Daily Archives: November 4, 2012

ಕರ್ನಾಟಕದ ಕಾಂಗ್ರೆಸ್ ಮನೆ ರಿಪೇರಿಗೆ ಎಸ್.ಎಂ.ಕೃಷ್ಣ


-ಚಿದಂಬರ ಬೈಕಂಪಾಡಿ


 

ಕರ್ನಾಟಕದ ಕಾಂಗ್ರೆಸ್ ಪಾಳೆಯದಲ್ಲೀಗ ಏನೋ ಒಂಥರಾ. ಈ ‘ಒಂಥರಾ’ ಎನ್ನುವ ಪದವನ್ನು ಹಲವು ರೀತಿಯಲ್ಲಿ ಅರ್ಥಮಾಡಿಕೊಳ್ಳಬಹುದು, ಅರ್ಥ ಹುಡುಕಿಕೊಳ್ಳಬಹುದು. ಇದರಲ್ಲಿ ಪುಳಕವಿದೆ, ಆತಂಕವಿದೆ, ರೋಮಾಂಚನವಿರಬಹುದು, ಕಳೆದುಕೊಂಡದ್ದು ಮರಳಿ ಸಿಕ್ಕಿದಂತಿರಬಹುದು, ಹೇಳಲಾಗದಂಥ ಅನುಭವ ಆಗುತ್ತಿರಬಹುದು. ಆದ್ದರಿಂದಲೇ ಅದು ‘ಒಂಥರಾ’.

ಕರ್ನಾಟಕದಲ್ಲಿ ಕಾಂಗ್ರೆಸ್ ಗುಂಪುಗಳು ಎಷ್ಟಿವೆ ಎನ್ನುವುದನ್ನು ನಿಮ್ಮಷ್ಟಕ್ಕೆ ನೀವೇ ಲೆಕ್ಕ ಮಾಡಿ. ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಆಸ್ಕರ್ ಫೆರ್ನಾಂಡಿಸ್, ಕೆಪಿಸಿಸಿ ಮಾಜಿ ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಕೋಶಾಧಿಕಾರಿ ಶ್ಯಾಮನೂರು ಶಿವಶಂಕರಪ್ಪ, ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ, ಕೇಂದ್ರ ಸಚಿವ ಎಂ.ವೀರಪ್ಪ ಮೊಯ್ಲಿ, ಮಾಜಿ ಸಚಿವ ಆರ್.ವಿ.ದೇಶಪಾಂಡೆ, ಮಾಜಿ ಕೇಂದ್ರ ಸಚಿವ ಸಿ.ಕೆ.ಜಾಫರ್ ಶರೀಫ್, ಮಾಜಿ ಕೇಂದ್ರ ಸಚಿವ ಬಿ.ಜನಾರ್ಧನ ಪೂಜಾರಿ; ಇವರ ಬೆನ್ನಹಿಂದೆ ತಮ್ಮದೇ ಆದ ಬೆಂಬಲಿಗರ ಗುಂಪಿದೆ. ಸಿ.ಎಂ.ಇಬ್ರಾಹಿಂ, ತೇಜಸ್ವಿನಿ, ಧರಂ ಸಿಂಗ್ ಇವರೂ ತಮ್ಮ ನಿಷ್ಠಾವಂತರನ್ನು ಹೊಂದಿದ್ದಾರೆ. ಇದು ಕರ್ನಾಟಕದ ಕಾಂಗ್ರೆಸ್ ಪಕ್ಷದ ಸ್ಥೂಲ ನೋಟ. ಇವರೆಲ್ಲರೂ ಕಾಂಗ್ರೆಸ್ ಬ್ಯಾನರ್ ಅಡಿಯಲ್ಲಿದ್ದರೂ ಒಬ್ಬರನ್ನೊಬ್ಬರು ಅತಿಯಾಗಿ ದ್ವೇಷಿಸದಿದ್ದರೂ ಮುಕ್ತವಾಗಿ ಪ್ರೀತಿಸುವುದಿಲ್ಲ. ಇವರಿಗೆಲ್ಲಾ ಕಾಂಗ್ರೆಸ್ ಪಕ್ಷದಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಮಾತ್ರ ನಾಯಕರು. ಅವರು ಹೇಳಿದ್ದನ್ನು ಮಾತ್ರ ಕೇಳುತ್ತಾರೆ ಹೊರತು ಅನ್ಯರು ಯಾರೇ ಹೇಳಿದರೂ ಕೇಳುವ ಜಾಯಮಾನ ಇವರದ್ದಲ್ಲ. ಆದ್ದರಿಂದಲೇ ಕಾಂಗ್ರೆಸ್ ಹಿಡಿತ ಈಗಲೂ ನೆಹರೂ ಕುಟುಂಬದಲ್ಲೇ ಇದೆ ಎನ್ನುವ ವಾದಕ್ಕೆ ಇದು ಪುಷ್ಠಿ ನೀಡುತ್ತದೆ.

ಈ ಎಲ್ಲಾ ನಾಯಕರೂ ಒಂದಾಗಿದ್ದರೆ, ಪರಸ್ಪರ ನಂಬಿಕೆಯಿಂದ ಕೆಲಸ ಮಾಡಿದರೆ ಸೋನಿಯಾ ಅಥವಾ ರಾಹುಲ್ ಗಾಂಧಿಗೆ ಕಾಂಗ್ರೆಸ್ ಪಕ್ಷದಲ್ಲಿ ಕೆಲಸವೇ ಇಲ್ಲವಾಗುತ್ತಿತ್ತು ಇನ್ನೊಂದರ್ಥದಲ್ಲಿ ಖಾತೆಯಿಲ್ಲದ ಮಂತ್ರಿಯಂತಿರುತ್ತಿದ್ದರು. ಅವರು ಚುನಾವಣೆ ಕಾಲಕ್ಕೆ ಪ್ರಚಾರಕ್ಕೆ ಬರುವ ಅಗತ್ಯವೂ ಇರಲಾರದು. ಇಲ್ಲಿಯ ತನಕ ಇವರೆಲ್ಲರೂ ಪರಸ್ಪರ ಅಪನಂಬಿಕೆಯಿಂದ ಇರುತ್ತಾರೋ ಅಲ್ಲಿಯ ತನಕ ಸೋನಿಯಾ ಮತ್ತು ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷದಲ್ಲಿ ಕ್ರಿಯಾಶೀಲರಾಗಿರುವುದು ಅನಿವಾರ್ಯ ಮತ್ತು ಇವರಿಂದಾಗಿ ಅವರು ಕ್ರಿಯಾಶೀಲರಾಗಿರುತ್ತಾರೆ. ರಾಜೀವ್ ಗಾಂಧಿ ನಂತರ ಪಿ.ವಿ.ನರಸಿಂಹರಾವ್ ಕಾಂಗ್ರೆಸ್ ಮುನ್ನಡೆಸಿದಾಗ ಪ್ರಣಬ್ ಮುಖರ್ಜಿ, ಶರದ್ ಪವಾರ್, ಪಿ.ಎ.ಸಂಗ್ಮಾ ಮುಂತಾದವರು ಅಧಿಕಾರಕ್ಕಾಗಿ ತಹತಹಿಸದೇ ಇರುತ್ತಿದ್ದರೆ ಕಾಂಗ್ರೆಸ್ ಪಕ್ಷ ನೆಹರೂ ಕುಟುಂಬದ ಹಿಡಿತದಿಂದ ಸುಲಭವಾಗಿ ಕಳಚಿಕೊಳ್ಳುತ್ತಿತ್ತು. ಮತ್ತೆ ಆ ಕುಟುಂಬದ ಹಿಡಿತಕ್ಕೆ ಕಾರಣರಾದವರು ಇವರೇ ಎನ್ನುವುದನ್ನು ಒಪ್ಪಿಕೊಳ್ಳಲೇ ಬೇಕು.

ಇಂಥ ವಾಸ್ತವ ಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅವಲೋಕಿಸಿದರೆ ಕರ್ನಾಟಕದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ತರಲು ಸೋನಿಯಾ ಮತ್ತು ರಾಹುಲ್ ಕನಸು ಕಾಣುತ್ತಿರುವುದು ಅಸಹಜವಂತೂ ಅಲ್ಲ. ಆದ್ದರಿಂದಲೇ ಕೇಂದ್ರ ಸಚಿವರಾಗಿದ್ದ ಎಸ್.ಎಂ.ಕೃಷ್ಣರನ್ನು ಸೋನಿಯಾ ಮತ್ತು ರಾಹುಲ್ ಕರ್ನಾಟಕಕ್ಕೆ ಹಿಂದಕ್ಕೆ ಕಳುಹಿಸಿದ್ದಾರೆ. ಈಗಾಗಲೇ ಡಜನ್ ನಾಯಕರು ಕರ್ನಾಟಕದಲ್ಲಿದ್ದರೂ ಸೋನಿಯಾ ಹಾಗೂ ರಾಹುಲ್ ಕೃಷ್ಣ ಅವರನ್ನು ಕರ್ನಾಟಕದಲ್ಲಿ ಕಾಂಗ್ರೆಸ್ ಕೃಷಿಗೆ ಹಚ್ಚಿರುವುದಕ್ಕೆ ಕಾರಣ ಇದೇ ಡಜನ್ ನಾಯಕರು.

ಆಸ್ಕರ್ ಫೆರ್ನಾಂಡಿಸ್ ಕಾಂಗ್ರೆಸ್ ಪಕ್ಷದಲ್ಲಿ ಜನನಾಯಕರಲ್ಲ ಎನ್ನುವುದು ಸೋನಿಯಾ ಗಾಂಧಿಗೂ ಗೊತ್ತಿರುವ ಸತ್ಯ. ಆದರೆ ಉಳಿದವರು ತಮ್ಮ ಬೆನ್ನಿಗಂಟಿಕೊಂಡು ಬಂದಿರುವ ಜಾತಿಯ ಹಗ್ಗದಿಂದ ಒಂದಷ್ಟು ಜನರನ್ನು ಕಟ್ಟಿಕೊಂಡಿದ್ದರೆ ವೀರಪ್ಪ ಮೊಯ್ಲಿಯಂಥವರು ತಮ್ಮ ಪ್ರಭಾವಿ ವಲಯದಿಂದ ಚಲಾವಣೆಯಲ್ಲಿದ್ದಾರೆ ಹೊರತು ಜಾತಿಯ ಬಲದಿಂದ ಅಲ್ಲ. ಆದರೂ ಎಸ್.ಎಂ.ಕೃಷ್ಣರಲ್ಲಿ ಸೋನಿಯಾ ಮತ್ತು ರಾಹುಲ್ ಗುರುತಿಸಿರುವ ಗುಣ ಯಾವುದು ?.

ಎಸ್.ಎಂ.ಕೃಷ್ಣ ಒಕ್ಕಲಿಗ ಸಮುದಾಯದವರು ನಿಜ. ಆದರೆ ಅವರು ಎಂದು ತಮ್ಮ ರಾಜಕಾರಣಕ್ಕೆ ಬಳಸಿಕೊಂಡಿಲ್ಲ. ಬುದ್ಧಿವಂತಿಕೆ ಮತ್ತು ಚಾಣಾಕ್ಷತೆ ಕೃಷ್ಣ ಅವರನ್ನು ರಾಜಕಾರಣದಲ್ಲಿ ಎತ್ತರದ ಸ್ಥಾನಕ್ಕೆ ಒಯ್ದಿರುವುದೇ ಹೊರತು ಅವರ ಹಣಬಲವಾಗಲೀ, ಜಾತಿಯ ಅಸ್ತ್ರವಾಗಲೀ ನೆರವಿಗೆ ಬಂದಿಲ್ಲ, ಅವರ ರಾಜಕೀಯ ಜೀವನದಲ್ಲಿ ಅದು ಅನಿವಾರ್ಯವಾಗಲಿಲ್ಲ. ಬುದ್ಧಿವಂತಿಕೆ ಮತ್ತು ಚಾಣಾಕ್ಷತೆಯನ್ನು ಸಕಾಲದಲ್ಲಿ ಮಿತವಾಗಿ ಬಳಸುವುದರಲ್ಲಿ ಕೃಷ್ಣ ನಿಪುಣರು. ಆದ್ದರಿಂದಲೇ ಡಾ.ರಾಜ್ ಕುಮಾರ್ ಅವರನ್ನು ಕಾಡುಗಳ್ಳ ವೀರಪ್ಪನ್ ಅಪಹರಿಸಿದಾಗಲೂ ಅಧಿಕಾರ ಉಳಿಸಿಕೊಳ್ಳುವುದು ಸಾಧ್ಯವಾಯಿತು.

ಮಹಾಭಾರತದಲ್ಲಿ ಕೃಷ್ಣ ಜಾತಿಯ ಬಲದಿಂದ ಗುರುತಿಸಿಕೊಳ್ಳಲಿಲ್ಲ ಅಥವಾ ಯುದ್ಧ ಗೆಲ್ಲಲು ಸಾರಥಿಯಾಗಲಿಲ್ಲ. ತನ್ನ ಬುದ್ಧಿವಂತಿಕೆ ಮತ್ತು ಚಾಣಾಕ್ಷತೆಯಿಂದ ಅಂದುಕೊಂಡದ್ದನ್ನು ಸಾಧಿಸಿದ. ಈ ಕೃಷ್ಣ ಕೂಡಾ ಕಾಂಗ್ರೆಸ್ ಅಧಿಕಾರಕ್ಕೇರಲು ಸಾಧ್ಯವೇ ಇಲ್ಲ ಎನ್ನುವ ಕಾಲಘಟ್ಟದಲ್ಲಿ ಪಾಂಚಜನ್ಯ ಊದಿ ಅಧಿಕಾರಕ್ಕೆ ತರುವಲ್ಲಿ ಸಮರ್ಥರಾಗಿದ್ದರು. ಅದರ ಪುನರಾವರ್ತನೆ ಈಗ ಆಗಬೇಕು ಎನ್ನುವುದು ಸೋನಿಯಾ ಮತ್ತು ರಾಹುಲ್ ಕನಸಿಗೆ ಕಾರಣವಿರಬೇಕು.

ಕರ್ನಾಟಕದ ಕಾಂಗ್ರೆಸ್ ಪಕ್ಷದೊಳಗಿರುವ ಡಜನ್ ನಾಯಕರು ಆತ್ಮಪೂರ್ವಕವಾಗಿ ಕೃಷ್ಣರನ್ನು ಒಪ್ಪದಿರಬಹುದು ಆದರೆ ಸರಾಸಗಟಾಗಿ ನಿರಾಕರಿಸಲಾರರು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಯಾರು ಎನ್ನುವುದೇ ಡಜನ್ ನಾಯಕರ ಚಿಂತೆಯಾಗಿದೆ ಹೊರತು ಅಧಿಕಾರಕ್ಕೆ ಬೇಕಾದಷ್ಟು ಸಂಖ್ಯೆಯ ಶಾಸಕರನ್ನು ಗೆಲ್ಲಿಸುವ ತಂತ್ರಗಾರಿಕೆಯ ಚಿಂತನೆಯಿಲ್ಲ. ತಾನು ಬೇಕಾದರೆ ಮುಖ್ಯಮಂತ್ರಿಯಾಗದಿದ್ದರೂ ಪರವಾಗಿಲ್ಲ ಅವನು ಮಾತ್ರ ಆಗಬಾರದು, ಅದನ್ನು ಸಾಧಿಸುವುದು ಹೇಗೆ ಎನ್ನುವುದೇ ಚಿಂತೆ. ಆದರೆ ಎಸ್.ಎಂ.ಕೃಷ್ಣರಿಗೆ ಇಂಥ ಯಾವ ಚಿಂತೆಗಳೂ ಇಲ್ಲ. ಸ್ಪೀಕರ್, ಉಪಮುಖ್ಯಮಂತ್ರಿ, ಕೇಂದ್ರ ಮಂತ್ರಿ, ರಾಜ್ಯಪಾಲ ಹುದ್ದೆಗಳನ್ನು ಅನುಭವಿಸಿದ್ದಾರೆ, ಜಗತ್ತನ್ನು ಬೇಸರಬರುವಷ್ಟು ಸುತ್ತಿದ್ದಾರೆ. ಈಗ ಅವರೇ ಹೇಳಿಕೊಂಡಂತೆ ವಿಶ್ರಾಂತಿ ಬೇಕಾಗಿದೆ. ವಿಶ್ರಾಂತ ಜೀವನ ಬುದ್ಧಿವಂತಿಕೆ ಮತ್ತು ಚಾಣಾಕ್ಷತೆ ಬಳಕೆಗೆ ಅಡ್ಡಿಯಾಗದು. ಆದ್ದರಿಂದಲೇ ಆಸೆಯಿಲ್ಲದ, ವೈರಾಗಿಯೂ ಅಲ್ಲದ ಆದರೆ ಚಲನಶೀಲ ಮನಸ್ಸಿನ ಕೃಷ್ಣರನ್ನು ಸೋನಿಯಾ ಮತ್ತು ರಾಹುಲ್ ಅವರು ಕರ್ನಾಟಕದ ಕಾಂಗ್ರೆಸ್ ಮನೆ ರಿಪೇರಿಗೆ ಕಳುಹಿಸಿದ್ದಾರೆ. ವಾಸಕ್ಕೆ ಮನೆ ಯೋಗ್ಯವಾದರೆ ಸೂಕ್ತರಾದವರನ್ನು ಅವರೇ ವಾಸಕ್ಕೆ ಬಿಡುತ್ತಾರೆ!