Daily Archives: November 11, 2012

ಬಂಡವಾಳಶಾಹಿ ಪ್ರಭುತ್ವವಾಗಿ ಮಾರ್ಪಟ್ಟ ಪ್ರಜಾಪ್ರಭುತ್ವ ವ್ಯವಸ್ಥೆ

– ಆನಂದ ಪ್ರಸಾದ್

ಪ್ರಜಾಪ್ರಭುತ್ವ ವ್ಯವಸ್ಥೆ ಇಂದು ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳೇ ನಡೆಸುವ ವ್ಯವಸ್ಥೆಯಾಗಿರದೆ ಬಂಡವಾಳಶಾಹಿಗಳಿಂದ, ಬಂಡವಾಳಶಾಹಿಗಳಿಗಾಗಿ, ಬಂಡವಾಳಶಾಹಿಗಳೇ ನಡೆಸುವ ವ್ಯವಸ್ಥೆಯಾಗಿ ಮಾರ್ಪಾಟಾಗಿದೆ.  ರಾಜಕೀಯ ಪಕ್ಷಗಳು ಬಂಡವಾಳಶಾಹಿಗಳು ನೀಡುವ ದೇಣಿಗೆಗಳಿಂದ ಸಮೃದ್ಧವಾಗಿ ಬೆಳೆದು ಪ್ರಜೆಗಳ ಹಿತಾಸಕ್ತಿಗಳನ್ನು ಸಂಪೂರ್ಣವಾಗಿ ಕಡೆಗಣಿಸುತ್ತಾ ಮೆರೆಯಲು ಆರಂಭಿಸಿವೆ.  ಹೀಗಾಗಿ ಅಧಿಕಾರದಲ್ಲಿರುವ ಯಾವುದೇ ಪಕ್ಷಕ್ಕೂ ಸಿದ್ಧಾಂತ, ದೇಶದ ಹಿತಾಸಕ್ತಿ, ಪ್ರಜೆಗಳ ಹಿತಾಸಕ್ತಿ ಮುಖ್ಯವಾಗುವುದಿಲ್ಲ.  ತಮಗೆ ಯಾರು ಹೆಚ್ಚು ದೇಣಿಗೆಗಳನ್ನು ನೀಡುತ್ತಾರೋ ಅವರ ಹಿತ ಕಾಯುವ ದಲ್ಲಾಳಿಗಳಾಗಿ ರಾಜಕೀಯ ಪಕ್ಷಗಳು ಮಾರ್ಪಾಟಾಗಿವೆ.  ರಾಜಕೀಯ ಪಕ್ಷಗಳಿಗೆ ಬಂಡವಾಳಶಾಹಿಗಳು ನೀಡುವ ಹಣ ದೇಣಿಗೆ ಎಂಬ ಹೆಸರಿನಿಂದ ಕರೆಯಲ್ಪಡುತ್ತಿದ್ದರೂ ಅದು ನಿಜವಾಗಿ ತಮ್ಮ ಪರವಾಗಿ ಸರ್ಕಾರದ ನಿಯಮಗಳನ್ನು ರೂಪಿಸಿಕೊಳ್ಳಲು ಬಂಡವಾಳಶಾಹಿಗಳು ಕೊಡುವ ಲಂಚವೇ ಆಗಿದೆ.  ಈ ರೀತಿಯ ಲಂಚವೇ ಇಡೀ ಚುನಾವಣಾ ವ್ಯವಸ್ಥೆಯನ್ನು, ಪ್ರಜಾಪ್ರಭುತ್ವ ವ್ಯವಸ್ಥೆಯ ಆಶಯಗಳನ್ನು ಮಣ್ಣುಪಾಲು ಮಾಡುತ್ತಿದೆ.  ಹೀಗಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಿಜವಾದ ಅರ್ಥದಲ್ಲಿ ಜಾರಿಗೆ ತರುವಂತಾಗಲು ರಾಜಕೀಯ ಪಕ್ಷಗಳಿಗೆ ದೇಣಿಗೆ ಎಂಬ ಹೆಸರಿನಲ್ಲಿ ನೀಡುವ ಲಂಚವನ್ನು ನಿಲ್ಲಿಸುವ ಕುರಿತು ಜನಾಭಿಪ್ರಾಯ ರೂಪುಗೊಳ್ಳಬೇಕಾಗಿದೆ.

ಚುನಾವಣೆಗಳಲ್ಲಿ ಹಣದ ಪ್ರಭಾವವನ್ನು ತಡೆಯಲು ಸರ್ಕಾರವೇ ಚುನಾವಣಾ ವೆಚ್ಚಗಳನ್ನು ಭರಿಸುವಂತಾಗಬೇಕೆಂಬ ಮಾತು ಕೆಲವು ವಲಯಗಳಿಂದ ಕೇಳಿ ಬರುತ್ತಿದೆ.  ಆದರೆ ಇದನ್ನು ಜಾರಿ ಮಾಡುವುದು ಯಾವ ಮಾನದಂಡದ ಆಧಾರದ ಮೇಲೆ ಎಂಬುದು ಸ್ಪಷ್ಟವಾಗಿಲ್ಲ.  ಮಾನ್ಯತೆ ಪಡೆದ ರಾಜಕೀಯ ಪಕ್ಷಗಳಿಗೆ ಮಾತ್ರ ಇದನ್ನು ಅಳವಡಿಸಿದರೆ ಪಕ್ಷೇತರರಾಗಿ ಸ್ಪರ್ಧಿಸುವವರಿಗೆ ಚುನಾವಣಾ ವೆಚ್ಚ ಭರಿಸುವುದು ಹೇಗೆ ಎಂಬ ಪ್ರಶ್ನೆಯೂ ಇದೆ.  ಹೀಗೆ ಮಾಡಿದರೆ ಪಕ್ಷೇತರರ ಚುನಾವಣಾ ಸ್ಪರ್ಧೆಯ ಅವಕಾಶವನ್ನು ಮತ್ತು ಗೆಲ್ಲುವ ಅವಕಾಶವನ್ನು ಕುಂಠಿತಗೊಳಿಸಿದಂತೆ ಆಗಬಹುದು.  ಇತ್ತೀಚಿನ ವರ್ಷಗಳಲ್ಲಿ ರಾಜಕಾರಣಿಗಳೇ ಉದ್ಯಮಿಗಳೂ, ಬಂಡವಾಳಶಾಹಿಗಳೂ ಆಗಿ ರೂಪುಗೊಳ್ಳುವ ಹೊಸ ಪರಂಪರೆ ಶುರುವಾಗಿದೆ.  ಇದರಿಂದಾಗಿ ಇಂಥ ಉದ್ಯಮಿ ಹಾಗೂ ರಾಜಕಾರಣಿ ತನ್ನ ಬಂಡವಾಳವನ್ನು ಚುನಾವಣೆಗಳಲ್ಲಿ ಬಳಸಿ ಗೆಲ್ಲುವ ವಿಕಾರ ಪ್ರವೃತ್ತಿ ಬೆಳೆಯುತ್ತಿದೆ.  ಇಂಥ ಬಂಡವಾಳಶಾಹಿ ಉದ್ಯಮಿಗಳು ಮತ್ತು ಅವರ ಪಕ್ಷ ಚುನಾವಣೆಗಳಲ್ಲಿ ಸತತವಾಗಿ ಗೆಲ್ಲುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮತ್ತೆ ರಾಜಪ್ರಭುತ್ವದ ರೀತಿಯ ಆಡಳಿತಕ್ಕೆ ದೂಡುತ್ತಿದೆ.  ಇಂಥ ಅಪಾಯಕಾರಿ ಪ್ರವೃತ್ತಿ ಬೆಳೆಯುತ್ತಿರುವುದರ ವಿರುದ್ಧ ಜನ ಜಾಗೃತಿ ಮೂಡಿಸುವ ಕುರಿತು ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇರುವವರು ಪ್ರಯತ್ನಿಸಬೇಕಾಗಿದೆ.

ಬಂಡವಾಳಶಾಹಿಗಳು ನಡೆಸುವ ಉದ್ಯಮಗಳಿಗೆ ಲಕ್ಷಾಂತರ ಕೋಟಿ ರೂಪಾಯಿಗಳ ತೆರಿಗೆ ವಿನಾಯತಿ ನೀಡಲಾಗುತ್ತಿದೆ.  ಆದರೆ ಜನಸಾಮಾನ್ಯರಿಗೆ ನೀಡುವ ಅಡುಗೆ ಅನಿಲ ಸಬ್ಸಿಡಿಯನ್ನು, ಡೀಸೆಲಿಗೆ ನೀಡುವ ಸಬ್ಸಿಡಿಯನ್ನು, ಬಡವರಿಗೆ ನೀಡುವ ಕಡಿಮೆ ದರದ ಆಹಾರ ಧಾನ್ಯಗಳನ್ನು, ರೈತರಿಗೆ ನೀಡುವ ರಸಗೊಬ್ಬರ ಇತ್ಯಾದಿ ಸಬ್ಸಿಡಿಗಳನ್ನೂ ತೆಗೆದುಹಾಕಬೇಕೆಂದು ಬಂಡವಾಳಗಾರರ ಲಾಬಿ ಸರ್ಕಾರವನ್ನು ಮಣಿಸುತ್ತದೆ.  ನೈಸರ್ಗಿಕ ಸಂಪನ್ಮೂಲಗಳನ್ನು ಮೂರು ಕಾಸಿಗೆ ಬಂಡವಾಳಶಾಹಿಗಳಿಗೆ ನೀಡುವ ಸರ್ಕಾರದ ನಿರ್ಧಾರದ ಹಿಂದೆ ಪಕ್ಷದ ನಿಧಿಗೆ ಅವರು ನೀಡುವ ಕೋಟ್ಯಂತರ ದೇಣಿಗೆ ಕೆಲಸ ಮಾಡುತ್ತದೆ.  ಪ್ರಜಾಪ್ರಭುತ್ವ ಸರ್ಕಾರ ಇಂಥ ಅಧರ್ಮ ಹಾಗೂ ಅನ್ಯಾಯಗಳಿಗೆ ಮಣಿಯಬೇಕಾಗಿಲ್ಲ.  ಆದರೆ ನಮ್ಮದು ಬಂಡವಾಳಶಾಹಿಗಳು ರಾಜಕಾರಣಿಗಳ ಹಿಂದೆ ನಿಂತು ನಡೆಸುವ ಪ್ರಜಾಪ್ರಭುತ್ವದ ಮುಖವಾಡ ಹೊತ್ತ ವ್ಯವಸ್ಥೆಯಾಗಿರುವುದರಿಂದ ಇಲ್ಲಿ ಜನತೆಯ ಧ್ವನಿಗೆ ಯಾವುದೇ ಬೆಲೆಯಿಲ್ಲ.

ಭೋಪಾಲ್ ವಿಷಾನಿಲ ದುರಂತದಲ್ಲಿ ಸಂತ್ರಸ್ತರಾದ ಲಕ್ಷಾಂತರ ಜನರಿಗೆ ನ್ಯಾಯ ಸಿಗದೇ ಇರಲು ಬಂಡವಾಳಶಾಹಿ ಪ್ರಭುತ್ವವೇ ಕಾರಣವಾಗಿದೆ.  ಅಂಬಾನಿಯಂಥ ಉದ್ಯಮಪತಿಗಳು ರಾಜಕೀಯ ಪಕ್ಷಗಳು ತನ್ನ ಕಿಸೆಯ ಒಳಗೆ ಇವೆ ಎಂದು ಅಹಂಕಾರದ ಹೇಳಿಕೆ ನೀಡಲೂ ಅವರು ರಾಜಕೀಯ ಪಕ್ಷಗಳಿಗೆ ದೇಣಿಗೆಯ ಹೆಸರಿನಲ್ಲಿ ನೀಡುವ ಲಂಚವೇ ಕಾರಣ.  ಹೀಗಾಗಿ ರಾಜಕೀಯ ಪಕ್ಷಗಳು ಉದ್ಯಮಿಗಳಿಂದ ದೇಣಿಗೆ ಪಡೆಯುವ ಪರಂಪರೆಯನ್ನು ನಿಷೇಧಿಸಬೇಕಾದ ಅಗತ್ಯ ಇದೆ.  ರಾಜಕೀಯ ಪಕ್ಷಗಳು ಜನತೆಯ ದೇಣಿಗೆಯಿಂದ ಮಾತ್ರ ಬೆಳೆಯುವಂತೆ ಆಗಬೇಕು ಮತ್ತು ಅದರ ಸಂಪೂರ್ಣ ಲೆಕ್ಕಪತ್ರ ಸಾರ್ವಜನಿಕರಿಗೆ ಲಭ್ಯವಿರಬೇಕು.  ಇಂದು ದೇಶದಲ್ಲಿ ಅಸ್ತಿತ್ವದಲ್ಲಿ ಇರುವ ಎಲ್ಲ ಪಕ್ಷಗಳು ರಾಷ್ಟ್ರೀಯ ಪಕ್ಷಗಳೇ ಇರಲಿ, ಪ್ರಾದೇಶಿಕ ಪಕ್ಷಗಳೇ ಇರಲಿ ಉದ್ಯಮಿಗಳಿಂದ ದೇಣಿಗೆ ಹೆಸರಿನ ಲಂಚ ಸ್ವೀಕರಿಸಿಯೇ ಚುನಾವಣೆಗೆ ನಿಲ್ಲುವ ವ್ಯವಸ್ಥೆ ಇರುವಾಗ ನಿಜವಾದ ಪ್ರಜಾಪ್ರಭುತ್ವ ವ್ಯವಸ್ಥೆ ತರಲು ಸಾಧ್ಯವೇ ಇಲ್ಲ.

ಇಂದು ಉದ್ಯಮಿಗಳೇ ಸರ್ಕಾರದಲ್ಲಿ ಮಂತ್ರಿಗಳಾಗಿ ತಮಗೆ ಬೇಕಾದಂತೆ ನೀತಿ ನಿಯಮಗಳನ್ನು ರೂಪಿಸುತ್ತಾ ಉದ್ಯಮದ ಹಿತಾಸಕ್ತಿಗಳನ್ನು ರಕ್ಷಿಸುತ್ತಾ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಣಕಿಸುತ್ತಿದ್ದಾರೆ.  ಇದನ್ನು ತಪ್ಪಿಸಲು ರಾಜಕೀಯ ಪಕ್ಷಗಳಲ್ಲಿ ಹಾಗೂ ಸರ್ಕಾರದಲ್ಲಿ ದೊಡ್ಡ ಉದ್ಯಮಿಗಳು ಪಾಲುಗೊಳ್ಳದಂತೆ  ಜನಾಭಿಪ್ರಾಯ ರೂಪುಗೊಂಡು ದೊಡ್ಡ ಉದ್ಯಮಿಗಳು ಸರ್ಕಾರದಲ್ಲಾಗಲೀ, ರಾಜಕೀಯ ಪಕ್ಷಗಳಲ್ಲಾಗಲೀ ಸೇರಲಾಗದಂತೆ  ಕಾನೂನು ರೂಪಿಸಬೇಕಾದ ಅಗತ್ಯ ಇದೆ.  ಇಲ್ಲದೆ ಹೋದರೆ ಪ್ರಜಾಪ್ರಭುತ್ವ ನಾಶವಾಗಿ ಉಳ್ಳವರ, ಬಂಡವಾಳಶಾಹಿಗಳ ಪ್ರಭುತ್ವ ಮೇಲುಗೈ ಸಾಧಿಸುವುದು ಖಚಿತ.  ರಾಜಕೀಯ ಪಕ್ಷಗಳಿಗೆ ಉದ್ಯಮಿಗಳ, ಶ್ರೀಮಂತರ ದೇಣಿಗೆ ಹೆಸರಿನ ಲಂಚವನ್ನು ಪಡೆಯದೇ ಜನತೆಯ ಸಣ್ಣ ಪ್ರಮಾಣದ ದೇಣಿಗೆಯ ಹಣದಿಂದ ಮಾತ್ರ ರಾಜಕೀಯ ಪಕ್ಷಗಳು ಕಾರ್ಯನಿರ್ವಹಿಸುವಂತೆ ಆಗಬೇಕು.  ದೊಡ್ಡ ಉದ್ಯಮಿಗಳಿಂದ ರಾಜಕೀಯ ಪಕ್ಷಗಳು ದೇಣಿಗೆ ಹೆಸರಿನ ಲಂಚ ಪಡೆಯುವುದನ್ನು ನಿಷೇಧಿಸುವ ಕಾನೂನು ರೂಪುಗೊಳ್ಳಬೇಕು.  ಕಪ್ಪು ಹಣದ ರೂಪದಲ್ಲಿಯೋ ಅಥವಾ ಬಿಳಿ ಹಣದ ರೂಪದಲ್ಲಿಯೋ ಉದ್ಯಮಿಗಳಿಂದ ರಾಜಕೀಯ ಪಕ್ಷಗಳು ದೇಣಿಗೆ ಹೆಸರಿನ ಲಂಚ ಪಡೆದರೆ ದೇಣಿಗೆ ಹೆಸರಿನ ಲಂಚ ಕೊಟ್ಟ ಉದ್ಯಮಿಗಳು ಮತ್ತು ಪಡೆದ ರಾಜಕೀಯ ಪಕ್ಷಗಳಿಗೆ ಶಿಕ್ಷೆ ಆಗುವಂತೆ ಕಾನೂನು ರಚನೆಗೊಳ್ಳಬೇಕಾದ  ಅಗತ್ಯ ಇದೆ.  ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸಬೇಕಾದರೆ ಇಂಥ ಕಾನೂನುಗಳು ಅಗತ್ಯ.

ಬಂಡವಾಳಶಾಹಿಗಳ ದೇಣಿಗೆ ಇಲ್ಲದೆ ರಾಜಕೀಯ ಪಕ್ಷ ನಡೆಸುವುದು ಹಾಗೂ ಚುನಾವಣೆ ಎದುರಿಸುವುದನ್ನು ರಾಜಕೀಯ ಪಕ್ಷಗಳಿಗೆ ಕಡ್ಡಾಯಪಡಿಸುವ ಕಾನೂನು ಅಗತ್ಯ ಇದೆ.  ರಾಜಕೀಯ ಪಕ್ಷಗಳು ದುಂದುವೆಚ್ಚದ ಸಮಾವೇಶಗಳನ್ನು ಏರ್ಪಡಿಸುವ ಹಾಗೂ ಜನರನ್ನು ಪಕ್ಷದ ವತಿಯಿಂದ ಹಣ ಕೊಟ್ಟು ಸಾರಿಗೆ ವ್ಯವಸ್ಥೆ ಮಾಡಿ ಸಮಾವೇಶಗಳಿಗೆ ಬರಿಸುವ, ಮತದಾರರಿಗೆ ವಿವಿಧ ಆಮಿಷಗಳ ಕೊಡುಗೆ ನೀಡುವ, ಅದ್ಧೂರಿ ಕಛೇರಿಗಳನ್ನು ತೆರೆಯುವ ಪ್ರವೃತ್ತಿಯನ್ನು ನಿಲ್ಲಿಸಿದರೆ ರಾಜಕೀಯ ಪಕ್ಷಗಳನ್ನು ಬಂಡವಾಳಶಾಹಿಗಳ ದೇಣಿಗೆಯ ಹೆಸರಿನ ಲಂಚ ಇಲ್ಲದೆ ಕಾರ್ಯಕರ್ತರ, ಜನಸಾಮಾನ್ಯರ ದೇಣಿಗೆಯಿಂದಲೇ ನಿರ್ವಹಿಸುವುದು ಸಾಧ್ಯವಿದೆ.  ಸೇವಾ ಮನೋಭಾವ ಇರುವ, ಜೀವನೋಪಾಯಕ್ಕೆ ಬೇರೆ ಸಾಮಾನ್ಯ ಮಧ್ಯಮ ವರ್ಗದ ಆದಾಯಮೂಲ ಇರುವವರು ಮಾತ್ರವೇ ರಾಜಕೀಯಕ್ಕೆ ಬಂದರೆ ರಾಜಕೀಯ ಪಕ್ಷಗಳನ್ನು ನಿರ್ವಹಿಸುವುದು ಕಷ್ಟವೇನೂ ಆಗಲಾರದು.  ಉದಾಹರಣೆಗೆ ಸಣ್ಣ ಉದ್ಯಮ, ವ್ಯಾಪಾರ ಇದ್ದು ಉದ್ಯೋಗಿಗಳ ಮೂಲಕ ಆಗಾಗ ಮೇಲ್ವಿಚಾರಣೆ ಮಾಡುವ ಮೂಲಕ ಸಂಸ್ಥೆ ನಡೆಸಲು ಸಾಧ್ಯ ಇರುವವರು; ಗಂಡ ಹಾಗೂ ಹೆಂಡತಿ ಇಬ್ಬರಲ್ಲಿ ಒಬ್ಬರು ದೃಢವಾದ ಉದ್ಯೋಗದಲ್ಲಿದ್ದರೆ ಇನ್ನೊಬ್ಬರು ರಾಜಕೀಯಕ್ಕೆ ಇಳಿಯಲು ಸಾಧ್ಯವಿದೆ.  ಅದೇ ರೀತಿ ಬಾಡಿಗೆಗೆ ನೀಡುವ ಕಟ್ಟಡ, ಮನೆ, ಅಪಾರ್ಟ್ ಮೆಂಟ್, ವಾಣಿಜ್ಯ ಸಮುಚ್ಛಯ ಇರುವವರಿಗೆ ನಿಗದಿತ ಆದಾಯ ಮೂಲ ಇರುವ ಕಾರಣ ಮತ್ತು ಅವರಿಗೆ ಜೀವನೋಪಾಯಕ್ಕೆ ಬೇರೆ ಕೆಲಸ ಬೇಕಾಗಿಲ್ಲದೆ ಇರುವುದರಿಂದ ರಾಜಕೀಯ ಪಕ್ಷಗಳಲ್ಲಿ ತೊಡಗಿಸಿಕೊಂಡು ದೇಶ ಸೇವೆಯಲ್ಲಿ ತೊಡಗಿಸಿಕೊಳ್ಳಲು ಸಾಧ್ಯ.  ಉದ್ಯೋಗ ನಿವೃತ್ತಿ ಪಡೆದಿರುವವರಲ್ಲಿ ಉಳಿತಾಯದ ಹಣ ಇರುವುದರಿಂದ ಹಾಗೂ ನಿವೃತ್ತಿವೇತನ ಬರುವುದರಿಂದ ಅಂಥವರೂ ರಾಜಕೀಯ ಪಕ್ಷಗಳಲ್ಲಿ ನಿಸ್ವಾರ್ಥವಾಗಿ ತೊಡಗಿಸಿಕೊಳ್ಳಲು ಸಾಧ್ಯವಿದೆ.