ಸುದ್ದಿ ಚಾನಲ್‌ಗಳ ಬುದ್ಧಿಗೇಡಿತನ


– ಡಾ.ಎನ್.ಜಗದೀಶ್ ಕೊಪ್ಪ


ಸಾರ್ವಜನಿಕ ಬದುಕಿನಲ್ಲಿ ಸುದ್ದಿ ಮತ್ತು ಮಾಹಿತಿ ಪ್ರಸಾರಕ್ಕೆ ತೆರೆದುಕೊಂಡಿರುವ ನಮ್ಮ ಸುದ್ದಿ ಮಾಧ್ಯಮಗಳಿಗೆ ಒಂದು ಸಾಮಾಜಿಕ ಹೊಣೆಗಾರಿಕೆ ಇರದಿದ್ದರೆ, ಏನಾಗಬಹುದು ಎಂಬುದಕ್ಕೆ ಇತ್ತೀಚೆಗೆ ನಮ್ಮ ಕನ್ನಡ ಸುದ್ದಿ ಚಾನಲ್‌ಗಳು ಸುದ್ದಿಯ ಹೆಸರಿನಲ್ಲಿ ಕರ್ನಾಟಕದ ಜನತೆಗೆ ಲದ್ದಿಯನ್ನು ಉಣಬಡಿಸುತ್ತಿರುವುದೇ ಸಾಕ್ಷಿ.

ಈ ನಾಡಿನ ಜ್ವಲಂತ ಸಮಸ್ಯೆ ಅಥವಾ ಜೀವನ್ಮರಣದ ಪ್ರಶ್ನೆಯಂಬಂತೆ ಕಳೆದ ನಾಲ್ಕುದಿನಗಳಿಂದ ಒಬ್ಬ ಕಿರುತೆರೆ ನಟಿಯ ಸಾವು ಕುರಿತು ನಡೆಯುತ್ತಿರುವ ಚರ್ಚೆ, ಈ ಕನ್ನಡ ನೆಲದ ಭವಿಷ್ಯದ ದಿನಗಳ ಬಗ್ಗೆ ಗಾಬರಿ ಹುಟ್ಟಿಸುವಂತಿದೆ. ತನ್ನ ಅವಿವೇಕತನದ ನಿರ್ಧಾರದಿಂದ ವಂಚಕನೊಬ್ಬನ ನಾಲ್ಕನೇ ಪತ್ನಿಯಾಗಿ ದಾಂಪತ್ಯ ಬದುಕಿಗೆ ಕಾಲಿಟ್ಟು ನಂತರ ಕೊಲೆಯಾದ ಈ ಕಿರುತೆರೆಯ ನಟಿಯ ಬಗ್ಗೆ ಪೈಪೋಟಿಗೆ ಬಿದ್ದಂತೆ ಕನ್ನಡ ಚಾನಲ್‌ಗಳು ಚರ್ಚೆಯ ಹೆಸರಿನಲ್ಲಿ ತೌಡು ಕುಟ್ಟುತ್ತಿರುವ ಬಗೆಯನ್ನು ಗಮನಿಸಿದರೆ, ಮನಸ್ಸಿನಲ್ಲಿ ಜಿಗುಪ್ಸೆ ಮೂಡುತ್ತದೆ.

ಒಂದು ಜೀವದ ದುರಂತ ಸಾವಿನ ಬಗ್ಗೆ ಮರುಕ ಪಡಬೇಕಾದ್ದು ಮನುಷ್ಯನ ಸಹಜ ಗುಣ. ಆದರೆ, ಅದು ವಿವೇಕದ ಎಲ್ಲೇ ಮೀರಬಾರದು. ಆಕೆಯ ಬದುಕಿನ ವೃತ್ತಾಂತವನ್ನು ಎತ್ತಿಕೊಂಡು ಆ ಹೆಣ್ಣುಮಗಳ ಖಾಸಗಿ ಬದುಕು ಮತ್ತು ಆಕೆಯ ಕುಟುಂಬದ ಜಾತಕವನ್ನು ರಸ್ತೆಯ ಬದಿಯಲ್ಲಿ ಕಬ್ಬಿನ ಹಾಲು ಮಾರುವವನು ಕಬ್ಬನ್ನು ಹಿಂಡುವಂತೆ ಹಿಂಡಿದರೆ, ಪ್ರಯೋಜನವೇನು? ಈ ಘಟನೆಯಲ್ಲಿ ಆಕೆಯ ಪಾತ್ರವೂ ಇತ್ತು ಎಂಬುದನ್ನು ಮರೆಮಾಚಿ ಆಕೆಯನ್ನು ಹುತಾತ್ಮಳಂತೆ ವರ್ಣಿಸುತ್ತಿರುವ ಚಾನಲ್‌ಗಳ ಕೃತಕ ಮಾತುಕತೆಗಳು ಅಸಹ್ಯ ಮೂಡಿಸುತ್ತವೆ.

ಆಕೆಯೇನು ಅವಿದ್ಯಾವಂತೆಯಾಗಿರಲಿಲ್ಲ, ಇಂಜಿನಿಯರಿಂಗ್ ಪದವಿ ಮುಗಿಸಿ, ಕಿರುತೆರೆಯಲ್ಲಿ ಹತ್ತು ವರ್ಷಗಳ ಕಾಲ ದುಡಿದು ನೆಲೆ ಕಂಡುಕೊಂಡಿದ್ದ ಹೆಣ್ಣು ಮಗಳಾಗಿದ್ದಳು. ತಾನು ಯಾರನ್ನು ಮದುವೆಯಾಗಬೇಕು ಎಂಬುದರ ಬಗ್ಗೆ ಗಟ್ಟಿಯಾದ ನಿರ್ಧಾರ ತೆಗೆದುಕೊಳ್ಳಲಾರದ ಅಸಹಾಯಕಳಾಗಿರಲಿಲ್ಲ. ಹಳ್ಳಿಗಾಡಿನ ಏಳನೇ ತರಗತಿ ಓದಿದ ಹುಡುಗಿಯರು ಪೋಷಕರನ್ನು ಧಿಕ್ಕರಿಸಿ ತಾನು ಮೆಚ್ಚಿದ ಹುಡುಗನ ಜೊತೆ ಪೊಲೀಸ್ ಠಾಣೆಗೆ ಹೋಗಿ ಮದುವೆಯಾಗುತ್ತಿರುವ ಈ ದಿನಗಳಲ್ಲಿ ಸಾರ್ವಜನಿಕ ಬದುಕಿನಲ್ಲಿ ಅಪಾರ ಸಹೃದಯರ ಗೆಳೆತನ ಸಂಪಾದಿಸಿದ್ದ ಈ ನಟಿಗೆ ಅದು ಏಕೆ ಸಾಧ್ಯವಾಗಲಿಲ್ಲ? ಇದು ಇಲ್ಲಿಗೆ ಮುಗಿಯಬಹುದಾದ ಮಾತು.

ನಡೆದಿರುವ ದುರಂತದ ಘಟನೆಯ ತನಿಖೆಯನ್ನು ಪೊಲೀಸರು ಕೈಗೆತ್ತಿಕೊಂಡು, ಆಕೆಯ ಪತಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿರುವಾಗ ಆಕೆಯ ಬೆಡ್ ರೂಂ ರಹಸ್ಯ, ಮತ್ತು ಆಕೆಯ ಗಂಡನ ಪುರುಷತ್ವದ ಬಗೆಗಿನ ಸಂದೇಹವನ್ನು ಈ ಚಾನಲ್‌ಗಳು ಚುಯಿಂಗ್ ಗಂ ನಂತೆ  ಬಹಿರಂಗವಾಗಿ ಅಗಿಯುತ್ತಿರುವುದೇಕೆ?

ಇದೀಷ್ಟೇ ಆಗಿದ್ದರೇ ಸಹಿಸಬಹುದಿತ್ತು ಆದರೆ, ಕಳೆದ ಎರಡು ತಿಂಗಳಿಂದ ಕಪಟ ಸನ್ಯಾಸಿ ಎಂದು ಜಗಜ್ಜಾಹೀರಾಗಿರುವ ನಿತ್ಯಾನಂದನ ಪರ ವಿರೋಧ ಕುರಿತು ಚಾನಲ್‌ಗಳಲ್ಲಿ ನಡೆಯುತ್ತಿರುವ ವಾಗ್ವಾದಗಳು ನ್ಯಾಯಾಲಯದಲ್ಲಿನ ವಕೀಲರ ವಾದಗಳನ್ನು ನಾಚಿಸುವಂತಿವೆ. ಆರತಿರಾವ್ ಎಂಬಾಕೆ ಸಾಮಾನ್ಯ ಹೆಣ್ಣು ಮಗಳೇಲ್ಲ, ಕಂಪ್ಯೂಟರ್ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದು ಅಮೇರಿಕಾದ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಆರು ವರ್ಷ ದುಡಿದು ಅನುಭವಗಳಿಸಿದಾಕೆ. ಆತನ ಜೊತೆ ಪಲ್ಲಂಗ ಹಂಚಿಕೊಂಡಾಗ ಈಕೆಯ ವಿವೇಕ ಅಥವಾ ಪ್ರಜ್ಞೆ ಯಾವ ಕಾಡಿನಲ್ಲಿ ಅನಾಥವಾಗಿ ಅಲೆಯುತ್ತಿತ್ತು. ಈಗ ದುರಂತ ನಾಯಕಿಯಂತೆ ಕ್ಯಾಮರಾ ಮುಂದೆ ಕಣ್ಣೀರು ಹರಿಸುವುದು, ಅದಕ್ಕೆ ನಿರೂಪಕ ಉಪ್ಪು, ಖಾರ, ಮಸಾಲೆ ಬೆರಸಿ, ವರ್ಣಿಸುವುದು ಇದೆಲ್ಲಾ ಒಂದು ಚಾನಲ್ ಕಥೆಯಾದರೆ, ನಿತ್ಯಾನಂದನ ಪರ ತೊಡೆ ತಟ್ಟಿ ನಿಂತಿರುವ ಮತ್ತೊಂದು ಚಾನಲ್ ಇದೇ ಆರತಿಯನ್ನು ವೇಶೈಯಂತೆ ಬಿಂಬಿಸುತ್ತಿದೆ. ಆಕೆಯ ವೈದ್ಯಕೀಯ ವರದಿಗಳ ಬಗ್ಗೆ ತೀರ್ಪು ನೀಡಲು ಇವರಿಗೆ ಅಷ್ಟೋಂದು ಕಾಳಜಿ ಏಕೆ? ಇವುಗಳನ್ನು ಗಮನಿಸಿದರೇ, ಇವರು ಸಮಾಜಕ್ಕೆ ಯಾವ ಸಂದೇಶ ಕೊಡಲು ಹೊರಟಿದ್ದಾರೆ ಎಂದು ಪ್ರಶ್ನಿಸಬೇಕಾಗಿದೆ.

“ಕೊಲೆ, ಅನೈತಿಕ ಸಂಬಂಧ, ಇವುಗಳ ವಿಚಾರಣೆಗೆ ಪೊಲೀಸರು, ನ್ಯಾಯಲಯ, ವಕೀಲರು ಏಕೆ ಬೇಕು? ನಾವಿದ್ದೀವೆ,” ಎಂಬಂತಿದೆ ಇತ್ತಿಚೆಗಿನ ಕನ್ನಡದ ಚಾನಲ್‌ಗಳ ಸಂಸ್ಕೃತಿ. ಇವುಗಳೆಲ್ಲವನ್ನು ಮೀರಿದ, ಆದ್ಯತೆಯ ಮೇಲೆ ಚರ್ಚಿಸಬೇಕಾದ ವಿಷಯಗಳು ಕರ್ನಾಟಕದಲ್ಲಿ ತುಂಬಿ ತುಳುಕುತ್ತಿವೆ ಆದರೆ, ಗ್ರಹಿಸುವ ಹೃದಯಗಳು ಇರಬೇಕು. ಪ್ರತಿ ನಿತ್ಯ ನಡೆಯುವ ರೈತರ ಆತ್ಮಹತ್ಯೆ, ಕುಸಿಯುತ್ತಿರುವ ಬೇಸಾಯದ ಬಗೆಗಿನ ರೈತನ ಕಾಳಜಿ, ಬರದಿಂದ ತತ್ತರಿಸುತ್ತಿರುವ ಗ್ರಾಮೀಣ ಜನತೆ, ಮೇವಿಲ್ಲದೆ ಕಟುಕರ ಮನೆಗೆ ಸಾಗುತ್ತಿರುವ ಜಾನುವಾರುಗಳು, ನಾಗಾಲೋಟದಲ್ಲಿ ಏರುತ್ತಿರುವ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ನಗರಗಳಲ್ಲಿ ತತ್ತರಿಸಿ ಹೋಗಿರುವ ಬಡವರು ಇವರೆಲ್ಲಾ ಗಂಭೀರವಾಗಿ ಏಕೆ ಚರ್ಚೆಯಾಗುತ್ತಿಲ್ಲ?

ಒಂದು ಕೆ.ಜಿ. ಅಕ್ಕಿ ಬೆಲೆ ಮತ್ತು ಸಕ್ಕರೆಯ ಬೆಲೆ ನಲವತ್ತು ರೂಪಾಯಿ ಆಗಿದೆ. ಬಡವರು ಅಕ್ಕಿ ತಿನ್ನಬೇಕೊ? ಸಕ್ಕರೆ ತಿನ್ನಬೇಕೊ? ಭಾರತದ 118 ಕೋಟಿ ಜನರಲ್ಲಿ 92 ಕೋಟಿ ಮೊಬೈಲ್ ಚಂದಾದಾರರಿದ್ದಾರೆ. ಸರಾಸರಿ ಪ್ರತಿಯೊಬ್ಬ ವ್ಯಕ್ತಿ ತಿಂಗಳಿಗೆ ನೂರು ರೂ ಖರ್ಚು ಮಾಡುತ್ತಿದ್ದಾನೆ ಎಂದು ಲೆಕ್ಕ ಹಾಕಿದರೂ ತಿಂಗಳಿಗೆ 92 ಸಾವಿರ ಕೋಟಿ ರೂಗಳು ಅರ್ಥವಿಲ್ಲದ ಖಾಲಿ ಶಬ್ಧಗಳಾಗಿರುವ ಮಾತಿಗೆ ವ್ಯಯ ಮಾಡುತ್ತಿದ್ದೇವೆ. ಇದು ನಾಚಿಕೇಗೇಡಿನ ಸಂಗತಿ ಎಂದು ನಮಗೆ ಅನಿಸುವುದಿಲ್ಲ. ದಶಕದ ಹಿಂದೆ ಈ ಮೊಬೈಲ್ ಇಲ್ಲದಿದ್ದಾಗಲೂ ಜನ ಬದುಕಿದ್ದರಲ್ಲವೆ? ಈ ಹಣ ಯಾರನ್ನು ಉದ್ದಾರ ಮಾಡುತ್ತಿದೆ ಎಂಬುದರ ಕುರಿತು ಜನಸಾಮಾನ್ಯರಿಗೆ ತಿಳುವಳಿಕೆ ಹೇಳಬೇಕಾದವರು ಯಾರು? ದೃಶ್ಯ  ಮಾಧ್ಯಮಗಳೇಕೆ ಮೌನವಾಗಿವೆ. ನಮ್ಮನ್ನಾಳುವವರು ಯಾವ ವಿಷಯದಲ್ಲಿ ಮುಳುಗಿದ್ದಾರೆ? ಈ ರಾಜ್ಯದಲ್ಲಿ ಜನರಿಂದ ಚುನಾಯಿತರಾದ ಜನಪ್ರತಿನಿಧಿಗಳ ಒಂದು ಸರ್ಕಾರ ಅಸ್ತಿತ್ವದಲ್ಲಿ ಇದೆ ಎಂದು ಯಾರಿಗಾದರೂ ಅನಿಸುತ್ತಾ? ಇಂತಹ ಗಂಭೀರ ವಿಷಯಗಳು ಯಾಕೆ ಚರ್ಚೆಯಾಗುತ್ತಿಲ್ಲ? ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರನ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಅನಾವರಣಗೊಳಿಸಲು ಒಬ್ಬ ಸಾಮಾಜಿಕ ಕಾರ್ಯಕರ್ತ ಅರವಿಂದ್ ಕೇಜ್ರಿವಾಲ್‌ನಿಂದ ಸಾಧ್ಯವಾಯಿತು. ದೇಶದೆಲ್ಲೆಡೆ ಒಂದೇ ಸಮನೇ ಘರ್ಜಿಸುತ್ತಿರುವ ನೂರಕ್ಕೂ ಹೆಚ್ಚಿನ ಸುದ್ದಿ ಚಾನಲ್‌ಗಳು ಏನು ಮಾಡುತ್ತಿದ್ದವು?

ಘಟಿಸಿ ಹೋದ ವಿಷಯಗಳನ್ನು ತೆಗೆದುಕೊಂಡು ಮಸಾಲೆ ಹಾಕಿ ರುಬ್ಬುವುದಕ್ಕೆ ಇಂತಹ ಸುದ್ದಿ ಚಾನಲ್‌ಗಳು ಕನ್ನಡದ ಜನತೆಗೆ ಅವಶ್ಯಕತೆ ಇಲ್ಲ. ಸಮಸ್ಯೆಯ ಆಳಕ್ಕೆ ಇಳಿಯುವ , ಅವುಗಳನ್ನು ಹುಡುಕಿಕೊಂಡು ಹೋಗಿ ಜನತೆಯ ಮುಂದಿಡುವ ಮನಸ್ಸುಗಳು ಈಗ ಬೇಕಾಗಿವೆ. ಮಂಡ್ಯ ಜಿಲ್ಲೆಯ ಆಡು ಭಾಷೆಯಲ್ಲಿ ಒಂದು ಮಾತಿದೆ. “ಬಾಳೆ ಗಿಡ ಕಡಿಯೊದ್ರಲ್ಲಿ ನನ್ನ ಗಂಡ ಶೂರ ಧೀರ” ಅಂತಾ. ನಮಗೆ ಬಾಳೇ ಗಿಡ ಕಡಿಯುವವರು ಬೇಕಾಗಿಲ್ಲ. ಈ ನೆಲದಲ್ಲಿ ಎಲ್ಲೆಂದರಲ್ಲಿ ಬೆಳೆದು ತಾಂಡವವಾಡುತ್ತಿರು ಮುಳ್ಳಿನ ಗಿಡಗಳು ಮತ್ತು ಕಳೆಗಳನ್ನು ಕಿತ್ತು ಹಾಕಿ ನೆಲವನ್ನು ಹಸನು ಮಾಡುವ ಅಪ್ಪಟ ಮನುಷ್ಯರು ಬೇಕಾಗಿದ್ದಾರೆ.

ನನ್ನ ಕಥೆಗಾರ ಮಿತ್ರ ಕೇಶವ ಮಳಗಿ ಹೇಳಿದ ಒಂದು ಅತ್ಯಂತ ಮೌಲ್ಯಯುತ ಮಾತು ನೆನಪಾಗುತ್ತಿದೆ: “ಗಂಟಲು ಹರಿದುಕೊಳ್ಳುವ, ಘೋಷಣೆ ಕೂಗುತ್ತಿರುವ ಈ ದಿನಗಳಲ್ಲಿ ಅಂತರಂಗದ ಪಿಸು ಮಾತಿಗೆ ಕಿವಿ ಕೊಡುವವರು ಕಡಿಮೆಯಾಗುತಿದ್ದಾರೆ.” ಒಂದೇ ಸಮನೆ ಸುದ್ದಿಯ ಹೆಸರಿನಲ್ಲಿ ವಿವೇಚನೆಯಿಲ್ಲದೆ ಗಂಟಲು ಹರಿದುಕೊಳ್ಳುತಿದ್ದರೆ, ಮುಂದಿನ ದಿನಗಳಲ್ಲಿ ಕರ್ನಾಟಕದ ಜನತೆ ನಮ್ಮನ್ನು (ಅಂದರೇ ದೃಶ್ಯ ಮಾಧ್ಯಮದ ಒಂದು ಭಾಗವಾಗಿರುವ ನನ್ನನ್ನೂ ಒಳಗೊಂಡಂತೆ) ಪತ್ರಕರ್ತರು ಎಂದು ಕರೆಯುವುದಿಲ್ಲ, ಬದಲಾಗಿ ಬಫೂನುಗಳು ಎಂದು ಕರೆಯುತ್ತಾರೆ. ಈ ಕಾರಣಕ್ಕಾಗಿಯೇ ಅಲ್ಲಮ ತನ್ನ ವಚನವೊಂದರಲ್ಲಿ ನಮ್ಮನ್ನು ಹೀಗೆ ಎಚ್ಚರಿಸಿದ್ದಾನೆ:

ಶಬ್ಧ ಸಂಭ್ರಮದಲ್ಲಿ ಹಿಂದುಗಾಣರು ಮುಂದುಗಾಣರು
ತಮ್ಮ ತಾವರಿಯರು
ಇದು ಕಾರಣ-ಮೂರು ಲೋಕವೆಲ್ಲವೂ
ಬರಸೂರೆವೋಯಿತ್ತು ಗುಹೇಶ್ವರಾ.

(ವ್ಯಂಗ್ಯಚಿತ್ರ ಕೃಪೆ : ಪ್ರಕಾಶ್ ಶೆಟ್ಟಿ, ಪ್ರಜಾವಾಣಿ.)

18 comments

 1. Sir,

  You are absolutely right. Our channels have thought of they are there to give verdicts. When the brute Rushikumar was bombarding in tv channels no one was willing to examine his background. Now they are after him.

  The sad development is that some tv channels fighting each other and organizing program after program to prove the innocence at the both ends. It seems that these tv channels have taken so much of money as bribe to telecast these programs.

 2. ಜಗದೀಶ ಅವರೇ,
  ನಿಮ್ಮ ಬರಹವನ್ನು ಸಂಪೂರ್ಣವಾಗಿ ಒಪ್ಪುತ್ತೇನೆ.ಈ ಮಾಧ್ಯಮಗಳು (ಕನ್ನಡ ಸುದ್ದಿ ವಾಹಿನಿಗಳು) ಕನ್ನಡಿಗರನ್ನೆಲ್ಲಾ ಕುರಿಗಳು ಎಂದು ತಿಳಿದುಕೊಂಡಿರುವಂತಿದೆ.ಸಾಮಾಜಿಕ ಜವಾಬ್ದಾರಿ ಎನ್ನುವದು ಸ್ವಲ್ಪವೂ ಇಲ್ಲ.ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲು ಮಾಡಿ, ಪ್ರಾಕೃತಿಕ ಸಂಪತ್ತನ್ನೆಲ್ಲಾ ಲೂಟಿ ಮಾಡಿ ವಾಮ ಮಾರ್ಗದಿಂದ ಬಂದ ಹಣದಿಂದ ತಮ್ಮ ರಾಜಕೀಯ ತೆವಲುಗಳನ್ನು ತೀರಿಸಿಕೊಳ್ಳಲು ಪ್ರಾರಂಭಿಸಿದ ಸುದ್ದಿ ವಾಹಿನಿಗಳಿವು. ಇಂಥವರಿಂದ ಸಾಮಾಜಿಕ ಕಳಕಳಿ,ಬದ್ಧತೆ ಮುಂತಾದವುಗಳನ್ನು ನಿರೀಕ್ಷಿಸಲು ಸಾದ್ಯವಿಲ್ಲ. ಇವನ್ನೆಲ್ಲ ನೋಡುತ್ತಿದ್ದರೆ ದೂರದರ್ಶನದ ಚಂದನ ವಾಹಿನಿಯ ವಾರ್ತೆಗಳೇ ಮೇಲು ಎನಿಸುತ್ತದೆ.

 3. ಕನ್ನಡ ಸುದ್ದಿವಾಹಿನಿಗಳು ತುಂಬಾ ಕಳಪೆ ಗುಣಮಟ್ಟದ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿದ್ದು ದೇಶದಲ್ಲಿಯೇ ಗುಣಮಟ್ಟದ ಕಾರ್ಯಕ್ರಮಗಳ ಪ್ರಸಾರದಲ್ಲಿ ಕೊನೆಯ ಸ್ಥಾನದಲ್ಲಿ ನಿಲ್ಲುವ ಸಂಭವ ಇದೆ. ಸುದ್ದಿ ಮುಖ್ಯಾಂಶಗಳನ್ನು ಹೇಳುವಾಗ ಮೊದಲು ಹೇಳಬೇಕಾಗಿರುವುದು ದೇಶದ ಅಥವಾ ರಾಜ್ಯದ ಪ್ರಧಾನ ಘಟನೆಗಳಿಗೆ ಸಂಬಂಧಿಸಿದ ವಿಚಾರಗಳನ್ನು. ಆದರೆ ಕನ್ನಡ ಸುದ್ದಿವಾಹಿನಿಗಳು ತೀರಾ ವೈಯಕ್ತಿಕ ಎಂಬಂಥ ವಿಚಾರಗಳನ್ನು, ಅಥವಾ ಅತ್ಯಂತ ಪ್ರಾದೇಶಿಕ ಅಥವಾ ಕ್ಷುಲ್ಲಕ ಎಂಬಂಥ ವಿಚಾರಗಳನ್ನು ಮುಖ್ಯಾಂಶವೆಂಬಂತೆ ಪ್ರಸಾರ ಮಾಡುತ್ತವೆ. ನಾವು ಬದಲಾಗಿದ್ದೇವೆ ಎಂದು ಹೇಳಿಕೊಂಡ ಸುವರ್ಣ ಸುದ್ದಿವಾಹಿನಿ ಎಳ್ಳಷ್ಟೂ ಬದಲಾಗಿಲ್ಲ, ಬದಲಾಗುವ ಸಂಭವವೂ ಕಾಣುವುದಿಲ್ಲ. ರಾಷ್ಟ್ರೀಯ ಹಿತಾಸಕ್ತಿಯನ್ನು, ರಾಜ್ಯದ ಹಿತಾಸಕ್ತಿಗಳನ್ನು ಬಿಂಬಿಸುವ ಕಾರ್ಯಕ್ರಮಗಳು ಕನ್ನಡ ಸುದ್ದಿ ವಾಹಿನಿಗಳಲ್ಲಿ ಪ್ರಸಾರ ಆಗುವುದೇ ಇಲ್ಲ. ಕನ್ನಡದ ಸುದ್ದಿವಾಹಿನಿಗಳಿಗೆ ಹೋಲಿಸಿದರೆ ಹಿಂದಿ ಭಾಷೆಯ ಸುದ್ದಿವಾಹಿನಿಗಳು ಹೆಚ್ಚು ಉತ್ತಮವಾಗಿ ಪ್ರಸಾರವಾಗುತ್ತಿವೆ.

 4. ಒಳ್ಳೆಯ, ಅರ್ಥಪೂರ್ಣ ಬರಹ, ಲೇಖಕರು ಇದರಲ್ಲಿ ಪ್ರತಿಪಾದಿಸಿರುವುದನ್ನು ನಾನು ಪೂರ್ಣವಾಗಿ ಅನುಮೋದಿಸುತ್ತೇನೆ.

 5. ವೈಚಾರಿಕ ಬರಹ.. ನಿಮ್ಮ ಎಲ್ಲಾ ವಿಚಾರಗಳನ್ನು ನಾನು ಒಪ್ಪುತ್ತೇನೆ. ಈ ನಿಟ್ಟಿನಲ್ಲಿ ಸುದ್ದಿವಾಹಿನಿಗಳು ಎಚ್ಚೆತ್ತು ಸರಿಯಾದ ಕ್ರಮದಲ್ಲಿ ಕಾರ್ಯರೂಪಿಸುವುದು ಅವಶ್ಯವಾಗಿದೆ. ಉಪ್ಪು ರುಚಿಗೆ ತಕ್ಕಷ್ಟು ಇದ್ದರೆ ಸಾಕು ಎನ್ನುವುದು ಅವರು ತಿಳಿಯಬೇಕು. ಇಲ್ಲವಾದ್ದಲ್ಲಿ ಜನರು ಅವರಿಗೆ ನೀರು ಕುಡಿಸಲು ಮುಂದಾಗಬಹುದು..

 6. Article is very true. Thanks to the author.

  I recall Late V S Acharya talking about ombudsmen for print and electronic media. That should come at the earliest.

  “Adakke naanu eegalu Chandana maatra noduttene” — 100% good job. Even I will try to do that.

  One Important thing: It seems ‘Nithyananda’ is not fraud and one more victim of media/money. If so let court take its own course. Let us not decide who is white and who is not. Author also failed to be neutral! May be syndrome.

 7. ಇದು ಕರ್ನಾಟಕದ ಕೊಟ್ಯಂತರ ಪ್ರಜೆಗಳ ಅಂತರಂಗದ ನೋವಿನ ಮತ್ತು ಹತಾಶೆಯ ಮಾತು. ಆ ಮಾತುಗಳಿಗೆ ನೀವು ಬರಹದ ರೂಪ ನೀಡಿದ್ದಿರ. ಅಭಿನಂದನೆಗಳು ಹಾಗು ಧನ್ಯವಾದಗಳು.

 8. ಹೌದು ಅಕ್ಷರಸಹ ಸತ್ಯ
  ನಮ್ಮ ನಾಡು, ನುಡಿ, ಜಲ, ಸಂಸ್ಕೃತಿ ರಕ್ಷಣೆ ಮಾಡುವುದು ಇವರಿಂದ ಸಾಧ್ಯವಿಲ್ಲ.
  ಪಣೀ೦ದ್ರ

 9. NIJAVAGI AA 4 DINA GHORAVAGIDDVU,YAVA CHANNEL NODIDARU ADE SUDDI ,TAMMA MANE SUDDI IDE REETI TORISUTTARA??? “SHUDHA NAACHIKEGADINA”CHANNELGALU

 10. Fantastic article. There should be a state level debate about these matters. Hope a platform will be created by the learned people of the state.

 11. ನಿಮ್ಮ ಲೇಖನ ಸುದ್ದಿ ಚಾನೆಲ್ ಗಳ ಕಣ್ಣು ತೆರೆಸುವಂತಿದೆ. ಚಾನಲ್ ಗಳ ಹೆಸರು ಹಾಕಿದ್ದರೆ ಚನ್ನಾಗಿತ್ತು. ಈ ಟಿವಿ ಕನ್ನಡ ನ್ಯೂಸ್ , ಡಿ ಡಿ ಚಂದನ ಉತ್ತಮವಾಗಿ , ಗುಣಮಟ್ಟದ ಸುದ್ದಿ ನೀಡುತ್ತಿವೆ. ಅದನ್ನು ಪ್ರಸ್ತಾಪಿಸಬೇಕಿತ್ತು.

 12. ಜಗದೀಶ್ ಅವರೇ ನಮಸ್ಕಾರ.. ತಮ್ಮ ಬರಹ ಓದಿದೆ ತುಂಬಾ ಚೆನ್ನಾಗಿದೆ..ತಮ್ಮ ತಮ್ಮ TRP ಹೆಚ್ಚಿಸಿಕೊಳ್ಳಲು ಮಾಧ್ಯಮದವರು ಈರೀತಿ ಪೈಪೋಟಿಗಿಳಿದು ತಮ್ಮ ವೈಯಕ್ತಿಕ ದ್ವೇಷವನ್ನು ಮಾಧ್ಯಮದ ಮೂಲಕ ಜಗಜ್ಜಾಹಿರುಗೊಳಿಸುತ್ತಿರುವಾಗ ನೋಡುಗರ ಮೇಲೆ ಎಂಥ ಪರಿಣಾಮ ಬೀರಬಹುದು ಎಂಬ ಕಲ್ಪನೆ ಇವರಿಗೆ ಇಲ್ಲವೇ….!!!! ಆಶ್ಚರ್ಯವಾಗುತ್ತದೆ.

Leave a Reply

Your email address will not be published.