ಉಲ್ಟಾ ಸ್ಟಿಂಗ್: ಬಯಲಾಯಿತು ಮಿಡಿಯಾ ಡೀಲ್!

– ಮೇಘನಾದ

ಕಾಂಗ್ರೆಸ್ ಸಂಸದ ಮತ್ತು ಉದ್ಯಮಿ ನವೀನ್ ಜಿಂದಾಲ್ ಝೀ ಸಮೂಹದ ಝೀ ನ್ಯೂಸ್ ಮತ್ತು ಝೀ ಬುಸಿನೆಸ್ ವಾಹಿನಿಗಳನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ. ಬರೋಬ್ಬರಿ ನೂರು ಕೋಟಿ ರೂಗಳ ವ್ಯವಹಾರವಿದು. ಕಲ್ಲಿದ್ದಲು ಅವ್ಯವಹಾರದಲ್ಲಿ ಆರೋಪಿ ಎಂದು ಬಿಂಬಿತವಾಗಿರುವ ಜಿಂದಾಲ್ ಕಂಪನಿಗಳ ವಿರುದ್ಧ ಸುದ್ದಿ ಪ್ರಸಾರ ಆಗುವುದನ್ನು ತಡೆಯಲು ಎರಡೂ ವಾಹಿನಿಗಳ ಮುಖ್ಯಸ್ಥರು ಉದ್ಯಮಿಯೊಂದಿಗೆ ವ್ಯವಹಾರ ಮಾತನಾಡುತ್ತಾರೆ. ವರ್ಷಕ್ಕೆ ಇಷ್ಟು ಎಂಬಂತೆ ನೂರು ಕೋಟಿಯಷ್ಟು ಜಾಹೀರಾತು ನೀಡುವುದಾದರೆ, ನಿಮ್ಮ ವಿರುದ್ಧ ಸುದ್ದಿಗಳ ಪ್ರಸಾರ ನಿಲ್ಲುತ್ತವೆ ಎಂಬಂತ ಡೀಲ್ ನ್ನು ಚಾನೆಲ್ ಮುಖ್ಯಸ್ಥರು ಮುಂದಿಡುತ್ತಾರೆ. ಜಿಂದಾಲ್ ಕಂಪನಿಯ ಕಾರ್ಪೊರೇಟ್ ಕಮ್ಯುನಿಕೇಷನ್ ವಿಭಾಗದವರು ನಡೆಸಿರುವ ಕುಟುಕು ಕಾರ್ಯಾಚರಣೆಯಲ್ಲಿ ಈ ಸಂಭಾಷಣೆ ಬಯಲಾಗಿದೆ.

ಝೀ ವಾಹಿನಿಗಳು ಈ ಸುದ್ದಿಯನ್ನು ಹೇಗೇ ಅಲ್ಲಗಳೆದರೂ ಎದುರಿಸುತ್ತಿರುವ ಆರೋಪಗಳಿಂದ ಮುಕ್ತರಾಗುವುದು ಸುಲಭವಿಲ್ಲ. ನವೀನ್ ಜಿಂದಾಲ್ ಈ ಮೊದಲು ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದ ಮುಖ್ಯಸ್ಥ ನ್ಯಾ. ಮಾರ್ಕಂಡೇಯ ಕಾಟ್ಜು ಅವರನ್ನು ಭೇಟಿ ಮಾಡಿ ಈ ಬಗ್ಗೆ ವಿವರಿಸಿದ್ದರಷ್ಟೇ ಅಲ್ಲ, ಕುಟುಕು ಕಾರ್ಯಾಚರಣೆಯ ಕೆಲ ದೃಶ್ಯಗಳನ್ನು ಅವರಿಗೂ ತೋರಿಸಿದ್ದರು. ಆ ನಂತರ ನ್ಯಾ. ಕಾಟ್ಜು ಈ ಮಾಹಿತಿಯನ್ನು ವಿದ್ಯುನ್ಮಾನ ಮಾಧ್ಯಮ ಸಮೂಹಗಳ ಸ್ವನಿಯಂತ್ರಣಕ್ಕಾಗಿ ಇರುವ ಸಂಸ್ಥೆ – ಸುದ್ದಿ ಪ್ರಸರಣ ಗುಣಮಟ್ಟ ಪ್ರಾಧಿಕಾರ (ಎನ್ ಎಸ್ ಬಿ ಎ) ಮುಖ್ಯಸ್ಥ ನಾ. ಜೆ.ಎಸ್ ವರ್ಮಾ ಅವರಿಗೆ ರವಾನಿಸಿದ್ದರು. ಈ ಪ್ರಕರಣವನ್ನು ತನಿಖೆಗೆ ಎತ್ತಿಕೊಂಡ ಪ್ರಾಧಿಕಾರ, ಝೀ ಸಮೂಹದ ಸಂಪಾದಕರನ್ನು ಪ್ರಾಧಿಕಾರದ ಖಜಾಂಜಿ ಸ್ಥಾನದಿಂದ ಬಿಡುಗಡೆ ಮಾಡಿದೆ. ನೂರು ಕೋಟಿ ಮೊತ್ತದ ಭಕ್ಷೀಸು ಬಯಸಿದ ಆರೋಪ ಹೊತ್ತವರ ವಿರುದ್ಧ ಎಂತಹ ‘ಘೋರ’ ಕ್ರಮ!

ಸಲ್ಮಾನ್ ಖುರ್ಷಿದ್, ರಾಬರ್ಟ್ ವಾದ್ರಾ, ನಿತಿನ್ ಗಡ್ಕರಿ, ಯಡಿಯೂರಪ್ಪ.. ಮುಂತಾದವರ ಅವ್ಯವಹಾರಗಳ ಬಗ್ಗೆ ದಿನಗಟ್ಟಲೆ/ಪುಟಗಟ್ಟಲೆ ವರದಿ ಮಾಡುವ ಸುದ್ದಿ ವಾಹಿನಿಗಳು, ಪತ್ರಿಕೆಗಳು ತಮ್ಮ ಸಮೂಹದವರ ಮೇಲೆ ಆರೋಪ ಬಂದಾಗ ಮೌನವಹಿಸಿಬಿಡುತ್ತವೆ ಎಂಬುದಕ್ಕೆ ಈ ಪ್ರಕರಣವೂ ಒಂದು ಸಾಕ್ಷಿ. ಎನ್ ಡಿ ಟಿವಿ, ಸಿಎನ್ಎನ್ ಐಬಿಎನ್, ಟೈಮ್ಸ್ ನೌ, ವಾಹಿನಿಗಳು ನವೀನ್ ಜಿಂದಾಲ್ ಪತ್ರಿಕಾ ಗೋಷ್ಟಿ ನಡೆಸಿದ ದಿನ ವಿಸ್ತೃತ ವರದಿಗಳನ್ನೇ ಬಿತ್ತರಿಸಿದರು. ಆದರೆ ರಾಜಕಾರಣಿಗಳ ಪ್ರಕರಣಗಳಿಗೆ ಸಿಕ್ಕಷ್ಟು ಮಹತ್ವ – ಪ್ರಚಾರ ಈ ಪ್ರಕರಣಕ್ಕೆ ಸಿಗಲಿಲ್ಲ. ಸುದ್ದಿ ಪತ್ರಿಕೆಗಳಂತೂ, ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿದಂತೆ ಕಾಣುವುದಿಲ್ಲ. ದಿ ಹಿಂದು ಪತ್ರಿಕೆ ಮಾತ್ರ, ಈ ಸುದ್ದಿಯನ್ನು ಮುಖಪುಟದಲ್ಲಿ ಪ್ರಕಟಿಸಿ, ಸಂಪಾದಕೀಯವನ್ನು ಪ್ರಕಟಿಸಿತ್ತು.

ಇತರೆ ಮಾಧ್ಯಮ ಸಂಸ್ಥೆಗಳು ಈ ಸುದ್ದಿಯನ್ನು ಮರೆಮಾಚಿದ್ದಕ್ಕೆ ಕಾರಣಗಳಿವೆ. ಬಹುತೇಕ ಸುದ್ದಿ ಮಾಧ್ಯಮಗಳು ‘ಪೇಯ್ಡ್ ನ್ಯೂಸ್’ ಮುಕ್ತವಾಗಿಲ್ಲ. ಆಡಳಿತದಲ್ಲಿರುವ ಸರಕಾರ ಭರಪೂರ ಜಾಹಿರಾತು ನೀಡುವುದಾದರೆ, ತಮಗೆ ಬೇಕಾದ ಜಮೀನನ್ನು ಡಿನೋಟಿಫೈ ಮಾಡಿಕೊಡುವುದಾದರೆ, ತಮ್ಮವರಿಗೆ ಸೂಕ್ತ ಸ್ಥಾನಮಾನ ನೀಡುವುದಾದರೆ ಅದರ ವಿರುದ್ಧ ಟೀಕೆಯ ಗೋಜಿಗೇ ಹೋಗದ ಅನೇಕ ಸಂಸ್ಥೆಗಳು ಎಲ್ಲೆಲ್ಲೂ ಇವೆ. ಹಾಗಿರುವಾಗ, ಕಾರ್ಪೋರೇಟ್ ಸಂಸ್ಥೆಯೊಂದಿಗೆ ಜಾಹೀರಾತು ಒಪ್ಪಂದ ಮಾಡಿಕೊಂಡು, ಅದರ ವಿರುದ್ಧದ ಸುದ್ದಿ ಪ್ರಕಟಿಸದೇ ಇರಲು ತೀರ್ಮಾನಿಸುವುದು ಈ ಸಂಸ್ಥೆಗಳಿಗೆ ಅಪರಾಧವಾಗಿ ಕಾಣದಿರುವುದರಲ್ಲಿ ಅಚ್ಚರಿಯೇನಿಲ್ಲ.

ಒಂದು ಸಣ್ಣ ಉದಾಹರಣೆ ನೋಡಿ. ಕೆಲ ವರ್ಷಗಳ ಹಿಂದಿನ ಘಟನೆ. ಶಾಸಕರೊಬ್ಬರು ನಾಡಿನ ಪ್ರಮುಖ ಪತ್ರಿಕೆಯೊಂದಕ್ಕೆ ಕಾಲು ಪುಟದ ಜಾಹೀರಾತು ನೀಡಿದ್ದರು. ಮುದ್ರಣ ಯಂತ್ರದ ತಾಂತ್ರಿಕ ಸಮಸ್ಯೆಯೋ, ತಂತ್ರಜ್ಞರ ಬೇಜವಾಬ್ದಾರಿತನದಿಂದಲೋ ಆ ಜಾಹೀರಾತು ಸ್ಪಷ್ಟವಾಗಿ ಮೂಡಿಬರಲಿಲ್ಲ. ಜಾಹೀರಾತಿನಲ್ಲಿದ್ದ ಪಠ್ಯ, ಭಾವಚಿತ್ರಗಳು ಅಸ್ಪಷ್ಟವಾಗಿದ್ದವು. ಸಹಜವಾಗಿ ಆ ಶಾಸಕರು ಬೇಸರಗೊಂಡರು. “ಜಾಹೀರಾತು ಸ್ಪಷ್ಟವಾಗಿ ಬಂದಿಲ್ಲ, ಹಾಗಾಗಿ ತಪ್ಪು ನಿಮ್ಮದೆ. ನಾನು ಜಾಹೀರಾತು ಬಿಲ್ ಕ್ಲಿಯರ್ ಮಾಡುವುದಿಲ್ಲ” ಎಂದು ಪಟ್ಟು ಹಿಡಿದರು. ಜಾಹೀರಾತು ವಿಭಾಗದ ಸಿಬ್ಬಂದಿ ಪದೇ ಪದೇ ಶಾಸಕರ ಮನೆಗೆ ತಿರುಗಿದರೂ ಇದೇ ಉತ್ತರ. ಈ ಬೆಳವಣಿಗೆ ಸುದ್ದಿ ವಿಭಾಗಕ್ಕೆ ರವಾನೆಯಾಯಿತು.

ಶಾಸಕರು ಬ್ಯಾಲೆನ್ಸ್ ಕ್ಲಿಯರ್ ಮಾಡುವ ತನಕ ಅವರ ಯಾವುದೇ ಸುದ್ದಿಗಳನ್ನು ಪ್ರಕಟ ಮಾಡುವುದು ಬೇಡ ಎಂದು ಪತ್ರಿಕೆ ನಿರ್ಧರಿಸಿತು. ಅದು ಹಾಗೆಯೇ ಮುಂದುವರಿಯಿತು. ಕೆಲ ತಿಂಗಳುಗಳಲ್ಲಿ ಚುನಾವಣೆ. ಈ ಸಂದರ್ಭದಲ್ಲಿ ಪ್ರಮುಖ ಪತ್ರಿಕೆಯಲ್ಲಿ ತನ್ನ ಸುದ್ದಿಗಳು ಪ್ರಕಟಗೊಳ್ಳದಿದ್ದರೆ, ಚುನಾವಣೆಯಲ್ಲಿ ಪ್ರತಿಕೂಲ ಪರಿಣಾಮ ಬೀರಬಹುದು ಎಂದು ಶಾಸಕರಿಗೂ ಗಾಬರಿಯಾಯಿತು. ಅದು ಉತ್ತಮ ಪ್ರಸರಣ ಇರುವ ಪ್ರಮುಖ ಪತ್ರಿಕೆ. ಚುನಾವಣಾ ವಿಶ್ಲೇಷಣೆ ಸಂದರ್ಭದಲ್ಲಿ ಇವರು ಸೋಲುತ್ತಾರೆ ಎಂದು ಬರೆದರೆ, ಏನು ಗತಿ? ಹೀಗೆಲ್ಲಾ ಯೋಚಿಸಿ, ಅವರೇ ಜಾಹಿರಾತು ಸಿಬ್ಬಂದಿಯನ್ನು ಸಂಪರ್ಕಿಸಿ ಜಾಹೀರಾತು ಹಣ ನೀಡಿದರು, ಅಷ್ಟೇ ಅಲ್ಲ, ಮತ್ತಷ್ಟು ಜಾಹೀರಾತೂ ಕೊಟ್ಟರು.

ಈ ಉದಾಹರಣೆಯಲ್ಲಿ ಪತ್ರಿಕೆಯ ಹೆಸರು, ಶಾಸಕರ ಹೆಸರು ಅಗತ್ಯವಿಲ್ಲ. ಏಕೆಂದರೆ, ಈ ಅನುಭವ ನಾಡಿನ ಅನೇಕರಿಗೆ, ಅನೇಕ ಪತ್ರಿಕೆಗಳ ಜೊತೆ ಆಗಿರುವ ಸಾಧ್ಯತೆಗಳಿವೆ. ಬರಬೇಕಾಗಿರುವ ಬಾಕಿಗೆ, ಸುದ್ದಿಯನ್ನೇ ಬಂದ್ ಮಾಡುವ ಪರಿಪಾಟ ಇಟ್ಟುಕೊಂಡಿರುವ ಮಾಧ್ಯಮ ಸಂಸ್ಥೆಗಳಲ್ಲಿ, ಉತ್ತಮ ಮೊತ್ತದ ಜಾಹೀರಾತು ಕೊಡುವ ಉದ್ಯಮಿಯನ್ನು ಚೆನ್ನಾಗಿ ಬಿಂಬಿಸುವ ಪರಂಪರೆಯೂ ಇದ್ದೇ ಇದೆ. ಈ ಕಾರಣಕ್ಕಾಗಿಯೇ ನವೀನ್ ಜಿಂದಾಲ್-ಝೀ ಸಮೂಹ ಪ್ರಕರಣ ಇತರೆ ಮಾಧ್ಯಮ ಸಂಸ್ಥೆಗಳಿಗೆ ಅಷ್ಟು ಮುಖ್ಯವಾಗುವುದೇ ಇಲ್ಲ. ಜಾಹೀರಾತು ವಿಭಾಗದಲ್ಲಿ ಉನ್ನತ ಸ್ಥಾನದಲ್ಲಿರುವ ಯಾರನ್ನೇ ಕೇಳಿ ನೋಡಿ, ಇಂತಹ ಅದೆಷ್ಟೋ ವ್ಯವಹಾರಗಳು ನಡೆದಿರುವ ಉದಾಹರಣೆಗಳು ಸಿಗುತ್ತವೆ.

ಸದ್ಯ ಇಂತಹ ಬೆಳವಣಿಗೆಗಳಿಗೆ ಕಡಿವಾಣ ಹಾಕುವುದು ಅಗತ್ಯ. ಪ್ರಸ್ತುತ ಪ್ರಕರಣವನ್ನು ಆಮೂಲಾಗ್ರ ತನಿಖೆಗೆ ಒಳಪಡಿಸಿ, ತಪ್ಪಿತಸ್ಥರನ್ನು ಶಿಕ್ಷೆಗೆ ಒಳಪಡಿಸಿ, ಉಳಿದವರಿಗೆ ಸೂಕ್ತ ಸಂದೇಶ ನೀಡುವುದು ಇಂದಿನ ತುರ್ತು.

3 thoughts on “ಉಲ್ಟಾ ಸ್ಟಿಂಗ್: ಬಯಲಾಯಿತು ಮಿಡಿಯಾ ಡೀಲ್!

  1. anand prasad

    ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮೌಲ್ಯಗಳನ್ನು ಎತ್ತಿ ಹಿಡಿಯಬೇಕಾದ ಮಾಧ್ಯಮಗಳೇ ಜಾಹೀರಾತು ರೂಪದ ಲಂಚಕ್ಕೆ ಬಲಿಯಾಗುತ್ತಿರುವುದು ಇಡೀ ವ್ಯವಸ್ಥೆ ಕೆಡುವಲ್ಲಿ ಮಹತ್ತರ ಪಾತ್ರ ವಹಿಸುತ್ತಿದೆ. ಇದು ದೇಹದ ರೋಗ ನಿರೋಧಕ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಏಡ್ಸಿನಂತೆ ಇಡೀ ವ್ಯವಸ್ಥೆಯನ್ನು ಕೆಡಿಸುತ್ತಾ ಇದೆ. ದೇಹವನ್ನು ರೋಗಗಳಿಂದ ರಕ್ಷಿಸಬೇಕಾದ ರೋಗ ನಿರೋಧಕ ವ್ಯವಸ್ಥೆಯೇ ದುರ್ಬಲವಾದರೆ ಎಲ್ಲ ರೋಗಗಳೂ ಧಾಳಿಯಿಡುವಂತೆ ಭಾರತದ ಪ್ರಜಾಪ್ರಭುತ್ವದ ವ್ಯವಸ್ಥೆಯೂ ಆಗುತ್ತಿದೆ. ವ್ಯವಸ್ಥೆಯಲ್ಲಿ ಮೌಲ್ಯಗಳನ್ನು ಕಾಪಾಡಬೇಕಾದ ಮಾಧ್ಯಮಗಳು ಹಣದ ಹಾಗೂ ಲಾಭದ ಅತಿಯಾಸೆಗೆ ಬಲಿಯಾಗಿ ದೇಶದ ಆರೋಗ್ಯವನ್ನೂ ಕೆಡಿಸುತ್ತಾ ಇವೆ. ಬಹುತೇಕ ಮಾನವರು ಆಮಿಷಗಳಿಗೆ ಬಲಿಯಾಗುವ ದೌರ್ಬಲ್ಯ ಹೊಂದಿರುವುದರಿಂದ ಹಾಗೂ ಇದನ್ನು ಸ್ವಯಂ ನಿಯಂತ್ರಿಸಿಕೊಳ್ಳಲು ಅಸಮರ್ಥರಾಗಿರುವುದರಿಂದ ಮಾಧ್ಯಮಗಳಿಗೂ ಕೆಲವು ನಿಯಂತ್ರಣ ಹಾಗೂ ನಿಬಂಧನೆಗಳನ್ನು ವಿಧಿಸಬೇಕಾದ ಅವಶ್ಯಕತೆ ಇದೆ. ಇಲ್ಲದೆ ಹೋದರೆ ಅತಿಯಾಸೆಯ ಹಾಗೂ ಲಾಭದ ಗೀಳಿಗೆ ಬೀಳುವ ಮಾಧ್ಯಮಗಳ ಪ್ರವೃತ್ತಿಯನ್ನು ಇಂದಿನ ಜಾಹೀರಾತು ಹಾಗೂ ಬಂಡವಾಳಶಾಹಿ ಯುಗದಲ್ಲಿ ತಡೆಯಲು ಸಾಧ್ಯವಿಲ್ಲ. ಬೇಲಿ ಇಲ್ಲದಿದ್ದರೆ ಸಿಕ್ಕ ಸಿಕ್ಕಲ್ಲಿ ಮೇಯುವುದು ಜಾನುವಾರುಗಳ ಸ್ವಭಾವ. ಇದು ಮಾನವನಿಗೂ ಅನ್ವಯಿಸುತ್ತದೆ. ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಅತಿಯಾಸೆ ಹಾಗೂ ಅತಿಯಾಗಿ ಲಾಭ ಗಳಿಸಬೇಕೆಂಬ ಪ್ರವೃತ್ತಿ ಮಾನವನಲ್ಲಿಯೂ ಕಂಡುಬರುತ್ತಿದ್ದು ಇದನ್ನು ತಡೆಯಲು ಯಾವುದೇ ಬೇಲಿಗಳು ಇಲ್ಲದಿರುವುದರಿಂದ ಸೂಕ್ತ ಬೇಲಿಗಳನ್ನು ನಿರ್ಮಿಸುವುದು ಮಾನವ ಸಮಾಜದ ಒಟ್ಟು ಹಿತದೃಷ್ಟಿಯಿಂದ ಅತೀ ಅಗತ್ಯವಾಗಿ ಕಂಡುಬರುತ್ತದೆ.

    Reply
  2. ರಾಜಾರಾಂ ತಲ್ಲೂರು

    “ದಶ್ಚಿಣ ಕನ್ನಡದ” ಸುಪ್ರಸಿದ್ಧ ಕೊಡುಗೈ ದಾನಿಯೊಬ್ಬರು ಸ್ಥಳೀಯ ಹೊಟ್ಟೆಪಾಡು ಪತ್ರಕರ್ತರ ಎಡತಾಕುವಿಕೆಯ ಕಿರಿಕಿರಿ ತಾಳಲಾರದೇ ಒಂದು ದಿನ “ನಿಮಗೆ ಕೈಗೆ ಬ್ಯಾಂಡೇಜ್ ಕಟ್ಟಿಕೊಂಡು, ಅದಕ್ಕೆ ಕೆಂಪು ಶಾಯಿ ಹಾಕಿ ರಸ್ತೆ ಬದಿಯಲ್ಲಿ ಬಿಕ್ಷೆ ಬೇಡಲಿಕ್ಕೆ ಆಗೂದಿಲ್ವಾ? ಇಲ್ಲಿ ಯಾಕೆ ಬಂದು ನನ್ನ ತಲೆ ತಿಂತೀರಿ?” ಎಂದು ಗದರಿದ್ದಿದೆ. ಇದನ್ನೇ ನಾವು ಗಟ್ಟಿಯಾಗಿ, ನಿರ್ಧಾರದ ಸ್ವರದಲ್ಲಿ, ಈ ಮಾಧ್ಯಮದ ಮಂದಿಗೆ ಹೇಳಬೇಕಾಗಿದೆ!

    Reply

Leave a Reply

Your email address will not be published.