ನವೀನ್ ಸೂರಿಂಜೆಗೆ ಜಾಮೀನುರಹಿತ ಅರೆಸ್ಟ್ ವಾರಂಟ್. ವರ್ತಮಾನ ಬಳಗದ ನೈತಿಕ ಬೆಂಬಲ…

ಸ್ನೇಹಿತರೆ,

ಮಂಗಳೂರಿನಲ್ಲಿ ಸಂಕುಚಿತ, ಪ್ರತಿಗಾಮಿ, ಮತ್ತು ದಾರಿತಪ್ಪಿಸಲ್ಪಟ್ಟ ಯುವಕರು ಮಾರ್ನಿಂಗ್ ಮಿಸ್ಟ್ ಹೋಮ್‍ಸ್ಟೇ ಮೇಲೆ ದಾಳಿ ಮಾಡಿ, ನವೀನ್ ಸೂರಿಂಜೆ ಮತ್ತವರ ಸಹೋದ್ಯೋಗಿಗಳ ಮೂಲಕ ಇಡೀ ರಾಜ್ಯ ಮತ್ತು ದೇಶದ ಜನತೆಯ ಮುಂದೆ ಸಿಕ್ಕಿಬಿದ್ದದ್ದು ನಿಮಗೆ ತಿಳಿದಿರುವ ವಿಷಯವೆ. ಇದರ ಬಗ್ಗೆ ಸ್ವತಃ ನವೀನ್ ಸೂರಿಂಜೆಯವರೆ ನಮ್ಮ ವರ್ತಮಾನ.ಕಾಮ್‌ನಲ್ಲಿ ವಿಸ್ತೃತವಾಗಿ ಬರೆದಿದ್ದಾರೆ. (ಇಲ್ಲಿ, ಇಲ್ಲಿ, ಮತ್ತು ಇಲ್ಲಿ.) ಇಂದು ಆ ಘಟನೆಗೆ ಸಂಬಂಧಿಸಿದಂತೆ ಮಂಗಳೂರಿನ ಪೋಲಿಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ಚಾರ್ಜ್‍ಶೀಟ್ ಆಧಾರದ ಮೇಲೆ ಅಲ್ಲಿಯ ನ್ಯಾಯಾಲಯ ನವೀನ್ ಸೂರಿಂಜೆಯವರಿಗೆ ಜಾಮೀನುರಹಿತ ಅರೆಸ್ಟ್ ವಾರಂಟ್ ಹೊರಡಿಸಿದೆ. ಈ ಸಂದರ್ಭದಲ್ಲಿ ನಮ್ಮ “ವರ್ತಮಾನ ಬಳಗ” ನವೀನ್ ಸೂರಿಂಜೆಯವರಿಗೆ ನೈತಿಕ ಬೆಂಬಲ ಸೂಚಿಸುತ್ತದೆ ಮತ್ತು ಅವರು ಕಾನೂನುರೀತ್ಯ ಮಾಡಲಿರುವ ಹೋರಾಟಕ್ಕೆ ಬೆಂಬಲ ಕೊಡುತ್ತದೆ. ಮತ್ತು, ನಿಮ್ಮ ಬೆಂಬಲವೂ ಅವರಿಗಿರಲೆಂದು ಈ ಮೂಲಕ ಕೋರುತ್ತೇವೆ.

ಈ ವಿಷಯ ಈಗಾಗಲೆ ನ್ಯಾಯಾಲಯದಲ್ಲಿದೆ. ಹಾಗಾಗಿ ಅದರ ಬಗ್ಗೆ ಹೆಚ್ಚಿನ ಮಾತು ಬೇಡ. ಆದರೆ, ಈ ಇಡೀ ವಿದ್ಯಮಾನದಲ್ಲಿ ಮಂಗಳೂರಿನ ಪೋಲಿಸರ ನಡವಳಿಕೆ ಆಕ್ಷೇಪಾರ್ಹ ಮತ್ತು ಖಂಡನೀಯ. ಅಲ್ಲಿಯ ಪೋಲಿಸರು ಯಾವ ಒತ್ತಡಗಳ ಹಿನ್ನೆಲೆಯಲ್ಲಿ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಾರೆ ಎನ್ನುವುದು ಈಗಾಗಲೆ ಗೊತ್ತಿರುವ ವಿಷಯ. ಕೋಮುವಾದ ಮತ್ತು ರಾಜಕೀಯ ಹಸ್ತಕ್ಷೇಪ ಮಂಗಳೂರಿನ ಪೋಲಿಸ್ ಇಲಾಖೆಯ ನ್ಯಾಯಾನ್ಯಾಯ ವಿಚಕ್ಷಣತಾ ಗುಣವನ್ನು ಸಂಪೂರ್ಣವಾಗಿ ಕೊಂದಿದೆ. ಹೋಮ್‍ಸ್ಟೇ ಘಟನೆಗೆ ತನ್ನ ಕರ್ತವ್ಯ ನಿರ್ವಹಣೆಯ ಕಾರಣದಿಂದಾಗಿ ಕೇವಲ ಸಾಕ್ಷಿಯಾಗಿದ್ದ ಪತ್ರಕರ್ತರೊಬ್ಬರನ್ನು ಅಪರಾಧಿ ಎಂದು ಆರೋಪಿಸಿ ನ್ಯಾಯಾಲಯಕ್ಕೆ ತಪ್ಪು ಚಾರ್ಜ್‍ಶೀಟ್ ಸಲ್ಲಿಸುವುದು ಪೋಲಿಸ್ ಇಲಾಖೆಗೆ ಮತ್ತು ಕರ್ನಾಟಕದ ನ್ಯಾಯವ್ಯವಸ್ಥೆಗೆ ಯಾವ ರೀತಿಯ ಘನತೆಯನ್ನೂ ತಂದುಕೊಡುವುದಿಲ್ಲ. ಈಗಾಗಲೆ ಅದು ಘನತೆ ಮತ್ತು ಕರ್ತವ್ಯ ನಿರ್ವಹಣೆ ವಿಷಯದಲ್ಲಿ ಗಂಭೀರ ಕೊರತೆ ಅನುಭವಿಸುತ್ತಿದೆ. ಆದರೂ ಪೋಲಿಸ್ ಇಲಾಖೆ ಮತ್ತು ಗೃಹ ಸಚಿವಾಲಯದಲ್ಲಿ ಇದರ ಬಗ್ಗೆ ಯಾವುದೇ ರೀತಿಯ ಆತ್ಮವಿಮರ್ಶೆ ಆಗುತ್ತಿಲ್ಲ. ನಾಚಿಕೆಗೇಡು. ರಾಜ್ಯದ ಗೃಹ ಸಚಿವರ ಮೇಲೆಯೇ ಅನೇಕ ಆರೋಪಗಳಿವೆ. ಲೋಕಾಯುಕ್ತ ನ್ಯಾಯಾಲಯದಲ್ಲಿ ಅವರ ವಿರುದ್ಧ ಮೊಕದ್ದಮೆಗಳಿವೆ. ಅವರ ಕೈಕೆಳಗಿನ ಅಧಿಕಾರಿಗಳೇ ಅವರ ವಿಚಾರಣೆ ನಡೆಸಿ ಕ್ಲೀನ್ ಚಿಟ್ ನೀಡುತ್ತಾರೆ. ಬೆಂಗಳೂರಿನ ಲೋಕಾಯುಕ್ತ ಎಸ್‌ಪಿ ಮೇಲೆಯೇ ಒಂದು ಕರ್ತವ್ಯಲೋಪ ಮತ್ತು ಮಾಹಿತಿಸೋರಿಕೆಯ ಮೊಕದ್ದಮೆ ಹೂಡಲಾಗಿದ್ದು ಈಗ ಅವರ ಮೇಲೆಯೇ ತನಿಖೆ ಮಾಡಿ ವರದಿ ಸಲ್ಲಿಸುವಂತೆ ಲೋಕಾಯುಕ್ತ ನ್ಯಾಯಾಲಯ ಆದೇಶ ನೀಡಿದೆ. ಇನ್ನು ಕಾನೂನು ಉಲ್ಲಂಘಿಸುವ, ಸೌಹಾರ್ದತೆ ಹಾಳುಮಾಡುವ ಜನರಿಗೆ ಪೋಲಿಸ್ ಇಲಾಖೆ ಕ್ಲೀನ್ ಚಿಟ್ ನೀಡಿ ಅವರನ್ನು ರಕ್ಷಿಸುತ್ತಿದೆ. ಇದೇ ಮಂಗಳೂರಿನ ಕಲ್ಲಡ್ಕ ಪ್ರಭಾಕರ್ ಭಟ್ ಎನ್ನುವ ಫ್ಯಾಸಿಸ್ಟ್ ಮನೋಭಾವದ ವ್ಯಕ್ತಿಯೊಬ್ಬರು ಮಾಡಿದ ಭಾಷಣದಲ್ಲಿ ಯಾವುದೇ ಪ್ರಚೋದನಾಕಾರಿ ಅಂಶಗಳಿಲ್ಲ ಎಂದು ಅವರ ಪರ ನೀಡಿದ್ದ ಕ್ಲೀನ್ ಚಿಟ್‌ಗೆ ಸ್ವತಃ ಹೈಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದೆ.

ಒಟ್ಟಿನಲ್ಲಿ ರಾಜ್ಯ ಕಾನೂನು-ನ್ಯಾಯ-ನೀತಿ-ಮೌಲ್ಯಗಳ ವಿಚಾರಕ್ಕೆ ತಳವಿಲ್ಲದ ಪಾತಾಳದಲ್ಲಿ ಜಾರುತ್ತಿದೆ.

ಇಂತಹ ಕೆಟ್ಟ ಸಂದರ್ಭದಲ್ಲಿ “ವರ್ತಮಾನ ಬಳಗ” ಪತ್ರಕರ್ತ ನವೀನ್ ಸೂರಿಂಜೆಯವರ ಪರ ನಿಲ್ಲುತ್ತದೆ.

ನಮಸ್ಕಾರ,
ರವಿ ಕೃಷ್ಣಾರೆಡ್ಡಿ

8 thoughts on “ನವೀನ್ ಸೂರಿಂಜೆಗೆ ಜಾಮೀನುರಹಿತ ಅರೆಸ್ಟ್ ವಾರಂಟ್. ವರ್ತಮಾನ ಬಳಗದ ನೈತಿಕ ಬೆಂಬಲ…

  1. ishaq

    We need to stand for this cause.. Police suppose to arrest anti social elements of Mangalore but not reporter.. We need to agitate this throughout karnataka. Police department works under RSS leader direction, So far Kalladka Bhatta not arrested who provokes people by hate speech.. Whoever works for truth they will be behind the bar, is this is the democracy we looking for???

    Reply
  2. anand prasad

    ಮಂಗಳೂರಿನಲ್ಲಿ ‘ಬನಾನ ರಿಪಬ್ಲಿಕ್’ ಮಾದರಿಯ ಆಡಳಿತವಿದೆ ಎಂಬುದು ನವೀನ್ ಸೂರಿಂಜೆಯವರಿಗೆ ಜಾಮೀನುರಹಿತ ವಾರಂಟ್ ಹೊರಡಿಸಿರುವುದನ್ನು ನೋಡಿದಾಗ ಕಂಡುಬರುತ್ತದೆ. ಹಿಂದೆ ಕರಾವಳಿ ಅಲೆ ಸಂಪಾದಕರಿಗೂ ಇಲ್ಲಿನ ನ್ಯಾಯಾಲಯ ಜಾಮೀನುರಹಿತ ವಾರಂಟ್ ಹೊರಡಿಸಿ ಒಂದು ತಿಂಗಳು ಅನ್ಯಾಯವಾಗಿ ಜೈಲಿನಲ್ಲಿ ಇರಿಸಿತ್ತು ಮತ್ತು ರಾಜ್ಯ ಹೈಕೋರ್ಟು ಮೇಲ್ಮನವಿಯಲ್ಲಿ ಇದನ್ನು ಕಾನೂನುಬಾಹಿರ ಎಂದು ತೀರ್ಪು ನೀಡಿ ರಾಜ್ಯ ಸರ್ಕಾರಕ್ಕೆ ಹತ್ತು ಸಾವಿರ ದಂಡ ವಿಧಿಸಿ ಛೀಮಾರಿ ಹಾಕಿತ್ತು. ಹೀಗಿದ್ದರೂ ರಾಜ್ಯ ಸರ್ಕಾರಕ್ಕೆ ಬುದ್ಧಿ ಬರಲಿಲ್ಲ. ಪೋಲೀಸರೇನೋ ರಾಜಕೀಯ ಹಾಗೂ ಕೆಲವು ಸಂಘಟನೆಗಳ ಗುಲಾಮರಂತೆ ಕೆಲಸ ಮಾಡಬೇಕಾಗಿ ಬರಬಹುದು, ಆದರೆ ಸ್ವತಂತ್ರ ನ್ಯಾಯಾಲಯಕ್ಕೆ ಅಂಥ ಪರಿಸ್ಥಿತಿ ಬರಬೇಕಾಗಿಲ್ಲ. ನ್ಯಾಯಾಲಯಗಳು ಹೀಗೆ ಕಾರ್ಯನಿರ್ವಹಿಸಿದರೆ ಮಂಗಳೂರಿನ ನ್ಯಾಯಾಲಯಕ್ಕೆ ಅಂತರರಾಷ್ಟ್ರೀಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಕೆಟ್ಟ ಹೆಸರು ಬರಲಿರುವುದು ಖಚಿತ.

    Reply
  3. ಪ್ರಜೆ

    ಪೊಲೀಸ್ ವ್ಯವಸ್ಥೆ ಬಗ್ಗೆ ಜನ ಯಾವತ್ತೋ ನಂಬಿಕೆ ಕಳೆದುಕೊಂಡಾಗಿದೆ. ಇತ್ತೀಚೆಗೆ ನ್ಯಾಯಾಲಯದ ಮೇಲೂ ಸಾಮಾನ್ಯರು ನಂಬಿಕೆ ಕಳೆದುಕೊಳ್ಳುವಂಥ ತೀರ್ಪುಗಳು ಹೆಚ್ಚಾಗುತ್ತಿವೆ. ನವೀನ್​ ಸೂರಿಂಜೆಯವರು ಪತ್ರಕರ್ತರಾಗಿ ತಮ್ಮ ಕೆಲಸ ನಿರ್ವಹಿಸಿದ್ದಾರೆ. ಅವರೇನೂ ಉಗ್ರವಾದಿ ಚಟುವಟಿಕೆ ನಡೆಸಿಲ್ಲ. ಅವಿವೇಕಿ ಹಿಂದೂವಾದಿಗಳ ಹಾಗೆ ಹುಡುಗಿಯರ ಮೇಲೆ ದೌರ್ಜನ್ಯ ನಡೆಸಿಲ್ಲ. ಹಿಂದುತ್ವವಾದಿ ನಾಯಕರ ಹಾಗೆ ಹುಡುಗರನ್ನು ಉದ್ರೇಕಿಸಿ ಛೂ ಬಿಟ್ಟು ತಮಗೇನೂ ಸಂಬಂಧವಿಲ್ಲದ ಹಾಗೆ ತಲೆಮರೆಸಿಕೊಂಡು ಕೂತಿಲ್ಲ. ಹಾಗಿರುವಾಗ ಜಾಮೀನು ರಹಿತ ವಾರೆಂಟ್ ಹೊರಡಿಸಬೇಕಾದ ಅಗತ್ಯವೇನಿದೆ?
    ಅಸಲಿಗೆ ಅವರ ಕಾರ್ಯವನ್ನು ನ್ಯಾಯಾಂಗ ಶ್ಲಾಘಿಸಬೇಕಿತ್ತು. ಅದು ಬಿಟ್ಟು ಈ ರೀತಿ ವರ್ತಿಸಿರೋದು ಖಂಡನೀಯ.ಜಾಮೀನು ರಹಿತ ವಾರೆಂಟ್ ಹೊರಡಿಸಬೇಕಿರೋದು ಹಿಂದುತ್ವವಾದದ ಹೆಸರಲ್ಲಿ ಸಮಾಜದಲ್ಲಿ ಗಲಭೆ ನಡೆಸುತ್ತಿರೋರಿಗೇ ಹೊರತು ಅದನ್ನ ಬೆಳಕಿಗೆ ತರುವವರಿಗಲ್ಲ.
    ನವೀನ್​ ಸೂರಿಂಜೆಯವರ ಜೊತೆ ನಾನಿದ್ದೇನೆ. ಸತ್ಯ ಗೆಲ್ಲಲಿ.

    Reply
  4. Pingback: ನವೀನ್ ಸೂರಿಂಜೆ ಬಂಧನ… ನಿರಪರಾಧಿಗಳ ಬೆನ್ನತ್ತಿ ಪೋಲಿಸರು… « ವರ್ತಮಾನ – Vartamaana

Leave a Reply to musthafa Cancel reply

Your email address will not be published. Required fields are marked *