“ವರ್ತಮಾನ”ದ ಓದುಗರ ಮತ್ತು ಆತ್ಮೀಯರ ಅವಗಾಹನೆಗೆ…

ಆತ್ಮೀಯರೇ,

ನಾನು ಅಮೆರಿಕದಿಂದ ವಾಪಸಾಗಿ ಸುಮಾರು ಎರಡು ವರ್ಷ ಆಗುತ್ತ ಬಂತು. ಈ ಮಧ್ಯೆ ರಾಜ್ಯದ ಹಲವು ಭಾಗಗಳನ್ನು ಹಲವು ಬಾರಿ ಸುತ್ತಿದ್ದೇನೆ. ಅನೇಕ ಪ್ರಗತಿಪರ ಲೇಖಕರ ಜೊತೆ ಒಡನಾಡಿದ್ದೇನೆ. ಮತ್ತು ಇಲ್ಲಿನ ರಾಜಕೀಯ ಮತ್ತು ಸಾಮಾಜಿಕ ಸಮಸ್ಯೆಗಳನ್ನು ಅರಿಯಲು ಪ್ರಯತ್ನಿಸಿದ್ದೇನೆ.

ಇನ್ನೇನು ಆರೇಳು ತಿಂಗಳಿನಲ್ಲಿ ರಾಜ್ಯದ ವಿಧಾನಸಭೆಗೆ ಚುನಾವಣೆ ಬರಲಿದೆ. ಇದು ಈ ವರ್ಷದ ಕೊನೆಗೇ ಆಗಬಹುದು ಎಂದು ಈ ವರ್ಷದ ಆರಂಭದಲ್ಲಿ ಬರೆದ ಲೇಖನದಲ್ಲಿ ಊಹಿಸಿದ್ದೆ. ಆದರೆ, ಯಾವ ಪಕ್ಷದ ಶಾಸಕರೂ, ಅದರಲ್ಲೂ ಆಡಳಿತಾರೂಢ ಬಿಜೆಪಿಯ ಶಾಸಕರು, ಇರುವ ಅಧಿಕಾರಾವಧಿಯನ್ನು ಕಳೆದುಕೊಳ್ಳಲು ಸಿದ್ದರಿಲ್ಲ. ಚುನಾವಣೆ ಬಹುಶ: ಏಪ್ರಿಲ್-ಮೇನಲ್ಲಿ ನಡೆಯುವ ಸಾಧ್ಯತೆಯೇ ಹೆಚ್ಚಿದೆ ಈಗ. ಆದರೆ ಅಲ್ಲಿಯವರೆಗೂ ಈ ಸರ್ಕಾರವೇ ಇರುತ್ತದೆಯೇ, ಇಲ್ಲವೇ ರಾಷ್ಟ್ರಪತಿ ಆಡಳಿತ ಬರುತ್ತದೆಯೇ ಎನ್ನುವುದನ್ನು ಹೇಳಲಾಗುತ್ತಿಲ್ಲ.

ಕಳೆದ ವಿಧಾನಸಭಾ ಚುನಾವಣೆ ಘೋಷಣೆ ಆದಾಗ ನಡೆದ ಕೀಳು ರಾಜಕೀಯ ಪ್ರಸಂಗಗಳು, ರಾಜಕಾರಣಿಗಳು, ಮತ್ತು ಆ ಹಿಂದಿನ ಸರ್ಕಾರಗಳ ಭ್ರಷ್ಟಾಚಾರ ನನ್ನ ಮನಸ್ಸನ್ನು ತೀರಾ ಪ್ರಕ್ಷುಬ್ಧಗೊಳಿಸಿದ್ದವು. ಎಲ್ಲಾ ತರಹದ ಜನ ರಾಜಕೀಯಕ್ಕೆ ನುಗ್ಗುತ್ತಿದ್ದರು. ಗಣಿಯಲ್ಲಿ ಅಕ್ರಮವಾಗಿ ಸಂಪಾದಿಸಿದ ದುಡ್ಡು ರಾಜಕೀಯವನ್ನು ನಿಯಂತ್ರಿಸುತ್ತಿತ್ತು. ರಿಯಲ್ ಎಸ್ಟೇಟ್ ಮಾಫಿಯಾದ ದೊಡ್ಡ ಕುಳಗಳು ಅಭ್ಯರ್ಥಿಗಳಾಗುತ್ತಿದ್ದರು. ಆ ಹಣವೂ ಮಾತನಾಡುತ್ತಿತ್ತು. ಕುಮಾರಸ್ವಾಮಿ ಮತ್ತು ಯಡ್ಡಯೂರಪ್ಪನವರ ಜಾತಿಕಾರಣ ಸಮುದಾಯಗಳನ್ನು ಒಡೆಯುತ್ತಿತ್ತು. ಸಮಾಜ ಪ್ರತಿಗಾಮಿಯಾಗಿ ಯೋಚಿಸುತ್ತಿತ್ತು. ರಾಜಕೀಯದಲ್ಲಿ ಏನು ಮಾಡಿದರೂ ನಡೆಯುತ್ತದೆ ಮತ್ತು ಎಲ್ಲರಿಗೂ ತಾವು ಮಾಡುವ ಅಕ್ರಮಗಳಿಗೆ ಮತ್ತು ಭ್ರಷ್ಟತೆಗೆ ಶಿಕ್ಷೆಯಿಲ್ಲ ಎನ್ನುವ ಸ್ಥಿತಿ ಇತ್ತು. ಇವೆಲ್ಲವುಗಳಿಂದ ಪ್ರಕ್ಷುಬ್ಧಗೊಂಡಿದ್ದ ನಾನು ಒಂದು ತಿಂಗಳು ರಜೆಯ ಮೇಲೆ ಬಂದು, ರಾಜ್ಯದ ಸಾರ್ವಜನಿಕ ಜೀವನದಲ್ಲಿ ಮೌಲ್ಯಗಳನ್ನು ಆಗ್ರಹಿಸಿ, ನನಗಿದ್ದ ಸೀಮಿತ ಸಂಪರ್ಕ, ಪ್ರಚಾರ, ಮತ್ತು ಸಮಾನಮನಸ್ಕರ ಬೆಂಬಲದೊಂದಿಗೆ ಮೂರು ದಿನ ಉಪವಾಸ ಸತ್ಯಾಗ್ರಹ ಮಾಡಿದ್ದೆ; “ಮೌಲ್ಯಾಗ್ರಹ”ದ ಹೆಸರಿನಲ್ಲಿ, ಮಹಾತ್ಮಾ ಗಾಂಧಿ ಪ್ರತಿಮೆಯ ಮುಂದೆ. ಅದಾದ ನಂತರ, ಜನರು ಯಾವುದೇ ಆಮಿಷಗಳಿಗೆ ಒಳಗಾಗದೆ ತಾವೆ ತಮ್ಮ ಪ್ರತಿನಿಧಿಗಳನ್ನು ಆರಿಸಿಕೊಳ್ಳಬೇಕು, ಮತ್ತು ಅಂತಹ ಚುನಾವಣೆಗೆ ಅವರೇ ಖರ್ಚುವೆಚ್ಚಗಳನ್ನು ಭರಿಸಬೇಕು, ಮತ್ತು ಅಭ್ಯರ್ಥಿಯೊಬ್ಬ ಚುನಾವಣಾ ಆಯೋಗ ವಿಧಿಸಿರುವ ಹಣದ ಮಿತಿಯೊಳಗೆ ಚುನಾವಣೆ ನಡೆಸಬೇಕು, ಅದಕ್ಕೊಂದು ಉದಾಹರಣೆ ಆಗಬೇಕು ಎಂದು ಬೆಂಗಳೂರಿನ ಜಯನಗರ ಕ್ಷೇತ್ರದಿಂದ ಸ್ವತಃ ಸ್ಪರ್ಧಿಸಿದ್ದೆ. ಜನಸಾಮಾನ್ಯರಿಂದ, ಸ್ನೇಹಿತರಿಂದ, ಸಮಾನಮನಸ್ಕರಿಂದ ಸುಮಾರು ನಾಲ್ಕು+ ಲಕ್ಷ ದೇಣಿಗೆ ಬಂದಿತ್ತು. ಅದೆಲ್ಲವನ್ನೂ ಚುನಾವಣೆಯ ಪ್ರಚಾರಕ್ಕೆ ವೆಚ್ಚ ಮಾಡಿ ಹದಿನೈದು ದಿನ ನನಗಿದ್ದ ಸಂಪನ್ಮೂಲಗಳ ಮಿತಿಯಲ್ಲಿ ಪ್ರಚಾರ ಮಾಡಿದೆ. ಅಂದ ಹಾಗೆ, ನಾನು ಆ ಕ್ಷೇತ್ರದಲ್ಲಿ ಮತದಾರನೂ ಆಗಿರಲಿಲ್ಲ. ಪರಿಚಯದವರೂ ಬೆರಳೆಣಿಕೆ ಇದ್ದರು. ಕೊನೆಗೆ ಸುಮಾರು ಎರಡೂವರೆ ನೂರು ಮತಗಳು ಬಂದಿದ್ದವು. ಅಷ್ಟು ಜನ ನಾನು ಸೋಲುತ್ತೇನೆ ಎಂದು ಗೊತ್ತಿದ್ದರೂ, ನಾನು ನಿಂತಿದ್ದ ಆಶಯದ ಪರವಾಗಿ ಮತ ಹಾಕಿದರಲ್ಲ ಎನ್ನುವ ಖುಷಿ ಇತ್ತು. ಆ ಕ್ಷೇತ್ರದಲ್ಲಿ ಅತಿ ಹೆಚ್ಚು ಹಣ ಖರ್ಚು ಮಾಡಿದ ಅಭ್ಯರ್ಥಿ ನಾನೇ ಆಗಿದ್ದೆ. ಗೆದ್ದ ಅಭ್ಯರ್ಥಿಯೂ ಸೇರಿ ಇತರೆ ಯಾವ ಅಭ್ಯರ್ಥಿಯೂ ಅವರು ಚುನಾವಣಾ ಆಯೋಗಕ್ಕೆ ಕೊಟ್ಟ ಲೆಕ್ಕದ ಪ್ರಕಾರ ಮೂರು ಲಕ್ಷ ದಾಟಿದ ಹಾಗೆ ಕಾಣಲಿಲ್ಲ. ಇದು ನಮ್ಮ ವ್ಯವಸ್ಥೆ.

ಈಗ ಕಳೆದ ನಾಲ್ಕೂವರೆ ವರ್ಷಗಳ ಬಿಜೆಪಿ ಆಡಳಿತವನ್ನು ನಾವು ನೋಡಿದ್ದೇವೆ. ಯಡ್ದಯೂರಪ್ಪ ಮಾಜಿ ಮುಖ್ಯಮಂತ್ರಿಯಾದ ಕೆಲವೇ ದಿನಗಳಿಗೆ ಭ್ರಷ್ಟಾಚಾರದ ಆರೋಪದ ಮೇಲೆ ವಿಚಾರಾಣಾಧೀನ ಖೈದಿಯಾದರು. ಅದೇ ಸಮಯದಲ್ಲಿ ಜೈಲು ಕಂಡ ಜನಾರ್ಧನ ರೆಡ್ಡಿ ಇನ್ನೂ ಹೊರಗೆ ಬಂದಿಲ್ಲ. ಇತ್ತೀಚಿನ ಜಾಮೀನಿಗಾಗಿ ಲಂಚದಂತಹ ಅತಿಕೆಟ್ಟ ಅನೈತಿಕ ಪ್ರಕರಣಲ್ಲಿ ಅವರ ಸೋದರ ಮತ್ತು ಇನ್ನೊಬ್ಬ ಯುವ ಶಾಸಕನೂ ಜೈಲಿನಲ್ಲಿದ್ದಾರೆ. ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಮತ್ತವರ ಮಗ ಜೈಲು ಕಂಡು ಬಂದಿದ್ದಾರೆ. ಶಾಸಕ ಕೃಷ್ಣಯ್ಯ ಶೆಟ್ಟಿ ತಮ್ಮ ನಾಯಕ ಯಡ್ಡಯೂರಪ್ಪನ ಜೊತೆಗೇ ಜೈಲಿಗೆ ಹೋಗಿ ಬಂದರು. ಶಾಸಕರ ಭವನದಲ್ಲಿ ಲಂಚ ತೆಗೆದುಕೊಳ್ಳುತ್ತಿರುವಾಗಲೇ ಸಿಕ್ಕಿಹಾಕಿಕೊಂಡ ಶಾಸಕ ಸಂಪಂಗಿ ಸಹ ಒಂದೆರಡು ಬಾರಿ ಜೈಲಿಗೆ ಹೋಗಿದ್ದರು. ಹಾಲಪ್ಪ ಎಂಬ ಮಾಜಿ ಮಂತ್ರಿ ಸಹ ಜೈಲು ಪಾಲಾಗಿದ್ದರು. ಇವರೆಲ್ಲರೂ ಬಿಜೆಪಿ ಪಕ್ಷದವರು.

ಇದೇ ಸಂದರ್ಭದಲ್ಲಿ ಕೇಂದ್ರದ ಕಾಂಗೆಸ್ ನೇತೃತ್ವದ ಆಡಳಿತವೂ ಅಪಾರ ಅಕ್ರಮ ಮತ್ತು ಭ್ರಷ್ಟಾಚಾರದಿಂದ ಕೂಡಿದೆ. ಕಲ್ಮಾಡಿ, ರಾಜಾ, ಕಣಿಮೊಳಿ ಇತ್ಯಾದಿಗಳು ಜೈಲಿಗೆ ಹೋಗಿ ಬಂದರು. ಒಂದಷ್ಟು ಜನ ಮಂತ್ರಿ ಸ್ಥಾನ ಕಳೆದುಕೊಂಡರು. ಇವರೇನು ಕಮ್ಮಿ ಎಂಬಂತೆ ಕರ್ನಾಟಕದ ಒಂದೆರಡು ಕಾಂಗ್ರೆಸ್ ಸಂಸದ ಮತ್ತು ಶಾಸಕರ ವಿರುದ್ಧ ನ್ಯಾಯಾಲಯಗಳಲ್ಲಿ ದೂರುಗಳಿವೆ.

ಇನ್ನು ಜಾತ್ಯತೀತ ಜನತಾ ದಳದ ಕುಮಾರಸ್ವಾಮಿಯವರ ವಿರುದ್ದವೂ ಲೋಕಾಯುಕ್ತ ವಿಚಾರಣೆಗಳು ನಡೆಯುತ್ತಿದ್ದು ಹಲವು ಮೊಕದ್ದಮೆಗಳಲ್ಲಿ ಅವರು ತಮ್ಮ 20/20 ಪಾಲುದಾರ ಯಡ್ಡಯೂರಪ್ಪನವರಂತೆ ಜಾಮೀನುಗಳನ್ನು ತೆಗೆದುಕೊಂಡಿದ್ದಾರೆ.

ಈಗಲೂ ರಾಜ್ಯದ ಹಲವಾರು ಬಿಜೆಪಿ ಸಚಿವರ ವಿರುದ್ದ ಲೋಕಾಯುಕ್ತ ನ್ಯಾಯಾಲಯದಲ್ಲಿ ಮೊಕದ್ದಮೆಗಳಿವೆ. ನಾನು ದೂರುದಾರನಾಗಿ ದಾಖಲಿಸಿರುವ ಮೊಕದ್ದಮೆಯಲ್ಲಿ ಯಡ್ದಯೂರಪ್ಪ ಮತ್ತು ಸಚಿವ ಸೋಮಣ್ಣ ಜಾಮೀನು ಪಡೆದುಕೊಂಡಿದ್ದಾರೆ. ಧಾರವಾಡದ ಪರಿವರ್ತನಾ ಸಮಾಜದ ಹಿರೇಮಠರಂತೂ ರಾಜ್ಯದ ಹಲವು ಭ್ರಷ್ಟ ಮತ್ತು ಕ್ಷುದ್ರ ರಾಜಕಾರಣಿಗಳಿಗೆ ನಡುಕ ಹುಟ್ಟಿಸಿದ್ದಾರೆ.

ಇದು ನಾಲ್ಕೂವರೆ ವರ್ಷಗಳ ಹಿಂದಿಗೂ ಮತ್ತು ಈಗಿಗೂ ಇರುವ ವ್ಯತ್ಯಾಸ. ಭ್ರಷ್ಟಾಚಾರ ಮಾಡಿದರೆ ಶಿಕ್ಷೆ ಆಗುತ್ತದೆಯೋ ಇಲ್ಲವೋ, ಆದರೆ ಯಾರಾದರೂ ಕೋರ್ಟ್‌ಗೆ ಎಳೆಯುವ ಸಾಧ್ಯತೆಯಂತೂ ಇದೆ. ಮತ್ತು ಕಳೆದ ಬಾರಿಗಿಂತ ಈ ಬಾರಿ ಭ್ರಷ್ಟಾಚಾರದ ವಿಷಯಕ್ಕೆ ಜನಸಾಮಾನ್ಯರಲ್ಲಿ ಒಂದು ಭಾಗ ರೋಸಿ ಹೋಗಿದ್ದಾರೆ.

ಈ ಸಂದರ್ಭದಲ್ಲಿ ವೈಯಕ್ತಿಕವಾಗಿ ನಾನೊಂದು ನಿರ್ಧಾರ ತೆಗೆದುಕೊಳ್ಳಬೇಕಿತ್ತು. ಹೇಗೆ ಈ ಸಮಾಜದಲ್ಲಿ ನನ್ನನ್ನು ನಾನು ತೊಡಗಿಸಿಕೊಳ್ಳುವುದು? ಕೇವಲ ಬರೆದುಕೊಂಡು, ಅಲ್ಲಿ ಇಲ್ಲಿ ಮಾತನಾಡಿಕೊಂಡು ಇದ್ದುಬಿಡುವುದೇ, ಅಥವ ಈ ರಾಜಕಾರಣ ಮತ್ತು ಮೌಲ್ಯಗಳ ವಿಚಾರಕ್ಕೆ ಏನಾದರೂ ಮಾಡಲು ಸಾಧ್ಯವೇ? ಒಂದು ಸಮಯದಲ್ಲಿ ಯೋಚಿಸಿದ ಮತ್ತು ಮಾತನಾಡಿದ ಕಾರಣವಾಗಿ ಕೃತಿ ರೂಪದಲ್ಲಿ “ವರ್ತಮಾನ.ಕಾಮ್” ಆರಂಭವಾಯಿತು. ಆದರೆ ನಾನು ಎಲ್ಲಕಿಂತ ಮುಖ್ಯವಾಗಿ ಪ್ರತಿಪಾದಿಸುವ ಮೌಲ್ಯಾಧಾರಿತ, ಅರ್ಹ ಮತ್ತು ಸಂವೇದನಾಶೀಲರು ಪ್ರತಿನಿಧಿಸಲು ಸಾಧ್ಯವಾಗುವ ರಾಜಕೀಯ ಮತ್ತು ಸಾಮಾಜಿಕ ವಾತಾವರಣವನ್ನು ನಿರ್ಮಿಸಿಕೊಳ್ಳುವುದು ಹೇಗೆ? ಈ ನಿಟ್ಟಿನಲ್ಲಿ ಯೋಚಿಸಿ, ಹಲವು ವಿಷಯಗಳ ಸಾಧಕಬಾಧಕಗಳನ್ನು ಚರ್ಚಿಸಿ, ಚಿಂತಿಸಿ, ಈಗೊಂದು ನಿರ್ಧಾರಕ್ಕೆ ಬಂದಿದ್ದೇನೆ. ಮತ್ತು ರಾಜಕೀಯ ಪಕ್ಷವೊಂದರ ಸದಸ್ಯನಾಗಿ ನೊಂದಾಯಿಸಿಕೊಂಡಿದ್ದೇನೆ. ಅದು ಲೋಕಸತ್ತಾ ಪಕ್ಷ. ಆಂಧ್ರದಲ್ಲಿ ಜಯಪ್ರಕಾಶ ನಾರಾಯಣ್ ಎನ್ನುವ ಮಾಜಿ ಐಎ‍ಎಸ್ ಅಧಿಕಾರಿಯಿಂದ (ಇವರು ಈಗ ಹೈದರಾಬಾದಿನ ಕ್ಷೇತ್ರವೊಂದರ ಶಾಸಕ) ಆರಂಭಿಸಲ್ಪಟ್ಟ ಈ ಪಕ್ಷ ಕರ್ನಾಟಕದಲ್ಲಿ ಸುಮಾರು ಮೂರು ವರ್ಷದಿಂದ ಅಸ್ತಿತ್ವದಲ್ಲಿದೆ. ಕಳೆದ ಬಿಬಿಎಂಪಿ ಚುನಾವಣೆಯಲ್ಲಿ ನಾಲ್ಕೈದು ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು, ಮತ್ತು ನಾಲ್ಕು ತಿಂಗಳ ಹಿಂದೆ ಬೆಂಗಳೂರು ಪದವೀಧರರ ಕ್ಷೇತ್ರಕ್ಕೆ ನಡೆದ ವಿಧಾನಪರಿಷತ್ ಚುನಾವಣೆಯಲ್ಲಿ ಈ ಪಕ್ಷದಿಂದ ಸ್ಪರ್ಧಿಸಿದ್ದ ಅಶ್ವಿನ್ ಮಹೇಶ್ ಒಳ್ಳೆಯ ಪೈಪೋಟಿ ನೀಡಿ ಶೇ.16 ರಷ್ಟು ಮತಗಳನ್ನು ಪಡೆದಿದ್ದರು.

ತೀರಾ ಇತ್ತೀಚೆಗಷ್ಟೇ ಆ ಪಕ್ಷಕ್ಕೆ ನೊಂದಾಯಿತನಾಗಿರುವ ನಾನು ಈಗ ಆ ಪಕ್ಷದ ರಾಜ್ಯ ಘಟಕದ ಕಾರ್ಯಕಾರಿ ಸಮಿತಿಯ ಸದಸ್ಯನಾಗಿದ್ದೇನೆ. ಇಂದು ತಾನೆ ಲೋಕಸತ್ತಾ ಪಕ್ಷದ ಪತ್ರಿಕಾಗೋಷ್ಟಿ ಇತ್ತು. ಇದು ನಾನು ಬಹಿರಂಗವಾಗಿ ಆ ಪಕ್ಷದ ಸಭೆಯಲ್ಲಿ ಪಾಲ್ಗೊಂಡ ಮೊದಲ ದಿನ. ಹಾಗಾಗಿ ಇದನ್ನು ನಮ್ಮ ಓದುಗರ ಮತ್ತು ಆತ್ಮೀಯರ ಗಮನಕ್ಕೆ ವಿಳಂಬ ಮಾಡದೆ ತರಬೇಕು ಎಂದು ಬರೆಯಲು ಕುಳಿತಿದ್ದೇನೆ.

ಮತ್ತು, ನನ್ನ ರಾಜಕೀಯ ಚಟುವಟಿಕೆಗಳಿಗೆ ಲೋಕಸತ್ತಾ ಪಕ್ಷವನ್ನೇ ಯಾಕೆ ಆಯ್ಕೆ ಮಾಡಿಕೊಂಡೆ? ಇದಕ್ಕೆ ಉತ್ತರವನ್ನು ಆದಷ್ಟು ಚಿಕ್ಕದಾಗಿ ಹೇಳಲು ಪ್ರಯತ್ನಿಸುತ್ತೇನೆ. ಸದ್ಯಕ್ಕೆ ಈ ಪಕ್ಷ ನಾನು ಪ್ರತಿಪಾದಿಸುವ ಆಂತರಿಕ ಪ್ರಜಾಪ್ರಭುತ್ವ, ಮೌಲ್ಯಾಧಾರಿತ ರಾಜಕಾರಣ, ಚುನಾವಣಾ ಸ್ಪರ್ಧೆಯಲ್ಲಿ ಕಾನೂನಿನ ಮಿತಿಯಲ್ಲಿಯೇ ನಡೆದುಕೊಳ್ಳುವುದು, ವಂಶಪಾರಂಪರ್ಯ-ಸ್ವಜನಪಕ್ಷಪಾತ-ಭ್ರಷ್ಟರಿಂದ ದೂರ ಇರುವುದು, ಇತ್ಯಾದಿಗಳನ್ನು ಹೇಳುತ್ತದೆ. ಮತ್ತು ಅದನ್ನು ನನಗೆ ತಿಳಿದ ಮಟ್ಟಿಗೆ ಪಾಲಿಸುತ್ತಿದೆ. ಸದ್ಯಕ್ಕೆ ನಮಗೆ ಈ ವಿಚಾರದಲ್ಲಿ ಆಯ್ಕೆಗಳಿಲ್ಲ. ಮತ್ತು ನಾನು ಪ್ರತಿಪಾದಿಸುವ ಮೌಲ್ಯಗಳನ್ನೇ ಇನ್ನೊಂದು ಗುಂಪು ಹೇಳುತ್ತಿರುವಾಗ ಹೊಸದಾಗಿ ನಾವೇ ಇನ್ನೊಂದು ತಂಡ ಕಟ್ಟುವುದಕ್ಕಿಂತ ಜೊತೆಯಾಗುವುದು ಉತ್ತಮ ಎಂದು ಭಾವಿಸಿ ಅದನ್ನು ಸೇರಿದ್ದೇನೆ.

ಈ ಹಿನ್ನೆಲೆಯಲ್ಲಿ ವರ್ತಮಾನ.ಕಾಮ್‌ನ ವಿಚಾರಕ್ಕೆ ಬರುತ್ತೇನೆ. ನಾನು “ವರ್ತಮಾನ”ಕ್ಕಾಗಿ ಬಿಡುವಿನ ವೇಳೆಯಲ್ಲಿ ಮಾಡುತ್ತಿದ್ದ ಕೆಲಸ ಹಾಗೆಯೇ ಮುಂದುವರೆಯುತ್ತದೆ. ವಾರಕ್ಕೊ ಎರಡು ವಾರಕ್ಕೊ ಒಮ್ಮೆ ಇಲ್ಲಿ ಬರೆಯುತ್ತಿದ್ದ ನಾನು ಬಹುಶಃ ಅದನ್ನೇ ಮುಂದುವರೆಸುತ್ತೇನೆ. ಆದರೆ ಈಗ ರಾಜಕೀಯ ಪಕ್ಷವೊಂದರ ಸದಸ್ಯನಾಗಿರುವುದರಿಂದ ಸಾಧ್ಯವಾದಷ್ಟು ರಾಜಕೀಯೇತರ ವಿಷಯಗಳ ಬಗ್ಗೆ ಮಾತ್ರ ಬರೆಯಲು ಪ್ರಯತ್ನಿಸುತ್ತೇನೆ. ನಮ್ಮ ವೆಬ್‍‌ಸೈಟ್  ಹೀಗೆಯೇ ಸ್ವತಂತ್ರವಾಗಿ, ನನ್ನ ರಾಜಕೀಯ ಚಟುವಟಿಕೆಗಳ ನೆರಳಿಲ್ಲದೆ ಮುಂದುವರೆಯುತ್ತದೆ. ವರ್ತಮಾನ.ಕಾಮ್‌ಗಾಗಿ ನಮ್ಮ ಬಳಗ ಹಾಕಿಕೊಂಡಿರುವ ಯೋಜನೆಗಳು ಹಾಗೆಯೇ ಮುಂದುವರೆಯುತ್ತವೆ.

ಮತ್ತು, ನಾನು ನನ್ನ ರಾಜಕೀಯ ಚಟುವಟಿಕೆಗಳನ್ನು ಈಗಿರುವ ನನ್ನ ಬರಹಗಾರ ಮಿತ್ರರ ಸ್ನೇಹವಲಯದಿಂದ ಬೇರೆಯೇ ಇಡಬೇಕೆಂದು ಬಯಸಿದ್ದೇನೆ.

ಈ ಎಲ್ಲದರ ಹಿನ್ನೆಲೆಯಲ್ಲಿ ವರ್ತಮಾನ.ಕಾಮ್ ತನ್ನ ಮೂಲ ಆಶಯಗಳಿಗೆ ಧಕ್ಕೆಯಾಗದಂತೆ ಮುಂದುವರೆಯುತ್ತದೆ ಎನ್ನುವ ನಂಬಿಕೆ ನನಗಿದೆ. ಅದನ್ನು ಸಾಧ್ಯಮಾಡುವುದರಲ್ಲಿ ನನ್ನಷ್ಟೇ ಪಾಲು ನಮ್ಮ ಬಳಗದ ಲೇಖಕರದೂ ಇದೆ. ಅವರು ಈ ಮುಂಚೆ ತೋರುತ್ತಿದ್ದ ವಿಶ್ವಾಸದಿಂದಲೇ ಮುಂದುವರೆಯುತ್ತಾರೆ ಎಂದು ಭಾವಿಸುತ್ತೇನೆ ಮತ್ತು ವಿನಂತಿಸುತ್ತೇನೆ.

ಸಮಸ್ಕಾರ,
ರವಿ ಕೃಷ್ಣಾರೆಡ್ಡಿ

5 thoughts on ““ವರ್ತಮಾನ”ದ ಓದುಗರ ಮತ್ತು ಆತ್ಮೀಯರ ಅವಗಾಹನೆಗೆ…

  1. ರಾಕೇಶ್ ಶೆಟ್ಟಿ

    ಇದ್ದುದ್ದರಲ್ಲಿ ಹೊಸತನದ ತುಡಿತವಿರೋ ಪಕ್ಷ ಇದೆ.ಆದರೆ ಈ ಪಕ್ಷದ ಮುಖಂಡರಿಗೆ ಇನ್ನು ಈ ನೆಲ-ಭಾಷೆಯ ಮಿಡಿತ ಅರ್ಥವಾದಂತಿಲ್ಲ ಅನ್ನುವುದು ಇವರೊಂದಿಗೆ ಭ್ರಷ್ಟಚಾರ ವಿರೋಧಿ ಹೋರಾಟದಲ್ಲಿ ಪಾಲ್ಗೊಂಡಾಗ ನನಗೆ ಅನ್ನಿಸಿತ್ತು.ಬಿಬಿಎಂಪಿ ಚುನಾವಣೆಗೆ ಸ್ಪರ್ಧಿಸಿದಾಗ ಮತಯಂತ್ರದಲ್ಲಿ ಕನ್ನಡದ ಬದಲು ಇಂಗ್ಲೀಶ್ ಇರಬೇಕು ಇದು ಕಾಸ್ಮೋಪಾಲಿಟನ್ ಸಿಟಿ ಅಂತೇಳಿ ಪ್ರತಿಭಟಿಸಿದ್ದವರೂ ಇವರೆ…!

    ಇರಲಿ.ನಿಮ್ಮ ಪ್ರಯತ್ನ ಯಶಸ್ಸಿನೆಡೆಗೆ ಸಾಗಲಿ

    Reply
  2. jagadishkoppa

    ಪ್ರಿಯ ರವಿಕೃಷ್ಣ ರೆಡ್ಡಿಯವರಿಗೆ ನಿಮ್ಮ ಭವಿಷ್ಯದ ಬದುಕು ಶುಭವಾಗಲಿ. ಇದು ನಿರಾಶೆಯ ಮತ್ತು ಹತಾಶೆಯ ಮಾತುಗಳು ಎಂದು ನೀವು ತಳ್ಳಿ ಹಾಕಿದರೂ ನನಗೆ ಬೇಸರವಿಲ್ಲ. ನನಗೀಗ 56 ವರ್ಷ ತುಂಬಿ 57ಕ್ಕೆ ಕಾಲಿಡುತಿದ್ದೇನೆ. ಎಂದೂ ಈ ದೇಶದ ಬಗ್ಗೆಯಾಗಲಿ ಅಥವಾ ಇಲ್ಲಿನ ರಾಜಕೀಯ ಮತ್ತು ಸಾಮಾಜಿಕ ಬದುಕಿನ ಬಗ್ಗೆ ನನ್ನಲ್ಲಿ ಯಾವ ಆಸೆ ಮತ್ತು ಕನಸುಗಳು ಉಳಿದಿಲ್ಲ. ದೇಶ ಕಂಡ ಅತಿ ಭ್ರಷ್ಟ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಅವನ ಮಾನಸ ಪುತ್ರ ಚುಂಬನಾಚಾರ್ಯ( ರೇಣುಕಾಚಾರ್ಯ) ಇಂತಹವರ ಕೈಲಿ ಆಳಿಸಿಕೊಂಡ ನನ್ನಂತಹವರು ಇನ್ನೂ ಈ ನೆಲದ ಮೇಲೆ ಬದುಕಿರುವುದು ಅಸಹ್ಯ ಮತ್ತು ದುರಂತ ಎನಿಸಿದೆ.
    ಅದು 1980 ರ ಡಿಸಂಬರ್ ತಿಂಗಳು, ನಾವು ಒಂದಿಷ್ಟು ಬಂಡಾಯದ ಗೆಳೆಯರು ನನ್ನ ಮಿತ್ರ ಮಂಗಳೂರು ವಿಜಯ ನೇತೃತ್ವದಲ್ಲಿ” ಕಪ್ಪು ಜನರ ಕೆಂಪು ಕಾವ್ಯ” ಎಂಬ ಬಂಡಾಯ ಕಾವ್ಯ ಕೃತಿಯೊಂದನ್ನು ತಂದ ಸಮಯ. ಆ ಕೃತಿಗೆ ಮುನ್ನುಡಿ ಬರೆಯಲು ಲಂಕೇಶ್ ರವರನ್ನು ವಿನಂತಿಸಿಕೊಂಡಿದ್ದೆವು. ಅವರು ಇನ್ಲ್ಯಾಂಡ್ ಅಂಚೆ ಕಾಗದದಲ್ಲಿ ಮುನ್ನುಡಿಯನ್ನು ಹೀಗೆ ಬರೆದಿದ್ದರು. ” ಪ್ರಿಯ ಮಿತ್ರರೇ ನಿಮ್ಮ ಕಾವ್ಯ ನನಗೆ ತಲುಪಿದೆ, ಆದರೆ, ಈಗ ಈ ಜನರ ಎದೆಗೆ ಕಾವ್ಯವಿರಲಿ, ಕತ್ತಿ ಕೂಡ ತಲುಪಲಾರದ ಸ್ಥಿತಿ”

    ಅವರ ಈ ಕಠೋರ ಮಾತುಗಳು 32 ವರ್ಷಗಳ ನಂತರವೂ ಕೂಡ ಪ್ರಸ್ತುತ ಎಂದೂ ನಾನು ನಂಬಿಕೊಂಡಿದ್ದೇನೆ. ವರ್ತಮಾನದ ಜಗತ್ತಿನ ಬಗ್ಗೆ, ಅಥವಾ ಭಾರತದ ಬಗ್ಗೆ ನಿಮಗೆ ಇರುವ ಭರವಸೆ ಮತ್ತು ಕನಸುಗಳು ನನಗಿಲ್ಲ.
    ಈ ನಿರಾಸೆಯ ಮಾತುಗಳಿಗೆ ಕ್ಷಮೆಯಿರಲಿ.
    ಜಗದೀಶ್ ಕೊಪ್ಪ, ಧಾರವಾಡ

    ,

    Reply
  3. Basavaraja Halli

    ನಿಮ್ಮ ನಿಧರ್ಾರ ಚೆನ್ನಾಗಿಯೇ ಇದೆ. ರಾಜಕಾರಣ ಎಲ್ಲ ಬದಲಿಸಬಲ್ಲದೆ ? ರಾಜಕೀಯೇತರ ಯಾವ ಮಾರ್ಗವೂ ಸಮಾಜದಲ್ಲಿ ಬದಲಾವಣೆ ತರಬಲ್ಲುದೇ ಅಥವಾ ಇಲ್ಲವೇ ? ನೀವೇ ಹೇಳಿದಂತೆ ಕಳೆದ ಚುನಾವಣೆಯಲ್ಲಿ ನಿಮಗೆ ಬಿದ್ದ ವೋಟುಗಳು ಎರಡುವೊರೆ ನೂರು ಮತಗಳು. ಇದು ಇಡೀ ವ್ಯವಸ್ಥೆಯ ಗುಣವನ್ನು ಹೇಳುತ್ತದೆ. ಜನರು ಭ್ರಷ್ಟರಾಗಿದ್ದಾರೋ ಅಥವಾ ಜನರನ್ನಾಳುವವರು ಭ್ರಷ್ಟರಾಗಿದ್ದಾರೋ ? ಜನರೇ ಭ್ರಷ್ಟತೆಯನ್ನು ಬಯಸಿದ್ದಾರೋ ? ವಿಕ್ಷಿಪ್ತ ಪ್ರಶ್ನೆಗಳು ಹುಟ್ಟಿಸುತ್ತದೆ. ನೀವು ಸ್ಪಧರ್ಿಸಿದ ಕ್ಷೇತ್ರದಲ್ಲಿ ಓದಿಕೊಂಡವರು ಮತ್ತು ತಿಳಕೊಂಡವರು ಹೆಚ್ಚು ಇರಬಹುದು. ಇಂತವರೇ ಯಾವ್ಯಾವುದಕ್ಕೋ ಮರುಳಾಗಿ ವೋಟು ಹಾಕುತ್ತಿರುವಾಗ ನೈಜ, ಸ್ಪಷ್ಟ ಮತ್ತು ಬದಲಾವಣೆ ತರಬಲ್ಲ ಮೌಲ್ಯಗಳ ವಾಹಕರಿಗೆ ಸಹರಿಸುತ್ತಾರೆಯೇ ಎನ್ನುವುದು ಸಂಶಯಕ್ಕೆ ಎಡೆಮಾಡಿಕೊಡುವ ವಿಚಾರವೇ. ನೀವಷ್ಟೆ ಸ್ಪಧರ್ಿಸುವುದಷ್ಟಲ್ಲದೇ ನಿಮ್ಮೊಂದಿಗೆ ಹಲವರನ್ನು ರಾಜ್ಯದ ಆಯಾ ಭಾಗಗಳಲ್ಲಿ ನಿಲ್ಲಲು ಪ್ರೇರೇಪಿಸಿದರೆ ಕನಿಷ್ಠ ಗೆಲ್ಲಲ್ಲಿಲ್ಲವೆಂದು ಆಮೂಲಕ ಒಂದು ಶಕ್ತಿಯಾಗಿಯಂತೂ ಬೆಳೆಯಬಲ್ಲಿರೆನ್ನುವುದು ನನ್ನ ಅಂದಾಜು. ಇದನ್ನು ಬರೆದಿದ್ದು ನಿಮ್ಮ ಬಗೆಗಿನ ಕಾಳಜಿ ಮತ್ತು ಪ್ರೀತಿಯಿಂದ
    ಬಸವರಾಜ ಹಳ್ಳಿ, ಸಿಂಧನೂರು

    Reply
  4. deepu

    dear sir….
    i hope u took the right decision… political power is must…
    but mean time we need to select the suitable party which has the equality for all
    the categories as well as communities .. in this matter u need to think once your party again…

    Reply
  5. anand prasad

    ಸಭ್ಯರೂ, ಸುಸಂಸ್ಕೃತರೂ, ದೇಶದ ಹಾಗೂ ನಾಡಿನ ಕಾಳಜಿ ಉಳ್ಳವರು ರಾಜಕೀಯಕ್ಕೆ ಬರಬೇಕು. ಆದರೆ ಹೊಟ್ಟೆಪಾಡಿಗೆ ಬೇರೆ ಬೇರೆ ವೃತ್ತಿಗಳಲ್ಲಿ ಇರುವವರು ರಾಜಕೀಯಕ್ಕೆ ಪೂರ್ಣಾವಧಿ ಸಮಯ ನೀಡಲಾಗುವುದಿಲ್ಲ, ನೀಡಿದರೆ ಅವರ ವೃತ್ತಿ ಬದುಕು ಬಾಧಿತವಾಗುತ್ತದೆ. ಬಹುಶ: ಇದುವೇ ಜನ ರಾಜಕೀಯದಲ್ಲಿ ಗಂಭೀರವಾಗಿ ತೊಡಗಿಸಿಕೊಳ್ಳದೆ ಇರಲು ಕಾರಣ ಇರಬಹುದು. ರಾಜಕೀಯದಲ್ಲಿ ಯಶಸ್ವಿಯಾಗಬೇಕಾದರೆ ಜನರ ಸಂಪರ್ಕ ತಳಮಟ್ಟದಿಂದಲೇ ಇರಬೇಕಾಗುತ್ತದೆ. ಜನರ ಸಂಕಷ್ಟ, ಬೇಡಿಕೆಗಳಿಗೆ ಸ್ಪಂದಿಸುತ್ತಾ ಇರಬೇಕಾಗುತ್ತದೆ ಹಾಗೂ ಜನರಿಗೆ ಎಲ್ಲ ಸಮಯದಲ್ಲಿ ಲಭ್ಯ ಇರಬೇಕಾಗುತ್ತದೆ. ಬೇರೆ ವೃತ್ತಿಗಳಲ್ಲಿ ಇರುವವರಿಗೆ ಇದು ಸಾಧ್ಯವಾಗುವುದಿಲ್ಲ. ಹೀಗಾಗಿಯೇ ರಾಜಕೀಯದಲ್ಲಿ ಇರುವವರು ತಾವು ಭ್ರಷ್ಟಾಚಾರ ನಡೆಸುವುದು ಎಂಬ ಸಮರ್ಥನೆಯನ್ನು ನೀಡುತ್ತಾರೆ. ಈ ಸಮಸ್ಯೆಯನ್ನು ಪರಿಹರಿಸಬೇಕಾದರೆ ಜೀವನೋಪಾಯಕ್ಕೆ ಗಟ್ಟಿ ತಳಪಾಯ ಇರುವವರು ರಾಜಕೀಯಕ್ಕೆ ಬರಬೇಕು. ಉದಾಹರಣೆಗೆ ಸಣ್ಣ ಉದ್ಯಮ ಸಂಸ್ಥೆ ಅಥವಾ ವ್ಯಾಪಾರ ಸಂಸ್ಥೆ ಇರುವವರು ರಾಜಕೀಯಕ್ಕೆ ಬರಲು ಅವಕಾಶ ಇದೆ. ಆಗಾಗ ಮೇಲ್ವಿಚಾರಣೆ ಮಾಡುತ್ತಾ ಇದ್ದು ಉದ್ಯೋಗಿಗಳ ಮೂಲಕ ಸಣ್ಣ ಉದ್ಯಮ ಸಂಸ್ಥೆ ಅಥವಾ ವ್ಯಾಪಾರ ಸಂಸ್ಥೆಯನ್ನು ನಡೆಸುತ್ತಿರುವವರು ಪೂರ್ಣಾವಧಿ ಸಮಯವನ್ನು ರಾಜಕೀಯ ಹಾಗೂ ಜನಸಂಪರ್ಕಕ್ಕೆ ಮೀಸಲಿಡಲು ಸಾಧ್ಯವಿದೆ. ಅದೇ ರೀತಿ ಉದ್ಯೋಗದಲ್ಲಿ ಇದ್ದು ನಿವೃತ್ತಿ ಆಗಿರುವವರೂ ರಾಜಕೀಯ ಹಾಗೂ ಸೇವೆಯಲ್ಲಿ ತೊಡಗಿಸಿಕೊಳ್ಳಲು ಅವಕಾಶ ಇದೆ. ಉದ್ಯೋಗದಲ್ಲಿ ಇರುವಾಗ ಉಳಿಸಿದ ಉಳಿತಾಯ, ನಿವೃತ್ತಿ ವೇತನ ಇತ್ಯಾದಿ ಇರುವ ಕಾರಣ ಅವರಿಗೂ ಜೀವನೋಪಾಯಕ್ಕೆ ತೊಂದರೆ ಬರಲಾರದು, ಹೀಗಾಗಿ ಅವರು ಜನಸೇವೆಗೆ ಹಾಗೂ ರಾಜಕೀಯಕ್ಕೆ ಬರಲು ಸಾಧ್ಯ. ದೊಡ್ಡ ಉದ್ಯಮಿಗಳು ರಾಜಕೀಯಕ್ಕೆ ಬರಬಾರದು, ಬಂದರೆ ಅವರು ತಮ್ಮ ಅಧಿಕಾರದ ಸ್ಥಾನವನ್ನು ತಮ್ಮ ಉದ್ಯಮವನ್ನು ಬೆಳೆಸಲು ದುರುಪಯೋಗಪಡಿಸುವ ಸಾಧ್ಯತೆ ಹೆಚ್ಚಿರುತ್ತದೆ. ಅಪಾರ್ಟ್ಮೆಂಟ್ ಕಟ್ಟಡ, ವಾಣಿಜ್ಯ ಉದ್ಧೇಶದ ಸಂಕೀರ್ಣ ಕಟ್ಟಡಗಳು, ಬಾಡಿಗೆ ಮನೆಗಳನ್ನು ಹೊಂದಿರುವವರಿಗೂ ನಿಯಮಿತ ಆದಾಯ ಇರುವ ಕಾರಣ ಅವರೂ ಕೂಡ ತಲೆಬಿಸಿ ಇಲ್ಲದೆ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಂಡು ರಾಜಕೀಯಕ್ಕೆ ಇಳಿಯಲು ಸಾಧ್ಯವಿದೆ. ಹೀಗೆ ಜೀವನೋಪಾಯಕ್ಕೆ ಗಟ್ಟಿ ಆಧಾರ ಇರುವವರು ರಾಜಕೀಯಕ್ಕೆ ಬಂದರೆ ತಮ್ಮ ಜೀವನೋಪಾಯ ಹಾಗೂ ಭವಿಷ್ಯದ ಜೀವನಕ್ಕೆ (ಅಂದರೆ ರಾಜಕೀಯದಲ್ಲಿ ಸೋತರೆ ಸೋತ ಅವಧಿಯಲ್ಲಿ ಹಾಗೂ ರಾಜಕೀಯ ನಿವೃತ್ತಿಯ ನಂತರದ ಜೀವನಕ್ಕಾಗಿ ಎಂದು) ಅಧಿಕಾರದಲ್ಲಿ ಇರುವಾಗ ಭ್ರಷ್ಟಾಚಾರ ಮಾಡಬೇಕಾದ ಅವಶ್ಯಕತೆ ಬರಲಿಕ್ಕಿಲ್ಲ.

    ಮರವೊಂದನ್ನು ನೆಟ್ಟು ಬೆಳೆಸಿ ಅದು ಫಲ ನೀಡಬೇಕಾದರೆ ಐದು, ಹತ್ತು, ಹದಿನೈದು ವರ್ಷಗಳೂ ಬೇಕಾಗಬಹುದು. ಹೀಗೆಯೇ ರಾಜಕೀಯದಲ್ಲಿಯೂ ಒಂದೇ ಪ್ರಯತ್ನದಲ್ಲಿ ಗೆಲ್ಲುವ ಸಾಧ್ಯತೆ ಇಲ್ಲ. ಮತ್ತೆ ಮತ್ತೆ ಪ್ರಯತ್ನ ಮಾಡುತ್ತಾ ತನ್ನ ಧ್ಯೇಯವನ್ನ ಜನರಿಗೆ ತಿಳಿಸುತ್ತ ಅವರ ಜೊತೆ ಒಡನಾಡುತ್ತ, ಅವರ ಕಷ್ಟ ಸುಖಗಳಲ್ಲಿ ಭಾಗಿಯಾಗುತ್ತಾ ಇದ್ದರೆ ಜನ ಅವರನ್ನು ಗೆಲ್ಲಿಸುವ ಸಂಭವ ಇದೆ. ಈ ರೀತಿ ಮಾಡಬೇಕಾದರೆ ಅವರಿಗೆ ಗಟ್ಟಿಯಾದ ಜೀವನೋಪಾಯದ ಆಧಾರ ಇರಬೇಕಾಗುತ್ತದೆ. ವೈಯಕ್ತಿಕವಾಗಿ ಪಕ್ಷೇತರನಾಗಿ ಸ್ಪರ್ಧಿಸುವುದರಿಂದ ಹೆಚ್ಚಿನ ಬದಲಾವಣೆ ತರಲು ಸಾಧ್ಯವಿಲ್ಲ. ಸಾಂಘಿಕವಾಗಿ ಒಂದು ರಾಜ್ಯ ಅಥವಾ ಒಂದು ಜಿಲ್ಲೆಯಲ್ಲಿ ಒಂದು ಪಕ್ಷವಾಗಿ ಸ್ಪರ್ಧಿಸುವುದರಿಂದ ಬದಲಾವಣೆಯನ್ನು ತರಲು ಸಾಧ್ಯವಿದೆ. ಜನರಲ್ಲಿ ತಾವು ಈಗ ಅಸ್ತಿತ್ವದಲ್ಲಿ ಇರುವ ಪಕ್ಷಗಳಿಗಿಂತ ಹೇಗೆ ಭಿನ್ನ ಎಂಬುದನ್ನು ಮನವರಿಕೆ ಮಾಡಿಕೊಡಬೇಕಾಗುತ್ತದೆ. ಇದು ಹಲವು ವರ್ಷಗಳನ್ನು ತೆಗೆದುಕೊಳ್ಳಬಹುದು. ಉಳಿದ ಪಕ್ಷಗಳಲ್ಲಿ ಇರುವ ದೌರ್ಬಲ್ಯಗಳನ್ನು ನಿವಾರಿಸಲು ತಮ್ಮ ಪಕ್ಷವು ಯೋಜಿಸಿರುವ ನಿವಾರಣೆಯ ಉಪಾಯಗಳು ಏನು ಎಂಬುದನ್ನು ಜನರಿಗೆ ವಿವರಿಸಿ ಅದು ಅವರಿಗೆ ಮನವರಿಕೆಯಾಗಲು ಬಹಳ ಸಮಯ ಬೇಕಾಗಬಹುದು. ಅದೇ ರೀತಿ ಹಣ, ಹೆಂಡ, ಇನ್ನಿತರ ಆಮಿಷಗಳಿಗೆ ಬಲಿಯಾಗಿ ವೋಟು ಹಾಕುವುದು ದೇಶದ್ರೋಹದ ಕೆಲಸ ಎಂಬುದನ್ನು ಜನರಿಗೆ ಮನವರಿಕೆ ಮಾಡಿದರೆ ಜನ ಒಳ್ಳೆಯ ಜನರಿಗೆ ಓಟು ಹಾಕಲು ಸಾಧ್ಯ. ಪ್ರಜಾಪ್ರಭುತ್ವದ ಮೂಲಭೂತ ಆಶಯ ಹಾಗೂ ಅದು ತರಬಹುದಾದ ಬದಲಾವಣೆಯ ಕೀಲಿಕೈ ಜನರ ಬಳಿಯೇ ಇದೆ ಎಂಬುದನ್ನು ಜನರಿಗೆ ಮನವರಿಕೆ ಮಾಡಿಕೊಡುವ ಕೆಲಸ ಸಮಾನಾಂತರವಾಗಿ ನಡೆಯುತ್ತಾ ಇರಬೇಕು. ಹೀಗಾದಾಗ ಪರ್ಯಾಯ ರಾಜಕಾರಣದ ಸಾಧ್ಯತೆಗಳು ಯಶಸ್ಸಿನತ್ತ ಸಾಗಲು ಸಾಧ್ಯ.

    Reply

Leave a Reply

Your email address will not be published. Required fields are marked *