ಸಿರಿಗೆರೆ ಶ್ರೀ ವಿಚಾರ : ಹೇಳದೇ ಉಳಿದುಕೊಂಡ ವಿಷಯಗಳು

-ಜಿ.ಮಹಂತೇಶ್

ನಿವೃತ್ತಿ ಹಿಂತೆಗೆತ ನಿರ್ಧಾರ :

ಸಿರಿಗೆರೆ ಶ್ರೀಗಳು ಪೀಠದಿಂದ ಸ್ವಯಂ ನಿವೃತ್ತಿ ಘೋಷಿಸಿದ ದಿನವೇ ನಿವೃತ್ತಿ ನಿರ್ಧಾರವನ್ನು ಹಿಂದಕ್ಕೆ ತೆಗೆದುಕೊಂಡ ಪ್ರಸಂಗ, ಬಿಟ್ಟ ಬಾಣವನ್ನು ಮತ್ತದೇ ಸಿರಿಗೆರೆ ಬತ್ತಳಿಕೆಯೊಳಗೆ ಮರಳಿದಂತಿದೆ. ತುಂಬಿದ ಸಭೆಯಲ್ಲಿ ಶ್ರೀಗಳು ಒಂದಷ್ಟು ಹೊತ್ತು ಭಾವುಕರಾದ ಹಿನ್ನೆಲೆಯಲ್ಲಿ ಅಲ್ಲಿ ಕಣ್ಣೀರ ಸಾಗರವೇ ಹರಿದಿತ್ತು. ಇನ್ನೇನು ಇಡೀ ಸಾಗರ ಉಕ್ಕಿ ಹರಿಯಲಿದೆ ಎಂದು ಭಾವಿಸುತ್ತಿದ್ದಂತೆ, ಇಡೀ ಸಾಗರವನ್ನೇ ತನ್ನೊಳಗೆ ಇಂಗಿಸಿಕೊಂಡಿರುವುದು ಸಿರಿಗೆರೆ ಮಣ್ಣಿನ ವೈಶಿಷ್ಟ್ಯ.

ಡಾ.ಶಿವಮೂರ್ತಿ ಶಿವಾಚಾರ್ಯ ಶ್ರೀಗಳ ಸ್ವಯಂ ನಿವೃತ್ತಿ ನಿರ್ಧಾರ ಪ್ರಕಟಿಸುತ್ತಿದ್ದಂತೆ ಜನಪ್ರಿಯ ಪತ್ರಿಕೆಯೊಂದು, ಇದನ್ನೇ ಮಾದರಿಯಾಗಿಟ್ಟುಕೊಂಡು 60 ವರ್ಷ ವಯೋಮಿತಿ ಮೀರಿದ ರಾಜಕಾರಣಿಗಳೇಕೆ ನಿರ್ಧಾರ ಪ್ರಕಟಿಸಬಾರದು ಎಂದು ಜನಮತ ನಡೆಸಿತ್ತು. 60 ವರ್ಷ ವಯೋಮಿತಿ ಮೀರಿದ ರಾಜಕಾರಣಿಗಳ ಪಟ್ಟಿಯಲ್ಲಿ ಸಿರಿಗೆರೆ ಮಠದ ಆದ್ಯ  ಭಕ್ಕರಲ್ಲೊಬ್ಬರಾಗಿರುವ ಡಾ.ಶಾಮನೂರು ಶಿವಶಂಕರಪ್ಪ,  ಯಡಿಯೂರಪ್ಪ ಅವರಂಥ ‘ಧೀಮಂತ’ ರಾಜಕಾರಣಿಗಳ್ಯಾರು ಜನಮತವನ್ನು ಕೇಳಿಸಿಕೊಳ್ಳದಿರುವುದು ನಿಜಕ್ಕೂ ವಿಪರ್ಯಾಸ.

ಸ್ವಯಂ ನಿವೃತ್ತಿ ಘೋಷಣೆ ಮತ್ತು ಭಕ್ತರು ಹಾಕಿದ ಒತ್ತಡದಿಂದ ನಿವೃತ್ತಿಯಿಂದ ಹಿಂದೆ ಸರಿದ (ಉತ್ತರಾಧಿಕಾರಿ ಆಯ್ಕೆ ಆಗುವವರೆಗೆ) ಈ ಪ್ರಸಂಗದ ಮೂಲಕ ಸಿರಿಗೆರೆ ಸಾಮ್ರಾಜ್ಯದಲ್ಲಿ ಮತ್ತೊಮ್ಮೆ ವಿಜೃಂಭಿಸಿದ್ದು ಮತ್ತದೇ ಡಾ.ಶಿವಮೂರ್ತಿ ಶಿವಾಚಾರ್ಯ ಶ್ರೀಗಳು. ಇದೇ ಸಂದರ್ಭದಲ್ಲಿ ಇದಕ್ಕೆ ಸಂಬಂಧಿಸಿದಂತೆ ಪರಿಚಿತರೊಬ್ಬರು ಇನ್ನೊಂದು ಸುದ್ದಿಯತ್ತ ಗಮನ ಸೆಳೆದರು.  ’ಡಾ.ಶಿವಮೂರ್ತಿ ಶಿವಾಚಾರ್ಯ ಶ್ರೀಗಳು ನಿವೃತ್ತಿ ಘೋಷಿಸುವ ಮೊದಲೇ,  ಅಂದರೆ ಅದಕ್ಕೆ ಒಂದೆರಡು ದಿನಗಳ ಹಿಂದೆ ಸಾಣೆಹಳ್ಳಿ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು  “ವಿಜಯ ವಾಣಿ” ಪತ್ರಿಕೆಯಲ್ಲಿ  ಹಿಂದಿನ ದೊಡ್ಡ ಗುರುಗಳು 60ನೇ ವಯಸ್ಸಿಗೇ ನಿವೃತ್ತಿಯಾದ ಬಗ್ಗೆ ಪ್ರಸ್ತಾಪಿಸಿ ಬರೆದಿದ್ದರು.  ಬಹುಶಃ ಅವರ ಬರಹದಿಂದ ಕ್ರುದ್ಧರಾಗಿ ಡಾ.ಶಿವಮೂರ್ತಿ ಶಿವಾಚಾರ್ಯ ಶ್ರೀಗಳು ನಿವೃತ್ತಿ ಹೊಂದುವ ಹಂಬಲವನ್ನು ವ್ಯಕ್ತಪಡಿಸಿರಬಹುದು,’ ಎಂದು.

ಚನ್ನಗಿರಿ ತಾಲೂಕಿನ ಸಾಣೆಹಳ್ಳಿಯ ಈ ಮಠ, ಸಿರಿಗೆರೆಯ ಶಾಖಾ ಮಠ. ಪಂಡಿತಾರಾಧ್ಯರು, ಡಾ.ಶಿವಮೂರ್ತಿ ಶಿವಾಚಾರ್ಯರಂತಲ್ಲ. ಒಂದಷ್ಟು ಸ್ವಾಮೀಜಿಗಳಿಗೆ ಮೇಲ್ಪಂಕ್ತಿ ಹಾಕಿಕೊಟ್ಟವರು. ಮಾಮೂಲಿ ಸಾಣೆಹಳ್ಳಿಯನ್ನು ರಂಗಕರ್ಮಿಗಳ ಹಳ್ಳಿಯನ್ನಾಗಿಸಿದ್ದು ಇವರ ವಿಶೇಷ. ಸಿ.ಜಿ.ಕೃಷ್ಣಸ್ವಾಮಿ ಅವರಂಥ ರಂಗಕರ್ಮಿಯಿಂದ ನಿಜವಾದ ಅರ್ಥದಲ್ಲಿ ಕೆಲಸ ತೆಗೆಸಿದ್ದ ಪಂಡಿತಾರಾಧ್ಯರು, ಡಾ. ಶಿವಮೂರ್ತಿ ಶಿವಾಚಾರ್ಯ ಶ್ರೀಗಳ ಅಥವಾ ಸಿರಿಗೆರೆ ಪ್ರಧಾನ ಮಠದ ಸಾಂಸ್ಕೃತಿಕ ಮುಖ ಎಂದರೇ ತಪ್ಪೇನಿಲ್ಲ. ಇವರ ಜೊತೆಗಿನ ಒಡನಾಟದಿಂದಾಗಿಯೇ ಹಲವಾರು ಪ್ರಗತಿಪರರು ಸಿರಿಗೆರೆ ಮಠದ ಬಗ್ಗೆ ಮತ್ತು  ಡಾ.ಶಿವಮೂರ್ತಿ ಶಿವಾಚಾರ್ಯರ ಪಾಳೇಗಾರಿಕೆ ಮತ್ತು ಪ್ರತಿಗಾಮಿ ನಿಲುವುಗಳ ಬಗ್ಗೆ, ಅವರು ನಡೆಸುವ ಶಿಕ್ಷಣ ಸಂಸ್ಥೆಗಳ ಬಗ್ಗೆ ಭಿನ್ನಾಭಿಪ್ರಾಯ ತೋರಿಸದೆ ಇರುತ್ತಾರೆ.

ಪ್ರಾಣಿ ಬಲಿ ನಿಷೇಧ :

ಅಷ್ಟೇ ಅಲ್ಲ. ಮೌಢ್ಯತೆ, ಪ್ರಾಣಿ ಬಲಿ ವಿರುದ್ಧ ದೊಡ್ಡ ದನಿಯಲ್ಲದಿದ್ದರೂ ಸಣ್ಣ ದನಿಯನ್ನು ಪಂಡಿತಾರಾಧ್ಯರು ಎತ್ತಿದ್ದಾರೆ. ಇದಕ್ಕೆ ಅವರನ್ನ ಅಭಿನಂದಿಸಲೇಬೇಕು. ದಾವಣಗೆರೆಯಲ್ಲಿ ಲಾಗಾಯ್ತಿನಿಂದಲೂ ನಡೆಯುತ್ತಿರುವ ದುರ್ಗಾಂಬಿಕಾ ಜಾತ್ರಾ ಮಹೋತ್ಸವದಲ್ಲಿ ಕೋಣ ಬಲಿ ಕೊಡುವುದರ ವಿರುದ್ಧ ದನಿ ಎತ್ತುವ ಮೂಲಕ ಪ್ರಥಮ ಬಾರಿಗೆ ದನಿ ಎತ್ತಿ, ಕಳಕಳಿ ವ್ಯಕ್ತಪಡಿಸಿದ್ದರು. ಆದರೆ, ಸಿರಿಗೆರೆಯ ಡಾ.ಶಿವಮೂರ್ತಿ ಶಿವಾಚಾರ್ಯರು ಇವರಿಗೆ ಬೆಂಬಲಿಸಿದ್ದರ ಬಗ್ಗೆ ಎಲ್ಲಿಯೂ ಕೇಳಿ ಬರಲಿಲ್ಲ. ಕನಿಷ್ಠ ಉಸಿರೆತ್ತಲಿಲ್ಲ ಎನ್ನುವುದನ್ನು ಇಲ್ಲಿ ಗಮನಿಸಬೇಕು.

ಅಂದ ಹಾಗೇ, ದುರ್ಗಾಂಬಿಕೆಗೆ ಕೋಣ ಬಲಿ ಕೊಡುವ ಪದ್ಧತಿ ಇವತ್ತು ನೆನ್ನೆಯದಲ್ಲ. ತಲ ತಲಾಂತರಗಳಿಂದಲೂ ನಡೆದು ಬರುತ್ತಿದೆ. ಇದೆಲ್ಲಾ ಗೊತ್ತಿದ್ದರೂ ಕೂಡ ಸಿರಿಗೆರೆಯ ಡಾ.ಶಿವಮೂರ್ತಿ ಶ್ರೀಗಳಾಗಲೀ, ಪಂಡಿತಾರಾಧ್ಯ ಶ್ರೀಗಳಾಗಲೀ ತುಂಬಾ ಮೊದಲೇ ಕೋಣ ಬಲಿಯನ್ನ ನಿಷೇಧಿಸಲು ಅರಿವು ಮೂಡಿಸಬಹುದಿತ್ತು. ಇಷ್ಟು ವರ್ಷಗಳ ಕಾಲ ಸುಮ್ಮನಿದ್ದ ಶ್ರೀಗಳು, 60ರ ಇಳಿ ವಯಸ್ಸಿನಲ್ಲಿ ಅದೂ ದಿಢೀರ್ ಎಂದು ಕೋಣ ಬಲಿ ನಿಷೇಧಿಸುವುದರ ಬಗ್ಗೆ ದನಿ ಎತ್ತಿದ್ದರ ಹಿಂದೆ ಒಂದಷ್ಟು ಪ್ರಶ್ನೆಗಳಿವೆ. ಇಲ್ಲಿ ಪ್ರಶ್ನೆಗಳಿರುವುದು ಕೋಣ ಬಲಿ ವಿರುದ್ಧ ದನಿ ಎತ್ತಿದ್ದಕ್ಕಲ್ಲ. ದನಿ ಎತ್ತಿರುವ ಕಾಲಘಟ್ಟದ ಬಗ್ಗೆ.

ಇದೇ ದುರ್ಗಾಂಬಿಕ ಜಾತ್ರಾ ಮಹೋತ್ಸವ ಸಮಿತಿಯಲ್ಲಿ ಪ್ರಮುಖ ಸ್ಥಾನದಲ್ಲಿರುವ ಸ್ಥಳೀಯ ಶಾಸಕ ಡಾ.ಶಾಮನೂರು ಶಿವಶಂಕರಪ್ಪನವರಿಗೂ ಈ ವಿಚಾರ ಗೊತ್ತಿಲ್ಲವೆಂದೇನಿಲ್ಲ. ಕೋಣ ಬಲಿ ನಿಷೇಧಿಸುವ ಬಗ್ಗೆ ನಿಜಕ್ಕೂ ಶ್ರೀಗಳಲ್ಲಿ ಇಚ್ಛಾಶಕ್ತಿ ಇದ್ದಿದ್ದರೇ ತಮ್ಮ ಮಾತುಗಳನ್ನು ಅನೂಚಾನವಾಗಿ ಪಾಲಿಸಿಕೊಂಡು ಬರುತ್ತಿರುವ ಶಾಮನೂರು ಶಿವಶಂಕರಪ್ಪನವರಿಗೆ ಈ ಬಗ್ಗೆ ತಾಕೀತು ಮಾಡಬಹುದಿತ್ತಲ್ಲ?

ಕೋಣ ಬಲಿ ಬಗ್ಗೆ ಪ್ರಸ್ತಾಪವಾಗಿರುವ ಕಾರಣದಿಂದಾಗಿ  ನರ ಬಲಿಯನ್ನೂ ಪ್ರಸ್ತಾಪಿಸುವುದು ಉಚಿತ ಎನ್ನಿಸುತ್ತದೆ. ರಾಣೆಬೆನ್ನೂರು ತಾಲೂಕಿನ ತಿರುಮಲದೇವರಕೊಪ್ಪ ಎನ್ನುವ ಸಣ್ಣ ಊರಿನಲ್ಲಿ ಸಿರಿಗೆರೆ ಮಠಕ್ಕೆ ನಡೆದುಕೊಳ್ಳುವ ಭಕ್ತನಿಂದ ದಲಿತ ಸಮುದಾಯಕ್ಕೆ ಸೇರಿರುವ ಯುವಕನನ್ನು ವಾಸ್ತು ಬದಲಿಸುವ ನೆಪದಲ್ಲಿ ಬಲಿ ತೆಗೆದುಕೊಂಡಿದ್ದರೂ (ಹಾವೇರಿ ಪೊಲೀಸರು ಈ ಪ್ರಕರಣವನ್ನ ನರಬಲಿ ಎಂದು ಕರೆಯದೇ ಅನೈತಿಕ ಸಂಬಂಧ ಎಂದು ಹಣೆಪಟ್ಟಿ ಕಟ್ಟಿ ಸಹಜ ಕೊಲೆ ಪ್ರಕರಣ ಎಂದು ಮುಚ್ಚಿ ಹಾಕಿದೆ) ಪಂಡಿತಾರಾಧ್ಯ ಶ್ರೀಗಳು ಮತ್ತು ಶಿವಮೂರ್ತಿ ಶಿವಾಚಾರ್ಯ ಶ್ರೀಗಳು ತಮ್ಮ ಭಕ್ತರಿಗೆ ಇದರ ಬಗ್ಗೆ ನಿಜವಾದ ಅರ್ಥದಲ್ಲಿ ಜಾಗೃತಿ ಮೂಡಿಸಬಹುದಿತ್ತಲ್ಲ?

ಇವರಿಬ್ಬರಷ್ಟೇ ಅಲ್ಲ. ವಿವಿಧ ಕೋಮುಗಳಿಗೆ ಸೇರಿರುವ ಯಾವ ಮಠಾಧೀಶರೂ ನರಬಲಿ ಪ್ರಕರಣವನ್ನು ಇವತ್ತಿಗೂ ಗಂಭಿರವಾಗಿ ತೆಗೆದುಕೊಳ್ಳದಿರುವುದು ನಿಜಕ್ಕೂ ವಿಷಾದ ಎನಿಸದಿರದು. ಇರಲಿ, ಸಿರಿಗೆರೆ ಮಠದಿಂದಲೇ ಯಾಕೆ ಇಂಥ ಕೆಲಸ ಆಗಬೇಕಿದೆ ಎಂದರೇ, ಈ ಮಠಕ್ಕಿರುವ ಭಕ್ತ ವೃಂದ, ಅಪಾರ ಪ್ರಮಾಣದಲ್ಲಿದೆ. ಸಹಜವಾಗಿ ಆಯಾ ಸಮುದಾಯದ ಮಂದಿ, ತಮ್ಮ ಸಮುದಾಯದ ಮಠಾಧೀಶರು ಹೇಳುವ ಮಾತುಗಳನ್ನ ಅಕ್ಷರಶಃ ಪಾಲಿಸುತ್ತಾರೆ ಎನ್ನುವ ನಂಬಿಕೆಯಿಂದ.

ಶಿಕ್ಷಣ ವ್ಯಾಪಾರೀಕರಣ, ಅನುಭವ ಮಂಟಪ :

ಇನ್ನು, ಸಿರಿಗೆರೆ ಶ್ರೀಗಳ ಬಗ್ಗೆ ಅಪಸ್ವರ ಎತ್ತಿದ್ದಕ್ಕೆ ಒಂದಷ್ಟು ಮಂದಿ ತಗಾದೆ ತೆಗೆದರು. ಅವರ ಮುಖ್ಯ ತಗಾದೆಗಳಲ್ಲಿ ಶೈಕ್ಷಣಿಕ ವಲಯದಲ್ಲಿ ಸಿರಿಗೆರೆ ಮಠ ಮಾಡಿರುವ ಕೆಲಸವನ್ನು ನೆನೆಯದಿರುವುದಕ್ಕೆ. ನಿಜಕ್ಕೂ ಹೇಳುವುದಾದರೇ ಶೈಕ್ಷಣಿಕ ವ್ಯವಸ್ಥೆಯನ್ನು ವ್ಯಾಪಾರೀಕರಣ ಮಾಡಿರುವ ಮಠಗಳಲ್ಲಿ ಸಿರಿಗೆರೆ ಮಠವೂ ಒಂದು ಎಂಬುದನ್ನ ತಗಾದೆ ಎತ್ತಿರುವವರು ಗಮನಿಸಬೇಕು.

ನಿಮಗೆ ಅನುಭವ ಮಂಟಪದ ಹೆಸರು ಗೊತ್ತಿರಬೇಕಲ್ಲ. 12ನೇ ಶತಮಾನದಲ್ಲಿ ನಿಜವಾದ ಕ್ರಾಂತಿ ಸಂಭವಿಸಿದ್ದೇ ಈ ಅನುಭವ ಮಂಟಪದ ಮೂಲಕ. ದಾವಣಗೆರೆ ನಗರದಲ್ಲಿ “ಅನುಭವ ಮಂಟಪ”ದ ಹೆಸರಿನಲ್ಲಿ ಶಾಲಾ ಕಾಲೇಜು ನಡೆಸುತ್ತಿರುವ ಸಿರಿಗೆರೆ ಮಠ, ಡೊನೇಷನ್ ಹೆಸರಿನಲ್ಲಿ ಪೋಷಕರನ್ನು ಸುಲಿಯುತ್ತಿದೆ ಎಂದು ಸ್ಥಳೀಯರು ಆರೋಪಿಸುತ್ತಾರೆ. ಅಷ್ಟು ಸುಲಭವಾಗಿ ಇಲ್ಲಿ ಪ್ರವೇಶ ದೊರೆಯುವುದಿಲ್ಲ. ಸರ್ಕಾರ ಡೊನೇಷನ್ ನಿಷೇಧಿಸಿದ್ದರೂ “ಅನುಭವ ಮಂಟಪ” ಶಾಲೆ ಮಾತ್ರ ಬೋಧನಾಶುಲ್ಕಕ್ಕೆ ಹೊರತಾದ ಡೊನೇಷನ್ ತೆಗೆದುಕೊಳ್ಳುವುದರಿಂದ ಹಿಂದೆ ಸರಿದ ಹಾಗೆ ಕಾಣುವುದಿಲ್ಲ.

ಅಣ್ಣ ಬಸವಣ್ಣನ ಆಶಯಗಳನ್ನು ಪುಂಖಾನುಪುಂಖವಾಗಿ ಉದ್ಧರಿಸುವ ಮಠಗಳಲ್ಲಿ ಸಿರಿಗೆರೆ ಮಠ ಅಗ್ರಗಣ್ಯ. ಇಂಥ ಮಠ, ಮೇಲಿನ ಮಾತುಗಳೆಲ್ಲ ನಿಜವೇ ಆದರೆ, ಶಿಕ್ಷಣವನ್ನು  ವ್ಯಾಪಾರೀಕರಣ ಮಾಡಿರುವುದು, ಅದರಲ್ಲೂ ಶಾಲೆ, ಕಾಲೇಜಿಗೆ ಅನುಭವ ಮಂಟಪ ಹೆಸರಿಟ್ಟು, ಡೊನೇಷನ್ ಹೆಸರಿನಲ್ಲಿ ವಸೂಲಿಗಿಳಿದಿರುವುದು ನಿಜಕ್ಕೂ ದುರದೃಷ್ಟಕರ. ಶಿಕ್ಷಣವನ್ನು ಅಕ್ಷರಶಃ ವ್ಯಾಪಾರೀಕರಣ ದೂಡಿರುವ ಸಿರಿಗೆರೆ ಮಠ, ಶೈಕ್ಷಣಿಕ ವಲಯಕ್ಕೆ ನೀಡಿರುವ ಕೊಡುಗೆ ಏನು ಎನ್ನುವುದನ್ನು ನಿಜ ಶರಣರು ಅರಿಯಬೇಕಿದೆ. ಎಲ್ಲಿಯ ಬಸವ ಕಲ್ಯಾಣದ ಅನುಭವ ಮಂಟಪ? ಎಲ್ಲಿಯ ಸಿರಿಗೆರೆಯ ಅನುಭವ ಮಂಟಪ?

ಇನ್ನು, ಸಿರಿಗೆರೆ ಮಠದ ಆಶ್ರಯದಲ್ಲಿರುವ ಅನುದಾನಿತ ಶೈಕ್ಷಣಿಕ ಸಂಸ್ಥೆಗಳ ನೇಮಕಾತಿಯಲ್ಲೂ ಹಣದ ಚೀಲ ತಂದವರಿಗಷ್ಟೇ ಇಲ್ಲಿ ಮನ್ನಣೆ ಎನ್ನುವ ವಾತಾವರಣ ಇದೆ ಎನ್ನುವ ಮಾತಿದೆ. ಯಾರೂ ಇದನ್ನೂ ಬಹಿರಂಗವಾಗಿ ಹೇಳಿಕೊಳ್ಳುವುದಿಲ್ಲ. ಮಠ ಕಳಿಸುವ ಪಟ್ಟಿಯನ್ನೇ ಸರ್ಕಾರ ಮಾನ್ಯ ಮಾಡಬೇಕು. ಅಂಥದ್ದೊಂದು ಅಘೋಷಿತ, ಅಲಿಖಿತ ಆಜ್ಞೆ. ಹಾಗೆಯೇ, ಪ್ರೌಢಶಾಲೆ ಸಹ ಶಿಕ್ಷಕ ಹುದ್ದೆಗೆ ಕನಿಷ್ಠ ಆರೇಳು ಲಕ್ಷ ರೂಪಾಯಿ ಕೊಟ್ಟವರಿಗಷ್ಟೇ ಮಠದ ಅನುದಾನಿತ ಶೈಕ್ಷಣಿಕ ಸಂಸ್ಥೆಗಳಲ್ಲಿ ಕೆಲಸ ಸಿಗುತ್ತದಂತೆ. ಆಕಸ್ಮಾತ್ ಹಣ ಇಲ್ಲದಿದ್ದರೇ, ಶ್ರೀಗಳು ತೋರಿಸುವ ಕನ್ಯೆಯನ್ನು ವಿವಾಹ ಆಗುವ ಮೂಲಕ ಅದನ್ನು ಸರಿದೂಗಿಸಬೇಕಂತೆ. ಈ ಮಾತುಗಳು ಕಪೋಲ ಕಲ್ಪಿತವಲ್ಲ, ಬದಲಿಗೆ  ಮಠದಲ್ಲಿ ಕೇಳಿ ಬರುವ ಪ್ರಚಲಿತ ಮಾತುಗಳು. ಇವೆಲ್ಲ ಹಿಂದಿನ ಹಿರಿಯ ಸ್ವಾಮಿಗಳನ್ನು ನೋಡಿ ಬೆಳೆದ ಈ ಮಠಕ್ಕೆ ನಡೆದುಕೊಳ್ಳುವ ಹಳೆತಲೆಮಾರಿನ ಪ್ರಾಮಾಣಿಕ ಭಕ್ತರಿಗೆ ಇರಿಸುಮುರಿಸು ಮಾಡಿದೆ ಎನ್ನುವ ಮಾತಿದೆ.

ಇವು, ಸಿರಿಗೆರೆ ಶ್ರೀಗಳು ಮತ್ತು ಶಾಖಾ ಮಠಗಳ ಶ್ರೀಗಳ ಬಗ್ಗೆ ಇರುವ ಆಕ್ಷೇಪಗಳು. ಇಂಥ ಮಠಗಳ ಪಾಲಿಗೆ ಅಣ್ಣ ಬಸವಣ್ಣ ಕೇವಲ ಒಂದು ಸರಕಷ್ಟೇ.

ಈಗ ನೀವೇ ಹೇಳಿ, ಬಸವಣ್ಣನ ಆಶಯಗಳಿಗೂ, ಸಿರಿಗೆರೆ ಮಠದ ಆಶಯಗಳ ಮಧ್ಯೆ ಏನಾದರೂ ಸಾಮ್ಯತೆಗಳಿವೆಯಾ? ಬಸವಣ್ಣನ ಆಶಯಗಳಿಗೆ ಪೂರಕವಾಗಿ ಸಿರಿಗೆರೆ ಮಠ ಯಾವತ್ತೂ ಕಾರ್ಯ ನಿರ್ವಹಿಸಿಲ್ಲ ಎಂಬುದು ಇದರಿಂದ ಸ್ಪಷ್ಟ ಅಗಬಹುದೇನೋ?

3 thoughts on “ಸಿರಿಗೆರೆ ಶ್ರೀ ವಿಚಾರ : ಹೇಳದೇ ಉಳಿದುಕೊಂಡ ವಿಷಯಗಳು

  1. Naveen H

    ಎಲ್ಲಾ ಮುಗೀತಾ ಇಲ್ಲಾ “ಹೇಳಲಾರದ” ವಿಷಯ ಇನ್ನೂ ಇದ್ರೆ ಈಗಲೇ ಹೇಳಿ ಮುಗಿಸಿಬಿಡಿ. ಧಾರವಾಹಿ ಥರ ದಿನಾ ಒಂದೊಂದು ವಿಷಯ ತೆಗೆಯಬೇಡಿ. ಒಂದು ಇಂಜಿನಿಯರಿಂಗ್ ಕಾಲೇಜ್ ಹಾಗೂ ಕೆಲವು ಡಿ ಎಡ ಕಾಲೇಜು ಹೊಂದಿದ್ದಕ್ಕೆ ಇಷ್ಟೊಂದು ಹೇಳ್ತಾಇದ್ದೀರಲ್ಲಾ ಇನ್ನು ಎರಡೆರಡು ಮೆಡಿಕಲ್ ಕಾಲೇಜ್ ಹಾಗೂ ಊರಿಗೊಂದು ಇಂಜಿನಿಯರಿಂಗ್ ಕಾಲೇಜ್ ಇದ್ದರೆ ಏನು ಹೇಳ್ತಿದ್ರೋ!!

    ಸ್ವಾಮಿಜಿಗಳನ್ನು ತೆಗಲೋಕೆ ಒಂದೂ ಒಳ್ಳೆ ವಿಷಯ ಸಿಗ್ತಾ ಇಲ್ವಲ್ರಿ ನಿಮಗೆ?

    Reply
  2. vasanth

    Sir,

    Very good writing. We must expose this thugs as much as possible. I thank Varthamana for playing a very crucial role in exposing Swamijis. Kudoos to new media tools.

    Reply
  3. thimmesh (thilak)

    ಜಿ.ಮಹಂತೇಶ್ ಅವರ ವರದಿಗೆ ಧನ್ಯವಾದಗಳು. ತಾವು ಶ್ರೀಗಳು ಪ್ರಸ್ತಾಪಿಸಿದ ಪ್ರಾಣಿ ಬಲಿ ಕುರಿತು ತಮ್ಮ ವರದಿಯಲ್ಲಿ ಮಾತನಾಡಿದ್ದೀರಿ, ಯಾರು ಹಿಂದೂ ಧರ್ಮದಲ್ಲಿ ಜನಸಿರುವರೋ ಅವರೇ ಭಿನ್ನ ಅಭಿಪ್ರಾಯವನ್ನು ತಾಳೆದಿರುವುದು ವಾಸ್ತವ. ಅದು ಎಲ್ಲರಿಗೂ ತಿಳಿದ ಸಂಗತಿ. ನನ್ನ ಅಭಿಪ್ರಾಯ. ಶ್ರೀಗಳು ದಾವಣಗೆರೆ ದುರ್ಗಾಂಭಿಕಾ ದೇವಿ ಜಾತ್ರೆಯಲ್ಲಿ ಕೋಣ ಬಲಿ ನಿಷೇಧಿಸುವುದರ ಕುರಿತ ಧನಿ ಎತ್ತಿರುವುದು ಸಂತೋಷ. ಆದರೇ ಎಷ್ಟೋ ಲಕ್ಷಾಂತರ ಪ್ರಾಣಿಗಳು ವ್ಯಾಪಾರ ರೂಪದಲ್ಲಿ ಬಳಕೆಯಾಗುತ್ತಿವೆ. ಆದರೇ ಅವುಗಳಿಗೂ ಒಂದು ಜೀವವಿದೆ ಎನ್ನುವುದು ವ್ಯವಹಾರದ ನಡುವೆ ಕಳೆದು ಹೋಗಿದೆ. ಇದನ್ನು ಬಿಟ್ಟು ಕೇವಲ ಒಂದರ ಮೇಲೆ ಕರುಣೆ ತೋರುವ ಬದಲು ಶ್ರೀಗಳು ಕರ್ನಾಟಕದಲ್ಲಿ ಮೇವಿಲ್ಲದೇ ಖಸಾಯಿ ಕಾನೆಗೆ ತೆರಳುವ ಲಕ್ಷಾಂತರ ಪ್ರಾಣಿಗಳನ್ನು ಪರಿಗಣಿಸಿ ಮಾತನಾಡಬೇಕೆಂದು ನನ್ನ ಅಭಿಪ್ರಾಯ.

    Reply

Leave a Reply to Naveen H Cancel reply

Your email address will not be published. Required fields are marked *