ಪ್ರಜಾ ಸಮರ-6 (ನಕ್ಸಲ್ ಕಥನ)


– ಡಾ.ಎನ್.ಜಗದೀಶ್ ಕೊಪ್ಪ


1980ರಲ್ಲಿ ಆಂಧ್ರದಲ್ಲಿ ಪ್ರಜಾಸಮರ ದಳಂ (P.W.G.) ಎಂಬ ನಕ್ಸಲ್ ಸಂಘಟನೆಯನ್ನು ಹುಟ್ಟುಹಾಕಿದ ಕೊಂಡಪಲ್ಲಿ ಸೀತಾರಾಮಯ್ಯನವರಾಗಲಿ, ಅಥವಾ ಅವರ ಸಹಚರ ಕೆ.ಜಿ.ಸತ್ಯಮೂರ್ತಿಯಾಗಲಿ ಧಿಡೀರನೆ ನಕ್ಸಲ್ ಹೋರಾಟಕ್ಕೆ ದುಮುಕಿದವರಲ್ಲ. ಇವರಿಬ್ಬರೂ ವೃತ್ತಿಯಲ್ಲಿ ಶಿಕ್ಷಕರಾಗಿದ್ದು ಕೊಂಡು 70 ರ ದಶಕದಿಂದ ಕಮ್ಯೂನಿಷ್ಟ್ ಪಕ್ಷದ ನಿಷ್ಟಾವಂತ ಕಾರ್ಯಕರ್ತರಾಗಿ ದುಡಿದು, ಪಕ್ಷ ವಿಭಜನೆಗೊಂಡಾಗ, ಚಾರು ಮುಜುಂದಾರ್ ನೇತೃತ್ವದ ಸಿ.ಪಿ.ಐ. (ಎಂ.ಎಲ್) ಬಣದ ಜೊತೆ ಗುರುತಿಸಿಕೊಂಡವರು. ತೆಲಂಗಾಣ ಪ್ರಾಂತ್ಯದ ರೈತರ, ಆದಿವಾಸಿಗಳ ಮತ್ತು ಕೂಲಿ ಕಾರ್ಮಿಕರ ಹೋರಾಟಗಳಿಗೆ ಕೈಜೋಡಿಸಿ ಜೊತೆ ಜೊತೆಯಲ್ಲಿ ಹೋರಾಡಿದವರು. ಮತ್ತು ಪಶ್ಚಿಮ ಬಂಗಾಳದಲ್ಲಿ ಪೊಲೀಸರಿಂದ ಹತ್ಯೆಯಾದ ತಮ್ಮ ನಾಯಕ ಚಾರು ಮುಜುಂದಾರ್ ಆದರ್ಶವನ್ನು ಎತ್ತಿ ಹಿಡಿಯಲು ಶಿಕ್ಷಕ ವೃತ್ತಿಯನ್ನು ತೊರೆದು 1972ರಲ್ಲಿ ನೇರವಾಗಿ ಹೋರಾಟದ ಕಣಕ್ಕೆ ಇಳಿದವರು.

ಕೊಂಡಪಲ್ಲಿ ಸೀತಾರಾಮಯ್ಯ ಕೃಷ್ಣಾ ಜಿಲ್ಲೆಯ ಲಿಂಗಾವರಂ ಎಂಬ ಗ್ರಾಮದ ಶ್ರೀಮಂತ ಕುಟುಂಬದಲ್ಲಿ ಜನಿಸಿ ನಂತರ ಜೊನ್ನಪಡು ಎಂಬ ಗ್ರಾಮದಲ್ಲಿ ಬೆಳದವರು. ಕೆ.ಜಿ.ಸತ್ಯಮೂರ್ತಿ ಸಹ ಇದೇ ಕೃಷ್ಣಾ ಜಿಲ್ಲೆಯ ಗಂಗಾವರಂ ಎಂಬ ಹಳ್ಳಿಯ ದಲಿತ ಕುಟುಂಬದಲ್ಲಿ ಜನಿಸಿದವರು. ಇಬ್ಬರೂ ವಾರಂಗಲ್ ಜಿಲ್ಲಾ ಕೇಂದ್ರದಲ್ಲಿದ್ದ ಪಾತಿಮಾ ಎಂಬ ಶಾಲೆಯಲ್ಲಿ ಶಿಕ್ಷಕರಾಗಿ ದುಡಿಯುತ್ತಾ ಎಂಡಪಂಥೀಯ ವಿಚಾರಧಾರೆಗಳನ್ನು ಮೈಗೂಡಿಸಿಕೊಂಡಿದ್ದರು. ಸೀತಾರಾಮಯ್ಯ ಹಿಂದಿ ಶಿಕ್ಷಕರಾಗಿದ್ದರೆ, ಕೆ.ಜಿ. ಸತ್ಯಮೂರ್ತಿ ಇಂಗ್ಲಿಷ್ ಶಿಕ್ಷರಾಗಿದ್ದರು. ಜೊತೆಗೆ ಶಿವಸಾಗರ ಎಂಬ ಕಾವ್ಯ ನಾಮದಲ್ಲಿ ಆಂಧ್ರದ ದಲಿತ ಲೋಕದ ನೋವು ಮತ್ತು ಅಸಮಾನತೆಗಳನ್ನು ಕಾವ್ಯದ ಮೂಲಕ ಅನಾವರಣಗೊಳಿಸುತ್ತಾ ಸತ್ಯಮೂರ್ತಿ, ಆ ಕಾಲದ ಆಂಧ್ರದ ಪ್ರಮುಖ ದಲಿತ ಕವಿಯಾಗಿ ಹೆಸರುವಾಸಿಯಾಗಿದ್ದರು.

ಕೊಂಡಪಲ್ಲಿ ಸೀತಾರಾಮಯ್ಯ ಚಾರುಮುಜಂದಾರ್‌ನಿಂದ ಪ್ರೇರಿತರಾಗಿದ್ದರೂ ಸಹ ನಕ್ಸಲ್ ಸಂಘಟನೆಯನ್ನು ವಿಭಿನ್ನವಾಗಿ ರೂಪಿಸಬೇಕೆಂದು ಬಯಸಿದ್ದರು. ದೀನ ದಲಿತರ ಮುಕ್ತಿಗಾಗಿ ನಡೆಸುತ್ತಿರುವ ಈ ಹೋರಾಟದಲ್ಲಿ ನಾಡಿನ ಎಲ್ಲಾ ವರ್ಗದ ಜನರು ಪಾಲ್ಗೊಳ್ಳಬೇಕೆಂದು ಅವರು ಕನಸು ಕಂಡಿದ್ದರು. ಸೀತಾರಾಮಯ್ಯನವರಲ್ಲಿ ಇದ್ದ ಒಂದು ವಿಶಿಷ್ಟ ಗುಣವೆಂದರೆ, ಇತರರು ಯಾರೇ ಆಗಿರಲಿ ಯಾವುದೇ ರೀತಿಯ ಸಲಹೆ ಅಥವಾ ಅಭಿಪ್ರಾಯ ನೀಡಿದರೆ, ಅವುಗಳನ್ನು ಸಹನೆಯಿಂದ ಆಲಿಸುತ್ತಿದ್ದರು. ನಂತರ ತಮ್ಮ ವಿಚಾರಗಳನ್ನು ಅವರ ಮುಂದಿಟ್ಟು ಮನವೊಲಿಸುತ್ತಿದ್ದರು. ಕೊಂಡಪಲ್ಲಿ ಸೀತಾರಾಮಯ್ಯನವರ ಇಂತಹ ಗುಣವೇ ಅವರನ್ನು ದೇಶದ ನಕ್ಸಲ್ ಸಂಘಟನೆಯ ಮಹಾ ನಾಯಕನನ್ನಾಗಿ ರೂಪಿಸಿತು ಎಂದು ವರವರರಾವ್ ಅಭಿಪ್ರಾಯ ಪಟ್ಟಿದ್ದಾರೆ. ಅದು ಅಕ್ಷರಶಃ ನಿಜಕೂಡ ಹೌದು. ಕೊಂಡಪಲ್ಲಿಯವರ ಹೋರಾಟದ ಹೆಜ್ಜೆ ಗುರುತುಗಳನ್ನು ಅವಲೋಕಿಸುತ್ತಾ ಹೋದರೆ ಈ ಅಂಶ ಸತ್ಯವೆನಿಸುತ್ತದೆ.

ನಕ್ಸಲ್ ಸಂಘಟನೆಯನ್ನು ಭೂಗತವಾಗಿ ಸಜ್ಜುಗೊಳಿಸಬೇಕೆಂಬುದು ಚಾರು ಮುಜಂದಾರನ ಆಶಯ ಮತ್ತು ಗುರಿಯಾಗಿತ್ತು. ಈ ಕುರಿತು 1970ರಲ್ಲಿ ನಡೆದ ಸಿ.ಪಿ.ಐ. (ಎಂ.ಎಲ್.) ಸಭೆಯಲ್ಲೂ ಕೂಡ ಬಲವಾಗಿ ಪ್ರತಿಪಾತಿಸಿದ್ದ. ಆದರೆ, ಇದಕ್ಕೆ ಭಿನ್ನವಾಗಿ ಸೀತಾರಾಮಯ್ಯ ಆಂಧ್ರದಲ್ಲಿ ಬಹಿರಂಗವಾಗಿ ನಕ್ಸಲ್ ಸಂಘಟನೆಯನ್ನು ರೂಪಿಸತೊಡಗಿದರು. ಏಕೆಂದರೆ, ಸಮಾಜದ ಎಲ್ಲಾ ವರ್ಗಗಳ ಜನರನ್ನು ಒಳಗೊಳ್ಳದ ಯಾವುದೇ ಹೋರಾಟ ಯಶಸ್ವಿಯಾಗುವುದಿಲ್ಲ ಎಂಬುದು ಅವರ ಧೃಡನಿಲುವಾಗಿತ್ತು. ಈ ಕಾರಣಕ್ಕಾಗಿ ಅವರು ವಾರಂಗಲ್‌ನ ಓರ್ವ ಇಂಜಿನಿಯರಿಂಗ್ ವಿಧ್ಯಾರ್ಥಿಯನ್ನು (ರಾಮರೆಡ್ಡಿ) ಮೂರು ತಿಂಗಳ ಕಾಲ ಮುಲ್ಲುಗು ಎಂಬ ಅರಣ್ಯ ಪ್ರದೇಶಕ್ಕೆ ಕಳುಹಿಸಿ, ಅಲ್ಲಿನ ಆದಿವಾಸಿಗಳ ಬಗ್ಗೆ ಅಧ್ಯಯನ ನಡೆಸಿ ಆದಿವಾಸಿಗಳ ಬದುಕು ಕುರಿತಂತೆ ಮಾಹಿತಿ ಕಲೆ ಹಾಕಿದ್ದರು. ತಾವು ಮುನ್ನಡೆಸುವ ಹೋರಾಟಕ್ಕೆ ಆಧಾರ ಸ್ಥಂಭವಾಗಬೇಕಾಗಿರುವ ಅನಕ್ಷರಸ್ಥ ಆದಿವಾಸಿಗಳು, ದಲಿತರು, ಬಡ ರೈತ ಮತ್ತು ಕೂಲಿಕಾರ್ಮಿಕರನ್ನು ತಲುಪಬೇಕಾದರೆ, ಭಾಷಣದಿಂದ ಅಥವಾ ಅವರೊಂದಿಗೆ ನಡೆಸುವ ಚರ್ಚೆಯೊಂದಿಗೆ ಸಾಧ್ಯವಿಲ್ಲ ಎಂಬುದುನ್ನು ಸೀತಾರಾಮಯ್ಯ ಅನುಭವದಿಂದ ಅರಿತಿದ್ದರು.

ಅನಕ್ಷರಸ್ಥರನ್ನು ತಲುಪಲು ಹಾಡು, ನೃತ್ಯ, ಬಯಲು ನಾಟಕವೇ ಸೂಕ್ತ ಎಂದು ತೀರ್ಮಾನಿಸಿ 1972ರಲ್ಲಿ “ಜನ ನಾಟ್ಯ ಮಂಡಲಿ” ಎಂಬ ಸಾಂಸ್ಕೃತಿಕ ಅಂಗ ಸಂಸ್ಥೆಯನ್ನು ಹುಟ್ಟು ಹಾಕಿದರು. ಈ ಸಂಸ್ಥೆಯ ಮೂಲಕ ಬೆಳಕಿಗೆ ಬಂದ ಅದ್ಭುತ ಪ್ರತಿಭೆಯೇ ಗದ್ದಾರ್ ಎಂಬ ಜನಪ್ರಿಯ ಗಾಯಕ.

ಗುಮ್ಮುಡಿ ವಿಠಲರಾವ್ ಎಂಬ ಹೆಸರಿನ ದಲಿತ ಕುಟುಂಬದ ಈ ಜಾನಪದ ಕೋಗಿಲೆ 1949 ರಲ್ಲಿ ಮೇಡಕ್ ಜಿಲ್ಲೆಯ ಹಳ್ಳಿಯೊಂದರಿಂದ ಬಂದವರು. ಸೀತಾರಾಮಯ್ಯನವರ ಕರೆಗೆ ಓಗೊಟ್ಟು ಹೈದರಾಬಾದಿನ ತಮ್ಮ ಇಂಜಿನಿಯರಿಂಗ್ ವಿಧ್ಯಾಭ್ಯಾಸವನ್ನು ಅರ್ಧದಲ್ಲಿ ಕೈಬಿಟ್ಟು ಬಂದು ಜನನಾಟ್ಯ ಮಂಡಲಿಗೆ ಸೇರಿ ಅದಕ್ಕೆ ಉಸಿರಾದವರು. ನಾಡಿನ ಜ್ವಲಂತ ಸಮಸ್ಯೆಗಳನ್ನು, ಹಳ್ಳಿಗಾಡಿನ ಜನರ ನೋವುಗಳನ್ನು ಮತ್ತು ದಲಿತರ, ಶೋಷಿತ ಸಮುದಾಯದ ಹೆಣ್ಣುಮಕ್ಕಳ ಅವ್ಯಕ್ತ ಭಾವನೆಗಳೆಲ್ಲವನ್ನೂ ಹಾಡಾಗಿಸಿ ಆಂಧ್ರದ ಹಳ್ಳಿಗಾಡಿನ ಪ್ರತಿ ಮನೆ ಮತ್ತು ಮನಕ್ಕೂ ನೇರವಾಗಿ ತಲುಪಿದ ಅಪ್ರತಿಮ ಗಾಯಕ ಮತ್ತು ನೃತ್ಯಗಾರ ಈ ಗದ್ದಾರ್. ಇವರು ಹಾಡುತಿದ್ದ ಸತ್ಯಮೂರ್ತಿಯವರ ಕವಿತೆಗಳು, ಶ್ರೀ.ಶ್ರೀ.ಯವರ ಬಂಡಾಯದ ಕಾವ್ಯದ ಸಾಲುಗಳು ಹಾಗೂ ಆ ಕ್ಷಣಕ್ಕೆ ತಾವೇ ಕಟ್ಟಿ ಹಾಡುತಿದ್ದ ಹಳ್ಳಿಗರ ಮತ್ತು ಆದಿವಾಸಿಗಳ ನೋವಿನ ಕಥನ ಗೀತೆಗಳು ಮತ್ತು ಅವರು ಮಾಡುತಿದ್ದ ನೃತ್ಯ ಇವೆಲ್ಲವೂ ಪರೋಕ್ಸವಾಗಿ ಆಂಧ್ರ ಪ್ರದೇಶದಲ್ಲಿ ನಕ್ಸಲ್ ಹೋರಾಟ ಜನ ಸಾಮಾನ್ಯರ ನಡುವೆ ಕಾಡ್ಗಿಚ್ಚಿನಂತೆ ಹರಡಲು ಸಹಾಕಾರಿಯಾಯಿತು. ಭಾಷಣದಲ್ಲಿ ನಾಯಕರು ಹೇಳಬೇಕಾದ ಸಂಗತಿಗಳನ್ನು ಗದ್ದಾರ್ ಹಾಡಿನ ಮೂಲಕ ಸರಳವಾಗಿ ತಲುಪಿಸಿಬಿಡುತ್ತಿದ್ದರು. ದಣಿವರಿಯದ ಅವರ ಕಳೆದ ನಾಲ್ಕು ದಶಕದ ಹಾಡು ನೃತ್ಯದ ಅಭಿಯಾನ ಈಗಲೂ ಮುಂದುವರಿದಿದೆ. (ಗದ್ದಾರ್ ಇತ್ತೀಚೆಗೆ ಪ್ರತ್ಯೇಕ ತೆಲಂಗಾಣ ಹೋರಾಟದ ಜೊತೆ ಕೈ ಜೋಡಿಸಿದ್ದು ಚಳವಳಿಯ ನಾಯಕ ಟಿ.ಆರ್. ಚಂದ್ರಶೇಖರ್ ರಾವ್ ಜೊತೆ ಹೋರಾಟ ನಡೆಸುತಿದ್ದಾರೆ.)

ತಮ್ಮ ಹೋರಾಟಕ್ಕೆ ಸಾಂಸ್ಕೃತಿಕ ಸಂಘಟನೆಯ ಜೊತೆಗೆ ಯುವಕರನ್ನು ಮತ್ತು ವಿದ್ಯಾರ್ಥಿಗಳನ್ನು ಆಕರ್ಷಿಸಲು ರ್‍ಯಾಡಿಕಲ್ ಸ್ಟೂಡೆಂಟ್ ಯೂನಿಯನ್ ಎಂಬ ಸಂಘಟನೆಯನ್ನು ಸೀತಾರಾಮಯ್ಯ ಹುಟ್ಟುಹಾಕಿದರು. ಏಕಕಾಲದಲ್ಲಿ ನಕ್ಸಲ್ ಚಟುವಟಿಕೆಯನ್ನು ಭೂಗತವಾಗಿ ಮತ್ತು ಬಹಿರಂಗವಾಗಿ ಮುನ್ನೆಡೆಸುವುದು ಅವರ ಗುರಿಯಾಗಿತ್ತು. ಆ ವೇಳೆಗಾಗಲೇ ಬಲಿಷ್ಟ ಜಮೀನ್ದಾರರು ಮತ್ತು ಅವರ ಬೆಂಬಲಿಗರಾಗಿ ನಿಂತಿರುವ ಪೊಲೀಸರ ವಿರುದ್ಧ ಹೋರಾಡಲು ಕೇವಲ ಬಿಲ್ಲು ಬಾಣಗಳು ಸಾಲುವುದಿಲ್ಲ ಎಂಬುದನ್ನು ಶ್ರೀಕಾಕುಳಂ ಜಿಲ್ಲೆಯ ಘಟನೆಗಳ ಅನುಭವದಿಂದ ಅರಿತಿದ್ದ ಸೀತಾರಾಮಯ್ಯ ಬಂದೂಕಗಳ ಸಂಗ್ರಹಕ್ಕೂ ಸಹ ಮುಂದಾದರು. ಇದಕ್ಕೆ ಬೇಕಾದ ಹಣಕ್ಕಾಗಿ ಜಮೀನ್ದಾರರ ಮತ್ತು ಹಣದ ಲೇವಾದೇವಿದಾರರ ಮನೆಗಳಿಗೆ ಕಾರ್ಯಕರ್ತರನ್ನು ನುಗ್ಗಿಸುವುದರ ಮೂಲಕ ಅಪಾರ ಸಂಪತ್ತನ್ನು ದೋಚತೊಡಗಿದರು.

ಸೀತಾರಾಮಯ್ಯನವರ ಇಂತಹ ಕ್ರಾಂತಿಕಾರಕ ಧೋರಣೆಗಳು ಆಂಧ್ರಪ್ರದೇಶದಲ್ಲಿ ನಕ್ಸಲ್ ಸಂಘಟನೆಗೆ ಅಪಾರ ಯುವ ವಿದ್ಯಾರ್ಥಿಗಳನ್ನು ಆಕರ್ಷಿಸಿದವು. ಹೈದರಾಬಾದ್‌ನ ಉಸ್ಮಾನಿಯಾ ವಿ.ವಿ. ಮತ್ತು ವಾರಂಗಲ್ ಪಟ್ಟಣದ ರೀಜನಲ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ತಮ್ಮ ಪೋಷಕರಿಗೆ ಮಾಹಿತಿ ನೀಡದೆ ಅರ್ಧಕ್ಕೆ ವಿದ್ಯಾಭ್ಯಾಸ ತೊರೆದು ನಕ್ಸಲ್ ಹೋರಾಟಕ್ಕೆ ದುಮುಕಿದರು. ಕೆಲವರು ಬಂದೂಕು ಮತ್ತು ಗೆರಿಲ್ಲಾ ಯುದ್ಧ ತಂತ್ರದ ತರಬೇತಿಗಾಗಿ ಗುಂಟೂರು, ತಿರುಪತಿ, ವಿಶಾಖಪಟ್ಟಣ ಮುಂತಾದ ಕಡೆ ಅರಣ್ಯ ಪ್ರದೇಶಗಳಲ್ಲಿ ಭೂಗತರಾದರು.

1973-74 ರ ವೇಳೆಗೆ ಆಂಧ್ರದಲ್ಲಿ ನಕ್ಸಲ್ ಸಂಘಟನೆ ಬಿಸಿರಕ್ತದ ವಿದ್ಯಾವಂತ ಯುವಕರಿಂದ ಕೂಡಿದ ಬಲಿಷ್ಟ ಸಂಘಟನೆಯಾಗಿ ಹೊರಹೊಮ್ಮಿತ್ತು. 1975ರ ಪೆಬ್ರವರಿ ತಿಂಗಳಿನಲ್ಲಿ ಹೈದರಾಬಾದ್ ನಗರದಲ್ಲಿ ನಡೆದ ಬೃಹತ್ ಯುವ ಸಮಾವೇಶದಲ್ಲಿ ಸಾವಿರಾರು ಯುವಕರು ಪಾಲ್ಗೊಂಡು ಸರ್ಕಾರದ ಕೆಂಗಣ್ಣಿಗೆ ಗುರಿಯಾದರು. ಅಮಾಯಕ ಆದಿವಾಸಿಗಳನ್ನು ಮತ್ತು ಬಡ ರೈತ ಹಾಗೂ ಕೂಲಿಕಾರ್ಮಿಕರನ್ನು ಶೋಷಣೆಗೆ ಒಳಪಡಿಸಿರುವ ಅರಣ್ಯಾಧಿಕಾರಿಗಳು, ಜಮೀನ್ದಾರರು, ಬಡ್ಡಿ ಹಣದ ಮೂಲಕ ಬಡವರನ್ನು ಸುಲಿಯುತ್ತಿರುವ ಲೇವಾದೇವಿದಾರರ ಇವರುಗಳ ಮೇಲೆ ನೇರ ಕ್ರಮ ಜರುಗಿಸಲು ಸಮಾವೇಶದಲ್ಲಿ ತೀರ್ಮಾನ ಕೈಗೊಳ್ಳಲಾಯಿತು.

ಇದೇ ವೇಳೆಗೆ ರಾಷ್ಟ್ರ ರಾಜಕಾರಣದಲ್ಲಿ ಬಿರುಗಾಳಿಯೆದ್ದು ಪ್ರಧಾನಿಯಾಗಿದ್ದ  ಇಂದಿರಾಗಾಂಧಿ ನೇತೃತ್ವ ಕಾಂಗ್ರೇಸ್ ಸರ್ಕಾರದಿಂದ ತನ್ನ ಅಧಿಕಾರದ ಗದ್ದುಗೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ 1975ರ ಜುಲೈ ತಿಂಗಳಿನಲ್ಲಿ ರಾಷ್ಟ್ರಾದ್ಯಂತ ತುರ್ತುಪರಿಸ್ಥಿತಿ ಜಾರಿಗೊಳಿಸಿ, ನಾಗರೀಕರ ಹಕ್ಕುಗಳ ಮೇಲೆ ನಿರ್ಭಂಧ ಹೇರಲಾಯಿತು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಆಡಳಿತ ವ್ಯವಸ್ಥೆಗೆ ಇದು ಇನ್ನೊಂದು ರೀತಿಯಲ್ಲಿ ಅನೂಕೂಲವಾಗಿ ಪರಿಣಮಿಸಿತು. ಆಂಧ್ರ ಪ್ರದೇಶದಲ್ಲಿ ಸರ್ಕಾರದ ವಕ್ರದೃಷ್ಟಿಗೆ ಗುರಿಯಾಗಿದ್ದ ಎಲ್ಲಾ ಪ್ರಗತಿಪರ ಸಂಘಟನೆಗಳ ಮೇಲೆ ನಿಷೇಧ ಹೇರಿ ನಾಯಕರನ್ನು ಬಂಧಿಸಿ ಜೈಲಿಗೆ ತಳ್ಳಲಾಯಿತು. ಆಂಧ್ರದ ರ್‍ಯಾಡಿಕಲ್ ಯೂತ್ ಸಂಘಟನೆಯ ನೂರಾರು ಯುವಕರನ್ನು ದರೋಡೆ ಮತ್ತು ಕೊಲೆ ಬೆದರಿಕೆ ಆರೋಪದ ಮೇಲೆ ಬಂಧಿಸಲಾಯಿತು. ಸಂಘಟನೆಯ ಮುಂಚೂಣಿಯಲ್ಲಿದ್ದ ಯುವ ನಾಯಕರಾದ ಜನಾರ್ಧನ್, ಮುರಳಿ, ಆನಂದ್ ಮತ್ತು ಸುಧಾಕರ್ ಎಂಬ ನಾಲ್ವರು ವಿದ್ಯಾರ್ಥಿಗಳನ್ನು ನಿರ್ಜನ ಅರಣ್ಯಕ್ಕೆ ಕರೆದೊಯ್ದ ಆಂಧ್ರ ಪೊಲೀಸರು, ಎನ್ಕೌಂಟರ್ ನೆಪದಲ್ಲಿ ಗುಂಡಿಕ್ಕಿ ಕೊಂದರು. ಇಂತಹ ಅಮಾನುಷ ನರಮೇಧದ ಮೂಲಕ ಆಂಧ್ರ ಪೊಲೀಸರು ತಮಗೆ ಅರಿವಿಲ್ಲದಂತೆ ಆಂಧ್ರದ ನೆಲದಲ್ಲಿ ಇವತ್ತಿಗೂ ತಾಂಡವವಾಡುತ್ತಿರುವ ನಕ್ಸಲ್ ಹೋರಾಟದ ರಕ್ತ ಚರಿತ್ರೆಗೆ ಮುನ್ನುಡಿ ಬರೆದಿದ್ದರು. ಈ ಘಟನೆ ಆಂಧ್ರದಲ್ಲಿ  ಕೊಂಡಪಲ್ಲಿ ಸೀತಾರಾಮಯ್ಯ, ಕೆ.ಜಿ. ಸತ್ಯಮೂರ್ತಿ ಮತ್ತು ಬಂಗಾಳದ ಸುನೀತ್ ಕುಮಾರ್ ಘೋಷ್‌ರವರನ್ನು ಸಹಜವಾಗಿ ಕೆರಳಿಸಿತು. ಈವರೆಗೆ ಕೇವಲ ಪಟ್ಟಭದ್ರ ಹಿತಾಶಕ್ತಿಗಳನ್ನು ಮಾತ್ರ ತಮ್ಮ ಹಿಟ್ಲಿಸ್ಟ್ ಗುರಿಯಾಗಿರಿಸಿಕೊಂಡಿದ್ದ ಅವರು ಈ ಪಟ್ಟಿಗೆ ಆಂಧ್ರದ ಪೊಲೀಸರನ್ನು ಸೇರಿಸಿದರು.

ಈ ನಡುವೆ ಸಂಘಟನೆಗೆ ಶಸ್ತ್ರಾಸಗಳನ್ನು ಖರೀದಿಸಲು ಮಹಾರಾಷ್ಟ್ರಕ್ಕೆ ತೆರಳಿದ್ದ ಸೀತಾರಾಮಯ್ಯ ಅಪಾರ ಮದ್ದುಗುಂಡು, ಸ್ಪೋಟಕ ಸಾಮಾಗ್ರಿಗಳು ಮತ್ತು ಬಂದೂಕುಗಳನ್ನು ಸಂಗ್ರಹಿಸಿಕೊಂಡು ಆಂಧ್ರಕ್ಕೆ ವಾಪಾಸಾಗುತಿದ್ದ ವೇಳೆ 1976ರ ಏಪ್ರಿಲ್ 26ರಂದು ನಾಗಪುರ ಪೊಲೀಸರ ಕೈಗೆ ವಾಹನ ಸಮೇತ ಸಿಕ್ಕಿಬಿದ್ದರು. ಮೂರು ತಿಂಗಳ ನಂತರ ಜಾಮೀನಿನ ಮೇಲೆ ಬಂಧನದಿಂದ ಬಿಡುಗಡೆಯಾದ ಅವರು ಪ್ರಥಮ ಬಾರಿಗೆ ಭೂಗತರಾಗುವ ಮೂಲಕ ನಕ್ಸಲ್ ಸಂಘಟನೆಯನ್ನು ಮುನ್ನಡೆಸತೊಡಗಿದರು. 1978ರಲ್ಲಿ ದೇಶಾದ್ಯಂತ ಹೇರಲಾಗಿದ್ದ ತುರ್ತುಪರಿಸ್ಥಿತಿಯನ್ನು ತೆರವುಗೊಳಿಸಿದ ನಂತರ, ಅದೇ ವರ್ಷ ಕೊಂಡಪಲ್ಲಿ ಸೀತಾರಾಮಯ್ಯ ಜನನಾಟ್ಯಮಂಡಲಿ ಮತ್ತು ರ್‍ಯಾಡಿಕಲ್ ಸ್ಟೂಡೆಂಟ್ ಯೂನಿಯನ್ ಜೊತೆಗೆ ರ್‍ಯಾಡಿಕಲ್ ಯೂತ್ ಲೀಗ್ ಎಂಬ ಮತ್ತೊಂದು ಸಂಘಟನೆಯನ್ನು ಹುಟ್ಟು ಹಾಕಿ ಈ ಮೂರು ಸಂಘಟನೆಗಳನ್ನು ಸಿ.ಪಿ.ಐ. (ಎಂ.ಎಲ್) ಎಂಬ ಮಾತೃ ಸಂಘಟನೆಯ ಮೂಲಕ ಹೋರಾಟದ ಹಾದಿಯಲ್ಲಿ ಕೊಂಡೊಯ್ಯಲು ನಿರ್ಧರಿಸಿದರು.

ವಿದ್ಯಾರ್ಥಿಗಳನ್ನು ಬೇಸಿಗೆ ರಜಾದಿನಗಳಲ್ಲಿ ಗುಡ್ಡ ಗಾಡು ಪ್ರದೇಶದ ಆದಿವಾಸಿಗಳ ಹಾಡಿಗಳಿಗೆ (ಗ್ರಾಮ) ಮತ್ತು ಅರಣ್ಯದ ಅಂಚಿನ ಹಳ್ಳಿಗಾಡಿನಲ್ಲಿ ವಾಸಿಸುತಿದ್ದ ರೈತರು ಮತ್ತು ಕೂಲಿ ಕಾರ್ಮಿಕರ ಬಳಿ ಕಳುಹಿಸಿ ಅವರ ಜೊತೆ ವಾಸಿಸುವಂತೆ ಪ್ರೊತ್ಸಾಹಿಸಿದರು. ವ್ಯವಸ್ಥೆಯ ಕ್ರೌರ್ಯದ ಮುಖಗಳನ್ನು ಅವರಿಗೆ ಮನದಟ್ಟಾಗುವಂತೆ ವಿವರಿಸಲು ಮಾರ್ಗದರ್ಶನ ನೀಡಿದರು. ಜೊತೆಗೆ ಸಂಘಟನೆಗೆ ಮತ್ತು ಹೋರಾಟಕ್ಕೆ ಆಸಕ್ತಿ ತೋರಿದ ಯುವಕರ ಮಾಹಿತಿಯನ್ನು ಕಲೆ ಹಾಕತೊಡಗಿದರು. ಅವರ ಈ ಆಲೋಚನೆ ನಿರೀಕ್ಷೆಗೂ ಮೀರಿ ಫಲಪ್ರದವಾಯಿತು. ಕೇವಲ ನಗರ, ಪಟ್ಟಣ ಮೂಲದ ವಿದ್ಯಾರ್ಥಿಗಳನ್ನು ಒಳಗೊಂಡಿದ್ದ ನಕ್ಸಲ್ ಸಂಘಟನೆಗೆ ಹಳ್ಳಿಗಾಡಿನ ಯುವಕರು, ಆದಿವಾಸಿಗಳು ಸೇರಿದ ನಂತರ ಮುಂದಿನ ಇಪ್ಪತ್ತೈದು ವರ್ಷಗಳ ಕಾಲ (1978ರಿಂದ 2003ರವರೆಗೆ) ಆಂಧ್ರದ ನೆಲ ನಕ್ಸಲ್ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ಅಕ್ಷರಶಃ ರಣರಂಗವಾಗಿ ಮಾರ್ಪಟ್ಟಿತು.

(ಮುಂದುವರಿಯುವುದು)

Leave a Reply

Your email address will not be published. Required fields are marked *