ರಾಜಕಾರಣದಲ್ಲಿ ಪ್ರಾದೇಶಿಕ ಪಕ್ಷಗಳ ಅನಿವಾರ್ಯತೆ ಇದೆಯೇ?


-ಚಿದಂಬರ ಬೈಕಂಪಾಡಿ


ರಾಷ್ಟ್ರೀಯ ಪಕ್ಷಗಳು ಅನಿವಾರ್ಯವೇ? ಪ್ರಾದೇಶಿಕ ಪಕ್ಷಗಳಿಗೆ ನೆಲೆಯಿಲ್ಲವೇ? ಮೈತ್ರಿ ಸರ್ಕಾರಗಳು ಅದೆಷ್ಟು ಸುಭದ್ರ? ಈ ಎಲ್ಲಾ ಪ್ರಶ್ನೆಗಳು ಅತ್ಯಂತ ಮುಖ್ಯವಾದವುಗಳು. ಯಾಕೆಂದರೆ ಚುನಾವಣೆಗಳ ನಂತರ ಹೊರ ಬೀಳುವ ಫಲಿತಾಂಶ ಜನರ ಮೇಲೆ ಉಂಟು ಮಾಡುವ ಪರಿಣಾಮಗಳು ಇಂಥ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಪ್ರೇರಣೆಯಾಗುತ್ತಿವೆ. ರಾಷ್ಟ್ರೀಯತೆ ಮತ್ತು ಪ್ರಾದೇಶಿಕತೆ ಇವುಗಳ ನಡುವೆ ತಿಕ್ಕಾಟವಿದೆ. ಪ್ರತ್ಯೇಕತೆಯಯತ್ತ ಒಲವು ಹೆಚ್ಚಾಗುತ್ತಿದೆ. ಸಮಗ್ರತೆಯನ್ನು ವಿಶಾಲ ಮನೋಭಾವದಿಂದ ಅರ್ಥಮಾಡಿಕೊಳ್ಳಬೇಕು ಎನ್ನುವ ಮಾತು ಬರೀ ಕ್ಲೀಷೆಯೆನಿಸುತ್ತಿದೆ. ರಾಜಕಾರಣಿಗಳು ತಮ್ಮ ತೆವಲಿಗೆ ಜನರನ್ನು ಬಳಸಿಕೊಳ್ಳುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಚುನಾವಣೆಗಳನ್ನು ಹಣ ಆಳುತ್ತಿದೆ. ಜನರೂ ಇದಕ್ಕೆ ಒಗ್ಗಿಕೊಳ್ಳುತ್ತಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಜನರಿಗೆ ಆಯ್ಕೆ ಎನ್ನುವುದು ಕಷ್ಟವಾಗುತ್ತಿದೆ. ಈ ಕಾರಣಕ್ಕಾಗಿಯೇ ಪಕ್ಷ ರಾಜಕಾರಣದಲ್ಲಿ ರಾಷ್ಟ್ರೀಯತೆ ಮತ್ತು ಪ್ರಾದೇಶಿಕತೆ ನಡುವೆ ಸಂಘರ್ಷ.

ಈ ದೇಶದ ರಾಜಕಾರಣವನ್ನು ಅವಲೋಕಿಸಿದರೆ ಅಸ್ಪಷ್ಟತೆ ಗೋಚರಿಸುತ್ತದೆ. ನಿರ್ಧಿಷ್ಟ ಸಂಖ್ಯಾಬಲದ ಕೊರತೆಯಿಂದಾಗಿ ಸರ್ಕಾರಗಳನ್ನು ಅಸ್ಥಿರತೆ ಕಾಡುತ್ತಿದೆ. ಇಡೀ ದೇಶದ ರಾಜಕಾರಣವನ್ನು ಅವಲೋಕಿಸಿದರೆ 10 ರಾಜ್ಯಗಳಲ್ಲಿ ಕಾಂಗ್ರೆಸ್ ಸ್ವಂತ ಬಲದಲ್ಲಿ ಅಧಿಕಾರ ಮಾಡುತ್ತಿದ್ದರೆ, 6 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ನಡೆಸುತ್ತಿದೆ. 5 ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಸ್ವತಂತ್ರವಾಗಿ ಆಡಳಿತ ಮಾಡುತ್ತಿವೆ. ಉಳಿದ ಏಳು ರಾಜ್ಯಗಳಲ್ಲಿ ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳ ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿದೆ. ಅಂದರೆ 12 ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ತಮ್ಮ ಅಸ್ತಿತ್ವವನ್ನು ಖಾತ್ರಿ ಪಡಿಸಿಕೊಂಡಿವೆ. 16 ರಾಜ್ಯಗಳಲ್ಲಿ ರಾಷ್ಟ್ರೀಯ ಪಕ್ಷಗಳ ಬೇರುಗಳು ಇನ್ನೂ ಭದ್ರವಾಗಿವೆ.

ಈ ಲೆಕ್ಕಾಚಾರವನ್ನು ಮತ್ತಷ್ಟು ಅವಲೋಕಿಸಿದರೆ ರಾಷ್ಟ್ರೀಯ ಪಕ್ಷಗಳು ಇನ್ನೆಷ್ಟು ಕಾಲ ಏಕಾಂಗಿಯಾಗಿ ಅಧಿಕಾರ ನಡೆಸುವ ಶಕ್ತಿಯನ್ನು ಉಳಿಸಿಕೊಳ್ಳಲಿವೆ ಎನ್ನುವುದು ಒಂದು ಪ್ರಶ್ನೆಯಾದರೆ, ಪ್ರಾದೇಶಿಕ ಪಕ್ಷಗಳು ತಮ್ಮ ಪ್ರಾಬಲ್ಯ ಮೆರೆಯಲು ಕಾರಣಗಳೇನು? ಎನ್ನುವುದು ಮತ್ತೊಂದು ಪ್ರಶ್ನೆ. ಪಶ್ಚಿಮ ಬಂಗಾಳದಲ್ಲಿ ಹಲವು ದಶಕಗಳಿಂದ ನಿರಂತರವಾಗಿ ಅಧಿಕಾರದ ಚುಕ್ಕಾಣಿ ಹಿಡಿದುಕೊಂಡೇ ಇದ್ದ ಎಡಪಕ್ಷಗಳನ್ನು ತೃಣಮೂಲ ಕಾಂಗ್ರೆಸ್ ಧೂಳೀಪಟ ಮಾಡಿತು. ಇದೊಂದು ದಾಖಲೆ. ಆದರೆ ಈ ದಾಖಲೆ ಬರೆದವರು ಮತ್ತು ಹಿಂದಿನ ದಾಖಲೆ ಅಳಿಸಿ ಹಾಕಿದವರು ಆ ರಾಜ್ಯದ ಜನರು. ಅದೇ ಜನ ಎಡಪಕ್ಷವನ್ನು ಅಧಿಕಾರಕ್ಕೆ ತರುತ್ತಿದ್ದರು, ಈಗ ಅದೇ ಜನ ತೃಣಮೂಲ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೇರಿಸಿದರು. ಇಲ್ಲಿ ಜನರ ಆಶೋತ್ತರಗಳು ಮುಖ್ಯವಾದವು. ರಾಷ್ಟ್ರೀಯ ಪಕ್ಷವಾಗಿದ್ದ ಎಡಪಕ್ಷ ಜನರ ಭಾವನೆಗಳನ್ನು ಘಾಸಿಗೊಳಿಸಿತು. ಜನರು ಅದನ್ನು ಬಹಳ ಕಾಲದ ನಂತರ ಅರ್ಥಮಾಡಿಕೊಂಡು ಅಧಿಕಾರದಿಂದ ಕಿತ್ತೊಗೆದರು.

ಹಾಗೆ ನೋಡಿದರೆ ಭಾರತದಲ್ಲಿ ಪೊಲಿಟಿಕಲ್ ಅವೇರ್ನೆಸ್ ಕಡಿಮೆಯೇನಲ್ಲ. ರಾಜಕೀಯ ತಿಳುವಳಿಕೆ ಕಡಿಮೆ ಎನ್ನುವುದನ್ನು ಒಪ್ಪಿಕೊಳ್ಳಬೇಕಾದರೆ ಈ ದೇಶದ ರಾಜ್ಯಗಳನ್ನು ರಾಷ್ಟ್ರೀಯ ಪಕ್ಷಗಳೇ ಆಳಬೇಕಿತ್ತು. 1976ಕ್ಕೂ ಮೊದಲು ದೇಶದಲ್ಲಿ ನೆಹರೂ ಕುಟುಂಬ ಅದರಲ್ಲೂ ಇಂದಿರಾ ಗಾಂಧಿ ಅವರನ್ನು ಬಿಟ್ಟರೆ ಬೇರೆ ರಾಜಕಾರಣಿಗಳಿದ್ದಾರೆ, ರಾಜಕೀಯ ಪಕ್ಷಗಳೂ ಇವೆ ಎನ್ನುವುದು ಗೊತ್ತೇ ಇರಲಿಲ್ಲ. ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಹೇರದೇ ಇರುತ್ತಿದ್ದರೆ ಪ್ರಾದೇಶಿಕ ಪಕ್ಷಗಳು ಜನ್ಮ ತಳೆಯುತ್ತಿರಲಿಲ್ಲ ಮತ್ತು ಕಾಂಗ್ರೆಸ್‌ಗೆ ಪರ್ಯಾಯ ಶಕ್ತಿಗಳು ಉದಿಸುತ್ತಿರಲಿಲ್ಲ. ಕಾಂಗ್ರೆಸ್ ವಿರುದ್ಧ ಧ್ವನಿಯೆತ್ತುತ್ತಿದ್ದವರು ಇಂದಿರಾ ಅವರಿಂದಾಗಿ ಜೈಲು ಸೇರದೇ ಇರುತ್ತಿದ್ದರೆ ಅವರಿಗೆ ಬಲ ಬರುತ್ತಿರಲಿಲ್ಲ ಮತ್ತು ಹೊಸ ರಾಜಕೀಯ ಚಿಂತನೆಗಳು ಜೀವಪಡೆಯುತ್ತಿರಲಿಲ್ಲ. ಈ ಮಟ್ಟಿಗೆ ಕಾಂಗ್ರೆಸ್ಯೇತರ ಪಕ್ಷಗಳು, ಅವುಗಳ ಮುಖಂಡರು ಇಂದಿರಾ ಗಾಂಧಿಗೆ ಚಿರಋಣಿಯಾಗಿರಬೇಕು.

ಎಂಭತ್ತರ ದಶಕದಲ್ಲಿ ಪಂಜಾಬ್, ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಅಸ್ಸಾಂ, ಬಿಹಾರ, ಒರಿಸ್ಸಾ ರಾಜ್ಯಗಳಲ್ಲಿ ಏಕಕಾಲದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ವಿರುದ್ಧವಾದ ಅಲೆಗಳು ಎದ್ದವು. ಅಲ್ಲಿ ಪ್ರಾದೇಶಿಕ ಪಕ್ಷಗಳು ಜನ್ಮ ತಳೆದು ಚುನಾವಣೆಯ ಅಖಾಡಕ್ಕಿಳಿದವು. ಕರ್ನಾಟಕದಲ್ಲಿ ಡಿ.ದೇವರಾಜ ಅರಸು, ರಾಮಕೃಷ್ಣ ಹೆಗಡೆ, ಎಚ್.ಡಿ.ದೇವೇಗೌಡ, ಎಸ್.ಬಂಗಾರಪ್ಪ ಮುಂತಾದವರು ಕಾಂಗ್ರೆಸ್ ವಿರುದ್ಧ ಸೆಟೆದುನಿಂತರು. ಆಂಧ್ರದಲ್ಲಿ ಎನ್.ಟಿ.ಆರ್, ತಮಿಳುನಾಡಲ್ಲಿ ಈ ಹೊತ್ತಿಗೆ ಎಂ.ಜಿ.ಆರ್, ಕರುಣಾನಿಧಿ ಬಹಳ ಬೆಳೆದಿದ್ದರು. ಬಿಹಾರದಲ್ಲಿ ಲಾಲೂಪ್ರಸಾದ್ ಯಾದವ್, ಅಸ್ಸಾಂನಲ್ಲಿ ಪ್ರಫುಲ್ಲ ಕುಮಾರ್ ಮೊಹಂತ್ ಹೀಗೆ ಕಾಂಗ್ರೆಸ್ ಪಕ್ಷದ ಹಿಡಿತವನ್ನು ಕುಗ್ಗಿಸಬಲ್ಲ ಶಕ್ತಿಗಳು ಪುಟಿದವು.

ಹರ್ಯಾಣದಲ್ಲಿ ದೇವಿಲಾಲ್ ಕಾಂಗ್ರೆಸ್ ವಿರುದ್ಧ ಸಿಡಿದು ಅಧಿಕಾರ ನಡೆಸಿದರು. ಉತ್ತರ ಪ್ರದೇಶದಲ್ಲಿ ಚರಣ್ ಸಿಂಗ್ 1967ರಲ್ಲಿ ಭಾರತೀಯ ಲೋಕದಳ ಮೂಲಕ ಕಾಂಗ್ರೆಸ್ ಹಿಮ್ಮೆಟ್ಟಿಸಿದ್ದರು. ಒರಿಸ್ಸಾದಲ್ಲಿ 1967ರಲ್ಲೇ ಸ್ವತಂತ್ರ ಪಾರ್ಟಿ ಮತ್ತು ಒರಿಸ್ಸಾ ಜನಕಾಂಗ್ರೆಸ್ ಸರ್ಕಾರವನ್ನು ರಾಜೇಂದ್ರ ನಾರಾಯಣ್ ಸಿಂಗ್ ಮುನ್ನಡೆಸಿದ್ದರು.

ಹೀಗೆ ಉತ್ತರದಲ್ಲಿ 70ರ ದಶಕದಲ್ಲಿ ಕಾಂಗ್ರೆಸ್ಗೆ ವಿರುದ್ಧವಾಗಿ ಪ್ರಾದೇಶಿಕ ಪಕ್ಷಗಳು ಜನ್ಮ ತಳೆದು ಅಧಿಕಾರ ಸೂತ್ರ ಹಿಡಿದ ಇತಿಹಾಸವಿದ್ದರೆ ದಕ್ಷಿಣದಲ್ಲಿ 80ರ ದಶಕದಲ್ಲಿ ಪ್ರಾದೇಶಿಕ ಪಕ್ಷಗಳು ಅಧಿಕಾರ ನಡೆಸಲು ಮುಂಚೂಣಿಗೆ ಬಂದವು. ಈ ಎಲ್ಲಾ ರಾಜ್ಯಗಳಲ್ಲಿ ಅಂದು ಕಾಂಗ್ರೆಸ್ ವಿರೋಧಿ ಅಲೆಗಳು ಹುಟ್ಟಿಕೊಳ್ಳಲು ನೆಹರೂ ಕುಟುಂಬ ರಾಜಕಾರಣ ಮತ್ತು ಇಂದಿರಾ ಅವರ ಸರ್ವಾಧಿಕಾರಿ ಧೋರಣೆ ಎನ್ನುವುದನ್ನು ಅರ್ಥಮಾಡಿಕೊಳ್ಳಬಹುದು.

ಹಾಗಾದರೆ ಅಂದು ದೊಡ್ಡ ಪ್ರಮಾಣದಲ್ಲಿ ಕಾಂಗ್ರೆಸ್‌ಗೆ ವಿರುದ್ಧವಾಗಿ ಜನ ಪ್ರಾದೇಶಿಕ ಪಕ್ಷಗಳನ್ನು ಬೆಂಬಲಿಸಿದ್ದರೆ ಈಗ ಯಾಕೆ ಹಿನ್ನಡೆಯಾಗುತ್ತಿದೆ ಅಥವಾ ಕಳೆಗುಂದುತ್ತಿವೆ? ಎನ್ನುವ ಪ್ರಶ್ನೆ ಸಹಜವಾಗಿ ಮೂಡಬಹುದು. ಅಧಿಕಾರದ ಲಾಲಸೆ ಮತ್ತು ಸ್ವಾರ್ಥ ಪ್ರಾದೇಶಿಕ ಪಕ್ಷಗಳನ್ನು ಜನ ನಂಬದಿರಲು ಕಾರಣವೆನ್ನಬಹುದು. ಯಾವೆಲ್ಲಾ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಅಂದು ತಲೆಯೆತ್ತಿ ನಿಂತವೋ ಅಲ್ಲೆಲ್ಲಾ ಪಕ್ಷಗಳ ನಾಯಕರೊಳಗೆ ಕಚ್ಚಾಟ ನಡೆದಿವೆ. ತಮ್ಮೊಳಗಿನ ಅಹಂಗಾಗಿ ಪಕ್ಷಗಳನ್ನು ಬಲಿಗೊಟ್ಟಿದ್ದಾರೆ. ಕರ್ನಾಟಕದಲ್ಲಿ ಜನತಾ ಪಕ್ಷ, ಜನತಾದಳ, ಸಂಯುಕ್ತ ಜನತಾ ದಳ ಹೀಗೆ ಅದೆಷ್ಟು ಹೋಳುಗಳಾದವು? ರಾಮಕೃಷ್ಣ ಹೆಗಡೆ, ದೇವೇಗೌಡ, ಎಸ್.ಬಂಗಾರಪ್ಪ ತುಳಿದ ಹಾದಿಯನ್ನು ಅವಲೋಕಿಸಿ. ಆಂಧ್ರದಲ್ಲಿ ಎನ್.ಟಿ.ಆರ್, ಚಂದ್ರಬಾಬು ನಾಯ್ಡು, ಹರ್ಯಾಣದಲ್ಲಿ ದೇವಿಲಾಲ್, ಉತ್ತರಪ್ರದೇಶದಲ್ಲಿ ಮುಲಾಯಂ ಸಿಂಗ್ ಯಾದವ್, ಅಸ್ಸಾಂನಲ್ಲಿ ಪ್ರಫುಲ್ಲ್ ಕುಮಾರ್ ಮೊಹಂತ, ಬಿಹಾರದಲ್ಲಿ ಲಾಲೂಪ್ರಸಾದ್ ಯಾದವ್ ಈ ನಾಯಕರನ್ನು ನಡೆಗಳನ್ನು ಅವಲೋಕಿಸಿದರೆ ಯಾಕೆ ಜನರು ಪ್ರಾದೇಶಿಕ ಪಕ್ಷಗಳಿಂದ ವಿಮುಖರಾದರು ಎನ್ನುವುದು ಅರ್ಥವಾಗುತ್ತದೆ.

ಪ್ರಾದೇಶಿಕ ಪಕ್ಷಗಳಿಗಿರುವಷ್ಟು ಅವಕಾಶಗಳು ಈಗ ರಾಷ್ಟ್ರೀಯ ಪಕ್ಷಗಳಿಗಿಲ್ಲ. ಜನರು, ಈಗ ತಮ್ಮ ಸುತ್ತಲಿನ ಪರಿಸರ, ನೆಲ, ಜಲ, ಭಾಷೆಯನ್ನು ಹೆಚ್ಚು ಭಾವನಾತ್ಮಕವಾಗಿ ಕಾಣುತ್ತಾರೆ. ತೆಲಂಗಾಣ ಹೋರಾಟವನ್ನು ಕುತೂಹಲಕ್ಕಾಗಿ ಅವಲೋಕಿಸಿದರೆ ಈ ಸತ್ಯದ ದರ್ಶನವಾಗುತ್ತದೆ. ಪ್ರಾದೇಶಿಕವಾದ ಜನರ ಆಶೋತ್ತರಗಳನ್ನು ಈಡೇರಿಸುವುದು ರಾಷ್ಟ್ರೀಯ ಪಕ್ಷಗಳ ಮುಖ್ಯ ಅಜೆಂಡವಾಗಲು ಸಾಧ್ಯವಿಲ್ಲ. ಸಮಗ್ರ ರಾಷ್ಟ್ರವನ್ನು ಕಲ್ಪನೆಯಲ್ಲಿಟ್ಟುಕೊಂಡು ರಾಷ್ಟ್ರೀಯ ಪಕ್ಷಗಳು ರೂಪಿಸುವ ನೀತಿಗಳು ಪ್ರಾದೇಶಿಕವಾದ ಸಿಕ್ಕುಗಳನ್ನು ಬಿಡಿಸಲಾರವು.

ಈ ಎಲ್ಲಾ ಕಾರಣಗಳಿಂದಾಗಿ ಪ್ರಾದೇಶಿಕ ಪಕ್ಷಗಳಿಗೆ ಜನ ಮಾರುಹೋಗುವ ಅವಕಾಶಗಳು ನಿಚ್ಚಳವಾಗಿವೆ. ಜನರ ವಿಶ್ವಾಸವನ್ನು ಪ್ರಾದೇಶಿಕ ಪಕ್ಷಗಳ ನಾಯಕರು ಮೊದಲು ಗಳಿಸಬೇಕು. ಆತ್ಮವಂಚನೆ ರಾಜಕಾರಣದಿಂದ ಬೇಸತ್ತಿರುವುದರಿಂದಲೇ ಮತಗಟ್ಟೆಯಿಂದಲೇ ಜನ ದೂರ ಉಳಿಯುತ್ತಿದ್ದಾರೆ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು. ಮತಗಟ್ಟೆಗೆ ಜನ ಸಾಗರೋಪಾದಿಯಲ್ಲಿ ಹರಿದು ಬರುವಂತೆ ಮಾಡಬಲ್ಲ ಸಾಮರ್ಥ್ಯವಿರುವುದು ಪ್ರಾದೇಶಿಕ ಪಕ್ಷಗಳಿಗೆ ಮಾತ್ರ.

2 thoughts on “ರಾಜಕಾರಣದಲ್ಲಿ ಪ್ರಾದೇಶಿಕ ಪಕ್ಷಗಳ ಅನಿವಾರ್ಯತೆ ಇದೆಯೇ?

  1. cfk

    ಇಂದಿರಾ ಗಾಂಧೀಯವರ ತುರ್ತು ಪರಿಸ್ಥಿತಿಯ ಘೋಷಣೆ ಹೇಗೆ ಪ್ರಾದೇಶಿಕ ಪಕ್ಷಗಳ ಹುಟ್ಟುವಿಕೆಗೆ ಕಾರಣವಾಗಿ ದೇಶದ ರಾಜಕೀಯವನ್ನು ಬದಲಾಯಿಸಿತೋ ಹಾಗೆಯೇ ಪ್ರಸ್ತುತ ರಾಜಕಾರಣಿಗಳ ವ್ಯಾಪಕ ಭ್ರಷ್ಟಾಚಾರ ಪ್ರಾದೇಶಿಕ ರಾಜಕಾರಣದ ಬಲವರ್ಧನೆಗೆ ಮತ್ತು ನವ ರಾಜಕಾರಣಕ್ಕೆ ನಾಂದಿ ಹಾಡುತ್ತಿದೆ.

    Reply
  2. a

    ಕೇಂದ್ರದಲ್ಲಿ ಪ್ರಾದೇಶಿಕ ಪಕ್ಷಗಳ ಬೆಂಬಲವಿಲ್ಲದೆ ಸರ್ಕಾರ ರಚನೆ ಸಾಧ್ಯವಾಗದಿರುವ ಇತ್ತೀಚಿನ ವರ್ಷಗಳಲ್ಲಿ ಪ್ರಾದೇಶಿಕ ಪಕ್ಷಗಳು ಚೌಕಾಸಿ ಮಾಡಿ ಹೆಚ್ಚಿನ ಅನುದಾನ ಪಡೆದುಕೊಳ್ಳಲು ಸಾಧ್ಯವಾಗುತ್ತಿರುವುದರಿಂದ ಹಾಗೂ ತಮ್ಮ ರಾಜ್ಯದ ಹಿತಾಸಕ್ತಿಗಳನ್ನು ಪೂರೈಸಿಕೊಳ್ಳಲು ಒತ್ತಡ ತಂತ್ರ ಅನುಸರಿಸುವುದರಿಂದ ರಾಷ್ಟ್ರೀಯ ಪಕ್ಷಗಳ ಆಡಳಿತ ಇರುವ ರಾಜ್ಯಗಳು ಕೂಡಾ ಪ್ರಾದೇಶಿಕ ಪಕ್ಷಗಳನ್ನು ಬಲಪಡಿಸಬೇಕಾದ ಅನಿವಾರ್ಯತೆ ಉಂಟಾಗುತ್ತಿದೆ. ಬೇರೆ ರಾಜ್ಯಗಳು ಪ್ರಾದೇಶಿಕ ಪಕ್ಷಗಳನ್ನು ರಚಿಸಿಕೊಂಡು ಹೆಚ್ಚಿನ ಅನುಕೂಲ ಪಡೆಯುತ್ತಿರುವಾಗ ಪ್ರಾದೇಶಿಕ ಪಕ್ಷಗಳನ್ನು ರಚಿಸದ ಅಥವಾ ಅವುಗಳನ್ನು ಬಲಪಡಿಸದ ರಾಜ್ಯಗಳು ನಷ್ಟ ಅನುಭವಿಸಬೇಕಾದ ಅನಿವಾರ್ಯ ಸ್ಥಿತಿ ಇಂದು ನಿರ್ಮಾಣವಾಗುತ್ತಿದೆ. ಹೀಗಾಗಿ ಅನಿವಾರ್ಯವಾಗಿ ಮುಂಬರುವ ದಿನಗಳಲ್ಲಿ ಎಲ್ಲ ರಾಜ್ಯಗಳಲ್ಲೂ ಪ್ರಾದೇಶಿಕ ಪಕ್ಷಗಳೇ ಮೇಲುಗೈ ಪಡೆಯುವ ಸಂಭವ ಅಧಿಕವಾಗುತ್ತಿದೆ. ಪ್ರಾದೇಶಿಕ ಪಕ್ಷಗಳಲ್ಲಿ ಕೇಂದ್ರದ ಹೈಕಮಾಂಡಿಗೆ ಹೆದರಿ ಬಾಲ ಮುದುರಿ ಕುಳಿತುಕೊಳ್ಳಬೇಕಾದ ಅನಿವಾರ್ಯತೆ ಇಲ್ಲ ಮತ್ತು ತಮ್ಮ ರಾಜ್ಯದ ಹಿತಾಸಕ್ತಿಗಳನ್ನು ಬಲವಾಗಿ ಮಂಡಿಸಲು ಹೆಚ್ಚಿನ ಬಲ ಬರುತ್ತದೆ. ಪ್ರಾದೇಶಿಕ ಪಕ್ಷಗಳು ಒಂದು ವ್ಯಕ್ತಿ ಅಥವಾ ಒಂದು ಕುಟುಂಬದ ಖಾಸಗಿ ಉದ್ದಿಮೆಯಂತೆ ನಡೆಯುವುದರಿಂದ ಭಿನ್ನಮತ, ಭಿನ್ನಾಭಿಪ್ರಾಯಗಳಿಗೆ ಅವಕಾಶ ಇಲ್ಲದಿರುವುದರಿಂದ ಪುನಃ ಪುನಃ ಒಡೆಯುವ ಸಂಭವ ಕಡಿಮೆ. ಒಟ್ಟಿನಲ್ಲಿ ರಾಷ್ಟ್ರೀಯ ಹಿತಕ್ಕೆ ಪ್ರಾದೇಶಿಕ ಪಕ್ಷಗಳು ಪೂರಕ ಅಲ್ಲದಿದ್ದರೂ ಅವುಗಳ ಬೆಳವಣಿಗೆ ತಡೆಯಲು ಅಸಾಧ್ಯವಾದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ನಿಷ್ಪಕ್ಷಪಾತ ನಿಲುವಿನ, ಭ್ರಷ್ಟಾಚಾರಮುಕ್ತ, ತಾರತಮ್ಯ ಧೋರಣೆ ಇಲ್ಲದ ಧೀಮಂತ ನಾಯಕರನ್ನು ಹೊಂದಿರುವ ರಾಷ್ಟ್ರೀಯ ಪಕ್ಷಗಳು ಇಲ್ಲದೆ ಇರುವುದೇ ಇದಕ್ಕೆ ಕಾರಣ.

    Reply

Leave a Reply to a Cancel reply

Your email address will not be published. Required fields are marked *