ಪ್ರಜಾ ಸಮರ-8 (ನಕ್ಸಲ್ ಕಥನ)


– ಡಾ.ಎನ್.ಜಗದೀಶ್ ಕೊಪ್ಪ


ಕೊಂಡಪಲ್ಲಿ ಸೀತಾರಾಮಯ್ಯ ನಾಯಕತ್ವದ ಯುವ ಮಾವೋ-ಲೆನಿನ್‌ವಾದಿ ಕಮ್ಯೂನಿಷ್ಟ್ ಕಾರ್ಯಕರ್ತರು ಆಂಧ್ರದ ಗ್ರಾಮಾಂತರ ಮತ್ತು ಗುಡ್ಡಗಾಡು ಪ್ರದೇಶದಲ್ಲಿ ಊಳಿಗ ಮಾನ್ಯ ವ್ಯವಸ್ಥೆಯ ವಿರುದ್ದ ಸಾರಿದ ಬಹಿರಂಗ ಸಮರದಿಂದಾಗಿ ದೊರೆಗಳಂತೆ ಮೆರೆಯುತ್ತಿದ್ದ ರೆಡ್ಡಿ ಮತ್ತು ವೆಲಮ ಜಾತಿಗೆ ಸೇರಿದ ಜಮೀನ್ದಾರರು ತಮ್ಮ ಸಾವಿರಾರು ಎಕರೆ ಜಮೀನುಗಳನ್ನು ತೊರೆದು ಊರು ಬಿಡುವಂತಹ ವಾತಾವರಣ ಸೃಷ್ಟಿಯಾಯಿತು. ಹಲವರಂತೂ ಜೀವ ಭಯದಿಂದ ಆಕ್ರಮಿಸಿಕೊಂಡಿದ್ದ ದಲಿತರು ಮತ್ತು ಆದಿವಾಸಿಗಳ ಭೂಮಿಯನ್ನು ನಕ್ಸಲಿಯರ ಸಂಘಟನೆಗೆ ಮರು ಮಾತಿಲ್ಲದೆ ಒಪ್ಪಿಸಿದ್ದರು.

ಆಂಧ್ರ ಸಕಾರವೇ ಅಧಿಕೃತವಾಗಿ ಒಪ್ಪಿಕೊಂಡಂತೆ, ಜಮೀನ್ದಾರರಿಂದ ವಶಪಡಿಸಿಕೊಂಡಿದ್ದ 80 ಸಾವಿರ ಎಕರೆ ವ್ಯವಸಾಯದ ಜಮೀನು ಮತ್ತು 1 ಲಕ್ಷದ 20 ಸಾವಿರ ಅರಣ್ಯದ ಭೂಮಿಯನ್ನು ಭೂರಹಿತ ದಲಿತರು ಮತ್ತು ಕೃಷಿ ಕೂಲಿಕಾರ್ಮಿಕರಿಗೆ ಕಮ್ಯೂನಿಷ್ಟ್ ಕಾರ್ಯಕರ್ತರು ಹಂಚಿದ್ದರು. ತೆಲಂಗಾಣ ಪ್ರಾಂತ್ಯದ ಜಿಲ್ಲೆಗಳಲ್ಲಿ ಜಾರಿಯಲ್ಲಿದ್ದ ವ್ಯವಸಾಯದ ಕೂಲಿ ದರವನ್ನು 15 ರೂಪಾಯಿಗಳಿಂದ ದಿನವೊಂದಕ್ಕೆ 25 ರೂಪಾಯಿಗಳಿಗೆ ಏರಿಕೆ ಮಾಡಲಾಯಿತು. ಶ್ರೀಮಂತರ ಮನೆಯಲ್ಲಿ ಜೀತದಾಳುಗಳಾಗಿ ದುಡಿಯುತ್ತಿದ್ದ ಆಳುಗಳ ವಾರ್ಷಿಕ ಸಂಬಳವನ್ನು ಎರಡು ಸಾವಿರದಿಂದ ನಾಲ್ಕು ಸಾವಿರ ರೂಪಾಯಿಗಳಿಗೆ ಹೆಚ್ಚಿಸಲಾಯಿತು. ಈ ಅಚ್ಚರಿಯ ಬೆಳವಣಿಗೆ ದೀನ ದಲಿತರಿಗೆ ನಕ್ಸಲ್ ಹೋರಾಟಗಾರರ ಮೇಲೆ ಪ್ರೀತಿ ವಿಶ್ವಾಸ ಹೆಚ್ಚಲು ಕಾರಣವಾಯಿತು.

‘ಕಾಡಿನಿಂದ ಬಂದ ದೊರೆಗಳಿಂದಾಗಿ ನಾಡಿನ ದೊರೆಗಳ ಕಿರುಕುಳ ತಪ್ಪಿತು ಎಂಬ ಮಾತು ತೆಲಂಗಾಣ ಪ್ರಾಂತ್ಯದ ಗ್ರಾಮಾಂತರ ಪ್ರದೇಶಗಳಲ್ಲಿ 1978-79 ರಲ್ಲಿ ಸಾಮಾನ್ಯವಾಗಿತ್ತು. ಈ ಬೆಳವಣಿಗೆಯನ್ನು ಗಮನಿಸುತ್ತಾ ಬಂದಿದ್ದ ’ಆಂಧ್ರಪ್ರಭ’ ದಿನಪತ್ರಿಕೆಯ ಸಂಪಾದಕರಾಗಿದ್ದ ಪೊಟ್ಟೂರಿ ವೆಂಕಟೇಶ್ವರ ರಾವ್ ಈ ಹೋರಾಟವನ್ನು ಬಣ್ಣಿಸುತ್ತಾ ‘ಕೊಂಡಪಲ್ಲಿ ನೇತೃತ್ವದ ಕಾರ್ಯಕರ್ತರು ತೆಲಂಗಾಣದ ಕರೀಂನಗರ, ಅದಿಲಾಬಾದ್ ಮತ್ತು ವಾರಂಗಲ್, ಶ್ರೀಕಾಕುಳಂ, ಜಿಲ್ಲೆಗಳಲ್ಲಿ ಪರ್ಯಾಯ ಸಕಾರವನ್ನೇ ನಡೆಸಿದರು. ಜನತಾ ನ್ಯಾಯಲಯದ ಮೂಲಕ ತಪ್ಪಿತಸ್ಥ ಜಮೀನ್ದಾರರು, ಅರಣ್ಯಾಧಿಕಾರಿಗಳನ್ನು ದಂಡ ಇಲ್ಲವೇ ಶಿಕ್ಷೆ ಮೂಲಕ ದಂಡಿಸಿದರು. ಅರಣ್ಯ ಗುತ್ತಿಗೆದಾರರು, ಲೇವಾದೇವಿದಾರರು, ಸಾರಾಯಿ ಗುತ್ತಿಗೆದಾರರು ಇವರುಗಳಿಂದ ತೆರಿಗೆ ವಸೂಲಿ ಮಾಡುವುದರ ಮೂಲಕ ಹಳ್ಳಿಗಳ ಅಭಿವೃದ್ಧಿಗೆ ಒತ್ತು ಕೊಟ್ಟು ಭವಿಷ್ಯದ ಚಳವಳಿಗೆ ಭದ್ರ ಬುನಾದಿ ಹಾಕಿಕೊಂಡರು,’ ಎಂದು ವಿಶ್ಲೇಷಿಸಿದ್ದಾರೆ.

ಈ ನಡುವೆ ಮಾವೋ ಮತ್ತು ಲೆನಿನ್‌ವಾದಿ ಕಮ್ಯೂನಿಷ್ಟ್ ಪಕ್ಷ ಎಂದು ಗುರುತಿಸಿಕೊಂಡಿದ್ದ ಕೊಂಡಪಲ್ಲಿ ಸೀತಾರಾಮಯ್ಯನವರ ಸಂಘಟನೆಗೆ ಹೆಸರು ಬದಲಿಸಬೇಕಾದ ಪ್ರಸಂಗವೊಂದು 1979ರಲ್ಲಿ ನಡೆಯಿತು. ಸೀತಾರಾಮಯ್ಯ ನೀಡಿದ್ದ ಕರೆಯ ಮೇರೆಗೆ ಅಸಂಖ್ಯಾತ ವಿದ್ಯಾರ್ಥಿಗಳು ಕಾಲೇಜು ತೊರೆದು ಕ್ರಾಂತಿಕಾರಿ ಚಳವಳಿಗೆ ದುಮುಕುತ್ತಿರುವುದನ್ನು ಗಮನಿಸಿದ್ದ ವಾರಂಗಲ್ ನಗರದ ಕಾಕತೀಯ ಮೆಡಿಕಲ್ ಕಾಲೇಜಿನ ಹಾಸ್ಟಲ್‌ನ ಅಡುಗೆ ಸಹಾಯಕ ಚಿನ್ನುಲು ಎಂಬ ಅವಿದ್ಯಾವಂತ ಯುವಕ ಉದ್ಯೋಗ ತೊರೆದು ವಿದ್ಯಾರ್ಥಿಗಳ ಜೊತೆ ಸಂಘಟನೆಗೆ ಸೇರಿಕೊಂಡಿದ್ದ. ಅರಣ್ಯ ಅಥವಾ ಹಳ್ಳಿಗಳಲ್ಲಿ ವಿದ್ಯಾರ್ಥಿಗಳ ಜೊತೆ ಇದ್ದು ಅಡುಗೆ ತಯಾರಿಸಿಕೊಡುತ್ತಿದ್ದ. ಯಾವುದೇ ಪ್ರತಿಫಲವನ್ನು ಬೇಡದೇ ಹೊಟ್ಟೆಪಾಡಿನ ಉದ್ಯೋಗ ತ್ಯಜಿಸಿ ಹೋರಾಟದ ಸಾಗರಕ್ಕೆ ದುಮುಕಿದ್ದ ಈ ಹುಡುಗನ ಬಗ್ಗೆ ಕೊಂಡಪಲ್ಲಿಗೆ ಅಪಾರ ಪ್ರೀತಿ ಮತ್ತು ಕರುಣೆಯಿತ್ತು. ಅದೇ ವರ್ಷ ವಾರಂಗಲ್‌ನಲ್ಲಿ ಕಮ್ಯೂನಿಷ್ಟ್ ಪಕ್ಷದ ಎರಡು ಬಣಗಳ ನಡುವೆ ಏರ್ಪಟ್ಟ ಘರ್ಷಣೆಯಲ್ಲಿ ಕಮ್ಯೂನಿಷ್ಟ್ ಪಾರ್ಟಿ ಆಫ್ ಇಂಡಿಯಾ ಕಾರ್ಯಕರ್ತರಿಂದ ಚಿನ್ನುಲು ಹತ್ಯೆಯಾದ. ಈತನ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಸೀತಾರಾಮಯ್ಯ ಸಂಘಟನೆಯ ಹೆಸರನ್ನು ಬದಲಿಸುವ ಮತ್ತು ಯೋಜನೆಯ ಕಾರ್ಯತಂತ್ರಗಳನ್ನು ಮರು ರೂಪಿಸುವ ಬಗ್ಗೆ ಸುಳಿವು ನೀಡಿದರು. ಅದರಂತೆ 1980ರ ಏಪ್ರಿಲ್ 20ರಂದು ಸಂಘಟನೆಯ ಹೆಸರನ್ನು “ಪೀಪಲ್ಸ್ ವಾರ್ ಗ್ರೂಪ್” ಎಂದು ಅಧಿಕೃತವಾಗಿ ಬದಲಾಯಿಸಿದರು.

ತಾವು ಕನಸಿದ್ದ ಸಾಮಾಜಿಕ ಕ್ರಾಂತಿ ಸದ್ಯದ ಕಾರ್ಯತಂತ್ರದ ಮೂಲಕ ಸಾಧ್ಯವಿಲ್ಲ ಎಂಬುದು ಕೊಂಡಪಲ್ಲಿಗೆ ಆ ವೇಳೆಗಾಗಲೇ ಮನದಟ್ಟಾಗಿಬಿಟ್ಟಿತ್ತು. ವಿದ್ಯಾರ್ಥಿಗಳು, ಯುವಕರು, ಮತ್ತು ಜನನಾಟ್ಯಮಂಡಲಿ ಎಂಬ ಸಾಂಸ್ಕೃತಿಕ ಸಂಘಟನೆ ಮೂಲಕ ತೆಲಂಗಾಣ ಮತ್ತು ಗೋದಾವರಿ ಪ್ರಾಂತ್ಯದಲ್ಲಿ ಅಪಾರ ಪ್ರಮಾಣದಲ್ಲಿ ಜನಬೆಂಬಲವೇನೊ ವ್ಯಕ್ತವಾಗಿತ್ತು. ಆದರೆ, ಸೀತಾರಾಮಯ್ಯ ಇನ್ನು ಮುಂದೆ ಸಮಾಜದಲ್ಲಿ ತಾಂಡವವಾಡುತ್ತಿರುವ ಸಮಸ್ಯೆಗಳಿಗೆ ಕಾರಣವಾಗಿರುವ ನಿಜವಾದ ಶತ್ರುಗಳನ್ನು ಹಿಡಿದು ಸದೆಬಡಿಯಬೇಕು ಎಂದು ನಿರ್ಧರಿಸಿದರು. ಅಂದರೆ, ಬಿಲ್ಲು ಬಾಣಗಳನ್ನು, ಪ್ರತಿಭಟನೆ, ಸತ್ಯಾಗ್ರಹ ಇವುಗಳನ್ನು ಬದಿಗೊತ್ತಿ ವ್ಯವಸ್ಥೆಯ ವಿರುದ್ಧ ಶಸ್ತ್ರ ಸಜ್ಜಿತರಾಗಿ ಹೋರಾಡುವುದೊಂದೇ ಅನಿವಾರ್ಯ ಎಂದು ಅವರು ಘೋಷಿಸಿದರು. ಕೊಂಡಪಲ್ಲಿಯವರ ತೀರ್ಮಾನವನ್ನು ಬಹುತೇಕ ಮಂದಿ ಸ್ವಾಗತಿಸಿದರು. ಏಕೆಂದರೆ ಈ ಮೊದಲು ಅವರೆಲ್ಲಾ ಸೀತಾರಾಮಯ್ಯ ನಮ್ಮ ಕೈಗೆ ಬಂದೂಕು ಕೊಡುವ ಬದಲು ಕೊಂಡಪಲ್ಲಿಯ ಗೊಂಬೆಗಳನ್ನು ಕೊಡುವ ಆಲೋಚನೆಯಲ್ಲಿದ್ದಾರೆ ಎಂದು ಗೇಲಿಮಾಡುತ್ತಿದ್ದರು. (ವಿಜಯವಾಡ ನಗರದಿಂದ 20 ಕಿ.ಮಿ. ದೂರದಲ್ಲಿ ಕೊಂಡಪಲ್ಲಿ ಎಂಬ 16 ಸಾವಿರ ಜನಸಂಖ್ಯೆಯ ಗ್ರಾಮವಿದೆ. ಈ ಊರು ನಮ್ಮ ಕರ್ನಾಟಕದ ಚನ್ನಪಟ್ಟಣದ ಹಾಗೇ ಮರದ ಬೊಂಬೆಗಳ ತಯಾರಿಕೆಯಲ್ಲಿ ಆಂಧ್ರಾದ್ಯಂತ ಪ್ರಸಿದ್ಧಿ ಪಡೆದಿದೆ. ಈ ಊರಿಗೂ ಕೊಂಡಪಲ್ಲಿ ಸೀತಾರಾಮಯ್ಯನವರಿಗೂ ಯಾವುದೇ ಸಂಬಂಧವಿಲ್ಲ. ಆದರೂ ಸೀತಾರಾಮಯ್ಯ ಹೆಸರಿನ ಜೊತೆ ಕೊಂಡಪಲ್ಲಿ ಎಂಬುದು ತಳಕು ಹಾಕಿಕೊಂಡಿದೆ.)

ಜಮೀನ್ದಾರರ ದೌರ್ಜನ್ಯ ಮತ್ತು ಅವರ ಬೆಂಬಲವಾಗಿ ನಿಂತಿರುವ ಪೊಲೀಸ್ ವ್ಯವಸ್ಥೆಗೆ ಹಿಂಸೆಯೊಂದೇ ಉತ್ತರ ಎಂಬ ಚಾರುಮುಜುಂದಾರ್‌ನ ವಿಚಾರ ಧಾರೆಯನ್ನು ತಮ್ಮ ಪೀಪಲ್ಸ್ ವಾರ್ ಗ್ರೂಪ್ ಸಂಘಟನೆಗೆ ಸೀತಾರಾಮಯ್ಯ ಅಳವಡಿಸಿಕೊಂಡರು. ಇದನ್ನು ತನ್ನ ಕಾರ್ಯಕರ್ತರಿಗೆ ಒಂದು ಉಪಮೆ ಮುಖಾಂತರ ಸೀತಾರಾಮಯ್ಯ ಸರಳವಾಗಿ ವಿವರಿಸುತ್ತಿದ್ದರು: ‘ಒಬ್ಬ ರೈತ ಹೊಲದಲ್ಲಿ ದುಡಿಮೆ ಮಾಡುವಾಗ ಅನಾವಶ್ಯಕವಾಗಿ ಬೆಳೆಗೆ ತೊಂದರೆ ಕೊಡುವ ಕಳೆಗಳನ್ನು ಕಿತ್ತು ಬಿಸಾಡುತ್ತಾನೆ. ವಿಷಕಾರಿ ಅಲ್ಲದ ಹಾವುಗಳು ಕಂಡು ಬಂದರೆ ಅವುಗಳನ್ನು ಕೋಲಿನಿಂದ ಎತ್ತಿ ಹೊರಗೆ ಎಸೆಯುತ್ತಾನೆ. ಆದರೆ ತನ್ನ ಜೀವಕ್ಕೆ ಅಪಾಯಕಾರಿಯಾಗುವ ವಿಷಪೂರಿತ ಹಾವುಗಳನ್ನು ಕಂಡರೆ ಕೂಡಲೇ ಕೊಂದು ಹಾಕುತ್ತಾನೆ. ಈಗ ನಾವು ಅನುಸರಿಸಬೇಕಾದ್ದು ರೈತನ ಮಾರ್ಗವನ್ನು,’ ಎಂದು ಅವರು ಪ್ರತಿಪಾದಿಸುತಿದ್ದರು.ಈ ಕಾರಣಕ್ಕಾಗಿ ‘ಆಟ, ಪಾಠ, ಮಾಟ ಬಂದ್’, ಅಂದರೆ, ಹಾಡು, ನೃತ್ಯ, ಭಾಷಣಗಳಿಗೆ ತಾತ್ಕಾಲಿಕ ವಿರಾಮ ಹೇಳಿದರು.

ಈ ನಡುವೆ ಆದಿಲಾಬಾದ್ ಜಿಲ್ಲೆಯಲ್ಲಿ 1981ರ ಏಪ್ರಿಲ್ ತಿಂಗಳಿನಲ್ಲಿ ಗೊಂಡ ಜನಾಂಗದ ನರಮೇಧವೊಂದು ನಡೆದುಹೋಯಿತು. (ಈ ಕುರಿತು ಹಿಂದಿನ ಅಧ್ಯಾಯ-4 ರಲ್ಲಿ ಪ್ರಸ್ತಾಪಿಸಲಾಗಿದೆ.) ಆಂಧ್ರ ಪ್ರದೇಶದಲ್ಲಿ ಗೊಂಡ ಜನಾಂಗದಲ್ಲಿ ಲಂಬದಾಸ್ ಎಂಬ ಉಪ ಪಂಗಡವಿದ್ದು ಈ ಜನಾಂಗಕ್ಕೆ ಬುಡಕಟ್ಟು ಜನಾಂಗದ ಮೀಸಲಾತಿ ಸೌಲಭ್ಯವಿತ್ತು. ಆದರೆ, ನೆರೆಯ ಮಹಾರಾಷ್ಟ್ರದಲ್ಲಿ ಮೀಸಲಾತಿ ಇಲ್ಲದ ಕಾರಣ ಅಲ್ಲಿನ ಜನಾಂಗ ಅದಿಲಾಬಾದ್ ಜಿಲ್ಲೆಗೆ ವಲಸೆ ಬಂದು ಆಂಧ್ರ ಜನರ ಮೀಸಲಾತಿ ಸೌಕರ್ಯವನ್ನು ಕಬಳಿಸತೊಡಗಿತ್ತು. ಈ ಬಗ್ಗೆ ಸರ್ಕಾರದ ಗಮನ ಸೆಳೆಯಲು ಇಂದ್ರಾವಳಿ ಪಟ್ಟಣದಲ್ಲಿ ಗೊಂಡ ಸಮಾವೇಶವನ್ನು ಏರ್ಪಡಿಸಲಾಗಿತ್ತು. ಈ ಸಮಾವೇಶದಲ್ಲಿ ಪೊಲೀಸರ ಗೋಲಿಬಾರ್‌ಗೆ 40ಕ್ಕೂ ಹೆಚ್ಚು ಆದಿವಾಸಿಗಳು ಬಲಿಯಾದರು. ಈ ಘಟನೆಯಿಂದ ಸಿಡಿದು ನಿಂತ ಜಿಲ್ಲೆಯ 30 ಸಾವಿರ ಗೊಂಡ ಜನಾಂಗದ ಆದಿವಾಸಿಗಳು ಕೊಂಡಪಲ್ಲಿ ಸೀತಾರಾಮಯ್ಯನವರ ‘ಪ್ರಜಾ ಸಮರಂ ದಳ’ಕ್ಕೆ ಬೆಂಬಲವಾಗಿ ನಿಂತು ಪೊಲೀಸರ ವಿರುದ್ದ ಸಮರ ಸಾರಿದರು.

ಸಂಘಟನೆ ಬಲಗೊಳ್ಳುತ್ತಿದ್ದಂತೆ ತಲೆ ಮರೆಸಿಕೊಂಡಿದ್ದ ಸೀತಾರಾಮಯ್ಯ 1882ರಲ್ಲಿ ಹೈದರಾಬಾದ್ ನಗರ ಬೇಗಂ ಪೇಟ್ ರೈಲ್ವೆ ನಿಲ್ದಾಣದಲ್ಲಿ ಆಂಧ್ರ ಪೊಲೀಸರಿಗೆ ಸಿಕ್ಕಿಬಿದ್ದರು. ಸಂಘಟನೆಯ ನೇರ ಹೊಣೆ ಕೆ.ಜಿ. ಸತ್ಯಮೂರ್ತಿಯವರ ಮೇಲೇ ಬಿತ್ತು. ಮೂಲತಃ ದಲಿತ ಕವಿಯಾಗಿದ್ದ ಸತ್ಯಮೂರ್ತಿ ಸಾಂಸ್ಕೃತಿಕ ಚಟುವಟಿಕೆ ಮೂಲಕ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂಬ ನಿಲುವುಳ್ಳವರಾಗಿದ್ದರು. ಭಾವನಾತ್ಮಕವಾಗಿ ಹಿಂಸೆಯನ್ನು ವಿರೋಧಿಸುತ್ತಿದ್ದ ಅವರು ಹಿಂಸಾತ್ಮಕ ಹೋರಾಟಕ್ಕೆ ಹೆಚ್ಚಿ ಆಸಕ್ತಿ ವಹಿಸುತ್ತಿರಲಿಲ್ಲ.

ಇದೇ ವೇಳೆಗೆ ಆಂಧ್ರದಲ್ಲಿ ರಾಜಕೀಯದ ಹೊಸ ಶಕೆಯೊಂದು ಆರಂಭವಾಯಿತು. ಆಂಧ್ರದ ಚಲನಚಿತ್ರರಂಗದಲ್ಲಿ ತನ್ನ ಪೌರಾಣಿಕ ಪಾತ್ರಗಳಿಂದ ಅಲ್ಲಿನ ಜನತೆಯ ಆರಾಧ್ಯ ದೈವವಾಗಿದ್ದ ನಾಯಕ ನಟ ಎನ್.ಟಿ. ರಾಮರಾವ್ ‘ತೆಲುಗು ದೇಶಂ’ ಎಂಬ ರಾಜಕೀಯ ಪಕ್ಷವನ್ನು ಸ್ಥಾಪಿಸಿ, ತಮ್ಮ ಮಗನ ಜೊತೆ ಇಡೀ ಆಂಧ್ರಾದ್ಯಂತ ಪ್ರವಾಸ ಮಾಡಿದರು. ಜೊತೆಗೆ ತೆಲಂಗಾಣ ಪ್ರಾಂತ್ಯದಲ್ಲಿ ಸಾರ್ವಜನಿಕ ಸಭೆಗಳಲ್ಲಿ ನಕ್ಸಲಿಯ ಹೋರಾಟಗಾರರನ್ನು ‘ದೇಶಭಕ್ತಲು’ ಎಂದು ಕರೆದು ಅವರಿಗೆ ತಮ್ಮ ಪಕ್ಷದ ಬೆಂಬಲ ಘೋಷಿಸಿದರು. ಆದರೆ, 1983ರಲ್ಲಿ ತೆಲುಗುದೇಶಂ ಪಕ್ಷ ಕಾಂಗ್ರೇಸ್ ಪಕ್ಷವನ್ನು ಧೂಳಿಪಟ ಮಾಡಿ ಅಧಿಕಾರಕ್ಕೆ ಬಂದಾಗ, ಮುಖ್ಯಮಂತ್ರಿಯಾದ ಎನ್.ಟಿ.ರಾಮರಾವ್ ತಮ್ಮ ಮಾತುಗಳನ್ನು ಮರೆತರು. ಈ ನಡುವೆ ಅನಾರೋಗ್ಯದ ನೆಪದಲ್ಲಿ ಹೈದರಾಬಾದ್ ನಗರದ ಉಸ್ಮಾನಿಯಾ ಆಸ್ಪತ್ರೆಗೆ ದಾಖಲಾಗಿದ್ದ ಸೀತಾರಾಮಯ್ಯನವರನ್ನು ಅವರ ಬೆಂಬಲಿಗರು 1984 ರ ಜನವರಿ 4 ರ ನಡುರಾತ್ರಿ ಆಸ್ಪತ್ರೆ ಮೇಲೆ ದಾಳಿ ಮಾಡಿ ಕರ್ತವ್ಯದ ಮೇಲಿದ್ದ ಪೊಲೀಸ್ ಪೇದೆಯನ್ನು ಹತ್ಯೆ ಮಾಡುವುದರ ಮೂಲಕ ಬಿಡಿಸಿಕೊಂಡು ಹೋಗುವಲ್ಲಿ ಯಶಸ್ವಿಯಾದರು. ಇದು ಪರೋಕ್ಷವಾಗಿ ಎನ್.ನ್.ಟಿ.ಆರ್. ನೇತೃತ್ವದ ತೆಲುಗು ದೇಶಂ ಸರ್ಕಾರ ಮತ್ತು ಪಿ.ಡಬ್ಲ್ಯು.ಜಿ. ನಡುವೆ ಹಿಂಸೆಯ ಸಂಘರ್ಷಕ್ಕೆ ದಾರಿ ಮಾಡಿಕೊಟ್ಟಿತು.

ಚಾರು ಮುಜುಂದಾರ್ ಹಾಕಿಕೊಟ್ಟ ಹಾದಿಯಲ್ಲಿ ಅಂದರೆ, ಊಳಿಗಮಾನ್ಯ ಪದ್ಧತಿಯನ್ನು, ಪಾಳೆಗಾರ ಸಂಸ್ಕೃತಿಯನ್ನು ಹಿಂಸೆಯ ಮೂಲಕ ಬುಡ ಸಮೇತ ಕಿತ್ತು ಹಾಕಲು ಹೊರಟಿದ್ದ ಕೊಂಡಪಲ್ಲಿ ಹಾಗೂ ಸತ್ಯಮೂರ್ತಿ ನಡುವೆ ತಾತ್ವಿಕ ಭಿನ್ನಾಭಿಪ್ರಾಯಗಳು ಬಂದು 1985ರಲ್ಲಿ ಸತ್ಯಮೂರ್ತಿಯನ್ನು ಪೀಪಲ್ಸ್ ವಾರ್ ಗ್ರೂಪ್‌ನಿಂದ ಉಚ್ಛಾಟಿಸಲಾಯಿತು. ಇದನ್ನು ಪ್ರಶ್ನಿಸಿದ ಹಾಗೂ ಪ್ರಜಾಸಮರಂ ಸಂಘಟನೆಗೆ ದಳಂ ಎಂಬ ಹೆಸರಿನಲ್ಲಿ ಬಲಿಷ್ಟ ಯುವ ಕಾರ್ಯಕರ್ತರ ಪಡೆಯನ್ನು ಹುಟ್ಟು ಹಾಕಿದ್ದ ಸತ್ಯನಾರಾಯಣ ರೆಡ್ಡಿಯನ್ನೂ ಸಹ ಸಂಘಟನೆಯಿಂದ ಹೊರ ಕಳಿಸಲಾಯಿತು. ಸೈದ್ದಾಂತಿಕ ಸಂಘರ್ಷದಿಂದಾಗಿ ಈ ಇಬ್ಬರೂ ಬಲಿಷ್ಟ ಮುಖಂಡರನ್ನು ಕಳೆದುಕೊಂಡ ಕೊಂಡಪಲ್ಲಿಯವರು ಇಡೀ ಸಂಘಟನೆಯ ಹೊರೆಯನ್ನು ಹೊರಬೇಕಾಯಿತು.

ಪಿಪಲ್ಸ್ ವಾರ್ ಗ್ರೂಪ್‌ನ ಅಂಗ ಘಟಕಗಳಾಗಿ ಮತ್ತೇ ಹೊಸದಾಗಿ ರೈತು ಕೂಲಿ ಸಂಘಂ, ಕಿಸಾನ್ ಮಜ್ದೂರ್ ಸಂಘಟನೆ, ಮಹಿಳಾ ಶ್ರಾವಂತಿ ಮತ್ತು ಸಿಂಗರೇಣಿ ಕಲ್ಲಿದ್ದಲು ಕಾರ್ಮಿಕರ ಸಂಘಟನೆ ಇವುಗಳನ್ನು ಹುಟ್ಟು ಹಾಕಿ ಇವುಗಳ ನೇತೃತ್ವವನ್ನು ಜನನಾಟ್ಯ ಮಂಡಲಿಗೆ ವಹಿಸಿದರು. ಜೊತೆಗೆ ಇಡೀ ಸಂಘಟನೆಗೆ ಇರಬೇಕಾದ ಗುರಿಗಳನ್ನು ರೂಪಿಸಿದರು. ಪ್ರಮುಖವಾಗಿ

  1. ಭೂಮಿಯ ಮರು ಹಂಚಿಕೆ
  2. ಕೃಷಿ ಕೂಲಿ ಕಾರ್ಮಿಕರಿಗೆ ಕನಿಷ್ಟ ಕೂಲಿ ದರ
  3. ತಪ್ಪು ಎಸಗುವ ವ್ಯಕ್ತಿಗಳ ಮೇಲೆ ತೆರಿಗೆ ಅಥವಾ ದಂಡ ವಿಧಿಸುವುದು
  4. ಜನತಾ ನ್ಯಾಯಲಯಗಳ ಸ್ಥಾಪನೆ
  5. ಸರ್ಕಾರದ ಆಸ್ತಿಗಳನ್ನು ಧ್ವಂಸ ಮಾಡುವುದು
  6. ಸರ್ಕಾರಿ ನೌಕರರನ್ನು ಅಪಹರಣ ಮಾಡುವುದು
  7. ಪೊಲೀಸರ ಮೇಲೆ ದಾಳಿ
  8. ಕಟ್ಟು ನಿಟ್ಟಾದ ಸಾಮಾಜಿಕ ನ್ಯಾಯದ ಮರು ಸ್ಥಾಪನೆ ಇವುಗಳು ಮುಖ್ಯವಾಗಿದ್ದವು.

ಈ ಮೇಲ್ಕಂಡ ಗುರಿಗಳನ್ನು ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ 1987ರ ಅಕ್ಟೋಬರ್ 5 ರಂದು 60 ಜನರಿದ್ದ ನಕ್ಸಲಿಯರ ತಂಡ ಕರೀಂನಗರ ಜಿಲ್ಲೆಯ ರಾಮಗೊಂಡಂ ಎಂಬ ಕಲ್ಲಿದ್ದಲು ಗಣಿಗಾರಿಕೆ ನಡೆಯುವ ಪಟ್ಟಣದ ರೈಲ್ವೆ ನಿಲ್ದಾಣದ ಬಳಿ ಸರಕು ಸಾಗಾಣಿಕೆ ರೈಲಿನ ಮೇಲೆ ದಾಳಿ ಮಾಡಿದರು. 1988ರ ಮಾರ್ಚ್ 1 ರಂದು ಕಾಗಜ್ ಪುರ್ ರೈಲ್ವೆ ನಿಲ್ದಾಣದ ಮೇಲೆ ದಾಳಿ ಮಾಡಿ ಬೆಂಕಿ ಹಚ್ಚಿದರು. ಇವುಗಳ ನಡುವೆ ಸರ್ಕಾರಿ ಬಸ್‌ಗಳಿಗೆ ಬೆಂಕಿ ಹಚ್ಚುವುದು ಸಾಮಾನ್ಯವಾಗಿತ್ತು. 1988ರ ಮಾರ್ಚ್ 11ರಂದು ವಾರಂಗಲ್ ಜಿಲ್ಲೆಯಲ್ಲಿ ನಕ್ಸಲ್ ಸಂಘಟನೆಯ ಪ್ರಮುಖ ನಾಯಕನಾಗಿದ್ದ ದಗ್ಗು ರಾಯಲಿಂಗು ಎಂಬಾತನನ್ನು ಆಂಧ್ರ ಪೊಲೀಸರು ಎನ್ಕೌಂಟರ್ ಹತ್ಯೆ ಮಾಡಿದ ಹಿನ್ನೆಲೆಯಲ್ಲಿ ಇದಕ್ಕೆ ಪ್ರತಿಕಾರವಾಗಿ ಕರೀಂ ನಗರ ಮತ್ತು ವಾರಂಗಲ್ ಜಿಲ್ಲೆಯಲ್ಲಿ ಪಿ.ಡಬ್ಲ್ಯು.ಜಿ. ಗ್ರೂಪ್‌ನ ನಕ್ಸಲ್ ಸದಸ್ಯರಿಂದ ಹಿಂಸಾಚಾರ ಭುಗಿಲೆದ್ದಿತು. ಎರಡು ರೈಲ್ವೆ ನಿಲ್ದಾಣಗಳು, ಅಸಂಖ್ಯಾತ ದೂರವಾಣಿ ವಿನಿಮಯ ಕೇಂದ್ರಗಳು, ಬಾನುಲಿ ಮರು ಪ್ರಸಾರದ ಕೇಂದ್ರಗಳು ಮತ್ತು ಬೀಡಿ ತಯಾರಿಕೆಗೆ ಬಳಸುವ ಎಲೆಗಳನ್ನು ಶೇಖರಿಸಿ ಇಟ್ಟಿದ್ದ ಗೋದಾಮುಗಳು ಬೆಂಕಿಗೆ ಆಹುತಿಯಾದವು.

ಪೊಲೀಸರಿಂದ ಸೆರೆಯಾದ ತಮ್ಮ ಸಹಚರರನ್ನು ಬಿಡುಗಡೆ ಮಾಡಿಸಲು ಸರ್ಕಾರಿ ಅಧಿಕಾರಿಗಳನ್ನು ಅಪಹರಿಸುವ ಕಾರ್ಯತಂತ್ರವನ್ನು ಸಹ ರೂಪಿಸಲಾಯಿತು. 1987ರ ಡಿಸಂಬರ್ 27ರಂದು ಗೋದಾವರಿ ಜಿಲ್ಲೆಯಲ್ಲಿ ಪುಲಿಮಾಟು ಎಂಬ ಹಳ್ಳಿಯಲ್ಲಿ ಏರ್ಪಡಿಸಲಾಗಿದ್ದ ಬುಡಕಟ್ಟು ಜನರ ಅಭಿವೃದ್ಧಿ ಕುರಿತ ಸಮಾವೇಶ ಮುಗಿಸಿ ಬರುತಿದ್ದ ಆರು ಮಂದಿ ಐ.ಎ.ಎಸ್. ಅಧಿಕಾರಿಗಳನ್ನು ನಕ್ಸಲರು ಅಪಹರಿಸಿದರು. ಇವರಲ್ಲಿ ಆಂಧ್ರ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೂಡ ಇದ್ದುದು ವಿಶೇಷವಾಗಿತ್ತು. ಸರ್ಕಾರ ಬಂಧಿಸಿದ್ದ ಎಂಟು ಮಂದಿ ನಕ್ಸಲ್ ನಾಯಕರನ್ನು ಬಿಡುಗಡೆ ಮಾಡಬೇಕು, ಇಲ್ಲದಿದ್ದರೆ ಅಪಹೃತರನ್ನು ಕೊಲ್ಲುವದಾಗಿ ಬೆದರಿಕೆ ಹಾಕಿದರು. ದಿಲ್ಲಿಯಿಂದ ಕಮಾಂಡೋ ಕರೆಸಿ ಅರಣ್ಯ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಲು ಮುಂದಾದ ಸರ್ಕಾರ ನಂತರ ನಕ್ಸಲಿಯರ ಒತ್ತಡಕ್ಕೆ ಮಣಿದು ರಾಜಮಂಡ್ರಿ ಜೈಲಿನಲ್ಲಿದ್ದ ನಾಯಕರನ್ನು ಬಿಡುಗಡೆ ಮಾಡಿತು.

ಈ ಘಟನೆಯಿಂದ ಆತ್ಮ ಸ್ಥೈರ್ಯ ಹೆಚ್ಚಿಸಿಕೊಂಡ ನಕ್ಸಲಿಯರು ಮುಖ್ಯಮಂತ್ರಿಯಾಗಿದ್ದ ಎನ್.ಟಿ. ರಾಮರಾವ್‌ರವರ ಅಳಿಯ ಹಾಗೂ ಸಚಿವ ಸಂಪುಟದಲ್ಲಿ ಸಚಿವರಾಗಿದ್ದ ವೆಂಕಟೇಶ್ವರ ರಾವ್ ಇವರ ತಂದೆಯನ್ನು ಪ್ರಕಾಶಂ ಜಿಲ್ಲೆಯಲ್ಲಿ ಗುಂಡಿಟ್ಟು ಕೊಂದರು. ಈ ಹತ್ಯೆಯಿಂದ ಭಯ ಭೀತರಾದ ತೆಲುಗು ದೇಶಂ ಪಕ್ಷದ ಶಾಸಕರು, ಸಂಸದರು, ಗ್ರಾಮ ಪಂಚಾಯತ್ ಅಧ್ಯಕ್ಷರು ತಮ್ಮ ಊರುಗಳನ್ನು ಬಿಟ್ಟು ನಗರಗಲ್ಲಿ ವಾಸಿಸತೊಡಗಿದರು.

ತೆಲಂಗಾಣ ಪ್ರಾಂತ್ಯದಲ್ಲಿ ನಕ್ಸಲ್ ಚಟುವಟಿಕೆ ನಿಯಂತ್ರಿಸಲು ಹಾಗೂ ನಕ್ಸಲ್ ಹೋರಾಟವನ್ನು ಸದೆಬಡಿಯಲು ಅರಣ್ಯದಲ್ಲಿ ಪೊಲೀಸರ ತರಬೇತಿ ಶಿಬಿರ ಪ್ರಾರಂಭಿಸಿದ  ಸರ್ಕಾರದ ನಿರ್ಧಾರದ ವಿರುದ್ಧ ಸಿಡಿದೆದ್ದ ಪಿ.ಡಬ್ಲ್ಯು.ಜಿ. ಕಾರ್ಯಕರ್ತರು ಪ್ರತಿಕಾರವಾಗಿ ಒಬ್ಬ ಡಿ.ವೈ.ಎಸ್.ಪಿ. ಹಾಗೂ ಪೊಲೀಸ್ ಇನ್ಸ್‌ಪೆಕ್ಟರ್‌ನನ್ನು ಹತ್ಯೆಗೈದರು. 1987ರಲ್ಲಿ ಆಂಧ್ರದಲ್ಲಿ ಹತ್ಯೆಯಾದ ಪೊಲೀಸರ ಸಂಖ್ಯೆ ನಿಜಕ್ಕೂ ಗಾಬರಿ ಮೂಡಿಸುವ ಸಂಗತಿಯಾಯಿತು. 1984 ರಲ್ಲಿ ಎರಡು, 1985 ರಲ್ಲಿ ಆರು, 1986 ರಲ್ಲಿ ನಾಲ್ಕು ಮಂದಿ ಪೊಲೀಸರು ಹತ್ಯೆಯಾದರೆ, 87ರ ಒಂದೇ ವರ್ಷದಲ್ಲಿ ಅಧಿಕಾರಿಗಳು ಸೇರಿ ಇಪ್ಪತ್ತೈದು ಮಂದಿ ಪೊಲೀಸ್ ಸಿಬ್ಬಂದಿ ಹತ್ಯೆಯಾಗಿದ್ದರು.

ಆಂಧ್ರದ ಉತ್ತರದ ತೆಲಂಗಾಣದ ಪ್ರಾಂತ್ಯದಲ್ಲಿ ಪರ್ಯಾಯ ಸರ್ಕಾರವನ್ನೇ ನಡೆಸತೊಡಗಿದದ ಪಿ.ಡಬ್ಲ್ಯು.ಜಿ. ನಕ್ಸಲ್ ಸಂಘಟನೆ ಹಳ್ಳಿಗಳಲ್ಲಿ ಸಾರಾಯಿ ಮಾರಾಟವನ್ನು ನಿಷೇಧಿಸಿತು. ತಾಲೂಕು ಕೇಂದ್ರ ಸೇರಿದಂತೆ ಜಿಲ್ಲಾ ಕೇಂದ್ರಗಳಲ್ಲಿ ವ್ಯಾಪಕವಾಗಿ ನಡೆಯುತ್ತಿದ್ದ ವೈಶ್ಯಾವಾಟಿಕೆಯ ಚಟುವಟಿಕೆಗಳಿಗೆ ನಿಯಂತ್ರಣ ಹೇರಲಾಯಿತು. ತಮ್ಮ ಮಾತು ಮೀರಿದ ಸಾರಾಯಿ ಗುತ್ತಿಗೆದಾರರನ್ನು ಬಂಧಿಸಿ, ಅವರಿಗೆ ದಂಡ ವಿಧಿಸಿ, ತಪ್ಪೊಪ್ಪಿಗೆ ಪತ್ರ ಬರೆಸಿ ಬಿಡುಗಡೆಗೊಳಿಸಲಾಯಿತು. ತಮ್ಮ ಚಲನ ವಲನಗಳ ಕುರಿತಂತೆ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದ 197 ಮಂದಿ ಮಾಹಿತಿದಾರರ ಕೈ ಕಾಲುಗಳನ್ನು ನಿರ್ಧಯವಾಗಿ ಕತ್ತರಿಸಿ ಶಾಶ್ವತ ಅಂಗವಿಕಲರನ್ನಾಗಿ ಮಾಡಲಾಯಿತು. ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಜೂಜಾಟ ನಿಷೇಧಿಸಿ ಕರಪತ್ರ ಹಂಚಲಾಯಿತು. ಕರೀಂ ನಗರ ಜಿಲ್ಲಾ ಕೇಂದ್ರದ ಇಬ್ಬರು ಬಾರ್ ಮಾಲೀಕರನ್ನು ನಡು ರಸ್ತೆಯಲ್ಲಿ ಮನಸ್ಸೋ ಇಚ್ಚೆ ಥಳಿಸಿ ಬೆತ್ತಲೆ ಮೆರವಣಿಗೆ ಮಾಡಲಾಯಿತು. ನಕ್ಸಲಿಯರ ಇಂತಹ ನಿರ್ಧಾಕ್ಷಿಣ್ಯ ಕ್ರಮಗಳಿಂದಾಗಿ ತೆಲಂಗಾಣ ಪ್ರಾಂತ್ಯದ ಜಿಲ್ಲೆಗಳಲ್ಲಿ ಕೆಲಸ ಮಾಡುವ ಪೊಲೀಸರು, ಅರಣ್ಯಾಧಿಕಾರಿಗಳು, ಕಂದಾಯ ಇಲಾಖೆಯ ಅಧಿಕಾರಿಗಳು ತಮ್ಮ ಜೀವವನ್ನು ಅಂಗೈಯಲ್ಲಿ ಹಿಡಿದು ನಿಷ್ಟೆಯಿಂದ ಕೆಲಸ ಮಾಡುವಂತಾಯಿತು. ಇದರ ಪರಿಣಾಮವಾಗಿ ತೆಲಂಗಾಣ ಜಿಲ್ಲೆಗಳಲ್ಲಿ ಭ್ರಷ್ಟಾಚಾರಕ್ಕೆ ಇನ್ನಿಲ್ಲದಂತೆ ಕಡಿವಾಣ ಬಿದ್ದಿತು.

 (ಮುಂದುವರಿಯುವುದು)

Leave a Reply

Your email address will not be published. Required fields are marked *