ಗಾಂಧಿ ಜಯಂತಿ ಕಥಾ ಸ್ಪರ್ಧೆ – 2012 : ತೀರ್ಪುಗಾರರ ಮಾತು

ಕಥೆಗಳಿಗೆ ಇರುವ ಆಕರ್ಷಣೆಯೇ ಅಂಥದ್ದು

– ಕೇಶವ ಮಳಗಿ

ಬರವಣಿಗೆಯ ಆರಂಭದಲ್ಲಿ ಎಲ್ಲರೂ ಕವಿಗಳಾಗಲು ಹಾತೊರೆಯುತ್ತಾರಾದರೂ ಬಲು ಬೇಗ ತಮ್ಮೊಳಗಿನ ಶಕ್ತಿಯನ್ನು ಕಂಡುಕೊಂಡವರು ಸಾಮಾನ್ಯವಾಗಿ ಕಥೆ ಕಟ್ಟುವ ಕಾಯಕಕ್ಕೆ ಜಾರುತ್ತಾರೆ. ಸಾಂದ್ರತೆ ತುಂಬಿರುವ, ರೂಪಕಗಳು ಕಿಕ್ಕಿರಿದಿರುವ, ಅಮೂರ್ತತೆಗೇ ಹೆಚ್ಚಾಗಿ ಒಲಿದಿರುವ ಕಾವ್ಯಲೋಕವನ್ನು ಮೀರಿದ, ಮತ್ತಷ್ಟು ನಿಖರತೆ, ವಿವರಗಳನ್ನು ಬಯಸುವ ಅಭಿವ್ಯಕ್ತಿಯ ಆವಶ್ಯಕತೆ ಇದೆ ಎಂಬ ತುಡಿತದ ಲೇಖಕರು ಕವಿತೆ ಚುಂಬನಕ್ಕೆ, ಕಥೆ ಆಲಿಂಗನಕ್ಕೆ ಎಂಬಂತೆ ಅದರತ್ತ ತಮ್ಮ ವಿಶಾಲ ಬಾಹುಗಳನ್ನು ಚಾಚುತ್ತಾರೆ. ಸಾಮಾನ್ಯವಾಗಿ ಅನುಕರಣೆ, ಪುನರಾವರ್ತನೆಗಳಿಂದ ತುಂಬಿ ತುಳುಕುವ ಸಮಕಾಲೀನ ಕಾವ್ಯಲೋಕ ಇನ್ನೊಂದು ಹೊರಳಿಗೆ ಲೇಖಕನನ್ನು ತಂದು ನಿಲ್ಲಿಸುತ್ತದೆ. ತನ್ನ ವ್ಯಕ್ತಿ ವಿಶಿಷ್ಟ ಅನುಭವ ಸಮಷ್ಟಿ ಅನುಭವವಾಗಿ ಮೈದಳೆಯಲು ಇರುವ ಪ್ರಕಾರ ಯಾವುದೆಂದು ಯೋಚಿಸುವ ಅಗತ್ಯವೂ ಇಲ್ಲದಂತೆ ಕಥೆ ಅಂಥ ಲೇಖಕರ ಎದುರು ನಿಂತಿರುತ್ತದೆ. ಲೋಕವಿಸ್ಮಯದ ಹೂವಿನಂತೆ ಕಥೆ ಕಂಗೊಳಿಸತೊಡಗುತ್ತದೆ. ಲೇಖಕ ಬಯಸುವ ಎಲ್ಲವನ್ನೂ ಸಹಜವಾಗಿ, ಸಮರ್ಪಕವಾಗಿ ತನ್ನೊಳಗೆ ಮಟ್ಟಸವಾಗಿ ಈ ಕಥಾಲೋಕ ಹೊಂದಿಸಿ ಇಟ್ಟುಕೊಂಡಿರುತ್ತದೆ. ಸಾಂದ್ರವಾಗಿರುತ್ತಲೇ ಅಪೂರ್ವ ವಿವರಗಳ ಮೂಲಕ ತಟ್ಟನೆ ಆ ವರೆಗೆ ಅರಿವಿಲ್ಲದ ಬದುಕಿನ ಕುರಿತ ಅಪೂರ್ವ ಒಳನೋಟವನ್ನು ಒದಗಿಸುವ ಗುಣ; ಕಾದಂಬರಿಯಂತೆ ಸವಿವರವಾಗಿ, ಒಂದಾದ ಮೇಲೊಂದರಂತೆ ಕಟ್ಟಬೇಕಾದ, ತಾರ್ಕಿಕ ತುದಿಯನ್ನು ಮುಟ್ಟಿಸಬೇಕಾದ ಇಲ್ಲದ ಅನಿವಾರ್ಯತೆ ಕಥೆಗಳಿಗೇ ಹೇಳಿ ಮಾಡಿಸಿದ್ದು. ಲಾಲಿತ್ಯದ ಕೈ ಹಿಡಿದರೂ ಅತಿ ವಾಚಾಳಿಯಾಗದೆ ಭಾವುಕ ಪರಿಸರವನ್ನು ನಿಭಾಯಿಸಬಲ್ಲ ಸಾಧ್ಯತೆ ಪ್ರಬಂಧಕ್ಕಿಂತ ಕಥೆಗೇ ಹೆಚ್ಚು. ಬುದ್ಧಿಭಾವಗಳು ಕೂಡಿಕೆಯಾದ, ಒಡಪಿನ ಮೈಕಟ್ಟು ಹೊಂದಿದ, ಲಾಲಿತ್ಯ-ನವಿರುತನವನ್ನು ಹಿಡಿದಿಟ್ಟುಕೊಂಡಿರುವ, ಕೊಂಚ ಜಾಣ್ಮೆ, ಕೊಂಚ ತಾಳ್ಮೆಗಳ ಮೂಲಕ ಕಟ್ಟಿದ ಕಥೆಗಳು ತಲೆಮಾರುಗಳಿಂದಲೂ ನಮ್ಮನ್ನು ಕಾಡುತ್ತಲೇ ಬಂದಿವೆ. ಅಂಥ ಕಥೆಗಳನ್ನು ಓದುತ್ತಲೇ ನಾವೆಲ್ಲ ಬೆಳೆದು-ಬೆಳಗುತ್ತಿರುತ್ತೇವೆ. ಕಥೆ ಹೇಳುವುದು; ಕಥೆ ಕೇಳುವುದನ್ನು ರಕ್ತದಲ್ಲಿಯೇ ಪಡೆದು ಬಂದಿರುವ ನಮ್ಮಂಥ ಸಮಾಜದಲ್ಲಿ ಕವಿತೆ ಏಕಾಂತಕ್ಕೆ; ಕಥೆಗಳು ಲೋಕಾಂತಕ್ಕೆ.

ಕನ್ನಡದ ಸಮಕಾಲೀನ ಸಾಹಿತ್ಯ ಸನ್ನಿವೇಶದಲ್ಲಿ ಹೊಸ ಲೇಖಕರು ಕಥೆಗಳಿಗೆ ಹೊರಳಲು ಇರುವ ಇನ್ನೊಂದು ಆಮಿಷವೆಂದರೆ ಕಥಾ ಸ್ಪರ್ಧೆಗಳು. ಈ ಹಿಂದೆ ಬೆರಳೆಣಿಕೆಯಷ್ಟಿದ್ದ ಅವಕಾಶ ಈಗ ಕೈಚಾಚುವಷ್ಟು ಹೇರಳವಾಗಿವೆ. ಕುರುಡು ಕಾಂಚಾಣದ ಆಸರೆಯೂ ಸಿಕ್ಕುವುದರಿಂದ ಸ್ಪರ್ಧೆಗಳಿಗೆ ಕಥೆ ಬರೆಯುವುದು ಸಾರ್ಥಕಶ್ರಮ ಅಥವ ವರ್ತ್‌ ಅಟೆಂಪ್ಟಿಂಗ್.

ಕಥಾಪ್ರಸಂಗಕ್ಕೊಂದು ನಿಮಿತ್ತ ಬೇಕು. “ಗಾಂಧಿ ಜಯಂತಿ” ವರ್ತಮಾನ.ಕಾಮ್‌ನ ಗೆಳೆಯರಿಗೆ ಅದನ್ನು ಒದಗಿಸಿದೆ. ಚರ್ವಿತಚರ್ವಣ ಜನಪ್ರಿಯ ಸಿದ್ಧ ಮಾದರಿಗಳು, ಹೀಗೇ ಬರೆಯಿರಿ ತರುಣರೇ ಎಂದು ಯಶಸ್ಸಿನ ಮಾರ್ಗದರ್ಶಿ ಸೂತ್ರವನ್ನು ತೋರಿಸಿ ಹುರಿದುಂಬಿಸುವ ದರ್ಶಿನಿ ವಿಮರ್ಶಕರು, ಇದೇ ಶ್ರೇಷ್ಠತೆ ಸಾಧಿಸಲು ಸೋಪಾನ ಎಂದು ಮುಗುಮ್ಮಾಗಿ ನಿಂತು ನಗುವ ಶ್ರೇಷ್ಠತೆಯ ವ್ಯಸನದ ಬುಡಕಟ್ಟಿನವರು ಹೇಳುವ ಎಲ್ಲವನ್ನೂ ತಿರಸ್ಕರಿಸಿ, ನಾವು ಹೇಳುವುದೇ ಬೇರೆ ಇದೆ, ಮತ್ತು ಅದು ನೀವು ಹೇಳುವುದಕ್ಕಿಂತ ಭಿನ್ನವಾಗಿದೆ ಎಂದು ನಿರೂಪಿಸಬಲ್ಲ ಅಪಾರ ಅವಕಾಶಗಳನ್ನು ಇಂಥ ಕಥಾಸ್ಪರ್ಧೆಗಳು ಒದಗಿಸುತ್ತವೆ. ಮುಖ್ಯವಾಹಿನಿಯಲ್ಲಿ ಒಪ್ಪಿಗೆಯಾಗದ ಶೈಲಿ, ಅನುಭವ, ಪ್ರಯೋಗಗಳಿಗೆ ಸ್ಪರ್ಧೆಗಳಲ್ಲಿ ಆದ್ಯತೆ ದೊರಕಬಹುದು. ಆದರೆ, ವಾಸ್ತವದಲ್ಲಿ ಹಾಗಾಗುತ್ತಿದೆಯೇ? ಕನ್ನಡದಲ್ಲಿ ನಡೆಸಲಾಗುತ್ತಿರುವ ಸ್ಪರ್ಧೆಗಳಿಂದ ಹೊರಬರುತ್ತಿರುವ ಕಥೆಗಳನ್ನು ನೋಡಿದರೆ ಇಲ್ಲವೆಂದೇ ಹೇಳಬೇಕಾಗುತ್ತದೆ.

ಗಾಂಧಿ ಜಯಂತಿಯ ನಿಮಿತ್ತ ವರ್ತಮಾನ.ಕಾಮ್ ಏರ್ಪಡಿಸಿದ ಸ್ಪರ್ಧೆಗೆ ಬಂದ ಐವತ್ತು ಕಥೆಗಳನ್ನು ಓದಿದಾಗಲೂ ಮತ್ತೆ ಅಂಥದೇ ಪ್ರಶ್ನೆ ಕಾಡುತ್ತಿದೆ. ಸಮಾಜ ತಲ್ಲಣಗಳಿಂದ ನಿಗಿನಿಗಿಸುತ್ತಿದೆ. ಅವಕಾಶವಾದಿಗಳು, ಕಪಟಿಗಳು, ಸಮುದಾಯ ವಂಚಕರು, ಎಲ್ಲವನ್ನೂ ಹೊಸಕಿ ಹೂಂಕರಿಸುವ ದುಷ್ಟರು ಹಿಂದೆಂದಿಗಿಂತ ಹೆಚ್ಚಿನ ಪ್ರಮಾಣದಲ್ಲಿ ತುಂಬಿ ತುಳುಕುತ್ತಿದ್ದಾರೆ. ಲೋಕ ಬರು ಬರುತ್ತ ಇನ್ನಷ್ಟು ಸಂಕೀರ್ಣವಾಗುತ್ತಿದೆ. ಒಂದು ಸಾಂತ್ವನದ ಮೆಲುದನಿ, ಒಂದು ಅಂತಃಕರಣದ ಪಿಸುಮಾತು, ಒಂದು ಆಸರೆಯ ಕೈಗಳಿಗಾಗಿ ಹಿಂದೆಂದಿಗಿಂತ ಹೆಚ್ಚು ಇಂದು ಎಲ್ಲರೂ ತುಡಿಯುತ್ತಿದ್ದಾರೆ.

ಆದರೆ, ಲೇಖಕ ಮಾತ್ರ ಕೈಯಲ್ಲಿ ಹಿಡಿದ ಚಲಾವಣೆ ಕಳೆದುಕೊಂಡ ಸಿಕ್ಕೆಯನ್ನೇ ತಿಕ್ಕಿತಿಕ್ಕಿ ಹೊಸತೆಂಬಂತೆ ಎಲ್ಲರಿಗೂ ತೋರಿಸುತ್ತಿದ್ದಾನೆ. ಲೇಖಕರಾಗಿ ಕಠಿಣ ನಿಲುವು, ಸವಾಲುಗಳನ್ನು ಸ್ವೀಕರಿಸುವ, ಸಮರ್ಪಕ ವೇಳೆಯಲ್ಲಿ ಅತ್ಯಂತ ಕಹಿಯಾದ ಸಮರ್ಪಕ ಪ್ರಶ್ನೆಗಳನ್ನು ಕೇಳುವ ನೈತಿಕತೆಯನ್ನು ಬರಹಗಾರ ಕಳೆದುಕೊಳ್ಳುತ್ತಿದ್ದಾನೆಯೇ? ನೈತಿಕತೆ ಇನ್ನೂ ಸಾಹಿತ್ಯದ ಭಾಗವಾಗಿ ಉಳಿದಿಲ್ಲವೆ? ಉತ್ತರ ಕಂಡುಕೊಳ್ಳಬೇಕಾದ ಪ್ರಶ್ನೆಗಳು.

ಸ್ಪರ್ಧೆಗೆ ಬಂದ ಕಥೆಗಳನ್ನು ಇಂಥ ಪ್ರಶ್ನೆಗಳ ಹಿನ್ನೆಲೆಯಲ್ಲಿಯೇ ಓದಲು ಪ್ರಯತ್ನಿಸಲಾಗಿದೆ. ರಚನೆ, ಬಂಧ ಮತ್ತು ಶೈಲಿಯ ಮಿತಿಗಳೇನೆ ಇದ್ದರೂ ಆಶಯದ ದೃಷ್ಟಿಯಿಂದ ಆ ನಿಟ್ಟಿನಲ್ಲಿ ಹೆಜ್ಜೆ ಇಡುವ ಪ್ರಯತ್ನಗಳನ್ನು ಮಾಡಿದ ಮೂರು ಕಥೆಗಳನ್ನು ಅಂತಿಮ ಸುತ್ತಿಗೆ ಆಯ್ಕೆಮಾಡಲಾಗಿದೆ.

ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ನರಕ ಸದೃಶ್ಯ ಹಾಸ್ಟೆಲ್ಲಿನ ಕಥೆಯನ್ನು ಸಮಕಾಲೀನ ರಾಜಕೀಯ, ಜಾತಿಯ ವಿಷ, ಬುದ್ಧಿಜೀವಿ ಸೋಗಲಾಡಿತನ, ಡಾಂಭಿಕ ಆಧ್ಯಾತ್ಮಿಕತೆ, ಮತ್ತು ಮಾನವಂತ ಸಮಾಜಕ್ಕೆ ಇರಬೇಕಾದ ಕನಿಷ್ಟ ನೈತಿಕತೆಗಳ ಗೈರು ಹಾಜರಿಯನ್ನು “ಹಸಿವೆಯೇ ನಿಲ್ಲು ನಿಲ್ಲು” ಕಥೆ ಕಟು ವ್ಯಂಗ್ಯ, ಹರಿತ ಭಾಷೆಯ ಟೀಕೆ-ಟಿಪ್ಪಣಿ, ನೈತಿಕ ವ್ಯಾಖ್ಯಾನಗಳ ಮೂಲಕ ಕಟ್ಟಿಕೊಡಲು ಪ್ರಯತ್ನಿಸುತ್ತದೆ. ಅತಿ ಬರವಣಿಗೆಯಂತೆ ಕಾಣಬಹುದಾದ ಶೈಲಿಯೇ ಈ ಕಥೆಯ ಯಶಸ್ಸಿಗೆ ಕಾರಣವಾಗಿದೆ. ಕಥೆಗಾರರ ಅನುಭವವೇನೋ ದಟ್ಟವಾಗಿದೆ. ಆದರೆ, ವಸ್ತುವನ್ನು ಇನ್ನಷ್ಟು ಪಕ್ವತೆಯಿಂದ ನಿಭಾಯಿಸಬಹುದಾದ ಅವಕಾಶಗಳನ್ನು ಲೇಖಕರು ವ್ಯಂಗ್ಯದ ಮೊನಚಿನಲ್ಲಿ ಕಳೆದುಕೊಂಡಿದ್ದಾರೆ. ಬದಲಾಗುತ್ತಿರುವ ಸಮಕಾಲೀನ ಸಮಾಜದ ಬಾಹ್ಯ ವಿವರಗಳನ್ನು ಗ್ರಹಿಸಲು ಪ್ರಯತ್ನಿಸಿರುವುದು ಈ ಕಥೆಯ ಗುಣಾತ್ಮಕ ಅಂಶ. ಆ ಕಾರಣದಿಂದಲೇ ಇದನ್ನು ಮೊದಲ ಬಹುಮಾನ ಪಡೆದ ಕಥೆಯಾಗಿ ಆಯ್ಕೆ ಮಾಡಲಾಗಿದೆ.

ಎರಡನೆಯ ಬಹುಮಾನಕ್ಕಾಗಿ ಆಯ್ಕೆಮಾಡಿದ “ಗಾಂಧಿ ಮರ” ಕೂಡ ಸಮಕಾಲೀನ ಸಮಾಜದ ನೈತಿಕ ದಿವಾಳಿಯನ್ನು ಇನ್ನೊಂದು ಬಗೆಯಲ್ಲಿ ನೋಡಲು ಪ್ರಯತ್ನಿಸುತ್ತದೆ. ವಿದ್ಯುದ್ದೀಪ, ಬಸ್ಸು, ರಸ್ತೆಗಳ ಮೂಲಕ ಆಗಮನವಾಗುವ ನಾಗರಿಕತೆ ಮತ್ತು ಸಾಮಾಜಿಕ ಪಲ್ಲಟಗಳು ಕನ್ನಡ ಕಥೆಗಳಿಗೆ ಹೊಸದೇನಲ್ಲ. ರಸ್ತೆಯ ಮೂಲಕ ಆರಂಭವಾಗುವ ರಾಜಕೀಯ ಅಲ್ಲಿನ ಮನುಷ್ಯರನ್ನು ರಾಕ್ಷಸರನ್ನಾಗಿಸುವುದು, ಊರು ನೈತಿಕತೆ ಕಳೆದುಕೊಳ್ಳವುದು ಕೂಡ ಹಳೆಯ ವಿಷಯವೇ. “ಡಾಂಬರು ಬಂದುದು” ಅಂಥ ಕಥೆಗಳ ಅತ್ಯಂತ ಪ್ರಾತಿನಿಧಿಕ ಕಥೆಯಾಗಿದೆ. ಆದರೆ, ಅಂಥ ಸಮಸ್ಯೆ ಇನ್ನೂ ಜೀವಂತವಾಗಿರುವುದು, ಮೇಲೆ ಹೇಳಿದ ಬಸ್ಸು, ವಿದ್ಯುತ್ ಮತ್ತು ರಸ್ತೆಗಳ ಮೂಲಕವೇ ಇಂದಿಗೂ ಎಷ್ಟೋ ಗ್ರಾಮಗಳಿಗೆ ನಾಗರಿಕತೆ ಪಾದಾರ್ಪಣೆ ಮಾಡುವುದು ವಾಸ್ತವವಾಗಿರುವುದರಿಂದ ಕಥೆಗೆ ಸಮಕಾಲೀನತೆ ಬಂದಿದೆ. ಕಥೆಯ ಗಮನಾರ್ಹ ಅಂಶವೆಂದರೆ ಕಥೆಗಾರರ ಪ್ರಾಮಾಣಿಕತೆ. ಸಿದ್ಧ ಮಾದರಿಯ ಕ್ಲೀಶೆಗಳಿಗೆ ಬಲಿಯಾಗದೆ, ಅತ್ಯಂತ ಸರಳವಾಗಿ ಕಥೆಯನ್ನು ನಿರೂಪಿಸಿರುವುದು, ಕಥೆಗೆ ಸಹಜವಾದ ಅಂತ್ಯವನ್ನು ಒದಗಿಸಿರುವುದು ಕಥೆಯ ಗೆಲುವಿಗೆ ಕಾರಣವಾಗಿದೆ.

ಅತ್ಯಂತ ಚಾಣಾಕ್ಷತನದ ಶ್ರೇಣೀಕೃತ ಜಾತಿ ರಾಜಕಾರಣದಲ್ಲಿ ಮಲೆಕುಡಿಯರ ಕರಿಗಾರು ದೈವವನ್ನು ಮೇಲ್ಜಾತಿಯ ಈಶ್ವರ ಎತ್ತಗಂಡಿ ಮಾಡುವುದು ಮತ್ತು ಕರಿಗಾರು ದೈವ ತನ್ನ ಅಸ್ತಿತ್ವಕ್ಕಾಗಿ ಸಾಂಕೇತಿಕ ಹೋರಾಟ ನಡೆಸುವುದು ಕಥೆಯ ವಸ್ತುವನ್ನಾಗಿ ಹೊಂದಿರುವ “ಸೂರೂರಿನ ದೈವ ಮಾಯವಾದ ಕಥೆ” ಹೇಳುತ್ತದೆ. ಕಥೆಯ ಒಳಗೊಂದು ಕಥೆ ಎನ್ನುವಂತೆ ನಿರೂಪಣೆ ಇದ್ದರೂ ಕಥೆ ಹೇಳುವ ಉತ್ಸಾಹಕ್ಕೆ ಹೆಚ್ಚು ಒತ್ತು ಕೊಟ್ಟಿರುವುದು ಸಹಜತೆಯನ್ನು ಪ್ರಾಪ್ತವಾಗಿಸಿದೆ. ಅಭಿವೃದ್ಧಿ ಮತ್ತು ಜನಪದ ನಂಬಿಕೆಗಳ ಸಂಘರ್ಷ ಕರಾವಳಿ ಭಾಗವನ್ನು ಇಂದಿಗೂ ಕಾಡುತ್ತಿರುವ ಸಮಸ್ಯೆಯಾಗಿದೆ. ನಂಬಿಕೆಗಳಿಂದಲೇ ಬದುಕು ಕಟ್ಟುವ ಮತ್ತು ಬದುಕು ನಡೆಸುವ ಜನಾಂಗಗಳು ಎಲ್ಲಕ್ಕೂ ದೈವವೇ ಕಾರ್ಯಕಾರಣ ಎನ್ನುತ್ತವೆ. ಹಾಗಾಗಿಯೇ ಕಥೆಯಲ್ಲಿ ಕಾಣುವ ದುರಂತಗಳಿಗೆ ಜನರ ಪ್ರತಿಕ್ರಿಯೆಗಳು ಆ ನಿಟ್ಟಿನಲ್ಲೇ ಇವೆ. ಅಂಥ ಅನುಭವವನ್ನು ಅಬ್ಬರವಿಲ್ಲದೆ ಹೇಳುವುದೇ ಕಥೆಯ ಯಶಸ್ಸಿಗೆ ಕಾರಣವಾಗಿದೆ. ಈ ಅಂಶವೇ ಮೂರನೆಯ ಬಹುಮಾನವನ್ನು ನೀಡುವಂತೆ ಮಾಡಿದೆ.

ಹಾಗೆ ನೋಡಿದರೆ, ಸ್ಪರ್ಧೆಗೆ ಬಂದಿರುವ ಕೆಲವು ಕಥೆಗಳು ಕಟ್ಟುವಿಕೆ ಮತ್ತು ವಸ್ತುವನ್ನು ನಿಭಾಯಿಸಿರುವ ರೀತಿಯಿಂದ ಯಶಸ್ವಿ ಕಥೆಗಳಾಗಿವೆ. ಜನಪ್ರಿಯ ಸಿದ್ಧ ಮಾದರಿಗಳನ್ನು ಅನುಸರಿಸಿ ಬರೆದಿರುವ ಈ ಕಥೆಗಳು ಓದುವಾಗ ಸಂತೋಷವನ್ನು ನೀಡಬಲ್ಲವು. ಸತ್ಯಾನ್ವೇಷಣೆ, ಹೀಗೊಂದು ಬಾನಾಮತಿ (ಈ ಎರಡೂ ಕತೆಗಳನ್ನು ಪ್ರೋತ್ಸಾಹಕ ಬಹುಮಾನಕ್ಕೆ ಆಯ್ಕೆ ಮಾಡಲಾಗಿದೆ), ಗುಜರಿ ಕಾರು, ಸಂತಾನಭಾಗ್ಯ, ಭುವನವು ಬಯಲಾಗುವುದಿಲ್ಲಿ, ಕಪ್ಪುಗತ್ತಲಲೂ ಬೆಳಕಿನ ಒಂದು ಚುಕ್ಕಿ, ಈ ಬಗೆಯ ಕಥೆಗಳಾಗಿವೆ.

ಹೊಸ ಮತ್ತು ಕೊಂಚ ಹಳೆಯ ತಲೆಮಾರಿನ ಕಥೆಗಾರರ ಕಥೆಗಳನ್ನು ಓದುವುದು ನಿಜಕ್ಕೂ ಖುಷಿಯ ಕೆಲಸವೇ. ಆಮೂಲಕ ತಿಳಿದಿರದ ಅನುಭವದ ಪರಿಚಯವಾಗುತ್ತದೆ. ಹೊಸ ಆಲೋಚನೆಗಳೇನಿವೆ ಎಂದೂ ಅರಿವಾಗುತ್ತದೆ. ಕಥೆ ಕಟ್ಟುವ ಕಾಯಕ ನಿರಂತರ. ಹಾಗೆಂದೇ, ಇಲ್ಲಿನ ಕತೆಗಾರರ ಲೇಖನಿಗೆ ವಿರಾಮವೆಂಬುದಿಲ್ಲ.

2 thoughts on “ಗಾಂಧಿ ಜಯಂತಿ ಕಥಾ ಸ್ಪರ್ಧೆ – 2012 : ತೀರ್ಪುಗಾರರ ಮಾತು

  1. Pingback: ಗಾಂಧಿ ಜಯಂತಿ ಕಥಾ ಸ್ಪರ್ಧೆ – 2012 : ಫಲಿತಾಂಶ ಪ್ರಕಟಣೆ « ವರ್ತಮಾನ – Vartamaana

  2. indrakumar HB

    ಕಥಾಸ್ಪರ್ಧೆ ವಿಜೇತರಿಗೆ ಶುಭಾಷಯಗಳು. ಕೇಶವ ಮಳಗಿಯವರ ತೀರ್ಪುಗಾರರ ಮಾತು ಉತ್ತಮವಾಗಿದೆ.

    ಇಂದ್ರಕುಮಾರ್ ಎಚ್.ಬಿ.

    Reply

Leave a Reply

Your email address will not be published. Required fields are marked *