ಹಾಡುಗಳಾಗುವ ಭರದಲ್ಲಿ ಕಳೆದು ಹೋದ ವಚನಗಳು

ಎನ್.ಎಸ್.ಮನೋಹರ್

ಬಿ.ವಿ.ಕಾರಂತರು ಒಮ್ಮೆ ಹೇಳಿದ ಮಾತು, “ನಾಟಕಗಳಲ್ಲಿ ಹಾಡುಗಳು ಮಾತುಗಳಾಗಬೇಕು”. ಅವರ ಸಂಗೀತ ನಿರ್ದೇಶನದ ನಾಟಕಗಳಲ್ಲಿ ಹಾಡುಗಳು ಮಾತಾಗಿರುವ ಬಗೆಯನ್ನು ಗುರುತಿಸಬಹುದು. ರಂಗದ ಮೇಲೆ ಮಾತೇ ಪ್ರಧಾನ, ಏಕೆಂದರೆ ರಂಗದ ಉದ್ದೇಶ ಪ್ರೇಕ್ಷಕರನ್ನು ತಲುಪುವುದು.

ಪಕ್ಕಾ ಮಾತುಗಳೇ ಆಗಿರುವ ಶರಣರ ವಚನಗಳನ್ನು ಹಾಡುಗಳನ್ನಾಗಿಸುವ ಭರದಲ್ಲಿ ಶರಣ ಚಳವಳಿಯ ಉದ್ದೇಶ ಮತ್ತು ತಾತ್ವಿಕತೆಗಳಿಗೆ ಎಳ್ಳುನೀರು ಬಿಟ್ಟ ನೃತ್ಯ-ನಾಟಕವೊಂದರ ಬಗ್ಗೆ ಅಭಿಪ್ರಾಯ ಹೇಳುವುದಷ್ಟೆ ಈ ಬರಹದ ಉದ್ದೇಶ.

ಮೈಸೂರಿನ ನಿರಂತರ ಫೌಂಡೇಶನ್ ಕೆಲ ವರ್ಷಗಳಿಂದ ‘ಕೂಡಲಸಂಗಮ’ ಎನ್ನುವ ನೃತ್ಯ-ನಾಟಕವನ್ನು ಪ್ರದರ್ಶಿಸುತ್ತಾ ಬಂದಿದೆ. ಈಗಾಗಲೇ ರಾಜ್ಯದಲ್ಲಿ ಸಾಕಷ್ಟು ಖ್ಯಾತಿ ಗಳಿಸಿರುವ ಈ ನೃತ್ಯ-ನಾಟಕದ 97ನೇ ಪ್ರದರ್ಶನ ಶನಿವಾರ (ಅಕ್ಟೊಬರ್ 13) ಹಾಸನದ ಹಾಸನಾಂಬ ಕಲಾಕ್ಷೇತ್ರದಲ್ಲಿ ನಡೆಯಿತು. ಖ್ಯಾತ ಗಾಯಕ ಮತ್ತು ಸಂಗೀತ ನಿರ್ದೇಶಕ ಸಿ.ಅಶ್ವಥ್ ಸಂಗೀತದಲ್ಲಿ ಶರಣರ ಹಲವು ವಚನಗಳು ನೃತ್ಯರೂಪದಲ್ಲಿ ಪ್ರದರ್ಶನಗೊಂಡವು. ನಿರ್ದೇಶನ ಎಂ.ಎಂ. ಸುಗುಣ ಅವರದ್ದು.

97ನೇ ಪ್ರದರ್ಶನವನ್ನು ಕಾಣುತ್ತಿರುವ ಈ  ನೃತ್ಯ-ನಾಟಕವನ್ನು ನೋಡಲೆಂದೇ ದೂರದ ಊರಿನಿಂದ ಹಾಸನಕ್ಕೆ ಹೋಗಿದ್ದ ನನ್ನ ನಿರೀಕ್ಷೆಗಳನ್ನು ನಾಟಕ ಹುಸಿ ಮಾಡಿತು. ಕೆಲ ವಚನಗಳು ಕೋಲಾಟದ ಪದಗಳಾಗಿ ಉಳಿದರೆ, ಮತ್ತೆ ಕೆಲವು ಮದುವೆ ಹಿಂದಿನ ದಿನದ ಮೆಹಂದಿ ಕಾರ್ಯಕ್ರಮದಲ್ಲಿ ಯುವಕ-ಯುವತಿಯರು ಹೆಜ್ಜೆಹಾಕಲು ಆಯ್ಕೆ ಮಾಡಿಕೊಳ್ಳಬಹುದಾದ ಜನಪ್ರಿಯ ಹಾಡುಗಳಿಗೆ ಸೀಮಿತವಾದವು. ವಚನ ಚಳವಳಿಯ ಐತಿಹಾಸಿಕ ಮಹತ್ವ ಮತ್ತು ಸಾಮಾಜಿಕ ಅಗತ್ಯಗಳ ಅರಿವಿನ ಕೊರತೆ ಪ್ರದರ್ಶನದ ಹೈಲೈಟ್.

‘ಎಲ್ಲಿ ಹೋದೆ ನೀ ಬಸವ..?’, ‘ನೀ ಇಲ್ಲದೆ ನಮ್ಮ ಕನಸುಗಳೆಲ್ಲಾ ಕಮರಿಹೋಗಿವೆ’… ಹೀಗೆ ಬಸವಣ್ಣನ ಇರುವಿಕೆಯನ್ನು ಗಾಢವಾಗಿ ಬಯಸುವ ಎರಡು ಪಾತ್ರಗಳು ನೃತ್ಯ-ನಾಟಕದ ಸೂತ್ರಧಾರರು. ಅವರೊಂದಿಗೆ ಬಂದು ಸೇರುವವನು – ಕೂಡಲ ಸಂಗಮ. ಈ ಮೂವರು ಬಸವಣ್ಣನ, ಅವನ ಅನುಯಾಯಿಗಳು ಹಾಗೂ 12 ನೇ ಶತಮಾನದ ಚಳವಳಿಯನ್ನು ತೀರಾ ರೋಮ್ಯಾಂಟಿಕ್ ಆಗಿ ನೆನೆಯುತ್ತಾ ಹೋದಂತೆ ವಚನಗಳು ಹಾಡಾಗಿ ರಂಗದ ಮೇಲೆ ಬರುತ್ತವೆ.

ಅಬ್ಬರದ ಸಂಗೀತದ ಮಧ್ಯೆ ವಚನಗಳ ಪಠ್ಯವನ್ನು ಗ್ರಹಿಸಲು ಪ್ರೇಕ್ಷಕರು ಹರಸಾಹಸ ಮಾಡಬೇಕಾಗುತ್ತದೆ. ಅಲ್ಲಿ ವಚನಕಾರರಿಗಿಂತ ಹಾಡುಗಾರ, ಕಂಸಾಳೆ ದನಿ, ಅಶ್ವಥ್ ರ ಶ್ರಮಕ್ಕೆ ಹೆಚ್ಚು ಮನ್ನಣೆ. ವಚನದ ಸಾರವನ್ನು ಪ್ರೇಕ್ಷಕರಿಗೆ ತಲುಪಿಸುವ ಪ್ರಕ್ರಿಯೆಯಲ್ಲಿ ವಚನಕಾರರ ಸ್ಥಾನ ತೀರಾ ಗೌಣ. ಪ್ರತಿ ವಚನದ ಅಂತ್ಯದಲ್ಲಿ ‘ಕೂಡಲಸಂಗಮ’ ಎಂಬ ಅಂಕಿತನಾಮ ಮಾತ್ರ ಓದುಗರನ್ನು ತಲುಪುತ್ತದೆ.

ವಚನ ಚಳವಳಿ ಅಸಮಾನತೆ ವಿರುದ್ಧ ದನಿ ಎತ್ತಿತ್ತು. ಹಾಗೆಯೇ ಎಲ್ಲರ ಅಭಿವೃದ್ಧಿಗಾಗಿ ‘ಕಾಯಕ’ವನ್ನು ಬೋಧಿಸಿತು. ಇವೆರಡು ಗಂಭೀರ ದನಿಯಲ್ಲಿ ಹೇಳಬೇಕಾದ ಸಂಗತಿಗಳು. ವಚನಗಳನ್ನು ಜನಪ್ರಿಯಗೊಳಿಸುವ ಭರದಲ್ಲಿ ಪಾಪುಲರ್ ಗಾಯಕರು ಸಂಗೀತ ನಿರ್ದೇಶಕರು ಸಂಗೀತ ಸಂಯೋಜಿಸಿದರೆ, ಈ ಸಂದೇಶ ಮೂಲೆಗುಂಪಾಗುವುದು ನಿರೀಕ್ಷಿತ. ವಿಮರ್ಶಕ ಕಿ.ರಂ. ನಾಗರಾಜ್ ಕೆಲವೆಡೆ ಜನಪ್ರಿಯ ಸಂಗೀತ ನಿರ್ದೇಶಕ ಹಾಗೂ ಗಾಯಕರ ಬಗ್ಗೆ ಇಂಥದೇ ಮಾತುಗಳನ್ನಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಹಾಸನದ ಪ್ರೇಕ್ಷಕರು ಪ್ರದರ್ಶನವನ್ನು ‘ಎಂಜಾಯ್’ ಮಾಡಿದರು. ಎಂಜಾಯ್ – ಪದವನ್ನು ಪ್ರಜ್ಞಾಪೂರ್ವಕವಾಗಿಯೇ ಬಳಸುತ್ತಿದ್ದೇನೆ. ಏಕೆಂದರೆ ಅಲ್ಲಿ ‘ಎಂಜಾಯ್’ ಮಾಡಲಷ್ಟೇ ಸಾಧ್ಯವಿತ್ತು, ‘ಎನ್‌ಲೈಟನ್ಮೆಂಟ್’ಗೆ ಅವಕಾಶ ಇರಲಿಲ್ಲ. ವೀಕೆಂಡ್ ಮೂಡಿನಲ್ಲಿದ್ದ ಕಲಾಸಕ್ತರು ಅಶ್ವಥ್ ರ ಮೋಡಿಗೆ ಮರುಳಾದರು, ವಚನಗಳನ್ನು ಕೇಳದೇ ಹೋದರು. ಪರೀಕ್ಷೆ ಮಾಡಬೇಕೆಂಬ ಉದ್ದೇಶ ಇದ್ದವರು ಮುಂದಿನ ಪ್ರದರ್ಶನದಲ್ಲಿ ಅಬ್ಬರದ ಸಂಗೀತದ ಮಧ್ಯೆ ವಚನಗಳಿಗೆ ಹುಡುಕಲು ಯತ್ನಿಸಬಹುದು.


ಯೂಟ್ಯೂಬ್‌ನಲ್ಲಿರುವ “ಕೂಡಲ ಸಂಗಮ” ನೃತ್ಯ-ನಾಟಕದ ಒಂದು ಭಾಗ:

3 thoughts on “ಹಾಡುಗಳಾಗುವ ಭರದಲ್ಲಿ ಕಳೆದು ಹೋದ ವಚನಗಳು

  1. ಮೂರ್ತಿ ದೇರಾಜೆ

    ಲೇಖನ ತುಂಬಾ ಚೆನ್ನಾಗಿದೆ….ಪ್ರಾಯಷಃ ಬಿವಿಕಾರಂತರು ಒಂದು ತಪ್ಪು ಮಾಡಿದ್ದರು …ಅಂತ ಹೇಳಬಹುದಾದರೆ….!!! ಈ ಅಶ್ವತ್ ಎನ್ನುವ ಮಹಾನುಭಾವನನ್ನು ತಮ್ಮೊಂದಿಗೆ ಸೇರಿಸಿಕೊಂಡದ್ದು….(ಎಸ್.ಡಿ.ಬರ್ಮನ್ ರನ್ನು ಹೋಲುತ್ತಾರೆ…ಏನ್ನುವ ಕಾರಣಕ್ಕೋ ಏನೋ….!!) ಸಂಗೀತಕ್ಕೆ,ಮಾತ್ರ ಅಲ್ಲ ಸಾಹಿತ್ಯಕ್ಕೊ ಒಂದು ಶಾಪವಾಗಿ ಬಿಡ್ತು….ಸುಗಮ ಸಂಗೀತ ಎಂತಾ ದೊಡ್ಡ ಮಾಫಿಯವೇ ಆಗಿ ಹೋಯ್ತು…..

    Reply
  2. ಮಹದೇವ ಹಡಪದ

    ಕ್ಷಮಿಸಿ, ನಾನು ಇದೇ ತೆರನಾದ ಇನ್ನೊಂದು ವಿಷಯ ಹೇಳ್ತೇನೆ… ಈ ವಚನ ಸಾಹಿತ್ಯದ ಸಾರವನ್ನು ಮೊಟ್ಟಮೊದಲು ಹಾಡಾಗಿಸಿ ಅದರ ಏರಿಳಿತಗಳನ್ನು ನವಿರಾಗಿ ಆಸ್ವಾಧಿಸಲು ಆರಂಭಿಸಿದವರು ಮಠದ ಸ್ವಾಮಿಗಳು. ನುಡಿ ಅಂಬೋದು ಬದುಕಿನ ನಡೆಗೆ ಒದಗಿ ಬಾರದೆ, ಹಾಡಾಗಿ ಹರಿಯಲು ಆರಂಭಿಸಿದಾಗ, ಬಯಲು ಸೀಮೆಯ ಭಾವಬದುಕಿನ ಕಲಾ ನೆಲೆಗಳು ಹಾಳಾದವು. ಭಜನಾ ಮಾಡಿಕೊಂಡ ಸಂಜೆ ಕಳಿಯುತ್ತಿದ್ದ ರೈತ-ಕೂಲಿಕಾರರು ಈ ಸುಗಮಸಂಗೀತದ ಧಾಟಿಯ ಹಾಡುಗಳನ್ನೆ ಹಾಡಿಕೊಳ್ಳಲು ಆರಂಭಿಸಿದರು. ಬಯಲಾಟ ಪರಂಪರೆ, ದೊಡ್ಡಾಟ ಆಡುವ ಕಲೆಗಾರಿಕೆಯನ್ನು ಅನಫಡ್ ಜನರ ಕಲೆಯೆಂದು ಈ ಲಘುಸಂಗೀತದವರ ತಾತ್ಸಾರ ಸುರುವಾದಾಗ ಆ ಆಟ ಸಂಪೂರ್ಣ ವಾಶ್ ಔಟ್ ಆಯ್ತು. ದೊಡ್ಡಾಟದ ಮಾತಿನ ಲಯ ವಚನಸಾಹಿತ್ಯದಿಂದ ಬಂದದ್ದು, ಖಡಕ್ ಮಾತುಗಾರಿಕೆ ಅಂಬಿಗರ ಚೌಡಯ್ಯನ ವಚನ ಮತ್ತು ವೀರಗಾಸೆಯ ವೀರಾವೇಶದಿಂದ ಬಂದದ್ದು. ಇಂದು ವೀರಗಾಸೆ ಕೂಡ ಬರೀ ಮನೆದೇವರ ಪೂಜೆಗೆ ಸೀಮಿತವಾಗಿದೆ. ಇಷ್ಟೆಲ್ಲ ಯಾಕೆ ಹೇಳಿದೆ ಅಂದ್ರೆ ಇವತ್ತಿನ ಜನಪ್ರಿಯ ಕಲೆಯಲ್ಲಿ ಯಾವ ತಾತ್ವಿಕ ಜಿಜ್ಞಾಸೆಯೂ ಇರುವುದಿಲ್ಲ. ಅದು ಸಾಧಿಸಲು ಬಯಸುವುದೂ ಜನರ ಎಂಜಾಯ್ ಅಷ್ಟನ್ನೆ…

    Reply
  3. ಮೂರ್ತಿ ದೇರಾಜೆ

    ವಚನ ಸಾಹಿತ್ಯಕ್ಕೊ ಸಂಗೀತಕ್ಕೊ ಕೊಂಡಿ ಬೆಸೆದವರು ಚಕ್ರಕೋಡಿ ನಾರಾಯಣ ಶಾಸ್ತ್ರಿಗಳು….ಕರ್ಣಾಟಕ ಶಾಸ್ತ್ರೀಯ ಸಂಗೀತಕ್ಕೆ…ಕನ್ನಡ ಹಾಡುಗಳು ಅಸ್ಪರ್ಶ ವಾಗಿದ್ದ ಕಾಲದಲ್ಲಿ … ಮೊತ್ತಮೊದಲ ಭಾರಿಗೆ ಶಾಸ್ತ್ರೀಯ ಸಂಗೀತಕ್ಕೆ ವಚನಗಳನ್ನು ಹೊಂದಿಸಿದವರು ಅವರು…. ಅವರು ಹಾಡುವುದನ್ನು ಕೇಳುತ್ತಿದ್ದರೆ….ಶಿವಶರಣನೊಬ್ಬ ಮತ್ತೊಮ್ಮೆ ಹುಟ್ಟಿ ಹಾಡಿದಂತೆ ಭಾಸವಾಗುತ್ತಿತ್ತಂತೆ…..ನಾನು ಕೇಳಿದ್ದು ಅವರ ಕೊನೇ ಗಾಲದಲ್ಲಿ….ಆದರೂ ಥ್ರಿಲ್ ಅನುಭವಿಸಿದ್ದೆ….ಅವರು ಬದುಕಿನ ರೀತಿ ಗೊತ್ತಿದ್ದವರಿಗೆ…ವಚನ ಅವರ ವ್ಯಕ್ತಿತ್ವದ ಭಾಗವಾಗಿತ್ತು….ಎನ್ನುವುದು ಅರ್ಥವಾಗಿದೆ….ಶಾಸ್ತ್ರೀಯ ಸಂಗೀತ ಮತ್ತು ವಚನದ ಈ ಸಂಬಂಧ ವನ್ನು ಪಕ್ಕನೆ ಒಪ್ಪುವುದು ಕಷ್ಟ…ಇದು ಶಾಸ್ತ್ರಿಗಳ ವಿಷಯದಲ್ಲಿ ಮಾತ್ರ ಅಪವಾದ…. ಇನ್ನೊಂದು ವಿಚಾರ….ಲಕ್ಷ್ಮೀಶ ತೋಳ್ಪಾಡಿಯವರು ಈಗ ಪುತ್ತೂರಿನಲ್ಲಿ ವಚನಗಳ ಚಿಂತನೆ ನಡೆಸುತ್ತಾ ಇದುವರೆಗೂ ಕಾಣದ- ಕೇಳದ ಒಳನೋಟಗಳನ್ನು ಕಾಣಿಸುತ್ತಿದ್ದಾರೆ……

    Reply

Leave a Reply

Your email address will not be published. Required fields are marked *