Monthly Archives: October 2012

ಗಾಂಧಿ ಜಯಂತಿ ಕಥಾ ಸ್ಪರ್ಧೆ – 2012 : ತೀರ್ಪುಗಾರರ ಮಾತು

ಕಥೆಗಳಿಗೆ ಇರುವ ಆಕರ್ಷಣೆಯೇ ಅಂಥದ್ದು

– ಕೇಶವ ಮಳಗಿ

ಬರವಣಿಗೆಯ ಆರಂಭದಲ್ಲಿ ಎಲ್ಲರೂ ಕವಿಗಳಾಗಲು ಹಾತೊರೆಯುತ್ತಾರಾದರೂ ಬಲು ಬೇಗ ತಮ್ಮೊಳಗಿನ ಶಕ್ತಿಯನ್ನು ಕಂಡುಕೊಂಡವರು ಸಾಮಾನ್ಯವಾಗಿ ಕಥೆ ಕಟ್ಟುವ ಕಾಯಕಕ್ಕೆ ಜಾರುತ್ತಾರೆ. ಸಾಂದ್ರತೆ ತುಂಬಿರುವ, ರೂಪಕಗಳು ಕಿಕ್ಕಿರಿದಿರುವ, ಅಮೂರ್ತತೆಗೇ ಹೆಚ್ಚಾಗಿ ಒಲಿದಿರುವ ಕಾವ್ಯಲೋಕವನ್ನು ಮೀರಿದ, ಮತ್ತಷ್ಟು ನಿಖರತೆ, ವಿವರಗಳನ್ನು ಬಯಸುವ ಅಭಿವ್ಯಕ್ತಿಯ ಆವಶ್ಯಕತೆ ಇದೆ ಎಂಬ ತುಡಿತದ ಲೇಖಕರು ಕವಿತೆ ಚುಂಬನಕ್ಕೆ, ಕಥೆ ಆಲಿಂಗನಕ್ಕೆ ಎಂಬಂತೆ ಅದರತ್ತ ತಮ್ಮ ವಿಶಾಲ ಬಾಹುಗಳನ್ನು ಚಾಚುತ್ತಾರೆ. ಸಾಮಾನ್ಯವಾಗಿ ಅನುಕರಣೆ, ಪುನರಾವರ್ತನೆಗಳಿಂದ ತುಂಬಿ ತುಳುಕುವ ಸಮಕಾಲೀನ ಕಾವ್ಯಲೋಕ ಇನ್ನೊಂದು ಹೊರಳಿಗೆ ಲೇಖಕನನ್ನು ತಂದು ನಿಲ್ಲಿಸುತ್ತದೆ. ತನ್ನ ವ್ಯಕ್ತಿ ವಿಶಿಷ್ಟ ಅನುಭವ ಸಮಷ್ಟಿ ಅನುಭವವಾಗಿ ಮೈದಳೆಯಲು ಇರುವ ಪ್ರಕಾರ ಯಾವುದೆಂದು ಯೋಚಿಸುವ ಅಗತ್ಯವೂ ಇಲ್ಲದಂತೆ ಕಥೆ ಅಂಥ ಲೇಖಕರ ಎದುರು ನಿಂತಿರುತ್ತದೆ. ಲೋಕವಿಸ್ಮಯದ ಹೂವಿನಂತೆ ಕಥೆ ಕಂಗೊಳಿಸತೊಡಗುತ್ತದೆ. ಲೇಖಕ ಬಯಸುವ ಎಲ್ಲವನ್ನೂ ಸಹಜವಾಗಿ, ಸಮರ್ಪಕವಾಗಿ ತನ್ನೊಳಗೆ ಮಟ್ಟಸವಾಗಿ ಈ ಕಥಾಲೋಕ ಹೊಂದಿಸಿ ಇಟ್ಟುಕೊಂಡಿರುತ್ತದೆ. ಸಾಂದ್ರವಾಗಿರುತ್ತಲೇ ಅಪೂರ್ವ ವಿವರಗಳ ಮೂಲಕ ತಟ್ಟನೆ ಆ ವರೆಗೆ ಅರಿವಿಲ್ಲದ ಬದುಕಿನ ಕುರಿತ ಅಪೂರ್ವ ಒಳನೋಟವನ್ನು ಒದಗಿಸುವ ಗುಣ; ಕಾದಂಬರಿಯಂತೆ ಸವಿವರವಾಗಿ, ಒಂದಾದ ಮೇಲೊಂದರಂತೆ ಕಟ್ಟಬೇಕಾದ, ತಾರ್ಕಿಕ ತುದಿಯನ್ನು ಮುಟ್ಟಿಸಬೇಕಾದ ಇಲ್ಲದ ಅನಿವಾರ್ಯತೆ ಕಥೆಗಳಿಗೇ ಹೇಳಿ ಮಾಡಿಸಿದ್ದು. ಲಾಲಿತ್ಯದ ಕೈ ಹಿಡಿದರೂ ಅತಿ ವಾಚಾಳಿಯಾಗದೆ ಭಾವುಕ ಪರಿಸರವನ್ನು ನಿಭಾಯಿಸಬಲ್ಲ ಸಾಧ್ಯತೆ ಪ್ರಬಂಧಕ್ಕಿಂತ ಕಥೆಗೇ ಹೆಚ್ಚು. ಬುದ್ಧಿಭಾವಗಳು ಕೂಡಿಕೆಯಾದ, ಒಡಪಿನ ಮೈಕಟ್ಟು ಹೊಂದಿದ, ಲಾಲಿತ್ಯ-ನವಿರುತನವನ್ನು ಹಿಡಿದಿಟ್ಟುಕೊಂಡಿರುವ, ಕೊಂಚ ಜಾಣ್ಮೆ, ಕೊಂಚ ತಾಳ್ಮೆಗಳ ಮೂಲಕ ಕಟ್ಟಿದ ಕಥೆಗಳು ತಲೆಮಾರುಗಳಿಂದಲೂ ನಮ್ಮನ್ನು ಕಾಡುತ್ತಲೇ ಬಂದಿವೆ. ಅಂಥ ಕಥೆಗಳನ್ನು ಓದುತ್ತಲೇ ನಾವೆಲ್ಲ ಬೆಳೆದು-ಬೆಳಗುತ್ತಿರುತ್ತೇವೆ. ಕಥೆ ಹೇಳುವುದು; ಕಥೆ ಕೇಳುವುದನ್ನು ರಕ್ತದಲ್ಲಿಯೇ ಪಡೆದು ಬಂದಿರುವ ನಮ್ಮಂಥ ಸಮಾಜದಲ್ಲಿ ಕವಿತೆ ಏಕಾಂತಕ್ಕೆ; ಕಥೆಗಳು ಲೋಕಾಂತಕ್ಕೆ.

ಕನ್ನಡದ ಸಮಕಾಲೀನ ಸಾಹಿತ್ಯ ಸನ್ನಿವೇಶದಲ್ಲಿ ಹೊಸ ಲೇಖಕರು ಕಥೆಗಳಿಗೆ ಹೊರಳಲು ಇರುವ ಇನ್ನೊಂದು ಆಮಿಷವೆಂದರೆ ಕಥಾ ಸ್ಪರ್ಧೆಗಳು. ಈ ಹಿಂದೆ ಬೆರಳೆಣಿಕೆಯಷ್ಟಿದ್ದ ಅವಕಾಶ ಈಗ ಕೈಚಾಚುವಷ್ಟು ಹೇರಳವಾಗಿವೆ. ಕುರುಡು ಕಾಂಚಾಣದ ಆಸರೆಯೂ ಸಿಕ್ಕುವುದರಿಂದ ಸ್ಪರ್ಧೆಗಳಿಗೆ ಕಥೆ ಬರೆಯುವುದು ಸಾರ್ಥಕಶ್ರಮ ಅಥವ ವರ್ತ್‌ ಅಟೆಂಪ್ಟಿಂಗ್.

ಕಥಾಪ್ರಸಂಗಕ್ಕೊಂದು ನಿಮಿತ್ತ ಬೇಕು. “ಗಾಂಧಿ ಜಯಂತಿ” ವರ್ತಮಾನ.ಕಾಮ್‌ನ ಗೆಳೆಯರಿಗೆ ಅದನ್ನು ಒದಗಿಸಿದೆ. ಚರ್ವಿತಚರ್ವಣ ಜನಪ್ರಿಯ ಸಿದ್ಧ ಮಾದರಿಗಳು, ಹೀಗೇ ಬರೆಯಿರಿ ತರುಣರೇ ಎಂದು ಯಶಸ್ಸಿನ ಮಾರ್ಗದರ್ಶಿ ಸೂತ್ರವನ್ನು ತೋರಿಸಿ ಹುರಿದುಂಬಿಸುವ ದರ್ಶಿನಿ ವಿಮರ್ಶಕರು, ಇದೇ ಶ್ರೇಷ್ಠತೆ ಸಾಧಿಸಲು ಸೋಪಾನ ಎಂದು ಮುಗುಮ್ಮಾಗಿ ನಿಂತು ನಗುವ ಶ್ರೇಷ್ಠತೆಯ ವ್ಯಸನದ ಬುಡಕಟ್ಟಿನವರು ಹೇಳುವ ಎಲ್ಲವನ್ನೂ ತಿರಸ್ಕರಿಸಿ, ನಾವು ಹೇಳುವುದೇ ಬೇರೆ ಇದೆ, ಮತ್ತು ಅದು ನೀವು ಹೇಳುವುದಕ್ಕಿಂತ ಭಿನ್ನವಾಗಿದೆ ಎಂದು ನಿರೂಪಿಸಬಲ್ಲ ಅಪಾರ ಅವಕಾಶಗಳನ್ನು ಇಂಥ ಕಥಾಸ್ಪರ್ಧೆಗಳು ಒದಗಿಸುತ್ತವೆ. ಮುಖ್ಯವಾಹಿನಿಯಲ್ಲಿ ಒಪ್ಪಿಗೆಯಾಗದ ಶೈಲಿ, ಅನುಭವ, ಪ್ರಯೋಗಗಳಿಗೆ ಸ್ಪರ್ಧೆಗಳಲ್ಲಿ ಆದ್ಯತೆ ದೊರಕಬಹುದು. ಆದರೆ, ವಾಸ್ತವದಲ್ಲಿ ಹಾಗಾಗುತ್ತಿದೆಯೇ? ಕನ್ನಡದಲ್ಲಿ ನಡೆಸಲಾಗುತ್ತಿರುವ ಸ್ಪರ್ಧೆಗಳಿಂದ ಹೊರಬರುತ್ತಿರುವ ಕಥೆಗಳನ್ನು ನೋಡಿದರೆ ಇಲ್ಲವೆಂದೇ ಹೇಳಬೇಕಾಗುತ್ತದೆ.

ಗಾಂಧಿ ಜಯಂತಿಯ ನಿಮಿತ್ತ ವರ್ತಮಾನ.ಕಾಮ್ ಏರ್ಪಡಿಸಿದ ಸ್ಪರ್ಧೆಗೆ ಬಂದ ಐವತ್ತು ಕಥೆಗಳನ್ನು ಓದಿದಾಗಲೂ ಮತ್ತೆ ಅಂಥದೇ ಪ್ರಶ್ನೆ ಕಾಡುತ್ತಿದೆ. ಸಮಾಜ ತಲ್ಲಣಗಳಿಂದ ನಿಗಿನಿಗಿಸುತ್ತಿದೆ. ಅವಕಾಶವಾದಿಗಳು, ಕಪಟಿಗಳು, ಸಮುದಾಯ ವಂಚಕರು, ಎಲ್ಲವನ್ನೂ ಹೊಸಕಿ ಹೂಂಕರಿಸುವ ದುಷ್ಟರು ಹಿಂದೆಂದಿಗಿಂತ ಹೆಚ್ಚಿನ ಪ್ರಮಾಣದಲ್ಲಿ ತುಂಬಿ ತುಳುಕುತ್ತಿದ್ದಾರೆ. ಲೋಕ ಬರು ಬರುತ್ತ ಇನ್ನಷ್ಟು ಸಂಕೀರ್ಣವಾಗುತ್ತಿದೆ. ಒಂದು ಸಾಂತ್ವನದ ಮೆಲುದನಿ, ಒಂದು ಅಂತಃಕರಣದ ಪಿಸುಮಾತು, ಒಂದು ಆಸರೆಯ ಕೈಗಳಿಗಾಗಿ ಹಿಂದೆಂದಿಗಿಂತ ಹೆಚ್ಚು ಇಂದು ಎಲ್ಲರೂ ತುಡಿಯುತ್ತಿದ್ದಾರೆ.

ಆದರೆ, ಲೇಖಕ ಮಾತ್ರ ಕೈಯಲ್ಲಿ ಹಿಡಿದ ಚಲಾವಣೆ ಕಳೆದುಕೊಂಡ ಸಿಕ್ಕೆಯನ್ನೇ ತಿಕ್ಕಿತಿಕ್ಕಿ ಹೊಸತೆಂಬಂತೆ ಎಲ್ಲರಿಗೂ ತೋರಿಸುತ್ತಿದ್ದಾನೆ. ಲೇಖಕರಾಗಿ ಕಠಿಣ ನಿಲುವು, ಸವಾಲುಗಳನ್ನು ಸ್ವೀಕರಿಸುವ, ಸಮರ್ಪಕ ವೇಳೆಯಲ್ಲಿ ಅತ್ಯಂತ ಕಹಿಯಾದ ಸಮರ್ಪಕ ಪ್ರಶ್ನೆಗಳನ್ನು ಕೇಳುವ ನೈತಿಕತೆಯನ್ನು ಬರಹಗಾರ ಕಳೆದುಕೊಳ್ಳುತ್ತಿದ್ದಾನೆಯೇ? ನೈತಿಕತೆ ಇನ್ನೂ ಸಾಹಿತ್ಯದ ಭಾಗವಾಗಿ ಉಳಿದಿಲ್ಲವೆ? ಉತ್ತರ ಕಂಡುಕೊಳ್ಳಬೇಕಾದ ಪ್ರಶ್ನೆಗಳು.

ಸ್ಪರ್ಧೆಗೆ ಬಂದ ಕಥೆಗಳನ್ನು ಇಂಥ ಪ್ರಶ್ನೆಗಳ ಹಿನ್ನೆಲೆಯಲ್ಲಿಯೇ ಓದಲು ಪ್ರಯತ್ನಿಸಲಾಗಿದೆ. ರಚನೆ, ಬಂಧ ಮತ್ತು ಶೈಲಿಯ ಮಿತಿಗಳೇನೆ ಇದ್ದರೂ ಆಶಯದ ದೃಷ್ಟಿಯಿಂದ ಆ ನಿಟ್ಟಿನಲ್ಲಿ ಹೆಜ್ಜೆ ಇಡುವ ಪ್ರಯತ್ನಗಳನ್ನು ಮಾಡಿದ ಮೂರು ಕಥೆಗಳನ್ನು ಅಂತಿಮ ಸುತ್ತಿಗೆ ಆಯ್ಕೆಮಾಡಲಾಗಿದೆ.

ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ನರಕ ಸದೃಶ್ಯ ಹಾಸ್ಟೆಲ್ಲಿನ ಕಥೆಯನ್ನು ಸಮಕಾಲೀನ ರಾಜಕೀಯ, ಜಾತಿಯ ವಿಷ, ಬುದ್ಧಿಜೀವಿ ಸೋಗಲಾಡಿತನ, ಡಾಂಭಿಕ ಆಧ್ಯಾತ್ಮಿಕತೆ, ಮತ್ತು ಮಾನವಂತ ಸಮಾಜಕ್ಕೆ ಇರಬೇಕಾದ ಕನಿಷ್ಟ ನೈತಿಕತೆಗಳ ಗೈರು ಹಾಜರಿಯನ್ನು “ಹಸಿವೆಯೇ ನಿಲ್ಲು ನಿಲ್ಲು” ಕಥೆ ಕಟು ವ್ಯಂಗ್ಯ, ಹರಿತ ಭಾಷೆಯ ಟೀಕೆ-ಟಿಪ್ಪಣಿ, ನೈತಿಕ ವ್ಯಾಖ್ಯಾನಗಳ ಮೂಲಕ ಕಟ್ಟಿಕೊಡಲು ಪ್ರಯತ್ನಿಸುತ್ತದೆ. ಅತಿ ಬರವಣಿಗೆಯಂತೆ ಕಾಣಬಹುದಾದ ಶೈಲಿಯೇ ಈ ಕಥೆಯ ಯಶಸ್ಸಿಗೆ ಕಾರಣವಾಗಿದೆ. ಕಥೆಗಾರರ ಅನುಭವವೇನೋ ದಟ್ಟವಾಗಿದೆ. ಆದರೆ, ವಸ್ತುವನ್ನು ಇನ್ನಷ್ಟು ಪಕ್ವತೆಯಿಂದ ನಿಭಾಯಿಸಬಹುದಾದ ಅವಕಾಶಗಳನ್ನು ಲೇಖಕರು ವ್ಯಂಗ್ಯದ ಮೊನಚಿನಲ್ಲಿ ಕಳೆದುಕೊಂಡಿದ್ದಾರೆ. ಬದಲಾಗುತ್ತಿರುವ ಸಮಕಾಲೀನ ಸಮಾಜದ ಬಾಹ್ಯ ವಿವರಗಳನ್ನು ಗ್ರಹಿಸಲು ಪ್ರಯತ್ನಿಸಿರುವುದು ಈ ಕಥೆಯ ಗುಣಾತ್ಮಕ ಅಂಶ. ಆ ಕಾರಣದಿಂದಲೇ ಇದನ್ನು ಮೊದಲ ಬಹುಮಾನ ಪಡೆದ ಕಥೆಯಾಗಿ ಆಯ್ಕೆ ಮಾಡಲಾಗಿದೆ.

ಎರಡನೆಯ ಬಹುಮಾನಕ್ಕಾಗಿ ಆಯ್ಕೆಮಾಡಿದ “ಗಾಂಧಿ ಮರ” ಕೂಡ ಸಮಕಾಲೀನ ಸಮಾಜದ ನೈತಿಕ ದಿವಾಳಿಯನ್ನು ಇನ್ನೊಂದು ಬಗೆಯಲ್ಲಿ ನೋಡಲು ಪ್ರಯತ್ನಿಸುತ್ತದೆ. ವಿದ್ಯುದ್ದೀಪ, ಬಸ್ಸು, ರಸ್ತೆಗಳ ಮೂಲಕ ಆಗಮನವಾಗುವ ನಾಗರಿಕತೆ ಮತ್ತು ಸಾಮಾಜಿಕ ಪಲ್ಲಟಗಳು ಕನ್ನಡ ಕಥೆಗಳಿಗೆ ಹೊಸದೇನಲ್ಲ. ರಸ್ತೆಯ ಮೂಲಕ ಆರಂಭವಾಗುವ ರಾಜಕೀಯ ಅಲ್ಲಿನ ಮನುಷ್ಯರನ್ನು ರಾಕ್ಷಸರನ್ನಾಗಿಸುವುದು, ಊರು ನೈತಿಕತೆ ಕಳೆದುಕೊಳ್ಳವುದು ಕೂಡ ಹಳೆಯ ವಿಷಯವೇ. “ಡಾಂಬರು ಬಂದುದು” ಅಂಥ ಕಥೆಗಳ ಅತ್ಯಂತ ಪ್ರಾತಿನಿಧಿಕ ಕಥೆಯಾಗಿದೆ. ಆದರೆ, ಅಂಥ ಸಮಸ್ಯೆ ಇನ್ನೂ ಜೀವಂತವಾಗಿರುವುದು, ಮೇಲೆ ಹೇಳಿದ ಬಸ್ಸು, ವಿದ್ಯುತ್ ಮತ್ತು ರಸ್ತೆಗಳ ಮೂಲಕವೇ ಇಂದಿಗೂ ಎಷ್ಟೋ ಗ್ರಾಮಗಳಿಗೆ ನಾಗರಿಕತೆ ಪಾದಾರ್ಪಣೆ ಮಾಡುವುದು ವಾಸ್ತವವಾಗಿರುವುದರಿಂದ ಕಥೆಗೆ ಸಮಕಾಲೀನತೆ ಬಂದಿದೆ. ಕಥೆಯ ಗಮನಾರ್ಹ ಅಂಶವೆಂದರೆ ಕಥೆಗಾರರ ಪ್ರಾಮಾಣಿಕತೆ. ಸಿದ್ಧ ಮಾದರಿಯ ಕ್ಲೀಶೆಗಳಿಗೆ ಬಲಿಯಾಗದೆ, ಅತ್ಯಂತ ಸರಳವಾಗಿ ಕಥೆಯನ್ನು ನಿರೂಪಿಸಿರುವುದು, ಕಥೆಗೆ ಸಹಜವಾದ ಅಂತ್ಯವನ್ನು ಒದಗಿಸಿರುವುದು ಕಥೆಯ ಗೆಲುವಿಗೆ ಕಾರಣವಾಗಿದೆ.

ಅತ್ಯಂತ ಚಾಣಾಕ್ಷತನದ ಶ್ರೇಣೀಕೃತ ಜಾತಿ ರಾಜಕಾರಣದಲ್ಲಿ ಮಲೆಕುಡಿಯರ ಕರಿಗಾರು ದೈವವನ್ನು ಮೇಲ್ಜಾತಿಯ ಈಶ್ವರ ಎತ್ತಗಂಡಿ ಮಾಡುವುದು ಮತ್ತು ಕರಿಗಾರು ದೈವ ತನ್ನ ಅಸ್ತಿತ್ವಕ್ಕಾಗಿ ಸಾಂಕೇತಿಕ ಹೋರಾಟ ನಡೆಸುವುದು ಕಥೆಯ ವಸ್ತುವನ್ನಾಗಿ ಹೊಂದಿರುವ “ಸೂರೂರಿನ ದೈವ ಮಾಯವಾದ ಕಥೆ” ಹೇಳುತ್ತದೆ. ಕಥೆಯ ಒಳಗೊಂದು ಕಥೆ ಎನ್ನುವಂತೆ ನಿರೂಪಣೆ ಇದ್ದರೂ ಕಥೆ ಹೇಳುವ ಉತ್ಸಾಹಕ್ಕೆ ಹೆಚ್ಚು ಒತ್ತು ಕೊಟ್ಟಿರುವುದು ಸಹಜತೆಯನ್ನು ಪ್ರಾಪ್ತವಾಗಿಸಿದೆ. ಅಭಿವೃದ್ಧಿ ಮತ್ತು ಜನಪದ ನಂಬಿಕೆಗಳ ಸಂಘರ್ಷ ಕರಾವಳಿ ಭಾಗವನ್ನು ಇಂದಿಗೂ ಕಾಡುತ್ತಿರುವ ಸಮಸ್ಯೆಯಾಗಿದೆ. ನಂಬಿಕೆಗಳಿಂದಲೇ ಬದುಕು ಕಟ್ಟುವ ಮತ್ತು ಬದುಕು ನಡೆಸುವ ಜನಾಂಗಗಳು ಎಲ್ಲಕ್ಕೂ ದೈವವೇ ಕಾರ್ಯಕಾರಣ ಎನ್ನುತ್ತವೆ. ಹಾಗಾಗಿಯೇ ಕಥೆಯಲ್ಲಿ ಕಾಣುವ ದುರಂತಗಳಿಗೆ ಜನರ ಪ್ರತಿಕ್ರಿಯೆಗಳು ಆ ನಿಟ್ಟಿನಲ್ಲೇ ಇವೆ. ಅಂಥ ಅನುಭವವನ್ನು ಅಬ್ಬರವಿಲ್ಲದೆ ಹೇಳುವುದೇ ಕಥೆಯ ಯಶಸ್ಸಿಗೆ ಕಾರಣವಾಗಿದೆ. ಈ ಅಂಶವೇ ಮೂರನೆಯ ಬಹುಮಾನವನ್ನು ನೀಡುವಂತೆ ಮಾಡಿದೆ.

ಹಾಗೆ ನೋಡಿದರೆ, ಸ್ಪರ್ಧೆಗೆ ಬಂದಿರುವ ಕೆಲವು ಕಥೆಗಳು ಕಟ್ಟುವಿಕೆ ಮತ್ತು ವಸ್ತುವನ್ನು ನಿಭಾಯಿಸಿರುವ ರೀತಿಯಿಂದ ಯಶಸ್ವಿ ಕಥೆಗಳಾಗಿವೆ. ಜನಪ್ರಿಯ ಸಿದ್ಧ ಮಾದರಿಗಳನ್ನು ಅನುಸರಿಸಿ ಬರೆದಿರುವ ಈ ಕಥೆಗಳು ಓದುವಾಗ ಸಂತೋಷವನ್ನು ನೀಡಬಲ್ಲವು. ಸತ್ಯಾನ್ವೇಷಣೆ, ಹೀಗೊಂದು ಬಾನಾಮತಿ (ಈ ಎರಡೂ ಕತೆಗಳನ್ನು ಪ್ರೋತ್ಸಾಹಕ ಬಹುಮಾನಕ್ಕೆ ಆಯ್ಕೆ ಮಾಡಲಾಗಿದೆ), ಗುಜರಿ ಕಾರು, ಸಂತಾನಭಾಗ್ಯ, ಭುವನವು ಬಯಲಾಗುವುದಿಲ್ಲಿ, ಕಪ್ಪುಗತ್ತಲಲೂ ಬೆಳಕಿನ ಒಂದು ಚುಕ್ಕಿ, ಈ ಬಗೆಯ ಕಥೆಗಳಾಗಿವೆ.

ಹೊಸ ಮತ್ತು ಕೊಂಚ ಹಳೆಯ ತಲೆಮಾರಿನ ಕಥೆಗಾರರ ಕಥೆಗಳನ್ನು ಓದುವುದು ನಿಜಕ್ಕೂ ಖುಷಿಯ ಕೆಲಸವೇ. ಆಮೂಲಕ ತಿಳಿದಿರದ ಅನುಭವದ ಪರಿಚಯವಾಗುತ್ತದೆ. ಹೊಸ ಆಲೋಚನೆಗಳೇನಿವೆ ಎಂದೂ ಅರಿವಾಗುತ್ತದೆ. ಕಥೆ ಕಟ್ಟುವ ಕಾಯಕ ನಿರಂತರ. ಹಾಗೆಂದೇ, ಇಲ್ಲಿನ ಕತೆಗಾರರ ಲೇಖನಿಗೆ ವಿರಾಮವೆಂಬುದಿಲ್ಲ.

ಗಾಂಧಿ ಜಯಂತಿ ಕಥಾ ಸ್ಪರ್ಧೆ – 2012 : ಫಲಿತಾಂಶ ಪ್ರಕಟಣೆ

ಸ್ನೇಹಿತರೇ,

ಈ ಬಾರಿ ವರ್ತಮಾನ್.ಕಾಮ್ ಮೂಲಕ ಪ್ರಾಯೋಜಿಸಿದ್ದ ಈ ಕಥಾ ಸ್ಪರ್ಧೆಗೆ ನಾನು ವೈಯಕ್ತಿಕವಾಗಿ ಊಹಿಸಿದ್ದಕ್ಕಿಂತ ಹೆಚ್ಚು ಕತೆಗಳು ಬಂದು ಮನಸ್ಸಿಗೆ ಖುಷಿಯಾಗಿತ್ತು. ಇಂಟರ್ನೆಟ್‌ನಂತಹ ಸೀಮಿತ ವಲಯದಲ್ಲಿ ಪ್ರಕಟಿಸಿದ ಸ್ಪರ್ಧೆಯ ವಿವರಗಳಿಗೆ ಎಷ್ಟು ಕತೆಗಳು ಬರಬಹುದು ಎನ್ನುವುದು ಒಂದು ರೀತಿ ಅಸ್ಪಷ್ಟವಾಗಿತ್ತು. ಆದರೆ ನಾವು ಪ್ರೆಸ್‌ಕ್ಲಬ್ ಮೂಲಕ ಕಳುಹಿಸಿದ ಪತ್ರಿಕಾ ಪ್ರಕಟಣೆಯನ್ನು ಪ್ರಜಾವಾಣಿಯವರು ಪ್ರಕಟಿಸಿದ್ದರು. ಅವರಿಗೆ ಈ ಮೂಲಕ ಧನ್ಯವಾದಗಳನ್ನು ತಿಳಿಸುತ್ತೇನೆ. ಆ ಪ್ರಕಟಣೆ ಬೇರೆ ಇನ್ಯಾವ ಪತ್ರಿಕೆಗಳಲ್ಲಿ ಬಂದಿತ್ತೊ ಗೊತ್ತಾಗಲಿಲ್ಲ.

ಒಟ್ಟಾರೆಯಾಗಿ 70 ಕ್ಕೂಹೆಚ್ಚು ಕತೆಗಳು ನಮಗೆ ಬಂದವು. ಕತೆಗಳನ್ನು ಕಳುಹಿಸಿ ಈ ಕಥಾ ಸ್ಪರ್ಧೆಯಲ್ಲಿ ಪಾಲ್ಗೊಂಡ ಈ ಎಲ್ಲಾ ಲೇಖಕರಿಗೂ ಹೃತ್ಫೂರ್ವಕ ಧನ್ಯವಾದಗಳು. ಅದರಲ್ಲಿ ನಮ್ಮ ಕಥಾ ಸ್ಪರ್ಧೆಯ ನಿಬಂಧನೆಗಳಿಗೆ ಒಳಪಟ್ಟಿದ್ದ ಕತೆಗಳು ಸರಿಯಾಗಿ 50. ಕಥಾಸ್ಪರ್ಧೆಗೆ ತೀಪ್ರುಗಾರರನ್ನು ಹುಡುಕುವ ಸಂದರ್ಭದಲ್ಲಿ ನಮ್ಮ ಬಳಗದ ಬಿ.ಶ್ರೀಪಾದ್ ಭಟ್ಟರು ಕನ್ನಡದ ಖ್ಯಾತ ಕತೆಗಾರ ಕೇಶವ ಮಳಗಿಯವರನ್ನು ಸಂಪರ್ಕಿಸಿ ಅವರನ್ನು ಈ ಕಥಾ ಸ್ಪರ್ಧೆಯ ತೀರ್ಪುಗಾರರಾಗಲು ಕೋರಿದ್ದರು. ಅವರ ಮನವಿಗೆ ಸ್ಪಂದಿಸಿ ಎಲ್ಲಾ ಕತೆಗಳನ್ನು ಓದಿ ತಮ್ಮ ಅಭಿಪ್ರಾಯ ಮತ್ತು ಉತ್ತಮ ಕತೆಗಳ ಪಟ್ಟಿಯನ್ನು ನೀಡಲು ಒಪ್ಪಿಕೊಂಡ ಕೇಶವ ಮಳಗಿಯವರಿಗೆ ನಾನು ವರ್ತಮಾನ ಬಳಗದ ಪರವಾಗಿ ಕೃತಜ್ಞತೆಗಳನ್ನು ತಿಳಿಸುತ್ತೇನೆ. ಗಾಂಧಿ ಜಯಂತಿಗೆ ಒಂದು ವಾರದ ಮೊದಲೇ ಪಟ್ಟಿ ಸಿದ್ದಮಾಡಿ ಮತ್ತು ತಮ್ಮ “ತೀರ್ಪುಗಾರರ ಮಾತು“ಗಳನ್ನು ಬರೆದುಕೊಟ್ಟ ಕೇಶವ ಮಳಗಿಯವರ ಶಿಸ್ತನ್ನು ಅಭಿನಂದಿಸುತ್ತ, ಈ ಕಾರ್ಯಕ್ಕೆ ಅವರು ಕೊಟ್ಟ ಸಮಯಕ್ಕಾಗಿ ಅವರಿಗೆ ಮತ್ತೊಮ್ಮೆ ಧನ್ಯವಾದಗಳನ್ನು ತಿಳಿಸುತ್ತೇನೆ. ಹಾಗೆಯೇ, ಕೇಶವ ಮಳಗಿಯವರನ್ನು ಸಂಪರ್ಕಿಸುವುದರ ಜೊತೆಗೆ ಈ ಸ್ಪರ್ಧೆಯ ಒಂದಷ್ಟು ಇತರೆ ಜವಾಬ್ದಾರಿಗಳನ್ನು ಹೊತ್ತ ಬಿ.ಶ್ರೀಪಾದ್ ಭಟ್ಟರಿಗೂ ಧನ್ಯವಾದಗಳನ್ನು ತಿಳಿಸುತ್ತೇನೆ.

ಕಥಾ ಸ್ಪರ್ಧೆಯ ಬಹುಮಾನಿತ ಕತೆಗಳ ಮತ್ತು ಲೇಖಕರ ಪಟ್ಟಿ ಹೀಗಿದೆ:

ಬಹುಮಾನಿತ ಕತೆಗಳನ್ನು ಬರೆದ ವಿಜೇತರಿಗೆ ಅಭಿನಂದನೆಗಳು. ಹಾಗೆಯೇ, ಕತೆಗಳನ್ನು ಕಳುಹಿಸಿ ಈ ಕಥಾ ಸ್ಪರ್ಧೆಯಲ್ಲಿ ಪಾಲ್ಗೊಂಡ ಎಲ್ಲಾ ಲೇಖಕರಿಗೂ ಮತ್ತೊಮ್ಮೆ ಧನ್ಯವಾದಗಳು.

ಕೇಶವ ಮಳಗಿಯವರು ಈ ಕಥಾಸ್ಪರ್ಧೆಯ ಬಗ್ಗೆ ಮತ್ತು ತಾವು ಉತ್ತಮ ಕತೆಗಳೆಂದು ಆಯ್ಕೆ ಮಾಡಿದ ಕತೆಗಳ ಬಗ್ಗೆ “ಕಥೆಗಳಿಗೆ ಇರುವ ಆಕರ್ಷಣೆಯೇ ಅಂಥದ್ದು” ಎನ್ನುವ ಲೇಖನ ಬರೆದಿದ್ದಾರೆ. ದಯವಿಟ್ಟು ಗಮನಿಸಿ.

ಹಾಗೆಯೇ, ಈ ತಿಂಗಳಿನಲ್ಲಿ ಯಾವುದಾದರೂ ಒಂದು ದಿನ ಸಾಧ್ಯವಾದರೆ ಒಂದು ಪುಟ್ಟ ಸಭೆ ಮಾಡಿ ಕಥಾಸ್ಪರ್ಧೆಯಲ್ಲಿ ವಿಜೇತರಾದವರನ್ನೆಲ್ಲ ಅಲ್ಲಿಗೆ ಕರೆಸಿ ಅಭಿನಂದಿಸಬೇಕೆಂದು ನಮ್ಮ ಬಳಗ ಅಂದುಕೊಂಡಿದೆ. ಅಷ್ಟರೊಳಗೆ ಬಹುಮಾನಿತ ಕತೆಗಳನ್ನು ಮತ್ತು ಕಥಾ ಸ್ಪರ್ಧೆಗೆ ಬಂದಿದ್ದ ಇನ್ನೊಂದಷ್ಟು ಉತ್ತಮ ಕತೆಗಳನ್ನು ಸೇರಿಸಿ ಈ ನೆನಪಿನಲ್ಲಿ ಒಂದು ಕಥಾ-ಸಂಕಲನ ತರುವ ಯೋಜನೆ ಹಾಕಿಕೊಂಡಿದ್ದೇವೆ. ಹಾಗಾಗಿ ದಿನಾಂಕದ ಬಗ್ಗೆ ಒಂದಷ್ಟು ಅಸ್ಪಷ್ಟತೆಯಿದೆ. ಅದು ಅಂತಿಮವಾದ ತಕ್ಷಣ ಕತೆಗಾರರಿಗೆ ಮತ್ತು ನಮ್ಮ ಓದುಗರಿಗೆ ತಿಳಿಸಲಾಗುತ್ತದೆ.

ಅಂದ ಹಾಗೆ, ಮೇಲಿನ ಬಹುಮಾನಿತ ಕತೆಗಳನ್ನು ಇನ್ನು ಮುಂದೆ ವಾರಕ್ಕೊಂದು ಕತೆಯಂತೆ ಪ್ರತಿ ಶನಿವಾರ ವರ್ತಮಾನ.ಕಾಮ್‌ನಲ್ಲಿ ಪ್ರಕಟಿಸಲಾಗುವುದು.

ಎಲ್ಲರಿಗೂ ಧನ್ಯವಾದಗಳು.

ನಮಸ್ಕಾರ,
ರವಿ ಕೃಷ್ಣಾರೆಡ್ಡಿ

ಕಾವೇರಿ ಸೆರಗಿನ ಮರೆಯಲ್ಲಿ ರಾಜಕೀಯ


-ಚಿದಂಬರ ಬೈಕಂಪಾಡಿ


 

ಕಾವೇರಿ ಮತ್ತೆ ಸುದ್ದಿಯಾಗಿದ್ದಾಳೆ. ಕಾವೇರಿ ಕನ್ನಡಿಗರ ಜೀವಸೆಲೆ. ಕಾವೇರಿಯೇ ರಾಜ್ಯದ 40ಕ್ಕೂ ಹೆಚ್ಚು ತಾಲೂಕುಗಳ ಜನ, ಜಾನುವಾರುಗಳಿಗೆ ಆಸರೆ. ಕೊಡಗಿನ ತಲಕಾವೇರಿಯಲ್ಲಿ ಹುಟ್ಟಿ ಮೈಸೂರು, ಮಂಡ್ಯ, ಚಾಮರಾಜನಗರದ ಮೂಲಕ ಹಾದು ತಮಿಳುನಾಡು, ಕೇರಳ, ಪಾಂಡಿಚೇರಿಯಿಂದ ಸಮುದ್ರ ಸೇರುವ ಕಾವೇರಿ ಸಾಗುವ ಹಾದಿಯುದ್ದಕ್ಕೂ ಸಮೃದ್ಧವಾದ ಬೆಳೆ, ಅತಿಸುಂದರ ಧರೆ; ಈಕೆ ವಸುಂಧರೆ.

ಕಾವೇರಿಯಿಂದ ತನಗೆ ನೀರು ಹರಿಸಬೇಕೆಂದು ತಮಿಳುನಾಡು ಹಕ್ಕೊತ್ತಾಯ ಮಂಡಿಸುವುದು, ನೀರು ಬಿಡಲು ಸಾಧ್ಯವಿಲ್ಲವೆಂದು ಕರ್ನಾಟಕ ವಾದಿಸುವುದು, ಎರಡೂ ರಾಜ್ಯಗಳು ಸುಪ್ರೀಂಕೋರ್ಟ್ ಬಾಗಿಲು ಬಡಿಯುವುದು, ಪ್ರಧಾನಿಯ ಅಧ್ಯಕ್ಷತೆಯಲ್ಲಿ ನೀರಿನ ವಿವಾದಕ್ಕೆ ಸಭೆ ಸೇರುವುದು, ಅಲ್ಲಿಂದ ಬರುವ ನಿರ್ದೇಶನ, ಆದೇಶಗಳನ್ನು ಪಾಲಿಸುವುದು ಅಥವಾ ಪುನರ್‌ಪರಿಶೀಲಿಸಲು ಮನವಿ ಮಾಡುವುದು; ಇಂಥ ವರಸೆಗಳು ಇನ್ನೂ ಎಷ್ಟು ವರ್ಷಗಳ ಕಾಲ ಈ ನಾಡಿನ ಜನರನ್ನು ಕಾಡಲಿವೆ ಎನ್ನುವುದು ಊಹೆಗೂ ನಿಲುಕದ ಪ್ರಶ್ನೆಗಳು. ಬ್ರಿಟೀಷರ ಕಾಲದಿಂದ ಆರಂಭವಾದ ಕಾವೇರಿ ನೀರಿನ ವಿವಾದ ದೇಶ ಸ್ವಾತಂತ್ರ್ಯ ಗಳಿಸಿ, ಮೈಸೂರು ಕರ್ನಾಟಕವಾದರೂ ಬಗೆ ಹರಿದಿಲ್ಲ ಎನ್ನುವುದು ಶೋಚನೀಯ.

ಕಾವೇರಿ ನದಿ ನೀರಿನ ವಿವಾದ ಈ ನದಿ ಇರುವಷ್ಟು ಕಾಲವೂ ಇದ್ದೇ ಇರುತ್ತದೆ ಎನ್ನುವುದಂತು ಕಟು ಸತ್ಯ. ಈ ನದಿ ನೀರಿನ ಇತಿಹಾಸವನ್ನು ಅವಲೋಕಿಸಿದರೆ ಎರಡು ಪ್ರಮುಖ ಅಂಶಗಳು ಮನದಟ್ಟಾಗುತ್ತವೆ. ತಮಿಳುನಾಡು ಮತ್ತು ಕರ್ನಾಟಕ ಈ ಎರಡೂ ರಾಜ್ಯಗಳ ಜನರಿಗೆ ಈ ವಿವಾದ ಕೊನೆಯಾಗಬೇಕು ಎನ್ನುವ ಹಂಬಲವಿರುವುದು ಮತ್ತು ರಾಜಕೀಯ ಕಾರಣಗಳಿಗಾಗಿ ಈ ವಿವಾದ ಜೀವಂತವಿರಬೇಕು ಎನ್ನುವುದು.

ಜನರು ಈ ವಿವಾದಕ್ಕೆ ತೆರೆ ಬೀಳಬೇಕು ಎನ್ನುವುದಕ್ಕೆ ಬಲವಾದ ಕಾರಣವೆಂದರೆ ಕಾವೇರಿಯನ್ನೇ ನಂಬಿರುವುದು, ಈ ನೀರನ್ನೇ ಆಧರಿಸಿ ಭತ್ತ, ಕಬ್ಬು ಸಹಿತ ಕೃಷಿ ಚಟುವಟಿಕೆ ಮಾಡುತ್ತಿರುವುದು ಅಥವಾ ತುತ್ತು ಅನ್ನ ತಿನ್ನುತ್ತಿರುವುದು ಮತ್ತು ದಾಹ ತೀರಿಸಿಕೊಳ್ಳುತ್ತಿರುವುದು. ಅನ್ನ ಬೇಯಿಸಲು ಒಲೆ ಹೊತ್ತಿಸಿ ಅಕ್ಕಿ ಹೊಂದಿಸಿಕೊಂಡ ಮೇಲೆ ನೀರಿಗಾಗಿ ಬಿಂದಿಗೆ ಹಿಡಿದು ಬಾವಿಗೆ ಹೋಗುವಂಥ ಸ್ಥಿತಿಯಲ್ಲೇ ಮೂರು ತಲೆಮಾರುಗಳನ್ನು ಕಳೆದಿದ್ದಾರೆ ಕಾವೇರಿ ನದಿಪಾತ್ರದ ಜನರು. ಇವರಿಗೆ ಬಹುಬೇಗ ಈ ವಿವಾದ ಕೊನೆಯಾಗಲೇಬೇಕೆಂಬ ತುಡಿತವಿದೆ.

ರಾಜಕಾರಣಿಗಳಿಗೆ ಈ ವಿವಾದ ಬಗೆಹರಿದರೆ ತಮ್ಮ ಭಾಗದ ಜನರು ಈ ನದಿಯೊಂದಿಗೆ ಹೊಂದಿರುವ ಭಾವನಾತ್ಮಕ ಸಂಬಂಧಗಳ ಭಾವನೆಕಳೆದುಕೊಳ್ಳುತ್ತವೆ. ಆಗ ಅದು ಒಂದು ನದಿಯಾಗಿ ಮಾತ್ರ ಅವರ ಮನಸ್ಸಿನಲ್ಲಿ ಉಳಿದುಬಿಡುತ್ತದೆ. ಹೀಗಾದರೆ ಐದುವರ್ಷಕ್ಕೊಮ್ಮೆ ಬರುವ ಚುನಾವಣೆಯಲ್ಲಿ ಭಾಷಣಕ್ಕೆ ವಿಷಯವೂ ಇಲ್ಲ, ಹೋರಾಟಕ್ಕೆ ಕಾರಣವೂ ಇಲ್ಲದಂತಾಗುತ್ತದೆ.

ನಿಜಕ್ಕೂ ನಾಚಿಕೆಗೇಡು ಅನ್ನಿಸುತ್ತದೆ ಈ ವಿವಾದ ಮತ್ತೆ ಮತ್ತೆ ಜನರನ್ನು ಬೀದಿಗಿಳಿಸುತ್ತಿರುವುದಕ್ಕೆ. ನದಿನೀರಿಗಿಳಿದು ಜಲಸತ್ಯಾಗ್ರಹ ಮಾಡುತ್ತಾರೆ. ನೀರು ಹರಿಯುವ ತೂಬಿನ ಕೆಳಗೆ ಮಲಗಿ ರಾತ್ರಿ ಕಳೆಯುತ್ತಾರೆ ಜನ. ಬೆಂಗಳೂರು, ದೆಹಲಿಯಲ್ಲಿ ನದಿ ವಿವಾದ ಬಗೆಹರಿಸಲು ಸಭೆ ನಡೆಸಿದವರು ರಾತ್ರಿ ತಮ್ಮ ತಮ್ಮ ಬಂಗ್ಲೆಗಳಲ್ಲಿ ಹಾಯಾಗಿ ನಿದ್ದೆ ಮಾಡುತ್ತಾರೆ. ಕಾವೇರಿ ರಾತೋರಾತ್ರಿ ಹರಿದುಹೋಗಿರುತ್ತಾಳೆ. ಹಗಲು ಹೊತ್ತು ಜನ ಬೀದಿಗಿಳಿದು ಬಸ್ಸು, ಕಾರು, ಸೈಕಲ್‌ಗಳನ್ನು ತಡೆದು ರಸ್ತೆ ಬಂದ್ ಮಾಡುತ್ತಾರೆ. ಧರಣಿ, ಮೆರವಣಿಗೆ ಮಾಡಿ ಪೊಲೀಸರಿಂದ ಒದೆ ತಿಂದು ಮನೆ ಸೇರುತ್ತಾರೆ. ಇಷ್ಟೇ ಅಲ್ಲವೇ ಕಾವೇರಿ ವಿವಾದದಿಂದ ಹಳ್ಳಿಗಳಲ್ಲಿ ಆಗುತ್ತಿರುವುದು, ಇದಕ್ಕಿಂತ ಬೇರೇನು ಆಗುತ್ತಿದೆ?

ಕಾವೇರಿ ನೀರಿಗಾಗಿ ಹೋರಾಟ ಎನ್ನುವುದು ನಿಮ್ಮ ನಿಮ್ಮ ಮನೆಯಲ್ಲಿ ಮಕ್ಕಳ ಹುಟ್ಟು ಹಬ್ಬ ಆಚರಿಸುವ ವಾರ್ಷಿಕ ಘಟನೆಯಂತೆ. ಈ ನೆಪದಲ್ಲಾದರೂ ಬಂಧು ಬಳಗ ಒಂದು ದಿನ ಸೇರುವಂತೆ ಕಾವೇರಿ ಹೋರಾಟದ ಹೆಸರಲ್ಲಿ ಒಂದಷ್ಟು ಜನ ಬೀದಿಗಿಳಿಯುತ್ತಾರೆ ಅಥವಾ ರಾಜಕಾರಣಿಗಳು ಬೀದಿಗಿಳಿಸುತಾರೆ.

ರಾಜಕಾರಣಿಗಳು ಜನರ ಭಾವನೆಗಳನ್ನು ಕೋರ್ಟ್, ಪ್ರಾಧಿಕಾರದ ಮುಂದೆ ಇಟ್ಟು ವಾದ ಮಂಡಿಸುತ್ತಾರೆ ಹೊರತು ವಾಸ್ತವಿಕೆ ನೆಲೆಗಟ್ಟಿನಲ್ಲಿ ನದಿಯಲ್ಲಿ ಹರಿವು, ಅಣೆಕಟ್ಟೆಗಳಲ್ಲಿ ಸಂಗ್ರಹವಾಗುವ ಪ್ರಮಾಣ, ವಾಸ್ತವ ಬೇಡಿಕೆ ಇಂಥ ಅಂಕಿಅಂಶಗಳನ್ನು ಮುಂದಿಟ್ಟುಕೊಂಡು ವಾದ ಮಂಡಿಸುತ್ತಿಲ್ಲ. ಕೋರ್ಟ್, ಪ್ರಾಧಿಕಾರ ಜನರ ಭಾವನೆಗಳ ಆಧಾರದಲ್ಲಿ ತೀರ್ಮಾನ ಕೊಡಲಾಗುವುದಿಲ್ಲ. ಆಧಾರ, ಪುರಾವೆಗಳನ್ನು ಕಣ್ಣಮುಂದಿಟ್ಟುಕೊಂಡು ಯಾರಿಗೆ ಎಷ್ಟು ನೀರು ಎನ್ನುವುದನ್ನು ತೀರ್ಮಾನಿಸಬೇಕಾಗುತ್ತದೆ. ಯಾವ ರಾಜ್ಯ ತನ್ನ ವಾದಕ್ಕೆ ಪುರಾವೆ ಒದಗಿಸುತ್ತದೋ ಅದರ ಪರವಾಗಿ ಮಧ್ಯಂತರ ತೀರ್ಪು ಹೊರಬೀಳುತ್ತಿದೆಯೇ ಹೊರತು ಅಂತಿಮ ತೀರ್ಮಾನ ಕೊಡಲು ಸಾಧ್ಯವಾಗುತ್ತಿಲ್ಲ.

ಕಾವೇರಿ ನದಿ ವಿವಾದದ ಹಿನ್ನೆಲೆಯಲ್ಲಿ ನಡೆದ ಸರ್ವಪಕ್ಷ ಸಭೆಯ ತೀರ್ಮಾನವನ್ನು ವಿಶ್ಲೇಷಿಸಿದರೆ ರಾಜಕಾರಣಿಗಳು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿರುವುದು ಮನದಟ್ಟಾಗಿಬಿಡುತ್ತದೆ. ಆಡಳಿತಪಕ್ಷ, ಪ್ರತಿಪಕ್ಷಗಳು ಇಲ್ಲೂ ತಮ್ಮ ಅಜೆಂಡಾವನ್ನು ಮುಂದಿಟ್ಟುಕೊಂಡೇ ಕೆಲಸ ಮಾಡಿರುವುದು ಸ್ಪಷ್ಟವಾಗುತ್ತದೆ. ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದಾಗಿ ಕಾವೇರಿ ನೀರಿನ ವಿವಾದ ಜೀವಂತವಾಗಿದೆ ಹೊರತು ಅನ್ಯಕಾರಣಗಳಿಂದಲ್ಲ. ಕಾವೇರಿ ನೀರು ಹರಿಸಿದರೆ ರಾಜೀನಾಮೆ ಕೊಡುತ್ತೇವೆ ಎಂದು ರಾಜಕಾರಣಿಗಳು ಹೇಳುವುದು ಜನರ ಭಾವನೆಗಳನ್ನು ಹಿಡಿಟ್ಟುಕೊಂಡು ಚಲಾವಣೆಯಲ್ಲಿರಲು ಹೊರತು ಆ ರಾಜೀನಾಮೆಯಿಂದ ಕಾವೇರಿ ನೀರು ಹರಿಯುವುದು ನಿಲ್ಲುತ್ತದೆಯೇ?

ಕಾವೇರಿ ನದಿಯ ಪುರಾಣ ಕತೆಯಲ್ಲಿ ಅಗಸ್ತ್ಯ ಮುನಿ ಲೋಪಮುದ್ರೆಯನ್ನು ಮದುವೆಯಾಗುತ್ತಾನೆ. ತನ್ನನ್ನು ಕಾಯಿಸಬಾರದು ಎನ್ನುವ ಆಕೆಯ ಕೋರಿಕೆಗೆ ಮುನಿಯೂ ಸಮ್ಮತಿಸಿರುತ್ತಾನೆ. ಆದರೆ ಮುನಿ ಶಿಷ್ಯರಿಗೆ ಪಾಠಮಾಡುವುದರಲ್ಲಿ ತಲ್ಲೀನನಾಗಿ ಲೋಪಮುದ್ರೆಯನ್ನು ಮರೆತು ತಡವಾಗಿ ಹೋದಾಗ ಆಕೆ ತಾಳ್ಮೆಕಳೆದುಕೊಂಡು ಕಾವೇರಿ ನದಿಯಾಗಿ ಹರಿದುಹೋಗುತ್ತಿರುತ್ತಾಳೆ. ಆಗ ಮುನಿಯಿಂದಲೂ ಆಕೆಯನ್ನು ಹಿಂದಕ್ಕೆ ಕರೆಸಿಕೊಳ್ಳಲಾಗುವುದಿಲ್ಲ. ಆದ್ದರಿಂದ ಅಗಸ್ತ್ಯ ಮುನಿಗೇ ಕಾಯದ ಕಾವೇರಿ ರಾಜಕಾರಣಿಗಳನ್ನು ಕಾಯುತ್ತಾಳೆಯೇ? ಅವರ ರಾಜೀನಾಮೆಗೆ ಬೆದರುಳುತ್ತಾಳೆಯೇ?

ಕೇವಲ ರಾಜಕೀಯ ಕಾರಣಗಳಿಗಾಗಿ ಕಾವೇರಿ ನದಿ ವಿವಾದವನ್ನು ಬಗೆಹರಿಸದೆ ಜೀವಂತವಾಗಿಡುವ ಮೂಲಕ ಎರಡೂ ರಾಜ್ಯಗಳ ಜನರ ನಡುವೆ ದ್ವೇಷ ಹುಟ್ಟು ಹಾಕುವಂಥ ಕಾಯಕವನ್ನು ಜನರೇ ಅರ್ಥಮಾಡಿಕೊಳ್ಳಬೇಕು. ಕೇಂದ್ರ ಮತ್ತು ರಾಜ್ಯಗಳ ನಡುವೆ ಹೊಂದಾಣಿಕೆ ಕೊರತೆಯೂ ಕೂಡಾ ಈ ವಿವಾದ ಬಗೆಹರಿಯದಿರಲು ಕಾರಣವಾಗಿದೆ. ಎರಡೂ ರಾಜ್ಯಗಳು ರಾಜಕೀಯವನ್ನು ಬದಿಗಿಟ್ಟು ವಾಸ್ತವಿಕೆ ನೆಲೆಗಟ್ಟಿನಲ್ಲಿ ಚರ್ಚಿಸಿ ವಿವಾದಕ್ಕೆ ತೆರೆ ಎಳೆಯಬೇಕೇ ಹೊರತು ಕೋರ್ಟು, ಪ್ರಾಧಿಕಾರ ಎನ್ನುವ ಪ್ರಕ್ರಿಯೆಗಳು ಈ ವಿವಾದವನ್ನು ಇತ್ಯರ್ಥಪಡಿಸುವುದಿಲ್ಲ.

ಬೀದಿ ಅಲೆದು ಕಿತ್ತಳೆ ಮಾರುವ ಹಿರಿಯ ಕಟ್ಟಿದ ಶಾಲೆ


-ನವೀನ್ ಸೂರಿಂಜೆ


ಕರ್ನಾಟಕದಲ್ಲಿ ನಾನಾ ಹಿನ್ನೆಲೆಯ ಜನ ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ನಡೆದಾಡುವ ದೇವರು, ನಡೆದಾಡುವ ಮಂಜುನಾಥನಿಂದ ಹಿಡಿದು ಹಲವಾರು ಸ್ವಾಮೀಜಿಗಳು, ಉದ್ಯಮಿಗಳು ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈ “ಸೇವೆ” ಎನ್ನುವ ಪದವೇ ಇಲ್ಲಿ ಪ್ರಶ್ನಾರ್ಥಕ. ರಾಜ್ಯದ ಎಲ್ಲಾ ಮತ-ವರ್ಗಗಳಿಗೆ ಜಾತಿ-ವರ್ಗ-ಮತಗಳ ಭೇದವಿಲ್ಲದೆ ಕೈಗೆಟುಕುವ ಶಿಕ್ಷಣ ನೀಡುವುದು ಮತ್ತು ಆ ಮೂಲಕ ಸಮಾಜದಲ್ಲಿ ವೈಚಾರಿಕ ಪ್ರಜ್ಞೆ ಬೆಳೆಸುವುದು ಮತ್ತು ದೇಶ ಕಟ್ಟುವುದೇ ಈ “ಸೇವೆ”ಯ ಏಕೈಕ ಉದ್ದೇಶ ಎಂದು ಹೇಳಲಾಗದು. ಶಿಕ್ಷಣ ಕ್ಷೇತ್ರ ಒಂದು ಲಾಭದಾಯಕ ಉದ್ಯಮವಾಗಿದೆ. ಮತ್ತು ಮೇಲೆ ಉದಾಹರಿಸಿದ ಎಲ್ಲರೂ ಇಲ್ಲಿ ಲಾಭ ಮಾಡುತ್ತಿದ್ದಾರೆ ಮತ್ತು ಆ ಮೂಲಕ ಹಲವಾರು ಸಲ ತಮ್ಮ ಪ್ರಭಾವವನ್ನು ರಾಜ್ಯದ ಸಾಮಾಜಿಕ-ರಾಜಕೀಯ ಕ್ಷೇತ್ರಗಳಲ್ಲಿ ಬೀರಿದ್ದಾರೆ, ಬೀರುತ್ತಿದ್ದಾರೆ; ಬಹಳಷ್ಟು ಸಾರಿ ಪ್ರತಿಗಾಮಿ ಕಾರಣಗಳಿಗಾಗಿ.

ತನ್ನ ಒಡೆತನದಲ್ಲಿರುವ “ಸಾರ್ವಜನಿಕ” ದೇವಸ್ಥಾನಕ್ಕೆ ದಿನಂಪ್ರತಿ ಬರುವ ಕೋಟ್ಯಾಂತರ ರೂಪಾಯಿಯ ದೇಣಿಗೆ ಹಣದಲ್ಲಿ ಕಾನೂನು ಕಾಲೇಜು, ಮೆಡಿಕಲ್ ಕಾಲೇಜುಗಳನ್ನು ಕಟ್ಟಿ ಹತ್ತಾರು ಮಂದಿ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಕೊಟ್ಟು ಸಾವಿರಾರು ವಿದ್ಯಾರ್ಥಿಗಳಿಂದ ಸಾವಿರಾರು ರೂಪಾಯಿ ಡೊನೇಷನ್ ವಸೂಲಿ ಮಾಡಿಕೊಂಡು “ಮಾತನಾಡುವ ಮಂಜುನಾಥ” ಮಾಡುತ್ತಿರುವುದು ಶಿಕ್ಷಣ ಸೇವೆ. ಇನ್ನು ತನ್ನ ಹೆಸರಿನಲ್ಲಿರುವ ಗುಡ್ಡದ ಮೇಲೊಂದು ಸಣ್ಣ ಕಾಲೇಜು ನಿರ್ಮಿಸಿ, ಪಕ್ಕದ ಸರ್ಕಾರಿ ಭೂಮಿಯನ್ನೂ ಒತ್ತುವರಿ ಮಾಡಿಕೊಂಡು ಕಾಲೇಜನ್ನು ವಿಸ್ತರಿಸಿ, ವರ್ಷಕ್ಕೊಮ್ಮೆ ಸಾಹಿತ್ಯದ ಜಾತ್ರೆ ಮಾಡಿ ವಿದ್ಯಾರ್ಥಿಗಳಿಂದ ಸಾವಿರಾರು ರೂಪಾಯಿ ಡೊನೇಷನ್ ಪಡೆಯುವುದೂ ಶಿಕ್ಷಣ ಸೇವೆಯಾಗುತ್ತದೆ. ಇನ್ನು ಜಗತ್ತಿನ ಎಲ್ಲೆಡೆಯಿಂದ ಮಠಗಳಿಗೆ ಬರುವ ಕಪ್ಪು ಹಣದಲ್ಲಿ ಕಾಲೇಜುಗಳನ್ನು ಕಟ್ಟಿ ಕಪ್ಪು ಹಣವನ್ನು ಬಿಳಿಯನ್ನಾಗಿಸುವ ಸ್ವಾಮೀಜಿಗಳ ತಂತ್ರವೂ ಶಿಕ್ಷಣ ಸೇವೆ ಎಂದೆಣಿಸುತ್ತದೆ. ಇವೆಲ್ಲವೂ ಕೂಡಾ ಶಿಕ್ಷಣದ ಸೇವೆಯಾದರೆ ದಿನಾ ಕಿತ್ತಳೆ ಹಣ್ಣು ಮಾರಿದ ದುಡ್ಡಿನಲ್ಲಿ ಸಾಮಾನ್ಯ ಅನಕ್ಷರಸ್ಥ “ಹರೆಕಳ ಹಾಜಬ್ಬ” ಶಾಲೆ ಕಟ್ಟಿದ್ದನ್ನು ಏನನ್ನಬೇಕು?

ಮಂಗಳೂರು ತಾಲೂಕಿನ ಕೊಣಾಜೆ ಸಮೀಪದ ಹರೆಕಳ ನ್ಯೂಪಡ್ಪು ಎಂಬಲ್ಲಿ ಒಂದು ಕಾಲದಲ್ಲಿ ಸರ್ಕಾರಿ ಶಾಲೆ ಇರಲಿಲ್ಲ. ಇಲ್ಲಿನ ವಿದ್ಯಾರ್ಥಿಗಳು ಶಾಲೆಗೆ ಹೋಗಬೇಕೆಂದಿದ್ದರೆ ಸಮೀಪದ ಖಾಸಗಿ ಶಾಲೆಗೆ ಹೋಗಬೇಕಿತ್ತು. ಖಾಸಗಿ ಶಾಲೆಗಳ “ಶಿಕ್ಷಣ ಸೇವೆ” ಬಡ ಮಕ್ಕಳಿಗೆ ಎಟುಕುವಂತದ್ದಲ್ಲ. ಇದನ್ನು ಕಂಡ ಹಾಜಬ್ಬರಿಗೆ ತನ್ನ ಊರಲ್ಲಿ ಶಾಲೆ ತೆರೆಯಬೇಕು ಎಂದೆಣಿಸಿತ್ತು. ಹಾಗೆ ಅವರು ಯೋಚಿಸಿದ ದಿನ ಅವರ ಕೈಯಲ್ಲಿದ್ದಿದ್ದು ಬರೇ ನೂರು ರೂಪಾಯಿ. ಅದು ಅಂದಿನ ಒಂದು ಬುಟ್ಟಿ ಕಿತ್ತಲೆ ಖರೀದಿ ಮಾಡಲು ತೆಗೆದಿರಿಸಿದ ದುಡ್ಡು. ದಿನಾ ಕಿತ್ತಲೆ ಖರೀದಿಸಿ ಮಂಗಳೂರು ನಗರದ ಹಂಪನಕಟ್ಟೆಯಲ್ಲಿ ಬೀದಿ ಸುತ್ತಿ ಕಿತ್ತಳೆ ಮಾರಿ ಜೀವನ ನಿರ್ವಹಣೆ ಮಾಡಬೇಕಿತ್ತು. ಪತ್ನಿ, ಇಬ್ಬರು ಪುತ್ರಿಯರು, ಒರ್ವ ಪುತ್ರ ಇದೇ ಕಿತ್ತಲೆಯ ಆದಾಯದಲ್ಲಿ ಬದುಕಬೇಕಿತ್ತು. ಮಳೆಗಾಲದಲ್ಲಿ ಮನೆಯೊಳಗೆ ಅಲ್ಲಲ್ಲಿ ಬಕೀಟುಗಳನ್ನು ಜೋಡಿಸಿಟ್ಟು ಮಲಗಬೇಕಿತ್ತು. ಯಾಕೆಂದರೆ ಹಾಜಬ್ಬರ ಮನೆಯ ಮಹಡಿ ಅಲ್ಲಲ್ಲಿ ಸೋರುತ್ತಿತ್ತು. ಇಂತಹ ಹಾಜಬ್ಬ ಹರೇಕಳದಲ್ಲೊಂದು ಶಾಲೆ ನಿರ್ಮಾಣದ ಕನಸ್ಸು ಕಂಡರು. ದಿನಾ ಸಂಸಾರಕ್ಕಾಗಿ ದುಡಿಯುತ್ತಿದ್ದ ಹಾಜಬ್ಬ ಅಂದಿನಿಂದ ಶಾಲೆಗಾಗಿ ಸ್ವಲ್ಪ ಜಾಸ್ತಿ ಹೊತ್ತು ಕಿತ್ತಳೆ ಮಾರಲು ಶುರುವಿಟ್ಟುಕೊಂಡರು.

ಕಿತ್ತಳೆ ವ್ಯಾಪಾರದ ಮಧ್ಯೆ ಸರ್ಕಾರಿ ಕಚೇರಿಗೆ ಅಲೆದಾಡಲು ಶುರುವಿಟ್ಟುಕೊಂಡರು. ಅ ಆ ಇ ಈ ಬಾರದ ಹರೆಕಳ ಹಾಜಬ್ಬ ತನ್ನೂರಿನಲ್ಲಿ ಶಾಲೆ ಪ್ರಾರಂಭ ಮಾಡಲು ಸರ್ಕಾರಿ ಜಾಗ ಕೊಡಿ ಎಂದು ಸಿಕ್ಕ ಸಿಕ್ಕವರ ಕಾಲಿಗೆ ಬಿದ್ದರು. ಎಂಎಲ್ಎ, ಎಂಪಿಗಳ ಕಾಲಿಗೆ ಬಿದ್ದಿರುವುದಕ್ಕೆ ಲೆಕ್ಕವೇ ಇಲ್ಲ. ಕೊನೆಗೂ ಒಂದು ನಲ್ವತ್ತು ಸೆಂಟ್ಸ್ ಸರ್ಕಾರಿ ಜಾಗ ಸಿಕ್ಕಿತು. ಸರ್ಕಾರಿ ಜಮೀನು ನೀಡಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸುಮ್ಮನಾದರು. ಹಾಜಬ್ಬ ಮಾತ್ರ ಸುಮ್ಮನಾಗಲಿಲ್ಲ. ಕಿತ್ತಲೆ ವ್ಯಾಪಾರ ಮುಗಿಸಿ ಮನೆಗೆ ಹೋದವರೇ ಹಳೆ ಬಟ್ಟೆ ತೊಟ್ಟುಕೊಂಡು ಜಾಗ ಸಮತಟ್ಟು ಮಾಡಲು ಶುರುವಿಟ್ಟುಕೊಂಡರು. ಅದೆಷ್ಟೋ ದಿನದ ನಂತರ ಜಾಗ ಸಮತಟ್ಟುಗೊಂಡಿತು. ನಂತರ ಕಿತ್ತಳೆ ಹಣ್ಣಿನ ವ್ಯಾಪಾರದಲ್ಲಿ ಶಾಲೆಗಾಗಿ ಉಳಿಸಿದ ಹಣದಲ್ಲಿ ಜಲ್ಲಿ, ಕಲ್ಲು, ಸಿಮೆಂಟು ತಂದು ರಾಶಿ ಹಾಕಿದರು. ಹಣ ಇದ್ದಷ್ಟು ಕೆಲಸದವರನ್ನು ನೇಮಿಸಿ ಕಟ್ಟಡ ಕೆಲಸ ಶುರುವಿಟ್ಟುಕೊಂಡರು. ಹಣ ಖಾಲಿಯಾದರೆ ತಾನೇ ಮೇಸ್ತ್ರಿಯಾಗಿ ಕೆಲಸ ಮಾಡಿದರು. ಅಂತೂ 1999 ರಲ್ಲಿ  ಹರೆಕಳದಲ್ಲಿ ’ದಕ್ಷಿಣ ಕನ್ನಡ ಕಿರಿಯ ಪ್ರಾಥಮಿಕ ಶಾಲ” ರೂಪುಗೊಂಡಿತು. ಹಾಜಬ್ಬರ ಸಂತೋಷಕ್ಕೆ ಪಾರವೇ ಇರಲಿಲ್ಲ. ಚಿಕ್ಕ ಮಗುವಿನಂತೆ ಕುಣಿದರು. ದಿನಾ ಶಾಲೆಯಲ್ಲಿ ನೆಲ ಒರೆಸುವುದರಿಂದ ಹಿಡಿದು, ಅಂಗಳ ಗುಡಿಸುವುದನ್ನೂ ತಾನೇ ನಿರ್ವಹಿಸಿ ಕಿತ್ತಳೆ ವ್ಯಾಪಾರಕ್ಕೆ ತೆರಳುತ್ತಿದ್ದರು. ಅಷ್ಟರಲ್ಲಿ ಹಾಜಬ್ಬರ ಪತ್ನಿ ಮೈಮುನಾ ಆರೋಗ್ಯ ಕೈಕೊಟ್ಟಿತ್ತು. ಆದರೆ ಮಗುವಿನ ಮನಸ್ಸಿನ ಹರೆಕಳ ಹಾಜಬ್ಬರಿಗೆ ಹೊಸತೊಂದು ಆಶೆ ಹುಟ್ಟಿಕೊಂಡಿದು. ಅದು ಐದನೇ ತರಗತಿಯವರೆಗೆ ಇದ್ದ ಶಾಲೆಯನ್ನು ಏಳನೇ ತರಗತಿಯವರೆಗೆ ವಿಸ್ತರಿಸುವುದು.

ಮತ್ತೆ ಕಿತ್ತಳೆ ಹಣ್ಣು ವ್ಯಾಪಾರವನ್ನು ಹಿಂದಿಗಿಂತಲೂ ಹೆಚ್ಚು ಅವಧಿ ಮಾಡಲು ಶುರುವಿಟ್ಟುಕೊಂಡರು. ಕಿರಿಯ ಪ್ರಾಥಮಿಕ ಶಾಲೆಗೆ ಕೋಣೆ ಸೇರುತ್ತಾ ಹೋಯಿತು. ಅದೊಂದು ದಿನ ಕಿರಿಯ ಪ್ರಾಥಮಿಕ ಶಾಲೆ ಇದ್ದಿದ್ದು ಹಿರಿಯ ಪ್ರಾಥಮಿಕ ಶಾಲೆಯಾಗಿ ಮಾರ್ಪಾಡಾಯಿತು. ಏಳನೇ ತರಗತಿಯವರೆಗೆ ಹರೆಕಳ ಗ್ರಾಮದ ವಿದ್ಯಾರ್ಥಿಗಳಿಗೆ ಶಿಕ್ಷಣ ದೊರೆಯುವಂತಾಯಿತು. ಹಾಜಬ್ಬರ ಈ ಸಾಧನೆಯನ್ನು ಗಮನಿಸಿ 2004 ರಲ್ಲಿ ಕನ್ನಡಪ್ರಭ ಪತ್ರಿಕೆ ಹಾಜಬ್ಬರನ್ನು “ವರ್ಷದ ವ್ಯಕ್ತಿ” ಎಂದು ಪ್ರಶಸ್ತಿ ನೀಡಿ ಗೌರವಿಸಿತು. ಇದರಿಂದ ಬಂದ ಒಂದು ಲಕ್ಷ ರೂಪಾಯಿಯನ್ನೂ ಇದೇ ಸರ್ಕಾರಿ ಶಾಲೆಗೆ ವಿನಿಯೋಗ ಮಾಡಿ ಇನ್ನಷ್ಟು ಕೊಠಡಿಗಳನ್ನು ಕಟ್ಟಿದರು. ಯಾಕೆಂದರೆ ಈಗ ಹಾಜಬ್ಬರಿಗೆ ಹೊಸತೊಂದು ಆಶೆ ಮೊಳಕೆಯೊಡೆದಿತ್ತು. ತನ್ನ ಊರಿನ ಮಕ್ಕಳು ಏಳನೇ ತರಗತಿಯವರೆಗೆ ಶಿಕ್ಷಣವನ್ನು ಮೊಟಕುಗೊಳಿಸಬಾರದು. ಬದಲಾಗಿ ಕನಿಷ್ಠ ಎಸ್ಎಸ್ಎಲ್‌ಸಿಯಾದರೂ ಪೂರೈಸಬೇಕು. ಅದಕ್ಕಾಗಿ ಹಿರಿಯ ಪ್ರಾಥಮಿಕ ಶಾಲೆಯನ್ನು ಪ್ರೌಢಶಾಲೆಯ ದರ್ಜೆಗೆ ಏರಿಸಬೇಕು.

ಒಂದು ಸರ್ಕಾರ ಮಾಡಬೇಕಾದ ಎಲ್ಲಾ ಕೆಲಸವನ್ನು ಕೇವಲ ಕಿತ್ತಳೆ ಹಣ್ಣು ಮಾರಾಟ ಮಾಡಿದ ದುಡ್ಡಿನಲ್ಲಿ ಹಾಜಬ್ಬ ಮಾಡುತ್ತಿರುವುದನ್ನು ಗಮನಿಸಿದ ಹಲವಾರು ಸಂಘ ಸಂಸ್ಥೆಗಳು ಹಾಜಬ್ಬರನ್ನು ಕರೆದು ಸನ್ಮಾನಿಸಿದವು. ಆ ಸನ್ಮಾನದ ಪತ್ರದ ಜೊತೆ ನೀಡುವ ಕವರಿನಲ್ಲಿ ಐನೂರು ರೂಪಾಯಿಯೋ, ಒಂದು ಸಾವಿರ ರೂಪಾಯಿಯೋ ಇರುತ್ತಿದ್ದವು. ಅದೆಲ್ಲವೂ ಬಳಕೆಯಾಗುತ್ತಿದ್ದುದು ಶಾಲೆಯ ಕಲ್ಲು, ಜಲ್ಲಿ, ಮರಳು, ಸಿಮೆಂಟಿಗೆ. ಹಾಜಬ್ಬರ ಶಾಲೆ ಪ್ರಚಾರಕ್ಕೆ ಬಂದ ನಂತರ ಮಂಗಳೂರಿನಲ್ಲಿರುವ ಕೆಲವೊಂದು ಪ್ರತಿಷ್ಠಿತ ಕಂಪನಿಗಳೂ ಹಾಜಬ್ಬರ ಸಾಧನೆ ಕಂಡು ಹರೆಕಳ ಗ್ರಾಮಕ್ಕೆ ಬಂದು ಶಾಲೆ ವೀಕ್ಷಿಸಿ ಒಂದಷ್ಟು ದಾನ ಮಾಡಿದ್ದಾರೆ. ಒಂದೆರಡು ಲಕ್ಷ ರೂಪಾಯಿ ದಾನ ಮಾಡಿ ಗೊಡೆಯಲ್ಲಿ ಹೆಸರು ಕೆತ್ತಿಸಿಕೊಂಡಿದ್ದಾರೆ. ಆದರೆ ಶಾಲೆಯ ಎಲ್ಲೂ ಹಾಜಬ್ಬರ ಹೆಸರಾಗಲೀ, ಫೋಟೋ ಆಗಲಿ ಕಾಣ ಸಿಗುವುದಿಲ್ಲ. ಯಾಕೆಂದರೆ ಅಂತಹ ಮನಸ್ಥಿತಿ ಹಾಜಬ್ಬರಿಗೆ ಇಲ್ಲ.

ಅಂತೂ ಇಂತು ಹೈಸ್ಕೂಲ್ ಕಟ್ಟಡ ಕೂಡಾ ಮೇಲೆದ್ದಿತು. ಕಿತ್ತಳೆ ಹಣ್ಣು ಮಾರಾಟಕ್ಕೆ ಹೊರಡುವ ಮೊದಲು ಹಾಜಬ್ಬ ಖುದ್ದು ಕಟ್ಟಡ ಕೆಲಸ ಮಾಡಿ ವ್ಯಾಪಾರಕ್ಕೆ ತೆರಳುತ್ತಿದ್ದರು. ಅಷ್ಟರಲ್ಲಿ ಸಿಎನ್ಎನ್-ಐಬಿಎನ್ ಹಾಜಬ್ಬರ ಶಿಕ್ಷಣ ಸೇವೆಯನ್ನು ಗುರುತಿಸಿ ವಿಮಾನದ ಮೂಲಕ ಮುಂಬೈಗೆ ಕರೆಸಿಕೊಂಡಿತು. ಅದನ್ನು ಹೇಳುತ್ತಲೇ ಹಾಜಬ್ಬ ಪುಳಕಿತಗೊಳ್ಳುತ್ತಾರೆ. ಹಾಜಬ್ಬರನ್ನು ಸನ್ಮಾನಿಸಿದ ಸಿಎನ್ಎನ್-ಐಬಿಎನ್ ಐದು ಲಕ್ಷ ರೂಪಾಯಿಗಳನ್ನು ಸನ್ಮಾನ ಸಂಧರ್ಭ ನೀಡಿತ್ತು. ಅದನ್ನೂ ಹೈಸ್ಕೂಲ್ ಕಟ್ಟಡಕ್ಕೆ ಬಳಸಿಕೊಂಡರು.

ಒಮ್ಮೆ ಕಟ್ಟಡದ ಕಾಂಕ್ರೀಟ್ ಕೆಲಸ ನಡೆಯುತ್ತಿದ್ದಾಗ ಸಿಮೆಂಟಿಗೆ ನೀರು ಹಾಕಲು ಕಟ್ಟಡದ ಮೇಲೆ ಹೋದ ಹಾಜಬ್ಬ ಆಯ ತಪ್ಪಿ ಮೇಲಿಂದ ಕೆಳಗೆ ಬಿದ್ದು ಬಿಟ್ಟರು. ತನ್ನ ಕೈಗೆ ಬಂದ ಸನ್ಮಾನದ ದುಡ್ಡುಗಳೆಲ್ಲಾ ಕಟ್ಟಡದ ಪಾಲಾಗಿತ್ತು. ಖಾಸಗಿ ಆಸ್ಪತ್ರೆಗೆ ಸೇರಿದರೆ ಬಿಲ್ಲು ತೆರಲು ದುಡ್ಡಿಲ್ಲ. ಅದಕ್ಕಾಗಿ ಸರಕಾರಿ ಆಸ್ಪತ್ರೆಯಲ್ಲಿ ತುಂಬಾ ಸಮಯ ಚಿಕಿತ್ಸೆ ಪಡೆಯಬೇಕಾಯಿತು. ಇದರಿಂದಾಗಿ ಹಾಜಬ್ಬರ ಹೈಸ್ಕೂಲ್ ಕಟ್ಟಡ ನೆನೆಗುದಿಗೆ ಬಿತ್ತು. ಅಂತೂ ಇಂತೂ ಸಾವರಿಸಿಕೊಂಡ ಹಾಜಬ್ಬ ಆಸ್ಪತ್ರೆಯಿಂದ ಬಿಡುಗಡೆ ಆದವರೇ ಮತ್ತೆ ಕಟ್ಟಡ ನಿರ್ಮಾಣಕ್ಕೆ ತೊಡಗಿದರು. ಕೊನೆಗೂ ಹೈಸ್ಕೂಲ್ ಕಟ್ಟಡ ಪೂರ್ಣಗೊಂಡಿತು.

ಹಾಜಬ್ಬ ಇಷ್ಟೆಲ್ಲಾ ಮಾಡಿದ್ದು ಸರಕಾರಿ ಶಾಲೆಯೊಂದರ ನಿರ್ಮಾಣಕ್ಕೆ. ಅಲ್ಲಿರುವುದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆ. ಇಡೀ ಶಾಲೆಗೆ ಸರಕಾರಿ ಜಮೀನೊಂದು ಹೊರತುಪಡಿಸಿ ಉಳಿದೆಲ್ಲಾ ಹಣ ಬಳಕೆಯಾಗಿದ್ದು ಹಾಜಬ್ಬರದ್ದು ಮತ್ತು ದಾನಿಗಳದ್ದು. ಕನ್ನಡಪ್ರಭ ಮತ್ತು ಸಿಎನ್ಎನ್-ಐಬಿಎನ್ ಸನ್ಮಾನ ಸೇರಿದಂತೆ ಸಂಘ ಸಂಸ್ಥೆಗಳು ಮಾಡಿದ ಸನ್ಮಾನದ ದುಡ್ಡು ಮತ್ತು ಕಿತ್ತಳೆ ಹಣ್ಣಿನ ವ್ಯಾಪಾರದಿಂದಲೇ ಒಂದು ಪೂರ್ಣ ಪ್ರಮಾಣದ ಸರಕಾರಿ ಶಾಲೆಯನ್ನು ನಿರ್ಮಿಸಿದರು. ಹಾಜಬ್ಬರ ಮಗ ಹಾಜಬ್ಬರೇ ನಿರ್ಮಿಸಿದ ಶಾಲೆಯಲ್ಲಿ ಓದುತ್ತಿದ್ದ ಸಂದರ್ಭದವರೆಗೆ ಹಾಜಬ್ಬರೇ ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷರಾಗಿದ್ದರು. ಕಳೆದ ಜೂನ್‌ನಿಂದ ಹಾಜಬ್ಬರ ಮಕ್ಕಳ ಹೈಸ್ಕೂಲ್ ವಿದ್ಯಾಬ್ಯಾಸ ಪೂರ್ಣಗೊಂಡಿದೆ. ಈಗ ಹಾಜಬ್ಬರಿಗೂ ಹೈಸ್ಕೂಲ್‌ಗೂ ಸಂಬಂಧವೇ ಇಲ್ಲ. ತಾನೇ ಕಟ್ಟಿದ ಶಾಲೆಗೆ ತಾನೊಬ್ಬ “ಸಾರ್ವಜನಿಕ” ಮಾತ್ರ. ಆದರೆ ಹಾಜಬ್ಬ ಈಗಲೂ ಬೆಳಿಗ್ಗೆ ಶಾಲೆಗೆ ಹೋಗಿ ಸ್ವಚ್ಚತೆ ನಿರ್ವಹಿಸಿ ಬರುತ್ತಾರೆ.

ಹಾಜಬ್ಬ ಇದೇ ಶ್ರಮವನ್ನು ಬಳಕೆ ಮಾಡಿ ತನ್ನ ಹೆಸರಿನಲ್ಲೊಂದು ಖಾಸಗಿ ಶಾಲೆ ಮಾಡಿದ್ದರೆ ಈಗ ಕಾರಿನಲ್ಲಿ ಓಡಾಡಬಹುದಿತ್ತು. ಹಾಜಬ್ಬರ ಜೊತೆ ಮಾತನಾಡಲು ಎಪಾಯಿಂಟ್ಮೆಂಟ್ ತಗೋಬೇಕಿತ್ತು. ಆದರೆ ಹಾಜಬ್ಬ ಈಗಲೂ ಮಂಗಳೂರಿನ ಬೀದಿಗಳಲ್ಲಿ ಕಿತ್ತಳೆ ಬುಟ್ಟಿ ಹಿಡಿದುಕೊಂಡು ಕಿತ್ತಳೆ ಮಾರಾಟ ಮಾಡುತ್ತಿದ್ದಾರೆ. ಪತ್ನಿ ಮೈಮೂನ ಆರೋಗ್ಯಕ್ಕಾಗಿ ಹಾಜಬ್ಬ ದುಡಿಯಬೇಕು. ಇದೀಗ ಒರ್ವ ಮಗಳೂ ಅಸ್ವಸ್ಥಗೊಂಡಿದ್ದಾಳೆ. ಅವಳಿಗೂ ವೈಧ್ಯಕೀಯ ಖರ್ಚುಗಳಿವೆ. ಅದಕ್ಕಾಗಿ ಬೆಳಗ್ಗಿನಿಂದ ಸಂಜೆಯವರೆಗೆ ಕಿತ್ತಳೆ ಬುಟ್ಟಿ ಹಿಡಿದುಕೊಂಡು ಬೀದಿ ಬೀದಿ ಅಲೆಯುತ್ತಿದ್ದಾರೆ.

ಈಗಲೂ ಬೆಳಿಗ್ಗೆ ಶಾಲೆಯ ಬಳಿ ಹೋದರೆ ಹಾಜಬ್ಬ ಸಿಗುತ್ತಾರೆ. ಶಾಲೆಯ ಮೂಲೆಯಲ್ಲಿ ಬಿದ್ದಿರುವ ಕಸ ಕಡ್ಡಿಗಳನ್ನು ಹೆಕ್ಕುತ್ತಿರುತ್ತಾರೆ. ನೆಲ ಒರಸುತ್ತಿರುತ್ತಾರೆ. ಅತಿಥಿಗಳು ಶಾಲೆ ನೋಡಲು ಬಂದಿದ್ದಾರೆ ಎಂದು ಗೊತ್ತಾದ ತಕ್ಷಣ ಉದ್ದನೆಯ ಬಿದಿರಿನ ಕೋಲಿಗೆ ಕತ್ತಿ ಕಟ್ಟಿ ತೆಂಗಿನ ಮರದಿಂದ ಎಳನೀರು ತೆಗೆದು ತಂದು ಕೊಡುತ್ತಾರೆ. “ಸಾರು.. ನಮ್ಮ ಶಾಲೆಗೆ ಬಂದಿದ್ದೀರಿ. ತುಂಬಾ ಸಂತೋಸ ಆಯ್ತು ಸಾರು. ಸಾರು ಮೈದಾನಕ್ಕೆ ಕಂಪೌಂಡು ಹಾಕಬೇಕು ಸಾರು,” ಎನ್ನುತ್ತಾರೆ. 1999 ರಿಂದ ಇಂದಿನವರೆಗೂ ತನ್ನ ಮನೆಯಲ್ಲಿ ಕುಳಿತುಕೊಳ್ಳಲು ಒಂದು ಕುರ್ಚಿಯನ್ನೂ ಖರೀದಿ ಮಾಡದೆ ಸರ್ಕಾರಿ ಶಾಲೆ ನಿರ್ಮಾಣ ಮಾಡಿದ ಹಾಜಬ್ಬ ಈಗಲೂ ಕಿತ್ತಳೆ ಹಣ್ಣಿನ ವ್ಯಾಪಾರ ಮಾಡುತ್ತಿದ್ದಾರೆ. ಅನಾರೋಗ್ಯದಿಂದಿರುವ ತನ್ನ ಪತ್ನಿ ಮತ್ತು ಮಗಳನ್ನು ಸಾಕುವ ಜವಾಬ್ದಾರಿ ಜೊತೆಗೇ ಹಾಜಬ್ಬ ಇನ್ನೊಂದು ಕನಸ್ಸನ್ನು ಕಾಣುತ್ತಿದ್ದಾರೆ. ಅದು ಹೈಸ್ಕೂಲನ್ನು ಸ್ವಲ್ಪ ವಿಸ್ತರಿಸಿ ಪಿಯುಸಿ ಪ್ರಾರಂಭಿಸುವುದು. ಅದಕ್ಕಾಗಿ ಈಗ ಬೆಳಿಗ್ಗಿನಿಂದ ಸಂಜೆ ಏಳು ಗಂಟೆಯವರೆಗೆ ಹಂಪನಕಟ್ಟೆಯ ಬೀದಿ ಬೀದಿ ಅಲೆದು ಕಿತ್ತಳೆ ಹಣ್ಣು ಮಾರಾಟ ಮಾಡುತ್ತಿದ್ದಾರೆ.

ಮೂಡಬಿದ್ರೆಯ ಗುಡ್ಡದಲ್ಲಿ ಪ್ರಾರಂಭವಾದ ಖಾಸಗಿ ಕಾಲೇಜು ಈಗ ಸರ್ಕಾರಿ ಜಮೀನನ್ನು ಕಬಳಿಸಿಕೊಂಡು ಬೃಹತ್ತಾದ ಎಜುಕೇಶನ್ ಪೌಂಡೇಶನ್ ಆಗಿ ಬೆಳೆದಿದೆ. ಅದು ಎಷ್ಟರವರೆಗೆ ಬೆಳೆಯುತ್ತದೆ ಎಂದರೆ ಮೂಡಬಿದ್ರೆ ಗುಡ್ಡವು ಮೂಡಬಿದ್ರೆ ವಿದ್ಯಾಗಿರಿ ಎಂದು ಪ್ರಸಿದ್ಧಿಯನ್ನು ಪಡೆಯುವಷ್ಟು. ಮಠಗಳಲ್ಲಿ, ದೇವಸ್ಥಾನಗಳಲ್ಲಿ ಬಂದ ದುಡ್ಡಿನಲ್ಲಿ ವೃತ್ತಿಪರ ಕಾಲೇಜು ತೆರೆಯುವ ಶಿಕ್ಷಣದ ವ್ಯಾಪಾರಿಗಳು ಸಾಮಾಜಿಕ ಸೇವಕರೆನಿಸಿಕೊಳ್ಳುತ್ತಾರೆ, ಶಿಕ್ಷಣತಜ್ಞ, ಶಿಕ್ಷಣಪ್ರೇಮಿಗಳೆನಿಸಿಕೊಳ್ಳುತ್ತಾರೆ. ಮಠ ಮಂದಿರಗಳಲ್ಲಿ ಹರಿದು ಬರುವ ಬ್ಲ್ಯಾಕ್ ಮನಿಯನ್ನು ವೈಟ್ ಮಾಡುವ, ವ್ಯವಹಾರಕ್ಕಾಗಿ ಕಾಲೇಜು ಸ್ಥಾಪಿಸುವ ಶಿಕ್ಷಣ ವ್ಯಾಪಾರಿಗಳದ್ದೆಲ್ಲಾ ಶಿಕ್ಷಣ ಸೇವೆಯಾದರೆ ಹಾಜಬ್ಬರ ಸೇವೆಯನ್ನು ಏನೆಂದು ಕರೆಯಬೇಕು?

ಶಿವಮೊಗ್ಗದ ಮಿತ್ರರಿಗೊಂದು ವಿವರಣೆ…

ಸ್ನೇಹಿತರೇ,

ನಾನು ವಾರದ ಹಿಂದೆ ಬರೆದಿದ್ದ “ರಾಜಕೀಯ ಅಸಹ್ಯವೇ? ಅದೊಂದು ಅನೈತಿಕ ನಿಲುವು…” ಲೇಖನ ವರ್ತಮಾನ.ಕಾಮ್‌ನ ಶಿವಮೊಗ್ಗದ ಓದುಗರಲ್ಲಿ ಮತ್ತು ಮಿತ್ರರಲ್ಲಿ ಒಂದಷ್ಟು ಮುಜುಗರ ಮತ್ತು ಅಸಮಾಧಾನ ಉಂಟು ಮಾಡಿದೆ. ಅವರಲ್ಲಿ ಯಾರೂ ಆ ಲೇಖನದಲ್ಲಿ ನಾನು ಪ್ರಮುಖವಾಗಿ ಪ್ರಸ್ತಾಪಿಸಿರುವ ವಿಷಯದ ಬಗ್ಗೆ ಯಾವುದೇ ಭಿನ್ನಾಭಿಪ್ರಾಯ ಇಟ್ಟುಕೊಂಡ ಹಾಗೆ ಕಾಣುವುದಿಲ್ಲ. ಆದರೆ ಹಾಗೆ ಪ್ರಸ್ತಾಪಿಸುವಾಗ ಯಾವ ವ್ಯಕ್ತಿಯನ್ನು ಪ್ರಾಸಂಗಿಕವಾಗಿ ಪ್ರಸ್ತಾಪಿಸಿದ್ದೆನೊ ಆ ವ್ಯಕ್ತಿಯ ಬಗ್ಗೆ ತೀವ್ರವಾದ ಆಕ್ಷೇಪಗಳನ್ನು ಇಟ್ಟುಕೊಂಡಿದ್ದಾರೆ. ನಾನು ಆ ವ್ಯಕ್ತಿಯ ಹೆಸರನ್ನು ಪ್ರಸ್ತಾಪಿಸಬಲ್ಲಷ್ಟು ಆ ವ್ಯಕ್ತಿ ಒಳ್ಳೆಯವರಲ್ಲ ಎನ್ನುವುದು ಅವರ ಪ್ರಮುಖ ಆಕ್ಷೇಪ. ಅವರ ಆಕ್ಷೇಪಗಳಲ್ಲಿ ಕಾಣಿಸುವ ಪ್ರೀತಿಗೆ ಮತ್ತು ಕಾಳಜಿಗೆ ನಾನು ಕೃತಜ್ಞ.

ಮಿತ್ರರು ಆಕ್ಷೇಪಿಸುತ್ತಿರುವ ಗಾರಾ ಶ್ರೀನಿವಾಸ್ ಎಂಬ ಪತ್ರಕರ್ತ ನನಗೆ ಪರಿಚಯವಿಲ್ಲ. ಅದನ್ನು ಮೂಲ ಲೇಖನದಲ್ಲಿಯೂ ಹೇಳಿದ್ದೇನೆ. ಆ ಹೆಸರನ್ನು ನಾನು ಮೊದಲ ಬಾರಿ ಗಂಭೀರವಾಗಿ ಗಮನಿಸಿದ್ದೇ ಅವರು ಫೇಸ್‌ಬುಕ್‌ನಲ್ಲಿ ತಾವು ಚುನಾವಣೆಗೆ ನಿಲ್ಲುತ್ತಿರುವ ವಿಷಯದ ಬಗ್ಗೆ ಬರೆದ ಪೋಸ್ಟ್‌ನಲ್ಲಿ. Gara ಎನ್ನುವುದನ್ನು ಕನ್ನಡದಲ್ಲಿ “ಗಾರಾ” ಎಂದು ಬರೆಯಬೇಕು ಎಂದು ಗೊತ್ತಾಗಿದ್ದು ಆ ಲೇಖನ ಬರೆಯುವ ಮೊದಲು ಆ ಹೆಸರನ್ನು ಕನ್ನಡದಲ್ಲಿ ಬರೆಯುವುದು ಹೇಗೆ ಎಂದು ಪ್ರಶ್ನಿಸಿಕೊಂಡಾಗ. ಹಾಗಾಗಿ ಅವರ ಫೇಸ್‌ಬುಕ್‌ನಲ್ಲಿದ್ದ ಅವರ ಪತ್ರಿಕೆಯ ಇಮೇಜ್ ಅನ್ನು ದೊಡ್ಡದಾಗಿ ಮಾಡಿ ಕಂಡುಕೊಂಡೆ.

ಇಷ್ಟಕ್ಕೂ ನಾನು ಬರೆದ ಲೇಖನದಲ್ಲಿ ಗಾರಾ ಶ್ರೀನಿವಾಸ್ ಎನ್ನುವವರು ಪ್ರಾಸಂಗಿಕ. ಅದನ್ನು ಓದಿದ ಎಲ್ಲರಿಗೂ ತಿಳಿದಂತೆ ಅದರಲ್ಲಿ ನಾನು ಮುಖ್ಯವಾಗಿ ಚರ್ಚಿಸಬಯಸಿದ್ದು ಅಕ್ಷರಸ್ತರೆಂದು ಹೇಳಿಕೊಳ್ಳುವ ಮಧ್ಯಮವರ್ಗದ ಮನಸ್ಥಿತಿಯ ಬಗ್ಗೆ. ರಾಜಕೀಯ ಎಂದಾಕ್ಷಣ ಅದನ್ನು ಕೀಳಾಗಿ ಕಾಣುತ್ತ ತಮ್ಮ ನಾಗರೀಕ ಜವಾಬ್ದಾರಿಗಳನ್ನು ಕೀಳಾಗಿ ಕಾಣುವವರ ಬಗ್ಗೆ. ರಾಜಕೀಯದಲ್ಲಿ ಇರುವವರು ಮತ್ತು ರಾಜಕೀಯಕ್ಕೆ ಬರುವವರೆಲ್ಲರೂ ದುಷ್ಟರೂ ಭ್ರಷ್ಟರೂ ಮತ್ತು ಅವರ ಕೆಟ್ಟತನದಲ್ಲಿ ತಮ್ಮದೇನೂ ಪಾಲು ಇಲ್ಲ ಎನ್ನುವ ಒಂದು ವರ್ಗದ ಜನರ ಅಜ್ಞಾನ ಮತ್ತು ಅಹಂಕಾರದ ಬಗ್ಗೆ. ಹಾಗಾಗಿ ಗಾರಾರಾಗಲಿ, ಅವರಿಗೆ ಪ್ರತಿಕ್ರಿಯಿಸಿದ ಮಹಿಳೆಯಾಗಲಿ ಅಲ್ಲಿ ಗೌಣ. ಹಾಗಾಗಿಯೇ ನಾನು ಆ ಮಹಿಳಾಲೇಖಕರ ಹೆಸರನ್ನೂ ತೆಗೆದುಕೊಳ್ಳಲಿಲ್ಲ. ಅವರಿಬ್ಬರೂ ಅಲ್ಲಿ ನಾನು ಹೇಳಬೇಕೆಂದುಕೊಂಡ ವಿಚಾರಕ್ಕೆ ಕೇವಲ ಪ್ರಾಸಂಗಿಕ; purely incidental.

ಮತ್ತು ಇದೆಲ್ಲದರ ಬಗ್ಗೆ ಬರೆಯುತ್ತ ನಾನು ಎಲ್ಲಿಯೂ ಗಾರಾ ಶ್ರೀನಿವಾಸರ ಉಮೇದುವಾರಿಕೆಯನ್ನು ಬೆಂಬಲಿಸಿಲ್ಲ ಎನ್ನುವುದನ್ನು ಮಿತ್ರರು ಗಮನಿಸಬೇಕು. ಮೊದಲಿಗೆ ಗಾರಾ ಶ್ರೀನಿವಾಸ್ ನನಗೆ ಅಪರಿಚಿತರು. ಅವರ ಬಗ್ಗೆ ಇನ್ನಷ್ಟು ತಿಳಿದುಕೊಂಡು ಬರೆಯೋಣ ಎನ್ನಲು ಅವರು ನಾನು ಮತ ಹಾಕುವ ಕ್ಷೇತ್ರದಲ್ಲಿಲ್ಲ. ಆ ವ್ಯಕ್ತಿ ಮತ್ತು ಅವರ ಅರ್ಹತೆ, ಪ್ರಾಮಾಣಿಕತೆಯ ಬಗ್ಗೆ ತಿಳಿದುಕೊಳ್ಳುವುದು ಆ ಕ್ಷೇತ್ರದ ಮತದಾರರ ಕರ್ತವ್ಯ. ಹಾಗಾಗಿಯೇ, ನಾನು ಎಲ್ಲಿಯೂ ಅವರ ಉಮೇದುವಾರಿಕೆಯನ್ನು ಬೆಂಬಲಿಸಲು ಹೋಗಿಲ್ಲ. ಬದಲಿಗೆ ಗಾರಾ ಶ್ರೀನಿವಾಸರಿಗೇ ಒಂದಷ್ಟು ಪ್ರಶ್ನೆಗಳನ್ನು ಇಟ್ಟಿದ್ದೆ ಮತ್ತು ಅವು ಬಹಳ ತೀಕ್ಷ್ಣವಾಗೂ ಇದ್ದವು. ಆ ಲೇಖನದ ಕೊನೆಯ ಭಾಗಗಳನ್ನು ಗಮನಿಸಿದರೆ ಅದು ಗೊತ್ತಾಗುತ್ತದೆ.

ಆದರೆ, ನನ್ನ ಮೇಲಿನ ಪ್ರೀತಿಯಿಂದ ಶಿವಮೊಗ್ಗದ ಸ್ನೇಹಿತರು ಆ ಲೇಖನದ ಬಗ್ಗೆ ಗಂಭೀರವಾಗಿ ಮಾತನಾಡಿಕೊಂಡಿದ್ದಾರೆ ಮತ್ತು ಚರ್ಚಿಸಿದ್ದಾರೆ. ನನಗೂ ಫೋನ್ ಮಾಡಿದ್ಡಾರೆ ಮತ್ತು ಮುಖಪರಿಚಯ ಇಲ್ಲದ ಸ್ನೇಹಿತರು ಸಮಾನಸ್ನೇಹಿತರಿಂದ ಫೋನ್ ಮಾಡಿಸಿದ್ದಾರೆ. ಗಾರಾ ಶ್ರೀನಿವಾಸರು ಪತ್ರಿಕೋದ್ಯಮದ ಘನತೆಯನ್ನು ಎತ್ತಿಹಿಡಿಯುವ ಕೆಲಸವೇನೂ ಮಾಡುತ್ತಿಲ್ಲ ಮತ್ತು ಈಗಾಗಲೆ ಶಿವಮೊಗ್ಗದ ಪತ್ರಕರ್ತರೇ ಅವರ ವಿರುದ್ಧ ಪ್ರತಿಭಟನೆಯನ್ನೂ ಮಾಡಿದ್ದಾರೆ ಎಂದು ಶಿವಮೊಗ್ಗದ ಮಿತ್ರರು ಹೇಳುತ್ತಾರೆ. ಆ ಪತ್ರಕರ್ತ ತನ್ನ ಪತ್ರಿಕೆಯನ್ನು ತನ್ನ ಸ್ವಾರ್ಥ ಸಾಧನೆಗೆ ಮತ್ತು ಹಣವಸೂಲಿಗೆ ಬಳಸಿಕೊಳ್ಳುತ್ತಾರೆ ಎನ್ನುವುದು ಅವರ ಆರೋಪ. ಸ್ನೇಹಿತರು ಆರೋಪಿಸಿದ ಎಲ್ಲವನ್ನೂ ಇಲ್ಲಿ ನಾನು ಬರೆಯಲು ಹೋಗುತ್ತಿಲ್ಲ. ಅದನ್ನೇ ಶಿವಮೊಗ್ಗದ ಮಿತ್ರರು ಬರೆದು ಕಳುಹಿಸಿದರೆ ಉತ್ತಮ. ಪತ್ರಕರ್ತರು ಯಾವಯಾವ ರೀತಿ ಕಾರ್ಯ ನಿರ್ವಹಿಸುತ್ತಾರೆ ಮತ್ತು ಪತ್ರಿಕೋದ್ಯಮದ ಇನ್ನೊಂದು ಮುಖ ಎಷ್ಟು ಕೊಳಕಾಗಿದೆ ಎನ್ನುವುದಕ್ಕೆ ಅದು ಉದಾಹರಣೆಯೂ ಆಗಬಹುದು. ಅದನ್ನು ಶಿವಮೊಗ್ಗದ ಮಿತ್ರರೇ ಮಾಡಬೇಕೆ ಹೊರತು ನಾನು ಮಾಡಲಾಗುವುದಿಲ್ಲ.

ಚುನಾವಣೆ ಹತ್ತಿರ ಬರುತ್ತಿದ್ದಂತೆ ಇನ್ನೂ ಅನೇಕ ತರಹೇವಾರಿ ಜನ ಅಖಾಡಕ್ಕೆ ಇಳಿಯುತ್ತಾರೆ. ಬಹಳಷ್ಟು ಜನರಿಗೆ ಅದು ನಿಜವಾಗಲೂ ಅಖಾಡವೇ. ತಮ್ಮ ಐಡೆಂಟಿಟಿ ತೋರಿಸಿಕೊಳ್ಳಲು ಸಿಗುವ ಒಂದು ಅವಕಾಶ. ಅದರ ಜೊತೆಗೆ ಈಗಿನ ಭಾಷೆಯಲ್ಲಿ ಹೇಳುವುದಾದರೆ “ಡೀಲ್”ಗಳೂ ಸೇರಿಕೊಂಡಿರುತ್ತವೆ. ತಮ್ಮ ಪ್ರಮುಖ ಎದುರಾಳಿಗೆ ವಿರುದ್ಧವಾಗಿ ಆತನ ಎದುರಾಳಿಗಳು ಆತನದೇ ಹೆಸರಿನ ಇತರೆ ಡಮ್ಮಿಗಳನ್ನು ತಾವೇ ದುಡ್ಡುಕೊಟ್ಟು ನಿಲ್ಲಿಸುತ್ತಾರೆ. ಇನ್ನೂ ಏನೇನೋ ನಾಟಕಗಳು, ಅನೈತಿಕ ಕೆಲಸಗಳೂ ನಡೆಯುತ್ತವೆ. ಪ್ರಜಾಪ್ರಭುತ್ವ ಮತ್ತು ರಾಜಕಾರಣದ ಬಗ್ಗೆ ತಿಳುವಳಿಕೆ, ಬದ್ಧತೆ, ಅರ್ಹತೆ, ಮತ್ತು ಪ್ರಾಮಾಣಿಕತೆ ಇರುವ ಅಭ್ಯರ್ಥಿಗಳು ಕಮ್ಮಿ ಇರುತ್ತಾರೆ. ಹಾಗೆಂದು, ಎಲ್ಲರೂ ಭ್ರಷ್ಟರೂ ದುಷ್ಟರೂ ಎಂದುಕೊಂಡು ಸಮಾಜಕ್ಕೆ ನ್ಯಾಯಯುತ ನಾಯಕತ್ವ ಕೊಡಬಲ್ಲ ಅರ್ಹರನ್ನೂ ಅವರು ಚುನಾವಣೆಗೆ ನಿಲ್ಲುತ್ತಿದ್ದಾರೆ ಎನ್ನುವ ಒಂದೇ ಕಾರಣಕ್ಕೆ ಇತರರನ್ನೂ ನೋಡುವಂತೆ ಅವರನ್ನೂ ನೋಡಿಬಿಟ್ಟರೆ ಅದು ಅಕ್ಷಮ್ಯ. ತಮಗೆ ತಾವೆ ಮಾಡಿಕೊಳ್ಳುವ ಅನ್ಯಾಯ. ಜನ ಇಂತಹುದರ ಬಗ್ಗೆ ಎಚ್ಚರದಿಂದಿರಬೇಕು. ಅನರ್ಹರ ಅಯೋಗ್ಯರ ಬಗ್ಗೆ ಕಠಿಣವಾಗಿದ್ದಷ್ಟೇ ಅರ್ಹರು ಮತ್ತು ಪ್ರಾಮಾಣಿಕರ ಬಗ್ಗೆ ವೈಚಾರಿಕವಾಗಿ ಯೋಚಿಸಿ ಸಾಧ್ಯವಾದರೆ ಅವರ ಜೊತೆನಿಲ್ಲಬೇಕು. ಅದು ಪ್ರಜಾಪ್ರಭುತ್ವದಲ್ಲಿ ನಾವು ನಿಭಾಯಿಸಬೇಕಾದ ನಾಗರೀಕ ಕರ್ತವ್ಯಗಳಲ್ಲಿ ಒಂದು.

ತಮ್ಮದೇ ಊರಿನಲ್ಲಿ ಚುನಾವಣೆಗೆ ನಿಲ್ಲುತ್ತಿರುವ ವ್ಯಕ್ತಿಗಳ “ಜನ್ಮಜಾತಕ” ಬಯಲು ಮಾಡುವ ನಿಟ್ಟಿನಲ್ಲಿ ಶಿವಮೊಗ್ಗದ ಮಿತ್ರರು ಸಕ್ರಿಯರಾಗಿದ್ದಾರೆ. ಮತ್ತು ಆ ಮೂಲಕ ಅವರು ತಮ್ಮ ಜವಾಬ್ದಾರಿಗಳನ್ನೂ ನಿರ್ವಹಿಸುತ್ತಿದ್ದಾರೆ. ಹಾಗೆಯೇ, ಉಳಿದ ಅಭ್ಯರ್ಥಿಗಳ ಇತಿಹಾಸ ಮತ್ತು ಅರ್ಹತೆಯನ್ನೂ ಅವರು ಜನರ ಮುಂದಿಡಲಿ ಎಂದು ಬಯಸುತ್ತೇನೆ. ಮತ್ತು ಅರ್ಹ ಅಭ್ಯರ್ಥಿಗಳನ್ನು–ಅವರು ಗೆಲ್ಲುವ ಅವಕಾಶ ಇಲ್ಲದಿದ್ದರೂ–ಗುರುತಿಸುವ ಕೆಲಸವನ್ನೂ ಎಲ್ಲಾ ಕಡೆಯ ಪ್ರಾಮಾಣಿಕ ಪತ್ರಕರ್ತ ಮಿತ್ರರು ಮಾಡಲಿ ಎಂದು ಆಶಿಸುತ್ತೇನೆ.

ನಮಸ್ಕಾರ,
ರವಿ ಕೃಷ್ಣಾರೆಡ್ಡಿ