ಕಡಿವಾಣ ಹಾಕದೆ ಕುದುರೆಗೆ ಓಟ ಕಲಿಸಿದರೆ?


-ಚಿದಂಬರ ಬೈಕಂಪಾಡಿ


ಬಿಜೆಪಿಗೆ ಇಂಥ ಸ್ಥಿತಿ ಬರುತ್ತದೆಂದು ಬಹುಷ: ಯಾರೂ ಊಹಿಸಿರಲಿಲ್ಲ. ಒಂದು ರಾಷ್ಟ್ರೀಯ ಪಕ್ಷವಾಗಿ ಒಂದು ರಾಜ್ಯ ಘಟಕವನ್ನು ತನ್ನ ಅಂಕಿತದಲ್ಲಿಟ್ಟುಕೊಳ್ಳಲಾಗದಷ್ಟು ಅಸಹಾಯಕ ಸ್ಥಿತಿಯಲ್ಲಿದೆ ಹೈಕಮಾಂಡ್ ಎನ್ನುವುದು ಸಾಮಾನ್ಯ ಸಂಗತಿಯಲ್ಲ. ಸಂಘಪರಿವಾರದ ಶಿಸ್ತು, ಬದ್ಧತೆ, ಸಾಮಾಜಿಕ ಕಾಳಜಿಯನ್ನು ಬಿಜೆಪಿಯಿಂದ ಜನರು ನಿರೀಕ್ಷೆ ಮಾಡಿದ್ದರೆ ಅದು ಅಪರಾಧವೆನಿಸುವುದಿಲ್ಲ. ಯಾಕೆಂದರೆ ಕಾಂಗ್ರೆಸ್ ಪಕ್ಷದ ಸರ್ವಾಧಿಕಾರಿ ಧೋರಣೆ, ಕುಟುಂಬ ರಾಜಕಾರಣ ಅಥವಾ ಅರಸೊತ್ತಿಗೆಯನ್ನೇ ಒಪ್ಪಿಕೊಂಡು ಸದಾಕಾಲ ಹೈಕಮಾಂಡ್ ಮುಂದೆ ಮಂಡಿಯೂರಿ ಕುಳಿತುಕೊಳ್ಳುವುದು ಎಲ್ಲರಿಗೂ ಸಾಧ್ಯವಿಲ್ಲ. ಪ್ರಾದೇಶಿಕ ಪಕ್ಷವಾಗಿ ಜೆಡಿಎಸ್ ಗೌಡರ ಕುಟುಂಬದ ಹಿಡಿತದಲ್ಲೇ ಇರುವುದರಿಂದ, ಪ್ರಜಾಪ್ರಭುತ್ವ ಎನ್ನುವುದು ಗೌಡರ ಇಶಾರೆಯಲ್ಲೇ ಇರುವುದರಿಂದ ಅದೂ ಕೂಡಾ ಸುಲಭವಾಗಿ ಜೀರ್ಣವಾಗುವುದಿಲ್ಲ. ಇಂಥ ಕಾಲಘಟ್ಟದಲ್ಲಿ ಹಿಂದುತ್ವದ ಆಕರ್ಷಣೆಗೆ ಒಳಗಾದ ಯುವಕರು ಬಿಜೆಪಿಯನ್ನು ಆವಾಹಿಸಿಕೊಂಡದ್ದು ವಾಸ್ತವ.

ರಾಮಜನ್ಮಭೂಮಿ, ದತ್ತಪೀಠ, ಈದ್ಗಾ ಮೈದಾನ; ಈ ಮೂರು ವಿಚಾರಗಳು ಈ ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರದ ದಡ ಮುಟ್ಟಿಸಲು ಕಾರಣವಾಯಿತು ಎನ್ನುವುದನ್ನು ಇತಿಹಾಸ ಅವಲೋಕಿಸಿ ಅರಿತುಕೊಳ್ಳಬಹುದು. ಕಳೆದ ಒಂದು ದಶಕದಲ್ಲಿ ಬಿಜೆಪಿ ಒಂದು ಪ್ರಬಲ ವಿರೋಧಪಕ್ಷವಾಗಿ ಕಾಣಿಸಿಕೊಂಡಿದ್ದರೆ ಅದಕ್ಕೆ ಶಿಕಾರಿಪುರದ ಸಿಡಿಲಮರಿ ಬಿ.ಎಸ್.ಯಡಿಯೂರಪ್ಪ ಅವರ ಕಾಣ್ಕೆಯೂ ಕಾರಣ. ನಿರಂತರವಾಗಿ ಬಿಜೆಪಿಯನ್ನು ಚಲಾವಣೆಯಲ್ಲಿಡುವ ಮೂಲಕ ಗಟ್ಟಿಯಾದ ನಾಯಕತ್ವ ಕೊಟ್ಟರು ಎನ್ನುವುದರಲ್ಲಿ ಅನುಮಾನಗಳಿಲ್ಲ.

ಎ.ಕೆ.ಸುಬ್ಬಯ್ಯ, ಬಿ.ಬಿ.ಶಿವಪ್ಪ, ಕರಂಬಳ್ಳಿ ಸಂಜೀವ ಶೆಟ್ಟಿ, ಡಾ.ದತ್ತಾತ್ರಿ, ಕೆ.ರಾಮ್ ಭಟ್, ಡಾ.ವಿ.ಎಸ್.ಆಚಾರ್ಯ, ಡಿ.ಎಚ್.ಶಂಕರಮೂರ್ತಿ, ಬಿ.ಎಸ್.ಯಡಿಯೂರಪ್ಪ, ಹೀಗೆ ಕರ್ನಾಟಕದ ಬಿಜೆಪಿಯನ್ನು ಬೆಳೆಸಿದವರ ಹಿರಿತನದ ಪಟ್ಟಿ ಬೆಳೆಯುತ್ತದೆ. ಎ.ಕೆ.ಸುಬ್ಬಯ್ಯ ಅವರ ಸಿಡಿಲಬ್ಬರದ ಭಾಷಣ, ಅವರ ಭಾಷಣಕ್ಕೆ ವಸ್ತುವಾಗುತ್ತಿದ್ದ ಇಂದಿರಾ ಗಾಂಧಿ ಅವರ ರಾಜಕೀಯ ನಡೆಗಳು ಜನರ ಮನಸ್ಸಿನಲ್ಲಿ ಬಿಜೆಪಿಯತ್ತ ಹೊರಳಿನೋಡುವುದಕ್ಕೆ ಅವಕಾಶವಾಯಿತು. ಬದಲಾದ ರಾಜಕೀಯ ಸ್ಥಿತ್ಯಂತರಗಳಲ್ಲಿ ಕರಂಬಳ್ಳಿ ಸಂಜೀವ ಶೆಟ್ಟಿ, ಸುಬ್ಬಯ್ಯ, ಶಿವಪ್ಪ, ಕೆ.ರಾಮ್ ಭಟ್ ಯುಗಮುಗಿದು ಯಡಿಯೂರಪ್ಪ ಭರವಸೆಯ ನಾಯಕರಾಗಿ ಬೆಳೆದರು, ಹೈಕಮಾಂಡ್ ಬೆಳೆಸಿತು ಕೂಡಾ.

ಅನಂತ್ ಕುಮಾರ್ ಮತ್ತು ವಿ.ಧನಂಜಯ ಕುಮಾರ್ ದೆಹಲಿ ವರಿಷ್ಠರೊಂದಿಗೆ ಅದರಲ್ಲೂ ಎಲ್.ಕೆ.ಅಡ್ವಾಣಿ ಅವರೊಂದಿಗೆ ನೇರಸಂಪರ್ಕ ಹೊಂದಿ ಕರ್ನಾಟಕದ ಆಗುಹೋಗುಗಳಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದವರು. ಆದರೆ ಪಕ್ಷ ಸಂಘಟನೆಯಲ್ಲಿ ಯಡಿಯೂರಪ್ಪ ಅವರು ಉಳಿದವರೆಲ್ಲರಿಗಿಂತಲೂ ಮುಂಚೂಣಿಯಲ್ಲಿದ್ದರು ಎನ್ನುವುದು ಅತಿಶಯೋಕ್ತಿಯಲ್ಲ. ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕು ಎನ್ನುವ ತುಡಿತ ಹೈಕಮಾಂಡ್‌ಗೆ ಇತ್ತಾದರೂ ಸ್ವಂತ ಬಲದ ಮೇಲೆ ಬರಬೇಕೆನ್ನುವ ಅತಿಯಾದ ವ್ಯಾಮೋಹವಿತ್ತು.

ಡಿ.ವಿ.ಸದಾನಂದ ಗೌಡ ಮತ್ತು ಬಿ.ಎಸ್.ಯಡಿಯೂರಪ್ಪ ಉರುಳಿಸಿದ ದಾಳಕ್ಕೆ ಜೆಡಿಎಸ್‌ನ ಅಂದಿನ ಭರವಸೆಯ ನಾಯಕ ಎಚ್.ಡಿ.ಕುಮಾರಸ್ವಾಮಿ ಕೈಜೋಡಿಸಿ 20-20 ಅಧಿಕಾರಕ್ಕೆ ಮುಂದಾದರು. ಇಂಥ ಅನಿರೀಕ್ಷಿತ ಬೆಳವಣಿಗೆಯಿಂದ ರಾಜಕೀಯ ಪಕ್ಷಗಳು ಕಂಗೆಟ್ಟದ್ದೂ ನಿಜ. ಯಾಕೆಂದರೆ ಬಿಜೆಪಿಯನ್ನು ಎಂದೂ ಒಪ್ಪಿಕೊಳ್ಳದಿದ್ದ ದೇವೇಗೌಡರ ಮನಸ್ಥಿತಿಯನ್ನು ಅರಿತಿದ್ದರೂ ಅವರ ಪುತ್ರ ಕುಮಾರಸ್ವಾಮಿ ಬಿಜೆಪಿಯೊಂದಿಗೆ ಅಧಿಕಾರ ಹಂಚಿಕೊಂಡದ್ದು ರಾಜಕೀಯದ ಅಚ್ಚರಿಯೇ ಸರಿ. ಮೂರುದಶಕಗಳ ನಿರಂತರ ಹೋರಾಟ ಮಾಡಿಕೊಂಡೇ ಬಂದ ಯಡಿಯೂರಪ್ಪ ಉಪಮುಖ್ಯಮಂತ್ರಿಯಾಗಿ ಟ್ರೆಜರಿಬೆಂಚ್‌ನಲ್ಲಿ ಕಾಣಿಸಿಕೊಂಡಾಗ ಬಿಜೆಪಿ ಹೈಕಮಾಂಡ್ ಕೂಡಾ ಅವರ ರಾಜಕೀಯ ಚತುರತೆಗೆ ಭೇಷ್ ಎಂದಿತ್ತು. ಆ ಕಾಲಕ್ಕೆ ಪಕ್ಷದ ರಾಜ್ಯ ಅಧ್ಯಕ್ಷರಾಗಿದ್ದ ಡಿ.ವಿ.ಸದಾನಂದ ಗೌಡರು ನಡೆದುಕೊಂಡ ರೀತಿ ಕೂಡಾ ಮುಖ್ಯವೆನಿಸುತ್ತದೆ.

ಹೀಗೆ ಅಧಿಕಾರದ ದಡಸೇರಿದ ಬಿಜೆಪಿ, ಅದಕ್ಕೆ ನಾಯಕತ್ವ ಕೊಟ್ಟ ಯಡಿಯೂರಪ್ಪ ಮತ್ತು ಸದಾನಂದ ಗೌಡರು ಅದೇ ಅಧಿಕಾರದ ಸುಳಿಗೆ ಸಿಲುಕಿ ಒಬ್ಬರನ್ನೊಬ್ಬರು ದ್ವೇಷಿಸುವಂತಾಗಿರುವುದೂ ಕೂಡಾ ರಾಜಕೀಯದ ವಿಪರ್ಯಾಸ. ಕುಮಾರಸ್ವಾಮಿ ಮಾತಿನಂತೆ ಬಿಜೆಪಿಗೆ ಅಧಿಕಾರ ಹಸ್ತಾಂತರಿಸಿದ್ದರೆ ರಾಜಕೀಯದ ಗತಿಯೇ ಬದಲಾಗುತ್ತಿತ್ತು. ಬಿಜೆಪಿಯನ್ನು ಮಣಿಸಲು ಕುಮಾರಸ್ವಾಮಿ ಉರುಳಿಸಿದ ದಾಳಗಳು ಯಡಿಯೂರಪ್ಪ ಅವರಿಗೆ ವರವಾದವು. ರೆಡ್ಡಿ ಬ್ರದಸರ್ ನೆರವಿನಲ್ಲಿ ನಡೆದ `ಆಪರೇಷನ್ ಕಮಲ’ ರಾಜಕೀಯವನ್ನು ಅಲ್ಲೋಲಕಲ್ಲೋಲಗೊಳಿಸಿತು.

ಇದೆಲ್ಲವೂ ಬಿಜೆಪಿಯ ಇತಿಹಾಸವಾದರೆ ವರ್ತಮಾನ ಮಾತ್ರ ದುರಂತಮಯವಾಗಿರುವುದು ಯಡಿಯೂರಪ್ಪ ಅವರ ಪ್ರಾರಾಬ್ಧವೋ, ಹೈಕಮಾಂಡ್‌ನ ದುರ್ದೈವವೋ, ಎನ್ನುವಂತಾಗಿದೆ. ಯಡಿಯೂರಪ್ಪ ಅವರೇ ಹೇಳಿಕೊಂಡಿರುವಂತೆ ಅವರು ಬಿಜೆಪಿಯಿಂದ ಬಹಳ ದೂರ ಸಾಗಿದ್ದಾರೆ. ಹಿಂದಕ್ಕೆ ಬರಲಾಗದಷ್ಟು ಹೆಜ್ಜೆಗಳನ್ನು ಮುಂದಿಟ್ಟಿದ್ದಾರೆ. ಈಗ ಬಿಜೆಪಿ ಹೈಕಮಾಂಡ್ ಮೈಕೊಡವಿಕೊಳ್ಳುತ್ತಿರುವುದು ಅದರ ನಾಯಕರ ಮುತ್ಸದ್ದಿತನದ ಕೊರತೆ ಎನ್ನಲೇ ಬೇಕಾಗಿದೆ. ಕಡಿವಾಣ ಹಾಕದೆ ಕುದುರೆಗೆ ಓಟ ಕಲಿಸಿದರೆ ಅದು ಓಡುತ್ತಲೇ ಇರುತ್ತದೆ, ಅದಕ್ಕೆ ಆಯಾಸವಾದಾಗ ಮಾತ್ರ ತಾನಾಗಿಯೇ ನಿಲ್ಲುತ್ತದೆ. ಇದೇ ಸ್ಥಿತಿ ಯಡಿಯೂರಪ್ಪ ಅವರದೂ ಕೂಡಾ. ಹೈಕಮಾಂಡ್ ಪೂರ್ಣಸ್ವಾತಂತ್ರ್ಯ ನೀಡಿ ಕೈಕಟ್ಟಿ ಕುಳಿತು ದಕ್ಷಿಣ ಭಾರತದ ಮೊಟ್ಟ ಮೊದಲ ಸರ್ಕಾರದ ಕಾರ್ಯವೈಖರಿಯನ್ನು ನೋಡಿ ಆನಂದಿಸಿ ಮೈಮರೆಯಿತೇ ಹೊರತು ಕಾಲಕಾಲಕ್ಕೆ ಕಿವಿಹಿಂಡಿದ್ದರೆ ಇಂಥ ಸ್ಥಿತಿ ಬರುತ್ತಿರಲಿಲ್ಲ ಎನ್ನುವುದನ್ನು ಹೇಳಲು ರಾಜಕೀಯ ಪಂಡಿತರೇ ಆಗಬೇಕಾಗಿಲ್ಲ.

ಬಿಜೆಪಿಗೆ ಯಡಿಯೂರಪ್ಪ ಅನಿವಾರ್ಯ ಅನ್ನಿಸಲು ಅವರು ಪಕ್ಷ ಬಿಡುವುದಾಗಿ ಬಾಯಿಬಿಟ್ಟು ಹೇಳಬೇಕಾಯಿತು. ಈ ಹಂತದಲ್ಲಿ ಡ್ಯಾಮೇಜ್ ಕಂಟ್ರೋಲ್ ಮಾಡುವಂತೆ ರಾಜ್ಯ ಬಿಜೆಪಿ ಪಾಳೆಯದಿಂದ ಒತ್ತಡ ಹಾಕುತ್ತಿರುವುದು ಕೂಡಾ ರಾಜಕೀಯದ ಎಳಸುತನವೆನಿಸುತ್ತದೆ. ಬಿಜೆಪಿಯ ಮನಸ್ಥಿತಿ ಯಾವ ಹಂತ ತಲುಪಿದೆ ಎನ್ನುವುದಕ್ಕೆ ಒಂದೇ ಒಂದು ಉದಾಹರಣೆ ವಿ.ಧನಂಜಯ ಕುಮಾರ್ ಅವರನ್ನು ಪಕ್ಷದಿಂದ ಹೊರಹಾಕಿದ್ದು ಮತ್ತು ಯಡಿಯೂರಪ್ಪ ಅವರನ್ನು ಎದುರಿಸಲು ತಡಬಡಾಯಿಸುತ್ತಿರುವುದು.

ಧನಂಜಯ ಕುಮಾರ್ 1983ರಲ್ಲಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದವರು. ಕೇಂದ್ರದಲ್ಲಿ ಬಿಜೆಪಿ ಅಧಿಕಾರ ಸೂತ್ರ ಹಿಡಿದಾಗ ಕೇಂದ್ರ ಮಂತ್ರಿಯಾದವರು. ಯಡಿಯೂರಪ್ಪ 1983ರಲ್ಲಿ ಮೊದಲ ಬಾರಿಗೆ ವಿಧಾನ ಸಭೆ ಪ್ರವೇಶಿಸಿದವರು. ಉಪಮುಖ್ಯಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ ಆಡಳಿತ ಮಾಡಿದವರು.

ಒಂದೇ ಒಂದು ಬಾರಿ ಧನಂಜಯ ಕುಮಾರ್ ಬಿಜೆಪಿ ನಾಯಕರನ್ನು ಹಿಗ್ಗಾಮುಗ್ಗಾ ಝಾಡಿಸಿದ್ದು. ಯಡಿಯೂರಪ್ಪ ಹಲವು ಸಲ ರಾಜ್ಯ, ಕೇಂದ್ರ ನಾಯಕರನ್ನು ವಾಚಾಮಗೋಚರವಾಗಿ ಟೀಕಿಸಿದ್ದಾರೆ. ಆದರೆ ಒಂದೇ ಬಾರಿಗೆ ಧನಂಜಯ ಕುಮಾರ್ ಪಕ್ಷ ವಿರೋಧಿಯಾಗುತ್ತಾರೆ, ಅವರನ್ನು ಪಕ್ಷದಿಂದ ವಜಾಮಾಡಲಾಗುತ್ತದೆ. ಇದಕ್ಕೆ ಹೋಲಿಸಿದರೆ ಯಡಿಯೂರಪ್ಪ ಅವರನ್ನು ಮುಟ್ಟುವ ಧೈರ್ಯವಿಲ್ಲ ಎನ್ನುವುದೋ, ಅಥವ ಅವರನ್ನು ಪಕ್ಷದಲ್ಲೇ ಉಳಿಸಿಕೊಳ್ಳಬೇಕೆಂದು ಯತ್ನಿಸುತ್ತಿರುವುದನ್ನು ಅಸಹಾಯಕತೆ ಎನ್ನುವುದೋ?

ಕೊನೆಯದಾಗಿ ಹೇಳಲೇಬೇಕಾದ ಮಾತು, ಯಡಿಯೂರಪ್ಪ ತಾವಾಗಿಯೇ ಪಕ್ಷ ಬಿಟ್ಟು ಹೋದರೆ ಆಗುವ ಅನಾಹುತ ಕಡಿಮೆ ಎನ್ನುವುದು ಹೈಕಮಾಂಡ್ ಲೆಕ್ಕಾಚಾರ. ಅಂತೆಯೇ ತಾನಾಗಿ ಹೋದರೆ ಜನರಿಂದ ಸಿಗುವ ಸಿಂಪಥಿ ಕಡಿಮೆ, ಹೈಕಮಾಂಡ್ ತಾನಾಗಿಯೇ ಹೊರದಬ್ಬಿದರೆ ಬಂಪರ್ ಎನ್ನುವ ಮುಂದಾಲೋಚನೆ ಯಡಿಯೂರಪ್ಪ ಅವರದು.

ಆದರೆ, ಜನರ ಲೆಕ್ಕಾಚಾರ ಏನಿದೆ?

One thought on “ಕಡಿವಾಣ ಹಾಕದೆ ಕುದುರೆಗೆ ಓಟ ಕಲಿಸಿದರೆ?

  1. farooq ullal

    ಬಿಜೆಪಿ ಪಾಲಿಗೆ ಜಟಿಲವಾದ ಸಮಸ್ಯೆವನ್ನು ಸರಳವಾಗಿ, ಆಳಕ್ಕಿಳಿದು ಮದೂಗವಂತೆ ಬಿಡಿಸಿಟ್ಟಿರುವಿರಿ. ನಿಮ್ಮ ಮಾತು, ಬರಹ ಇಷ್ಟವಾಗುವುದೇ ಈ ನೇರ ಮತ್ತು ಸತ್ಯಪರತೆಗಾಗಿ!

    Reply

Leave a Reply

Your email address will not be published. Required fields are marked *