Daily Archives: November 8, 2012

ನವೀನ್ ಸೂರಿಂಜೆ ಬಂಧನ… ನಿರಪರಾಧಿಗಳ ಬೆನ್ನತ್ತಿ ಪೋಲಿಸರು…

ಸ್ನೇಹಿತರೆ,

ರಾತ್ರಿ ಹನ್ನೊಂದರ ಸುಮಾರಿಗೆ ವಿಷಯ ಗೊತ್ತಾಯಿತು. ಸುಮಾರು ಒಂದು ತಿಂಗಳ ಹಿಂದೆ ನವೀನ್ ಸೂರಿಂಜೆಯವರ ವಿರುದ್ಧ ಮಂಗಳೂರಿನ ನ್ಯಾಯಾಲಯ ಜಾಮೀನುರಹಿತ ಅರೆಸ್ಟ್ ವಾರಂಟ್ ಹೊರಡಿಸಿದ್ದದ್ದು ನಿಮಗೆ ಗೊತ್ತೇ ಇದೆ. ಈ ಘಟನೆಗೆ ಮೂಲಕಾರಣವಾದ ವಿಷಯಗಳೂ ಸಹ ನಿಮಗೆ ಗೊತ್ತಿದೆ. (ಇಲ್ಲಿ, ಇಲ್ಲಿ, ಮತ್ತು ಇಲ್ಲಿ.)

ನಮ್ಮ ರಾಜ್ಯದ ನೋವು, ಅಕ್ರಮ, ಅಸಹಾಯಕತೆಗಳು ಒಂದೆರಡಲ್ಲ. ನಮ್ಮ ಪೋಲಿಸ್ ವ್ಯವಸ್ಥೆ ಪ್ರಭಾವಶಾಲಿಗಳ ಮತ್ತು ಅಧಿಕಾರಸ್ಥರ ಕುತಂತ್ರಗಳಿಗೆ ಬಲಿಯಾಗಿ ಪಟ್ಟಭದ್ರರ ಕೈಗೊಂಬೆಯಾಗಿ ಬದಲಾಗಿದೆ. ಆ ಇಲಾಖೆ ಸಂವೇದನಾಶೀಲತೆ ಮತ್ತು ಆತ್ಮವಿಮರ್ಶೆಯನ್ನು ಕಳೆದುಕೊಂಡಿದೆ. ಇಲ್ಲವಾದಲ್ಲಿ ಸಾಕ್ಷಿಯನ್ನೇ ಅಪರಾಧಿಯನ್ನಾಗಿಸುವ, ಅದೂ ತನ್ನ ಕರ್ತವ್ಯ ನಿರ್ವಹಿಸಲು ಹೋಗಿದ್ದ ಪತ್ರಕರ್ತನನ್ನೇ ಆರೋಪಿಯೆಂದು ಚಾರ್ಜ್‌ಶೀಟ್‌ನಲ್ಲಿ ಸೇರಿಸುವ ಕೆಲಸ ಮಾಡುತ್ತಿರಲಿಲ್ಲ. ಯಾವುದೇ ಸರ್ಕಾರಿ ವ್ಯವಸ್ಥೆ ಅಥವ ಸಂಸ್ಥೆಯನ್ನು ನಂಬುವಂತಹ, ನೆಚ್ಚುವಂತಹ ವಾತಾವರಣವನನ್ನು ನಮ್ಮ ರಾಜಕಾರಣಿಗಳು ಮತ್ತು ಪಟ್ಟಭದ್ರರು ಸಂಪೂರ್ಣವಾಗಿ ಹಾಳುಮಾಡಿದ್ದಾರೆ. ಹಾಗೆಯೇ, ಸಮಾಜಮುಖಿಯಾಗಿ ಕೆಲಸ ಮಾಡುವವರ ಆತ್ಮವಿಶ್ವಾಸ ಮತ್ತು ಸ್ಥೈರ್ಯವನ್ನು ಕುಗ್ಗಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ.

ಈಗ ನವೀನ್ ಸೂರಿಂಜೆಯವರ ಬಂಧನವಾಗಿದೆ. ರಾಜ್ಯದ ಪತ್ರಕರ್ತರು ಅವರಿಗೆ ನೈತಿಕ ಬೆಂಬಲ ನೀಡಬೇಕು ಮತ್ತು  ಅವರನ್ನು ಆರೋಪಪಟ್ಟಿಯಿಂದ — ಸಕಾರಣಕ್ಕಾಗಿ, ನ್ಯಾಯದ ಹಿನ್ನೆಲೆಯಲ್ಲಿ — ಕೈಬಿಡಬೇಕೆಂಬ ಒತ್ತಡ ತರಬೇಕೆಂದು ನಾನು ಈ ಮೂಲಕ ಅವರೆಲ್ಲರಲ್ಲಿ ವಿನಂತಿಸಿಕೊಳ್ಳುತ್ತೇನೆ. ಈಗಲ್ಲದಿದ್ದರೆ ಇನ್ಯಾವಾಗ?

ನವೀನ್ ಸೂರಿಂಜೆಯವರು ಈ ವಾರಂಟ್ ವಿಚಾರವಾಗಿ ಎರಡು-ಮೂರು ವಾರಗಳ ಹಿಂದೆಯೇ ವಕೀಲರನ್ನು ಬೇಟಿಯಾಗಿ ಕಾನೂನು ಪ್ರಕ್ರಿಯೆ ಬಗ್ಗೆ ಚರ್ಚಿಸಿದ್ದರು. ಅವರ ಎಲ್ಲಾ ಕಾನೂನಾತ್ಮಕ ಹೋರಾಟಕ್ಕೆ ನಮ್ಮ ವರ್ತಮಾನ ಬಳಗದ ಬೆಂಬಲ ಇದೆ. ಪೋಲಿಸರು ಬೇಕೆಂತಲೇ “ಫಿಟ್” ಮಾಡಿರುವ ಈ ಕೇಸಿನಿಂದ ಅವರು ಆದಷ್ಟು ಬೇಗ ಹೊರಬರಲಿ, ತಮ್ಮ ಕೆಲಸ ಮುಂದುವರೆಸಲಿ ಎಂದು ಈ ಮೂಲಕ ಆಶಿಸುತ್ತೇವೆ. ಈ ಯುವ ಪತ್ರಕರ್ತನ ಮನೆಯವರು, ಅವರ ತಾಯಿತಂದೆ, ಧೈರ್ಯಗೆಡಬಾರದೆಂದು, ನಮ್ಮೆಲ್ಲರ ನೈತಿಕ ಬೆಂಬಲ ಅವರಿಗಿದೆ ಎಂದು ಈ ಮೂಲಕ ಹೇಳಬಯಸುತ್ತೇವೆ. ಅವರ ಮಗ ಮಾಡಿರುವ ಕೆಲಸದ ಬಗ್ಗೆ ಮತ್ತು ಅವರ ಕಾಳಜಿ ಮತ್ತು ಪ್ರಾಮಾಣಿಕತೆ ಬಗ್ಗೆ ನಮಗೆಲ್ಲ ಹೆಮ್ಮೆ ಇದೆ.

ಆದರೂ, ವಿಷಾದನೀಯ ಸಮಯದಲ್ಲಿ ನಾವು ಬದುಕುತ್ತಿದ್ದೇವೆ.

ರವಿ ಕೃಷ್ಣಾರೆಡ್ಡಿ