“ಸೂರೂರಿನ ದೈವ ಮಾಯವಾದ ಕತೆ” : ತೃತೀಯ ಬಹುಮಾನ ಪಡೆದ ಕತೆ

– ಶ್ರೀಲೋಲ.ಸಿ

ದೊಡ್ಮನೆ ವಿಷ್ಣುಮೂರ್ತಿ ಬಾಗಿಲ್ತಾಯರ ಮನೆಯಲ್ಲಿ ಅಂದು ಸಡಗರವೋ ಸಡಗರ. ಅವರ ಏಕೈಕ ಮಗಳು ಕಲ್ಪನಾಳಿಗೆ ಕಳೆದ ವಾರವಷ್ಟೆ ಮಂಗಳೂರಿನಲ್ಲಿ ಮದುವೆ ಮಾಡಿಸಿ, ಮಗಳು ಮತ್ತು ಅಳಿಯರನ್ನು ಪುತ್ತೂರಿನ ಹತ್ತಿರದ ತಮ್ಮ ಊರಾದ ಸೂರೂರಿಗೆ ಕರೆದು ತಂದಿದ್ದಾರೆ. ಹುಡುಗ ಶಶಾಂಕ, ಕಸ್ಟಂಸ್‌ನಲ್ಲಿ ಅಧಿಕಾರಿ. ಬಂದ ನೆಂಟರಿಷ್ಟರು ಒಬ್ಬೊಬ್ಬರೆ ಗಂಟುಮೂಟೆ ಕಟ್ಟಿದ್ದಾರೆ. ಬಾಗಿಲ್ತಾಯರ ಹೆಂಡತಿ ಸುನೀತಾ ಅತಿಥಿ ಸತ್ಕಾರದಲ್ಲಿ ಎತ್ತಿದ ಕೈ. ಮತ್ತೆ ಕೇಳಬೇಕೆ, ಅಳಿಯನಿಗೆ ಮಾಡಿ ಹಾಕಿದಷ್ಟು ಸಾಲದು. ತನ್ನ ತವರು ಮನೆ, ದೂರದ ಕೋಟದಲ್ಲಿ ಕಲಿತ ಕೊಟ್ಟೆ ಕಡುಬು, ಅರಿಶಿನ ಎಲೆಯ ಗಟ್ಟಿ, ಕೆಸುವಿನ ಎಲೆಯ ಗಂಟಿನ ಹುಳಿ ಹೀಗೆ ಯಾವುದಾವುದೋ ಹಳತು ಆದರೂ ಹೊಸರುಚಿಯ ಅಡಿಗೆಗಳನ್ನು ಮಾಡಿ ಬಡಿಸಿ, ಕೊನೆಗೆ “ಏನು ಅಳಿಯಂದಿರೇ, ನೀವು ಉಣ್ಣುವುದೇ ಇಲ್ಲ? ನಿಮ್ಮ ಪ್ರಾಯದಲ್ಲಿ ನಮ್ಮ ಮನೆಯವರದು ಬಕಾಸುರನ ಹೊಟ್ಟೆಯಂತಿತ್ತು. ಅಥವಾ ನನ್ನ ಅಡುಗೆ ನಿಮಗೆ ಸಮ ಬರಲಿಲ್ಲವೋ,” ಎಂದು ನುಡಿದು ನಡುವೆ ಗಂಡನನ್ನು ನೋಡಿ ಸಣ್ಣಗೆ ನಕ್ಕರು. ಇನ್ನೂ ಅತ್ತೆ ಎನ್ನುವ ಸಲುಗೆ ಬರದೇ ಇದ್ದ ಶಶಾಂಕನಿಗೆ “ಹಾಗೇನಿಲ್ಲ, ಕೂತು ಸಮಯ ಕಳೆಯುವುದಲ್ಲವೇ ಇಲ್ಲಿ? ಹಾಗಿರುವಾಗ ಎಷ್ಟುತಾನೆ ಉಣ್ಣಬಹುದು?” ಎಂದು ಸಂಕೋಚದಿಂದಲೇ ಉತ್ತರಿಸಿದ. ಬಾಗಿಲ್ತಾಯರು “ಶಶಾಂಕ, ಸುನೀತಳಿಗೆ ಒಂದು ಐಬು. ಅದೇನೆಂದರೆ ಆಕೆಗೆ ಕಡಿಮೆ ಅಡುಗೆ ಮಾಡಿ ಗೊತ್ತಿಲ್ಲ. ಇಬ್ಬರು ಮನೆಯಲ್ಲಿದ್ದರೂ ಇಪ್ಪತ್ತು ಮಂದಿಗಾಗುವಷ್ಟು ಅಡುಗೆ ಮಾಡುವುದು. ಕೇಳಿದರೆ ಮನೆಗೆ ಯಾರಾದರೂ ಬಂದರೆ ಅವರಿಗೆ ಏನು ಬಡಿಸುವುದು ಎಂಬ ಸಿದ್ಧ ಉತ್ತರ. ಹಾಗೆ ಬರುವುದಿಲ್ಲವೆಂದೇನಿಲ್ಲ. ಅಷ್ಟಾದ ಮೇಲೆ ಮಾಡಿದ ಅಡುಗೆ ಉಳಿಯಕೂಡದು. ದುಡ್ಡು ಕೊಟ್ಟು ತಂದ ಬೇಳೆ, ತರಕಾರಿಯನ್ನು ಬಿಸಾಡುವುದೆ? ಇಷ್ಟು ಸಮಯ ನಾನೊಬ್ಬನೆ ಅವಳ ಅಡುಗೆಯನ್ನು ಖರ್ಚು ಮಾಡಲು ಪ್ರಯತ್ನಿಸುತ್ತಿದ್ದೆ. ಕಲ್ಪನಾ ಮಾತ್ರ ಜಾಣೆ. ಅವಳ ಅಮ್ಮ ಎರಡನೆ ಬಾರಿ ಏನಾದರೂ ಬಡಿಸಲು ಬಂದರೆ, ತಟ್ಟೆಯನ್ನು ಕೈಯಲ್ಲಿ ಹಿಡಿದು ನಿಂತು, ಗಬಗಬನೆ ಉಂಡು ಕೈ ತೊಳೆಯಲು ಓಡುತ್ತಿದ್ದಳು. ಆದ್ದರಿಂದ ಅವಳಿಂದ ನನಗೆ ಏನೂ ಸಹಾಯವಾಗುವ ಭರವಸೆಯಿರುತ್ತಿರಲಿಲ್ಲ. ಈಗ ನೀವು ಬಂದಿದ್ದೀರಿ. ವರ್ಷದಲ್ಲಿ ಕೆಲವು ದಿನ ನನ್ನ ಕರ್ತವ್ಯವನ್ನು ನಿಮ್ಮ ಜೊತೆ ಹಂಚಿಕೊಳ್ಳಬಹುದೋ ಎಂಬ ಆಸೆ ನನಗೆ,” ಎಂದು ನಗುತ್ತಾ ಹೇಳಿದರು.

“ಏನು ನೀವು ನನಗೆ ಐಬು, ಗೀಬು ಅಂತೆಲ್ಲ ಹೇಳುವುದು? ನಿಮಗೆ ಬೇಯಿಸಿ ಹಾಕುವುದೇ ಐಬು ಅಂತಾದರೆ, ಮಗಳು ಅಳಿಯ ಹೋದ ಮೇಲೆ ನಿಮಗೆ ಮೂರು ಹೊತ್ತು ಬೆಳ್ತಕ್ಕಿ ಗಂಜಿ ಬೇಯಿಸಿ ಹಾಕುತ್ತೇನೆ ನೋಡಿ,” ಎಂದರು ಸುನೀತಾ ಹುಸಿಮುನಿಸಿನಿಂದ.

ಬಾಗಿಲ್ತಾಯರು ಮಾತಿನ ವಿಷಯ ಬದಲಿಸಿ ಶಶಾಂಕನತ್ತ ನೋಡಿ” ಶಶಾಂಕ, ನಿಮಗೆ ನಮ್ಮೂರನ್ನು ತೋರಿಸುತ್ತೇನೆ. ಊರು ಎಂದರೆ ಬಹಳ ದೊಡ್ಡದೇನಲ್ಲ. ರಸ್ತೆಯಲ್ಲಿ ಒಂದು ಎರಡು ಫರ್ಲಾಂಗು ನಡೆದರೆ ಊರು ಖತಂ. ಕಾಫಿ ಕುಡಿದು ಒಂದು ರೌಂಡ್ ಹೋಗಿ ಬರುವ,” ಎಂದರು. ತಾಯಿಯ ಜೊತೆಯಲ್ಲಿ ಕಲ್ಪನಾ ನಿಲ್ಲುತ್ತೇನೆ ಎಂದು ಹೇಳಿದುದರಿಂದ ಮಾವ ಅಳಿಯ ಹೊರಟರು ಊರ ಸಂಚಾರಕ್ಕೆ.

ಸೂರೂರು ಅಂತ ದೊಡ್ಡ ಊರೇನಲ್ಲ. ಅಲ್ಲಿ ಇರುವುದು ನಾಲ್ಕಾರು ಬ್ರಾಹ್ಮಣರ ಮನೆಗಳು, ಎಲ್ಲರೂ ಬಾಗಿಲ್ತಾಯರೇ. ಯಾವುದೋ ಕಾಲದಲ್ಲಿ ಪೂಜೆಗೆಂದು ಪರ ಊರಿನಿಂದ ಬಂದಿದ್ದ ಓರ್ವ ಬ್ರಾಹ್ಮಣನ ವಂಶ ಅಲ್ಲಿ ರೆಂಬೆಕೊಂಬೆ ಚಾಚಿತ್ತು. ಹೆಸರುಗಳಿದ್ದರೂ ಅವರನ್ನು ದೊಡ್ಮನೆ ಬಾಗಿಲ್ತಾಯರೆಂದೋ, ಸಣ್ಣ ಬಾಗಿಲ್ತಾಯರೆಂದೋ, ಪೂಜೆಯ ಬಾಗಿಲ್ತಾಯರೆಂದೋ ಕರೆಯುವುದು ರೂಢಿ. ಊರಿನ ಓರ್ವನೇ ವರ್ತಕ ಸುರೇಂದ್ರ ಪೈ. ಅವನ ಮನೆ ಊರ ಮಧ್ಯಭಾಗದಲ್ಲಿತ್ತು. ಎರಡು ಶೆಟ್ಟರ ಮನೆ. ಹಾಗೆ ಇಪ್ಪತ್ತು ಮೂವತ್ತು ಬಿಲ್ಲವರ ಮನೆ ಊರಲ್ಲಿತ್ತು. ಊರಿನ ಸಮಸ್ತ ವ್ಯಾಪಾರ, ವ್ಯವಹಾರ ನಡೆಯವುದು ಸುರೇಂದ್ರ ಪೈಗಳ ಮೂಲಕವೆ. ಊರಿನವರ ಅಡಿಕೆ, ವೀಳ್ಯದೆಲೆ, ಕಾಳುಮೆಣಸುಗಳನ್ನು ಪುತ್ತೂರಿಗೆ ಸಾಗಿಸುವುದರಿಂದ ಹಿಡಿದು, ಮನೆವಾರ್ತೆಗೆ ಬೇಕಾದ ಉಪ್ಪು, ಜೀರಿಗೆ ಸರಬರಾಜು ಮಾಡುವ ಏಕಗವಾಕ್ಷಿ ವ್ಯವಸ್ಥೆ ಸುರೇಂದ್ರ ಪೈಗಳದ್ದು. ಊರಿನ ಹೆಚ್ಚಿನ ತೋಟಗಳು ಬಾಗಿಲ್ತಾಯರ ಕೈಯಲ್ಲಿದ್ದರೆ, ಅವುಗಳನ್ನು ವ್ಯವಸ್ಥಿತವಾಗಿ ನೋಡಿಕೊಳ್ಳಲು ಸಹಕರಿಸುವವರು ಬಿಲ್ಲವರು ಹಾಗೂ ಕಾಡಿನಂಚಿನಲ್ಲಿರುವ ಮಲೆಕುಡಿಯರು. ಹೀಗಾಗಿ ಮಕ್ಕಳು ಶಾಲೆಯಲ್ಲಿ ಸಮಾಜಶಾಸ್ತ್ರದಲ್ಲಿ ಓದುತ್ತಾರಲ್ಲ, ವೇದಕಾಲದ ಸಮಾಜದಲ್ಲಿರುವ ಬೇರೆ ಬೇರೆ ವರ್ಗಗಳು ಹಾಗೂ ಅವರ ಕರ್ತವ್ಯಗಳು, ಅವು ನಮ್ಮೂರಿಗೆ ಸಾಧಾರಣವಾಗಿ ಒಪ್ಪುತ್ತವೆ ಎಂದು ಬಾಗಿಲ್ತಾಯರು ಉದ್ದಕ್ಕೂ ಮಾತನಾಡುತ್ತಾ ಬಂದರು. ಹಾಗೆಯೇ ಮಾತನಾಡುತ್ತ ಅವರು ಊರಿನ ಈಶ್ವರ ದೇವಸ್ಥಾನಕ್ಕೆ ಬಂದರು. ದೇವಸ್ಥಾನವು ರಸ್ತೆಯ ಪಕ್ಕದಲ್ಲಿಯೇ ಇದ್ದುದರಿಂದ ಇಬ್ಬರು ಒಬ್ಬರೊಬ್ಬರ ಒಪ್ಪಿಗೆಗಾಗಿ ಕಾಯದೆ ಒಳಗೆ ನಡೆದರು. ವಿಶಾಲವಾದ ಪ್ರಾಂಗಣ. ಗರ್ಭಗುಡಿಯ ಒಳಗೆ ಎಳ್ಳೆಣ್ಣೆಯ ದೀಪಗಳು ಮಾತ್ರ ಇದ್ದುದರಿಂದ ಶಿವಲಿಂಗ ದೂರದಲ್ಲಿ ಎಲ್ಲಿಯೋ ಇದ್ದಂತೆ ಭಾಸವಾಗುತ್ತಿತ್ತು. ಲಿಂಗದ ಎದುರಿನ ಬೃಹತ್ ಬಸವ. ಅಲ್ಲಿಯೇ ಪಕ್ಕದಲ್ಲಿ ಕೌಳಿಗೆ, ಹರಿವಾಣ ತಟ್ಟೆ ಇಟ್ಟುಕೊಂಡು ಕೂತಿರುವ ಓರ್ವ ಬ್ರಾಹ್ಮಣ, ಬಾಗಿಲ್ತಾಯರನ್ನು ನೋಡಿ ನಕ್ಕು “ಅಣ್ಣಯ್ಯ, ಅಳಿಯನನ್ನು ಮಾತ್ರ ಕರೆದುಕೊಂಡು ಬಂದಿರುವ ಹಾಗಿದೆಯಲ್ಲ. ಕಲ್ಪನಾ ಎಲ್ಲಿ?” ಎಂದು ಕೇಳಿದರು.

“ಊರನ್ನು ತೋರಿಸುವ ಅಂತ ಮನೆಯಿಂದ ಹೊರಬಂದದ್ದು. ದೇವಸ್ಥಾನಕ್ಕೆಂದೇ ಬಂದದಲ್ಲ. ಕಲ್ಪನಾ, ಹೇಗೂ ನಾಡಿದ್ದು ಸೋಮವಾರ ರಂಗಪೂಜೆಗೆ ಬರಬೇಕಲ್ಲ,” ಎಂದರು. ಪ್ರಸಾದ ತೆಗೆದುಕೊಂಡು ಹೊರಜಗಲಿಯಲ್ಲಿ ಕುಳಿತು, “ನನ್ನ ದೊಡ್ಡಪ್ಪನ ಮಗ. ಈತನ ಅಪ್ಪನ ಹೆಸರು ಶಂಕರ ಬಾಗಿಲ್ತಾಯರು. ಈತ ಕೃಷ್ಣ. ಇವರನ್ನೇ ಪೂಜೆಯ ಬಾಗಿಲ್ತಾಯರು ಎನ್ನುವುದು. ಇವನ ಅಪ್ಪ, ಅಂದರೆ ನನ್ನ ದೊಡ್ಡಪ್ಪನೆ ಈ ದೇವಸ್ಥಾನ ಇಷ್ಟು ದೊಡ್ಡದಾಗಲು ಕಾರಣ. ಅಲ್ಲಿ ನೋಡಿ, ಅದು ನವಗ್ರಹ ಗುಡಿ. ಆ ಮೂಲೆಯಲ್ಲಿರುವುದು ದುರ್ಗೆಯ ಗುಡಿ. ಸುತ್ತಲೂ ಇರುವುದು ದೈವಗುಡಿಗಳು,” ಎಂದರು. ಶಶಾಂಕ ದೇವಸ್ಥಾನದ ಆವರಣದ ಒಳಗೆ ಸುತ್ತ ನೋಡಿದ. ಎಲ್ಲಾ ದಿಕ್ಕುಗಳಲ್ಲಿ ಕೆಂಪುಕಲ್ಲಿನಿಂದ ಮಾಡಿದ ಚಿಕ್ಕ ಚಿಕ್ಕ ಗೂಡುಗಳು. ಅದರ ಒಳಗೆ ಆಯತಾಕಾರದ ಒಂದೋ ಎರಡು ಕಲ್ಲುಗಳು. ಹೊರಗೊಂದು ಆ ಗುಡಿಗೊಪ್ಪುವ ಕಬ್ಬಿಣದ ಗೇಟುಗಳು. ಆಕಾರದಲ್ಲಾಗಲೀ, ಅಲಂಕಾರದಲ್ಲಾಗಲೀ ಯಾರನ್ನೂ ಆಕರ್ಷಿಸದ ವಸ್ತುಗಳಂತೆ ತೋರಿತು ಶಶಾಂಕನಿಗೆ. ದೇವಸ್ಥಾನದ ನೈಋತ್ಯ ದಿಕ್ಕಿನಲ್ಲಿ ಮಾತ್ರ ಒಂದು ಗೂಡು. ಯಾವುದೇ ಉಪಯೋಗ ಆಗದಂತಹ ರಚನೆಯ ಸುತ್ತ ಕಲ್ಲುಕಸ. ಉಳಿದ ಗೂಡುಗಳಿಗೆ ಇದ್ದಂತಹ ಕಬ್ಬಿಣದ ಗೇಟು ಸಹ ಇದಕ್ಕೆ ಇದ್ದಿರಲಿಲ್ಲ. ಪಕ್ಕದ ಗೋಳಿಮರದ ಬೇರುಗಳು ಗೋಡೆಯ ಎಡೆಯಿಂದ ಹೊರಬಂದಿದ್ದವು. ಅದರ ಬೀಜಗಳು ಬಿದ್ದು ಗಿಡಗಳು ಮೇಲೆ ಬಂದು ಆಳೆತ್ತರಕ್ಕೆ ಬೆಳೆದಿದ್ದವು. ಇಷ್ಟರವರೆಗೆ ಜಾಸ್ತಿ ಮಾತನಾಡದ ಶಶಾಂಕ “ಮಾವ, ಆ ಕಟ್ಟೋಣ ಯಾಕೆ ಹಾಗಿದೆ?” ಮದುವೆಯಾದ ಮೇಲೆ ಮೊದಲ ಸಲ ಬಾಗಿಲ್ತಾಯರನ್ನು ಮಾವ ಎಂದು ಸಲುಗೆಯಿಂದ ಕೇಳಿದ್ದ. “ಓ ಅದಾ, ಅದೊಂದು ದೊಡ್ಡ ಕತೆ. ನನ್ನ ತಂದೆ ಒಮ್ಮೆ ಅದರ ಬಗ್ಗೆ ಹೇಳಿದ್ದರು. ಈಗ ಗಂಟೆ ಹತ್ತು ಅಲ್ವಾ. ಬೆಳಗಿನ ತಿಂಡಿಯೇ ಹೊಟ್ಟೆಯಲ್ಲಿ ಉದ್ದುದ್ದ, ಅಡ್ಡಡ್ಡ ಕುಳಿತಿದೆ. ಹೇಗೂ ನಿಮ್ಮ ಅತ್ತೆ ಊಟಕ್ಕೆ ಬೇಕಾದಷ್ಟು ಸಿದ್ಧತೆ ಮಾಡುವವಳೆ. ಆದ್ದರಿಂದ ಒಂದು ಗಂಟೆಯವರೆಗೆ ಸಮಯವಿದೆ,” ಎಂದು ಹೇಳಿ ಪ್ರಾರಂಭಿಸಿದರು.

* * *

ಸುಮಾರು ಎಪ್ಪತ್ತು ವರ್ಷಗಳ ಹಿಂದಿನ ಮಾತು. ಸೂರೂರು ಈಗ ಇದ್ದ ಹಾಗೆಯೇ ಇತ್ತು, ಮನೆಗಳ ಸಂಖ್ಯೆಯಲ್ಲಿ. ಆದರೆ ಜನಸಂಖ್ಯೆಯ ದೃಷ್ಟಿಯಲ್ಲಿ ಅಲ್ಲ. ಅಷ್ಟೆ ಅಲ್ಲ, ಸೋಮವಾರ, ಅದರಲ್ಲೂ ಕಾರ್ತಿಕ ಸೋಮವಾರ, ಶಿವರಾತ್ರಿಯ ದಿನ, ಹೋಳಿ ಹುಣ್ಣಿಮೆಯ ದಿನಗಳಲ್ಲಿ ನಾಲ್ಕು ಬಾಗಿಲ್ತಾಯರ ಮನೆಗಳು ಪುತ್ತೂರು, ಪಂಜ, ಸುಳ್ಯ ಸೀಮೆಗಳ ಕೋಟ, ಮಾಧ್ವ, ಹವ್ಯಕ ಬ್ರಾಹ್ಮಣರಿಂದ ತುಂಬಿ ತುಳುಕುತ್ತಿದ್ದವು. ಮನೆಗಳು ಧರ್‍ಮಛತ್ರಗಳಂತೆ ಕಾಣುತ್ತಿದ್ದವು. ಅಡುಗೆ ಮನೆಯ ಒಲೆಗಳು ಹತ್ತು ಹದಿನೈದು ದಿನ ಸತತವಾಗಿ ಕಾವನ್ನು ಹೊರಚೆಲ್ಲುತ್ತಿದ್ದವು. ಅದಕ್ಕೆ ಕಾರಣ ಊರಿನ ಈಶ್ವರ ದೇವಸ್ಥಾನ. ಅದರ ಪೂಜೆಯ ಹೊಣೆ ಶಂಕರ ಬಾಗಿಲ್ತಾಯರದ್ದು. ಅವರ ಕೈಗುಣವೋ, ಅಥವಾ ಸಾಕ್ಷಾತ್ ಶಂಕರನ ಕೃಪೆಯೋ, ಒಟ್ಟಿನಲ್ಲಿ ಜನರು ಅಂದುಕೊಂಡದ್ದು ನಡೆಯತೊಡಗಿದಾಗ ದೇವಸ್ಥಾನಕ್ಕೆ ಬಂದು ಹೋಗುವವರ ಸಂಖ್ಯೆ ಜಾಸ್ತಿಯಾಯಿತು, ಉತ್ಪತ್ತಿಯೂ ಜಾಸ್ತಿಯಾಗತೊಡಗಿತು. ಒಣಹುಲ್ಲಿನ ಮೇಲ್ಛಾವಣಿ ಇದ್ದಂತಹ ಗರ್ಭಗುಡಿ ಶಿಲಾಮಯವಾಯಿತು. ದೇವರಪೂಜೆಗೆ ಒಂದು ಬಾವಿ ಇಲ್ಲದ ದೇವಸ್ಥಾನಕ್ಕೆ, ಶಂಕರ ಬಾಗಿಲ್ತಾಯರ ಆಸ್ಥೆಯಿಂದ ಹಾಗೂ ಊರವರ ಶ್ರಮದಾನದಿಂದ ಸಿಹಿನೀರಿನ ಬಾವಿ ದೊರಕುವಂತೆ ಆಯಿತು. ರಂಗಪೂಜೆ, ಸೋಣೆ ಆರತಿಗಳು ಮುಂಗಡವಾಗಿ ಕಾದಿರಿಸುವಷ್ಟು ದೇವಸ್ಥಾನದ ಪ್ರತಿಷ್ಠೆ ಊರ್ಧ್ವಮುಖವಾಯಿತು. ಹಾಗೆಯೇ ಶಂಕರ ಬಾಗಿಲ್ತಾಯರ ದೆಸೆಕೂಡ. ಸಾಧಾರಣ ರುದ್ರಾಕ್ಷಿ ಸರ ಹಾಕಿಕೊಳ್ಳುತ್ತಿದ್ದ ಬಾಗಿಲ್ತಾಯರು ಈಗ ಬೆಳ್ಳಿಯಿಂದ ಕಟ್ಟಿಸಿದ ನಾಲ್ಕು ನಾಲ್ಕು ರುದ್ರಾಕ್ಷಿ ಸರ, ಸ್ಫಟಿಕದ ಸರ, ಕೈಗೆ ಪವಿತ್ರದ ಉಂಗುರ ಹಾಕಿಕೊಳ್ಳುವಂತಾಯಿತು. ಹೆಂಡತಿಗೂ ಚಕ್ರಸರ, ಅವಲಕ್ಕಿ ಸರ, ಓಲೆಗಳನ್ನು ಮಾಡಿಸಿದರು. ಎಲ್ಲಾದರು ದಂಪತಿ ಪೂಜೆ ಇದ್ದರೆ ಶಂಕರ ಬಾಗಿಲ್ತಾಯ ದಂಪತಿಗಳಿಗೆ ಮೊದಲ ಮನ್ನಣೆ. ಅವರಿಲ್ಲವೆಂದರೆ ಉಳಿದವರು. ಹೀಗೆ ಶಂಕರ ಬಾಗಿಲ್ತಾಯರು ಸೂರೂರು ಹಾಗೂ ಸುತ್ತಮುತ್ತಲಿನ ಊರುಗಳಲ್ಲಿ ಒಂದು “ಜನ” ಎನಿಸಿಕೊಂಡರು.

ಸೂರೂರು ಹಾಗೂ ಸುತ್ತಲಿನ ಪರಿಸರ ಈಶ್ವರನ ಲೀಲಾಕ್ಷೇತ್ರ ಮಾತ್ರ ಆಗಿರದೆ, ಅನೇಕ ದೈವಗಳ ಆಡುಂಬೊಲವೂ ಆಗಿತ್ತು. ಊರಿನ ಅಂಚಿನ ಕಾನನದಲ್ಲಿ ಸತ್ಯದೇವತೆ, ಜುಮಾದಿ, ಬೊಬ್ಬರ್ಯ ಮುಂತಾದ ದೈವಗಳು ತಾವು ನಂಬಿದ ಜನರಿಗೆ ಇಂಬುಕೊಡುತ್ತಾ, ನೇಮೋತ್ಸವ, ಹರಕೆಗಳನ್ನು ಮನಸೋ ಇಚ್ಛೆ ಸ್ವೀಕರಿಸಿ, ಆನಂದದಿಂದ ಇದ್ದವು. ಇವುಗಳ ಪ್ರಸಿದ್ಧಿ ಬರಿಯ ಸೂರೂರಿನಲ್ಲಿ ಅಷ್ಟೆ ಅಲ್ಲದೆ ಸುತ್ತಮುತ್ತಲಿನ ಊರುಗಳಲ್ಲೂ ಕೂಡ ಹರಡಿತ್ತು. ಎಷ್ಟೋ ಬಾರಿ ಬ್ರಾಹ್ಮಣ ಸಮುದಾಯದವರು ಈ ದೈವಗಳಿಗೆ ಹರಕೆ ಹೇಳಿಕೊಂಡದ್ದು ಇತ್ತಲ್ಲದೆ, ಹರಕೆ ಪೂರ್ತಿಗೊಳಿಸಲು ತಮ್ಮ ಗದ್ದೆಗಳಲ್ಲಿ ಕೆಲಸ ಮಾಡುತ್ತಿದ್ದ ಒಕ್ಕಲು ಮಕ್ಕಳಲ್ಲಿ ದೈವಗಳಿಗೆ ತಮ್ಮ ಪರವಾಗಿ ಕೋಳಿಗಳನ್ನು ಅರ್ಪಿಸಲು ಹೇಳಿದ್ದುಂಟು. ಈ ರೀತಿಯಲ್ಲಿ ಶಿಷ್ಟ ಹಾಗೂ ಜಾನಪದೀಯ ದೇವರುಗಳೆಲ್ಲ ಅಲ್ಲಿ ನೆಲೆಸಿದ್ದರಿಂದ ಸೂರೂರು, ಸುರರ ಊರು ಎಂದೂ ಅಂದುಕೊಳ್ಳಬಹುದಿತ್ತು.

ಈ ಎಲ್ಲ ದೈವಗಳು ಕರಾವಳಿಯ ಬೇರೆ ಬೇರೆ ಕಡೆಗಳಲ್ಲಿಯೂ ನೆಲೆಸಿದ್ದರೂ, ಸೂರೂರಿನಲ್ಲಿ ಮಾತ್ರ ನೆಲೆಸಿದ್ದ ಒಂದು ದೈವ ಕರಿಗಾರು. ಕರಿಗಾರು ಓರ್ವ ಮಲೆಕುಡಿಯರ ಧೀರ ಯುವಕ. ಯಾವುದೇ ದುರಭ್ಯಾಸವಿಲ್ಲದ ಈತ ಮಾತನಾಡುತ್ತಿದ್ದುದು ಬಲು ಕಡಿಮೆ. ಮದುವೆ ಆಗದ ಈತ ತಾನಿದ್ದ ಕೇರಿಯ ರಕ್ಷಕ. ಕೆಲವು ಬಾರಿ ರಾತ್ರಿ ತಟ್ಟನೆ ಎದ್ದು ಇಂಥವರ ಮನೆಯ ಕೊಟ್ಟಿಗೆಗೆ ಚಿಟ್ಟೆಹುಲಿ ಬರುತ್ತದೆ ಎಂದು ಮೊದಲೇ ಗೊತ್ತಿದ್ದವನಂತೆ ಹೋಗಿ, ಅಲ್ಲಿ ಹಸುಗಳು ಕೂಗಿ ಮನೆಯವರು ಬರುವ ಮುಂಚಿತವಾಗಿ, ಹುಲಿಯ ಕುತ್ತಿಗೆಯನ್ನು ತನ್ನ ಬಲಿಷ್ಠ ತೋಳುಗಳಿಂದ ಒತ್ತಿ ಹಿಡಿದು, ಉಸಿರುಗಟ್ಟಿಸಿ ಸಾಯಿಸಿ, ಏನೂ ಆಗಿಲ್ಲವೆಂಬಂತೆ ತನ್ನ ಮನೆಗೆ ಬಂದು ಮಲಗುತ್ತಿದ್ದ. ಆತನ ಹಿಂದೆ ಮುಂದೆ ಯಾರೂ ಇಲ್ಲದೆ ಇದ್ದುದರಿಂದ ಕೇರಿಯವರು ಕೊಡುತ್ತಿದ್ದ ಆಹಾರವೇ ಆತನ ನಿತ್ಯಾನ್ನವಾಗಿತ್ತು. ಮರ ಹತ್ತಿ ಮಾವು, ಹಲಸು, ಪುನರ್ಪುಳಿ ತೆಗೆಯುವುದರಲ್ಲಿ, ಜೇನ್ನೊಣ ಓಡಿಸಿ, ಜೇನುತಟ್ಟಿ ಹಿಂಡುವಲ್ಲಿ, ಬಿದಿರು ಚಾಪೆ, ಬುಟ್ಟಿ ಮಾಡುವಲ್ಲಿ ಆತನನ್ನು ಮೀರಿಸುವವರಿಲ್ಲ. ಅಂತಹ ವ್ಯಕ್ತಿ ಕೇರಿಯವರ ಕಷ್ಟ ಕಾಲದಲ್ಲಿ ಸಂಪೂರ್ಣ ಭಾಗಿಯಾಗಿರುತ್ತಿದ್ದ. ಸುಖ, ಸಂತೋಷಗಳ ಸಮಯದಲ್ಲಿ ಯಾವುದೋ ಮಾಯೆಯಲ್ಲಿ ಕಣ್ಮರೆಯಾಗುತ್ತಿದ್ದ. ಈ ಕರಿಗಾರು, ಒಂದು ವೈಶಾಖ ಹುಣ್ಣಿಮೆ ಮುಸ್ಸಂಜೆ ಕಾಡಿನಲ್ಲಿ ಜೇನು ತೆಗೆಯಲು ಹೋದವ ಹಿಂತಿರುಗಲಿಲ್ಲ. ಕೇರಿಯವರು ಒಂದೆರಡು ದಿನ ಕಾದ ಮೇಲೆ ಆತನನ್ನು ಹುಡುಕಲು ತೊಡಗಿದರು. ಆತ ಹತ್ತಿದ ಮರದ ಬುಡದಲ್ಲಿದ್ದ ಕೆರೆಯಲ್ಲಿ ಶವ ಮೇಲೆ ಬರುವುದೋ ಎಂದು ಕಾದರು. ಹುಲಿ ಹಿಡಿದಿರಬಹುದೆ ಎಂದು, ಸಾಮಾನ್ಯವಾಗಿ ಹುಲಿ ನಡೆಯುವ ಜಾಡನ್ನು ಪರೀಕ್ಷಿಸಿದರು. ಆದರೂ ಶವ ಪತ್ತೆಯಾಗಲಿಲ್ಲ. ಆತನ ನೆಂಟರಿಷ್ಟರು ಯಾರೂ ಇಲ್ಲದೆ ಇದ್ದುದರಿಂದ ಆತನಿಗಾಗಿ ಅಳುವವರು ಯಾರೂ ಇರಲಿಲ್ಲ. ಯಾರದ್ದಾದರೂ ದನ, ಕರುವನ್ನು ಹುಲಿಯೋ ಚಿರತೆಯೋ ಎಳೆದುಕೊಂಡು ಹೋದರೆ, ಛೇ, ಕರಿಗಾರು ಈಗ ಇದ್ದಿದ್ದರೆ ಎಂದು ಆತನನ್ನು ಜನರು ನೆನಪು ಮಾಡಿಕೊಳ್ಳುತ್ತಿದ್ದರು.

* * *

ಮರು ವರ್ಷದ ವೈಶಾಖದ ಒಂದು ರಾತ್ರಿ ಗುರಿಕಾರ ತನಿಯ ಮಲೆಕುಡಿಯನ ಮಗ ಸೋಮ ಮಲೆಕುಡಿಯ ಹಠಾತ್ತಾಗಿ ನಿದ್ದೆಯಿಂದ ಎದ್ದು, ಇಡೀ ಕಾಡೇ ಪ್ರತಿಧ್ವನಿಸುವಂತೆ ಕೂಗತೊಡಗಿದನು. “ನೀವು ನನ್ನನ್ನು ಮರೆತಿರಬಹುದು. ಆದರೆ ನಾನಲ್ಲ. ನೀವು ನನ್ನ ಮಕ್ಕಳು. ನಿಮ್ಮ ಹಿತ ನನಗೆ ಮುಖ್ಯ. ನಿಮ್ಮ ನಿಮ್ಮ ಜಾನುವಾರಗಳ ರಕ್ಷಣೆ ನನ್ನದು. ಆದ್ದರಿಂದ ನಾನಿದ್ದೇನೆ. ಎಲ್ಲಿಯವರೆಗೆ ನನ್ನ ಅಗತ್ಯ ನಿಮಗಿರುವುದೋ ಅಲ್ಲಿಯವರೆಗೆ ನಾನಿರುವೆ,” ಎಂದು ಗಂಭೀರ ಧ್ವನಿಯಲ್ಲಿ ಗಟ್ಟಿಯಾಗಿ ಹೇಳತೊಡಗಿದ. ಗುರಿಕಾರ ತನಿಯ ನಿದ್ದೆಯಿಂದ ದಡಬಡನೆ ಎದ್ದು ಬಂದು ಮಗನ ಬಾಯಿಯಲ್ಲಿ ಬಂದ ಮಾತಗಳನ್ನು ಕೇಳಿ ಅವಾಕ್ಕಾದ. ಮರುಕ್ಷಣದಲ್ಲಿ ಚೇತರಿಸಿಕೊಂಡು, ಯಾವ ದೈವ ತನ್ನ ಮಗನನ್ನು ಮೆಟ್ಟಿಕೊಂಡಿತು ಎಂದು ಆಲೋಚಿಸಿ ಕೇಳಿದ.

“ದೈವವೆ, ನೀನು ನಮ್ಮನ್ನು ರಕ್ಷಿಸುವ ಹೌದಿರಬಹುದು. ಆದರೆ ಇದು ನುಡಿಕೊಡುವ ಹೊತ್ತೇ? ನಿನಗಾಗಿ ನಾನು ಹದಿನೈದು ದಿನಗಳಲ್ಲಿ ಕೋಲದ ವ್ಯವಸ್ಥೆ ಮಾಡುತ್ತೇನೆ. ಕೇರಿಯ ಜನರಿಗೂ ನೀನು ಅಭಯ ನೀಡಬೇಕು. ಆದರೆ ನೀನು ಯಾರೆಂದು ಇನ್ನೂ ತಿಳಿದಿಲ್ಲವಲ್ಲ,” ಎಂದನು.

“ಕಳೆದ ವರ್ಷ ಇದೇ ದಿನ, ನಿಮ್ಮನ್ನೆಲ್ಲ ಕಾಯುತ್ತಿದ್ದವ ಮಾಯವಾದದ್ದು ನೆನಪಿದೆಯೆ, ಗುರಿಕಾರ?” ಮಗನ ಬಾಯಿಂದ ತನ್ನನ್ನು ಏಕವಚನದಿಂದ ಸಂಭೋದಿಸಿದ್ದನ್ನು ಕೇಳಿ ಆಶ್ಚರ್ಯವಾಯಿತು. ಮರುಕ್ಷಣ ಇದನ್ನು ಆಡಿದ್ದು ಆತನಲ್ಲ, ಆತನಲ್ಲಿರುವ ದೈವ ಎಂದು ಮನಸ್ಸಿಗೆ ಬಂದ ಮೇಲೆ ಸ್ವಲ್ಪ ಸಮಾಧಾನವಾಯಿತು. ಭಯಭಕ್ತಿಯಿಂದಲೇ ಕೈಮುಗಿದು ಹೇಳಿದ.

“ಹೌದು, ಕರಿಗಾರು! ನೀನು ವಾಪಾಸು ಬಂದೆಯಾ, ನಮ್ಮನ್ನು ಕಾಪಿಡಲು ದೈವವಾಗಿ ಬಂದೆಯಾ?” ಎಂದು ಸಂತೋಷಗೊಂಡನು. ಮುಂದಿನ ಹದಿನೈದು ದಿನಗಳಲ್ಲಿ ಕರಿಗಾರು ಮಾಯವಾದ ಮರದ ಬುಡದಲ್ಲಿ ಒಂದು ಚಿಕ್ಕಕಲ್ಲಿನ ಕಟ್ಟೋಣ ರಚನೆಯಾಯಿತು. ಕರಿಗಾರುವಿನ ಪ್ರತೀಕವಾಗಿ ಒಂದು ಒರಟು ಕಲ್ಲು ಅಲ್ಲಿ ಪ್ರತಿಷ್ಠಾಪನೆಯಾಯಿತು. ಕೋಲವಾಯಿತು. ಮಲೆಕುಡಿಯರನ್ನು ಕಾಪಾಡಲು ಕರಿಗಾರು ಮತ್ತೆ ಬಂದ ಹಾಗೂ ಸೂರೂರಿಗೆ ಈಗಲೇ ಇರುವ ಏಳು ದೈವಗಳ ಪಟ್ಟಿಗೆ ಇನ್ನೊಂದರ ಪ್ರವೇಶವಾಯಿತು.

* * *

ಹೀಗೆ ಕರಿಗಾರು, ಸೋಮ ಮಲೆಕುಡಿಯನ ಮೇಲೆ ಅವಾಹನೆ ಆದ ಮೇಲೆ, ಅವನಲ್ಲಿ ಬಹಳಷ್ಟು ಬದಲಾವಣೆ ಕಂಡುಬಂದವು. ಶೇಂದಿ, ಹೊಗೆಸೊಪ್ಪುಗಳನ್ನು ಬಿಟ್ಟ. ಪೀಚಲು ದೇಹದವನಾದ ಆತ, ಕರಿಗಾರುವಿನಂತೆಯೆ ಚಕಚಕನೆ ಮರ ಏರತೊಡಗಿದ. ಆದ್ದರಿಂದ ಅಡಿಕೆ ಮರಗಳನ್ನು ಹತ್ತುವ ಕೆಲಸ ಸೋಮನಿಗೆ ದೊರೆಯಿತು. ಕರಿಗಾರು ಅವಿವಾಹಿತನಾಗಿದ್ದುದರಿಂದ ಇವನಿಗೂ ಮದುವೆ ಇಲ್ಲದೇ ಹೋಯಿತು. ದೊಡ್ಮನೆ ಬಾಗಿಲ್ತಾಯರ ಹಾಗೂ ಸೋಮನ ಪ್ರಾಯ ಒಂದೇ ಆಗಿದ್ದುದರಿಂದ ಅವರ ನಡುವೆ ಸಲುಗೆ ಇತ್ತು. ಸಾಮಾನ್ಯ ದಿನಗಳಲ್ಲಿ ಎಲ್ಲರಂತೆಯೇ ಇದ್ದ ವ್ಯಕ್ತಿ, ಕೋಲದ ದಿನ ಎಲ್ಲಿಂದಲೋ ಶಕ್ತಿ ಆವಾಹನೆ ಆದಂತಾಗಿ, ಕುಣಿತದ ಅಬ್ಬರ, ಕೇಕೆ ಅದರೊಂದಿಗೆ ಗಂಭೀರವಾಗಿ ನುಡಿ ಕೊಡುವುದು ಎಲ್ಲವೂ ಯಾರದೋ ನಿಯಂತ್ರಣಕ್ಕೆ ಒಳಪಟ್ಟು ಮಾಡಿದಂತೆ ಇರುತ್ತಿತ್ತು. ದಿನ ಕಳೆದು ಮುಪ್ಪಡರಿದರೂ, ವೇಗವಾಗಿ ನಡೆಯಲು ಆಗದಿದ್ದರೂ ಕೈಕಾಲುಗಳು ನಡುಗುತ್ತಿದ್ದರೂ ಮುಂಚಿನ ಹಾಗೆ ಕೋಲದ ದಿನ ನರ್ತಿಸುತ್ತಿದ್ದ. ಅದೇ ಗಾಂಭೀರ್‍ಯ, ಅದೇ ವೇಗ, ಅದೇ ಗಂಭೀರ ಸ್ಪಷ್ಟನುಡಿ.

* * *

ಪೂಜೆಯ ಶಂಕರ ಬಾಗಿಲ್ತಾಯರು ಸಾಮಾನ್ಯವಾಗಿ ಬೆಳಿಗ್ಗೆ ನಾಲ್ಕು ಗಂಟೆಯ ಸಮಯಕ್ಕೆ ಎದ್ದು, ಸ್ನಾನ ಶೌಚಾದಿ ಕಾರ್‍ಯಗಳನ್ನು ಮುಗಿಸಿ, ಮನೆದೇವರ ಪೂಜೆ ಮುಗಿಸಿ, ಈಶ್ವರ ದೇವಸ್ಥಾನಕ್ಕೆ ಬಂದು, ದೇವಸ್ಥಾನದ ಅಂಗಳದಲ್ಲೇ ಇದ್ದ, ಬಾವಿಯಿಂದ ನೀರು ಸೇದಿ, ಕೊಯ್ದಿಟ್ಟ ಹೂವುಗಳಿಂದ ಪೂಜೆ ಮಾಡುವುದು ರೂಢಿ. ಆದರೆ ಅವತ್ತು ಮಾತ್ರ ಹೂವು ಕೊಯ್ದು ತರುವ ಹೆಂಗಸು, ಜಾಗಟೆ, ನಗಾರಿ ಬಡಿಯುವ ದೇವಡಿಗರು ಬಂದಿದ್ದರೂ ಬಾಗಿಲ್ತಾಯರು ಬಂದಿರಲಿಲ್ಲ. ಸಾಮಾನ್ಯವಾಗಿ ಐದು ಗಂಟೆಗೆ ಏಳುವ ಅವರ ಧರ್‍ಮಪತ್ನಿ ಎದ್ದಾಗ, ಪಕ್ಕದಲ್ಲಿ ಇನ್ನೂ ಮಲಗಿದ್ದ ಪತಿಯನ್ನು ನೋಡಿ, ಮಲಗಿದ್ದಲ್ಲಿ ಏನಾದರೂ ಅನಾಹುತ ಆಯಿತೋ ಎಂದು ಗಾಬರಿಗೊಂಡು “ಇವರೆ, ಏಳಿ. ಬೆಳಗಾಯಿತು,” ಎಂದು ಎರಡೆರಡು ಬಾರಿ ಅವರ ಭಾರೀ ಗಾತ್ರದ ರಟ್ಟೆಯನ್ನು ಬಲವಾಗಿ ಅಲುಗಾಡಿಸಿ ಕೇಳಿದರು. ಎರಡು ಮೂರು ಬಾರಿ ಅಲ್ಲಾಡಿಸಿದ ಮೇಲೆ ನಿಧಾನವಾಗಿ ಯಾವುದೋ ವಿಸ್ಮೃತಿಯಿಂದ ಎದ್ದು ಕುಳಿತರು ಶಂಕರ ಬಾಗಿಲ್ತಾಯರು. ಸದ್ಯ ಗಂಡನಿಗೆ ಏನೂ ಆಗಿಲ್ಲವೆಂಬ ಸಮಾಧಾನ ಅವರ ಪತ್ನಿಗೆ ಆಯಿತು. ಎರಡು ನಿಮಿಷ ಹಾಗೇ ಕುಳಿತಿದ್ದ ಬಾಗಿಲ್ತಾಯರು ಸರಕ್ಕನೆ ಎದ್ದು, ಉತ್ತರೀಯವನ್ನು ಮೈಮೇಲೆ ಹೊದ್ದು “ಈಗ ಬರುವೆ” ಎಂದು ಪತ್ನಿಗೆ ಹೇಳಿ ಉತ್ತರಕ್ಕಾಗಿ ಕಾಯದೆ ಹಾಗೆಯೇ ಹೊರಟುಬಿಟ್ಟರು. ನೇರವಾಗಿ ಅವರು ಧಾವಿಸಿದ್ದು ದೇವಸ್ಥಾನಕ್ಕೆ. ಅಲ್ಲಿ ನೆರೆದಿದ್ದ ಆಳುಮಕ್ಕಳಿಗೆ, ಪೂಜೆಗೆ ಸಹಕಾರ ನೀಡುವವರಿಗೆ ಹಾಗೂ ಸೋಮವಾರದ ವಿಶೇಷ ಪೂಜೆ ನೋಡಲು ಬಂದವರಿಗೆ ಮಡಿಯಲ್ಲಿ ಬರದ, ಯಾವುದೇ ಪೂಜಾ ಸಾಮಗ್ರಿಗಳನ್ನು ತರದ ಬಾಗಿಲ್ತಾಯರನ್ನು ನೋಡಿ ಆಶ್ಚರ್‍ಯವಾಯಿತು. ದೇವಸ್ಥಾನದ ನಂದಿಯ ಸಮೀಪ ನಂತರ ದೇವಸ್ಥಾನದ ಹೊರಪೌಳಿಯ ಸುತ್ತ ಆಚೆಈಚೆ ನೋಡುತ್ತ, ಎರಡು ಸುತ್ತು ಬಂದರು ಬಾಗಿಲ್ತಾಯರು. ಅಷ್ಟೊತ್ತಿಗೆ ಬೆಳಗೂ ಆಗಿತ್ತು. ಜನಸಮುದಾಯವು ಸಾಕಷ್ಟು ನೆರೆದಿತ್ತು. ದೇವಸ್ಥಾನದ ಮೊಕ್ತೇಸರ ಶೆಟ್ಟರು ಅಷ್ಟೊತ್ತಿಗೆ ಬಂದಿದ್ದರು. ಯಾವುದೋ ಲೋಕದಲ್ಲಿ ಇದ್ದಂತಹ ಬಾಗಿಲ್ತಾಯರನ್ನು ಅವರು “ಬಾಗಿಲ್ತಾಯರೇ, ಎಲ್ಲವೂ ಕುಶಲವೇ?” ಎಂದರು

ಕೇಳಿಯೂ ಕೇಳದಂತಿದ್ದರು ಬಾಗಿಲ್ತಾಯರು. ಅರೆಗಳಿಗೆ ಆದನಂತರ “ನಿನ್ನೆ ರಾತ್ರಿ ನನಗೊಂದು ಕನಸು ಬಿತ್ತು. ಕನಸಿನಲ್ಲಿ ಸರ್ವಾಂಗ ಭಸ್ಮಧಾರಿ ತೇಜೋಭರಿತ ಮುಖಮಂಡಲದ ಮುದುಕರೊಬ್ಬರು ಉದ್ದವಾದ ಒಂದು ಕೋಲನ್ನು ಊರುತ್ತ, ನಮ್ಮ ದೇವಸ್ಥಾನಕ್ಕೆ ಬಂದಿದ್ದರು. ಅದು ಮಂಗಳಾರತಿಯ ಸಮಯ. ಆರತಿ ಕೊಡಲು ಅವರ ಮುಂದೆ ನಿಂತರೆ, ಅವರು ಅದನ್ನು ತೆಗೆದುಕೊಳ್ಳದೆ ‘ನನ್ನ ಸೇವೆಯನ್ನೇನೋ ಮಾಡುತ್ತಿರುವಿ. ಆದರೆ ನನ್ನ ಹಿಂಬಾಲಕ ಗಣದವರನ್ನು ಯಾಕೆ ಅಸಡ್ಡೆ ಮಾಡಿರುವೆ? ಅವರನ್ನೇಕೆ ಕಾಡಿನಲ್ಲಿ ಅನಾಥರನ್ನಾಗಿಸಿರುವೆ. ಅವರ ಅಗತ್ಯ ನಿನಗೆ ಅಷ್ಟಾಗಿ ಇಲ್ಲದಿದ್ದರೂ ನನಗಿದೆಯಲ್ಲ?’ ಎಂದು ಹೇಳಿ ಉತ್ತರಕ್ಕಾಗಿ ಕಾಯದೆ, ಇದೇ ನಂದಿಯ ಸಮೀಪದಲ್ಲಿ ಅದೃಶ್ಯರಾದರು. ಅವರು ಯಾರು ಏನು ಎಂಬ ಕುತೂಹಲದಲ್ಲಿರುವಾಗಲೇ ಹೆಂಡತಿ ಎಚ್ಚರಿಸಿದಳು.” ಎಂದರು.

ಜನರ ಮಧ್ಯದಲ್ಲಿ ಗುಜುಗುಜು ಸದ್ದು. ಅಲ್ಲಿ ಸೇರಿದ್ದ ಇತರೆ ಬಾಗಿಲ್ತಾಯರ ಮನೆಯವರು, ಮೊಕ್ತೇಸರರು ಏನೂ ತಿಳಿಯದೆ ಒಬ್ಬರ ಮುಖ ನೋಡಿಕೊಳ್ಳುತ್ತಿದ್ದರು. ಶಂಕರ ಬಾಗಿಲ್ತಾಯರು ದೇವಸ್ಥಾನದ ಹೊರಜಗಲಿಯತ್ತ ನಡೆದು ಅಲ್ಲಿ ಕುಳಿತರು. ಸುತ್ತುವರಿದಿದ್ದ ಎಲ್ಲರೂ ಅಲ್ಲಿ ನೆರೆದರು. ಎದುರಿಗಿದ್ದ ಗರುಡ ಸ್ಥಂಭದತ್ತ ನೆಟ್ಟ ನೋಟ ಹಿಡಿದ ಶಂಕರ ಬಾಗಿಲ್ತಾಯರು ನುಡಿದರು.

“ಕನಸಿನಲ್ಲಿ ಬಂದವರ ಕಣ್ಣಿನ ತೇಜಸ್ಸು, ಮಾತಿನ ಝೇಂಕಾರ ಇವೆಲ್ಲವನ್ನೂ ಗಮನಿಸಿದಾಗ ಅವರು ವಿಶೇಷ ವ್ಯಕ್ತಿಯೇ ಆಗಿರಬೇಕು. ನಾನು ನೀಡಿದ ಆರತಿಯನ್ನು ಸ್ವೀಕರಿಸಲಿಲ್ಲ. ಹಿಂಬಾಲಕರ ಬಗ್ಗೆ ವಿಚಾರಿಸಿದರು. ನಂದಿಯ ಸಮೀಪ ಅದೃಶ್ಯರಾದರು. ಇವೆಲ್ಲವನ್ನೂ ಒಂದಕ್ಕೊಂದು ಹೆಣೆದರೆ ಅವರು ಬೇರೆ ಯಾರೂ ಅಲ್ಲ, ದಿನಾಲು ನಾನು ಪೂಜಿಸುವ ಸಾಕ್ಷಾತ್ ಶಿವನೇ ಇರಬೇಕು,” ಎಂದು ಶಿವನನ್ನು ಅಲ್ಲಿಯೇ ನೋಡಿದಂತೆ ತಲೆಬಗ್ಗಿಸಿ ಕೈಮುಗಿದರು. ಸುತ್ತಲಿನ ಜನರು ಮೌನವಾಗಿ ಕೇಳುತ್ತಲೇ ಇದ್ದರು, ಏನೂ ಹೇಳಲು ತೋಚದೆ.

“ಹಾಗಾದರೆ, ದೇವರು ಹೇಳಿದ ಕಾಡಿನಲ್ಲಿರುವ ಅವರ ಹಿಂಬಾಲಕರು ಯಾರು?” ತಮ್ಮಷ್ಟಕ್ಕೆ ನುಡಿದ ಬಾಗಿಲ್ತಾಯರು ತಾವೇ ನುಡಿದರು. “ಕಾಡಿನಲ್ಲಿರುವವರು ನನ್ನಿಂದ ಅಸಡ್ಡೆಗೊಳಗಾದವರು ಅಂದರೆ ನಾನು ಪೂಜೆ ಮಾಡದೆ ಇರುವವರು. ಅಂದರೆ ನಮ್ಮೂರಿನ ದೈವಗಳೇ ಯಾಕಾಗಿರಬಾರದು?”

ನೆರೆದಿದ್ದ ಹಲವರಿಗೆ ಸಂತೋಷ. ತಮ್ಮ ಊರಿನವರಿಗೆ ಸಾಕ್ಷಾತ್ ದೇವರೇ ಬಂದು ಅಪ್ಪಣೆ ಕೊಡಿಸಿದೆ ಎಂಬುದು ಒಂದು ಕಾರಣವಾದರೆ ಅಂತಹ ಮಹಿಮಾನ್ವಿತರು ನಮ್ಮ ನಡುವೆ ಇದ್ದಾರೆ ಎಂಬ ಇನ್ನೊಂದು ಕಾರಣಕ್ಕೆ. ಕೆಲವರು ಆ ಕಾರಣಗಳಿಂದಾಗಿ ಸಂತೋಷಗೊಂಡರೆ, ಕೆಲವರು ಸಣ್ಣ ಅಪಸ್ವರ ತೆಗೆದರು. ಅವರಲ್ಲಿ ಮೊಕ್ತೇಸರರು ಒಬ್ಬರು.

“ಬಾಗಿಲ್ತಾಯರೆ, ದೇವರ ಅಪ್ಪಣೆಯನ್ನು ಪಾಲಿಸಬೇಕು. ನಿಜ. ಆದರೆ ಹೇಗೆ? ದೈವಗಳು ಊರಿನ ಎಲ್ಲ ದಿಕ್ಕುಗಳಲ್ಲಿ ಹರಡಿಹೋಗಿವೆ. ಇಲ್ಲಿಂದ ಒಂದು ದೈವದ ಗುಡಿಗೆ ಹೋಗಿ ಬರಲು ಒಂದು ಒಪ್ಪತ್ತು ಸಾಕಾಗಲಿಕ್ಕಿಲ್ಲ. ಅದೂ ಅಲ್ಲದೆ ಕೆಲವು ದೈವಗಳು ರಕ್ತವನ್ನೇ ಕೇಳುತ್ತವೆ. ಅಂತವುಗಳನ್ನು ನೀವು ಪೂಜಿಸುವುದು ಹೇಗೆ?”

ಶಂಕರ ಬಾಗಿಲ್ತಾಯರು ಸ್ವಲ್ಪ ಹೊತ್ತು ಯೋಚಿಸಿ ಹೇಳಿದರು. “ಕನಸಿನಲ್ಲಿ ಬಂದವರು ಇದನ್ನೆಲ್ಲ ಯೋಚಿಸಿಯೇ ನನಗೆ ಅಪ್ಪಣೆಕೊಟ್ಟಿರಬಹುದು. ಹಾಗೆಯೇ ನನ್ನ ಬಾಯಿಂದ ಬರುವ ಮಾತುಗಳನ್ನು ಅವರೇ ಆಡಿಸುತ್ತಿರಬಹುದು. ನನಗೀಗ ತೋಚುವುದು ಹೀಗೆ. ನಮ್ಮ ಮುಂದಿರುವ ಪ್ರಶ್ನೆಗಳು ಎರಡು. ಒಂದು ನೀವಂದಂತೆ ದೂರದ ಪ್ರಶ್ನೆ. ಅದರ ಉತ್ತರ ಕಷ್ಟದ್ದೇನಲ್ಲ. ಒಂದು ವೇಳೆ ನನಗೆ ಅಲ್ಲಿಗೆ ಹೋಗಲಿಕ್ಕೆ ಆಗದೆ ಇದ್ದರೆ, ದೈವಗಳನ್ನೆ ಇಲ್ಲಿಗೆ ತರಬಹುದಲ್ಲ. ದೇವಸ್ಥಾನದ ಸುತ್ತಲೂ ಸಾಕಷ್ಟು ಜಾಗವಿದೆ. ಇಲ್ಲಿಯೇ ಚಿಕ್ಕ ಚಿಕ್ಕ ಗುಡಿಗಳನ್ನು ಕಟ್ಟುವ. ಅನಂತರ ಶಾಸ್ತ್ರದಲ್ಲಿ ಹೇಳಿದಂತೆ ಅವುಗಳನ್ನು ಪ್ರತಿಷ್ಠಾಪಿಸೋಣ. ಇನ್ನು ನೀವು ಕೇಳಿದಿರಿ. ದೈವಗಳಿಗೆ ರಕ್ತ ಬೇಕು ಎಂದು. ಅವುಗಳು ಇಲ್ಲಿಗೆ ಬಂದ ಮೇಲೆ ಇಲ್ಲಿ ರಕ್ತ ನೈವೇದ್ಯ ಆಗಕೂಡದು. ನಾವು ವರ್ಷಕ್ಕೆ ಐದಾರು ಭೋಗಗಳನ್ನು ಹಾಕೋಣ. ಇನ್ನು ರಕ್ತವೇ ಬೇಕೆಂದಿದ್ದರೆ ಬೇರೆ ಕಡೆಯಲ್ಲಿ ಜನರು ಆ ಸೇವೆ ಮಾಡಿಕೊಳ್ಳಲಿ,” ಎಂದರು. ಮೊಕ್ತೇಸರರಿಗೆ ಇನ್ನೂ ಸಂಶಯ. ಹಾಗಾಗಿ “ಯಾವುದಕ್ಕೂ ಒಂದು ಸಲ ದೈವಗಳನ್ನೇ ಕೇಳುವದು ಒಳ್ಳೆಯದು,” ಎಂದರು.

“ಹಾಗೆ ಆಗಲಿ. ಈಗ ಮೇ ತಿಂಗಳು. ಪತ್ತನಾಜಿ ಮುಗಿದಿದೆಯಲ್ಲ. ಇನ್ನು ಏನಿದ್ದರೂ ಮಳೆಗಾಲ ಮುಗಿದ ಮೇಲೆಯೇ. ಆದರೆ ಕೋಲ ಆಗಲಿಲ್ಲ ಎಂಬ ಕಾರಣಕ್ಕೆ ಉಳಿದ ಕೆಲಸ ನಿಧಾನವಾಗಬಾರದು. ಯಜಮಾನರು ಹೇಳಿದ ಮಾತನ್ನು ಮನೆಯವರು ತೆಗೆದು ಹಾಕುತ್ತಾರೆಯೇ? ಹಾಗೆಯೆ ದೇವರು ಹೇಳಿದ ಮೇಲೆ ಗಣಗಳು ಇಲ್ಲ ಎನ್ನುವುದಿಲ್ಲ. ಆದ್ದರಿಂದ ದೇವಸ್ಥಾನದ ಎಂಟು ಕಡೆ ಗುಡಿಗಳ ಕೆಲಸ ಪ್ರಾರಂಭವಾಗಲಿ. ಮುಂದಿನ ವರ್ಷ ಎಲ್ಲ ಕೋಲಗಳನ್ನು ಶಿವರಾತ್ರಿಗೆ ಮುಂಚಿತವಾಗಿ ಮಾಡುವ. ಶಿವರಾತ್ರಿ ಮತ್ತು ಪ್ರತಿಷ್ಠಾಪನೆ ಎಲ್ಲವೂ ಒಂದೇ ಸಮಯದಲ್ಲಿ ಮಾಡಿಸಿ, ಹುಡಿ ಹಾರಿಸಿಬಿಡುವ,” ಎಂದರು ಬಾಗಿಲ್ತಾಯರು ಉತ್ಸಾಹದಿಂದ.

* * *

ಈ ಘಟನೆ ಆದ ಬಳಿಕ ಶಂಕರ ಬಾಗಿಲ್ತಾಯರ ಅಲೌಕಿಕ ಶಕ್ತಿಯ ಬಗ್ಗೆ ಸುತ್ತಮುತ್ತಲಿನ ಊರುಗಳಲ್ಲಿ ಕತೆ ಉಪಕತೆ ಹುಟ್ಟಿ ಅವರ ಕೀರ್ತಿ ಹರಡಿತು. ಅವರನ್ನು ಕಂಡರೆ ಭಕ್ತಿ ಗೌರವದಿಂದ ಹಿಂದೆ ನಮಸ್ಕರಿಸದವರೂ ಕರಜೋಡಿಸುವಂತಾಯಿತು. ಯಾವುದೇ ಅನ್ನ ಸಂತರ್ಪಣೆ, ಮದುವೆ ಮುಂಜಿಗಳಲ್ಲಿ ಬಾಗಿಲ್ತಾಯರಿಗೆ ಅಗ್ರಪಂಕ್ತಿ. ಒಂದು ವೇಳೆ ಅವರಿಗೆ ಬೇರೆ ಕಾರ್‍ಯಕ್ರಮ ಇದೆ ಎಂದಾದರೆ, ಕಾರ್‍ಯಕ್ರಮದ ದಿನವನ್ನೇ ಬದಲಾಯಿಸಿದ ನಿದರ್ಶನಗಳೂ ಇದ್ದವು. ವೈನಾಗಿ ತೀಡಿದ ಕಚ್ಚೆ ಪಂಚೆ ಉಟ್ಟು, ತಮ್ಮ ಕೇಸರಿ ಬಣ್ಣದ ರೇಷ್ಮೆ ಶಾಲು ಹೊದ್ದು, ನಾಲ್ಕಾರು ರುದ್ರಾಕ್ಷಿ ಮಾಲೆ ಕುತ್ತಿಗೆಗೆ ಹಾಕಿಕೊಂಡು, ಎದ್ದು ಕಾಣುವ ವಿಭೂತಿಯನ್ನು ಧರಿಸಿ ಯಾವುದಾದರೂ ಕಾರ್‍ಯಕ್ರಮಕ್ಕೆ ಬಂದರೆ, ಸುತ್ತಲಿನ ಜನ ಎದ್ದು ನಿಂತು ಸ್ವಾಗತಿಸತೊಡಗಿದರು. ಪುರೋಹಿತರಿದ್ದರೂ ಮಂತ್ರಾಕ್ಷತೆಯ ಬಟ್ಟಲನ್ನು ಅವರ ಕೈಗೆ ಕೊಟ್ಟು ಆಶೀರ್ವಾದ ಪಡಕೊಳ್ಳತೊಡಗಿದರು. ಅಂತಹ ದಿನಗಳಲ್ಲಿ ಮಂತ್ರಾಕ್ಷತೆ ಹಾಕಿಕೊಳ್ಳುವವರ ಸಾಲು ಮಾಮೂಲಿಗಿಂತ ಉದ್ದವೇ ಆಗುತ್ತಿತ್ತು. ಬಾಗಿಲ್ತಾಯರ ಖ್ಯಾತಿಯಿಂದಾಗಿ ದೇವಸ್ಥಾನದ ಸುತ್ತಮುತ್ತಲಿನ ಊರುಗಳಿಂದ ಅಲ್ಲದೆ, ದೂರದ ಊರುಗಳಿಂದಲೂ ಜನರು ಬರಲಾರಂಭಿಸಿದರು. ಸೋಮವಾರ, ಹುಣ್ಣಿಮೆಯ ದಿನ ಹಾಗೂ ವಿಶೇಷ ದಿನಗಳಲ್ಲಿ ದೇವಸ್ಥಾನದ ರಥಬೀದಿಯಲ್ಲಿ ಅಂಗಡಿಗಳು ಏಳತೊಡಗಿದವು. ಪರ ಊರಿನಿಂದ ಬಂದವರಿಗಾಗಿ ಪೈಗಳು ತಮ್ಮ ತಂಗಿಯ ಮಗನಿಗೆ ಹೋಟೆಲ್ಲು ಮಾಡಿಸಿಕೊಟ್ಟರು. ಕೆಲವು ಖಾಯಂ ಬ್ರಾಹ್ಮಣರಿಗೆ ದಕ್ಷಿಣೆಗಳು ಸಿಗುವ ಹಾಗೆ ಆಯಿತು. ಹೀಗೆ ಊರಿನ ಕೆಲವರ ಆರ್ಥಿಕ ಸ್ಥಿತಿ ಸುಧಾರಿಸತೊಡಗಿತು. ದೈವಗಳಿಗೆ ಗುಡಿಗಳ ನಿರ್ಮಾಣ ಸಹ ವೇಗವಾಗಿ ನಡೆಯುತ್ತಿತ್ತು.

* * *

ಶಂಕರ ಬಾಗಿಲ್ತಾಯರ ಯೋಚನೆ, ಯೋಜನೆಗಳನ್ನು ಸೋಮ ಅಷ್ಟಾಗಿ ಇಷ್ಟಪಡಲಿಲ್ಲ. ಆತನು ಅವರ ಒಕ್ಕಲಮಗನಾಗಿದ್ದರೂ ಕೂಡ. ಒಂದು ದಿನ ಸೋಮ, ದೊಡ್ಮನೆ ಬಾಗಿಲ್ತಾಯರಲ್ಲಿ ತನ್ನ ಮನದಲ್ಲಿ ಹಿಂದಿನಿಂದ ಕಾಡುತ್ತಿದ್ದ ಅನುಮಾನವನ್ನು ಪ್ರಸ್ತಾಪಿಸಿದ.

“ಅಯ್ಯ, ನನಗೆ ಇದೊಂದೂ ಅರ್ಥ ಆಗುವುದಿಲ್ಲ. ಈಶ್ವರ ದೇವರು ಶಂಕರ ಒಡೆಯರ ಕನಸಿನಲ್ಲಿ ಬಂದು ಹೇಳಿದಂತೆ, ನಮ್ಮ ದೈವಗಳು ಯಾಕೆ ನಮ್ಮ ಕನಸಿನಲ್ಲಿ ಬಂದು, ನಾವು ಅಲ್ಲಿಗೆ ಹೋಗಬೇಕು ಅಂತ ಹೇಳಲಿಲ್ಲ. ಇಷ್ಟರವರೆಗಿನ ಯಾವುದೇ ಕೋಲದಲ್ಲೂ ಈ ವಿಷಯವನ್ನು ಯಾವ ದೈವವೂ ಹೇಳಲಿಲ್ಲ. ನುಡಿಕೊಟ್ಟು ನಾನು ಇಲ್ಲಿ ಸಂತೋಷವಾಗಿದ್ದೇನೆ. ನಿಮ್ಮ ಸೇವೆಯಿಂದ ತೃಪ್ತಿಗೊಂಡಿದ್ದೇನೆ ಎಂದು ದೈವವು ಹೇಳಿದೆಯೇ ಹೊರತು, ನುಡಿ ಕೊಡುವಾಗ ನಾನು ಶಿವನ ಗಣ, ನಾನು ಸ್ವಲ್ಪ ದಿನಗಳಲ್ಲಿ ಇಲ್ಲಿಂದ ಎದ್ದುಹೋಗುತ್ತೇನೆ, ಅಂತ ಎಂದೂ ಹೇಳಿರಲಿಲ್ಲ. ಇದರ ಅರ್ಥ ದೈವಕ್ಕೆ ತಾನು ಯಾರು ಅಂತ ಗೊತ್ತಿಲ್ಲ ಅಂತ ಅಲ್ಲವೆ. ಹಾಗಾದರೆ ಇಷ್ಟರವರೆಗೆ ತಾನು ಯಾರು ಎಂದು ಗೊತ್ತಿಲ್ಲದ ದೈವದಿಂದ ನುಡಿ ಕೇಳಿದ್ದೇವೆಯೆ? ಇಷ್ಟಾದ ಮೇಲೆ ಇವು ಕೊಟ್ಟ ನುಡಿಯನ್ನು ಸತ್ಯ ಎಂದು ನಂಬುವುದಾದರೂ ಹೇಗೆ. ಛೇ, ಹಾಗೆ ಆಗಲಿಕ್ಕೆ ಸಾಧ್ಯವಿಲ್ಲ. ಯಾವುದೋ ಕಾಲದ ಘಟನೆಯನ್ನು ನಿನ್ನೆ ಕಂಡಂತೆ ಹೇಳುವ ದೈವಗಳು ಸುಳ್ಳಾಡುವುದು ಹೇಗೆ. ಅದೂ ಅಲ್ಲದೆ ಅವುಗಳು ಅಲ್ಲಿ ಸುಖವಾಗಿ ಹೇಗೆ ಇರಬಲ್ಲವು. ಇಲ್ಲಿ ಇರುವಷ್ಟು ವಿಶಾಲವಾದ ಜಾಗ, ನೀರು ಅಲ್ಲಿ ಅವುಗಳಿಗೆ ಸಿಕ್ಕೀತೇನು. ಅಲ್ಲಿನಿಂದಲೆ ನಮ್ಮ ಕೇರಿ ಹಟ್ಟಿ, ಹೊಲಗದ್ದೆಗಳನ್ನ ಹೇಗೆ ಕಾಪಾಡಿಯಾವು? ಅವುಗಳನ್ನು ನೋಡಲಿಕ್ಕೆ ನಾವು ಒಂದು ದಿನದ ಕೆಲಸ ಕೂಲಿ ಬಿಟ್ಟು ಊರಿನೊಳಗೆ ಹೋಗಬೇಕಾ? ಹೋದ ಮೇಲೂ ನಮ್ಮನ್ನು ಈಶ್ವರ ದೇವಸ್ಥಾನದಂತೆ ದೂರದಲ್ಲಿ ನಿಲ್ಲಿಸಿಯಾರು. ನಮ್ಮ ದೈವಗಳನ್ನು ನಮ್ಮಿಷ್ಟದಂತೆ ಪೂಜಿಸಲು ಬಿಡುವುದಿಲ್ಲ. ಒಡೆಯರೆ ಇದೇನೋ ನನಗೆ ಸರಿ ಕಾಣವುದಿಲ್ಲ,” ಎಂದು ಸೋಮ ತನ್ನ ಅಸಮಾಧಾನ ವ್ಯಕ್ತಪಡಿಸಿದ.

ದೊಡ್ಮನೆ ಬಾಗಿಲ್ತಾಯರು ದ್ವಂದ್ವಕ್ಕೀಡಾದರು. ಸೋಮ ಹೇಳುವುದೂ ಸರಿ. ಆದರೆ ಶಂಕರ ಬಾಗಿಲ್ತಾಯರ ಕನಸೇ ಸುಳ್ಳೆ ಅಥವಾ ದಿನಾ ಶಿವನ ಪೂಜೆ ಮಾಡಿ, ಅದರ ಬಗ್ಗೆಯೇ ಆಲೋಚಿಸಿ, ಅವರ ಸ್ವಂತ ಅಭಿಪ್ರಾಯ ಕನಸಿನ ರೂಪದಲ್ಲಿ ವ್ಯಕ್ತವಾಯಿತೇ? ಯಾವುದು ಸರಿ, ಯಾವುದು ತಪ್ಪು? ಯಾರು ಸರಿ, ಯಾರು ತಪ್ಪು? ಗೊತ್ತಾಗದೆ, ಸುಮ್ಮನೆ ಗೋಣು ಆಡಿಸಿದರು.

* * *

ಮಳೆಗಾಲ ಮುಗಿದು, ದೀಪಾವಳಿ ಕಳೆದು. ಮಕರ ಸಂಕ್ರಾಂತಿ ಆದ ಮೇಲೆ ಸರತಿಯಲ್ಲಿ ಕೋಲಗಳು ನಡೆದವು. ಶಂಕರ ಬಾಗಿಲ್ತಾಯರ ಮಾತಿನ ವರಸೆ, ಕನಸಿನ ವಿಸ್ತರಣೆ ಹಾಗೂ ಮೊಕ್ತೇಸರರ ಆಶ್ವಾಸನೆ ಇವುಗಳಿಂದ ದೈವಗಳು ಸಂತೋಷಗೊಂಡವು. ತಮ್ಮ ತಮ್ಮ ಸ್ಥಾನದಿಂದ ದೇವಸ್ಥಾನದ ಸುತ್ತ ನೆಲೆಗೊಳ್ಳಲು ಒಪ್ಪಿದವು. ಒಂದು ವೇಳೆ ತಮ್ಮನ್ನು ಅಲ್ಲಿ ಸರಿಯಾಗಿ ನಡೆಸಿಕೊಳ್ಳದಿದ್ದರೆ ನೀವು ತೊಂದರೆಗೀಡಾಗುತ್ತೀರಿ ಎಂದೂ ಕೆಲವು ದೈವಗಳು ಬೆದರಿಸಿದವು. ಈ ಎಲ್ಲ ಬೆಳವಣಿಗೆಯನ್ನು ನೋಡುತ್ತಿದ್ದ ಸೋಮ ಚಡಪಡಿಸುತ್ತಿದ್ದ. ಕರಿಗಾರು ದೈವವು ತನ್ನ ಬಾಯಿಯಲ್ಲಿ ಇನ್ನೆರಡು ದಿನದಲ್ಲಿ ನಡೆಯುವ ಕೋಲದಲ್ಲಿ ಇದೇ ಮಾತನ್ನು ಆಡಿಸುತ್ತದೆಯೇ? ಒಂದು ವೇಳೆ ಹಾಗೆ ಆಡಿಸಿದರೆ ಊರ ಹೊರಗಿರುವ ನಮ್ಮ ಕೇರಿಯನ್ನು ಊರಿನ ಒಳಗೆ ಕುಳಿತು ನಮ್ಮನ್ನು ರಕ್ಷಿಸುತ್ತದೆಯೇ ದೈವ? ಪ್ರಶ್ನೆಗಳಿಗೆ ಉತ್ತರ ಸಿಗದೆ ಚಡಪಡಿಸತೊಡಗಿದ.

* * *

ಮಾರನೇ ದಿನ ಮುಂಜಾವಿನಲ್ಲಿ ಕರಿಗಾರು ದೈವಸ್ಥಾನಕ್ಕೆ ಬಂದವರಿಗೆ ಆಶ್ವರ್ಯ ಕಾದಿತ್ತು. ಮೂರಡಿ ನೆಲದ ಕೆಳಗೆ ಹಾಗೂ ಒಂದಡಿ ನೆಲದ ಮೇಲೆ ಇರುವ ಕರಿಗಾರುವನ್ನು ಪ್ರತಿಬಿಂಬಿಸುತ್ತಿದ್ದ ಆಯತಾಕಾರದ ಕಲ್ಲು ಅಲ್ಲಿಂದ ಮಾಯವಾಗಿತ್ತು. ಯಾವುದೇ ಗುದ್ದಲಿ, ಪಿಕಾಸಿಗಳನ್ನು ಉಪಯೋಗಿಸದೆ. ಕಲ್ಲನ್ನು ಸತತವಾಗಿ ಅಲ್ಲಾಡಿಸಿ, ಮೇಲಕ್ಕೆ ತೆಗೆದಂತೆ ಭಾಸವಾಗುತ್ತಿತ್ತು. ಜನರು ಊರತುಂಬ ಗುಲ್ಲೆಬ್ಬಿಸಿದರು. ಶಂಕರ ಬಾಗಿಲ್ತಾಯರು ಅಲ್ಲಿಗೆ ಓಡೋಡಿ ಬಂದರು. ಎಲ್ಲವೂ ಸುಸೂತ್ರವಾಗಿ ತನ್ನಿಷ್ಟದಂತೆ ನಡೆಯಿತು ಎಂದು ಅಂದು ಕೊಳ್ಳುತ್ತಿರುವಾಗಲೇ ಇದ್ಯಾವುದು ಪ್ರಾರಬ್ಧ ಎಂದು ತಲೆಯ ಮೇಲೆ ಕೈಯಿಟ್ಟುಕೊಂಡರು. ಸ್ವಲ್ಪ ತಡೆದು ಮೊಕ್ತೇಸರರ ಹತ್ತಿರ, “ಶೆಟ್ಟರೆ, ಇದು ಯಾಕೋ ನಮಗೆ ಆಗದವರು ಮಾಡಿದ ಕೆಲಸವೆ. ತತ್‌ಕ್ಷಣಕ್ಕೆ ನಾವೇನೂ ಮಾಡುವ ಹಾಗಿಲ್ಲ. ಹೇಗೂ ನಾಳೆ ಕೋಲ ಇದೆಯಲ್ಲ. ದೈವಕ್ಕೇ ಪ್ರಶ್ನೆ ಇಟ್ಟರಾಯಿತು. ಆದರೂ ನಿಮ್ಮ ಸಮಾಧಾನಕ್ಕೆ ನಾಲ್ಕು ಜನರನ್ನು ಹುಡುಕಲು ಕಳಿಸಿ. ಅದರಿಂದ ಏನೂ ಫಲ ಸಿಗದು,” ಎಂದರು. ಅವರು ಹೇಳಿದಂತೆ ಅರಸಿ ಹೋದವರು ಬರಿಗೈಲಿ ಬಂದರು.

ಕೋಲದ ದಿನ ಬಂದು ಬಿಟ್ಟಿತು. ಸೋಮ ಬೆಳಿಗ್ಗೆ ಕೆರೆಯಲ್ಲಿ ಮಿಂದು ಇಡೀ ದಿನ ಸಂಪ್ರದಾಯದಂತೆ ಉಪವಾಸವಿದ್ದು, ಗುರಿಕಾರರ ಮನೆಗೆ ಹೋಗಿ, ಎಣ್ಣೆ ಮತ್ತು ಕೋಲದ ಪರಿಕರಗಳನ್ನು ಭಕ್ತಿಯಿಂದ ತಂದು, ಹೊತ್ತು ಕಂತುವ ಹೊತ್ತಿಗೆ ಕೋಲಕ್ಕೆ ತಯಾರಿ ನಡೆಸಿ ಸಿದ್ಧನಾದ. ವಾದ್ಯ ಬೇಂಡುಗಳ ಶಬ್ದ ತಾರಕಕ್ಕೇರುತ್ತಿದ್ದಂತೆ, ಕರ್ಕಶವಾಗಿ ಕೇಕೆ ಹಾಕಿ ಆವೇಶದಿಂದ ಕುಣಿಯತೊಡಗಿದ. ಮುಪ್ಪಾತಿ ಮುಪ್ಪ ಸೋಮುವಿನ ಕೈಕಾಲುಗಳಲ್ಲಿ ಅದ್ಯಾವ ಮಾಯೆಯಿಂದ ಶಕ್ತಿ ತುಂಬಿಕೊಳ್ಳುತ್ತಿತ್ತೊ ಕಾಣೆ, ಆತನ ಕುಣಿತದ ಕಸುವು, ಹುರುಪು ಇಷ್ಟರವರೆಗೆ ಎಂದೂ ಕಂಡಿರಲಿಲ್ಲ ಎಂಬುದು ನೋಡಿದವರ ಅಂಬೋಣ.

“ನಂಬಿದವರಿಗೆ ಇಂಬು ಕೊಡುವವ ನಾನು. ಯಾರಲ್ಲಿ ಏನಾದರು ದುಗುಡ, ತೊಂದರೆ ಇದ್ದರೆ ಕೇಳಬಹುದು,” ಎಂದಿತು ಗಂಭೀರವಾಗಿ ದೈವ.

ಶಂಕರ ಬಾಗಿಲ್ತಾಯರು ಗಂಟಲನ್ನು ಸರಿಪಡಿಸಿಕೊಳ್ಳುತ್ತಾ “ದೈವವೆ, ನಿನ್ನ ತಿಳುವಳಿಕೆ ದೊಡ್ಡದು. ಆದರೂ ಭಕ್ತರ ಬಾಯಲ್ಲಿ ಕೇಳಬೇಕು ಅಂತ ನಿನ್ನ ಬಯಕೆ, ಆಗಲಿ. ಹೇಳುತ್ತೇನೆ,” ಎಂದು ಹತ್ತು ತಿಂಗಳಿಂದ ನಡೆದ ಘಟನೆಗಳೆಲ್ಲವನ್ನೂ ತಿಳಿಸಿ, ದೈವಗಳೆಲ್ಲದರ ಒಪ್ಪಿಗೆಯಂತೆ ಪ್ರತಿಷ್ಠೆ ಮಾಡಿ ಸಾಂಗವಾಗಿ ಪೂಜೆ ನಡೆಯುತ್ತಿದ್ದುದನ್ನು ಹೇಳಿದರು. “ನಮ್ಮ ಊರಿನ ಅತಿ ಹೆಚ್ಚು ಶಕ್ತಿಯ, ವಿಶಿಷ್ಟ ಕಾರಣಿಕ ಉಳ್ಳ ದೈವ ನೀನು. ನಮ್ಮ ಊರಿನ ಜನರ ಮೇಲಿನ ನಿನ್ನ ಪ್ರೀತಿ ದೊಡ್ಡದು. ಅದಕ್ಕೆ ಅಲ್ಲವೇ, ನಮ್ಮ ಊರಿನಲ್ಲಿ ಮಾತ್ರ ನೀನು ಇರುವುದು. ನೀನೂ ಸಹ, ಊರ ಒಳಗಿನ ದೇವಸ್ಥಾನದ ಸಮೀಪ ಬಂದರೆ ಎಲ್ಲರಿಗಿಂತ ಹೆಚ್ಚು ಖುಷಿ ಪಡುವವ ನಾನು. ಆದರೆ ಈಗ ನಿನ್ನನ್ನೇ ನಿನ್ನೆ ರಾತ್ರಿ ಯಾರೋ ಮಾಯ ಮಾಡಿದ್ದಾರೆ. ಈಗ ನಮಗೆ ನೀನೆ ದಾರಿ ತೋರಬೇಕು. ಆ ಬಿಂಬ ಎಲ್ಲಿದೆ ಎಂದು ತೋರಿದರೆ ಮತ್ತೆ ಅದನ್ನು ಪುನರ್‌ಪ್ರತಿಷ್ಠೆ ಮಾಡಿಸಿ ಪೂಜೆಗೆ ವ್ಯವಸ್ಥೆ ಮಾಡಬೇಕೆಂದಿದ್ದೇನೆ. ದಯವಿಟ್ಟು ಅದರ ಇರುವು ಅರುಹಬೇಕು. ಇಲ್ಲ ಬೇರೆ ಬಿಂಬವನ್ನು ಪ್ರತಿಷ್ಠಾಪಿಸಲು ಅನುಮತಿ ಕೊಡಬೇಕು,” ಎಂದು ಪಂಚೆಯನ್ನು ಕೆಳಗೆ ಬಿಟ್ಟು ಉತ್ತರೀಯವನ್ನು ಕಂಕುಳಲ್ಲಿ ಸಿಕ್ಕಿಸಿ, ಬೆನ್ನು ಬಗ್ಗಿಸಿ ಕೇಳಿದರು.

ದೈವ ಒಮ್ಮೆ ಹೂಂಕರಿಸಿತು. ಒಂದು ನಿಮಿಷ ನೀರವ ಮೌನ. ಮತ್ತೆ ಆ ಕತ್ತಲೆಯ ಮಹಾಮೌನವನ್ನು ಸೀಳುವಂತೆ ಕರ್ಕಶವಾದ ಕೇಕೆ ಹಾಕಿ ದೈವ ಉಚ್ಛಸ್ವರದಲ್ಲಿ ನುಡಿಯಿತು.

“ಭಕ್ತರೆ, ನನ್ನ ಪ್ರತಿಬಿಂಬ! ನನ್ನ ಪ್ರತಿಬಿಂಬ!! ನಿಮಗೆಲ್ಲರಿಗೂ ನನಗಿಂತ ನನ್ನ ಬಿಂಬದ ಚಿಂತೆಯೆ ಜಾಸ್ತಿ ಎನ್ನಿಸುತ್ತಿದೆ. ನಾನಿದ್ದರೆ ನನ್ನ ಬಿಂಬ. ಇಲ್ಲದಿದ್ದರೆ ಬರಿ ಕಲ್ಲು. ನನ್ನ ಇರುವಿಕೆ ನನ್ನ ಭಕ್ತರ ಸಂತೋಷದಲ್ಲಿದೆ, ಅವರ ಶ್ರೇಯಸ್ಸಿನಲ್ಲಿದೆ, ಅವರ ಕಷ್ಟ ಕಾರ್ಪಣ್ಯಗಳ ನಿವಾರಣೆಯಲ್ಲಿದೆ. ಅವರ ಊರುಕೇರಿ, ಹೊಲ, ದನ, ಮನೆಗಳ ರಕ್ಷಣೆಯಲ್ಲಿದೆ. ಆದರೆ ನೀವು ಮಾಡುತ್ತಿರುವುದಾದರೂ ಏನು. ನನಗಿಂತ ನನ್ನ ಬಿಂಬದ ಸ್ಥಳಾಂತರವೇ ಮುಖ್ಯವಾದಂತಿದೆ. ಇರಲಿ, ಭಕ್ತರ ಕೋರಿಕೆಯನ್ನು ಮನ್ನಿಸುವುದು ನನ್ನ ಕರ್ತವ್ಯ. ಆದರೆ ಒಂದು ಮಾತು ತಿಳಿದುಕೊಳ್ಳಿರಿ. ನಾನು ಅಲ್ಲಿ ನಾನಾಗಿರುವುದಿಲ್ಲ,” ಎಂದು ಕೆರೆಯಿರುವ ಉತ್ತರ ದಿಕ್ಕಿನತ್ತ ತನ್ನ ಬಲಗೈಯನ್ನು ಎತ್ತಿ ತೋರಿಸಿತು. ಕೆಲಹೊತ್ತು ಚಾಚಿದ್ದ ಕೈ ಹಾಗೆಯೇ ಇತ್ತು. ದೈವದ ಮುಂದಿನ ನುಡಿಗಾಗಿ ಕಾತರತೆಯಿಂದ ಕಾಯುತ್ತಿದ್ದ ಜನಕ್ಕೆ ಇನ್ನೊಂದು ವಿಸ್ಮಯ. ನಿಂತಿದ್ದ ಸೋಮ ಬುಡ ಕಳಚಿದ ಅಡಿಕೆಮರದಂತೆ ಕುಸಿದ ಬಿದ್ದ. ಬಿದ್ದವನಲ್ಲಿ ಒದ್ದಾಟ ಇಲ್ಲ, ಚಲನೆಯೂ ಇಲ್ಲ. ನಾಲ್ಕಾರು ಜನ ಹತ್ತಿರ ಬಂದರು. ಒಂದಿಬ್ಬರು ಗಾಳಿ ಹಾಕಿದರು, ಎತ್ತಿ ಕುಳ್ಳಿರಿಸಲು ಪ್ರಯತ್ನಿಸಿದವರಿಗೆ ತಿಳಿಯಿತು ಸೋಮ ಇನ್ನಿಲ್ಲವೆಂದು. ಹಾಗೆಯೇ ಕೂಗಿ ಹೇಳಿದರು. ಎಲ್ಲರಿಗೂ ದಿಗ್ಭ್ರಮೆ.

ಯಾಕೆ ಹೀಗಾಯ್ತು?

ಕರಿಗಾರುವಿಗೆ ಈ ದೈವಸ್ಥಾನ ಬೇಡವಾಗಿತ್ತೇ?

ದೂರದಲ್ಲಿರುತ್ತೇನೆ ಎಂದು ಹೇಳಲು ಕೈಎತ್ತಿ ತೋರಿಸಿದನೆ??

ಸೋಮನೇ ಯಾಕೆ ಬಲಿಯಾಗಬೇಕಿತ್ತು???

ಒಬ್ಬೊಬ್ಬರಲ್ಲಿ ಒಂದೊಂದು ಆಲೋಚನೆ….

ಮಾರನೇ ದಿನ ಜನರು ಉತ್ತರ ದಿಕ್ಕಿನತ್ತ ಹೊರಟರು. ಹಾಡಿ, ಕಂದಕ ಒಂದೂ ಬಿಡದೆ ಜಾಲಾಡಿದರು. ಕರಿಗಾರುವಿನ ಕಲ್ಲು ಸಿಗಲಿಲ್ಲ. ಬಾಗಿಲ್ತಾಯರ ದೈವಗಳ ಸ್ಥಾನಾಂತರ ಕರಿಗಾರುವಿಗೆ ಇಷ್ಟವಾಗಿಲ್ಲವೆಂದೇ ಅದರ ಪ್ರತಿಬಿಂಬ ಕಣ್ಮರೆಯಾಯಿತೆಂದೂ ಅವರಿಬ್ಬರ ನಡುವೆ ಮೊದಲಿನ ದೈವ ಹಾಗೂ ಭಕ್ತನ ಸಂಬಂಧ ಉಳಿದೆಲ್ಲವೆಂತಲೂ ಜನ ಆಡಿಕೊಳ್ಳತೊಡಗಿದರು. ಸೋಮ ವೃತ್ತಿಯಲ್ಲಿ ಅಡಿಕೆ ಮರ ಹತ್ತುವವನು. ಇದೇ ಘಟನೆಯನ್ನು ನೆಪವಾಗಿರಿಸಿ ಬೇರೆಯವರು ಅಡಿಕೆಮರವನ್ನೇರಲು ಹಿಂಜರಿದರು. ಅದಕ್ಕೆ ಸರಿಯಾಗಿ ಬಾಗಿಲ್ತಾಯರು ದೂರದ ಸೀಮೆಯಿಂದ ಅಡಿಕೆ ಕೊಯ್ಯಿಸಲು ಕರೆತಂದಿದ್ದ ಬ್ಯಾರಿ, ಬಾಗಿಲ್ತಾಯರ ಕಣ್ಣೆದುರೇ ಅಡಿಕೆಮರದಿಂದ ಬಿದ್ದು ಸತ್ತು ಹೋದ. ವರ್ಷ ಕಳೆಯುವ ಹೊತ್ತಿನಲ್ಲಿ ಬಾಗಿಲ್ತಾಯರಿಗೆ ಲಕ್ವ ಹೊಡೆದು ಹಾಸಿಗೆ ಸೇರುವಂತಾಯಿತು. ಡಾಕ್ಟರರು ಅವರ ಅತೀ ರಕ್ತದೊತ್ತಡದಿಂದ ಹೀಗಾದದ್ದು ಎಂದರೂ, ಊರಿನ ಜನರು ಅದು ಕರಿಗಾರುವಿನ ಶಾಪ ಎಂದುಕೊಂಡರು.

* * *

ದೀರ್ಘವಾದ ಕತೆಯನ್ನು ಬಾಗಿಲ್ತಾಯರು ಉತ್ಸಾಹದಿಂದಲೇ ಹೇಳಿ ಮುಗಿಸಿದರು. ಶಶಾಂಕನೂ ಮೌನವಾಗಿ ಕುತೂಹಲದಿಂದ ಕೇಳಿದ. ಕೊನೆಯಲ್ಲಿ ಬಾಗಿಲ್ತಾಯರು ಜಗುಲಿಯಿಂದ ಎದ್ದು ಬೆನ್ನು ನೆಟ್ಟಗೆ ಮಾಡುತ್ತ “ಬಿಂಬವು ಎಲ್ಲಿಗೆ ಹೋಯಿತು ಎಂದು ಇಂದಿಗೂ ಯಾರಿಗೂ ಗೊತ್ತಿಲ್ಲ. ಆದರೆ ಸೋಮನೇ ಮಾಡಿರಬಹುದು ಎಂಬುದು ನನ್ನ ಅಪ್ಪನ ಅಭಿಪ್ರಾಯ. ಅದೂ ಅಲ್ಲದೆ ಅದು ಬಲುಭಾರವಿರುವುದರಿಂದ, ಹಾಗೂ ಸೋಮ ಅದನ್ನು ಬಹುದೂರದವರೆಗೆ ಎತ್ತಿಕೊಂಡು ಹೋಗಲಾಗದಷ್ಟು ವಯಸ್ಸಾಗಿದ್ದರಿಂದ, ಬಹುಶಃ ಅದನ್ನು ಎದುರಿನ ಕೆರೆಗೆ ಹಾಕಿದ್ದಿರಬಹುದು. ಕೆರೆಯು ಬಹಳ ಆಳವಿದ್ದುದರಿಂದ ಯಾರೂ ಅದರಲ್ಲಿಳಿದು ಹುಡುಕಲು ಪ್ರಯತ್ನಿಸಲಿಲ್ಲ. ನೋಡಿ, ಅವನು ಮನಸ್ಸು ಮಾಡಿದ್ದರೆ ದೈವ ಮೈಮೇಲೆ ಬಂದಾಗ ಬಿಂಬವನ್ನು ಇಲ್ಲಿಂದ ಕೊಂಡೊಯ್ಯಬಾರದು ಎಂದು ಅಪ್ಪಣೆ ಕೊಡಿಸಬಹುದಿತ್ತು. ಆದರೆ ಹಾಗೆ ಆತ ಮಾಡದೆ ಸಾಮಾನ್ಯ ವ್ಯಕ್ತಿಯೊಬ್ಬ ಮಾಡುವಂತೆ ಬಿಂಬವನ್ನು ಅಲ್ಲಿಂದ ಮಾಯಮಾಡಿದ. ದೈವದಂತೆ ಅದು ಇದ್ದ ದಿಕ್ಕಿನತ್ತ ಕೈತೋರಿ ಸತ್ಯವನ್ನೇ ಹೇಳಿದ. ಆತ ತಪ್ಪುದಿಕ್ಕಿನತ್ತ ತೋರಿಸದೆ ಉಳಿದ. ಇದನ್ನೆಲ್ಲ ನೋಡುವಾಗ ಸೋಮನ ಮೈಮೇಲೆ ದೈವ ಆವಾಹನೆ ಆದ ಮೇಲೆ ಆತ ಬಹುಶಃ ಸೋಮನಾಗಿ ಉಳಿಯುತ್ತಿರಲಿಲ್ಲ ಅನ್ನಿಸುತ್ತದೆ, ಅಲ್ಲವೆ. ಇರಲಿ, ಹೊತ್ತು ನೆತ್ತಿಯ ಮೇಲೆ ಏರಿದೆ. ಮನೆಗೆ ತಡ ಮಾಡಿ ಹೋದರೆ, ಸುನೀತಾ ಇನ್ನೂ ನಾವು ಬರಲು ಸಮಯವಿದೆ ಎಂದು ಇನ್ನೇನಾದರೂ ಅಡುಗೆ ಮಾಡಿ, ನಮ್ಮ ಮೂಗಿನವರೆಗೆ ತಿನ್ನಿಸುತ್ತಾಳೆ. ಬೇಗ ಮನೆಗೆ ಹೋಗುವ,” ಎಂದು ಹಾಸ್ಯಕ್ಕೆ ತಾವೂ ನಕ್ಕು ಅಳಿಯನನ್ನು ನಗಿಸಿ ಕೊಡೆ ಬಿಡಿಸಿ ನಡೆದರು.

One thought on ““ಸೂರೂರಿನ ದೈವ ಮಾಯವಾದ ಕತೆ” : ತೃತೀಯ ಬಹುಮಾನ ಪಡೆದ ಕತೆ

Leave a Reply

Your email address will not be published. Required fields are marked *