Daily Archives: October 8, 2012

ಕಾವೇರಿ-ಕರ್ನಾಟಕ : ಮುತ್ಸದ್ಧಿಗಳ ಕೊರತೆ…


– ರವಿ ಕೃಷ್ಣಾರೆಡ್ಡಿ


ಕರ್ನಾಟಕದ ರಾಜಕಾರಣಿಗಳ ಪೈಕಿ ಕಾವೇರಿ ವಿಚಾರಕ್ಕೆ ಅಂಕಿಅಂಶಗಳ ಸಮೇತ ಅದರ ಇಡೀ ಇತಿಹಾಸ ಮತ್ತು ವರ್ತಮಾನವನ್ನು ತಿಳಿದುಕೊಂಡಿರುವವರು ಎಚ್.ಡಿ.ದೇವೇಗೌಡರು. ಅವರಿಗೆ ಬಹುಶಃ ಕೃಷ್ಣಾ ನದಿ ಮತ್ತು ಅದಕ್ಕೆ ಸಂಬಂಧಿಸಿದ ಕರ್ನಾಟಕದ ವಿವರಗಳೂ ಅಷ್ಟೇ ಚೆನ್ನಾಗಿ ಗೊತ್ತಿರಬಹುದು. ಕೃಷ್ಣಾ ನದಿಯ ವಿಚಾರಕ್ಕೆ ಎಚ್.ಕೆ.ಪಾಟೀಲರೂ ಸಹ ದೇವೇಗೌಡರಷ್ಟೇ ತಿಳಿದುಕೊಂಡಿರಬಹುದು. ಇನ್ನು ಕನ್ನಡ ಪತ್ರಕರ್ತರ ವಿಷಯಕ್ಕೆ ಬಂದರೆ ಪ್ರಜಾವಾಣಿಯ ದಿನೇಶ್ ಅಮೀನ್ ಮಟ್ಟುರವರೂ ಸಹ ಅದರ ಬಗ್ಗೆ ಅಧಿಕೃತವಾಗಿ ಮಾತನಾಡಬಲ್ಲಷ್ಟು ವಿಷಯದ ಪೂರ್ವೇತಿಹಾಸ ಅರಿತವರು. ಈ ಹಿನ್ನೆಲೆಯಲ್ಲಿ ನಾವು ದಿನೇಶ್ ಅಮಿನ್ ಮಟ್ಟುರವರ ಇಂದಿನ ಅಂಕಣ ಲೇಖನ “ಬೇಕಾಗಿರುವುದು ಸುಡುವ ಬೆಂಕಿ ಅಲ್ಲ; ಅರಿವಿನ ಬೆಳಕು“ವನ್ನು ಗಮನಿಸಬೇಕು.

ದಿನೇಶ್‌ರವರು ಹೇಳಿದ ಹಾಗೆ ಕಾವೇರಿ ವಿವಾದ ಕಳೆದ 21 ವರ್ಷಗಳಿಂದ ಕರ್ನಾಟಕದ ನಾಲ್ಕೈದು ಜಿಲ್ಲೆಗಳ ರೈತರನ್ನು ಕಾಡುತ್ತಿದೆ. 21 ವರ್ಷಗಳ ಹಿಂದೆ ಇದ್ದದ್ದು ಬಂಗಾರಪ್ಪರ ಸರ್ಕಾರ. ಬಹುಶಃ ಅವರ ಅವಧಿಯಲ್ಲಿ ಆದಷ್ಟು ದೊಡ್ಡ ಗಲಾಟೆ ಮತ್ತು ಸಾರ್ವಜನಿಕ ಆಸ್ತಿಪಾಸ್ತಿ ಮತ್ತೆ ಆಗಿಲ್ಲ. ನನ್ನೂರು (ಆನೇಕಲ್ ತಾಲ್ಲೂಕಿನ ಬೊಮ್ಮಸಂದ್ರ) ತಮಿಳುನಾಡಿನ ಗಡಿಯಿಂದ ಕೇವಲ ಹತ್ತು-ಹನ್ನೆರಡು ಕಿ.ಮೀ. ದೂರದಲ್ಲಿದೆ. ಆಗ ನಡೆದ ಗಲಭೆಗಳಿಗೆ ಹೆದರಿ ಆಗ ನನ್ನೂರಿನ ಕೈಗಾರಿಕಾ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದ ಸಾವಿರಾರು ತಮಿಳರು ಗಂಟುಮೂಟೆ ಕಟ್ಟಿಕೊಂಡು ರಾತ್ರೋರಾತ್ರಿ ಗಡಿ ದಾಟಿದ್ದರು. ಒಂದಷ್ಟು ಪುಡಿರೌಡಿಗಳು ಮತ್ತು ದರೋಡೆಕೋರರು ಆ ಸಂದರ್ಭವನ್ನು ತಮ್ಮ ಅಪರಾಧಿ ಕೆಲಸಗಳಿಗೂ ಬಳಸಿಕೊಂಡಿದ್ದರು.

ಬಂಗಾರಪ್ಪ ಸರ್ಕಾರದ ನಂತರ ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗಲೂ ಕಾವೇರಿ ಗಲಾಟೆ ಜೋರಾಗಿ ಆಗಿತ್ತು. ತಮಿಳುನಾಡಿನ ಒತ್ತಡವನ್ನು ನಿವಾರಿಸಿಕೊಳ್ಳಲು ಮತ್ತು ತಮಿಳುನಾಡಿಗೆ ಆಗ ನೀರಿನ ಅವಶ್ಯಕತೆ ಖಂಡಿತ ಇಲ್ಲ ಎಂದು ವಾದಿಸಲು ದೇವೇಗೌಡರು ಕರ್ನಾಟಕದ ಕೆಲವು ಸರ್ಕಾರಿ ನೌಕರರನ್ನು ಗುಟ್ಟಾಗಿ ತಮಿಳುನಾಡಿಗೆ ಕಳುಹಿಸಿ ಅಲ್ಲಿಂದ ಫೋಟೋಸಹಿತ ಸಾಕ್ಷ್ಯಾಧಾರಗಳನ್ನು ತರಿಸಿಕೊಂಡು ವಾದ ಮಂಡಿಸಿದ್ದರು ಎಂದು ಕೆಲವು ಪತ್ರಿಕೆಗಳಲ್ಲಿ ಓದಿದ ನೆನಪು. ಅದಾದ ಮೇಲೆ ಎಸ್.ಎಮ್.ಕೃಷ್ಣರ ಸರ್ಕಾರ ಕಾವೇರಿ ವಿಚಾರಕ್ಕೆ ಯಾವ ರೀತಿ ನ್ಯಾಯಾಂಗನಿಂದನೆ ಆರೋಪಕ್ಕೆ ಗುರಿಯಾಗಿ ಸ್ವತಃ ಎಸ್.ಎಮ್.ಕೃಷ್ಣರೇ ಸುಪ್ರೀಂ ಕೋರ್ಟ್‌ಗೆ ಹಾಜರಾಗಿ ತಪ್ಪೊಪ್ಪಿಗೆ ಪ್ರಮಾಣ ಪತ್ರ ಸಲ್ಲಿಸಿ ಬಂದರು ಎಂದು ಎಲ್ಲರಿಗೂ ಗೊತ್ತಿರುವುದೇ.

ಈ ವರ್ಷ ರಾಜ್ಯದಲ್ಲಿ ಖಂಡಿತವಾಗಲೂ ಬರಗಾಲವಿದೆ. ಕಳೆದ ವರ್ಷವೂ ಅರೆ ಬರಗಾಲವಿತ್ತು. ರಾಜ್ಯದ ಪ್ರತಿಯೊಂದು ಜಲಾಶಯದಲ್ಲೂ ಕಳೆದ ವರ್ಷ ಇದೇ ಸಮಯದಲ್ಲಿ ಇರುವುದಕ್ಕಿಂತ ಬಹಳ ಕಡಿಮೆ ಪ್ರಮಾಣದಲ್ಲಿ ಇಂದು ನೀರು ಇದೆ ಎಂದರೆ ಅದು ಈ ವರ್ಷದ ಪರಿಸ್ಥಿತಿಯ ಭೀಕರತೆಯನ್ನು ತೋರಿಸುತ್ತದೆ. ಇಂತಹ ಸಂದರ್ಭದಲ್ಲಿ ರಾಜ್ಯದ ಶೆಟ್ಟರ್ ನೇತೃತ್ವದ ಸರ್ಕಾರ ಅತಿ ಅವಜ್ಞೆಯಿಂದ ಮತ್ತು ಬೇಜವಾಬ್ದಾರಿಯಿಂದ ನಡೆದುಕೊಂಡಿದೆ. ಅದೇ ಬಹುಶಃ ಇಂದು ತಲೆದೋರಿರುವ ಇಕ್ಕಟ್ಟಿಗೆ ಪ್ರಮುಖ ಕಾರಣ. ಕುಡಿಯಲು ನೀರು ಮತ್ತು ರಟ್ಟೆಯಲ್ಲಿ ಬಲ ಇಲ್ಲದಾಗ ಆಳದ ಬಾವಿ ತೋಡುವ ಸಾಹಸ ಈ ಸರ್ಕಾರದ್ದು.

ಈಗ ದಿನೇಶ್ ಅಮಿನ್ ಮಟ್ಟುರವರ ಲೇಖನಕ್ಕೆ ಮತ್ತೆ ಬರುತ್ತೇನೆ. ಅವರ ಲೇಖನವನ್ನು ಓದುತ್ತಿದ್ದರೆ ನಮಗೆ ಒಂದು ಸಂಶಯ ಬರುತ್ತದೆ . ಕಾವೇರಿ ತೀರ್ಪಿನಲ್ಲಿ ಬಹುಶಃ ನ್ಯಾಯಾಧೀಶರ ವೈಯಕ್ತಿಕ ಅನುಭವಗಳು ಮತ್ತು ಅಭಿಪ್ರಾಯಗಳು ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಪ್ರಭಾವ ಬೀರಿವೆಯೇನೋ ಎಂದು. 1991ರಲ್ಲಿ ಕಾವೇರಿ ಕಣಿವೆಗೆ ಭೇಟಿ ನೀಡಿದ್ದ ನ್ಯಾಯಮಂಡಳಿಯ ನ್ಯಾಯಮೂರ್ತಿಗಳಿಗೆ ರಾಜ್ಯ ಸರ್ಕಾರ ಮತ್ತು ಕಾವೇರಿ ಕೊಳ್ಳದ ಜನತೆ, ಆ ನ್ಯಾಯಮಂಡಳಿಯ ಏರ್ಪಾಟಿನ ಬಗ್ಗೆಯೇ ತಮ್ಮ ಭಿನ್ನಾಭಿಪ್ರಾಯ, ಅಸಹನೆ, ಮತ್ತು ಅಸಹಕಾರವನ್ನು ತೋರಿಸಿದ್ದು ನ್ಯಾಯಮಂಡಳಿಯ ಅಂತಿಮ ತೀರ್ಪಿನಲ್ಲಿಯೂ ಪ್ರತಿಫಲಿಸಿತು ಎಂದಾದರೆ ಅದು ನಿಜಕ್ಕೂ ಪ್ರಶ್ನೆಗೆ ಅರ್ಹ. ನಾನು ಜನರ ಅಸಹಕಾರದ ಬಗ್ಗೆ ಮಾತನಾಡುವುದಿಲ್ಲ. ಕರ್ನಾಟಕದ ಹೊರಗೆ ನಮ್ಮ ರಾಜ್ಯದ ಜನರ ಬಗ್ಗೆ ಏನೇ ಅಭಿಪ್ರಾಯವಿರಲಿ, ಆದರೆ ರಾಜ್ಯದ ಜನತೆಗಂತೂ ಕಾವೇರಿ ವಿಷಯದಲ್ಲಿ ನಮಗೆ ಅನ್ಯಾಯವಾಗಿದೆ ಮತ್ತು ಅನ್ಯಾಯವಾಗುತ್ತಲೇ ಇದೆ ಎನ್ನುವ ಅಭಿಪ್ರಾಯವಂತೂ ಗಟ್ಟಿಯಾಗಿದೆ. ಹೀಗಿರುವಾಗ, ನಮಗೆ ಅನ್ಯಾಯವಾಗಿದೆ ಮತ್ತು ನಾವು ನ್ಯಾಯದ ಪರ ಇದ್ದೇವೆ ಎಂಬ ಭಾವನೆ ಯಾವ ಸಮುದಾಯಗಳಲ್ಲಿ ಇರುತ್ತದೋ ಅವರು ಅಗತ್ಯಕ್ಕಿಂತ ಹೆಚ್ಚು ಒರಟುತನದಲ್ಲಿ ಮತ್ತು ಕೋಪದಲ್ಲಿಯೇ ವರ್ತಿಸಿರುತ್ತಾರೆ. ಹಾಗಾಗಿ ಜನ ಮತ್ತು ರೈತರು ನ್ಯಾಯಮಂಡಳಿಗೆ  ಕಪ್ಪುಬಾವುಟ ತೋರಿಸಿ `ಗೊ ಬ್ಯಾಕ್` ಎಂದರೆ ಅದು ಅಂತಹ ಸಮಯದಲ್ಲಿ ಬಹುಶಃ ನಿರೀಕ್ಷಿಸಬಹುದಾದದ್ದು.

ಆದರೆ, ಒಟ್ಟಾರೆಯಾಗಿ ನಮ್ಮ ಸರ್ಕಾರಗಳು ಮತ್ತು ರಾಜಕಾರಣಿಗಳು ಏನು ಮಾಡಿದರು ಮತ್ತು ಏನು ಮಾಡಬೇಕಿತ್ತು ಎನ್ನುವುದು ಹೆಚ್ಚಿಗೆ ಚರ್ಚೆಯಾಗಬೇಕು ಮತ್ತು ಮುಖ್ಯವಾಗಬೇಕು. ಕಳೆದ 21 ವರ್ಷಗಳಿಂದಲೂ ನಮ್ಮ ರಾಜ್ಯದ ಆಡಳಿತ ನಡೆಸಿದ ಯಾರೊಬ್ಬರೂ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ಮತ್ತು ಕರ್ನಾಟಕಕ್ಕೆ ಆಗಿರಬಹುದಾದ ಅನ್ಯಾಯದ ವಿರುದ್ಧ ನ್ಯಾಯ ದೊರಕಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಅದಕ್ಕೆ ಹೊಣೆ ರಾಜ್ಯದ ಜನತೆಯೇ ಹೊರಬೇಕು. ಏಕೆಂದರೆ ಈ ಮುಖಂಡರೆಲ್ಲ ಜನರೇ ಆರಿಸಿಕೊಂಡ ಪ್ರತಿನಿಧಿಗಳು. ಯೋಗ್ಯರನ್ನು ಆರಿಸಿ ಕಳುಹಿಸದಿದ್ದದ್ದು ಮತ್ತ್ತುಕಾಲಕಾಲಕ್ಕೆ ತಮ್ಮ ಪ್ರತಿನಿಧಿಗಳನ್ನು ಪ್ರಶ್ನಿಸಿ ಶಿಕ್ಷಿಸದೇ ಹೋದದ್ದೇ ನಮ್ಮ ಸಮಸ್ಯೆಗಳು ಮುಂದುವರೆಯಲು ಕಾರಣ.

ಬೆಂಗಳೂರಿನ ಬಹುಪಾಲು ನೀರಿನ ಅವಶ್ಯಕತೆಯನ್ನು ಕಾವೇರಿ ನದಿ ಪೂರೈಸುತ್ತಿದೆ. ಕನ್ನಂಬಾಡಿಗಿಂತ ಎತ್ತರದ ಭೂಮಟ್ಟದಲ್ಲಿರುವ ನಗರಕ್ಕೆ ನೀರನ್ನು ಪಂಪ್ ಮಾಡಿ ತರಲಾಗುತ್ತದೆ. ಹೀಗೆ ತರಲಾದ ಬೆಂಗಳೂರಿನ ಬಹುಶಃ ಅರ್ಧಕ್ಕಿಂತ ಹೆಚ್ಚು ನೀರು ಮತ್ತೆ ತಮಿಳುನಾಡಿಗೇ ಹರಿಯುತ್ತದೆ. ಒಂದು ಭಾಗ ನೀರು ಮೈಸೂರು ರಸ್ತೆಯಲ್ಲಿರುವ ವೃಷಭಾವತಿ ನದಿಯ ಮೂಲಕ ಬಹುಶಃ ಮತ್ತೆ ಕಾವೇರಿಯ ಕಡೆಗೇ ಹರಿಯುತ್ತದೆ. ಆದರೆ ಬಹುಭಾಗದ ನೀರು ಪೂರ್ವಾಭಿಮುಖವಾಗಿ ಹರಿದು ದಕ್ಷಿಣ ಪಿನಾಕಿನಿ ನದಿಯನ್ನು ಸೇರುತ್ತದೆ.ಇದು ನಂದಿ ಬೆಟ್ಟದಲ್ಲಿ ಹುಟ್ಟುವ ನದಿ. ಹೆಚ್ಚಾಗಿ ಮಳೆಗಾಲದಲ್ಲಿ ಜೀವಂತವಾಗುತ್ತಿದ್ದ ನದಿ, ಹೊಳೆ. ಈಗ ಈ ನದಿ ದಿನವೂ ಹರಿಯುತ್ತದೆ. ಬೆಂಗಳೂರಿನ ಪೂರ್ವ ಮತ್ತು ದಕ್ಷಿಣ ಭಾಗಗಳಲ್ಲಿರುವ ಮಡಿವಾಳ ಕೆರೆ, ಅಗರ ಕೆರೆ, ಬೆಳ್ಳಂದೂರು ಕೆರೆ, ನಂತರ ವರ್ತೂರು ಕೆರೆಗಳಿಗೆ ಹರಿಯುವ ನಗರದ ಕೊಳಚೆ ನೀರೆಲ್ಲ ವರ್ತೂರು ಕೆರೆಯಿಂದ ಸುಮಾರು ಮೂರ್ನಾಲ್ಕು ಕಿ.ಮೀ.ಗಳ ದೂರದಲ್ಲಿ ದಕ್ಷಿಣ ಪಿನಾಕಿನಿಯನ್ನು ಸೇರುತ್ತದೆ. ಅಲ್ಲಿಂದ ಸುಮಾರು ಹತ್ತು ಕಿ.ಮೀ.ಗಳು ಹರಿದ ನಂತರ ಈ ನದಿ ತಮಿಳುನಾಡನ್ನು ಪ್ರವೇಶಿಸುತ್ತದೆ. ಇಂತಹ ನಿತ್ಯವೂ ಹರಿಯುವ ಈ ಹೊಳೆಗೆ ತಮಿಳುನಾಡು ಸರ್ಕಾರ ಗಡಿಭಾಗದ ಹೊಸೂರು ಪಟ್ಟಣಕ್ಕೆ ಐದಾರು ಕಿ.ಮೀ. ದೂರದ ಆವಲಹಳ್ಳಿ ಅಥವ ಆವಲಪಲ್ಲಿ ಎಂಬಲ್ಲಿ ಚಿಕ್ಕ ಅಣೆಕಟ್ಟು ನಿರ್ಮಿಸಿದೆ. ಅಲ್ಲಿ ನೀರಿನ ಶುದ್ಧೀಕರಣ ಘಟಕ ಇದ್ದು, ಶುದ್ಧೀಕರಿಸಿದ ನೀರನ್ನು ಹೊಸೂರು ನಗರಕ್ಕೆ ಪೂರೈಸುತ್ತದೆ.

ನಾನು ಹಿಂದಿನ ಲೇಖನವೊಂದರಲ್ಲಿ ಪ್ರಸ್ತಾಪಿಸಿದ್ದೆ: ಬೆಂಗಳೂರಿನ ಪೂರ್ವಕ್ಕಿರುವ ಅವಿಭಜಿತ ಬೆಂಗಳೂರು ಜಿಲ್ಲೆಯಲ್ಲಿ ಮತ್ತು ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಸಾವಿರ ಅಡಿಗಿಂತ ಕೆಳಗೆ ಜಾರುತ್ತಿದೆ. ಸಾವಿರ ಅಡಿ ಕೊರೆಯುವಾಗಲೂ ತೇವ ಕಾಣಿಸದೆ ಕೇವಲ ಕಲ್ಲಿನ ಪುಡಿ ಮೇಲೆ ಬರುವುದನ್ನು ಬೋರ್‌ವೆಲ್ ಕೊರೆಯುವವರು ಹೇಳುತ್ತಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನಲ್ಲಿಯೂ ಪರಿಸ್ಥಿತಿ ಭೀಕರವಾಗಿದೆ. ಹೊಸಕೋಟೆ ಕೆರೆ ಸುತ್ತಮುತ್ತಲಿಗೆಲ್ಲ ದೊಡ್ಡ ಕೆರೆ. ಆದರೆ ಅದು ತುಂಬಿ ಎಷ್ಟು ವರ್ಷವಾಯಿತೊ. ಈ ಕೆರೆ ನಾನು ಮೇಲೆ ಹೇಳಿದ ಜಾಗದಲ್ಲಿ ವರ್ತೂರು ಕೆರೆಯ ನೀರಿನಿಂದ ದಿನವೂ ಮೈದುಂಬಿಕೊಳ್ಳುವ ದಕ್ಷಿಣ ಪಿನಾಕಿನಿ ನದಿಗೆ ಬಹಳ ದೂರದಲ್ಲಿಲ್ಲ. ಬಹುಶಃ ಹದಿನೈದು ಕಿ.ಮೀ. ಹಾಗಾಗಿ ಬೆಂಗಳೂರಿನ ಈ ಕೊಳಚೆ ನೀರನ್ನು ಹೊಸಕೋಟೆ ಕೆರೆಗೆ ಹರಿಸಿ ಅಲ್ಲಿಯ ಸುತ್ತಮುತ್ತಲಿನ ಅಂತರ್ಜಲವನ್ನು ಹೆಚ್ಚಿಸುವ ಮಾತುಗಳು ಇತ್ತೀಚೆಗೆ ಕೇಳಿಬಂದಿದ್ದವು. ಆದರೆ ಯಾವಾಗ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯವರು ತಕರಾರು ತೆಗೆದರೋ, ಅದು ಮತ್ತೆ ಸದ್ದು ಮಾಡಲಿಲ್ಲ.

ಇಲ್ಲಿ ಏನಾಯಿತು ಎಂದರೆ, ನಮ್ಮ ಅಧಿಕಾರಿಗಳಿಗೆ ಮತ್ತು ರಾಜಕಾರಣಿಗಳಿಗೆ ಈ ತಕರಾರನ್ನು ಹೇಗೆ ಎದುರಿಸುವುದು ಎಂಬ ವಿಷಯವೇ ಹೊಳೆಯಲಿಲ್ಲ. ಅಂದ ಹಾಗೆ, ಈ ಹೊಸಕೋಟೆ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವವರು ಈ ಭಾಗದ ಯಶಸ್ವೀ ರಾಜಕಾರಣಿ ಬಿ.ಎನ್.ಬಚ್ಚೇಗೌಡ. ಅವರು ಈಗಿನ ಸರ್ಕಾರದಲ್ಲಿ ಸಚಿವರು. ಹಿಂದಿನ ಜನತಾ ಪಕ್ಷ/ದಳದ ಮಂತ್ರಿಮಂಡಲದಲ್ಲಿಯೂ ಸಚಿವರಾಗಿದ್ದವರು. ಬೆಂಗಳೂರಿನ ಪಾಲಿನ ಕಾವೇರಿ ನೀರನ್ನೇ (ಅಂದರೆ ಕರ್ನಾಟಕದ ಪಾಲಿನ ನೀರನ್ನು) ನಾವು ಈ ರೀತಿ ಮರುಬಳಕೆ ಮಾಡಲಿದ್ದೇವೆ ಎಂದು ವಾದ ಹೂಡಲಾಗದೇ ಹೋದವರು ಇವರು. ನಮ್ಮ ಜನನಾಯಕರು.

ಅಂದಹಾಗೆ, ಬೆಂಗಳೂರಿಗೆ ಸಾವಿರಾರು ಕೋಟಿ ವೆಚ್ಚದಲ್ಲಿ ಕಾವೇರಿ ನಾಲ್ಕನೇ ಹಂತದ ನೀರಿನ ಯೋಜನೆ ಯಾವುಯಾವುದೋ ಹಂತದಲ್ಲಿದೆ. ಬಹುಶಃ ಈಗಾಗಲೆ ಎಲೆಕ್ಟ್ರಾನಿಕ್ ಸಿಟಿಗೂ ಕಾವೇರಿ ನೀರು ಹರಿಯುತ್ತಿರಬಹುದು. ಇಲ್ಲಿಂದ ತಮಿಳುನಾಡಿನ ಹೊಸೂರು ನಗರ ಕೇವಲ 20 ಕಿ.ಮೀ. ದೂರದಲ್ಲಿದೆ. ಇದೇ ಹೊಸೂರು ನಗರ ಮತ್ತು ಅದರ ಸುತ್ತಮುತ್ತಲಿನ ಗ್ರಾಮಗಳಿಗೆ ಈಗಾಗಲೆ ಕಾವೇರಿ ನೀರು ಅಲ್ಲಲ್ಲಿ ಬರಲು ಆರಂಭವಾಗಿದೆ, ಇಲ್ಲವೇ ಇಷ್ಟರಲ್ಲೇ ಬರಲಿದೆ. ಅದು ಬರಲಿರುವುದು ಸುಮಾರು 100 ಕಿ.ಮೀ. ದೂರದಲ್ಲಿರುವ ಹೊಗೇನಕಲ್ ಜಲಪಾತದ ಬಳಿಯಿಂದ. ಈ ಜಲಪಾತದ ಪೂರ್ವ ಭಾಗ ತಮಿಳುನಾಡಿನದಾದರೆ ಪಶ್ಚಿಮದ್ದು ಕರ್ನಾಟಕಕ್ಕೆ ಸೇರಿದ್ದು. ಕನಕಪುರ ತಾಲ್ಲೂಕಿನ ಸಂಗಮದಿಂದ ಸುಮಾರು ಹತ್ತಿಪ್ಪತ್ತು ಕಿ.ಮೀ. ದೂರಕ್ಕೆ ಹರಿದ ನಂತರ ಕರ್ನಾಟಕ ಮತ್ತು ತಮಿಳುನಾಡಿನ ಗಡಿ ಎಂದರೆ ಅದು ಕಾವೇರಿ ನದಿಯ ದಡಗಳೇ. ಅಲ್ಲಿಂದ ಬಹುಶಃ ಐವತ್ತು-ಅರವತ್ತು ಕಿ.ಮೀ. ಗಡಿಯನ್ನು ಕಾವೇರಿಯೇ ನಿರ್ಧರಿಸುತ್ತಾಳೆ. ಕಾವೇರಿ ಮೈದುಂಬಿಕೊಂಡಾಗ ಹೊಗೇನಕಲ್ ಜಲಪಾತ ರುದ್ರರಮಣೀಯ. ಇಲ್ಲಿಂದ ತಮಿಳುನಾಡು ಸರ್ಕಾರ ಹೊಸೂರಿಗೆ ನೀರು ತರುತ್ತಿದೆ. ಹೊಸೂರು ಮತು ಬೆಂಗಳೂರು ಸಮುದ್ರಮಟ್ಟದಿಂದ ಹೆಚ್ಚುಕಮ್ಮಿ ಒಂದೇ ಎತ್ತರದಲ್ಲಿವೆ. ಆದರೆ ಹೊಗೇನಕಲ್ ಜಲಪಾತ ಶ್ರೀರಂಗಪಟ್ಟಣದ ಬಳಿಯ ಕನ್ನಂಬಾಡಿಗಿಂತ ನೂರಾರು ಅಡಿ ಆಳದಲ್ಲಿದೆ. (ಬಹುಶಃ ಸಾವಿರವೂ ಇರಬಹುದೇನೊ, ಏಕೆಂದರೆ ಗಗನಚುಕ್ಕಿ-ಭರಚುಕ್ಕಿ ಜಲಪಾತಗಳನ್ನು ನಿರ್ಮಿಸಿದ ನಂತರ ನೂರು ಕಿ.ಮೀ.ಗೂ ಹೆಚ್ಚು ದೂರ ಹರಿದು ಕಾವೇರಿ ಇಲ್ಲಿಗೆ ಬರುತ್ತಾಳೆ.) ಅಷ್ಟು ಕೆಳಮಟ್ಟದಿಂದ ನೀರನ್ನು ಪಂಪ್ ಮಾಡಿ ಹೊಸೂರು ಮತ್ತು ಕೃಷ್ಣಗಿರಿ ಜಿಲ್ಲೆಯ ಇತರ ಗ್ರಾಮ-ಪಟ್ಟಣಗಳಿಗೆ ನೀರು ಸರಬರಾಜು ಮಾಡಲಾಗುತ್ತದೆ.

ಹೊಸೂರಿಗೆ ಬಂದ ನೀರು ನಮ್ಮ ರಾಜ್ಯದ ಆನೇಕಲ್, ಎಲೆಕ್ಟ್ರಾನಿಕ್ ಸಿಟಿ, ಬೆಂಗಳೂರು ನಗರಕ್ಕೆ ಏಕೆ ಬರಬಾರದು? ಅಂತಹುದೊಂದು ಮಾತುಕತೆ ಯಾಕೆ ಆರಂಭಿಸಬಾರದು? ಕೊಟ್ಟುತೆಗೆದುಕೊಳ್ಳುವುದನ್ನು ಎರಡೂ ರಾಜ್ಯಸರ್ಕಾರಗಳು ಜನತೆಯ ಹಿತದೃಷ್ಟಿಯಿಂದ ಯಾಕೆ ಕೈಗೊಳ್ಳಬಾರದು? ಅಂತಹ ಒಂದು ದೂರದೃಷ್ಟಿ ನಮ್ಮ ಕ್ಷೇತ್ರವನ್ನು ಪ್ರತಿನಿಧಿಸುವ ಹಾಲಿ ಸಮಾಜ ಕಲ್ಯಾಣ ಸಚಿವ ಎ.ನಾರಾಯಣಸ್ವಾಮಿಗೂ ಇಲ್ಲ (ಇವರು ಸುಮಾರು ಇಪ್ಪತ್ತು ವರ್ಷಗಳಿಂದ ನಮ್ಮ ಕ್ಷೇತ್ರದ ಶಾಸಕ), ಇತರೆ ಯಾವ ರಾಜಕಾರಣಿಗಳಿಗೂ ಇಲ್ಲ. ಹೊಸಕೋಟೆ ಭಾಗದ ಪಾಳೇಗಾರರಾಗಿದ್ದವರ ಕುಟುಂಬಕ್ಕೆ ಸೇರಿರುವ ಬಚ್ಚೇಗೌಡರಿಗೇ ಬೆಂಗಳೂರಿನ ಕೊಳಚೆ ನೀರನ್ನು ತಮ್ಮ ಊರಿನ ಕೆರೆಗೆ ತುಂಬಿಸಿ ತಮ್ಮ ಭಾಗದ ಅಂತರ್ಜಲ ಮಟ್ಟವನ್ನು ಹೆಚ್ಚಿಸಬಹುದು ಎನ್ನುವ ಯೋಚನೆ ಹೊಳೆಯದಿರುವಾಗ ಇನ್ನು ನಾರಾಯಣಸ್ವಾಮಿಯವರಿಗೆ ಹೊಗೇನಕಲ್ ನೀರು ತಮ್ಮ ಕ್ಷೇತ್ರಕ್ಕೂ ತರಿಸಬಹುದು ಎಂದು ಹೊಳೆಯುತ್ತದೆಯೇ?

ಇಲ್ಲ, ಇವು ಯಾವುವೂ ಆಗುವುದಿಲ್ಲ. ಯಾಕೆಂದರೆ ನಮ್ಮ ರಾಜಕಾರಣಿಗಳಿಗೆ ಆ ರೀತಿಯ ಮುತ್ಸದ್ಧಿತನವಾಗಲಿ, ಕಾಳಜಿಯಾಗಲಿ ಇಲ್ಲ. ಅನ್ಯಾಯ ಆಗಿದೆ ಎಂದು ಕಾಣಿಸುವ ರಾಜ್ಯದ ಕಾವೇರಿ ಕೊಳ್ಳದ ಹಿತರಕ್ಷಣೆಯೇ ಇವರಿಂದ ಆಗುತ್ತಿಲ್ಲ, ಇಷ್ಟೆಲ್ಲಾ ಒತ್ತಾಯ ಮತ್ತು ಆಕ್ರೋಶಗಳು ಇದ್ದರೂ. ಇನ್ನು ಹೊಸತೊಂದು ರೀತಿಯ ಮಾತುಕತೆ ಮತ್ತು ಯೋಜನೆಗಳು ಇವರಿಂದ ಸಾಧ್ಯವೇ? ಬರಗಾಲದಲ್ಲಿ ನೀರು ಹಂಚಿಕೊಳ್ಳುವ ಇಂದಿನ ಸಮಸ್ಯೆಗೆ ಪರಿಹಾರ ಕಂಡುಕೊಂಡರೆ ಅದೇ ಶತಮಾನದ ಸಾಧನೆಯಾಗುತ್ತದೇನೋ. ಆದರೆ ಹಾಗೇ ಆಗುವ ಯಾವ ಲಕ್ಷಣಗಳೂ ಇಲ್ಲ. ಯಾಕೆಂದರೆ, ಆ ಪ್ರಶ್ನೆಗೆ ಉತ್ತರ ದಿನೇಶ ಅಮಿನ್ ಮಟ್ಟುರವರ ಲೇಖನದಲ್ಲಿದೆ:

ತಮಿಳುನಾಡಿನಲ್ಲಿ ಈಶಾನ್ಯ ಮಾರುತ ಸುರಿಯಲಾರಂಭಿಸುತ್ತಿದ್ದಂತೆ ಆ ಕಡೆಯ ಒತ್ತಡ ಕಡಿಮೆಯಾಗುತ್ತದೆ. ಅಷ್ಟರಲ್ಲಿ ದೇವೇಗೌಡರ ಕಣ್ಣೀರು ಆರಿಹೋಗುತ್ತದೆ, ನಟ ಅಂಬರೀಷ್ ಅವರ ಅಭಿನಯವೂ ಮುಗಿದಿರುತ್ತದೆ, ಮಾದೇಗೌಡರ ಸಿಟ್ಟು ತಣ್ಣಗಾಗುತ್ತದೆ, ಕನ್ನಡ ಹೋರಾಟಗಾರರು ಹಳೆಯ ಭಿತ್ತಿಪತ್ರಗಳನ್ನು ಕಿತ್ತುಹಾಕಿ ಹೊಸ ಹೋರಾಟದ ಭಿತ್ತಿಪತ್ರಗಳನ್ನು ಅಂಟಿಸಲು ಗೋಡೆಗಳನ್ನು ಹುಡುಕುತ್ತಿರುತ್ತಾರೆ. ಮಾಧ್ಯಮಗಳು ಮತ್ತೊಂದು ರೋಚಕ ಸುದ್ದಿಯ ಬೆನ್ನು ಹತ್ತಿರುತ್ತವೆ. ಕಾವೇರಿ ಕಣಿವೆಯ ರೈತರು ರಾಗಿಮುದ್ದೆ ತಿಂದು ಕಂಬಳಿ ಹೊದ್ದುಕೊಂಡು ಮಲಗಿಬಿಡುತ್ತಾರೆ.