆಸ್ತಿತ್ವ? ಈ ಮಹಿಳಾ ಆಯೋಗದ ಆಧ್ಯಕ್ಷೆಯಾಗಿರುವ ಸಿ.ಮಂಜುಳಾ ಎನ್ನುವವರು ಮೇಲ್ನೋಟಕ್ಕೆ ಮಂಗಳೂರಿನ ಹಲ್ಲೆಯನ್ನು ಖಂಡಿಸಿದ್ದರೂ ತಮ್ಮ ಅಧಿಕಾರದ ಮದದಲ್ಲಿ ಇವರು ಹಿಂದೂ ಸಂಸ್ಕೃತಿಯ ಹೆಸರಿನಲ್ಲಿ ಹೆಚ್ಚೂ ಕಡಿಮೆ ತೀವ್ರವಾಗಿ ಟೀಕಿಸಿದ್ದು ಹಲ್ಲೆಗೊಳಗಾದ ಅಸಹಾಯಕ ಹೆಣ್ಣುಮಕ್ಕಳು ಹಾಗೂ ಅವರ ಪಾಲಕರನ್ನು. ಈ ಹಲ್ಲೆಗೊಳಗಾದವರನ್ನೇ ಸಂಪೂರ್ಣ ಹೊಣೆಗಾರರೆಂದು ಅತ್ಯಂತ ಬೇಜವಬ್ದಾರಿಯಿಂದ ಮಾತನಾಡಿದ ಈ ಸಿ.ಮಂಜುಳಾ ಅವರ ಸಾಮಾಜಿಕ ಬದ್ಧತೆಯನ್ನು, ಅಮಾನವೀಯ ನೆಲೆಗಳನ್ನು ಪ್ರಶ್ನಿಸುವವರಾರು? ಇಂದು ಕನಾಟಕದಲ್ಲಿ ಬಿಜೆಪಿ ಮರಳಿ ಅಧಿಕಾರ ವಹಿಸಿಕೊಂಡರೆ ನಮ್ಮೆಲ್ಲರ ಮಾನ ಮರ್ಯಾದೆ ಹರಾಜಾಗುವುದು ಖಂಡಿತ. ಆಗಲೂ ನಾವು ನಿರ್ಲಜ್ಯರಾಗಿ ಮುಖದ ಮೇಲೆ ಉಗುಳಿದರೂ ಮಳೆ ಹನಿಯೆಂದು ಒರೆಸಿಕೊಳ್ಳಬಹುದು!

ವಿಶ್ವವಿದ್ಯಾಲಯಗಳಿಂದ, ನಮ್ಮ ಕಂಫರ್ಟ್ ಸುರಕ್ಷಿತ ಗುಹೆಗಳಿಂದ ಹೊರಬಂದು ತಮ್ಮಲ್ಲಿನ ಬುದ್ಧಿಜೀವಿತನದ ಚಿಂತನೆಗಳನ್ನು ಬಳಸಿಕೊಂಡು ಜನಸಾಮಾನ್ಯರೊಂದಿಗೆ ಬೆರೆತು ಈ ನೆಲದ ಅವೈದಿಕ ಸಂಸ್ಕೃತಿಯನ್ನು ಅದರ ಜಾತ್ಯಾತೀತ ನೆಲೆಗಳನ್ನು ಚಲನಶೀಲಗೊಳಿಸುತ್ತ ಮತ್ತು ಇದನ್ನು ವಿಸ್ತರಿಸುತ್ತ ಇಲ್ಲಿನ ಜನಸಾಮಾನ್ಯರನ್ನು ಸಹ ಬುದ್ಧಿಜೀವಿಗಳನ್ನಾಗಿ ರೂಪಿಸಲು ನಾವೆಲ್ಲ ಸೋತಿದ್ದರಿಂದಾಗಿ, ಜಾತ್ಯಾತೀತ ಹಾಗೂ ಜೀವಪರ ನೆಲೆಯ ಬಹುಮುಖೀ ಸಾಂಸ್ಕೃತಿಕ ಯಜಮಾನ್ಯವನ್ನು ಸ್ಥಾಪಿಸಲು ನಾವೆಲ್ಲ ವಿಫಲಗೊಂಡಿದ್ದರಿಂದಾಗಿಯೇ ಈ ಸಂಘಪರಿವಾರದ ಏಕರೂಪಿ ವಿಕೃತ ಹಿಂದುತ್ವದ ಚಿಂತನೆಗಳು ಸಂಸ್ಕೃತಿಯ ಹೆಸರಿನಲ್ಲಿ ಆ ಖಾಲಿಯಾದ ಜಾಗವನ್ನು ಸಂಪೂರ್ಣವಾಗಿ ಆಕ್ರಮಿಸಿಕೊಂಡವು. ಪ್ರಜ್ಞಾವಂತರೆಲ್ಲರ ನಿಷ್ಕ್ರಿಯತೆಯಿಂದಾಗಿ ಭಾರತದ ನಿಜವಾದ ಜಾತ್ಯಾತೀತರಾದ ತಳಸಮುದಾಯಗಳ ಬದುಕನ್ನು ವ್ಯವಸ್ಥೆಯ ಒಂದು ನಿರಂತರ ಸಾಂಸ್ಕೃತಿಕ  ಚಟುವಟಿಕೆಯಾಗಿ ನೆಲೆಗೊಳಿಸಲು ಇಂಡಿಯಾ ದೇಶ ಸೋತಿದೆ. ಸಾರ್ವಜನಿಕ ಜೀವನದಲ್ಲಿ ಒಂದು ಬಹುರೂಪಿ, ಜೀವಪರ ಸಾಂಸ್ಕೃತಿಕ ಮಾದರಿ ಲೋಕವನ್ನು ಕಟ್ಟಲು ಅವಶ್ಯಕವಾದ ಶಕ್ತಿಯನ್ನಾಗಿ ಬಳಕೆಯಾಗಬೇಕಾಗಿದ್ದ ತಳಸಮುದಾಯದ ಹುಡುಗರು ಇಂಡಿಯಾ ದೇಶ ಸಂಪೂರ್ಣವಾಗಿ ಸೋತಿದ್ದರಿಂದಲೇ ಇಂದು ಸಮಾಜದಲ್ಲಿ ಲುಂಪೆನ್ ಗುಂಪುಗಳಾಗಿ ಸಂಘಪರಿವಾರದ ಹಿಂದುತ್ವದ ಲ್ಯಾಬೋರೇಟರಿಗೆ ಪ್ರಯೋಗಪಶುಗಳಾಗಿ ಬಳಕೆಗೊಳ್ಳುತ್ತಿದ್ದಾರೆ.

ಚಿಂತಕ ಡಿ.ಆರ್.ನಾಗರಾಜ್ ಅವರು, “ಒಂದು ದೇಶದ ಸಾಂಸ್ಕೃತಿಕ ಸ್ವಂತಿಕೆ ಮತ್ತು ಸ್ವಾಭಿಮಾನದ ಪ್ರಶ್ನೆ ವಿಕಾರವಾದಾಗ ಮತಾಂಧ ರಾಜಕಾರಣವಾಗುತ್ತದೆ. ಗಾಂಧಿಯ ಮಟ್ಟಿಗೆ ಉನ್ನತ ಕಲ್ಪನೆಯಾದ ರಾಮರಾಜ್ಯ ಹಿಂದುತ್ವದ ಪರಿವಾರದ ಕೈಯಲ್ಲಿ ಅಪಾಯಕಾರಿ ಅಸ್ತ್ರವಾಗುತ್ತದೆ. ಸಾಂಸ್ಕೃತಿಕ ಸ್ವಂತಿಕೆ ಮತ್ತು ಸ್ವಾಭಿಮಾನದ ಪ್ರಶ್ನೆಯನ್ನು ಈ ದೇಶದ ಪ್ರಗತಿಪರರು ಚರ್ಚಿಸಬೇಕಾದ ಅಗತ್ಯ ಅಂದಿಗಿಂತ ಇಂದು ಹೆಚ್ಚಾಗಿದೆ. ಪ್ರಗತಿಪರತೆ ಎನ್ನುವುದು ಸರಳವಾದ ಸಾಮಾಜಿಕ ನ್ಯಾಯದ ರಾಜಕಾರಣವಲ್ಲ. ಅದಕ್ಕೆ ಅಧಿಕೃತ ಸಾಂಸ್ಕೃತಿಕ ಒಡಲೂ ಇರಬೇಕಾಗುತ್ತದೆ. ಈ ದೇಶದ ಸಂಸ್ಕೃತಿ ಬಗ್ಗೆ ಅಂತರ್ಮುಖತೆ ಇರದೆ ಕೃತಕವಾಗಿ ಸೆಕ್ಯುಲರ್ ಆದರೆ ಹಿಂದುತ್ವದ ಫ್ಯಾಸಿಸ್ಟ್ ಪರಿವಾರ ಬೆಳೆಯುತ್ತದೆ. ನಿಜವಾಗಿ ದೇಸಿಗರಾದರೆ ಮಾತ್ರ ಹಿಂದುತ್ವ ಪರಿವಾರದ ಹಲ್ಲೆ ತಡೆಗಟ್ಟಲು ಸಾಧ್ಯ.” ಎಂದು 1993ರಲ್ಲಿ ಹೇಳಿದ ಈ ಮನೋಜ್ಞ ಮಾತುಗಳು 19 ವರ್ಷಗಳ ನಂತರ ಇಂದಿಗೂ ಪ್ರಸ್ತುತವಾಗಿವೆ. ಡಿ.ಆರ್. ಹೇಳಿದ ಆ ಅಧಿಕೃತ ಮಾನವೀಯ ಸಾಂಸ್ಕೃತಿಕ ಒಡಲು ಪ್ರಜ್ಞಾವಂತರೆನಿಸಿಕೊಂಡ ನಮ್ಮಲ್ಲಿ ಕಾಣೆಯಾಗಿದೆ. ಸಾಂಸ್ಕೃತಿಕ ಜವಾಬ್ದಾರಿಗಳ ಅಗತ್ಯತೆಗಳ ಕುರಿತಾಗಿ ಕಾಲೇಜುಗಳಲ್ಲಿ, ಸೆಮಿನಾರ್‌ಗಳಲ್ಲಿ  ಅಸ್ಖಲಿತವಾಗಿ ಪಾಠ ಬಿಗಿಯುವ ನಮ್ಮ ಬುದ್ಧಿಜೀವಿಗಳ ಆದರ್ಶಗಳು ಕೇವಲ ಪುಸ್ತಕದ ಬದನೇಕಾಯಿಯೇ ಎಂದು ನಮ್ಮಂತಹ ಜನಸಾಮಾನ್ಯರು ಪ್ರಶ್ನಿಸಿದರೆ ಇದು ನಿಜಕ್ಕೂ ಅಧಿಕಪ್ರಸಂಗಿತನವಲ್ಲ!! ಸಂಶೋಧನೆಗಳಲ್ಲಿ ಬರೆಯಲ್ಪಡುವ, ಸೆಮಿನಾರ್‌ಗಳಲ್ಲಿ ಆಕರ್ಷಕ ಭಾಷಣವಾಗಿ ಕೊರೆಯಲ್ಪಡುವ ಈ ಸಾಂಸ್ಕೃತಿಕ ಅನುಸಂಧಾನ ಮತ್ತು ಸಾಂಸ್ಕೃತಿಕ ಒಳಗೊಳ್ಳುವಿಕೆ ಎನ್ನುವುದು ವಾಸ್ತವವಾಗಿ ವ್ಯವಸ್ಥೆಯಲ್ಲಿ ಹೇಗೆ ಪ್ರಯೋಗಿಸಲ್ಪಡುತ್ತದೆ ಮತ್ತು ಅದರ ಯಶಸ್ಸಿನ ಉದಾಹರಣೆಗಳಾವುವು? ಇಂದು ಜನಪರ ರಾಜಕೀಯದ ಹಾಗೂ ಆರ್ಥಿಕತೆಯ ಪರ್ಯಾಯ ನೆಲೆಗಳು ಭೌದ್ಧಿಕವಾಗಿ ಮತ್ತು ಸಂಪೂರ್ಣವಾಗಿ ಭ್ರಷ್ಟಗೊಂಡಿರುವಾಗ ಅದರ ಬದಲಾಗಿ ಸಮಾಜದಲ್ಲಿನ ವ್ಯವಸ್ಥಿತ ಕ್ರೌರ್ಯಕ್ಕೆ ನಾವೆಲ್ಲ ಪ್ರತಿಕ್ರಯಿಸಬೇಕಾದ, ಪ್ರತಿಭಟಿಸುತ್ತಲೇ ನಿರಂತರವಾಗಿ ಕಟ್ಟಬೇಕಾದ ಪ್ರತಿರೋಧದ ಸಾಂಸ್ಕೃತಿಕ ನೆಲೆಗಳಾವುವು ಎಂದು ಈ ನಾಡಿನ ಶೋಷಿತರು ಹಾಗೂ ಹಲ್ಲೆಗೊಳಗಾದವರು ಇಂದು ಈ ಬುದ್ಧಿಜೀವಿಗಳನ್ನು ಪ್ರಶ್ನಿಸುತ್ತಿದ್ದಾರೆ. ಏಕೆಂದರೆ ನಮ್ಮ ಅಂತರಿಕ ತಳಮಳಗಳು ಬಹಿರಂಗ ಪ್ರತಿಭಟನೆಯಾಗಿ ವ್ಯಕ್ತವಾಗಲು ನಿರ್ದಿಷ್ಟವಾದ ಖಚಿತತೆ ಮತ್ತು ನೂರಾರು ಮಾರ್ಗಗಳನ್ನು ನಾವೆಲ್ಲ ನಿರಾಕರಿಸಿದ್ದೇವೆ. ತಮಿಳುನಾಡಿನಲ್ಲಿ ಒಂದು ಕಾಲದಲ್ಲಿ ಪೆರಿಯಾರ್ ರೂಪಿಸಿದ ಈ ದ್ರಾವಿಡ ಸಾಂಸ್ಕೃತಿಕ ರಾಜಕಾರಣದ ಅತಿರೇಕಗಳನ್ನು ಅದರ ಅನೇಕ ಮಿತಿಗಳನ್ನು ಇಂದು ನಿಖರವಾಗಿ ವಿಮರ್ಶಿಸುವ ನಾವೆಲ್ಲ ಇಂದು ನಮ್ಮ ಕರ್ನಾಟಕದಲ್ಲಿ ಪೆರಿಯಾರ್‌ರವರ ಚೈತನ್ಯಶೀಲತೆಯ ಸಾಂಸ್ಕೃತಿಕ ಚಳವಳಿಯ ತಾತ್ವಿಕತೆಯ ಮತ್ತು ಜಾತ್ಯಾತೀತತೆಯ ಪ್ರಖರತೆಯ ಹತ್ತಿರಕ್ಕೂ ಹೋಗಲಾರದಷ್ಟು ಜಡಗೊಂಡಿದ್ದೇವೆ. ಜಾತ್ಯಾತೀತ ನೆಲೆಯ ಸಾಂಸ್ಕೃತಿಕ ರಾಜಕಾರಣವನ್ನು ಒಂದು ಜನಪರ ಚಳವಳಿಯಾಗಿ ರೂಪಿಸಲು ನಾವು ಸೋತಿದ್ದೆಲ್ಲಿ ಎಂದು ಆತ್ಮವಿಮರ್ಶೆಯನ್ನು ಮಾಡಿಕೊಳ್ಳುವ ತೀವ್ರವಾದ ಪ್ರಕ್ಷುಬ್ಧ ಕಾಲವಿದು.