ಮತಾಂತರ: ಕೆಲವು ಟಿಪ್ಪಣಿಗಳು

ಪ್ರೊ. ರಹಮತ್ ತರೀಕೆರೆ

1

ಕರ್ನಾಟಕದಲ್ಲಿ ಚರ್ಚ್ ಗಳ ಮೇಲೆ ದಾಳಿಯ ಕಾರ್ಯಕ್ರಮದ ನಂತರ ಮತಾಂತರದ ಚರ್ಚೆನ್ನು ಬಿರುಸಿನಿಂದ ಆರಂಭಿಸಲಾಯಿತು. ಇದರಿಂದ ಎಲ್ಲ ವೈಚಾರಿಕ ಕದನಗಳಲ್ಲಿ ಆಗುವಂತೆ ಒಂದು ಬಗೆಯ ಧ್ರುವೀಕರಣವೂ ಆಯಿತು. ಈ ಚರ್ಚೆಯೊಳಗೆ ಹಲವು ಬಗೆಯ ಪ್ರತಿಕ್ರಿಯೆಗಳು ಹೊರಹೊಮ್ಮಿದವು. ಅವುಗಳಲ್ಲಿ ಮುಖ್ಯವಾದವೆಂದರೆ-

  1. ಮತಾಂತರ ವಿರೋಧಿ ಅಭಿಪ್ರಾಯ. ಇದರ ಪ್ರಕಾರ `ಹಿಂದೂ’ ಎಂಬ ಒಂದು ಅಖಂಡ ಧರ್ಮವಿದೆ. ಹಿಂದೂಗಳು ಮೂಲತಃ ಮುಗ್ಧರು. ಕ್ರೈಸ್ತ ಮತ್ತು ಇಸ್ಲಾಂಗಳು ವಿದೇಶೀ ಧರ್ಮಗಳು. ಇವು ಅವರಿಗೆ ಆಮಿಷ ಇಲ್ಲವೇ ಬಲಾತ್ಕಾರದಿಂದ ಹಿಂದೂಗಳನ್ನು ಸೆಳೆಯುತ್ತಿವೆ. ಇದು ಹೀಗೇ ನಡೆದರೆ ಒಂದು ದಿನ ಹಿಂದೂಗಳು ಅಲ್ಪಸಂಖ್ಯಾತರಾಗುತ್ತಾರೆ. ಆದ್ದರಿಂದ ಮತಾಂತರವನ್ನು ತಡೆಗಟ್ಟಬೇಕು. ಸಾಮಾನ್ಯವಾಗಿ ಹಿಂದುತ್ವವಾದವು ಮಂಡಿಸುವ ಈ ವಾದವು  ಆತಂಕದಿಂದ ಆರಂಭಗೊಂಡು, ಆಕ್ರೋಶ ಮತ್ತು ಸೇಡಿನಿಂದ ಮುಗಿಯುತ್ತದೆ.
  2. ಹಿಂದೂ ಧರ್ಮದಲ್ಲಿ ಕೆಳಜಾತಿಗಳಿಗೆ ಅಪಮಾನವಿದೆ. ಹಾಗೆಂದು ಮತಾಂತರದಿಂದ ದಮನಿತರ ಬಿಡುಗಡೆ ಸಾಧ್ಯವಿಲ್ಲ ಎಂಬ ಅಭಿಪ್ರಾಯ. ಇದರ ಪ್ರಕಾರ, ಮತಾಂತರಗೊಂಡ ಬಳಿಕವೂ ಹೊಸ ಧರ್ಮದಲ್ಲಿ ಮತಾಂತರಿಗಳಿಗೆ ತಾರತಮ್ಯ ಮುಂದುವರೆಯುತ್ತದೆ. ಸಮಾನತೆ ಸಿಕ್ಕುವುದಿಲ್ಲ. ಆದ್ದರಿಂದ ಮೂಲಧರ್ಮದಲ್ಲಿ ಇದ್ದುಕೊಂಡೇ ಹೋರಾಡಬೇಕು. ದಲಿತ ಕವಿ ಸಿದ್ಧಲಿಂಗಯ್ಯ ಅಂಬೇಡ್ಕರರನ್ನು ಕುರಿತು `ಕಪ್ಪುಕ್ಕಿನ ವಜ್ರಗಳನ್ನು ಕಡಿದು ಎಸೆದ ವಜ್ರವೇ, ಬಂಗಾರದ ಕೋಳವೊಕ್ಕ ಮಹಾ ಬೌದ್ಧಭಿಕ್ಷುವೇ’ ಎನ್ನುವಲ್ಲಿ ಈ ಧ್ವನಿ ಇದ್ದಂತಿದೆ.
  3. ಮತಾಂತರ ಎಂಬ ಪರಿಭಾಷೆಯನ್ನೇ ಒಪ್ಪದ ಅಭಿಪ್ರಾಯ. ಇದರ ಪ್ರಕಾರ, ದಲಿತರು ಹಾಗೂ ಬುಡಕಟ್ಟು ಜನರನ್ನು ಹಿಂದೂಗಳೆಂದು ಭಾವಿಸಿ ಈ ಚರ್ಚೆ ಮಾಡಲಾಗುತ್ತಿದೆ. ಆದರೆ ಅವರನ್ನು ಹಿಂದೂಗಳೆಂದು ಸ್ವತಃ ಹಿಂದೂ ಧರ್ಮವೇ ಪರಿಗಣಿಸಿಲ್ಲ; ಅವರನ್ನು ದೂರವಿಟ್ಟಿದೆ. ಇದರ ಜತೆಗೆ ಭಾರತದ ಅನೇಕ ಸಮುದಾಯಗಳು ತಮ್ಮನ್ನು ಹಿಂದುಗಳೆಂದೇ ಕರೆದುಕೊಳ್ಳುವುದಿಲ್ಲ. ಹೀಗಿರುವಾಗ ಅವರು ಹೊಸದೊಂದು ಧರ್ಮ ಸ್ವೀಕರಿಸಿದರೆ ಅದು ಹಿಂದೂ ಧರ್ಮ ಬಿಟ್ಟು ಹೋದರು ಎಂದು ಹೇಗೆ ಹೇಳುವುದು?  ಧರ್ಮರಹಿತ ಜನ ತಮಗೆ ಬೇಕಾದ ಧರ್ಮವನ್ನು ಆರಿಸಿಕೊಳ್ಳುತ್ತಿದ್ದಾರೆ. ವ್ಯಕ್ತಿಯ ಧರ್ಮ ಬದಲಾವಣೆಯ ವಿಷಯವು ಇತರರು ತಲೆಕೆಡಿಸಿಕೊಳ್ಳಬೇಕಾದ ಪ್ರಶ್ನೆಯೇ ಅಲ್ಲ. ಜತೆಗೆ ಇದು ಧಾರ್ಮಿಕ ಸ್ವಾತಂತ್ರ್ಯದ ಪ್ರಶ್ನೆ; ಧರ್ಮ ಬದಲಾವಣೆಯು ಸಂವಿಧಾನ ಕೊಟ್ಟಿರುವ ಹಕ್ಕು. ಜನ ತಮಗೆ ಸಮಾನತೆ ನೆಮ್ಮದಿ ದೊರೆಯುವ ಧರ್ಮಕ್ಕೆ ಹೋಗುವುದನ್ನು ತಡೆಯುವುದು ಸಾಧ್ಯವಿಲ್ಲ. ಈ ಅಭಿಪ್ರಾಯವು ತಾರ್ಕಿಕವಾಗಿ ಸರಿಯಿದೆ. ಆದರೆ ಈ ವಾದಕ್ರಮವು ವೈಯಕ್ತಿಕತೆ ಮತ್ತು ವ್ಯಕ್ತಿವಿಶಿಷ್ಟತೆಗಳು ಒಂದು ಮೌಲ್ಯವಾಗಿರುವ ನಾಗರಿಕ ಸಮಾಜಗಳಲ್ಲಿ, ಕಾನೂನಿನ ಆಡಳಿತವು ಅಂತಿಮವಾಗಿರುವ ದೇಶಗಳಲ್ಲಿ ಅರ್ಥವಾಗುತ್ತದೆ. ಆದರೆ, ರಾಜಕೀಯ ಮುಸುಕಿನಲ್ಲಿ ಧರ್ಮಗಳ ಭೀಕರ ಕದನ ನಡೆಯುವ ಸಮಾಜದಲ್ಲಿ ಇದು ಎಷ್ಟು ಪರಿಣಾಮ ಬೀರುತ್ತದೆಯೋ ತಿಳಿಯದು.
  4. ಮತಾಂತರವೇ ಪರಿಹಾರ ಎಂಬ ಅಭಿಪ್ರಾಯ. ಇದರ ಪ್ರಕಾರ, ಮತಾಂತರ ನಡೆಯಲು ನಿಜವಾದ ಕಾರಣ, ಅನ್ಯ ಧರ್ಮಗಳ ಆಮಿಷ ಅಥವಾ ಬಲಾತ್ಕಾರವಲ್ಲ. ಬದಲಿಗೆ ಸನಾತನ ಹಿಂದೂ ಧರ್ಮದ ಒಳಗಿರುವ ಜಾತಿ ಮತ್ತು ಅಸ್ಪೃಶ್ಯತೆಯ ಕ್ರೌರ್ಯ. ಈ ಮೂಲ ವೈರುಧ್ಯವು ಬಗೆಹರಿಯದೆ ಸಮಾನತೆಯಿಲ್ಲ. ಆದರೆ ಇದು ಬಗೆಹರಿಯುವುದಿಲ್ಲ. ಇದರಿಂದ ಮತಾಂತರ ಅನಿವಾರ್ಯ. ಅದರಲ್ಲೂ ದಲಿತರು ಬೌದ್ಧಧರ್ಮಕ್ಕೆ ಹೋಗುವುದು, ಮರಳಿ ಮಾತೃಧರ್ಮಕ್ಕೆ ಹೋಗುವುದಾಗಿದೆ. ಈ ವಾದವು ಮತಾಂತರವನ್ನು ದೇಶಕ್ಕೆ ಅಪಾಯ ಎಂದು ತಿಳಿಯುವುದಿಲ್ಲ. ಇದಕ್ಕೆ ಅಮೂರ್ತವಾದ ಧರ್ಮವು ಅಷ್ಟು ಮುಖ್ಯ ಸಂಗತಿಯಲ್ಲ. ಬದಲಿಗೆ ಜನ ಸ್ವಾಭಿಮಾನದಿಂದ ಬದುಕುವ ಪರಿಸರ ಮುಖ್ಯ. ಇದರ ಪ್ರಕಾರ ಧರ್ಮಸ್ವೀಕಾರವು ಧಾರ್ಮಿಕ ಸಂಗತಿಯಲ್ಲ. ಅದು ಪ್ರತಿಭಟನೆಯ ರಾಜಕೀಯ ಕ್ರಿಯೆ ಕೂಡ.

2

ಮೇಲಿನ ಅಭಿಪ್ರಾಯಗಳಿಗೆ ಅವುಗಳದ್ದೇ ಆದ ದೃಷ್ಟಿಕೋನಗಳಿವೆ. ತರ್ಕವಿದೆ. ಸಮರ್ಥನೆಗಳಿವೆ. ಆದರೆ ಮತಾಂತರ ಕುರಿತು ಇನ್ನೂ ಕೆಲವು ಸಮಸ್ಯೆ ಮತ್ತು ಸಂಗತಿಗಳು ಬಾಕಿ ಉಳಿಯುತ್ತವೆ. ಇವುಗಳನ್ನು ಅರಿಯಬೇಕಾದರೆ, ಮತಾಂತರವನ್ನು ಕೇವಲ ಧಾರ್ಮಿಕ ಸಾಮಾಜಿಕ ಪ್ರಶ್ನೆಯನ್ನಾಗಿ ಮಾತ್ರವಲ್ಲ, ಒಂದು ಚಾರಿತ್ರಿಕವಾದ ಮತ್ತು ಸಾಂಸ್ಕೃತಿಕ ಪ್ರಶ್ನೆಯನ್ನಾಗಿ ಕೂಡ ನೋಡಬೇಕಾಗುವುದು. ಹಾಗೆ ನೋಡಲು ಈ ಟಿಪ್ಪಣಿಗಳಲ್ಲಿ ಯತ್ನಿಸಲಾಗಿದೆ. ಚರ್ಚೆಯನ್ನು ಆರಂಭಿಸುವ ಮುನ್ನ ಕೆಲವು ಪ್ರಶ್ನೆಗಳನ್ನು ಕೇಳಿಕೊಳ್ಳಬಹುದು.

  1. ಮತಾಂತರವನ್ನು ಮಾಡಲಾಗುತ್ತಿದೆಯೋ ಅಥವಾ ಜನ ಧರ್ಮ ಬದಲಾವಣೆ ಮಾಡಿಕೊಳ್ಳುತ್ತಿದ್ದಾರೆಯೋ? ‘ಮಾಡಲಾಗುತ್ತಿದೆ’ ಎನ್ನುವವರು ಜನರನ್ನು ಭಾವನೆಗಳಿಲ್ಲದ ನಿರ್ಜೀವ ವಸ್ತುಗಳೆಂಬಂತೆ ಗ್ರಹಿಸಿರುವರು. ಅವರ ಪಾಲಿಗೆ ಮತಾಂತರ ಮಾಡುವವರು ಪಿತೂರಿಗಾರರು. ಆದರೆ ಜನರೇ ಧರ್ಮ ಬದಲಾವಣೆ ಮಾಡಿಕೊಳ್ಳುತ್ತಿದ್ದಾರೆ ಎಂದು ಗ್ರಹಿಸಿದರೆ, ಅವರು ತಮ್ಮ ಹಕ್ಕನ್ನು ಚಲಾಯಿಸುತ್ತಿದ್ದಾರೆ ಎಂಬರ್ಥ ಹೊಳೆಯುತ್ತದೆ. ಇವೆರಡರಲ್ಲಿ ಯಾವುದು ನಿಜ? ಅಥವಾ ಇವೆರಡೂ ಆಯಾಮಗಳು ಒಟ್ಟಿಗೇ ನಡೆಯುತ್ತಿವೆಯೇ?
  2. ಮತಾಂತರವನ್ನು ಬೌದ್ಧ, ಕ್ರೈಸ್ತ, ಇಸ್ಲಾಂ ಧರ್ಮಗಳು ಮಾಡುತ್ತಿವೆ ಎನ್ನಲಾಗುತ್ತದೆ. ಆದರೆ ಹಿಂದೂ ಎನ್ನುವ ಧರ್ಮ ಕೂಡ ಯಾಕೆ ಪ್ರತಿಯಾಗಿ ಈ ಕೆಲಸವನ್ನು ಮಾಡುತ್ತಿಲ್ಲ? ಬೇರೆ ಧರ್ಮದಿಂದ ಜನರನ್ನು ಒಳಗೆ ತರಲು ಅದರಲ್ಲಿ ಅವಕಾಶವಿಲ್ಲವೇ? ಅಥವಾ ಹಿಂದೂ ಧರ್ಮದ ರಕ್ಷಣೆಯ ಕೆಲಸವನ್ನು ಸ್ವಯಂ ಹೊತ್ತುಕೊಂಡಿರುವ ಹಿಂದುತ್ವವು ಕೆಳಜಾತಿ ಜನರ ಸಾಂಪ್ರದಾಯಿಕ ಕುಲನಿಷ್ಠವಾದ ಧಾರ್ಮಿಕ ನಿಷ್ಠೆಯನ್ನು ಬದಲಿಸುವಲ್ಲಿ ತೊಡಗಿದ್ದು ಮತಾಂತರವಲ್ಲವೇ?
  3. ಕ್ರೈಸ್ತ ಮತ್ತು ಇಸ್ಲಾಂ ಧರ್ಮಗಳನ್ನು ಏಕರೂಪಿ ಎಂದು ಭಾವಿಸಲಾಗಿದೆ. ಆದರೆ ಅವು ಬಹುರೂಪಿಯಾಗಿದ್ದು, ಅವುಗಳ ಒಳಗೇ ಅನೇಕ ಬಣಗಳ ನಡುವೆ ಭಿನ್ನಮತಗಳಿವೆ. ಸಂಘರ್ಷಗಳಿವೆ. ಉದಾಹರಣೆಗೆ  ಮುಸ್ಲಿಮರಲ್ಲೇ ಇರುವ ಕೆಲವು ತಬ್ಲೀಗ್, ಅಹಲೆ ಹದೀಸ್, ಜಮಾತೆ ಇಸ್ಲಾಮಿ ಮುಂತಾದ ಪಂಥಗಳು, ಈಗಿರುವ ಮುಸ್ಲಿಮರನ್ನೇ ತಮ್ಮ ಪಂಥದ ಇಸ್ಲಾಮಿನ ರೂಪಕ್ಕೆ ಪರಿವರ್ತನೆ ಮಾಡುತ್ತಿವೆ. ಕ್ರೈಸ್ತರು ಮತಾಂತರದಲ್ಲಿ ತೊಡಗಿದ್ದಾರೆ ಎಂದು ಹಿಂದುತ್ವವಾದವು ಆಪಾದಿಸಿದಾಗ, ಕರಾವಳಿಯ ರೋಮನ್ ಕೆಥೋಲಿಕರು `ಮತಾಂತರ ತಪ್ಪು. ಅದನ್ನು ನಾವು ಮಾಡುವುದಿಲ್ಲ. ಅದನ್ನು ಮಾಡುವವರು ಪ್ರಾಟೆಸ್ಟಂಟರು’ ಎಂದರು. ಈ ಬಣಗಳ ಸಂಘರ್ಷವನ್ನು ಹೇಗೆ ಅರ್ಥ ಮಾಡಿಕೊಳ್ಳುವುದು?
  4. ಭಾರತದ ಅವಧೂತ ಆರೂಢ ಎನ್ನಲಾಗುವ ಗುರುಪಂಥಗಳು ಶತಮಾನದಿಂದ ಎಲ್ಲ ಜಾತಿಧರ್ಮಗಳ ಜನರಿಗೆ ದೀಕ್ಷೆಯ ಮೂಲಕ ಹೊಸ 1.ಧಾರ್ಮಿಕ ಗುರುತನ್ನು ಕೊಡುವ ಕೆಲಸ ಮಾಡಿಕೊಂಡು ಬಂದಿವೆ. ಸಾಮಾಜಿಕ ಸಂಚಲನೆಯಲ್ಲಿ ಈ ದೀಕ್ಷಾಪಂಥಗಳ ಸ್ಥಾನ ಯಾವುದು?
  5. ಧರ್ಮ ಪರಿವರ್ತನೆಯು ನಿನಿರ್ದಿಷ್ಟ ಸಮುದಾಯದಲ್ಲಿ ನಡೆದಾಗ, ಅದು ಇಡೀ ಸಮುದಾಯದ ಆಶೋತ್ತರವಾಗಿರುತ್ತದೆಯೋ ಅಥವಾ ಆ ಸಮುದಾದಯಲ್ಲೇ ನಿರ್ದಿಷ್ಟ ವರ್ಗದ ಆಶಯವಾಗಿರುತ್ತದೆಯೋ? ಯಾಕೆಂದರೆ, ಬೌದ್ಧಧರ್ಮದ ದೀಕ್ಷೆ ತೆಗೆದುಕೊಳ್ಳುವ ವಿಷಯದಲ್ಲಿ ಕೆಳಸ್ತರದ ಜನರಿಗಿಲ್ಲದ ತವಕ ಮತ್ತು ತುರ್ತು ನಗರವಾಸಿ ಆಧುನಿಕ ಮತ್ತು ಮಧ್ಯಮವರ್ಗದವರಲ್ಲಿ ಹೆಚ್ಚು ಕಾಣುತ್ತದೆ. ಅದರಲ್ಲೂ ದಲಿತ ಮಧ್ಯಮವರ್ಗಕ್ಕೆ ಧರ್ಮ ಬದಲಾವಣೆಯು ಸಾಂಸ್ಕೃತಿಕ ಗುರುತಿನ ಪ್ರಶ್ನೆಯಾಗಿದ್ದರೆ, ಕೆಳಸ್ತರದಲ್ಲಿರುವ ದಲಿತರಿಗೆ ಧರ್ಮ ಬದಲಾವಣೆಯು ಅಷ್ಟು ಆದ್ಯತೆಯ ಸಂಗತಿಯಾಗಿಲ್ಲ. ಇದನ್ನು ಹೇಗೆ ನೋಡುವುದು?
  6. ಧರ್ಮದ ಪ್ರಸಾರಕ್ಕಾಗಿಯೇ ನಿಯಮಿತರಾದ ಮಿಶನರಿಗಳ ಹಾಗೆ, ತಮ್ಮ ದಿನನಿತ್ಯದ ಬದುಕಿಗಾಗಿ ಹೋರಾಡುವ ಮುಸ್ಲಿಮರು, ನಿಜವಾಗಿಯೂ ಮತಾಂತರದ ಮೂಲಕ ತಮ್ಮ ಧರ್ಮದ ಸಂಖ್ಯೆಯನ್ನು ಹೆಚ್ಚಿಸುವ ವಿಷಯದಲ್ಲಿ ಆಸಕ್ತರಾಗಿರುತ್ತಾರೆಯೇ?
  7. ಭಾರತದಲ್ಲಿ ಬಹುತೇಕ ಜಾತಿಗಳಿಗೆ ಹಾಗೆ ಇಸ್ಲಾಂ, ಕ್ರೈಸ್ತ, ಬೌದ್ಧಗಳ ಹಾಗೆ ಒಂದು ಧರ್ಮವಿಲ್ಲ. ಜಾತಿಕಟ್ಟುಗಳೇ ಅವುಗಳ ಧರ್ಮಗಳು. ದೈನಿಕ ಬದುಕಿನಲ್ಲಿ ಜಾತಿಕುಲ ವಿಶಿಷ್ಟವಾದ ಆಚರಣೆಗಳೇ ಅವರನ್ನು ನಿಯಂತ್ರಿಸುವುದು. ಎಂತಲೇ ಜನರಿಗೆ ಮತವನ್ನು ಕೇಳಿದರೆ ಅವರು ತಮ್ಮ ಕುಲ ಜಾತಿಯ ಹೆಸರು ಹೇಳುತ್ತಾರೆ. ಆದ್ದರಿಂದ ಹೊಸ ಧರ್ಮ ಸ್ವೀಕಾರವನ್ನು ಕುಲದಿಂದ ಧರ್ಮಕ್ಕೆ ಹೋಗುವುದು ಎಂದು ಕರೆಯಬಹುದೇ?
  8. ಧರ್ಮ ಪರಿವರ್ತನೆ ಆದ ಜನರು, ತಮ್ಮ ಹಿಂದಿನ ಧರ್ಮ ಅಥವಾ ಕುಲದ ಆಚರಣೆಗಳಿಂದ ಹಾಗೆ ತಟ್ಟನೆ ಕಡಿದುಕೊಳ್ಳುವುದಿಲ್ಲ. ಅವನ್ನು ಬೇರೆಬೇರೆ ರೂಪದಲ್ಲಿ ಮುಂದುವರೆಸುತ್ತಾರೆ. ಹೀಗಾಗಿ ಧರ್ಮ ಪರಿವರ್ತನೆ ಎನ್ನುವುದು ಕೇವಲ ಧಾರ್ಮಿಕ ಎನ್ನಬಹುದಾದ ರೂಪವನ್ನು ಕೆಲಮಟ್ಟಿಗೆ ಬದಲಿಸಬಹುದೇ ಹೊರತು ನಿತ್ಯ ಬದುಕಿನಲ್ಲಿ ಅನ್ವಯವಾಗುವ ಸಾಮಾಜಿಕವಾದ ಆಚರಣ ಲೋಕವನ್ನಲ್ಲ. ಈಗಲೂ ಮುಸ್ಲಿಮರಲ್ಲಿ ಕ್ರೈಸ್ತರಲ್ಲಿ ಇರುವ ಸಾಮಾಜಿಕ ನಡಾವಳಿಗಳು ಅರಬ್ ದೇಶದ ಇಲ್ಲವೇ ರೋಮಿನ ನಡಾವಳಿಗಳಲ್ಲ. ಅವರ ಧರ್ಮ ಪರಿವರ್ತನೆಯ ಪೂರ್ವದ ಸಮಾಜದವು. ದಲಿತರು ಬೌದ್ಧರಾದ ಬಳಿಕವೂ ದಲಿತ ಸಂಸ್ಕೃತಿಯ ಅನೇಕ ಆಚರಣೆಗಳನ್ನು ಬಿಟ್ಟುಕೊಟ್ಟಿಲ್ಲ. ಈ ಹಿನ್ನೆಲೆಯಲ್ಲಿ ಮತಾಂತರವನ್ನು ಹೇಗೆ ನೋಡುವುದು?
  9. ಜನರು ಧರ್ಮ ಸ್ವೀಕಾರವನ್ನು ಅದು ತಮಗೆ ಬೇಕಾಗಿದೆ ಎಂದು ಆಕರ್ಷಣೆಯಿಂದ ಮಾಡುತ್ತಾರೊ ಅಥವಾ ತಮ್ಮನ್ನು ಸಮಾನವಾಗಿ ಪರಿಗಣಿಸದ ಧರ್ಮವನ್ನು ಧಿಕ್ಕರಿಸುವುದಕ್ಕೆಂದು ಮಾಡುತ್ತಾರೋ? ಅಂದರೆ ಜನ ಒಂದು ಧರ್ಮವನ್ನು ಅದೊಂದು ಪರ್ಯಾಯ  ಎಂದು ಸ್ವೀಕರಿಸದೆ, ತಮ್ಮ ಧಾರ್ಮಿಕ, ಸಾಮಾಜಿಕ, ಆರ್ಥಿಕ ದಮನಗಳಿಂದ ಬಿಡುಗಡೆ ಪಡೆಯುವ ಆಶಯದಲ್ಲಿ  ಸ್ವೀಕರಿಸುತ್ತಾರೆ. ಇಲ್ಲಿ ಕೆಲಸ ಮಾಡುವ ಮನೋಧರ್ಮ, ತಮ್ಮ ದಮನಕ್ಕೆ ಕಾರಣವಾಗಿರುವ ವ್ಯವಸ್ಥೆಯನ್ನು ಧಿಕ್ಕರಿಸುವಿಕೆ. ನಿರ್ದಿಷ್ಟ ಧರ್ಮವು ಬೇಕಾಗಿ ಸ್ವೀಕರಿಸುವುದಕ್ಕೂ, ನಿರ್ದಿಷ್ಟ ಧರ್ಮವು ಬೇಡವಾಗಿರುವುದಕ್ಕೆ ಅನಿವಾರ್ಯವಾಗಿ ಬೇರೆಯದನ್ನು ಸ್ವೀಕರಿಸುವುದಕ್ಕೂ ತಾತ್ವಿಕವಾಗಿ ವ್ಯತ್ಯಾಸವಿದೆಯಷ್ಟೆ. ಈ ನೇತ್ಯಾತ್ಮಕ ಆಯ್ಕೆಯನ್ನು ಹೇಗೆ ಅರ್ಥಮಾಡಿಕೊಳ್ಳುವುದು?
  10. ಜಾತಿಪದ್ಧತಿಯ ಧರ್ಮದ ವಿರುದ್ಧ ಪ್ರತಿಭಟಿಸಲು ದಲಿತರು ಮತ್ತು ಕೆಳಜಾತಿಯವರು ಮತಾಂತರವನ್ನು ಒಂದು ಬೆದರಿಕೆಯ ಅಸ್ತ್ರವನ್ನಾಗಿ ಬಳಸುತ್ತಿದ್ದು, ಬೌದ್ಧರ, ಮುಸ್ಲಿಮರ ಮತ್ತು ಕ್ರೈಸ್ತರ ಮೇಲೆ ಹಿಂದುತ್ವವಾದಿಗಳ ದ್ವೇಷವನ್ನು ಪರೋಕ್ಷವಾಗಿ ಹೆಚ್ಚಿಸುವ ಕೆಲಸ ಮಾಡುತ್ತಿದ್ದಾರೆಯೇ?
  11. ದೀಕ್ಷೆಯ ಮೂಲಕ ಹೊಸ  ಧಾರ್ಮಿಕ ಗುರುತನ್ನು ಕೊಡುವ ಮತಗಳಲ್ಲೂ ಸಾಮಾನ್ಯವಾಗಿ ಅನ್ಯಧರ್ಮದ ಟೀಕೆಯ ಅಂಶ ಸಹಜವಾಗಿರುತ್ತದೆ. ಬೇರೆ ಧರ್ಮಗಳ ಬಗ್ಗೆ ಸಹನೆಯೇ ಇಲ್ಲದ ಅನೇಕ ಮಿಶನರಿಗಳು, ಮುಸ್ಲಿಂ ಮೂಲಭೂತವಾದಿಗಳು  ಸಾಕಷ್ಟು ಇದ್ದಾರೆ. ಜತೆಗೆ ಏಕದೇವತಾವಾದಿ ಧರ್ಮಗಳಲ್ಲಿ ಈ `ಅನ್ಯಮತ ನಿಂದೆ’ಯ ಆಯಾಮ ಸಹಜವಾಗಿರುತ್ತದೆ. ಹಿಂದುತ್ವವಾದಿಗಳಲ್ಲಿರುವ `ಅನ್ಯಧರ್ಮ’ದ ಅಸಹನೆಯು ಭಾರತದ ಬಹುಧರ್ಮಿಯ ಸಮಾಜದಲ್ಲಿ  ಅಪಾಯಕರ ಸಂಗತಿ ಆಗಿರುವಂತೆ, ಧರ್ಮ ಪರಿವರ್ತನೆಗೆ ಅವಕಾಶ ಕಲ್ಪಿಸುವವರಲ್ಲಿ ಇರುವ ಈ  ಅಸಹನೆಯ ಅಂಶವನ್ನು ಹೇಗೆ ನೋಡಬೇಕು?
  12. ಯಾಕೆ ಭಾರತದಲ್ಲಿ ಮತಾಂತರ ಎನ್ನಲಾಗುವ ಧರ್ಮಪರಿವರ್ತನೆ ಅಥವಾ ಧಮ್ಮದೀಕ್ಷೆಯ ಕೆಲಸವು ಅಲ್ಪಸಂಖ್ಯಾತರಾಗಿರುವ ಉಚ್ಚಜಾತಿಗಳ ಪಾಲಿಗೆ ಒಂದು ರಾಷ್ಟ್ರೀಯ ಸಮಸ್ಯೆಯಾಗಿದೆ ಮತ್ತು ನೋವು ಆಕ್ರೋಶಗಳ ಸಂಗತಿಯಾಗಿದೆ? ಆದರೆ ಬಹುಸಂಖ್ಯಾತ ಕೆಳಜಾತಿಯವರಿಗೆ ಇದೊಂದು ಸಮಸ್ಯೆಯೇ ಆಗಿಲ್ಲ ಮತ್ತು ಒಂದು ಪರಿಹಾರದ ಸಂಗತಿಯಾಗಿದೆ? ಧರ್ಮರಕ್ಷಣೆಯ ಹೊಣೆಯನ್ನು ಉಚ್ಚಜಾತಿಯವರ ಮೇಲೆ ಯಾರು ಹೊರಿಸಿರುವರು ಅಥವಾ ಅವರೇ ಯಾಕೆ ಹೊತ್ತುಕೊಂಡಿರುವರು.

ಮೇಲಿನ ಪ್ರಶ್ನೆಗಳಿಗೆಲ್ಲ ಉತ್ತರ ಹುಡುಕುತ್ತ ಹೊರಟರೆ, ಮತಾಂತರ ಎನ್ನುವುದು ಹಿಂದುತ್ವವಾದವು ಹೇಳುವಷ್ಟು  ಸರಳವಾದ ವಿದ್ಯಮಾನವಲ್ಲ ಎಂದು ಹೊಳೆಯುತ್ತದೆ. ಸಮಸ್ಯೆಯೆಂದರೆ, ಹಿಂದುತ್ವವಾದವು ಇಡೀ ಸಮಸ್ಯೆಯನ್ನು ವೈಚಾರಿಕವಾಗಿ ಸಿದ್ಧಾಂತದ ನೆಲೆಯಲ್ಲಿ ಗ್ರಹಿಸಿದೆಯೇ ಹೊರತು ನಿತ್ಯ ಬದುಕಿನ ಮೂರ್ತ ವಾಸ್ತವಿಕ ವಿವರಗಳಲ್ಲಿ ಅಲ್ಲ.  ಸದ್ಯದ ಮತಾಂತರ ಚರ್ಚೆಯಲ್ಲಿ ಹಿಂದುತ್ವವಾದವು ಮತ್ತು ಬಹುಮಟ್ಟಿಗೆ ಅದರ ವಿರೋಧಿಗಳು ಬಳಸುತ್ತಿರುವ `ಧರ್ಮ’, `ಮತಾಂತರ’ ಮುಂತಾದ ಶಬ್ದಗಳು ಮೂಲತಃ ಹಿಂದುತ್ವವಾದದ ಅರ್ಥ ಮತ್ತು ದೃಷ್ಟಿಕೋನವನ್ನೇ ಒಳಗೊಂಡಿವೆ. ಉದಾಹರಣೆಗೆ, `ಮತಾಂತರ’ ಶಬ್ದವು  ದೇಶಾಂತರ, ಸ್ಥಳಾಂತರಗಳ ಹಾಗೆ ಮೂಲಸ್ಥಾನವನ್ನು ಬಿಟ್ಟು ಇನ್ನೊಂದೆಡೆಗೆ ಹೋಗುವುದು ಎಂಬರ್ಥವನ್ನು ಧ್ವನಿಸುತ್ತದೆ. ಆದರೆ ದಲಿತರು ತಮ್ಮನ್ನು ಹಿಂದೂಗಳೆಂದು ತಿಳಿದಿಲ್ಲ ಮತ್ತು ಬೌದ್ಧ ಧರ್ಮಕ್ಕೆ ಹೋಗುವುದನ್ನು ಅವರು `ಮರಳಿ ಮನೆಗೆ’ ಎಂದು ಭಾವಿಸಿದ್ದಾರೆ. ಆದ್ದರಿಂದ, ಹಿಂದುತ್ವವಾದವು ರೂಪಿಸಿರುವ `ಗೋಮಾಂಸ’, `ದೇಶಭಕ್ತಿ’, `ಭಾರತೀಯ ಸಂಸ್ಕೃತಿ’ ಮುಂತಾದ ರಾಜಕೀಯ ಪರಿಭಾಷೆಗಳಂತೆ `ಮತಾಂತರ’ ಎಂಬ ಪರಿಭಾಷೆಯನ್ನೇ ಪ್ರಶ್ನಿಸಬೇಕಿದೆ ಮತ್ತು ವಿಸರ್ಜಿಸಬೇಕಿದೆ.  ತಾತ್ವಿಕ ಚರ್ಚೆ ಯಲ್ಲಿ ಬಳಸುವ ಪರಿಭಾಷೆ ಮತ್ತು ಪರಿಕಲ್ಪನೆಗಳು ದೃಷ್ಟಿಕೋನವನ್ನೇ ನಿರ್ದೇಶಿಸುತ್ತಿರುತ್ತವೆ. ಆದ್ದರಿಂದ  ಕನ್ನಡದಲ್ಲಿ ಧರ್ಮದ ಚರ್ಚೆಗೆ ಪರ್ಯಾಯ ಪರಿಭಾಷೆಯನ್ನೇ ರೂಪಿಸಿಕೊಳ್ಳುವ ಅಗತ್ಯವಿದೆ.

3

ನಮ್ಮ ಸಮಾಜದಲ್ಲಿ `ಧಾರ್ಮಿಕ’ ಎನ್ನಲಾಗುವ ಲೋಕದಲ್ಲಿ ಸಂಚಲನಗಳು ಮೂರು ಮಾದರಿಯಲ್ಲಿ ನಡೆಯುತ್ತಿವೆ. ಅವನ್ನು ಹೊಸಧರ್ಮದ ಸ್ವೀಕಾರ, ತಾತ್ವಿಕ ಸೆಳೆತ, ದೀಕ್ಷೆ ಹಾಗೂ ಮತೀಯವಾದಿ ಹೇರಿಕೆ ಎಂದು ಕರೆಯಬಹುದು.

1. ಧರ್ಮಸ್ವೀಕಾರ: ವ್ಯಕ್ತಿ ಇಲ್ಲವೇ ಸಮುದಾಯಗಳು ತಮಗೆ ಇಷ್ಟವೆನಿಸಿದ ಧರ್ಮವನ್ನು ಸ್ವೀಕರಿಸುವುದನ್ನು ಧರ್ಮಸ್ವೀಕಾರ ಎನ್ನಬಹುದು. ಭಾರತದಲ್ಲಿ  ಜನರು ಸಾಮಾನ್ಯವಾಗಿ ಸ್ವೀಕರಿಸುವ ಧರ್ಮಗಳೆಂದರೆ ಬೌದ್ಧ, ಜೈನ, ಇಸ್ಲಾಂ, ಕ್ರೈಸ್ತ, ಸಿಖ್, ಲಿಂಗಾಯತ. ಗಮನಾರ್ಹವೆಂದರೆ, ಇವುಗಳಲ್ಲಿ ಹೆಚ್ಚಿನವು, ವೇದ ಪ್ರಮಾಣವನ್ನು, ಸವರ್ಣೀಯರ ಸಾಮಾಜಿಕ ಯಜಮಾನಿಕೆಯನ್ನು ಒಪ್ಪದ ಧರ್ಮಗಳಾಗಿರುವುದು. ಕೆಲವು ಗುಡಿಸಂಸ್ಕೃತಿ ಒಪ್ಪದೆ ನಿರ್ಗುಣ ದೈವೋಪಾಸನೆ ಮಾಡುತ್ತವೆ.  ಬೌದ್ಧರು ಮತ್ತು ಜೈನರು ಸಾಕಷ್ಟು ಬ್ರಾಹ್ಮಣೀಕರಣಗೊಂಡಿದ್ದರೂ, ವಿಗ್ರಹಾರಾಧನೆಯು ಅವರಲ್ಲಿ ಬಂದಿದ್ದರೂ, ತಾತ್ವಿಕವಾಗಿ ಅವು ನಾಸ್ತಿಕ ಧರ್ಮಗಳು. ಸಾಮಾನ್ಯವಾಗಿ ಏಕದೇವೋಪಾಸಕ ಆಗಿರುವ ಈ ಧರ್ಮಗಳ ಸ್ಥಾಪಕರು ಪುರಾಣದ ದೇವತೆಗಳಲ್ಲ. ಚಾರಿತ್ರಿಕ ಪುರುಷರು. ಕೆಲವು ವರ್ಗಗಳು ದೇವರು ಧರ್ಮಗಳನ್ನು ಸಮುದಾಯವನ್ನು ವಂಚಿಸಲು  ಬಳಸುತ್ತಿವೆಯೆಂದೇ ಬುದ್ಧ ದೇವರಿಲ್ಲದ ಧರ್ಮವನ್ನು ಸ್ಥಾಪಿಸಿದನು. ಬಸವಣ್ಣ ಗುಡಿ ಸಂಸ್ಕೃತಿಯನ್ನು ನಿರಾಕರಿಸಿದನು. ಗಾಂಧೀಜಿ ಗುಡಿ ಪ್ರವೇಶದ ಕಾರ್ಯಕ್ರಮ ಹಮ್ಮಿಕೊಂಡರು.ನಾರಾಯಣ ಗುರುಗಳು ಪರ್ಯಾಯ ಗುಡಿ ನಿರ್ಮಾಣದ ಕೆಲಸ ಮಾಡಿದರು. ಎಲ್ಲರೂ ತಮ್ಮದೇ ಆದ ನೆಲೆಯಲ್ಲಿ ಜಾತಿಪದ್ಧತಿಯಿಂದ ಜರ್ಜರಿತವಾಗಿದ್ದ ಹಿಂದೂ ಧರ್ಮವನ್ನು ಸುಧಾರಿಸಲು ಯತ್ನಿಸಿದರು. ಈ ಹಿನ್ನೆಲೆಯಲ್ಲಿ ಹುಟ್ಟಿನಿಂದ ಬರುವ ಜಾತಿಗೆ ಅಂಟಿಕೊಳ್ಳದೆ ದೀಕ್ಷೆಯ ಮೂಲಕ ಜನರನ್ನು ಧರ್ಮದ ಕಕ್ಷೆಗೆ ಬರಮಾಡಿಕೊಳ್ಳುವ ಈ `ಧರ್ಮ ಪರಿವರ್ತನೆ’ ಅವಕಾಶವುಳ್ಳ ಧರ್ಮಗಳು ಭಾರತದಲ್ಲಿ ಜನಪ್ರಿಯವಾಗಲು ಕಾರಣ ತನಗೆ ತಾನೇ ಸ್ಪಷ್ಟವಾಗಿದೆ. ಒಂದೊಮ್ಮೆ ಭಾರತದಲ್ಲಿ ಧರ್ಮ ಪರಿವರ್ತನೆಯ ಅವಕಾಶವಿರುವುದು ಕೆಟ್ಟದ್ದು ಎನ್ನುವುದಾದರೆ, ಮೇಲೆ ಉಲ್ಲೇಖಿಸಿದ ಧರ್ಮಗಳನ್ನೆಲ್ಲ ನಿರಾಕರಿಸಬೇಕಾಗುತ್ತದೆ. ಬುದ್ಧ ಬಸವ ಅಲ್ಲಮ ಕಬೀರ ರಾಮಾನುಜ ಮುಂತಾದ ಸಂತರು ಹಿಂದೂ ವಿರೋಧಿಗಳಾಗುವರು; ಈ ಧರ್ಮಗಳಿಗೆ ಸಂಬಂಧಿಸಿದ ಮಹಾಪುರಾಣವನ್ನು, ತ್ರಿಪಿಟಕಗಳನ್ನು, ಗ್ರಂಥಸಾಹೇಬವನ್ನು, ತತ್ವಪದಗಳೆಂದು ಕರೆಯುವ ಆರೂಢ ಸಾಹಿತ್ಯವನ್ನು, ಪಂಪ ರನ್ನ ವಡ್ಡಾರಾಧನೆ ಮುಂತಾದ ಕೃತಿಗಳನ್ನು ಹಾಗೂ ವಚನ ಸಾಹಿತ್ಯವನ್ನು ತಿರಸ್ಕರಿಸಬೇಕಾಗುತ್ತದೆ.

ಆದರೆ ಭಾರತದ ಸಮಾಜದಲ್ಲಿ ನಡೆದಿರುವ ಸಾಮಾಜಿಕ, ಧಾರ್ಮಿಕ  ಸಂಚಲನೆಗಳ ಚರಿತ್ರೆ ಬಲ್ಲ ಯಾರಿಗಾದರೂ ಧರ್ಮ ಪರಿವರ್ತನೆ ಅವಕಾಶವು ಜನರಿಗೆ ಮಾನವೀಯವಾದ ಪರ್ಯಾಯಗಳನ್ನು ಒದಗಿಸಿರುವುದು ಅರಿವಾಗುತ್ತದೆ. ಹಾಗೆಂದು ಧರ್ಮಪರಿವರ್ತನೆ ಇಲ್ಲವೇ  ಧರ್ಮಸ್ವೀಕಾರದಲ್ಲಿ ಧರ್ಮಪ್ರಚಾಕರ ಪಾತ್ರವೇ ಇರುವುದಿಲ್ಲ ಎಂದು ತಿಳಿಯುವಂತಿಲ್ಲ. ಅದು  ಇದ್ದೇ ಇದೆ; ಆದರೆ ಧರ್ಮಸ್ವೀಕಾರಕ್ಕೆ ಅದೂ ಒಂದು ಪ್ರೇರಣೆ ಅಷ್ಟೆ. ಅದಕ್ಕಿಂತ ಮುಖ್ಯವಾದ ಪ್ರೇರಣೆಗಳು ಬೇರೆಯಿವೆ. ಅವೆಂದರೆ- 1. ಕೆಲವು ವ್ಯಕ್ತಿ ಇಲ್ಲವೇ ಕುಟುಂಬಗಳಿಗೆ ಎದುರಾಗುವ ಬಾಳಿನ ಸಂಕಟಗಳು ಕೂಡ ಹೊಸ ಧರ್ಮಸ್ವೀಕಾರಕ್ಕೆ ಕಾರಣವಾಗಿರುವುದು. ಸಂಗೀತ  ನಿರ್ದೇಶಕ ಎ.ಆರ್. ರೆಹಮಾನ್ ಅವರ ಜೀವನದಲ್ಲಿ ಆಗಿರುವುದು ಹೀಗೆ. ಅನೇಕ ಮುಸ್ಲಿಮರು ಕೂಡ ಇಸ್ಲಾಮನ್ನು ಬಿಟ್ಟು ಬೇರೆ ಧರ್ಮಕ್ಕೆ ಹೋಗಲು ಪ್ರೇಮ ವಿವಾಹಗಳು ಕಾರಣವಾಗಿವೆ. 2. ಕೆಳಜಾತಿಯ ಜನರು ತಮ್ಮ ಧರ್ಮಗಳಲ್ಲಿ ಅನುಭವಿಸುತ್ತಿರುವ ಬೇಗೆಗಳು. ಅದರಲ್ಲೂ ದಲಿತ ಮತ್ತು ಕೆಳಜಾತಿಗಳ ವಿಷಯದಲ್ಲಿ ಇದು ನಿಜ. ಇದನ್ನೆಲ್ಲ  ಮತಾಂತರ ಎಂಬ ಪರಿಭಾಷೆಯ ಮೂಲಕ ಅರ್ಥ ಮಾಡಿಕೊಳ್ಳುವುದಕ್ಕೆ ಆಗುವುದಿಲ್ಲ.

2. ತಾತ್ವಿಕ ಸೆಳೆತ: ಇಲ್ಲಿ ಕೆಲವರ ಧರ್ಮ ಪರಿವರ್ತನೆಗೆ ಅನ್ಯರ ಒತ್ತಾಯವೋ, ಪ್ರೇರಣೆಯೋ ಇರುವುದಿಲ್ಲ. ಬದಲಿಗೆ ಆ ವ್ಯಕ್ತಿಗಳು ತಂತಮ್ಮ ಧರ್ಮಗಳಲ್ಲಿ ಇದ್ದುಕೊಂಡೇ ತಮಗಿಷ್ಟವಾದ ಪಂಥದ ಬಗ್ಗೆ ತಾತ್ವಿಕವಾದ ಸೆಳೆತ ಹೊಂದಿರುತ್ತಾರೆ. ಕರ್ನಾಟಕದಲ್ಲಿ ಅನೇಕ ವಿಚಾರವಂತರಲ್ಲಿ ಬೌದ್ಧಧರ್ಮದ ಬಗ್ಗೆ ವಿಚಿತ್ರವಾದ ಆಕರ್ಷಣೆಯಿದೆ. ಅವರು ಭಿಕ್ಕುಗಳಿಂದ ಶಾಸ್ತ್ರೋಕ್ತವಾಗಿ ಧಮ್ಮದೀಕ್ಷೆಯನ್ನೇನೂ ಪಡೆದಿರುವುದಿಲ್ಲ. ಆದರೆ ತಮ್ಮ ಮನೆಗಳಿಗೆ ಮತ್ತು ಮಕ್ಕಳಿಗೆ ಬೌದ್ಧ ಹೆಸರುಗಳನ್ನು ಇಟ್ಟುಕೊಂಡು, ತಾವು ಝೆನ್ಬೌದ್ಧರ ಧ್ಯಾನವನ್ನು ಮಾಡುತ್ತ, ತಮ್ಮ ಚಿಂತನೆ ಬರೆಹದಲ್ಲಿ ಬೌದ್ಧಚಿಂತನೆಯನ್ನು ಅಳವಡಿಸಿಕೊಂಡು ಬದುಕುತ್ತ ಇರುವರು. ಕೆಲವರು ಸೂಫಿ ಇಲ್ಲವೇ ಸಿದ್ಧಪಂಥಕ್ಕೆ ಸಂಬಂಧಿಸಿ ಇದೇ ರೀತಿಯ ಸಂಬಂಧವನ್ನು ಇರಿಸಿಕೊಂಡಿರುವರು. ಸಾಮಾನ್ಯವಾಗಿ ಈ ತಾತ್ವಿಕ ಸೆಳೆತವು ಸಮುದಾಯಗಳ ನೆಲೆಗಿಂತ, ವ್ಯಕ್ತಿ ಇಲ್ಲವೇ ಕುಟುಂಬಗಳ ನೆಲೆಯಲ್ಲಿ ಇರುತ್ತದೆ. ಸಾಮಾನ್ಯವಾಗಿ ಎನ್ಲ್ಶೆಟನ್ಡ್ ಆಗಿರುವ ವ್ಯಕ್ತಿಗಳಿವರು. ಈ ಸೆಳೆತವನ್ನು ಈಗಿರುವ  `ಮತಾಂತರ’ ಎಂಬ ಶಬ್ದ ಬಳಸಿ ವಿಶ್ಲೇಷಿಸಲು ಆಗುವುದಿಲ್ಲ.

3. ದೀಕ್ಷೆ: ಭಾರತದಲ್ಲಿ ದೀಕ್ಷೆಯ ಮೂಲಕ ಜನರ ತಾತ್ವಿಕ ನಂಬಿಕೆ ಬದಲಿಸುವ ಕೆಲಸವನ್ನು ದೊಡ್ಡ ಪ್ರಮಾಣದಲ್ಲಿ ಮಾಡುತ್ತ ಬಂದಿರುವುದು ಅನುಭಾವಿ ಪಂಥಗಳು. ಆರೂಢ, ಅವಧೂತ, ಸೂಫಿ, ಕಾಪಾಲಿಕ, ಶಾಕ್ತ, ದತ್ತ, ಕಬೀರ, ನಾಥ, ಅಘೋರಿ, ಕೌಳ ಮುಂತಾದ ಯೌಗಿಕ ಪಂಥಗಳು. ಎಲ್ಲ ಧರ್ಮದ ಜನರಿಗೆ ದೀಕ್ಷೆಕೊಡುತ್ತವೆ. ಗುರುಶಿಷ್ಯ ಪರಂಪರೆಯನ್ನುಳ್ಳ ಈ ಪಂಥಗಳು ಅನುಯಾಯಿಗಳನ್ನು ಪಡೆಯುವುದೇ ದೀಕ್ಷೆಯ ಮೂಲಕ. ಒಂದು ಕಾಲಘಟ್ಟದಲ್ಲಿ  ಜೈನ ಬೌದ್ಧ ವೀರಶೈವಗಳು ದಾರ್ಶನಿಕ ಪಂಥಗಳಾಗಿದ್ದವು. ಈಗಲೂ ಅಲ್ಲಿ ಹೊಸ ಸದಸ್ಯರ ಸ್ವೀಕಾರವನ್ನು `ಮತಾಂತರ’ ಎನ್ನಲಾಗುವುದಿಲ್ಲ. ಧಮ್ಮದೀಕ್ಷೆ ಜಿನದೀಕ್ಷೆ ಲಿಂಗದೀಕ್ಷೆ ಎಂದು ಕರೆಯುವರು. ದೀಕ್ಷೆಯನ್ನು ಆರೂಢರಲ್ಲಿ ಗುರುಬೋಧವೆಚಿದೂ, ಸೂಫಿಗಳಲ್ಲಿ ಬೈಯತ್ ಎಂದೂ ಕರೆಯುವರು. ಗುರುದೀಕ್ಷೆಯ ಬಳಿಕ ವ್ಯಕ್ತಿಯ ಹೆಸರು, ತಂದೆತಾಯಿ, ವೇಷ, ಬದಲಾಗುತ್ತದೆ. ಜಂಗಮರ ಚೆನ್ನವೀರಯ್ಯನು ಸೂಫಿದೀಕ್ಷೆ ಬಳಿಕ ಶಿರಹಟ್ಟಿಯ ಫಕೀರೇಶನಾಗುತ್ತಾನೆ. ಗೋನಾರೆ ಬಡೇಸಾಬನು ದಾಸದೀಕ್ಷೆಯ ಮೂಲಕ ಗೋನಾರೆ ರಾಮದಾಸನಾಗುತ್ತಾನೆ.

ಗುರುದೀಕ್ಷೆಗೆ ಸಾಮಾನ್ಯವಾಗಿ ಎರಡು ಆಶಯಗಳಿರುತ್ತವೆ. ಒಂದು: ಜ್ಞಾನಾರ್ಜನೆ ಮತ್ತು ಅನುಭಾವಿಕ ಸಾಧನೆ ಮಾಡುವುದು. ಉದಾಹರಣೆಗೆ, ಗೋವಿಂದಭಟ್ಟನ ಶಿಷ್ಯನಾದ ಶಿಶುನಾಳ ಶರೀಫ ಅಥವಾ ಸೂಫಿ ನಂಗಾಶಾಹನ ಶಿಷ್ಯನಾದ ಮಹಿಪತಿರಾಯ. ಎರಡು: ಆಧ್ಯಾತ್ಮಿಕ ಸಮಾನತೆಯ ಜತೆಗೆ ಸಾಮಾಜಿಕ ಸಮಾನತೆ ಪಡೆಯುವುದು. ಉದಾಹರಣೆಗೆ, ಶರಣರಾದ ಮಾದಾರ ಚನ್ನಯ್ಯ ಅಥವಾ ಡೋಹರ ಕಕ್ಕಯ್ಯ. ಎಂತಲೇ ಬಸವಣ್ಣ ಲಿಂಗದೀಕ್ಷೆಯನ್ನು ಪಡೆದವರು `ಬ್ರಾಹ್ಮಣ ಮೊದಲಾಗಿ ಅಂತ್ಯಜ ಕಡೆಯಾಗಿ ಶಿವಭಕ್ತರನ್ನೆಲ್ಲ ಒಂದೇ ಎಂಬೆ’ ಎಂದು ಹೇಳಿದನು; ದೀಕ್ಷಿತರ ನಡುವೆ ಸಮಾನತೆ ತರಲು ಸಹಭೋಜನ ಹಾಗೂ  ರಕ್ತಸಂಬಂಧಗಳನ್ನು ಉಪಾಯವಾಗಿ ಅಳವಡಿಸಿದನು. ನಾಥಪಂಥದಲ್ಲಿ ಅವಧೂತನು ದೀಕ್ಷೆ ಪಡೆದ ಬಳಿಕ ಎಲ್ಲ ಜಾತಿಯ ಮನೆಯಲ್ಲಿ ಭಿಕ್ಷೆ ಸ್ವೀಕರಿಸಬೇಕು. ಅವನಿಗೆ ಜಾತಿಕಟ್ಟಿಲ್ಲ. ಧರ್ಮಸ್ವೀಕಾರ ಮಾಡುತ್ತಿರುವ ದಲಿತರು ಇಂದು  ಸವರ್ಣೀಯರ ಮುಂದೆ ಇಡುತ್ತಿರುವ ಬೇಡಿಕೆಗಳಾದರೂ ಸಹಪಂಕ್ತಿ ಭೋಜನ, ವಿವಾಹಸಂಬಂಧ, ಮತ್ತು ಪೂಜೆಯ ಹಕ್ಕು ಇವೇ ಆಗಿರುವುದು ಗಮನಾರ್ಹ.

ವಿಚಿತ್ರವೆಂದರೆ, ದೀಕ್ಷೆಯನ್ನು ಸಮಾನತೆ ವಿರೋಧಕ್ಕಾಗಿ ಕೂಡ ಕೊಡುವುದುಂಟು. ಇದು ಭಾರತೀಯ ಸಮಾಜದ ಜಾತಿಪದ್ಧತಿಯ ವೈರುಧ್ಯಗಳಲ್ಲಿ ಒಂದು. ಕೆಳಜಾತಿಯಲ್ಲಿದ್ದು ಸಾಮಾಜಿಕ ಅಸಮಾನತೆಯಲ್ಲಿ ಇರುವವರು ಪ್ರತಿಭಟಿಸಬಾರದು,ತಮ್ಮ ಅವಸ್ಥೆಯಲ್ಲೆ ಹುಸಿ ಸಮಾನತೆಯಲ್ಲಿ ಬದುಕಬೇಕು ಎಂಬ ಆಶಯದಲ್ಲಿ ಈ ದೀಕ್ಷೆಯ ವ್ಯವಸ್ಥೆ ಹುಟ್ಟಿಕೊಂಡಂತಿದೆ.  ಸಾಮಾನ್ಯವಾಗಿ ಮೇಲ್ಜಾತಿಯ ಗುರುಗಳು ಕೆಳಜಾತಿಯ ಭಕ್ತರಿಗೆ ಕೊಡುವ ಮಂತ್ರದೀಕ್ಷೆ ಭಕ್ತಿದೀಕ್ಷೆ ಇಂತಹವು. ಕನಕದಾಸನು ಪಡೆದ ದಾಸದೀಕ್ಷೆ ಇಂತಹುದು. ಈ ದೀಕ್ಷೆಗೆ ಕೆಲವು ಮಿತಿಗಳಿವೆ. ಅದನ್ನು ಮೀರುವಂತಿಲ್ಲ. ಕನಕದಾಸನು ಕೃಷ್ಣಗುಡಿಯನ್ನು ಪ್ರವೇಶಿಸಲು ಹೋದಾಗ ತಡೆಯಲಾಯಿತು ಎಂಬುದು ಗಮನಾರ್ಹ. ಮತಾಂತರ ವಿರೋಧಿಸುವ ನೀವೇಕೆ ನಮ್ಮನ್ನು ಬ್ರಾಹ್ಮಣ ಜಾತಿಗೆ ಸೇರಿಸಿಕೊಳ್ಳಬಾರದು ಎಂದು ಕೇಳುವವರಿಗೆ, ಉಡುಪಿಯ ಪೇಜಾವರ ಶ್ರೀಯವರು, ’ಅದು ಸಾಧ್ಯವಿಲ್ಲ. ಅಂತಹವರಿಗೆ ನಾವು ಮಂತ್ರದೀಕ್ಷೆ ಕೊಡುತ್ತೇವೆ’ ಎಂದು ಹೇಳಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.

ಆದರೆ ದೀಕ್ಷೆಯ ಮೂಲಕ ಸಾಮಾಜಿಕ ಸಮಾನತೆ ಮತ್ತು ಆಧ್ಯಾತ್ಮಿಕ ಹಕ್ಕನ್ನು ನೀಡುವ ಗುರುಪಂಥಗಳು ಭಾರತದಲ್ಲಿ ಬಹಳ ಜನಪ್ರಿಯವಾದವು. ಇಸ್ಲಾಂ ಕ್ರೈಸ್ತಧರ್ಮದ ಮಿಶನರಿಗಳಲ್ಲಿ ತಮ್ಮ ಧರ್ಮವೇ ಶ್ರೇಷ್ಠವೆಂಬ ಭಾವನೆಯಿದ್ದು, ಜನರನ್ನು ಪಾಪದಿಂದಲೂ ನರಕದಿಂದಲೂ ಉಳಿಸುವ ಕರುಣೆಯಿಂದ ಧರ್ಮಪರಿವರ್ತನೆ ಮಾಡುವ ಮನೋಧರ್ಮ ಕಾಣುತ್ತದೆ. ಆದರೆ ಗುರುಪಂಥಗಳಲ್ಲಿ ಅದಿಲ್ಲ. ಬದಲಿಗೆ ಇವು ಧರ್ಮ ದೇವರು ಸ್ವರ್ಗ ನರಕ ಕರ್ಮ ಜಾತಿ ವರ್ಣ ಮುಂತಾದ ಸಾಮಾಜಿಕ ಧಾರ್ಮಿಕವಾದ ಪೀಡೆಗಳಿಂದ ಜನರನ್ನು ಮುಕ್ತಗೊಳಿಸಿ, ಒಂದು ಬಗೆಯ ತಾತ್ವಿಕವಾದ ಸಾಧನೆಯ ಮಾರ್ಗದಲ್ಲಿ ಹಚ್ಚಿದವು. ಈಗಲೂ ಗುರುಪಂಥಗಳಲ್ಲಿ ಜಾತಿ ವರ್ಣ ಪದ್ಧತಿಯ ತಿರಸ್ಕಾರವಿದೆ. ಗುರುಪಂಥಗಳಲ್ಲಿ ಅಸ್ಪೃಶ್ಯತೆ ಆಚರಿಸುವವರಿಗೆ, ಸಹಪಂಕ್ತಿ ಊಟ ನಿರಾಕರಿಸುವವರಿಗೆ ಬಿಕ್ಕಟ್ಟು ಮತ್ತು ಸೋಲುಂಟಾಗುವ ಕತೆಗಳನ್ನು ಗಮನಿಸಬೇಕು; ದೀಕ್ಷೆ ಪಡೆದ ಅಸ್ಪೃಶ್ಯರಿಗೆ ಕೆಳಜಾತಿಯವರಿಗೆ ಮುಸ್ಲಿಮರಿಗೆ ಗೆಲುವು ಸಿಕ್ಕುವ ಕತೆಗಳನ್ನು ಗಮನಿಸಬೇಕು. ಗುರುಪಂಥಗಳಲ್ಲಿ ಕಡ್ಡಾಯವಾಗಿ ಪುರೋಹಿತಶಾಹಿಯ ಕಟು ಟೀಕೆಯಿದೆ. ವೇದವೇ ಮೊದಲಾಗಿ ಧರ್ಮಗಳ ಪವಿತ್ರಗ್ರಂಥಗಳ ನಿರಾಕರಣೆಯಿದೆ. ಮಸೀದಿ ಮತ್ತು ಗುಡಿಸಂಸ್ಕೃತಿಯ ನಿರಾಕರಣೆಯಿದೆ. ಅವು ಒಂದರ್ಥದಲ್ಲಿ ನಾಸ್ತಿಕ ಮತ್ತು  ವೈದಿಕ ವಿರೋಧಿಗಳು. ಇಲ್ಲಿ ಗುರು ಮುಖ್ಯ. ಜ್ಞಾನಸಾಧನೆ ಮುಖ್ಯ. ಇವು ದೇಹವಾದಿಗಳು. ದೇಹದ ಮೂಲಕವೇ ಸಾಧನೆಯನ್ನು ಮಾಡಿ ಮುಕ್ತಿಯನ್ನು ಪಡೆಯಬಹುದು ಎಂದು ಹೇಳುವಂತಹವು. ಸಾಧಕರು  ಗುರುವಿನ ಮಾರ್ಗದರ್ಶನದಿಂದ ತಮ್ಮನ್ನು ತಾವು ಅರಿಯಬೇಕು. ಹಾಗೆ ಅರಿತರೆ ಅವರಿಗೆ ಬೇರೆ ದೈವದ ಹಂಗೇ ಬೇಕಿಲ್ಲ. ಸ್ವತಃ ಅವರೇ ದೈವ ಸಮಾನನಾಗುತ್ತಾರೆ ಎಂದು ಈ ಪಂಥಗಳು ಹೇಳಿದವು. ಭಾರತದಲ್ಲಿ ಸಾಮಾಜಿಕವಾಗಿ ದಮನಿತ ಸಮುದಾಯಗಳಿಗೆ ಗುರುಪಂಥಗಳು ಪರ್ಯಾಯ  ಧರ್ಮವನ್ನು ಒದಗಿಸುವ ಮೂಲಕ ಸಾಮಾಜಿಕ ಸಂಚಲನವನ್ನು ಮಾಡಿದ ಬಗೆಯನ್ನು ನಾವಿನ್ನೂ ಅರಿಯಬೇಕಿದೆ. ಇದನ್ನೆಲ್ಲ `ಮತಾಂತರ’ವೆಂಬ ಪರಿಭಾಷೆಯಲ್ಲಿ ಗ್ರಹಿಸಲು ಮತ್ತು ವಿಶ್ಲೇಷಿಸಲು ಸಾಧ್ಯವಿಲ್ಲ. ದೀಕ್ಷೆಯ ಮೂಲಕ ಕೆಳವರ್ಗಗಳಿಗೆ ಸಾಮಾಜಿಕವಾದ ಮೇಲುಚಲನೆಯನ್ನು `ಭಕ್ತಿಪಂಥಗಳು’ ಎಂದು ತಪ್ಪಾಗಿ ಕರೆಯಲಾಗುವ ಗುರುಪಂಥಗಳು ನೀಡಿದವೆಂತಲೇ ಸಾಂಸ್ಥಿಕ ಧರ್ಮಗಳು ಅವನ್ನು ದ್ವೇಷಿಸಿದವು.  ಗುರುಪಂಥಗಳು ಕೂಡ ಸಾಂಸ್ಥಿಕ ಧರ್ಮಗಳ ಕಂತ್ರಾಟುದಾರರನ್ನು ವಿರೋಧಿಸಿದವು.

4. ಮತೀಯ ಹೇರಿಕೆ: ಸಾಂಸ್ಥಿಕ ಧರ್ಮಗಳಲ್ಲಿ ಜನಸಮುದಾಯವನ್ನು ತಮ್ಮ ಹತೋಟಿಯಲ್ಲಿ ಇಟ್ಟುಕೊಳ್ಳಲು ಧರ್ಮ ದೇವರು ಗುಡಿ ಮಸೀದಿ, ಚರ್ಚ್, ಇವು ಒಂದು ಬಲೆಯಂತೆ ಕೆಲಸ ಮಾಡುತ್ತವೆ. ತಮ್ಮದೇ ಧರ್ಮದಲ್ಲಿರುವ ಬೇರೆಬೇರೆ ಸಮುದಾಯಗಳನ್ನು ನಿರ್ದಿಷ್ಟ ವಿಚಾರಧಾರೆಗೆ ಬದಲಿಸಲು ಯತ್ನಿಸುವ ಎಲ್ಲ ವಿಚಾರಧಾರೆಗಳಲ್ಲೂ ಒಂದು ಬಗೆಯ ತಂತ್ರಗಾರಿಕೆ ಇರುತ್ತದೆ. ಈ ಹಿನ್ನೆಲೆಯಲ್ಲಿ ಹಿಂದುತ್ವವಾದ ಇಲ್ಲವೇ ಮುಸ್ಲಿಮರಲ್ಲಿರುವ ತಬ್ಲೀಗ್ ಪಂಥವು ಬಹುದೊಡ್ಡ ಪ್ರಮಾಣದಲ್ಲಿ ಮತಾಂತರದ ಕೆಲಸದಲ್ಲಿ ತೊಡಗಿವೆ. ಇತರರ ಧಾರ್ಮಿಕ ನಂಬಿಕೆಗಳನ್ನು ಸಹಿಸದ ಇವು ಜನರನ್ನು ತಾವು ಭಾವಿಸುವ ಒಂದು ವಿಚಾರಧಾರೆಗೆ ಓರಿಯಂಟ್ ಮಾಡುತ್ತವೆ. ಹಿಂದುತ್ವವು ಕೆಳಜಾತಿಯ ಜನರನ್ನು ಮೇಲುಜಾತಿಪರವೂ ಪುರುಷವಾದಿಯೂ ಊಳಿಗಮಾನ್ಯ ಪದ್ಧತಿಯೂ ಇರುವ ಒಂದು ಚೌಕಟ್ಟಿನಲ್ಲಿ ಬಂಧಿಸಲು ಯತ್ನಿಸುತ್ತದೆ. ಅದರ ಪ್ರಕಾರ ಜಾತಿಪದ್ಧತಿಯಲ್ಲಿರುವ ಶ್ರೇಣೀಕರಣವು ನೈಸರ್ಗಿಕ. ಅದನ್ನೂ ಅದರ ಭಾಗವಾಗಿರುವ ಕಸುಬನ್ನೂ ಒಪ್ಪಿಕೊಂಡು ಅದರಲ್ಲೇ ತೃಪ್ತಿ ಕಾಣಬೇಕು. ಅದನ್ನು ಬದಲಿಸಲು ಯತ್ನಿಸಬಾರದು. ಬದಲಿಸಿದರೆ ವರ್ಣ ಇಲ್ಲವೆ ಜಾತಿಸಂಕರವಾಗುತ್ತದೆ. ಸಂಕರವು ಸಂಘರ್ಷಕ್ಕೆ ಕಾರಣವಾಗುತ್ತದೆ.  ಇದೊಂದು ಬಗೆಯ ಸಾಮಾಜಿಕ ಮತ್ತು ಆರ್ಥಿಕವಾದ ಚಲನರಹಿತ ಅವಸ್ಥೆ.

ಆದರೆ ಈ ಅವಸ್ಥೆಯಲ್ಲಿ ಉಸಿರುಗಟ್ಟಿದವರಿಗೆ ಕೆಲವು ತಾತ್ಕಾಲಿಕ ಪರಿಹಾರದ ಕಾರ್ಯಕ್ರಮಗಳಿವೆ. ಅವುಗಳಲ್ಲಿ ಒಂದು ಜಾತಿಸಾಮರಸ್ಯ. ಇದು ಅಸಮಾನತೆಯ ಸಂಘರ್ಷ ಹುಟ್ಟಿಸದಂತೆ ಸಹನೆಯನ್ನು ಕಲಿಸುತ್ತದೆ. ಆದರೆ ಯಾವಾಗ ಎಚ್ಚೆತ್ತ ದಲಿತರು ಕೆಳಜಾತಿಗಳು ಬೇರೆ ಧರ್ಮಗಳ ಸ್ವೀಕಾರದ ಮೂಲಕ ಸಮಾನತೆಯನ್ನು ಅರಸಿ ಹೊರಟವೋ, ಆಗ ಈ ಕಾರ್ಯಕ್ರಮಗಳೂ ಕೆಲಸಕ್ಕೆ ಬಾರದಾದವು. ಆಗ ಬ್ರಾಹ್ಮಣವಾದಿ ಹಿಂದುತ್ವವು ಧರ್ಮಪರಿವರ್ತನೆಗೆ ಅವಕಾಶ ಕಲ್ಪಿಸುವ ಎಲ್ಲ ಧರ್ಮಗಳನ್ನು ಹಿಂದೂಗಳ ಶತ್ರು ಎಂದು ಘೋಷಿಸಿತು. ಮುಖ್ಯವಾಗಿ ಇಸ್ಲಾಂ ಕ್ರೈಸ್ತ ಬೌದ್ಧ ಧರ್ಮಗಳು ಅದಕ್ಕೆ ಹಗೆಗಳಾದವು. ಬೌದ್ಧ ಧರ್ಮದ ಬಗ್ಗೆ ಹಿಂದುತ್ವವಾದಿಗಳಲ್ಲಿ ಇರುವ ಆಳವಾದ ಅಸಹನೆಯನ್ನು ಸಾರ್ವಕರ್, ಅರುಣ್ ಶೌರಿ ಮತ್ತು ಭೈರಪ್ಪನವರಲ್ಲಿ (`ಸಾರ್ಥ’ ಕಾದಂಬರಿ) ಕಾಣಬಹುದು. ಧರ್ಮಸ್ವೀಕಾರಗಳನ್ನು ತಡೆಯಲು ಅದು ಅನುಸರಿಸಿದ ಈ ಉಪಾಯವು ಅದರ ಧಾರ್ಮಿಕ ಸಾಮಾಜಿಕ ತಂತ್ರಗಾರಿಕೆಯಾಗಿತ್ತು. ಇದಕ್ಕಾಗಿ ಅದು ಕೆಳಜಾತಿಗಳಿಗೆ ತಮ್ಮ ಧಾರ್ಮಿಕ ನಂಬಿಕೆಗಳ ಬ್ರಾಹ್ಮಣೀಕರಣವನ್ನು ಹೇರಲು ಯತ್ನಿಸಿತು. ಅವುಗಳ ದೈವಪದ್ಧತಿಯನ್ನು, ಆಚರಣ ಲೋಕವನ್ನು ಹಾಗೂ ಆಹಾರ ಸಂಸ್ಕೃತಿಯನ್ನು ಅಂತಿಮವಾಗಿ ಆಲೋಚನಾ ವಿಧಾನವನ್ನು ಬದಲಿಸಲು ಯತ್ನಿಸಿತು. ಹಿಂದುತ್ವದ ಈ ಮತಾಂತರ ಪ್ರಕ್ರಿಯೆಯು ಶತಮಾನಗಳಿಂದ ನಡೆಯುತ್ತಿದೆ. ಇದರ ಪರಿಣಾಮವಾಗಿ ಉಚ್ಚಜಾತಿಯ ಹಿತಾಸಕ್ತಿಗಳಾಗಿ ದಲಿತರು ಕೆಳಜಾತಿಗಳು ಜೀತದವರಾಗಿ ಮಾರ್ಪಟ್ಟಿರುವರು. ಕಾರವಾರದಿಂದ ಹಿಡಿದು ಸುಳ್ಯ ಪುತ್ತೂರಿನ ತನಕ, ಕರ್ನಾಟಕದ ಕರಾವಳಿಯಲ್ಲಿ ಕೆಳಜಾತಿಯ ಜನರ ಬದುಕಿನಲ್ಲಿ ಬ್ರಾಹ್ಮಣ ಪುರೋಹಿತಶಾಹಿಯ ಪ್ರತಿಷ್ಠಾಪನೆಯಾಗಿದೆ. ಈಗ ಅಲ್ಲಿ ಶೂದ್ರರ ಮತ್ತು ದಲಿತರ ಬದುಕಿನಲ್ಲಿ ಹುಟ್ಟು ಮುಟ್ಟು ಲಗ್ನ ಪೂಜೆ ತಿಥಿಗಳಲ್ಲಿ ಅವರ ಕುಲವಿಶಿಷ್ಟವಾದ ಆಚರಣೆಗೆ ಬದಲು ಬ್ರಾಹ್ಮಣ ಪುರೋಹಿತಶಾಹಿ ಆಚರಣೆಗಳಿವೆ. ಅಲ್ಲಿನ ಭೂತಗಳ ದೈವಸ್ಥಾನಗಳ ಮೇಲೆ ಬ್ರಾಹ್ಮಣ ಪುರೋಹಿತಿಕೆಯಿರುವ ದೇವಸ್ಥಾನ ಸಂಸ್ಕೃತಿ ಬಂದಿದೆ; ಬಲಿ ಮತ್ತು ಮಾಂಸಾಹಾರವು ನಿಧಾನವಾಗಿ ಹಿಂಜರಿಯುತ್ತ ಬ್ರಾಹ್ಮಣ ಆಹಾರ ಪದ್ಧತಿ  ಬಂದಿದೆ. ಇದು ಜನರನ್ನು ಅವರ ಸಂಸ್ಕೃತಿಯ ಬೇರುಗಳಿಂದ ಕತ್ತರಿಸುತ್ತಿರುವ ಕ್ರಿಯೆಯಾಗಿದೆ. ಹಿಂದುತ್ವವು ವನವಾಸಿ ಸಂಘಟನೆಯ ಹೆಸರಲ್ಲಿ ಭಾರತದ ಬುಡಕಟ್ಟುಗಳ ಬದುಕಲ್ಲಿ ದೊಡ್ಡ ಪ್ರಮಾಣದಲ್ಲಿ ಬ್ರಾಹ್ಮಣೀಕರಣವನ್ನು ತರುತ್ತಿದೆ. ಆರೋಗ್ಯಕರ ದೈವಪದ್ಧತಿ ಮತ್ತು ಆಚರಣೆಗಳನ್ನುಳ್ಳ  ಬುಡಕಟ್ಟುಗಳಲ್ಲಿ ಮೇಲ್ಜಾತಿಯ ಆಚರಣೆ ನಂಬಿಕೆ ಹೇರುವುದರ ವಿರುದ್ಧ, ಬುಡಕಟ್ಟುಗಳಿಗಾಗಿ ಬದುಕನ್ನೇ ಸವೆಸಿದ ವೆರಿಯರ್ ಎಲ್ವಿನ್ ಟೀಕಿಸಿದ್ದರು. ಇದು ಜನರನ್ನು ಅವರ ಸಂಸ್ಕೃತಿಗಳಿಂದ ಮೂಲೋತ್ಪಾಟನೆ ಮಾಡುವ ಮತಾಂತರ ಪ್ರಕ್ರಿಯೆಯಾಗಿದೆ.  ಇಂತಹ `ಮತಾಂತರ’ ಪ್ರಕ್ರಿಯೆ ಮುಸ್ಲಿಮರಲ್ಲೂ ಇದೆ. ತನ್ನದೇ ಆದ ಧಾರ್ಮಿಕ ಇಲ್ಲವೇ ರಾಜಕೀಯ ನಂಬಿಕೆಯನ್ನು ಪ್ರಚಾರ ಮಾಡುತ್ತ ಮುಸ್ಲಿಮರನ್ನು ಮುಸ್ಲಿಮರನ್ನಾಗಿಸುತ್ತೇವೆ ಎಂದು ಹೇಳುತ್ತಿರುವ ತಬ್ಲೀಗ್, ಜಮಾತೆ ಇಸ್ಲಾಮಿ ಹಾಗೂ ಅಹ್ಲೆಹದೀಸ್ ಮುಂತಾದ ಗುಂಪುಗಳು ಕೂಡ ಇದೇ ಕೆಲಸ ಮಾಡುತ್ತಿವೆ. ಇವು ವಿವಿಧ ನಂಬಿಕೆಯುಳ್ಳ ಮುಸ್ಲಿಮರನ್ನು ಒಂದು ನಿರ್ದಿಷ್ಟ ಗ್ರಹಿಕೆ ನಂಬಿಕೆಗೆ ಪರಿವರ್ತನೆ ಮಾಡುತ್ತಿವೆ. ಸೂಫಿ ಆಚರಣೆ ಮೊಹರಂ ಆಚರಣೆಯಿಂದ ವಿಮುಖವಾಗಿಸುತ್ತಿವೆ. ಇದು ಜನರು ಪ್ರತಿರೋಧಕ್ಕಾಗಿಯೋ, ಸ್ವಾಭಿಮಾನದಿಂದಲೋ, ಸಮಾನತೆಗಾಗಿಯೋ ತಮಗೆ ಬೇಕಾದ ಧರ್ಮಗಳನ್ನು ಸ್ವೀಕಾರ ಮಾಡುವುದಕ್ಕಿಂತ ಭಿನ್ನವಾದ ಕ್ರಿಯೆಯಾಗಿದೆ.

4

ಜನ  ತಮ್ಮ ಬದುಕಿನ ಬವಣೆಗಳಿಂದ ಪಾರಾಗಲು, ಜ್ಞಾನಕ್ಕಾಗಿ ಸಾಧನೆಗಾಗಿ ತತ್ವದ ಸೆಳೆತಕ್ಕಾಗಿ ತಮಗೆ ಇಷ್ಟ ಬಂದ ಧರ್ಮ ಇಲ್ಲವೇ ಪಂಥಗಳಿಗೆ ಹೋಗುವುದು ಒಂದು ಕ್ರಮವಾದರೆ, ಬಲಿಷ್ಠರು ದುರ್ಬಲರನ್ನು ತಮ್ಮ ವಶಕ್ಕೆ ತೆಗೆದುಕೊಳ್ಳಲು ಮಾಡುವ ಹುನ್ನಾರದ ಭಾಗವಾಗಿರುವ ಮತಾಂತರವು ಇನ್ನೊಂದು ಕ್ರಮ. ಎರಡನೆಯ ಕ್ರಮದಲ್ಲಿ ಧರ್ಮವು ಒಂದು ಗಾಳದಂತೆ ಬಳಕೆಯಾಗುತ್ತದೆ. ಇದನ್ನು ಕುವೆಂಪು ಅವರು `ಬ್ರಾಹ್ಮಣ ಕೂಣಿಯಲ್ಲಿ ಶೂದ್ರಮೀನು’ ಎಂದು ಬರೆದರು. ಕುವೆಂಪು ಅವರು ಕ್ರೈಸ್ತಮಿಶನರಿಗಳನ್ನೂ ಜನರನ್ನು ಬೇಟೆಯಾಡುವ ಬೇಟೆಗಾರರಂತೆ ಚಿತ್ರಿಸಿದರು. ಸಾಮಾಜಿಕ ರಾಜಕೀಯ ಆರ್ಥಿಕ ಹಿತಾಸಕ್ತಿಗಳ ಭಾಗವಾಗಿ ನಡೆಯುವ ಈ ಹುನ್ನಾರದ `ಮತಾಂತರ’ದ ಪರಿಣಾಮವೆಂದರೆ, ದುರ್ಬಲ ವರ್ಗದ ಕೆಳಜಾತಿಯ ಜನರು, ಉಚ್ಚಜಾತಿ ಮತ್ತು ಉಚ್ಚವರ್ಗಗಳ ಹಿತರಕ್ಷಣೆಗಾಗಿ  ಬಂಟರಾಗಿ ಬದಲಾಗುವುದು. ಕರಾವಳಿಯಲ್ಲಿ ಈಚೆಗೆ ನಡೆದ  ಚರ್ಚ್ ದಾಳಿಗಳಲ್ಲಿ ಬಳಕೆಯಾದವರೆಲ್ಲ ಹೀಗೆ ಹಿಂದುತ್ವಕ್ಕೆ ಮತಾಂತರಗೊಂಡ ಕೆಳಜಾತಿಯವರು ಎಂಬುದು ಗಮನಾರ್ಹ. ಆದ್ದರಿಂದ ಭಾರತದ ಅಲ್ಪಸಂಖ್ಯಾತವೂ ತಾರತಮ್ಯವಾದಿಯೂ ಆದ ಹಿಂದುತ್ವಕ್ಕೆ ತನ್ನ ರಾಜಕೀಯ ಧರ್ಮಕ್ಕೆ ಜನರನ್ನು ಹಿಡಿದು ಪಳಗಿಸುವುದು ಒಂದು ರಾಜಕೀಯ ಸಾಮಾಜಿಕ ಕಾರ್ಯಕ್ರಮವಾಗಿದೆ.

ಧರ್ಮದ ಬಲೆಬೀಸಿ ಜನರನ್ನು ಹಿಡಿದು ಪ್ರಾಣಿಗಳಂತೆ ಪಳಗಿಸಿ ಉಪಯೋಗ ಮಾಡಿಕೊಳ್ಳುವ ಈ ಕ್ರಮವನ್ನು ಮನುಷ್ಯರ ಆಯುಧೀಕರಣ ಎನ್ನಬಹುದು. ಜನರನ್ನು ಆಯುಧವನ್ನಾಗಿ ಮಾಡುವುದಕ್ಕಾಗಿ ಹಿಂದುತ್ವವು ಈಚೆಗೆ ಏಕದೇವತಾವಾದವನ್ನು ಅವಲಂಬಿಸುತ್ತಿದೆ. ಇದರಿಂದ  ಬಹುದೇವತಾರಾಧಕ ಭಾರತೀಯ ಸಮಾಜದ ಮೇಲೆ ಏಕದೇವತಾವಾದದ  ಹೇರಿಕೆ ಕೂಡ ಆಗುತ್ತಿದೆ. ಸಂಘಪರಿವಾರದ  ಏಕನಾಯಕತ್ವದ ಕಲ್ಪನೆಗೂ, ಈ ಏಕದೇವತಾವಾದದ ಹೇರುವಿಕೆಗೂ ಆಂತರಿಕ ಸಂಬಂಧವಿದೆ. ವಿಚಿತ್ರವೆಂದರೆ, ಹಿಂದುತ್ವವು ಏಕದೇವತಾವಾದವನನ್ನು ಪಡೆದಿದ್ದು ತಾನೇ ದ್ವೇಷಿಸುವ ಕ್ರೈಸ್ತ ಮತ್ತು ಇಸ್ಲಾಂಗಳಿಂದ. ಹಿಂದುತ್ವ ಹೇರುತ್ತಿರುವ ಆ ಏಕದೈವವೆಂದರೆ ಅಯೋಧ್ಯೆಯ ರಾಮನಾಗಿದೆ. ಈ ರಾಮನು ಕಬೀರ ದಾಸರ, ತುಳಸೀ ದಾಸರ, ರಾಮಾಯಣದರ್ಶನದ ಅಥವಾ ಭಾರತದ ಜನಪದ ರಾಮಾಯಣಗಳಲ್ಲಿ ಇರುವ ಮಾನವೀಯ ರಾಮನಲ್ಲ. ಸಂಘಪರಿವಾರದ ರಾಜಕೀಯ ಸಾಮಾಜಿಕ ಆಶೋತ್ತರಗಳನ್ನು ಈಡೇರಿಸಲು ರೂಪುಗೊಂಡ ಬಿಲ್ಲು ಸೆಳೆದ ತಲೆಕೆದರಿದ ರಾಮ. ಭಾರತದ ಬೇರೆಬೇರೆ ಸಮುದಾಯಗಳು ರೂಢಿಸಿಕೊಂಡಿರುವ ದೇವತೆಗಳನ್ನು ನಿಧಾನವಾಗಿ ಅಂಚಿಗೆ ಸರಿಸುತ್ತ ತಾನೊಬ್ಬನೇ ಮೆರೆಯುತ್ತಿರುವ ರಾಮ. ಹಿಂದುತ್ವವಾದವು ನಮ್ಮ ದೇವರುಗಳನ್ನೂ ಮತಾಂತರಗೊಳಿಸಿಬಿಟ್ಟಿದೆ. ಈ ಮಿಲಿಟಂಟ್ ರಾಮನ ಹೇರಿಕೆ ಎಷ್ಟು ವ್ಯಾಪಕವಾಗಿ ನಡೆದಿದೆಯೆಂದರೆ, ಹಿಮಾಲಯದ ಶಿವಸಂಸ್ಕೃತಿಯ ಕ್ಷೇತ್ರಗಳಾದ ಹರಿದ್ವಾರ, ಹೃಷಿಕೇಶ, ಮಣಿಕರ್ಣಿಕಾಗಳಲ್ಲಿ ಕೂಡ `ಜೈಶ್ರೀರಾಂ’ ಘೋಷಣೆಯು ಕಾಣುತ್ತಿದೆ.

ಬಹುಶಃ ಈ ಉಗ್ರಗಾಮಿ ರಾಮನನ್ನು ಬಹುಧರ್ಮೀಯ ಭಾರತದ ಮೇಲೆ ಹಿಂದುತ್ವವು ಹೇರಲು ಆಳವಾದ ಯೋಜನಾಬದ್ಧವಾದ ಒಂದು ಸಾಮಾಜಿಕ ರಾಜಕೀಯ ಕಾರಣವಿದೆ. ಅದೆಂದರೆ ಈ ರಾಮನು ಬ್ರಾಹ್ಮಣ ಹಿತಕ್ಕಾಗಿ ಶೂದ್ರ ಶಂಬೂಕನನ್ನು ಸಂಹರಿಸಿದವನು; ವಾನರಕುಲವನ್ನು ಅವರೊಳಗಿನ ಅಂತಃಕಲಹ ಬಳಸಿಕೊಂಡು ಹಿತಾಸಕ್ತಿ ಸಾಧನೆಗಾಗಿ ಅವರನ್ನು ಆಯುಧವಾಗಿಸಿಕೊಂಡವನು. ಇದು ಆಧುನಿಕ ಕಾಲದ ಹಿಂದುತ್ವದ ಸಮಾಜಶಾಸ್ತ್ರಕ್ಕೆ ಪೂರಕವಾಗಿದೆ. ಭಾರತದ ಕೆಳಜಾತಿಯ ಜನರನ್ನು ರಾಮನ ಭಕ್ತರು ಇಲ್ಲವೇ ಸೈನಿಕರಾಗಿಸುವುದು ಎಂದರೆ, ಹನುಮನಂತೆ ತನ್ನ ಕುಲದವರಿಗೆ  ಹಗೆಯಾಗುವುದು ಮತ್ತು ಉಚ್ಚವರ್ಣದವರ ಸೇವೆಗಾಗಿ ತನ್ನನ್ನು ಸರ್ಮಪಿಸಿಕೊಳ್ಳುವುದು. ಹೀಗೆ ಉಚ್ಚಜಾತಿಯವರ ಹಿತರಕ್ಷಣೆಗೆ ತಮ್ಮನ್ನು ಸರ್ಮಪಿಸಿಸಕೊಂಡ ಶೂದ್ರರು ಇವತ್ತು ಭಜರಂಗದಳದಲ್ಲಿದ್ದಾರೆ. ಭಜರಂಗದಳವು ಹಿಂದುತ್ವ ಮಾಡಿರುವ ಮತಾಂತರ ಕಾರ್ಯಕ್ರಮದ ಬಹುದೊಡ್ಡ ಫಲವಾಗಿದೆ.

5

ಹಿಂದೂ ಸಮಾಜದೊಳಗಿನ ಸಾಮಾಜಿಕ ವೈರುಧ್ಯಗಳೇ ಧರ್ಮಪರಿವರ್ತನೆಗೆ ಮೂಲಭೂತ ಕಾರಣವೆಂಬುದು ಹಿಂದುತ್ವಕ್ಕೆ ತಿಳಿದಿದೆ. ಪೂರ್ವಬಂಗಾಲದಲ್ಲಿ (ಈಗಿನ ಬಾಂಗ್ಲಾದೇಶದಲ್ಲಿ) ಹುಟ್ಟಿ ಬೆಳೆದ ಸ್ವಾಮಿ ವಿವೇಕಾನಂದರ ಪ್ರಕಾರ, ಪೂರ್ವಬಂಗಾಳದಲ್ಲಿ ರೈತಾಪಿ ಮತ್ತು ದುಡಿಯುವ ವರ್ಗಗಳ ಮೇಲೆ ಅಲ್ಲಿನ ಪುರೋಹಿತಶಾಹಿ ಮತ್ತು ಜಮೀನುದಾರಿ ಪದ್ಧತಿ ಹಾಕಿದ ಅಸಹನೀಯ ಒತ್ತಡವೇ  ಜನಸಮುದಾಯಗಳು ಇಸ್ಲಾಂ ಸ್ವೀಕರಿಸಲು ಕಾರಣವಾಯಿತು. ಜಾತಿಪದ್ಧತಿಯ ತಾರತಮ್ಯವುಳ್ಳ ಸಮಾಜದಲ್ಲಿ ಸಣ್ಣಪುಟ್ಟ ಕಾರಣಕ್ಕಾಗಿ ವಿಧಿಸಲಾಗುವ ಬಹಿಷ್ಕಾರಗಳು ಕೂಡ ಹೊಸಧರ್ಮ ಸ್ವೀಕರಣೆಗೆ ಕಾರಣವಾಗುತ್ತವೆ. ಜಾತಿವ್ಯವಸ್ಥೆಯ ಹಿಂದೂ ಧರ್ಮದಲ್ಲಿ ಹೊರಹೋಗಲು ಬಹಳ ದಾರಿಗಳಿವೆ.  ಒಳನುಸಿಯಲು ಸಣ್ಣಕಿಂಡಿಯೂ ಇಲ್ಲ. ಈ ಏಕಮುಖಿ ವ್ಯವಸ್ಥೆಯೇ ಚಾರಿತ್ರಿಕವಾಗಿ ಭಾರತದಲ್ಲಿ ಹೊರಗಿನಿಂದ ಜನರನ್ನು ದೀಕ್ಷೆಯ ಮೂಲಕ ಸ್ವೀಕಾರ ಮಾಡುವ ಧರ್ಮ ಮತ್ತು ಪಂಥಗಳ ಹುಟ್ಟಿಗೆ ಕಾರಣವಾಯಿತು. ಈಗಲೂ ದೊಡ್ಡಕಾರಣವಾಗಿರುವುದು ಇದುವೇ. ಮಿಶನರಿಗಳ ಪ್ರಚಾರವು ಸಣ್ಣಕಾರಣವಾಗಿದೆ. ಇದು ಹಿಂದುತ್ವಕ್ಕೆ ಗೊತ್ತಿದೆ. ಜತೆಗೆ ಜಾತಿವ್ಯವಸ್ಥೆಯ ಸಮಾಜದಲ್ಲಿ ವ್ಯಕ್ತಿಗಳು ಎಷ್ಟೇ ಗಣ್ಯರಾಗಿರಬಹುದು, ಸಿರಿವಂತರಾಗಿರಬಹುದು, ಸಾಮಾಜಿಕವಾಗಿ ಅವರು ಮೇಲುಕೀಳಿನ ಮನೋಭಾವದಿಂದ ಬಿಡುಗಡೆ ಪಡೆಯುವುದು ಕಷ್ಟ. ಆದರೆ ಒಮ್ಮೆ ಧರ್ಮ ಬದಲಿಸಿದರೆ, ಮಾನಸಿಕವಾಗಿ ಈ ಶ್ರೇಣೀಕರಣದ ಮನೋಭಾವದಿಂದ ಬಹುಮಟ್ಟಿಗೆ ಹೊರಬರುತ್ತಾರೆ ಎನ್ನುವುದು ಕೂಡ ಹಿಂದುತ್ವಕ್ಕೆ ಮನವರಿಕೆಯಾಗಿದೆ.

ಭಾರತದ ಜಾತಿಪದ್ಧತಿಯ ಸಾಮಾಜಿಕ ವೈರುಧ್ಯವನ್ನು ಸಾಮಾಜಿಕ ಸಮಾನತೆಯ ನೆಲೆಯಲ್ಲಿ ಪ್ರಾಮಾಣಿಕವಾಗಿ ಬಿಡಿಸಬಹುದು. ಆದರೆ ಈ ಮೂಲಭೂತ ವೈರುಧ್ಯವನ್ನು ಬಿಡಿಸಲು ಹಿಂದುತ್ವವು ಮುಂದಾಗುತ್ತಿಲ್ಲ. ಯಾಕೆಂದರೆ, ಹಾಗೆ ಬಿಡಿಸಿದರೆ ಉಚ್ಚವರ್ಗಗಳ ಸಾಮಾಜಿಕ ಯಜಮಾನಿಕೆ ಕಳೆದುಹೋಗುತ್ತದೆ. ಅದರ ವರ್ಗಹಿತಾಸಕ್ತಿ ಇದನ್ನು ಆಗಗೊಡುತ್ತಿಲ್ಲ. ಆದರೆ ವೈರುಧ್ಯವನ್ನು ಬಗೆಹರಿಸದಿದ್ದರೆ ಧರ್ಮಸ್ವೀಕಾರದ ಪ್ರಕ್ರಿಯೆ ತಡೆಯಲು ಸಾಧ್ಯವಾಗುವುದಿಲ್ಲ. ಹಿಂದುತ್ವವು ಸರ್ವ ಹಿಂದೂಗಳಲ್ಲಿ ಸೋದರತೆಯ ಮಾತಾಡುತ್ತದೆ. ಅಸ್ಪೃಶ್ಯತೆಯು ಕಳಂಕ ಎಂದು ತಾತ್ವಿಕವಾಗಿ ಒಪ್ಪುತ್ತದೆ. ಆದರೆ ಕೆಳಜಾತಿಯವರು ಮತ್ತು ದಲಿತರು ಸಹಪಂಕ್ತಿ ಭೋಜನಕ್ಕೆ, ಮಠಗಳಿಗೆ ಉತ್ತರಾಧಿಕಾರಿಯಾಗುವುದಕ್ಕೆ, ಬ್ರಾಹ್ಮಣ ಜಾತಿಗೆ ಮತಾಂತರವಾಗುವುದಕ್ಕೆ, ರಕ್ತಸಂಬಂಧ ಬೆಳೆಸುವುದಕ್ಕೆ ಬೇಡಿಕೆ ಇಡುತ್ತಿದ್ದಂತೆ ಅಸಹಾಯಕಗೊಂಡು ಏನೇನೊ ನೆವಗಳನ್ನು ಹೇಳಿ ತಪ್ಪಿಸಿಕೊಳ್ಳತೊಡಗುತ್ತದೆ. ಇದು ನಿಜವಾಗಿ ಹಿಂದುತ್ವದ ಬಿಕ್ಕಟ್ಟು.

ಈ ಬಿಕ್ಕಟ್ಟಿನಿಂದ ಪಾರಾಗಲು ಅದು ಸಮಾನತಾ ನೆಲೆಯ ನಿಜವಾದ ಸಮಾಜ ಸುಧಾರಣೆಯ ಬದಲಿಗೆ ಎರಡು ಅಡ್ಡಮಾರ್ಗಗಳನ್ನು ಅನುಸರಿಸುತ್ತಿದೆ. 1. ಜಾತಿವ್ಯವಸ್ಥೆ ಇಟ್ಟುಕೊಂಡೇ ಅದರೊಳಗೆ ಸಂಘರ್ಷವಿಲ್ಲದೆ ಬದುಕುವ ಯಥಾಸ್ಥಿತಿವಾದಿ ಸಾಮರಸ್ಯವಾದದ ಪರ್ಯಾಯ ವನ್ನು ಮಂಡಿಸುವುದು. ಈ  ಪರ್ಯಾಯದ ಭಾಗವಾಗಿ, ಕಳೆದೊಂದು ದಶಕದಿಂದ ಭಾರತದ ತುಂಬ ರಾಮನು ಹನುಮಂತನನ್ನು ಅಪ್ಪಿಕೊಂಡಿರುವ ಚಿತ್ರಗಳು, ಶಿಲ್ಪಗಳು ದೊಡ್ಡಪ್ರಮಾಣದಲ್ಲಿ ಸೃಷ್ಟಿಯಾಗಿವೆ. ಹನುಮಂತನನ್ನು ದೊಡ್ಡ ಸಂಕೇತವಾಗಿ ಬೆಳೆಸುತ್ತಿರುವ ಹಿಂದೆ ಅಯೋಧ್ಯೆಯಲ್ಲಿ ರಾಮನ ಗುಡಿಕಟ್ಟುವ ಅಜೆಂಡಾ ಮಾತ್ರ ಇಲ್ಲ. ಉಚ್ಚಜಾತಿಗಳು ಕೆಳಜಾತಿಗಳನ್ನು ತಮ್ಮ ಹಿಡಿತದಲ್ಲೇ ಇರಿಸಿಕೊಳ್ಳುವ ಸೋಶಿಯಲ್ ಇಂಜಿನಿಯರಿಂಗ್ ಕೂಡ ಇದೆ. ಕೆಳಜಾತಿಯವರನ್ನು ಆಯುಧವಾಗಿಸಿಕೊಳ್ಳುವ ಆಶಯವಿದೆ. 2. ಹಿಂದೂಗಳಿಗೆ ಮತಾಂತರ ಮಾಡುವ ಧರ್ಮಗಳನ್ನು ಮತ್ತು ಆ ಧಾರ್ಮಿಕ ಸಮುದಾಯಗಳನ್ನು ಶತ್ರುವನ್ನಾಗಿ ಕಟ್ಟಿಕೊಡುವುದು. ಆದರೆ ಅದು ವೈರುಧ್ಯಗಳಿಂದ ಹೊರಬರಲು ಅನುಸರಿಸುತ್ತಿರುವ ಈ ಸಾಮಾಜಿಕ ರಾಜಕೀಯ ತಂತ್ರಗಳು ಮೂಲಭೂತ ಸಮಸ್ಯೆಯನ್ನು ಹಾಗೆಯೇ ಉಳಿಸುತ್ತವೆ ಮತ್ತು ಧರ್ಮಪರಿವರ್ತನೆಯ ಪ್ರಕ್ರಿಯೆ ಭಾರತದಲ್ಲಿ ಮುಂದುವರೆಯುತ್ತದೆ.

6

ಕೊನೆಗೂ ಕಾಡುವ ಪ್ರಶ್ನೆಯೆಂದರೆ, ಕರ್ನಾಟಕದಲ್ಲಿ ಮತಾಂತರದ  ಚರ್ಚೆಯನ್ನು ಈ ಕಾಲಘಟ್ಟದಲ್ಲಿ ಯಾಕೆ ಎಬ್ಬಿಸಲಾಗಿದೆ ಎನ್ನುವುದು. ಇದೊಂದು ಚಿದಂಬರ ರಹಸ್ಯದ ಪ್ರಶ್ನೆ. ಮತಾಂತರದ ಚರ್ಚೆ ನಿಜವಾಗಿಯೂ ದೇಶದ ಬಿಕ್ಕಟ್ಟಿನಿಂದ ಹುಟ್ಟಿದ್ದಲ್ಲ. ಕೆಳಜಾತಿಯವರ ತಲ್ಲಣಗಳಿಂದಲೂ ಹುಟ್ಟಿದ್ದಲ್ಲ. ಬದಲಿಗೆ ಅದು ಉಚ್ಚಜಾತಿಯವರ ಸಂಕಟಗಳಿಂದ ಹುಟ್ಟಿದ್ದು. ಹಿಂದುತ್ವದ ಬಿಕ್ಕಟ್ಟುಗಳಿಂದ ಹುಟ್ಟಿದ್ದು. ಈಗ ಸರ್ಕಾರ ನಡೆಸುತ್ತಿರುವ ಪಕ್ಷದ ಬಿಕ್ಕಟ್ಟಿನಿಂದ ಹುಟ್ಟಿದ್ದು. ವಿಚಿತ್ರವೆಂದರೆ, ತಮ್ಮ ಮಕ್ಕಳನ್ನು ಕ್ರೈಸ್ತ ಧರ್ಮವಿರುವ ಬಂಡವಾಳಶಾಹಿ ದೇಶಗಳಿಗೆ ಕಳಿಸಿ, ಅಲ್ಲಿಯೇ ನೆಲೆಸಲು ವ್ಯವಸ್ಥೆ ಮಾಡುವ ಜನರೇ, ಇವತ್ತು ಧರ್ಮ ಪರಿವರ್ತನೆಯ ಪ್ರಶ್ನೆಯನ್ನು ಎತ್ತುತ್ತಿರುವುದು. ಕ್ರೈಸ್ತರಾಗಿದ್ದ ಬ್ರಿಟಿಷರ ವಸಾಹತುಶಾಹಿ ಆಳ್ವಿಕೆಯ ಚಾರಿತ್ರಿಕ ಕಾರಣದಿಂದ ನಮಗೆ ಬಂದಿರುವ ಆಧುನಿಕತೆ, ತಂತ್ರಜ್ಞಾನ, ವಿಜ್ಞಾನಗಳ ದೊಡ್ಡ ಫಲಾನುಭವಿ ವರ್ಗಗಳೇ ಇವತ್ತು ಕ್ರೈಸ್ತಧರ್ಮವು ಭಾರತಕ್ಕೆ ಕೊಟ್ಟಿರುವ ಕೊಡುಗೆಗಳನ್ನು ಮನಗಾಣದೆ ಅದನ್ನು ಶತ್ರುವಾಗಿ ನೋಡುತ್ತಿರುವುದು; ಬಾಸೆಲ್ ಮಿಶನ್ನಿನ ಪಾದ್ರಿಗಳು ಬಾರದೆ ಇದ್ದಿದ್ದರೆ ಇವತ್ತಿನ ಕರಾವಳಿಯಲ್ಲಿರುವ ಆಧುನಿಕತೆ ಈ ಪ್ರಮಾಣದಲ್ಲಿ ಇರುತ್ತಿರಲಿಲ್ಲ. ನಿಜವಾಗಿಯೂ ಕರ್ನಾಟಕವು ಅನೇಕ ಮೂಲಭೂತವಾದ ಸಮಸ್ಯೆಗಳನ್ನು ಎದುರಿಸುತ್ತಿದೆ. ಅವೆಂದರೆ, ರೈತರ ಆತ್ಮಹತ್ಯೆ,  ಗಣಿಲೂಟಿ, ಹಣಚೆಲ್ಲಿ ಮತದಾರರನ್ನು ಎಮ್ಮೆಲ್ಲೆಗಳನ್ನು ಖರೀದಿ ಮಾಡುವ ಪ್ರಜಾಪ್ರಭುತ್ವ. ಕೈಗಾರಿಕೆಗಳಿಗೆ ರೈತರ ಭೂಮಿ ಕಿತ್ತುಕೊಡುತ್ತಿರುವ ಎಸ್ಇಜೆಡ್ ಆರ್ಥಿಕ ನೀತಿ, ಜನ ಬಿಪಿಎಲ್ ಕಾರ್ಡನ್ನು ಜೀವನ್ಮರಣದ ಪ್ರಶ್ನೆಯನ್ನಾಗಿ ಮಾಡಿಕೊಂಡು ಹೋರಾಡುತ್ತಿರುವುದು ಇತ್ಯಾದಿ. ಇಂತಹ ಉರಿಯುವ ಸಮಸ್ಯೆಗಳನ್ನು ಬಿಟ್ಟು ಮತಾಂತರವನ್ನು ದೊಡ್ಡ ಸಮಸ್ಯೆಯೆಂದು ಮಂಡಿಸುವಲ್ಲಿಯೇ ಸಮಾಜವಿರೋಧಿ ರಾಜಕಾರಣವಿದೆ. ನಿಜವಾದ ನಾಡಿನ ಸಮಸ್ಯೆಗಳ ಬಗ್ಗೆ ಚರ್ಚೆಯನ್ನು ಆರಂಭಿಸುವುದೇ ಇದಕ್ಕೆ ಉತ್ತರವಾಗಿದೆ.


ಸಂವಿಧಾನ-60 : ಸಾಮಾಜಿಕ ನ್ಯಾಯ ಮತ್ತು ಕರ್ನಾಟಕ” ಪುಸ್ತಕದಿಂದ.
ಕೃಪೆ: ಸಾಮಾಜಿಕ ಪ್ರತ್ಯೇಕತೆ ಮತ್ತು ಒಳಗೊಳ್ಳುವಿಕೆ ನೀತಿಯ ಅಧ್ಯಯನ ಕೇಂದ್ರ, ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ, ಬೆಂಗಳೂರು.

Leave a Reply

Your email address will not be published. Required fields are marked *