ಯಡಿಯೂರಪ್ಪ, ಇತಿಹಾಸ ಅವಲೋಕಿಸಿದರೆ ಭವಿಷ್ಯ ನಿರ್ಧರಿಸಬಹುದು


-ಚಿದಂಬರ ಬೈಕಂಪಾಡಿ


ರಾಜಕೀಯದಲ್ಲಿ ಅಧಿಕಾರ ಕಳೆದುಕೊಂಡರೆ ನೀರಿನಿಂದ ಹೊರ ತೆಗೆದ ಮೀನಿನಂಥ ಪರಿಸ್ಥಿತಿ. ಚಡಪಡಿಕೆ, ಹತಾಶೆ, ಸಿಟ್ಟು, ಸೆಡವು ಹೀಗೆ ಏನೇನೋ. ಅಧಿಕಾರಕ್ಕಿರುವ ಗುಣವೇ ಅಂಥದ್ದು, ಒಂಥರಾ ಅಮಲಿನಂತೆ. ಬಿಜೆಪಿಯಲ್ಲಿ ಮಾಜಿಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರದ್ದೂ ಸ್ಥಿತಿ ಇದಕ್ಕಿಂತೇನೂ ಭಿನ್ನವಲ್ಲ. ಹಾಗೆಂದು ಅದನ್ನು ಆಕ್ಷೇಪಿಸುವ ಧ್ವನಿಯೂ ಇದಲ್ಲ. ಅವರವರ ನೋವು, ಹತಾಶೆಗಳನ್ನು ಮತ್ತೊಬ್ಬರು ಕೇವಲವಾಗಿ ಕಾಣುವುದು ಸಹಜವಾದರೂ ಇಲ್ಲಿ ಆ ಉದ್ದೇಶವಲ್ಲ.

ಯಡಿಯೂರಪ್ಪ ಪಕ್ಷ ಬಿಟ್ಟು ಹೋಗಲು ಸಿದ್ಧತೆ ನಡೆಸುತ್ತಿದ್ದಾರೆ ಎನ್ನುವುದು ಮಾಧ್ಯಮಗಳ ಕಾಮೆಂಟರಿ. ಇಂಥ ಕಾಮೆಂಟರಿಗಳಿಗೆ ಕಾರಣವಾಗುವವರು ಅವರ ಬೆಂಬಲಿಗರು ಮತ್ತು ಅದನ್ನು ಆಂತರಿಕವಾಗಿ ಅನುಭವಿಸುತ್ತಿರುತ್ತಾರೆ ಎನ್ನುವುದೂ ಸುಳ್ಳಲ್ಲ. ಆದರೆ ಯಡಿಯೂರಪ್ಪ ನೇರ ನುಡಿಯುವವರಾದರೂ ಪಕ್ಷ ತೊರೆಯುವ ಬಗ್ಗೆ ನೇರವಾಗಿ ಎಲ್ಲೂ ಹೇಳುವುದಿಲ್ಲ, ಆದರೆ ಪಕ್ಷ ತೊರೆಯುವ ಸುಳಿವುಗಳನ್ನು ಕೊಡುತ್ತಾರೆ. ಅದು ಅವರ ರಾಜಕೀಯ ಬುದ್ಧಿವಂತಿಕೆ.

ಬಿಜೆಪಿ ಸುಸಜ್ಜಿತವಾದ ಕಚೇರಿ ಹೊಂದಿದ್ದರೂ ಯಡಿಯೂರಪ್ಪ ತಮ್ಮದೇ ಆದ ಸಾರ್ವಜನಿಕ ಸಂಪರ್ಕ ಕಚೇರಿ ತೆರೆದಿದ್ದಾರೆ. ಅದು ಅವರ ವೈಯಕ್ತಿಕ ಸಾರ್ವಜನಿಕ ಸಂಪರ್ಕಕ್ಕೆ ಎನ್ನುವ ಸಮಜಾಯಿಷಿಯನ್ನೂ ಕೊಟ್ಟಿದ್ದಾರೆ. ಈಗಲೂ ಆ ಕಚೇರಿ ಮೂಲಕವೇ ತಮ್ಮ ರಾಜಕೀಯ ನಡೆಗಳನ್ನು ನಿರ್ಧರಿಸುತ್ತಿದ್ದಾರೆ. ನಿತ್ಯವೂ ಈ ಕಚೇರಿಯ ಮೇಲೆ ಮಾಧ್ಯಮಗಳ ಕಣ್ಣು. ಅಲ್ಲಿಗೆ ಯಾರು ಬರುತ್ತಾರೆ, ಯಾರು ಹೋಗುತ್ತಾರೆ, ಯಾವ ಸಭೆ ನಡೆಯುತ್ತದೆ, ಯಾರನ್ನು ಯಡಿಯೂರಪ್ಪ ಭೇಟಿ ಮಾಡುತ್ತಾರೆ ಇತ್ಯಾದಿ ಚಟುವಟಿಕೆಗಳನ್ನು ಮಾಧ್ಯಮಗಳು ಮತ್ತು ಅವರ ವಿರೋಧಿಗಳು ಕಣ್ಣಲ್ಲಿಕಣ್ಣಿಟ್ಟು ನೋಡುತ್ತಿರುತ್ತಾರೆ. ಅಂದರೆ ಯಡಿಯೂರಪ್ಪ ಕರ್ನಾಟಕದ ಬಿಜೆಪಿಗೆ ಟ್ರಂಪ್ ಕಾರ್ಡ್ ಇದ್ದಂತೆ, ಆದ್ದರಿಂದಲೇ ಇಷ್ಟೊಂದು ಮಹತ್ವ.

ಯಡಿಯೂರಪ್ಪ ಅವರ ರಾಜಕೀಯ ನಡೆಗಳನ್ನು ಗಮನಿಸಿದವರಿಗೆ ಅವರು ಉಪ ಮುಖ್ಯಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ, ಈಗ ಮಾಜಿ ಮುಖ್ಯಮಂತ್ರಿಯಾದ ಮೇಲೆ ಪ್ರತಿಯೊಂದು ಹಂತದಲ್ಲೂ ತಮ್ಮದೇ ಆದ ಛಾಪು ಮೂಡಿಸಿರುವುದನ್ನು ಅರ್ಥಮಾಡಿ ಕೊಳ್ಳಬಹುದು.

ಉಪಮುಖ್ಯಮಂತ್ರಿಯಾಗಿದ್ದಾಗಲೂ ಅವರು ಬಹಳ ಕಾಲ ಅಧಿಕಾರಕ್ಕೆ ಒಗ್ಗಿಕೊಳ್ಳುವುದು ಕಷ್ಟವಾಗಿತ್ತು, ಸರ್ಕಾರದ ವಿರುದ್ಧವೇ ಸಿಡಿದು ಪ್ರತಿಪಕ್ಷಗಳ ನಾಯಕರಂತೆ ನಡೆದುಕೊಳ್ಳುತ್ತಿದ್ದರು. ಮುಖ್ಯಮಂತ್ರಿಯಾದಾಗಲೂ ಆವೇಶಕ್ಕೆ ಒಳಗಾಗಿ ಮಾತನಾಡಿ ಪ್ರತಿಪಕ್ಷದ ನಾಯಕರಂತೆ ಗುರುತಿಸಿಕೊಳ್ಳುತ್ತಿದ್ದರು. ಇದಕ್ಕೆ ಮುಖ್ಯ ಕಾರಣ ಯಡಿಯೂರಪ್ಪ ಮೂರು ದಶಕಗಳ ಕಾಲ ಆಡಳಿತ ವ್ಯವಸ್ಥೆಯ ವಿರುದ್ಧ ಮಾಡಿಕೊಂಡು ಬಂದ ಹೋರಾಟ. ಆ ಹೋರಾಟದ ಗುಂಗಿನಿಂದ ಹೊರಬರುವುದು ಈಗಲೂ ಅವರಿಗೆ ಸಾಧ್ಯವಾಗಿಲ್ಲ.

ಕರ್ನಾಟಕದಲ್ಲಿ ಬಿಜೆಪಿಗೆ ಈಗಲೂ ಯಡಿಯೂರಪ್ಪ ಅನಿವಾರ್ಯ ಪಕ್ಷವನ್ನು ಅಧಿಕಾರದ ದಡಮುಟ್ಟಿಸಲು. ಅವರಿಗಿರುವ ಪಕ್ಷ ಸಂಘಟನೆಯ ಸಾಮರ್ಥ್ಯ ಮತ್ತು ತಂತ್ರಗಾರಿಕೆ ಬಿಜೆಪಿಯ ಕರ್ನಾಟಕ ಘಟಕದಲ್ಲಿ ಇನ್ನೂ ಅನೇಕರಿಗಿದೆಯಾದರೂ ಅದು ಭಿನ್ನನೆಲೆಯಲ್ಲಿದೆ ಹೊರತು ತಳಮಟ್ಟದಲ್ಲಿಲ್ಲ. ಜಾತಿಯ ಬಲವಿಲ್ಲದೆಯೇ ರಾಜಕೀಯದಲ್ಲಿ ಬೆಳೆದಿರುವ ಯಡಿಯೂರಪ್ಪ ಈಗ ಜಾತಿಯ ತೆಕ್ಕೆಗೆ ವಾಲುತ್ತಿದ್ದಾರೆ ಅನ್ನಿಸುತ್ತಿರುವುದು ವಾಸ್ತವ ಮತ್ತು ಬೇರೆ ಕಾರಣಗಳಿಗಾಗಿ. ಯಡಿಯೂರಪ್ಪ ಅವರ ಸಾಮರ್ಥ್ಯವನ್ನು ಹೈಕಮಾಂಡ್ ಕೂಡಾ ಚೆನ್ನಾಗಿ ಅರಿತಿದೆ, ಈ ಕಾರಣಕಾಗಿಯೇ ಅವರು ಹೈಕಮಾಂಡ್ ವಿರುದ್ಧ ಅದೆಷ್ಟೇ ಗುಟುರು ಹಾಕಿದರೂ ಸಹಿಸಿಕೊಂಡಿದೆ. ಇದು ಹೈಕಮಾಂಡ್‌ನ ದುರಂತವೇ ಹೊರತು ಯಡಿಯೂರಪ್ಪ ಅವರ ಹತಾಶೆಯಷ್ಟೇ ಅಲ್ಲ. ಪ್ರಸ್ತುತ ರಾಜಕೀಯ ಸ್ಥಿತಿಯಲ್ಲಿ ಯಡಿಯೂರಪ್ಪ ಅವರಿಲ್ಲದ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯುವುದು ಸಾಧ್ಯವಿಲ್ಲವೆಂದು ನಿಯತಕಾಲಿಕದ ಸರ್ವೇ ವರದಿಯನ್ನೇ ಆಧರಿಸಿ ಹೇಳಬೇಕಾಗಿರಲಿಲ್ಲ,  ಬಿಜೆಪಿಯ ಹೈಕಮಾಂಡ್‌ನ ಯಾರೇ ಕರ್ನಾಟಕದಲ್ಲಿ ಒಂದು ಸುತ್ತು ಹೊಡೆದರೆ ತಾಜಾ ವರದಿ ಸಿಕ್ಕಿಬಿಡುತ್ತದೆ. ಹೈಕಮಾಂಡ್ ಯಡಿಯೂರಪ್ಪ ಅವರು ಈ ಸ್ಥಿತಿಗೆ ತಲುಪಲು ಕಾರಣವೇ ಹೊರತು ಅನ್ಯರನ್ನು ಹೆಸರಿಸುವುದು ಅಥವಾ ಯಡಿಯೂರಪ್ಪ ಅವರನ್ನು ದೂಷಿಸುವುದು ಈ ಹಂತದಲ್ಲಿ ಸರಿಯಲ್ಲ.

ನೀವು ಕರ್ನಾಟಕದ ರಾಜಕೀಯ ಇತಿಹಾಸವನ್ನು ಹಿಂದಕ್ಕೆ ತಿರುಗಿ ನೋಡಿದರೆ ಯಡಿಯೂರಪ್ಪ ಅವರಂಥ ಅನೇಕ ಮಂದಿಯ ಮುಖಗಳು ಅನಾವರಣಗೊಳ್ಳುತ್ತವೆ. ಹಿಂದುಳಿದ ವರ್ಗದ ಚಾಂಪಿಯನ್ ಡಿ.ದೇವರಾಜ ಅರಸು, ಜನರಿಂದಲೇ ನಾಯಕರಾಗಿ ಬೆಳೆದ ಎಸ್.ಬಂಗಾರಪ್ಪ, ರಾಜಕೀಯ ತಂತ್ರಗಾರಿಕೆಯಲ್ಲಿ ದೇಶದಲ್ಲೇ ನಿಪುಣರೆನಿಸಿಕೊಂಡಿದ್ದ ರಾಮಕೃಷ್ಣ ಹೆಗಡೆ ಈ ಮೂರೇ ಮಂದಿಯನ್ನು ವಿಶ್ಲೇಷಣೆ ಮಾಡಿದರೆ ಸಾಕು ಯಡಿಯೂರಪ್ಪ ಅವರೂ ಅದೇ ಹಾದಿಯಲ್ಲಿ ಸಾಗುತ್ತಿದ್ದಾರೆ ಅನ್ನಿಸಲು.

ದೇವರಾಜ ಅರಸು ಇಂದಿರಾಗಾಂಧಿಯವರ ನೆರಳಾಗಿದ್ದವರು. ಕರ್ನಾಟಕದಲ್ಲಿ ಅವರು ಜಾರಿಗೆ ತಂದ ಸುಧಾರಣಾ ಕ್ರಮಗಳು ಇಂದಿಗೂ ಹಿಂದುಳಿದವರು ಸ್ಮರಿಸಲು ಕಾರಣವಾಗಿದೆ. ಜನಪ್ರಿಯತೆ ಮತ್ತು ಅಧಿಕಾರ ತನ್ನ ನಾಯಕಿ ಇಂದಿರಾ ಅವರನ್ನೇ ಎದುರು ಹಾಕಿಕೊಳ್ಳುವಂತೆ ಮಾಡಿತು. ಹಿಂದುಳಿದವರು ಹಾಡಿಹೊಗಳಿದ ಕಾರಣದಿಂದಲೂ, ತನ್ನ ಬೆನ್ನ ಹಿಂದೆ ಜನ ಇರುತ್ತಾರೆ ಎನ್ನುವ ಭ್ರಮೆಯಿಂದಲೋ ಕಾಂಗ್ರೆಸ್ ಪಕ್ಷವನ್ನೇ ಇಬ್ಭಾಗ ಮಾಡಿದರು. ಕಾಂಗ್ರೆಸ್-ಯು (ಅರಸು ಕಾಂಗ್ರೆಸ್) ಸ್ಥಾಪಿಸಿದರು. ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧವೇ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರು. ಆದರೆ ಜನ ಅರಸು ಅವರನ್ನು ರಾಜಕೀಯವಾಗಿ ಬೆಂಬಲಿಸಲಿಲ್ಲ, ಇಂದಿರಾ ಅವರ ಬೆನ್ನಿಗೆ ನಿಂತರು. ಅಂದು ಅರಸು ಕಾಂಗ್ರೆಸ್ ಪರವಿದ್ದವರೆಲ್ಲರೂ ಇಂದಿರಾ ಗಾಂಧಿ ಅವರ ನೆರಳಾಗಿದ್ದವರು ಮಾತ್ರವಲ್ಲ ಟಿ.ಎ.ಪೈ ಅವರಂಥ ಮೇಧಾವಿ ಕೂಡಾ ಇಂದಿರಾರನ್ನು ತೊರೆದು ಅರಸು ಬೆಂಬಲಕ್ಕೆ ನಿಂತು ಚುನಾವಣೆಯಲ್ಲಿ ಸ್ಪರ್ಧಿಸಿ ಠೇವಣಿ ಕಳೆದುಕೊಂಡರು. ಹಾಗಾದರೆ ಅರಸು ಅವರನ್ನು ಆರಾಧಿಸುತ್ತಿದ್ದ ಜನರು ಚುನಾವಣೆಯಲ್ಲಿ ಕೈಬಿಟ್ಟರೇಕೆ, ಇಂದಿರಾ ಕೈ ಹಿಡಿದರೇಕೆ?

ಎಸ್.ಬಂಗಾರಪ್ಪ ಜನನಾಯಕ ಎನ್ನುವುದರಲ್ಲಿ ಅನುಮಾನಗಳಿಲ್ಲ. ಸ್ವಂತ ಪಕ್ಷ ಕಟ್ಟಿದರು. ಮೊದಲ ಯತ್ನದಲ್ಲಿ ಅರ್ಧ ಯಶಸ್ಸು ಸಾಧಿಸಿದ್ದರಾದರೂ ರಾಮಕೃಷ್ಣ ಹೆಗಡೆಯವರ ಚಾಣಕ್ಯ ರಾಜಕೀಯ ನಡೆಯಿಂದಾಗಿ ಹಿನ್ನಡೆ ಅನುಭವಿಸಿದರು. ಮತ್ತೆ ಕಾಂಗ್ರೆಸ್ ಸೇರಿದರು, ಮುಖ್ಯಮಂತ್ರಿಯಾದರು. ಹೊರಬರುವ ಅನಿವಾರ್ಯತೆ ಎದುರಾದಾಗ ಕಾಂಗ್ರೆಸ್ ವಿರುದ್ಧ ಸೆಟೆದುನಿಂತು ನರಸಿಂಹರಾವ್ ಅವರನ್ನು ಹಾವು, ಚೇಳು ಅಂತೆಲ್ಲಾ ಹೀಯಾಳಿಸಿದ್ದರು. ರಾಜಕೀಯ ನಪುಂಸಕರೆಂದು ತಮ್ಮನ್ನು ಬೆಂಬಲಿಸದೆ ಕಾಂಗ್ರೆಸ್ ಜೊತೆ ಗುರುತಿಸಿಕೊಂಡವರನ್ನು ತೆಗಳಿದರು. ಒಬ್ಬ ರಾಜಕೀಯ ನಾಯಕನಾಗಿ ಬಂಗಾರಪ್ಪ ಅವರನ್ನು ಜನ ಮೆಚ್ಚಿಕೊಂಡರೇ ಹೊರತು ಅವರನ್ನು ಒಂದು ಪಕ್ಷ ಸ್ಥಾಪಕರಾಗಿ ಒಪ್ಪಿಕೊಳ್ಳಲಿಲ್ಲ.

ರಾಮಕೃಷ್ಣ ಹೆಗಡೆ ಮತ್ತು ವೀರೇಂದ್ರ ಪಾಟೀಲ್ ರಾಜಕೀಯದಲ್ಲಿ `ಲವಕುಶ’ ರೆನಿಸಿಕೊಂಡವರು. ಕರ್ನಾಟಕದಲ್ಲಿ ಗುಂಡೂರಾವ್ ಸರ್ಕಾರ ಪತನವಾಗಿ ಜನತಾಪಕ್ಷ, ಬಂಗಾರಪ್ಪ ಅವರ ಕ್ರಾಂತಿರಂಗ ಜೊತೆಯಾಗಿ ಕಾಂಗ್ರೆಸೇತರ ಸರ್ಕಾರ ರಚನೆಗೆ ಯತ್ನಿಸಿದಾಗ ಮಣಿಪಾಲದ ಐಷಾರಾಮಿ ಹೊಟೇಲಲ್ಲಿ ವಾಸ್ತವ್ಯವಿದ್ದ ರಾಮಕೃಷ್ಣ ಹೆಗಡೆ ಸಂಧಾನಕಾರರಾಗಿ ನಿಯೋಜಿತರಾದವರು ತಾವೇ ಆ ಸರ್ಕಾರ ನಡೆಸುವ ಸಾರಥಿಯಾದರು. ಅಂಥ ಚಾಣಕ್ಯ ರಾಜಕಾರಣಿ, ಯೋಜನಾ ಆಯೋಗದ ಉಪಾಧ್ಯಕ್ಷರಾಗಿದ್ದವರು. ಅವರ ರಾಜಕೀಯ ಬದುಕು ಕೂಡಾ ದುರಂತಮಯವಾಯಿತು.

ಕರ್ನಾಟಕಕ್ಕೆ ಈ ಮೂರೂ ವ್ಯಕ್ತಿಗಳ ಕೊಡುಗೆ ಅಪಾರ. ಅವರ ರಾಜಕೀಯ ಚಿಂತನೆಗಳೂ ಕೂಡಾ ಅನುಕರಣೀಯವೇ. ಆದರೂ ಜನ ಮಾತ್ರ ಅವರನ್ನು ಪಕ್ಷದಿಂದ ಹೊರಬಂದಾಗ ಒಬ್ಬ ಜನನಾಯಕನೆಂದು ಗುರುತಿಸಿ ಬೆನ್ನಿಗೆ ನಿಲ್ಲಲಿಲ್ಲ. ಅವರುಗಳು ಪಕ್ಷದ ಮುಂಚೂಣಿಯಲ್ಲಿದ್ದಾಗ ಮೆಚ್ಚಿದ್ದರು, ನಂಬಿದರು, ಬೆಂಬಲಿಸಿದರು. ಅವರೇ ಒಂದು ಪಕ್ಷ ಕಟ್ಟಿದಾಗ ಅದೇ ಜನ ಅವರನ್ನು ಬೆಂಬಲಿಸಲಿಲ್ಲ. ಇದು ರಾಜಕೀಯದ ನೀತಿ ಪಾಠ ಮತ್ತು ಜನರ ಭಾವನೆಗಳು ಹೇಗಿರುತ್ತವೆ ಎನ್ನುವುದಕ್ಕೆ ಉದಾಹರಣೆ.

ಪ್ರಸ್ತುತ ಯಡಿಯೂರಪ್ಪ ಅವರು ಬಿಜೆಪಿಗೆ ಅನಿವಾರ್ಯ. ಆದರೆ ಅವರಿಗೆ ಬಿಜೆಪಿ ಅನಿವಾರ್ಯವಲ್ಲವೆಂದು ಅವರ ಬೆಂಬಲಿಗರು ಹೇಳುತ್ತಿದ್ದಾರೆ. ಯಡಿಯೂರಪ್ಪ ಅವರಿಗೆ ಬಿಜೆಪಿ ಅನಿವಾರ್ಯವಲ್ಲದಿರಬಹುದು ಈಗ. ಯಾಕೆಂದರೆ ಅವರು ಪಕ್ಷ ಕಟ್ಟಿದ್ದಾರೆ, ಪಕ್ಷ ಅವರಿಗೆ ಅಧಿಕಾರ ಕೊಟ್ಟಿದೆ. ಈಗ ಯಡಿಯೂರಪ್ಪ ಅವರೂ ತಮ್ಮದೇ ಆದ ಜನರನ್ನು ಹೊಂದಿದ್ದಾರೆ. ಯಡಿಯೂರಪ್ಪ ಅವರಿಗಿಂತಲೂ ಅವರ ಬೆಂಬಲಿಗರಿಗೆ ಅಧಿಕಾರದ ದಾಹ ಎಂದರೂ ತಪ್ಪಾಗಲಾರದು. ಇಂಥ ಬೆಂಬಲಿಗರ ಹೊಗಳಿಕೆಗೆ ಮನಸೋತು ಯಡಿಯೂರಪ್ಪ ಎಡವುತ್ತಾರೆಯೋ ಎನ್ನುವ ಅನುಮಾನಗಳು ಕಾಡುತ್ತಿದ್ದರೆ ತಪ್ಪಲ್ಲ. ಯಾಕೆಂದರೆ ಅದು ಮನುಷ್ಯನ ವೀಕ್ನೆಸ್. ಹೊಗಳಿಕೆಯನ್ನು ಮನಸ್ಸು ಬಹುಸುಲಭವಾಗಿ ಗುರುತಿಸುತ್ತದೆ, ತೆಗಳಿಕೆಯನ್ನು ಜೀರ್ಣಿಸಿಕೊಳ್ಳಲು ಹಿಂದೇಟು ಹಾಕುತ್ತದೆ. ಇಲ್ಲೂ ಯಡಿಯೂರಪ್ಪ ಅವರಿಗೂ ಇದೇ ಆಗುತ್ತಿದೆಯೇನೋ ಅನ್ನಿಸುತ್ತಿದೆ. ಈ ಹೊಗಳಿಕೆಗಳು ಅವರು ಪಕ್ಷದಲ್ಲಿರುವಷ್ಟು ಕಾಲ ಮಾತ್ರ. ಅರಸು ಅವರಂಥ ಧೀಮಂತ ರಾಜಕಾರಣಿ ಕೂಡಾ ತನ್ನ ಸುತ್ತಲೂ ಇರುವ ಜನರನ್ನು ನಂಬಿಯೇ ಕಾಂಗ್ರೆಸ್ ತೊರೆದು ಇಂದಿರಾ ಅವರಿಗೆ ಸೆಡ್ಡುಹೊಡೆಯಲು ಕಾರಣ. ಅದು ಕೇವಲ ಕಾಲ್ಪನಿಕ ಎನ್ನುವುದು ಅವರ ಪಕ್ಷ ಚುನಾವಣೆಯಲ್ಲಿ ಸೋತು ಸುಣ್ಣವಾದಾಗ ಅರಿವಾಯಿತೇ ಹೊರತು ಅದಕ್ಕೂ ಮೊದಲು ಅರ್ಥವಾಗಿರಲಿಲ್ಲ.

ಯಡಿಯೂರಪ್ಪ ಅವರೂ ಈಗ ಬಹುಷ ಮಾಡಬೇಕಾದ ಕೆಲಸವೆಂದರೆ ಇತಿಹಾಸವನ್ನು ಪುನರಾವಲೋಕನ ಮಾಡುವುದು. ಭೂತಕಾಲವನ್ನು ವರ್ತಮಾನದಲ್ಲಿ ನಿಂತು ನೋಡಿದರೆ ಭವಿಷ್ಯ ಗೋಚರವಾಗುತ್ತದೆ. ಅದು ಅವರ ಮುಂದಿನ ನಡೆಗೆ ದೀವಿಗೆಯಾಗುತ್ತದೆ.

1 thought on “ಯಡಿಯೂರಪ್ಪ, ಇತಿಹಾಸ ಅವಲೋಕಿಸಿದರೆ ಭವಿಷ್ಯ ನಿರ್ಧರಿಸಬಹುದು

Leave a Reply

Your email address will not be published.