Monthly Archives: October 2012

ಅನಂತಮೂರ್ತಿ, ಆಳ್ವಾಸ್, ಹಾಗೂ ಅಸೋಸಿಯೇಶನ್

– ತೇಜ ಸಚಿನ್ ಪೂಜಾರಿ

“ಅಸೋಸಿಯೇಶನ್” (association) ಎಂಬುವುದು ಹಲವು ಸಾಧ್ಯತೆಗಳು ಹಾಗೂ ಅರ್ಥಪರಂಪರೆಗಳಯಳ್ಳ ಪರಿಣಾಮಕಾರಿಯಾದ ಒಂದು ಕ್ರಿಯೆಯಾಗಿದೆ. ಒಂದು ನಿರ್ದಿಷ್ಟ ಆಸ್ಮಿತೆ ಆಥವಾ ಸಂಸ್ಥೆಗೆ ಸ್ವೀಕರಣೆ ಯಾ ನಿರಾಕರಣೆಯ ಗುಣವನ್ನು ದಯಪಾಲಿಸುವ ತಾಕತ್ತು “ಅಸೋಸಿಯೇಶನ್”ಗೆ ಇರುತ್ತದೆ. ಐತಿಹಾಸಿಕ ನೆಲೆಯಲ್ಲಿ ವಿಶ್ಲೇಷಿಸಿದಾಗ “ಕೂಡಾಟ ಅಥವಾ ಸಹಚರ್ಯ” ಅನ್ನೋದು ನ್ಯಾಯಬದ್ಧತೆಯನ್ನು ಗಳಿಸುವ ಒಂದು ತಂತ್ರವಾಗಿ ಬಳಕೆಯಾಗಿರುವುದು ಕಂಡುಬರುತ್ತದೆ. ವಿಶೇಷವಾಗಿ ಪ್ರಭುತ್ವವು ವ್ಯಾಪಕ ನೆಲೆಯಲ್ಲಿ ಇಂತಹ ತಂತ್ರದ ಮೊರೆ ಹೊಕ್ಕಿರುವ ಸಂಗತಿ ತಿಳಿಯುತ್ತದೆ. ಆಳುವ ವರ್ಗಗಳು ತಮ್ಮ ಆಡಳಿತೆಗೆ ಹಾಗೂ ನಿರಂಕುಶತೆಗೆ ಒಂದು ಜನಪ್ರಿಯ ನೆಲೆಯನ್ನು ದಕ್ಕಿಸಿಕೊಳ್ಳುವ ಸಲುವಾಗಿ ಧರ್ಮ ಹಾಗೂ ಸಾಹಿತ್ಯದ ಜೊತೆಗೆ “ಅಸೋಸಿಯೇಟ್” ಆದದ್ದು ಚರಿತ್ರೆಯ ಪುಟಗಳಲ್ಲಿ ದಾಖಲಾಗಿದೆ. ಧರ್ಮ ಹಾಗೂ ಸಾಹಿತ್ಯ ಇವೆರಡೂ ಜನಾದರಣೀಯ ನೆಲೆಯನ್ನು ಹೊಂದಿರುವುದು ಇಂತಹ ಪ್ರವೃತ್ತಿಗಳಿಗೆ ಮುಖ್ಯ ಕಾರಣ.

“ಡಿಸೊಸಿಯೇಷನ್” (dissociation) ಕೂಡಾ ಅಷ್ಟೇ ಪ್ರಭಾವಶಾಲಿಯಾದದ್ದು. ಇಲ್ಲಿ ಅದಕ್ಕೆ ನೇತ್ಯಾತ್ಮಕ ನೆಲೆಯಿದೆ. ಅದು ಒಂದು ಬಗೆಯ ಟೀಕೆ ಅಥವಾ ಬಂಡಾಯ, ಸ್ವತಂತ್ರತೆ ಯಾ ದಿಟ್ಟತೆಯನ್ನು ಪ್ರತಿನಿಧಿಸುತ್ತದೆ. ಈ ಹಿನ್ನಲೆಯಲ್ಲಿ ಅದು “ರಿಜೆಕ್ಷನ್” ಕೂಡ ಆಗಿದೆ. ಕನ್ನಡ ಪರಂಪರೆಯಲ್ಲಿಯೇ ಇದಕ್ಕೆ ಹಲವು ನಿದರ್ಶನಗಳು ದೊರೆಯುತ್ತವೆ. ಪ್ರಭುತ್ವದ ಪರಿಧಿಯೊಳಗಿದ್ದುಕೊಂಡೇ “ಓಲಗಿಸಿ ಬಾಳ್ವುದೇ ಕಷ್ಟಂ ಇಳಾಧಿನಾಥರಂ” ಎಂಬ ನಿರಾಕರಣೆಯ ನೆಲೆಯನ್ನು ಪಂಪ ಪ್ರತಿಪಾದಿಸುತ್ತಾನೆ. ಮುಂದೆ ಬಂದ ಬಸವಣ್ಣ, ಅಕ್ಕ ಮೊದಲಾದ ಪ್ರತಿಭೆಗಳಲ್ಲಿ ಇಂತಹ ಪ್ರವೃತ್ತಿಗಳು ಇನ್ನಷ್ಟು ಸ್ಪಷ್ಟವಾಗಿ ಕಂಡುಬರುತ್ತದೆ.

“ಡಿಸೊಸಿಯೇಷನ್” ಒಂದು ಮೂರ್ತ ರೂಪವನ್ನು ಪಡಕೊಂಡಿದ್ದು ಆಧುನಿಕ ಬದುಕಿನಲ್ಲಿಯೇ ಆಗಿದೆ. ಬೌಧ್ಧಿಕ ಪರಿಕರಗಳ ಅಭೂತಪೂರ್ವ ಬೆಳವಣಿಗೆ ಅಂತಹ ಪ್ರವೃತ್ತಿಯ ಅವಶ್ಯಕತೆ ಹಾಗೂ ಸಾಧ್ಯತೆಗಳನ್ನು ವ್ಯಾಪಕವಾಗಿ ವಿಸ್ತರಿಸಿದೆ. ಒಂದು ವ್ಯವಸ್ಥೆಯನ್ನು ಪ್ರತಿನಿಧಿಸುವ ಯಾವುದೇ ಆಸ್ಮಿತೆ ಆಥವಾ ಸಂಸ್ಥೆಯ ಹೊರಗಿದ್ದುಕೊಂಡು ಸುಧಾರಣೆ ಯಾ ಪರ್ಯಾಯ ನಿರ್ಮಾಣದ ಯತ್ನವು ಅಂತಹ “ಡಿಸೊಸಿಯೇಷನ್” ಪ್ರಕ್ರಿಯೆಯ ಒಂದು ಸಾಮಾನ್ಯ ಮಾದರಿಯಾಗಿದೆ. ಅದರ ಹತ್ತು ಹಲವು ಗಂಭೀರ ಮಾದರಿಗಳು ನಮ್ಮ ಮುಂದಿವೆ. ಖ್ಯಾತ ಸಾಹಿತಿ ಸಾತ್ರೆ ನೊಬೆಲ್ ಸಾಹಿತ್ಯ ಪ್ರಶಸ್ತಿಯನ್ನೇ ಸ್ವೀಕರಿಸಲು ಒಪ್ಪಲಿಲ್ಲ. ಇತಿಹಾಸ ತಜ್ಞೆ ರೊಮಿಲಾ ಥಾಪರ್ ಹಲವು ಬಾರಿ ಭಾರತ ಸರಕಾರ ನೀಡುವ ಪದ್ಮ ಪ್ರಶಸ್ತಿಗಳನ್ನು ನಿರಾಕರಿಸಿದ್ದಾರೆ. ನಮ್ಮವರೇ ಆದ ಅರುಂಧತಿ ರಾಯ್ ಕೂಡ ಇಂತಹದ್ದೇ ನಿಲುವುಗಳನ್ನು ಪ್ರತಿಪಾದಿಸುತ್ತಿದ್ದಾರೆ. ಅವರು ಒಮ್ಮೆ, “If protesting against having a nuclear bomb implanted in my brain is anti-Hindu and anti-national, then I secede. I hereby declare myself an independent, mobile republic. I am a citizen of the earth. I own no territory. I have no flag.” ಅಂದಿದ್ದರು.

ಇಲ್ಲಿ “ಡಿಸೊಸಿಯೇಷನ್” ಎಂಬುವುದು ವಾಸ್ಥವದ ಪೂರ್ಣ ನಿರಾಕರಣೆ ಅನ್ನೋ ಅರ್ಥವನ್ನು ನೀಡುವುದಿಲ್ಲ. ಅರುಂಧತಿ ರಾಯ್ ಸೇರಿದಂತೆ ಎಲ್ಲಾ “ಹೊರಗಿನವರು” ಸಮಷ್ಟಿಯ ವಾಸ್ತವ ಬದುಕಿನ ಶ್ರೇಯಸ್ಸಿಗೆ ದುಡಿದಿದ್ದಾರೆ. ಬಡವರ, ದೀನ-ದಲಿತರ ಹಾಗೂ ಪರಿಸರದ ಕರಿತಾದ ನಿಷ್ಕಾಮ ಕಾಳಜಿಗಳನ್ನು ಹೊಂದಿರುವವರೇ ಆಗಿದ್ದಾರೆ. ಇಲ್ಲಿ ಅವರ “ಡಿಸೊಸಿಯೇಷನ್” ಅನ್ನೋದು ವ್ಯವಸ್ಥೆಯ ವೈಪಲ್ಯ, ಅಸಮರ್ಥತೆ ಹಾಗೂ ಧಾರ್ಷ್ಯತೆಗೆ ರೂಪುಗೊಂಡ ಒಂದು ಪ್ರತಿಭಟನೆಯಾಗಿದೆ.

ಇದೇ ಹಿನ್ನೆಲೆಯಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಯು.ಆರ್. ಅನಂತಮೂರ್ತಿಯವರು “ಆಳ್ವಾಸ್ ನುಡಿಸಿರಿ” ಕಾರ್ಯಕ್ರಮದಲ್ಲಿ ಭಾಗವಹಿಸುವ ಕುರಿತು ವರ್ತಮಾನ.ಕಾಮ್‌ನಲ್ಲಿ ಪ್ರಸ್ತಾಪವಾಗಿರುವ ವಿಷಯವನ್ನು ಅರ್ಥೈಸುವುದು ಸೂಕ್ತ. ಅನಂತಮೂರ್ತಿಯವರ ಒಟ್ಟು ವ್ಯಕ್ತಿತ್ವವನ್ನು ಕುರಿತಂತೆ ಹಲವು ಟೀಕೆಗಳಿವೆ. ಆದಾಗ್ಯೂ ಅವರು ಕನ್ನಡದ ಸೃಜನಶೀಲತೆ, ಸಾಕ್ಷಿಪ್ರಜ್ಞೆ ಹಾಗೂ ಜೀವಪರ ಧೋರಣೆಯ ಓರ್ವ ಸಮರ್ಥ ಪ್ರತಿನಿಧಿ ಎಂಬ ವಿಚಾರ ನಿರ್ವಿವಾದ. ಅವರೇ ರಚಿಸಿದ ಸಾಹಿತ್ಯ ಅವರಿಗೆ ಅಂತಹ ಒಂದು ಹೊಣೆಗಾರಿಕೆಯನ್ನು ನೀಡಿದೆ. ಅವರ ಪ್ರಾತಿನಿಧಿಕ ವ್ಯಕ್ತಿತ್ವಕ್ಕೆ ಜನಾದರಣೀಯ ನೆಲೆಯೂ ಇದೆ. ಇದು ಅನಂತಮೂರ್ತಿಯವರ ನಡೆ ನುಡಿಗಳನ್ನು ಸಾರ್ವಜನೀಕರಣ ಗೊಳಿಸುತ್ತದೆ. ಹೀಗಾಗಿ ಯಾವುದೇ ಆಸ್ಮಿತೆ ಆಥವಾ ಸಂಸ್ಥೆಗೆ ಸ್ವೀಕರಣೆ ಯಾ ನಿರಾಕರಣೆಯ ಸ್ವರೂಪವನ್ನು ನೀಡುವ ಶಕ್ತಿ ಅವರ “ಅಸೋಸಿಯೇಶನ್”ಗೆ ಇದೆ. ಇದು ಅವರ ಜವಾಬ್ದಾರಿಯನ್ನು ಹೆಚ್ಚಿಸುತ್ತದೆ.

ಕರಾವಳಿ ಕರ್ನಾಟಕದ, ವಿಶೇಷವಾಗಿ, ತುಳು ಪ್ರಾಂತ್ಯದಲ್ಲಿ ಹಲವು ಆಯಾಮಗಳುಳ್ಳ “ಯಜಮಾನಿಕೆ”ಯೊಂದು ರೂಪುಗೊಳ್ಲುತ್ತಿದೆ. ಅದರ ಸ್ವರೂಪವನ್ನು ಇಲ್ಲಿಯೇ ವರ್ತಮಾನ.ಕಾಮ್‌ನಲ್ಲಿ ಪ್ರಕಟಗೊಂಡಿರುವ ಹಲವಾರು ಲೇಖನಗಳಲ್ಲಿ ನವೀನ್ ಸೂರಿಂಜೆ ನೀಡಿದ್ದಾರೆ. ಕಲ್ಲಡ್ಕ, ಉಳ್ಳಾಲ, ಉಡುಪಿ, ಧರ್ಮಸ್ಥಳ, ಮೂಡಬಿದಿರೆ ಮೊದಲಾದ ಕಡೆಗಳಲ್ಲಿ ಕ್ರಿಯಾಶೀಲವಾಗಿರುವ ಅದು ನಿಧಾನವಾಗಿ ಉಳಿದೆಡೆಗಳಿಗೆ ಹಬ್ಬುತ್ತಿದೆ. ಇಂತಹ ಯಜಮಾನಿಕೆಯ ಅತೀರೇಕದ ಅಭಿವ್ಯಕ್ತಿಗಳೇ ಸಮಾಜೋತ್ಸವ, ಮೋರಲ್ ಪೋಲೀಸಿಂಗ್, ಕೋಮುಗಲಭೆ ಇತ್ಯಾದಿಗಳು. ಧರ್ಮ, ಶಿಕ್ಷಣ ಹಾಗೂ ಕಲೆ- ಈ ಮೂರನ್ನೂ ವ್ಯಾಪಿಸಿರುವ ಈ ಕೃತ್ರಿಮ ಯಜಮಾನಿಕೆಯನ್ನು ಎದುರಿಸುವ ಪ್ರಕ್ರಿಯೆಯಲ್ಲಿ ಅದಕ್ಕೆ ಪರ್ಯಾಯವಾದ ಸಾಂಸ್ಕ್ರತಿಕ ನೆಲೆಯೊಂದನ್ನು ಕಟ್ಟುವ ಅನಿವಾರ್ಯತೆಯಿದೆ. ಇಲ್ಲಿ ಜೀವಪರ ನಿಲುವನ್ನು ಪ್ರತಿಪಾದಿಸುವ ಯು.ಆರ್. ಅನಂತಮೂರ್ತಿಯಂತಹ ಸಾಂಸ್ಕೃತಿಕ ಚೇತನಗಳ ಪಾತ್ರ ಹಿರಿದಾದದ್ದಾಗಿದೆ. ಈ ಹಿನ್ನೆಲೆಯಲ್ಲಿ, ಏಕಕಾಲಕ್ಕೆ ಕೃತ್ರಿಮ ಯಜಮಾನಿಕೆಯ ಜೊತೆಗೆ ಸಹಚರ್ಯ ಹಾಗೂ ಪರ್ಯಾಯ ನಿರ್ಮಾಣ ಯತ್ನ- ಇವೆರಡೂ ಪರಸ್ಪರ ವ್ಯೆರುಧ್ಯವಾಗಬಲ್ಲವು. ಅಲ್ಲದೆ ಅಂತಹ “ಅಸೋಸಿಯೇಶನ್” ಜೀವವಿರೋಧಿ ಯಜಮಾನಿಕೆಗೆ ಜನಮಾಸದಲ್ಲಿ ನ್ಯಾಯಬದ್ಧತೆಯನ್ನು ಒದಗಿಸಿ ಕೊಡುವ ಅಪಾಯವೂ ಇದೆ. ಇದರ ಪೂರ್ಣ ಅರಿವು ಅನಂತಮೂರ್ತಿಯವರಿಗಿದೆ. ಹೀಗಾಗಿಯೇ ಹಲವು ಸಂಧರ್ಭಗಳಲ್ಲಿ ಅವರು “ವೇದಿಕೆ ಹಂಚಿಕೊಳ್ಳುವುದಿಲ್ಲ” “ಆ ಚಾನೆಲ್‌ನಲ್ಲಿ ಕಾಣಿಸಿಕೊಳ್ಳುವುದಿಲ್ಲ” ಮೊದಲಾದ ಮಾತುಗಳನ್ನು ಆಡಿರುತ್ತಾರೆ.

ಇಲ್ಲಿ ಮತ್ತೊಂದು ಸಾಧ್ಯತೆಯಿದೆ. ಅದು “ಪಾಲ್ಗೊಂಡು” ಪರ್ಯಾಯ ಚಿಂತನೆಯನ್ನು ಪ್ರತಿಪಾದಿಸುವ ನೆಲೆ. ಇದು ಸಹಚರ್ಯವಲ್ಲ. ಬದಲಿಗೆ “ಡಿಸೊಸಿಯೇಷನ್” ಪ್ರಕ್ರಿಯೆಯದ್ದೇ ಇನ್ನೊಂದು ಆಯಾಮ. ಭೈರಪ್ಪನವರು ಆಳ್ವಾಸ್ ನುಡಿಸಿರಿಯ ಅಧ್ಯಕ್ಷತೆ ವಹಿಸಿದ್ದ ಸಂಧರ್ಭದಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಡಾ.ಕೆ. ಚಿನ್ನಪ್ಪ ಗೌಡರು ಅಂತಹ ನೆಲೆಯೊಂದನ್ನು ಅಭಿವ್ಯಕ್ತಿಸಿದ್ದರು. ಹಾಗೆಯೇ ನುಡಿಸಿರಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬರಗೂರು, ವೈದೇಹಿ ಮೊದಲಾದ ಗಣ್ಯರು ಕೂಡ ಯಾವುದೇ ನೆಲೆಯಲ್ಲಿ ಕೃತ್ರಿಮ ಯಜಮಾನಿಕೆಯನ್ನು ಒಪ್ಪಿಕೊಳ್ಳುವ ವರ್ತನೆಯನ್ನು ತೋರಿಲ್ಲ. ದಸರಾ ಹಬ್ಬವನ್ನು ಉಧ್ಘಾಟಿಸುತ್ತಲೆ ಬರಗೂರು ರಾಮಚಂದ್ರಪ್ಪನವರು ಅದರ ಮೂಲಸೆಲೆಯಾದ ಪ್ರಭುತ್ವ ಅಥವಾ ಶಸ್ತ್ರ ಸಂಸ್ಕ್ರತಿಯನ್ನು “ರಿಜೆಕ್ಟ್” ಮಾಡಿದ್ದು ಕೂಡ ಇಲ್ಲಿ ಉಲ್ಲೇಖನೀಯ.

ಬೌಧ್ಧಿಕತೆಯು ತನ್ನ ಅಭಿವ್ಯಕ್ತಿಗೆ ಹಲವು ಸಾಧ್ಯತೆಗಳನ್ನು ರೂಪಿಸಿಕೊಂಡಿದೆ. ಯು.ಆರ್. ಅನಂತಮೂರ್ತಿಯವರು ಪ್ರಾಜ್ಞರು. ಜೀವಪರ ಧೋರಣೆಯುಳ್ಳವರು. ತನ್ನ ಹಾದಿಯ ಕುರಿತಂತೆ ಸ್ಪಷ್ಟವಾದ ಯೋಚನೆಗಳನ್ನು ಹೊಂದಿದ್ದಾರೆ. ಹೀಗಿರುವಾಗ ಸಮಷ್ಟಿಯ ಹಿತಕ್ಕೆ ಪೂರಕವಾದಂತಹ ನಿಲುವನ್ನು ಕೈಗೊಳ್ಳುತ್ತಾರೆ ಅನ್ನೋ ಸಹಜ ವಿಶ್ವಾಸ ಅವರ ಓದುಗ ಬಳಗಕ್ಕಿದೆ.

ಹಾಗೆಯೇ ಇಂತಹ ಒಂದು ಚರ್ಚೆಯನ್ನು ಹುಟ್ಟು ಹಾಕಿದ, ಮಂಗಳೂರಿನಲ್ಲಿ ನಡೆಯುತ್ತಿರುವ ಮಾತನಾಡಲಾಗದ ಟೀಕಿಸಲಾಗದ ವಿಷಯ-ವಿಚಾರಗಳನ್ನು ದಿಟ್ಟತೆಯಿಂದ ಸಾರ್ವಜನಿಕ ವೇದಿಕೆಗೆ ತರುತ್ತಿರುವ ಪತ್ರಕರ್ತ ನವೀನ್ ಸೂರಿಂಜೆಯವರಿಗೆ ಕೃತಜ್ಞತೆಗಳೂ ಸಹ.

ಪ್ರಜಾ ಸಮರ-7 (ನಕ್ಸಲ್ ಕಥನ)


– ಡಾ.ಎನ್.ಜಗದೀಶ್ ಕೊಪ್ಪ


ಕೊಂಡಪಲ್ಲಿ ಸೀತಾರಾಮಯ್ಯನವರ ಸಂಘಟನಾ ಚಾತುರ್ಯದಿಂದ 1978ರ ಸೆಪ್ಟಂಬರ್ ವೇಳೆಗೆ ಆಂಧ್ರದಲ್ಲಿ ಯುವಶಕ್ತಿ ಧ್ರುವೀಕರಣಗೊಂಡಿತ್ತು. ಈ ಕಾರಣದಿಂದಾಗಿ ಕ್ರಾಂತಿಯ ಯುವ ಶಕ್ತಿ ಏನೆಂಬುದನ್ನು ಜನಸಾಮಾನ್ಯರ ಕಷ್ಟಕೋಟಲೆಗಳಿಗೆ ಕಣ್ಮುಚ್ಚಿ ಕುಳಿತಿದ್ದ ಸಾಮಾಜಿಕ ಮತ್ತು ಆಡಳಿತ ವ್ಯವಸ್ಥೆಗೆ ತೋರಿಸಲು ಮುಂದಾಯಿತು. ಪ್ರಥಮವಾಗಿ 1972 ರಲ್ಲಿ ಇಬ್ಬರು ರೈತರನ್ನು ನೇಣಿಗೇರಿಸಲು ಕಾರಣನಾದ ಆದಿಲಾಬಾದ್ ಜಿಲ್ಲೆಯ ಜಮೀನ್ದಾರ ಮತ್ತು ಒಂದು ಬಾರಿ ಶಾಸಕನಾಗಿದ್ದ 65 ವರ್ಷದ ಪಿತಾಂಬರರಾವ್ ಎಂಬುವನ ವಿರುದ್ಧ ಸಂಘಟನೆಯ ಕಾರ್ಯಕರ್ತರು ಕಾರ್ಯಾಚರಣೆಗೆ ಇಳಿದರು. ಈ ಮುನ್ನ ಎರಡು ವರ್ಷದ ಹಿಂದೆ ನಕ್ಸಲಿಯರಿಂದ ಈ ಜಮೀನ್ದಾರ ಪಿತಾಂಬರರಾವ್ ಕೂದಲೆಳೆಯ ಅಂತರದಲ್ಲಿ ಸಾವಿನಿಂದ ಪಾರಾಗಿದ್ದ.

1976 ರಲ್ಲೇ ಈತನನ್ನು ಮುಗಿಸಲು ತೀರ್ಮಾನಿಸಿದ್ದ ನಕ್ಸಲಿಯರು ಸೆಪ್ಟಂಬರ್ 25 ರಂದು ಸಂಜೆ ಅವನ ಸ್ವಂತ ಊರಾದ ಅದಿಲಾಬಾದ್ ಜಿಲ್ಲೆಯ ತಪ್ಪಲಪುರದಲ್ಲಿ ಅವನ ಬಂಗಲೆಯ ಎದುರು ಕತ್ತಲಲ್ಲಿ ಕಾದು ಕುಳಿತಿದ್ದರು. ಮೊದಲೇ ತೀರ್ಮಾನಿಸಿದಂತೆ ಒಂದು ತಂಡ ಅವನ ಮನೆಯ ಬಳಿ ಕಾದು ಕುಳಿತು, ಅವನ ಕುಟುಂಬದ ಚಲನವಲನ ಗಮನಿಸುವುದು, ಇನ್ನೊಂದು ತಂಡ ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಮನೆಯ ಮೇಲೆ ದಾಳಿ ಮಾಡುವುದು ಎಂದು ನಿರ್ಧರಿಸಲಾಗಿತ್ತು.

ಆಂಧ್ರಪ್ರದೇಶದ ತೆಲಂಗಾಣ ಪ್ರಾಂತ್ಯದಲ್ಲಿ ರೆಡ್ಡಿಗಳಷ್ಟೇ ಮತ್ತೊಂದು ಬಲಿಷ್ಟ ಸಮುದಾಯವಾದ ವೆಲಮ ಜಾತಿಗೆ ಸೇರಿದ ಪಿತಾಂಬರರಾವ್ ತನ್ನ ಕ್ರೌರ್ಯ ಮತ್ತು ದರ್ಪದಿಂದ  ಸುತ್ತ ಮುತ್ತಲಿನ ಹಳ್ಳಿಗಳಿಗೆ ಸಿಂಹಸ್ವಪ್ನವಾಗಿದ್ದ. ವೆಲಮ ಜಾತಿಯ ಬಗ್ಗೆ ಆಂಧ್ರದಲ್ಲಿ ಒಂದು ಹಾಸ್ಯದ ಮಾತೊಂದು ಈಗಲೂ ಚಾಲ್ತಿಯಲ್ಲಿದೆ.  ಯಾರಾದರೂ ವೆಲಮ ಜಾತಿಗೆ ಸೇರಿದ ವ್ಯಕ್ತಿಯ ಮುಕುಳಿಗೆ ಬೆಂಕಿ ಹಚ್ಚಿದರೆ, ಅವನು ಬೆಂಕಿ ಆರಿಸಿಕೊಳ್ಳುವ ಬದಲು ಇನ್ನೊಬ್ಬರು ಬಂದು ಆರಿಸಲಿ ಎಂದು ಕಾಯುತ್ತಾನೆ ಎಂದು. ಪ್ರತಿಯೊಂದು ಕೆಲಸಕ್ಕೂ ಇನ್ನೊಬ್ಬರನ್ನು ಆಶ್ರಯಿಸಿ ಶೋಷಿಸುವುದನ್ನು ವೃತ್ತಿಯಾಗಿಸಿಕೊಂಡಿದ್ದ ಪಿತಾಂಬರರಾವ್‌ನನ್ನು ಮುಗಿಸುವುದು ನಕ್ಸಲಿಯರ ಮೊದಲ ಆದ್ಯತೆಯಾಗಿತ್ತು. ಏಕೆಂದರೆ ಈತ 1972 ರಲ್ಲಿ ನಡೆದ ಇಬ್ಬರು ಜಮೀನ್ದಾರರ ಕೊಲೆಗೆ ಸಂಬಂಧಿಸಿದಂತೆ ಭೂಮಯ್ಯ ಮತ್ತು ಕ್ರಿಸ್ತಗೌಡ ಎಂಬ ಇಬ್ಬರು ಅಮಾಯಕ ಸಣ್ಣ ರೈತರನ್ನು ಪೊಲೀಸರಿಗೆ ಹಿಡಿದು ಒಪ್ಪಿಸಿದ್ದ. ಪಿತಾಂಬರರಾವ್ ಅಕ್ರಮವಾಗಿ ಆಕ್ರಮಿಸಿಕೊಂಡಿದ್ದ ಜಮೀನನ್ನು ವಾಪಸ್ ಪಡೆಯಲು ಈ ರೈತರು ನಕ್ಸಲಿಯರ ಮೊರೆ ಹೋಗಿದ್ದರು. ಇದು ಪಿತಾಂಬರರಾವ್‌ನ ಸಿಟ್ಟಿಗೆ ಕಾರಣವಾಗಿತ್ತು. ಈ ನತದೃಷ್ಟ ರೈತರ ಬಿಡುಗಡೆಗಾಗಿ ಮಾನವ ಹಕ್ಕು ಸಂಘಟನೆಗಳು ಸತತ ಕಾನೂನು ಹೋರಾಟ ನಡೆಸಿದವು. ಆದರೆ, ಪಿತಾಂಬರರಾವ್ ಚಿತಾವಣೆಯಿಂದಾಗಿ ಸೃಷ್ಟಿಯಾದ ನಕಲಿ ಸಾಕ್ಷಿಗಳ ಹೇಳಿಕೆಯ ಆಧಾರದ ಮೇಲೆ ಆಂಧ್ರ ಹೈಕೋರ್ಟ್ ರೈತರಿಗೆ 1974ರಲ್ಲಿ ಗಲ್ಲು ಶಿಕ್ಷೆ ವಿಧಿಸಿತು. 1975 ರಲ್ಲಿ ದೇಶಾದ್ಯಂತ ಹೇರಲಾಗಿದ್ದ ತುರ್ತು ಪರಿಸ್ಥಿತಿಯ ಸಮಯದಲ್ಲಿ ಆಂಧ್ರ ಸರ್ಕಾರ ಡಿಸಂಬರ್ ಒಂದರಂದು ಈ ಇಬ್ಬರು ರೈತರನ್ನು ಮುಷಿರಾಬಾದ್ ಸೆರೆಮನೆಯಲ್ಲಿ ನೇಣಿಗೇರಿಸಿತು. ಭಾರತದಲ್ಲಿ ಸ್ವಾತಂತ್ರ್ಯಾನಂತರ ಗಾಂಧಿ ಹತ್ಯೆಗೆ ಸಂಬಂಧಿಸಿದಂತೆ 1948 ರಲ್ಲಿ ನಾಥುರಾಮ್ ಗೂಡ್ಸೆಯನ್ನು ಗಲ್ಲಿಗೇರಿಸಿದ ಘಟನೆಯನ್ನು ಹೊರತುಪಡಿಸಿದರೆ, ಪ್ರಪ್ರಥಮವಾಗಿ ಈ ಅಮಾಯಕ ರೈತರು ತಮ್ಮದಲ್ಲದ ತಪ್ಪಿಗೆ ನೇಣುಗಂಬದಲ್ಲಿ ಸಾವು ಕಂಡರು.

ಈ ಘಟನೆ ನಕ್ಸಲ್ ಸಂಘಟನೆಯ ಯುವಕರ ಸಿಟ್ಟಿಗೆ ಮೂಲಕಾರಣವಾಗಿತ್ತು. ಅಂದು ಸಂಜೆ ಮಬ್ಬುಗತ್ತಲಲ್ಲಿ ಪಿತಾಂಬರರಾವ್‌ನ ಬಲಿಗಾಗಿ ಕಾಯುತಿದ್ದ ಯುವಕರಲ್ಲಿ ಒಬ್ಬಾತ ವಿಜ್ಞಾನ ಪದವೀಧರನಾಗಿದ್ದು ಶಿಕ್ಷಕನಾಗಿ ಕೆಲಸ ನಿರ್ವಹಿಸುತಿದ್ದ. ದೈತ್ಯಾಕಾರದ ಭೀಮನಂತೆ ಗೋಚರಿಸುತಿದ್ದ ಇನ್ನೊಬ್ಬ ಯುವಕ ಗೆರಿಲ್ಲಾ ಯುದ್ಧತಂತ್ರದಲ್ಲಿ ಪಳಗಿದವನಾಗಿದ್ದ. ಆದರೆ ಆ ದಿನ ಸಂಜೆ ಅವರ ಕಾರ್ಯತಂತ್ರ ಯಶಸ್ವಿಯಾಗಲಿಲ್ಲ. ಇವರುಗಳು  ಮನೆಯ ಮುಂದೆ ಕತ್ತಲಲ್ಲಿ ಕಾದು ಕುಳಿತಿರುವುದನ್ನು ಪಿತಾಂಬರರಾವ್ ಮನೆಯ ಆಳು ಗಮನಿಸಿದ ಕೂಡಲೇ ಕೂಗತೊಡಗಿದ. ಕೆಲವು ಯುವಕರು ನೆಗೆದು ಅವನನ್ನು ಹಿಡಿದು ಬಾಯಿ ಮುಚ್ಚಿಸುವುದರಲ್ಲಿ ಆತ ಜೋರಾಗಿ ಅರಚಾಡಿದ ಫಲವಾಗಿ ಇತರೆ ಆಳುಗಳು ಓಡೋಡಿ ಬಂದರು. ಅಷ್ಟರಲ್ಲಿ ನಕ್ಸಲ್ ಯುವಕರು ತಮ್ಮ ಬಳಿ ಇದ್ದ ಕಚ್ಛಾ ಬಾಂಬ್‌ಗಳನ್ನು ಪಿತಾಂಬರರಾವ್ ಮನೆಯ ಮೇಲೆ ಎಸೆದು ಕತ್ತಲಲ್ಲಿ ಪರಾರಿಯಾದರು

ತಮ್ಮ ಮೊದಲ ಯತ್ನದಲ್ಲಿ ಸೋಲು ಕಂಡರೂ ವಿಚಲಿತರಾಗದ ನಕ್ಸಲ್ ಯುವಕರು ಎರಡು ವರ್ಷದ ನಂತರ ಅಂದರೆ, 1978 ನವಂಬರ್ ಏಳರಂದು ಮತ್ತೇ ಪಿತಾಂಬರರಾವ್ ಮನೆಯೆದರು ಶಸ್ತ್ರ ಸಜ್ಜಿತರಾಗಿ ಹಾಜರಾದರು. ಆದಿನ ಮನೆಯ ಗೇಟಿನ ಬಳಿ ಗ್ರಾಮಸ್ಥರ ಜೊತೆ ಮಾತನಾಡುತ್ತಾ ನಿಂತಿದ್ದ ಆತನ ಇಬ್ಬರು ವಯಸ್ಕ ಪುತ್ರರು ಹಾಗೂ ರಕ್ಷಣೆಗೆ ನೇಮಕಗೊಂಡಿದ್ದ ಓರ್ವ ಪೊಲೀಸ್ ಪೇದೆ ಕ್ಷಣಾರ್ಧದಲ್ಲಿ ಗುಂಡಿಗೆ ಬಲಿಯಾದರು.

ನಂತರ ಬಾಂಬುಗಳ ಸುರಿಮಳೆಗಯ್ಯುತ್ತಾ ವಿಶಾಲವಾದ ಅರಮನೆಯಂತಹ ಬಂಗಲೆಯ ಒಳ ಹೊಕ್ಕು ಜಮೀನ್ದಾರನಿಗೆ ಹುಡುಕಾಡಿದರು. ಆ ದಿನ ಅವನ ಅದೃಷ್ಟ ಚೆನ್ನಾಗಿದ್ದ ಕಾರಣ ಆತ ಮನೆಯಲ್ಲಿ ಇರಲಿಲ್ಲ. ದಾಳಿಗೆ ಪ್ರತಿರೋಧ ತೋರಿದ ಹತ್ತಕ್ಕೂ ಹೆಚ್ಚು ಸೇವಕರು ಬಾಂಬ್ ಮತ್ತು ಗುಂಡಿನ ದಾಳಿಗೆ ಬಲಿಯಾದರು. ತಪ್ಪಲಪುರದಿಂದ ನೆರೆಯ ಗ್ರಾಮಕ್ಕೆ ಹೊರಟ ನಕ್ಸಲ್ ಯುವಕರ ತಂಡ ಪಿತಾಂಬರರಾವ್‌ಗೆ ಗುಮಾಸ್ತನಾಗಿದ್ದುಕೊಂಡು ಆತನ ಎಲ್ಲಾ ಅಕ್ರಮಗಳಿಗೆ ಸೂತ್ರಧಾರನಾಗಿದ್ದ ವ್ಯಕ್ತಿಯ ಮನೆ ಹೊಕ್ಕು ಅವನ ಬಳಿ ಇದ್ದ ಪಿತಾಂಬರರಾವ್‌ನ ಎಲ್ಲಾ ಭೂದಾಖಲೆಗಳನ್ನು ಸುಟ್ಟುಹಾಕಿ ಗುಮಾಸ್ತನನ್ನು ನಡುರಸ್ತೆಗೆ ಕರೆತಂದು ಗಂಟಲು ಸೀಳಿ ಕೊಂದು ಹಾಕಿತು. ಇಷ್ಟಕ್ಕೂ ತೃಪ್ತಿಯಾಗದ ಯುವಕರು ರೈತರ ವಿರುದ್ದ ಸುಳ್ಳು ಸಾಕ್ಷಿ ಹೇಳಿ ಗಲ್ಲು ಶಿಕ್ಷೆ ನೀಡಲು ಕಾರಣನಾದ ವ್ಯಕ್ತಿಯನ್ನು ಅದೇ ಹಳ್ಳಿಯಲ್ಲಿ ಅರಸುತ್ತಾ ಹೊರಟಿತು. ನಕ್ಸಲರು ತನ್ನನ್ನು ಅರಸುತ್ತಾ ಬರುತ್ತಿರುವ ಸುದ್ಧಿ ಕೇಳಿ ಓಡಿ ಹೋಗುತಿದ್ದ ಆತನ ಮೇಲೆ ಗುಂಡು ಹಾರಿಸಿದರು. ಅದೃಷ್ಟವಶಾತ್ ಕತ್ತಲೆಯಲ್ಲಿ ಗುಂಡು ತಗುಲದೇ ಅಪಾಯದಿಂದ ಪಾರಾಗಿ ತಲೆಮರೆಸಿಕೊಂಡ. ನಂತರದ ದಿನಗಳಲ್ಲಿ ನಕ್ಸಲ್ ನಾಯಕರ ಎದುರು ಹಾಜರಾಗಿ ಕ್ಷಮೆ ಕೋರಿ ಜೀವಧಾನಕ್ಕಾಗಿ ಬೇಡಿಕೊಂಡ. ಜನತಾ ನ್ಯಾಯಾಲಯದಲ್ಲಿ ಅವನನ್ನು ಕ್ಷಮಿಸಿದ ನಾಯಕರು ಅವನಿಂದ ಪಿತಾಂಬರರಾವ್ ರೈತರಿಂದ ಕಸಿದುಕೊಂಡಿದ್ದ ಜಮೀನುಗಳ ಎಲ್ಲಾ ಮಾಹಿತಿ ಪಡೆದರು.

1978ರ ನವಂಬರ್ ತಿಂಗಳಿನಲ್ಲಿ ಅದಿಲಾಬಾದ್ ಜಿಲ್ಲೆಯಲ್ಲಿ ನಡೆದ ಈ ಘಟನೆ ಆಂಧ್ರ ಪ್ರದೇಶದಲ್ಲಿ ನಕ್ಸಲ್ ಶಕ್ತಿಯನ್ನು ಪ್ರದರ್ಶಿಸುವುದರ ಜೊತೆಗೆ  ಕರೀಂ ನಗರ, ಪೂರ್ವಗೋದಾವರಿ, ವಾರಂಗಲ್, ಶ್ರೀಕಾಕುಳಂ ಜಿಲ್ಲೆಗಳ ಜಮೀನ್ದಾರರ ಎದೆಯಲ್ಲಿ ಜೀವ ಭಯದ ಬೀಜವನ್ನು ಬಿತ್ತಿತು. ಜೊತೆಗೆ ಸಣ್ಣ ರೈತರು ಕೂಲಿಕಾರ್ಮಿಕರು ಮತ್ತು ಆದಿವಾಸಿಗಳಿಗೆ ಇನ್ನಿಲ್ಲದ ಆತ್ಮಬಲವನ್ನು ತಂದುಕೊಟ್ಟಿತು.

>ಆಂಧ್ರದಲ್ಲಿ ಶ್ರೀಕಾಕುಳಂ ಜಿಲ್ಲೆಯಲ್ಲಿ 60 ರ ದಶಕದಲ್ಲಿ ವೆಂಪಟಾಪು ಸತ್ಯನಾರಾಯಣ ಮತ್ತು ಕೈಲಾಸಂ ಉಂಟುಮಾಡಿದ್ದ ಸಂಚಲನವನ್ನು ಮತ್ತೇ ಅದಿಲಾಬಾದ್ ಜಿಲ್ಲೆಯಲ್ಲಿ ಪಿತಾಂಬರರಾವ್ ಕುಟುಂಬವನ್ನು ಬಲಿತೆಗೆದುಕೊಳ್ಳುವುದರ ಮೂಲಕ (ಘಟನೆಯಲ್ಲಿ ಬದುಕುಳಿದಿದ್ದ ಪಿತಾಂಬರರಾವ್ 1980ರಲ್ಲಿ ವೃದ್ಧಾಪ್ಯದಿಂದ ಸಾವನ್ನಪ್ಪಿದ) ಸೃಷ್ಟಿ ಮಾಡಿದ ಯುವಕ ಮತ್ತು ವಿಜ್ಞಾನ ಪದವೀಧರ ಶಿಕ್ಷಕ ಯಾರೆಂದರೆ, ನಲ್ಲ ಆದಿರೆಡ್ಡಿ ಅಲಿಯಾಸ್ ಕಾಮ್ರೇಡ್ ಶ್ಯಾಮ್. ಈತ ಆ ಸಂದರ್ಭದಲ್ಲಿ ಕರೀಮ್ ನಗರ ಜಿಲ್ಲೆಯ ಸಂಘಟನಾ ನಾಯಕನಾಗಿ ಕಾರ್ಯನಿರ್ವಹಿಸುತಿದ್ದ. ಈತನ ಜೊತೆ ಇದ್ದವರು ಸಂತೋಷ್ ರೆಡ್ಡಿ ಅಲಿಯಾಸ್ ಮಹೇಶ್ ಮತ್ತು ಶೀಲಂನಾಗೇಶ್ ಅಲಿಯಾಸ್ ಮುರುಳಿ ಎಂಬ ಇಬ್ಬರು ಯುವನಾಯಕರು.

ಈ ಮೂವರು ನತದೃಷ್ಟರು ಘಟನೆ ನಡೆದ 21 ವರ್ಷಗಳ ನಂತರ 1999 ಡಿಸಂಬರ್ ಎರಡರಂದು ಬೆಂಗಳೂರಿನ ಗಾಂಧಿನಗರದ ಹೋಟೆಲ್ ಒಂದರಲ್ಲಿ ಆಂಧ್ರ ಪೊಲೀಸರಿಂದ ಬಂಧಿತರಾದರು. ಅಂದು ರಾತ್ರಿಯೇ ಬೆಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ಆಂಧ್ರಕ್ಕೆ ಕೊಂಡೊಯ್ದ ಪೊಲೀಸರು ಮರುದಿನ ಬೆಳಗಿನ ಜಾವ ಹೈದರಾಬಾದ್ ನಗರಕ್ಕೆ ಕರೆತಂದರು. ನಂತರ ವಿಚಾರಣೆಯ ನೆಪದಲ್ಲಿ ಕೊಯ್ಯೂರು ಅರಣ್ಯ ಪ್ರದೇಶಕ್ಕೆ ಕರೆದೊಯ್ದು ಮೂವರನ್ನು ಗುಂಡಿಟ್ಟು ಕೊಲ್ಲುವುದರ ಮೂಲಕ ಎನ್ ಕೌಂಟರ್ ಹಣೆಪಟ್ಟಿ ಹಚ್ಚಿದರು. ಬೆಂಗಳೂರಿನಲ್ಲಿ ಆಶ್ರಯ ಕೊಡುತ್ತೀನಿ ಎಂದು ನಂಬಿಸಿ ಕರೆ ತಂದಿದ್ದ ಪೊಲೀಸ್ ಮಾಹಿತಿದಾರನೊಬ್ಬನ ಸಂಚಿಗೆ ಈ ಮೂವರು ನಕ್ಸಲ್ ನಾಯಕರು ಬಲಿಯಾಗಿದ್ದರು. ಇವರ ಪೈಕಿ ತಪ್ಪಲಪುರದ ಪಿತಾಂಬರರಾವ್ ಮನೆ ಮೇಲಿನ ದಾಳಿಯಲ್ಲಿ ಭಾಗವಹಿಸಿ, ಪೊಲೀಸರ ಸಂಚಿನಿಂದ ತಪ್ಪಿಸಿಕೊಂಡು ಬದುಕುಳಿದ ಇನ್ನೋರ್ವ ನಾಯಕನೆಂದರೆ, ವೆಲಮ  ಜಾತಿಗೆ ಸೇರಿದ

ಕಳೆದ ವರ್ಷ ನವಂಬರ್‌ನಲ್ಲಿ ಪಶ್ಚಿಮ ಬಂಗಾಳದ ಮಿಡ್ನಾಪುರ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಮಧ್ಯ ಮತ್ತು ಪೂರ್ವ ಭಾರತದ ಹಿರಿಯ ನಾಯಕ ಕಿಷನ್‌ಜಿ ಪೊಲೀಸರ ಗುಂಡಿಗೆ ಬಲಿಯಾದ. ಇದರ ಬೆನ್ನಲ್ಲೇ ಶಸ್ತ್ರಾಸ್ತ್ರ ತಯಾರಿಕೆಯಲ್ಲಿ ನಿಪುಣರಾಗಿದ್ದ ಮತ್ತೊಬ್ಬ ಹಿರಿಯ ನಾಯಕ ಆರ್.ಕೆ. (ರಾಮಕೃಷ್ಣ) ಈ ವರ್ಷದ ಮೇ ತಿಂಗಳಿನಲ್ಲಿ ಕೊಲ್ಕತ್ತ ಪೊಲೀಸರಿಂದ ಬಂಧನಕ್ಕೆ ಒಳಗಾದರು. ನಕ್ಸಲ್ ಹೋರಾಟದ ಅನಿರೀಕ್ಷಿತ ಹಿನ್ನಡೆಯ ನಡುವೆಯೂ ದೇಶದ 11 ರಾಜ್ಯಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿಯೋಜಿಸಿರುವ 75 ಸಾವಿರ ಪೊಲೀಸರು, ನಕ್ಸಲ್ ನಿಗ್ರಹ ಪಡೆ ಮತ್ತು ಕೇಂದ್ರ ಶಸಸ್ತ್ರ ಮೀಸಲು ಪಡೆಯ ಸೈನಿಕರ ಪ್ರತಿರೋಧದ ನಡುವೆ ಆಂಧ್ರ ಮೂಲದ ಗಣಪತಿ ನಕ್ಸಲ್ ಹೋರಾಟವನ್ನು ಈಗ ಮುನ್ನಡೆಸುತಿದ್ದಾರೆ.

1970 ದಶಕದ ಅದಿಲಾಬಾದ್ ಜಿಲ್ಲೆಯ ಸಾಮಾಜಿಕ ಕ್ರಾಂತಿಯ ಹೋರಾಟ ನೆರೆಯ ಕರೀಂನಗರದ ಜಿಲ್ಲೆಗೂ ವಿಸ್ತರಿಸಿ ಮಾವೋ-ಲೆನಿನ್‌ವಾದಿ ಕಮ್ಯೂನಿಷ್ಟ್ ಕಾರ್ಯಕರ್ತರಿಗೆ ಯಶಸ್ಸು ತಂದುಕೊಡುವುದರ ಜೊತೆಗೆ ಮಾನಸಿಕವಾಗಿ ಸ್ಥೈರ್ಯವನ್ನು ತುಂಬಿಕೊಟ್ಟಿತು. ಕರೀಂನಗರದ ಜಿಲ್ಲೆಯ ಸಾಮಾಜಿಕ ಪರಿಸ್ಥಿತಿ ಅದಿಲಾಬಾದ್ ಜಿಲ್ಲೆಗಿಂತ ಭಿನ್ನವಾಗಿರಲಿಲ್ಲ. ಇಲ್ಲಿ ಶ್ರೀಮಂತ ಜಮೀನ್ದಾರರ ಎದುರು ದಲಿತರು ಚಪ್ಪಲಿಯನ್ನು ಧರಿಸಿ ಓಡಾಡುವಂತಿರಲಿಲ್ಲ, ಅಲ್ಲದೇ ಭೂಮಿಯ ಮೇಲಿನ ಹಕ್ಕನ್ನು ಹೊಂದುವಂತಿರಲಿಲ್ಲ. ಆದರೆ, 1977ರಲ್ಲಿ ಕಮ್ಯೂನಿಷ್ಟ್ ಕಾರ್ಯಕರ್ತರಿಂದ ಪ್ರೇರಿತನಾಗಿದ್ದ ದಲಿತ ಕೂಲಿಕಾರ್ಮಿಕ ಲಕ್ಷ್ಮೀರಾಜು ಎಂಬಾತ ತನ್ನ ಹಳ್ಳಿಯಲ್ಲಿ ಚಪ್ಪಲಿ ತೊಟ್ಟು ಓಡಾಡತೊಡಗಿದ. ದಸರಾ ಸಮಯದಲ್ಲಿ ಜಮೀನ್ದಾರರು ಸಾಮಾಜಿಕವಾಗಿ ನಿಷೇದ ಹೇರಿದ್ದ ದಲಿತರೇ ಅಭಿನಯಿಸಿ ಪ್ರದರ್ಶಿಸುತ್ತಿದ್ದ ದಕ್ಕಮ್ಮ ಎಂಬ ನಾಟಕವನ್ನು ದಲಿತ ಯುವಕರೊಂದಿಗೆ ಕರೀಂನಗರ ಜಿಲ್ಲೆಯಾದ್ಯಂತ ಹಳ್ಳಿಗಳಲ್ಲಿ ಪ್ರದರ್ಶಿಸತೊಡಗಿದ.

ಕೊಂಡಪಲ್ಲಿಯವರ ಯೋಜನೆಗಳಲ್ಲಿ ಒಂದಾದ ಹಳ್ಳಿಗಳತ್ತ ಪಯಣಿಸಿ ಕಾರ್ಯಕ್ರಮದ ಅನ್ವಯ ನಗರಗಳಿಂದ ಬಂದಿದ್ದ ವಿದ್ಯಾರ್ಥಿಗಳು ಈತನಿಗೆ ಬೆನ್ನೆಲುಬಾಗಿ ನಿಂತರು. ತಮ್ಮ ರಜಾದಿನಗಳಲ್ಲಿ ಹಳ್ಳಿಗಳಿಗೆ ಬರುತಿದ್ದ ಈ ವಿದ್ಯಾರ್ಥಿಗಳು ದಲಿತರು, ಆದಿವಾಸಿಗಳು ಮತ್ತು ಇತರೆ ಹಿಂದುಳಿದ ಜನಾಂಗದ ಜನರಿಗೆ ಸಮಾಜದಲ್ಲಿ ತಾಂಡವವಾಡುತ್ತಿರುವ ಅಸಮಾನತೆ ಬಗ್ಗೆ ನಾಟಕ ಪ್ರದರ್ಶನದ ಸಂದರ್ಭದಲ್ಲಿ ಜಾಗೃತಿ ಮೂಡಿಸುತಿದ್ದರು. ಇದರ ಜೊತೆ ಜೊತೆಯಲ್ಲಿ ಗುಡ್ಡಗಾಡು ಪ್ರದೇಶದ ಭೂಮಿ ಅಥವಾ ಪಾಳು ಬಿದ್ದಿರುವ ಸರ್ಕಾರಿ ಭೂಮಿಯಲ್ಲಿ ಬೇಸಾಯ ಮಾಡಲು ಪ್ರೋತ್ಸಾಹಿಸುತ್ತಿದ್ದರು. ಇದರಿಂದ ಪ್ರೇರಿತರಾದ ದಲಿತ ಲಕ್ಷ್ಮೀರಾಜು ಮತ್ತು ಆದಿವಾಸಿ ಯುವಕ ಪೋಸೆಟ್ಟ ಈ ಇಬ್ಬರೂ ತಮ್ಮ ಹಳ್ಳಿಗಳಲ್ಲಿ ಪಾಳು ಬಿದ್ದಿದ್ದ ಸರ್ಕಾರಿ ಭೂಮಿಗೆ ಬೇಲಿ ಹಾಕಿ ಉಳುಮೆ ಮಾಡತೊಡಗಿದರು. ಇಂತಹ ಬೆಳವಣಿಗೆ ವೆಲಮ ಜಾತಿಗೆ ಸೇರಿದ ಜಮೀನ್ದಾರರಿಗೆ ಸಹಜವಾಗಿ ನುಂಗಲಾರದ ತುತ್ತಾಗಿ ಪರಿಣಮಿಸಿತು. ತಮ್ಮ ಗೂಂಡಾ ಪಡೆಯ ಸದಸ್ಯರ ಮೂಲಕ ಇಬ್ಬರನ್ನೂ ಹತ್ಯೆ ಮಾಡಿಸುವುದರ ಮೂಲಕ ಪರೋಕ್ಷವಾಗಿ ಕರೀಂನಗರ ಜಿಲ್ಲೆಗೆ ಕಮ್ಯೂನಿಷ್ಟರಿಗೆ ಹೋರಾಟಕ್ಕಾಗಿ ಆಹ್ವಾನವಿತ್ತರು.

ಲಕ್ಷ್ಮೀರಾಜು ಮತ್ತು ಪೋಸೆಟ್ಟಿ ಹತ್ಯೆಗೆ ಪ್ರತಿಯಾಗಿ ಕಮ್ಯೂನಿಷ್ಟ್ ಕಾರ್ಯಕರ್ತರು ಈ ಬಾರಿ ನೇರವಾಗಿ ಕಾರ್ಯಾಚರಣೆಗೆ ಇಳಿಯುವ ಬದಲು ಜಮೀನ್ದಾರರಿಗೆ ಪಾಠ ಕಲಿಸಲು ಬೇರೋಂದು ಮಾರ್ಗೋಪಾಯವನ್ನು ಕಂಡುಕೊಂಡಿದ್ದರು. ಜಿಲ್ಲೆಯಾದ್ಯಂತ ಯಾವೊಬ್ಬ ದಲಿತನೂ ಜಮೀನ್ದಾರರ ಭೂಮಿಯಲ್ಲಿ ಜೀತದಾಳಾಗಿ ದುಡಿಯದಂತೆ ಕರೆನೀಡಿದರು. ಅಲ್ಲದೇ ಜೀತದಾಳುಗಳಾಗಿ ದುಡಿಯುತ್ತಿರುವವರು ದೊರೆಗಳ ಮನೆಯಿಂದ ಹೊರಬಂದರೆ ಅಂತಹವರಿಗೆ ಎರಡು ಎಕರೆ ಭೂಮಿ ಒದಗಿಸಿಕೊಡುವುದಾಗಿ ಕರೆನೀಡಿದರು. ಇದು ನಿರೀಕ್ಷೆಗೂ ಮೀರಿ ಯಶಸ್ವಿಯಾಯಿತು. ಜಿಲ್ಲೆಯಾದ್ಯಂತ ಒಂದು ಲಕ್ಷ ದಲಿತರು ಮತ್ತು ಭೂರಹಿತ ಕೂಲಿಕಾರ್ಮಿಕರು ಕಮ್ಯೂನಿಷ್ಟ್ ಕಾರ್ಯಕರ್ತರ ಬಳಿ ಅರ್ಜಿ ಹಿಡಿದು ಬಂದರು. ಇವರನ್ನು ಒಗ್ಗೂಡಿಸಿದ ಕಾರ್ಯಕರ್ತರು ಸುಮಾರು 150ಕ್ಕೂ ಹೆಚ್ಚು ಹಳ್ಳಿಗಳ ಒಂದೂವರೆ ಲಕ್ಷ ಜನರನ್ನು ಒಂದುಗೂಡಿಸಿ ಜಾಗ್ತಿಯಾಳ್ ಎಂಬ ಪಟ್ಟಣದಲ್ಲಿ ಸಾರ್ವಜನಿಕ ಸಭೆ ನಡೆಸಿ, ಕರೀಂನಗರ ಜಿಲ್ಲೆಯಲ್ಲಿ ಜಮೀನ್ದಾರರು ಅಕ್ರಮವಾಗಿ ಸಾಗುವಳಿ ಮಾಡುತ್ತಿರುವ ಸರ್ಕಾರಿ ಭೂಮಿಯನ್ನು ಒಂದು ತಿಂಗಳ ಒಳಗಾಗಿ ಸರ್ಕಾರದ ವಶಕ್ಕೆ ಒಪ್ಪಿಸಬೇಕು, ಈ ಭೂಮಿಯನ್ನು ಸರ್ಕಾರ ತನ್ನ ವಶಕ್ಕೆ ತೆಗೆದುಕೊಂಡು ಭೂರಹಿತ ಕೂಲಿಕಾರ್ಮಿಕರು ಮತ್ತು ದಲಿತರಿಗೆ ಹಂಚಬೇಕೆಂದು ಗಡುವು ನೀಡಿದರು.

ಜೊತೆಗೆ ಸರ್ಕಾರಿ ಅಧಿಕಾರಿಗಳಿಗೆ, ಜಮೀನ್ದಾರರಿಗೆ ಮತ್ತು ಅವರಿಗೆ ಬೆಂಗಾವಲಾಗಿ ನಿಂತ ಪೊಲೀಸರಿಗೆ ಜಿಲ್ಲೆಯಾದ್ಯಂತ ವಿನೂತನ ಬಹಿಷ್ಕಾರ ಹಾಕಲಾಯಿತು. ಯಾವೊಬ್ಬ ದಲಿತ, ಕ್ಷೌರಿಕ, ಅಗಸ, ಚಮ್ಮಾರ, ಕಂಬಾರ, ಬಡಗಿ ಇವರುಗಳ ಸೇವೆಯನ್ನು ಬಂದ್ ಮಾಡಲಾಯಿತು. ಈ ಮೊದಲೇ ಜಾಗ್ತಿಯಾಳ್ ಪಟ್ಟಣದಲ್ಲಿ ಜರುಗಿದ ಸಮಾವೇಶದಿಂದ ನಡುಗಿಹೋಗಿದ್ದ ಜಮೀನ್ದಾರರು ಬಹಿಷ್ಕಾರ ಮತ್ತು ಜೀವಭಯದಿಂದ ತಮ್ಮ ಬಳಿ ಇದ್ದ ಅಕ್ರಮ ಜಮೀನುಗಳನ್ನು ಸರ್ಕಾರದ ವಶಕ್ಕೆ ಒಪ್ಪಿಸಿದರು. ಈ ಜಮೀನನ್ನು ಕಮ್ಯೂನಿಷ್ಟ್ ಕಾರ್ಯಕರ್ತರು ಭೂಮಿಯ ಲಭ್ಯತೆಯ ಅನುಸಾರ ಎಲ್ಲರಿಗೂ ಸಮನಾಗಿ ಹಂಚಿದರು. ಹೋರಾಟಕ್ಕೆ ಯಾವ ಪ್ರತಿಕ್ರಿಯೆ ನೀಡದೆ ತಣ್ಣಗಿದ್ದ ಜಿಲ್ಲಾಡಳಿತ ನಂತರದ ದಿನಗಳಲ್ಲಿ ನಾಲ್ಕು ಸಾವಿರ ದಲಿತರು ಮತ್ತು ಕೂಲಿಕಾರ್ಮಿಕರ ಮೇಲೆ ಮೊಕದ್ದಮೆ ದಾಖಲಿಸಿ, ಈ ಪ್ರದೇಶವನ್ನು ಗಲಭೆ ಪೀಡಿತ ಪ್ರದೇಶವೆಂದು ಘೋಷಿಸಿತು. ಭಾರತದ ಸಾಮಾಜಿಕ ಹೋರಾಟದಲ್ಲಿ ಪ್ರಥಮಬಾರಿಗೆ ಮೇಲ್ವರ್ಗದ ಜನಕ್ಕೆ ಬಹಿಷ್ಕಾರ ಹಾಕಿದ “ಜಾಗ್ತಿಯಾಳ್ ಯಾತ್ರ” ಎಂದು ಆಂಧ್ರ ಪ್ರದೇಶದ ಇತಿಹಾಸದಲ್ಲಿ ದಾಖಲಾಗಿರುವ ಈ ಹೋರಾಟದ ನೇತೃತ್ವವನ್ನು  ಕೊಂಡಪಲ್ಲಿ ಸೀತಾರಾಮಯ್ಯನವರ ಚಿಂತನೆಯ ಮೂಸೆಯಲ್ಲಿ ಬೆಳೆದು ನೆಚ್ಚಿನ ಯುವಕರಾಗಿದ್ದ ಗಣಪತಿ ಮತ್ತು ಮಲ್ಲೋಜ ಕೋಟೇಶ್ವರರಾವ್ ಅಲಿಯಾಸ್ ಕಿಷನ್‌ಜಿ ವಹಿಸಿಕೊಂಡಿದ್ದರು.

ಪಶ್ಚಿಮ ಬಂಗಾಳ, ಬಿಹಾರ ಮತ್ತು ಒರಿಸ್ಸಾ, ಛತ್ತೀಸ್‌ಘಡ, ಮಧ್ಯಪ್ರದೇಶ ರಾಜ್ಯಗಳ 16 ಸಾವಿರ ಹಳ್ಳಿಗಳ ಆದಿವಾಸಿಗಳು ಮತ್ತು ದಲಿತರ ಪಾಲಿಗೆ ಆರಾಧ್ಯ ದೈವನಾಗಿದ್ದ ಕಿಷನ್‌ಜಿ ಕಳೆದ ವರ್ಷ ನವಂಬರ್ 25ರಂದು ಪಶ್ಚಿಮ ಬಂಗಾಳದ ಪೊಲೀಸರು ಮಿಡ್ನಾಪುರ ಅರಣ್ಯ ಪ್ರದೇಶದಲ್ಲಿ ನಡೆಸಿದ ಎನ್‌ಕೌಂಟರ್‌ಗೆ ಬಲಿಯಾದ. (ಈ ನಕ್ಸಲ್ ಕಥನಕ್ಕೆ ಪ್ರೇರಣೆಯಾದ ವ್ಯಕ್ತಿ ಕಿಷನ್‌ಜಿ.) ಇದಕ್ಕೂ ಮುನ್ನ ಕೊಲ್ಕತ್ತ ನಗರದಲ್ಲಿ ಬಂಧಿಸಲ್ಪಟ್ಟ ಮಾವೋವಾದಿ ಕಾರ್ಯಕರ್ತನೊಬ್ಬನ ಲ್ಯಾಪ್‌ಟ್ಯಾಪ್‌ನಲ್ಲಿ ದೊರೆತ ಸುಳಿವಿನ ಆಧಾರದ ಮೇಲೆ ಮೊಬೈಲ್ ಸಿಮ್ ಕಾರ್ಡ್‌ನ ಸಂಪರ್ಕ ಜಾಲವನ್ನು ಹಿಂಬಾಲಿಸಿ ಕಿಷನ್‌ಜಿಯನ್ನು ಸರೆಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು. 36 ವರ್ಷಗಳ ಹಿಂದೆ ಕರೀಂನಗರ ಜಿಲ್ಲೆಯ ಪೆದ್ದಂಪಲ್ಲಿ ಗ್ರಾಮದಿಂದ ಬಂದು ನಕ್ಸಲ್ ಹೋರಾಟಕ್ಕೆ ಧುಮುಕಿದ ನಂತರ ಈತ ಒಮ್ಮೆಯೂ ತಾನು ಹುಟ್ಟಿ ಬೆಳೆದ ಕುಟುಂಬದತ್ತ ತಲೆ ಹಾಕಿರಲಿಲ್ಲ. ಹೆತ್ತ ತಾಯಿಯ ಮುಖ ನೋಡಿರಲಿಲ್ಲ. ಕೊಲ್ಕತ್ತ ನಗರದ ಆಸ್ಪತ್ರೆಯಲ್ಲಿ ಹೆಣವಾಗಿ ಮಲಗಿದ್ದ ಕಿಷನ್‌ಜಿ ಶವವನ್ನು ಅವನ ತಾಯಿ ಮತ್ತು ಅಣ್ಣನ ಮಗಳು ಆಂಧ್ರದಿಂದ ಬಂದು ಗುರುತಿಸಿದರು. (ಕೊಲ್ಕತ್ತ ನಗರದಲ್ಲಿ ಅವನ ಹಿತೈಷಿಗಳು ಆಸ್ಪತ್ರೆಯ ಶವಗಾರದಲ್ಲಿ ನಡೆದ ಮರಣೋತ್ತರ ಪರೀಕ್ಷೆಯ ಸಂದರ್ಭದ ಹಾಜರಿದ್ದು ತೆಗೆದ ಚಿತ್ರ ಇದು.) ಪಶ್ಚಿಮ ಬಂಗಾಳದ ಮುಖ್ಯ ಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರ ಕಿಷನ್‌ಜಿ ಶವವನ್ನು ಅವನ ಕುಟುಂಬಕ್ಕೆ ಒಪ್ಪಿಸಿ, ಆಂಧ್ರದ ಕರೀಂನಗರ ಜಿಲ್ಲೆಯ ಆತನ ಹುಟ್ಟಿದೂರಿನಲ್ಲಿ ಅಂತ್ಯಕ್ರಿಯೆ ನಡೆಸಲು ವಾಹನ ಸೌಕರ್ಯವನ್ನು ಸಹ ಒದಗಿಸಿಕೊಟ್ಟಿತು. ಡಿಸಂಬರ್ ಮೊದಲವಾರ ಕಿಷನ್ ಜಿ ಹುಟ್ಟೂರಾದ ಪೆದ್ದಂಪಲ್ಲಿ ಗ್ರಾಮದಲ್ಲಿ ಸಾವಿರಾರು ಅಭಿಮಾನಿಗಳ ನಡುವೆ ಅಂತ್ಯಕ್ರಿಯೆ ನೆರವೇರಿತು.

(ಮುಂದುವರಿಯುವುದು)

ರಾಜಕಾರಣದಲ್ಲಿ ಪ್ರಾದೇಶಿಕ ಪಕ್ಷಗಳ ಅನಿವಾರ್ಯತೆ ಇದೆಯೇ?


-ಚಿದಂಬರ ಬೈಕಂಪಾಡಿ


ರಾಷ್ಟ್ರೀಯ ಪಕ್ಷಗಳು ಅನಿವಾರ್ಯವೇ? ಪ್ರಾದೇಶಿಕ ಪಕ್ಷಗಳಿಗೆ ನೆಲೆಯಿಲ್ಲವೇ? ಮೈತ್ರಿ ಸರ್ಕಾರಗಳು ಅದೆಷ್ಟು ಸುಭದ್ರ? ಈ ಎಲ್ಲಾ ಪ್ರಶ್ನೆಗಳು ಅತ್ಯಂತ ಮುಖ್ಯವಾದವುಗಳು. ಯಾಕೆಂದರೆ ಚುನಾವಣೆಗಳ ನಂತರ ಹೊರ ಬೀಳುವ ಫಲಿತಾಂಶ ಜನರ ಮೇಲೆ ಉಂಟು ಮಾಡುವ ಪರಿಣಾಮಗಳು ಇಂಥ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಪ್ರೇರಣೆಯಾಗುತ್ತಿವೆ. ರಾಷ್ಟ್ರೀಯತೆ ಮತ್ತು ಪ್ರಾದೇಶಿಕತೆ ಇವುಗಳ ನಡುವೆ ತಿಕ್ಕಾಟವಿದೆ. ಪ್ರತ್ಯೇಕತೆಯಯತ್ತ ಒಲವು ಹೆಚ್ಚಾಗುತ್ತಿದೆ. ಸಮಗ್ರತೆಯನ್ನು ವಿಶಾಲ ಮನೋಭಾವದಿಂದ ಅರ್ಥಮಾಡಿಕೊಳ್ಳಬೇಕು ಎನ್ನುವ ಮಾತು ಬರೀ ಕ್ಲೀಷೆಯೆನಿಸುತ್ತಿದೆ. ರಾಜಕಾರಣಿಗಳು ತಮ್ಮ ತೆವಲಿಗೆ ಜನರನ್ನು ಬಳಸಿಕೊಳ್ಳುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಚುನಾವಣೆಗಳನ್ನು ಹಣ ಆಳುತ್ತಿದೆ. ಜನರೂ ಇದಕ್ಕೆ ಒಗ್ಗಿಕೊಳ್ಳುತ್ತಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಜನರಿಗೆ ಆಯ್ಕೆ ಎನ್ನುವುದು ಕಷ್ಟವಾಗುತ್ತಿದೆ. ಈ ಕಾರಣಕ್ಕಾಗಿಯೇ ಪಕ್ಷ ರಾಜಕಾರಣದಲ್ಲಿ ರಾಷ್ಟ್ರೀಯತೆ ಮತ್ತು ಪ್ರಾದೇಶಿಕತೆ ನಡುವೆ ಸಂಘರ್ಷ.

ಈ ದೇಶದ ರಾಜಕಾರಣವನ್ನು ಅವಲೋಕಿಸಿದರೆ ಅಸ್ಪಷ್ಟತೆ ಗೋಚರಿಸುತ್ತದೆ. ನಿರ್ಧಿಷ್ಟ ಸಂಖ್ಯಾಬಲದ ಕೊರತೆಯಿಂದಾಗಿ ಸರ್ಕಾರಗಳನ್ನು ಅಸ್ಥಿರತೆ ಕಾಡುತ್ತಿದೆ. ಇಡೀ ದೇಶದ ರಾಜಕಾರಣವನ್ನು ಅವಲೋಕಿಸಿದರೆ 10 ರಾಜ್ಯಗಳಲ್ಲಿ ಕಾಂಗ್ರೆಸ್ ಸ್ವಂತ ಬಲದಲ್ಲಿ ಅಧಿಕಾರ ಮಾಡುತ್ತಿದ್ದರೆ, 6 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ನಡೆಸುತ್ತಿದೆ. 5 ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಸ್ವತಂತ್ರವಾಗಿ ಆಡಳಿತ ಮಾಡುತ್ತಿವೆ. ಉಳಿದ ಏಳು ರಾಜ್ಯಗಳಲ್ಲಿ ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳ ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿದೆ. ಅಂದರೆ 12 ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ತಮ್ಮ ಅಸ್ತಿತ್ವವನ್ನು ಖಾತ್ರಿ ಪಡಿಸಿಕೊಂಡಿವೆ. 16 ರಾಜ್ಯಗಳಲ್ಲಿ ರಾಷ್ಟ್ರೀಯ ಪಕ್ಷಗಳ ಬೇರುಗಳು ಇನ್ನೂ ಭದ್ರವಾಗಿವೆ.

ಈ ಲೆಕ್ಕಾಚಾರವನ್ನು ಮತ್ತಷ್ಟು ಅವಲೋಕಿಸಿದರೆ ರಾಷ್ಟ್ರೀಯ ಪಕ್ಷಗಳು ಇನ್ನೆಷ್ಟು ಕಾಲ ಏಕಾಂಗಿಯಾಗಿ ಅಧಿಕಾರ ನಡೆಸುವ ಶಕ್ತಿಯನ್ನು ಉಳಿಸಿಕೊಳ್ಳಲಿವೆ ಎನ್ನುವುದು ಒಂದು ಪ್ರಶ್ನೆಯಾದರೆ, ಪ್ರಾದೇಶಿಕ ಪಕ್ಷಗಳು ತಮ್ಮ ಪ್ರಾಬಲ್ಯ ಮೆರೆಯಲು ಕಾರಣಗಳೇನು? ಎನ್ನುವುದು ಮತ್ತೊಂದು ಪ್ರಶ್ನೆ. ಪಶ್ಚಿಮ ಬಂಗಾಳದಲ್ಲಿ ಹಲವು ದಶಕಗಳಿಂದ ನಿರಂತರವಾಗಿ ಅಧಿಕಾರದ ಚುಕ್ಕಾಣಿ ಹಿಡಿದುಕೊಂಡೇ ಇದ್ದ ಎಡಪಕ್ಷಗಳನ್ನು ತೃಣಮೂಲ ಕಾಂಗ್ರೆಸ್ ಧೂಳೀಪಟ ಮಾಡಿತು. ಇದೊಂದು ದಾಖಲೆ. ಆದರೆ ಈ ದಾಖಲೆ ಬರೆದವರು ಮತ್ತು ಹಿಂದಿನ ದಾಖಲೆ ಅಳಿಸಿ ಹಾಕಿದವರು ಆ ರಾಜ್ಯದ ಜನರು. ಅದೇ ಜನ ಎಡಪಕ್ಷವನ್ನು ಅಧಿಕಾರಕ್ಕೆ ತರುತ್ತಿದ್ದರು, ಈಗ ಅದೇ ಜನ ತೃಣಮೂಲ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೇರಿಸಿದರು. ಇಲ್ಲಿ ಜನರ ಆಶೋತ್ತರಗಳು ಮುಖ್ಯವಾದವು. ರಾಷ್ಟ್ರೀಯ ಪಕ್ಷವಾಗಿದ್ದ ಎಡಪಕ್ಷ ಜನರ ಭಾವನೆಗಳನ್ನು ಘಾಸಿಗೊಳಿಸಿತು. ಜನರು ಅದನ್ನು ಬಹಳ ಕಾಲದ ನಂತರ ಅರ್ಥಮಾಡಿಕೊಂಡು ಅಧಿಕಾರದಿಂದ ಕಿತ್ತೊಗೆದರು.

ಹಾಗೆ ನೋಡಿದರೆ ಭಾರತದಲ್ಲಿ ಪೊಲಿಟಿಕಲ್ ಅವೇರ್ನೆಸ್ ಕಡಿಮೆಯೇನಲ್ಲ. ರಾಜಕೀಯ ತಿಳುವಳಿಕೆ ಕಡಿಮೆ ಎನ್ನುವುದನ್ನು ಒಪ್ಪಿಕೊಳ್ಳಬೇಕಾದರೆ ಈ ದೇಶದ ರಾಜ್ಯಗಳನ್ನು ರಾಷ್ಟ್ರೀಯ ಪಕ್ಷಗಳೇ ಆಳಬೇಕಿತ್ತು. 1976ಕ್ಕೂ ಮೊದಲು ದೇಶದಲ್ಲಿ ನೆಹರೂ ಕುಟುಂಬ ಅದರಲ್ಲೂ ಇಂದಿರಾ ಗಾಂಧಿ ಅವರನ್ನು ಬಿಟ್ಟರೆ ಬೇರೆ ರಾಜಕಾರಣಿಗಳಿದ್ದಾರೆ, ರಾಜಕೀಯ ಪಕ್ಷಗಳೂ ಇವೆ ಎನ್ನುವುದು ಗೊತ್ತೇ ಇರಲಿಲ್ಲ. ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಹೇರದೇ ಇರುತ್ತಿದ್ದರೆ ಪ್ರಾದೇಶಿಕ ಪಕ್ಷಗಳು ಜನ್ಮ ತಳೆಯುತ್ತಿರಲಿಲ್ಲ ಮತ್ತು ಕಾಂಗ್ರೆಸ್‌ಗೆ ಪರ್ಯಾಯ ಶಕ್ತಿಗಳು ಉದಿಸುತ್ತಿರಲಿಲ್ಲ. ಕಾಂಗ್ರೆಸ್ ವಿರುದ್ಧ ಧ್ವನಿಯೆತ್ತುತ್ತಿದ್ದವರು ಇಂದಿರಾ ಅವರಿಂದಾಗಿ ಜೈಲು ಸೇರದೇ ಇರುತ್ತಿದ್ದರೆ ಅವರಿಗೆ ಬಲ ಬರುತ್ತಿರಲಿಲ್ಲ ಮತ್ತು ಹೊಸ ರಾಜಕೀಯ ಚಿಂತನೆಗಳು ಜೀವಪಡೆಯುತ್ತಿರಲಿಲ್ಲ. ಈ ಮಟ್ಟಿಗೆ ಕಾಂಗ್ರೆಸ್ಯೇತರ ಪಕ್ಷಗಳು, ಅವುಗಳ ಮುಖಂಡರು ಇಂದಿರಾ ಗಾಂಧಿಗೆ ಚಿರಋಣಿಯಾಗಿರಬೇಕು.

ಎಂಭತ್ತರ ದಶಕದಲ್ಲಿ ಪಂಜಾಬ್, ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಅಸ್ಸಾಂ, ಬಿಹಾರ, ಒರಿಸ್ಸಾ ರಾಜ್ಯಗಳಲ್ಲಿ ಏಕಕಾಲದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ವಿರುದ್ಧವಾದ ಅಲೆಗಳು ಎದ್ದವು. ಅಲ್ಲಿ ಪ್ರಾದೇಶಿಕ ಪಕ್ಷಗಳು ಜನ್ಮ ತಳೆದು ಚುನಾವಣೆಯ ಅಖಾಡಕ್ಕಿಳಿದವು. ಕರ್ನಾಟಕದಲ್ಲಿ ಡಿ.ದೇವರಾಜ ಅರಸು, ರಾಮಕೃಷ್ಣ ಹೆಗಡೆ, ಎಚ್.ಡಿ.ದೇವೇಗೌಡ, ಎಸ್.ಬಂಗಾರಪ್ಪ ಮುಂತಾದವರು ಕಾಂಗ್ರೆಸ್ ವಿರುದ್ಧ ಸೆಟೆದುನಿಂತರು. ಆಂಧ್ರದಲ್ಲಿ ಎನ್.ಟಿ.ಆರ್, ತಮಿಳುನಾಡಲ್ಲಿ ಈ ಹೊತ್ತಿಗೆ ಎಂ.ಜಿ.ಆರ್, ಕರುಣಾನಿಧಿ ಬಹಳ ಬೆಳೆದಿದ್ದರು. ಬಿಹಾರದಲ್ಲಿ ಲಾಲೂಪ್ರಸಾದ್ ಯಾದವ್, ಅಸ್ಸಾಂನಲ್ಲಿ ಪ್ರಫುಲ್ಲ ಕುಮಾರ್ ಮೊಹಂತ್ ಹೀಗೆ ಕಾಂಗ್ರೆಸ್ ಪಕ್ಷದ ಹಿಡಿತವನ್ನು ಕುಗ್ಗಿಸಬಲ್ಲ ಶಕ್ತಿಗಳು ಪುಟಿದವು.

ಹರ್ಯಾಣದಲ್ಲಿ ದೇವಿಲಾಲ್ ಕಾಂಗ್ರೆಸ್ ವಿರುದ್ಧ ಸಿಡಿದು ಅಧಿಕಾರ ನಡೆಸಿದರು. ಉತ್ತರ ಪ್ರದೇಶದಲ್ಲಿ ಚರಣ್ ಸಿಂಗ್ 1967ರಲ್ಲಿ ಭಾರತೀಯ ಲೋಕದಳ ಮೂಲಕ ಕಾಂಗ್ರೆಸ್ ಹಿಮ್ಮೆಟ್ಟಿಸಿದ್ದರು. ಒರಿಸ್ಸಾದಲ್ಲಿ 1967ರಲ್ಲೇ ಸ್ವತಂತ್ರ ಪಾರ್ಟಿ ಮತ್ತು ಒರಿಸ್ಸಾ ಜನಕಾಂಗ್ರೆಸ್ ಸರ್ಕಾರವನ್ನು ರಾಜೇಂದ್ರ ನಾರಾಯಣ್ ಸಿಂಗ್ ಮುನ್ನಡೆಸಿದ್ದರು.

ಹೀಗೆ ಉತ್ತರದಲ್ಲಿ 70ರ ದಶಕದಲ್ಲಿ ಕಾಂಗ್ರೆಸ್ಗೆ ವಿರುದ್ಧವಾಗಿ ಪ್ರಾದೇಶಿಕ ಪಕ್ಷಗಳು ಜನ್ಮ ತಳೆದು ಅಧಿಕಾರ ಸೂತ್ರ ಹಿಡಿದ ಇತಿಹಾಸವಿದ್ದರೆ ದಕ್ಷಿಣದಲ್ಲಿ 80ರ ದಶಕದಲ್ಲಿ ಪ್ರಾದೇಶಿಕ ಪಕ್ಷಗಳು ಅಧಿಕಾರ ನಡೆಸಲು ಮುಂಚೂಣಿಗೆ ಬಂದವು. ಈ ಎಲ್ಲಾ ರಾಜ್ಯಗಳಲ್ಲಿ ಅಂದು ಕಾಂಗ್ರೆಸ್ ವಿರೋಧಿ ಅಲೆಗಳು ಹುಟ್ಟಿಕೊಳ್ಳಲು ನೆಹರೂ ಕುಟುಂಬ ರಾಜಕಾರಣ ಮತ್ತು ಇಂದಿರಾ ಅವರ ಸರ್ವಾಧಿಕಾರಿ ಧೋರಣೆ ಎನ್ನುವುದನ್ನು ಅರ್ಥಮಾಡಿಕೊಳ್ಳಬಹುದು.

ಹಾಗಾದರೆ ಅಂದು ದೊಡ್ಡ ಪ್ರಮಾಣದಲ್ಲಿ ಕಾಂಗ್ರೆಸ್‌ಗೆ ವಿರುದ್ಧವಾಗಿ ಜನ ಪ್ರಾದೇಶಿಕ ಪಕ್ಷಗಳನ್ನು ಬೆಂಬಲಿಸಿದ್ದರೆ ಈಗ ಯಾಕೆ ಹಿನ್ನಡೆಯಾಗುತ್ತಿದೆ ಅಥವಾ ಕಳೆಗುಂದುತ್ತಿವೆ? ಎನ್ನುವ ಪ್ರಶ್ನೆ ಸಹಜವಾಗಿ ಮೂಡಬಹುದು. ಅಧಿಕಾರದ ಲಾಲಸೆ ಮತ್ತು ಸ್ವಾರ್ಥ ಪ್ರಾದೇಶಿಕ ಪಕ್ಷಗಳನ್ನು ಜನ ನಂಬದಿರಲು ಕಾರಣವೆನ್ನಬಹುದು. ಯಾವೆಲ್ಲಾ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಅಂದು ತಲೆಯೆತ್ತಿ ನಿಂತವೋ ಅಲ್ಲೆಲ್ಲಾ ಪಕ್ಷಗಳ ನಾಯಕರೊಳಗೆ ಕಚ್ಚಾಟ ನಡೆದಿವೆ. ತಮ್ಮೊಳಗಿನ ಅಹಂಗಾಗಿ ಪಕ್ಷಗಳನ್ನು ಬಲಿಗೊಟ್ಟಿದ್ದಾರೆ. ಕರ್ನಾಟಕದಲ್ಲಿ ಜನತಾ ಪಕ್ಷ, ಜನತಾದಳ, ಸಂಯುಕ್ತ ಜನತಾ ದಳ ಹೀಗೆ ಅದೆಷ್ಟು ಹೋಳುಗಳಾದವು? ರಾಮಕೃಷ್ಣ ಹೆಗಡೆ, ದೇವೇಗೌಡ, ಎಸ್.ಬಂಗಾರಪ್ಪ ತುಳಿದ ಹಾದಿಯನ್ನು ಅವಲೋಕಿಸಿ. ಆಂಧ್ರದಲ್ಲಿ ಎನ್.ಟಿ.ಆರ್, ಚಂದ್ರಬಾಬು ನಾಯ್ಡು, ಹರ್ಯಾಣದಲ್ಲಿ ದೇವಿಲಾಲ್, ಉತ್ತರಪ್ರದೇಶದಲ್ಲಿ ಮುಲಾಯಂ ಸಿಂಗ್ ಯಾದವ್, ಅಸ್ಸಾಂನಲ್ಲಿ ಪ್ರಫುಲ್ಲ್ ಕುಮಾರ್ ಮೊಹಂತ, ಬಿಹಾರದಲ್ಲಿ ಲಾಲೂಪ್ರಸಾದ್ ಯಾದವ್ ಈ ನಾಯಕರನ್ನು ನಡೆಗಳನ್ನು ಅವಲೋಕಿಸಿದರೆ ಯಾಕೆ ಜನರು ಪ್ರಾದೇಶಿಕ ಪಕ್ಷಗಳಿಂದ ವಿಮುಖರಾದರು ಎನ್ನುವುದು ಅರ್ಥವಾಗುತ್ತದೆ.

ಪ್ರಾದೇಶಿಕ ಪಕ್ಷಗಳಿಗಿರುವಷ್ಟು ಅವಕಾಶಗಳು ಈಗ ರಾಷ್ಟ್ರೀಯ ಪಕ್ಷಗಳಿಗಿಲ್ಲ. ಜನರು, ಈಗ ತಮ್ಮ ಸುತ್ತಲಿನ ಪರಿಸರ, ನೆಲ, ಜಲ, ಭಾಷೆಯನ್ನು ಹೆಚ್ಚು ಭಾವನಾತ್ಮಕವಾಗಿ ಕಾಣುತ್ತಾರೆ. ತೆಲಂಗಾಣ ಹೋರಾಟವನ್ನು ಕುತೂಹಲಕ್ಕಾಗಿ ಅವಲೋಕಿಸಿದರೆ ಈ ಸತ್ಯದ ದರ್ಶನವಾಗುತ್ತದೆ. ಪ್ರಾದೇಶಿಕವಾದ ಜನರ ಆಶೋತ್ತರಗಳನ್ನು ಈಡೇರಿಸುವುದು ರಾಷ್ಟ್ರೀಯ ಪಕ್ಷಗಳ ಮುಖ್ಯ ಅಜೆಂಡವಾಗಲು ಸಾಧ್ಯವಿಲ್ಲ. ಸಮಗ್ರ ರಾಷ್ಟ್ರವನ್ನು ಕಲ್ಪನೆಯಲ್ಲಿಟ್ಟುಕೊಂಡು ರಾಷ್ಟ್ರೀಯ ಪಕ್ಷಗಳು ರೂಪಿಸುವ ನೀತಿಗಳು ಪ್ರಾದೇಶಿಕವಾದ ಸಿಕ್ಕುಗಳನ್ನು ಬಿಡಿಸಲಾರವು.

ಈ ಎಲ್ಲಾ ಕಾರಣಗಳಿಂದಾಗಿ ಪ್ರಾದೇಶಿಕ ಪಕ್ಷಗಳಿಗೆ ಜನ ಮಾರುಹೋಗುವ ಅವಕಾಶಗಳು ನಿಚ್ಚಳವಾಗಿವೆ. ಜನರ ವಿಶ್ವಾಸವನ್ನು ಪ್ರಾದೇಶಿಕ ಪಕ್ಷಗಳ ನಾಯಕರು ಮೊದಲು ಗಳಿಸಬೇಕು. ಆತ್ಮವಂಚನೆ ರಾಜಕಾರಣದಿಂದ ಬೇಸತ್ತಿರುವುದರಿಂದಲೇ ಮತಗಟ್ಟೆಯಿಂದಲೇ ಜನ ದೂರ ಉಳಿಯುತ್ತಿದ್ದಾರೆ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು. ಮತಗಟ್ಟೆಗೆ ಜನ ಸಾಗರೋಪಾದಿಯಲ್ಲಿ ಹರಿದು ಬರುವಂತೆ ಮಾಡಬಲ್ಲ ಸಾಮರ್ಥ್ಯವಿರುವುದು ಪ್ರಾದೇಶಿಕ ಪಕ್ಷಗಳಿಗೆ ಮಾತ್ರ.

RTE: ಖಾಸಗಿಯವರಿಗೆ ಸರ್ಕಾರ ಶರಣು

-ಅನಂತ ನಾಯಕ್

ದೇಶದ ಸಂವಿಧಾನ ರಚಿತವಾಗಿ 10 ವರ್ಷದೊಳಗೆ 6 ರಿಂದ 14 ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಉಚಿತ ಮತ್ತು ಕಡ್ಡಾಯ ಶಿಕ್ಷಣ ಪೂರೈಕೆ ಮುಗಿದಿರಬೇಕೆಂದು ಉದ್ದೇಶಿಸಲಾಗಿತ್ತು. ಈ ಗುರಿಯನ್ನು ತಲುಪಲು ಆಳುವ ಪ್ರಭುತ್ವಗಳಿಂದ ಸಾಧ್ಯವಾಗಲೇ ಇಲ್ಲ. ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯ ನಂತರ ಶಿಕ್ಷಣ ಸಾರ್ವತ್ರೀಕರಣವಾಗಬೇಕೆನ್ನುವ ಚಳವಳಿಯ ಫಲವಾಗಿ ರೂಪಿತವಾದ ಕಾಯ್ದೆಗಳಲ್ಲಿ “ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆ-2009” ಕೂಡ ಪ್ರಮುಖವಾದದ್ದು. 2009 ರಿಂದಲೇ ಬಹುತೇಕ ರಾಜ್ಯ ಸರ್ಕಾರಗಳು ಈ ಕಾಯ್ದೆ ಜಾರಿಗೆ ಮುಂದಾದವು, ಆದರೆ ಕರ್ನಾಟಕ ರಾಜ್ಯ ಸರ್ಕಾರ ಮಾತ್ರ ನಿರ್ಲಕ್ಷ್ಯ ತಾಳಿತು. ಸುಪ್ರೀಂಕೋರ್ಟ್ ಮತ್ತು ಜನ ಚಳವಳಿಯ ಒತ್ತಡದಿಂದ ಪ್ರಸಕ್ತ ವರ್ಷ ರಾಜ್ಯದಲ್ಲಿ ಜಾರಿಗೆ ಮುಂದಾಗಿರುವಂತೆ ಕಾಣಿಸುತ್ತಿದ್ದರೂ ಖಾಸಗಿ ಶಾಲೆಯವರ ತಾಳಕ್ಕೆ ತಕ್ಕಂತೆ ರಾಜ್ಯ ಸರ್ಕಾರ ಕುಣಿಯುತ್ತಿರುವುದು ಸ್ಪಷ್ಟಗೊಂಡಿದೆ.

ಚಳವಳಿಯ ಫಲವಾಗಿ ಶಿಕ್ಷಣ ಹಕ್ಕು:
ಜನ ಚಳವಳಿಯ ಒತ್ತಡದಿಂದ 2002ರಲ್ಲಿ ಸಂವಿಧಾನದ 86ನೇ ತಿದ್ದುಪಡಿಯ ಮೂಲಕ ಶಿಕ್ಷಣವನ್ನು ಮೂಲಭೂತ ಹಕ್ಕನ್ನಾಗಿಸಿ ಕಲಂ 21(ಎ)ನಲ್ಲಿ ಮಕ್ಕಳ ಶಿಕ್ಷಣದ ಹಕ್ಕನ್ನು ಖಾತ್ರಿ ಗೊಳಿಸಲಾಯಿತು. 2002 ರಲ್ಲಿ ಶಿಕ್ಷಣ ಕೇಂದ್ರಿಯ ಸಲಹಾ ಮಂಡಳಿ (Central Advisory Board for Education)ಯನ್ನು ರಚಿಸಲಾಗಿ ಇದರ ಶಿಫಾರಸ್ಸಿನಂತೆ 2009 ಆಗಸ್ಟ್ 12 ರಂದು ಲೋಕಸಭೆ ‘ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆ-2009’ನ್ನು ಅಂಗಿಕರಿಸಿತು. ಈ ಕಾಯ್ದೆಯಲ್ಲಿ ಮಕ್ಕಳ ಕಡ್ಡಾಯ ದಾಖಲೆ, ನಿರಂತರ ಹಾಜರಾತಿ, ಗುಣಮಟ್ಟದ ಭಾವೈಕ್ಯತಾ ಶಿಕ್ಷಣ, ವಿಕಲಚೇತನರಿಗೆ ಆದ್ಯತೆ, ದೈಹಿಕ-ಮಾನಸಿಕ ದಂಡನೆ ನಿಷೇಧ, ಸರ್ಕಾರ-ಪಂಚಾಯ್ತಿಗಳ, ಪಾಲಕರ ಕರ್ತವ್ಯ, ಜಾತಿ-ಧರ್ಮದ ಹೆಸರಿನಲ್ಲಿ ಪ್ರವೇಶ ನಿರಾಕರಣೆ-ಅವಮಾನಕ್ಕೆ ವಿರೋಧ, ಪ್ರವೇಶ ಪರೀಕ್ಷೆ, ಟ್ಯೂಷನ್ ನಿಷೇಧ, ಸೇರಿದಂತೆ ಖಾಸಗಿ ಶಾಲೆಗಳಲ್ಲಿ ಶೇ 25 ರಷ್ಟು ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ಬಡ ವಿದ್ಯಾರ್ಥಿಗಳಿಗೆ ಕಡ್ಡಾಯ ಉಚಿತ ಪ್ರವೇಶ ನೀಡಬೇಕೆನ್ನುವುದು ಕಾಯ್ದೆ ಪ್ರಮುಖಾಂಶ. (ಈ ವಿದ್ಯಾರ್ಥಿಗಳ ಶುಲ್ಕಗಳನ್ನು ಸರ್ಕಾರವೇ ಖಾಸಗಿ ಶಾಲೆಗಳಿಗೆ ಭರಿಸಬೇಕು).

ಇದು ಒಂದು ಕ್ರಾಂತಿಕಾರಿ ಕಾಯ್ದೆ ಅಲ್ಲದಿದ್ದರೂ ಮಕ್ಕಳ ಶಿಕ್ಷಣ ಹಕ್ಕಿನ ಖಾತ್ರಿ ಮೂಡಿಸುತ್ತಿರುವುದು ಸಂತೋಷಕರ. ಯಥಾವತ್ತಾಗಿ ಈ ಕಾಯ್ದೆಯ ಜಾರಿ ಸಾದ್ಯವಿಲ್ಲವೆಂದು ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳು ಸುಪ್ರಿಂ ಕೋರ್ಟ್ ಮೊರೆ ಹೋಗಿ ಛೀಮಾರಿ ಹಾಕಿಸಿಕೊಂಡು ಬಂದಿವೆ. “ಶೇ 25 ಬಡ-ಹಿಂದುಳಿದ-ದಲಿತ ವಿದ್ಯಾರ್ಥಿಗಳಿಗೆ ತಮ್ಮ ಶಾಲೆಗಳಿಗೆ ಪ್ರವೇಶ ನೀಡಲು ಸಾಧ್ಯವಿಲ್ಲ, ಏಕೆಂದರೆ ಅವರು ನಮ್ಮಲ್ಲಿರುವ ಶ್ರೀಮಂತ ಮಕ್ಕಳ ಜೊತೆ ಬೆರೆಯಲು ಸಾಧ್ಯವಿಲ್ಲ”ವೆಂದ ಖಾಸಗಿ ಶಿಕ್ಷಣ ಸಂಸ್ಥೆಗಳ ಸಂವಿಧಾನ ವಿರೋಧಿವಾದವನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕಿ “ಶಾಲೆಗಳು ತಾರತಮ್ಯ ಕೇಂದ್ರಗಳಾಗಬಾರದು. ಮಕ್ಕಳಲ್ಲಿ ಭೇದಭಾವ ತೋರಬಾರದು,” ಎಂದು ಹೇಳಿ 25% ಬಡ ವಿದ್ಯಾರ್ಥಿಗಳಿಗೆ ಕಡ್ಡಾಯ ಪ್ರವೇಶ ನೀಡಬೇಕು ಎಂದು ತೀರ್ಪು ನೀಡಿತು. ಇದನ್ನು ಕಡ್ಡಾಯವಾಗಿ ಜಾರಿಗೊಳಿಸಲು ಸರ್ಕಾರ ಮುಂದಾಗುವ ಬದಲು ಬಡ ವಿದ್ಯಾರ್ಥಿಗಳನ್ನು ಗುರುತಿಸುವ ಮಾನದಂಡವಾಗಿ 3.5ಲಕ್ಷ ರೂ.ಗಳ ಆದಾಯ ಮಿತಿಯನ್ನು ನಿಗದಿಗೊಳಿಸುವ ಮೂಲಕ ಖಾಸಗಿಯವರಿಗೆ ಮತ್ತು ಶ್ರೀಮಂತರಿಗೆ ಲಾಭವಾಗುವಂತೆ ನಡೆದುಕೊಂಡಿದೆ. ಸರ್ಕಾರಿ ನಿಯಮದಂತೆ ಬಿಪಿಎಲ್-ಎಪಿಎಲ್ ಪಟ್ಟಿಯ ಆದಾಯ ಪ್ರಮಾಣ 20 ಸಾವಿರದೊಳಗಿರುವುದು ಈ ಸರ್ಕಾರಕ್ಕೆ ಅರಿವಾಗಲಿಲ್ಲ. ಹಣ ಮಾಡುವುದಕ್ಕಾಗಿ ಶ್ರೀಮಂತರನ್ನು ಸೆಳೆಯುವ ಖಾಸಗಿಯವರ ಲಾಭಿಗೆ ರಾಜ್ಯ ಸರ್ಕಾರ ಮಣಿದಿದೆ. ಇತರೆ ರಾಜ್ಯಗಳು ಬಡತನ ರೇಖೆಗಿಂತ ಕಡಿಮೆ ಇರುವ (ಬಿಪಿಎಲ್) ಕುಟುಂಬಗಳ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲು ನಿಯಮ ರೂಪಿಸಿಕೊಂಡಿವೆ. ಸರ್ಕಾರಿ ನಿಯಮದಂತೆ ಹಣ ಮಾಡುವುದಕ್ಕಾಗಿ ಶ್ರೀಮಂತರನ್ನು ಸೆಳೆಯುವ ಖಾಸಗಿಯವರ ಲಾಬಿಗೆ ರಾಜ್ಯ ಸರ್ಕಾರ ಮಣಿದು ಕಾಯ್ದೆಯ ವಿರುದ್ಧವಾಗಿ ನಡೆದುಕೊಂಡಿದೆ.

ರಾಜ್ಯದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಒಂದಿಲ್ಲೊಂದು ರೀತಿಯಿಂದ ಸರ್ಕಾರದ ಸೌಲಭ್ಯಗಳನ್ನು ಪಡೆಯುತ್ತಿವೆ. ಭೂಮಿ ಖರೀದಿಯಲ್ಲಿ ರಿಯಾಯಿತಿ, ನೀರಿನ ತೆರಿಗೆ ವಿನಾಯತಿ, ವಿದ್ಯುತ್ ತೆರಿಗೆ ವಿನಾಯತಿ, ಸೇವಾ ತೆರಿಗೆ ವಿನಾಯತಿ, ಸೇರಿದಂತೆ ಸರ್ಕಾರದ ವಿವಿಧ ಯೋಜನೆಯ ಲಾಭವನ್ನು ಪಡೆಯುತ್ತಿವೆ. ಹೀಗಾಗಿ ರಾಜ್ಯದ ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುವುದು ಖಾಸಗಿ ಶಿಕ್ಷಣ ಸಂಸ್ಥೆಗಳ ಜವಾಬ್ದಾರಿಯಾಗಬೇಕಾಗಿದೆ. ಹೀಗಿರುವಾಗ ಮತ್ತೆ ಜನತೆಯ ತೆರಿಗೆಯ ಹಣವನ್ನು 25% ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಭರಿಸಬೇಕು ಎನ್ನುವುದನ್ನು ನೆಪ ಮಾಡಿಕೊಂಡು ಪ್ರತಿ ವರ್ಷ ಸಾವಿರಾರು ಕೋಟಿ ರೂ.ಗಳನ್ನು ಖಾಸಗಿಯವರಿಗೆ ನೀಡಲು ರಾಜ್ಯ ಸರ್ಕಾರ ಹೊರಟಿದೆ. ಪಶ್ಚಿಮ ಬಂಗಾಲ – 3,282, ಮಧ್ಯಪ್ರದೇಶ – 4,423, ಬಿಹಾರ – 4,705, ಗುಜರಾತ್ – 3,949 ಮತ್ತು ಕರ್ನಾಟಕ 11,848 ರೂ. ರಾಜ್ಯದಲ್ಲಿಯೇ ಅತಿಹೆಚ್ಚು ನೀಡುತ್ತಿರುವುದನ್ನು ಗಮನಿಸಿದಾಗ ರಾಜ್ಯ ಸರ್ಕಾರ ಖಾಸಗಿ ಶಾಲೆಗಳ ಖಜಾನೆ ತುಂಬಲು ಮುಂದಾಗಿರುವುದು ಸ್ಪಷ್ಠವಾಗುತ್ತದೆ. ಶಿಕ್ಷಣ ವ್ಯಾಪಾರೀಕರಣದ ಪ್ರಕ್ರಿಯೆಗೆ ಸರ್ಕಾರದ ಅಧಿಕೃತವಾಗಿ ಸಹಕರಿಸುತ್ತಿದೆ. ಕಾಯ್ದೆಯ ಜಾರಿಗೊಳಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಸರ್ಕಾರಿ ನಿಯಮದಂತೆ ರಾಜ್ಯದಲ್ಲಿ ಪ್ರಸಕ್ತ ಸಾಲಿನಲ್ಲಿ ಮೀಸಲು ನಿಯಮದಂತೆ 1,12,474 ಬಡ ವಿದ್ಯಾರ್ಥಿಗಳಿಗೆ ಖಾಸಗಿ ಶಾಲೆಗಳಲ್ಲಿ ಪ್ರವೇಶ ನೀಡಬೇಕಾಗಿತ್ತು. ಆದರೆ ಕೇವಲ 41,663 (ಅಂದರೆ 37%) ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ ನೀಡಲಾಗಿದ್ದು. ಸುಮಾರು 70,811 ವಿದ್ಯಾರ್ಥಿಗಳನ್ನು ಪ್ರವೇಶದಿಂದ ವಂಚಿಸಲಾಗಿದೆ. ಕಾಯ್ದೆ ಜಾರಿಯಲ್ಲಿ ವಿಫಲವಾಗುವ ಶಿಕ್ಷಣ ಸಂಸ್ಥೆಗಳ ಮಾನ್ಯತೆ ರದ್ದು ಮಾಡಬೇಕು; 1 ಲಕ್ಷ ದಂಡ ಮತ್ತು ಜೈಲು ಶಿಕ್ಷೆ ವಿಧಿಸಬೇಕು ಎನ್ನುವ ಸುಪ್ರೀಂ ಕೋರ್ಟ್‌ನ ತೀರ್ಪಿದ್ದರೂ ಕೂಡ ರಾಜ್ಯ ಸರ್ಕಾರ ಶಿಕ್ಷಣ ಸಂಸ್ಥೆಗಳಿಗೆ ಎಚ್ಚರಿಕೆ ನೋಟಿಸ್ ನೀಡುವಂತಹ ಕನಿಷ್ಠ ಕೆಲಸವನ್ನು ಮಾಡಿಲ್ಲ. ಅತಿ ಹೆಚ್ಚು ಖಾಸಗಿ ಶಾಲೆಗಳಿರುವ ಬೆಂಗಳೂರು ಉತ್ತರದಲ್ಲಿ ಕೇವಲ 11.304(16%) ವಿದ್ಯಾರ್ಥಿಗಳಿಗೆ ಪ್ರವೇಶ ನೀಡಿರುವುದನ್ನು ಗಮನಿಸಿದರೆ. ಈ ಕಾಯ್ದೆಯನ್ನು ವಿಫಲಗೊಳಿಸುವಲ್ಲಿ ವ್ಯವಸ್ಥಿತ ಷಡ್ಯಂತರ ನಡೆಯುತ್ತಿದೆ ಎಂಬುದು ಸಾಬೀತಾಗುತ್ತದೆ.

ಖಾಸಗಿ ಶಾಲೆಗಳ ಕರಾಳ ಮುಖ:
ಈ ಕಾಯ್ದೆಯನ್ನು ಜಾರಿಗೊಳಿಸುವಲ್ಲಿ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳು ನಿರ್ಲಕ್ಷ್ಯ ಧೋರಣೆ ಹೊಂದಿದ್ದರ ಜೊತೆಗೆ ವಿಫಲಗೊಳಿಸುವಲ್ಲಿ ಕುತಂತ್ರಗಳನ್ನು ನಡೆಸುತ್ತಿವೆ. ನಿಯಮ ಬದ್ಧವಾಗಿ ಬಡ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವುದರ ಬದಲಾಗಿ ಕಿರುಕುಳ ನೀಡಿ ತಮ್ಮ ಕರಾಳಮುಖದ ಪ್ರದರ್ಶನ ಮಾಡಿವೆ. ರಾಜ್ಯವ್ಯಾಪಿ ಕೇವಲ 37% ಬಡ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಿರುವುದನ್ನು ಗಮನಿಸಿದರೆ ಖಾಸಗಿ ಶಾಲೆಗಗಳಲ್ಲಿ ರಾಜರೋಷವಾಗಿ ಹಣ ಮಾಡುವ ದಂಧೆ ನಡೆಯುತ್ತಿರುವುದು ಬಹಿರಂಗ ಸತ್ಯ. ಬೆಂಗಳೂರಿನ ನಂದಿನಿ ಲೇಔಟ್ನ ‘ಆಕ್ಸಫರ್ಡ್ ಸ್ಕೂಲ್’ನಲ್ಲಿ ಕಾಯ್ದೆಯ 25% ಬಡ ವಿದ್ಯಾರ್ಥಿಗಳ ಕೋಟಾದ ಅಡಿಯಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳನ್ನು ಗುರುತಿಸಲು ಕೂದಲು ಕತ್ತರಿಸಿ ಅವಮಾನಿಸಲಾಗಿದೆ. ಇನ್ನೊಂದೆಡೆ ವಿದ್ಯಾರ್ಥಿಗಳ ಊಟದ ಡಬ್ಬಿಗಳನ್ನು ಪರೀಕ್ಷಿಸಿ ಮೊಟ್ಟೆ, ಮೀನು, ಮಾಂಸದ ಪದಾರ್ಥದ ಊಟವಾಗಿದ್ದರೆ ಅಂತಹ ವಿದ್ಯಾರ್ಥಿಗಳನ್ನು ವಾಪಸ್ಸು ಕಳಿಸಲಾಗುತ್ತಿದೆ. ವಿವಿಧ ರೀತಿಯ ಅಸ್ಪೃಶ್ಯತಾ ಆಚರಣೆಗೆ ದಲಿತ ವಿದ್ಯಾರ್ಥಿಗಳು ಬಲಿಯಾಗುತ್ತಿದ್ದಾರೆ. ಬಡ ವಿದ್ಯಾರ್ಥಿಗಳನ್ನು ಶ್ರೀಮಂತ ವಿದ್ಯಾರ್ಥಿಗಳ ಜೊತೆ ಬೆರೆಯಲು ಮುಕ್ತ ಅವಕಾಶ ಕಲ್ಪಿಸದೇ ಪ್ರತ್ಯೇಕತೆಯನ್ನು ಅನುಸರಿಸಲಾಗುತ್ತಿದ್ದರೂ ರಾಜ್ಯ ಸರ್ಕಾರ ಮಾತ್ರ ಖಾಸಗಿ ಶಿಕ್ಷಣ ಸಂಸ್ಥೆಗಳ ಮೇಲೆ ಕ್ರಮಕೈಗೊಳ್ಳದೆ “ಮೌನಂ ಸಮ್ಮತಿ ಲಕ್ಷಣ” ಎಂಬಂತೆ ವರ್ತಿಸಿದೆ.

‘ಕುಸ್ಮಾ’ ಪರಿವಾರದ ಪ್ರತಿಷ್ಠೆ:
ಕರ್ನಾಟಕ ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿಗಳ ಸಂಘ (ಕುಸ್ಮಾ) ರಾಜ್ಯ ಸರಕಾರವನ್ನು ದಿಕ್ಕು ತಪ್ಪಿಸುವ ಕೆಲಸದಲ್ಲಿ ನಿರತವಾಗಿದೆ. ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧವಾಗಿ ಒಂದು ವಾರಗಳ ಕಾಲ `ಶಾಲೆ ಬಂದ್’ ಮಾಡಲು ಮುಂದಾದರೂ ಅವರ ಮೇಲೆ ಕ್ರಮಕೈಗೊಳ್ಳುವ ಬದಲಾಗಿ ಐಷಾರಾಮಿ ಸಭೆಗಳ ಮೂಲಕ ರಾಜಿ ಸಂಧಾನಕ್ಕೆ ಮುಂದಾಗುತ್ತಿರುವ ರಾಜ್ಯ ಸರ್ಕಾರದ ಕ್ರಮ ಖಂಡನೀಯ. ಕುಸ್ಮಾದ ಅಧ್ಯಕ್ಷರಾಗಿದ್ದ ಜೆ.ಎಸ್.ಶರ್ಮ ‘ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಬಡ ವಿದ್ಯಾರ್ಥಿಗಳು ಕೊಳಚೆ ನೀರು ಇದ್ದಂತೆ, ಕೊಳಚೆ ನೀರು ಸಮುದ್ರಕ್ಕೆ ಸೇರಿದರೆ ಸಮುದ್ರ ನೀರು ಮತ್ತು ಸಂಸ್ಕೃತಿ ಹಾಳಾಗುತ್ತದೆ,’ ಎನ್ನುವ ಈ ಹೇಳಿಕೆ ಮನುವಾದಿಯ ಮಲೀನ ಮನಸ್ಸನ್ನು ಅನಾವರಣಗೊಳಿಸಿದೆ. ಅಸ್ಪೃಶ್ಯತೆಯ ಆಚರಣೆಯ ಪ್ರತೀಕವಾಗಿರುವ ಈ ಮಾತನ್ನು ಆಡಿದ ಶರ್ಮರನ್ನು ಬಂಧಿಸಿ ಜೈಲಿನಲ್ಲಿರಿಸಬೇಕಿದ್ದ ಸರಕಾರ ತುಟಿಪಿಟಕ್ಕೆನ್ನದೆ ಮೌನವಾಗಿ ಇರುವುದನ್ನು ನೋಡಿದರೆ ಭಾರತದ ಸಂವಿಧಾನಕ್ಕಿಂತ ಸಂಘ ಪರಿವಾರದ ಅಜೆಂಡಾದ ರಕ್ಷಣೆಯ ಕೆಲಸದಲ್ಲಿ ಸರ್ಕಾರ ತೊಡಗಿರುವುದು ಬಹಿರಂಗಗೊಂಡಿದೆ.

ಕುಸ್ಮಾ ಕರೆ ನೀಡಿದ “ಶಾಲೆ ಬಂದ್” ನಲ್ಲಿ ಆರ್‌.ಎಸ್.ಎಸ್.ನ ರಾಷ್ಟ್ರೋತ್ಥಾನ ಶಾಲೆಗಳ ಸರಸ್ವತಿ ವಿದ್ಯಾ ಮಂದಿರಗಳು, ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪನವರ ಒಡೆತನದ ಶಿವಮೊಗ್ಗದ ಶಾಲೆ ಸೇರಿದಂತೆ ಬಿ.ಜೆ.ಪಿ. ಮುಖಂಡರ ಸಂಸ್ಥೆಗಳು ಮುಂಚೂಣಿಯಲ್ಲಿ ಬಂದ್ ಆಗಿರುವುದನ್ನು ನೋಡಿದರೆ ಅದು ಸರ್ಕಾರಿ ಪ್ರಾಯೋಜಿತ ಹೋರಾಟವೆಂಬುದರಲ್ಲಿ ಸಂಶಯವಿಲ್ಲ. ಖಾಸಗಿ ಶಾಲಾ ಅಡಳಿತ ಮಂಡಳಿಯವರು ಸುಪ್ರೀಂ ಕೋರ್ಟ್‌ನ ತೀರ್ಪಿನ ಉಲ್ಲಂಘನೆ, ನ್ಯಾಯಾಂಗ ನಿಂಧನೆಯಲ್ಲಿ ತೊಡಗಿದ್ದರೂ ಶಿಕ್ಷಣ ಸಚಿವ ಕಾಗೇರಿ ಮಾತ್ರ ಪ್ರತಿಕ್ರಿಯಿಸದೆ ಮೌನವಾಗಿರುವುದು ಕಾಯ್ದೆ ವಿಫಲಗೊಳಿಸಲು ಖಾಸಗಿಯವರ ಜೊತೆ ಸರ್ಕಾರ ಶಾಮೀಲಾಗಿರುವುದನ್ನು ಮತ್ತು ಖಾಸಗಿ ಶಾಲೆಗಳ ಏಜೆಂಟರಾಗಿ ವರ್ತಿಸುತ್ತಿದ್ದಾರೆ ಎಂಬುದನ್ನು ತೋರಿಸುತ್ತದೆ.

ಖಾಸಗಿ ಶಾಲೆಗಳ ನಿಯಂತ್ರಿಸಲು ಸೂಕ್ತ ಶಾಸನವನ್ನು ರೂಪಿಸಲಿ:
ಈ ಕಾಯ್ದೆಯ ಜಾರಿಯಲ್ಲಿ ಹಿಂದೇಟು ಹಾಕುತ್ತಿರುವ ಶಾಲೆಗಳ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡು ಮಾನ್ಯತೆ ರದ್ದು ಮಾಡಲು ಸರ್ಕಾರ ಸೂಕ್ತ ಶಾಸನ ರಚನೆಗೆ ಮುಂದಾಗಬೇಕು. ಆರ್.ಟಿ.ಇ. ಜಾರಿಗಾಗಿ ಕಾವಲು ಸಮಿತಿ, ಶಾಲಾ ಮಟ್ಟದಲ್ಲಿ ಪಾಲಕರ ಸಮಿತಿಗಳನ್ನು ರಚಿಸಲು ಸರ್ಕಾರ ಮುಂದಾಗಬೇಕಿದೆ. ಬಡ ಮಕ್ಕಳಿಗೆ ಅವಮಾನಿಸುತ್ತಿರುವ ಖಾಸಗಿ ಶಾಲೆಗಳ ಉದ್ಧಟತನವನ್ನು ನಿಲ್ಲಿಸುವಂತಾಗಲು ಹೋರಾಟಗಳು ಬಲಗೊಳ್ಳಬೇಕಿದೆ. ಅಕ್ರಮ ಖಾಸಗಿ ಶಾಲೆಗಳ ಮಾನ್ಯತೆ ರದ್ದು ಮಾಡಿ ಸರ್ಕಾರಿ ಶಾಲೆಗಳ ವ್ಯವಸ್ಥೆ ಬಲಗೊಳ್ಳಬೇಕಿದೆ.

ಸಂವಿಧಾನ ಬದ್ಧ ಕಾಯ್ದೆ ಜಾರಿಗೊಳಿಸುವಲ್ಲಿ ಸರ್ಕಾರಗಳು ಮುಂದಾಗುವ ಬದಲು ಸರ್ಕಾರಿ ಹಣವನ್ನು ಖಾಸಗಿಯವರತ್ತ ಹರಿಸಲು ಮುಂದಾಗಿರುವುದನ್ನು ನಿಲ್ಲಿಸಬೇಕಾಗಿದೆ. ಖಾಸಗಿ ಶಾಲೆಗಳು ವಿದ್ಯಾರ್ಥಿಗಳನ್ನು ಅವಮಾನಿಸುವ, ವಂಚಿಸುವ ಕಾಯಕದಲ್ಲಿ ತೊಡಗಿವೆ. ಈಗ ಇರುವ ಅಂತರಾಷ್ಟ್ರೀಯ, ರಾಷ್ಟ್ರೀಯ, ಕೇಂದ್ರೀಯ, ನವೋದಯ, ರಾಜ್ಯ, ಇನ್ನಿತರ ಹೆಸರಿನ ಪ್ರತ್ಯೇಕ ಪಠ್ಯಕ್ರಮದ ಶಿಕ್ಷಣ ಪದ್ಧತಿಯು ಅಸಮಾನತೆಯ ಮುಂದುವರಿಕೆಯಾಗಿದೆ. ಇದನ್ನು ಸಮಾನ ಶಾಲಾ ಶಿಕ್ಷಣ ಪದ್ಧತಿಗಾಗಿ ಜನ ಚಳವಳಿ ಬಲಗೊಳ್ಳದ ಹೊರತು ಶಿಕ್ಷಣ ಮೂಲಭೂತ ಹಕ್ಕಿಗೆ ಅರ್ಥವಿರದು.

ರಾಜ್ಯದಲ್ಲಿ ಶಿಕ್ಷಣ ಹಕ್ಕು ಕಾಯ್ದೆ ಅನ್ವಯ 25% ವಿದ್ಯಾರ್ಥಿಗಳ ಪ್ರವೇಶ ವಿವರ:

ಶೈಕ್ಷಣಿಕ ಜಿಲ್ಲೆ              ಮೀಸಲು ಸೀಟು  ದಾಖಲಾದವರು  ಶೇಕಡವಾರು

 • ಬೆಂಗಳೂರು ಉತ್ತರ              11304           1868              16.52
 • ಬೆಂಗಳೂರು ದಕ್ಷಿಣ                16656           2408              14.45
 • ಬೆಂಗಳೂರು ಗ್ರಾ                   1779             948                  53.28
 • ರಾಮನಗರ                          1281              866                  67.60
 • ತುಮಕೂರು                          3868             1436                37.12
 • ಮಧುಗಿರಿ                              827               463                   55.98
 • ಕೋಲಾರ                             2421             1735                 71.66
 • ಚಿಕ್ಕಬಳ್ಳಾಪುರ                       1882            1411                  74.97
 • ಚಿತ್ರದುರ್ಗ                             5783           943                    16.30
 • ದಾವಣಗೆರೆ                            3234           1560                 48.23
 • ಶಿವಮೊಗ್ಗ                               1650           420                   25.45
 • ಮೈಸೂರು                              5005           80                     16.14
 • ಚಾಮರಾಜನಗರ                    1362            564                   41.40
 • ಮಂಡ್ಯ                                   3507          2456                 70.03
 • ಹಾಸನ                                   1901           1030                 54.18
 • ಚಿಕ್ಕಮಗಳೂರು                       970             639                    65.87
 • ಕೊಡಗು                                  549              220                   40.07
 • ದಕ್ಷಿಣ ಕನ್ನಡ                            1645            763                   46.38
 • ಉಡುಪಿ                                  1098             430                   39.16
 • ಬೆಳಗಾವಿ                                2665              530                  19.88
 • ಬಿಜಾಪುರ                               5800              3883                66.94
 • ಬಾಗಲಕೋಟೆ                         2161               1394                64.50
 • ಧಾರವಾಡ                              2976               796                  26.75
 • ಗದಗ                                     5822                1442                24.76
 • ಹಾವೇರಿ                                1838                 892                   48.53
 • ಕಾರವಾರ                              828                    579                  69.92
 • ಚಿಕ್ಕೋಡಿ                              4354                  2513                 57.71
 • ಶಿರಸಿ                                    305                    195                    63.93
 • ಯಾದಗಿರಿ                             1194                   437                   36.59
 • ಬೀದರ್                                 8100                  1899                 23.44
 • ರಾಯಚೂರು                         2799                   1544                 55.16
 • ಬಳ್ಳಾರಿ                                 4241                   2801                 66.04
 • ಕೊಪ್ಪಳ                                2670                  1790                  67.04
 • ಗುಲ್ಬರ್ಗಾ –  ಮಾಹಿತಿ ಸಿಕ್ಕಿಲ್ಲ
 • ಒಟ್ಟು                                  112474               41663                 37.04

ಯಡಿಯೂರಪ್ಪ ಮತ್ತು ಅವರ ಮನಸ್ಥಿತಿ?


-ಚಿದಂಬರ ಬೈಕಂಪಾಡಿ


 

ಅಧಿಕಾರ ಅನುಭವಿಸುತ್ತಿದ್ದ ವ್ಯಕ್ತಿ ಏಕಾಏಕಿ ಅಧಿಕಾರವಿಲ್ಲದೇ ಹೋದಾಗ ಮನಸ್ಸು ಏನೆಲ್ಲಾ ಮಾಡಬಹುದು, ಯಾವ ರೀತಿಯ ವರ್ತನೆ ಕಾಣಬಹುದು ಎನ್ನುವುದಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗಿಂತ ತಾಜಾ ಉದಾಹರಣೆಗೆ ಬೇರೆ ಯಾರನ್ನು ಹೋಲಿಸಬಹುದು? ಖಂಡಿತಕ್ಕೂ ಸಾಧ್ಯವೇ ಇಲ್ಲ ಮತ್ತೊಬ್ಬರನ್ನು ಹೋಲಿಸಲು. ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹಿಂದೆ ಮಂತ್ರಿಯಾಗಿದ್ದಾಗ, ಸ್ಪೀಕರ್ ಆಗಿದ್ದಾಗ ಅವರ ಮುಖದಲ್ಲಿ ಇದ್ದ ಕಳೆಗೂ ಈಗ ಮುಖ್ಯಮಂತ್ರಿಯಾದ ಮೇಲೆ ಅವರ ಮುಖದಲ್ಲಿ ರಾರಾಜಿಸುತ್ತಿರುವ ಕಳೆಗೂ ಅಜಗಜಾಂತರ ವ್ಯತ್ಯಾಸವಿದೆ. ಯಡಿಯೂರಪ್ಪ ಅವರ ಈಗಿನ ಮುಖದ ಕಳೆಯನ್ನು ಅವಲೋಕಿಸಿದರೆ ಅಲ್ಲಿ ಕಾಣಿಸುವುದು ಹತಾಶೆ, ರೋಷ, ಸಿಟ್ಟು. ಈಗ ಅವರ ನಗುವಿನಲ್ಲಿ ಆಕರ್ಷಣೆಯಿಲ್ಲ, ಮಾತಿನಲ್ಲಿ ಮಾಧುರ್ಯವಿಲ್ಲ. ಅದೇ ಜಗದೀಶ್ ಶೆಟ್ಟರ್ ಅವರ ಮುಖದಲ್ಲಿ ಮಂದಹಾಸ. ಸಂತೃಪ್ತಿಯಿದೆ. ಇದು ಅಧಿಕಾರ ಇದ್ದಾಗ ಮತ್ತು ಅಧಿಕಾರ ಇಲ್ಲದಿದ್ದಾಗ ಮನುಷ್ಯನ ಮೇಲೆ, ಅವನ ಮನಸ್ಸಿನ ಮೇಲೆ ಉಂಟಾಗುವ ಸ್ಥೂಲಪರಿಣಾಮಗಳು.

ಯಡಿಯೂರಪ್ಪ ಈಗ ಅಧಿಕಾರ ಇಲ್ಲದಿದ್ದರೆ ಸಾಧ್ಯವೇ ಇಲ್ಲ ಎನ್ನುವ ಮನಸ್ಥಿತಿಗೆ ಬಂದುಬಿಟ್ಟಿದ್ದಾರೆ. ಅವರಲ್ಲೀಗ ಕಾಯುವ ತಾಳ್ಮೆಯಾಗಲೀ, ಮನಸ್ಸಿನಲ್ಲಾಗುತ್ತಿರುವ ಪ್ರಕ್ಷುಬ್ಧತೆಯನ್ನು ಅದುಮಿಟ್ಟುಕೊಳ್ಳುವ ಸಹನೆಯಾಗಲೀ ಇಲ್ಲ. ಪ್ರತಿಯೊಂದು ಕ್ಷಣವೂ ಅಸಹನೀಯ ಎನ್ನುವ ಸ್ಥಿತಿ, ಚಡಪಡಿಕೆ. ಇದು ಅಸಹಜವೇನಲ್ಲ.

ಒಂದು ವೇಳೆ ಮಾಜಿ ಪ್ರಧಾನಿಯಾಗಿರುವ ಎಚ್.ಡಿ.ದೇವೇಗೌಡರು ಮುಖ್ಯಮಂತ್ರಿಯಾಗದೇ ಇರುತ್ತಿದ್ದರೆ ಕೂಡಾ ಇದೇ ಮನಸ್ಥಿತಿಯಿರುತ್ತಿತ್ತು. ನೀವು ಎರಡು ದಶಕಗಳಷ್ಟು ಹಿಂದಕ್ಕೆ ಹೋದರೆ ದೇವೇಗೌಡರ ಮನಸ್ಥಿತಿ ಹೇಗಿತ್ತು ಎನ್ನುವುದು ಮನವರಿಕೆಯಾಗುತ್ತದೆ. ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿಯಾದ ಆ ಒಂದು ದಿನದ ಬೆಳವಣಿಗೆ ದೇವೇಗೌಡರನ್ನು ಅದೆಷ್ಟು ಹಿಂಸಿಸಿರಬಹುದು ಎನ್ನುವುದನ್ನು ಯೋಚಿಸಿ (ದೇವೇಗೌಡರು ತಮ್ಮ ಆತ್ಮಚರಿತ್ರೆಯಲ್ಲಿ ಖಂಡಿತಕ್ಕೂ ಇದನ್ನು ಬರೆದೇ ಬರೆಯುತ್ತಾರೆ). 1983ರಲ್ಲಿ ಅದೆಂಥಾ ನಾಟಕೀಯ ಬೆಳವಣಿಗೆ ನಡೆದುಹೋಯಿತು. ಬಂಗಾರಪ್ಪ, ದೇವೇಗೌಡ, ಎಸ್.ಆರ್.ಬೊಮ್ಮಾಯಿ, ಜೆ.ಎಚ್.ಪಟೇಲ್, ಅಬ್ದುಲ್ ನಜೀರ್ ಸಾಬ್, ಎಂ.ಪಿ.ಪ್ರಕಾಶ್, ಸಿದ್ಧರಾಮಯ್ಯ, ಎ.ಲಕ್ಷ್ಮೀಸಾಗರ್, ಸಿ.ಭೈರೇಗೌಡ, ಡಾ.ಜೀವರಾಜ್ ಆಳ್ವ, ಪಿ.ಜಿ.ಆರ್.ಸಿಂಧ್ಯಾ ಹೀಗೆ ಅನೇಕ ಮಂದಿ ಜನತಾ ಪಕ್ಷ ಮತ್ತು ಕರ್ನಾಟಕ ಕ್ರಾಂತಿರಂಗ ಜೊತೆಯಾಗಿ ಕಾಂಗ್ರೆಸೇತರ ಅಧಿಕಾರವನ್ನು ಕರ್ನಾಟಕಕ್ಕೆ ತರಲು ಸಮರ್ಥರಾದರು. ಆಗ ಕಾಂಗ್ರೆಸ್ ಪಕ್ಷ 82 ಸ್ಥಾನಗಳಿಸಿದ್ದರೆ, ಜನತಾ ಪಕ್ಷ ಮತ್ತು ಕ್ರಾಂತಿರಂಗ ಒಗ್ಗೂಡಿ 95 ಸ್ಥಾನಗಳಲ್ಲಿ ಗೆದ್ದಿದ್ದವು. ಬಿಜೆಪಿ ಆಗ 18 ಸ್ಥಾನಗಳಲ್ಲಿ ಜಯದಾಖಲಿಸಿತ್ತು, ಇದು ಬಿಜೆಪಿಯ ಮಹಾನ್ ಸಾಧನೆಯಾಗಿತ್ತು ಕೂಡಾ. ಈಗಿನ ಯಡಿಯೂರಪ್ಪ ಮೊದಲ ಬಾರಿಗೆ ವಿಧಾನ ಸಭೆ ಪ್ರವೇಶಿಸಿದ್ದರು ಆಗ. ರಾಮಕೃಷ್ಣ ಹೆಗಡೆ ಅವರು ಶಾಸಕಾಂಗ ಪಕ್ಷದ ನಾಯಕರಾಗುವಲ್ಲಿ ಚಾಣಾಕ್ಷತೆ ಮೆರೆದರು. ಕಾಂಗ್ರೆಸ್ ಪಕ್ಷ ತ್ಯಜಿಸಿ ಕ್ರಾಂತಿರಂಗದ ಬಾವುಟ ಹಾರಿಸಿದ್ದ ಎಸ್.ಬಂಗಾರಪ್ಪ ಮುಖ್ಯಮಂತ್ರಿ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದರು. ಆದರೆ ಹೆಗಡೆ ಮುಂದೆ ಅವರ ಚತುರತೆ ವಿಫಲವಾಯಿತು. ಈ ಸಂದರ್ಭದಲ್ಲಿ ದೇವೇಗೌಡ, ಬಂಗಾರಪ್ಪ, ಎಸ್.ಆರ್.ಬೊಮ್ಮಾಯಿ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಗಳು. ಇಂಥ ಸನ್ನಿವೇಶದಲ್ಲಿ ಮುಖ್ಯಮಂತ್ರಿ ಹುದ್ದೆ ದಕ್ಕದಿದ್ದಾಗ ಬಂಗಾರಪ್ಪ ಅವರ ಮನಸ್ಥಿತಿ ಹೇಗಿರಬಹುದು ಯೋಚಿಸಿ?

ದೇವೇಗೌಡರೂ ಉನ್ನತ ಹುದ್ದೆಯ ಅವಕಾಶ ವಂಚಿತರಾದರು, ಜೊತೆಗೆ ಬೊಮ್ಮಾಯಿ ಕೂಡಾ. ಆದರೆ ಆಕಸ್ಮಿಕವಾಗಿ ಮತ್ತು ಅನಾಯಾಸವಾಗಿ ಮುಖ್ಯಮಂತ್ರಿ ಹುದ್ದೆ ದಕ್ಕಿಸಿಕೊಂಡ ಚತುರ ರಾಜಕಾರಣಿ ಹೆಗೆಡೆಯವರ ಆ ಸಂದರ್ಭದ ಮನಸ್ಥಿತಿ ಅದೆಷ್ಟು ಉಲ್ಲಸಿತವಾಗಿರಬೇಕಲ್ಲವೇ? ಯಾವ ಅಧಿಕಾರದ ಬೆನ್ನುಹತ್ತಿ ಕಾಂಗ್ರೆಸ್ ತೊರೆದರೋ ಬಂಗಾರಪ್ಪ ಮತ್ತೆ ಕಾಂಗ್ರೆಸ್ ಮನೆ ಸೇರಿಕೊಂಡರು ಅದೇ ಅಧಿಕಾರದ ನಿರೀಕ್ಷೆಯಲ್ಲಿ. 1983ರ ವಿಧಾನಸಭಾ ಚುನಾವಣೆಯಲ್ಲಿ ಜನತಾ ಪಕ್ಷ ಅಥವಾ ಕ್ರಾಂತಿರಂಗ ಕಾಂಗ್ರೆಸ್ ಹಿಮ್ಮೆಟ್ಟಿಸಿ ಅಧಿಕಾರದ ಗದ್ದುಗೆ ಏರುತ್ತೇವೆ ಎನ್ನುವ ನೂರಕ್ಕೆ ನೂರು ವಿಶ್ವಾಸ ಹೊಂದಿರಲಿಲ್ಲವಾದ ಕಾರಣವೇ ಮುಖ್ಯಮಂತ್ರಿ ಹುದ್ದೆ ಯಾರಿಗೆ ಎನ್ನುವುದನ್ನು ತೀರ್ಮಾನಿಸಿಕೊಂಡಿರಲಿಲ್ಲ. ಅಲಿಖಿತ ಒಪ್ಪಂದವೆಂದರೆ ಬಂಗಾರಪ್ಪ ಅವರಿಗೇ ಪಟ್ಟ ಎನ್ನುವುದು. ಆದರೆ ರಾಮಕೃಷ್ಣ ಹೆಗಡೆ ಅವರು ಶಾಸಕರನ್ನು ಮ್ಯಾನೇಜ್ ಮಾಡಿದ ಕಾರಣ ಬಂಗಾರಪ್ಪ ಅವಕಾಶ ಮಿಸ್ ಮಾಡಿಕೊಂಡರು.

1983ರಲ್ಲಿ ಬಹಳವಾಗಿ ನೊಂದುಕೊಂಡವರು ಬಂಗಾರಪ್ಪ ಮತ್ತು ದೇವೇಗೌಡರು. ಖುಷಿಯಿಂದ ಬೀಗಿದವರು ರಾಮಕೃಷ್ಣ ಹೆಗಡೆ. ಈಗ ಯಡಿಯೂರಪ್ಪ ತೋರುವ ಅಸಹನೆ, ಸಿಟ್ಟು ಆಗ ಬಂಗಾರಪ್ಪ ಅವರಲ್ಲಿತ್ತು. ರಾಮಕೃಷ್ಣ ಹೆಗಡೆಯವರನ್ನು ಕಡುವೈರಿಯೆಂದೇ ಭಾವಿಸಿದ್ದರು ಬಂಗಾರಪ್ಪ. ಆದರೆ ದೇವೇಗೌಡರಲ್ಲಿ ಅಸಹನೆಯಿತ್ತಾದರೂ ಮತ್ತೊಂದು ಅವಕಾಶಕ್ಕಾಗಿ ಕಾಯುವ ತಾಳ್ಮೆಯಿತ್ತು. ಇದೇ ಮನಸ್ಥಿತಿ ಬೊಮ್ಮಾಯಿ ಅವರಿಗೂ ಆಗ.

ಮತ್ತೆ 1985ರಲ್ಲಿ ಎಸ್.ಬಂಗಾರಪ್ಪ ಕಾಂಗ್ರೆಸ್ ಮೂಲಕ ಕಣಕ್ಕಿಳಿದು ಗೆದ್ದರಾದರೂ ರಾಮಕೃಷ್ಣ ಹೆಗಡೆಯವರು ಕರ್ನಾಟಕವನ್ನು ಆವರಿಸಿಕೊಂಡುಬಿಟ್ಟಿದ್ದರು, ಸ್ವಂತ ಬಲದಲ್ಲಿ ಅಧಿಕಾರಕ್ಕೇರಿದರು. ಎರಡನೇ ಅವಧಿಗೂ ರಾಮಕೃಷ್ಣ ಹೆಗಡೆಯವರೇ ಮುಖ್ಯಮಂತ್ರಿಯಾದಾಗ ಕೊತ ಕೊತನೆ ಕುದಿದವರು ಎಚ್.ಡಿ.ದೇವೇಗೌಡರು. ನೀರಾವರಿ ಇಲಾಖೆಗೆ ನೀಡಿದ ಅನುದಾನ ಸಾಕಾಗುವುದಿಲ್ಲವೆಂದು ಪ್ರತಿಭಟಿಸಿ ರಾಮಕೃಷ್ಣ ಹೆಗಡೆ ಅವರ ಸಂಪುಟದಿಂದ ಹೊರಬರುವ ನಿರ್ಧಾರಕ್ಕೆ ಅಂಟಿಕೊಂಡು ರಾಜೀನಾಮೆ ಕೊಟ್ಟಿದ್ದರು.

ಮೂರನೇ ಅವಧಿಯಲ್ಲಿ ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿದ್ದ ದೇವೇಗೌಡರನ್ನು ದೂರಸರಿಸಿದ ಹೆಗಡೆ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಮಾಡಿದರು. ಆಗ ರಂಪಾಟವೇ ನಡೆದುಹೋಯಿತು. ಪಕ್ಷದೊಳಗೆ ಭಿನ್ನಮತ, ಹೊಡೆದಾಟ, ಚಪ್ಪಲಿ ತೂರಾಟ ಘಟಿಸಿದವು. ಈ ಸನ್ನಿವೇಷ ಕೂಡಾ ದೇವೇಗೌಡರ ರಾಜಕೀಯ ಬದುಕಿನಲ್ಲಿ ಮಹತ್ವದ ಕ್ಷಣ. ಮುಂದೆ ಗೌಡರನ್ನೇ ಪಕ್ಷದಿಂದ ದೂರಸರಿಸಿದ್ದ ಹೆಗಡೆ ಉರುಳಿಸಿದ ದಾಳಗಳಿಂದಾಗಿ ದೇವೇಗೌಡರು ಏಕಾಂಗಿಯಾಗಿ ಹೋಗಿದ್ದರು. ಆದಿನಗಳು ಹೇಗಿರಬಹುದು? ಅವರ ಅಂದಿನ ಮನಸ್ಥಿತಿ, ಅಸಹಾಯಕತೆ, ಆಕ್ರೋಶ ಅವರು ಮಾತ್ರ ಹೇಳಿಕೊಳ್ಳಬಲ್ಲರು.

ಈ ಮನಸ್ಥಿತಿಯಿಂದ ಹೊರಬರಬೇಕಾದರೆ ದೇವೇಗೌಡರು ಮುಖ್ಯಮಂತ್ರಿಯಾಗಬೇಕಾಯಿತು. ಅದೇ ವರ್ಷದ ಸಾರ್ವತ್ರಿಕ ಚುನಾವಣೆಯಲ್ಲಿ ದೇವೇಗೌಡರು ಮಾಡುತ್ತಿದ್ದ ಪ್ರಚಾರ ಭಾಷಣದಲ್ಲಿ ‘ನೀವು ನನ್ನ ಕೈಗೆ 28 ಸಂಸದರನ್ನು ಆರಿಸಿಕೊಡಿ, ನೀವು ಹೇಳಿದವರನ್ನೇ ಪ್ರಧಾನಿ ಮಾಡಿಸುತ್ತೇನೆ’ ಎಂದು ಹೇಳಿಕೊಂಡು ರಾಜ್ಯ ಸುತ್ತಾಡಿದರು. 1996ರಲ್ಲಿ ಪಿ.ವಿ.ನರಸಿಂಹರಾವ್ ಸೋತು ಸಂಯುಕ್ತರಂಗ ಗರಿಷ್ಠ ಸ್ಥಾನಗಳನ್ನು ಗೆದ್ದಾಗ ಪ್ರಧಾನಿಯಾಗುವ ಅದೃಷ್ಟ ದೇವೇಗೌಡರಿಗೇ ಒಲಿಯಿತು. ಇಂಥ ಹುದ್ದೆಯನ್ನು ನಿರೀಕ್ಷೆ ಮಾಡಿರದಿದ್ದ ದೇವೇಗೌಡರು ತಮ್ಮ ನಿರೀಕ್ಷೆಗೆ ತಕ್ಕ ಪ್ರಧಾನಿ ಆಯ್ಕೆಯಲ್ಲಿ ಮುಖ್ಯಪಾತ್ರ ವಹಿಸಲು ಹೋಗಿ ತಾವೇ ಪ್ರಧಾನಿಯಾದರು. ಹೇಗೆ ರಾಮಕೃಷ್ಣ ಹೆಗಡೆ ಸರ್ವಸಮ್ಮತ ಅಭ್ಯರ್ಥಿಯನ್ನು ಮುಖ್ಯಮಂತ್ರಿ ಮಾಡಲು ಸಾರಥ್ಯ ವಹಿಸಿ ತಾವೇ ಮುಖ್ಯಮಂತ್ರಿಯಾದರೋ ಹಾಗೆಯೇ ದೇವೇಗೌಡರು ಕೂಡಾ ಸಂಯುಕ್ತರಂಗ ಸಭೆಯಲ್ಲಿ ಅನಿರೀಕ್ಷಿತವಾಗಿ ಪ್ರಧಾನಿಯಾದರು. ಈ ಸಂದರ್ಭದಲ್ಲಿ ಅವರ ಮನಸ್ಥಿತಿ ಹೇಗಿರಬಹುದು? ಅಂತೆಯೇ ಹನ್ನೊಂದು ತಿಂಗಳುಗಳ ಕಾಲ ಪ್ರಧಾನಿಯಾಗಿ ನಿರ್ಗಮಿಸುವ ಸನ್ನಿವೇಶದ ಮನಸ್ಥಿತಿ ಹೇಗಿರಬಹುದು?

ಹಿಂದುಳಿದವರಿಗೆ ಹೊಸ ಬದುಕುಕೊಟ್ಟ ಡಿ.ದೇವರಾಜ ಅರಸು ಇಂದಿರಾ ಗಾಂಧಿಯವರಿಂದ ದೂರವಾಗಿ ತಾವೇ ಅರಸು ಕಾಂಗ್ರೆಸ್ ಪಕ್ಷ ಕಟ್ಟಿದರು. ಈ ನಾಡಿನ ಜನರಿಗಾಗಿ ಕೆಲಸ ಮಾಡಿದ್ದೇನೆ, ಅವರು ಕೈಹಿಡಿಯುತ್ತಾರೆ ಅಂದುಕೊಂಡಿದ್ದ ಅರಸು ಹೀನಾಯವಾಗಿ ಸೋತು ಮತ್ತೆ ರಾಜಕೀಯದತ್ತ ಮುಖಮಾಡದೆ ಸ್ಮಶಾನಕ್ಕೆ ನಿರ್ಗಮಿಸಿದರಲ್ಲಾ ಅವರ ಅಂದಿನ ಮನಸ್ಥಿತಿ ಹೇಗಿರಬೇಡ? ಪ್ರತೀ ವರ್ಷ ಅರಸು ಅವರ ಸ್ಮರಣೆ ಮಾಡುವ ನಾಡಿನ ಜನರ ಮನಸ್ಥಿತಿಯಲ್ಲವೇ ಅವರನ್ನು ಅಧಿಕಾರದಿಂದ ದೂರಕ್ಕೆ ತಳ್ಳಿದ್ದು?

ವೀರೇಂದ್ರ ಪಾಟಿಲ್ ಮುಖ್ಯಮಂತ್ರಿಯಾಗಿದ್ದಾಗ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರ ದೇಹಾರೋಗ್ಯ ವಿಚಾರಣೆಗೆಂದು ಬಂದಿದ್ದ ರಾಜೀವ್ ಗಾಂಧಿ ಅವರು ದೆಹಲಿಗೆ ವಾಪಸಾಗುವ ಸಂದರ್ಭದಲ್ಲಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪಾಟೀಲ್ ಅವರನ್ನು ಕೆಳಗಿಳಿಸುವ ನಿರ್ಧಾರ ಪ್ರಕಟಿಸಿದರು. ಇದನ್ನು ಕೇಳಿ ಕುಸಿದ ಪಾಟೀಲ್ ಮತ್ತೆ ಚೇತರಿಸಿಕೊಳ್ಳಲಿಲ್ಲ. ಚಾಣಾಕ್ಷ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿ, ಯೋಜನಾ ಆಯೋಗದ ಉಪಾಧ್ಯಕ್ಷರಾಗಿ ಅಧಿಕಾರ ಅನುಭವಿಸಿದ್ದವರು. ಆದರೆ ದೇವೇಗೌಡರು ಪ್ರಾಬಲ್ಯಕ್ಕೆ ಬಂದಮೇಲೆ ಅವರ ರಾಜಕೀಯ ಮಂಕಾಯಿತು, ಮಾತ್ರವಲ್ಲಾ ಪಕ್ಷದಿಂದಲೇ ಹೊರದಬ್ಬಿಸಿಕೊಂಡರು. ಆಗ ಅವರ ಮನಸ್ಥಿತಿ ಹೇಗಿರಬಹುದು?

ಬಿಜೆಪಿಯ ಹಿರಿಯ ಜೀವ ಎಲ್.ಕೆ.ಅಡ್ವಾಣಿ ಅವರ ಮನಸ್ಸಿನ ವೇದನೆ, ತೊಳಲಾಟ ಅದೆಷ್ಟಿರಬಹುದು? ಅವರು ಉಪಪ್ರಧಾನಿಯಾಗಿದ್ದವರು. ಅವರಿಗೆ ಅಧಿಕಾರದ ಆಸೆ ಇಲ್ಲವೆಂದು ಹೇಳಿದರೆ ಅದು ಆತ್ಮವಂಚನೆಯಾಗುತ್ತದೆ. ಈಕ್ಷಣದಲ್ಲೂ ಪ್ರಧಾನಿಯಾಗಬೇಕೆಂಬ ಮಹತ್ವಾಕಾಂಕ್ಷೆಯಿಂದ ಅವರು ಮುಕ್ತರಾಗಿಲ್ಲ. ನರೇಂದ್ರ ಮೋದಿ ಪ್ರಧಾನಿಯಾಗಲು ತುಡಿಯುತ್ತಿರುವುದು ಅವರ ಕಾರ್ಯವೈಖರಿಯಿಂದಲೇ ಅರ್ಥವಾಗುತ್ತದೆ.

ಹೀಗೆ ಅಧಿಕಾರ ಇದ್ದಾಗ ಮತ್ತು ಇಲ್ಲದಿದ್ದಾಗ ಮನುಷ್ಯನ ಮನಸ್ಸಿನಲ್ಲಿ ತಾಕಲಾಟಗಳು ಇದ್ದೇ ಇರುತ್ತವೆ. ಅಧಿಕಾರವಿದ್ದಾಗ ತಾನಾಗಿಯೇ ಬರುವ ವರ್ಚಸ್ಸು ಅಧಿಕಾರದಿಂದ ನಿರ್ಗಮಿಸುವಾಗ ಕಳೆಗುಂದುತ್ತದೆ. ನಿಮ್ಮ ಕೈಯಲ್ಲಿರುವ ಅಧಿಕಾರ ಕಳಚಿಬಿದ್ದರೆ ನಿಮಗಾಗುವ ಮನಸ್ಥಿತಿಯನ್ನು ಊಹಿಸಿಕೊಂಡರೆ ಯಡಿಯೂರಪ್ಪ ಅವರ ಮನಸ್ಥಿತಿಯನ್ನೂ ಊಹಿಸಿಕೊಳ್ಳಬಲ್ಲಿರಿ, ಅರ್ಥಮಾಡಿಕೊಳ್ಳಬಲ್ಲಿರಿ.

ಆದರೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕೀಯ ಅಧಿಕಾರ ಶಾಶ್ವತವಲ್ಲ ಮತ್ತು ಅದು ನಮ್ಮ ಖಾಸಗಿ ಆಸ್ತಿಯಲ್ಲ ಎನ್ನುವ ಪ್ರಬುದ್ಧತೆಯನ್ನು ನಮ್ಮ ರಾಜಕಾರಣಿಗಳು ಪಡೆದುಕೊಂದರೆ ಈ ಮಾನಸಿಕ ಅಸ್ವಸ್ಥತೆಯನ್ನು ಸ್ವಲ್ಪಮಟ್ಟಿಗೆ ಘನತೆಯಿಂದ ನಿಭಾಯಿಸಬಹುದು.