Daily Archives: November 2, 2012

ಇದು “ದೇಶ-ಕಾಲ”ದ ಚರ್ಚೆ

– ಮೇಘನಾದ

ವಿವೇಕ್ ಶಾನುಭಾಗರ ‘ದೇಶ ಕಾಲ’ – ಸಾಹಿತ್ಯಕ ಪತ್ರಿಕೆಯ ವಿಶೇಷ ಸಂಚಿಕೆ ಹುಟ್ಟುಹಾಕಿದ ಚರ್ಚೆಯ ಸಂಗ್ರಹ ರೂಪ ಈ ಪುಸ್ತಕ. ಗೌರಿ ಲಂಕೇಶ್ ಪತ್ರಿಕೆಯಲ್ಲಿ ಪ್ರಕಟವಾದ ಲೇಖನಗಳು ಆಗಲೇ ಬಹು ಓದುಗರನ್ನು ತಲುಪಿದ್ದವು. ಈಗ ಪುಸ್ತಕ ರೂಪದಲ್ಲಿ ಹೊರಬಂದಿವೆ. ಅಗ್ನಿ ಪತ್ರಿಕೆಯಲ್ಲಿ ಹೆಚ್ಚು-ಕಮ್ಮಿ ಒಂದು ದಶಕದ ಹಿಂದೆ ಮೊಗಳ್ಳಿ ಗಣೇಶ್ ರ ಕಾಲಂ ‘ತಕರಾರು’ ಹುಟ್ಟುಹಾಕಿದ್ದ ಚರ್ಚೆ ಥಟ್ಟನೆ ನೆನಪಾಗುತ್ತದೆ. ಎರಡೂ ಚರ್ಚೆಯ ಸಂದರ್ಭಗಳು ಮತ್ತು ವ್ಯಾಪ್ತಿ ಭಿನ್ನವಾದರೂ, ಮಂಜುನಾಥ್ ಲತಾ ಮತ್ತು ಐಜೂರ್ ಎತ್ತಿರುವ ಪ್ರಶ್ನೆಗಳಿಗೂ ಮೊಗಳ್ಳಿಯವರ ತಕರಾರಿಗೂ ಸಾಮ್ಯ ಇದೆ. ಈ ಇಬ್ಬರು ಗೆಳೆಯರು, ‘ತಕರಾರು’ ಎತ್ತಿದ ಪ್ರಶ್ನೆಗಳನ್ನು ದೇಶಕಾಲದ ವಿಶೇಷ ಸಂಚಿಕೆ ನೆಪದಲ್ಲಿ ಮತ್ತಷ್ಟು ಹಿಗ್ಗಿಸಿದರು ಹಾಗೂ ಸಾಂಸ್ಕೃತಿಕ ಲೋಕದ ಬಹುಮಂದಿಯನ್ನು ಚರ್ಚೆಯಲ್ಲಿ ಪಾಲ್ಗೊಳ್ಳುವಂತೆ ಮಾಡಿದರು.

ಐದು ವರ್ಷಗಳ ಹರೆಯದ ಪತ್ರಿಕೆಯೊಂದು ಒಂದು ಶತಮಾನದ ಲೇಖಕರನ್ನು, ಕವಿಗಳ ಪಟ್ಟಿ ಪ್ರಕಟಿಸುವ ಮೂಲಕ ಸಾಂಸ್ಕೃತಿಕ ಲೋಕದ ಯಾಜಮಾನಿಕೆಯನ್ನು ವಹಿಸಿಕೊಳ್ಳಲು ಹೊರಟ್ಟಿದ್ದರಿಂದಲೇ ಈ ಚರ್ಚೆ ಸಾಧ್ಯವಾಯಿತು. ಜೊತೆಗೆ ನಾಡಿನ ಪ್ರಮುಖ ಪತ್ರಿಕೆಗಳು ವಿಶೇಷ ಸಂಚಿಕೆ ಬರುವ ಮುನ್ನ, ನಂತರ ಸಾಹಿತ್ಯ ಜಗತ್ತಿನಲ್ಲಿ ಏನೋ ಒಂದು ಅದ್ಭುತ ಘಟಿಸಿದೆಯೇನೋ ಎಂಬಂತೆ ನಡೆದುಕೊಂಡದ್ದೂ ಚರ್ಚೆಯ ಅಗತ್ಯತೆಯನ್ನು ತೀವ್ರಗೊಳಿಸಿತು. ಹಲವಾರು ವರ್ಷಗಳಿಂದ ಪ್ರಕಟಣೆಯಲ್ಲಿರುವ ಹತ್ತಾರು ಪತ್ರಿಕೆಗಳಿಗೆ ಸಿಗದ ಪ್ರಚಾರ ಒಂದು ಪತ್ರಿಕೆಗೆ ಸಿಕ್ಕಾಗ, ಕೇವಲ ಅದು ಮಾತ್ರ ಸಾಂಸ್ಕೃತಿಕ ಲೋಕದ ನಿಜಗನ್ನಡಿ ಎಂದು ಬಿಂಬಿತವಾಗುವ ಅಪಾಯವಿತ್ತು. ಇದನ್ನು ಮನಗಂಡು ಮಂಜುನಾಥ್ ಲತಾ ಮತ್ತು ಐಜೂರ್ ಚರ್ಚೆ ಆರಂಭಿಸಿದರು.

ಇವರ ಕಟು ನಿಷ್ಠುರ ಮಾತುಗಳಲ್ಲಿ ಹೇಳಬೇಕಾದ್ದನ್ನು ಹೇಳಲು ಹೋದಾಗ ಅನೇಕರು ದಂಗಾದರು. ಇದು ವಿಮರ್ಶೆಯ ಭಾಷೆಯಲ್ಲ ಎಂದು ಹೇಳುತ್ತಲೇ ಹಿರಿಯರು ಚರ್ಚೆಗೆ ಸ್ಪಂದಿಸಿದರು. ವಿಶೇಷ ಸಂಚಿಕೆಯಲ್ಲಿ ಶತಮಾನದ ಲೇಖಕರು, ಕವಿಗಳು ಎಂದೆಲ್ಲಾ ಕರೆಸಿಕೊಂಡಿದ್ದವರೇ ತೀವ್ರ ಮುಜುಗರದಿಂದ ತಮ್ಮ ಅಭಿಪ್ರಾಯವನ್ನು ದಾಖಲಿಸಿದರು. (ಮತ್ತೆ ಕೆಲವರು ತಾವು ಆ ಮಾನ್ಯತೆಗೆ ಅರ್ಹರಲ್ಲ ಎಂದು ಒಳಗೊಳಗೇ ಅನ್ನಿಸಿದರೂ, ಬೇಸರವನ್ನು ಬಹಿರಂಗವಾಗಿ ವ್ಯಕ್ತಪಡಿಸಿ ಯಾಕೆ ರಾಡಿ ಮಾಡಿಕೊಳ್ಳುವುದು ಎಂದು ತಮಗೆ ಪುಕ್ಕಟೆ ಸಿಕ್ಕ ಮಾನ್ಯತೆ ಬಗ್ಗೆ ಚರ್ಚಿಸಲು ಹೋಗಲಿಲ್ಲ). ಚರ್ಚೆಯ ಹಾದಿಯಲ್ಲಿ ಹಲವರಿಗೆ ಬೇಸರ, ಸಂಕಟ, ಸಿಟ್ಟು..ಹೀಗೆ ಏನೆಲ್ಲಾ ಆಗಿದ್ದರೂ, ಇಂತಹದೊಂದು ಚರ್ಚೆ ಅಗತ್ಯವಿತ್ತು. ಕಾರಣ, ಈ ಚರ್ಚೆಯ ಮೂಲಕ, ತಮಗನ್ನಿಸಿದ್ದನ್ನು ಹೇಳಲು ಸೂಕ್ತ ಸಮಯಕ್ಕಾಗಿ ಕಾದು ಕುಳಿತಿದ್ದ ಅನೇಕರಿಗೆ ವೇದಿಕೆ ದೊರೆತಿದೆ.

ಜಿ.ರಾಜಶೇಖರ್ ಮತ್ತು ಕೆ.ಫಣಿರಾಜ್ ‘ದೇಶ ಕಾಲ’ದ ಪರವಾಗಿ ನಿಲ್ಲುತ್ತಾರೆ. ಅವರ ವಾದಗಳಲ್ಲಿ ಒಪ್ಪಿಕೊಳ್ಳಲು ಕಷ್ಟವಾಗುವ ಸಂಗತಿಗಳು ಬೇಕಾದಷ್ಟಿದ್ದರೂ, ಚರ್ಚೆಯಲ್ಲಿ ಪಾಲ್ಗೊಂಡ ಕಾರಣ ಅವರನ್ನು ಮೆಚ್ಚಲೇ ಬೇಕು. ಅವರು ‘ದೇಶ ಕಾಲ’ದ ಸಂಪಾದಕರಿಗಿಂತ ಭಿನ್ನವಾಗಿ ನಿಲ್ಲುವುದೇ ಅಲ್ಲಿ. (ಇಂತಹ ಚರ್ಚೆ ನಡೆಯುತ್ತಿದ್ದರೂ, ಪ್ರತಿಕ್ರಿಯಿಸದೆ ಉದಾಸೀನ ತೋರಿಸಲು ಸಂಪಾದಕರಿಗೆ ಸಾಧ್ಯವಾಯಿತು.) ಹಿರಿಯ ಜೀವಿಯೊಬ್ಬರು ಆಪ್ತ ವಲಯದಲ್ಲಿ ‘ಆ ಹುಡುಗರು ಏನೆಲ್ಲಾ ಬರೆದಿದ್ದಾರೆ, ಕಪಾಳಕ್ಕೆ ಬಾರಿಸಬೇಕು..’ ಎಂದು ತುಸು ಕೋಪದಿಂದಲೇ ಹೇಳಿಕೊಂಡಂತೆ ಇವರಿಬ್ಬರೂ ಮಾತನಾಡಿಕೊಂಡು ಸುಮ್ಮನೆ ಇರಬಹುದಿತ್ತು, ಆದರೆ ಅವರು ಹಾಗೆ ಮಾಡಲಿಲ್ಲ. ಅದೇ ಕಾರಣಕ್ಕಾಗಿ ಇವರನ್ನು ಟೀಕಿಸಿದ ಹುಡುಗರು ಸಿಕ್ಕಾಗ ಇವತ್ತಿಗೂ ಅದೇ ಹಳೆಯ ನಗುವಿನಿಂದ, ವಿಶ್ವಾಸದಿಂದ ಮಾತನಾಡಿಸುತ್ತಾರೆ.

ಇದು ಪ್ರಸ್ತುತ ಸಂದರ್ಭದಲ್ಲಿ ಪ್ರಮುಖ ಕೃತಿ. ಮುಂದೆ ಕೆಲವು ವರ್ಷಗಳ ಮಟ್ಟಿಗಾದರೂ ಇಲ್ಲಿಯ ಬರಹಗಳು ಅಲ್ಲಲ್ಲಿ ಉಲ್ಲೇಖವಾಗುತ್ತವೆ, ಆ ಮೂಲಕ ಚರ್ಚೆ ಮುಂದುವರಿಯುತ್ತದೆ. ಆ ಕಾರಣ ಸಂಪಾದಕರಿಬ್ಬರು ಅಭಿನಂದನೆಗಳಿಗೆ ಅರ್ಹರು. ಜೊತೆಗೆ ಪ್ರಕಾಶಕರೂ ಕೂಡ. ಪ್ರಕಾಶಕರು ತಮ್ಮ ಮಾತುಗಳಲ್ಲಿ ಹೇಳಿಕೊಂಡಂತೆ, ಅವರು ಸಂಪಾದಕರ ಅಭಿಪ್ರಾಯಗಳನ್ನು ಸಂಪೂರ್ಣವಾಗಿ ಒಪ್ಪದೇ ಇದ್ದರೂ ಪ್ರಕಟಣೆಗೆ ಒಪ್ಪಿದ್ದಾರೆ. ಅಷ್ಟಲ್ಲದೇ, ಕೆಲ ಪ್ರಕಾಶಕರು ಪ್ರಕಟಿಸಲು ಒಪ್ಪಿ ಹಿಂದೆ ಸರಿದ ಮೇಲೂ ಇವರು ಆ ಜವಾಬ್ದಾರಿ ಹೊತ್ತರು ಎನ್ನುವುದು ಗಮನಾರ್ಹ. ಈ ಮಹತ್ವದ ಕೃತಿಯನ್ನು ಒಮ್ಮೆ ಕೊಂಡು ಓದಿ.


ಪುಸ್ತಕ: ದೇಶವಿದೇನಹಾ! ಕಾಲವಿದೇನಹಾ!!
ಸಂಪಾದಕರು: ಮಂಜುನಾಥ ಲತಾ ಮತ್ತು ಕೆ.ಎಲ್. ಚಂದ್ರಶೇಖರ್ ಐಜೂರ್
ಪ್ರಕಾಶನ: ಮೌಲ್ಯಾಗ್ರಹ ಪ್ರಕಾಶನ
ಪುಟ ಸಂಖ್ಯೆ: 184
ಬೆಲೆ: ರೂ 140.
ಪ್ರತಿಗಳಿಗಾಗಿ:
ಕೆ.ಎಲ್. ಚಂದ್ರಶೇಖರ್ ಐಜೂರ್ – 98809-14578
ಮಂಜುನಾಥ್ ಲತಾ – 91412-07031

ಹುಲಿಯ ನೆರಳಿನಲ್ಲಿ ನಾಮದೇವ ನಿಮಗಾಡೆ


-ಬಿ. ಶ್ರೀಪಾದ್ ಭಟ್


1920ರ ಸುಮಾರಿಗೆ ಮಹಾರಾಷ್ಟ್ರದ ಸತಗಾಂವ್ ಹಳ್ಳಿಯಲ್ಲಿ ದಲಿತ ಕುಟುಂಬದಲ್ಲಿ ಜನಿಸಿದ ನಾಮದೇವ ನಿಮಗಾಡೆ ಮುಂದೆ ದೊಡ್ಡ ವಿಜ್ಞಾನಿಯಾಗಿ, ಅಂಬೇಡ್ಕರ್‌ವಾದಿಯಾಗಿ ಮತ್ತು ಮುಖ್ಯವಾಗಿ ಮಾನವತಾವಾದಿಯಾಗಿ ರೂಪುಗೊಂಡ ಜೀವನ ವೃತ್ತಾಂತವನ್ನು ತಮ್ಮ ‘ಹುಲಿಯ ನೆರಳಿನೊಳಗೆ’ ಎನ್ನುವ ಆತ್ಮಕಥೆಯಲ್ಲಿ ವಿವರವಾಗಿ ದಾಖಲಿಸುತ್ತಾರೆ. ಅಸ್ಪೃಶ್ಯನಾಗಿ ಹುಟ್ಟಿದ್ದರ ಪರಿಣಾಮವಾಗಿ ತಮ್ಮ ಜೀವನದಲ್ಲಿ ಅನುಭವಿಸಿದ ಅವಮಾನ, ಶೋಷಣೆಗಳನ್ನು ಸರಳವಾಗಿ ಆದರೆ ಅರ್ಥಪೂರ್ಣವಾಗಿ, ಅನೇಕ ರೀತಿಯ ಶೋಷಣೆಯ ಘಟನೆಗಳನ್ನು ವಿನೋದದ ಧಾಟಿಯಲ್ಲಿ (ನಮ್ಮ ಕವಿ ಸಿದ್ಧಲಿಂಗಯ್ಯನವರ ಮಾದರಿಯಲ್ಲಿ) ನಿರೂಪಿಸುತ್ತಾರೆ. 290 ಪುಟಗಳ ಆತ್ಮಕಥೆಯಲ್ಲಿ ಎಲ್ಲಿಯೂ ತಮ್ಮನ್ನು ಬಲಿಪಶುವಾಗಿ ಬಿಂಬಿಸಿಕೊಂಡಿಲ್ಲ, ಶ್ರೇಣೀಕೃತ ವ್ಯವಸ್ಥೆಯಲ್ಲಿ ನಾಲ್ಕೂ ಜಾತಿಗಳ ನಂತರ ಬರುವ, ಊರ ಹೊರಗೆ ಬದುಕುವ ಅಸ್ಪೃಶ್ಯನ ದುರಂತ ಬದುಕನ್ನು ಎಲ್ಲಿಯೂ ಸೌಂದರ್ಯೀಕರಿಸಿಲ್ಲ, ಅವಮಾನಗಳನ್ನು ಉತ್ಪ್ರೇಕ್ಷೀಕರಿಸಿಲ್ಲ, ಆತ್ಮಾನುಕಂಪದಲ್ಲಿ ತೇಲಿಸಿಲ್ಲ. ಆ ಮೂಲಕ ತಮ್ಮ ಅಂಬೇಡ್ಕರ್‌ವಾದಿಯೊಬ್ಬನ ಆತ್ಮಕಥೆಗೆ ಒಂದು ಮಾದರಿಯ ಹುತಾತ್ಮತೆಯ ಆಯಾಮವನ್ನು ನಿರಾಕರಿಸಿದ್ದಾರೆ. ತಾವು ಅಸ್ಪೃಶ್ಯನಾಗಿದ್ದಕ್ಕೆ ಮೇಲ್ಜಾತಿಯವರು ವಿಧಿಸಿದ ನಿರ್ಬಂಧನೆಗಳನ್ನು ಬಾಲ್ಯಕಾಲದಲ್ಲಿ ಮುರಿದಾಗ ಅನೇಕ ಬಾರಿ ದೈಹಿಕವಾಗಿ ಹಲ್ಲೆಗೊಳಗಾಗುತ್ತಾರೆ. ದೈಹಿಕವಾಗಿ ಮೈ ತುಂಬಾ ರಕ್ತದ ಗಾಯಗಳು ಮೂಡುವಂತೆ ಏಟು ತಿಂದ ತಮ್ಮ ಬಾಲ್ಯ ದಿನಗಳ ಕುರಿತಾಗಿ ನಾಮದೇವರು, “ನಾನು ಹೊಳೆಯಲ್ಲಿ ನನ್ನ ಕೈ ಮತ್ತು ಬಾಯಿಯನ್ನು ತೊಳೆದುಕೊಂಡು ಗಾಯವು ಬಹಿರಂಗವಾಗಿ ಗೋಚರಿಸದಂತೆ ಎಚ್ಚರಿಕೆ ವಹಿಸುತ್ತಿದ್ದೆ. ಈ ರೀತಿಯಾಗಿ ಶಾಲೆಯನ್ನು ಪ್ರವೇಶಿಸಿದ್ದಕ್ಕಾಗಿ, ಬಾವಿ ನೀರನ್ನು ಮುಟ್ಟಿದ್ದಕ್ಕಾಗಿ ನನಗೆ ಬಿದ್ದ ಏಟುಗಳ ಕುರಿತಾಗಿ ನನ್ನ ಹಳ್ಳಿಯಲ್ಲಿ ಯಾರೊಬ್ಬರೊಂದಿಗೂ ಹೇಳಿಕೊಳ್ಳುತ್ತಿರಲಿಲ್ಲ. ಆದರೆ ಈ ಸಮಾಜದ ಜಾತಿ ಆಧಾರಿತ ಹಲ್ಲೆಗಳ ಹಿನ್ನೆಲೆಗಳೆಲ್ಲವನ್ನು ಸಂಪೂರ್ಣವಾಗಿ ಅರಿತುಕೊಂಡಿದ್ದ ನನ್ನ ಪೋಷಕರಿಗೆ ಹರಿದ ನನ್ನ ಬಟ್ಟೆಗಳು ಎಲ್ಲವನ್ನೂ ಬಯಲುಗೊಳಿಸಿತ್ತು. ಹಾಗೂ ಇದಕ್ಕೆಲ್ಲ ಅವರು ಹೊಂದಿಕೊಂಡಂತ್ತಿದ್ದರು. ಆದರೆ ನಾನು ನನ್ನೊಳಗೆ ಬಲು ದೊಡ್ಡ ಪದವೀಧರನಾಗುವ ಕನಸನ್ನು ಗಟ್ಟಿಗೊಳಿಸುತ್ತ, ನನ್ನನ್ನು ನಾನು ಸ್ವತಃ ಅಭಿವೃದ್ಧಿಗೊಳಿಸಿಕೊಳ್ಳುತ್ತ, ಶೈಕ್ಷಣಿಕವಾಗಿಯೂ ಮತ್ತು ಸಾಮಾಜಿಕವಾಗಿಯೂ ಸ್ವಾವಲಂಬನೆ ಸಾಧಿಸುವತ್ತ ಪಯಣಿಸತೊಡಗಿದೆ,” ಎಂದು ಹೇಳುತ್ತಾರೆ.

ತಮ್ಮ ಈ  ಬದ್ಧತೆ ಮತ್ತು ಏಕಾಗ್ರತೆಯ ಫಲವಾಗಿ ನಾಗಪುರದಲ್ಲಿ ತಮ್ಮ ಪದವಿಯನ್ನು ಪೂರ್ಣಗೊಳಿಸಿದ ನಿಮಗಾಡೆಯವರು 1962ರಲ್ಲಿ ಅಮೇರಿಕಾದ ವಿಸ್ಕಾನಸಿನ್ ವಿಶ್ವವಿದ್ಯಾಲಯದಿಂದ ಮಣ್ಣು ವಿಜ್ಞಾನದಲ್ಲಿ ಪಿಎಚ್‌ಡಿಯನ್ನು ಪದವಿಯನ್ನು ಪೂರೈಸಿದರು. ಅಂಬೇಡ್ಕರ್ ನಂತರ ಅಮೇರಿಕಾ ವಿಶ್ವವಿದ್ಯಾಲಯದಲ್ಲಿ ಡಾಕ್ಟರೇಟ್‌ಅನ್ನು ಪಡೆದ ಎರಡನೇ ದಲಿತ ನಾಮದೇವ ನಿಮಗಾಡೆ.

ಅಂಬೇಡ್ಕರ್ ಅವರನ್ನು ಧಗಧಗಿಸುವ, ಪ್ರಜ್ವಲವಾಗಿ ಸುಡುತ್ತಿರುವ ಹುಲಿಯೆಂದು ವರ್ಣಿಸಿದ ನಿಮಗಾಡೆ ಅಂಬೇಡ್ಕರ್ ಅವರ ಕಟ್ಟಾ ಅನುಯಾಯಿ. ಅಂಬೇಡ್ಕರ್ ಅವರೊಂದಿಗೆ ಒಮ್ಮೆ ಸಂವಾದದಲ್ಲಿದ್ದಾಗ ನಿಮಗಾಡೆಯವರು ಅವರನ್ನು ನೀವೇಕೆ ನಿಮ್ಮ ಆತ್ಮ ಕಥೆಯನ್ನು ಬರೆಯಬಾರದು ಎಂದು ಪ್ರಶ್ನಿಸುತ್ತಾರೆ. ಅದಕ್ಕೆ ಅಂಬೇಡ್ಕರ್ ಅವರು ಬೇರೆಯವರ ಹಾಗೂ ಇತರೇ ವಿಷಯಗಳ ಕುರಿತಾಗಿ ಬರೆಯುವುದು ಬಹಳ ಸುಲಭ. ಆದರೆ ನನ್ನದೇ ಆತ್ಮಚರಿತ್ರೆಯನ್ನು ಬರೆಯಲು ಮಾತ್ರ ವರ್ಷಗಳೇ ಬೇಕಾಗುತ್ತವೆ ಎಂದು ಮಾರ್ಮಿಕವಾಗಿ ಉತ್ತರಿಸುತ್ತಾರೆ. ಕಳೆದ 50 ವರ್ಷಗಳಲ್ಲಿ ಅತ್ಯಂತ ಮೇಧಾವಿ ಹಾಗೂ ಸಂಪೂರ್ಣವಾಗಿ ಸಮರ್ಪಿತ ಅಂಬೇಡ್ಕರ್‌ವಾದಿಯಾಗಿ ತಮ್ಮನ್ನು ಹಾಗೂ ತಮ್ಮ ಸಾರ್ವಜನಿಕ ಮತ್ತು ವೈಯುಕ್ತಿಕ ಬದುಕನ್ನು ಕಟ್ಟಿಕೊಳ್ಳುತ್ತಾರೆ ನಾಮದೇವ ನಿಮಗಾಡೆ.

ತಮ್ಮ ಮನೆತನದ ಹೆಸರಾದ ನಿಮಗಾಡೆ ಕುರಿತಾಗಿ ಹಾಗೂ ಇತರ ದಲಿತರ ಜಾತಿ ಸೂಚಕ ಹೆಸರಿನ ಕುರಿತಾಗಿ ಅತ್ಯಂತ ಸ್ವಾರಸ್ಯಕರವಾಗಿ ಹೀಗೆ ಬರೆಯುತ್ತಾರೆ: “ನನ್ನ ಮನೆತನದ ಹೆಸರಾದ ನಿಮಗಾಡೆ ಮೂಲತಃ ಬೇವಿನ ಮರವನ್ನು ಆಧರಿಸಿದ ಹೆಸರು. ಈ ಬೇವಿನ ಮರವು ಅನೇಕ ನೋವು ಉಪಶಮನಕ ಗುಣಗಳನ್ನು ಹೊಂದಿದೆ. ಇದೇ ರೀತಿಯಾಗಿ ನಮ್ಮ ಅಸ್ಪೃಶ್ಯ ಮನೆತನಗಳಲ್ಲಿ ಅನೇಕ ಉಪಯುಕ್ತ ಗಿಡಗಳ ಹೆಸರನ್ನೇ ತಮ್ಮ ಮನೆತನದ ಹೆಸರನ್ನಾಗಿ ಇಟ್ಟುಕೊಳ್ಳುತ್ತಾರೆ. ಉದಾಹರಣೆಗೆ ನನ್ನ ಭಾವ ಮೈದುನನ ಮನೆತನದ ಹೆಸರು ‘ಕೋಬ್ರಗಾಡೆ’. ಅದರರ್ಥ ತೆಂಗಿನ ಮರ. ಅದೇ ರೀತಿ ಮತ್ತೊಂದು ದಲಿತ ಮನೆತನದ ಹೆಸರು ‘ಅಂಬಗಾಡೆ’. ಅದರರ್ಥ ಮಾವಿನ ಗಿಡ. ‘ಜಮಗಾಡೆ’ ಎಂದರೆ ಸೀಬೆ ಮರ. ‘ಬೋರ್ಕರ್ ಎಂದರೆ ಚೆಕ್ಕಕಾಯಿ. ಈ ಮಾದರಿಯ ಹೆಸರುಗಳು ಬುದ್ಧನ ಕಾಲದಿಂದಲೇ ಬಳಕೆಯಲ್ಲಿವೆ. ಇದು ಭಾರತದ ಅಸ್ಪೃಶ್ಯರು ಮೂಲಭೂತವಾಗಿ ಬೌಧ್ಧರು ಎಂದು ಸಾಬೀತಾಗುತ್ತದೆ.”

ತಮ್ಮ ಅಜ್ಜ, ಅಜ್ಜಿಯರಾದ ಬುಧ ಮತ್ತು ಸಗುಣ ಅವರ ಕುರಿತಾಗಿ ಅತ್ಯಂತ ಹೃದಯಂಗಮವಾಗಿ ಬರೆಯುತ್ತಾರೆ, “ನನ್ನ ತಾತ ಬುಧ ಅವರೊಂದಿಗೆ ಹರೆಯದಲ್ಲಿ ನಿಶ್ಚಿತಾರ್ಥಗೊಂಡ ಮಹಿಳೆ ಸಿಡುಬು ರೋಗಿದಿಂದ ಮೃತವಾದಳು. ಇದರಿಂದ ತೀವ್ರವಾಗಿ ಬೇಸರಗೊಂಡ ನನ್ನ ತಾತ ಬುಧ ಒಬ್ಬ ಹಕೀಮನಾಗಿ ಹಳ್ಳಿಗಳನ್ನು ತಿರುಗುತ್ತಿದ್ದ. ಇಂತಹ ಸಂದರ್ಭದಲ್ಲಿ ಆಕಸ್ಮಾತ್ತಾಗಿ 30ರ ಹರೆಯದ, ಮಕ್ಕಳನ್ನು ಕಳೆದುಕೊಂಡ ವಿಧವೆಯಾದ ನನ್ನ ಅಜ್ಜಿ ಸಗುಣಳನ್ನು ಭೇಟಿಯಾಗಿ ಆಕೆಯನ್ನೇ ವಿವಾಹವಾದ. ಆ ಕಾಲದಲ್ಲಿ ನನ್ನ ತಾತ ವಿಧವೆಯನ್ನು ವಿವಾಹವಾಗಿದ್ದು ಒಂದು ಕ್ರಾಂತಿಕಾರಿ ನಡೆಯಾಗಿತ್ತು.”

ಸುಮಾರು 30ರ ದಶಕದಲ್ಲಿನ ತಮ್ಮ ಬಾಲ್ಯದ ದಿನಗಳಲ್ಲಿ ಅಚಾನಕ್ಕಾಗಿ ತಮ್ಮ ಸೋದರ ಮಾವನಿಂದ ದೊರೆತ ಬಂಗಾರದ ಬಣ್ಣದ ಅಂಚುಳ್ಳ ಟೋಪಿಯನ್ನು ಧರಿಸಿ ಶ್ರೀಮಂತರ, ಮೇಲ್ಜಾತಿಗಳ ಬೀದಿಗಳಲ್ಲಿ ಹೆಮ್ಮೆಯಿಂದ ಅಡ್ಡಾಡಿದ್ದನ್ನು ಬರೆಯುತ್ತ ‘ಈ ಬಂಗಾರದ ಬಣ್ಣದ ಅಂಚುಳ್ಳ ಟೋಪಿಯು ನನಗೆ ಒಂದು ಬಗೆಯ ಆತ್ಮ ವಿಶ್ವಾಸವನ್ನು ದೊರಕಿಸಿಕೊಟ್ಟಿತ್ತು. ಈ ಟೋಪಿಯನ್ನು ಧರಿಸಿದ ಕ್ಷಣ ನನ್ನ ಅಸ್ಪೃಶ್ಯತೆಯೇ ಕೊನೆಗಂಡಂತೆ ನನಗನ್ನಿಸುತ್ತಿತ್ತು. ಈ ಟೋಪಿಯು ನಾನು ತಲೆಯೆತ್ತಿ ಬದುಕುವ ಮೊದಲ ಅವಕಾಶವನ್ನು ದೊರಕಿಸಿತ್ತು. ಒಮ್ಮೆ ಈ ಟೋಪಿಯನ್ನು ಧರಿಸಿ ಗಲ್ಲಿಗಳಲ್ಲಿ ಅಡ್ಡಾಡುತಿದ್ದಾಗ ಆಗ ಭಾರತ್ ಮಾತಾಕಿ ಜೈ, ಮಹಾತ್ಮ ಗಾಂಧೀಕಿ ಜೈ, ಎಂದು ಕೂಗುತ್ತ ಹೊರಟ ಗುಂಪೊಂದು ನನ್ನನ್ನೂ ಹಾಗೂ ನನ್ನ ಟೋಪಿಯನ್ನು ಕಂಡು ತೀವ್ರವಾಗಿ ಆಕ್ಷೇಪಿಸಿ ನನ್ನ ಘನತೆಯ, ಜೀವದ ಟೋಪಿಯನ್ನು ಕಸಿದುಕೊಂಡು ಬೆಂಕಿಯಲ್ಲಿ ಬಿಸಾಡಿದರು! ಅಂದರೆ ನನ್ನ ಆತ್ಮಸಾಕ್ಷಿಯನ್ನು ಬೆಂಕಿಯಲ್ಲಿ ಸುಟ್ಟರು! ಇದು ವಿದೇಶಿ ವಸ್ತುಗಳನ್ನು, ಬಟ್ಟೆಗಳನ್ನು ಸುಡಬೇಕೆಂದು ಗಾಂಧಿ ನೀಡಿದ ಕರೆಗೆ ಓಗೊಟ್ಟು ಮೇಲಿನ ಗುಂಪು ನನ್ನ ಟೋಪಿಯನ್ನು ಸುಟ್ಟರು ಎಂದು ತದನಂತರ ನನಗೆ ಗೊತ್ತಾಯಿತು. ಆಗ ನನಗೆ ಮಹಾತ್ಮ ಗಾಂಧಿಯವರು ಒಬ್ಬ ರಾಕ್ಷಸನಂತೆ ಗೋಚರಿಸಿದರು!’ ಎಂದು ವಿವರಿಸುತ್ತಾರೆ. ಗಾಂಧಿಯ ಈ ಸ್ವದೇಶಿ ವ್ಯಾಮೋಹದ ಧೋರಣೆಗಳು ಕೇವಲ ಏಕಮುಖವಾದದ್ದು. ಈ ಏಕಮುಖ ಚಿಂತನೆಯು ದಲಿತರ ಆತ್ಮಸಾಕ್ಷಿಯ ಅನೇಕ ಸಂಕೇತಗಳನ್ನು, ಬಿಡುಗಡೆಯ ದಾರಿಗಳನ್ನು ನಾಶಗೊಳಿಸುತ್ತವೆ ಎಂದು ಅಂಬೇಡ್ಕರ್ ಅವರು ಕಟುವಾಗಿ ಟೀಕಿಸುತ್ತಾರೆ. ಇದನ್ನು ನಾಮದೇವ ನಿಮಗಾಡೆಯವರಿಗೆ ಉಂಟಾದ ಮೇಲಿನ ಅನುಭವವು ದೃಢಪಡಿಸುತ್ತದೆ.

ಬಾಲ್ಯದ ದಿನಗಳಲ್ಲಿನ ಅಸ್ಪೃಶ್ಯತೆಯ ಅನುಭವಗಳ ಕುರಿತಾಗಿ ಅತ್ಯಂತ ನಿರುದ್ವಿಗ್ನ ಶೈಲಿಯಲ್ಲಿ ಹೇಳುತ್ತಾರೆ: “ನನ್ನ ತಾತ ಒಬ್ಬ ಜೀತದಾಳಾಗಿದ್ದ. ಸವರ್ಣೀಯರೊಬ್ಬರ ಮನೆಯಲ್ಲಿ ದುಡಿಯುತ್ತಿದ್ದ. ಈ ಜಮೀನ್ದಾರರ ಮನೆಗಳಲ್ಲಿ ಮದುವೆಗಳು ನಡೆದಾಗ ನಮ್ಮನ್ನು ಅತ್ಯಂತ ಹೀನಾಯವಾಗಿ, ಬಿಡುವಿಲ್ಲದೆ ದುಡಿಸಿಕೊಳ್ಳುತ್ತಿದ್ದರು. ದಿನದ ಇಪ್ಪತ್ನಾಲ್ಕು ಗಂಟೆಗಳೂ ಅವರ ಜೀತಕ್ಕೆ ಮೀಸಲಾಗುತ್ತಿತ್ತು. ಇಂತಹ ಮದುವೆಯ ಸಂದರ್ಭದಲ್ಲಿ ಅಲಂಕಾರಭೂಷಿತನಾದ ಮದುಮಗನ ಸ್ವಗೃಹದಿಂದ ಮದುಮಗಳ ಮನೆವರೆಗೂ ಮೆರವಣಿಗೆಯು ನಡೆಯುತ್ತಿತ್ತು. ಈ ಮೆರವಣಿಗೆಗಾಗಿ ಅಂದವಾಗಿ ಸಿಂಗರಿಸಿದ ಎತ್ತಿನ ಬಂಡಿಯನ್ನು ಬಳಸುತ್ತಿದ್ದರು. ನಾನು ಮತ್ತು ನನ್ನ ಚಿಕ್ಕಪ್ಪ ಈ ಎತ್ತಿನ ಬಂಡಿಯ ಮುಂದೆ ಓಡುತ್ತಾ ಸಾಗಬೇಕು. ನಮ್ಮನ್ನು ಹಿಂಬಾಲಿಸಿ ಅಲಂಕಾರಭೂಷಿತ ಮದುಮಗನನ್ನು ಹೊತ್ತ ಎತ್ತಿನ ಗಾಡಿಯು ಅಟ್ಟಿಸಿಕೊಂಡು ನಮ್ಮನ್ನು ಬರುತ್ತಿತ್ತು. ಅದನ್ನು ಇನ್ನಷ್ಟು ಹುರುಪುಗೊಳಿಸಲು ಅಸ್ಪೃಶ್ಯರಾದ ನಾವು ಬರಿಗಾಲಲ್ಲಿ ಮತ್ತಷ್ಟು ವೇಗದಿಂದ ಓಡಬೇಕಾಗುತ್ತಿತ್ತು. ಮತ್ತಷ್ಟು ಹುರುಪುಗೊಂಡು ನಮ್ಮನ್ನು ಅಟ್ಟಿಸಿಕೊಂಡು ಮುದಮಗನ ಎತ್ತಿನ ಬಂಡಿ! ಈ ಬಿಡುವಿರದ ಓಟದ ಗುರಿ ಮದುಮಗಳ ಮನೆಯನ್ನು ತಲಪುವರೆಗೂ ನಿಲ್ಲುತ್ತಿರಲಿಲ್ಲ. ಮೇಲ್ಜಾತಿಯವರ ಸೃಷ್ಟಿಯಾದ ಅನೇಕ ಅಮಾನವೀಯ ಆಚರಣೆಗಳಲ್ಲೊಂದಾದ ಈ ನಮ್ಮ ಬರಿಗಾಲಿನ ಓಟದ ದುಃಸ್ಥಿತಿ ಅತ್ಯಂತ ಅಮಾನುಷವಾಗಿತ್ತು. ಆದರೆ ನಾವೆಲ್ಲ ಅಸಹಾಯಕರಾಗಿದ್ದೆವು .”

ಅಸ್ಪೃಶ್ಯನಾಗಿದ್ದರಿಂದ ದಲಿತರ ವಿರುದ್ಧದ ಸವರ್ಣೀಯರ ನಿಬಂಧನೆಗಳನ್ನು ಮುರಿದು ಶಾಲೆಯ ಒಳಗೆ ಪ್ರವೇಶಿಸಿದ್ದಕ್ಕಾಗಿ ಅನೇಕ ವೇಳೆ ಹಲ್ಲೆಗೊಳಗಾಗಿದ್ದ ನಿಮಗಾಡೆಯವರು ತಮ್ಮ ಆರಂಭದ ಶಾಲೆಯ ಅನುಭವಗಳ ಕುರಿತಾಗಿ ಹೇಳುತ್ತಾರೆ: “1934ರಲ್ಲಿ ನನ್ನ 14ನೇ ವಯಸ್ಸಿನಲ್ಲಿ ನಾನು ಶಾಲೆ ಸೇರಿಕೊಂಡೆ. ನನ್ನ ಹೆಸರನ್ನು ನೊಂದಾಯಿಸಿಕೊಳ್ಳುವ ದಿನದಂದು ಶಾಲೆಯ ಮುಖ್ಯೋಪಾಧ್ಯಾಯರು ನಾನು ಅಸ್ಪೃಶ್ಯನಾಗಿದ್ದಕ್ಕಾಗಿ ನಾನು ತರಗತಿಯೊಳಗೆ ಪ್ರವೇಶಿಸಬಾರೆದೆಂದು ಕಟ್ಟಪ್ಪಣೆಯನ್ನು ಕೊಟ್ಟಿದ್ದರು. ನಾನು ಶಾಲೆಯ ಹೊರಗಿನ ಬಿಸಿಲಿನ ವರಾಂಡದಲ್ಲಿ ನಿಂತು ಕಿಟಿಕಿಯ ಮೂಲಕ ಪಾಠವನ್ನು ಕಲಿಯಬೇಕಾಯಿತು. ನನ್ನ ಆ ಶಾಲೆಯ ಒಂದು ದೊಡ್ಡ ಹಾಲಿನಲ್ಲಿ ನಾಲ್ಕು ವಿವಿಧ ತರಗತಿಗಳ ಪಾಠಗಳು ನಡೆಯುತ್ತಿದ್ದವು. ಅಸ್ಪೃಶ್ಯನಾದ ನಾನು ಹೊರಗೆ ಬಿಸಿಲಿನಲ್ಲಿ ನಿಂತುಕೊಂಡು ಒಳಗಡೆ ನಡೆಯುವ ವಿಭಿನ್ನ ತರಗತಿಗಳ ಪಾಠಗಳನ್ನು ಕಲಿಯಬೇಕಾಗಿತ್ತು. ನಮಗೆ ಬಾಯಾರಿಕೆಯಾದಾಗಲೂ ಶಾಲೆಯ ಬಾವಿಯಿಂದ ನೀರನ್ನು ಕುಡಿಯುವಂತಿರಲಿಲ್ಲ. ನೀರಿಗಾಗಿ ದೂರದ ನಮ್ಮದೇ ಜಾತಿಯ ಹಟ್ಟಿಗಳಿಗೆ ಹೋಗಬೇಕಾಗುತ್ತಿತ್ತು. ನನ್ನ ಹಳ್ಳಿಯಾದ ಸತಗಾಂವ್‌ನಿಂದ ಈ ಶಾಲೆಗೆ ಸುಮಾರು ಏಳೆಂಟು ಹುಡುಗರು ಹೋಗುತ್ತಿದ್ದೆವು. ಇವರಲ್ಲಿ ನಾನೊಬ್ಬನೇ ಅಸ್ಪೃಶ್ಯನಾಗಿದ್ದೆ. ತದನಂತರ ಇನ್ನೂ ಮೂವರು ದಲಿತರು ನನ್ನ ಜೊತೆಗೂಡಿದರು. ನಾವೆಲ್ಲ ಒಂದೇ ಗುಂಪಿನವರಾಗಿದ್ದದ್ದು ಈ ಶ್ರೇಣೀಕೃತ ಸಮಾಜದಲ್ಲಿ ಸಹಜವಾಗಿತ್ತು. ಮಳೆಗಾಲದ ದಿನಗಳು ನಮಗೆ ಅತ್ಯಂತ ಕಷ್ಟದ ದಿನಗಳು. ಬರಿಗಾಲಲ್ಲಿ ನಡೆಯುತ್ತಿದ್ದರಿಂದ ಕಾಲಲ್ಲಿ ಚುಚ್ಚಿಕೊಳ್ಳುತ್ತಿದ್ದ ಮುಳ್ಳುಗಳಿಂದಾಗಿ ಅಪಾರ ಯಾತನೆಯನ್ನು ಅನುಭವಿಸಬೇಕಾಗಿತ್ತು. ಜೊತೆಗೆ ತೋಳ, ಹಾವುಗಳ ಕಾಟ. ಆದರೆ ಮೇಲ್ಜಾತಿಯ ಹುಡುಗರಿಗೆ ಈ ನೈಸರ್ಗಿಕವಾಗಿ ಅಪಾಯಕಾರಿಯಾದ ಜೀವಜಂತುಗಳಿಗಿಂತ  ವ್ಯವಸ್ಥೆಯೊಳಗೆ ಬದುಕುತ್ತಿರುವ ಅಸ್ಪೃಶ್ಯರಾದ ನಾವು ಹೆಚ್ಚು ಬೆದರಿಕೆಯ, ಅನಿಷ್ಟದ ಸೂಚನೆಗಳಾಗಿದ್ದೆವು.”

ಈ ಭಾಗಗಳಲ್ಲಿ ನಿಮಗಾಡೆಯವರು ತಾವು ಜಾತಿ ನಿರ್ಬಂಧಿತ ಸಂಕೋಲೆಗಳನ್ನು ಮುರಿದಿದ್ದಕ್ಕಾಗಿ ಅನುಭವಿಸಿದ ಅನೇಕ ಕಷ್ಟಗಳನ್ನು ಸ್ಥಿತಪ್ರಜ್ಞರಾಗಿ ವಿವರಿಸುತ್ತಾರೆ. ಇಲ್ಲಿ ವೈಯುಕ್ತಿಕವಾಗಿ ಯಾರನ್ನೂ ದೋಷಿಯಾಗಿ ಕಟಕಟೆಯಲ್ಲಿ ನಿಲ್ಲಿಸದೆ ತಮ್ಮ ನಿರೂಪಣೆಯ ಮೂಲಕವೇ ಇಡೀ ವರ್ಣಾಶ್ರಮದ ಅಮಾನವೀಯ ವ್ಯವಸ್ಥೆಯೇ ಮೂರ್ತವಾದ ಖಳನಾಯಕನೆಂದು ತೀವ್ರವಾದ ತಣ್ಣಗಿನ, ಪ್ರಾಮಾಣಿಕ ಮನಸ್ಸಿನೊಂದಿಗೆ ಬಿಡಿಬಿಡಿಯಾಗಿ ಬಿಚ್ಚಿಡುತ್ತಾರೆ. ತಮ್ಮ ತಂದೆಯವರ ಜಾತ್ಯಾತೀತ ನಡುವಳಿಕೆಗಳನ್ನು, ಸಮಾಜಸುಧಾರಕನ ಮನಸ್ಸನ್ನು ಕುರಿತಾಗಿ ಬರೆಯುತ್ತಾರೆ. ಇಡೀ ನಿರೂಪಣೆಯಲ್ಲಿ ಎಲ್ಲಿಯೂ ದೈನ್ಯತೆಯು, ಕೃತಜ್ಞಭಾವವು ಸುಳಿಯುವುದಿಲ್ಲ. ಈ ಮೇಲ್ಜಾತಿಯ ಶೋಷಣೆಯ ಕುರಿತಾಗಿ ಬರೆಯುವಾಗಲೂ ಯಾವ ಪದವೂ ಬೆಂಕಿಯುಂಡೆಯನ್ನು, ದ್ವೇಷವನ್ನು ಹೊರಹಾಕುವುದಿಲ್ಲ. ಬದಲಾಗಿ ಇಡೀ ಕಥನಕ್ಕೆ ಒಂದು ಬಗೆಯ ಲಯ ದಕ್ಕಿದೆ. ಆ ಲಯ ಬುದ್ಧನ ಮಾನವೀಯತೆಯ ಲಯ. ಇದೇ ನಿಮಗಾಡೆಯವರ ಬಲು ದೊಡ್ಡ ಯಶಸ್ಸು. ನಿಮಗಾಡೆಯವರದು ಕ್ರಾಂತಿಯ, ಸಿಡಿದೇಳುವ ಮನಸ್ಥಿತಿಯಲ್ಲ. ಬದಲಾಗಿ ದೌರ್ಜನ್ಯಗಳನ್ನು ಅನುಭವಿಸುತ್ತಲೇ ತಮ್ಮ ಮುಗ್ಧತೆಯನ್ನು, ನೈತಿಕತೆಯನ್ನು ಬಳಸಿಕೊಂಡು ಅದರ ಕಟ್ಟುಪಾಡುಗಳ ಬುಡಕ್ಕೆ ಏಟು ಕೊಡುತ್ತಲೇ ಈ ಶ್ರೇಣೀಕೃತ ಸಮಾಜದಲ್ಲಿ ಮೇಲಿನ ಮೆಟ್ಟಿಲುಗಳನ್ನೇರುವುದು ನಿಮಗಾಡೆಯವರ ವ್ಯಕ್ತಿತ್ವ ಮತ್ತು ಅನಿವಾರ್ಯವಾಗಿಯೇ ಈ ಚಲನಶೀಲತೆಯೇ ಒಂದು ಬಿಡುಗಡೆಯ ರಹದಾರಿಯೂ ಸಹ. ಬುದ್ಧಿಜೀವಿಗಳು ಹೇಳುವ ನೆಲದೊಳಕ್ಕೆ ಬೇರು ಬಿಟ್ಟು ಆಧುನಿಕರಾಗುವ ಪ್ರಕ್ರಿಯೆಯನ್ನು ಬಿಡುಗಡೆಯ ದಾರಿಯನ್ನಾಗಿಸುವ ಮಾದರಿಗೆ ಸ್ವತಃ ತಮ್ಮ ಬದುಕನ್ನು ರೂಪಿಸಿಕೊಂಡರು ಈ ಅಂಬೇಡ್ಕರ್‌ವಾದಿ ‘ನಾಮದೇವ ನಿಮಗಾಡೆ’ಯವರು.

ತಮ್ಮ ಜೀವನದಲ್ಲಿ ಪ್ರಪ್ರಥಮ ಬಾರಿಗೆ ಭೀಮರಾವ್ ಅಂಬೇಡ್ಕರ್ ಹೆಸರನ್ನು ಕೇಳಿದ ಘಟನೆಯನ್ನು ಹೀಗೆ ನಿರೂಪಿಸುತ್ತಾರೆ: “1936ರ ದೀಪಾವಳಿ ಸಂದರ್ಭದಲ್ಲಿ ನನ್ನ ತಂದೆಯವರು ನಮ್ಮ ಸತಗಾಂವ್ ಹಳ್ಳಿಯ ಎಲ್ಲ ಅಸ್ಪೃಶ್ಯ ಸಮುದಾಯದ ಕುಟುಂಬಗಳನ್ನು ಒಟ್ಟಾಗಿ ಸೇರಿಸಿ ಮೊಟ್ಟ ಮೊದಲ ಬಾರಿಗೆ ದಲಿತ ಸಮಾವೇಶವನ್ನು ಆಯೋಜಿಸಿದ್ದರು. ಅಲ್ಲಿ ನನಗೆ ತಮ್ಮ ಭಾಷಣವನ್ನು ಬರೆದುಕೊಳ್ಳುವಂತೆ ಸೂಚಿಸಿದರು. ನಂತರ ಈ ಭಾಷಣವನ್ನು ನೆರೆದ ಜನತೆಯ ಮುಂದೆ ಓದಲು ಹೇಳಿದರು. ಅಂದು ನಾನು ಓದಿದ ಆ ಭಾಷಣದ ಸಾರಾಂಶ ಹೀಗಿತ್ತು: ’ನಮ್ಮ ದಲಿತ ಜನಾಂಗದಲ್ಲಿ ಜನಿಸಿ ಉನ್ನತ ವ್ಯಾಸಂಗವನ್ನು ಪಡೆದ ಅತ್ಯಂತ ಮೇಧಾವಿಯ ಹೆಸರು ಡಾ.ಭೀಮರಾವ್ ಅಂಬೇಡ್ಕರ್. ಈ ಅಂಬೇಡ್ಕರ್ ಅವರು ವಿದೇಶಕ್ಕೆ ಹೋಗಿ ಬಿಳಿಯ ಜನರ ನೆಲದಲ್ಲಿ ಡಾಕ್ಟರೇಟನ್ನು ಪಡೆದು ಭಾರತಕ್ಕೆ ಬ್ಯಾರಿಸ್ಟರ್ ಆಗಿ ಮರಳಿದ್ದಾರೆ. ಅಸ್ಪೃಶ್ಯರಾದ ನಾವೆಲ್ಲರೂ ಮೇಲ್ಜಾತಿಯವರ ಸಮಾನರೆಂದೂ, ನಮಗೆ ಊರಿನ ಬಾವಿಗಳಲ್ಲಿ ನೀರನ್ನು ಕುಡಿಯುವ ಹಕ್ಕಿದೆಯೆಂದು, ದೇವಸ್ಥಾನಗಳಲ್ಲಿ ಪ್ರವೇಶಿಸಿ ಪೂಜಿಸುವ ಹಕ್ಕಿದೆಯೆಂದು ಮಾನ್ಯ ಅಂಬೇಡ್ಕರ್ ಅವರು ಹೇಳುತ್ತಾರೆ. ನಾವೆಲ್ಲ ಈ ಮೇಲ್ಜಾತಿಯವರ ಮುಂದೆ ಕೈಯೊಡ್ಡಿ ಬೇಡುವುದನ್ನು ಸಂಪೂರ್ಣವಾಗಿ ತ್ಯಜಿಸಬೇಕೆಂದು ಆದೇಶಿಸಿದ್ದಾರೆ. ನಾವು ಸತ್ತ ದನದ ಮಾಂಸವನ್ನು ತಿನ್ನಬಾರದೆಂದು ಹೇಳುತ್ತಾರೆ. ನಮ್ಮ ಮಕ್ಕಳೆಲ್ಲ ಶಿಕ್ಷಣವನ್ನು ಕಡ್ಡಾಯವಾಗಿ ಪಡೆಯಲೇಬೇಕು ಎಂದು ಅಂಬೇಡ್ಕರ್ ಅವರು ಒತ್ತಾಯಿಸಿದ್ದಾರೆ. ಇದನ್ನು ಸಾಧಿಸಲು ನಮ್ಮೊಳಗಿನ ಜಾತೀಯ ತಾರತಮ್ಯವನ್ನು ತ್ಯಜಿಸಿ ಒಗ್ಗಟ್ಟಾಗಿ ಹೋರಾಡಬೇಕೆಂದು ಅಂಬೇಡ್ಕರ್‌ಜಿಯವರ ಬಯಕೆ’”.

(ಕೃಪೆ : ನವಾಯಾನ ಪ್ರಕಾಶನದ ಪುಸ್ತಕ “In the Tiger’s Shodow” – The autobiography of an Ambedkarite – Namdeo Nimgade)