ಜಾತಿಕಾರಣ ಹಾಗೂ ಅನ್ಯಾಕ್ರಾಂತತೆ


-ಡಾ.ಎಸ್.ಬಿ. ಜೋಗುರ


ಮಾರ್ಕ್ಸ್ 18 ನೇ ಶತಮಾನದಲ್ಲಿ ಕಾರ್ಮಿಕನಲ್ಲಿಯ ಪರಾಧೀನತೆ ಇಲ್ಲವೇ ಪರಕೀಯ ಪ್ರಜ್ಞೆ ಅನ್ಯಾಕ್ರಾಂತತೆಯ ಆವಿರ್ಭವಕ್ಕೆ ಕಾರಣವಾಗಬಲ್ಲದು ಎಂದು ಪ್ರತಿಪಾದಿಸಿದರೆ, ಎರಿಕ್ ಪ್ರಾಮ್ ಎನ್ನುವ ಸಮಾಜಶಾಸ್ತ್ರಜ್ಞ ಧಾರ್ಮಿಕ ಪ್ರಭುತ್ವವೂ ಅನ್ಯಾಕ್ರಾಂತತೆಗೆ ಕಾರಣವಾಗುತ್ತದೆ ಎನ್ನುತ್ತಾರೆ. ತಾರ್ಕಿಕತೆಯ ಮೇಲೆ ಸವಾರಿ ಮಾಡುವಷ್ಟು ಪ್ರಭುತ್ವಕ್ಕೆ ಶಕ್ತಿ ಇದೆ. ಹಾಗಾದಾಗ ಅನ್ಯಾಕ್ರಾಂತತೆ ತಲೆದೋರುತ್ತದೆ ಎನ್ನುವುದನ್ನು ಅಲ್ ಗೋರೆ ಎನ್ನುವ ಚಿಂತರು ತಮ್ಮ ಕೃತಿ ‘ಅಜಾಲ್ಟ್ ಆನ್ ರೀಜನ್’ ಎನ್ನುವುದರಲ್ಲಿ ತೋರಿಸಿಕೊಟ್ಟಿದ್ದಾರೆ.

ಭಾರತೀಯ ಸಮಾಜದ ಏಕಮೇವ ಲಕ್ಷಣವಾಗಿರುವ ಜಾತಿ ಪದ್ಧತಿ ಕೂಡಾ ಅನೇಕ ಬಾರಿ ಅನ್ಯಾಕ್ರಾಂತತೆಗೆ ಕಾರಣವಾಗಬಹುದಾದ ಸನ್ನಿವೇಶಗಳನ್ನು ನಿರ್ಮಿಸಿಕೊಡುತ್ತದೆ. ಅದು 1990 ರ ಸಂದರ್ಭ. ದೆಹಲಿ ವಿಶ್ವವಿದ್ಯಾಲಯದ ರಾಜೀವ ಗೋಸ್ವಾಮಿ ಎನ್ನುವ ಯುವಕ ಮಂಡಲ ಕಮಿಷನ್ ವಿರುದ್ಧ ಮೈಗೆ ಬೆಂಕಿ ಹಚ್ಚಿಕೊಳ್ಳುವ ಅಣುಕು ಪ್ರದರ್ಶನ ಮಾಡುವ ಭರಾಟೆಯಲ್ಲಿ, ಖರೆ ಖರೆ ಸೀಮೆ ಎಣ್ಣೆಯನ್ನು ಮೈಮೇಲೆ ಸುರಿದುಕೊಂಡು ಮಾಧ್ಯಮಗಳ ಎದುರು ತೀರಾ ಭಾವಾವೇಶಕ್ಕೊಳಗಾಗಿ ಕಡ್ದಿ ಗೀರಿಯೆ ಬಿಟ್ಟ. ಪರಿಣಾಮ ಧಗಧಗ ಉರಿದು ಶವವಾದ. ಇಂಥಾ ಅನೇಕ ಪ್ರಸಂಗಗಳು ಜಾತಿಕಾರಣದ ಅನ್ಯಾಕ್ರಾಂತತೆಯ ವಿಷಯವಾಗಿ ನಮ್ಮ ದೇಶದಲ್ಲಿ ಆಗಾಗ ಜರುಗುವುದಿದೆ. ವಸಾಹತೋತ್ತರ ಭಾರತದಲ್ಲಿ ಜಾತಿ ಪದ್ಧತಿಯನ್ನು ಪ್ರಜಾಪ್ರಭುತ್ವದ ಕಡುವೈರಿಯ ಹಾಗೆ ಬೆಳೆಯಬಿಟ್ಟಿದ್ದು ಜಾತಿಕಾರಣದ ರಾಜಕಾರಣವಲ್ಲದೇ ಇನ್ನೇನು.?

ಗಾಂಧಿ ಹಾಗೂ ಅಂಬೇಡ್ಕರ್ ಮಧ್ಯೆಯೂ ಈ ಜಾತಿಯ ವಿಷಯವಾಗಿ, ರಾಷ್ಟ್ರೀಯತೆಯ ವಿಷಯವಾಗಿ ಚರ್ಚೆಗಳಿದ್ದವು. ವಾಗ್ವಾದಗಳಿದ್ದವು. ಆ ಸಂದರ್ಭದಲ್ಲಿ ಅಂಬೇಡ್ಕರರು ಜಾತಿಯ ವಿಷಯವಾಗಿ ಅನ್ಯಾಕ್ರಾಂತತೆಯನ್ನು ಹುಟ್ಟು ಹಾಕಿರುವುದು ನಿಜ, ಅದರ ಪರಿಣಾಮವೇ ಅವರು ನಾಸಿಕದ ಕಲಾರಾಂ ದೇಗುಲದ ಪ್ರವೇಶ, ಕೋಲಾಬಾ ಜಿಲ್ಲೆಯ ಮಹದ್ ಪ್ರದೇಶದ ಚೌಡರಕೆರೆಯ ನೀರನ್ನು ಸೇವಿಸಲು ಮಾಡಿದ ಹೋರಾಟ, ತಿರುವಾಂಕೂರಿನ ವೈಕಂ ಎಂಬಲ್ಲಿ ದೇವಸ್ಥಾನದ ಪಕ್ಕದ ರಸ್ತೆಯ ಮೇಲೆ ನಡೆಯಲು ಮಾಡಿರುವ ಹೋರಾಟಗಳೆಲ್ಲವೂ ಬಹುತೇಕವಾಗಿ ಜಾತಿಕಾರಣದ ಹೋರಾಟಗಳೇ. ಗಾಂಧೀಜಿಯವರಿಗೂ ಅಶ್ಪ್ರಶ್ಯತೆಯ ಬಗ್ಗೆ ಸೌಮ್ಯ ಸ್ವರೂಪದ ಸಿಡುಕಿತ್ತಾದರೂ ಅದರ ಹಿಂದೆ ಅಂಬೇಡ್ಕರ್ ಅವರಲ್ಲಿದ್ದ ಅನ್ಯಾಕ್ರಾಂತತೆಯ ಗುಣವಿರಲಿಲ್ಲ. ಜಾತಿಯ ವಿಷಯದಲ್ಲಿ ಹಗ್ಗ ಹರಿಯದೇ, ಕೋಲು ಮುರಿಯದೇ ಹಾವು ಸಾಯಬೇಕು ಎನ್ನುವ ಗಾಂಧೀಜಿಯವರ ಮನೋಧರ್ಮ ಅಂಬೇಡ್ಕರ್ ಅವರಿಗೆ ತಿಳಿದಿತ್ತು ಹಾಗಾಗಿಯೆ ತನ್ನ ಜನರಿಗೆ ಪ್ರತ್ಯೇಕವಾದ ಮತ ಕ್ಷೇತ್ರವನ್ನು ಅಂಬೇಡ್ಕರ್ ಕೋರಿರುವುದಿತ್ತು. ಗಾಂಧೀಜಿಯವರು ಇದರಿಂದ ರಾಷ್ಟ್ರೀಯತೆಗೆ ಧಕ್ಕೆ ಬರುತ್ತದೆ ಎನ್ನುವ ಕಾರಣವನ್ನಿಟ್ಟುಕೊಂಡು ಉಪವಾಸ ನಿರತರಾಗಿರುವುದರ ಬಗ್ಗೆ ಚಾರಿತ್ರಿಕ ಆಧಾರಗಳಿವೆ. ತಾನು ಸನಾತನಿಯಾಗಿದ್ದೇನೆ ಎನ್ನುತ್ತ ವರ್ಣವ್ಯವಸ್ಥೆಯನ್ನು ಅಪಾರವಾಗಿ ಇಷ್ಟಪಡುವ ಗಾಂಧಿಯಿಂದ ತನ್ನ ಜಾತಿಯ ಜನರಿಗೆ ನ್ಯಾಯ ಸಿಗದು ಎನ್ನುವ ಸತ್ಯ ಅಂಬೇಡ್ಕರ್‌ಗೆ ತಿಳಿಯದೇ ಇರಲಿಲ್ಲ. ಹಿಂದು ಧರ್ಮದಲ್ಲಿಯ ಮಡಿಮೈಲಿಗೆಯ ಆಚರಣೆಗಳಿಗೆ ಅಂಬೇಡ್ಕರ್ ರೋಸಿ ಹೋಗಿ, ಕೊನೆಗೂ ಲಕ್ಷಾನುಗಟ್ಟಲೆ ಅನುಯಾಯಿಗಳೊಂದಿಗೆ ಬೌದ್ಧ ಧರ್ಮಕ್ಕೆ ಮತಾಂತರ ಹೊಂದುವ ಮೂಲಕ ತಮ್ಮ ಜಾತಿ ಆಧರಿತ ಅನ್ಯಾಕ್ರಾಂತತೆಗೆ ಉತ್ತರವನ್ನು ಕಂಡುಕೊಂಡರು.

ಅಂಬೇಡ್ಕರರು ರಾಜಕಾರಣವನ್ನು ನಿಯಂತ್ರಿಸುವ ಮಾರ್ಗವಾಗಿ ಜಾತಿಯನ್ನು ಪರಿಗಣಿಸಿದರು. ಗಾಂಧೀಜಿ ಮಾತ್ರ ಜಾತಿಯ ಮೂಲಕ ಅಸ್ಥಿತ್ವವನ್ನು ಗುರುತಿಸಿಕೊಳ್ಳುವುದನ್ನು ನಿರಾಕರಿಸಿದರು. ಜಾತಿಪದ್ಧತಿಯನ್ನು ಕುರಿತು 1931 ರ ಜನಗಣತಿಯ ಸಂದರ್ಭದಲ್ಲಿ ಕಮಿಷನರ್ ಆಗಿದ್ದ ಜೆ.ಎಚ್.ಹಟನ್ ಎನ್ನುವವರು ಒಂದು ಕೃತಿಯನ್ನು ರಚಿಸಿದ್ದರು. [ಕಾಸ್ಟ್ ಇನ್ ಇಂಡಿಯಾ] ಅದರಲ್ಲಿ ಅವರು ಮೂರು ಸಾವಿರ ಜಾತಿಗಳನ್ನು ಗುರುತಿಸಿ, ಜಾತಿಯ ಆಚರಣೆ, ಮಡಿ-ಮೈಲಿಗೆ, ಏಣಿಶ್ರೇಣಿ ಕ್ರಮ, ಸಾಂಪ್ರದಾಯಿಕ ಉದ್ಯೋಗ, ಸಾಮಾಜಿಕ ಸಂಪರ್ಕ, ಸಹಪಂಕ್ತಿ ಭೋಜನ ಮುಂತಾದವುಗಳ ಬಗ್ಗೆ  ಚರ್ಚಿಸಿದ್ದಾರೆ. ಅಮೂರ್ತವಾದ ಜಾತಿಪದ್ಧತಿ ಇಡೀ ಭಾರತೀಯ ಸಾಮಾಜಿಕ ಜೀವನವನ್ನೇ ನಿಯಂತ್ರಿಸುವ ಬಗೆಯನ್ನು ಅವರು ಗುರುತಿಸಿದ್ದಾರೆ. ಡಾ ಜಿ.ಎಸ್.ಘುರ್ರೆ, ಈರಾವತಿ ಕರ್ವೆ, ಎಮ್.ಎನ್.ಶ್ರೀನಿವಾಸ, ಎಲ್ ಡುಮಂಟ್, ಟಿ.ಎನ್.ಮದನ್ ಮುಂತಾದವರು ಜಾತಿಪದ್ಧತಿ ಭಾರತೀಯ ರಾಷ್ಟ್ರೀಯತೆ, ನಾಗರಿಕತ್ವ ಮತ್ತು ಆಧುನಿಕತೆಯನ್ನು ಪ್ರಭಾವಿಸುವ ಬಗ್ಗೆ ಚರ್ಚಿಸಿದ್ದಾರೆ.

ಜಾತಿಗಳ ರಾಜಕೀಯ ಪ್ರತಿನಿಧಿತ್ವದ ಬಗ್ಗೆ ಇವರು ಮಾತನಾಡಿದ್ದು ಕಡಿಮೆ. ಇವರಲ್ಲಿ ಕೆಲವರು ಜಾತಿಪದ್ಧತಿಯನ್ನಾಧರಿಸಿದ ಮೀಸಲಾತಿಯನ್ನಿಟ್ಟುಕೊಂಡು ಇದು ಭಾರತೀಯ ಸಾಮಾಜಿಕ ವ್ಯವಸ್ಥೆಯ ನೈತಿಕತೆಯನ್ನೇ ಹಾಳುಮಾಡಿದೆ ಎಂದಿರುವರು. ಪರೋಕ್ಷವಾಗಿ ಇವರೆಲ್ಲಾ ಜಾತಿಯ ಸಾಂಪ್ರದಾಯಿಕ ಆಚರಣೆಗಳನ್ನು ಬೆಂಬಲಿಸಿದವರೇ. ಅದನ್ನು ರಾಜಕೀಯ ಪ್ರಾತಿನಿಧಿಕತೆಯ ಭಾಗವಾಗಿ ಬಳಸಬಾರದು ಅದರಿಂದಾಗಿ ದೇಶದ ಅಖಂಡತೆಗೆ ಧಕ್ಕೆ ಬರುವ ಬಗ್ಗೆ ಮಾತನಾಡುವ ಇವರು ಗಾಂಧೀಜಿಯವರ ವಿಚಾರಗಳನ್ನು ಬೆಂಬಲಿಸುವುದಿದೆ. ಕೆಲ ಅಮೇರಿಕೆಯ ಸಮಾಜಶಾಸ್ತ್ರಜ್ಞರು ಭಾರತದಲ್ಲಿಯ ಜಾತಿಯಾಧಾರಿತ ಮೀಸಲಾತಿಯನ್ನು ಕುರಿತು ಇದು ಎರಡನೆಯ ದರ್ಜೆಯ ನಾಗರಿಕತ್ವದ ಪ್ರಜ್ಞೆಯನ್ನು ಹುಟ್ಟುಹಾಕುತ್ತದೆ ಎನ್ನುತ್ತಾರೆ.

Lloyd ಮತ್ತು Susanne Rudolph ಬರೆಯುತ್ತಾರೆ : ‘The price of discrimination in reverse has been a kind of blackmail in reverse; in return for access to opportunity and power the untouchable is asked to incriminate himself socially. This is not only profoundly disturbing but also an important source of alienation and rebellion.’

ಸ್ವಾತಂತ್ರ್ಯ ಪೂರ್ವದಿಂದಲೂ ಈ ದೇಶದ ರಾಜಕೀಯ ಪರಿಸರವನ್ನು ಬೇರೆ ಬೇರೆ ರೀತಿಯಲ್ಲಿ ನಿಯಂತ್ರಿಸುತ್ತಾ ಬಂದಿರುವ ಜಾತಿಪದ್ಧತಿಯು ಪ್ರಜಾಸತ್ತಾತ್ಮಕ ವ್ಯವಸ್ಥೆಯ ಸಮಾನ ಹಕ್ಕುಗಳು, ವ್ಯಕ್ತಿ ಸ್ವಾತಂತ್ರ್ಯದ ತತ್ವಗಳನ್ನು ವಂಚಿಸುತ್ತಲೇ ಮುನ್ನಡೆದಿರುವಲ್ಲಿ ಜಾತಿಕಾರಣದಷ್ಟೇ ಪ್ರಬಲವಾಗಿ ರಾಜಕೀಯದೊಳಗಣ ಜಾತಿ ಪ್ರಾಬಲ್ಯವೂ ಕೆಲಸ ಮಾಡುತ್ತಿದೆ. ಶಾಲಾ ದಿನಗಳಿಂದಲೇ ಜಾತಿಯನ್ನು ಸ್ಪಷ್ಟವಾಗಿ ನಮೂದಿಸುವ ಅರ್ಜಿ ಕಾಲಂ ಒಂದು ನಿರಂತರವಾಗಿ ಉಳಿದುಕೊಂಡು ಬಂದಿದೆ. ತೀರಾ ಇತ್ತೀಚಿಗೆ ವಿದ್ಯಾರ್ಥಿಗಳ ಹಾಲ್ ಟಿಕೆಟ್‌ನಲ್ಲಿಯೂ ಜಾತಿಯನ್ನು ನಮೂದಿಸುವ ಬಗ್ಗೆ ಯೋಚಿಸಲಾಗಿತ್ತು ಎನ್ನುವುದನ್ನು ಇಲ್ಲಿ ನೆನಪು ಮಾಡಿಕೊಳ್ಳಬೇಕು. ಜಾತಿಪದ್ಧತಿಯು ಒಂದು ಪ್ರಬಲ ಸಾಮಾಜಿಕ ನಿಯಂತ್ರಣದ ಸಾಧನವಾಗಿ ಸಾವಿರಾರು ವರ್ಷಗಳಿಂದ ಕಾರ್ಯನಿರ್ವಹಿಸಿರುವುದಿದೆ.

ಹಿಂದೂ ಸಾಮಾಜಿಕ ವ್ಯವಸ್ಥೆಯ ಜೀವನಾದಿಯಂತೆ ಅದು ಬದುಕಿನ ನಿರ್ಧಾರಕ ಸಂಗತಿಯಾಗಿ ಕೆಲಸ ಮಾಡುತ್ತಿತ್ತು. ಅದರ ಆಚರಣೆಯ ವಿಕಾರಗಳನ್ನು ಅರಿತಿದ್ದರೂ ರಾಜಕೀಯ ವಲಯದ ಹಿತಾಸಕ್ತಿಗಳು ಜಾತಿಪದ್ಧತಿಯನ್ನು ವ್ಯವಸ್ಥಿತವಾಗಿ ಕಾಪಾಡಿಕೊಳ್ಳುವ. ಉಳಿಸಿಕೊಳ್ಳುವ ಯತ್ನ ಮಾಡುತ್ತಲೇ ಬಂದಿವೆ. ರಾಜಕೀಯ ವಲಯದಲ್ಲಿ ಜಾತಿಯಾಧಾರಿತ ಸ್ಥಾನಮಾನಗಳ ಹಂಚಿಕೆ ಸಮರ್ಪಕವಾಗಿರದಿದ್ದಾಗ ಅನ್ಯಾಕ್ರಾಂತತೆ ತಲೆ ಎತ್ತುತ್ತದೆ. ಒಂದು ಬಾರಿ ರಾಜಕೀಯ ವಲಯದಲ್ಲಿ ಸ್ಥಾಪಿತವಾದ  ಜಾತಿಯ ಪ್ರಾಬಲ್ಯ ನಂತರ ಮಿಕ್ಕ ಎಲ್ಲ ವಲಯಗಳಲ್ಲಿಯೂ ತನ್ನ ಪ್ರಭಾವವನ್ನು ಬೀರದೇ ಇರಲಾರದು. ಕೆಳಜಾತಿಗಳ ಮೇಲೆ ಮೇಲಿನ ಜಾತಿಗಳ ದೌರ್ಜನ್ಯ ಸಾಮಾಜಿಕ ಅನುಮತಿಯೊಂದಿಗೆ ನಡೆಯುವ ಹಾಗೆ ಮುಂದುವರೆಸಿಕೊಂಡು ಬರಲಾಗಿದೆ. ಜಾತಿಯ ಏಣಿ ಶ್ರೇಣಿಯಲ್ಲಿಯ ಕಟ್ಟುನಿಟ್ಟಾದ ಸ್ಥಾನಮಾನಗಳನ್ನು ಕೆಳಸ್ತರಗಳಿಗೆ ನೆನಪು ಮಾಡಿಕೊಡುವ ನಿಟ್ಟಿನಲ್ಲಿ ಆಗಾಗ ಕೆಳ ಜಾತಿಗಳ ಮೇಲೆ ಮೇಲಿನವರ ಅಟ್ಟಹಾಸಗಳು ಬಯಲುಗೊಳ್ಳುವುದಿದೆ. ಪತ್ರಕರ್ತ ಎಮ್.ಜೆ. ಅಕ್ಬರ್ ಅವರು ಒಂದು ಕಡೆ ಹೀಗೆ ಬರೆಯುತ್ತಾರೆ: ‘1981 ರ ಸಂದರ್ಭದಲ್ಲಿ ಉತ್ತರ ಪ್ರದೇಶದ ಅನೇಕ ಹಳ್ಳಿಗಳಲ್ಲಿ ಹರಿಜನರನ್ನು ಕೊಲ್ಲಲಾಯಿತು. ಸಾಮಾಜಿಕ ಏಣಿ ಶ್ರೇಣಿಯಲ್ಲಿ ಅವರ ಸ್ಥಾನ ಮಾನಗಳು ಏನಿವೆ ಎನ್ನುವುದನ್ನು ನೆನಪು ಮಾಡಿಕೊಡುವುದೇ ಆ ಕೊಲೆಗಳ ಹಿಂದಿನ ಸಂದೇಶವಾಗಿತ್ತು’. ಈಗಲೂ ಈ ಬಗೆಯ ಹಲ್ಲೆಗಳು ಆಗಾಗ ಸುದ್ದಿಯಾಗುವುದಿದೆ. ಈ ಜಾತಿಕಾರಣ ಪರೋಕ್ಷವಾಗಿ ರಾಷ್ಟ್ರೀಯ ಐಕ್ಯತೆಗೆ ಗಂಡಾಂತರಕಾರಿಯಾಗಿ ಪರಿಣಮಿಸಿರುವುದೂ ಹೌದು.

4 thoughts on “ಜಾತಿಕಾರಣ ಹಾಗೂ ಅನ್ಯಾಕ್ರಾಂತತೆ

  1. Subash Rajamane

    “ಅಂಬೇಡ್ಕರರು ರಾಜಕಾರಣವನ್ನು ನಿಯಂತ್ರಿಸುವ ಮಾರ್ಗವಾಗಿ ಜಾತಿಯನ್ನು ಪರಿಗಣಿಸಿದರು. ಗಾಂಧೀಜಿ ಮಾತ್ರ ಜಾತಿಯ ಮೂಲಕ ಅಸ್ಥಿತ್ವವನ್ನು ಗುರುತಿಸಿಕೊಳ್ಳುವುದನ್ನು ನಿರಾಕರಿಸಿದರು.”ಎಂದು ಹೇಳುವ ಜೋಗುರ ಅವರು ಗಾಂಧಿ ಕುರಿತ ಈ ಹೇಳಿಕೆಯನ್ನು ಒಪ್ಪುವುದು ಕಷ್ಟ.ಯಾಕೆಂದರೆ ಗಾಂಧಿಗೆ ಹಿಂದೂ ಚತುರ್ ವರ್ಣದಲ್ಲಿ ಗಾಢವಾದ ನಂಬಿಕೆಯಿತ್ತು.ಜಾತಿ ಪದ್ಧತಿಯ ಮೂಲ ಸಂರಚನೆಯನ್ನು ಯಾವತ್ತು ಪ್ರಶ್ನಿಸಿದವರಲ್ಲ.ಹಾಗಾಗಿ ಗಾಂಧಿ ಜಾತಿ ಪದ್ಧತಿಯ ಅಸ್ತಿತ್ವವನ್ನು ನಿರಾಕರಿಸಿದವಲ್ಲ;ಒಂದರ್ಥದಲ್ಲಿ ಅವರಿಗೆ ಈ ಸನಾತನ ಪದ್ಧತಿಯಲ್ಲಿ ಯಾವುದೇ ದೋಷ ಕಾಣಲಿಲ್ಲ. ಗಾಂಧಿ ಕೇವಲ untoucbality ಬಗ್ಗೆ ಮಾತ್ರ ದನಿ ಎತ್ತಿದರು.ಆದರೆ ಜಾತಿ ಅಸ್ತಿತ್ವ ಹಾಗೇ ಉಳಿಯಬೇಕೆಂದೆ ಅವರು ಬಯಸಿದ್ದರು.

    Reply
  2. mahadev hadapad

    ಹಗ್ಗ ಹರಿಯದೇ ಕೋಲು ಮುರಿಯದೆ ಹಾವು ಸಾಯಬೇಕೆನ್ನುವ ಮನಃಸ್ಥಿತಿ ಗಾಂಧಿಯವರದ್ದಾಗಿತ್ತೇ…?

    Reply
  3. raviraj sagar

    ಗಾಂದಿ , ಅಂಬೇಡ್ಕರ್ ನಮ್ಮಲ್ಲಿ ಜನಿಸದಿದ್ದ್ರೆರೆ ನಾವು ನಿಜಕ್ಕೂ ಇನ್ನೆಸ್ತು ರೀತಿಯ ಜಾತಿ ಸಂಕೋಲೆಯಲ್ಲಿ ಸಿಲುಕುತ್ತಿದ್ದೆವೂ..? ಗಾಂದಿ ಅಂಬೇಡ್ಕರ್ ಕುರಿತು ಯಾವುದೊ ಒಂದು ಘಟನೆ , ಒಂದು ವಿಚಾರ ಹಿಡಿದು ಅವರ ಋನಾತ್ಮಕ ವಿಮರ್ಶೆ ಸಲ್ಲದು . ಅವರು ನಿಜಕ್ಕೂ ದುರ್ಬಲರ ದೈವ , ವಿಶ್ವದ ಮಹಾನ್ ಮಾನವತಾ ವಾದಿಗಳು .

    Reply
  4. Shanthala Damle

    ರಾಜೀವ್ ಗೋಸ್ವಾಮಿ ಬೆಂಕಿ ಹಚ್ಚಿಕೊಂಡಾಗ ಉರಿದು ಶವವಾಗಲಿಲ್ಲ. ಸುಮಾರು ೧೪ ವರ್ಷಗಳ ನಂತರ, ಸುಟ್ಟಿದ್ದರಿಂದಲೇ ಹುಟ್ಟಿಕೊಂಡ ವಿವಿಧ ಆರೋಗ್ಯದ ಸಮಸ್ಯೆಗಳಿಂದ ತೀರಿಕೊಂಡ.

    Reply

Leave a Reply to Subash Rajamane Cancel reply

Your email address will not be published. Required fields are marked *