ಖೆರ್ಲಾಂಜಿ ನರಮೇಧದ ನೆನಪುಗಳು


– ಡಾ.ಎನ್.ಜಗದೀಶ್ ಕೊಪ್ಪ


ಸ್ವಾತಂತ್ರ್ಯಾ ನಂತರದ ಭಾರತದ ಇತಿಹಾಸದಲ್ಲಿ ಜಾತಿಯ ಅಮಲನ್ನು ನೆತ್ತಿಗೇರಿಸಿಕೊಂಡು ಮಾನವೀಯತೆಯನ್ನ ಮರೆತವರ ಬಗ್ಗೆ ಬರೆಯಲು ಈ ನೆಲದಲ್ಲಿ ಒಬ್ಬ ವ್ಯಕ್ತಿಗೆ ಅವನ ಪೂರ್ತಾ ಆಯಸ್ಸು ಸಾಲದು. ಈ ನೆಲದಲ್ಲಿ ನಿರಂತರ ನಡೆಯುತ್ತಿರುವ ದಲಿತರ ಮೇಲಿನ ದೌರ್ಜನ್ಯಕ್ಕೆ, ವರ್ತಮಾನದ ಸಮಾಜದ ಅಸಹನೆಗೆ ಮತ್ತು ಅದರ ಜಾತೀಯ ಮನೋಭಾವಕ್ಕೆ ಹಾಳೆಯ ಮೇಲೆ ಅಕ್ಷರಗಳು ದಾಖಲಾಗಲು ಹೇಸಿಗೆ ಪಟ್ಟುಕೊಳ್ಳುವಂತಹ ಸ್ಥಿತಿ ನಿರ್ಮಾಣವಾಗಿದೆ.

ಭಾರತದ ನಾಗರೀಕ ಸಮಾಜ ತಲೆ ತಗ್ಗಿಸುವಂತಹ ದಲಿತ ಕುಟುಂಬವೊಂದರ ಸದಸ್ಯರ ನರಮೇಧ ನಡೆದು ಇಂದಿಗೆ ಆರು ವರ್ಷ. ಮಹಾರಾಷ್ಟ್ರದ ಭಂಡಾರ ಜಿಲ್ಲೆಯ ಖೆರ್ಲಾಂಜಿ ಗ್ರಾಮದಲ್ಲಿ 2006 ರ ಸೆಪ್ಟಂಬರ್ 29 ರಂದು ನಡೆದ ಈ ಅಮಾನುಷ ಘಟನೆ ಇಡೀ ಮನುಕುಲ ನಾಚಿಕೆಯಿಂದ ಮುದುಡಿಕೊಳ್ಳುವಂತಹದ್ದು. ಇಂದಿಗೂ ಸಮಾಜದಲ್ಲಿ ಜಾತಿ ಸಂಘಟನೆಗಳು ಎಷ್ಟು ಬಲಿಷ್ಟವಾಗಿವೆ ಮತ್ತು ಕ್ರೂರವಾಗಿವೆ ಎಂಬುದಕ್ಕೆ ಮನ ಕಲಕುವ ಈ ದುರಂತ ನಮ್ಮೆದುರು ಸಾಕ್ಷಿಯಾಗಿದೆ.

ಕಳೆದ ಜುಲೈ ತಿಂಗಳಿನಲ್ಲಿ ಮಹಾರಾಷ್ಟ್ರದ ಗಡಿಭಾಗದ ಜಿಲ್ಲೆಗಳಾದ ಗೊಂಡಿಯ ಮತ್ತು ಚಂದ್ರಾಪುರ್ ಮತ್ತು ಭಂಡಾರ ಜಿಲ್ಲೆಗಳಲ್ಲಿ ನಕ್ಸಲ್ ಚಟುವಟಿಕೆ ಕುರಿತು ಮಾಹಿತಿ ಸಂಗ್ರಹಿಸುತಿದ್ದಾಗ ಅನಿರಿಕ್ಷಿತವಾಗಿ ಈ ಹಳ್ಳಿಗೆ ಬೇಟಿ ನೀಡುವ ಸಂದರ್ಭ ಒದಗಿ ಬಂದಿತು. ನನಗೆ ಖೆರ್ಲಾಂಜಿ ಘಟನೆ ಗೊತ್ತಿತ್ತೇ ಹೊರತು, ಆ ಹಳ್ಳಿ ಭಂಡಾರ ಜಿಲ್ಲೆಯಲ್ಲಿ ಇದೆ ಎಂಬುದು ತಿಳಿದಿರಲಿಲ್ಲ.

ಜುಲೈ ಮೊದಲ ವಾರ ಭಂಡಾರ ಪಟ್ಟಣದ ಪ್ರಥಮ ದರ್ಜೆ ಕಾಲೇಜೊಂದಕ್ಕೆ ಬೇಟಿ ನೀಡಿ, ಅಲ್ಲಿನ ಅಧ್ಯಾಪಕರ ಜೊತೆ ಭಂಡಾರ ಜಿಲ್ಲೆಯಲ್ಲಿ ನಕ್ಸಲ್ ಚಟುವಟಿಕೆ ಹಬ್ಬಲು ಕಾರಣವಾದ ಅಂಶಗಳನ್ನು ಚರ್ಚಿಸುತಿದ್ದೆ. ಅಲ್ಲಿನ ಅಧ್ಯಾಪಕ ಮಿತ್ರರು ಭಂಡಾರ ಜಿಲ್ಲೆಯ ದಲಿತರು ಮತ್ತು ಆದಿವಾಸಿಗಳ ಮೇಲಿನ ದೌರ್ಜನ್ಯ ಕುರಿತು ಮಾತನಾಡುತ್ತಾ ಖೆರ್ಲಾಂಜಿ ಘಟನೆಯನ್ನು ವಿವರಿಸಿದಾಗ, ಭಾರತದ ಕಪ್ಪು ಇತಿಹಾಸದಲ್ಲಿ ಧಾಖಲಾಗಿರುವ ಈ ನತದೃಷ್ಟ ಗ್ರಾಮ ಭಂಡಾರ ಜಿಲ್ಲೆಯಲ್ಲಿದೆ ಎಂಬುದು ನನಗೆ ತಿಳಿಯಿತು. ಕಾಂಬ್ಳೆ ಎಂಬ ಮರಾಠಿ ಉಪನ್ಯಾಸಕ ಮಿತ್ರ ತನ್ನ ಮೋಟಾರ್ ಬೈಕ್‌ನಲ್ಲಿ ಈ ಗ್ರಾಮಕ್ಕೆ ಕರೆದೊಯ್ದು ಅಂದಿನ ಕರಾಳ ಕೃತ್ಯವನ್ನು ವಿವರಿಸಿದ.

ಮಧ್ಯಪ್ರದೇಶದ ಬಾಳ್‌ಘಾಟ್ ಜಿಲ್ಲೆಗೆ ಹೊಂದಿಕೊಂಡಿಂತೆ ಇರುವ ಭಂಡಾರ ಜಿಲ್ಲೆ ಇವತ್ತಿಗೂ ಮಹಾರಾಷ್ಟ್ರದ ಅತ್ಯಂತ ಹಿಂದುಳಿದ ಜಿಲ್ಲೆಗಳಲ್ಲಿ ಒಂದು. ಚಂದ್ರಭಾಗ ಎಂಬ ನದಿಯ ಕಾರಣ ಒಂದಿಷ್ಟು ಪ್ರದೇಶ ನೀರಾವರಿಗೆ ಒಳಪಟ್ಟಿದೆ. ಜಿಲ್ಲಾ ಕೇಂದ್ರವಾದ ಭಂಡಾರದಿಂದ 26 ಕಿಲೋಮೀಟರ್ ದೂರವಿರುವ ಖೆರ್ಲಾಂಜಿ ಗ್ರಾಮ ಬಹುತೇಕ ಹಿಂದುಳಿದ ಜಾತಿಯ ಜನರು ವಾಸಿಸುವ ಒಂದು ಕುಗ್ರಾಮ. ಕುಣಬಿ ಎಂಬ ಹಿಂದುಳಿದ ಜನಾಂಗದ ಪ್ರಾಬಲ್ಯವಿರುವ ಈ ಗ್ರಾಮದಲ್ಲಿ ಒಂದಿಷ್ಟು ಮಂದಿ ದಲಿತರಿದ್ದು ಅವರೆಲ್ಲಾ ವಿದ್ಯಾವಂತರಾಗಿರುವುದು ವಿಶೇಷ. ದಲಿತರ ಪಾಲಿನ ಸ್ವಾಭಿಮಾನ ಮತ್ತು ಆತ್ಮ ಸಾಕ್ಷಿಯಂತಿರುವ ಡಾ. ಅಂಬೇಡ್ಕರ್ ಇದೇ ನಾಗಪುರ ಪ್ರಾಂತ್ರಕ್ಕೆ ಸೇರಿದ ಮೂಲದವರು ಎಂಬ ಹೆಮ್ಮೆ ಈ ಭಾಗದ ದಲಿತರಿಗೆ ಇಂದಿಗೂ ಹೆಮ್ಮೆಯ ವಿಷಯವಾಗಿದೆ. ಹಾಗಾಗಿ ಅಂಬೇಡ್ಕರ್ ರವರಿಂದ ಪ್ರೇರಿತವಾಗಿರುವ ಪ್ರತಿಯೊಂದು ದಲಿತ ಕುಟುಂಬದಲ್ಲಿ ವಿದ್ಯಾವಂತ ಯುವ ತಲೆಮಾರು ಇರುವುದು ಇಲ್ಲಿಯ ವಿಶೇಷ.

ಖೆರ್ಲಾಂಜಿ ಗ್ರಾಮದ ಬಯ್ಯಲಾಲ್ ಬೂತ್‌ಮಾಂಗೆ ಎಂಬ ದಲಿತ ಕುಟುಂಬದ ಸದಸ್ಯರೆಲ್ಲರೂ ವಿದ್ಯಾವಂತರಾಗಿದ್ದು, ಬೌದ್ಧ ಧರ್ಮಕ್ಕೆ ಸೇರ್ಪಡೆಯಾಗಿ ಹಳ್ಳಿಯ ಜನರ ನಡುವೆ ಸ್ವಾಭಿಮಾನದ ಬದುಕನ್ನು ಕಂಡುಕೊಂಡಿದ್ದರು. ಬಯ್ಯಾಲಾಲ್‌ಗೆ ಐದು ಎಕರೆ ನೀರಾವರಿ ಭೂಮಿ ಇದ್ದ ಕಾರಣ ತಮ್ಮ ಇಬ್ಬರು ಗಂಡು ಮಕ್ಕಳು ಮತ್ತು ಒಬ್ಬ ಹೆಣ್ಣು ಮಗಳಿಗೆ ಉನ್ನತ ಶಿಕ್ಷಣ ಕೊಡಿಸುವಲ್ಲಿ ಯಶಸ್ವಿಯಾಗಿದ್ದ. ಜೊತೆಗೆ ಪತ್ನಿ ಸುರೇಖ ಕೂಡ ಪಿ.ಯು.ಸಿ. ವರೆಗೆ ಓದಿದ್ದ ಹೆಣ್ಣುಮಗಳಾಗಿದ್ದಳು. ಯಾವುದೇ ಅನ್ಯಾದ ವಿರುದ್ಧ ಸಿಡಿದೇಳುವ ಶಕ್ತಿಯನ್ನು ಈ ದಲಿತ ಕುಟುಂಬ ಹೊಂದಿರುವುದನ್ನು ಕಂಡು ಕೆಲವು ಮೇಲ್ಜಾತಿ ಜನರ ಕಣ್ಣುಗಳು ಕೆಂಪಾಗಿದ್ದವು.

ಭಂಡಾರ ಜಿಲ್ಲೆಯಲ್ಲಿ ಇನ್ನೊಂದು ಹಿಂದುಳಿತ ಜಾತಿಗೆ ಸೇರಿದ ಕುಣುಬಿ ಜನಾಂಗ ರಾಜಕೀಯವಾಗಿ ಪ್ರಾಬಲ್ಯ ಸಾಧಿಸಿತ್ತು. ಬಹುತೇಕ ವಿಧಾನ ಸಭಾಕ್ಷೇತ್ರಗಳು, ಗ್ರಾಮ ಪಂಚಾಯಿತು, ತಾಲ್ಲೋಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿಗಳು ಈ ಜಾತಿಗೆ ಸೇರಿದ ಜನಪ್ರತಿನಿಧಿಗಳ ಸ್ವತ್ತಾಗಿದ್ದವು.

ಬಯ್ಯಾಲಾಲ್ ಬೂತ್‌ಮಾಂಗೆ ತನ್ನ ಜಮೀನಿಗೆ ಸಂಬಂಧಪಟ್ಟ ವಿವಾದಕ್ಕೆ ತನ್ನ ಹಳ್ಳಿಯ ಕುಣುಬಿ ಜನಾಂಗದ ಸದಸ್ಯರ ಮೇಲೆ ಮೊಕದ್ದಮೆ ದಾಖಲಿಸಿದ ಪರಿಣಾಮವಾಗಿ ಇತಿಹಾಸ ಕಂಡರಿಯದ ಅಮಾನವೀಯ ರೀತಿಯಲ್ಲಿ ಖೆರ್ಲಾಂಜಿಯಲ್ಲಿ ದಲಿತ ಕುಟುಂಬದ ನರಮೇಧವೊಂದು ನಡೆದು ಹೋಯಿತು.

2006 ರ ಸೆಪ್ಟಂಬರ್ 29 ರಂದು ಬಯ್ಯಾಲಾಲ್ ತನ್ನ ಜಮೀನಿಗೆ ಹೋದ ಸಂದರ್ಭದಲ್ಲಿ ನೇರವಾಗಿ ಅವನ ಮನೆಗೆ ನುಗ್ಗಿದ ಕುಣಬಿ ಜನಾಂಗದ ಸದಸ್ಯರು ಪತ್ನಿ ಸುರೇಖ ಮತ್ತು ಮಗಳು 19 ವರ್ಷದ ಪ್ರಿಯಾಂಕಳನ್ನು ಮನೆಯಿಂದ ಹೊರೆಗೆ ಎಳೆದು ತಂದು ಅವರನ್ನು ನಗ್ನಗೊಳಿಸಿ ಖೆರ್ಲಾಂಜಿ ಹಳ್ಳಿಯ ನಡುರಸ್ತೆಯಲ್ಲಿ ಮೆರವಣಿಗೆ ಮಾಡಿದರು. ಇದನ್ನು ತಡೆಯಲು ಬಂದ ಇಬ್ಬರು ಗಂಡು ಮಕ್ಕಳಾದ ಕಿಶನ್ ಮತ್ತು ಸುಧೀರ್  ಅವರನ್ನು ಸಹ ಅರನಗ್ನಗೊಳಿಸಿ, ಥಳಿಸಿ ಮರೆವಣಿಗೆಯಲ್ಲಿ ಕೊಂಡೊಯ್ದರು. ಊರಿನ ಮಧ್ಯಭಾಗಕ್ಕೆ ಈ ಅಮಾಯಕರನ್ನು ಕರೆತಂದ ಜನ ಮನಬಂದಂತೆ ಥಳಿಸಿ, ಕಾಲಿನಿಂದ ಒದ್ದು ಜೀವ ಹೋಗುವವರೆಗೂ ತುಳಿದರು. ಕ್ಷಣದಲ್ಲಿ ಜಾತಿಯ ದೆವ್ವ ಮೆಟ್ಟಿದವರಂತೆ ವರ್ತಿಸುತಿದ್ದ ಕುಣಬಿ ಜನಾಂಗದ ಈ ಅಮಾನುಷ ಕೃತ್ಯವನ್ನು ತಡೆಯುವ ಶಕ್ತಿ ಆ ಹಳ್ಳಿಯಲ್ಲಿ ಯಾರಿಗೂ ಇರಲಿಲ್ಲ. ಎಲ್ಲರೂ ಮೌನವಾಗಿ ಈ ನರಮೇಧಕ್ಕೆ ಸಾಕ್ಷಿಯಾದರು. ಒಬ್ಬ ಮಗನ (ಸುಧೀರ್) ಶವವನ್ನು ಊರಾಚೆಗಿನ ಕಾಲುವೆಗೆ ತೆಗೆದುಕೊಂಡು ಹೋಗಿ ಬಿಸಾಡಿದರು. ಈ ಘಟನೆಯ ವೇಳೆ ಬಯ್ಯಾಲಾಲ್ ಮನೆಯಲ್ಲಿ ಇಲ್ಲದ ಕಾರಣ ಅವನ ಜೀವ ಮಾತ್ರ ಉಳಿಯಿತು. (ಅಲ್ಲಿ ಸಂಗ್ರಹಿಸಿಕೊಂಡು ಬಂದ ಚಿತ್ರಗಳೇ ಘಟನೆಯ ಭೀಕರತೆಯನ್ನು ಹೇಳುತ್ತವೆ.)

ದುರಂತವೆಂದರೆ, ಇಡೀ ಭಾರತವೇ ನಾಚಿ ತಲೆ ತಗ್ಗಿಸುವಂತಹ ಈ ಘಟನೆ ನಡೆದರೂ ಇದು ಯಾವುದೇ ಪತ್ರಿಕೆಯಲ್ಲಿ, ಅಥವಾ ದೃಶ್ಯ ಮಾಧ್ಯದಲ್ಲಿ ಮೊದಲ ನಾಲ್ಕು ದಿನಗಳ ಕಾಲ ಸುದಿಯಾಗಲಿಲ್ಲ. ನಾಗಪುರದ ಟೈಮ್ಸ್ ಆಪ್ ಇಂಡಿಯಾದ ಪ್ರತಿನಿಧಿ ಸಬ್ರಿನಾ ಬರ್‌ವಾಲ್ಟರ್ ಎಂಬುವರು ಈ ಹಳ್ಳಿಗೆ ತೆರಳಿ, ಅಲ್ಲಿನ ಕೆಲವು ದಲಿತ ಯುವಕರು ತೆಗೆದಿದ್ದ ಛಾಯಾ ಚಿತ್ರಗಳನ್ನು ಸಂಗ್ರಹಿಸಿ ರಾಷ್ಟ್ರ ಮಟ್ಟದಲ್ಲಿ ಸುದ್ಧಿಮಾಡಿದಾಗ ಇಡೀ ದೇಶವೇ ಬೆಚ್ಚಿ ಬಿದ್ದಿತು. ನಂತರ ನಾಗಪುರದಲ್ಲಿ ದಲಿತ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸಿ, ಹಿಂಸೆಗೆ ಇಳಿದಾಗ ಎಚ್ಚೆತ್ತುಕೊಂಡ ಮಹಾರಾಷ್ಟ್ರ ಸರ್ಕಾರ ಘಟನೆಯನ್ನು ಸಿ.ಬಿ.ಐ. ಗೆ ವಹಿಸಿತು. ನಂತರ ರಾಷ್ಟ್ರ ಮಟ್ಟದಲ್ಲಿ ಅನೇಕ ಸ್ವತಂತ್ರ ತನಿಖಾ ಆಯೋಗಗಳು ಖೇರ್ಲಾಂಜಿ ಗ್ರಾಮಕ್ಕೆ ಬೇಟಿ ನೀಡಿ ಮಾಹಿತಿ ಸಂಗ್ರಹಿಸಿದವು. ಘಟನೆಯ ಹಿಂದೆ ಕುಣಭಿ ಜಾತಿಗೆ ಸೇರಿದ್ದ ಸ್ಥಳಿಯ ಬಿ.ಜೆ.ಪಿ. ಶಾಸಕ ಕುರ್ಡೆಯ ಕೈವಾಡವಿದೆ ಎಂದು ಸಹ ಅನೇಕ ಸಂಘಟನೆಗಳು ಆರೋಪಿಸಿದ್ದವು.

ಸಿ.ಬಿ.ಐ. ಪ್ರಕರಣಕ್ಕೆ ಸಂಬಂಧಿಸಿದಂತೆ 24 ಮಂದಿಯನ್ನು ಬಂಧಿಸಿತು. 2008ರಲ್ಲಿ ಭಂಡಾರ ಜಿಲ್ಲಾ ನ್ಯಾಯಾಲಯ 24 ಬಂಧಿತ ಆರೋಪಿಗಳಲ್ಲಿ ಎಂಟು ಮಂದಿಗೆ ಗಲ್ಲು ಶಿಕ್ಷೆ ಮತ್ತು ಆರು ಮಂದಿಗೆ 25 ವರ್ಷಗಳ ಕಠಿಣ ಶಿಕ್ಷೆ ವಿಧಿಸಿ, ಉಳಿದವರನ್ನು ಸಾಕ್ಷಾಧಾರಗಳ ಕೊರತೆಯ ಮೇಲೆ ಖುಲಾಸೆಗೊಳಿಸಿತು. ಆರೋಪಿಗಳು ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ, ನಾಗಪುರದ ವಿಭಾಗೀಯ ಹೈಕೋರ್ಟ್ ಪೀಠದ ಮೆಟ್ಟಿಲೇರಿದಾಗ, ವಿಭಾಗೀಯ ಪೀಠ ಭಂಡಾರದ ಜಿಲ್ಲಾ ನ್ಯಾಯಾಲಯದ ತೀರ್ಪನ್ನು 2008ರ ಜುಲೈನಲ್ಲಿಎತ್ತಿ ಹಿಡಿಯಿತು. ಮತ್ತೇ ಅರೋಪಿಗಳು ಮುಂಬೈ ಹೈಕೋರ್ಟ್ ನ್ಯಾಯಾಲಯದ ಕದತಟ್ಟಿದರು. ಮುಂಬೈ ಉಚ್ಛ ನ್ಯಾಯಾಲಯ ಗಲ್ಲು ಶಿಕ್ಷೆಗೆ ಒಳಗಾಗಿದ್ದ ಎಂಟು ಮಂದಿ ಆರೋಪಿಗಳಲ್ಲಿ ಆರುಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿ, ಕೇವಲ ಇಬ್ಬರಿಗೆ ಮಾತ್ರ ಗಲ್ಲು ಶಿಕ್ಷೆ ವಿಧಿಸಿತು. ಈ ಕುರಿತು ಈಗ ನರಮೇಧದಲ್ಲಿ ಉಳಿದ ದಲಿತ ಬಯ್ಯಾಲಾಲ್ ಮುಂಬೈ ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾನೆ. ಜೊತೆಗೆ ಜೀವ ಭಯದಿಂದ ತನ್ನೂರಾದ ಖೆರ್ಲಾಂಜಿಯನ್ನು ತೊರೆದಿದ್ದಾನೆ. ಇವನಿಗೆ ಮಹಾರಾಷ್ಟ್ರ ದ ದಲಿತ ಚಿಂತಕ ಹಾಗೂ ಲೇಖಕ ಆನಂದ್ ತೇಲ್ತುಬ್ಡೆ ಆಸರೆಯಾಗಿ ನಿಂತು ಹೋರಾಟ ನಡೆಸುತಿದ್ದಾರೆ.

ಜಾತಿಪದ್ಧತಿಯ ವಿನಾಶಕ್ಕೆ ಹನ್ನೊಂದನೇ ಶತಮಾನದ ಬಸವಣ್ಣ ನಿಂದ ಹಿಡಿದು 20ನೇ ಶತಮಾನದ ಗಾಂಧಿ, ಅಂಬೇಡ್ಕರ್, ಲೋಹಿಯಾ ವರೆಗೆ ಅನೇಕ ಮಹನೀಯರು ಜೀವನ ಪೂರ್ತಿ ಹೊರಾಡಿದರೂ ಅದು ಹಲವು ರೂಪಗಳಲ್ಲಿ ಮೈದಾಳುತ್ತ್ತಾ ಮನುಕುಲಕ್ಕೆ ಸವಾಲಾಗುತ್ತಾ ನಿಂತಿರುವುದಕ್ಕೆ ಈ ಖೆರ್ಲಾಂಜಿ ಘಟನೆ ಸಾಕ್ಷಿಯಾಗಿದೆ. ಇತ್ತೀಚೆಗಿನ ದಶಕದಲ್ಲಿ ಜಾತಿ ಎಂಬುದು ಎಲ್ಲಾ ರಾಜಕೀಯ ಪಕ್ಷಗಳ ಮಾಂಸ, ಮಜ್ಜೆ ಮತ್ತು ರಕ್ತವಾಗಿ ಎಲ್ಲಾ ಅಧಿಕಾರಸ್ಥ ಜನಗಳ ಮತ್ತು ಜನಪ್ರತಿನಿಧಿಗಳ ನರನಾಡಿಗಳಲ್ಲಿ ಹರಿಯುತ್ತಿರುವುದನ್ನು ಗಮನಿಸಿದರೆ, ಭವಿಷ್ಯ ಭಾರತದ ಬಗ್ಗೆ ಯಾವ ಆಶಯ ಮತ್ತು ಕನಸುಗಳು ಪಜ್ಞಾವಂತರ ಎದೆಯಲ್ಲಿ ಈಗ ಹಸಿರಾಗಿ ಉಳಿದಿಲ್ಲ. ಉಳಿಯುವ ಸಾಧ್ಯತೆಗಳು ಕೂಡ ಇಲ್ಲ.

3 thoughts on “ಖೆರ್ಲಾಂಜಿ ನರಮೇಧದ ನೆನಪುಗಳು

  1. Subash Rajamane

    ಖೈರ್ಲಾಂಜಿಯ ಈ ಅಮಾನುಷವಾದ ಘಟನೆಯನ್ನು ಕುರಿತು ವಿಸ್ತಾರವಾದ ಪುಸ್ತವನ್ನೆ ಬರೆದ ಆನಂದ ತೇಲ್ತುಂಬ್ಡೆ ಅವರು ಇದು ದೇಶವ್ಯಾಪಿ ಚರ್ಚೆಯಾಗುವಂತೆ ಮಾಡಿದ್ದರು.ದಲಿತ ಬೂತ್ ಮಾಂಗೆ ಕುಟುಂಬದ ಮೇಲಿನ ಅತ್ಯಾಚಾರ ಮತ್ತು ಹತ್ಯೆಗೆ ಬೆಂಬಲವಾಗಿದ್ದವರು ಅಲ್ಲಿನ ಮೇಲ್ಜಾತಿಯ ಜನರು.ಅಷ್ಟೆ ಅಲ್ಲ ಇದರಲ್ಲಿ ಆ ಊರಿನ ರಾಜಕಾರಣಿಗಳ ಕೈವಾಡವೂ ಇತ್ತು.ದಲಿತರ ಬದುಕುವ ಹಕ್ಕನ್ನೆ ನಾಶಮಾಡುವ ಇಂತಹ ಅಮಾನುಷವಾದ ದೌರ್ಜನ್ಯಗಳು ಖಂಡನೀಯ.ಜಗದೀಶ ಕೊಪ್ಪ ಅವರು ಸ್ವತಃ ಖೈರ್ಲಾಂಜಿಗೆ ಭೇಟಿ ನೀಡಿ ಈ ಘಟನೆಯನ್ನು ನೆನಪಿಸಿ ಮತ್ತೆ ಚರ್ಚೆಯಾಗುಂತೆ ಮಾಡಿರುವುದಕ್ಕೆ ಧನ್ಯವಾದಗಳು.

    Reply
  2. thimmesh (thilak)

    ಡಾ.ಎನ್.ಜಗದೀಶ್ ಕೊಪ್ಪ ರವರಿಗೆ ಧನ್ಯವಾದಗಳು. ಇಂತಹ ಘಟನೆ ಅಮಾನವೀಯ. ಕೇವಲ ಮಹಾರಾಷ್ಟ್ರದಲ್ಲಷ್ಟೇ ಅಲ್ಲ ಭಾರತದ ಕೆಲವು ಮೇಲ್ಜಾತಿಯ ಆಡಳಿತಕ್ಕೊಳಪಟ್ಟ ಪ್ರದೇಶಗಳಲ್ಲೂ ನಡೆದಿದೆ. ಇಂತಹ ಘಟನೆಗಳಿಂದ ಸಂವೇದನಾಶೀಲ ಮನಸ್ಸುಗಳಿಗೆ ತುಂಬಾ ನೋವುಂಟಾಗುತ್ತಿದೆ. ಇಂತಹ ಘಟನೆಗಳಿಂದ ಸಂವೇದನಾ ಶೀಲ ಮನಸ್ಸುಗಳು ಜಾಗೃತವಾಗುತ್ತವೆ.

    Reply

Leave a Reply

Your email address will not be published. Required fields are marked *