ಆಳ್ವ ಮತ್ತು ನುಡಿಸಿರಿ ಸಮರ್ಥಕರ ಲೇಖನ ಪಕ್ಷಪಾತಪೀಡಿತ ಮತ್ತು ಅಸಾಂದರ್ಭಿಕ ಸುಳ್ಳುಗಳ ಕಂತೆ…


-ನವೀನ್ ಸೂರಿಂಜೆ


 

ಆಳ್ವಾಸ್ ನುಡಿಸಿರಿಗೆ ಅನಂತಮೂರ್ತಿ ಹೋಗುವುದು ಯುಕ್ತವೇ” ಎಂಬ ಲೇಖನಕ್ಕೆ ನನ್ನ ನೆಚ್ಚಿನ ಸಾಹಿತಿ ನಾ.ದ.ಶೆಟ್ಟಿಯವರು ಪ್ರತಿಕ್ರಿಯೆಯೊಂದನ್ನು ನೀಡಿದ್ದಾರೆ. “ನವೀನ್‌ರವರು ಬರೆದ ಒಂದೊಂದು ವಾಕ್ಯವನ್ನು ಒಬ್ಬರೇ ಕುಳಿತು ಪ್ರಾಂಜಲ ಮನಸ್ಸಿನಿಂದ ಮರು ಓದು ನಡೆಸಲಿ” ಎಂಬ ಅವರ ಮಾತಿನಂತೆ ಒಂದೊಂದು ವಾಕ್ಯವನ್ನು ಓದಿದಾಗಲೂ ಹಲವಾರು ವಿಷಯಗಳು ಸ್ಪಷ್ಟವಾಗಿ ಹೇಳಲಾಗಿಲ್ಲ ಅನ್ನಿಸಿತು. ಮೂಡಬಿದ್ರೆಯ “ಆಳ್ವಾಸ್ ಶಿಕ್ಷಣ ಸಂಸ್ಥ”ಯ ಮೋಹನ ಆಳ್ವ ಪ್ರಾಯೋಜಕತ್ವದ “ಆಳ್ವಾಸ್ ನುಡಿಸಿರಿ” ಮತ್ತು “ಆಳ್ವಾಸ್ ವಿರಾಸತ್” ಕಾರ್ಯಕ್ರಮಗಳನ್ನು ಇನ್ನಷ್ಟು ವಿಶಾಲವಾಗಿ ಮತ್ತು ಆಳವಾಗಿ ವಿಮರ್ಶಿಸಿ ಬರವಣಿಗೆಗಿಳಿಸಬೇಕಿತ್ತು. ಅದಕ್ಕಿಂತಲೂ ಮುಖ್ಯವಾಗಿ ಲೇಖನ ಮೋಹನ ಆಳ್ವರ ಬಗೆಗೆ ಬರೆದುದೇ ಅಲ್ಲ ಎಂಬುದನ್ನು ಬಹಳಷ್ಟು ಮಂದಿ ಅರ್ಥ ಮಾಡಿಕೊಂಡಿದ್ದೇ ಇಲ್ಲ. ವಿದ್ಯಾರ್ಥಿಗಳ ಡೋನೇಷನ್ ಹಣದಲ್ಲಿ ನಡೆಸುವ, ವಿದ್ಯಾರ್ಥಿ ಚಳುವಳಿಗಳಿಗೆ ಅವಕಾಶ ಮಾಡಿಕೊಡದ, ಡೆಮಾಕ್ರಟಿಕ್ ಆಗಿ ನಡೆಯದ, ಹಿಂದೂ ಸಮಾಜೋತ್ಸವದ ಸಂಘಟಕನೊಬ್ಬ ನಡೆಸುವ ಸಾಹಿತ್ಯ ಜಾತ್ರೆಯಲ್ಲಿ ಅನಂತಮೂರ್ತಿಯಂತಹ ಪ್ರಗತಿಪರ ಸಾಹಿತಿಗಳು ಭಾಗವಹಿಸುವಿಕೆಯ ಬಗ್ಗೆ ನಮ್ಮ ಆಕ್ಷೇಪವಿದೆಯೇ ಹೊರತು ಆಳ್ವರಾಗಲೀ ಇನ್ನೊಬ್ಬರಾಗಲೀ ನುಡಿಸಿರಿ ನಡೆಸುವುದರ ಬಗೆಗಲ್ಲ ಎಂಬುದನ್ನು ಅರ್ಥವಾಗುವಂತೆ ಸ್ಪಷ್ಟಪಡಿಸಬೇಕಿತ್ತು.

ಕನ್ನಡ ನಾಡು ನುಡಿಯ ರಕ್ಷಣೆಗಾಗಿ ಆಳ್ವಾಸ್ ನುಡಿಸಿರಿಯನ್ನು ಆಯೋಜಿಸುವುದು ಮತ್ತು ಇಲ್ಲಿ ನಡೆಯುವ ಕಾರ್ಯಕ್ರಮದ ಅಚ್ಚುಕಟ್ಟುತನ ಎಲ್ಲವೂ ಪ್ರಶಂಸನೀಯವೇ, ಮತ್ತು ಇಂತಹ ಕಾರ್ಯಕ್ರಮಗಳನ್ನು ಹೆಚ್ಚು ಹೆಚ್ಚು ನಡೆಯಬೇಕಾಗಿರುವಂತದ್ದು ಎಂಬುದರಲ್ಲಿ ಎರಡು ಮಾತಿಲ್ಲ. ನುಡಿಸಿರಿ ಮತ್ತು ವಿರಾಸತ್ ಈ ಎರಡೂ ಕಾರ್ಯಕ್ರಮಗಳು ಯಾವುದೇ ಪ್ರಜಾಪ್ರಭುತ್ವ ಮಾಧರಿಯಲ್ಲಿ ನಡೆಯದೆ ವ್ಯಕ್ತಿಯೊಬ್ಬನ ಸರ್ವಾಧಿಕಾರದಲ್ಲಿ ಸ್ವಯಂ ವೈಭವೀಕರಿಸುತ್ತಾ ನಡೆಯುವುದು ಮಾತ್ರ ಅಸಹನೀಯ. ಹೇಳಿಕೊಳ್ಳಲು ಒಂದಷ್ಟು ಜನರನ್ನು ಸೇರಿಕೊಂಡ ಸಮಿತಿ ಎಂಬುದಿದ್ದರೂ ಅದೊಂದು “ಆಳ್ವಾಸ್ ಭಜನಾ ಮಂಡಳಿ” ಯಂತೆ ಕಾರ್ಯನಿರ್ವಹಿಸುತ್ತದೆ. ಆಳ್ವಾಸ್ ನುಡಿಸಿರಿ ಎಂಬುದು ಕಾಲೇಜು ವಿದ್ಯಾರ್ಥಿಗಳದ್ದೋ ಅಥವಾ ಕಾಲೇಜಿನ ಮಾಮೂಲಿ ಕಾರ್ಯಕ್ರಮದಂತೆ ನಡೆಯುವುದಾದರೆ ಇಲ್ಲಿ ಆಳ್ವರ ಪಾರುಪತ್ಯ ಪ್ರಶ್ನಾತೀತ. ಆದರೆ ಆಳ್ವಾಸ್ ನುಡಿಸಿರಿ ಎಂಬುದು ಕನ್ನಡದ ಮನಸ್ಸುಗಳನ್ನು ಕಟ್ಟುವ ಸಮ್ಮೇಳನ ಎಂಬುದಾಗಿ ಬಿಂಬಿಸಿ ನಡೆಸುವುದರಿಂದ ಈ ಕಾರ್ಯಕ್ರಮದ ಸಂಘಟನೆ ಡೆಮಾಕ್ರಟಿಕ್ ಆಗಿರಬೇಕು. ಜೀವನದಲ್ಲಿ ಏನೋ ಸಾಧನೆ ಮಾಡಬೇಕು ಎಂದು ಕಷ್ಟಪಟ್ಟು ಹಣ ಹೊಂದಿಸಿ ಶಿಕ್ಷಣ ಸಂಸ್ಥೆಗೆ ನೀಡುವ ಡೊನೇಷನ್ ಹಣದಲ್ಲಿ ನುಡಿಸಿರಿ ನಡೆಸುವ ಅವಶ್ಯಕತೆ ಏನಿದೆ? ಮಂಗಳೂರು ಸೇರಿದಂತೆ ರಾಜ್ಯದಲ್ಲಿ ನೂರಾರು ಶಿಕ್ಷಣ ಸಂಸ್ಥೆಗಳು ಡೊನೇಷನ್ ಪಡೆದುಕೊಳ್ಳುತ್ತವೆ ಮತ್ತು ಸಮಾಜಕ್ಕೆ ಅವುಗಳು ಯಾವ ಕೊಡುಗೆ ನೀಡುತ್ತದೆ ಎಂಬುದೆಲ್ಲ ಅಪ್ರಸ್ತುತ. ಯಾಕೆಂದರೆ ಅಂತಹ ಶಿಕ್ಷಣ ಸಂಸ್ಥೆಗಳ ಸಾಲಿನಲ್ಲಿ ಸೇರಬೇಕಾದ ಆಳ್ವಾಸ್ ಶಿಕ್ಷಣ ಸಂಸ್ಥೆಯು ಮೂರುದಿನದ ಸಾಹಿತ್ಯ ಜಾತ್ರೆ ಮಾಡಿ ಏನೇನೂ ಸಾಧನೆ ಮಾಡದೆ “ಒಳ್ಳೆಯವನು” ಅನ್ನಿಸಿಕೊಳ್ಳುವುದು ಸರಿಯಲ್ಲ. ಅದೊಂಥರಾ “ಲಕ್ಷ ಲಕ್ಷ ವರದಕ್ಷಿಣೆ ತಗೆದುಕೊಂಡು ಊರವರಿಗೆಲ್ಲಾ ಬಾಡೂಟ ಹಾಕಿಸಿದಂತೆ”. ಮದುವೆಯ ಊಟ ಮಾಡಿದವರು “ಯಾರ ದುಡ್ಡಾದರೇನು. ಒಳ್ಳೆ ಊಟ ಹಾಕಿದ್ನಲ್ಲ. ಉಳಿದವರ ತರಹ ತಾನು ವರದಕ್ಷಿಣೆ ತಗೊಂಡು ಬ್ಯಾಂಕ್ನಲ್ಲಿ ಇಟ್ಟಿಲ್ಲವಲ್ಲ” ಎಂದು ಹೇಳುವುದಕ್ಕಿಂತ ಭಿನ್ನವಲ್ಲ. ಯಾರದ್ದೋ ಮಕ್ಕಳ ದುಡ್ಡಿನಲ್ಲಿ ಆಳ್ವರು ಯಾಕೆ ಸಾಹಿತ್ಯ ಜಾತ್ರೆ ಮಾಡಬೇಕು? ಸಮಿತಿ ಎಂಬುದನ್ನು ರಚನೆ ಮಾಡಿಕೊಂಡ ನಂತರ ಹಣಕಾಸು ಸೇರಿದಂತೆ ಕಾರ್ಯಕ್ರಮದ ಎಲ್ಲಾ ಉಸ್ತುವಾರಿಯನ್ನೂ ಸಮಿತಿ ವಹಿಸಿಕೊಳ್ಳಬೇಕು.

ನುಡಿಸಿರಿ ಉದ್ದೇಶ ಕನ್ನಡ ನಾಡು ನುಡಿಯ ರಕ್ಷಣೆಯೇ ಆಗಿದ್ದರೆ ಪ್ರಚಾರಕ್ಕಾಗಿ ಇಷ್ಟೆಲ್ಲಾ ಚಡಪಡಿಸೋ ಅಗತ್ಯ ಇಲ್ಲ. ವಿಚಾರ ಸಂಕಿರಣಗಳು, ಗೋಷ್ಠಿಗಳು ಸೇರಿದಂತೆ ಇಡೀ ಕಾರ್ಯಕ್ರಮ ಎಷ್ಟು ಪ್ರಚಾರವಾಗುವುದು ಅವಶ್ಯಕತೆ ಇದೆಯೋ ಅಷ್ಟು ಪ್ರಚಾರವನ್ನು ಅದು ಅದರ ಮೌಲ್ಯದ ಆಧಾರದ ಮೇಲೆ ಪಡೆದುಕೊಳ್ಳುತ್ತದೆ. ಒಂದು “ಒಳ್ಳೆಯ ಕಾರ್ಯಕ್ರಮ”ದ ಪ್ರಚಾರಕ್ಕಾಗಿ ಮಾಧ್ಯಮದ ವ್ಯವಸ್ಥೆಯನ್ನು ಭ್ರಷ್ಠಗೊಳಿಸುವುದು ಎಷ್ಟು ಸರಿ? ಎರಡು ಮೂರು ವರ್ಷಗಳ ಹಿಂದೆ ನುಡಿಸಿರಿಯ ಮರುದಿನ ಮಂಗಳೂರಿನ ಮಹಾರಾಜ ಇಂಟರ್‌ನ್ಯಾಷನಲ್ ಹೊಟೇಲ್‌ನಲ್ಲಿ ಪತ್ರಕರ್ತರಿಗಾಗಿ ರಾತ್ರಿ ಭೋಜನಾ ಕೂಟ ಏರ್ಪಡಿಸುತ್ತಿದ್ದರು. ಪತ್ರಕರ್ತರಿಗೆ ಬೇಕಾದಷ್ಟು ಗುಂಡು ತುಂಡು ಸರಬರಾಜಾಗುತ್ತಿತ್ತು. ಖುದ್ದು ಆಳ್ವರೇ ಈ ಗುಂಡು ತುಂಡು ಪಾರ್ಟಿಯಲ್ಲಿ ಭಾಗವಹಿಸುತ್ತಿದ್ದರು. (ಆಳ್ವರು ಮದ್ಯ ಸೇವಿಸುತ್ತಿರಲಿಲ್ಲ.) ನುಡಿಸಿರಿಯ ಮರುದಿನ ಈ ಪಾರ್ಟಿ ನಡೆಯುತ್ತಿದ್ದರಿಂದ ಇದನ್ನು ನಾವು ಒಂದಷ್ಟು ಪತ್ರಕರ್ತರು ತಮಾಷೆಗಾಗಿ “ಆಳ್ವಾಸ್ ಕುಡಿಸಿರಿ” ಎಂದು ಕರೆಯುತ್ತಿದ್ದೆವು. ಇಂತಹ ಪಾರ್ಟಿಗಳನ್ನು ಆಯೋಜನೆ ಮಾಡಿ ತನ್ನ ಕಾರ್ಯಕ್ರಮಕ್ಕೆ ಪ್ರಚಾರ ಪಡೆದುಕೊಳ್ಳುವುದಕ್ಕೆ ಏನನ್ನಬೇಕು? ವಿದ್ಯಾರ್ಥಿಗಳ ಡೊನೇಷನ್ ಹಣದಲ್ಲಿ ಸಾಹಿತ್ಯ ಜಾತ್ರೆ ನಡೆಸುವುದೇ ಅಲ್ಲದೆ ಆ ಹಣದ ಪಾಲನ್ನು ಪತ್ರಕರ್ತರಿಗೆ ಮತ್ತು ಪತ್ರಿಕೆಗಳಿಗೆ ನೀಡುವುದು ಎಷ್ಟು ಸರಿ ?

ಆಳ್ವರು ಕೊರಗ ಮತ್ತು ದಲಿತ ವಿದ್ಯಾರ್ಥಿಗಳನ್ನು ದತ್ತು ತೆಗೆದುಕೊಂಡಿದ್ದಾರೆ ಎಂಬುದು ಅಕ್ಷರಶ ನಿಜ. ಹಾಗೆಂದು ಒಂದಿಡೀ ಸಮುದಾಯವನ್ನು ಅವಮಾನಿಸುವ ಮತ್ತು ಅನಿಷ್ಠ ಪದ್ದತಿಗಳನ್ನೇ ಸಂಸ್ಕೃತಿ ಎಂದು ತೋರಿಸುವ ಹಕ್ಕು ಆಳ್ವರಿಗೆ ಇಲ್ಲ. ವರ್ತಮಾನ.ಕಾಮ್‌ನಲ್ಲಿ ನಾನು ಬರೆದ ಲೇಖನಕ್ಕೆ ಪ್ರತಿಯಾಗಿ “ಆಳ್ವಾಸ್, ನುಡಿಸಿರಿ, ಅನಂತಮೂರ್ತಿ ಲೇಖನ : ಋಣಾತ್ಮಕ ಮತ್ತು ಪೂರ್ವಾಗ್ರಹಪೀಡಿತ” ಎಂದು ಬರೆದವರು ಆಳ್ವರು ವೇದಿಕೆಯಲ್ಲಿ ಕೊರಗರ ಡೋಲಿನೊಂದಿಗೆ ಕುಣಿಯುವ ಫೋಟೋ ಪ್ರಸ್ತಾಪಿಸಿ ನಾನು ಹೇಳಿದ್ದು ಸುಳ್ಳು ಎಂದಿದ್ದಾರೆ. ಆದರೆ ಇದು ಅಸಾಂದರ್ಭಿಕ ಪೋಟೋ ಮತ್ತು ಅವರು ಸತ್ಯವನ್ನು ಮರೆಮಾಚಿ ಯಾವುದನ್ನೋ ಎಲ್ಲಿಯೋ ಪ್ರಸ್ತಾಪಿಸಿದ್ದಾರೆ. “ಆಳ್ವಾಸ್ ನುಡಿಸಿರಿ”ಯಲ್ಲಿ ಕೊರಗರನ್ನು ಮೆರವಣಿಗೆಯಲ್ಲಿ ಡೋಲು ಬಡಿಯಲು ಬಳಸಿ ವೇದಿಕೆಗೆ ಹತ್ತಲು ಬಿಡದೆ ಹೊರಗಡೆ ಕೂರಿಸಲಾಗಿತ್ತು. ಇದೊಂದು ರೀತಿಯಲ್ಲಿ ಅಜಲು ಪದ್ದತಿಯ ಪುನರಾವರ್ತನೆಯಷ್ಟೆ. ಆದರೆ ಅದಕ್ಕೆ ಸಮರ್ಥನೆಯಾಗಿ ಬಳಕೆಯಾಗಿರುವ ಫೋಟೋ “ಆಳ್ವಾಸ್ ದೀಪಾವಳಿ” ಕಾರ್ಯಕ್ರಮದ್ದು (ಪಕ್ಕದಲ್ಲಿಯ ಚಿತ್ರವನ್ನು ಮತ್ತೊಮ್ಮೆ ಗಮನಿಸಿ). ಅದು ಆಳ್ವರು ದಲಿತ ನಿಂದನೆ ಮಾಡಿದ್ದಾರೆ ಎಂದು ದಲಿತರು ಜಿಲ್ಲಾಧಿಕಾರಿಯನ್ನು ದೂರಿಕೊಂಡ ನಂತರ ನಡೆದ ದೀಪಾವಳಿ ಉತ್ಸವದ್ದು. ಹಾಗಾಗಿ ಆಳ್ವರ ಪರ ಬರೆದ ಅಥವ ಬರೆಸಲ್ಪಟ್ಟ ಲೇಖನ ಅಸಾಂದರ್ಭಿಕ ಸುಳ್ಳುಗಳ ಕಂತೆ ಮಾತ್ರವಲ್ಲ, ವಸ್ತುನಿಷ್ಟತೆ ಮತ್ತು ವಿಮರ್ಶಾಸ್ವಾತಂತ್ರ್ಯ ಕಳೆದುಕೊಂಡು ಆಳ್ವರ ಪರ ಪಕ್ಷಪಾತದಿಂದ ಕೂಡಿದೆ.

ಇನ್ನು, ಆಳ್ವರು ಮಂಗಳೂರಿನ ನೆಹರೂ ಮೈದಾನದಲ್ಲಿ ಹಿಂದೂ ಸಮಾಜೋತ್ಸವವನ್ನು ಸಂಘಟಿಸಿ “ಈ ದೇಶ ಹಿಂದೂಗಳಿಗೆ ಮಾತ್ರ ಸೇರಿದ್ದು. ಇಲ್ಲಿ ಹಿಂದೂಗಳಾಗಿ ಇರುವವರು ಅಥವಾ ಹಿಂದುತ್ವವನ್ನು ಒಪ್ಪಿಕೊಂಡವರು ಮಾತ್ರ ಬದುಕಬಹುದು” ಎಂದು ಯಾರಿಂದಲೋ ಭಾಷಣ ಮಾಡಿಸಿ ಹಿಂದೂ ಮುಸ್ಲಿಮರ ಮಧ್ಯೆ ಸೃಷ್ಟಿ ಮಾಡಿರುವ ಅಳಿಸಲಾಗದ ಕಂದಕ ತನ್ನ ಕಾಲೇಜಿನ ಆವರಣದಲ್ಲಿ ಇಫ್ತಾರ್ ಕೂಟ ಮಾಡಿದರೂ, ಮಸೀದಿ ಕಟ್ಟಿದರೂ ಸರಿ ಹೋಗುವಂತದ್ದಲ್ಲ.

ನಾಲ್ಕು ವರ್ಷದ ಹಿಂದೆ ಇದೇ ಮೂಡಬಿದ್ರೆಯ ಪಕ್ಕದಲ್ಲಿರುವ ಎಡಪದವಿನ ಸರಕಾರಿ ಕಾಲೇಜಿನ ವಿದ್ಯಾರ್ಥಿಗಳು ಮಂಗಳೂರಿನಲ್ಲಿ ನಡೆಯಲಿದ್ದ ಜಿಲ್ಲಾ ಮಟ್ಟದ ಕ್ರೀಡಾ ಕೂಟದಲ್ಲಿ ಭಾಗವಹಿಸಲು ಖಾಸಗಿ ಬಸ್ಸಿನಲ್ಲಿ ಮಂಗಳೂರಿಗೆ ಆಗಮಿಸುತ್ತಿದ್ದರು. ಈ ವಿದ್ಯಾರ್ಥಿಗಳ ಪೈಕಿ ಇಬ್ಬರು ಮುಸ್ಲಿಂ ವಿದ್ಯಾರ್ಥಿಗಳು ಮತ್ತು ಇಬ್ಬರು ಇಬ್ಬರು ಹಿಂದೂ ವಿದ್ಯಾರ್ಥಿನಿಯರಿದ್ದರು. ಇದು ಮಂಗಳೂರಿನ ಮಟ್ಟಿಗೆ ಮಹಾ ಅಪರಾಧ. ಈ ಅಪರಾಧಕ್ಕಾಗಿ ಈ ವಿದ್ಯಾರ್ಥಿಗಳಿದ್ದ ಬಸ್ಸನ್ನು ಮಾರ್ಗ ಮಧ್ಯದಲ್ಲಿ ಭಜರಂಗದಳದವರು ತಡೆದರು. ಬಸ್ಸಿಗೆ ನುಗ್ಗಿ ನಾಲ್ಕೂ ವಿದ್ಯಾರ್ಥಿಗಳ ಮೇಲೆಹಲ್ಲೆ ನಡೆಸಿ ಬಸ್ಸಿನಿಂದ ಇಳಿಸಲಾಯಿತು. ಆ ಸಂದರ್ಭ ಈ ಕಾಲೇಜಿಗೆ ಮೋಹನ ಆಳ್ವರು ಸಂಚಾಲಕರಾಗಿದ್ದರು. ಮೊಹನ ಆಳ್ವರು ವಿದ್ಯಾರ್ಥಿಗಳ ಬೆಂಬಲಕ್ಕೆ ನಿಲ್ಲುವುದನ್ನು ಬಿಟ್ಟು ಜೊತೆಯಾಗಿ ಕ್ರೀಡಾಕೂಟಕ್ಕೆ ತೆರಳಿದ್ದಕ್ಕಾಗಿ ಪೆಟ್ಟು ತಿಂದ ವಿದ್ಯಾರ್ಥಿಗಳನ್ನೇ ತರಾಟೆಗೆ ತೆಗೆದುಕೊಂಡಿದ್ದರು. ಮಾತ್ರವಲ್ಲದೆ “ವಿದ್ಯಾರ್ಥಿಗಳು ಕ್ರೀಡಾಕೂಟಕ್ಕೆ ತೆರಳಿಲ್ಲ. ಮಜಾ ಮಾಡಲು ಹೊರಟಿದ್ದರು” ಎಂಬ ಹೇಳಿಕೆ ನೀಡಿದ್ದರು. ಆಗ ಎಸ್ಎಫ್ಐ ವಿದ್ಯಾರ್ಥಿ ಸಂಘಟನೆ ಮೋಹನ ಆಳ್ವರ ವಿರುದ್ದ ಬೀದಿಗಿಳಿದು ಪ್ರತಿಭಟನೆ ಮಾಡಿತ್ತು. ಆ ಸಂದರ್ಭದಲ್ಲಿ ಸರಕಾರಿ ಕಾಲೇಜಿನ ಪ್ರಾಂಶುಪಾಲರು ತನ್ನ ಕಾಲೇಜಿನ ವಿದ್ಯಾರ್ಥಿಗಳು ತನ್ನ ಅನುಮತಿಯನ್ನು ಪಡೆದು ವಿದ್ಯಾರ್ಥಿಗಳು ಕ್ರೀಡಾಕೂಟಕ್ಕೆ ತೆರಳಿದ್ದರು ಎಂದು ಪತ್ರಿಕಾ ಹೇಳಿಕೆ ನೀಡಿದಾಗ ಮೋಹನ ಆಳ್ವರು ಸರಕಾರಿ ಕಾಲೇಜಿನ ಪ್ರಾಂಶುಪಾಲರ ವಿರುದ್ಧವೇ ಹರಿಹಾಯ್ದಿದ್ದರು. ನಾವು ಅಂದಿನ ಕ್ರೀಡಾ ಉಪನ್ಯಾಸಕರ ಬಳಿ ಕೂಡಾ ಈ ಬಗ್ಗೆ ಮಾಹಿತಿಯನ್ನು ಪಡೆದುಕೊಂಡಿದ್ದೆವು. ವಿದ್ಯಾರ್ಥಿಗಳು ಅಲೋಶಿಯಸ್ ಕಾಲೇಜಿನಲ್ಲಿ ನಡೆಯುತ್ತಿದ್ದ ಕ್ರೀಡಾ ಕೂಟಕ್ಕೆ ಪ್ರಾಂಶುಪಾಲರ ಆದೇಶದಂತೆ ಹೊರಟಿದ್ದರು. ಶಿಸ್ತುಕ್ರಮ ಕೈಗೊಳ್ಳುವುದು ಪ್ರಾಂಶುಪಾಲರ ಕೆಲಸವೇ ಹೊರತು ಸಂಚಾಲಕರದ್ದಲ್ಲ.

ಡೊನೇಷನ್ ಹಣದಲ್ಲಿ ಅಥವಾ ಹಿಂದೂ ಸಮಾಜೋತ್ಸವದ ಸಂಘಟಕ ಸಾಹಿತ್ಯದ ಕಾರ್ಯಕ್ರಮ ಮಾಡೋದರಲ್ಲಿ ತಪ್ಪೇನು? ತಪ್ಪು ಏನೂ ಇಲ್ಲ. ಎಲ್ಲಾ ಮಕ್ಕಳಿಗೂ ಸಮಾನ ಶಿಕ್ಷಣ ದೊರೆಯಬೇಕು, ಈ ಸಮಾಜ ಜಾತ್ಯಾತೀತ ಮತ್ತು ಧರ್ಮಾತೀತವಾಗಿರಬೇಕು ಮತ್ತು ಈ ಸಮಾಜದ ಪ್ರತಿಯೊಬ್ಬರಿಗೂ ಬದುಕುವ ಹಕ್ಕಿದೆ ಮತ್ತು ಈ ನೆಲ ಪ್ರತಿಯೊಬ್ಬರಿಗೂ ಸೇರಿದ್ದು ಎಂದು ಬಲವಾಗಿ ಪ್ರತಿಪಾದಿಸುವ ನನ್ನ ನೆಚ್ಚಿನ ಮೇಷ್ಟು ಅನಂತಮೂರ್ತಿಯವರು ಇಂತಹ ಕಾರ್ಯಕ್ರಮಕ್ಕೆ ಹೋಗುವುದು ಮಾತ್ರ ಆಕ್ಷೇಪಾರ್ಹ. ತೊಗಾಡಿಯಾ, ಕಾರಂತ, ಗುರೂಜಿಯಂತವರನ್ನು ಕರೆಸಿ ಭಾಷಣ ಮಾಡಿಸೋ ವ್ಯಕ್ತಿಯೇ ಅನಂತಮೂರ್ತಿ, ಬರಗೂರುರಂತವರನ್ನೂ ಕರೆಸಿ ಭಾಷಣ ಮಾಡಿಸುತ್ತಾರೆ ಎಂದರೆ ಮಾತ್ರ ನಮ್ಮ ಕನ್ನಡದ ಮನಸ್ಸಿಗೆ ನೋವಾಗುತ್ತದೆ. ಮೋಹನ ಆಳ್ವರು ಒರ್ವ ಉತ್ತಮ ಸಂಘಟಕ. ಆದರೆ ಡೆಮಾಕ್ರಟಿಕ್ ಆಗಿರುವ ಸಂಘಟಕ ಅಲ್ಲ. ಡೊನೇಷನ್ ಹಣದಲ್ಲಿ ತನಗೆ ಬೇಕಾದಂತೆ ಕಾರ್ಯಕ್ರಮ ನಡೆಸಿ ಅದನ್ನೇ ಕನ್ನಡ ಮನಸ್ಸುಗಳ ಕಾರ್ಯಕ್ರಮ ಎಂದರೆ ಒಪ್ಪಲು ಸಾಧ್ಯವಿಲ್ಲ. ಹಿಂದೂ ಸಮಾಜೋತ್ಸವದ ಸಂಘಟಕನೊಬ್ಬ ನಡೆಸುವ ವಿದ್ಯಾರ್ಥಿಗಳ ಡೊನೇಷನ್ ಹಣದಲ್ಲಿ ನಡೆಸುವ ಸಾಹಿತ್ಯ ಜಾತ್ರೆಯಲ್ಲಿ ಅನಂತಮೂರ್ತಿಯಂತಹ ಪ್ರಗತಿಪರ ಸಾಹಿತಿಗಳು ಭಾಗವಹಿಸುವಿಕೆಯ ಬಗ್ಗೆ ನಮ್ಮ ಆಕ್ಷೇಪವಿದೆಯೇ ಹೊರತು ಆಳ್ವರಾಗಲೀ ಇನ್ನೊಬ್ಬರಾಗಲೀ ನುಡಿಸಿರಿ ನಡೆಸುವುದರ ಬಗೆಗಲ್ಲ ಎಂಬುದನ್ನು ಮತ್ತೊಮ್ಮೆ ಸ್ಪಷ್ಟಪಡಿಸುತ್ತಿದ್ದೇನೆ.

21 thoughts on “ಆಳ್ವ ಮತ್ತು ನುಡಿಸಿರಿ ಸಮರ್ಥಕರ ಲೇಖನ ಪಕ್ಷಪಾತಪೀಡಿತ ಮತ್ತು ಅಸಾಂದರ್ಭಿಕ ಸುಳ್ಳುಗಳ ಕಂತೆ…

 1. anand prasad

  ಸರ್ಕಾರೀ ಕಾಲೇಜಿನ ಪ್ರಾಂಶುಪಾಲರ ಅನುಮತಿಯಿಂದ ಕ್ರೀಡಾಕೂಟಕ್ಕೆ ಜೊತೆಯಾಗಿ ಒಂದೇ ಬಸ್ಸಿನಲ್ಲಿ ತೆರಳುತ್ತಿದ್ದ ಭಿನ್ನ ಧರ್ಮದ ವಿದ್ಯಾರ್ಥಿ ವಿದ್ಯಾರ್ಥಿನಿಯರನ್ನು ತಾಲಿಬಾನೀ ಮನಸ್ಥಿತಿಯ ಸಂಘಟನೆಗಳು ಥಳಿಸಿದ್ದನ್ನು ಮೋಹನ ಆಳ್ವರು ಸಮರ್ಥಿಸಿಕೊಂಡು ವಿದ್ಯಾರ್ಥಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರೆ ಇದು ಅತ್ಯಂತ ನಾಚಿಕೆಗೇಡಿನ ಕೃತ್ಯದಂತೆ ಕಾಣುತ್ತದೆ. ಶಿಕ್ಷಣ ಸಂಸ್ಥೆಗಳನ್ನು ನಡೆಸುವ ವ್ಯಕ್ತಿಯೊಬ್ಬನ ಮನಸ್ಸು ಇಷ್ಟು ಕೆಳಮಟ್ಟಕ್ಕೆ ಇಳಿದರೆ ಇಂಥ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣ ಪಡೆಯುವವರು ಶಿಕ್ಷಣದ ಮೂಲಭೂತ ಆಶಯವಾದ ವಿಶಾಲ ಮನೋಭಾವನೆಯನ್ನು ಬೆಳೆಸಿಕೊಳ್ಳುವುದಾದರೂ ಹೇಗೆ?

  Reply
  1. ooduga

   Edapadavu kaleju sarakari kaleju alla. adu anudanita kaleju. (kumbleyavara lekhanadalli adu ide nodi surinjeyavre. matte mattu sullu baribedi) Anudanita kalejige aadalita mandali anta ide. antaha kalejalli princege nirdeshana niduva hakkide. idu ellarigu gottiruva satya. clg sanchalakaragi uddhatatana, anuchita vartane torida vidyartigala mele alvaru shistu krama tegedukondiddare. idu patrikegalalli bandide. bajarangadalada krityakku adkku yavude sambandavilla.
   Naveenarige e patrikegalannu oodalu purusotu ellide. avaru aaradisuva sanje patrikeyonde satya helodu anta bhavisiddare paapa. anandare nivu kannige batte kattikondu naveenarige jai annabedi

   Reply
 2. prasad raxidi

  ಆಳ್ವರು ಡೋನೇಷನ್ ಎಂದು ಸಂಗ್ರಹಿಸುವುದು, ಸಾರ್ವಜನಿಕ ಹಣವೇ, ಅವರು “ಆಳ್ವಾಸ್” ಬದಲಿಗೆ ಕರಾವಳಿ- ನುಡಿಸಿರಿ ಎಂದೋ ಮೂಡುಬಿದರೆ ವಿರಾಸತ್ ಎಂದೋ ಕರೆದಿದ್ದರೆ ಅಷ್ಟರಮಟ್ಟಿಗೆ ಸಾರ್ವಜನಿಕ ಕಾರ್ಯಕ್ರಮವಾಗುತ್ತಿತ್ತು, .. ಗುರಿ ಮಾತ್ರವಲ್ಲ …ಮಾರ್ಗವೂ ಅಷ್ಟೇ ಮುಖ್ಯ, ಸೂರಿಂಜೆ ಎತ್ತಿರುವ ಪ್ರಶ್ನೆಗಳು ಆಳ್ವರೊಬ್ಬರಿಗೆ ಮಾತ್ರ ಅನ್ವಯಿಸುತ್ತದೆ ಎಂದು ಯಾಕೆ ಭಾವಿಸಬೇಕು..

  Reply
 3. ಸುಧೀರ್ ಸಾನು

  ನವೀನ್ ಸೂರಿಂಜೆಯವರು ಅನಂತ ಮೂರ್ತಿಯವರ ಹೆಸರು ಹೇಳಿಕೊಂಡು ಆಳ್ವರ ಮೇಲೆ ಯಾವುದೋ ವೈಯುಕ್ತಿಕ ದ್ವೇಷವನ್ನು ತೀರಿಸಿಕೊಳ್ಳಲು ವರ್ತಮಾನದ ವೇದಿಕೆಯನ್ನು ಬಳಸಿಕೊಳ್ಳುತ್ತಿರುವುದ ಬೇಸರದ ವಿಚಾರ.

  Reply
  1. NAVEEN SOORINJE

   @ಸುಧೀರ್ ಸಾನು @ravare ಆಳ್ವರನ್ನು ಯಾರೂ ದ್ವೇಷಿಸುವವರು ಇಲ್ಲ. ನಾನೂ ಆಳ್ವರನ್ನು ವೈಯುಕ್ತಿಕವಾಗಿ ದ್ವೇಷಿಸುತ್ತಿಲ್ಲ. ಕಳೆದ ಐದು ವರ್ಷಗಳಿಂದ ನುಡಿಸಿರಿಯ ಬಗ್ಗೆ ವರದಿ ಮಾಡುತ್ತಿದ್ದೇನೆ. ಒಂದು ಅಚ್ಚುಕಟ್ಟಾದ ಸಮಾರಂಭವನ್ನು ಆಳ್ವರು ನಡೆಸಿಕೊಡುತ್ತಾರೆ. ತಾನು ವೈಯುಕ್ತಿಕವಾಗಿ ಕೋಮುವಾದಿಯಾಗಿದ್ದರೂ ಎಲ್ಲಾ ಪಕ್ಷದವರನ್ನೂ ಸರಿದೂಗಿಸಿಕೊಂಡು ಹೋಗುತ್ತಾರೆ. ದೀಪಾವಳಿ ಉತ್ಸವವನ್ನೂ ಮಾಡುತ್ತಾರೆ. ಇಫ್ತಾರ್ ಕೂಟವನ್ನೂ ಮಾಡುತ್ತಾರೆ. ಕೋಮುಗಲಭೆ ಮಾಡಲು ಪ್ರಚೋಧಿಸುವ ಹಿಂದೂ ಸಮಾಜೋತ್ಸವವನ್ನೂ ನಡೆಸಿಕೊಡುತ್ತಾರೆ. ನುಡಿಸಿರಿಯನ್ನೂ ಮಾಡುತ್ತಾರೆ. ಮಣ್ಣಿನ ಸಂಸ್ಕೃತಿ – ಬದುಕು-ಕೃಷಿಯನ್ನು ಹೊಸಕಿ ಹಾಕುವ ಎಸ್ಇಝಡ್ ವಿರುದ್ಧ ರೈತರ ಹೋರಾಟ ನಡೆಯುತ್ತಿರುವಾಗ ಎಸ್ಇಝಡ್ ಜೊತೆ ಅಧಿಕೃತ ಒಪ್ಪಂದಕ್ಕೆ ಆಳ್ವರು ಸಹಿ ಹಾಕುತ್ತಾರೆ. ಮತ್ತೆ ಅದೇ ಅಳ್ವರು ನಮ್ಮ ಮಣ್ಣಿನ ಸಂಸ್ಕೃತಿ, ಬದುಕು, ಕೃಷಿಯ ಬಗ್ಗೆ ಮಾತನಾಡುತ್ತಾರೆ. ಇಷ್ಟೆಲ್ಲಾ ಮಾಡಿದರೂ ಆಳ್ವರನ್ನು ಯಾರೂ ವೈಯುಕ್ತಿಕವಾಗಿ ದ್ವೇಷಿಸುವುದಿಲ್ಲ. ಮುಂದೊಂದು ದಿನ ನಾವು ಪಶ್ಚಾತಾಪ ಪಡಬಾರದು ಎಂದು ಈ ಲೇಖನ …

   —- ನವೀನ್ ಸೂರಿಂಜೆ

   Reply
   1. ಸುಧೀರ್ ಸಾನು

    ಪ್ರಿಯ ನವೀನ್,
    ನಿಮ್ಮ ನಿಲುವು ನನಗರ್ಥವಾಗುವಂತೆ ಸ್ಪಷ್ಟಪಡಿಸಿದ್ದಕ್ಕೆ ವಂದನೆಗಳು.
    ಮೊದಲ ಓದಿಗೆ ಆಳ್ವರ ಮೇಲೆ ನೀವು ವಿನಾ ಕಾರಣ ಹಾರಿ ಬಿದ್ದಂತೆ ಕಂಡದ್ದು ಸಹಜ.
    ನಿಮ್ಮ “ಮಣ್ಣಿನ ಸಂಸ್ಕೃತಿ – ಬದುಕು-ಕೃಷಿಯನ್ನು ಹೊಸಕಿ ಹಾಕುವ ಎಸ್ಇಝಡ್ ವಿರುದ್ಧ ರೈತರ ಹೋರಾಟ ನಡೆಯುತ್ತಿರುವಾಗ ಎಸ್ಇಝಡ್ ಜೊತೆ ಅಧಿಕೃತ ಒಪ್ಪಂದಕ್ಕೆ ಆಳ್ವರು ಸಹಿ ಹಾಕುತ್ತಾರೆ” ಎಂಬ ನಿಮ್ಮ ಅಭಿಪ್ರಾಯ ನೂರಕ್ಕೆ ನೂರು ವಾಸ್ತವ, ಮತ್ತು ಇಂಥಹ ಹಲವು ವಿರೋಧಾಭಾಸಗಳ ವ್ಯಕ್ತಿತ್ವ ಆಳ್ವರದ್ದು ಎನ್ನುವ ಬಗ್ಗೆ ಸಂಶಯವಿಲ್ಲ. ಆದರೆ “ಯಾರಿಂದಲೋ ಭಾಷಣ ಮಾಡಿಸಿ ಹಿಂದೂ ಮುಸ್ಲಿಮರ ಮಧ್ಯೆ ಸೃಷ್ಟಿ ಮಾಡಿರುವ ಅಳಿಸಲಾಗದ ಕಂದಕ ತನ್ನ ಕಾಲೇಜಿನ ಆವರಣದಲ್ಲಿ ಇಫ್ತಾರ್ ಕೂಟ ಮಾಡಿದರೂ, ಮಸೀದಿ ಕಟ್ಟಿದರೂ ಸರಿ ಹೋಗುವಂತದ್ದಲ್ಲ.” ಅನ್ನುವ ಮಾತು ಅಷ್ಟೊಂದು ಸಮರ್ಥನೀಯವಲ್ಲ ಅನ್ನುವುದು ನನ್ನ ಅಭಿಪ್ರಾಯ

    Reply
 4. prashanth

  naveen,ondu prashne…ee komugalabhe annodu nimma lekhanagalalli hala baari bandide..haagadare love jihaad matthu muslim moolabhoothavaadada bagge neevu maathadiddu elloo kandilla…yaake?

  Reply
 5. Nagaraju

  ಸೂರಿಂಜೆ ಅವರ ಅಮಾಯಕತೆಯ ಬಗ್ಗೆ ವಿಷಾದವಾಗುತ್ತದೆ. ಪೇಜಾವರರನ್ನು ಭಕ್ತಿಯಿಂದ ಸೇವಿಸುವ ಉಡುಪಿ ಮೂಲದ ಅನಂತಮೂರ್ತಿ ಮತ್ತು ಬರಗೂರು ಅಂಥವರನ್ನು ಪ್ರಗತಿಪರರು ಎಂದು ನಂಬಿಕೊಂಡು ಒಂದು ವಾದ ಮಂಡಿಸುವ ಪರಿಯೇ ನಗೆ ಬರಿಸುತ್ತದೆ…

  Reply
 6. nimmava

  ನಿಮ್ಮ ಲೇಖನದ tittle “ಅರ್ದ ಸತ್ಯ ” ಎಂದಾಗಿದ್ದರೆ ಚೆನ್ನಾಗಿತ್ತು !! ಓದುಗರೇ, ದೂರದ ಬೆಟ್ಟ ಕಣ್ಣಿಗೆ …..!! ಆಳ್ವಸ್ನಲ್ಲಿ ಮೂರು ವರ್ಷ ವಿದ್ಯಾಬ್ಯಾಸ ಮಾಡಿದ ನಾನು ಮತ್ತು ಎರಡು ವರ್ಷ ಕಲಿತ ನನ್ನ ತಮ್ಮ ಕಂಡು ಕೊಂಡಿರುವ ಪ್ರಕಾರ “ಆಳ್ವಾಸ್” ಎಂಬುದು ವರ್ಷದಿಂದ ವರ್ಷಕ್ಕೆ ಶ್ರೀಮಂತ ಮನೆತನದ ವಿದ್ಯಾರ್ಥಿಗಳಿಗೆ ಮಾತ್ರ (ಇತರ ಕಾಲೇಜುಗಳಂತೆ !) ಅನ್ನುವ ಸ್ಥಿತಿಗೆ ತಲುಪಿದೆ. ಸ್ಥಳೀಯ ವಿದ್ಯಾರ್ಥಿಗಳಿಗೆ ಕಾಲೇಜು ಫೀಸಲ್ಲಿ ಸ್ವಲ್ಪ ವಿನಾಯಿತಿ ಇದ್ದರೂ ಅದು ಸಾಮಾನ್ಯ ಜನರಿಗೆ ಕೈಗೆಟುಕುವಂಥದ್ದಲ್ಲ. ದೂರದ ಮಣಿಪುರದಿಂದ ಬಂದವರಿಗೆ ಮಾತ್ರ ತುಂಬಾ ದುಬಾರಿ . ಪರವಾಗಿಲ್ಲ ಬಿಡಿ!! ಆದರೂ ನವೀನರಂದಂತೆ ಮೋಹನ ಆಳ್ವ ಒಬ್ಬ ಕೋಮುವಾದಿಯೆಂದು ಯಾವತ್ತು ನನಗನಿಸಿಲ್ಲ !! ನನ್ನ ವಿದ್ಯಾಬ್ಯಾಸದ ಸಮಯದಲ್ಲಿ ಕಾಲೇಜು ಸ್ಪೋರ್ಟ್ಸ್ ಕೂತದಲ್ಲಿದ್ದ ಹೆಚ್ಚಿನ ಮುಸ್ಲಿಂ ವಿದ್ಯಾರ್ಥಿಗಳ ಸಂಖ್ಯೆಯೇ ಅದಕ್ಕೇ ಸಾಕ್ಷೀ.

  Reply
 7. oduga

  Soorinjeyavare, Neevu Yaava Uddesha Ittukondu Alva’s Nudisiriya bagge haagu Dr. Alvara bagge bareyuttiddiri yendu arthavaaguttilla. Samastha Karnatakada janathe, horarajya haagu hora deshada janaru Alvas nudisiri, Alvas Virasat athava Alvas Vidya samste ya bagge yestondu abhimaana ittukondiddare andre adannu varnisalu asaadya. Ei Nimma lekhana, yellarannu avamanisidante allava, Yochisi…… Neevu baredastu Alvara utsaha hechutte vinaha kugguvudilla allade avara yella karyakramagalu yashasvi yaagi jaragutte………

  Reply
 8. arun joladkudligi

  ನವೀನ್ ನಿಮ್ಮ ಚರ್ಚೆ ಅರ್ಥಪೂರ್ಣವಾಗಿದೆ. ನಮ್ಮ ಲೇಖಕರು ಬುದ್ಧಿಜೀವಿಗಳು ಈಗ ಸಂದಿಗ್ದದಲ್ಲಿದ್ದಾರೆ. ಯಾವುದನ್ನು ವಿರೋಧಿಸುವುದು ಯಾವುದನ್ನು ಒಪ್ಪಿಕೊಳ್ಳುವುದು ಅಂತ. ಕಾರಣ ವಿಚಿತ್ರ ರೀತಿಯ ದ್ವಂದ್ವವಿದೆ. ಮೂಲಭೂತವಾದಿಗಳು ಪ್ರಗತಿಪರರ ಸೋಗು ಹಾಕುವುದು, ಈ ಸೋಗಿಗೆ ಪ್ರಗತಿಪರತೆಯ ನಟನಾಮಣಿಗಳು ಅದರಲ್ಲಿ ಭಾಗವಹಿಸುವುದು, ಇನ್ನು ಪ್ರಗತಿಪರವಾದವುಗಳಲ್ಲಿಯೂ ಮೂಲಭೂತವಾದಿಗಳು ನುಗ್ಗಲು ಅವಕಾಶ ಕಲ್ಪಿಸುವುದು. ಅದನ್ನು ಪ್ರಗತಿಪರವೆಂದು ಬೊಬ್ಬೆ ಹಾಕುವುದು. ಹೀಗೆ ಒಂದರೊಳಗೊಂದು ಬೆರೆತ ವಾತಾವರಣವಿದೆ. ಭಾಷಿಕ ಮೂಲಭೂತವಾದಿ ಸಂಘಟನೆಗಳ ಮುಖವಾಣಿ ಪತ್ರಿಕೆಗಳಲ್ಲಿಯೇ ನಮ್ಮ ಪ್ರಗತಿಪರ ಯುವಕರು ಅವರಿಗೆ ಒತ್ತೆಯಾಗಿ ದುಡಿಯುವುದು. ಈ ತರಹದ ವೈರುದ್ಯಗಳ ಪಯನ ಈಗ ಹೆಚ್ಚಾಗಿದೆ.ಈ ಕುರಿತು ಸಮಾನಾಸಕ್ತರಲ್ಲಿ ಚರ್ಚೆ ಸಂವಾದ ಆಗಬೇಕಿದೆ.

  Reply
  1. ಸುಧೀರ್ ಸಾನು

   ಅರುಣ ಸರ್..
   ಯಾವುದು ಪ್ರಗತಿಪರವಾದ? ಯಾವುದು ಮೂಲಭೂತವಾದ?
   ಇದನ್ನು ನಿರ್ಧರಿಸುವವರು ಯಾರು? ವಿವರಿಸಿದರೆ ಬಹುಶ: ನಮ್ಮ ಅರಿವಿನ ವಿಸ್ತಾರ ಹೆಚ್ಚಾಗಬಹುದು.

   Reply
 9. Oduga

  ಒಂದು ಕಟ್ಟಡ ಎಷ್ಟೇ ಎತ್ತರವಾಗಿರಲಿ ಅಥವಾ ಸುಂದರವಾಗಿರಲಿ, ಅದರ ಅಡಿಪಾಯ ಸರಿಯಾಗಿಲ್ಲದಿದ್ದರೆ ಕಟ್ಟಡಕ್ಕೆ ಯಾವುದೇ ಬೆಲೆಯಿರುವುದಿಲ್ಲ ಹಾಗೂ ಭವಿಷ್ಯವೂ ಇರುವುದಿಲ್ಲ. ಕರಾವಳಿಯಲ್ಲಿ ನಡೆಯುತ್ತಿರುವ ಸಾಂಸ್ಕೃತಿಕ,ಧಾರ್ಮಿಕ ಹಾಗೂ ಶೈಕ್ಷಣಿಕ ಉದ್ಯಮಗಳ ಅವಸ್ಥೆಯು ಅಡಿಪಾಯ ಸರಿಯಾಗಿಲ್ಲದ ಕಟ್ಟಡದ ತರಹವೇ ಇದೆ. ಆನೆಯ ತರಹ ಹೊರಜಗತ್ತಿಗೆ ತೋರಿಸಲು ಬೇರೆ, ತಿನ್ನಲು ಬಳಕೆಯಾಗುವ ದಂತಗಳು ಬೇರೆಯೆಂಬಂತೆ, ಇಂತಹ ಶಿಕ್ಷಣ ಸಂಸ್ಥೆಗಳಲ್ಲಿ ನಡೆಯುವ ಒಳಗಿನ ಸಿದ್ದಾಂತಗಳು ಬೇರೆ, ಹೊರ ಜಗತ್ತಿಗೆ ತೋರಿಸುವ ಚಟುವಟಿಕೆಗಳು ಬೇರೆಯದ್ದಾಗಿರುತ್ತವೆ. ಅರುಣ್ ಜೋಳದಕೂಡ್ಲಗಿಯವರ ಅನಿಸಿಕೆಗಳು ಈ ನಿಟ್ಟಿನಲ್ಲಿ ಬಹಳ ಸಂದರ್ಭೊಚಿತವಾಗಿದೆ.

  ಅಪ್ಪಟ್ಟ ವ್ಯಾಪಾರಿ ಸಂಸ್ಥೆಯಾಗಿರುವ ಈ ಸಂಸ್ಥೆಗಳು ಸಮಾಜಕ್ಕೆ ಸಾಮಾಜಿಕ ನ್ಯಾಯದ ಉಪದೇಶಗಳಾನ್ನು ಕೊಡುತ್ತಾವೆ. ವರ್ಷದ ಮುನ್ನೂರ ಅರುವತ್ತು ದಿನ ಕಾರ್ಪೊರೇಟ್ ಕೇಂದ್ರಿತ ತರಬೇತಿಯನ್ನು ನೀಡಿ ಮೂರು-ನಾಲ್ಕು ದಿವಸ ಕನ್ನಡದ ಜಾತ್ರೆಯನ್ನು ಹಮ್ಮಿಕೊಳ್ಳುತ್ತವೆ. ಕನ್ನಡದ ಬಗ್ಗೆ ಅಭಿಮಾನ, ಕನ್ನಡ ನೆಲದ ಬಗ್ಗೆ ಗೌರವವಿರುತ್ತಿದ್ದರೆ ಮುಚ್ಚುತ್ತಿರುವ ಕನ್ನಡ/ಸರಕಾರಿ ಶಾಲೆಗಳನ್ನು ಉಳಿಸಬಹುದಾಗಿತ್ತು. ವಿಪರ್ಯಾಸವೆಂದರೆ ಈ ಖಾಸಗಿ ಆಟಗಾರರೇ ಸರಕಾರಿ ಶಾಲೆಗಳ ಅಧಪತನಕ್ಕೆ ಕಾರಣಕರ್ತರು. ಎಲ್ಲವೂ ಬೂಟಾಟಿಕೆ.

  ಸಮಾಜದ ಪ್ರಗತಿಯ ದೃಷ್ಟಿಯಿಂದ ನವೀನ್ ರವರು ಆರಂಭಿಸಿದ ಚರ್ಚೆ ಇನ್ನೂ ಮುಂದುವರಿಯಬೇಕು, ಅವರ ವಿಚಾರಗಳ ಬಗ್ಗೆ ಭಿನ್ನಾಭಿಪ್ರಾಯಗಳಿದ್ದರೆ ಅದನ್ನು ಯಾವ ರೀತಿಯಲ್ಲಿ ಮಂಡಿಸಬೇಕೋ ಅದೇ ರೀತಿಯಲ್ಲಿ ಮಂಡಿಸಿ ಎಂಬ ವಿನಂತಿ. ಅದು ಬಿಟ್ಟು ವೈಯುಕ್ತಿಕವಾಗಿ ಲೇಖಕರನ್ನು ಹೀಯಾಳಿಸುವುದು, ಚರ್ಚಾವಿಷಯವನ್ನು ಉದ್ದೇಶಪೂರ್ವಕವಾಗಿ ಬೇರೆಡೆಗೆ (ಲವ್ ಜಿಹಾದ್) ಕೊಂಡೊಯ್ಯುವುದು, ಹಾಗೂ ಲೇಖಕರನ್ನು ಅದಕ್ಕಾಗಿ ಪ್ರಚೋದಿಸುವುದು ಇವೆಲ್ಲಾವನ್ನು ಕುತರ್ಕವನ್ನದೆ ಬೇರೆ ವಿಧಿಯಿಲ್ಲ.

  Reply
 10. Vashidasa

  Naveen avara lekhanada hinde yaavudO uddeshavide..nimma lekhanada prakaara, alvaravannu gouravisuva kannada naadina buddi jeevigalu, hiriys aaahitigalu, ashteke doorada urininda baruva kannadaabhimaanigalu moorkhare??????? intaha vishada patrikodyama bittu, tereda kannini0nda bareyiri.

  Reply
 11. ಸುಧೀರ್ ಸಾನು

  ಪ್ರಿಯ ರವಿ ಕೃಷ್ಣಾ ರೆಡ್ಡಿಯವರೆ,
  ಅಂತರ್ಜಾಲದ ಮರೆಯಲ್ಲಿ ಇದ್ದು ಕಲ್ಲು ಹೊಡೆದು ಓಡುವವರಿಗಿಂತ ನೀವು ಭಿನ್ನ: ಇದು ನಿಜಕ್ಕೂ ಪ್ರಶಂಸಾರ್ಹ ಹಾಗೂ ಗೌರವಾರ್ಹ.
  ಯಾಕೆಂದರೆ ನಿಮಗೊಂದು ನೆಲೆ ಉಂಟು, ನಿಲುವುಂಟು.
  ಈ ಹಿಂದೆ ಸಂಪಾದಕೀಯವೆಂಬ ಒಂದು ಅನಾಮಿಕ ಬ್ಲಾಗು ಆರಾರು ಲಕ್ಷ ಹಿಟ್ಟುಗಳೊಂದಿಗೆ ಸುಖಪಟ್ಟು ಎಲ್ಲೋ ಮರೆಯಾಯ್ತು. ಅದರ ಹಿಂದೆಯೇ ಯಾರೋ ಮುಖ ತೋರಿಸಲು ಇಷ್ಟ ಪಡದ ಮೇಷ್ಟ್ರ ಬ್ಲಾಗೊಂದು ಯಾರ್ಯಾರಿಗೋ ಬಯ್ದು ಬಾಗಿಲು ಮುಚ್ಚಿಕೊಂಡಿತು.
  ನಾನು ತೀರ 6-7 ದಿನಗಳ ಈಚೆಗಷ್ಟೇ “ವರ್ತಮಾನ”ವನ್ನು ಗಮನಿಸುತ್ತಿದ್ಗೇನೆ ಮತ್ತು ಓದುತ್ತಿದ್ದೇನೆ. ಶ್ರೀವತ್ಸ ಜೋಷಿಯವರು ನವೀನ್ ಸೂರಿಂಜೆಯವರ ಆಳ್ವಾ’ಸ್ ಬಗೆಗಿನ ಲೇಖನವೊಂದನ್ನು facebookನಲ್ಲಿ ಹಂಚಿಕೊಂಡದ್ದು ನಾನು “ವರ್ತಮಾನ”ವನ್ನು ಹಿಂಬಾಲಿಸಲು ಕಾರಣ.
  ಈಗ ಮರೆಯಲ್ಲಿ ಇದ್ದು ಕಲ್ಲು ಹೊಡೆದು ಓಡುವ, ಸುಮ್ಮನೆ timepassಗಾಗಿ ಪ್ರತಿಕ್ರಿಯೆಗಳ ಗೀಚುವ ವ್ಯವಹಾರಗಳನ್ನು ಬಿಟ್ಟು ಅನಂತಮೂರ್ತಿಯಂತಹ ಪ್ರಗತಿಪರ ಸಾಹಿತಿಗಳು ಭಾಗವಹಿಸುವಿಕೆಯ ಬಗ್ಗೆ ನಮ್ಮ ಆಕ್ಷೇಪವನ್ನು ನೇರವಾಗಿ ವ್ಯಕ್ತಪಡಿಸೋಣ. ಮೂಡಬಿದ್ರೆಯಿಂದ ಹೆಚ್ಚೆಂದರೆ 18 ಕಿಲೋಮೀಟರ್ ದೂರವಿರುವ ಕಾರ್ಕಳ ನನ್ನೂರು. ಇಲ್ಲಿ ಆಳ್ವಾ’ಸ್ ನುಡಿಸಿರಿಗೆ ಸಮಾನಾಂತರವಾಗಿ ಕಾರ್ಯಕ್ರಮ ಸಂಯೋಜಿಸುವುದು ಜವಾಬ್ದಾರಿ ನನ್ನದು. ಅನಂತ ಮೂರ್ತಿ ಮೇಷ್ಟ್ರನ್ನು ಕರೆತರುವ ಜವಾಬ್ದಾರಿ ನಿಮ್ಮದು. ನಮ್ಮ ಕಾರ್ಯಕ್ರಮಕ್ಕೆ ನುಡಿಸಿರಿಯಷ್ಟಲ್ಲವಾದರೂ ಅದರ 25% ಜನ ಖಂಡಿತ ಸೇರುತ್ತಾರೆ ಎನ್ನುವ ಭರವಸೆ ಇದೆ. ಕಾರ್ಯಕ್ರಮದ ರೂಪರೇಷೆಗಳ ಬಗ್ಗೆ ಆಸಕ್ತಿ ಇದ್ದರೆ ಚರ್ಚಿಸೋಣ.

  Reply
  1. NAVEEN SOORINJE

   ನಾ ದ ಶೆಟ್ಟಿಯವರೇ… ನಿಮ್ಮ ಮಾತನ್ನು ಸರಿಯಾಗಿ ಅರ್ಥಯಿಸಿಯೇ ಇನ್ನೊಂದು ಲೇಖನ ಬರೆದಿದ್ದು. ನೀವು ಆಳ್ವರ ಪರ ವಹಿಸಿ ಪ್ರತಿಕ್ರಿಯೆ ನೀಡಿದ್ದು ಎಂಬುದು ಗೊತ್ತು. ಇಷ್ಟಕ್ಕೂ ಲೇಖನದ ಯಾವ ವಾಕ್ಯವನ್ನು ನೀವು ಒಪ್ಪುವುದಿಲ್ಲ ಮತ್ತು ಯಾವ ಕಾರಣಕ್ಕಾಗಿ ಒಪ್ಪುವುದಿಲ್ಲ ಎಂದು ಸ್ಪಷ್ಟವಾಗಿ ಹೇಳುವುದು ನಿಮ್ಮ ಘನತೆಗೆ ಸರಿ ಹೊಂದುತ್ತಿತ್ತು. ನಾವು ಮೊಸರಲ್ಲಿ ಕಲ್ಲು ಹುಡುಕುತ್ತಿದ್ದೇವೆಯೋ ಅಥವಾ ನೀವು ಕಪ್ಪು ಕಲ್ಲಿಗೆ ಹೆಪ್ಪು ಹಾಕಿ ಕಲ್ಲನ್ನೇ ಮೊಸರು ಎನ್ನುತ್ತಿದ್ದೀರೋ ನಮಗೊಂದೂ ಅರ್ಥವಾಗುವುದಿಲ್ಲ. ನಮ್ಮ ಕನ್ನಡ ಸಾಹಿತ್ಯ ಲೋಕ ಹೀಗೆ ಚಪ್ಪರ ಹಾಕಿಸುವವರ ದಾಸರಾದರೆ ಕನ್ನಡದ ಗತಿಯೇನು ?

   Reply
 12. Ivan D Silva

  ಶೆಟ್ಟರ ಮಾತನ್ನೇನೋ ನವೀನ್ ತಪ್ಪಾಗಿ ಅರ್ಥೈಸಿರಬಹುದು ….ಆದರೆ ಶೆಟ್ಟರ ನಡವಳಿಕೆಗಳನ್ನು ಮಾತ್ರ ನವೀನ್ ಬಹಳ ಸ್ಪಷ್ಟವಾಗಿ ಅರ್ಥ ಮಾಡಿಕೊಂಡಿದ್ದಾರೆ. ಹಲವಾರು ವರುಷಗಳಿಂದ ಆಳ್ವಾಸ್ ಭಜನಾ ಮಂಡಳಿಯ ಪಾರುಪತ್ಯ ಹಿಡಿದವರೆಲ್ಲಾ ಈಗ ನವೀನ್ ಅಂತಹವರು ಎತ್ತುತ್ತಿರುವ ಮೂಲಪ್ರಶ್ನೆಗಳನ್ನು ಉತ್ತರಿಸಲೇ ಬೇಕಾದ ಅನಿವಾರ್ಯತೆ ಖಂಡಿತಾ ಇದೆ. ಯಾವಾಗಲೂ ಎಲ್ಲಾ ಕಡೆಗೂ ಸಲ್ಲುವ ಮನೋಭಾವದಿಂದ ತಮಗೆಲ್ಲಾ ಪ್ರಯೋಜನವಾಗಿರಬಹುದು.. ಆದರೆ ಜನರಿಗಂತೂ ಬಲೂ ಕಷ್ಟವೇ… ಆಗಿದೆ…

  Reply
 13. Natesh ullal

  People who can think don’t get things done,
  while people who get things done don’t have time to think…
  – Arne Garborg

  ಪ್ರಜಾಪ್ರಭುತ್ವದ ಹೊಳೆಯಲ್ಲಿ ತಮ್ಮ ಮುಂಡಾಸು ಕೊಚ್ಚಿ ಹೋಗದಂತೆ ಅದನ್ನು ಎತ್ತಿ ಹಿಡಿಯಲು ಎಲ್ಲ ರೀತಿಯ ಕಸರತ್ತು ಮಾಡುವವರ ಬಗ್ಗೆ ಮತ್ತು ಆ ಕಸರತ್ತನ್ನೇ ಪುರುಷಾರ್ಥ ಎಂಬಂತೆ ಪುಂಗಿ ಊದುವವರ ಬಗ್ಗೆ ಬೇರೇನು ಹೇಳಲಿ ?

  Reply
 14. T Surendra Rao

  ಆಳ್ವಾಸ್ ನುಡಿಸಿರಿಯ ಧಾಂ ಧೂಂ ಬಗ್ಗೆ ನನಗೆ ಮೊದಲಿನಿಂದಲೂ ಅನುಮಾನವಿತ್ತು. ವರ್ತಮಾನದಲ್ಲಿ ಈ ಕುರಿತ ಚರ್ಚೆ ನನ್ನ ಅನುಮಾನವನ್ನು ನಿಜವಾಗಿಸಿದೆ. ಸಾಹಿತ್ಯ ಲೋಕದ ಮನಸ್ಸುಗಳನ್ನು ದಾರಿತಪ್ಪಿಸುವ ವ್ಯವಸ್ಥಿತ ಸಂಚು ಅದು ಎಂಬುದು ಸ್ಪಷ್ಟ. ನಮ್ಮ ದೇಶದ ಅನೇಕ ಕೈಗಾರಿಕೋದ್ಯಮಿಗಳು ತಮ್ಮ ಕಾರ್ಮಿಕರನ್ನು ಬೆನ್ನು ಮುರಿಯುವಂತೆ ದುಡಿಸಿಕೊಂಡು ಆ ನಂತರ ಜನರ ಕಣ್ಣಿಗೆ ಮಣ್ಣೆರಚಲು ದೊಡ್ಡ ದೇವಸ್ಥಾನಗಳು, ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳನ್ನು ಕಟ್ಟಿಸಿರುವ ಹೀನ ಕೃತ್ಯದಷ್ಟೆ ಇದು ಎಂಬ ಻ರಿವು ನಮಗಿರಬೇಕು. ನವೀನ್ ಸೂರಿಂಜೆಯಂಥ ಯುವಕರು ಸರಿಯಾಗಿಯೇ ತಮ್ಮ ನಿಲುವನ್ನು ವ್ಯಕ್ತಪಡಿಸಿರುವುದು ನಮ್ಮ ದೇಶಕ್ಕೆ ಭವಿಷ್ಯ ಇದೆ ಎಂಬುದನ್ನು ಸಾರುತ್ತದೆ. ನವೀನ್ ಸೂರಿಂಜೆಯನ್ನು ಹೀಗಳೆಯುವ ‘ಬುಧ್ಧಿವಂತರು’ ಸ್ವಾಮಿ ವಿವೇಕಾನಂದರ ವಿಚಾರಗಳನ್ನು ಮತ್ತೆ ಮತ್ತೆ ಓದಲಿ ಎಂದಷ್ಟೆ ಹಾರೈಸಬಹುದು.

  Reply
 15. ಅನಿತಾ

  ಕಾರಂತರನ್ನು ಕೇಳಬಾರದು ತೊಗಾದಿಯಾರನ್ನು ಕೇಳಬಾರದು ಭೈರಪ್ಪನವರನ್ನು ಕೇಳಬಾರದು. ಎಡ ಪಂಥದವರು ಹೇಳಿದ್ದನ್ನು ಮಾತ್ರ ಕೇಳಬೇಕು ನಂಬಬೇಕು. ವಿಭಿನ್ನ ವಿಚಾರಧಾರೆಗಳ ಪ್ರಕಟಣೆ ವಿಮರ್ಶೆಗೆ ಆಸ್ಪದವೇ ಕೊಡಬಾರದು ಎಂಬ ಸರ್ವಾಧಿಕಾರಿ ಧೋರಣೆ ಲೇಖಕರದು. ಭೈರಪ್ಪನವರು ಹಿಂದೆಂದೋ ಬಂದಿದ್ದರಿಂದ ನುಡಿಸಿರಿ ವೇದಿಕೆ ಮೈಲಿಗೆಯಾಗಿದೆ. ಅಲ್ಲಿ ಅನಂತಮೂರ್ತಿ ಕೂರಬಾರದು. ಹೀಗೆ ವಿಭಿನ್ನ ವಿಚಾರಧಾರೆಗಳ ಮುಖಾಮುಖಿ ಜಿಜ್ಞಾಸೆ ಕೂಡದು ಎನ್ನುವ ಧೋರಣೆ ಸರಿಯೇ?

  Reply

Leave a Reply

Your email address will not be published.