ಬೀದಿ ಅಲೆದು ಕಿತ್ತಳೆ ಮಾರುವ ಹಿರಿಯ ಕಟ್ಟಿದ ಶಾಲೆ


-ನವೀನ್ ಸೂರಿಂಜೆ


ಕರ್ನಾಟಕದಲ್ಲಿ ನಾನಾ ಹಿನ್ನೆಲೆಯ ಜನ ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ನಡೆದಾಡುವ ದೇವರು, ನಡೆದಾಡುವ ಮಂಜುನಾಥನಿಂದ ಹಿಡಿದು ಹಲವಾರು ಸ್ವಾಮೀಜಿಗಳು, ಉದ್ಯಮಿಗಳು ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈ “ಸೇವೆ” ಎನ್ನುವ ಪದವೇ ಇಲ್ಲಿ ಪ್ರಶ್ನಾರ್ಥಕ. ರಾಜ್ಯದ ಎಲ್ಲಾ ಮತ-ವರ್ಗಗಳಿಗೆ ಜಾತಿ-ವರ್ಗ-ಮತಗಳ ಭೇದವಿಲ್ಲದೆ ಕೈಗೆಟುಕುವ ಶಿಕ್ಷಣ ನೀಡುವುದು ಮತ್ತು ಆ ಮೂಲಕ ಸಮಾಜದಲ್ಲಿ ವೈಚಾರಿಕ ಪ್ರಜ್ಞೆ ಬೆಳೆಸುವುದು ಮತ್ತು ದೇಶ ಕಟ್ಟುವುದೇ ಈ “ಸೇವೆ”ಯ ಏಕೈಕ ಉದ್ದೇಶ ಎಂದು ಹೇಳಲಾಗದು. ಶಿಕ್ಷಣ ಕ್ಷೇತ್ರ ಒಂದು ಲಾಭದಾಯಕ ಉದ್ಯಮವಾಗಿದೆ. ಮತ್ತು ಮೇಲೆ ಉದಾಹರಿಸಿದ ಎಲ್ಲರೂ ಇಲ್ಲಿ ಲಾಭ ಮಾಡುತ್ತಿದ್ದಾರೆ ಮತ್ತು ಆ ಮೂಲಕ ಹಲವಾರು ಸಲ ತಮ್ಮ ಪ್ರಭಾವವನ್ನು ರಾಜ್ಯದ ಸಾಮಾಜಿಕ-ರಾಜಕೀಯ ಕ್ಷೇತ್ರಗಳಲ್ಲಿ ಬೀರಿದ್ದಾರೆ, ಬೀರುತ್ತಿದ್ದಾರೆ; ಬಹಳಷ್ಟು ಸಾರಿ ಪ್ರತಿಗಾಮಿ ಕಾರಣಗಳಿಗಾಗಿ.

ತನ್ನ ಒಡೆತನದಲ್ಲಿರುವ “ಸಾರ್ವಜನಿಕ” ದೇವಸ್ಥಾನಕ್ಕೆ ದಿನಂಪ್ರತಿ ಬರುವ ಕೋಟ್ಯಾಂತರ ರೂಪಾಯಿಯ ದೇಣಿಗೆ ಹಣದಲ್ಲಿ ಕಾನೂನು ಕಾಲೇಜು, ಮೆಡಿಕಲ್ ಕಾಲೇಜುಗಳನ್ನು ಕಟ್ಟಿ ಹತ್ತಾರು ಮಂದಿ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಕೊಟ್ಟು ಸಾವಿರಾರು ವಿದ್ಯಾರ್ಥಿಗಳಿಂದ ಸಾವಿರಾರು ರೂಪಾಯಿ ಡೊನೇಷನ್ ವಸೂಲಿ ಮಾಡಿಕೊಂಡು “ಮಾತನಾಡುವ ಮಂಜುನಾಥ” ಮಾಡುತ್ತಿರುವುದು ಶಿಕ್ಷಣ ಸೇವೆ. ಇನ್ನು ತನ್ನ ಹೆಸರಿನಲ್ಲಿರುವ ಗುಡ್ಡದ ಮೇಲೊಂದು ಸಣ್ಣ ಕಾಲೇಜು ನಿರ್ಮಿಸಿ, ಪಕ್ಕದ ಸರ್ಕಾರಿ ಭೂಮಿಯನ್ನೂ ಒತ್ತುವರಿ ಮಾಡಿಕೊಂಡು ಕಾಲೇಜನ್ನು ವಿಸ್ತರಿಸಿ, ವರ್ಷಕ್ಕೊಮ್ಮೆ ಸಾಹಿತ್ಯದ ಜಾತ್ರೆ ಮಾಡಿ ವಿದ್ಯಾರ್ಥಿಗಳಿಂದ ಸಾವಿರಾರು ರೂಪಾಯಿ ಡೊನೇಷನ್ ಪಡೆಯುವುದೂ ಶಿಕ್ಷಣ ಸೇವೆಯಾಗುತ್ತದೆ. ಇನ್ನು ಜಗತ್ತಿನ ಎಲ್ಲೆಡೆಯಿಂದ ಮಠಗಳಿಗೆ ಬರುವ ಕಪ್ಪು ಹಣದಲ್ಲಿ ಕಾಲೇಜುಗಳನ್ನು ಕಟ್ಟಿ ಕಪ್ಪು ಹಣವನ್ನು ಬಿಳಿಯನ್ನಾಗಿಸುವ ಸ್ವಾಮೀಜಿಗಳ ತಂತ್ರವೂ ಶಿಕ್ಷಣ ಸೇವೆ ಎಂದೆಣಿಸುತ್ತದೆ. ಇವೆಲ್ಲವೂ ಕೂಡಾ ಶಿಕ್ಷಣದ ಸೇವೆಯಾದರೆ ದಿನಾ ಕಿತ್ತಳೆ ಹಣ್ಣು ಮಾರಿದ ದುಡ್ಡಿನಲ್ಲಿ ಸಾಮಾನ್ಯ ಅನಕ್ಷರಸ್ಥ “ಹರೆಕಳ ಹಾಜಬ್ಬ” ಶಾಲೆ ಕಟ್ಟಿದ್ದನ್ನು ಏನನ್ನಬೇಕು?

ಮಂಗಳೂರು ತಾಲೂಕಿನ ಕೊಣಾಜೆ ಸಮೀಪದ ಹರೆಕಳ ನ್ಯೂಪಡ್ಪು ಎಂಬಲ್ಲಿ ಒಂದು ಕಾಲದಲ್ಲಿ ಸರ್ಕಾರಿ ಶಾಲೆ ಇರಲಿಲ್ಲ. ಇಲ್ಲಿನ ವಿದ್ಯಾರ್ಥಿಗಳು ಶಾಲೆಗೆ ಹೋಗಬೇಕೆಂದಿದ್ದರೆ ಸಮೀಪದ ಖಾಸಗಿ ಶಾಲೆಗೆ ಹೋಗಬೇಕಿತ್ತು. ಖಾಸಗಿ ಶಾಲೆಗಳ “ಶಿಕ್ಷಣ ಸೇವೆ” ಬಡ ಮಕ್ಕಳಿಗೆ ಎಟುಕುವಂತದ್ದಲ್ಲ. ಇದನ್ನು ಕಂಡ ಹಾಜಬ್ಬರಿಗೆ ತನ್ನ ಊರಲ್ಲಿ ಶಾಲೆ ತೆರೆಯಬೇಕು ಎಂದೆಣಿಸಿತ್ತು. ಹಾಗೆ ಅವರು ಯೋಚಿಸಿದ ದಿನ ಅವರ ಕೈಯಲ್ಲಿದ್ದಿದ್ದು ಬರೇ ನೂರು ರೂಪಾಯಿ. ಅದು ಅಂದಿನ ಒಂದು ಬುಟ್ಟಿ ಕಿತ್ತಲೆ ಖರೀದಿ ಮಾಡಲು ತೆಗೆದಿರಿಸಿದ ದುಡ್ಡು. ದಿನಾ ಕಿತ್ತಲೆ ಖರೀದಿಸಿ ಮಂಗಳೂರು ನಗರದ ಹಂಪನಕಟ್ಟೆಯಲ್ಲಿ ಬೀದಿ ಸುತ್ತಿ ಕಿತ್ತಳೆ ಮಾರಿ ಜೀವನ ನಿರ್ವಹಣೆ ಮಾಡಬೇಕಿತ್ತು. ಪತ್ನಿ, ಇಬ್ಬರು ಪುತ್ರಿಯರು, ಒರ್ವ ಪುತ್ರ ಇದೇ ಕಿತ್ತಲೆಯ ಆದಾಯದಲ್ಲಿ ಬದುಕಬೇಕಿತ್ತು. ಮಳೆಗಾಲದಲ್ಲಿ ಮನೆಯೊಳಗೆ ಅಲ್ಲಲ್ಲಿ ಬಕೀಟುಗಳನ್ನು ಜೋಡಿಸಿಟ್ಟು ಮಲಗಬೇಕಿತ್ತು. ಯಾಕೆಂದರೆ ಹಾಜಬ್ಬರ ಮನೆಯ ಮಹಡಿ ಅಲ್ಲಲ್ಲಿ ಸೋರುತ್ತಿತ್ತು. ಇಂತಹ ಹಾಜಬ್ಬ ಹರೇಕಳದಲ್ಲೊಂದು ಶಾಲೆ ನಿರ್ಮಾಣದ ಕನಸ್ಸು ಕಂಡರು. ದಿನಾ ಸಂಸಾರಕ್ಕಾಗಿ ದುಡಿಯುತ್ತಿದ್ದ ಹಾಜಬ್ಬ ಅಂದಿನಿಂದ ಶಾಲೆಗಾಗಿ ಸ್ವಲ್ಪ ಜಾಸ್ತಿ ಹೊತ್ತು ಕಿತ್ತಳೆ ಮಾರಲು ಶುರುವಿಟ್ಟುಕೊಂಡರು.

ಕಿತ್ತಳೆ ವ್ಯಾಪಾರದ ಮಧ್ಯೆ ಸರ್ಕಾರಿ ಕಚೇರಿಗೆ ಅಲೆದಾಡಲು ಶುರುವಿಟ್ಟುಕೊಂಡರು. ಅ ಆ ಇ ಈ ಬಾರದ ಹರೆಕಳ ಹಾಜಬ್ಬ ತನ್ನೂರಿನಲ್ಲಿ ಶಾಲೆ ಪ್ರಾರಂಭ ಮಾಡಲು ಸರ್ಕಾರಿ ಜಾಗ ಕೊಡಿ ಎಂದು ಸಿಕ್ಕ ಸಿಕ್ಕವರ ಕಾಲಿಗೆ ಬಿದ್ದರು. ಎಂಎಲ್ಎ, ಎಂಪಿಗಳ ಕಾಲಿಗೆ ಬಿದ್ದಿರುವುದಕ್ಕೆ ಲೆಕ್ಕವೇ ಇಲ್ಲ. ಕೊನೆಗೂ ಒಂದು ನಲ್ವತ್ತು ಸೆಂಟ್ಸ್ ಸರ್ಕಾರಿ ಜಾಗ ಸಿಕ್ಕಿತು. ಸರ್ಕಾರಿ ಜಮೀನು ನೀಡಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸುಮ್ಮನಾದರು. ಹಾಜಬ್ಬ ಮಾತ್ರ ಸುಮ್ಮನಾಗಲಿಲ್ಲ. ಕಿತ್ತಲೆ ವ್ಯಾಪಾರ ಮುಗಿಸಿ ಮನೆಗೆ ಹೋದವರೇ ಹಳೆ ಬಟ್ಟೆ ತೊಟ್ಟುಕೊಂಡು ಜಾಗ ಸಮತಟ್ಟು ಮಾಡಲು ಶುರುವಿಟ್ಟುಕೊಂಡರು. ಅದೆಷ್ಟೋ ದಿನದ ನಂತರ ಜಾಗ ಸಮತಟ್ಟುಗೊಂಡಿತು. ನಂತರ ಕಿತ್ತಳೆ ಹಣ್ಣಿನ ವ್ಯಾಪಾರದಲ್ಲಿ ಶಾಲೆಗಾಗಿ ಉಳಿಸಿದ ಹಣದಲ್ಲಿ ಜಲ್ಲಿ, ಕಲ್ಲು, ಸಿಮೆಂಟು ತಂದು ರಾಶಿ ಹಾಕಿದರು. ಹಣ ಇದ್ದಷ್ಟು ಕೆಲಸದವರನ್ನು ನೇಮಿಸಿ ಕಟ್ಟಡ ಕೆಲಸ ಶುರುವಿಟ್ಟುಕೊಂಡರು. ಹಣ ಖಾಲಿಯಾದರೆ ತಾನೇ ಮೇಸ್ತ್ರಿಯಾಗಿ ಕೆಲಸ ಮಾಡಿದರು. ಅಂತೂ 1999 ರಲ್ಲಿ  ಹರೆಕಳದಲ್ಲಿ ’ದಕ್ಷಿಣ ಕನ್ನಡ ಕಿರಿಯ ಪ್ರಾಥಮಿಕ ಶಾಲ” ರೂಪುಗೊಂಡಿತು. ಹಾಜಬ್ಬರ ಸಂತೋಷಕ್ಕೆ ಪಾರವೇ ಇರಲಿಲ್ಲ. ಚಿಕ್ಕ ಮಗುವಿನಂತೆ ಕುಣಿದರು. ದಿನಾ ಶಾಲೆಯಲ್ಲಿ ನೆಲ ಒರೆಸುವುದರಿಂದ ಹಿಡಿದು, ಅಂಗಳ ಗುಡಿಸುವುದನ್ನೂ ತಾನೇ ನಿರ್ವಹಿಸಿ ಕಿತ್ತಳೆ ವ್ಯಾಪಾರಕ್ಕೆ ತೆರಳುತ್ತಿದ್ದರು. ಅಷ್ಟರಲ್ಲಿ ಹಾಜಬ್ಬರ ಪತ್ನಿ ಮೈಮುನಾ ಆರೋಗ್ಯ ಕೈಕೊಟ್ಟಿತ್ತು. ಆದರೆ ಮಗುವಿನ ಮನಸ್ಸಿನ ಹರೆಕಳ ಹಾಜಬ್ಬರಿಗೆ ಹೊಸತೊಂದು ಆಶೆ ಹುಟ್ಟಿಕೊಂಡಿದು. ಅದು ಐದನೇ ತರಗತಿಯವರೆಗೆ ಇದ್ದ ಶಾಲೆಯನ್ನು ಏಳನೇ ತರಗತಿಯವರೆಗೆ ವಿಸ್ತರಿಸುವುದು.

ಮತ್ತೆ ಕಿತ್ತಳೆ ಹಣ್ಣು ವ್ಯಾಪಾರವನ್ನು ಹಿಂದಿಗಿಂತಲೂ ಹೆಚ್ಚು ಅವಧಿ ಮಾಡಲು ಶುರುವಿಟ್ಟುಕೊಂಡರು. ಕಿರಿಯ ಪ್ರಾಥಮಿಕ ಶಾಲೆಗೆ ಕೋಣೆ ಸೇರುತ್ತಾ ಹೋಯಿತು. ಅದೊಂದು ದಿನ ಕಿರಿಯ ಪ್ರಾಥಮಿಕ ಶಾಲೆ ಇದ್ದಿದ್ದು ಹಿರಿಯ ಪ್ರಾಥಮಿಕ ಶಾಲೆಯಾಗಿ ಮಾರ್ಪಾಡಾಯಿತು. ಏಳನೇ ತರಗತಿಯವರೆಗೆ ಹರೆಕಳ ಗ್ರಾಮದ ವಿದ್ಯಾರ್ಥಿಗಳಿಗೆ ಶಿಕ್ಷಣ ದೊರೆಯುವಂತಾಯಿತು. ಹಾಜಬ್ಬರ ಈ ಸಾಧನೆಯನ್ನು ಗಮನಿಸಿ 2004 ರಲ್ಲಿ ಕನ್ನಡಪ್ರಭ ಪತ್ರಿಕೆ ಹಾಜಬ್ಬರನ್ನು “ವರ್ಷದ ವ್ಯಕ್ತಿ” ಎಂದು ಪ್ರಶಸ್ತಿ ನೀಡಿ ಗೌರವಿಸಿತು. ಇದರಿಂದ ಬಂದ ಒಂದು ಲಕ್ಷ ರೂಪಾಯಿಯನ್ನೂ ಇದೇ ಸರ್ಕಾರಿ ಶಾಲೆಗೆ ವಿನಿಯೋಗ ಮಾಡಿ ಇನ್ನಷ್ಟು ಕೊಠಡಿಗಳನ್ನು ಕಟ್ಟಿದರು. ಯಾಕೆಂದರೆ ಈಗ ಹಾಜಬ್ಬರಿಗೆ ಹೊಸತೊಂದು ಆಶೆ ಮೊಳಕೆಯೊಡೆದಿತ್ತು. ತನ್ನ ಊರಿನ ಮಕ್ಕಳು ಏಳನೇ ತರಗತಿಯವರೆಗೆ ಶಿಕ್ಷಣವನ್ನು ಮೊಟಕುಗೊಳಿಸಬಾರದು. ಬದಲಾಗಿ ಕನಿಷ್ಠ ಎಸ್ಎಸ್ಎಲ್‌ಸಿಯಾದರೂ ಪೂರೈಸಬೇಕು. ಅದಕ್ಕಾಗಿ ಹಿರಿಯ ಪ್ರಾಥಮಿಕ ಶಾಲೆಯನ್ನು ಪ್ರೌಢಶಾಲೆಯ ದರ್ಜೆಗೆ ಏರಿಸಬೇಕು.

ಒಂದು ಸರ್ಕಾರ ಮಾಡಬೇಕಾದ ಎಲ್ಲಾ ಕೆಲಸವನ್ನು ಕೇವಲ ಕಿತ್ತಳೆ ಹಣ್ಣು ಮಾರಾಟ ಮಾಡಿದ ದುಡ್ಡಿನಲ್ಲಿ ಹಾಜಬ್ಬ ಮಾಡುತ್ತಿರುವುದನ್ನು ಗಮನಿಸಿದ ಹಲವಾರು ಸಂಘ ಸಂಸ್ಥೆಗಳು ಹಾಜಬ್ಬರನ್ನು ಕರೆದು ಸನ್ಮಾನಿಸಿದವು. ಆ ಸನ್ಮಾನದ ಪತ್ರದ ಜೊತೆ ನೀಡುವ ಕವರಿನಲ್ಲಿ ಐನೂರು ರೂಪಾಯಿಯೋ, ಒಂದು ಸಾವಿರ ರೂಪಾಯಿಯೋ ಇರುತ್ತಿದ್ದವು. ಅದೆಲ್ಲವೂ ಬಳಕೆಯಾಗುತ್ತಿದ್ದುದು ಶಾಲೆಯ ಕಲ್ಲು, ಜಲ್ಲಿ, ಮರಳು, ಸಿಮೆಂಟಿಗೆ. ಹಾಜಬ್ಬರ ಶಾಲೆ ಪ್ರಚಾರಕ್ಕೆ ಬಂದ ನಂತರ ಮಂಗಳೂರಿನಲ್ಲಿರುವ ಕೆಲವೊಂದು ಪ್ರತಿಷ್ಠಿತ ಕಂಪನಿಗಳೂ ಹಾಜಬ್ಬರ ಸಾಧನೆ ಕಂಡು ಹರೆಕಳ ಗ್ರಾಮಕ್ಕೆ ಬಂದು ಶಾಲೆ ವೀಕ್ಷಿಸಿ ಒಂದಷ್ಟು ದಾನ ಮಾಡಿದ್ದಾರೆ. ಒಂದೆರಡು ಲಕ್ಷ ರೂಪಾಯಿ ದಾನ ಮಾಡಿ ಗೊಡೆಯಲ್ಲಿ ಹೆಸರು ಕೆತ್ತಿಸಿಕೊಂಡಿದ್ದಾರೆ. ಆದರೆ ಶಾಲೆಯ ಎಲ್ಲೂ ಹಾಜಬ್ಬರ ಹೆಸರಾಗಲೀ, ಫೋಟೋ ಆಗಲಿ ಕಾಣ ಸಿಗುವುದಿಲ್ಲ. ಯಾಕೆಂದರೆ ಅಂತಹ ಮನಸ್ಥಿತಿ ಹಾಜಬ್ಬರಿಗೆ ಇಲ್ಲ.

ಅಂತೂ ಇಂತು ಹೈಸ್ಕೂಲ್ ಕಟ್ಟಡ ಕೂಡಾ ಮೇಲೆದ್ದಿತು. ಕಿತ್ತಳೆ ಹಣ್ಣು ಮಾರಾಟಕ್ಕೆ ಹೊರಡುವ ಮೊದಲು ಹಾಜಬ್ಬ ಖುದ್ದು ಕಟ್ಟಡ ಕೆಲಸ ಮಾಡಿ ವ್ಯಾಪಾರಕ್ಕೆ ತೆರಳುತ್ತಿದ್ದರು. ಅಷ್ಟರಲ್ಲಿ ಸಿಎನ್ಎನ್-ಐಬಿಎನ್ ಹಾಜಬ್ಬರ ಶಿಕ್ಷಣ ಸೇವೆಯನ್ನು ಗುರುತಿಸಿ ವಿಮಾನದ ಮೂಲಕ ಮುಂಬೈಗೆ ಕರೆಸಿಕೊಂಡಿತು. ಅದನ್ನು ಹೇಳುತ್ತಲೇ ಹಾಜಬ್ಬ ಪುಳಕಿತಗೊಳ್ಳುತ್ತಾರೆ. ಹಾಜಬ್ಬರನ್ನು ಸನ್ಮಾನಿಸಿದ ಸಿಎನ್ಎನ್-ಐಬಿಎನ್ ಐದು ಲಕ್ಷ ರೂಪಾಯಿಗಳನ್ನು ಸನ್ಮಾನ ಸಂಧರ್ಭ ನೀಡಿತ್ತು. ಅದನ್ನೂ ಹೈಸ್ಕೂಲ್ ಕಟ್ಟಡಕ್ಕೆ ಬಳಸಿಕೊಂಡರು.

ಒಮ್ಮೆ ಕಟ್ಟಡದ ಕಾಂಕ್ರೀಟ್ ಕೆಲಸ ನಡೆಯುತ್ತಿದ್ದಾಗ ಸಿಮೆಂಟಿಗೆ ನೀರು ಹಾಕಲು ಕಟ್ಟಡದ ಮೇಲೆ ಹೋದ ಹಾಜಬ್ಬ ಆಯ ತಪ್ಪಿ ಮೇಲಿಂದ ಕೆಳಗೆ ಬಿದ್ದು ಬಿಟ್ಟರು. ತನ್ನ ಕೈಗೆ ಬಂದ ಸನ್ಮಾನದ ದುಡ್ಡುಗಳೆಲ್ಲಾ ಕಟ್ಟಡದ ಪಾಲಾಗಿತ್ತು. ಖಾಸಗಿ ಆಸ್ಪತ್ರೆಗೆ ಸೇರಿದರೆ ಬಿಲ್ಲು ತೆರಲು ದುಡ್ಡಿಲ್ಲ. ಅದಕ್ಕಾಗಿ ಸರಕಾರಿ ಆಸ್ಪತ್ರೆಯಲ್ಲಿ ತುಂಬಾ ಸಮಯ ಚಿಕಿತ್ಸೆ ಪಡೆಯಬೇಕಾಯಿತು. ಇದರಿಂದಾಗಿ ಹಾಜಬ್ಬರ ಹೈಸ್ಕೂಲ್ ಕಟ್ಟಡ ನೆನೆಗುದಿಗೆ ಬಿತ್ತು. ಅಂತೂ ಇಂತೂ ಸಾವರಿಸಿಕೊಂಡ ಹಾಜಬ್ಬ ಆಸ್ಪತ್ರೆಯಿಂದ ಬಿಡುಗಡೆ ಆದವರೇ ಮತ್ತೆ ಕಟ್ಟಡ ನಿರ್ಮಾಣಕ್ಕೆ ತೊಡಗಿದರು. ಕೊನೆಗೂ ಹೈಸ್ಕೂಲ್ ಕಟ್ಟಡ ಪೂರ್ಣಗೊಂಡಿತು.

ಹಾಜಬ್ಬ ಇಷ್ಟೆಲ್ಲಾ ಮಾಡಿದ್ದು ಸರಕಾರಿ ಶಾಲೆಯೊಂದರ ನಿರ್ಮಾಣಕ್ಕೆ. ಅಲ್ಲಿರುವುದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆ. ಇಡೀ ಶಾಲೆಗೆ ಸರಕಾರಿ ಜಮೀನೊಂದು ಹೊರತುಪಡಿಸಿ ಉಳಿದೆಲ್ಲಾ ಹಣ ಬಳಕೆಯಾಗಿದ್ದು ಹಾಜಬ್ಬರದ್ದು ಮತ್ತು ದಾನಿಗಳದ್ದು. ಕನ್ನಡಪ್ರಭ ಮತ್ತು ಸಿಎನ್ಎನ್-ಐಬಿಎನ್ ಸನ್ಮಾನ ಸೇರಿದಂತೆ ಸಂಘ ಸಂಸ್ಥೆಗಳು ಮಾಡಿದ ಸನ್ಮಾನದ ದುಡ್ಡು ಮತ್ತು ಕಿತ್ತಳೆ ಹಣ್ಣಿನ ವ್ಯಾಪಾರದಿಂದಲೇ ಒಂದು ಪೂರ್ಣ ಪ್ರಮಾಣದ ಸರಕಾರಿ ಶಾಲೆಯನ್ನು ನಿರ್ಮಿಸಿದರು. ಹಾಜಬ್ಬರ ಮಗ ಹಾಜಬ್ಬರೇ ನಿರ್ಮಿಸಿದ ಶಾಲೆಯಲ್ಲಿ ಓದುತ್ತಿದ್ದ ಸಂದರ್ಭದವರೆಗೆ ಹಾಜಬ್ಬರೇ ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷರಾಗಿದ್ದರು. ಕಳೆದ ಜೂನ್‌ನಿಂದ ಹಾಜಬ್ಬರ ಮಕ್ಕಳ ಹೈಸ್ಕೂಲ್ ವಿದ್ಯಾಬ್ಯಾಸ ಪೂರ್ಣಗೊಂಡಿದೆ. ಈಗ ಹಾಜಬ್ಬರಿಗೂ ಹೈಸ್ಕೂಲ್‌ಗೂ ಸಂಬಂಧವೇ ಇಲ್ಲ. ತಾನೇ ಕಟ್ಟಿದ ಶಾಲೆಗೆ ತಾನೊಬ್ಬ “ಸಾರ್ವಜನಿಕ” ಮಾತ್ರ. ಆದರೆ ಹಾಜಬ್ಬ ಈಗಲೂ ಬೆಳಿಗ್ಗೆ ಶಾಲೆಗೆ ಹೋಗಿ ಸ್ವಚ್ಚತೆ ನಿರ್ವಹಿಸಿ ಬರುತ್ತಾರೆ.

ಹಾಜಬ್ಬ ಇದೇ ಶ್ರಮವನ್ನು ಬಳಕೆ ಮಾಡಿ ತನ್ನ ಹೆಸರಿನಲ್ಲೊಂದು ಖಾಸಗಿ ಶಾಲೆ ಮಾಡಿದ್ದರೆ ಈಗ ಕಾರಿನಲ್ಲಿ ಓಡಾಡಬಹುದಿತ್ತು. ಹಾಜಬ್ಬರ ಜೊತೆ ಮಾತನಾಡಲು ಎಪಾಯಿಂಟ್ಮೆಂಟ್ ತಗೋಬೇಕಿತ್ತು. ಆದರೆ ಹಾಜಬ್ಬ ಈಗಲೂ ಮಂಗಳೂರಿನ ಬೀದಿಗಳಲ್ಲಿ ಕಿತ್ತಳೆ ಬುಟ್ಟಿ ಹಿಡಿದುಕೊಂಡು ಕಿತ್ತಳೆ ಮಾರಾಟ ಮಾಡುತ್ತಿದ್ದಾರೆ. ಪತ್ನಿ ಮೈಮೂನ ಆರೋಗ್ಯಕ್ಕಾಗಿ ಹಾಜಬ್ಬ ದುಡಿಯಬೇಕು. ಇದೀಗ ಒರ್ವ ಮಗಳೂ ಅಸ್ವಸ್ಥಗೊಂಡಿದ್ದಾಳೆ. ಅವಳಿಗೂ ವೈಧ್ಯಕೀಯ ಖರ್ಚುಗಳಿವೆ. ಅದಕ್ಕಾಗಿ ಬೆಳಗ್ಗಿನಿಂದ ಸಂಜೆಯವರೆಗೆ ಕಿತ್ತಳೆ ಬುಟ್ಟಿ ಹಿಡಿದುಕೊಂಡು ಬೀದಿ ಬೀದಿ ಅಲೆಯುತ್ತಿದ್ದಾರೆ.

ಈಗಲೂ ಬೆಳಿಗ್ಗೆ ಶಾಲೆಯ ಬಳಿ ಹೋದರೆ ಹಾಜಬ್ಬ ಸಿಗುತ್ತಾರೆ. ಶಾಲೆಯ ಮೂಲೆಯಲ್ಲಿ ಬಿದ್ದಿರುವ ಕಸ ಕಡ್ಡಿಗಳನ್ನು ಹೆಕ್ಕುತ್ತಿರುತ್ತಾರೆ. ನೆಲ ಒರಸುತ್ತಿರುತ್ತಾರೆ. ಅತಿಥಿಗಳು ಶಾಲೆ ನೋಡಲು ಬಂದಿದ್ದಾರೆ ಎಂದು ಗೊತ್ತಾದ ತಕ್ಷಣ ಉದ್ದನೆಯ ಬಿದಿರಿನ ಕೋಲಿಗೆ ಕತ್ತಿ ಕಟ್ಟಿ ತೆಂಗಿನ ಮರದಿಂದ ಎಳನೀರು ತೆಗೆದು ತಂದು ಕೊಡುತ್ತಾರೆ. “ಸಾರು.. ನಮ್ಮ ಶಾಲೆಗೆ ಬಂದಿದ್ದೀರಿ. ತುಂಬಾ ಸಂತೋಸ ಆಯ್ತು ಸಾರು. ಸಾರು ಮೈದಾನಕ್ಕೆ ಕಂಪೌಂಡು ಹಾಕಬೇಕು ಸಾರು,” ಎನ್ನುತ್ತಾರೆ. 1999 ರಿಂದ ಇಂದಿನವರೆಗೂ ತನ್ನ ಮನೆಯಲ್ಲಿ ಕುಳಿತುಕೊಳ್ಳಲು ಒಂದು ಕುರ್ಚಿಯನ್ನೂ ಖರೀದಿ ಮಾಡದೆ ಸರ್ಕಾರಿ ಶಾಲೆ ನಿರ್ಮಾಣ ಮಾಡಿದ ಹಾಜಬ್ಬ ಈಗಲೂ ಕಿತ್ತಳೆ ಹಣ್ಣಿನ ವ್ಯಾಪಾರ ಮಾಡುತ್ತಿದ್ದಾರೆ. ಅನಾರೋಗ್ಯದಿಂದಿರುವ ತನ್ನ ಪತ್ನಿ ಮತ್ತು ಮಗಳನ್ನು ಸಾಕುವ ಜವಾಬ್ದಾರಿ ಜೊತೆಗೇ ಹಾಜಬ್ಬ ಇನ್ನೊಂದು ಕನಸ್ಸನ್ನು ಕಾಣುತ್ತಿದ್ದಾರೆ. ಅದು ಹೈಸ್ಕೂಲನ್ನು ಸ್ವಲ್ಪ ವಿಸ್ತರಿಸಿ ಪಿಯುಸಿ ಪ್ರಾರಂಭಿಸುವುದು. ಅದಕ್ಕಾಗಿ ಈಗ ಬೆಳಿಗ್ಗಿನಿಂದ ಸಂಜೆ ಏಳು ಗಂಟೆಯವರೆಗೆ ಹಂಪನಕಟ್ಟೆಯ ಬೀದಿ ಬೀದಿ ಅಲೆದು ಕಿತ್ತಳೆ ಹಣ್ಣು ಮಾರಾಟ ಮಾಡುತ್ತಿದ್ದಾರೆ.

ಮೂಡಬಿದ್ರೆಯ ಗುಡ್ಡದಲ್ಲಿ ಪ್ರಾರಂಭವಾದ ಖಾಸಗಿ ಕಾಲೇಜು ಈಗ ಸರ್ಕಾರಿ ಜಮೀನನ್ನು ಕಬಳಿಸಿಕೊಂಡು ಬೃಹತ್ತಾದ ಎಜುಕೇಶನ್ ಪೌಂಡೇಶನ್ ಆಗಿ ಬೆಳೆದಿದೆ. ಅದು ಎಷ್ಟರವರೆಗೆ ಬೆಳೆಯುತ್ತದೆ ಎಂದರೆ ಮೂಡಬಿದ್ರೆ ಗುಡ್ಡವು ಮೂಡಬಿದ್ರೆ ವಿದ್ಯಾಗಿರಿ ಎಂದು ಪ್ರಸಿದ್ಧಿಯನ್ನು ಪಡೆಯುವಷ್ಟು. ಮಠಗಳಲ್ಲಿ, ದೇವಸ್ಥಾನಗಳಲ್ಲಿ ಬಂದ ದುಡ್ಡಿನಲ್ಲಿ ವೃತ್ತಿಪರ ಕಾಲೇಜು ತೆರೆಯುವ ಶಿಕ್ಷಣದ ವ್ಯಾಪಾರಿಗಳು ಸಾಮಾಜಿಕ ಸೇವಕರೆನಿಸಿಕೊಳ್ಳುತ್ತಾರೆ, ಶಿಕ್ಷಣತಜ್ಞ, ಶಿಕ್ಷಣಪ್ರೇಮಿಗಳೆನಿಸಿಕೊಳ್ಳುತ್ತಾರೆ. ಮಠ ಮಂದಿರಗಳಲ್ಲಿ ಹರಿದು ಬರುವ ಬ್ಲ್ಯಾಕ್ ಮನಿಯನ್ನು ವೈಟ್ ಮಾಡುವ, ವ್ಯವಹಾರಕ್ಕಾಗಿ ಕಾಲೇಜು ಸ್ಥಾಪಿಸುವ ಶಿಕ್ಷಣ ವ್ಯಾಪಾರಿಗಳದ್ದೆಲ್ಲಾ ಶಿಕ್ಷಣ ಸೇವೆಯಾದರೆ ಹಾಜಬ್ಬರ ಸೇವೆಯನ್ನು ಏನೆಂದು ಕರೆಯಬೇಕು?

12 thoughts on “ಬೀದಿ ಅಲೆದು ಕಿತ್ತಳೆ ಮಾರುವ ಹಿರಿಯ ಕಟ್ಟಿದ ಶಾಲೆ

 1. ಪಂಡಿತಾರಾಧ್ಯ

  ಹರೇಕಳದ ಹಾಜಬ್ಬ ಅವರ ನಿಃಸ್ವಾರ್ಥ ಸೇವೆ ಮೈಸೂರಿನ ಟಿ ಎಸ್ ಸುಬ್ಬಣ್ಣ ಅವರ ಸೇವೆಯನ್ನು ನೆನಪಿಸುತ್ತದೆ.ಅಂಥವರಿಗೆ ಅಂಥವರೇ ಸಾಟಿ

  Reply
 2. Deepak

  ಹಾಜಬ್ಬ ಅವರಲ್ಲಿನ ಶಿಕ್ಷಣದ ಬಗೆಗಿನ ಕಳಕಳಿಯನ್ನು ನಮ್ಮ ಸರ್ಕಾರ ನೋಡಿ ಕಲಿಯಬೇಕು. ನಮ್ಮ ಸರ್ಕಾರ ಇತ್ತ ತಿರುಗಿದ್ದರೆ, ನಮ್ಮ ಸರ್ಕಾರಿ ಶಾಲೆಗಳು ಇಂದಿನ ಸ್ಥಿಯಲ್ಲಿರುತ್ತಿರಲಿಲ್ಲ ಮತ್ತು ಸಾವಿರಾರು ಶಾಲೆಗಳನ್ನು ಮುಚ್ಚುತ್ತಿರಲಿಲ್ಲ. ಸುಮಾರು ಐದು ವರ್ಷಗಳ ಹಿಂದೆ ಇದೇ ರೀತಿ ಲೇಖನವೊಂದಕ್ಕೆ ಸಂಪರ್ಕಿಸಿ, ನಂತರ ಪ್ರಕಟಣೆಗೊಂಡು, ಆ ಮೂಲಕ ಬಂದ ಹಣದ ಸಹಾಯವನ್ನು ಫೋನ್ ಮಾಡಿ ತಿಳಿಸುತ್ತಿದ್ದರು. ಅವರ ಪ್ರಾಮಾಣಿಕತೆ ಮತ್ತು ಸರಳತೆ ಎಲ್ಲರೂ ಅನುಕರಿಸುವಂತಹುದು.

  ದೀಪಕ್

  Reply
 3. Avinash

  ಶಿಕ್ಷಣದ ಹೆಸರಲ್ಲಿ ಧರ್ಮ ಪ್ರಚಾರ ಮಾಡುತ್ತಿರುವ ಕ್ರಿಸ್ತ್ಚಿಯನ್ ಮಿಶನರಿಗಳು ಪಾಪ ಸೂರಿಂಜೆ ಕಣ್ಣಿಗೆ ಬಿದ್ದಿಲ್ಲ ಅನ್ನಿಸುತ್ತೆ. ಇರಲಿ ಬಿಡಿ ಹಾಕಿರುವ ಕನ್ನಡಕ ಅಡ್ಡ ಬಂದಿರಬಹುದು.
  ಹಾಬಜ್ಜನ ಕೆಲಸ ಶ್ಲಾಘನೀಯ ಮಾತ್ರವಲ್ಲ ಮಾದರಿ ಕೂಡ ಹಾಗಂತ ಮಠಗಳು ಮಾಡುತ್ತಿರುವುದು ಬರಿ ದುಡ್ಡಿಗಾಗಿ ಅನ್ನುವುದು ಕೂಡ ತಪ್ಪು. ಹಾಬಜ್ಜ ಕಾರ್ಯ ಮೆಚ್ಚುವುದಕ್ಕೆ ನಿಮ್ಮ ಈ ಲೇಖನ ಸೀಮಿತವಾಗಿದ್ದರೆ ನಿಜಕ್ಕೂ ಅದ್ಬುತವಾಗಿರುತ್ತಿತ್ತು ಆದರೆ ಹಿಂದೂ ಮಠಗಳನ್ನು ತೆಗಳಲು ಹಾಬಜ್ಜನ್ನ ಬಳಸಿಕೊಂಡಿದ್ದು, ಅವರ ಕಾರ್ಯಕ್ಕೆ ಮಾಡಿದ ಅವಮಾನ ಎಂಬುದು ನನ್ನ ಬಾವನೆ.

  Reply
  1. ganesh

   ಯಾವ ಕ್ರಿಶ್ಚಿಯನ್ ಶಿಕ್ಷಣ ಸಂಸ್ಥೆಗಳು ಧರ್ಮ ಪ್ರಸಾರಕ್ಕಾಗಿ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿವೆ ಎಂಬುದನ್ನು ಸ್ಪಷ್ಟವಾಗಿ ಬರೆಯಿರಿ. ನವೀನ್ರವರು ಅದರ ಬಗ್ಗೆ ಬರೆಯದೇ ಇದ್ದರೆ ನಾವು ಬರೆಯುತ್ತೇವೆ. ಸಂಘ ಪರಿವಾರದ ಹಲವು ನಾಯಕರು ಕ್ರಿಶ್ಚಿಯನ್ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣ ಪಡೆದವರಿದಾರೆ. ಮಂಗಳೂರಿನ ಶೇಕಡಾ 80 ಕ್ಕೂ ಅಧಿಕ ವಿದ್ಯಾಥರ್ಿಗಳು ಕ್ರಿಶ್ಚಿಯನ್ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಜನೆ ಮಾಡುತ್ತಿದ್ದಾರೆ. ಕಳೆದ ನೂರು ವರ್ಷಗಳಿಂದಲೂ ಎಂಬುದು ಇಲ್ಲಿ ಗಮನಾರ್ಹ. ಆದರೂ ಇಲ್ಲಿ ಕಲಿತವರ್ಯಾರೂ ಮತಾಂತರವಾದ ಉದಾಹರಣೆ ಇಲ್ಲ. ಧರ್ಮ ಪ್ರಸಾರಕ್ಕಾಗಿ ಕ್ರಿಶ್ಚಿಯನ್ನರು ಶಾಲೆ ಸ್ಥಾಪಿಸಿದ್ದೇ ಆದಲ್ಲಿ ಮಂಗಳೂರು ಪೂತರ್ಿ ಕ್ರಿಶ್ಚಿಯನ್ನೀಕರಣ ಆಗಬೇಕಿತ್ತು. ಅಷ್ಟೊಂದು ಕ್ರಿಶ್ಚಿಯನ್ ಶಾಲೆಗಳು ಇವೆ ಇಲ್ಲಿ. ಮಂಗಳೂರಿನಲ್ಲಿರುವ ಅನಾಥಾಶ್ರಮಗಳು ಮತ್ತು ಅನಾಥ ಮಕ್ಕಳ ಶಾಲೆಗಳಲ್ಲಿನ ವಿದ್ಯಾಥರ್ಿಗಳಿಗೆ ಧರ್ಮ ಭೋಧನೆ ಮಾಡಿದ್ದರೂ ಹಲವು ಮಂದಿ ಕ್ರಿಶ್ಚಿಯನ್ನರಾಗಬೇಕಿತ್ತು. ಅದೆಲ್ಲಾ ಇರಲಿ. ನೀವು ಕಣ್ಣಿನ ಪೊರೆ ಕಳಚಿಕೊಂಡು ಲೇಖನ ಓದಿ. ನವೀನಣ್ಣ ಬರೆದಿರುವುದು ಮಠಗಳು ಮತ್ತು ಹಿಂದೂ ಕೋಮುವಾದಿಗಳು ಅವರ ಶಾಲೆಗಳಲ್ಲಿ ನಡೆಸುತ್ತಿರುವ ಶಿಕ್ಷಣದ ಕೇಸರೀಕರಣದ ಬಗ್ಗೆಯಾಗಲೀ, ಮಕ್ಕಳಲ್ಲಿ ಧಮರ್ಾಂತೆಯನ್ನು ಬೆಳೆಸುವ ಬಗ್ಗೆಯಾಗಲೀ ಅಲ್ಲ. ಅವರು ಬರೆದಿರುವುದು ಉಧ್ಯಮವನ್ನಾಗಿಸಿರುವ ಮಂದಿಯ ಶಿಕ್ಷಣ ಸೇವೆ ಮತ್ತು ತನ್ನ ದುಡಿಮೆಯ ಹಣದಲ್ಲಿ ಮಾಡುವ ಶಿಕ್ಷಣ ಸೇವೆ ಒಂದೇ ಆಗಲು ಸಾಧ್ಯವೇ ಎಂಬುದರ ಬಗ್ಗೆ ಮಾತ್ರ. ಸೇವೆ ಎನ್ನುವುದು ಲಾಭ ನಷ್ಠದ ಲೆಕ್ಕಾಚಾರ ಅಲ್ಲ ಎಂಬುದಷ್ಟೇ ನವೀನ್ರವರ ಲೇಖನದ ಉದ್ದೇಶವೆಂದು ನನಗೆ ಕಾಣುತ್ತದೆ. ..

   Reply
 4. hanamantha

  ಕೆವಲ ಸರಕಾರಗಳನ್ನು ಬೈಯುತ್ತ ಕೂಡ್ರುವುದಕ್ಕಿಂತ ನಮ್ಮ ಇತಿಮಿತಿಯಲ್ಲಿ ನಾವು ಎಷ್ಟೋಂದನ್ನು ಸಾಧಿಸಬಹುದು ಎಂಬುದಕ್ಕೆ ನವೀನರವರ ಈ ಲೇಖನ ಪ್ರೇರಣೆ ನೀಡುತ್ತೆ. ಎಂಬುದನ್ನು ಹಾಜಬ್ಬ ಸಾಧಿಸಿ ತೋರಿಸಿದ್ದಾರೆ. ನಾಳೆಯ ಗಾಂಧಿ ನೆನಪಲ್ಲಿ ಈ ಲೇಖನದ ಪ್ರಸ್ತುತತೆ ಮತ್ತಷ್ಟು ಹೆಚ್ಚಿದೆ. “ವರ್ತಮಾನ”ವೈಚಾರಿಕ” ಲೆಖನಗಳ ಜೊತೆಗೆ ಕೇವಲ ರಾಜಕೀಯ ಶ್ರೀಸಾಮಾನ್ಯರ ಯಶೋಗಾತೆಗಳನ್ನು ಹೀಗೆ ಪ್ರಕಟಿಸುತ್ತಿರಲಿ.

  Reply
 5. vivian

  ಹಾಬಜ್ಜ ನವರ ನಿಸ್ವಾರ್ಥ ಮನೊಬಾವನೆ ಮೆಚ್ಚುವಂತಹುದು.

  Reply
 6. Pingback: ಆಳ್ವಾಸ್ ನುಡಿಸಿರಿಗೆ ಅನಂತಮೂರ್ತಿ ಹೋಗುವುದು ಯುಕ್ತವೇ? « ವರ್ತಮಾನ – Vartamaana

 7. ಪ್ರಜೆ

  ಫಲಾಫೇಕ್ಷೆಯಿಲ್ಲದೆ ಹಾಜಬ್ಬರ ಥರ ಕೆಲಸ ಮಾಡುವ ಮಂದಿ ನಮ್ಮ ಸಮಾಜದಲ್ಲಿ ವಿರಳಾತಿವಿರಳ. ಅನುಮಾನವಿಲ್ಲ; ಅವರು ನಮ್ಮ ನಡುವಿನ ನಿಜದ ಗಾಂಧಿ.

  ಆದರೆ ಹೋಲಿಕೆ ಮಾಡೋವಾಗ ನಿಮ್ಮ ವಕ್ರ ಕಣ್ಣು `ಆಯ್ದ` ಕೆಲವೇ ಶಾಲೆಗಳ ಮೇಲೆ ಏಕೆ ಬಿತ್ತು ಅನ್ನೋದು ನಿಮ್ಮ ಇತಿಹಾಸ ಬಲ್ಲವರಿಗೆ ಅರ್ಥವಾಗದ ಸಂಗತಿಯೇನಲ್ಲ. ಇರ್ಲಿ ಬಿಡಿ, ಒಂದು ಶಾಲೆ ಕಟ್ಟೋದಕ್ಕೂ ಅದನ್ನು ನಡೆಸೋದಕ್ಕೂ ವ್ಯತ್ಯಾಸ ಇದೆ. ವಿದ್ಯಾರ್ಥಿಗಳಿಗೆ ಪಾಠ ಮಾಡೋದಕ್ಕೆ ಬರೋ ಯಾವ ಶಿಕ್ಷಕರೂ ಸಂಬಳ ಪಡೆಯದೆ ಪುಕ್ಕಟೆ ಕೆಲಸ ಮಾಡೋದಕ್ಕೆ ಆಗೋದಿಲ್ಲ. ಇದು ವಾಸ್ತವ. ಹಾಗಾಗಿ ಯಾವ ವ್ಯಕ್ತಿ ಶಾಲೆ ಕಟ್ಟಿಸಿದ್ರೂ ಅದನ್ನು ನಡೆಸಬೇಕಿದ್ರೆ ಪೋಷಕರಿಂದ ಶುಲ್ಕ ವಸೂಲಿ ಮಾಡಲೇಬೇಕಾಗುತ್ತೆ. ಇಷ್ಟಕ್ಕೂ ಶಾಲೆಗಳಿರೋದ್ರಿಂದ ಆ ಭಾಗದ ವಿದ್ಯಾರ್ಥಿಗಳಿಗೆ ಯಾವ ಅನುಕೂಲವೂ ಆಗುತ್ತಿಲ್ಲವೇ? ಅವರು ಅಲ್ಲಿ ಅಡ್ಮಿಷನ್ ಪಡೆಯೋದಿಕ್ಕೆ ಆಗದಷ್ಟರ ಮಟ್ಟಿಗೆ ಶುಲ್ಕದ ಹಾವಳಿಯಿದೆಯೇ?
  ಮಠಾಧಿಪತಿಗಳು ಮತ್ತಿತರರು ಕಟ್ಟಿಸಿದ ಶಾಲೆಗಳಲ್ಲಿ ದೊಡ್ಡ ಮಟ್ಟದ ಸುಲಿಗೆ ನಡೆಯುತ್ತಿದೆ ಅನ್ನೋ ಥರ ಬರೆದಿದ್ದೀರಿ; ಇರಬಹುದು ಅಂತಲೇ ಕಲ್ಪಿಸಿಕೊಳ್ಳೋಣ. ಸ್ವಾಮೀ, ನೀವೇ ಯಾಕೆ ಹಾಜಬ್ಬರ ಮಾದರಿ ಅನುಸರಿಸಿ ಒಂದು ಶಾಲೆ ಕಟ್ಟಿಸಿ ಅಲ್ಲಿ ಎಲ್ಲ ಧರ್ಮಗಳ ಮಕ್ಕಳಿಗೆ `ಸೇವಾ ಶಿಕ್ಷಣ` ನೀಡಿ ದೇಶ ಕಟ್ಟುವ ಕೆಲಸ ಮಾಡಬಾರದು?
  ಬಾಯಿ ಚಪಲಕ್ಕೆ ಆದರ್ಶದ ಮಾತುಗಳನ್ನ ಆಡೋದು ತುಂಬ ಸುಲಭ. ಅದನ್ನು ಅನುಸರಿಸೋದು ತುಂಬ ಕಷ್ಟ ಕಷ್ಟ..

  Reply
  1. shivashankar

   ಪ್ರಜೆಯವರೇ…. ನಿಮಗೆ ಮಂಗಳೂರಿನ ಶಿಕ್ಷಣ ಮಾಫಿಯಾದ ಬಗ್ಗೆ ಗೊತ್ತಿಲ್ಲ ಎಂದು ಕಾಣುತ್ತದೆ. ಮಂಗಳೂರಿನಲ್ಲಿ ಸರಕಾರಿ ಕಾನೂನು ಕಾಲೇಜು, ಮೆಡಿಕಲ್ ಕಾಲೇಜುಗಳನ್ನು ತೆರೆಯಲು ಆಗ್ರಹಿಸಿ. ವೃತ್ತಿಪರ ಶಿಕ್ಷಣ ನೀಡುವ ಸರಕಾರಿ ಕಾಲೇಜುಗಳನ್ನು ಇನ್ನಷ್ಟು ಆರಂಭಿಸಲು ಆಗ್ರಹಿಸಿ ನೋಡಿ. ಸರಕಾರ ಯಾವ ರೀತಿ ಸ್ಪಂದಿಸುತ್ತದೆ ಎಂದು ಗಮನಿಸಿ. ಒಂದು ವೇಳೆ ಸರಕಾರ ಇಲ್ಲಿ ಸರಕಾರಿ ಕಾನೂನು ಕಾಲೇಜು, ಮೆಡಿಕಲ್ ಕಾಲೇಜು ಸ್ತಾಪನೆಗೆ ಮುಂದಾದರೆ ಅದನ್ನು ಖಾಸಾಗಿ ಮಾಫಿಯಾ ತಡೆಯುತ್ತದೆ. ಇಷ್ಟಕ್ಕೂ ತಾಲೂಕಿನ ಪ್ರತೀಷ್ಠಿತ ದೇವಸ್ಥಾನದವರು ನಡೆಸುವ ಕಾನೂನು ಕಾಲೇಜಿನ ಫೀಸು, ಡೋಸೇಷನ್ ಎಷ್ಟು ಎಂಬುದು ಗೊತ್ತಾ ? ಯಾಕೆ ಆ ದೇವಸ್ತಾನಕ್ಕೆ ಉಚಿತ ಕಾನೂನು ಶಿಕ್ಷಣ ನೀಡಲು ಸಾಧ್ಯವಿಲ್ಲ. ಆ ದೇವಸ್ತಾನಕ್ಕೆ ದಿನಕ್ಕೆ ಕೋಟಿ ಗಟ್ಟಲೆ ದುಡ್ಡ ಭಕ್ತರಿಂದ ಬರುತ್ತದೆ. ಏನೇನೋ ವಹಿವಾಟುಗಳನ್ನು ನಡೆಸುತ್ತಾರೆ. ಉಚಿತ ಕಾಲೇಜು ನಡೆಸೋಕೆ ಆಗಲ್ವ. ದೇವಸ್ತಾನಕ್ಕೆ ಬರೋ ದುಡ್ಡು ಅವರೇನು ದುಡಿದ ದುಡ್ಡಲ್ಲ. ಭಕ್ತರು ಹುಂಡಿಗೆ ಹಾಕಿದ ದುಡ್ಡು. ಸರಕಾರಕ್ಕೆ ಲೆಕ್ಕನೂ ಕೊಡೋಕಿಲ್ಲ.. ಹೇಳೋರಿಲ್ಲ ಕೇಳೋರಿಲ್ಲ. ಕಾಲೇಜಿಗೆ ಸುರಿಯಲಿ. ಶಾಲೆ ಕಟ್ಟುವುದಕ್ಕೂ, ನಡೆಸುವುದಕ್ಕೂ ವ್ಯತ್ಯಾಸ ಇದೆ ಎಂದು ತಿಳಿಸಿಕೊಟ್ಟಿದ್ದಾರೆ. ಶಿಕ್ಷಕರು ಸಂಬಳವಿಲ್ಲದೆ ಪಾಠ ಮಾಡುವುದಿಲ್ಲ ಎಂದು ಸಂಶೋಧನೆ ನಡೆಸಿದ್ದೀರಿ. ಯಾವ ಮಠದ ಸ್ವಾಮಿ, ಉಧ್ಯಮಿ, ದೇವಸ್ತಾನ ನಡೆಸುವ ಕುಳ ಬೇಕಿದ್ದರೂ ಕಾಲೇಜು ನಡೆಸಿ ಡೋನೇಷನ್ ಹಣದಲ್ಲಿ ಶಿಕ್ಷಕರಿಗೆ ಸಂಬಳ ಬೇಕಾದರೂ ಕೊಡಲಿ. ಅದು ಅಷ್ಟಕ್ಕೆ ಸೀಮತವಾಗಿದ್ದರೆ ಚೆನ್ನ. ಅದು ಬಿಟ್ಟು ನಾವೇನೋ ಶಿಕ್ಷಣ ಕ್ರಾಂತಿ ಮಾಡುತ್ತಿದ್ದೇವೆ ಎಂಬ ಪೋಸು ಬೇಕಾಗಿಲ್ಲ. ಮಾಡೋ ವ್ಯಾಪಾರಕ್ಕೆ ಸೇವೆಯ ಮುಖವಾಡ ಯಾಕೆ ಎಂಬುದು ಪ್ರಶ್ನೆ. ನವೀನ್ರವರೇ ಲೇಖನ ತುಂಬಾ ಚೆನ್ನಾಗಿದೆ. ಇನ್ನಷ್ಟೂ ಲೇಖನಗಳು ಮೂಡಿ ಬರಲಿ. ಮಂಗಳೂರಿನ ಶಿಕ್ಷಣದ ವ್ಯಾಪಾರಕ್ಕೆ ತಡೆ ಬೀಳಬೇಕು…
   shivashankar
   beltangadi

   Reply
 8. ಪ್ರಜೆ

  ಬಾವಿಯೊಳಗಿನ ಕಪ್ಪೆ ತನ್ನ ಜಗತ್ತೇ ದೊಡ್ಡದು ಅಂದ ಹಾಗಿದೆ ನಿಮ್ಮ ಮಾತು. ಸಂಬಳವಿಲ್ಲದೆ ಜನ ಕೆಲಸ ಮಾಡೋಕೆ ಆಗಲ್ಲ ಅನ್ನೋದು ಕಣ್ಣಿಗೆ ಕಾಣೋ ಸತ್ಯ. ಅದಕ್ಕೆ ಸಂಶೋಧನೆ ಮಾಡಬೇಕಾದ ಅಗತ್ಯ ಬಹುಶಃ ನಿಮಗೆ ಮಾತ್ರ ಬಂದಿರ್ಬಹುದು.

  ಯಾವ ವಿಷಯಗಳ ಅರಿವೂ ಇಲ್ಲದೆ ಕಮೆಂಟಿಸಿಲ್ಲ. ಬೆಂಗಳೂರಿನ ಸೆಂಟ್​ ಜೋಸೆಫ್​, ಆಕ್ಸ್​ಫರ್ಡ್​ ಮುಂತಾದ ಪ್ರತಿಷ್ಟಿತ ಶಾಲೆಗಳಲ್ಲಿ ಎಲ್​ಕೆಜಿ ಪ್ರವೇಶಕ್ಕೆ ವರ್ಷಕ್ಕೆ 50 ಸಾವಿರದವರೆಗೆ ಡೊನೇಶನ್ ಕೊಡ್ಬೇಕು. ಇನ್ನು ಶಾಲೆಯ ಫೀಸು, ಬುಕ್ಸು, ಬ್ಯಾಗು ಇತ್ಯಾದಿಗಳಿಗೆ ಮತ್ತೆ ಅಷ್ಟೇ ಹಣ ತೆರಬೇಕು. ಉಜಿರೆಯ ಎಸ್​ಡಿಎಂ ಕಾಲೇಜಿನಲ್ಲಿ ಆ ಡೊನೇಶನ್ ಹಣದಲ್ಲಿ ಮೂರು ವರ್ಷದ ಡಿಗ್ರಿ ಶಿಕ್ಷಣ ಮುಗಿಸಬಹುದು.
  ನೀವೇ ಹೇಳಿದ ಹಾಗೆ, ಧರ್ಮಸಂಸ್ಥೆಗಳಲ್ಲಿ ಬರುವ ಹಣಕ್ಕೆ ಯಾವುದೇ ಲೆಕ್ಕ ಕೊಡಬೇಕಿಲ್ಲ. ಆ ಹಣವನ್ನ ವ್ಯಕ್ತಿ ತನ್ನ ವೈಯಕ್ತಿಕ ಸಾಮ್ರಾಜ್ಯ ಮತ್ತು ಐಷಾರಾಮಿತನ ಹೆಚ್ಚಿಸಿಕೊಳ್ಳೋದಕ್ಕೂ ಬಳಸಿಕೊಳ್ಳಬಹುದು. ಅರ್ಥವಾಗದಿದ್ದರೆ ಬಳ್ಳಾರಿ ರೆಡ್ಡಿಯನ್ನೋ, ರಿಲಯನ್ಸ್​ ಅಂಬಾನಿಯನ್ನೋ ಊಹಿಸಿಕೊಳ್ಳಿ. ಆದರೆ ಲೇಖನದಲ್ಲಿ ಹೆಸರಿಸಿರೋ ವ್ಯಕ್ತಿಗಳು ಅಂಥ ಕೆಲಸ ಮಾಡಿಲ್ಲ.
  ಇನ್ನು ಸರ್ಕಾರಿ ಶಾಲೆಗಳ ವಿಷಯ. ಇವತ್ತಿನ ದಿನ ಸರ್ಕಾರಿ ವ್ಯವಸ್ಥೆಯನ್ನು ನಂಬುವ ಸ್ಥಿತಿಯಲ್ಲಿ ಯಾವ ಪ್ರಜೆ ಇದ್ದಾನೆ ಸ್ವಾಮಿ? ತೀರಾ ಕೆಳ ಮಧ್ಯಮ ವರ್ಗದವರೂ ಖಾಸಗಿ ಸಂಸ್ಥೆಗಳ ಕಡೆ ಮುಖ ಮಾಡಿರೋದಕ್ಕೆ ಅಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ಸಿಗುತ್ತೆ ಅನ್ನೋ ನಂಬಿಕೆ ಕಾರಣ. ಸರ್ಕಾರಿ ಆಸ್ಪತ್ರೆ, ಸಾರಿಗೆ ಮತ್ತಿತರ ಸೇವೆಗಳ ವಿಷ್ಯದಲ್ಲೂ ಇದು ಅನ್ವಯವಾಗುತ್ತೆ.
  ಸಾರ್ವಜನಿಕ ಕ್ಷೇತ್ರಕ್ಕೆ ಖಾಸಗಿಯವರು ಬರಲೇಬಾರದು ಅನ್ನೋ ಹಾಗಿದೆ ನಿಮ್ಮ ಅಭಿಪ್ರಾಯ. ಒಂದು ಹೋಲಿಕೆಯನ್ನ ನಿಮ್ಮ ಗಮನಕ್ಕೆ ತರ್ತಿದೀನಿ. ಬೆಂಗಳೂರಿನಿಂದ ಕುಂದಾಪುರಕ್ಕೆ ಸರ್ಕಾರಿ ಐಷಾರಾಮಿ ಬಸ್​ನಲ್ಲಿ ಕೂತು ಪ್ರಯಾಣಿಸೋದಕ್ಕೆ(ಡೀಲಕ್ಸ್​) 490 ರೂ. ಕೊಡ್ಬೇಕು. ಸುಗಮ, ವಿಆರ್​ಎಲ್​ನಂಥ ಖಾಸಗಿ ಬಸ್​ಗಳಲ್ಲಿ 430 ರೂ. ಕೊಟ್ಟು ಮಲಗಿಕೊಂಡು( ಸ್ಲೀಪರ್) ಪ್ರಯಾಣಿಸಬಹುದು. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಖಾಸಗಿ ಬಸ್​ಗಳು ಹಳ್ಳಿ ಹಳ್ಳಿಗೂ ಸಂಚರಿಸೋದ್ರಿಂದ ಅಲ್ಲಿನ ನಾಗರೀಕರಿಗೆ ಉತ್ತರ ಕನ್ನಡ ಅಥವಾ ಉತ್ತರ ಕರ್ನಾಟಕದ ಜನರ ರೀತಿ ಪರದಾಡಬೇಕಾದ ಪರಿಸ್ಥಿತಿಯಿಲ್ಲ. ಬೇಕಿದ್ದರೆ ಒಮ್ಮೆ ಹೊನ್ನಾವರದ ಆಚೆ ಪರಿಸರದಲ್ಲಿ ಸರ್ಕಾರಿ ಸಾರಿಗೆಯ ಅನುಭವ ಪಡ್ಕೊಂಡು ಬನ್ನಿ.
  ಕೊನೆಯದಾಗಿ, ಮಾತನಾಡುವ ಮಂಜುನಾಥನನ್ನೋ, ಆಳ್ವನನ್ನೋ ಸಮಾಜಸೇವಕ ಅಂತ ಗುರುತಿಸಬೇಕಾದ ಅಗತ್ಯ ಇಲ್ಲ. ಸಣ್ಣ ಗೂಡಂಗಡಿ ತೆರೆದವನಿಗೂ ಹೇಗೆ ಲಾಭದ ಉದ್ದೇಶ ಇರುತ್ತೋ ಹಾಗೇ ಇವರೂ ಲಾಭ ಗಳಿಸೋದಕ್ಕಾಗೇ ಅಂಗಡಿ ತೆರೆದವರು. ಆದರೆ ಅದು ನೀವು ಅರ್ಥೈಸುವ ಹಾಗೆ ಸುಲಿಗೆ ಅಥವಾ ದರೋಡೆ ಖಂಡಿತಾ ಅಲ್ಲ.
  ಇನ್ನು ಅವರಿಗೆ ಸಿಗುವ ಗೌರವದ ಮಾತು; ಇತ್ತೀಚೆಗೆ ಬೆಂಗಳೂರಿನ ಮಾಜಿ ರೌಡಿ ಜೇಡ್ರಳ್ಳಿ ತನ್ನ ಸಮಾಜಸೇವೆಗೆ ಅಮೆರಿಕ ವಿವಿಯಿಂದ ಗೌರವ ಡಾಕ್ಟರೇಟ್​ ಸಿಕ್ಕಿದೆ ಅಂತ ಸರ್ಟಿಫೀಕೇಟ್ ಒಂದನ್ನ ತಗಲಾಕಿಕೊಂಡು ತಿರುಗ್ತಿದಾನೆ. ಜನ ಮುಸಿಮುಸಿ ನಗ್ತಿದಾರೆ. ಅದು ಎಲ್ಲ `ಸಮಾಜಸೇವಕ`ರಿಗೂ ಅನ್ವಯವಾಗುವಂಥದ್ದು

  Reply

Leave a Reply

Your email address will not be published.