ಕಾವೇರಿ ಸೆರಗಿನ ಮರೆಯಲ್ಲಿ ರಾಜಕೀಯ


-ಚಿದಂಬರ ಬೈಕಂಪಾಡಿ


 

ಕಾವೇರಿ ಮತ್ತೆ ಸುದ್ದಿಯಾಗಿದ್ದಾಳೆ. ಕಾವೇರಿ ಕನ್ನಡಿಗರ ಜೀವಸೆಲೆ. ಕಾವೇರಿಯೇ ರಾಜ್ಯದ 40ಕ್ಕೂ ಹೆಚ್ಚು ತಾಲೂಕುಗಳ ಜನ, ಜಾನುವಾರುಗಳಿಗೆ ಆಸರೆ. ಕೊಡಗಿನ ತಲಕಾವೇರಿಯಲ್ಲಿ ಹುಟ್ಟಿ ಮೈಸೂರು, ಮಂಡ್ಯ, ಚಾಮರಾಜನಗರದ ಮೂಲಕ ಹಾದು ತಮಿಳುನಾಡು, ಕೇರಳ, ಪಾಂಡಿಚೇರಿಯಿಂದ ಸಮುದ್ರ ಸೇರುವ ಕಾವೇರಿ ಸಾಗುವ ಹಾದಿಯುದ್ದಕ್ಕೂ ಸಮೃದ್ಧವಾದ ಬೆಳೆ, ಅತಿಸುಂದರ ಧರೆ; ಈಕೆ ವಸುಂಧರೆ.

ಕಾವೇರಿಯಿಂದ ತನಗೆ ನೀರು ಹರಿಸಬೇಕೆಂದು ತಮಿಳುನಾಡು ಹಕ್ಕೊತ್ತಾಯ ಮಂಡಿಸುವುದು, ನೀರು ಬಿಡಲು ಸಾಧ್ಯವಿಲ್ಲವೆಂದು ಕರ್ನಾಟಕ ವಾದಿಸುವುದು, ಎರಡೂ ರಾಜ್ಯಗಳು ಸುಪ್ರೀಂಕೋರ್ಟ್ ಬಾಗಿಲು ಬಡಿಯುವುದು, ಪ್ರಧಾನಿಯ ಅಧ್ಯಕ್ಷತೆಯಲ್ಲಿ ನೀರಿನ ವಿವಾದಕ್ಕೆ ಸಭೆ ಸೇರುವುದು, ಅಲ್ಲಿಂದ ಬರುವ ನಿರ್ದೇಶನ, ಆದೇಶಗಳನ್ನು ಪಾಲಿಸುವುದು ಅಥವಾ ಪುನರ್‌ಪರಿಶೀಲಿಸಲು ಮನವಿ ಮಾಡುವುದು; ಇಂಥ ವರಸೆಗಳು ಇನ್ನೂ ಎಷ್ಟು ವರ್ಷಗಳ ಕಾಲ ಈ ನಾಡಿನ ಜನರನ್ನು ಕಾಡಲಿವೆ ಎನ್ನುವುದು ಊಹೆಗೂ ನಿಲುಕದ ಪ್ರಶ್ನೆಗಳು. ಬ್ರಿಟೀಷರ ಕಾಲದಿಂದ ಆರಂಭವಾದ ಕಾವೇರಿ ನೀರಿನ ವಿವಾದ ದೇಶ ಸ್ವಾತಂತ್ರ್ಯ ಗಳಿಸಿ, ಮೈಸೂರು ಕರ್ನಾಟಕವಾದರೂ ಬಗೆ ಹರಿದಿಲ್ಲ ಎನ್ನುವುದು ಶೋಚನೀಯ.

ಕಾವೇರಿ ನದಿ ನೀರಿನ ವಿವಾದ ಈ ನದಿ ಇರುವಷ್ಟು ಕಾಲವೂ ಇದ್ದೇ ಇರುತ್ತದೆ ಎನ್ನುವುದಂತು ಕಟು ಸತ್ಯ. ಈ ನದಿ ನೀರಿನ ಇತಿಹಾಸವನ್ನು ಅವಲೋಕಿಸಿದರೆ ಎರಡು ಪ್ರಮುಖ ಅಂಶಗಳು ಮನದಟ್ಟಾಗುತ್ತವೆ. ತಮಿಳುನಾಡು ಮತ್ತು ಕರ್ನಾಟಕ ಈ ಎರಡೂ ರಾಜ್ಯಗಳ ಜನರಿಗೆ ಈ ವಿವಾದ ಕೊನೆಯಾಗಬೇಕು ಎನ್ನುವ ಹಂಬಲವಿರುವುದು ಮತ್ತು ರಾಜಕೀಯ ಕಾರಣಗಳಿಗಾಗಿ ಈ ವಿವಾದ ಜೀವಂತವಿರಬೇಕು ಎನ್ನುವುದು.

ಜನರು ಈ ವಿವಾದಕ್ಕೆ ತೆರೆ ಬೀಳಬೇಕು ಎನ್ನುವುದಕ್ಕೆ ಬಲವಾದ ಕಾರಣವೆಂದರೆ ಕಾವೇರಿಯನ್ನೇ ನಂಬಿರುವುದು, ಈ ನೀರನ್ನೇ ಆಧರಿಸಿ ಭತ್ತ, ಕಬ್ಬು ಸಹಿತ ಕೃಷಿ ಚಟುವಟಿಕೆ ಮಾಡುತ್ತಿರುವುದು ಅಥವಾ ತುತ್ತು ಅನ್ನ ತಿನ್ನುತ್ತಿರುವುದು ಮತ್ತು ದಾಹ ತೀರಿಸಿಕೊಳ್ಳುತ್ತಿರುವುದು. ಅನ್ನ ಬೇಯಿಸಲು ಒಲೆ ಹೊತ್ತಿಸಿ ಅಕ್ಕಿ ಹೊಂದಿಸಿಕೊಂಡ ಮೇಲೆ ನೀರಿಗಾಗಿ ಬಿಂದಿಗೆ ಹಿಡಿದು ಬಾವಿಗೆ ಹೋಗುವಂಥ ಸ್ಥಿತಿಯಲ್ಲೇ ಮೂರು ತಲೆಮಾರುಗಳನ್ನು ಕಳೆದಿದ್ದಾರೆ ಕಾವೇರಿ ನದಿಪಾತ್ರದ ಜನರು. ಇವರಿಗೆ ಬಹುಬೇಗ ಈ ವಿವಾದ ಕೊನೆಯಾಗಲೇಬೇಕೆಂಬ ತುಡಿತವಿದೆ.

ರಾಜಕಾರಣಿಗಳಿಗೆ ಈ ವಿವಾದ ಬಗೆಹರಿದರೆ ತಮ್ಮ ಭಾಗದ ಜನರು ಈ ನದಿಯೊಂದಿಗೆ ಹೊಂದಿರುವ ಭಾವನಾತ್ಮಕ ಸಂಬಂಧಗಳ ಭಾವನೆಕಳೆದುಕೊಳ್ಳುತ್ತವೆ. ಆಗ ಅದು ಒಂದು ನದಿಯಾಗಿ ಮಾತ್ರ ಅವರ ಮನಸ್ಸಿನಲ್ಲಿ ಉಳಿದುಬಿಡುತ್ತದೆ. ಹೀಗಾದರೆ ಐದುವರ್ಷಕ್ಕೊಮ್ಮೆ ಬರುವ ಚುನಾವಣೆಯಲ್ಲಿ ಭಾಷಣಕ್ಕೆ ವಿಷಯವೂ ಇಲ್ಲ, ಹೋರಾಟಕ್ಕೆ ಕಾರಣವೂ ಇಲ್ಲದಂತಾಗುತ್ತದೆ.

ನಿಜಕ್ಕೂ ನಾಚಿಕೆಗೇಡು ಅನ್ನಿಸುತ್ತದೆ ಈ ವಿವಾದ ಮತ್ತೆ ಮತ್ತೆ ಜನರನ್ನು ಬೀದಿಗಿಳಿಸುತ್ತಿರುವುದಕ್ಕೆ. ನದಿನೀರಿಗಿಳಿದು ಜಲಸತ್ಯಾಗ್ರಹ ಮಾಡುತ್ತಾರೆ. ನೀರು ಹರಿಯುವ ತೂಬಿನ ಕೆಳಗೆ ಮಲಗಿ ರಾತ್ರಿ ಕಳೆಯುತ್ತಾರೆ ಜನ. ಬೆಂಗಳೂರು, ದೆಹಲಿಯಲ್ಲಿ ನದಿ ವಿವಾದ ಬಗೆಹರಿಸಲು ಸಭೆ ನಡೆಸಿದವರು ರಾತ್ರಿ ತಮ್ಮ ತಮ್ಮ ಬಂಗ್ಲೆಗಳಲ್ಲಿ ಹಾಯಾಗಿ ನಿದ್ದೆ ಮಾಡುತ್ತಾರೆ. ಕಾವೇರಿ ರಾತೋರಾತ್ರಿ ಹರಿದುಹೋಗಿರುತ್ತಾಳೆ. ಹಗಲು ಹೊತ್ತು ಜನ ಬೀದಿಗಿಳಿದು ಬಸ್ಸು, ಕಾರು, ಸೈಕಲ್‌ಗಳನ್ನು ತಡೆದು ರಸ್ತೆ ಬಂದ್ ಮಾಡುತ್ತಾರೆ. ಧರಣಿ, ಮೆರವಣಿಗೆ ಮಾಡಿ ಪೊಲೀಸರಿಂದ ಒದೆ ತಿಂದು ಮನೆ ಸೇರುತ್ತಾರೆ. ಇಷ್ಟೇ ಅಲ್ಲವೇ ಕಾವೇರಿ ವಿವಾದದಿಂದ ಹಳ್ಳಿಗಳಲ್ಲಿ ಆಗುತ್ತಿರುವುದು, ಇದಕ್ಕಿಂತ ಬೇರೇನು ಆಗುತ್ತಿದೆ?

ಕಾವೇರಿ ನೀರಿಗಾಗಿ ಹೋರಾಟ ಎನ್ನುವುದು ನಿಮ್ಮ ನಿಮ್ಮ ಮನೆಯಲ್ಲಿ ಮಕ್ಕಳ ಹುಟ್ಟು ಹಬ್ಬ ಆಚರಿಸುವ ವಾರ್ಷಿಕ ಘಟನೆಯಂತೆ. ಈ ನೆಪದಲ್ಲಾದರೂ ಬಂಧು ಬಳಗ ಒಂದು ದಿನ ಸೇರುವಂತೆ ಕಾವೇರಿ ಹೋರಾಟದ ಹೆಸರಲ್ಲಿ ಒಂದಷ್ಟು ಜನ ಬೀದಿಗಿಳಿಯುತ್ತಾರೆ ಅಥವಾ ರಾಜಕಾರಣಿಗಳು ಬೀದಿಗಿಳಿಸುತಾರೆ.

ರಾಜಕಾರಣಿಗಳು ಜನರ ಭಾವನೆಗಳನ್ನು ಕೋರ್ಟ್, ಪ್ರಾಧಿಕಾರದ ಮುಂದೆ ಇಟ್ಟು ವಾದ ಮಂಡಿಸುತ್ತಾರೆ ಹೊರತು ವಾಸ್ತವಿಕೆ ನೆಲೆಗಟ್ಟಿನಲ್ಲಿ ನದಿಯಲ್ಲಿ ಹರಿವು, ಅಣೆಕಟ್ಟೆಗಳಲ್ಲಿ ಸಂಗ್ರಹವಾಗುವ ಪ್ರಮಾಣ, ವಾಸ್ತವ ಬೇಡಿಕೆ ಇಂಥ ಅಂಕಿಅಂಶಗಳನ್ನು ಮುಂದಿಟ್ಟುಕೊಂಡು ವಾದ ಮಂಡಿಸುತ್ತಿಲ್ಲ. ಕೋರ್ಟ್, ಪ್ರಾಧಿಕಾರ ಜನರ ಭಾವನೆಗಳ ಆಧಾರದಲ್ಲಿ ತೀರ್ಮಾನ ಕೊಡಲಾಗುವುದಿಲ್ಲ. ಆಧಾರ, ಪುರಾವೆಗಳನ್ನು ಕಣ್ಣಮುಂದಿಟ್ಟುಕೊಂಡು ಯಾರಿಗೆ ಎಷ್ಟು ನೀರು ಎನ್ನುವುದನ್ನು ತೀರ್ಮಾನಿಸಬೇಕಾಗುತ್ತದೆ. ಯಾವ ರಾಜ್ಯ ತನ್ನ ವಾದಕ್ಕೆ ಪುರಾವೆ ಒದಗಿಸುತ್ತದೋ ಅದರ ಪರವಾಗಿ ಮಧ್ಯಂತರ ತೀರ್ಪು ಹೊರಬೀಳುತ್ತಿದೆಯೇ ಹೊರತು ಅಂತಿಮ ತೀರ್ಮಾನ ಕೊಡಲು ಸಾಧ್ಯವಾಗುತ್ತಿಲ್ಲ.

ಕಾವೇರಿ ನದಿ ವಿವಾದದ ಹಿನ್ನೆಲೆಯಲ್ಲಿ ನಡೆದ ಸರ್ವಪಕ್ಷ ಸಭೆಯ ತೀರ್ಮಾನವನ್ನು ವಿಶ್ಲೇಷಿಸಿದರೆ ರಾಜಕಾರಣಿಗಳು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿರುವುದು ಮನದಟ್ಟಾಗಿಬಿಡುತ್ತದೆ. ಆಡಳಿತಪಕ್ಷ, ಪ್ರತಿಪಕ್ಷಗಳು ಇಲ್ಲೂ ತಮ್ಮ ಅಜೆಂಡಾವನ್ನು ಮುಂದಿಟ್ಟುಕೊಂಡೇ ಕೆಲಸ ಮಾಡಿರುವುದು ಸ್ಪಷ್ಟವಾಗುತ್ತದೆ. ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದಾಗಿ ಕಾವೇರಿ ನೀರಿನ ವಿವಾದ ಜೀವಂತವಾಗಿದೆ ಹೊರತು ಅನ್ಯಕಾರಣಗಳಿಂದಲ್ಲ. ಕಾವೇರಿ ನೀರು ಹರಿಸಿದರೆ ರಾಜೀನಾಮೆ ಕೊಡುತ್ತೇವೆ ಎಂದು ರಾಜಕಾರಣಿಗಳು ಹೇಳುವುದು ಜನರ ಭಾವನೆಗಳನ್ನು ಹಿಡಿಟ್ಟುಕೊಂಡು ಚಲಾವಣೆಯಲ್ಲಿರಲು ಹೊರತು ಆ ರಾಜೀನಾಮೆಯಿಂದ ಕಾವೇರಿ ನೀರು ಹರಿಯುವುದು ನಿಲ್ಲುತ್ತದೆಯೇ?

ಕಾವೇರಿ ನದಿಯ ಪುರಾಣ ಕತೆಯಲ್ಲಿ ಅಗಸ್ತ್ಯ ಮುನಿ ಲೋಪಮುದ್ರೆಯನ್ನು ಮದುವೆಯಾಗುತ್ತಾನೆ. ತನ್ನನ್ನು ಕಾಯಿಸಬಾರದು ಎನ್ನುವ ಆಕೆಯ ಕೋರಿಕೆಗೆ ಮುನಿಯೂ ಸಮ್ಮತಿಸಿರುತ್ತಾನೆ. ಆದರೆ ಮುನಿ ಶಿಷ್ಯರಿಗೆ ಪಾಠಮಾಡುವುದರಲ್ಲಿ ತಲ್ಲೀನನಾಗಿ ಲೋಪಮುದ್ರೆಯನ್ನು ಮರೆತು ತಡವಾಗಿ ಹೋದಾಗ ಆಕೆ ತಾಳ್ಮೆಕಳೆದುಕೊಂಡು ಕಾವೇರಿ ನದಿಯಾಗಿ ಹರಿದುಹೋಗುತ್ತಿರುತ್ತಾಳೆ. ಆಗ ಮುನಿಯಿಂದಲೂ ಆಕೆಯನ್ನು ಹಿಂದಕ್ಕೆ ಕರೆಸಿಕೊಳ್ಳಲಾಗುವುದಿಲ್ಲ. ಆದ್ದರಿಂದ ಅಗಸ್ತ್ಯ ಮುನಿಗೇ ಕಾಯದ ಕಾವೇರಿ ರಾಜಕಾರಣಿಗಳನ್ನು ಕಾಯುತ್ತಾಳೆಯೇ? ಅವರ ರಾಜೀನಾಮೆಗೆ ಬೆದರುಳುತ್ತಾಳೆಯೇ?

ಕೇವಲ ರಾಜಕೀಯ ಕಾರಣಗಳಿಗಾಗಿ ಕಾವೇರಿ ನದಿ ವಿವಾದವನ್ನು ಬಗೆಹರಿಸದೆ ಜೀವಂತವಾಗಿಡುವ ಮೂಲಕ ಎರಡೂ ರಾಜ್ಯಗಳ ಜನರ ನಡುವೆ ದ್ವೇಷ ಹುಟ್ಟು ಹಾಕುವಂಥ ಕಾಯಕವನ್ನು ಜನರೇ ಅರ್ಥಮಾಡಿಕೊಳ್ಳಬೇಕು. ಕೇಂದ್ರ ಮತ್ತು ರಾಜ್ಯಗಳ ನಡುವೆ ಹೊಂದಾಣಿಕೆ ಕೊರತೆಯೂ ಕೂಡಾ ಈ ವಿವಾದ ಬಗೆಹರಿಯದಿರಲು ಕಾರಣವಾಗಿದೆ. ಎರಡೂ ರಾಜ್ಯಗಳು ರಾಜಕೀಯವನ್ನು ಬದಿಗಿಟ್ಟು ವಾಸ್ತವಿಕೆ ನೆಲೆಗಟ್ಟಿನಲ್ಲಿ ಚರ್ಚಿಸಿ ವಿವಾದಕ್ಕೆ ತೆರೆ ಎಳೆಯಬೇಕೇ ಹೊರತು ಕೋರ್ಟು, ಪ್ರಾಧಿಕಾರ ಎನ್ನುವ ಪ್ರಕ್ರಿಯೆಗಳು ಈ ವಿವಾದವನ್ನು ಇತ್ಯರ್ಥಪಡಿಸುವುದಿಲ್ಲ.

2 thoughts on “ಕಾವೇರಿ ಸೆರಗಿನ ಮರೆಯಲ್ಲಿ ರಾಜಕೀಯ

  1. sreedhar kalahala

    ಕಾವೇರಿ ವಿಚಾರವಾಗಿ ಒಂದು ಅಭಿಪ್ರಾಯ
    ೧. ನದಿ ಹುಟ್ಟಿ ಹರಿದು ಸಮುದ್ರ ಸೇರುವುದು ಪ್ರಾಕೃತಿಕ ಕ್ರಮ
    ೨. ನಾಗರೀಕತೆಗಳು ಇದನ್ನು ಅವಲಂಬಿಸಿವೆ. ಅಂತೆಯೇ ಅಸಂಖ್ಯ ಇತರೆ ಜೀವರಾಶಿಗಳು ಇದನ್ನು ಅವಲಂಬಿಸಿಯೇ ಬದುಕುತ್ತಿವೆ.
    ೩. ಈ ನದಿಯನ್ನು ಅಲ್ಲಲ್ಲಿ ಕೆರೆ-ಕೊಳ್ಳಗಳ ಮೂಲಕ ಶೇಖರಿಸಿಕೊಂಡು ಮುಂದಿನ ಸಹಜ ಹರಿವೆಗೆ ಅನುವು ಮಾಡಿಕೊಡುವುದು ಪ್ರಕೃತಿಯ ಸಹಜ ಕ್ರಿಯೆಗೆ ಸಹಕಾರಿ.
    ೪. ದೊಡ್ಡ ಆಣೆಕಟ್ಟನ್ನು ಕಟ್ಟಿ ಬಹುಭಾಗದ ನೀರನ್ನು ತಡೆದಾಗ ಅದು ಪ್ರಕೃತಿವಿರೋಧ. ಮಾತ್ರವಲ್ಲ ಮುಂದಿನ ಜೀವಕೋಟಿಗೆ ಬಗೆಯುವ ದ್ರೋಹ.
    ೫. ಈ ತಡೆಯೊಡ್ಡುವ ಕೆಲಸವನ್ನು ರಾಜ್ಯವಾಗಿ ಮಾಡಿದಾಗ ಸಹಜವಾಗಿ ಮುಂದಿನ ರಾಜ್ಯದ ತಕರಾರು ಸಹಜ.
    ೬. ಇದನ್ನು ನಿರ್ವಹಿಸಲು ಒಕ್ಕೂಟ ವ್ಯವಸ್ಥೆಯ ದೇಶದಲ್ಲಿ ಈಗಾಗಲೇ ಸಾಕಷ್ಟು ಯೋಚನೆ, ಪರಿಹಾರ ಸೂತ್ರ ಕಂಡುಕೊಳ್ಳಲಾಗಿದೆ.
    ೭. ಈ ಸೂತ್ರಗಳನ್ನು ಒಪ್ಪಿಕೊಳ್ಳಲು ಯಾವುದಾದರೂ ಒಂದು ರಾಜ್ಯಕ್ಕೆ ತಕರಾರು ಇದ್ದೇ ಇದೆ. ಇರುತ್ತದೆ ಕೂಡ.
    ೮. ಈ ತಕರಾರಿನಲ್ಲಿ ಇತರೆ ಪ್ರಾಕೃತಿಕ ಜೀವಕೋಟಿಗಳ , ಸಮುದ್ರದ ಜಲಚರಗಳ ಕೂಗು ಯಾರಿಗೂ ಬೇಕಿಲ್ಲ. ಕೇಳುವುದೂ ಇಲ್ಲ.
    ೯. ಸಮುದ್ರದ ಎಕಾಲಜಿಯಲ್ಲಿ ಹೀಗೆ ಪಶ್ಚಿಮಘ್ಹಟ್ಟದಿಂದ ಲವಣಗಳನ್ನು ಕೊಂಡೊಯ್ಯುವ ನದಿಗಳ ನೀರು ಅಲ್ಲಿನ ಜಲಚರಗಳಿಗೆ ಅತ್ಯವಶ್ಯಕ.
    ೧೦. ಒಂದೊಮ್ಮೆ ಒಂದು ರಾಜ್ಯದ ನದಿ ಅವಲಂಬಿತ ರೈತರಿಗೆ ತಮ್ಮ ಬೆಳೆಗೆ ಒದಗಿಸಬೇಕಾದ ನೀರಿನ ಅವಶ್ಯಕತೆಯನ್ನು ಕಡಿಮೆ ಮಳೆಯಾದ ವರ್ಷಗಳಲ್ಲಿ ಒದಗಿಸಲು ಆಗದೇ ಇದ್ದಾಗ ಆ ಭಾಗದ ರೈತರಿಗೆ ಸರ್ಕಾರ ಸೂಕ್ತ ಆರ್ಥಿಕ ಪರಿಹಾರವನ್ನು ಒದಗಿಸಿದಲ್ಲಿ ಅನಾಹುತ ಆಗಬೇಕಿಲ್ಲ.
    ೧೧. ಈ ನೀರನ್ನು ಅವಲಂಬಿಸಿದ ಪಟ್ಟಣಗಳು ಅಲ್ಲಿ ಬೀಳುವ ಮಳೆಯ ನೀರನ್ನು ಸೂಕ್ತವಾಗಿ ಸಂಗ್ರಹಿಸಿಕೊಂಡು ಬದುಕಲು ಸಾಧ್ಯ.
    ೧೨. ಈ ಅನ್ಯಾಯದ ನೀರು ಸಂಗ್ರಹಣೆಯ ಕಾರ್ಯದ ಕಾರಣದಿಂದ ವಿನಾಕಾರಣ ಹುಟ್ಟಿಸಿಕೊಳ್ಳುವ ರಾಜ್ಯ-ರಾಜ್ಯ ಗಳ ನಡುವಿನ ದ್ವೇಶ ಅರ್ಥಹೀನ ಮಾತ್ರವಲ್ಲ ಅನಾಗರೀಕ ಬೆಳವಣಿಗೆ

    Reply
  2. anand prasad

    ನದಿಗಳ ನೀರನ್ನು ಹಾಗೇಯೇ ಸಮುದ್ರ ಸೇರಲು ಬಿಟ್ಟರೆ ದೇಶದಲ್ಲಿ ಆಹಾರದ ಕೊರತೆ ಆಗುವುದು ಖಚಿತ. ಅಣೆಕಟ್ಟುಗಳನ್ನು ಕಟ್ಟಿ ನೀರನ್ನು ಶೇಖರಿಸಿದ ಕಾರಣ ವರ್ಷಕ್ಕೆ ೨ ಅಥವಾ ೩ ಬೆಳೆ ತೆಗೆಯಲು ಸಾಧ್ಯವಾಗುತ್ತಿದೆ. ಮಳೆ ಆಧರಿಸಿ ವರ್ಷಕ್ಕೆ ಒಂದು ಬೆಳೆ ತೆಗೆಯಲು ಮಾತ್ರ ಸಾಧ್ಯ. ಇದರಿಂದ ದೇಶದಲ್ಲಿ ಆಹಾರದ ಕೊರತೆ ಉಂಟಾದೀತು. ಆಯಾ ರಾಜ್ಯದಲ್ಲಿ ಬೀಳುವ ಮಳೆಯ ನೀರನ್ನು ಶೇಖರಿಸಿ ಉಪಯೋಗಿಸುವ ಹಕ್ಕು ಆಯಾ ರಾಜ್ಯದ್ದಾಗಬೇಕಾಗಿರುವುದು ಹೆಚ್ಚು ವೈಜ್ಞಾನಿಕ ಹಾಗೂ ಸಹಜ ನ್ಯಾಯ. ಆದರೆ ವಸಾಹತುಶಾಹಿ ಒಪ್ಪಂದಗಳ ಆಧಾರದಲ್ಲಿ ರಾಜ್ಯಕ್ಕೆ ಚಾರಿತ್ರಿಕ ಅನ್ಯಾಯ ಆಗಿದೆ. ಸ್ವಾತಂತ್ರ್ಯ ದೊರೆತ ನಂತರವೂ ಅದೇ ಅನ್ಯಾಯ ಮುಂದುವರಿಯುತ್ತಿರುವುದು ಸಮಂಜಸವಲ್ಲ. ಹೀಗಾಗಿ ರಾಜ್ಯದ ಜನ ಪ್ರತಿಭಟಿಸುವುದು, ಪ್ರತಿಭಟಿಸಬೇಕಾಗಿರುವುದು ಅನಿವಾರ್ಯ. ಬರದಿಂದ ನೀರಿನ ಕೊರತೆ ಉಂಟಾದಾಗ ನೀರನ್ನು ತಮಿಳುನಾಡಿಗೆ ಬಿಡುವುದರಿಂದ ಉಂಟಾಗುವ ಬೆಳೆ ನಾಶದ ನಷ್ಟ ಪರಿಹಾರ ಕೊಟ್ಟರೆ ತೊಂದರೆ ಇಲ್ಲ. ಆದರೆ ನಷ್ಟ ಪರಿಹಾರ ಕೊಡುವ ಬಗ್ಗೆ ಕೇಂದ್ರ ಸರ್ಕಾರವಾಗಲಿ, ಸುಪ್ರೀಂ ಕೋರ್ಟ್ ಆಗಲೀ ಒಪ್ಪುವುದಿಲ್ಲ ಏಕೆಂದರೆ ಅವುಗಳು ನ್ಯಾಯ ತೀರ್ಮಾನ ಮಾಡುತ್ತಿರುವುದು ವಸಾಹತುಶಾಹೀ ಒಪ್ಪಂದಗಳ ಆಧಾರದಲ್ಲಿ. ಇದರಲ್ಲಿ ನಷ್ಟ ಪರಿಹಾರ ಕೊಡುವ ಪ್ರಶ್ನೆಯೇ ಇಲ್ಲ ಎಂದು ಅವುಗಳು ಜಾರಿಕೊಳ್ಳುತ್ತವೆ. ‘ಬಗ್ಗಿದವನಿಗೆ ಒಂದು ಗುದ್ದು ಹೆಚ್ಚು’ ಎಂಬ ಗಾದೆಯೇ ಇದೆ. ಕರ್ನಾಟಕವು ಸದಾ ಬಗ್ಗುತ್ತಲೇ ಬರುತ್ತಿರುವುದರಿಂದ ವಸಾಹತುಶಾಹೀ ಒಪ್ಪಂದದ ಅನ್ಯಾಯವನ್ನು ಸ್ವಾತಂತ್ರ್ಯನಂತರವೂ ನಮ್ಮ ಮೇಲೆ ಮುಂದುವರಿಸಲಾಗಿದೆ. ಕರ್ನಾಟಕದ ಜಲಸಂಪತ್ತಿನ ಶೋಷಣೆ ತಮಿಳುನಾಡಿನಿಂದ ಮುಂದುವರಿಯುತ್ತಲೇ ಇದೆ. ಈ ಶೋಷಣೆಯನ್ನು ಪ್ರತಿಭಟಿಸುವ ಅಗತ್ಯ ಇದೆ.

    ನಿಸರ್ಗ ನಿಯಮವನ್ನು ಮಾನವ ಇಂದು ಪಾಲಿಸುತ್ತಿಲ್ಲ. ನಗರಗಳ ಬೆಳವಣಿಗೆ ನಿಸರ್ಗ ನಿಯಮಗಳಿಗೆ ವಿರುದ್ಧವಾದದ್ದು. ಆದರೆ ಮನುಷ್ಯ ಇಂದು ನಗರಗಳತ್ತಲೇ ಓಡುತ್ತಿದ್ದಾನೆ. ಕಾಯಿಲೆ ಬಂದಾಗ ಔಷಧಿ ತೆಗೆದುಕೊಂಡು ಜೀವ ಉಳಿಸುವುದು ನಿಸರ್ಗ ನಿಯಮಕ್ಕೆ ವಿರುದ್ಧವಾದದ್ದು, ಇದರಿಂದ ನಿಸರ್ಗದ ಸಮತೋಲನ ಜನಸಂಖ್ಯೆಯ ಹೆಚ್ಚಳದ ಮೂಲಕ ತಪ್ಪುತ್ತದೆ. ಹಾಗೆಂದು ಕಾಯಿಲೆ ಬಂದಾಗ ಔಷಧಿ ತೆದೆದುಕೊಳ್ಳದೆ ಇರಲಾಗುವುದಿಲ್ಲ. ಹಾಗೆಯೇ ಇಂದು ಹರಿವ ನದಿಯ ನೀರು ಸಮುದ್ರ ಸೇರಬೇಕಾದ ನಿಸರ್ಗ ನಿಯಮ ಮಾನವನಿಂದ ಪಾಲಿಸಲಾಗುತ್ತಿಲ್ಲ, ಪಾಲಿಸಿದರೆ ಆಹಾರದ ಕೊರತೆ ಉಂಟಾಗುವುದು ನಿಶ್ಚಿತ. ತಮಿಳುನಾಡು ಕೂಡ ದೊಡ್ಡ ಅಣೆಕಟ್ಟುಗಳನ್ನು ಕಟ್ಟಿಕೊಂಡು ನದಿಯ ಸಾಗರ ಸೇರುವಿಕೆಯನ್ನು ತಡೆ ಹಿಡಿದಿದೆ. ಹಾಗಾಗಿ ಅದಕ್ಕೆ ನಿಸರ್ಗ ನಿಯಮದ ಬಗ್ಗೆ ಮಾತಾಡುವ ನೈತಿಕ ಅರ್ಹತೆ ಇಲ್ಲ.

    Reply

Leave a Reply

Your email address will not be published. Required fields are marked *