ನವೀನ್ ಸೂರಿಂಜೆ ಬಂಧನ… ನಿರಪರಾಧಿಗಳ ಬೆನ್ನತ್ತಿ ಪೋಲಿಸರು…

ಸ್ನೇಹಿತರೆ,

ರಾತ್ರಿ ಹನ್ನೊಂದರ ಸುಮಾರಿಗೆ ವಿಷಯ ಗೊತ್ತಾಯಿತು. ಸುಮಾರು ಒಂದು ತಿಂಗಳ ಹಿಂದೆ ನವೀನ್ ಸೂರಿಂಜೆಯವರ ವಿರುದ್ಧ ಮಂಗಳೂರಿನ ನ್ಯಾಯಾಲಯ ಜಾಮೀನುರಹಿತ ಅರೆಸ್ಟ್ ವಾರಂಟ್ ಹೊರಡಿಸಿದ್ದದ್ದು ನಿಮಗೆ ಗೊತ್ತೇ ಇದೆ. ಈ ಘಟನೆಗೆ ಮೂಲಕಾರಣವಾದ ವಿಷಯಗಳೂ ಸಹ ನಿಮಗೆ ಗೊತ್ತಿದೆ. (ಇಲ್ಲಿ, ಇಲ್ಲಿ, ಮತ್ತು ಇಲ್ಲಿ.)

ನಮ್ಮ ರಾಜ್ಯದ ನೋವು, ಅಕ್ರಮ, ಅಸಹಾಯಕತೆಗಳು ಒಂದೆರಡಲ್ಲ. ನಮ್ಮ ಪೋಲಿಸ್ ವ್ಯವಸ್ಥೆ ಪ್ರಭಾವಶಾಲಿಗಳ ಮತ್ತು ಅಧಿಕಾರಸ್ಥರ ಕುತಂತ್ರಗಳಿಗೆ ಬಲಿಯಾಗಿ ಪಟ್ಟಭದ್ರರ ಕೈಗೊಂಬೆಯಾಗಿ ಬದಲಾಗಿದೆ. ಆ ಇಲಾಖೆ ಸಂವೇದನಾಶೀಲತೆ ಮತ್ತು ಆತ್ಮವಿಮರ್ಶೆಯನ್ನು ಕಳೆದುಕೊಂಡಿದೆ. ಇಲ್ಲವಾದಲ್ಲಿ ಸಾಕ್ಷಿಯನ್ನೇ ಅಪರಾಧಿಯನ್ನಾಗಿಸುವ, ಅದೂ ತನ್ನ ಕರ್ತವ್ಯ ನಿರ್ವಹಿಸಲು ಹೋಗಿದ್ದ ಪತ್ರಕರ್ತನನ್ನೇ ಆರೋಪಿಯೆಂದು ಚಾರ್ಜ್‌ಶೀಟ್‌ನಲ್ಲಿ ಸೇರಿಸುವ ಕೆಲಸ ಮಾಡುತ್ತಿರಲಿಲ್ಲ. ಯಾವುದೇ ಸರ್ಕಾರಿ ವ್ಯವಸ್ಥೆ ಅಥವ ಸಂಸ್ಥೆಯನ್ನು ನಂಬುವಂತಹ, ನೆಚ್ಚುವಂತಹ ವಾತಾವರಣವನನ್ನು ನಮ್ಮ ರಾಜಕಾರಣಿಗಳು ಮತ್ತು ಪಟ್ಟಭದ್ರರು ಸಂಪೂರ್ಣವಾಗಿ ಹಾಳುಮಾಡಿದ್ದಾರೆ. ಹಾಗೆಯೇ, ಸಮಾಜಮುಖಿಯಾಗಿ ಕೆಲಸ ಮಾಡುವವರ ಆತ್ಮವಿಶ್ವಾಸ ಮತ್ತು ಸ್ಥೈರ್ಯವನ್ನು ಕುಗ್ಗಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ.

ಈಗ ನವೀನ್ ಸೂರಿಂಜೆಯವರ ಬಂಧನವಾಗಿದೆ. ರಾಜ್ಯದ ಪತ್ರಕರ್ತರು ಅವರಿಗೆ ನೈತಿಕ ಬೆಂಬಲ ನೀಡಬೇಕು ಮತ್ತು  ಅವರನ್ನು ಆರೋಪಪಟ್ಟಿಯಿಂದ — ಸಕಾರಣಕ್ಕಾಗಿ, ನ್ಯಾಯದ ಹಿನ್ನೆಲೆಯಲ್ಲಿ — ಕೈಬಿಡಬೇಕೆಂಬ ಒತ್ತಡ ತರಬೇಕೆಂದು ನಾನು ಈ ಮೂಲಕ ಅವರೆಲ್ಲರಲ್ಲಿ ವಿನಂತಿಸಿಕೊಳ್ಳುತ್ತೇನೆ. ಈಗಲ್ಲದಿದ್ದರೆ ಇನ್ಯಾವಾಗ?

ನವೀನ್ ಸೂರಿಂಜೆಯವರು ಈ ವಾರಂಟ್ ವಿಚಾರವಾಗಿ ಎರಡು-ಮೂರು ವಾರಗಳ ಹಿಂದೆಯೇ ವಕೀಲರನ್ನು ಬೇಟಿಯಾಗಿ ಕಾನೂನು ಪ್ರಕ್ರಿಯೆ ಬಗ್ಗೆ ಚರ್ಚಿಸಿದ್ದರು. ಅವರ ಎಲ್ಲಾ ಕಾನೂನಾತ್ಮಕ ಹೋರಾಟಕ್ಕೆ ನಮ್ಮ ವರ್ತಮಾನ ಬಳಗದ ಬೆಂಬಲ ಇದೆ. ಪೋಲಿಸರು ಬೇಕೆಂತಲೇ “ಫಿಟ್” ಮಾಡಿರುವ ಈ ಕೇಸಿನಿಂದ ಅವರು ಆದಷ್ಟು ಬೇಗ ಹೊರಬರಲಿ, ತಮ್ಮ ಕೆಲಸ ಮುಂದುವರೆಸಲಿ ಎಂದು ಈ ಮೂಲಕ ಆಶಿಸುತ್ತೇವೆ. ಈ ಯುವ ಪತ್ರಕರ್ತನ ಮನೆಯವರು, ಅವರ ತಾಯಿತಂದೆ, ಧೈರ್ಯಗೆಡಬಾರದೆಂದು, ನಮ್ಮೆಲ್ಲರ ನೈತಿಕ ಬೆಂಬಲ ಅವರಿಗಿದೆ ಎಂದು ಈ ಮೂಲಕ ಹೇಳಬಯಸುತ್ತೇವೆ. ಅವರ ಮಗ ಮಾಡಿರುವ ಕೆಲಸದ ಬಗ್ಗೆ ಮತ್ತು ಅವರ ಕಾಳಜಿ ಮತ್ತು ಪ್ರಾಮಾಣಿಕತೆ ಬಗ್ಗೆ ನಮಗೆಲ್ಲ ಹೆಮ್ಮೆ ಇದೆ.

ಆದರೂ, ವಿಷಾದನೀಯ ಸಮಯದಲ್ಲಿ ನಾವು ಬದುಕುತ್ತಿದ್ದೇವೆ.

ರವಿ ಕೃಷ್ಣಾರೆಡ್ಡಿ

7 thoughts on “ನವೀನ್ ಸೂರಿಂಜೆ ಬಂಧನ… ನಿರಪರಾಧಿಗಳ ಬೆನ್ನತ್ತಿ ಪೋಲಿಸರು…

  1. anand prasad

    ತುರ್ತು ಪರಿಸ್ಥಿತಿಯ ವಿರುದ್ಧವಾಗಿ ಕೊರೆಯುವ ಪಕ್ಷದವರೇ ತುರ್ತು ಪರಿಸ್ಥಿತಿಯನ್ನು ನಾಚಿಸುವ ರೀತಿಯಲ್ಲಿ ಕರ್ನಾಟಕದಲ್ಲಿ ನಡೆಸುತ್ತಿರುವ ಎರಡನೇ ಪ್ರಕರಣವಿದು. ಕೆಲ ವರ್ಷಗಳ ಹಿಂದೆ ಕರಾವಳಿ ಅಲೆ ಸಂಪಾದಕರನ್ನು ಕಾರಣವಿಲ್ಲದೆ ಬಂಧಿಸಿ ಒಂದು ತಿಂಗಳು ಜೈಲಿಗೆ ಹಾಕಲಾಗಿತ್ತು. ಆದರೆ ಮೇಲ್ಮನವಿಯಲ್ಲಿ ರಾಜ್ಯ ಹೈಕೋರ್ಟ್ ಕರಾವಳಿ ಅಲೆ ಸಂಪಾದಕರ ಬಂಧನ ಕಾನೂನುಬಾಹಿರ ಎಂದು ತೀರ್ಪು ನೀಡಿ ರಾಜ್ಯ ಸರ್ಕಾರಕ್ಕೆ ಹತ್ತು ಸಾವಿರ ರೂಪಾಯಿ ದಂಡ ವಿಧಿಸಿ ಛೀಮಾರಿ ಹಾಕಿತ್ತು. ಇದರಿಂದ ರಾಜ್ಯ ಸರ್ಕಾರ ನಡೆಸುತ್ತಿರುವವರು ಬುದ್ಧಿ ಕಲಿತಿಲ್ಲ ಎಂಬುದು ಇದೀಗ ಸಾಬೀತಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮಾಧ್ಯಮದವರಲ್ಲಿ ಹೆಚ್ಚಿನವರು ಕೇಸರೀಕರಣಗೊಂಡಿರುವುದರಿಂದ ಇಂಥ ಬಂಧನವನ್ನು ಸಮರ್ಥಿಸುವ ಸಾಧ್ಯತೆಯಿದೆ ಅಥವಾ ಇದನ್ನು ವಿರೋಧಿಸುವ ಗೋಜಿಗೆ ಹೋಗದೆ ಮೌನವಾಗಿ ನಿಲ್ಲುವ ಸಾಧ್ಯತೆ ಇದೆ. ತುರ್ತು ಪರಿಸ್ಥಿತಿಯ ನಂತರ ಚುನಾವಣೆಗಳಲ್ಲಿ ಜನರು ಇಂಥ ಅತಿರೇಕಗಳಿಗೆ ಚೆನ್ನಾಗಿಯೇ ಪಾಠ ಕಲಿಸಿದ್ದಾರೆ ಎಂಬುದನ್ನು ರಾಜ್ಯ ಸರ್ಕಾರ ನಡೆಸುತ್ತಿರುವವರು ಮರೆತುಹೋಗಿರುವುದು ಅವರ ಅವಿವೇಕದ ಪರಮಾವಧಿಯನ್ನು ತೋರಿಸುತ್ತದೆ.

    Reply
  2. basava halli

    ಮಂಗಳೂರು ಭಾಗದಲ್ಲಿ ಏನೆಲ್ಲಾ ನಡೆಯುತ್ತದೆ ಎನ್ನುವುದಕ್ಕೆ ಈ ಘಟನೆ ಸಾಕ್ಷಿ. ನಿರಪರಾಧಿಗಳನ್ನೂ ಅಲ್ಲಿನ ವ್ಯವಸ್ಥೆ ಹೀಗೆ ಬಂಧಿಸುವ ಮೂಲಕ ಆರ್ಎಸ್ಎಸ್ನ ಅಣತಿಯಂತೆ ನಡೆಯುತ್ತಿರುವುದು ಈ ದೇಶದಲ್ಲಿ ಸಂವಿಧಾನದ ಮೂಲ ಆಶಯಗಳು ಚಾಲ್ತಿಯಲ್ಲಿವೆಯೇ ಇಲ್ಲವೋ ಎಂದು ಸಂಶಯ ಮೂಡುತ್ತದೆ.
    –ಬಸವ ಹಳ್ಳಿ

    Reply
  3. prasad raxidi

    ನಾವು ನಿಮ್ಮೊಂದಿಗಿದ್ದೇವೆ..
    -ಸಕಲೇಶಪುರದ ಗೆಳೆಯರು

    Reply
  4. suma embar

    It is a shame that a sincere journalist is behind bars, where as the perpetrators of crimes such as reported by navin are freely roaming the streets. Let the courts punish the real criminals and order release of navin, so that the common man can still hope for a better future in karnataka.

    Reply
  5. b.peer basha

    ರಾಜ್ಯದ ಬಹುಸಂಖ್ಯಾತ ಮತೀಯ ರಾಜಕಾರಣದ ಎರಡನೆಯ ಬೇಟೆ ನವೀನ್. ಮೊದಲನೆಯವರು ಕರಾವಳಿ ಅಲೆ ಪತ್ರಿಕೆಯ ಸಂಪಾದಕರು. ಮೂರನೆಯ ಸ್ಥಾನ ಈ ಅಂಕಣದಲ್ಲಿ ಬರೆಯುತ್ತಿರುವ ಯಾರೇ ಆಗ ಬಹುದು. ಬೇಟೆಗಾರನ ಬಲಿಯಾಗುವ ಮೊದಲು ಎಲ್ಲ ಹಕ್ಕಿಗಳೂ ಸೇರಿ ಬಲೆ ಹೊತ್ತೊಯ್ಯದೇ ಹೋದರೆ ಎಲ್ಲ ಜೀವಗಳೂ ಬಲಿಗಳೇ. ಪ್ರಿಯ ನವೀನ್ ನಿಮ್ಮೊಂದಿಗೆ ನಾನೂ !

    Reply

Leave a Reply

Your email address will not be published. Required fields are marked *