ಇಂಧನ ಸ್ವಾವಲಂಬನೆಗೆ ಹೊಂಗೆ ಮರ

– ಆನಂದ ಪ್ರಸಾದ್

ಹೊಂಗೆ ಮರ (Pongamia pinnata) ಭಾರತಾದ್ಯಂತ ಬೆಳೆಯಬಲ್ಲ ಒಂದು ಮರವಾಗಿದ್ದು ಇಂಧನ ಸ್ವಾವಲಂಬನೆ, ಗ್ರಾಮೀಣ ಅಭಿವೃದ್ಧಿ, ಅರಣ್ಯೀಕರಣ, ಸಾವಯವ ಕೃಷಿಗೆ ಪೂರಕವಾದ ಮರವಾಗಿ ಕಂಡುಬರುತ್ತದೆ. ಹೊಂಗೆ ಮರವು ನೆಟ್ಟ ನಾಲ್ಕೈದು ವರ್ಷಗಳಲ್ಲಿ ಇಳುವರಿಯನ್ನು ಕೊಡಲು ಆರಂಭಿಸುತ್ತದೆ.  ಹತ್ತು ವರ್ಷಗಳ ನಂತರ ಒಂದು ಮರವು 10ರಿಂದ 100 ಕೆಜಿ ಬೀಜವನ್ನು ಕೊಡಬಲ್ಲದು. ಈ ಮರದ ಬೇರುಗಳು 10 ಮೀಟರ್ ಅಳಕ್ಕೂ ಇಳಿದು ನೀರನ್ನು ಪಡೆಯಬಲ್ಲುದಾದುದರಿಂದ ಒಣಪ್ರದೇಶಗಳಲ್ಲೂ ಬೆಳೆಯಬಲ್ಲದು. ಉತ್ತಮವಾಗಿ ಬೆಳವಣಿಗೆಯಾದ  ಹತ್ತು ಹೊಂಗೆ ಮರಗಳಿಂದ ನೆಟ್ಟ ಹತ್ತು ವರ್ಷದ ನಂತರ ವಾರ್ಷಿಕ 400 ಲೀಟರ್ ಎಣ್ಣೆ, 1200 ಕೆಜಿ ಹಿಂಡಿ, 2500 ಕೆಜಿ ಸಾವಯವ ಬಯೋಮಾಸ್ ಗೊಬ್ಬರ ದೊರಕಬಲ್ಲದು. ಒಂದು ಗ್ರಾಮದಲ್ಲಿ ಕೃಷಿಗೆ ಬಳಸದ ಒಣ ಪ್ರದೇಶ/ಬೀಳು ಭೂಮಿಯಲ್ಲಿ ಹೊಂಗೆ ಮರಗಳನ್ನು ಬೆಳೆಸಿ ಅದರಿಂದ ಲಭ್ಯವಾಗುವ ಬೀಜಗಳಿಂದ ಎಣ್ಣೆಯನ್ನು ಸ್ಥಳೀಯವಾಗಿಯೇ ತೆಗೆದು ಡೀಸೆಲ್ ಜನರೇಟರ್ ಬಳಸಿ ವಿದ್ಯುತ್ ತಯಾರಿಸಿ ಗ್ರಾಮೀಣ ನೀರಾವರಿ, ಮನೆ ಉಪಯೋಗಕ್ಕೆ ವಿದ್ಯುತ್ ಪಡೆಯಲು ಸಾಧ್ಯವಿದೆ ಅಥವಾ ಗ್ರಾಮೀಣರು ಹೊಂದಿರುವ ಡೀಸೆಲ್ ವಾಹನಗಳಿಗೆ ಇಂಧನವಾಗಿ ಬಳಸಬಹುದು, ಟ್ರಾಕ್ಟರ್ ಇತ್ಯಾದಿಗಳಲ್ಲೂ ಇಂಧನವಾಗಿ ಬಳಸಿ ಸ್ವಾವಲಂಬನೆಯನ್ನು ಸಾಧಿಸಬಹುದು.

ಹೊಂಗೆ ಮರವು ಬರನಿರೋಧಕವಾಗಿದ್ದು ವ್ಯವಸಾಯಕ್ಕೆ ಬಳಸದ ಒಣ ಬೀಳು ಭೂಮಿಯಲ್ಲೂ ಬೆಳೆಯಬಲ್ಲುದಾದುದರಿಂದ ಇದನ್ನು ಅಂಥ ಪ್ರದೇಶಗಳಲ್ಲಿ ಬೆಳೆಸಿ ರೈತರು ತಮ್ಮ ಇಂಧನ ಅವಶ್ಯಕತೆಯನ್ನು ಪೂರೈಸಿಕೊಳ್ಳಬಹುದು. ಇದು ವಾತಾವರಣದಿಂದ ಇಂಗಾಲದ ಡೈ ಆಕ್ಸೈಡ್ ಹೀರಿ ಬೆಳೆಯುವುದರಿಂದ ಇಂಗಾಲದ ಡೈ ಆಕ್ಸೈಡ್ ಹೆಚ್ಚಳದಿಂದ ಉಂಟಾಗುವ ಹಸಿರು ಮನೆ ಪರಿಣಾಮವನ್ನು ಕಡಿಮೆ ಮಾಡುವಲ್ಲಿ ಸಹಾಯಕ. ಹೊಂಗೆಯ ಎಣ್ಣೆಯನ್ನೇ ಡೀಸೆಲ್ ವಾಹನಗಳಲ್ಲಿ, ಪಂಪುಗಳಲ್ಲಿ, ವಿದ್ಯುಜ್ಜನಕ, ಟ್ರ್ಯಾಕ್ಟರ್‌ಗಳಲ್ಲಿ ಬಳಸುವುದರಿಂದ ವಾತಾವರಣಕ್ಕೆ ಇಂಗಾಲದ ಡೈ ಆಕ್ಸೈಡ್ ಅನ್ನು ಪಳೆಯುಳಿಕೆ ಇಂಧನ ಉಪಯೋಗಿಸಿದಾಗ ಆಗುವಂತೆ ಹೆಚ್ಚುವರಿಯಾಗಿ ಸೇರಿಸುವುದನ್ನು ನಿವಾರಿಸಿದಂತೆ ಆಗುತ್ತದೆ. ಕರ್ನಾಟಕದಲ್ಲಿ ವ್ಯವಸಾಯಕ್ಕೆ ಬಳಸದ ಲಕ್ಷಾಂತರ ಎಕರೆಗಳ ಪಾಳು ಭೂಮಿ ಇದೆ. ಇಲ್ಲೆಲ್ಲಾ ಹೊಂಗೆಯನ್ನು ಬೆಳೆಸಿ ಕೃಷಿಕರ ಆದಾಯವನ್ನು ಹೆಚ್ಚಿಸಲು ಸಾಧ್ಯವಿದೆ. ಹೊಂಗೆ ಮರವು ಲೆಗ್ಯೂಮ್ ಜಾತಿಗೆ ಸೇರಿದ ಮರವಾದುದರಿಂದ ಇದರ ಬೇರುಗಳಲ್ಲಿ ಸಾರಜನಕ ಸ್ಥಿರೀಕರಿಸುವ ಗಂಟುಗಳು ಇರುವ ಕಾರಣ ನೆಲದ ಫಲವತ್ತತೆಯನ್ನು ಹೆಚ್ಚಿಸಲು ಸಹಾಯಕ. ಇದರ ಬೇರುಗಳು ಇತರ ಬೆಳೆಗಳೊಂದಿಗೆ ಸ್ಪರ್ಧಿಸುವುದಿಲ್ಲವಾದ ಕಾರಣ ಇದನ್ನು ಹೊಲಗಳ ಬದಿಯಲ್ಲಿಯೂ ಬೆಳೆಸಬಹುದು. ಈ ಮರವು 100 ವರ್ಷಗಳವರೆಗೆ ಬದುಕುವುದರಿಂದ ದೀರ್ಘ ಕಾಲ ಫಸಲನ್ನು ಪಡೆಯಬಹುದು.  ಕೃಷಿಕರಿಗೆ ಇಂಧನ ಸ್ವಾವಲಂಬನೆಗೆ ಸಹಾಯಕವಾಗಬಲ್ಲ ಹೊಂಗೆ ಮರವನ್ನು ರಾಜ್ಯದ ಎಲ್ಲೆಡೆ ಬೆಳೆಸುವ ಕುರಿತು ಮಾಧ್ಯಮಗಳು ಜಾಗೃತಿ ಮೂಡಿಸಬೇಕಾದ ಅಗತ್ಯ ಇದೆ. ರಾಜ್ಯದ ಎಲ್ಲ ತಾಲೂಕುಗಳಲ್ಲಿಯೂ ಹೊಂಗೆ ಮರದ ಹೆಚ್ಚು ಇಳುವರಿ ಕೊಡುವ ಬೀಜ ಹಾಗೂ ಸಸಿಗಳನ್ನು ಒದಗಿಸಲು ತೋಟಗಾರಿಕೆ ಇಲಾಖೆ, ಅರಣ್ಯ ಇಲಾಖೆ, ಕೃಷಿ ವಿಶ್ವ ವಿದ್ಯಾನಿಲಯಗಳು ಹಾಗೂ ಸ್ವಯಂಸೇವಾ ಸಂಘಟನೆಗಳು ಮುಖ್ಯ ಪಾತ್ರ ವಹಿಸಬಹುದಾಗಿದೆ.

ದಾಂಡೇಲಿಯ ಫೆರ್ರೋಅಲ್ಲೋಯ್ ಕಾರ್ಖಾನೆಯ ಒಂದು ಮೆಗಾವ್ಯಾಟ್ ಸಾಮರ್ಥ್ಯದ ಐದು ಡೀಸೆಲ್ ವಿದ್ದ್ಯುಜ್ಜನಕಗಳನ್ನು ಹೊಂಗೆ ಎಣ್ಣೆಯಿಂದಲೇ ನಡೆಯುವಂತೆ ಬದಲಾಯಿಸಿ 2001ರಲ್ಲಿ 7,60,000 ಕಿಲೋವ್ಯಾಟ್ ವಿದ್ಯುತ್ತನ್ನು ಉತ್ಪಾದಿಸಲಾಗಿದೆ. ಇದು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಡಾ. ಶ್ರೀನಿವಾಸ ಅವರ ಹೊಂಗೆ ಎಣ್ಣೆಯನ್ನು ಇಂಧನವಾಗಿ ಬಳಸುವ ಕುರಿತಾದ ಪ್ರಯೋಗಗಳಿಂದ ಪ್ರೇರಿತವಾಗಿತ್ತು. ಇವರೇ ಕಗ್ಗನಹಳ್ಳಿಯಲ್ಲಿ 63 ಕೆ.ವಿ.ಎ. ಸಾಮರ್ಥ್ಯದ ಎರಡು ವಿದ್ದ್ಯುಜ್ಜನಕಗಳನ್ನು ಸ್ಥಳೀಯವಾಗಿ ಬೆಳೆದ ಹೊಂಗೆ ಬೀಜದ ಎಣ್ಣೆಯಿಂದಲೇ ನಡೆಸಿ 440 ವೋಲ್ಟಿನ ಪ್ರತ್ಯೇಕ ಗ್ರಿಡ್ದನ್ನು ಸ್ಥಾಪಿಸಿ 40 ಚದರ ಕಿಲೋಮೀಟರ್ ವ್ಯಾಪ್ತಿಯಲ್ಲಿ 20 ಬೋರುವೆಲ್ಲುಗಳನ್ನು ಕೊರೆಯಿಸಿ ಇದೇ ವಿದ್ಯುತ್ತಿನಿಂದ ನೀರಾವರಿ ವ್ಯವಸ್ಥೆಯನ್ನು ಮಾಡಿ ತೋರಿಸಿದ್ದಾರೆ. ಇಂಥ ಪ್ರಯೋಗಗಳನ್ನು ರಾಜ್ಯದ ಎಲ್ಲೆಡೆ ಮಾಡಬೇಕಾದ ಅಗತ್ಯ ಇದೆ. ಇದರಿಂದ ವಿದ್ಯುತ್ತಿಗೆ ಕೃಷಿ ವಲಯದಿಂದ ಇರುವ ಬೇಡಿಕೆಯನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಲು ಸಾಧ್ಯ.

Leave a Reply

Your email address will not be published.