Daily Archives: October 5, 2012

ದೇಶದ ಉನ್ನತ ಶಿಕ್ಷಣವೂ.. ರಾಷ್ಟ್ರಪತಿಗಳ ಕಳವಳವೂ..


-ಡಾ.ಎಸ್.ಬಿ. ಜೋಗುರ


ಉನ್ನತ ಶಿಕ್ಷಣದಲ್ಲಿ ಅನೇಕ ಬಗೆಯ ತೊಡಕುಗಳಿವೆ. ಅವುಗಳಲ್ಲಿ ಅತಿ ಹೆಚ್ಚು ವ್ಯಾಪಕವಾಗಿ ಚರ್ಚೆಯಾಗುವ ಸಂಗತಿ ಗುಣಮಟ್ಟಕ್ಕೆ ಸಂಬಂಧಿಸಿದ್ದಾಗಿದೆ. ಕಲಿಯುವ ಮತ್ತು ಕಲಿಸುವವರ ಆಕಾಂಕ್ಷೆ ಮತ್ತು ನಿರೀಕ್ಷೆಗಳನ್ನು ಕೈಗೂಡಿಸುವ ಸಮರ್ಥತೆಯನ್ನೇ ಉನ್ನತ ಶಿಕ್ಷಣದ ವಲಯದಲ್ಲಿ ಗುಣಮಟ್ಟ ಎಂದು ಕರೆಯಲಾಗುವುದು. ಇಂಥಾ ಗುಣಮಟ್ಟದ ಕೊರತೆಯ ಬಗ್ಗೆ ಆಗಾಗ ಶೈಕ್ಷಣಿಕ ಪರಿಸರದಲ್ಲಿಯ ತಜ್ಞರು, ಯೋಜಕರು ಧ್ವನಿ ಎತ್ತುವುದಿದೆ. ವಿಶ್ವದ ನಂ 1 ವಿಶ್ವವಿದ್ಯಾಲಯ ಎಂದು ಗುರುತಿಸಿಕೊಂಡಿರುವ ಹಾರ್ವರ್ಡ್ ವಿಶ್ವವಿದ್ಯಾಲಯದ ಪ್ರತಿಯೊಬ್ಬ ಅಧ್ಯಾಪಕ ಜಾಗತಿಕ ವಲಯದಲ್ಲಿ ಚರ್ಚೆಯಾಗಬಹುದಾದ ಸಂಶೋಧನೆ, ಗ್ರಂಥ ರಚನೆಯಲ್ಲಿ ತೊಡಗುವುದಿದೆ. ದೈಹಿಕವಾಗಿ ತೀರಾ ದುರ್ಬಲರಾಗಿದ್ದು, ಮಾಯೋ ಲ್ಯಾಟರಲ್ ಕ್ಲಿರೋಸಿಸ್ ಎನ್ನುವ ರೋಗದಿಂದ ಬಳಲುತ್ತಿದ್ದರೂ ಐನಸ್ಟೀನ್ ನಂತರದ ಸ್ಥಾನವನ್ನು ಗಿಟ್ಟಿಸಿಕೊಂಡ ಸ್ಟೆಫೆನ್ ಹಾಕಿಂಗ್ ರಂಥಾ ಪ್ರಾಧ್ಯಾಪಕರಿದ್ದದ್ದು ಈ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿಯೆ. ಹಾಗೆಯೆ ‘ಸಿವಿಲೈಜೇಶನ್’ ಎನ್ನುವ ಅದ್ಭುತ ಕೃತಿಯನ್ನು ರಚಿಸಿದ ನೀಲ್ ಪರ್ಗ್ಯುಸನ್‌ರಂಥಾ ಅಧ್ಯಾಪಕರಿದ್ದದ್ದು ಈ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿಯೆ.

ಭಾರತದ ವಿಶ್ವವಿದ್ಯಾಲಯಗಳಿಗೆ ಬಂದರೆ ಹಾಗೆ ಇಂಥಾ ಧೀಮಂತರು ಇದ್ದದ್ದು ಇದೇ ವಿಶ್ವವಿದ್ಯಾಲಯದಲ್ಲಿ ಎಂದು ಹೊರಗಿನ ರಾಷ್ಟ್ರಗಳು ಗುರುತಿಸಬಹುದಾದ ಪ್ರತಿಭೆಗಳ ಕೊರತೆ ಈಗ ಎದ್ದು ಕಾಣುತ್ತದೆ. ಹಾಗಾಗಿಯೆ ಇಡೀ ವಿಶ್ವದ 150 ವಿಶ್ವವಿದ್ಯಾನಿಲಯಗಳ ಸಾಲಲ್ಲಿ ನಮ್ಮ ದೇಶದ ಒಂದೇ ಒಂದು ವಿಶ್ವವಿದ್ಯಾನಿಲಯ ಇಲ್ಲದಿರುವುದು ಒಂದು ವಿಷಾದ. ತೀರಾ ಇತ್ತೀಚಿಗೆ ನಮ್ಮ ರಾಷ್ಟ್ರಪತಿಗಳಾದ ಪ್ರಣವ್ ಮುಖರ್ಜಿ ಅವರು ಪಶ್ಚಿಮಬಂಗಾಲದ  ಐ.ಐ.ಟಿ. ಘಟಿಕೋತ್ಸವದಲ್ಲಿ ಮಾತನಾಡುವಾಗ ನಮ್ಮ ದೇಶದ ಉನ್ನತ ಶಿಕ್ಷಣವನ್ನು ನೆನೆದು ಕಳವಳವನ್ನು ವ್ಯಕ್ತಪಡಿಸಿರುವುದಿದೆ. ವಿಶ್ವದ ಪ್ರಮುಖ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಮೊದಲ 10 ಸ್ಥಾನಗಳಲ್ಲಿ ಸಾಧ್ಯವಿಲ್ಲದಿದ್ದರೆ ಹೋಗಲಿ, ಕಡೆಯ ಪಕ್ಷ 50 ಇಲ್ಲವೇ 100 ರಲ್ಲಿ ಒಂದಾದರೂ ಸ್ಥಾನ ಬೇಡವೇ? ಎಂದು ಖೇದವನ್ನು ವ್ಯಕ್ತಪಡಿಸಿದರು.

ಉನ್ನತ ಶಿಕ್ಷಣ ಎನ್ನುವುದು ನಮ್ಮಲ್ಲಿ ಕೇವಲ ವಿದೇಶಿ ವಿಶ್ವವಿದ್ಯಾಲಯಗಳ ಕ್ಯಾಂಪಸ್‌ನ ಹೊರಗಣ ಅನುಕರಣೆಯಾಗುತ್ತಿದೆಯೆ ಹೊರತು ಒಳಗಣ ಅನುಕರಣೆಯಾಗುತ್ತಿಲ್ಲ. ಹಾಗಾಗಿಯೆ ನಾವು ಕೇವಲ ನ್ಯಾಕ್ ಭೇಟಿಯ ಸಂದರ್ಭದಲ್ಲಿ ಸಜ್ಜಾಗುವ ಪಡೆಯಾಗುತ್ತಿದ್ದೇವೆ ಹೊರತು ಜಾಗತಿಕ ಮಟ್ಟದಲ್ಲಿ ಸಲ್ಲುವಂಥಾ ವಿದ್ಯಾರ್ಥಿ ಸಮೂಹವನ್ನು, ಅಧ್ಯಾಪಕರನ್ನು ರೂಪಿಸುವಲ್ಲಿ ವಿಫಲರಾಗುತ್ತಿದ್ದೇವೆ. ಅಧ್ಯಾಪಕರಿಗೆ ವಿಶ್ವವಿದ್ಯಾನಿಲಯದ ಧನಸಹಾಯ ಆಯೋಗ ಸಾಕಷ್ಟು ಸಂಬಳವನ್ನು ನೀಡಿದೆಯಾದರೂ ಉನ್ನತ ಶಿಕ್ಷಣದ ಆಂತರಿಕ ಬೆಳವಣಿಗೆಗೆ ಪೂರಕವಾದ ಪರಿಸರವನ್ನು ರೂಪಿಸುವಲ್ಲಿ ಮಾತ್ರ ಅದು ಹಿಂದೆ ಬಿದ್ದಿದೆ. ಪರಿಣಾಮವಾಗಿ ಅತ್ಯಂತ ಸಮರ್ಥ ಅದ್ಯಾಪಕರನ್ನು ಹಾಗೂ ವಿದ್ಯಾರ್ಥಿ ಸಮುದಾಯವನ್ನು ರೂಪಿಸುವ ಶಕ್ತಿಯಾಗಿ ಉನ್ನತ ಶಿಕ್ಷಣ ಹೊರಹೊಮ್ಮುತ್ತಿಲ್ಲ. ಇನ್ನು ಇರುವ ಧೋರಣೆಗಳಲ್ಲಿಯ ತಾರ್ಕಿಕತೆಯನ್ನು ಕುರಿತು ಯೋಚಿಸಿದರೆ ಹಂಡಬಂಡ ಹಳವಂಡಗಳ ಬಗ್ಗೆ ತಿಳಿಯುತ್ತದೆ. ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ಹಂತದಲ್ಲಿ ಕಾರ್ಯನಿರ್ವಹಿಸುವ ಸಹಾಯಕ ಅಧ್ಯಾಪಕರು, ಸಹ ಅಧ್ಯಾಪಕರು ಮತ್ತು ಪ್ರಾಧ್ಯಾಪಕರು ಎನ್ನುವ ಹುದ್ದೆಗಳನ್ನೇ ನೋಡಿ. ಅವರ ಕಾರ್ಯತತ್ಪರತೆಯನ್ನು ಚುರುಕುಗೊಳಿಸುವ ನಿಟ್ಟಿನಲ್ಲಿ ಯು.ಜಿ.ಸಿ. ಅತಿ ಮುಖ್ಯವಾಗಿ ಪ್ರತಿಯೊಬ್ಬ ಅಧ್ಯಾಪಕ ಬೋಧನೆಯ ಜೊತೆಗೆ ತಾನು ತನ್ನ ವಿಷಯದಲ್ಲಿ ಪ್ರತಿ ತಿಂಗಳು ಓದಿದ ಗ್ರಂಥಗಳ ಪಟ್ಟಿ ಮತ್ತು ಸಾರಾಂಶವನ್ನು ಬರೆದು ನೇರವಾಗಿ ಯು.ಜಿ.ಸಿ.ಗೆ ಕಳುಹಿಸುವ ಪ್ರಕ್ರಿಯೆಯನ್ನು ನಿಗದಿಪಡಿಸಬೇಕಿತ್ತು.

ಹಾಗೆಯೆ ತನ್ನ ವಿಷಯದಲ್ಲಾದ ಹೊಸ ಸಂಶೋಧನೆ, ಬರವಣಿಗೆಯ ಬಗ್ಗೆಯೂ ನಿಯಮಿತವಾಗಿ ಯು.ಜಿ.ಸಿ.ಗೆ ಮಾಹಿತಿ ಸಲ್ಲಿಸುವಂತಿರಬೇಕು. ಒಬ್ಬ ಅಧ್ಯಾಪಕನ ಅಕಾಡೆಮಿಕ್ ಸಾಧನೆಗಳನ್ನು ಪರಿಗಣಿಸಿ ಬಡ್ತಿ ನೀಡಬೇಕೇ ಹೊರತು ಹೋಲ್‌ಸೇಲ್ ವ್ಯಾಪಾರದ ಹಾಗೆ ಆ ಕ್ರಿಯೆ ನಡೆಯಬಾರದು. ಅಧ್ಯಾಪಕನೊಬ್ಬ ನಮ್ಮಂಥಾ ರಾಷ್ಟ್ರಗಳಲ್ಲಿ ಕ್ಲರ್ಕ್ ಕಂ ಟೈಪಿಸ್ಟ್ ಕಂ ಅಟೆಂಡರ್ ಆಗಿಯೂ ಕಾರ್ಯನಿರ್ವಹಿಸಬೇಕಾದ ಪರಿಸ್ಥಿತಿಯ ನಡುವೆ ಅವನಲ್ಲಿಯ ಅಕಾಡೆಮಿಕ್ ಸತ್ವ ಮತ್ತು ಶಕ್ತಿಯ ಸದ್ವಿನಿಯೋಗ ಆಗುವದಾದರೂ ಹೇಗೆ? ಓದು-ಬರಹಗಳೇ ಅಪರೂಪವಾದಂತಿರುವ ಪರಿಸರದ ನಡುವೆ ಅದು ಹೇಗೆ ಜಾಗತಿಕ ಮಟ್ಟದಲ್ಲಿ ನಾವು ಸ್ಥಾನ ಗಿಟ್ಟಿಸಲು ಸಾಧ್ಯ? ಅಧ್ಯಾಪಕನೊಬ್ಬ ಶಿಸ್ತಿನ ವಿದ್ಯಾರ್ಥಿಯಾಗದ ಹೊರತು ಒಳ್ಳೆಯ ಅಧ್ಯಾಪಕನಾಗಲಾರ. ಆಳವಾದ ಅಧ್ಯಯನವಿಲ್ಲದಿದ್ದರೆ ಸರಿಯಾದ ಸಂಶೋಧನೆಯೂ ಸಾಧ್ಯವಿಲ್ಲ. ಸಮರ್ಪಕವಾದ ಬೋಧನೆಯೂ ಇಲ್ಲ. ಸೆಮೆಸ್ಟರ್ ಸಂದರ್ಭದಲ್ಲಂತೂ ಪ್ರತಿ ದಿನವೂ ಮೌಲಿಕ ಎನ್ನುವಂತಿರುವಾಗ ಕಾಲೇಜುಗಳು ಬರೀ ಕ್ಲೆರಿಕಲ್ ದರ್ಜೆ ಚಟುವಟಿಕೆಗಳ ಆಗರಗಳಾಗುತ್ತಿವೆ. ಸತತ ಅಧ್ಯಯನ, ಸಂಶೋಧನೆ, ಚರ್ಚೆಗಳಲ್ಲಿ ತೊಡಗುವ ವಿದೇಶಿ ಶಿಕ್ಷಣ ಸಂಸ್ಥೆಗಳ ಪರಿಸರವೆಲ್ಲಿ? ಅಧ್ಯಾಪಕನೊಬ್ಬ ವಾರಗಟ್ಟಲೆ ಪರೀಕ್ಷೆಯ ಓ.ಎಮ್.ಆರ್. ತುಂಬಿಸುವ, ಹಾಳು ಹರಟೆ, ನಿಷ್ಪ್ರಯೋಜಕ ಮಾತುಗಳು, ಉಳಿಕೆ ಗಳಿಕೆಯ ಚರ್ಚೆಗಳೇ ತುಂಬಿರುವ ನಮ್ಮ ಪರಿಸರವೆಲ್ಲಿ? ವಿಶ್ವ ವಿದ್ಯಾನಿಲಯದ ಧನಸಹಾಯ ಆಯೋಗ ಜಾಗತಿಕ ಮಾರುಕಟ್ಟೆಯಲ್ಲಿ ನಾವೂ ಸಲ್ಲಬೇಕು ಎನ್ನುವ ಹಿನ್ನೆಲೆಯಲ್ಲಿ ಅಪಾರ ಪ್ರಮಾಣದ ಹಣವನ್ನು ಈ ದೇಶದ ಪ್ರತಿಯೊಬ್ಬ ವಿದ್ಯಾರ್ಥಿ ಹಾಗೂ ಅಧ್ಯಾಪಕನ ಮೇಲೆ ತೊಡಗಿಸುತ್ತಿದೆ. ಆದರೆ ಯು.ಜಿ.ಸಿ.ಯ ನಿರೀಕ್ಷೆಯಂತೆ ಶಿಕ್ಷಣ ಸಾಕಾರಗೊಳ್ಳುತ್ತಿಲ್ಲ.

ಅನೇಕ ಬಗೆಯ ಕೊರತೆಗಳ ನಡುವೆಯು ಅಚ್ಚರಿ ಎನಿಸಬಹುದಾದ ರೀತಿಯ ಫಲಿತಾಂಶವನ್ನು ನೀಡಿದ ಶಿಕ್ಷಣ ಸಂಸ್ಥೆಗಳೂ ನಮ್ಮಲ್ಲಿವೆ. ಅದಷ್ಟೇ ಸಾಲದು. ನಮ್ಮ ಪಠ್ಯಕ್ರಮದಲ್ಲಿ ಅಮೂಲಾಗ್ರವಾದ ಬದಲಾವಣೆಗಳಾಗಬೇಕು. ನಮ್ಮ ಅಧ್ಯಾಪಕರಾದವರು ತಮ್ಮ ತಮ್ಮ ವಿಷಯಗಳಲ್ಲಿ ಪ್ರಭುತ್ವವನ್ನು ಸಾಧಿಸಿದವರಾಗಿ ಒಂದು ನಡೆದಾಡುವ ವಿಶ್ವಕೋಶದಂತಾಗಬೇಕು. ಅಧ್ಯಾಪಕರ ಅಧ್ಯಯನ, ಸಂಶೋಧನೆ, ಬೋಧನೆಯಂಥಾ ಕಾರ್ಯಗಳ ನಡುವೆ ಆಡಳಿತದ ಕಿರಿಕಿರಿಗಳು ನುಸುಳಬಾರದು. ವಿಶ್ವದ ಯಾವುದೇ ವಿಶ್ವವಿದ್ಯಾಲಯಗಳ ಅಧ್ಯಾಪಕರಿಗೆ ತಾವು ಕಡಿಮೆಯಿಲ್ಲ ಎನ್ನುವ ಆತ್ಮವಿಶ್ವಾಸ ಮೂಡುವ ಹಾಗೆ ನಮ್ಮ ವಿಶ್ವವಿದ್ಯಾಲಯಗಳ ಮತ್ತು ಕಾಲೇಜುಗಳ ಅಧ್ಯಾಪಕರು ರೂಪಗೊಳ್ಳುವ ಅವಶ್ಯಕತೆಯಿದೆ. ಯು.ಜಿ.ಸಿ ತನ್ನ 11 ನೇ ಯೋಜನೆಯಲ್ಲಿ ಉನ್ನತಶಿಕ್ಷಣದಲ್ಲಿ ಅನೇಕ ಮಹತ್ತರವಾದ ಬದಲಾವಣೆಗಳನ್ನು ತರುವ ಗುರಿ ಹೊಂದಿದೆ. ಆ ಗುರಿಗಳಲ್ಲಿ ಉನ್ನತ ಶಿಕ್ಷಣ ಪಡೆಯುವವರ ಪ್ರಮಾಣದಲ್ಲಿ ಹೆಚ್ಚಳವಾಗಿರುವದನ್ನು ಹೊರತುಪಡಿಸಿದರೆ ಬೇರಾವ ಮಹತ್ತರ ಬದಲಾವಣೆಗಳೂ ಅಲ್ಲಿ ಕಾಣುವುದಿಲ್ಲ.

ಅನೇಕರು ಯು.ಜಿ.ಸಿ.ಅಧ್ಯಾಪಕರಿಗೆ ಕೊಡುವ ಸಂಬಳವನ್ನು ನೆನೆದು ಸಿಡಿಮಿಡಿಗೊಳ್ಳುವುದಿದೆ. ಅದಕ್ಕೆ ಕಾರಣವೂ ಇದೆ. ಒಬ್ಬ ಅಧ್ಯಾಪಕನಿಗೆ ಅಷ್ಟು ಸಂಬಳ ನೀಡಿದ ಮೇಲೆ ಅವನ ಜ್ಞಾನ, ಸಾಮರ್ಥ್ಯ ಮತ್ತು ಪಾಠ ಮಾಡುವ ರೀತಿ ಆತ ಪಡೆಯುವ ಸಂಬಳಕ್ಕೆ ತಕ್ಕಂತಿರಬೇಕು ಎನ್ನುವ ಸಮಾಜದ ನಿರೀಕ್ಷೆ ಸಹಜವೇ. ಆ ನಿರೀಕ್ಷೆಗೆ ತಕ್ಕವರಾಗಿ ಅಧ್ಯಾಪಕರು ನಿಲ್ಲದಿದ್ದಾಗ ಸಹಜವಾಗಿ ಸಮಾಜ ಸಿಡಿಮಿಡಿಗೊಳ್ಳುತ್ತದೆ. ಅದೇ ವೇಳೆಗೆ ಅಧ್ಯಾಪಕನೊಬ್ಬನಿಗೆ ಆ ದಿಶೆಯಲ್ಲಿ ಪೂರಕವಾದ ಪರಿಸರವನ್ನು ರೂಪಿಸಿ ಕೊಡಬೇಕಾದುದು ಕೂಡಾ ಅಷ್ಟೇ ಮುಖ್ಯ. ಓದಲು, ಬರೆಯಲು, ಸಂಶೋಧನೆಯಲ್ಲಿ ತೊಡಗಲು ಅಲರ್ಜಿಯಾಗುವ ವಾತಾವರಣ ಇಲ್ಲವೇ ಕಿರಿಕಿರಿಗಳನ್ನು ತಂದಿಟ್ಟರೆ ಆತ ನೆಮ್ಮದಿಯಿಂದ ಪಾಠ ಮಾಡುವದಾದರೂ ಹೇಗೆ? ಉನ್ನತ ಶಿಕ್ಷಣದ ಮೂಲ ಆಶಯಕ್ಕೆ ಧಕ್ಕೆ ಬರಬಹುದಾದ ಎಲ್ಲ ಸಂಗತಿಗಳನ್ನು ಬದಿಗಿಟ್ಟು ಅತ್ಯಂತ ನಿಷ್ಠೆಯಿಂದ ಅಧ್ಯಯನ, ಬೋಧನೆ, ಸಂಶೋಧನೆ, ಬರವಣಿಗೆಗಳ ಮೂಲಕ ಒಂದು ಅತ್ಯಂತ ಜಾಗೃತವಾದ ಸಮಾಜವನ್ನು ಕಟ್ಟಿಕೊಡುವಲ್ಲಿ ಅಧ್ಯಾಪಕರು ಮುಂದಾಗಬೇಕು.