Monthly Archives: September 2012

ಭೂಮಿ ಹುಟ್ಟಿದ್ದು ಹೇಗೆ – ಲೇಖನ: ಭಾಗ- 4

 


ಕಮಲಾಕರ
© ಹಕ್ಕು: ಮೌಲ್ಯಾಗ್ರಹ ಪ್ರಕಾಶನ


150 ಕೋಟಿ ವರ್ಷಗಳ ಹಿಂದೆ – ಭೂಮಿಯಲ್ಲಿ ಖಂಡಗಳು ವ್ಯಾಪಿಸಿಕೊಂಡವು. ಅಷ್ಟೇ ಅಲ್ಲದೆ ಈ ಭೂಪ್ರದೇಶಗಳು ಚಲಿಸುವುದಕ್ಕೂ ಆರಂಭಿಸಿದ್ದವು. 1912ರಲ್ಲಿ ಆಲ್ಫ್ರೆಡ್ ವ್ಯಾಗ್ನರ್ ಎಂಬ ವಿಜ್ಞಾನಿ ಖಂಡಗಳ ಅಲೆತದ ಸಿದ್ಧಾಂತವನ್ನು ಮಂಡಿಸಿದರು. ಒಮ್ಮೆ ಖಂಡಗಳು ಒಂದೇ ಆಗಿದ್ದು ಕಾಲಾನಂತರ ಭಿನ್ನವಾಗಿ ಹರಡಿಕೊಂಡವು ಎಂದು ವ್ಯಾಗ್ನರ್ ಪ್ರತಿಪಾದಿಸಿದರು. ವಿಜ್ಞಾನಿಗಳು ಅವರ ವಾದವನ್ನು ಒಪ್ಪಿಕೊಳ್ಳಲಿಲ್ಲ. ತಮ್ಮ ಪ್ರತಿಪಾದನೆಗೆ ತಕ್ಕ ಪುರಾವೆ ಹುಡುಕಾಟದಲ್ಲಿ ವ್ಯಾಗ್ನರ್ ವಿಧಿವಶವಾದರು. ಆದರೆ ಅವರು ಪ್ರತಿಪಾದಿಸಿದ ವಿಚಾರ ನಿಜವಾಯಿತು.

ಸಾಗರದ ತಳದಲ್ಲಿ ಶಿಲಾರಸ ಸದಾ ಚಲಿಸುತ್ತಲೇ ಇತ್ತು. ತೀವ್ರವಾದ ಶಾಖದಿಂದ ಭೂಮಿಯ ಮೇಲ್ಪದರ ಬಿರುಕು ಕಾಣಿಸಿಕೊಂಡು ಶಿಲಾರಸ ಹೊಸ ಭೂಮಿ ಪ್ರದೇಶವನ್ನು ಸೃಷ್ಟಿ ಮಾಡುತ್ತಿತ್ತು. ಜೊತೆಗೆ ನಿರಂತರವಾಗಿ ಚಲಿಸುತ್ತಲೆ ಇರುತ್ತಿದ್ದ ಲಾವಾರಸ ಬಿರುಕುಬಿಟ್ಟ ಭೂತೊಗಟೆಯನ್ನು ತನ್ನೊಂದಿಗೆ ಸೆಳೆದೊಯ್ಯುತ್ತಿತ್ತು. ಈ ಪ್ರಕ್ರಿಯೆ ಭೂಭಾಗಗಳನ್ನು ಚಲಿಸುವಂತೆ ಮಾಡಿತ್ತು.

ಉದಾಹರಣೆ, ಫಿಷರ್ ಎನ್ನುವ ಜ್ವಾಲಾಮುಖಿ ಒಂದೇ ಆಗಿದ್ದ ಯೂರೋಪ್ ಮತ್ತು ಅಮೆರಿಕ ಖಂಡಗಳನ್ನು ಬೇರ್ಪಡಿಸಿತು.

ಹೀಗೆ ಖಂಡಗಳ ಅಲೆತ ಕೂಡ ಬಹಳ ವರ್ಷಗಳ ಕಾಲ ನಡೆಯಿತು. ವರ್ಷಕ್ಕೆ ಮೂರು ಸೆಂಟಿ ಮೀಟರ್ ನಂತೆ ಖಂಡಗಳು ಚಲಿಸಿದವು.

ಮಹಾಖಂಡ

ಚಲಿಸುತ್ತಿದ್ದ ಖಂಡಗಳ ನಡುವೆ ಮಹಾಘರ್ಷಣೆಯೊಂದು ಸಂಭವಿಸಿತು. ಆಗ ಹುಟ್ಟಿದ್ದು ಒಂದು ಮಹಾಖಂಡ.

100 ಕೋಟಿ ವರ್ಷಗಳ ಹಿಂದೆ ಭೂಖಂಡಗಳ ನಿರಂತರ ಚಲನೆಯ ಪರಿಣಾಮ ಕೆನಡ ಮತ್ತು ಅಮೆರಿಕಗಳ ನಡುವೆ ಬೇರೆಬೇರೆ ಭೂಖಂಡಗಳು ಡಿಕ್ಕಿ ಹೊಡೆದವು.

ಹೀಗೆ ಸೇರಿದ ಭೂಖಂಡ ಒಂದು ಮಹಾಖಂಡವನ್ನೇ ನಿರ್ಮಿಸಿದವು. ಇದನ್ನು ವಿಜ್ಞಾನಿಗಳು ರೊಡೀನಿಯಾ, ಅಂದರೆ ತಾಯಿನಾಡು ಅಂತ ಕರೆದರು.  ರೊಡೀನಿಯಾ ಬಂಜರು ಖಂಡವಾಗಿತ್ತು. ಅಲ್ಲಿ ಯಾವ ರೀತಿಯ ಜೀವಿಗಳೂ ಇರಲಿಲ್ಲ. ಆದರೆ ಸಾಗರದೊಳಗಿನ ಜೀವಿಗಳಿಗೆ ದೊಡ್ಡ ಆಘಾತವನ್ನು ನೀಡಿತು.

ಈ ಮಹಾಖಂಡ ಭೂಮಿಯ ಮೇಲೆ ಹರಿಯುತ್ತಿದ್ದ ಬೆಚ್ಚನೆಯ ನೀರಿನ ಪ್ರವಾಹಕ್ಕೆ ಅಡ್ಡವಾಯಿತು. ಇದರಿಂದ ಧ್ರುವಪ್ರದೇಶದ ಹಿಮ ತನ್ನ ವ್ಯಾಪ್ತಿ ವಿಸ್ತರಿಸಿತು. ನಿಧಾನವಾಗಿ ಇಡೀ ಸಾಗರಗಳುಹಿಮದ ಪದರಗಳಿಂದ ಮುಚ್ಚಲ್ಪಟ್ಟವು. ಉಷ್ಣಾಂಶ -40 ಡಿಗ್ರಿ ಸೆಲ್ಷಿಯಸ್ ಗೆ ಇಳಿಯಿತು. ಒಂದು ಮೈಲಿಗೂ ಹೆಚ್ಚು ಆಳಕ್ಕೆ ಹಿಮ ವ್ಯಾಪಿಸಿಕೊಂಡಿತು.

ಭೂಮಿ ಹಿಮದ ಗೋಳವಾಯಿತು.

ಬೆಂಕಿಯುಂಡೆ, ಜಲಪ್ರಳಯವನ್ನು ನೋಡಿದ ಭೂಮಿ ಈಗ ಸಂಪೂರ್ಣ ಹಿಮಗಡ್ಡೆಯಾಗಿ ಹೋಗಿತ್ತು. ರೊಡೀನಿಯಾ ಖಂಡ ಸೃಷ್ಟಿಸಿದ ಈ ಹವಾಮಾನ ವೈಪರೀತ್ಯದಿಂದಾಗಿ ಈ ಗ್ರಹದ ಮೇಲಿದ್ದ ಸಾಗರ ಜೀವಿಗಳು ನಾಶವಾದವು.

ಆದರೆ ಹಿಮನದಿಯ ಅಡಿಯಲ್ಲೂ ಜ್ವಾಲಾಮುಖಿ ಚಟುವಟಿಕೆಗಳು ಕ್ರಿಯಾಶೀಲವಾಗಿದ್ದವು. ಇದರಿಂದಾಗಿ ಬಿಡುಗಡೆಯಾದ ಶಾಖ ಮತ್ತು ಇಂಗಾಲದ ಡೈಆಕ್ಸೈಡ್ ಹಿಮಗಡ್ಡೆಯ ದಟ್ಟಪದರದಲ್ಲಿ ಬಿರುಕು ಮೂಡಿಸಿತು. ರೊಡೇನಿಯಾ ಮಹಾಖಂಡ ಒಡೆಯಿತು.

ಭೂಮಿಯನ್ನು ಆವರಿಸಿಕೊಂಡಿದ್ದ ಮಂಜಿನ ಪದರ ಕರಗಿತು. ಆಮ್ಲಜನಕದ ಪ್ರಮಾಣ ಹೆಚ್ಚಿತು. ಸಾಗರದೊಳಗೆ ಬದುಕುಳಿದ ಜೀವಿಗಳು ವಿಕಾಸಗೊಂಡವು. ವಿಚಿತ್ರವಾದ ಮತ್ತು ಅಪಾಯಕಾರಿ ಜೀವಿಗಳು ಬೆಳೆದವು.

ಭೂಮಿಯ ವಾತಾವರಣದಲ್ಲಿ ಈಗ ಹಿಂದೆಂದಿಗಿಂತ ಅಪಾರ ಪ್ರಮಾಣದಲ್ಲಿ ಆಮ್ಲಜನಕವಿತ್ತು. ಜೀವವಿಕಾಸಕ್ಕೆ ಇದು ಪ್ರಮುಖ ಕಾರಣವಾಯಿತು.

ಕೆನಡಾದ ಬರ್ಬಸ್ ಶೆಲ್ ಕ್ವಾರಿ ಪಳೆಯುಳಿಕೆ ಜಗತ್ತಿನ ಕಿಟಕಿ ಎನಿಸಿಕೊಂಡಿರುವ ಸ್ಥಳ. ಅತ್ಯಲ್ಪಕಾಲದಲ್ಲಿ ಜೀವಿಗಳು ವಿಕಾಸ ಹೊಂದಿದ್ದಕ್ಕೆ ಮತ್ತು ವಿಕಾಸ ಹೊಂದಿದ ಜೀವಿಗಳ ವೈವಿಧ್ಯತೆಗೆ ಪುರಾವೆ ಸಿಕ್ಕಿದ್ದು ಇಲ್ಲಿಂದಲೆ.

ಅಮೆರಿಕದ ವಿಜ್ಞಾನಿ ಚಾರ್ಲ್ಸ್ ಡ್ಯುಲಮ್ ಈ ಕ್ವಾರ್ರಿಯನ್ನು ಪತ್ತೆ ಮಾಡಿದ್ದು. ಸ್ವತಃ ವಾಲ್ಕರ್ ಈ ಕ್ವಾರ್ರಿಯಲ್ಲಿ 60 ಸಾವಿರ ಪಳೆಯುಳಿಕೆಗಳನ್ನು ಸಂಗ್ರಹಿಸಿದರು. ನಂತರದ ದಿನಗಳಲ್ಲಿ ಒಂದು ಲಕ್ಷಕೂ ಹೆಚ್ಚು ಪಳೆಯುಳಿಕೆಗಳನ್ನು ವಿವಿಧ ವಿಜ್ಞಾನಿಗಳು ಸಂಗ್ರಹಿಸಿದರು.

50 ಕೋಟಿ ವರ್ಷಗಳ ಹಿಂದೆ ಜೀವಿಗಳು ಸ್ಫೋಟಕ ವೇಗದಲ್ಲಿ ವಿಕಾಸ ಹೊಂದಿದ್ದು ಈ ಪಳೆಯುಳಿಕೆಗಳಿಂದ ತಿಳಿದು ಬಂತು. ಇದನ್ನೇ ಕ್ಯಾಂಬ್ರಿಯನ್ ಸ್ಫೋಟವೆಂದು ಕರೆಯಲಾಯಿತು. ಈ ಕಾಲದ ಸಾಗರ ಜೀವಿಗಳು ಕೇವಲ ಸಸ್ಯಗಳನ್ನಷ್ಟೇ ತಿಂದು ಬದುಕುತ್ತಿರಲಿಲ್ಲ. ಅವು ಮತ್ತೊಂದು ಸಹ-ಜೀವಿಯನೇ ತಿಂದು ಬದುಕಲು ಆರಂಭಿಸಿದ್ದವು.

ಇದೇ ಸಮಯದಲು ಅವುಗಳ ದೇಹ ಹಲವು ಮಾರ್ಪಾಟುಗಳನ್ನು ಕಾಣಲು ಆರಂಭಿಸಿದವು. ಕಣು, ಅಸ್ಥಿಪಂಜರ, ಹಲ್ಲು ಮುಂತಾದವು ಹಲವು ಜೀವಿಗಳಲ್ಲು ವಿಕಾಸವಾಗಿದ್ದವು. ಆಧುನಿಕ ಜೀವಿಗಳು ಭೂಮಿಗೆ ಬಂದವು.

ನಂತರದ 10 ಕೋಟಿ ವರ್ಷಗಳಲ್ಲಿ ವಾತಾವರಣದಲ್ಲಿ ಆಮ್ಲಜನಕದ ಪ್ರಮಾಣ ಮತ್ತಷ್ಟು ಹೆಚ್ಚಿತು. ಈ ಹೆಚ್ಚಳದಿಂದ ಓಜೋನ್ ಪದರ ರಚನೆಯಾಗಿ ಭೂಮಿಯನ್ನು ಸುತ್ತುವರೆಯಿತು. ಇದು ಸೂಕ್ಷ್ಮ ಅತಿನೇರಳೆ ಕಿರಣಗಳಿಂದ ಭೂಮಿಯ ಮೇಲಿದ್ದ ಸೂಕ್ಷ್ಮ ಜೀವಿಗಳನ್ನು ಉಳಿಸಿತು.

(ಮುಂದುವರೆಯುವುದು…)

ಭೂಮಿ ಹುಟ್ಟಿದ್ದು ಹೇಗೆ? ವಿಡಿಯೊ ಡಾಕ್ಯುಮೆಂಟರಿ:

ಗುಜರಾತ್ ಹತ್ಯಾಕಾಂಡ (ಮೋದಿ ಮತ್ತು ಮುಖವಾಡ)


– ಡಾ.ಎನ್.ಜಗದೀಶ್ ಕೊಪ್ಪ


                                         
ಗುಜರಾತ್‌ನಲ್ಲಿ 2002 ರಲ್ಲಿ ಗೋದ್ರಾ ರೈಲು ನಿಲ್ದಾಣದ ಬಳಿ ಸಂಭವಿಸಿದ ಕರಸೇವಕರ ಹತ್ಯೆಗೆ ಪ್ರತಿಯಾಗಿ ಇಡೀ ರಾಜ್ಯಾದಂತ್ಯ ಹಿಂದೂ ಸಂಘಟನೆಗಳು ನಡೆಸಿದ ಹಿಂಸಾಚಾರ, ಕೊಲೆ, ಸುಲಿಗೆ, ನರಮೇಧ ಇಡೀ ಭಾರತ ಮಾತ್ರವಲ್ಲ, ಜಗತ್ತನ್ನೇ ಬೆಚ್ಚಿ ಬೀಳಿಸಿತ್ತು. ಆಗ ನರೇಂದ್ರಮೋದಿ ಎಂಬ ಗೋವಿನ ಮುಖವಾಡದ ವ್ಯಾಘ್ರ ಮುಖ್ಯಮಂತ್ರಿಯಾಗಿದ್ದುಕೊಂಡು ಇಂತಹ ಅಮಾನವೀಯ ನರಹತ್ಯೆಯನ್ನು ಬಹಿರಂಗವಾಗಿ ಪ್ರಾಯೋಜಿಸಿದ್ದು ರಹಸ್ಯದ ಸಂಗತಿಯಾಗಿ ಉಳಿದಿರಲಿಲ್ಲ.

ಜಗತ್ತಿನ ಶ್ರೇಷ್ಟ ಸುದ್ಧಿ ಮಾಧ್ಯಮ ಸಂಸ್ಥೆಗಳಾದ ರಾಯಿಟರ್ ಮತ್ತು ಅಸೋಷಿಯೇಟೆಡ್ ಪ್ರೆಸ್‌ನ ವರದಿಗಾರರು ಮತ್ತು ಛಾಯಾಚಿತ್ರ ಗ್ರಾಹಕರು ಅಹಮದಾಬಾದ್ ಸೇರಿದಂತೆ ಗುಜರಾತ್‌ನ ವಿವಿಧ ನಗರಗಳಲ್ಲಿ ವಿ.ಹೆಚ್.ಪಿ. ಮತ್ತು ಭಜರಂಗದಳ ಕಾರ್ಯಕರ್ತರು ನಡೆಸಿದ ಹತ್ಯಾಕಾಂಡವನ್ನು ಪರಿಣಾಮಕಾರಿಯಾಗಿ ದಾಖಲಿಸಿ ಜಗತ್ತಿನ ಮುಂದೆ ಇಟ್ಟರು.  ಭಾರತದ ಇತಿಹಾಸದಲ್ಲಿ ಕಂಡರಿಯದ ಸರಣಿ ಮಾನವ ಹತ್ಯೆಯ ಮನಕಲಕುವ ಇಂತಹ ಅಮಾನವೀಯ ಕೃತ್ಯಕ್ಕೆ ಗುಜರಾತ್‌ನ ಪೊಲೀಸರು ಮತ್ತು ಅಲ್ಲಿನ ರಾಜಕಾರಣಿಗಳು ಕೈ ಜೋಡಿಸಿದ್ದು ಕೂಡ ರಹಸ್ಯವಾಗಿ ಉಳಿದಿರಲಿಲ್ಲ. ಇದೆಲ್ಲವನ್ನೂ ಭಾರತದ ಮಾಧ್ಯಮ ಸೇರಿದಂತೆ ಜಗತ್ತಿನ ಮಾಧ್ಯಗಳು ಸಹ ಪ್ರತಿಬಿಂಬಿಸಿದ್ದವು.

ಅಧಿಕಾರದ ಗದ್ದುಗೆಗಾಗಿ ಧರ್ಮವನ್ನು ಆಯುಧವಾಗಿ ಬಳಸಿಕೊಳ್ಳುವ ಕೆಟ್ಟ ಇತಿಹಾಸವಿರುವ ಬಿ.ಜೆ.ಪಿ. ಪಕ್ಷವು ಈ ಸಂದರ್ಭದಲ್ಲಿ ರಣಹದ್ದಿನಂತೆ ಅಲ್ಪ ಸಂಖ್ಯಾತರ ಮೇಲೆ ಎರಗಿ ಬಿದ್ದಿತು. ಒಂದು ರಾಜ್ಯದ ಮುಖ್ಯ ಮಂತ್ರಿಯಾಗಿ ಎಲ್ಲಾ ಕೋಮುಗಳ ಜೀವ ರಕ್ಷಿಸಬೇಕಾಗಿದ್ದ ನರೇಂದ್ರ ಮೋದಿ, ರಕ್ಕಸ ಪಡೆಯ ನಾಯಕನಂತೆ ಹಿಂಸಾಚಾರದ ಹಿಂದೆ ನಿಂತಿದ್ದು ರಾಜಕೀಯ ಇತಿಹಾಸದ ಕಪ್ಪುಚುಕ್ಕೆಗಳಲ್ಲಿ ಒಂದು. ಇದು ಇವತ್ತಿಗೂ ಪ್ರತಿಯೊಬ್ಬ ಪ್ರಜ್ಞಾವಂತ ಭಾರತೀಯನಿಗೆ ಕಾಡುವ ನೋವು.

ಈ ಘಟನೆಯ ನಂತರ ತನ್ನ ತಪ್ಪುಗಳನ್ನು ಮುಚ್ಚಿಕೊಳ್ಳಲು ಮೋದಿ ನಡೆಸಿದ ತಂತ್ರ, ಹಾಕಿದ ವೇಷ, ತೊಟ್ಟ ಮುಖವಾಡಗಳು ಲೆಕ್ಕಕ್ಕಿಲ್ಲ. ಆದರೆ, ಮೋದಿಯ ಎಲ್ಲಾ ತಂತ್ರಗಾರಿಕೆಯ ವಿರುದ್ಧ ನಿರಂತರವಾಗಿ ಸಂತ್ರಸ್ತರ ಪರ ಹೋರಾಟ ನಡೆಸಿದ ಒಬ್ಬ ಮಹಿಳೆ (ತೀಸ್ತಾ ಸೆತಲ್ವಾಡ್) ಮತ್ತು ಪ್ರಸಿದ್ಧ ಪತ್ರಕರ್ತ ತೇಜ್ ಪಾಲ್ ನೇತೃತ್ವದ ತೆಹಲ್ಕಾ ಎಂಬ ಇಂಗ್ಲಿಷ್ ನಿಯತಕಾಲಿಕೆಯ ಹೋರಾಟದ ಫಲವಾಗಿ ಗುಜರಾತ್ ನರಮೇಧದ ಸಂತ್ರಸ್ತರಿಗೆ ಅಂತಿಮವಾಗಿ ನ್ಯಾಯ ದೊರೆತಿದೆ. ಗುಜರಾತ್ ಮುಖ್ಯಮಂತ್ರಿ ನರೆಂದ್ರ ಮೋದಿಯ ಮುಖವಾಡ ಕಳಚಿಬಿದ್ದಿದೆ.

ಶುಕ್ರವಾರ ಗುಜರಾತ್‌ನ ಅಹಮದಾಬಾದ್‌ನಲ್ಲಿ ಗೋಧ್ರಾ ಘಟನೆಯ ನಂತರ ನಡೆದ ಹಿಂಸೆ ಮತ್ತು ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲು ಸ್ಥಾಪಿತವಾಗಿದ್ದ ವಿಶೇಷ ನ್ಯಾಯಾಲಯ 2002ರಲ್ಲಿ ನರೋಡ ಪಟಿಯಾ ಎಂಬ ಸ್ಥಳದಲ್ಲಿ ನಡೆದ 97 ಮಂದಿಯ ಹತ್ಯೆಗೆ ಸಂಬಂಧಿಸಿದಂತೆ 31 ಮಂದಿಗೆ ವಿವಿಧ ರೂಪದ ಶಿಕ್ಷೆಯನ್ನು ಪ್ರಕಟಿಸಿದೆ. ಘಟನೆಗೆ ಸಂಚು ರೂಪಿಸಿದ ಆರೋಪದ ಮೇಲೆ ಮೋದಿಯ ಆಪ್ತರಲ್ಲಿ ಒಬ್ಬಳಾಗಿದ್ದ, ಮಾಜಿ ಸಚಿವೆ ಹಾಗೂ ಹಾಲಿ ನರೋಡ ಪಟಿಯಾ ಶಾಸಕಿಯಾದ ಮಾಯಾಬೆನ್ ಎಂಬಾಕೆಗೆ 28 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಹತ್ಯೆಯ ನಾಯಕತ್ವ ವಹಿಸಿದ್ದ ಭಜರಂಗ ದಳದ ಮುಖಂಡ ಬಾಬು ಬಜರಂಗಿ ಎಂಬಾತನಿಗೆ ಜೀವನ ಪೂರ್ತಿ ಜೈಲು ಶಿಕ್ಷೆ ಪ್ರಕಟಿಸಲಾಗಿದೆ. ಉಳಿದ 29 ಮಂದಿ ನರ ಹಂತಕರಿಗೆ 14 ರಿಂದ 21 ವರ್ಷದವರೆಗೆ  ಶಿಕ್ಷೆ ನೀಡಲಾಗಿದೆ.

ಭಾರತದ ನ್ಯಾಯಾಲಯದ ಇತಿಹಾಸದಲ್ಲಿ ಇದೊಂದು ಮಹತ್ವದ ತೀರ್ಪು ಎಂದರೆ, ಅತಿಶಯೋಕ್ತಿ ಅಲ್ಲ. ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಸಮಾಜದಲ್ಲಿ ಕಾನೂನು ಕೈಗೆತ್ತಿಕೊಳ್ಳುವ ರಾಜಕಾರಣಿಗಳಿಗೆ ಇದು ಎಚ್ಚರಿಕೆಯ ಗಂಟೆಯಂತಿದೆ.

ಗುಜರಾತ್‌ನ ಹಿಂಸೆಯ ರೂವಾರಿಯೆಂದು ಕರೆಯಲ್ಪಡುವ ನರೇಂದ್ರ ಮೋದಿ ಇಷ್ಟೆಲ್ಲಾ ಕಪ್ಪು ಚುಕ್ಕೆಯ ನಡುವೆ ಮತ್ತೇ ಬಿ.ಜೆ.ಪಿ. ಪಕ್ಷವನ್ನು ಅಧಿಕಾರಕ್ಕೆ ತಂದಿದ್ದು, ತಾನೇ ಮುಖ್ಯ ಮಂತ್ರಿ ಪದವಿಗೆ ಏರಿದ್ದು ಇವೆಲ್ಲಾ ಈಗ ಇತಿಹಾಸ. ಭಾರತದ ರಾಜಕಾರಣವನ್ನು ಮತ್ತು ಇಲ್ಲಿನ ಬಡತನ, ಅನಕ್ಷರತೆ, ಜಾತೀಯತೆ, ಹಾಗೂ ಧರ್ಮದ ಪ್ರಭಾವ ಕುರಿತು ಒಳನೋಟವುಳ್ಳವರಿಗೆ ಇದು ಅಚ್ಚರಿಯ ಸಂಗತಿಯೇನಲ್ಲ.

ತನಗೆ ಅಂಟಿದ ಹತ್ಯಾಕಾಂಡದ ಕಳಂಕವನ್ನು ತೊಳೆದು ಕೊಳ್ಳುವ ನಿಟ್ಟಿನಲ್ಲಿ ಮೋದಿ ಕಳೆದ ಎಂಟು ವರ್ಷಗಳ ಅವಧಿಯಲ್ಲಿ ಗುಜರಾತ್ ರಾಜ್ಯದ ಅಭಿವೃದ್ಧಿಗೆ ಶ್ರಮ ಪಟ್ಟಿರುವುದು ನಿಜ. ವ್ಯಯಕ್ತಿಕ ನೆಲೆಯಲ್ಲಿ ಒಂದಿಷ್ಟೂ ಭ್ರಷ್ಟಾಚಾರದ ಕಳಂಕವನ್ನು ಹೊಂದಿರದ ನರೇಂದ್ರ ಮೋದಿ ಬ್ರಹ್ಮಚಾರಿಯಾಗಿದ್ದು ಕೊಂಡು ಗುಜರಾತ್ ರಾಜ್ಯವನ್ನು ಮಾದರಿ ರಾಜ್ಯವನ್ನಾಗಿ ರೂಪಿಸಿದ್ದಾರೆ. ಇದರಲ್ಲಿ ಎರಡು ಮಾತಿಲ್ಲ. ಅಲ್ಲಿನ ರಸ್ತೆಗಳು, ರೈತರಿಗೆ ಸಿಗುತ್ತಿರುವ ನಿರಂತರ 24 ಗಂಟೆಗಳ ವಿದ್ಯುತ್, ಕುಡಿಯುವ ನೀರು, ಆರೋಗ್ಯ ಸೇವೆ, ಕೃಷಿ ಮತ್ತು ಶಿಕ್ಷಣಕ್ಕೆ ನೀಡಿರುವ ಆದ್ಯತೆ, ಕೈಗಾರಿಕೆಗಳ ಬೆಳವಣಿಗೆ ಇವೆಲ್ಲವೂ ಭಾರತದಲ್ಲಿ ಗುಜರಾತ್ ರಾಜ್ಯವನ್ನು ಮಾದರಿ ರಾಜ್ಯವನ್ನಾಗಿ ಪರಿವರ್ತಿಸಿವೆ. ಆದರೆ, ಈ ಶ್ರಮ ಮೋದಿಯ ಕಳಂಕವನ್ನು ತೊಡೆದುಹಾಕಲಾರವು. ಮೋದಿಯ ಇಂದಿನ ಸ್ಥಿತಿ ಮೈಯೆಲ್ಲಾ ಬಂಗಾರ ಅಂಡು ಮಾತ್ರ ಹಿತ್ತಾಳೆ ಎಂಬಂತಾಗಿದೆ.

ಇತ್ತೀಚೆಗಿನ ದಿನಗಳಲ್ಲಿ ಬಿ.ಜೆ.ಪಿ. ಪಕ್ಷದಲ್ಲಿ ರಾಷ್ಟೀಯ ನಾಯಕನಾಗಿ ಗುರುತಿಸಿಕೊಂಡು ಮುಂದಿನ ಪ್ರದಾನಿ ಕುರ್ಚಿಯ ಮೇಲೆ ಕಣ್ಣಿಟ್ಟಿದ್ದ ಮೋದಿಗೆ ನ್ಯಾಯಾಲಯದ ತೀರ್ಪು ಅಡ್ಡಗಾಲು ಹಾಕಿದೆ. ಮೋದಿಯ ಅಭಿವೃದ್ಧಿಯ ಸಾಧನೆಗೆ ಹೋಲಿಸಿದರೆ, ಬಿ.ಜೆ.ಪಿ. ಪಕ್ಷದ ಜೊತೆ ಮೈತ್ರಿ ಹೊಂದಿರುವ ಬಿಹಾರದ ಜೆ.ಡಿ.ಯು. ಪಕ್ಷದ ನಿತೀಶ್ ಕುಮಾರ್ ಅಲ್ಲಿನ ಮುಖ್ಯಮಂತ್ರಿಯಾಗಿ ಮಾಡಿರುವ ಸಾಧನೆ ಭಾರತೀಯ ರಾಜಕೀಯ ಇತಿಹಾಸದಲ್ಲಿ ಒಂದು ಅನನ್ಯ ಸಾಧನೆ ಎಂದು ಬಣ್ಣಿಸಬಹುದು.

ಸ್ವಾತಂತ್ರ್ಯಾನಂತರದ ದಿನಗಳಿಂದಲೂ ಅನಕ್ಷರಸ್ತರ, ದೀನ ದಲಿತರ, ನಾಡಾಗಿ ಉಳ್ಳವರ ದಬ್ಬಾಳಿಕೆಯಲ್ಲಿ ನಲುಗಿ ಹೋಗಿದ್ದ, ಜಂಗಲ್ ರಾಜ್ ಎಂದು ಅಡ್ಡ ಹೆಸರಿನಲ್ಲಿ ಕರೆಸಿಕೊಳ್ಳುತ್ತಿದ್ದ ಬಿಹಾರ್ ರಾಜ್ಯವನ್ನು ನಿತೀಶ್ ಕುಮಾರ್ ತಮ್ಮು ಶುದ್ದ ಚಾರಿತ್ಯ ಮತ್ತು ಬದ್ಧತೆಯಿಂದ ಇಡೀ ಭಾರತವೇ ಬೆರಗಾಗುವಂತೆ ಪುನರ್ ರೂಪಿಸಿದ್ದಾರೆ. ಬಿ.ಜೆ.ಪಿ. ಯಂತಹ ಕೋಮುವಾದಿಯ ಪಕ್ಷದ ಮೈತ್ರಿಯನ್ನು ಉಳಿಸಿಕೊಂಡು, ತಮ್ಮ ಜಾತ್ಯಾತೀತ ಮತ್ತು ಧರ್ಮಾತೀತ ನಿಲುವುಗಳನ್ನು ಎತ್ತಿ ಹಿಡಿದಿದ್ದಾರೆ. ಹಾಗಾಗಿ ಇವತ್ತು ಆರ. ಎಸ್.ಎಸ್. ನ ಮುಖಂಡ ಬಾಗವತ್ ನಿತೀಶ್‌ರವನ್ನು ಹೊಗಳಿ ಮುಂದಿನ ಎನ್.ಡಿ.ಎ. ಮೈತ್ರಿಕೂಟದ ಭಾವಿ ಪ್ರಧಾನಿ ಎಂಬ ಸಂದೇಶವನ್ನು ಹೊರ ಹಾಕಿದ್ದಾರೆ.

ಮುಂದುವರಿದ ರಾಜ್ಯವಾಗಿದ್ದ ಗುಜರಾತ್ ಅನ್ನು ಅಭಿವೃದ್ಧಿ ಮಾಡಿದ ನರೇಂದ್ರ ಮೋದಿಯವರ ಸಾಧನೆಗಳು ಈಗ ನಿತೀಶ್ ಕುಮಾರ್ ಸಾಧನೆಗಳ ಮುಂದೆ ನಗಣ್ಯವಾಗಿವೆ. ಇತ್ತೀಚಿನ ದಿನಗಳಲ್ಲಿ ಪ್ರಧಾನಿ ಪಟ್ಟದ ಮೇಲೆ ಕಣ್ಣಿಟ್ಟಿದ್ದ ನರೇಂದ್ರ ಮೋದಿ ಸದ್ಭಾವನಾ ಹೆಸರಿನಲ್ಲಿ ಪಶ್ಚಾತಾಪದ ಉಪವಾಸ ಮಾಡಿ ಮುಸ್ಲಿಂ ಸಮುದಾಯವನ್ನು ಓಲೈಸಿಕೊಳ್ಳಲು ಮುಂದಾಗಿದ್ದರು. ಆದರೆ, ನರಮೇಧ ಕುರಿತಂತೆ ಒಂದೊಂದಾಗಿ ಹೊರ ಬೀಳುತ್ತಿರುವ ನ್ಯಾಯಾಲಯದ ತೀರ್ಪುಗಳು ಮೋದಿ ತೊಟ್ಟಿದ್ದ ಮುಖವಾಡಗಳನ್ನು ಕಳಚಿ ಹಾಕುತ್ತಿವೆ.

ನರೇಂದ್ರ ಮೋದಿ ಮಾತ್ರವಲ್ಲ ಇವರನ್ನು ಹಾಡಿ ಹೊಗಳಿ ಅಟ್ಟಕ್ಕೇರಿಸಿ, ತಲೆಯ ಮೇಲೆ ಹೊತ್ತು ಮೆರೆಯುತ್ತಿರುವ ಜನ (ಇವರಲ್ಲಿ ಕರ್ನಾಟಕದ ಪತ್ರಕರ್ತರ ಪಡೆಯೂ ಇದೆ.) ಇವರೆಲ್ಲಾ ಅರಿಯ ಬೇಕಾದ ಸತ್ಯ ಒಂದಿದೆ. ಅದೇನೆಂದರೆ, ಮೋದಿ ತಮ್ಮ ಮುಖ ಮತ್ತು ಮೈಗೆ ಅಂಟಿದ ಮಸಿಯನ್ನು ಮಾತ್ರ ತೊಳೆದುಕೊಳ್ಳ ಬಲ್ಲರು, ಆದರೆ, ಅವರ ಆತ್ಮಕ್ಕೆ, ಮತ್ತು ವ್ಯಕ್ತಿ ಚಾರಿತ್ಯಕ್ಕೆ ಅಂಟಿದ ಮಸಿಯನ್ನು ಶತ ಶತಮಾನ ಕಳೆದರೂ ತೊಳೆದುಕೊಳ್ಳಲು. ಸಾಧ್ಯವಿಲ್ಲ. ಈ ಕಟು ವಾಸ್ತವ ಸತ್ಯವನ್ನು ಮೋದಿಯ ಹೊಗಳು ಭಟ್ಟರು ಈಗಲಾದರೂ ಅರ್ಥ ಮಾಡಿಕೊಳ್ಳಬೇಕು.