ಇದು “ದೇಶ-ಕಾಲ”ದ ಚರ್ಚೆ

– ಮೇಘನಾದ

ವಿವೇಕ್ ಶಾನುಭಾಗರ ‘ದೇಶ ಕಾಲ’ – ಸಾಹಿತ್ಯಕ ಪತ್ರಿಕೆಯ ವಿಶೇಷ ಸಂಚಿಕೆ ಹುಟ್ಟುಹಾಕಿದ ಚರ್ಚೆಯ ಸಂಗ್ರಹ ರೂಪ ಈ ಪುಸ್ತಕ. ಗೌರಿ ಲಂಕೇಶ್ ಪತ್ರಿಕೆಯಲ್ಲಿ ಪ್ರಕಟವಾದ ಲೇಖನಗಳು ಆಗಲೇ ಬಹು ಓದುಗರನ್ನು ತಲುಪಿದ್ದವು. ಈಗ ಪುಸ್ತಕ ರೂಪದಲ್ಲಿ ಹೊರಬಂದಿವೆ. ಅಗ್ನಿ ಪತ್ರಿಕೆಯಲ್ಲಿ ಹೆಚ್ಚು-ಕಮ್ಮಿ ಒಂದು ದಶಕದ ಹಿಂದೆ ಮೊಗಳ್ಳಿ ಗಣೇಶ್ ರ ಕಾಲಂ ‘ತಕರಾರು’ ಹುಟ್ಟುಹಾಕಿದ್ದ ಚರ್ಚೆ ಥಟ್ಟನೆ ನೆನಪಾಗುತ್ತದೆ. ಎರಡೂ ಚರ್ಚೆಯ ಸಂದರ್ಭಗಳು ಮತ್ತು ವ್ಯಾಪ್ತಿ ಭಿನ್ನವಾದರೂ, ಮಂಜುನಾಥ್ ಲತಾ ಮತ್ತು ಐಜೂರ್ ಎತ್ತಿರುವ ಪ್ರಶ್ನೆಗಳಿಗೂ ಮೊಗಳ್ಳಿಯವರ ತಕರಾರಿಗೂ ಸಾಮ್ಯ ಇದೆ. ಈ ಇಬ್ಬರು ಗೆಳೆಯರು, ‘ತಕರಾರು’ ಎತ್ತಿದ ಪ್ರಶ್ನೆಗಳನ್ನು ದೇಶಕಾಲದ ವಿಶೇಷ ಸಂಚಿಕೆ ನೆಪದಲ್ಲಿ ಮತ್ತಷ್ಟು ಹಿಗ್ಗಿಸಿದರು ಹಾಗೂ ಸಾಂಸ್ಕೃತಿಕ ಲೋಕದ ಬಹುಮಂದಿಯನ್ನು ಚರ್ಚೆಯಲ್ಲಿ ಪಾಲ್ಗೊಳ್ಳುವಂತೆ ಮಾಡಿದರು.

ಐದು ವರ್ಷಗಳ ಹರೆಯದ ಪತ್ರಿಕೆಯೊಂದು ಒಂದು ಶತಮಾನದ ಲೇಖಕರನ್ನು, ಕವಿಗಳ ಪಟ್ಟಿ ಪ್ರಕಟಿಸುವ ಮೂಲಕ ಸಾಂಸ್ಕೃತಿಕ ಲೋಕದ ಯಾಜಮಾನಿಕೆಯನ್ನು ವಹಿಸಿಕೊಳ್ಳಲು ಹೊರಟ್ಟಿದ್ದರಿಂದಲೇ ಈ ಚರ್ಚೆ ಸಾಧ್ಯವಾಯಿತು. ಜೊತೆಗೆ ನಾಡಿನ ಪ್ರಮುಖ ಪತ್ರಿಕೆಗಳು ವಿಶೇಷ ಸಂಚಿಕೆ ಬರುವ ಮುನ್ನ, ನಂತರ ಸಾಹಿತ್ಯ ಜಗತ್ತಿನಲ್ಲಿ ಏನೋ ಒಂದು ಅದ್ಭುತ ಘಟಿಸಿದೆಯೇನೋ ಎಂಬಂತೆ ನಡೆದುಕೊಂಡದ್ದೂ ಚರ್ಚೆಯ ಅಗತ್ಯತೆಯನ್ನು ತೀವ್ರಗೊಳಿಸಿತು. ಹಲವಾರು ವರ್ಷಗಳಿಂದ ಪ್ರಕಟಣೆಯಲ್ಲಿರುವ ಹತ್ತಾರು ಪತ್ರಿಕೆಗಳಿಗೆ ಸಿಗದ ಪ್ರಚಾರ ಒಂದು ಪತ್ರಿಕೆಗೆ ಸಿಕ್ಕಾಗ, ಕೇವಲ ಅದು ಮಾತ್ರ ಸಾಂಸ್ಕೃತಿಕ ಲೋಕದ ನಿಜಗನ್ನಡಿ ಎಂದು ಬಿಂಬಿತವಾಗುವ ಅಪಾಯವಿತ್ತು. ಇದನ್ನು ಮನಗಂಡು ಮಂಜುನಾಥ್ ಲತಾ ಮತ್ತು ಐಜೂರ್ ಚರ್ಚೆ ಆರಂಭಿಸಿದರು.

ಇವರ ಕಟು ನಿಷ್ಠುರ ಮಾತುಗಳಲ್ಲಿ ಹೇಳಬೇಕಾದ್ದನ್ನು ಹೇಳಲು ಹೋದಾಗ ಅನೇಕರು ದಂಗಾದರು. ಇದು ವಿಮರ್ಶೆಯ ಭಾಷೆಯಲ್ಲ ಎಂದು ಹೇಳುತ್ತಲೇ ಹಿರಿಯರು ಚರ್ಚೆಗೆ ಸ್ಪಂದಿಸಿದರು. ವಿಶೇಷ ಸಂಚಿಕೆಯಲ್ಲಿ ಶತಮಾನದ ಲೇಖಕರು, ಕವಿಗಳು ಎಂದೆಲ್ಲಾ ಕರೆಸಿಕೊಂಡಿದ್ದವರೇ ತೀವ್ರ ಮುಜುಗರದಿಂದ ತಮ್ಮ ಅಭಿಪ್ರಾಯವನ್ನು ದಾಖಲಿಸಿದರು. (ಮತ್ತೆ ಕೆಲವರು ತಾವು ಆ ಮಾನ್ಯತೆಗೆ ಅರ್ಹರಲ್ಲ ಎಂದು ಒಳಗೊಳಗೇ ಅನ್ನಿಸಿದರೂ, ಬೇಸರವನ್ನು ಬಹಿರಂಗವಾಗಿ ವ್ಯಕ್ತಪಡಿಸಿ ಯಾಕೆ ರಾಡಿ ಮಾಡಿಕೊಳ್ಳುವುದು ಎಂದು ತಮಗೆ ಪುಕ್ಕಟೆ ಸಿಕ್ಕ ಮಾನ್ಯತೆ ಬಗ್ಗೆ ಚರ್ಚಿಸಲು ಹೋಗಲಿಲ್ಲ). ಚರ್ಚೆಯ ಹಾದಿಯಲ್ಲಿ ಹಲವರಿಗೆ ಬೇಸರ, ಸಂಕಟ, ಸಿಟ್ಟು..ಹೀಗೆ ಏನೆಲ್ಲಾ ಆಗಿದ್ದರೂ, ಇಂತಹದೊಂದು ಚರ್ಚೆ ಅಗತ್ಯವಿತ್ತು. ಕಾರಣ, ಈ ಚರ್ಚೆಯ ಮೂಲಕ, ತಮಗನ್ನಿಸಿದ್ದನ್ನು ಹೇಳಲು ಸೂಕ್ತ ಸಮಯಕ್ಕಾಗಿ ಕಾದು ಕುಳಿತಿದ್ದ ಅನೇಕರಿಗೆ ವೇದಿಕೆ ದೊರೆತಿದೆ.

ಜಿ.ರಾಜಶೇಖರ್ ಮತ್ತು ಕೆ.ಫಣಿರಾಜ್ ‘ದೇಶ ಕಾಲ’ದ ಪರವಾಗಿ ನಿಲ್ಲುತ್ತಾರೆ. ಅವರ ವಾದಗಳಲ್ಲಿ ಒಪ್ಪಿಕೊಳ್ಳಲು ಕಷ್ಟವಾಗುವ ಸಂಗತಿಗಳು ಬೇಕಾದಷ್ಟಿದ್ದರೂ, ಚರ್ಚೆಯಲ್ಲಿ ಪಾಲ್ಗೊಂಡ ಕಾರಣ ಅವರನ್ನು ಮೆಚ್ಚಲೇ ಬೇಕು. ಅವರು ‘ದೇಶ ಕಾಲ’ದ ಸಂಪಾದಕರಿಗಿಂತ ಭಿನ್ನವಾಗಿ ನಿಲ್ಲುವುದೇ ಅಲ್ಲಿ. (ಇಂತಹ ಚರ್ಚೆ ನಡೆಯುತ್ತಿದ್ದರೂ, ಪ್ರತಿಕ್ರಿಯಿಸದೆ ಉದಾಸೀನ ತೋರಿಸಲು ಸಂಪಾದಕರಿಗೆ ಸಾಧ್ಯವಾಯಿತು.) ಹಿರಿಯ ಜೀವಿಯೊಬ್ಬರು ಆಪ್ತ ವಲಯದಲ್ಲಿ ‘ಆ ಹುಡುಗರು ಏನೆಲ್ಲಾ ಬರೆದಿದ್ದಾರೆ, ಕಪಾಳಕ್ಕೆ ಬಾರಿಸಬೇಕು..’ ಎಂದು ತುಸು ಕೋಪದಿಂದಲೇ ಹೇಳಿಕೊಂಡಂತೆ ಇವರಿಬ್ಬರೂ ಮಾತನಾಡಿಕೊಂಡು ಸುಮ್ಮನೆ ಇರಬಹುದಿತ್ತು, ಆದರೆ ಅವರು ಹಾಗೆ ಮಾಡಲಿಲ್ಲ. ಅದೇ ಕಾರಣಕ್ಕಾಗಿ ಇವರನ್ನು ಟೀಕಿಸಿದ ಹುಡುಗರು ಸಿಕ್ಕಾಗ ಇವತ್ತಿಗೂ ಅದೇ ಹಳೆಯ ನಗುವಿನಿಂದ, ವಿಶ್ವಾಸದಿಂದ ಮಾತನಾಡಿಸುತ್ತಾರೆ.

ಇದು ಪ್ರಸ್ತುತ ಸಂದರ್ಭದಲ್ಲಿ ಪ್ರಮುಖ ಕೃತಿ. ಮುಂದೆ ಕೆಲವು ವರ್ಷಗಳ ಮಟ್ಟಿಗಾದರೂ ಇಲ್ಲಿಯ ಬರಹಗಳು ಅಲ್ಲಲ್ಲಿ ಉಲ್ಲೇಖವಾಗುತ್ತವೆ, ಆ ಮೂಲಕ ಚರ್ಚೆ ಮುಂದುವರಿಯುತ್ತದೆ. ಆ ಕಾರಣ ಸಂಪಾದಕರಿಬ್ಬರು ಅಭಿನಂದನೆಗಳಿಗೆ ಅರ್ಹರು. ಜೊತೆಗೆ ಪ್ರಕಾಶಕರೂ ಕೂಡ. ಪ್ರಕಾಶಕರು ತಮ್ಮ ಮಾತುಗಳಲ್ಲಿ ಹೇಳಿಕೊಂಡಂತೆ, ಅವರು ಸಂಪಾದಕರ ಅಭಿಪ್ರಾಯಗಳನ್ನು ಸಂಪೂರ್ಣವಾಗಿ ಒಪ್ಪದೇ ಇದ್ದರೂ ಪ್ರಕಟಣೆಗೆ ಒಪ್ಪಿದ್ದಾರೆ. ಅಷ್ಟಲ್ಲದೇ, ಕೆಲ ಪ್ರಕಾಶಕರು ಪ್ರಕಟಿಸಲು ಒಪ್ಪಿ ಹಿಂದೆ ಸರಿದ ಮೇಲೂ ಇವರು ಆ ಜವಾಬ್ದಾರಿ ಹೊತ್ತರು ಎನ್ನುವುದು ಗಮನಾರ್ಹ. ಈ ಮಹತ್ವದ ಕೃತಿಯನ್ನು ಒಮ್ಮೆ ಕೊಂಡು ಓದಿ.


ಪುಸ್ತಕ: ದೇಶವಿದೇನಹಾ! ಕಾಲವಿದೇನಹಾ!!
ಸಂಪಾದಕರು: ಮಂಜುನಾಥ ಲತಾ ಮತ್ತು ಕೆ.ಎಲ್. ಚಂದ್ರಶೇಖರ್ ಐಜೂರ್
ಪ್ರಕಾಶನ: ಮೌಲ್ಯಾಗ್ರಹ ಪ್ರಕಾಶನ
ಪುಟ ಸಂಖ್ಯೆ: 184
ಬೆಲೆ: ರೂ 140.
ಪ್ರತಿಗಳಿಗಾಗಿ:
ಕೆ.ಎಲ್. ಚಂದ್ರಶೇಖರ್ ಐಜೂರ್ – 98809-14578
ಮಂಜುನಾಥ್ ಲತಾ – 91412-07031

Leave a Reply

Your email address will not be published. Required fields are marked *