Daily Archives: November 5, 2012

ಏರು ಇಳಿದ ಹೊತ್ತಿನಲ್ಲಿ ಕಾವೇರಿ ವಿವಾದ

 – ತೇಜ ಸಚಿನ್ ಪೂಜಾರಿ

ಆಧುನಿಕ ಜಗತ್ತಿನಲ್ಲಿ ನೀರಿಗೆ ಒಂದು ಸಂಘರ್ಷಾತ್ಮಕ ನೆಲೆಯಿದೆ. ಪೂರೈಕೆ ಹಾಗೂ ಬೇಡಿಕೆಯ ಸಮೀಕರಣದಲ್ಲಿ ಇರುವ ಅಸಮಾನತೆಗಳು ಹಲವು ಬಿಕ್ಕಟ್ಟುಗಳ ಸಾಧ್ಯತೆಗಳನ್ನು ಸೃಷ್ಟಿಸಿವೆ. ಸಹಜ ಪ್ರಾಕೃತಿಕ ವೈಕಲ್ಯಗಳ ನಡುವೆಯೇ ನುಸುಳುತ್ತಿರುವ “ಬಳಸು ರಾಜಕಾರಣ”, ಸಾಮ್ರಾಜ್ಯಶಾಹಿತ್ವ ಹಾಗೂ ಕಾರ್ಪೋರೇಟ್ ಮೊದಲಾದ ಸ್ಥಾಪಿತ ಹಿತಾಸಕ್ತಿಗಳು ನೀರಿನ ಸಮಸ್ಯೆಯನ್ನು ಇನ್ನಷ್ಟು ಸಂಕೀರ್ಣಗೊಳಿಸಿವೆ. ಇದೇ ಹಿನ್ನೆಲೆಯಲ್ಲಿ, “ತೃತೀಯ ಮಹಾಯುಧ್ಧವು ಸಂಭವಿಸಿದಲ್ಲಿ ಅದು ನೀರಿನ ಸಲುವಾಗಿಯೇ ಆಗಿರುತ್ತದೆ” ಎಂಬ ಕೊಂಚ ಉತ್ಪ್ರೇಕ್ಷೆ ಅನ್ನಿಸುವಂತಹ, ಆದರೆ ನೆಲದ ವಾಸ್ತವಗಳನ್ನು ಮೀರದ ಮಾತುಗಳನ್ನು ಹಲವು ವ್ಯೂಹತಜ್ಞರು ನುಡಿಯುತ್ತಿದ್ದಾರೆ.

ಕಾವೇರಿ ಸಮಸ್ಯೆಯು ಕೂಡ ಇಂತಹದ್ದೇ ಬಿಕಟ್ಟು ಸಂರಚನೆಯನ್ನು ಹೊಂದಿದೆ. ಯಾವ ಆಯಾಮದಿಂದ ನೋಡಿದರೂ ಅದೊಂದು ಪೂರ್ಣ ಮಾನವ ನಿರ್ಮಿತ ಬಿಕ್ಕಟ್ಟು. ಒಂದೆಡೆ ನೀರಿನ ಪೂರೈಕೆಗೇ ಮಿತಿಯೊಡ್ಡುವ ಅರಣ್ಯ ನಾಶದಂತಹ ಚಟುವಟಿಕೆಗಳು, ಇನ್ನೊಂದೆಡೆ ಅವೈಜ್ಞಾನಿಕ ಹಾಗೂ ಸುಸ್ಥಿರವಲ್ಲದ ಅಭಿವೃದ್ಧಿ ಮಾದರಿಗಳು ಕಾಣಿಸಿರುವ ಅತಿ ಬೇಡಿಕೆಯ ಪ್ರವೃತ್ತಿಗಳು. ಜೊತೆಗೆ, ಇಂತಹ ಸಂರಚನೀಯ ವೈಫಲ್ಯವನ್ನು ವ್ಯಾಪಿಸಿರುವ “ಬಳಸು ರಾಜಕಾರಣ”. ಇವೇ ಮೊದಲಾದ ಮಾನವಿಕ ಅಂಶಗಳು ಕಾವೇರಿ ಬಿಕ್ಕಟ್ಟಿಗೆ ಶಾಶ್ವತ ಪರಿಹಾರ ಸಾಧ್ಯವಾಗದ ಪರಿವೇಶವೊಂದನ್ನು ನಿರ್ಮಿಸಿವೆ.

ವಾರ್ಷಿಕ ವಿದ್ಯಮಾನವೆಂಬಂತೆ ನಡೆಯುತ್ತಿರುವ ಈ ಜಗಳದಲ್ಲಿ ಕ್ಷಣಿಕತೆ ಹಾಗು ನಿಯಮಿತತೆ-ಇವೆರಡೂ ಅಂಶಗಳಿವೆ. ಬಾಹ್ಯ ಪ್ರೇರಣೆಗಳು ಕಾವೇರಿ ತಟದಲ್ಲಿ ಉಂಟುಮಾಡುವ ತಲ್ಲಣಗಳು ತೀರಾ ಕ್ಷಣಿಕವಾದವು. ಯೌವನದ ಆವೇಶವು ಉಕ್ಕಿ ಕ್ಷಣಾರ್ಧದಲ್ಲಿ ವೃದ್ಧಾಪ್ಯದ ಮೌನವು ಆವರಿಸಿದಂತೆ. ಆದರೆ ಕೊನೆಗುಳಿಯುವ ಮೌನದಲ್ಲಿ ವೃದ್ಧಾಪ್ಯದ ಫ್ರೌಢತೆ ಯಾ ಅನುಭವ ಸಾಫಲ್ಯವು ಕಾಣಿಸುವುದಿಲ್ಲ ಎನ್ನುವುದೇ ಕಾವೇರಿ ಸಂಕಟದ ನಿಜವಾದ ದುರಂತತೆಯಾಗಿದೆ. ಹೀಗಾಗಿ ಮೌನದಲ್ಲಿ ನಡೆಯುವ ಜಿಜ್ಞಾಸೆಗಳಿಗೆ ವಿಶೇಷವಾದ ಮೌಲ್ಯವಿದೆ. ಇದೇ ಹಿನ್ನಲೆಯಲ್ಲಿ ಸದ್ಯದ ಏರು ಇಳಿದ ಹೊತ್ತಿನಲ್ಲಿ ಕಾವೇರಿ ವಿವಾದ ಕುರಿತು ಮೂಡಿದ ಕೆಲವು ವಿಚಾರಗಳು ಇಂತಿವೆ.

  ***

ಮೊದಲನೆಯ ವಿಚಾರ ಕಾವೇರಿಯ ಮೇಲಣ ಹಕ್ಕು ಸ್ಥಾಪನೆಗೆ ಸಂಬಂಧಿಸಿದ್ದಾಗಿದೆ. ಹುಟ್ಟು, ಪಥ, ಗಮ್ಯ ಮೊದಲಾದ ಸಹಜ ಪ್ರಾಕೃತಿಕ ವಿಚಾರಗಳನ್ನು ಆಧರಿಸಿ ನಡೆಯುವ ಹಕ್ಕೊತ್ತಾಯದ ಪ್ರವೃತ್ತಿಗಳು ಕಾವೇರಿ ವಿಚಾರದಲ್ಲಿ ಆಗಾಗ್ಗೆ ಕಂಡುಬರುತ್ತವೆ. ಈ ಅಂಶವು ಕಾವೇರಿ ಸಮಸ್ಯೆಯ ಇತ್ಯರ್ಥದ ಹಾದಿಯಲ್ಲಿ ಒಂದು ಪ್ರಮುಖವಾದ  ತೊಡಕಾಗಿದೆ. ವಾಸ್ತವದಲ್ಲಿ ಹರಿಯುವ ನೀರು ಬೀಸುವ ಗಾಳೀ ಇವೇ ಮೊದಲಾದ ಪ್ರಾಕೃತಿಕ ಅಂಶಗಳ ಮೇಲೆ ಪ್ರತಿಪಾದಿಸಲ್ಪಡುವ ಹಕ್ಕೊತ್ತಾಯವೇ ಒಂದು ಬಗೆಯ ಅಸಹಜತೆಯಾಗಿದೆ. ಯಾವುದೇ ನದಿಗೆ “ಮೂಲ” ಎಷ್ಟು ಮುಖ್ಯವೋ ಅಷ್ಟೇ ಮಹತ್ವದ್ದು ಅದು “ಸೇರುವ ತಾಣ” ಹಾಗೂ ಇವೆರಡರ ನಡುವೆ “ಚಲಿಸುವ ಪಥ”. ಇದರ ಯಾವುದೇ ಒಂದಂಶದ ಆಧಾರದಲ್ಲಿ ನಡೆಯವ ಹಕ್ಕೊತ್ತಾಯಗಳು ತೀರಾ ಕೃತ್ತಿಮವಾದದ್ದಾಗಿರುತ್ತದೆ.

ಇಂತಹ ಹಕ್ಕು ಮಂಡನೆಯ ಪ್ರವೃತ್ತಿಗಳು ಮಾನವನ ಅಹಮಿಕೆಯ ಅಭಿವ್ಯಕ್ತಿಯೂ ಆಗಿವೆ. ಅದು ತಾನು ಪ್ರಕೃತಿಯನ್ನು ಜಯಿಸಿದ್ದೆನೆ ಎಂಬ ಗತ್ತು; ಸಹಜತೆಯನ್ನು ತನ್ನಿಷ್ಟಕ್ಕೆ ತಕ್ಕ ಹಾಗೆ ಮಾರ್ಪಡಿಸಬಲ್ಲೆನೆಂಬ ಧಿಮಾಕು. ವಾಸ್ತವದಲ್ಲಿ ಇದು ಮಾನವನ ಮೂರ್ಖತನವೇ ಆಗಿದೆ. ಪ್ರಕೃತಿಗೆ ಮನುಷ್ಯ ಯಾವತ್ತಿಗೂ ಶಿಶುವೇ. ಕಾಲಕಾಲಕ್ಕೆ ಮನುಕುಲದ ಅಹಂಗೆ ಪಾಠಕಲಿಸುವ ಪ್ರಯತ್ನಗಳನ್ನು ಆಕೆ ಮಾಡುತ್ತಳೇ ಇದ್ದಾಳೆ. ಘಟನೆ ಹಾಗೂ ಪರಿಣಾಮಗಳ ನೆಲೆಯಲ್ಲಿ ಬಹು ಅಸಹಜ ಅನ್ನಿಸುವಂತಹ ಭೂಕಂಪನಗಳು, ಚಂಡಮಾರುತಗಳು, ನೆರೆ-ಬರ ಪರಿಸ್ಥಿತಿಗಳು ತನ್ನ ದುರ್ಬಳಕೆಯ ವಿರುದ್ಧ ಪ್ರಕೃತಿಯ ತೋರ್ಪಡಿಸುವ ಪ್ರತಿಭಟನೆಗಳೇ ಆಗಿವೆ. ಇದನ್ನು ಅರ್ಥೈಸುವುದರಲ್ಲಿಯೇ ಇಳೆಯ ಅಷ್ಟೂ ಜೀವಿಗಳ ಶ್ರೇಯಸ್ಸಿದೆ.

ಪ್ರಜೆಗಳ ಅಹಮಿಕೆಗಳು ನಾಯಕರಿಗೆ ಮೂರ್ಖತನವನ್ನು ದಯಪಾಲಿಸುತ್ತವೆ. ಕಾವೇರಿ ವಿಚಾರದಲ್ಲಿ ಆಗಿರುವುದು ಇದೇ. ಸಭಾತ್ಯಾಗ, ಪಾದಯಾತ್ರೆಯಂತಹ ವೈಫಲ್ಯ ಖಚಿತ ಜನಮರುಳು ನಡೆಗಳು ವಾಸ್ತವದ ಜೊತೆಗೆ ಯಾವ ನೆಲೆಯಲ್ಲೂ ಕೂಡಿಕೆಯಾಗದ ಕೇವಲ ಮೂರ್ಖತನದ ಆಚರಣೆಗಳಾಗಿವೆ. ಹೀಗೆ, “ನನ್ನದು” ಅನ್ನೋ ಅಹಂನ್ನು ಬಿಟ್ಟಾಗಲೇ “ಹಂಚಿಕೆ” ಎಂಬ ದಾಸೋಹ ತತ್ವವು ತಾತ್ವಿಕವಾಗಿ ಸಾಧಿತವಾಗುತ್ತದೆ. “ನನ್ನದೇ” ಆದಲ್ಲಿ ಹಂಚುವ ಅನಿವಾರ್ಯತೆಯಾದರೂ ಏನಿರುತ್ತದೆ? ಆಗ ನಡೆಯುವುದು ಹಂಚಿಕೆಯಲ್ಲ; ಅದು “ದಾನ”. ದಾನ ನೀಡಲು ಕಾವೇರಿ ಯಾರ ಸ್ವತ್ತೂ ಅಲ್ಲ; ಕಿತ್ತುಕೊಳ್ಳಲು ಇನ್ಯಾರ ಆಸ್ತಿಯೂ ಅಲ್ಲ. ಕಾವೇರಿ  ಸ್ವಯಂ ಪ್ರಕೃತಿಯ ಮೂರ್ತರೂಪ. ಅದರೊಳಗೆ ನಾವುಗಳು; ನಮ್ಮೊಳಗೆ ಅದಲ್ಲ. ಇದು ಸಾರ್ವಕಾಲಿಕ, ಸಾರ್ವತ್ರಿಕವಾದ ಸತ್ಯ. ಇದೇ ಪರಿಸರ ಕಾರ್ಯಕರ್ತೆ ವಂದನಾ ಶಿವ ಅವರು ಪ್ರತಿಪಾದಿಸುವ ಜಲ ಪ್ರಜಾಪ್ರಭುತ್ವದ ಅಡಿಗಲ್ಲು.

ಇಂತಹ ತಾತ್ವಿಕ ನೆಲೆಗಟ್ಟನ್ನು ಒಪ್ಪಿಕೊಂಡೇ “ಹಂಚಿಕೆ” ಎಂಬ “ಏರ್ಪಾಟು ವ್ಯವಸ್ಥೆ”ಯ ವ್ಯವಹಾರಗಳನ್ನು ನಿರ್ವಹಿಸಬೇಕಾಗಿದೆ. ನಮ್ಮಲ್ಲಿ ಸಮಸ್ಯೆಯ ಸಮಾಧಾನಗಳಿಗೆ ಹಲವು ಮಟ್ಟದ ಸಾಂಸ್ಥಿಕ ಸಂರಚನೆಗಳಿವೆ. ಆಯಾ ಘಟಕಗಳ ಅಸ್ವೀಕಾರಾರ್ಹ ತೀರ್ಪುಗಳನ್ನು ಪ್ರಶ್ನಿಸುವ ಅಫೀಲು ವ್ಯವಸ್ಥೆಯೂ ಇದೆ. ಇಂತಹ ಪ್ರಜಾತಾಂತ್ರಿಕ ಸಂರಚನೆಯ ಮೂಲಾಂಶ “ಚರ್ಚೆ”. ಅದರೊಳಗೆ ಬರುವಂತಹದ್ದು ವಾದ-ಪ್ರತಿವಾದ ಮಂಡನೆಗಳು ಹಾಗೂ ಇತ್ಯಾತ್ಮಕ ಒತ್ತಡ ಸೃಷ್ಟಿಯ ಯತ್ನಗಳು. ಇಂತಹ ವ್ಯವಸ್ಥೆಯನ್ನು ವಿಶ್ವಾಸದಿಂದ ಸ್ವೀಕರಿಸಿ ಸಮಷ್ಟಿಯ ಹಿತಕ್ಕೆ ಪೂರಕವಾಗುವಂತೆ ಚಾತುರ್ಯದಿಂದ ಜಯಿಸಬೇಕಾದದ್ದು ರಾಜಕೀಯ ನಾಯಕತ್ವ. ಕರ್ನಾಟಕ ಸರ್ಕಾರದ ವೈಫಲ್ಯ ಇರುವುದು ಇಲ್ಲಿಯೇ. ತಮಿಳುನಾಡಿನ ಯಶಸ್ಸೂ ಇಲ್ಲಿಯೇ. ತಮಿಳುನಾಡಿನ ರಾಜಕೀಯ ನಾಯಕತ್ವವು “ಎಲ್ಲರನ್ನೂ ಒಳಗೊಂಡ” ಏಕತ್ವದ ವ್ಯವಸ್ಥೆಯೊಂದನ್ನು ವಿಕಸಿಸಿದ್ದು, ಕಾವೇರಿಯ ಅಂಕಣದಲ್ಲಿ ಸದಾ ಗೆಲ್ಲುತ್ತಿದೆ. ತನ್ನ ಜನ ಹಾಗೂ ಆಸ್ಮಿತೆಯ ಹಿತ ಕಾಯುವ ತಮಿಳು ಮಾದರಿ ಮೆಚ್ಚತಕ್ಕದ್ದೇ. ಸಂಕುಚಿತತೆಯನ್ನು ಬಿಟ್ಟು ಇನ್ನಷ್ಟು ಇನ್‌ಕ್ಲೂಸಿವ್ ಆದಲ್ಲಿ ಅದು ಅನುಕರಣೀಯವಾಗಬಲ್ಲದು. ಇದಕ್ಕೆ ತದ್ವಿರುದ್ದವಾಗಿ, ಕರ್ನಾಟಕದ ನಾಯಕತ್ವವು ಕೇವಲ ಜನಾನುರಾಗಿ ಆಚರಣೆಗಳಿಗೆ ಮೊರೆ ಹೋಗುತ್ತಿದೆ. ಪ್ರಧಾನಿ ನೇತೃತ್ವದ ಸಭೆಯಿಂದ ಹೊರನಡೆದ ಪ್ರಕರಣವು ಇದನ್ನೇ ಪ್ರತಿನಿಧಿಸುತ್ತದೆ. ಅದು ಪ್ರಜಾತಂತ್ರದ ಮೂಲಾಂಶವಾದ ಚರ್ಚೆಯಲ್ಲಿಯೇ ಅವಿಶ್ವಾಸವನ್ನು ಸಂಕೇತಿಸುತ್ತದೆ. “ಹಿತಕಾಯುವ” ಕಾರ್ಯವನ್ನು ವಕೀಲರಿಗೆ ಹೊರಗುತ್ತಿಗೆ ನೀಡಿ ತಾನು ಕೇವಲ ಅಗ್ಗದ ಜನಪ್ರಿಯತೆಯಲ್ಲಿ ಈಜಾಡುವುದು ಅಪಾಯಕಾರಿಯಾದ ಪ್ರವೃತ್ತಿಯಾಗಿದೆ.

   ***

ಹೋರಾಟ ಸಮಾಜದ ಕ್ರಿಯಾಶೀಲತೆ ಹಾಗೂ ಜೀವಂತಿಕೆಯ ಪ್ರಾಥಮಿಕ ಲಕ್ಷಣ. ನಮ್ಮ ದೇಶಕ್ಕೆ ಯಶಸ್ವಿ ಹೋರಾಟದ ಆಂದೋಲನಗಳ ತೀರಾ ಇತ್ತೀಚಿನ ನೆನಪುಗಳಿವೆ. ಸ್ವಾತಂತ್ರ್ಯೋತ್ತರ ಭಾರತದ ಪ್ರಾತಿನಿಧಿಕ ರಾಜಕೀಯ ಸಂರಚನೆಯಲ್ಲಿ ಒಂದು ಇತ್ಯಾತ್ಮಕ ಒತ್ತಡ ತಂತ್ರವಾಗಿ ಹೋರಾಟ ಇನ್ನಷ್ಟು ಮಹತ್ವವನ್ನು ಪಡೆದಿದೆ. ಇಲ್ಲಿ ಹೋರಾಟ ಎಂಬುವುದು ಕಾಲಕಾಲಕ್ಕೆ ಕಾಣಿಸಿಕೊಳ್ಳುವ ಕೇವಲ ಆವೇಶ ಭರಿತ ಪ್ರತಿಕ್ರಿಯಾತ್ಮಕ ಅಭಿವ್ಯಕ್ತಿಯಷ್ಟೇ ಅಲ್ಲ. ಅದು ಮೂರ್ತ ಹಾಗೂ ಅಮೂರ್ತ ಎರಡೂ ನೆಲೆಗಳಲ್ಲಿ ನಿರಂತರವಾಗಿ ನಡೆಯುವ ಜನಜಾಗೃತಿಯ ಪ್ರಕ್ರಿಯೆಯಾಗಿದೆ. ಇಂತಹ ಸಫಲ ಹೋರಾಟಗಳ ಗಮ್ಯ ಹಾಗೂ ಗಮನ — ಇವೆರಡರಲ್ಲಿಯೂ ವೈಶಾಲ್ಯತೆ ಇರುತ್ತದೆ.

ಕಾವೇರಿ ಹೋರಾಟದ ಆಂತರ್ಯದಲ್ಲೇ ಹಲವು ವೈರುಧ್ಯಗಳಿವೆ. ಅದು ಕೇವಲ ಒಂದು ಪ್ರತಿಕ್ರಿಯೆ, ಒಂದು ಔಟ್‌ಬ್ರಸ್ಟ್ ಅಷ್ಟೇ. ಅಲ್ಲಿ ನಿರಂತರತೆಯಿದೆ. ಆದರೆ ಅದು ಕೇವಲ ಘಟನೆಗೆ ಸೀಮಿತವಾಗಿದೆ. ಸಂಕುಚಿತ ನೆಲೆಗಳಿಂದ ಅದರ ತಾತ್ವಿಕ ತಳಹದಿಯೂ ದುರ್ಬಲವಾಗಿದ್ದು ಬೌದ್ಧಿಕತೆಯ ಒಳಗೊಳ್ಳುವಿಕೆ ಕೂಡಾ ಪೂರ್ಣ  ಪ್ರಮಾಣದಲ್ಲಿ ಕಂಡುಬರುವುದಿಲ್ಲ. ಹೀಗಾಗಿ ಚಳವಳಿಯ ಗರ್ಭದಲ್ಲಿ ಪರ್ಯಾಯ ಸೃಷ್ಟಿಯ ಯಾವುದೇ ಕನಸುಗಳು ಅಥವಾ ಹೊಳಹುಗಳು ಗೋಚರಿಸುವುದಿಲ್ಲ.

ಆದಾಗ್ಯೂ ತನ್ನೆಲ್ಲಾ ದೋಷಗಳು ಹಾಗೂ ವೈಫಲ್ಯಗಳ ನಡುವೆಯೂ ಹಲವು ಸಾಧ್ಯತೆಗಳು ಮತ್ತು ಆಶಾವಾದಗಳನ್ನು ಕಾವೇರಿ ಚಳವಳಿಯು ಸೃಷ್ಟಿಸಿದೆ. ವರ್ತಮಾನದ ಸವಾಲುಗಳು ಅಂತಹ ಸಾಧ್ಯತೆಗಳಿಗೆ ನೀರುಣಿಸುತ್ತಿವೆ. ಒಂದು ಪರಿಪೂರ್ಣ ರೈತ ಆಂದೋಲನವಾಗಿ ರೂಪುಗೊಳ್ಳುವ ತಾಕತ್ತು ಸದ್ಯದ ಹೋರಾಟಕ್ಕಿದೆ.  ಈ ಹಿನ್ನೆಲೆಯಲ್ಲಿ ಕಾವೇರಿ ಹೋರಾಟವು ಹೊಸ ಚಿಂತನೆಗಳು ಹಾಗೂ ಚಳವಳಿಯ ಹೊಸ ಮಾದರಿಗಳನ್ನು ಅಳವಡಿಸಿಕೊಳ್ಳುವ ಅವಶ್ಯಕತೆಯಿದೆ.

ಪ್ರಸ್ತುತ ವ್ಯವಸಾಯಿಗರ ಜೀವನವು ದಯನೀಯ ಸ್ವರೂಪದಲ್ಲಿದೆ. ಕೇವಲ ನೀರಿನ ಲಭ್ಯತೆಯೊಂದೇ ರೈತರ ಜೀವನ ಮಟ್ಟದ ಸುಧಾರಣೆಗೆ ಕಾರಣವಾಗುತ್ತದೆಯೇ? ಖಂಡಿತಾ ಇಲ್ಲ. ಅದು ಸಾಧ್ಯವಾಗುವುದು “ನೀರುಣಿಸಿ, ಬೆವರ ಹರಿಸಿ” ತಾವು ಬೆಳೆದ ಬೆಳೆಗಳಿಗೆ ನ್ಯಾಯಯುತವಾದ ಮೌಲ್ಯವು ದೊರೆತಾಗಲೇ ಆಗಿದೆ. ಬೆಳೆದ ಅಷ್ಟೂ ಟೊಮ್ಯಾಟೊಗಳನ್ನು, ಈರುಳ್ಳಿಗಳನ್ನು ಬೀದಿಗೆಸೆಯುವುದೇ ಆದಲ್ಲಿ ಹರಿದ ನೀರಿಗೆ ಅಥವಾ ಬೆವರಿಗೆ ಯಾವ ಬೆಲೆಯಿರುತ್ತದೆ? ವರ್ತಮಾನದ ಸವಾಲು ಇದೊಂದೇ ಅಲ್ಲ. ನೀರು ನಿಧಾನವಾಗಿ ಕಾರ್ಪೋರೇಟ್ ಹಿತಾಸಕ್ತಿಗಳ ವಕ್ರದೃಷ್ಟಿಗೆ ಬೀಳುತ್ತಿದೆ. ಪ್ರಕೃತದತ್ತವಾಗಿರುವ, ಸಕಲ ಜೀವಿಗಳ ಪೋಷಣೆಗೆ ಇರುವ ನೀರನ್ನು ಸರಕೀಕರಣಗೊಳಿಸುವ ಅಥವಾ ಅದಕ್ಕೆ ವಿತ್ತೀಯ ಮೌಲ್ಯವನ್ನು ನೀಡುವ ಯತ್ನಗಳು ನಡೆಯುತ್ತಲೇ ಇವೆ.

ಇಂತಹ ಸವಾಲುಗಳ ಹಿನ್ನೆಲೆಯಲ್ಲಿಯೇ ಕಾವೇರಿ ಚಳವಳಿಯು ಹೊಸ ರೂಪವನ್ನು ಪಡೆದುಕೊಳ್ಳಬೇಕಿದೆ. ಅದು ಕನ್ನಡ ತಮಿಳು ಸೇರಿದಂತೆ ಕಾವೇರಿ ಪಾತ್ರದ ಅಷ್ಟೂ ರೈತರ ಆಂದೋಲನವಾಗಬೇಕು. ಒಂದು ವರ್ಗಶಕ್ತಿಯಾಗಿ ಐಕ್ಯತೆಯ ನೆಲೆಯಲ್ಲಿ ಮರುಜೀವ ಪಡೆದುಕೊಳ್ಳಬೇಕು. ಮಹಾತ್ಮ ಗಾಂಧೀಜಿಯವರು ಒಮ್ಮೆ ಲಂಡನ್‌ಗೆ ತೆರಳಿದ್ದಾಗ ಮ್ಯಾಂಚೆಸ್ಟರ್‌ನ ಕಾರ್ಮಿಕೆಯೊಬ್ಬಳು ಗಾಂಧಿಯ ಸ್ವದೇಶಿ ನೆಲೆಯ ಆಂದೋಲನಗಳ ಪರಿಣಾಮ ಸಂಕಷ್ಟಕ್ಕೀಡಾಗಿ ದೀನಳಾದ ಘಟನೆಯನ್ನು ಹೇಳಿಕೊಂಡಿದ್ದಳಂತೆ. ಆಗ ಗಾಂಧಿ ಆಕೆಯೂ ಕೂಡಾ ತನ್ನ ದೀನ ಪರ ಚಳವಳಿಯಲ್ಲಿ ಪಾಲ್ಗೊಳ್ಳಬೇಕೆಂದು ಕೇಳಿಕೊಂಡರಂತೆ. ಇದು ವರ್ಗಸ್ವರೂಪಿ ನೆಲೆ. ಇಂತಹ ನೆಲೆಯನ್ನು ಕಾವೇರಿ ಹೋರಾಟವು ಪಡೆಯಬೇಕು. ಇಲ್ಲಿ ಪರಸ್ಪರ ವಿಶ್ವಾಸ ವರ್ಧಕ ಕ್ರಮಗಳ ಅವಶ್ಯಕತೆಯಿದೆ.

ಕಾವೇರಿ ಸಮಸ್ಯೆಯ ಪರಿಹಾರ ಕಾರ್ಪೋರೇಟ್ ಜಗತ್ತು ಹಾಗೂ ಬಳಸು ರಾಜಕಾರಣ ದ್ವೇಷಿಸುವ “ಸಹಕಾರ ತತ್ವ”ದಲ್ಲಿದೆ. ಕಾವೇರಿ ಪಾತ್ರದ ಎಲ್ಲಾ ರೈತರ ನಡುವೆ ಸಮರ್ಪಕ ಹಾಗೂ ವ್ಯವಸ್ಥಿತವಾದ ಸಹಕಾರ ವ್ಯವಸ್ಥೆಯೊಂದು ರೂಪುಗೊಳ್ಳವುದು ಇಲ್ಲಿ ಅವಶ್ಯಕ. “ನ್ಯಾಯಯುತ ಹಂಚಿಕೆ”, “ಸಧ್ಬಳಕೆ”, ಹಾಗೂ “ಸುಸ್ಥಿರತೆ” ಅಂತಹ ಸಂರಚನೆಯ ಮೂಲಾಂಶಗಳಾಗಬೇಕು. ಜಲ ಮರುಪೂರಣ, ಅರಣ್ಯೀಕರಣ, ಸೂಕ್ಷ್ಮ ನೀರಾವರಿ ಹಾಗೂ ಸಾವಯವ ಕೃಷಿ ಇವೇ ಮೊದಲಾದ ಆಚರಣೆಗಳು ಆಂದೋಲನ ಸ್ವರೂಪದಲ್ಲಿ ನಡೆಯಬೇಕು. ಇವಿಷ್ಟೂ ಅಂಶಗಳು ರೈತರ ಪಾರಂಪರಿಕ ಬದುಕಿನಲ್ಲಿಯೇ ಇವೆ ಎನ್ನುವುದು ಇಲ್ಲಿ ಉಲ್ಲೇಖನೀಯ. ಹಾಗೆಯೇ ಹೊಸ ವ್ಯವಸ್ಥೆಯ ನಿಗಾವಣೆಗೆ ಸಮರ್ಥ ಗ್ರಾಮ ಸಭೆಗಳ ಅನಿವಾರ್ಯತೆಯೂ ಇದೆ. ಹೀಗೆ, ರಾಜ್ಯಗಳ ನಡುವಣ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕುವ ಸಾಧ್ಯತೆಗಳಿರುವುದು ಕಾವೇರಿ ಹೋರಾಟವು ಒಂದು ಪರಿಪೂರ್ಣ ರೈತ ಚಳವಳಿಯಾಗಿ ರೂಪುಗೊಂಡಾಗಲೇ ಆಗಿದೆ.

ಇಂತಹ ಒಂದು ವ್ಯವಸ್ಥೆಯ ವಿಕಾಸದ ಹಾದಿಯಲ್ಲಿ ಪೂರಕ ರಾಜಕೀಯ ನೆಲೆಯೊಂದರ ಅಸ್ತಿತ್ವವೂ ಅಗತ್ಯವಾಗಿದೆ. ಒಮ್ಮೆ ಜೆ.ಎಚ್. ಪಟೇಲರು ತಮಿಳುನಾಡಿನ ಮುಖ್ಯಮಂತ್ರಿಗಳೂ ಭಾಗವಹಿಸಿದ್ದ ಕಾವೇರಿ ಕುರಿತಾದ ಸಭೆಯಲ್ಲಿ ಆಡಿದ್ದ ಮಾತುಗಳನ್ನು ಯು.ಆರ್. ಅನಂತಮೂರ್ತಿಯವರು ಲೇಖನವೊಂದರಲ್ಲಿ ಪ್ರಸ್ತಾಪಿಸಿದ್ದಾರೆ. “ಕರ್ನಾಟಕದ ಮುಖ್ಯಮಂತ್ರಿಯಾಗಿ ನಾನು ತಮಿಳುನಾಡಿನ ರೈತರ ಬಗ್ಗೆ ಯೋಚಿಸಬೇಕು. ಹಾಗೆಯೇ ಶ್ರೀ ಕರುಣಾನಿಧಿಯವರು ಕನ್ನಡದ ರೈತರ ಕುರಿತಾಗಿ ಕಾಳಜಿ ವಹಿಸಬೇಕು.” ಇದು ಎನೇಬಲಿಂಗ್ ರಾಜಕೀಯದ ಮಾದರಿ. ಅಂತಹ ವ್ಯವಸ್ಥೆಯೊಂದರ ನಿರ್ಮಾಪಕರಾಗಬೇಕಾಗಿರುವುದು ಕೂಡಾ ನಾವೇ ಅಲ್ಲವೇ?